ರೋಗಿಯ ಆರೈಕೆ, ಉಪಚಾರ: ರೋಗಿ ಬದುಕಿರುವಷ್ಟು ಕಾಲ ನೆಮ್ಮದಿಯಿಂದ, ಆದಷ್ಟು ಸ್ವಾವಲಂಬಿಯಾಗಿ ಗೌರವಯುತವಾಗಿ ಜೀವಿಸಲು ಮನೆಯವರು ಮತ್ತು ವೈದ್ಯ ಸಿಬ್ಬಂದಿ ನೆರವಾಗಬೇಕು. ದೈನಂದಿನ ಚಟುವಟಿಕೆಗಳು: ಇತರರ ನೆರವಿಲ್ಲದೆ ಅಥವಾ ಆದಷ್ಟು ಕಡಿಮೆ ನೆರವಿನಿಂದ ಆಹಾರ ಸೇವನೆ, ನಿದ್ರೆ, ಸ್ನಾನ, ಸ್ವಚ್ಛತೆ, ಮಲಮೂತ್ರ ವಿಸರ್ಜನೆ, ಬಟ್ಟೆ ತೊಡುವುದು, ಇವನ್ನೆಲ್ಲ ಮಾಡಲು ರೋಗಿಗೆ ಅವಕಾಶ, ಅನುಕೂಲಗಳನ್ನು ಮಾಡಿಕೊಡಬೇಕು. ಪಕ್ಕದಲ್ಲೇ ಶೌಚಾಲಯ ಇರಬೇಕು. ಓಡಾಡುವ ನೆಲ ಸಮನಾಗಿರಬೇಕು. ಮೆಟ್ಟಿಲುಗಳಿರಬಾರದು. ಹೆಚ್ಚಿನ ತಿರುವುಗಳಿರಬಾರದು. ಸುಲಭವಾಗಿ ಓಡಾಡುವಂತಿರಬೇಕು. ಅಪಾಯಕಾರಿ ವಸ್ತುಗಳಿರಬಾರದು.

ರೋಗಿಯ ನೆನಪನ್ನು, ಬುದ್ಧಿಶಕ್ತಿಯನ್ನೂ ಪರೀಕ್ಷಿಸಬಾರದು. ರೋಗಿಗೆ ಮರೆವು ಹೆಚ್ಚು. ಬುದ್ಧಿ ಕಡಿಮೆ ಎಂದು ಗೊತ್ತಾದ ಮೇಲೆ ರೋಗಿಯ ನೆನಪು-ಬುದ್ಧಿಯನ್ನು ಕೆಣಕುವ ಪ್ರಶ್ನೆಗಳನ್ನು ಮನೆಯವರು ಹಾಕಬಾರದು. ‘ಎಲ್ಲಿ, ಯಾರು ಬಂದಿದ್ದಾರೆ ಹೇಳಿ ನೋಡೋಣ’ ಎಂದು ಕೇಳದೆ, ‘ನೋಡಿ ನಿಮ್ಮ ಅಕ್ಕನ ಮಗ, ಬೆಂಗಳೂರಿನಲ್ಲಿರುವ ರವಿ ಬಂದಿದ್ದಾನೆ ಮಾತಾಡಿಸಿ’ ಎನ್ನಬೇಕು. ಇದರಿಂದ ರೋಗಿಗೆ ಮಾನಸಿಕ ಹಿಂಸೆ ಆಗುವುದು ತಪ್ಪುತ್ತದೆ.

ಭಯ ಖಿನ್ನತೆಯ ನಿವಾರಣೆ: ತನ್ನ ಅಸಹಾಯಕ ಸ್ಥಿತಿ, ತೊಂದರೆ, ಅಭದ್ರತೆ, ಅರಕ್ಷಿತ ಸ್ಥಿತಿಯನ್ನು ಗಮನಿಸಿ, ರೋಗಿ ಭಯ, ಖಿನ್ನತೆಗೆ ಒಳಗಾಗದಂತೆ ರೋಗಿಗೆ ಆಸರೆ, ಪ್ರೋತ್ಸಾಹ ನೀಡಬೇಕು. ಸಾಧ್ಯವಾದಷ್ಟು ರೋಗಿಯನ್ನು ಒಂಟಿಯಾಗಿ ಬಿಡದೇ ಜೊತೆಯಲ್ಲಿ ಯಾರಾದರೂ ಇದ್ದು ಕಂಪನಿ ಕೊಡಬೇಕು. ಸಂಗೀತ, ಭಜನೆ, ಕಥೆ ಹೇಳುವುದು, ಸರಳ ಒಳಾಂಗಣ ಕ್ರೀಡೆಗಳು, ಒಳ್ಳೆಯ ಪರಿಸರ, ಅವರ ಮನಸ್ಸಿನ ನೆಮ್ಮದಿಯನ್ನು ಕಾಪಾಡಬಲ್ಲದು. ಈ ರೋಗಿಗಳನ್ನು ಆದಷ್ಟು ಪರಿಚಿತ ಪರಿಸರದಲ್ಲೇ ಇರಬೇಕು. ಪರಿಚಿತರೇ ಆರೈಕೆ ಮಾಡಬೇಕು. ಹೊಸ ಸ್ಥಳ ಹೊಸ ಜನ ಎಂದಾದರೆ, ಅವರ ಗೊಂದಲ ಹೆಚ್ಚುತ್ತದೆ.

