ಬೇರೆಲ್ಲ ಅಂಗಾಂಗಗಳು ರೋಗಗ್ರಸ್ತವಾಗುವಂತೆ ಮಿದುಳೂ ರೋಗಗ್ರಸ್ತವಾಗುತ್ತದೆ. ಏಳು ಸುತ್ತಿನ ಕೋಟೆಯಂತಿರುವ ತಲೆ ಬುರುಡೆಯೊಳಗೆ ಸುರಕ್ಷಿತವಾಗಿದ್ದರೂ ರೋಗಾಣುಗಳು ಮಿದುಳನ್ನು ಬಿಡುವುದಿಲ್ಲ. ಮಿದುಳಿನ ಸಾಮಾನ್ಯ ರೋಗಗಳಿವು:

. ಸೋಂಕು ರೋಗಗಳು:

ರೋಗಕಾರಕ ಸೂಕ್ಷ್ಮಾಣು ಜೀವಿಗಳಾದ ವಿವಿಧ ನಮೂನೆಯ ಬ್ಯಾಕ್ಟೀರಿಯಾಗಳು, ವೈರಸ್‌ಗಳು, ಮಿದುಳು ಮತ್ತು ಮಿದುಳ ಪೊರೆಯನ್ನು ಆವರಿಸಿ ಸೋಂಕು-ಉರಿತವನ್ನುಂಟು ಮಾಡುತ್ತವೆ. ಮೆನಿನ್‌ಜೈಟಿಸ್ ಮತ್ತು ಎನ್‌ಸೆಫಲೈಟಿಸ್ ಎಂದು ಕರೆಯಲ್ಪಡುವ ಜನ ಸಾಮಾನ್ಯರ ಭಾಷೆಯಲ್ಲಿ ಮಿದುಳ ಜ್ವರ ಎಂದೆನಿಸಿಕೊಳ್ಳುವ ಈ ರೋಗಸ್ಥಿತಿಯ ಪ್ರಮುಖ ಲಕ್ಷಣಗಳೆಂದರೆ ತೀವ್ರ ಜ್ವರ (೧೦೧ ಡಿಗ್ರಿ ಫ್ಯಾರೆನ್‌ ಹೀಟ್‌ಗೂ ಹೆಚ್ಚು), ಪ್ರಜ್ಞಾಸ್ಥಿತಿಯಲ್ಲಿ ಬದಲಾವಣೆ (ಗೊಂದಲ, ಅರೆಪ್ರಜ್ಞಾವಸ್ಥೆ ಇತ್ಯಾದಿ) ವಿಪರೀತ ತಲೆಶೂಲೆ, ವಾಂತಿ ಮತ್ತು ಫಿಟ್ಸ್‌, ಕೇವಲ ತೀವ್ರ ಜ್ವರ ಮಾತ್ರವಿದ್ದಾಗ ಜನಸಾಮಾನ್ಯರಿಗಿರಲಿ, ವೈದ್ಯರಿಗೂ ಅದು ‘ಮಿದುಳ ಜ್ವರ’ ಎಂಬುದು ಗೊತ್ತಾಗುವುದಿಲ್ಲ.

ಸುತ್ತಮುತ್ತ ಮಿದುಳ ಜ್ವರದ ಪ್ರಕರಣಗಳಿದ್ದಾಗ, ಏರಿದ ಜ್ವರ ಸಾಮಾನ್ಯ ಚಿಕಿತ್ಸೆಗೆ ಬಗ್ಗದಿದ್ದಾಗ, ಮಿದುಳ ಜ್ವರ ಇರಬಹುದೆಂಬ ಅನುಮಾನ ವೈದ್ಯರಿಗೆ ಬರುತ್ತದೆ. ಆಗ ಅವರು ರೋಗಿಯ ಬೆನ್ನಿನಲ್ಲಿ ‘ನೀರು’ (ಮಿದುಳು-ಮಿದುಳ ಬಳ್ಳಿಯ ರಸ) ತೆಗೆದು ಪರೀಕ್ಷಿಸಿ ಮಿದುಳ ಜ್ವರ ಇದೆಯೇ, ಇದ್ದರೆ ಅದು ಬ್ಯಾಕ್ಟೀರಿಯಾದಿಂದ ಬಂದದ್ದೇ, ವೈರಸ್‌ನಿಂದ ಬಂದದ್ದೇ ಎಂದು ನಿರ್ಧರಿಸುತ್ತಾರೆ. ಕತ್ತಿನ ಬಿಗಿತ (Neck stiffness) infnoMdu. ‘ಮಿದುಳಿನ ಸೋಂಕಿನ’ ಲಕ್ಷಣ. ಇದು ವೈದ್ಯರು ಗುರುತಿಸುವಂತದ್ದು. ದೀರ್ಘ ಕಾಲದ ಮಿದುಳಿನ ಸೋಂಕಿನ ಸ್ಥಿತಿಗಳಾದ, ಮಿದುಳಿನ ಕ್ಷಯ, ಮಿದುಳಿನ ಸಿಫಿಲಿಸ್ ರೋಗಗಳಲ್ಲಿ ತೀರಾ ಮಂಕುತನ, ಬುದ್ಧಿ ಭ್ರಮಣೆ, ಬುದ್ಧಿ ಕ್ಷೀಣಿಸುವಿಕೆ, ಫಿಟ್ಸ್‌ ಪಾರ್ಶ್ವವಾಯು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

. ಮಿದುಳಿನಲ್ಲಿ ರಕ್ತ ಸ್ರಾವ:

ಮಿದುಳಿನಲ್ಲಿ ಅಸಂಖ್ಯಾತ ರಕ್ತನಾಳಗಳಿವೆ. ಮಿದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುತ್ತದೆ ಎಂಬುದನ್ನು ತಿಳಿಸಿದ್ದೀರಿ. ನೇರವಾಗಿ ಪೆಟ್ಟು ಬಿದ್ದು ಅಥವಾ ರಕ್ತನಾಳಗಳ ಸವೆತದಿಂದ ಅಥವಾ ರಕ್ತನಾಳ ಬುಡ್ಡೆ (ಅನ್ಯೂರಿಸಂ) ಇದ್ದು ಅದು ಒಡೆದು ಹೋಗಿಯೋ ಮಿದುಳಿನ ರಕ್ತಸ್ರಾವ ಆಗಬಹುದು. ಅಪೂರ್ಣವಾಗಿ ಅಥವಾ ಚಿಕಿತ್ಸೆಯೇ ಇಲ್ಲದ (ತೆಗೆದುಕೊಳ್ಳದವರಲ್ಲಿ) ಸಿಹಿಮೂತ್ರ ರೋಗಿಗಳಲ್ಲಿ, ರಕ್ತದ ಏರೊತ್ತಡ (ಬಿ.ಪಿ. ಕಾಯಿಲೆ) ಇರುವವರಲ್ಲಿ ರಕ್ತಸ್ರಾವ (ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ) ವಾಗುವ ಸಂಭವ ಹೆಚ್ಚು. ಮಿದುಳನ ಚಲನ ಕ್ಷೇತ್ರ ಮತ್ತು ಚನೆಯ ನಿರ್ದೇಶನದ ಸಂದೇಶವಾಹಕ ನರತಂತುಗಳು ಸಾಗುವ ಹಾದಿಯಲ್ಲಿ ರಕ್ತಸ್ರಾವವಾಯಿತೆಂದರೆ, ಲಕ್ವ ಅಥವಾ ಪಾರ್ಶ್ವವಾಯು (ಪೆರಾಲಿಸಿಸ್‌) ಕಾಣಿಸಿಕೊಳ್ಳುತ್ತದೆ. ಥಟ್ಟನೆ ಪೂರ್ಣ ಪ್ರಮಾಣದ ಪಾರ್ಶ್ವವಾಯು ಆಗುವುದೇ ಪ್ರಮುಖ ಲಕ್ಷಣ.

ಮಿದುಳಿನ ಯಾವ ಭಾಗದಲ್ಲಿ ರಕ್ತಸ್ರಾವವಾಗಿ, ಎಷ್ಟು ಭಾಗ ಹಾನಿಗೊಳಗಾಗಿದೆ ಎಂಬುದರ ಮೇಲೆ ರೋಗಲಕ್ಷಣಗಳು ನಿರ್ಧಾರವಾಗುತ್ತವೆ. ಫಿಟ್ಸ್‌ ಬುದ್ಧಿ ಭ್ರಮಣೆ, ಬುದ್ಧಿ ಕ್ರೀಣಿಸುವಿಕೆ, ಕುರುಡುತನ, ಪ್ರಜ್ಞೆ ತಪ್ಪುವಿಕೆ, ಕೋಮಾ ಸ್ಥಿತಿ ಇವೆಲ್ಲ ರೋಗ ಲಕ್ಷಣಗಳಾಗಬಹುದು. ಸ್ರಾವವಾದ ರಕ್ತ ಹೆಪ್ಪು ಗಟ್ಟಿ ಮಿದುಳಿನ ಮೇಲೆ ಒತ್ತಡ ತಂದು, ತುರ್ತು ಸ್ಥಿತಿಯನ್ನುಂಟು ಮಾಡಬಹುದು.

. ಮಿದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆಗಳು:

ರಕ್ತನಾಳಗಳ ಒಳ ಮೇಲ್ಮೈಯಲ್ಲಿ ಗರಣೆ ಕಟ್ಟಿಕೊಂಡು (ಅಥಿರೋಸ್ಕ್ಲಿರೋಸಿಸ್) ರಕ್ತ ಹರಿವ ಪ್ರಮಾಣ ಕುಗ್ಗಿ ಮಿದುಳಿಗೆ ರಕ್ತ ಪೂರೈಕೆ ಕುಂಠಿತಗೊಳ್ಳಬಹುದು. ಆಗ ಇಡೀ ಮಿದುಳಿನ ಕಾರ್ಯ ಸಾಮರ್ಥ್ಯವೇ ಕುಗ್ಗಿ ವ್ಯಕ್ತಿಯ ಬುದ್ಧಿ ಚತುರತೆಗಳು, ನೆನಪು-ವಿವೇಚನಾಶಕ್ತಿ ಕ್ಷಯಿಸತೊಡಬಹುದು. ಇಲ್ಲವೇ ರಕ್ತನಾಳ ಒಂದರಲ್ಲಿ ರಕ್ತಗರಣೆ ಕಟ್ಟಿ (ತ್ರಾಂಬೋಸಿಸ್) ಅದು ಕಟ್ಟಿಕೊಳ್ಳಬಹುದು. ಆಗ ಆ ರಕ್ತನಾಳದಿಂದ ರಕ್ತಪೂರೈಕೆಯಾಗುತ್ತಿದ್ದ ಮಿದುಳಿನ ಭಾಗ ನಾಶವಾಗುತ್ತದೆ (ಇನ್‌ಫಾರ್‌ಕ್ಷನ್) ಯಾವ ಭಾಗ ಮತ್ತು ಎಷ್ಟು ಭಾಗ ನಾಶವಾಗುತ್ತದೆ ಎಂಬುದರ ಮೇಲೆ ರೋಗಲಕ್ಷಣ ಕಾಣಿಸಿಕೊಳ್ಳುತ್ತದೆ. ಫಿಟ್ಸ್‌, ಲಕ್ವ, ಕುರುಡುತನ, ಬುದ್ಧಿ ಭ್ರಮಣೆ ಇತ್ಯಾದಿ ಯಾವ ಲಕ್ಷಣವಾದರೂ ಕಂಡುಬರಬಹುದು. ರೋಗಲಕ್ಷಣ ಸ್ವಲ್ಪ ಸ್ವಲ್ಪವಾಗಿ ಮೂಡುತ್ತಾ ತೀವ್ರ ಮಟ್ಟವನ್ನು ಮುಟ್ಟುವುದು ಈ ಸ್ಥಿತಿಯ ವೈಶಿಷ್ಟ್ಯ.

. ನಂಜು ವಸ್ತುಗಳಿಂದ ಮಿದುಳಿಗೆ ಹಾನಿ

ಬೀಡಿ ಸಿರಗೇಟುಗಳಲ್ಲಿರುವ ನಿಕೋಟಿನ್ ದೃಷ್ಟಿ ನರಕ್ಕೆ ಹಾನಿಯುಂಟು ಮಾಡಿ ಅಂಧತ್ವವನ್ನು ತರಿಸಬಲ್ಲದು. ಕಳ್ಳ ಭಟ್ಟಿಯಲ್ಲಿರುವ ಮೀಥೈಲ್ಸ ಆಲ್ಕೋಹಾಲ್ ಕೂಡ ಅಂಧತ್ವವನ್ನುಂಟು ಮಾಡಬಲ್ಲದು. ಐದರಿಂದ ಹತ್ತು ವರ್ಷಗಳ ಮಧ್ಯಪಾನದಿಂದ, ಮಿದುಳು ಹಾನಿಗಿಳಗಾಗಿ ಕಾರ್ಸ್‌‌ಕಾಫ್‌ ಚಿತ್ತವಿಕಲತೆ, ವಿಪರೀತ ಮರೆವು. ಕಣ್ಣುಗುಡ್ಡೆಗಳ ಚಲನೆಯ ದೋಷ ಅಥವಾ ದೇಹದ ಅಸಮತೋಲನ ಚಲನೆ (ವರ್ನಿಕೆಯ ಮಿದುಳು ಹಾನಿ Vernicke’s Encephalopathy) ಫಿಟ್ಸ್‌, ಬುದ್ಧಿ ಕ್ಷಯಿಸುವುದು ಸಾಮಾನ್ಯ ರೋಗ ಲಕ್ಷಣಗಳು.

ಲಿವರ್, ಮೂತ್ರ ಪಿಂಡ ಸೋಲುವೆಯಲ್ಲಿ, ದೇಹದೊಳಗೆ ಕಲ್ಮಶ ಪದಾರ್ಥಗಳು ಹೆಚ್ಚಿ ಮಿದುಳನ್ನು ಸೇರಿ, ಅಂಗದೋಷದಿಂದ ಉಂಟಾಗುವ ಬುದ್ಧಿಭ್ರಮಣೆ, ಗೊಂದಲ, ಪ್ರಜ್ಞಾಹೀನತೆ, ಕೋಮ ಸ್ಥಿತಿಯನ್ನುಂಟು ಮಾಡುತ್ತವೆ. ಪಾದರಸ, ಸೀಸ, ಬ್ರೋಮೈಡ್ ನಂತಹ ಭಾರ ಲೋಹದ ಕಣಗಳು, ದೀರ್ಘಕಾಲದಲ್ಲಿ ಮಿದುಳಿನಲ್ಲಿ ಸಂಗ್ರಹವಾಗಿ, ಬುದ್ಧಿ ಭ್ರಮಣೆಯನ್ನುಂಟು ಮಾಡಬಲ್ಲವು.

. ಮಿದುಳಿನ ಪೌಷ್ಠಿಕಾಂಶ ಕೊರತೆಯ ಕಾಯಿಲೆಗಳು:

ಪ್ರೋಟೀನು, ಬಿ೧, ಬಿ೬, ಬಿ೧೨ ವಿಟಮಿನ್‌ಗಳು, ಅಯೋಡನ್‌ ಅಂಶಗಳ ಕೊರತೆಯಿಂದ ಮಿದುಳು ಹಾನಿಗೀಡಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪದೇ ಪದೇ ಅಥವಾ ಥಟ್ಟನೆ ಅಥವಾ ಸಾಕಷ್ಟು ಕಾಲ ಕಡಿಮೆಯಾಗುವುದರಿಂದ (ಹೈಪೋಗ್ಲೈಸೀಮಿಯಾ) ಮಿದುಳು ಹಾನಿಗೀಡಾಗುತ್ತದೆ. ಬುದ್ಧಿಭ್ರಮಣೆ, ಬುದ್ಧಿ ಕ್ಷಯದ ಲಕ್ಷಣಗಳು ಕಂಡು ಬರುತ್ತವೆ.

. ಮಿದುಳಿನಲ್ಲಿ ಗೆಡ್ಡೆಗಳು

ಮಿದುಳಿನ ಪೊರೆಗಳಿಂದ ರಕ್ತನಾಳಗಳ ಬಿತ್ತಿಯಿಂದ ಮಿದುಳಿನ ಗ್ಲೈಯಲ್ ಜೀವಕೋಶಗಳಿಂದ ಪಿಟ್ಯೂಟರಿ ಗ್ರಂಥಿಯ ಜೀವ ಕೋಶಗಳಿಂದ, ನರತಂತುಗಳಿಂದ, ಕ್ಯಾನ್ಸರ್ ಗೆಡ್ಡೆ ಬೆಳೆದುಕೊಳ್ಳಬಹುದು. ಗೆಡ್ಡೆ ಮಿದುಳಿನ ಮಧ್ಯ ರೇಖೆಯಲ್ಲಿದ್ದರೆ, ನಿಧಾನವಾಗಿ ಬೆಳೆಯುವಂತಾದರೆ ಯಾವ ರೋಗಲಕ್ಷಣವೂ ಇಲ್ಲದೇ, ಅನೇಕ ವರ್ಷಗಳ ನಂತರ ‘ಒತ್ತಡ’ದ ಚಿನ್ಹೆಗಳು ಕಾಣಿಸಿಕೊಳ್ಳಬಹುದು ಅಥವಾ ಮಿದುಳಿನ ಆ ಭಾಗದ ಕೆಲಸಗಳು. ಏರುಪೇರಾಗಬಹುದು. ಒತ್ತಡದ ಚಿಹ್ನೆಗಳೆಂದರೆ, ಒಂದೇ ಸಮನೆ ತೀವ್ರಗೊಳ್ಳುವ ತಲೆನೋವು, ವಾಂತಿ, ದೃಷ್ಟಿ ಮಂಜಾಗುತ್ತಾ ಕಡೆಗೆ ಅಂಧತ್ವ, ಫಿಟ್ಸ್‌ ಕೈಕಾಲುಗಳ ಅಸಮತೋಲನ ಚಲನೆ, ಪ್ರಜ್ಞಾಸ್ಥಿತಿಯಲ್ಲಿ ವ್ಯತ್ಯಾಸ ಇತ್ಯಾದಿ. ಚಲನ ಕ್ಷೇತ್ರದ ಆಸುಪಾಸಿನ ಗೆಡ್ಡೆ, ಪಾರ್ಶ್ವವಾಯುವನ್ನುಂಟು ಮಾಡಬಹುದು. ಮಿದುಳಿನ ಮುಂಭಾಗದಲ್ಲಿನ ಗೆಡ್ಡೆ ಬುದ್ಧಿಭ್ರಮಣೆಯನ್ನುಂಟು ಮಾಡಬಲ್ಲದು.

ಕ್ಯಾನ್ಸರ್ ಗೆಡ್ಡೆ ಅಲ್ಲದೆ, ಕ್ಷಯ ರೋಗದ ಗೆಡ್ಡೆ (ಟ್ಯುಬರ್‌ಕೋಲೋಮಾ) ಸಿಫಿಲಿಸ್ ಗೆಡ್ಡೆ (ಗಮ್ಮ), ಸಿಸ್ಟಿಸಕೋರ್ಸಿಸ್‌ ಹುಳಿವಿನ ಗೂಡಿನ ಗಂಟು, ಕೀವು ಗಂಟು ಮಿದುಳಿನಲ್ಲಿ ಬೆಳೆಯಬಹುದು.

