೧. ಕೈ ಬೆರಳುಗಳು, ಕೈ, ಕಾಲುಗಳು ಅನಿಯಂತ್ರಿತವಾಗಿ ನಡುಗುತ್ತದೆ. ನಿರ್ದಿಷ್ಟ ನಡುಕವೆಂದರೆ ಜಪಮಾಲೆ ಎಣಿಸಿದ ಹಾಗೆ ಹೆಬ್ಬೆರಳು ಮತ್ತು ತೋರು ಬೆರಳು ಅದುರುತ್ತಿರುತ್ತದೆ. ಕೈಯನ್ನು ಉಪಯೋಗಿಸಿದಾಗ ಇಲ್ಲವಾಗುವ ನಡುಕ, ಸುಮ್ಮನಿದ್ದಾಗ ಮತ್ತು ಕಾಣಿಸಿಕೊಳ್ಳುತ್ತದೆ. ನಾಲಿಗೆ, ತುಟಿ, ಕತ್ತು ಕೂಡ ನಡುಗಬಹುದು. ಕೆಲವರಲ್ಲಿ ಒಂದು ಅಂಗವನ್ನು ಉಪಯೋಗಿಸುವಾಗ ಮಾತ್ರ ನಡುಕ ಕಾಣಿಸಿಕೊಳ್ಳಬಹುದು.

. ಮಾಂಸಖಂಡಗಳ ಬಿಡಗಿತ (ರಿಜಿಡಿಟಿ): ಮುಖದ ಮಾಂಸಖಂಡಗಳೂ ಸೇರಿದಂತೆ ದೇಹದ ಬಹುತೇಕ ಮಾಂಸಖಂಡಗಳು ಬಿಗಿಗೊಳ್ಳುತ್ತವೆ. ಮುಖ ಮೇಣದಲ್ಲಿ ಮಾಡಿದಂತೆ ನಿರ್ಭಾವ ಸ್ಥಿತಿಯಲ್ಲಿರುತ್ತದೆ. ಕೈಕಾಲು, ದೇಹದ ಚಲನೆ ಕಷ್ಟವಾಗುತ್ತದೆ. ರೋಗಿ ಸ್ವಲ್ಪಕ್ಕೆ ಆಯಾಸಗೊಳ್ಳುತ್ತಾನೆ.

. ನಿಧಾನಗತಿಯ ಚಲನೆ ಅಥವಾ ಚಲನೆಯೇ ಇಲ್ಲದಿರುವುದು: ವ್ಯಕ್ತಿಯ ದೇಹದ ಒಂದೊಂದು ಚಲನೆಯೂ ಬಹು ನಿಧಾನಗತಿಯದಾಗುತ್ತದೆ. ರೋಗಿ ದೈನಂದಿನ ಚಟುವಟಿಕೆಗಳನ್ನು ಮಾಡಲು ವಿಪರೀತ ಹೆಚ್ಚು ವೇಳೆಯನ್ನು ತೆಗೆದುಕೊಳ್ಳುತ್ತಾನೆ. ಉದಾ: ಹತ್ತು ನಿಮಿಷದಲ್ಲಿ ಊಟ ಮಾಡುತ್ತಿದ್ದವನಿಗೆ ಈಗ ಒಂದು ಗಂಟೆಯೂ ಸಾಲದಾಗುತ್ತದೆ. ಎರಡು ನಿಮಿಷದಲ್ಲಿ ತಲೆ ಬಾಚಿಕೊಳ್ಳುತ್ತಿದ್ದವನಿಗೆ ಈಗ ಅರ್ಧ ಗಂಟೆ ಬೇಕಾಗುತ್ತದೆ. ಇಪ್ಪತ್ತು ನಿಮಿಷಗಳಲ್ಲಿ ಮನೆಯಿಂದ ಅಂಗಡಿಗೆ ನಡೆದು ಹೋಗುತ್ತಿದ್ದವನು ಈಗ ಮಾರ್ಗ ಮಧ್ಯ ಅಲ್ಲಲ್ಲೇ ನಿಂತು ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ ಎರಡು ಗಂಟೆಯಾದರೂ ಅಂಗಡಿ ಸೇರುವುದಿಲ್ಲ. ಕೆಲವು ಸಲ ಗೊಂಬೆಯಂತೆ ನಿಂತಲ್ಲೇ ನಿಂತು ಬಿಡಬಹುದು.

. ಬರವಣಿಗೆ: ಬರವಣಿಗೆ ಕಷ್ಟವಾಗುತ್ತದೆ. ಮುದ್ದಾದ ಕೈ ಬರಹ ಹಾಳಾಗಿ ಗೀಚು ಗೀಚಾಗುತ್ತದೆ. ಪುಟಗಟ್ಟಲೆ ಬರೆಯುತ್ತಿದ್ದವನಿಗೆ ಈಗ ಒಂದು ಪುಟ ಬರೆಯುವುದು ಹಿಮಾಲಯ ಪರ್ವತ ಹತ್ತಿದಷ್ಟೇ ಕಷ್ಟವಾಗುತ್ತದೆ.

೫. ಧ್ವನಿ ಬದಲಾಯಿಸಿ ಗೊಗ್ಗರು ಧ್ವನಿಯಾಗುತ್ತದೆ. ಧ್ವನಿಯಲ್ಲಿ ಏರಿಳಿತಗಳು ಇಲ್ಲವಾಗುತ್ತದೆ.

೬. ಕಣ್ಣುಗಳ ರೆಪ್ಪೆ ಬಡಿಯುವುದು, ನಡೆಯುವಾಗ ಕೈಗಳು ಬೀಸುವುದು ಕಡಿಮೆಯಾಗುತ್ತದೆ. ನಿಂತಾಗ, ನಡೆಯುವಾಗ ಕತ್ತು ಬಾಗುತ್ತದೆ. ನಡು ಬಗ್ಗುತ್ತದೆ. ಭುಜಗಳು ಇಳಿಬೀಳುತ್ತವೆ.

೭. ಬುದ್ಧಿ ಶಕ್ತಿ ಕೂಡ ಕಡಿಮೆಯಾಗುತ್ತದೆ. ಮುಂಚಿನ ಕೌಶಲಗಳು, ಚತುಕತೆಗಳು ಇಲ್ಲವಾಗುತ್ತವೆ. ನಿರ್ಧಾರ ಮಾಡುವ ಸಾಮರ್ಥ್ಯ, ವಿವೇಚನಾಶೀಲತೆ, ಲೆಕ್ಕಾಚಾರ ಮಾಡುವ ಶಕ್ತಿ ಕುಗ್ಗುತ್ತದೆ. ನೆನಪು, ಕಲಿಯುವ ಸಾಮರ್ಥ್ಯ ಕೂಡ ಮಾಸುತ್ತದೆ.

೮. ಸ್ವಲ್ಪ ಬಿಸಿ ಅಥವಾ ತಂಪಿಗೆ ಚರ್ಮ ವಿಪರೀತ ಪ್ರತಿಕ್ರಿಯೆ ತೋರಿಸುತ್ತದೆ. ಬೆವರು ವಿಪರೀತವಾಗಬಹುದು.

೯. ಖಿನ್ನತೆಯ ಲಕ್ಷಣಗಳಾದ ಬೇಸರ, ಧುಃಖ, ಅನಾಸಕ್ತಿ, ಅಸಹಾಯಕ ಭಾವನೆ, ತಪ್ಪಿತಸ್ಥ ಆಲೋಚನೆಗಳು, ನಿರಾಶೆ, ಆತ್ಮಹತ್ಯೆಯ ಯೋಚನೆಗಳು ಕಾಣಿಸಿಕೊಳ್ಳುತ್ತವೆ.

೧೦. ಮೈ ಕೈ ನೋವು, ಮಾಂಸಖಂಡಗಳ ಸೆಳೆತ, ಸುಸ್ತು, ಆಯಾಸ: ಎಲ್ಲ ರೋಗಿಗಳಲ್ಲಿ ಈ ಎಲ್ಲ ಲಕ್ಷಣಗಳೂ ಇರಬೇಕಿಲ್ಲ. ಸಾಮನ್ಯವಾಗಿ ಮಾಂಸಖಂಡಗಳ ಬಿಗಿತ, ನಿಧಾನ ಚಲನೆ ಅಥವಾ ನಿಯಂತ್ರಿತ ಅದುರು, ಮತ್ತೆ ಒಂದೆರಡು ಲಕ್ಷಣಗಳು ಒಂದೊಂದು ರೋಗಿಯಲ್ಲಿರುತ್ತವೆ. ರೋಗ ಬಲಿಯುತ್ತಿದ್ದಂತೆ, ಕಾಲ ಕಳೆದಂತೆ ಲಕ್ಷಣಗಳ ಸಂಖ್ಯೆ ಹೆಚ್ಚಾಗುತ್ತದೆ.