ಮನೆಯಲ್ಲಿ ಒಂದು ಸಣ್ಣ ಮಗುವನ್ನು ನೋಡಿಕೊಳ್ಳುವಂತೆ ಆಲ್ಜೈಮರ್ ಕಾಯಿಲೆಯ ರೋಗಿಯನ್ನು ನೋಡಿಕೊಳ್ಳಬೇಕು. ಈ ಕಾಯಿಲೆಗೆ ಕಾರಣಾಂಶಗಳು ಗೊತ್ತಾಗುವವರೆಗೆ ಈ ಕಾಯಿಲೆ ಬರದಂತೆ ಮಾಡುವ ವಿಧಾನವೂ ನಮಗೆ ಗೊತ್ತಿಲ್ಲ. ಅದು ಕಾಣಿಸಿಕೊಂಡಾಗ ಅದನ್ನು ನಿಭಾಯಿಸುವುದೊಂದೇ ನಮಗೆ ಉಳಿದಿರುವ ದಾರಿ.

 

(iv) ಆಲ್ಕೋಹಾಲ್ ಅನಿಯಮಿತ ಸೇವನೆಯಿಂದ ಮಿದುಳಿಗಾಗುವ ಹಾನಿ

ಆಲ್ಕೋಹಾಲಿನ ಅನಿಯಮಿತ ಸೇವನೆ ಅಥವಾ ದೀರ್ಘಕಾಲದ ಸೇವೆನೆಯಿಂದ ಮಿದುಳು ಹಾನಿಗೀಡಾಗುತ್ತದೆ. ಯಾವಾಗ ಮಿದುಳು ಹಾನಿಗೀಡಾಗುತ್ತದೋ ಆಗ ನರ ದೌರ್ಬಲ್ಯ, ನರ ಮತ್ತು ಮನಸ್ಸಿಗೆ ಸಂಬಂಧಪಟ್ಟಂತೆ ಅನೇಕ ಬಗೆಯ ನ್ಯೂನತೆ, ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾದುವೆಂದರೆ:

. ಜ್ಞಾಪಕ ಶಕ್ತಿ ಕುಂದುವುಸು

ನಿನ್ನೆ ನಿಮ್ಮ ಸ್ನೇಹಿತನನ್ನು ಭೇಟಿ ಮಾಡಿರುತ್ತೀರಿ. ಆಗ ಆತ ಆಲ್ಕೋಹಾಲ್‌ ಸೇವಿಸಿರುವುದಿಲ್ಲ (ಆದರೆ ಆತ ಪದೇ ಪದೇ ಆಲ್ಕೋಹಾಲ್ ಸೇವಿಸುವವನು ಎಂದು ನಿಮಗೆ ಗೊತ್ತು) ಸಂಭಾಷಣೆ ಚೆನ್ನಾಗಿಯೇ ಸಾಗುತ್ತದೆ. ಆತ ಯಾವುದೇ ಗೊಂದಲವಿಲ್ಲದೆ ನಿಮ್ಮ ಜೊತೆ ಮಾತಾಡಿರುತ್ತಾನೆ. ಈ ದಿನ ಆತ ಮತ್ತೆ ಭೇಟಿಯಾಗುತ್ತಾನೆ. ನಿಮ್ಮನ್ನು ನೋಡಿದ ಕೂಡಲೇ ‘ಏನಯ್ಯಾ ಮಿತ್ರ ನಿನ್ನನ್ನು ನೋಡದೇ ಎಷ್ಟು ದಿವಸವಾಯಿತಯ್ಯ. ಎಲ್ಲಿ ಹೋಗಿ ಬಿಟ್ಟಿದ್ದೆ’ ಎನ್ನುತ್ತಾನೆ. ನಿಮಗೆ ಆಶ್ಚರ್ಯವಾಗುತ್ತದೆ. ಈಗ ಅವನು ಕುಡಿದಿದ್ದಾನೆಯೇ ಎಂದು ಪರೀಕ್ಷಿಸುತ್ತೀರಿ ಇಲ್ಲ ಆಲ್ಕೋಹಾಲ್‌ ವಾಸನೆ ಇಲ್ಲ. ಹಾಗಾದರೆ…… ಹೌದು ಆತನ ಜ್ಞಾಪಕ ಶಕ್ತಿ ಕುಂದಿದೆ. ನಿನ್ನೆ ನಿಮ್ಮೊಡನೆ ಆದ ಭೇಟಿಯನ್ನು ಆತ ಸಂಪೂರ್ಣವಾಗಿ ಮರೆದು ಬಿಟ್ಟಿದ್ದಾನೆ.