. ನರಕೋಶಗಳು ನಶಿಸುವ ಕಾಯಿಲೆಗಳು

ಮಧ್ಯ ವಯಸ್ಸಿನ ನಂತರ, ಪ್ರತಿಯೊಬ್ಬ ವ್ಯಕ್ತಿಯ ನರಕೋಶಗಳು ನಶಿಸತೊಡಗುತ್ತವೆ. ಅವುಗಳ ಸ್ಥಾನದಲ್ಲಿ ಹೊಸ ಕೋಶಗಳು ಉತ್ಪತ್ತಿಗೊಳ್ಳುವುದಿಲ್ಲ. ತತ್ಪರಿಣಾಮವಾಗಿ ವ್ಯಕ್ತಿಯ ಕಲಿಕೆಯ ಸಾಮರ್ಥ್ಯ, ನೆನಪು ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು ಜನ ಅರಳು-ಮರಳು ಎನ್ನುತ್ತಾರೆ. ಕೆಲವರಲ್ಲಿ ಈ ನಶಿಸುವಿಕೆ ಬಹಳ ವೇಗವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ವಿಪರೀತ ಮರೆವು, ಬುದ್ಧಿ ಕ್ಷೀಣವಾಗುವುದು, ಪರಿಚಿತ ಪರಿಸರದಲ್ಲೇ ದಾರಿ ತಪ್ಪಿಸಿಕೊಳ್ಳುವುದು. ಪರಿಚಿತರನ್ನೇ ಗುರುತು ಹಿಡಿಯದಿರುವುದು, ದೈನಂದಿನ ಚಟುವಟಿಕೆಗಳನ್ನೂ ಮಾಡಲಾಗದೇ ಪರಾವಲಂಬಿಯಾಗುವುದು, ಹಾಸಿಗೆ ಬಟ್ಟೆಯಲ್ಲೇ ಮೂತ್ರ ಮಾಡಿಕೊಳ್ಳುವುದು, ಭಾವನೆಗಳ ಮೇಲಿನ ಹತೋಟಿ ತಪ್ಪಿ ವಿನಾಕಾರ ಅಥವಾ ಅತ್ಯಲ್ಪ ಕಾರಣಕ್ಕೆ ಅಳುವುದು, ಕೋಪಿಸಿಕೊಳ್ಳುವುದು ಇತ್ಯಾದಿ ಮಾನಸಿಕ ಸಮಸ್ಯೆಗಳಿಗೂ, ಪಾರ್ಶ್ವವಾಯು, ಫಿಟ್ಸ್‌, ಕೈಕಾಲುಗಳ ನಡುಕ ಅಥವಾ ಅಸಮತೋಲನ ಚಲನೆ ಇತ್ಯಾದಿ ನರ ಸಂಬಂಧೀ ರೋಗಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಒಂದೆರಡು ವರ್ಷಗಳಲ್ಲಿ ಅಥವಾ ಕೆಲವು ವರ್ಷಗಳಲ್ಲಿ ಸಾವು ಸಂಭವಸುತ್ತದೆ. ಆಲ್ಜೀಮರನ ಕಾಯಿಲೆ ಎಂದು ಗುರುತಿಸಲಾಗುವ ಈ ರೋಗ ಸ್ಥಿತಿಗೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ. ನಿಧಾನಗತಿಯ ವೈರಸ್ ಅಥವಾ ದೇಹ ತನ್ನ ಪ್ರೋಟೀನುಗಳ ವಿರುದ್ಧವೇ ಪ್ರತಿಕಾಯಗಳನ್ನು ಉತ್ಪಾದಿಸುವುದು (ಆಟೋ ಇಮ್ಯೂನ್‌ ರೋಗ) ಇದಕ್ಕೆ ಕಾರಣ ಇರಬಹುದೆಂಬ ಊಹೆ ಇದೆ. ಈ ಕಾಯಿಲೆಯನ್ನು ಹತೋಟಿಗೆ ತರುವ ಔಷಧಿಗಳಿಲ್ಲ.

. ಫಿಟ್ಸ್ ಅಥವಾ ಮೂರ್ಛೆ ರೋಗ

ಥಟ್ಟನೆ ಮೂರ್ಛೆ ಹೋಗಿ ರೋಗಿ ಬಿದ್ದು ಬಿಡುವುದು, ಕೈಕಾಲುಗಳು ಒಂದೆರಡು ನಿಮಿಷ ಕ್ರಮವಾಗಿ ಸೆಳೆಯುವುದು, ಬಾಯಲ್ಲಿ ಬುರುಗು, ನಾಲಿಗೆ ಕಚ್ಚಿಕೊಳ್ಳುವುದು, ಸ್ವಲ್ಪ ಹೊತ್ತಿನ ನಂತರ ಪ್ರಜ್ಞೆ ಮರಳುವುದು ಹಾಗೂ ಅವಧಿ ಗೊಂದಾವರ್ತಿ ಇದು ಪುನರಾವರ್ತನೆಯಾಗುವುದು ಈ ರೋಗದ ಮುಖ್ಯ ಲಕ್ಷಣ. ಫಿಟ್ಸ್‌ ಮಿದುಳಿನ ಅನೇಕ ರೋಗ ಸ್ಥಿತಿಗಳಲ್ಲಿ ಒಂದು ರೋಗ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಅದೇ ಒಂದು ರೋಗವಾಗಿಯೂ ಇರಬಹುದು.

. ಮಾನಸಿಕ ರೋಗಗಳು

ವ್ಯಕ್ತಿಯ ನಡೆ-ನುಡಿಗಳ ಏರುಪೇರು, ನಿದ್ರೆ, ಹಸಿವುಗಳಲ್ಲಿ ಏರುಪೇರು, ವಿಪರೀತ ಭಯ, ಕೋಪ, ದುಃಖಗಳು, ಭ್ರಮೆ, ಏಕಾಗ್ರತೆಯ ಕೊರತೆ, ಮರೆವು, ತಪ್ಪು ನಿರ್ಧಾರಗಳು, ಕೆಲಸ ಕರ್ತವ್ಯಗಳ ನಿರ್ಲಕ್ಷ್ಯ, ಸ್ವಹತ್ಯೆ ಹಿಂಸಾತ್ಮಕ ವರ್ತನೆಗಳು ಇವೆಲ್ಲ ಇರುವ ಮಾನಸಿಕ ರೋಗಗಳೂ, ಮಿದುಳಿನ ಕಾಯಿಲೆಗಳೇ ಜನ ಹುಚ್ಚು ಮಂಕು, ಬುದ್ಧಿ ಭ್ರಮಣೆ, ಮನೋರೋಗ ಎಂದು ಹೇಳುವ ಬಹುತೇಕ ಪ್ರಕರಣಗಳಲ್ಲಿ ಮಿದುಳಿನಲ್ಲಿ ಗುರುತಿಸಬಹುದಾದ ಯಾವುದೇ ಹಾನಿ ಇರುವುದಿಲ್ಲ. ಎಲ್ಲ ಪರೀಕ್ಷೆಗಳೂ ನಾರ್ಮಲ್ ಆಗೇ ಇರುತ್ತವೆ. ಆದರೆ ನರಕೋಶಗಳ ಮಟ್ಟದಲ್ಲಿ ನರವಾಹರ ವ್ಯವಸ್ಥೆಯಲ್ಲಿನ ಏರುಪೇರುಗಳು ರೋಗಲಕ್ಷಣಗಳಿಗೆ ಕಾರಣವಾಗುತ್ತವೆ. ಔಷಧಿ ಸೇವನೆಯಿಂದ ಇತರ ಚಿಕಿತ್ಸೆಗಳಿಂದ ನತವಾಹಕ ವ್ಯವಸ್ಥೆಯನ್ನು ಮತ್ತೆ ಸಹಜ ಸ್ಥಿತಿಗೆ ತರಬಹುದಾಗಿದೆ. ಆದ್ದರಿಂದ ಸ್ಕಿಜೋಫ್ರೀನಿಯಾ, ಮೇನಿಯಾ, ಖಿನ್ನತೆ, ಆತಂಕ, ಗೀಳು ಮನೋಬೇನೆಗಳನ್ನು ಮಿದುಳಿನ ಕಾಯಿಲೆಗಳೆಂದರೆ ತಪ್ಪಾಗುವುದಿಲ್ಲ.

ಮಾನಸಿಕ ರೋಗಗಳು ಬರಲು ಕಾರಣಮಿದುಳಿನಲ್ಲಿ ಬದಲಾವಣೆ ಮತ್ತು ಅಹಿತಕರ ಪರಿಸರ

ಮಾನಸಿಕ ಕಾಯಿಲೆ ಕಾಣಿಸಿಕೊಂಡಾಗ, ಜ ಹೌಹಾರುತ್ತಾರೆ. ಇದೇಕೆ ಬಂತು ಎಂದು ಚಿಂತಿತರಾಗುತ್ತಾರೆ. ಮಾನಸಿಕ ಕಾಯಿಲೆ ಬರಲು ದೆವ್ವ ಭೂತ, ಮಾಟ, ಮಂತ್ರ, ಮದ್ದಿಡು ಕಾರಣ, ಪೂರ್ವ ಜನ್ಮದ ಅಥವಾ ಈ ಜನ್ಮದ ಯಾವುದೋ ಪಾಪಕರ್ಮದ ಫಲ, ದೇವರ ಶಾಪ ಎಂದೆಲ್ಲಾ ಜನ ನಂಬುತ್ತಾರೆ. ಇದ್ಯಾವುದೂ ಮಾನಸಿಕ ಕಾಯಿಲೆಗೆ ಕಾರಣವಲ್ಲ. ಒಂದಕ್ಕಿಂತ ಹೆಚ್ಚಿನ ಅಂಶಗಳು ಜೊತೆ ಸೇರಿದಾಗ ಮಾನಸಿಕ ಕಾಯಿಲೆ ಕಾಣಿಸಿಕೊಳಲುತ್ತದೆ. ಈ ಅಂಶಗಳಾವುವೆಂದರೆ,

. ಅನುವಂಶಿಕ ಅಂಶಗಳು:

ಶೇಕಡಾ ೧೦ ರಿಂದ ೧೫ ರಷ್ಟು ಪ್ರಕರಣಗಳಲ್ಲಿ ಮಾತ್ರ ಮಾನಸಿಕ ಕಾಯಿಲೆಗಳು ವಂಶಪಾರಂಪರ್ಯವಾಗಿ ಬರುತ್ತವೆ ಎನ್ನಲಾಗಿದೆ. ತಂದೆ, ತಾಯಿ ಇಬ್ಬರಿಗೂ ಮಾನಸಿಕ ಕಾಯಿಲೆ ಇದ್ದಾಗ ಮಕ್ಕಳಿಗೆ ಕಾಯಿಲೆ ಬರುವ ಸಂಭವ ಹೆಚ್ಚುತ್ತದೆ. ಒಬ್ಬರಿಗೆ ಮಾತ್ರ ಇದ್ದರೆ ಕಾಯಿಲೆ ಮಕ್ಕಳಲ್ಲಿ ಕಾಣಿಸಿಕೊಳ್ಳದೆಯೂ ಹೋಗಬಹುದು.

. ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು

ಮಿದುಳಿನ ಲಕ್ಷ ಲಕ್ಷ ನರಕೋಶಗಳಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳಾಗುವುದರಿಂದ ಮಾನಸಿಕ ಕಾಯಿಲೆಗಳು ಕಂಡುಬರಬಹುದು. ಉದಾಹರಣೆಗೆ ಡೋಪಮಿನ್, ನಾರ್‌ಎಪಿನೆಫ್ತಿನ್, ಸೆರೋಟೋನಿನ್, ಗಾಬಾ ನರವಾಹಕಗಳ ಏರುಪೇರಿನಿಂದ ಸ್ಕಿಜೋಫ್ರೀನಿಯಾ ಮೇನಿಯಾ ಖಿನ್ನತೆ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

. ಮಿದುಳಿಗಾಗುವ ಹಾನಿ

ಕೆಲವು ಪ್ರಕರಣಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯಿಂದ ಅದರಲ್ಲೂ ಮುಖ್ಯವಾಗಿ ಬಿ ಜೀವಸತ್ವದ ಕೊರತೆಯಿಂದ ಅಥವಾ ಮದ್ಯಸಾರ (ಬೀರ್‌, ಬ್ರಾಂದಿ, ವಿಸ್ಕಿ, ರಮ್ ಮತ್ತು ಮಾದಕ ವಸ್ತು ಸೇವನೆಯಿಂದ, ತಲೆಗೆ ಬಿದ್ದ ಪೆಟ್ಟಿನಿಂದ (ಅಪಘಾತ, ಹೊಡೆದಾಟಗಳಲ್ಲಿ) ಸೀಸ ಪಾದರಸದಂತಹ ಭಾರ ಲೋಹಗಳ ಕಣಗಳು ದೇಹದೊಳಕ್ಕೆ ಹೋಗವುದರಿಂದ, ಬ್ಯಾಕ್ಟೀರಿಯಾ, ವೈರಸ್‌ಗಳ ಸೋಂಕಿನಿಂದ ಮಿದುಳಿಗೆ ಹಾನಿಯಾಗಿ ಮಾನಸಿಕ ಕಾಯಿಲೆ ಬರಬಹುದು.

. ಅನಾರೋಗ್ಯಕರ ಪರಿಸರ

ವಿಪರೀತವಾದ ಜನಸಂದಣಿ, ಶಬ್ದಮಾಲಿನ್ಯ, ಬರಡು ವಾತಾವರಣ, ವೈವಿಧ್ಯತೆ ಇಲ್ಲದ ಯಾಂತ್ರಿಕ ವ್ಯವಸ್ಥೆ, ಪದೇ ಪದೇ ಬದಲಾಗುವ ಹವಾಮಾನ ಮಾನಸಿಕ ಅಸ್ವಾಸ್ಥ್ಯತೆಯನ್ನು ತರಬಲ್ಲದು.

. ಮಾನಸಿಕ ಒತ್ತಡ (Stress)

ಯಾವುದೇ ಕಷ್ಟ, ನಷ್ಟ, ಸೋಲು, ನಿರಾಶೆ, ದ್ವಂದ್ವ, ಮಹಾತ್ವಾಕಾಂಕ್ಷೆ, ಅತೃಪ್ತಿ, ಅಸಮಾಧಾನಗಳು, ಕೀಳರಿಮೆ, ನಿಭಾಯಿಸಲಾಗದ ಜವಾಬ್ದಾರಿಗಳು. ಇತರರ ಅತಿಯಾದ ನಿರೀಕ್ಷೆ, ಟೀಕೆ ಅಸಹಕಾರಗಳು, ಮೇಲಿಂದ ಮೇಲೆ ಬರುವ ಸಮಸ್ಯೆಗಳಿಂದ ಉಂಟಾದ ಮಾನಸಿಕ ಒತ್ತಡವು ಅಲ್ಪಮಟ್ಟದ ಮಾನಸಿಕ ಕಾಯಿಲೆಗಳಿಗೆ ಸಾಮಾನ್ಯ ಕಾರಣ.

. ಸಾಮಾಜಿಕ ಅಂಶಗಳು

ಜಾತಿ ಮತ್ತು ವರ್ಗ ಸಂಘರ್ಷಗಳು, ವಿಪರೀತ ಸ್ಪರ್ಧೆ, ಕುಸಿಯುತ್ತಿರುವ ಮೌಲ್ಯಗಳು, ಅಭದ್ರತೆ, ಶೋಷಣೆ, ಉಳ್ಳವರು ಮತ್ತು ಇಲ್ಲದವರ ನಡುವಿನ ಅಗಾಧ ವ್ಯತ್ಯಾಸ, ವ್ಯಕ್ತಿ ಕೇಂದ್ರೀಕೃತ ವ್ಯವಸ್ಥೆ ಮಾನಸಿಕ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ.

ಚಿಕಿತ್ಸೆ

ಮನೋರೋಗಕ್ಕೆ ಮದ್ದಿಲ್ಲ, ಹುಚ್ಚು ವಾಸಿಯಾಗುವುದಿಲ್ಲ ಎಂಬುದು ಹಳೆಯ ನಂಬಿಕೆ. ಈಗ ವೈಜ್ಞಾನಿಕ ಮುನ್ನಡೆಯಿಂದಾಗಿ ಅನೇಕ ಬಗೆಯ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ರೋಗವನ್ನು ಬೇಗ ಗುರುತಿಸಿ, ಚಿಕಿತ್ಸೆ ಪ್ರಾರಂಭಿಸಿದರೆ ಯಾವುದೇ ಮಾನಸಿಕ ರೋಗ ಹತೋಟಿಗೆ ಬರಬಲ್ಲದು ಅಥವಾ ಗುಣವಾಗಬಲ್ಲದು.

. ಔಷಧಿಗಳು

ಇಂದು ಸುಮಾರು ನಲವತ್ತಕ್ಕೂ ಮಿಕ್ಕಿದ ಔಷಧಗಳು ಮಾತ್ರೆ, ಸಿರಪ್, ಇಂಜೆಕ್ಷನ್, ಕ್ಯಾಪ್ಸೂಲ್ಸ್‌ಗಳ ರೂಪದಲ್ಲಿ ದೊರಕುತ್ತವೆ. ವೈದ್ಯರ ಮಾರ್ಗದರ್ಶನದಲ್ಲಿ ಸರಿಪ್ರಮಾಣದಲ್ಲಿ ಬಳಸಿದರೆ, ಪರಿಣಾಮಕಾರಿಯಾಗಿ ಮಾನಸಿಕ ರೋಗಗಳನ್ನು ಗುಣಮಾಡುತ್ತವೆ. ಈ ಔಷಧಿಗಳನ್ನು ಕೆಲವು ತಿಂಗಳುಗಳಿಂದ ಹಿಡಿದು ಕೆಲವು ವರ್ಷಗಳವರೆಗೆ ಬಳಸಬೇಕಾಗಿ ಬರಬಹುದು.

. ವಿದ್ಯುತ್ ಕಂಪನ ಚಿಕಿತ್ಸೆ

ಸಣ್ಣ ಪ್ರಮಾಣದ ವಿದ್ಯುತ್ತನ್ನು ಅರ್ಧ ಸೆಕೆಂಡು ಕಾಲ ಮಿದುಳಿನೊಳಕ್ಕೆ ಹಾಯಿಸಿದರೆ ಮಿದುಳಿನೊಳಗೆ ಕಂಪನ ಉಂಟಾಗುತ್ತದೆ. ರಾಸಾಯನಿಕ ಏರುಪೇರು-ಸಮತೋಲಕ್ಕೆ ಬರುತ್ತದೆ. ಅತೀ ತೀವ್ರ ಖಿನ್ನತೆ ಕಾಯಿಲೆಯಲ್ಲಿ ಆಯ್ದ ಸ್ಕಿಜೋಫ್ರೀನಿಯಾ ರೋಗದಲ್ಲಿ ಈ ಚಿಕಿತ್ಸೆ ಪರಿಣಾಮಕಾರಿ.

ಮನೋರೋಗ ಚಿಕಿತ್ಸೆಆಪ್ತ ಸಲಹೆ ಸಮಾಧಾನ

ಮಾನಸಿಕ ಒತ್ತಡದ ಕಾರಣಗಳನ್ನು ಸಂದರ್ಶನಗಳು, ವಿಶ್ಲೇಷಣೆಗಳ ಮೂಲಕ ಪತ್ತೆ ಹಚ್ಚಿ ಅವನ್ನು ನಿವಾರಿಸುವ ನಿಭಾಯಿಸುವ ರೀತಿಯಲ್ಲಿ ಹೇಳಿಕೊಡುವ ಹಾಗೂ ರೋಗಿಗೆ ಭಾವನಾತ್ಮಕ ಆಸರೆ ನೀಡುವ ವಿಧಾನವೇ ಮನೋಚಿಕಿತ್ಸೆ. ಇದು ಅಲ್ಪಮಟ್ಟದ ರೋಗಗಳಿಗೆ ಆದ್ಯತೆಯ ಚಿಕಿತ್ಸೆ.