೧೧. ಪಾರ್ಕಿನ್ಸನ್ ರೋಗದಲ್ಲಿ ಮಿದುಳಿನಲ್ಲಿ ಕಂಡುಬರುವ ಬದಲಾವಣೆಗಳು: ಮಿದುಳಿನ ‘ಸಬ್‌ಸ್ಟಾನ್ಷಿಯ ನೈಗ್ರ’ದಲ್ಲಿ ಜೀವಕಣಗಳು ನಶಿಸಿ ಹೋಗುವುದು ಮತ್ತು ತಳದ ನರಗಂಟುಗಳಾದ (ಬೇಸಲ್ ಗ್ಯಾಂಗ್ಲಿಯ) ಕಾಡೇಟ್‌ ನ್ಯೂಕ್ಲಿಯಸ್, ಪುಟಮೆನ್ ಮತ್ತು ಪ್ಯಾಲಿಡಮ್‌ನಲ್ಲಿ ‘ಡೋಪಮಿನ್’ ನರವಾಹಕದ ಕೊರತೆಯನ್ನು ಪಾರ್ಕಿನ್‌ಸನ್ ರೋಗದಲ್ಲಿ ಕಾಣಬಹುದು. ರೋಗ ಬಂದೋ, ಪೆಟ್ಟು ಬಿದ್ದೋ ಯಾವುದೇ ಅವ್ಯಕ್ತ ಕಾರಣದಿಂದ ಡೋಪವಿನ್ ಮೇಲೆ ಅವಲಂಬಿತವಾದ ನರ ವ್ಯವಸ್ಥೆ ಏರುಪೇರಾಗಿ, ಡೋಪಮಿನ್ ಕೊರತೆ ಕಾಣಿಸಿಕೊಳ್ಳುವುದೇ ಪಾರ್ಕಿನ್‌ಸನ್ ರೋಗ ಬರಲು ಕಾರಣ. ಡೋಪಮಿನ್ ಅವಲಂಬಿತ ನರ ವ್ಯವಸ್ಥೆ ಯಾವಾಗ ದುರ್ಬಲವಾಗುತ್ತದೋ, ಅಸಿಟೈಲ್‌ ಕೋಲಿನ್ ಅವಲಂಬಿತ ನರ ವ್ಯವಸ್ಥೆ ಹೆಚ್ಚು ಚಟುವಟಿಕೆಯನ್ನು ತೋರುತ್ತದೆ. ಇದಲ್ಲದೆ ಇತರ ನರವಾಹಕಗಳಾದ ನಾರ್ ಅಡ್ರೆನಲಿನ್, ಗಾಬಾ, ಸೆರೋಟೋನಿನ್ ಕೂಡ ಈ ರೋಗದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.

೧೨. ಪಾರ್ಕಿನ್ಸನ್ ರೋಗ ಬರಲು ಕಾರಣಗಳು:

ಹೆಚ್ಚಿನ ರೋಗಿಗಳಲ್ಲಿ, ಅದರಲ್ಲೂ ಐವತ್ತು ವರ್ಷ ವಯಸ್ಸಿನ ನಂತರ ಬರುವ ಪಾರ್ಕಿನ್‌ಸನ್ ರೋಗಕ್ಕೆ ಕಾರಣವೇನು ಎಂಬುದು ಸ್ಪಷ್ಟವಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಅವ್ಯಕ್ತ ಕಾರಣದಿಂದ ಸಬ್‌ಸ್ಟಾನ್ಸಿಯ ನೈಗ್ರದಲ್ಲಿ ಜೀವಕೋಶಗಳು ನಶಿಸುತ್ತವೆ ಹಾಗೂ ತಳದ ನರಗಂಟುಗಳಲ್ಲಿ ಡೋಪಮಿನ್ ಕೊರತೆಯುಂಟಾಗುತ್ತವೆ ಎಂಬುದನ್ನು ಅರಿತಿರಿ. ಈ ಪ್ರಕರಣಗಳನ್ನು ಪ್ರಾಥಮಿಕ (ಪ್ರೈಮರಿ) ಪಾರ್ಕಿನ್‌ಸನ್ ರೋಗವೆಂದು ಗುರುತಿಸುತ್ತಾರೆ.

ತರುವಾಯದ (ಸೆಕೆಂಡರಿ) ಪಾರ್ಕಿನ್‌ಸನ್ ರೋಗದಲ್ಲಿ ರೋಗಕಾರಕಗಳನ್ನು ಗುರುತಿಸಬಹುದು. ಅವುಗಳಲ್ಲಿ ಮುಖ್ಯವಾದುವು:

೧. ಇಂಗಾಲದ ಮಾನಾಕ್ಸೈಡ್ (ಬೆಂಕಿ ಅಪಘಾತಗಳು. ಯಾವುದೇ ವಸ್ತು ಆಮ್ಲಜನಕರ ಕೊರತೆಯಿಂದ ಸುಡುವಾಗ ಈ ಅನಿಲ ಉತ್ಪತ್ತಿಯಾಗುತ್ತದೆ) ಅನಿಲದ ಸೇವನೆ.

೨. ಮ್ಯಾಂಗನೀಸ್ ಇತ್ಯಾದಿ ಭಾರ ಲೋಹಗಳ ಕಣಗಳು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುವುದು.

೩. ತಳದ ನರಗಂಟುಗಳಲ್ಲಿ ಗಂತಿ ಬೆಳೆದುಕೊಳ್ಳುವುದು (ಕ್ಯಾನ್ಸರ್ ಇತ್ಯಾದಿ)

೪. ರಕ್ತನಾಳಗಳು ಪೆಡೆಸುಗೊಂಡು, ತಳದ ನರಗಂಟುಗಳು ಮತ್ತು ಸುತ್ತಮುತ್ತಲಿನ ಭಾಗಕ್ಕೆ ರಕ್ತ ಕೊರತೆಯುಂಟಾಗುವುದು.

೫. ಮಿದುಳಿನ ಸೋಂಕು ಹಾಗೂ ಉರಿ ಊತದ ನಂತರ ಪಾರ್ಕಿನ್‌ಸನ್ ರೋಗ ಕಾಣಿಸಿಕೊಳ್ಳಬಹುದು. ಈ ಸೋಂಕು ಫ್ಲೂ ವೈರಸ್ (ಎ) ನಿಂದ ಆಗಿರಬಹುದು.

೬. ಇತರ ಕಾಯಿಲೆಗಳಿಗೆ ಕೊಡುವ ಔಷಧಗಳಿಂದ ತಳದ ನರಗಂಟುಗಳಲ್ಲಿ ಡೋಪಮಿನ್ ಕೊರತೆಯುಂಟಾಗುವುದು. ಉದಾಹರಣೆಗೆ: ತೀವ್ರತರ ಮಾನಸಿಕ ರೋಗಗಳ ಚಿಕಿತ್ಸೆಯಲ್ಲಿ ಬಳಸುವ ಚಿತ್ತವಿಕಲತೆ ನಿರೋಧಕಗಳಾದ ಕ್ಲೋರ್ ಪ್ರೊಮಜಿನ್, ಟ್ರೈಪ್ಲೂಪೆರಜಿನ್, ಫ್ಲೂಪೆನಜಿನ್ ಇತ್ಯಾದಿ.

೭. ನರಕೋಶಗಳು ಚಿಕ್ಕವಯಸ್ಸಿನವರಲ್ಲಿ ತಾಮ್ರದ ಜೀವವಸ್ತುಕರಣದಲ್ಲಿ ವ್ಯತ್ಯಾಸವಾಗಿ ತಾಮ್ರವು ಅಧಿಕ ಪ್ರಮಾಣದಲ್ಲಿ ಸಬ್‌ಸ್ಟಾನ್ಷಿಯ ನೈಗ್ರದಲ್ಲಿ ಸೇರಿ ಪಾರ್ಕಿನ್‌ಸನ್ ರೋಗ ಬರಬಹುದು. ಇದು ಅಪರೂಪದ ವಂಶಪಾರಂಪರ್ಯ ರೋಗ ಸ್ಥಿತಿ.

ಹೆಚ್ಚಿನ ಪ್ರಕರಣಗಳಲ್ಲಿ ಪಾರ್ಕಿನ್‌ಸನ್ ರೋಗ ವಂಶಪಾರಂಪರ್ಯವಾಗೇನೋ ಬರುವುದಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೆ, ಒಮ್ಮೆ ಬಂದರೆ ಹೆಚ್ಚು ಕಡಿಮೆ ಶಾಶ್ವತವಾಗಿ ಉಳಿದು ರೋಗಿಯನ್ನು ಕಾಡುವುದು ದುಃಖದ ಸಂಗತಿ. ಈಗ ಲಭ್ಯವಿರುವ ಪರೀಕ್ಷಾ ವಿಧಾನಗಳಿಂದ (ಕ್ಷಕಿರಣ ಚಿತ್ರ, ಮಿದುಳು, ಮಿದುಳಬಳ್ಳಿ ರಸದ ಪರೀಕ್ಷೆ, ಮಿದುಳಿನ ಬಿಡಿ ಚಿತ್ರ-ಸ್ಕ್ಯಾನಿಂಗ್) ಮಿದುಳಿನಲ್ಲಿ ಯಾವ ದೋಷವೂ ಕಾಣಬರುವುದಿಲ್ಲ. ಪರೀಕ್ಷಾ ವರದಿಗಳು ‘ನಾರ್ಮಲ್‌’ ಆಗಿರುತ್ತವೆ.

ಚಿಕಿತ್ಸೆ

ಪಾರ್ಕಿನ್‌ಸನ್ ರೋಗವನ್ನು ಸಂಪೂರ್ಣವಾಗಿ ಗುಣ ಮಾಡಬಲ್ಲ ಔಷಧಿ ‘ಚಿಕಿತ್ಸಾ’ ವಿಧಾನ ಯಾವುದೂ ಸದ್ಯಕ್ಕೆ ಲಭ್ಯವಿಲ್ಲ. ರೋಗದ ಕೆಲವು ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುವುದು, ರೋಗಿ ಆದಷ್ಟು ಸ್ವಾವಲಂಭಿಯಾಗಿ ತನ್ನ ದೈನಂದಿನ ಕೆಲಸಗಳನ್ನು ಮಾಡುವಂತೆ, ನೆಮ್ಮದಿಯಾಗಿರುವಂತೆ ನೋಡಿಕೊಳ್ಳುವುದೇ ಪ್ರಸಕ್ತ ಚಿಕಿತ್ಸಾ ವಿಧಾನಗಳ ಗುರಿ. ತರಬೇತಿ ಹೊಂದಿದ, ಯಾವುದೇ ವೈದ್ಯರು ಅಥವಾ ನರರೋಗ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಬಹುದು.