ಹೀಗೆ ಆಲ್ಕೋಹಾಲ್‌ ಸೇವಿಸುವ ವ್ಯಕ್ತಿ ಕ್ರಮೇಣ ಮರೆಗುಳಿಯಾಗುತ್ತಾನೆ. ವ್ಯವಹಾರದಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಅನೇಕ ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ.

. ಸಂಶಯ ಪೀಡಿತ

‘ಪಾಪ. ಕೇಳಿದಿರಾ? ಪ್ರಭಾಕರ ತನ್ನ ಹೆಂಡತಿಯನ್ನು ಹೊಡೆದು ಬಡಿದು ತವರಿಗೆ ಅಟ್ಟಿಬಿಟ್ಟಿದ್ದಾನಂತೆ. ಸೀತೆ, ಸಾವಿತ್ರಿಯಂತಹ ಹೆಂಗಸು ಆಕೆ. ಆಕೆಯ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿದ್ದಾನಂತೆ. ‘ನೀನು ಹಾಲಿನವನ ಜೊತೆ ಚಕ್ಕಂದ ಆಡ್ತೀಯಾ, ಪಕ್ಕದ ಮನೆಯವನೊಂದಿಗೆ ಸಂಬಂಧ ಮಾಡಿದ್ದೀಯಾ, ಬಾಗಿಲಲ್ಲಿ ನಿಂತು ಹೋಗುವ ಗಂಡಸರಿಗೆಲ್ಲಾ ಕಣ್ಣು ಹೊಡೆಯುತ್ತೀಯಾ. ನೀನು ನಡತೆಗೆಟ್ಟವರು, ಸೂಳೆ’ ಎಂದೆಲ್ಲಾ ಹೊಲಸು ಮಾತಿನಲ್ಲಿ ಬೈದು ಹಿಂಸೆ ಮಾಡಿದ್ದಾನಂತೆ. ಪಾಪ ಅವಳ ಕಷ್ಟ ನೋಡುವುದಕ್ಕಾಗುವುದಿಲ್ಲ. ಅವಮಾನದಿಂದ ದೇಹವನ್ನು ಹಿಡಿ ಮಾಡಿಕೊಂಡು ಹಾಸಿಗೆ ಹಿಡಿದಿದ್ದಾಳೆ. ಪ್ರಭಾಕರ ಹೆಂಡ ಕುಡುಕ. ಅವನಿಗೆ ಬುದ್ಧಿ ಹೇಳುವವರು ಯಾರು?’ ಎಂದು ನಿಟ್ಟುಸಿರು ಬಿಟ್ಟದ್ದು ಸೋಮಯ್ಯ.

‘ನೋಡಿದರೇನ್ರಿ. ನಂದಕುಮಾರನ ಸೊಕ್ಕು? ಪ್ರತಿದಿನ ಬಾಟಲು ಹಾಕಕೊಂಡೇ ಕೆಲಸಕ್ಕೆ ಬರ್ತಾನೆ. ನಾವು ಏನೋ ಹಾಳಾಗೋಗ್ಲಿ ಅಂತ ಸುಮ್ಮನಿದ್ದೆವು. ಹೇಳಿದ ಕೆಲಸದಲ್ಲಿ ಕಾಲು ಭಾಗವನ್ನೂ ಸರಿಯಾಗಿ ಮಾಡೋದಿಲ್ಲ. ಮೇಲಾಧಿಕಾರಿಗಳಿಗೆ ತಿಳಿಸಿದರೆ, ಅನ್ಯಾಯವಾಗಿ ಕೆಲಸ ಕಳೆದು ಕೊಳ್ತಾನೆ ಅಂತ ಕರುಣೆ ತೋರಿಸಿ ಅಯ್ಯೋ ಪಾಪ ಅಂತ ಹೇಳಿ ಅವನ ಪಾಲಿನ ಕೆಲಸವನ್ನೂ ನಾವೇ ಮಾಡಿಕೊಂಡು ಹೋಗ್ತಾ ಇರೋದಿಕ್ಕೆ, ಈಗ ಸರಿಯಾದ ಬಹುಮಾನ ಕೊಟ್ಟಿದ್ದಾನೆ. ಇಂತಹವರಿಗೆ ಸಹಾಯ ಮಾಡಿದ ನಮಗೆ ನ್ಯಾಯವಾಗಿ ಶಿಕ್ಷೆ ಆಗಬೇಕು ಎಂದು ಗುಡುಗಿದರು ಶೇಷಪ್ಪಯ್ಯ.

‘ಏಕೆ ನಂದಕುಮಾರ ಏನು ಮಾಡಿದ್ದಾನೆ ಶೇಷಪ್ಪಯ್ಯ’ ಎಂದು ಎಲ್ಲರೂ ವಿಚಾರಿಸಿದರು.