. ಆರೋಗ್ಯಕರ ಮನರಂಜನೆ ಮತ್ತು ವಿಶ್ರಾಂತಿ

ದಣಿದ, ನೊಂದ, ಬೇಸರ ಆತಂಕಗಳಿಂದ ಬಳಲುವ ಮನಸ್ಸಿಗೆ ವಿಶ್ರಾಂತಿಸ ಅಗತ್ಯ. ಆರೋಗ್ಯಕರ ಮನರಂಜನೆ ಮತ್ತು ಸೃಜನಶೀಲ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ತರುವುದಲ್ಲದೆ, ನವಚೇತನವನ್ನುಂಟು ಮಾಡಬಲ್ಲವು. ಸಂಗೀತ, ಸಾಹಿತ್ಯ, ಕ್ರೀಡೆ, ಕರಕುಶಲ ವಸ್ತುಗಳನ್ನು ತಯಾರಿಸುವುದು, ಯೋಗ, ಧ್ಯಾನ, ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳು ಈ ದಿಸೆಯಲ್ಲಿ ತುಂಬಾ ಸಹಕಾರಿ.

ಮಾನಸಿಕ ಕಾಯಿಲೆಗಳು ಬರದಂತೆ ತಡೆಗಟ್ಟುವಿಕೆಯೂ ಸಾಧ್ಯವಿದೆ. ಸರಳ ತೃಪ್ತ ಜೀವನ, ಎಲ್ಲರೊಡನೆ ಸ್ನೇಹ, ಕೆಲಸ ಕರ್ತವ್ಯಗಳನ್ನು ಮಾಡಿ ಸಂತೋಷ ಪಡುವುದು, ಚಿಂತೆ ವ್ಯಥೆಗಳನ್ನುಸ ದೂರ ಮಾಡುವುದು, ಎಲ್ಲರಲ್ಲಿ ಎಲ್ಲ ಸನ್ನಿವೇಶಗಳಲ್ಲಿ ಒಳಿತನ್ನು ಗುರುತಿಸುವುದು, ಶಿಸ್ತು ವ್ಯವಸ್ಥೆಗೆ ಆದ್ಯತೆ ನೀಡುವುದು, ಮಾದ್ಯಮಾದಕ ವಸ್ತುಗಳನ್ನು ಸೇವಿಸದಿರುವುದು, ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವುದು, ಆಹಾರ ಸೇವನೆ ನಿದ್ರೆಯ ಬಗ್ಗೆ ಹೆಚ್ಚು ಶಿಸ್ತು, ತಲೆಗೆ ಪೆಟ್ಟು ಬೀಳದಂತೆ ಹೆಚ್ಚು ಎಚ್ಚರವಹಿಸುವುದರಿಂದ ಮಾನಸಿಕ ಕಾಯಿಲೆಗಳನ್ನು ನಿವಾರಿಸಬಹುದು.

 

(i) ಮೂರ್ಛೆ ರೋಗ

‘ನಿನಗೆ ಬರಬಾರದ ರೋಗ ಬರಲಿ; ನಿನಗೆ ಮೊಲ್ಲಾಗರ ಬರಲಿ’ ಎಂದು ಒಬ್ಬ ಅಜ್ಜಿ ತನ್ನನ್ನು ರೇಗಿಸಿದ ಹುಡುಗರನ್ನು ಬೈಯುತ್ತಿದ್ದುರು ಚಿಕ್ಕನವಾಗಿದ್ದ ನನಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ‘ಮೊಲ್ಲಾಗರ ಅಷ್ಟು ಕೆಟ್ಟ ಕಾಯಿಲೆ ಏನಜ್ಜಿ’ ಎಂದು ಕೇಳುತ್ತಿದ್ದೆ. ‘ಹೂಂಕಣೋ, ಅದೊಂದು ಕೆಟ್ಟ ಕಾಯಿಲೆ. ಎಲ್ಲೀಂದರೆ ಅಲ್ಲಿ ಯಾವಾಗ ಅಂದ್ರೆ ಆವಾಗ, ಮೂರ್ಛೆ ರೋಗ ಬರುತ್ತದೆ. ಜ್ಞಾನವೇ ಇರೊಲ್ಲ. ಬಾಯಲ್ಲಿ ನೊರೆ, ರಕ್ತ ಬಂದು ಬಿಡುತ್ತೆ. ನೀರು, ಬೆಂಕಿ ಹತ್ರ ಬಂದರೆ, ಗತಿ ಗೋವಿಂದ. ಅದು ವಾಸಿಯಾಗೋಲ್ಲ. ಸಾಯೋತನಕ ಕಾಡತ್ತೆ. ಪಾಪಕರ್ಮದಿಂದ ಅಂತಾ ರೋಗ ಬರೋದು ಅದು ನನ್ನ ಶತೃವಿಗೂ ಬೇಡ’ ಎನ್ನುತ್ತಿದ್ದಳು. ‘ಹಾಗಾದರೆ ಆ ಹುಡುಗರು ಸ್ವಲ್ಪ ತಂಟೆ ಮಾಡಿದ್ದಕ್ಕೆ ನೀನು ಇಷ್ಟು ದೊಡ್ಡ ಶಾಪ ಕೊಡೋದಾ’ ಎಂದು ಕೇಳುತ್ತಿದ್ದೆ. ‘ನಾನು ಶಾಪ ಕೊಟ್ಟರೆ, ಅದು ನಿಜವಾಗೋದಕ್ಕೆ ನಾನು ಋಷಿಮುನಿ ಅಲ್ಲ. ಏನೋ ಕೋಪಕ್ಕೆ ಹಾಗೆ ಬೈತೀನಿ. ಮೊಲ್ಲಾಗರ ಯಾರಿಗೂ ಬರೋದು ಬೇಡ’ ಎನ್ನುತ್ತಿದ್ದಳು. ಈ ಸಂಭಾಷಣೆ ನಡೆದು ನಲವತ್ತೈದು ವರ್ಷಕ್ಕೂ ಮೇಲ್ಪಟ್ಟು ಅವಧಿ ಆಗಿ ಹೋಗಿದೆ. ಮೂರ್ಛೆ ರೋಗ, ಮೊಲ್ಲಾಗರ, ಫಿಟ್ಸ್‌ ಬರುವುದು ನಿಂತಿಲ್ಲವಾದರೂ, ಅದು ಈಗ ವಾಸಿಯಾಗುವಂತ ಕಾಯಿಲೆ. ಫಿಟ್ಸ್‌ನ್ನು ಹತೋಟಿಯಲ್ಲಿಡುವ ಐದಾರು ಪರಿಣಾಮಕಾರಿ ಔಷಧಿಗಳು ಈ ರೋಗಗಳಿಗೆ ಲಭ್ಯವಿದೆ. ಆದರೂ ಈ ರೋಗಸ ಬಂದಿತೆಂದರೆ ಜನ ಭಯಪಡುವುದು ಬಿಟ್ಟಿಲ್ಲ. ಈ ರೋಗ ತಮ್ಮ ಮನೆಯಲ್ಲಿ ಒಬ್ಬರಿಗಿದೆ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಮೂರ್ಛೆ ರೋಗವಿದೆ ಎಂಬ ಕಾರಣದಿಂದ ಮದುವೆ ಸಂಬಂಧಗಳು ಮುರಿದು ಬಿದ್ದುದೂ ಉಂಟು. ಔಷಧೋಪಚಾರ ಲಭ್ಯವಿದ್ದರೂ, ಚಿಕಿತ್ಸೆಯಿಂದ ವಂಚಿತರಾದ ಸಾವಿರಾರು ರೋಗಿಗಳು ನಮ್ಮಲ್ಲಿದ್ದಾರೆ.

ಪ್ರತಿ ನೂರು ಜನಕ್ಕೆ ಒಬ್ಬರಿಗೆ ಮೂರ್ಛೆರೋಗವಿದೆ. ಅಂದರೆ ಇದೊಂದು ಸಾರ್ವತ್ರಿಕ ಸಾಮಾನ್ಯ ಕಾಯಿಲೆ ಎಂದಾಯಿತು. ಬಹುಪಾಲು ಪ್ರಕರಣಗಳಲ್ಲಿ ಈ ರೋಗ ಮಕ್ಕಳಲ್ಲಿ ಹದಿವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಇದು ಯಾವ ವಯಸ್ಸಿನವರಿಗಾದರೂ ಬರಬಹುದು. ಮೂರ್ಛೆ, ಫಿಟ್ಸ್‌ ನಿಜವಾದ ಅರ್ಥದಲ್ಲಿ ರೋಗವಲ್ಲ. ಕೇವಲ ರೋಗಲಕ್ಷಣ, ಜ್ವರ, ಕೆಮ್ಮು, ನೋವು ಇತ್ಯಾದಿಯಂತೆ. ಫಿಟ್ಸ್ ಮಿದುಳಿನ ರೋಗದ ಲಕ್ಷಣ. ಅಚ್ಚರಿ ಎಂದರೆ ಶೇಕಡಾ ೯೫ ರಷ್ಟು ಪ್ರಕರಣಗಳಲ್ಲಿ ಮಿದುಳಿನಲ್ಲಿ ಮೇಲ್ನೋಟಕ್ಕೆ ಯಾವ ಕಾಯಿಲೆ ಬದಲಾವಣೆಯೂ ಕಂಡು ಬರುವುದಿಲ್ಲ. ಎಕ್ಸ್‌ರೇ, ಸ್ಕ್ಯಾನಿಂಗ್ ಚಿತ್ರದಲ್ಲೂ ಯಾವ ಕೊರತೆ ಬದಲಾವಣೆ ಕಂಡು ಬರದು. ಉಳಿದ ಶೇಕಡಾ ಐದರಷ್ಟು ಪ್ರಕರಣಗಳಲ್ಲಿ ರೋಗಿಯ ವಯಸ್ಸು ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟಿದ್ದು, ಅವರಲ್ಲಿ, ಮಿದುಳಿನಲ್ಲಿ ಗುರುತಿಸಬಹುದಾದ ಕಾಯಿಲೆ, ಬದಲಾವಣೆ ಇರಬಹುದು. ಉದಾ: ಸೋಂಕು, ರಕ್ತಸ್ರಾವ, ಹೆಪ್ಪು, ಮಿದುಳಿನ ಹಾನಿ, ಗೆಡ್ಡೆ ಇತ್ಯಾದಿ.