ಪಾರ್ಕಿನ್‌ಸನ್ ರೋಗದ ಚಿಕಿತ್ಸೆಯಲ್ಲಿ ಔಷಧಗಳ ಪಾತ್ರ ಎಷ್ಟು ಮುಖ್ಯವೋ, ವ್ಯಾಯಾಮ ಮತ್ತು ಮನೋಚಿಕಿತ್ಸೆಯೂ ಅಷ್ಟೇ ಮುಖ್ಯವಾಗುತ್ತದೆ. ರೋಗಿಯ ದೈನಂದಿನ ಕೆಲಸಗಳಿಗೆ ಅಡ್ಡಿಯಾಗದಷ್ಟರಮಟ್ಟಿಗೆ  ಕಾಯಿಲೆ ಪ್ರಾರಂಭಿಕ ಹಂತದಲ್ಲಿರುವಾಗ ಉಪಯೋಗವಾಗುವ ಔಷಧಗಳೆಂದರೆ ಟ್ರೈಹೆಕ್ಸಿ ಫೆನಿಡಿಲ್ (ಪಾಸಿಟೇನ್), ಪ್ರೋಸೈಕ್ಲಿಡಿನ್ (ಕೆಮಡ್ರಿನ್), ಆರ್ಫೆನಡ್ರಿನ್ (ಡಿಸಿಪಾಲ್) ಮತ್ತು ಅಮಾಂಟಿಡಿನ್ ಮಾತ್ರಗಳು. ವೈದ್ಯರ ನಿರ್ದೇಶನದಲ್ಲಿ ಔಷಧದ ಪ್ರಮಾಣವನ್ನು ನಿರ್ಧರಿಸಬೇಕು. ಖಿನ್ನತೆ ನಿವಾರಕ ಔಷಧ ಇಮಿಪ್ರಮಿನ್ ಮತ್ತು ಅಮಿಟ್ರಿಫ್ಪಲಿನ್ ಕೂಡ ಅನುಕೂಲಕಾರಿ. ರೋಗ ಉಲ್ಬಣವಾದಾಗ, ರೋಗಿ ದಿನನಿತ್ಯದ ಕೆಲಸ ಮಾಡಲಾಗದಷ್ಟು ತೊಂಡರೆಗೀಡಾದಾಗ ಎಲ್-ಡೋಪ ಮತ್ತು ಬ್ರೊಮೋಕ್ರಿಪ್ಪಿನ್ ಮಾತ್ರೆಗಳನ್ನು ಕೊಡಲಾಗುತ್ತದೆ. ದೀರ್ಘಕಾಲ ಔಷಧೋಪಚಾರ ನಡೆಯಬೇಕು.

ವ್ಯಾಯಾಮ ಮತ್ತು ಶಾರೀರಿಕ ಚಿಕಿತ್ಸೆ: ರೋಗಿ ಆದಷ್ಟು ನೆಮ್ಮದಿಯಿಂದಿರಲು ಪ್ರಯತ್ನಿಸಬೇಕು. ನಡಿಗೆ, ಸರಳ ವ್ಯಾಯಾಮ, ಮಾಂಸ ಖಂಡಗಳನ್ನು ನೀವುವುದು (ಮಸಾಜ್) ಅತ್ಯಗತ್ಯ. ಪ್ರತಿದಿನ ಕ್ರಮವಾಗಿ ಈ ಶಾರೀರಿಕ ಚಿಕಿತ್ಸೆ ನಡೆಯಬೇಕು.

ಮನೋಚಿಕಿತ್ಸೆ: ರೋಗಿಗೆ ಧೈರ್ಯ, ಪ್ರೋತ್ಸಾಹ ನೀಡುತ್ತಾ, ಆತ ಆದಷ್ಟು ನೆಮ್ಮದಿನಿಂದ, ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು. ನಿರಾಶೆ, ಅಸಹಾಯಕತೆ, ಕೀಳರಿಮೆಗೆ ಎಡೆ ಮಾಡಿಕೊಡಬಾರದು. ಕಾಯಿಲೆ ಮತ್ತು ಅದರಿಂದ ಉಂಟಾಗುವ ನ್ಯೂನತೆ, ತೊಂದರೆಗಳನ್ನು ಒಪ್ಪಿಕೊಂಡು, ಇದ್ದದ್ದರಲ್ಲಿ ತೃಪ್ತಿ ಪಡಲು ಪ್ರಯತ್ನಿಸಬೇಕು. ಓದು, ಸಂಗೀತ, ಧ್ಯಾನ, ಧಾರ್ಮಿಕ ಆಲೋಚನೆ ಚಟುವಟಿಕೆಗಳು ಈ ದಿಸೆಯಲ್ಲಿ ಅನುಕೂಲಕಾರಿ. ಮನೆಯವರೂ ಮತ್ತು ಬಂಧು-ಮಿತ್ರರೂ ಅತಿಯಾದ ಅನುಕಂಪವನ್ನು ತೋರದೆ, ಉದಾಸೀನ ಉಪೇಕ್ಷೆಯನ್ನು ಮಾಡದೇ ಸಮತೋಲನ ಆಸರೆಯನ್ನು ನೀಡಲು ಮುಂದಾಗಬೇಕು.

ಅವಧಿಗೊಂದಾವರ್ತಿ ಪರಿಚಿತ ಸಲಹೆ ಮಾರ್ಗದರ್ಶನ ಅಗತ್ಯ. ಕೈಕಾಲು ನಡುಕ ಅಥವಾ ಬಿಗಿತ ಅಥವಾ ಇತರ ಲಕ್ಷಣಗಳು ದೇಹದ ಒಂದೇ ಕಡೆ ಇದ್ದರೆ ಕೆಲವು ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ, ಥೆಲಾಮಸ್‌ನಲ್ಲಿ ಗಾಯವನ್ನುಂಟು ಮಾಡಿ ಚಿಕಿತ್ಸೆ ನಡೆಸುವ ವಿಧಾನವೂ ಇದೆ. ಆದರೆ ಇದು ಅಷ್ಟು ಜನಪ್ರಿಯವಲ್ಲ.

ಪಾರ್ಕಿನ್‌ಸನ್ ರೋಗ, ರೋಗಿಯ ಉಳಿದ ಜೀವನವಡೀ ಇದ್ದು, ಆಗಾಗ್ಗೆ ಹೆಚ್ಚಾಗುವುದು, ಕಡಿಮೆಯಾಗುವುದೂ ಆಗುತ್ತದೆ. ಯೋಗ್ಯ ಹಾಗೂ ಕ್ರಮವಾದ ಚಿಕಿತ್ಸೆಯಿಂದ ಈ ರೋಗಿಗಳು ಇತರರಂತೆ ಪೂರ್ಣಾವಧಿಗೆ ಬದುಕಬಲ್ಲರು. ಇದಕ್ಕೆ ಸತತ ಸಾಧನೆ, ಆತ್ಮವಿಶ್ವಾಸ ಅಗತ್ಯ. ಈ ರೋಗಿಗಳ ಮನೆಯವರೆಲ್ಲ ಒಟ್ಟಿಗೆ ಸೇರಿ ತಮ್ಮ ಊರಿನಲ್ಲಿ ಪಾರ್ಕಿನ್‌ಸನ್ ರೋಗಿಗಳ ಸಂಘ ಮಾಡಿಕೊಂಡು ಪರಸ್ಪರ ಆಸಕೆ ಕೊಟ್ಟುಕೊಳ್ಳಬೇಕು. ಸಮಜದ ಗಮನವನ್ನು ಸೆಳೆಯಬೇಕು.

 

(iii) ಆಲ್ಜೈಮರನ ಕಾಯಿಲೆ ALZEIMER’S DISEASE

ಅಮೆರಿಕಾದ ಮಾಜಿ ಅಧ್ಯಕ್ಷ ರೋನಾಲ್ಡ್‌ ರೇಗನ್ ಈಗ ಏನೂ ತಿಳಿಯದ ಪುಟ್ಟ ಮಗುವಿನಂತಾಗಿದ್ದಾರೆ. ತಮ್ಮ ಪರಿಚಿತರನ್ನು ಅಷ್‌ಏ ಏಕೆ, ಮಕ್ಕಳನ್ನೂ ಗುರುತಿಸಲಾರರು. ತಮ್ಮ ಮನೆಯಲ್ಲಿ ಅಡುಗೆ ಮನೆ ಎಲ್ಲಿದೆ, ಸ್ನಾನದ ಮನೆ ಎಲ್ಲಿದೆ, ತಾವು ಮಲಗುವ ಕೊಠಡಿ ಎಲ್ಲಿದೆ ಎಂದು ಹೇಳಲಾರರು. ಈ ದಿನ ಯಾವ ವಾರ, ಈಗ ವೇಳೆ ಎಷ್ಟು, ಬೆಳಗಿನ ಉಪಹಾರಕ್ಕೆ ತಾವೇನು ತಿಂದಿದ್ದು ಎಂಬುದನ್ನೂ ಹೇಳಲಾರರು. ಸ್ನಾನ ಮಾಡಲು, ಬಟ್ಟೆ ತೊಡಲು ಅವರಿಗೆ ಇತರರ ಸಹಾಯ ಬೇಕು. ತಮ್ಮ ಮುಂದೆ ಇಟ್ಟಿರುವ ಹಣವನ್ನು ಎಣಿಸಲಾರರು. ತಾವು ಹಿಂದೆ ಅಮೆರಿಕಾದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ತೆಗೆದುಕೊಂಡ ಪ್ರಮುಖ ನಿರ್ಧಾರಗಳು, ಭೇಟಿ ಕೊಟ್ಟ ರಾಷ್ಟ್ರಗಳು, ಸಂಧಿಸಿದ ಪ್ರಮುಖದ ನೆನಪು ಅವರಿಗೆ ಇಲ್ಲವೇ ಇಲ್ಲ. ಪೂರ್ಣ ಪರಾವಲಂಬಿಯಾಗಿ ಬರುಕಿರುವ ಅವರ ಈ ಸ್ಥಿತಿಗೆ ಕಾರಣ, ಅವರ ನಶಿಸಿಹೋಗಿರುವ ಮಿದುಳು. ಅವರ ಮಿದುಳು ನಶಿಸಿ ಹೋಗಲು ಕಾರಣ ಆಲ್ಜೈಮರನ ಕಾಯಿಲೆ.

ಅಮೇರಿಕಾದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದಂತೆ, ಆಲ್ಜೈಮರನ ಕಾಯಿಲೆ (Alzeimer’s Disease) ಕೂಡ ಹೆಚ್ಚುತ್ತಿದ್ದು ವೃದ್ಧರ ಪಾಲಿಗೆ ಹೊಸ ಗಂಡಾಂತರ ಒಂದು ಎದುರಾಗಿದೆ. ಅಧ್ಯಯನಗಳು ಮತ್ತು ತಜ್ಞರುಗಳ ವರದಿಯ ಪ್ರಕಾರ ೬೫ ವರ್ಷ ವಯಸ್ಸಾದವರಲ್ಲಿ ಶೇಕಡಾ ೫ ರಿಂದ ೧೧ ರಷ್ಟು ಮಂದಿ, ಈ ಕಾಯಿಲೆಯಿಂದ ಅಸಹಾಯಕ ಸ್ಥಿತಿಯನ್ನು ತಲುಪುತ್ತಾರೆ. ೮೫ ವರ್ಷ ವಯಸ್ಸಿನವರಲ್ಲಿ ಶೇಕಡಾ ೫೦ ಮಂದಿ, ಈ ಕಾಯಿಲೆಯಿಂದ ಬಳಲುತ್ತಾರೆ. ಇಂದು ಅಮೇರಿಕಾ ಒಂದರಲ್ಲೇ ೪೦ ಲಕ್ಷ ಮಂದಿ ಅಲ್ಜೈಮರನ ಕಾಯಿಲೆಗೆ ಒಳಗಾಗಿದ್ದಾರೆ. ಹೃದ್ರೋಗ, ಕ್ಯಾನ್ಸರ್‌ ಮತ್ತು ಪಾರ್ಶ್ವವಾಯುವಿನ ನಂತರ, ಜನರ ಪ್ರಾಣವನ್ನು ಆಹುತಿ ತೆಗೆದುಕೊಳ್ಳುವುದು ಈ ಕಾಯಿಲೆಯೇ. ನಮ್ಮ ದೇಶದ ಜನಸಂಖ್ಯೆಯ ಶೇಕಡಾ ೮ ರಷ್ಟು ಜನ ವೃದ್ಧರು. ವರ್ಷೇ ವರ್ಷೇ ವೃದ್ಧರ ಸಂಖ್ಯೆ ಹೆಚ್ಚುತ್ತಿದೆಯಾಗಿ ಈ ಕಾಯಿಲೆ ನಮ್ಮ ದೇಶದಲ್ಲೂ ಬಂದು ದೊಡ್ಡ ಪಿಡುಗಾಗಿ ಕಣಿಸಿಕೊಳ್ಳುವ ದಿನಗಳು ಬಹಳ ದೂರವೇನಿಲ್ಲ ಎಂಬುದು ಆತಂಕಕಾರಿ.

ಕಾಯಿಲೆಯ ಸಂಶೋಧಕ

೧೯೦೬ ರಲ್ಲಿ ಜರ್ಮನಿಯ ನರರೋಗ ತಜ್ಞ ರಾ. ಅಲೋಯಿಸ್ ಆಲ್ಜೈಮರ್, ಈ ರೋಗದ ಲಕ್ಷಣ ಮತ್ತು ವಿವರಗಳನ್ನು ಪ್ರಪ್ರಥಮ ಬಾರಿ ವಿಶ್ಲೇಷಿಸಿದ. ೫೫ ವರ್ಷ ವಯಸ್ಸಿನ ಸ್ತ್ರೀಯೊಬ್ಬಳು ಹೇಗೆ, ಕ್ಷಿಪ್ರವಾಗಿ ತನ್ನ ನೆನಪು, ಬುದ್ಧಿಶಕ್ತಿ-ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾಳೆ ಎಂಬ ಪ್ರಕರಣದ ಮೂಲಕ ಈ ನರರೋಗತಜ್ಞ ಈ ಮಿದುಳು ನಶಿಸಿಹೋಗುವ ಕಾಯಿಲೆಯನ್ನು ಜಗತ್ತಿಗೆ ಪರಿಚಯ ಮಾಡಿಸಿದ. ಹೀಗಾಗಿ ಅವನ ಹೆಸರೇ ಈ ಕಾಯಿಲೆಗೆ ಅಂಟಿಕೊಂಡಿತು. ನೆನಪಿನ ಶಕ್ತಿ ಕುಗ್ಗುವುದು, ಬದಲಿಸಲಾಗದ ಸಂಶಯಗಳು, ಶೂನ್ಯದಿಂದ ಕಿವಿಗೆ ಶಬ್ದಗಳು ಕೇಳಿಸುವುದುಸ (ಹೆಲೊಸಿನೇಶನ್ಸ್‌), ಮಾತನಾಡಲು ಕಷ್ಟ, ಹಿಂದೆ ಮಾಡುತ್ತಿದ್ದ ಚಟುವಟಿಕೆಗಳನ್ನು, ತೋರುತ್ತಿದ್ದ ಕೌಶಲಗಳನ್ನು ಮಾಡಲಾಗದಿರುವುದು, ವಸ್ತುಗಳನ್ನು ಗುರುತಿಸಲಾಗದಿರುವುದು, ತನ್ನ ಬೇಕು ಬೇಡಗಳನ್ನು ಗಮನಿಸಲಾಗದಿರುವುದು ಈ ರೋಗದ ಸಾಮಾನ್ಯ ಲಕ್ಷಣಗಳು. ತನ್ನ ಸ್ನೇಹಿತ ಸಹೋದ್ಯೋಗಿ ಫ್ರಾಂಜ್ ನಿಸ್ಸಲ್‌ನ ನೆರವಿನಿಂದ, ಮಿದುಳಿನ ಉಂಡಿಗೆ ಹಾಕಿ ಅದನ್ನು ಸೂಕ್ಷ್ಮದರ್ಶಿಯಡಿಯಲ್ಲಿಟ್ಟು, ಆಲ್ಜೈಮರ್, ಈ ರೋಗದ ನಿರ್ದಿಷ್ಟ ಲಕ್ಷಣಗಳನ್ನು ವಿವರಿಸಿದ. ನರಕೋಶಗಳ ಸಂಖ್ಯೆ ಕ್ಷೀಣಿಸುವುದು, ನರಕೋಶದೊಳಗಡೆ ಗಂಟು ಹಾಕಿಕೊಂಡ ಎಳೆಗಳು (ನ್ಯೂರೋಫಿಬ್ರಿಲರಿ ಟ್ಯಾಂಗಲ್ಸ) ಮತ್ತು ಚೆಕ್ಕೆಗಳನ್ನು (ಸೆನೈಲ್ ಪ್ಲೇಕ್ಸ್) ಆತ ವಿವರಿಸಿದ. ಈಗಲೂ ಕೂಡ ಈ ರೋಗ ವಿಧಾನಕ್ಕೆ ಈ ಲಕ್ಷಣಕೂಟವನ್ನೇ ಆಧಾರ ಮಾಡಲಾಗಿದೆ.

೧೯೭೦ರ ಸುಮಾರಿಗೆ, ಆಲ್ಜೈಮರ‍್ನ ಕಾಯಿಲೆಯಲ್ಲಿ ನರವಾಹಕ ಕಣಗಳಾದ ‘ಅಸಿಟೈಲ್‌ಕೋಲಿನ್’ನ ಕೊರತೆ ಕಂಡುಬರುವುದನ್ನು ಪತ್ತೆ ಹಚ್ಚಲಾಯಿತು.

ಮಿದುಳಿನಲ್ಲಾಗುವ ಬದಲಾವಣೆಗಳು

ಮೇಲ್ನೋಟದ ಬದಲಾವಣೆ: ರೋಗ ಯಾವ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎನ್ನುವುದರ ಮೇಲೆ ಮಿದುಳಿನ ಹೊರ ನೋಟವೂ ಭಿನ್ನವಾಗಿರುತ್ತದೆ. ಮಿದುಳಿನ ಮೇಲ್ಮೈನ (Brain Cortex) ಸವೆತದಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಐವತ್ತು-ಐವತ್ತೈದು ವರ್ಷ ವಯಸ್ಸಿಗೇಸ ಕಾಯಿಲೆಯು ಪ್ರಾರಂಭವಾದವರಲ್ಲಿ ಮಿದುಳಿನ ಲಿಂಬಿಕ್ ವ್ಯವಸ್ಥೆಗಿಂತ, ಮೇಲ್ಮೈಯಲ್ಲೇ ಹೆಚ್ಚು ಸವೆತ ಕಂಡುಬರುತ್ತದೆ. ಕಾಯಿಲೆ ೬೫ ರಿಂದ ೭೦ ವರ್ಷ ವಯಸ್ಸಿನ ನಂತರ ಕಂಡು ಬಂದರೆ ಹೆಚ್ಚು ಸವೆತ ಲಿಂಬಿಕ್ ವ್ಯವಸ್ಥೆಯಲ್ಲಿರುತ್ತದೆ (ಮಿದುಳಿನ ಮಧ್ಯಭಾಗ). ಆಲ್ಜೈಮರನ ಕಾಯಿಲೆಯಲ್ಲಿ ಸವೆತವು ಮಿದುಳಿನ ಹಿಂಭಾಗವನ್ನು ಬಿಟ್ಟು ಉಳಿದ ಎಲ್ಲ ಭಾಗಗಳಲ್ಲಿ ಅಂದರೆ ಮುಂಭಾಗ, ಪಾರ್ಶ್ವಭಾಗ, ಕಪೋಲ ಭಾಗ ಹಾಗೂ ಲಿಂಬಿಕ್ ಭಾಗದಲ್ಲಿ ಕಂಡುಬರುತ್ತದೆ. ಮಿದುಳಿನ ತಳದ ನರಗಂಟುಗಳಲ್ಲಿ, ಥೆಲಾಮಸ್‌ನಲ್ಲಿ ಉಪಮಸ್ತಿಷ್ಕಗಳಲ್ಲಿ ಸವೆತ ಕಂಡುಬರುವುದಿಲ್ಲ. ಮಿದುಳಿನ ಕುಲಿಗಳು (ವೆಂಟ್ರಿಕಲ್ಸ್‌) ವಿಶಾಲವಾಗುತ್ತವೆ.

ಸೂಕ್ಷ್ಮದರ್ಶಿ ಅಡಿಯಲ್ಲಿ ಮಿದುಳು

ಚೆಕ್ಕೆಗಳು: ಇವನ್ನು ಸೆನೈಲ್ ಪ್ಲೇಕ್ಸ್ ಎಂದು ಕರೆಯುತ್ತಾರೆ. ಮಿದುಳಿನ ಸಣ್ಣ ತುಂಡನ್ನು ಉಂಡಿಗೆ ತೆಗೆದು, ಸಣ್ಣ-ತೆಳುವಾದ ಪದರಗಳನ್ನಾಗಿ ಕತ್ತರಿಸಿ ಸೂಕ್ಷ್ಮದರ್ಶಿಯಡಿಯಲ್ಲಿಟ್ಟು ನೋಡಿದಾಗ, ನರಕೋಶಗಳ ಹೊರಗೆ, ನರಕೋಶಗಳ ಬಾಲ ಮತ್ತು ಕೈಗಳು ಸವೆದು ಹೋಗಿ, ಅವುಗಳ ಉಳಿಕೆಗಳು ಚೆಕ್ಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಇವು ಮಿದುಳಿನ ಮುಂಭಾಗ, ಪಾರ್ಶ್ವಭಾಗ, ಕಪೋಲ ಭಾಗ, ಅಮಿಗ್ಡಿಲಾ, ಹಿಪ್ಪೊಕಾಂಪಸ್‌ಗಳಲ್ಲಿ ಹೆಚ್ಚು.

ನರ ಎಳೆಗಳ ಗಂಟುಗಳು: ನ್ಯೂರೋಫಿಬ್ರಿಲರಿ ಟ್ಯಾಂಗಲ್ಸ್: ಇವು ನರಕೋಶಗಳ ಒಳಗೆ ಕಂಡುಬರುತ್ತವೆ. ಜೋಡಿ ಎಳೆಗಳು ಜಡೆ ಹೆಣೆದುಕೊಂದಂತೆ ಇರುತ್ತವೆ. ನರಕೋಶಗಳ ನಡುವೆ ಸಂದೇಶ ಸಾಗಾಟದಲ್ಲಿ ಇವು ಭಾಗಿಗಳಾಗುತ್ತವೆ. ಇವು ತುಂಡಾಗಿರುವುದು ಈ ಕಾಯಿಲೆಯ ವಿಶೇಷ.

ನರಕೋಶಗಳ ನಾಶ: ಆಲ್ಜೈಮರ್ ಕಾಯಿಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಿದುಳಿನ ನರಕೋಶಗಳು ನಾಶವಾಗಿರುತ್ತವೆ. ಆರೋಗ್ಯವಂತ ಮಿದುಳಿನಲ್ಲಿ ೧೦೦ ಬಿಲಿಯನ್ ನರಕೋಶಗಳಿರುತ್ತವೆ. ಅವುಗಳ ಸಂಖ್ಯೆ ಶೀಘ್ರಗತಿಯಲ್ಲಿ ಕ್ಷೀಣಿಸುತ್ತಾ ಹೋಗುತ್ತದೆ. ನರ ತುಂಡುಗಳ ಕೂಡು ಸ್ಥಳ (ಸೈನಾಪ್ಸ್) ಗಳೂ ನಾಶವಾಗಿರುತ್ತವೆ. ಈ ಕೂಡು ಸ್ಥಳಗಳಲ್ಲಿಯೇ ಸಂದೇಶ ಸಾಗಾಟ ನಡೆಯುವುದು. ಅಂದರೆ ನರಕೋಶ -ಕೂಡುಸ್ಥಳಗಳ ನಾಶದಿಂದಾಗಿ ಮಿದುಳಿನ ಸಂದೇಶ ಸಾಗಾಟದ ವ್ಯವಸ್ಥೆ ಕುಸಿಯುತ್ತದೆ. ಇದಲ್ಲದೆ ಇನ್ನೂ ಕೆಲವು ಬದಲಾವಣೆಗಳನ್ನು ಕಾಣಬಹುದು.

ಹಿರನೋ ಕಾಯಗಳು: ಇವು ಆಲ್ಜೈಮರ್ ಕಾಯಿಲೆಗೆ ಸೀಮಿತವಾಗದೇ, ವೃದ್ಧಾಪ್ಯವನ್ನು ಮುಟ್ಟಿದ ಎಲ್ಲ ಮಿದುಳಿನಲ್ಲೂ ಕಂಡುಬರುತ್ತದೆ. ಮಿದುಳಿನ ಹಿಪ್ಟೊಕಾಂಪಸ್ ಭಾಗದಲ್ಲಿ ಮೂಡುತ್ತವೆ. ಇವು ನರಕೋಶದ ಅಂಗಾಂಶಗಳು ಹಾಳುದುದರ ಅವಶೇಷವೆನ್ನಬಹುದು.

ರಕ್ತನಾಳಗಳ ಗಾಯ: ಈ ಕಾಯಿಲೆಗೆ ಒಳಗಾದ ಮಿದುಳಿನ ಸಣ್ಣ ಮತ್ತು ಮಧ್ಯಮ ಗಾತ್ರದ ರಕ್ತನಾಳಗಳ ಭಿತ್ತಿಯಲ್ಲಿ ಗಾಯಗಳು ಕಂಡುಬರುತ್ತವೆ. ಮುಖ್ಯವಾಗಿ ಮಿದುಳಿನ ಮುಂಭಾಗ ಮತ್ತು ಪಾರ್ಶ್ವಭಾಗಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಕ್ತನಾಳಗಳು ಬಿರುಕು ಬಿಟ್ಟು ರಕ್ತಸ್ರಾವಗಳು ಕಂಡುಬರಬಹುದು.

ಆಲ್ಜೈಮರ್ನ ಕಾಯಿಲೆ ಖಚಿತವಾಗಿ ನಿರ್ಧಾರವಾಗಬೇಕಾದರೆ ಮಿದುಳಿನ ಉಂಡಿಗೆ ತೆಗೆದು, ಸೂಕ್ಷ್ಮದರ್ಶಿಯಡಿಯಲ್ಲಿ ಪರೀಕ್ಷಿಸಲೇಬೇಕು.

ನರಕೋಶಗಳಲ್ಲಿ ರಾಸಾಯನಿಕ ಬದಲಾವಣೆ: ನರವಾಹಕ ವಸ್ತುವಾದ ‘ಅಸಿಟೈಲ್ ಕೋಲಿನ್’ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತದೆ. ಮಾಹಿತಿ ಮುದ್ರಣವಾಗಲು, ನೆನಪಿನ ಪ್ರಕ್ರಿಯೆಯಲ್ಲಿ ಅಸಿಟೈಲ್ ಕೋಲಿನ್ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಗಮನಾರ್ಹ. ರೋಗದ ಪ್ರಾರಂಭದಲ್ಲೇ ಕೋಲಿನ್ ಅಸಿಟೈಲ್ ಟ್ರಾನ್ಸ್‌ಫರೇಸ್‌ನ ಪ್ರಮಾಣ ತಗ್ಗಲಾರಂಭಿಸುತ್ತದೆ. ಇದಲ್ಲದೆ ಇತರ ನರವಾಹಕ ವಸ್ತು (Neurotransmitters) ಗಳಾದ ನಾರ್ ಅಡ್ರಿನಲಿನ್ ಸರೋಟೊನಿನ್, ಸೊಮಾಟೋ ಸ್ಟಾಟಿನ್, ಕಾರ್ಟಿಕೋಟ್ರೊಪಿನ್- ರಿಲೀಸಿಂಗ್ ಫ್ಯಾಕ್ಟರ್ ಹಾಗೂ ಗ್ಲೂಟಮೇಟ್ ಕೂಡ ಕಡಿಮೆಯಾಗುತ್ತವೆ ಎಂದು ತಿಳಿದು ಬರುತ್ತದೆ.

ರೋಗ ಲಕ್ಷಣಗಳು: ಆಲ್ಜೈಮರ್‌ನ ಕಾಯಿಲೆಯಲ್ಲಿ ನಿರ್ದಿಷ್ಟವಾಗಿ ಮೂರು ಹಂತಗಳನ್ನು ಗುರುತಿಸಬಹುದು. ಪ್ರತಿ ಹಂತ ೨ ರಿಂದ ೩ ವರ್ಷಗಳ ಕಾಲ ಉಳಿಯಬಹುದು. ರೋಗದ ವಿಶೇಷ ಲಕ್ಷಣವೆಂದರೆ, ಕ್ಷಿಪ್ರಗತಿಯಲ್ಲಿ, ಜಾರು ಹಾದಿಯಲ್ಲಿ ವ್ಯಕ್ತಿಯ ನೆನಪು, ಬುದ್ಧಿ ಸಾಮರ್ಥ್ಯಗಳು ಕುಂಠಿತವಾಗುತ್ತಾ ಹೋಗುವುದು. ಕಾಯಿಲೆ ಕಾಣಿಸಿಕೊಂಡ ಮೇಲೆ ರೋಗಿ ಸರಾಸರಿ ೮ ವರ್ಷಗಳ ಕಾಲ ಬದುಕುತ್ತಾನೆ. ೨೦ ವರ್ಷಗಳ ಕಾಲ ಬದುಕಿದ ದಾಖಲೆಯೂ ಇದೆ. ಎರಡು ಮೂರು ವರ್ಷಗಳಲ್ಲೇ ತೀರಿಕೊಂಡ ಪ್ರಕರಣಗಳೂ ಇವೆ.