‘ನಮ್ಮ ಮೇಲೆ ಮೇಲಾಧಿಕಾರಿಗೆ, ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಪೊಲೀಸ್‌ನವರಿಗೆ ಲಿಖಿತ ದೂರು ಕೊಟ್ಟಿದ್ದಾನೆ ಈ ನಂದಕುಮಾರ. ನಾವೆಲ್ಲ ಅವನ ವಿರುದ್ಧ ಮಸಲತ್ತು ಮಾಡ್ತಿದೇವಂತೆ. ಅವನು ಸರಿಯಾಗಿ ಕೆಲಸ ಮಾಡೋದಿಕ್ಕೆ ನಾವು ಬಿಡ್ತಾ ಇಲ್ಲವಂತೆ. ಅವನ ವಿರುದ್ಧ ಅಪಪ್ರಚಾರ ಮಾಡ್ತಾ ಇದ್ದೀವಂತೆ. ಅವನನ್ನು ಕೆಲಸದಿಂದ ಡಿಸ್‌ಮಿಸ್‌ ಆಗೋಹಾಗೆ ಕುತಂತ್ರ ಮಾಡ್ತಾ ಇದ್ದೀವಂತೆ. ನಮ್ಮಿಂದ ಅವನ ಪ್ರಾಣಕ್ಕೆ ಸಂಚಕಾರ ಬಂದಿದೆಯಂತೆ. ತನಗೆ ರಕ್ಷಣೆ ಬೇಕು.ಸ ನ್ಯಾಯಬೇಕು ಅಂತ ಕೇಳಿಕೊಂಡಿದ್ದಾನೆ. ನಾವೆಲ್ಲ ಕೋರ್ಟ್‌ ಕಟಕಟೆ ಹತ್ತೋ ಹಾಗೆ ಮಾಡ್ತಾನೆ ಈ ಕುಡುಕ ಮಹಾಶಯ. ಏನು ಮಾಡಬೇಕೋ ತೋಚ್ತಾ ಇಲ್ಲ. ಎಲ್ಲರೂ ಹೋಗಿ ಸೆಕ್ಷನ್ ಮ್ಯಾನೇಜರ್‌ನ್ನು ಕಾಣೋಣ ಬನ್ನಿ’ ಎಂದು ಎದ್ದರು.

‘ಇನ್ಸ್‌ಪೆಕ್ಟರೇ ನಾನು ಹೇಳೋದನ್ನ ಗಮನ ಇಟ್ಟು ಕೇಳಿ. ನನ್ನನ್ನು ಕೊಲ್ಲೋದಿಕ್ಕೆ ಸಂಚು ನಡೀತಾ ಇದೆ. ನಾನೆಲ್ಲೇ ಹೋಗಲಿ. ಇಬ್ಬರು ನನ್ನನ್ನು ಫಾಲೋ ಮಾಡ್ತಿದ್ದಾನೆ. ನಾನು ಬುದ್ದಿವಂತ ಆಗಿರೋದು. ಇತರರಿಗಿಂತ ಹೆಚ್ಚು ಚೂಟಿಯಾಗಿರೋದನ್ನು ನೋಡಿ ಹೊಟ್ಟೆ ಕಿಚ್ಚು ಪಡೋ ಜನ ಸಾಕಷ್ಟಿದ್ದಾರೆ. ನನ್ನನ್ನು ಕೊಂದು ಬಿಟ್ಟರೆ ಅವರಿಗೆ ಸಮಾಧಾನ. ನನಗೆ ನಮ್ಮ ಮನೆಗೆ ಹೋಗೋದಿಕ್ಕೂ ಭಯವಾಗ್ತಿದೆ.ನನ್ನ ಹೆಂಡತಿ, ನನ್ನ ತಮ್ಮ, ನನ್ನ ತಂದೆ ತಾಯಿ ಎಲ್ಲ ನನ್ನ ಶತೃ ಪಕ್ಷ ಸೇರಿಬಿಟ್ಟಿದ್ದಾರೆ. ಅವರು ನನಗೆ ಊಟದಲ್ಲಿ ವಿಷ ಸೇರಿಸಿ ನನ್ನನ್ನು ಸಾಯಿಸಬಹುದು. ದಯವಿಟ್ಟು ನನ್ನನ್ನು ರಕ್ಷಿಸಿ ಸಾರ್’. ಎಂದು ವಿಷಕಂಠ ಬೇಡಿಕೊಂಡ. ಇನ್ಸ್‌ಪೆಕ್ಟರ್ ವಿನೋದ್ ವಿಚಾರಣೆ ನಡೆಸಿದಾಗ ವಿಷಕಂಠ ಹೇಳಿದಂತೆ ಯಾರೂ ಅವನ ವಿರುದ್ಧವಿಲ್ಲ. ಆತ ಹಲವಾರು ವರ್ಷಗಳಿಂದ ಕುಡಿಯುವ ಚಟಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಪ್ರಭಾಕರ, ನಂದಕುಮಾರ, ವಿಷಕಂಠ ಎಲ್ಲರೂ ಆಲ್ಕೋಹಾಲಿಕ್ ಪೆರನಾಯ್ಡ್‌ ಸ್ಥಿತಿಯಿಂದ ಬಳಲುತ್ತಿದ್ದಾರೆ. ಈ ಸ್ಥಿತಿಯಲ್ಲಿ ವ್ಯಕ್ತಿ ಸಂಶಯ ಪೀಡಿತವಾಗಿ ತಾನು ಹಿಂಸೆ ಪಡುವುದಲ್ಲದೆ, ಇತರರಿಗೂ ತೊಂದರೆದಾಯಕನಾಗಬಹುದು. ಸ್ವರಕ್ಷಣೆಯ ನೆಪದಲ್ಲಿ ಇವರ ಮೇಲೆ ಆಕ್ರಮಣ ಮಾಡಬಹುದು. ಇತರರ ಮೇಲೆ ದೋಷಾರೋಪಣೆ ಮಾಡಿ, ಅವರನ್ನು ನ್ಯಾಯಾಲಯಕ್ಕೆ ಎಳೆಯಬಹುದು ಅಥವಾ ತಾನೇ ಆತ್ಮಹತ್ಯೆ ಮಾಡಿಕೊಳ್ಳಬಹುದು.