ಹಲವು ವಿಧಗಳ ಫಿಟ್ಸ್

  • ಸಾಮಾನ್ಯವಾದ, ತೀವ್ರವಾದ ವಿಧ: ಗ್ರಾಂಡ್‌ಮಾಲ್ ಫಿಟ್ಸ್‌) ರೋಗಿ ಪ್ರಜ್ಞೆ ತಪ್ಪಿ, ಎಲ್ಲೆಂದರೆ ಅಲ್ಲಿ ಬೀಳುವುದು, ಬಿದ್ದು ಗಾಯವಾಗುವುದು, ಕೈಕಾಲುಗಳು ಕ್ರಮವಾಗಿ ಅದುರುವುದು, ಆ ಸಮಯದಲ್ಲಿ ಬಾಯಲ್ಲಿ ಬುರುಗು, ನಾಲಿಗೆ, ಕೆನ್ನೆ ಕಬ್ಬಿಕೊಂಡು ರಕ್ತ ಬರುವುದು, ಮಲಮೂತ್ರ ಅನಿಯಂತ್ರಿತ ವಿಸರ್ಜನೆ, ನಂತರ ರೋಗಿ ನಿಷ್ಕ್ರಿಯನಾಗಿ ಮಲಗಿರುವುದು, ಸಾಮಾನ್ಯ ಲಕ್ಷಣ. ಎರಡು ಮೂರು ನಿಮಿಷಗಳ ಕಾಲ ಜರುಗುವ ಈ ಎಲ್ಲ ವಿದ್ಯಮಾನಗಳು ನೋಡುಗರ ಮನಸ್ಸಿನಲ್ಲಿ ಭಯ, ಆತಂಕವನ್ನುಂಟು ಮಾಡುತ್ತವೆ. ಆ ದಿನವೆಲ್ಲಾ ರೋಗಿ ಮೈಕೈ ನೋವು, ತಲೆನೋವು, ವಾಕರಿಕೆ, ನಿಶ್ಯಕ್ತಿ, ಸುಸ್ತಿನಿಂದ ಬಳಲುತ್ತಾನೆ. ಫಿಟ್ಸ್ ದಿನವೂ ಬರಬಹುದು. ಅವಧಿ ಗೊಂದಾವರ್ತಿ ಬರಬಹುದು ಅಥವಾ ಆರು ತಿಂಗಳಿಗೋ, ವರ್ಷಕ್ಕೋ, ಅಪರೂಪವಾಗಿ ಬರಬಹುದು.
  • ಶರೀರದ ಒಂದು ಭಾಗಕ್ಕೆ ಮಾತ್ರ ಬರುವ ಫಿಟ್ಸ್ (ಫೋಕಲ್ ಫಿಟ್ಸ್): ರೋಗಿ ಪ್ರಜ್ಞೆ ತಪ್ಪಿ ಬೀಳುವುದಿಲ್ಲ. ಶರೀರದ ಒಂದು ಭಾಗ (ಉದಾಹರಣೆಗೆ ಒಂದು ಕೈ, ಒಂದು ಕಣ್ಣು, ಬಾಯಿ) ಮಾತ್ರ ಅದುರುತ್ತದೆ. ಸ್ವಲ್ಪ ಸಮಯದ ನಂತರ, ಫೋಕಲ್‌ ಫಿಟ್ಸ್, ಇತರ ಭಾಗಗಳಿಗೆ ಹರಡಿ ಸಾಮಾನ್ಯ ಫಿಟ್ಸ್‌ ಆಗಬಹುದು.
  • ಸ್ನಾಯುಗಳು ಸಂಕುಚನಗೊಳ್ಳುವ ವಿಧ (ಮೈಯೋ ಕ್ಲೋನಸ್): ಶರೀರದ ಒಂದು ಭಾಗದ ಸ್ನಾಯುಗಳು ಥಟ್ಟನೆ ಸಂಕುಚನಗೊಂಡು, ಮತ್ತು ಯಥಾಸ್ಥಿತಿಗೆ ಮರಳುತ್ತವೆ. ಆಗ ರೋಗಿ ಥಟ್ಟನೆ ಬಿದ್ದು ಮರುಕ್ಷಣದಲ್ಲಿ ಮೇಲೇಳುತ್ತಾನೆ.
  • ಪ್ರಜ್ಞಾಸ್ಥಿತಿಯಲ್ಲಿ ಅಲ್ಪಕಾಲದ ವ್ಯತ್ಯಾಸದ ಫಿಟ್ಸ್ (ಅಬ್ಸೆನ್ಸ್ಪೆಟಿಟ್ಮಾಲ್): ಕೆಲವು ಸೆಕೆಂಡುಗಳ ಕಾಲ, ವ್ಯಕ್ತಿ ನಿಶ್ಚಲನಾಗುತ್ತಾನೆ. ಪ್ರಜ್ಞಾಸ್ಥಿತಿಯಲ್ಲಿ ವ್ಯತ್ಯಾಸವಾಗುತ್ತದೆ. ಕೈಕಾಲುಗಳಾಗಲೀ, ದೇಹವಾಗಲೀ ಅದುರುವುದಿಲ್ಲ.
  • ಸಂವೇದನೆಯಲ್ಲಿ ವ್ಯತ್ಯಾಸ, ವಿಚಿತ್ರ ಅನುಭವ ಫಿಟ್ಸ (ಟೆಂಪೊರಲ್ ಲೋಬ್ ಅಥವಾ ಸೆನ್ಸರಿ ಎಪಿಲೆಪ್ಸಿ): ವ್ಯಕ್ತಿಗೆ ಒಂದೆರಡು ನಿಮಿಷ ತಾನೆಲ್ಲೋ ಇದ್ದಂತೆ, ತನ್ನ ಶರೀರದಲ್ಲಿ ಬದಲಾವಣೆಗಳಾದಂತ, ದೃಶ್ಯ-ಧ್ವನಿಗಳು ಕಾಣಿಸಿ ಕೇಳಿಸಿದಂತೆ ಇತ್ಯಾದಿ ಸಂವೇದನೆಗಳಾಗಬಹುದು. ಪ್ರತಿಸಲ ಒಂದೇ ಅನುಭವ ಪುನರಾವರ್ತನೆಗೊಳ್ಳುತ್ತದೆ.

ಯಾವುದೇ ವ್ಯಕ್ತಿಗೆ ಮೂರ್ಛೆ ಬಂದಿದೆ ಎಂದಾಕ್ಷಣ, ಕೈಕಾಲುಗಳು ಅದುರುತ್ತವೆ ಎಂದಾಕ್ಷಣ ಅದು ಮೂರ್ಛೆರೋಗ ಎಂದಾಗಬೇಕಿಲ್ಲ. ರಕ್ತದಲ್ಲಿ ಗ್ಲೂಕೋಸ್ ಕಡಿಮೆ ಆದಾಗ ಹೆಚ್ಚು ಕಾಲ ಅಲುಗಾಡದೆ ನಿಂತಾಗ ರಕ್ತ ಕಾಲಿನಲ್ಲಿ ಶೇಖರಗೊಂಡು, ಮಿದುಳಿಗೆ ರಕ್ತಪೂರೈಕೆ ಕಡಿಮೆಯಾದಾಗ ತೀವ್ರ ಮನೋಕ್ಲೇಶದಿಂದ ಉಂಟಾದ ಉನ್ಮಾದ ಮನೋಸ್ಥಿತಿಯಿಂದಾಗಿ ಕೂಡ ವ್ಯಕ್ತಿಗೆ ಮೈಮರೆತ ಉಂಟಾಗಬಹುದು. ಕೈಕಾಲು ಅದುರಬಹುದು. ಆದ್ದರಿಂದ ಪರಿಚಯದ ವೈದ್ಯರನ್ನು ಕಂಡು, ರೋಗಿಗೆ ಯಾವಾಗ, ಯಾವ ಸನ್ನಿವೇಶದಲ್ಲಿ ಹೇಗೆ ಮೂರ್ಛೆ ಬಂದಿತು, ಹೇಗೆ ಪ್ರಜ್ಞೆ ಮರಳಿ ಬಂತು ಎಂಬುದರ ವಿವರಗಳನ್ನು ಕೊಡಬೇಕು.