ಕುಗ್ಗುವ ಬೌದ್ಧಿಕ ಸಾಮರ್ಥ್ಯ: ಶೇಕಡಾ ೮೬ ರಷ್ಟು ಪ್ರಕರಣಗಳಲ್ಲಿ ಮರೆವು, ಶೇಕಡಾ ೭೨ ರಷ್ಟು ರೋಗಿಗಳಲ್ಲಿ ಭಾಷಾ ಸಾಮರ್ಥ್ಯ ಹಾಳಾಗುವುದು, ಶೇಕಡಾ ೪೫ ರಷ್ಟು ರೋಗಿಗಳಲ್ಲಿ ಏಕಾಗ್ರತೆ ಹಾಳಾಗುವುದು ಕಂಡುಬರುತ್ತದೆ.

ಬೇಗ ಮರೆತು ಹೋಗುವುದು: ರೋಗಿಯ ಗಮನಕ್ಕೆ ಬಂದ ವಿಷಯ ಸಂಗತಿ ಮಾಹಿತಿಗಳು, ಅಲ್ಪಕಾಲದಲ್ಲಿಯೇ ಮರೆತು ಹೋಗುವುದು. ಈ ರೋಗದ ವಿಶಿಷ್ಟ ಲಕ್ಷಣ. ನೋಡಿದ ವ್ಯಕ್ತಿಯ ಹೆಸರು, ವಿಳಾಸ, ಆಡಿದ ಮಾತು, ಮಾಡಿದ ಚಟುವಟಿಕೆ, ಕೆಲವೇ ನಿಮಿಷಗಳ ಅಂತರದಲ್ಲಿ ಮರೆತು ಹೋಗುತ್ತದೆ. ತಿಂಡಿ ತಿಂದ ಅರ್ಧ ಗಂಟೆಯ ನಂತರ ವ್ಯಕ್ತಿ, ನನಗೆ ನೀವು ಟಿಫಿನ್ ಕೊಡಲೇ ಇಲ್ಲ ಎಂದು ಹೇಳಬಹುದು. ಹಣ ಪಡೆದು, ಯಾರಿಂದ ಎಷ್ಟು ಹಣವನ್ನು ಯಾವ ಉದ್ದೇಶಕ್ಕಾಗಿ ಪಡೆದೆ ಎಂಬುದು ನೆನಪಿನಲ್ಲಿರದೇ ಹೋಗಬಹುದು ! ಕ್ರಮೇಣ ಹಿಂದಿನ, ಹಳೆಯ ನೆನಪುಗಳೂ ಮರೆತು ಹೋಗಲು ಪ್ರಾರಂಭವಾಗುತ್ತದೆ. ಮಕ್ಕಳು, ಸೊಸೆಯರು, ಮೊಮ್ಮಕ್ಕಳು, ಆಪ್ತ ಸ್ನೇಹಿತರು, ಪರಿಚಿತರ ಹೆಸರು, ವಿವರಗಳನ್ನು ರೋಗಿ ಮರೆಯುತ್ತಾನೆ. ತನ್ನ ವಿದ್ಯಾರ್ಹತೆ, ಉದ್ಯೋಗದ ವಿವರಗಳು, ಜೀವನದ ಪ್ರಮುಖ ಘಟನೆಗಳು ವ್ಯವಹಾರಗಳು ನೆನಪಿಗೆ ಬರುವುದಿಲ್ಲ.

ಭಾಷೆ: ಅನಿಸಿಕೆ ಅಭಿಪ್ರಾಯಗಳನ್ನು ನಿರ್ದಿಷ್ಟವಾಗಿ ಪ್ರತಿಬಿಂಬಿಸುವ ಪದಗಳು ರೋಗಿಗಳಿಗೆ ಮರೆತು ಹೋಗುತ್ತವೆ. ಹೀಗಾಗಿ, ಸರಾಗವಾಗಿ ಮಾತಾಡಿದರೂ, ಅದರ ಮೂಲಕ ಅವರು ಹೇಳವ ವಿಷಯ ಅತ್ಯಲ್ಪವಾಗಿರುತ್ತದೆ. ಸುಮ್ಮನೆ ಸುತ್ತು ಬಳಸಿ ಮಾತಾಡುತ್ತಾರೆ. ಕ್ರಮೇಣ ಮಾತಿನ ಪ್ರಮಾಣವೂ ತಗ್ಗುತ್ತದ. ಆಮೇಲೆ ಅವರು ಏನು ಹೇಳುತ್ತಿದ್ದಾರೆ. ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಉದಾ: ರೋಗಿ ಹೀಗೆ ಹೇಳಬಹುದು. ‘ನಾನು ಹೋಗುತ್ತೇನೆ. ನಾನು ಅಲ್ಲಿಗೆ ಹೋಗುತ್ತೇನೆ. ಆ ಹೆಂಗಸನ್ನು ನೋಡುತ್ತೇನೆ. ಆ ಹೆಂಗಸಿಗೆ ಹೇಳುತ್ತೇನೆ. ಅದು ನನಗಿಷ್ಟವಿಲ್ಲ ಅದು ನನಗೆ ಬೇಡ. ಅದಕ್ಕೆ ಎಷ್ಟು ಹಣ ಕೊಡಬೇಕು. ಅವಳಿಗೆ ಹೇಳಿ ಅವರಿಗೆ ನಾನು ಬಹಳ ಸಲ ಹೇಳಿದ್ದೇನೆ. ಹೇಗೆ ಹೇಳಬೇಕು ಗೊತ್ತಾಗುವುದಿಲ್ಲ. ನನಗೆ ಹೇಳಿ ಹೇಳಿ ಸಾಕಾಗಿದೆ. ನನಗೆ ತುಂಬಾ ಕೋಪ ಬರುತ್ತದೆ. ಅಲ್ಲಿರ ಬೇಡ ಎಂದು ಅವಳಿಗೆ ಹೇಳಿ….’ ರೋಗಿಯ ಬರವಣಿಗೆಯೂ ಹಾಳಾಗತೊಡಗುತ್ತದೆ.

ದಿಕ್ಕು ದಾರಿ ತಪ್ಪುವುದು: ರೋಗಿಗೆ ಪರಿಚಿತ ಪರಿಸರದಲ್ಲೇ ದಾರಿ ದಿಕ್ಕು ತಿಳಿಯುವುದಿಲ್ಲ. ಮನೆಯೊಳಗೆ ಅಡುಗೆ ಮನೆ ಎಲ್ಲಿದೆ, ಸ್ನಾನದ ಮನೆ ಯಾವ ಕಡೆ ಇದೆ. ತನ್ನ ಕೊಠಡಿಯ ಮುಂಬಾಗಿಲು ಎಲ್ಲಿದೆ ಗೊತ್ತಾಗದು. ಸ್ನಾನ ಮಾಡುತ್ತೇನೆ ಎಂದು ಟವೆಲ್ ತೆಗೆದುಕೊಂಡು, ಅಡುಗೆ ಮನೆಗೆ ಹೋಗಬಹುದು! ಹೊರಗಡೆ ಬಂದಾಗ, ಬಸ್‌ಸ್ಟಾಪ್‌ಗೆ ಬಲಕ್ಕೆ ತಿರುಗುವ ಬದಲು, ಎಡಕ್ಕೆ ತಿರುಗಬಹುದು. ಬೇರೆ ಯಾವುದೋ ಬೀದಿಗೆ ಹೋಗಿ ತಮ್ಮ ಮನೆ ಎಲ್ಲಿ ಎಂದು ಹುಡುಕಾಡಬಹುದು. ಗಡಿಯಾರದ ಚಿತ್ರ ಬರೆಯಿರಿ ಎಂದರೆ ಎಲ್ಲಿ ೧, ಮತ್ತು ೬, ಎಲ್ಲಿ ೯ ಗಂಟೆಯ ಗೀರು ಇರಬೇಕೆಂದು ತಿಳಿಯುವುದಿಲ್ಲ.

ದೈನಂದಿನ ಕೌಶಲಗಳೂ ಹಾಳಾಗುತ್ತವೆ: ಅನ್ನ ಸಾಂಬಾರು ಕಲಸಿಕೊಂಡು ತಿನ್ನುವುದು, ಸ್ನಾನ ಮಾಡುವುದು, ಬಟ್ಟೆ ಹಾಕಿಕೊಳ್ಳುವುದು, ಗುಂಡಿ ಜಿಪ್ ಹಾಕುವುದು, ಸರಿಯಾಗಿ ಸ್ಯಾಂಡಲ್ಸ್ ಅಥವಾ ಶೂ ಹಾಕಿಕೊಳ್ಳುವುದು, ಬೈತೆಲೆ ತೆಗೆದು ತಲೆ ಬಾಚಿಕೊಳ್ಳುವುದು, ಬೀಗದ ಕೈನಿಂದ ಬೀಗ ತೆಗೆಯುವುದು, ನೀಟಾಗಿ ಬರೆಯುವುದು- ಇವೆಲ್ಲ ಈ ರೋಗಿಗೆ ಸಾಧ್ಯವಾಗುವುದಿಲ್ಲ. ಬಟ್ಟೆಯನ್ನು ಹಿಂದುಮುಂದಾಗಿ ಹಾಕಿಕೊಳ್ಳಬಹುದು. ಗುಂಡಿ ಹಾಕಲು, ಜಿಪ್ ಎಳೆಯಲು ಮರೆಯಬಹುದು. ಒಂದರ ಮೇಲೊಂದು ಅಂಗಿ ಹಾಕಿಕೊಳ್ಳಬಹದು, ತಲೆ ಬಾಚದೇ, ಮುಖ ಕ್ಷೌರ ಮಾಡದೇ, ಊಟ ಮಾಡಿದ ಮೇಲೆ ಬಾಯಿ ಮುಸುರೆಯನ್ನು ಒರೆಸದೇ ಅಸ್ತವ್ಯಸ್ಥವಾಗಿ ಕಾಣಬಹುದು.