. ನಡುಕ ಸನ್ನಿ

ಭಾಸ್ಕರ ಖಾಸಗಿ ಫ್ಯಾಕ್ಟರಿ ಒಂದರಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಯಂತ್ರಗಳ ಜೊತೆಯಲ್ಲಿ ದಿನಕ್ಕೆ ೮ ಘಂಟೆಗಳ ಕಾಲ ತಾನು ದುಡಿಯುವುದರಿಂದ ಆಲ್ಕೋಹಾಲ್ ಸೇವನೆ ಮಾಡಲೇಬೇಕು ಎಂಬ ನಂಬಿಕೆಯಿಂದ ಕಳೆದ ಹತ್ತು ವರ್ಷಗಳಿಂದ ಪ್ರದಿನ ಕುಡಿಯುತ್ತಾನೆ. ಮೊನ್ನೆ ಫ್ಯಾಕ್ಟರಿಗೆ ಬರುವಾಗ ಸ್ಕೂಟರ್‌ ಒಂದು ಆತನಿಗೆ ಡಿಕ್ಕಿ ಹೊಡೆದು, ಎಡಗಾಲು ಮುರಿಯಿತು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಕಾಲಿಗೆ ಪ್ಲಾಸ್ಟರ್‌ ಹಾಕಿ ಮಲಗಿಸಿದರು. ರಾತ್ರಿ ೮ ಘಂಟೆಗೆ ಆತ ಒಂದೇ ಸಮನೆ ಕಿರಿಚಿಕೊಳ್ಳಲು ಶುರು ಮಾಡಿದ. ಭಯದಿಂದ ಅವನ ಮುಖ ವಿಕಾರವಾಗಿತ್ತು. ಕೈ ಕಾಲುಗಳು ಥರಥರನೆ ನಡುಗುತ್ತಿದ್ದವು. ಅಲ್ಲಿ ನೋಡಿ ಎಷ್ಟೊಂದು ಜನ ಚಾಕು, ಚೂರಿ, ದೊಣ್ಣೆಗಳನ್ನು ಹಿಡಿದು ನಿಂತಿದ್ದಾರೆ. ಅವರ ಪಕ್ಕದಲ್ಲಿ ಕೊಂಬು, ಕೋರೆ ಹಲ್ಲುಗಳಿರುವ ರಾಕ್ಷಸರೂ ನಿಂತಿದ್ದಾರೆ. ಎಲ್ಲರೂ ಇಲ್ಲಿಂದ ಓಡಿ ಬಚಾವಾಗಿ ಎಂದು ಒದರಲು ಪ್ರಾರಂಭಿಸಿದ. ಇತರರು ಆತನನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದಂತೆ ಆತ ಓಡಿಹೋಗಿ, ನರ್ಸ್‌ ಕುಳಿತುಕೊಳ್ಳುವ ರೂಮಿಗೆ ಸೇರಿಕೊಂಡು ಬಾಗಿಲು ಹಾಕಿಕೊಂಡ. ಯಾರೂ ನನ್ನ ಹತ್ತಿರ ಬರಬೇಡಿ. ಬಂದರೆ ನಿಮ್ಮನ್ನು ಕೊಲ್ಲುತ್ತೇನೆ ಎಂದು ಕೂಗುತ್ತಿದ್ದ. ಅದೃಷ್ಟಕ್ಕೆ ಆ ರೂಮಿಗೆ ಮತ್ತೊಂದು ಬಾಗಿಲಿತ್ತು. ಅದನ್ನು ತೆರೆದು ಅವನನ್ನು ಹಿಡಿದು ವೈದ್ಯರು ಶಮನಕಾರಿ ಇನ್‌ಜೆಕ್ಷನನ್ನು ಕೊಟ್ಟರು. ಆಮೇಲೆ ಪ್ರತಿ ನಾಲ್ಕು ಘಂಟೆಗೊಮ್ಮೆ ಅದೇ ಇನ್‌ಜೆಕ್ಷನನ್ನು ಕೊಟ್ಟ ಮೇಲೆ ಎರಡು ದಿನಗಳ ನಂತರ, ಆತ ಯಥಾಸ್ಥಿತಿಗೆ ಮರಳಿದ. ಆ ಅವಧಿಯಲ್ಲಿ ಅವನಿಗೆ ಆಹಾರವನ್ನು ಮೂಗಿನ ಮೂಲಕ ಹಾಕಿದ ನಳಿಕೆಯ ಮುಖಾಂತರ ಕೊಡಲಾಯಿತು. ‘ಡಾಕ್ಷರೇ ಆತ ಈ ರೀತಿ ಹುಚ್ಚು ಹಿಡಿದಂತೆ, ಸನ್ನಿ ಹಿಡಿದವನಂತೆ ಆಡಲು ಏನು ಕಾರಣ? ಆಕ್ಸಿಡೆಂಟ್‌ನಲ್ಲಿ ಮಿದುಳಿಗೇನಾದರೂ ಪೆಟ್ಟು ಬಿದ್ದಿದೆಯೇ ಎಂದು ಮನೆಯವರು ಹೇಳಿದಾಗ, ವೈದ್ಯರು ‘ಹಾಗೇನೂ ಇಲ್ಲ. ಪೆಟ್ಟು ಬಿದ್ದಿರುವುದು ಕಾಲಿಗೆ ಮಾತ್ರ. ತಲೆಗೆ ಸ್ವಲ್ಪವೂ ಏಟಾಗಿಲ್ಲ. ಅದಿರಲಿ ಭಾಸ್ಕರ ಕುಡಿಯುತ್ತಾನೆಯೇ? ಎಂದು ಕೇಳಿದರು. ‘ಅಯ್ಯೋ ಆತ ಊಟವಿಲ್ಲದಿದ್ದರೂ ಇರಬಲ್ಲ, ಕುಡಿತವಿಲ್ಲದಿದ್ದರೆ ಇರಲಾರ. ಸಂಜೆ ಕೆಲಸ ಮುಗಿಯುತ್ತಿದ್ದಂತೆ ಆತ ನೇರವಾಗಿ ಹೋಗುವುದು ಅರಾಕ್ ಶಾಪಿಗೆ ಅಥವಾ ಬಾರಿಗೆ ಎಂಬ ಉತ್ತರ ಬಂತು. ಭಾಸ್ಕರ ಹಿಂದೆಗೆತದ ಚಿಹ್ನೆಗಳಿಂದ ಬಳಲಿ ನಡುಕ ಸನ್ನಿ (ಡಿಲಿರಿಯಂ ಟ್ರೆಮನ್ಸ್‌)ಗೆ ತುತ್ತಾಗಿದ್ದುದು ಸ್ಪಷ್ಟವಾಗಿತ್ತು. ಯಾವ ವ್ಯಕ್ತಿ ಆಲ್ಕೋಹಾಲ್ ಪಾನೀಯದ ಮೇಲೆ ದೈಹಿಕ ಅವಲಂಬನೆಯನ್ನು ಹೊಂದಿರುತ್ತಾನೋ ಆತ ಒಂದು ದಿನ ಸೂಕ್ತ ಪ್ರಮಾಣದಲ್ಲಿ ಆಲ್ಕೋಹಾಲ್‌ ಸೇವನೆ ಮಾಡದಿದ್ದರೆ, ದೇಹ/ ನರಮಂಡಲ ತೀವ್ರ ರೀತಿಯಲ್ಲಿ ಪ್ರತಿಭಟಿಸುತ್ತದೆ. ಈ ಪ್ರತಿಭಟನೆಯ ರೂಪವೇ ಹಿಂದೆಗೆತದ ಚಿಹ್ನೆಗಳು. ಕೈಕಾಲು, ಶರೀರ ನಡುಗಲು ರಾರಂಭಿಸುತ್ತವೆ. ಪ್ರಜ್ಞಾಸ್ಥಿತಿಯಲ್ಲಿ ವ್ಯತ್ಯಾಸವಾಗುತ್ತದೆ. ವ್ಯಕ್ತಿ ಗೊಂದಲಮಯವಾಗ ಇತರರನ್ನು ಸ್ಥಳ ಮತ್ತು ವೇಳೆಯನ್ನು ಗುರುತಿಸಲು ವಿಫಲವಾಗುತ್ತಾನೆ. ಆತ ಭ್ರಮಾಧೀನನಾಗುತ್ತಾನೆ. ಆತನಿಗೆ ಶೂನ್ಯದಲ್ಲಿ ಧ್ವನಿಗಳು ಕೇಳಿಸುತ್ತವೆ. ದೃಶ್ಯಗಳು ಕಾಣುತ್ತವೆ. ಮೈಮೇಲೆ ಏನೋ ಹರಿದಾಡಿದಂತೆ/ ಕಚ್ಚಿದಂತೆ ಭಾಸವಾಗುತ್ತದೆ. ಸುತ್ತಲಿ ಜನ/ ವಸ್ತು ಪರಿಸರ ಭಯಾನಕವಾಗಿ/ ವಿಚಿತ್ರವಾಗಿ ಕಾಣತೊಡಗುತ್ತದೆ. ತಾನು ಅಪಾಯದಲ್ಲಿದ್ದೇನೆ ಎಂದು ಆತ ನಂಬಬಹುದು. ಹೀಗಾಗಿ ಆತನ ಮಾತು ಮತ್ತು ವರ್ತನೆ ವಿಚಿತ್ರವಾಗಿ/ ಅಸಂಬದ್ಧವಾಗುತ್ತದೆ. ಬುದ್ಧಿಭ್ರಮೆಗೀಡಾದವನಂತೆ ಕಾಣುತ್ತಾನೆ. ಈ ಸ್ಥಿತಿಯನ್ನು ನಡುಕ ಸನ್ನಿ ಎಂದು ಕರೆಯುತ್ತಾರೆ. ಇದೊಂದು ವೈದ್ಯಕೀಯ ತುರ್ತು ಸ್ಥಿತಿ. ತತ್‌ಕ್ಷಣ ವೈದ್ಯಕೀಯ ನೆರವು ಚಿಕಿತ್ಸೆ ದೊರಕದಿದ್ದರೆ, ಪ್ರಾಣಕ್ಕೂ ಅಪಾಯವಾಗಬಹುದು.