ಚಿಕಿತ್ಸೆ

ಫಿನೋಬಾರ್ಬಿಟೋನ್, ಫೆನಿಟಾಯಿನ್, ಕಾರ್ಬಮಜೆಪಿನ್, ಸೋಡಿಯಂ ವ್ಯಾಲ್‌ಪ್ರುಯೆಟ್ ಇತ್ಯಾದಿ ಹಲವು ಔಷಧಿಗಳು ಮೂರ್ಛೆ ರೋಗಕ್ಕೆ ಲಭ್ಯವಿದೆಯಾದರೂ, ಕಡಿಮೆ ಬೆಲೆ, ಕಡಿಮೆ ಅಡ್ಡಪರಿಣಾಮಗಳ ದೃಷ್ಟಿಯಿಂದ, ಫೀನೋಬಾರ್ಬಿಟೋನ್ ಔಷಧವೇ ಹೆಚ್ಚು ಅಪೇಕ್ಷಣೀಯ. ಪ್ರತಿಯೊಬ್ಬ ರೋಗಿಗೆ ಎಷ್ಟು ಪ್ರಮಾಣದ ಔಷಧ ಕೊಟ್ಟರೆ ಫಿಟ್ಸ್ ನಿಲ್ಲುತ್ತದೆ ಎಂದು ವೈದ್ಯರೇ ನಿರ್ಧರಿಸಬಲ್ಲರು. ಈ ಯಾವುದೇ ಔಷಧ ಸೇವನೆಯಿಂದ ಫಿಟ್ಸ್ ನಿಲ್ಲಬೇಕಾದರೆ ರೋಗಿ ಈ ಕೆಳಕಾಣುವ ನಿಯಮಗಳನ್ನು ಪಾಲಿಸಬೇಕು:

೧. ವೈದ್ಯರು ಸೂಚಿಸಿದ ಪ್ರಮಾಣದ ಔಷಧವನ್ನು ಒಂದು ದಿನ ತಪ್ಪದೇ ಕ್ರಮವಾಗಿ ಸೇವಿಸಬೇಕು. ಔಷಧ ಪ್ರಮಾಣವನ್ನು ಕಡಿಮೆ ಜಾಸ್ತಿ ಮಾಡುವುದು, ಒಂದು ದಿನ ತೆಗೆದುಕೊಳ್ಳದಿರುವುದು ಖಂಡಿತ ಮಾಡಬಾರದು.

೨. ರೋಗಿ ಯಾವುದೇ ಕಾರಣದಿಂದ ಉಪವಾಸವಿರುವುದು, ನಿದ್ರೆ ಗೆಡುವುದು ಮಾಡಬಾರದು. ಉಪವಾಸದಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿ ಫಿಟ್ಸ ಬರಬಹುದು. ಆದ್ದರಿಂದ ರೋಗಿ ವೇಳೆಗೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ನಿದ್ರಿಸಬೇಕು.

೩. ಮಧ್ಯಪಾನ ಮಾಡಬಾರದು. ಮೂರ್ಛೆ ರೋಗಿ ಸಾರಾಯಿ, ಬ್ರಾಂದಿ, ವಿಸ್ಕಿಯಂತಹ ಮಧ್ಯಪಾನೀಯಗಳನ್ನು ಸೇವಿಸುವುದರಿಂದ, ಮಿದುಳಿನ ನರಕೋಶಗಳಿಗೆ ಹಾನಿಯಾಗಿ ಫಿಟ್ಸ್‌ ಬರುತ್ತದೆ.

೪. ಜ್ವರ ಬಂದಾಗ, ಜ್ವರದ ತಾಪ ಏರದಂತೆ ನೋಡಿಕೊಳ್ಳಬೇಕು. ಮಗುವಾದರೆ, ಬಟ್ಟೆಯನ್ನು ತೆಗೆದು, ಮಗುವಿನ ಮೈಯನ್ನು ತಣ್ಣೀರು ಬಟ್ಟೆಯಿಂದ ವರೆಸಿ ಗಾಳಿ ಹಾಕಬೇಕು. ದೊಡ್ಡವರಾದರೆ, ಹಣೆ, ತಲೆ, ಎದೆ ಮೇಲೆ ತಣ್ಣೀರು ಬಟ್ಟೆ ಹಾಕಿ, ತಾಪ ಕಡಿಮೆ ಮಾಡಬೇಕು. ಆದಷ್ಟು ಬೇಗ ಜ್ವರದ ಕಾರಣವನ್ನು ಗುರುತಿಸಲು ವೈದ್ಯರಲ್ಲಿಗೆ ಕರೆದೊಯ್ಯಬೇಕು.

೫. ತಿಂಗಳಿಗೊಂದಾವರ್ತಿ ರೋಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ದಿನಚರಿಯನ್ನು ಇಟ್ಟು ಫಿಟ್ಸ್ ಬಂದರೆ ವಿವರಗಳು, ಔಷಧ ಸೇವನೆಯ ವಿವರಗಳನ್ನು ಬರೆದಿಡಬೇಕು. ವೈದ್ಯರಿಗೆ ತೋರಿಸಬೇಕು.

ಈ ರೀತಿ ಕ್ರಮವಾದ ಔಷಧ ಸೇವನೆಯಿಂದ, ಫಿಟ್ಸ್ ಹತೋಟಿಗೆ ಬಂದು, ಐದು ವರ್ಷಗಳ ಕಾಲ ನಿರಂತರವಾಗಿ ಬರದೇ ಹೋದರೆ, ಅದು ವಾಸಿಯಾಯಿತೆಂದು ಹೇಳಬಹುದು. ಅಂದರೆ ರೋಗಿ ಕನಿಷ್ಟ ಐದು ವರ್ಷಗಳ ಕಾಲ ನಿರಂತರವಾಗಿ ಔಷಧ ಸೇವಿಸಬೇಕು. ಆನಂತರವೂ ಕೂಡ ಥಟ್ಟನೆ ಔಷಧ ಸೇವನೆಯನ್ನು ನಿಲ್ಲಿಸುವಂತಿಲ್ಲ. ವೈದ್ಯರ ಅನುಮತಿ ಪಡೆದು ಅವರ ಮಾರ್ಗದರ್ಶನದಲ್ಲಿ ಸ್ವಲ್ಪ ಸ್ವಲ್ಪವಾಗಿ ಮಾತ್ರಯ ಪ್ರಮಾಣವನ್ನು ತಗ್ಗಿಸಿ ಕ್ರಮೇಣ ನಿಲ್ಲಿಸಬೇಕು. ಅಕಸ್ಮಾತ್ ಈ ಅವಧಿಯಲ್ಲಿ ಮೂರ್ಛೆ ಮತ್ತೆ ಕಾಣಿಸಿಕೊಳ್ಳುವ ಸುಳಿವು ತೋರಿದರೆ, ಮತ್ತೆ ಐದು ವರ್ಷಗಳ ಕಾಲ, ಔಷಧ ಸೇವನೆ ಮುಂದುವರೆಸಬೇಕು.

ದೀರ್ಘಕಾಲದ ಸೇವನೆಯಿಂದ ಫೀನೋಬಾರ್ಬಿಟೋನ್ ಮಾತ್ರೆಗಳಿಂದ ಯಾವ ಬಗೆಯ ಅಹಿತಕರ ಪರಿಣಾಮಗಳಿಲ್ಲ ಎನ್ನುವುದು ಸಮಾಧಾನದ ಸಂಗತಿ. ಫೆನಿಟಾಯಿನ್ ಸೇವಿಸುವವರಲ್ಲಿ ವಸಡು ದಪ್ಪಗಿರುತ್ತದೆ. ರೋಗಿ ಸ್ತ್ರೀಯಾದರೆ, ಮುಖ, ಕೈಕಾಲುಗಳ ಮೇಲೆ ಕೂದಲುಗಳು ಮೂಡುವ ಸಮಸ್ಯೆ ಉಂಟಾಗಬಹುದು. ಕಾರ್ಬಮಜೆಪಿನ್‌ನಲ್ಲಿ ರಕ್ತದಲ್ಲಿ ಬಿಳಿ ರಕ್ತಕಣಗಳ ಕೊರೆಯುಂಟಾಗಬಹುದು. ಇದನ್ನು ವೈದ್ಯರು ಗಮನಿಸಿ, ಸೂಕ್ತ ಸಲಹೆ ನೀಡಬಲ್ಲರು.

ಮೂರ್ಛೆ ಪೂರ್ಣ ಹತೋಟಿಯಲ್ಲಿದೆ ಎಂದು ಖಾತ್ರಿಯಾಗದ ತನಕ, ಮೂರ್ಛೆ ರೋಗಿ ಕೆಲವು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.

೧. ಒಂಟಿಯಾಗಿ ನೀರು, ಬೆಂಕಿ, ಚಲಿಸುವ ವಾಹನ-ಯಂತ್ರಗಳು, ಎತ್ತರದ ಸ್ಥಳಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡಬಾರದು.

೨. ತಾನೇ ವಾಹನ ಚಲಾಯಿಸಬಾರದು.

೩. ತನಗೆ ಮತ್ತು ಇತರರಿಗೆ ಅಪಾಯವಾಗಬಲ್ಲಂತಹ ಉದ್ಯೋಗ ಮಾಡಬಾರದು (ಉದಾ: ವಾಹನ ಚಾಲನೆ)

ಇದು ಬಿಟ್ಟರೆ ಮೂರ್ಛೆ ರೋಗಿ ಎಲ್ಲರಂತೆ ಜೀವನ ಮಾಡಲು ಅಡ್ಡಿಯೂ ಇಲ್ಲ. ಶಾಲಾ ಕಾಲೇಜಿಗೆ ಹೋಗಬೇಕು. ಉದ್ಯೋಗ ಮಾಡಬೇಕು. ಮನೆ ಜವಾಬ್ದಾರಿಗಳನ್ನು ಹೊರಬೇಕು.

ಚಿಕಿತ್ಸೆ ಪಡೆದು, ಮೂರ್ಛೆ ಹತೋಟಿಯಲ್ಲಿರುವ ವ್ಯಕ್ತಿ (ಕನಿಷ್ಠ ಎರಡು ವರ್ಷ ಕಾಲ) ಮದುವೆಯಾಗಲು, ಸಂಸಾರ ನಡೆಸಲು ಅಡ್ಡಿ ಇಲ್ಲ.