ವ್ಯಕ್ತಿತ್ವ ಮತ್ತು ಭಾವನೆಗಳ ಏರುಪೇರು: ರೋಗಿಯ ಹಿಂದಿನ ವ್ಯಕ್ತಿತ್ವ, ಜೀವನ ಶೈಲಿ ಬದಲಾಗುತ್ತದೆ. ರೋಗಿ ಸಿಡುಕನಾಗಬಹುದು. ಅಲ್ಪಸ್ವಲ್ಪ ಕಾರಣಕ್ಕೇ ಅಳಬಹುದು. ಮಗುವಿನಂತೆ ಭಯಪಡಬಹುದು. ಅಪಹಾಸ್ಯ ಎನಿಸುವ ಜೋಕ್‌ ಮಾಡಿ, ಕೇಕೆ ಹಾಕಬಹುದು. ಅಥವಾ ಮಂಕಾಗಿ, ಯಾರೊಂದಿಗೂ ಮಾತನಾಡದೇ ಕೂರಬಹುದು. ಧಾರಾಳವಾಗಿ ವಿವೇಚನೆ ಇಲ್ಲದೆ ಖರ್ಚು ಮಾಡಬಹುದು. ಸುತ್ತಮುತ್ತ ಯಾರಿದ್ದಾರೆ ಎಂದು ಗಮನಿಸದೇ ಬಟ್ಟೆ ಕಳಚಬಹುದು. ಲೈಂಗಿಕ ಬಯಕೆಯನ್ನು ವ್ಯಕ್ತಪಡಿಸಬಹುದು. ಹೆಂಡತಿ ಅಥವಾ ಗಂಡನನ್ನು ಸಂಭೋಗಕ್ಕೆ ಒತ್ತಾಯಿಸಬಹುದು. ಇತರರ ಮೇಲೆ ಸಂಶಯ ಪಡಬಹುದು. ಮನೆಯವರು ಮತ್ತು ಸುತ್ತಮುತ್ತಲಿನವರು ತಮಗೆ ವಿರುದ್ಧವಾಗಿದ್ದಾರೆ ಎನ್ನಬಹುದು. ಹೆದರಿ ಬಚ್ಚಿಟ್ಟುಕೊಳ್ಳಬಹುದು. ಹೇಳಿದ್ದನ್ನೇ ಹೇಳುತ್ತಾ ಮಾಡಿದ್ದನ್ನೇ ಮಾಡುತ್ತಾ ಕೂರಬಹುದು.

ಫಿಟ್ಸ್ ಮತ್ತು ಇತರ ನರಸಂಬಂಧೀ ಲಕ್ಷಣಗಳು: ಶೇಕಡಾ ೧೦ ರಷ್ಟು ಆಲ್ಜೈಮರ್ ರೋಗಿಗಳಲ್ಲಿ ರೋಗದ, ಮಧ್ಯಮ ಹಾಗೂ ಕಡೆಯ ಹಂತಗಳಲ್ಲಿ ಫಿಟ್ಸ್‌ ಪಾರ್ಶ್ವವಾಯು, ಕೈಕಾಲು ನಡುಕ, ಚಲನೆ ನಿಧಾನವಾಗುವುದು ಇತ್ಯಾದಿ ನರಸಂಬಂಧೀ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಕ್ರಮೇಣ ರೋಗಿಯ ರೋಗ ನಿರೋಧಕ ಶಕ್ತಿ ಕುಗ್ಗಿ ಸೋಂಕು ರೋಗಗಳು ಬಂದು, ಆತ ಹಾಸಿಗೆ ಹಿಡಿಯಬಹುದು. ಸಾವನ್ನಪ್ಪಬಹುದು.

ರೋಗಕಾರಕಗಳು: ಆಲ್ಜೈಮರನ ಕಾಯಿಲೆ ಏಕೆ ಬರುತ್ತದೆ? ರೋಗಕಾರಕಗಳು ಯಾವುವು? ಏಕೆ ನರಕೋಶಗಳು ನಾಶವಾಗುತ್ತವ? ಎಂಬುದು ಇಂದಿಗೂ ಅರ್ಥವಾಗಿಲ್ಲ. ನರರೋಗ ವಿಜ್ಞಾನಿಗಳ ಅವಿರತ ಸಂಶೋಧನಾ ಕೆಲಸ. ಮುಂದುವರೆದಿದ್ದರೂ ಈ ರೋಗದ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಈ ರೋಗ ಬರಲು ಪ್ರೇರಕ ಎಂದು ಹೇಳಬಹುದಾದ ಕೆಲವು ಅಂಶಗಳು ಹೀಗಿವೆ:

ಕುಟುಂಬದವರಲ್ಲಿ ಇತರರಿಗೆ ‘ಪಾರ್ಕಿನ್‌ಸನ್ ಕಾಯಿಲೆ’ ಮತ್ತು ‘ಮಂಗೋಲಿಸಂ ಅಥವಾ ಡೌನ್ಸ್‌ಸಿಂಡ್ರೋಮ್‌’- ಬುದ್ಧಿಮಾಂದ್ಯ ಮಗು ಇರುವುದು.

ವ್ಯಕ್ತಿಗೆ ಥೈರಾಯಿಡ್ ಕಾಯಿಲೆ, ತಲೆಗೆ ತೀವ್ರಪೆಟ್ಟು ಬೀಳುವುದು, ವಯಸ್ಸಾದ ಮೇಲೆ ಖಿನ್ನತೆ ಕಾಯಿಲೆ ಕಾಣಿಸಿಕೊಳ್ಳುವುದು. ಆತ ಅತಿಯಾಗಿ ಧೂಮಪಾನ ಮಾಡುವುದು. ಇದ್ದರೆ ಈ ಕಾಯಿಲೆ ಬರಬಹುದು.

ಗಂಡಸರಿಗಿಂತ, ಹೆಂಗಸರಿಗೆ ಈ ಕಾಯಿಲೆ ಹೆಚ್ಚು.

ವ್ಯಕ್ತಿಯ ವಿದ್ಯಾರ್ಹತೆ, ಬೌದ್ಧಿಕಮಟ್ಟ ಹೆಚ್ಚಿದಷ್ಟು ಈ ಕಾಯಿಲೆ ಇರುವ ಸಂಭವನೀಯತೆ ಕಡಿಮೆಯಾಗುತ್ತದೆ ಎಂಬುದು ಕುತೂಹಲಕಾರಿ ಅಂಶ.

ಆಲ್ಜೈಮರ್ ಕಾಯಿಲೆ ಬರಲು ಇನ್ನೂ ಕೆಲವು ಅಂಶಗಳನ್ನು ಕಾರಣಕರ್ತೃ ಎನ್ನಲಾಗಿದೆ.

. ತೀವ್ರ ಮುಪ್ಪಿನ ಪ್ರಕ್ರಿಯೆ: ಇತರರಲ್ಲಿ ಕಂಡುಬರುವ ಮುಪ್ಪಿನ ಪ್ರಕ್ರಿಯೆ, ಈ ರೋಗಿಗಳಲ್ಲಿ ವೇಗವಾಗಿ ನಡೆಯುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನರಕೋಶಗಳು ನಶಿಸುತ್ತವೆ.

. ಅನುವಂಶಿಕ ಅಂಶಗಳು: ಜನಿಕ ಸಂಶೋಧನೆಗಳಿಂದ ಕಂಡುಬಂದಿರುವ ಮಾಹಿತಿ ಪ್ರಕಾರ, ೧೯ನೇ ವರ್ಣತಂತುವಿನ ಮೇಲೆ, ಅಪೊಲಿಪೊ ಪ್ರೋಟೀನ್ ಇ, ಟೈಪ್ ೪ ಇರುವುದು ಈ ರೋಗಿಗಳಲ್ಲಿ ಕಂಡುಬಂದಿದೆ. ೨೧ನೇ, ೧ನೇ ಮತ್ತು ೧೪ನೇ ವರ್ಣತಂತುಗಳಲ್ಲಿ ದಿಢೀರ್ ಬದಲಾವಣೆ (Mutation) ಇನ್ನೊಂದು ಮಾಹಿತಿ ಆಧಾರಿತ ಸಾಕ್ಷ್ಯ.

೩. ಈ ಕಾಯಿಲೆಯಲ್ಲಿ ಯಾವುದೇ ರೋಗಾಣು, ರೋಗಕಾರಕ ಕಣವನ್ನು ಪತ್ತೆ ಹಚ್ಚುವ ಕೆಲಸಕ್ಕೆ ಇದುವರೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ. ವೈರಸ್, ಅಥವಾ ಪ್ರಿಯಾನ್‌ಗಳು ಇದಕ್ಕೆ ಕಾರಣವಿರಬಹುದೇ ಎಂಬ ಊಹೆಗೂ ಪುಷ್ಠಿ ದೊರೆತಿಲ್ಲ.

ನೆನಪು, ಬುದ್ಧಿ ಸಾಮರ್ಥ್ಯಗಳು ಕಡಿಮೆಯಾಗಿ ವ್ಯಕ್ತಿ ಪರಾವಲಂಬಿ ಸ್ಥಿತಿ-ಡೆಮಿನ್ಷಿಯದಿಂದ ಬಳಲುವ ಇನ್ನೂ ಅನೇಕ ರೋಗಗಳಿವೆ. ಅವನ್ನೆಲ್ಲ ‘ಅಲ್ಜೈಮರನ ಕಾಯಿಲೆ’ ಎಂದು ಹೇಳಬಾರದು. ಡೆಮೆನ್ಷಿಯ ಬರಲು ಕಾರಣಗಳು ಹಲವಾರು.

