ಬಂಡೀಯ ತರಸೀರೆ ಹಿಂಡೆತ್ತ ಹಿಡಿಸೀರಿ
ಬಂಡೀಗೆ ಬಟ್ಟ ಇಡಸೀರಿ | ಗಟ್ಟಾದ
ಬಂಡಿ ಹರಿದಾವು ಹೊರಕಾಗಿ
ಬಂಡಿ ಬಂಡೀ ಚೆಂದ ಬಂಡೀಯ ನೊಗ ಚೆಂದ
ಮುದ್ದ್ಹೋರಿ ಚಂದ ಮಕರೀಗೆ ಗಟ್ಟಕ್ಕೆ
ಬಂಡಿ ಹೊಡೆಯೋನ ಮುಖ ಚೆಂದ
ಬಂಡೀಲಿ ಹೊಯ್ತೀನಿ ಗಿಂಡಿ ತಂಬಿಗೆ ತಾರೆ
ನಂಬೀಕೆ ತಾರೆ ಬಲಗೈಯ್ಯ | ಮಾವನ್ಮಗಳೆ
ಭಾಷೇಯ ತಾರೆ ಬಲಗೈಯ್ಯ
ಆರು ಸಾವಿರ ಬಂಡಿ ಧೂಳೆದ್ದು ಹೊಗುವಾಗ
ಧೂಳು ಮುಟ್ಟ್ಯಾತೆ ಮುಗಿಲೀಗೆ | ಬಸವಾನ
ಗೋಳು ಮುಟ್ಟ್ಯಾತೆ ಶಿವನೀಗೆ
ಗಟ್ದಮೇಗಳ ಗೆಳೆಯ ಗುತ್ತಿಬೊಡ್ಡೆಗೆ ಬಾರೊ
ಬುತ್ತಿ ತಂದಿವ್ನಿ ಉಣ ಬಾರೊ | ನನ ಗೆಣೆಯ
ಮೊಗ್ಗು ಬಂದಯ್ತೆ ಮುಡಿ ಬಾರೊ
ಗಟ್ಟಕ್ಕೆ ಹೋಗೋವು ಎತ್ತೆಲ್ಲ ನಮ್ಮೋವು
ಗಟ್ಟದ ಕೆಳಗೀನ ಕೊಡಗಾರು | ಹೆಣ್ಮಕ್ಕ
ಎತ್ತಿಗಾರಾತಿ ಬೆಳಗ್ಯಾರು
ಎತ್ತೀಗೆ ಬೆಳಗಿದರೆ ಎತ್ತೇನ ಕೊಟ್ಟಾವು
ಎತ್ತೀನ ಮೇಲಿರೊ ಘನಸೆಟ್ಗೆ | ಬೆಳಗಿದರೆ
ಓಲೆಗೆ ವಜ್ರ ಬಿಗಿಸ್ಯಾನು
ಗಟ್ಟಾಕೆ ಹೊಯ್ತಿನಿ ಕಟ್ಟ್ಹೆಣ್ಣೆ ಬುತ್ತೀಯ
ಕಟ್ಟಾಣಿ ಚೆಲುವೆ ಕಡುಚೆಲುವೆ | ಕುಟ್ಟೀದ
ಬುತ್ತಿ ಪಟ್ಟಣಕೆ ಪರಿಮಾಳ
ಹೋರಿ ಮೇಲೇ ಕೂತು ಕೋರೀಯ ನಾ ಕಂಡೆ
ಗೋರಿಕಲ್ಲಂತೆ ಮಾಲೆಯವಳ | ನಾ ಕಂಡು
ಹೋರಿ ಹೊಡೆಯೋಕೆ ಮನಸಿಲ್ಲ
Leave A Comment