ಕಾರ್ಸಕಾಫ ಚಿತ್ತವಿಕಲತೆ:

ಇದೊಂದು ತೀವ್ರ ರೀತಿಯ ಮಾನಸಿಕ ಕಾಯಿಲೆ. ಇದರಲ್ಲಿ ಮುಖ್ಯವಾಗಿ ರೋಗಿ ಇತ್ತೀಚಿನ ನೆನಪನ್ನು ಕಳೆದುಕೊಳ್ಳುತ್ತಾನೆ. ಉದಾಹರಣೆಗೆ ಬೆಳಿಗ್ಗೆ ಮಾಮೂಲಿನಂತೆ ಉಪಹಾರ ಮಾಡಿದವ ಹತ್ತು ಘಂಟೆಯ ವೇಳೆಗೆ ಹೆಂಡತಿಯನ್ನು ಕರೆದು ಏನೇ ಇಷ್ಟು ಹೊತ್ತಾದರೂ ನನಗೆ ತಿಂಡಿ ಕೊಡಬೇಕೆಂಬ ಜ್ಞಾನ ಬೇಡವೇ ನಿನಗೆ. ನಾನೆಂದರೆ ನಿನಗೆ ಇಷ್ಟೊಂದು ಅಸಡ್ಡೆಯೇ ಎಂದು ಜೋರು ಮಾಡಬಹುದು. ಪ್ರತಿ ದಿನ ತನ್ನನ್ನು ನೋಡಲು ಬರುವ ಗೆಳೆಯನನ್ನು ಏನಯ್ಯಾ ಮಹಾನುಭಾವ, ನಿನ್ನನ್ನು ನೋಡಿ ಒಂದು ವಾರವಾಯಿತಲ್ಲ ಎಲ್ಲಿ ಹೋಗಿದ್ದೆ? ಎಂದು ಕೇಳಬಹುದು. ಈ ಬಗೆಯ ಮರೆವಿನ ಜೊತೆಗೆ ಆತ ಭ್ರಮಾಧೀನನಾಗಬಹುದು. ಚಿಕ್ಕ ಆಕಾರದ ಮನುಷ್ಯರನ್ನು ಪ್ರಾಣಿಗಳನ್ನು ಆತ ಕಾಣ ತೊಡಗಬಹುದು. ಸರಿಯಾಗಿ ನಿದ್ರೆ ಮಾಡದೆ, ಆಹಾರ ಸೇವಿಸದೆ ತನ್ನ ಸ್ವಚ್ಛತೆ ಬಗ್ಗೆ ಗಮನ ಕೊಡದೇ ಹೋಗಬಹುದು. ಕಾಲಕ್ರಮೇಣ ಅವನ ಸ್ಥಿತಿ ಹದಗೆಡುತ್ತದೆ. ಪರಿಧಿಯ ನರತಂತುಗಳು ಉರಿಯೂತಕ್ಕೆ ಒಳಗಾಗುತ್ತವೆ ತತ್ಫಲವಾಗಿ ಕೈಗಳು, ಪಾದಗಳು ಜೋಮು, ಮರಗಟ್ಟಿದಂತಾಗುತ್ತವೆ. ಕೊನೆಗೆ ಪ್ರಜ್ಞಾಸ್ಥಿತಿಯಲ್ಲೂ ವ್ಯತ್ಯಾಸವಾಗಿ ನಡುಕ ಸನ್ನಿಯೂ ಕಾಣಿಸಿಕೊಳ್ಳಬಹುದು.