. ರಕ್ತಪೂರೈಕೆಗೆ ಅಡ್ಡಿ/ ರಕ್ತಸ್ರಾವ: ಸಿಹಿ ಮೂತ್ರ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತನಾಳ ಪೆಡಸುಗೊಳ್ಳುವ (ಅತಿರೋಸ್ಕ್ಲೀರೋಸಿಸ್‌) ರೋಗಿಗಳಲ್ಲಿ ಮಿದುಳಿಗೆ ರಕ್ತಪೂರೈಕೆ ಕಡಿಮೆಯಾಗಬಹುದು. ಸಣ್ಣ- ದೊಡ್ಡ ರಕ್ತನಾಳಗಳು ಕಟ್ಟಿಕೊಳ್ಳಬಹುದು ಅಥವಾ ಒಡೆದು ರಕ್ತಸ್ರಾವವಾಗಬಹುದು. ಆಗ ಮಿದುಳಿನ ಮೇಲ್ಮೈಗೆ ಹಾನಿಯಾಗಿ, ಮರೆವು, ಬುದ್ಧಿಹೀನತೆ-ಡೆಮಿನ್ಷಿಯ ಕಾಣಿಸಿಕೊಳ್ಳುತ್ತದೆ.

೨. ಪಿಕ್‌ನ ಕಾಯಿಲೆ, ಮಿದುಳಿನ ಮುಂಭಾಗ ಮತ್ತು ಕಪೋಲ ಭಾಗದ ನರಕೋಶಗಳೊಳಗೆ ಪಿಕ್‌-ಕಾಯಗಳು ಕಂಡುಬರುತ್ತವೆ. ಜೀವುಂಡಿಗೆ ತೆಗೆದು, ಸೂಕ್ಷ್ಮದರ್ಶಿಯಲ್ಲಿ ನೋಡಿದಾಗ, ಈ ಕಾಯಗಳು ಕಂಡುಬಂದರೆ ಈ ಕಾಯಿಲೆ ಇದೆ ಎನ್ನಬಹುದು.

೩. ಹಂಟಿಂಗ್‌ಟನ್‌ನ ಕಾಯಿಲೆ, ಪಾರ್ಕಿನ್‌ಸನ್‌ ಕಾಯಿಲೆಯಲ್ಲಿ ಕೊನೆ ಕೊನೆಗೆ ಡೆಮೆನ್ಷಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

೪. ಮಿದುಳಿಗೆ ಬರುವ ದೀರ್ಘಕಾಲದ ಸೋಂಕು ರೋಗಗಳಾದ ಕ್ಷಯ, ಸಿಫಿಲಸ್, ಏಯ್ಡ್‌ನಲ್ಲೂ ಮರೆವು, ಬುದ್ಧಿಹೀನಸ್ಥಿತಿ ಉಂಟಾಗುತ್ತದೆ.

೫. ಪೌಷ್ಠಿಕಾಂಶಗಳಾದ ಬಿ, ಬಿ೬, ಬಿ೧೨ ಕೊರತೆಯಿಂದ ಕೂಡ ಡೆಮೆನ್ಷಿಯ ಬರುತ್ತದೆ. ಈ ಕೊರತೆ ಮದ್ಯಪಾನ ವ್ಯಸನಿಗಳಲ್ಲಿ ಬಹಳ ಸಾಮಾನ್ಯ.

೬. ಪದೇ ಪದೇ ಮಿದುಳಿಗೆ ಬೀಳುವ ಪೆಟ್ಟಿನಿಂದಲೂ ಡೆಮೆನ್ಷಿಯ ಬರಬಹುದು. ಬಾಕ್ಸರ್‌ಗಳಲ್ಲಿ ಪದೇ ಪದೇ ತಲೆಗೆ ಪೆಟ್ಟು ಬೀಳುವವರಲ್ಲಿ ಇದು ಕಂಡುಬರಬಹುದು.

೭. ನಂಜು ಪದಾರ್ಥಗಳಾದ ಸೀಸ, ಪಾದರಸದಂತಹ ಭಾರ ಲೋಹಗಳ ವಿಷವೇರಿಕೆ ಮಿದುಳಿಗೆ ಹಾನಿಯುಂಟು ಮಾಡಬಲ್ಲದು.

೮. ಮಿದುಳಿನಲ್ಲಿ ಮಿದುಳ ರಸದ ಉತ್ಪತ್ತಿ ಹೆಚ್ಚಾಗಿ ಅಥವಾ ಅದರ ಸಂಚಾರಕ್ಕೆ ಅಡ್ಡಿಯುಂಟಾದಾಗ ಉಂಟಾಗುವ ಸಾಮಾನ್ಯ ಒತ್ತಡದ ನೀರ‍್ತಲೆಯಿಂದ (Normal Pressure Hydrocephalus) ಡೆಮೆನ್ಷಿಯ ಬರುತ್ತದೆ.

೯. ಮಿದುಳಿನಲ್ಲಿ ಬೆಳೆದುಕೊಳ್ಳುವ ಗೆಡ್ಡೆ ಕ್ಯಾನ್ಸರ್ ಗಂಟುಗಳಿಂದಲೂ ಮಿದುಳಿಗೆ ಹಾನಿಯಾಗಬಹುದು.

ರೋಗ ಚಿಕಿತ್ಸೆ

ಆಲ್ಜೈಮರನ ಕಾಯಿಲೆಯಿಂದ ನರಳುವ ರೋಗಿಗಳ ಚಿಕಿತ್ಸೆಯನ್ನು ಅತ್ಯಂತ ಜಾಗರೂಕತೆಯಿಂದ ಕೈಗೊಳ್ಳಬೇಕು.

ಮಿದುಳಿಗೆ ಹಾನಿಯುಂಟು ಮಾಡುವ ಇತರ ಕಾಯಿಲೆಗಳು ಇವೆಯೇ ಎಂದು ಪರೀಕ್ಷಿಸಬೇಕು. ರಕ್ತಪರೀಕ್ಷೆ, ಎದೆ, ಮಿದುಳಿನ ಕ್ಷಕಿರಣ ಪರೀಕ್ಷೆ ಮಿದುಳಿನ ರಸ ಪರೀಕ್ಷೆಗಳು ಇದಕ್ಕೆ ಸಹಾಯಕಾರಿ. ಈಗಮಿದುಳಿನ ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ. ಪರೀಕ್ಷೆಗಳಿಂದ ‘ಮಿದುಳಿನ ಹಾನಿಯ ಪ್ರಾಣವನ್ನು ನಿರ್ಧರಿಸಬಹುದು. ಬೇರೆ ಯಾವ ಕಾರಣವೂ ಇಲ್ಲದೆ, ವ್ಯಕ್ತಿಗೆ ಡೆಮೆನ್ಷಿಯ ಇದ್ದಾಗ ಅದನ್ನು ಆಲ್ಜೈಮರ್ ಕಾಯಿಲೆ ಎಂದು ನಕಾರಾತ್ಮಕ ವಿಧಾನದಿಂದ ರೋಗ ನಿರ್ಧಾರ ಮಾಡಲಾಗುತ್ತದೆ. ಇದನ್ನು ಸ್ಥಿರೀಕರಿಸಬೇಕಾದರೆ, ಮಿದುಳಿನ ಜೀವುಂಡಿಗೆ ತೆಗೆಯಬೇಕು ಇಲ್ಲವೇ ರೋಗಿ ಸತ್ತ ಮೇಲೆ ಮಿದುಳಿನ ಮರಣೋತ್ತರ ಪರೀಕ್ಷೆ ಮಾಡಬೇಕು.

ನರಕೋಶಗಳು ನಾಶವಾಗುವುದನ್ನು ತಡೆಗಟ್ಟುವ ಅಥವಾ ಈಗಾಗಲೇ ನಾಶವಾಗಿರುವ ನರಕೋಶಗಳನ್ನು ರಿಪೇರಿ ಮಾಡುವ ಅಥವಾ ಹೊಸ ನರಕೋಶಗಳು ಸೃಷ್ಟಿಯಾಗುವಂತೆ ಮಾಡುವ ಪರಿಣಾಮಕಾರಿ ಔಷಧಗಳು ಇನ್ನೂ ಲಭ್ಯವಿಲ್ಲ. ಡೆಮೆನ್ಷಿಯ ರೋಗಿಗಳಿಗೆ ಸಹಾಯಕಾರಿ ಎಂದು ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ನೂಟ್ರೋಪಿಲ್, ಆಂಟಿ ಆಕ್ಸಿಡೆಂಟ್‌, ನರಕೋಶಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುವ ವೇಸೋಡೈಲೇಟರ್ ಔಷಧಗಳು ಉಪಯುಕ್ತ ಎನ್ನಲು ಸಾಕ್ಷ್ಯಾಧಾರಗಳು ಸಾಲವು. ಆದ್ದರಿಂದ ಮಾತ್ರೆ, ಇಂಜೆಕ್ಷನ್‌ಗಳಿಂದ ಡೆಮೆನ್ಷಿ ಸ್ಥಿತಿಯನ್ನು ಉತ್ತಮಪಡಿಸಲು ಸಾಧ್ಯವಿಲ್ಲ.

ಆಲ್ಜೈಮರನ ಕಾಯಿಲೆಯ ಅಂಗವಾಗಿ ಕಾಣಿಸಿಕೊಳ್ಳುವ ನಿದ್ರಾಹೀನತೆ, ಖಿನ್ನತೆ, ಭಯ, ಚಡಪಡಿಕೆ, ಸಂಶಯ, ಕೋಪ, ಅಸಂಬದ್ಧ ಮತ್ತು ಕೈಕಾಲು ನಡುಕ, ಫಿಟ್ಸ್‌- ಇವುಗಳನ್ನು ತಗ್ಗಿಸಲು ಔಷಧಿಗಳಿವೆ. ಮನವೈದ್ಯರು ಅಥವ ನರರೋಗ ತಜ್ಞರ ಮಾರ್ಗದರ್ಶನದಲ್ಲಿ ಔಷಧೋಪಚಾರ ನಡೆಯಬೇಕು. ರೋಗಿಗೆ ಇರಬಹುದಾದ ದೈಹಿಕ ಕಾಯಿಲೆಗಳಿಗೆ (ಉದಾ: ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಕೀಲುಬೇನೆ), ಔಷಧ ನೀಡಬೇಕಾಗುತ್ತದೆ.