ನೆನಪಿಡಿ: ಮೂರ್ಛೆ ರೋಗ, ಫಿಟ್ಸ್ ವಾಸಿಯಾಗುವಂತಹ ಮಿದುಳಿನ ರೋಗಲಕ್ಷಣ. ಮೂರ್ಛೆ ರೋಗಿಗೆ ಎಲ್ಲರಂತೆ ಬದುಕುವ ಹಕ್ಕಿದೆ.

 

(ii) ಪಾರ್ಕಿನ್ಸನ್ ವ್ಯಾಧಿ

ಐವತ್ತೊಂದು ವರ್ಷದ ಕೇಶವಯ್ಯನವರಿಗೆ ಆಗಲೇ ಮುಪ್ಪು ಬಂದಿದೆ ಎಂದು ಎಲ್ಲರೂ ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಯುವಕರನ್ನು ನಾಚಿಸುವಂತೆ ಪಾದರಸದಂತೆ ಓಡಾಡುತ್ತಾ ಹಲವಾರು ಕೆಲಸ ಕರ್ತವ್ಯಗಳಲ್ಲಿ ತೊಡಗಿದ್ದ ಅವರು ಈಗ ನಿಷ್ಕ್ರಿಯಯಾಗಿದ್ದಾರೆ. ಅವರ ಚಲನವಲನ ಎಷ್ಟು ನಿಧಾನವಾಗಿದೆ ಎಂದರೆ ಊಟ ಮಾಡಲು ಅವರಿಗೆ ಒಂದು ಗಂಟೆ ಬೇಕು. ಆದರೆ ತಿನ್ನುವುದು ಸಣ್ಣ ಮಗುವಿಗೂ ಸಾಲುವುದಿಲ್ಲ. ತಮ್ಮ ಕೊಠಡಿಯಿಂದ ಬಚ್ಚಲು ಮನೆಗೆ ಹೋಗಲು ಅವರಿಗೆ ಹತ್ತು ನಿಮಿಷಗಳು ಬೇಕಾಗುತ್ತವೆ. ಮೊದಲು ಒಂದು ಕ್ಷಣದಲ್ಲಿ ಈ ದೂರವನ್ನು ಕ್ರಮಿಸುತ್ತಿದ್ದರು. ಚಟಪಟನೆ ಮಾತಾಡುತ್ತಿದ್ದ ಅವರು ಈಗ ಹತ್ತು ಸಲ ಮಾತಾಡಿಸಿದರೆ, ಬೇಕೋ ಬೇಡವೋ ಎಂದು ಒಂದು ಸಲ ಮೆಲ್ಲಗೆ ಮಾತಾಡುತ್ತಾರೆ. ಮುಖದಲ್ಲಿ ಯಾವ ಭಾವನೆಯನ್ನೂ ತೋರಿಸುವುದಿಲ್ಲ. ಶರೀರವೂ ಬಗ್ಗಿ ಹೋಗಿದೆ. ನೇರವಾಗಿ ನಿಂತು ನಡೆಯಲಾರರು. ಸಮತೋಲನ ಚಲನೆಯೂ ಇಲ್ಲ. ಎಲ್ಲಿ ಕೆಳಕ್ಕೆ ಬಿದ್ದು ಬಿಡುತ್ತಾರೋ ಎನಿಸುತ್ತದೆ. ಹೀಗಾಗಿ ಮನೆ ಬಿಟ್ಟು ಅವರು ಎಲ್ಲಗೂ ಹೋಗುವುದಿಲ್ಲ. ಅಂಗಡಿ, ಮಿಲ್ಲಿನ ವ್ಯವಹಾರವನ್ನೆಲ್ಲಾ ಮಕ್ಕಳೇ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಕೇಶವಯ್ಯನವರಿಗೆ ಸರಳ ಲೆಕ್ಕಾಚಾರವೂ ಮರೆತು ಹೋಗುತ್ತಿದೆ. ನಾಲ್ಕು-ಮೂರು-ಐದು ಕೂಡಿಸಿದರೆ ಎಷ್ಟಾಯಿತು ಎನ್ನಿ. ಐದು-ಹತ್ತು ನಿಮಿಷಗಳ ಕಾಲ ಲೆಕ್ಕ ಮಾಡಿ ಹನ್ನೊಂದು ಎಂದು ಅಂದರೇ, ಹದಿಮೂರು ಎಂದೂ ಅಂದಾರು. ಜಪಮಣಿಗಳನ್ನು ಎಣಿಸುವ ರೀತಿಯಲ್ಲಿ ಅವರ ಬಲಗೈ ಹೆಬ್ಬೆರಳು ಮತ್ತು ತೋರು ಬೆರಳು ಚಲಿಸುತ್ತಲೇ ಇರುತ್ತವೆ. ಒಮ್ಮೊಮ್ಮೆ ಅವರು ಬಹಳ ಬೇಸರ ಮಾಡಿಕೊಂಡು ‘ನನ್ನ ಗತಿ ಹೀಗಾಯಿತು. ಇನ್ನು ಸಾಯುವ ತನಕ ಎಲ್ಲರಿಗೂ ಭಾರವಾಗುತ್ತೇನೆ. ಆ ದೇವರು ಬೇಗ ಸಾವು ಕೊಡಬಾರದೇ’ ಎಂದು ಅಳುತ್ತಾರೆ. ಆಗ ಅವರ ಸ್ಥಿತಿಯನ್ನು ಕಂಡವರ ಕಣ್ಣಲ್ಲೂ ನೀರು ಬರದಿರದು. ‘ಡಾಕ್ಟರಿಗೆ ತೋರಿಸಲಿಲ್ಲವೇ’ ಎಂದರೆ ಅವರ ಹೆಂಡತಿ ಮತ್ತು ಹಿರಿಯ ಮಗ ಶ್ರೀನಿವಾಸ ‘ತೋರಿಸಿ ಏನು ಪ್ರಯೋಜನ, ವಯಸ್ಸಾಯಿತಲ್ಲವೇ, ವೈದ್ಯರು ಏನು ಮಾಡಿಯಾರು’ ಎನ್ನುತ್ತಾರೆ. ಆದರೆ ಮೊನ್ನೆ ಮದರಾಸಿನಿಂದ ಬಂದ ಕೇಶವಯ್ಯನವರ ತಮ್ಮ ಗೋವಿಂದಯ್ಯ ಮನೆಯವರಿಗೆ ಗದರಿ, ಬುದ್ಧಿ ಹೇಳಿ ಕೇಶವಯ್ಯನವರನ್ನು ತಜ್ಞ ವೈದ್ಯ ಡಾ. ಮುಕುಂದರಾವ್‌ರಿಗೆ ತೋರಿಸಿದರು. ರೋಗಿಯನ್ನು ಪರೀಕ್ಷಿಸಿದ ವೈದ್ಯರಿಗೆ ಕೇಶವಯ್ಯ ಪಾರ್ಕಿನ್‌ಸನ್ ರೋಗದಿಂದ ಬಳಲುತ್ತಿದ್ದಾರೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ. ಎರಡು ವರ್ಷಗಳಿಂದ ರೋಗವನ್ನು ಬೆಳೆಯಲು ಬಿಟ್ಟಿರಲ್ಲ ಗೋವಿಂದಯ್ಯಾ. ಇದು ಚಿಕಿತ್ಸೆಗೆ ಬಗ್ಗುವಂತಹ ಕಾಯಿಲೆ. ಪೂರ್ಣವಾಗಿ ಗುಣ ಮಾಡಲು ಸಾಧ್ಯವಿಲ್ಲವಾದರೂ ನಿಮ್ಮ ಅಣ್ಣ ತಮ್ಮ ದೈನಂದಿನ ಸರಳ ಕೆಲಸ ಕಾರ್ಯಗಳನ್ನು ಮಾಡುತ್ತಾ ಸ್ವಾವಲಂಬಿಯಾಗಿ ಬಾಳಲು ಸಾಧ್ಯವಿದೆ ಎಂದಾಗ ಮನೆಯವರೆಲ್ಲ ಸಮಾಧಾನದ ಉಸಿರು ಬಿಟ್ಟರು. ‘ಈ ಪಾರ್ಕಿನ್‌ಸನ್ ರೋಗ ಏನು, ಅದೇಕೆ ಬರುತ್ತದೆ. ನನ್ನ ಅಣ್ಣನಿಗೇ ಅದು ಏಕೆ ಬಂತು’ ಎಂದು ಗೋವಿಂದಯ್ಯ ಕೇಳಿದರು.

ಸುಮಾರು ೧೭೦ ವರ್ಷಗಳ ಹಿಂದೆಯೇ ಅಂದರೆ ೧೮೧೭ ರಲ್ಲಿ ಜೇಮ್ಸ್‌ ಪಾರ್ಕಿನ್‌ಸನ್ ಎನ್ನುವನು ಈ ರೋಗವನ್ನು ವಿವರಿಸಿದ್ದರಿಂದ ಈ ರೋಗಕ್ಕೆ ಅವನ ಹೆಸರನ್ನೇ ಇಡಲಾಯಿತು. ಅರವತ್ತು ವರ್ಷಕ್ಕೂ ಮಿಗಿಲು ವಯಸ್ಸಾದವರಲ್ಲಿ ನರಸಂಬಂಧ ನ್ಯೂನತೆಗೆ ಸಾಮಾನ್ಯವಾದ ಕಾರಣ ಕರ್ತೃವಾದ ಈ ರೋಗ ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ ಒಬ್ಬರಿಗೆ ಬರಬಹುದು. ಕೈಕಾಲುಗಳ ಅನಿಯಂತ್ರಿತ ನಡುವ, ಮಾಂಸಖಂಡಗಳ ಬಿಗಿತ ಮತ್ತು ನಿಧಾನ ಗತಿಯ ಚಲನೆ ಈ ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರುತ್ತದೆ.ಸ ಪಾರ್ಕಿನ್‌ಸನ್ ರೋಗದ ಎಲ್ಲಾ ಲಕ್ಷಣಗಳು ಈ ರೀತಿ ಇವೆ.