ವರ್ನಿಕೆಯ ಸ್ಥಿತಿ:

ಈ ಸ್ಥಿತಿ ಅಪರೂಪದ್ದಾದರೂ, ತೀವ್ರ ಬಗೆಯದಾಗಿದ್ದು ರೋಗಿಯನ್ನು ನರಳಿಸುತ್ತದೆ. ಕಾರ್ಸಕಾಫನ ಚಿತ್ತವಿಕಲತೆಯ ಲಕ್ಷಣಗಳ ಜೊತೆಗೆ ವ್ಯಕ್ತಿ ನೇರವಾಗಿ, ಸಮತೋಲನದಿಂದ ನಡೆಯಲಾರ. ಕೈಕಾಲುಗಳನ್ನು ಹೊಂದಾಣಿಕೆಯಿಂದ ಉಪಯೋಗಿಸಲಾರ. ಅಲ್ಲದೆ, ಕಣ್ಣು ಗುಡ್ಡೆಗಳನ್ನು ಚಲಿಸುವ ಮಾಂಸಖಂಡಗಳು ನಿಷ್ಕ್ರಿಯಗೊಳ್ಳುವುದರಿಂದ ದೃಷ್ಟಿ ದೋಷ ಬರುತ್ತದೆ. ಈ ಸ್ಥಿತಿಗೆ ಮುಖ್ಯ ಕಾರಣ ಬಿ೧ ವಿಟಮಿನ್ ಕೊರತೆ. ಆಲ್ಕೋಹಾಲ್‌ ಸೇವಿಸುವವರು ಸಾಮಾನ್ಯವಾಗಿ ಈ ವಿಟಮಿನ್ ಕೊರತೆ ತುತ್ತಾಗುವುದು. ಗಮನಾರ್ಹ ಸಂಗತಿ.

ಆಲ್ಕೋಹಾಲ್ಮತಿಹೀನ ಸ್ಥಿತಿ:

ಕೊನೆ ಕೊನೆಗೆ ವ್ಯಕ್ತಿ ಆಲ್ಕೋಹಾಲ್‌ ಸೇವನೆಯಿಂದಾಗಿ ತನ್ನೆಲ್ಲ ಮಾನಸಿಕ ಶಕ್ತಿ ಚತುರತೆಗಳನ್ನು ಕಳೆದುಕೊಳ್ಳುತ್ತಾನೆ. ನೆನಪು, ಬುದ್ಧಿಶಕ್ತಿ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಳಾಗುವುದರ ಜೊತೆಗೆ ದೈನಂದಿನ ಕೆಲಸ-ಕಾರ್ಯಗಳನ್ನು ಮಾಡಲು ಬೇಕಾದ ಕೌಶಲಗಳೂ ಉಳಿಯುವುದಿಲ್ಲ. ಈ ಸ್ಥಿತಿಯನ್ನು ಮತಿಹೀನ ಸ್ಥಿತಿ ಅಥವಾ ಡೆಮೆನ್‌ಷಿಯಾ ಎಂದು ಕರೆಯಲಾಗುತ್ತದೆ.

ಹೀಗೆ ಹಲವು ಬಗೆಯ ಮಾನಸಿಕ ಕಾಯಿಲೆಗಳು ಎಡೆ ಮಾಡಿಕೊಡುತ್ತದೆ.

ನೆನಪಿಡಿ: ಪ್ರಾರಂಭದಲ್ಲಿ ಆಲ್ಕೋಹಾಲ್ ನಿಮ್ಮನ್ನು ಆಕರ್ಷಿಸುತ್ತದೆ. ಚಿಂತೆ ಮರೆಸಿ, ಖುಷಿಯ ಭ್ರಮೆಯನ್ನುಂಟು ಮಾಡಿ, ಮತ್ತಿನ ನಿದ್ರೆ ಬರಿಸಿ, ಭಂಡ ಧೈರ್ಯವನ್ನು ಕೊಟ್ಟು ನಿಮ್ಮನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆ. ಆದ್ದರಿಂದ ಎಚ್ಚರಿಕೆ. ಅದನ್ನು ದೂರವಿಡಿ, ನಿಮ್ಮ ಮಿದುಳು ಮನಸ್ಸಿನ ಆರೋಗ್ಯವನ್ನು ಉಳಿಸಿಕೊಳ್ಳಿ.

 

(V) ಸ್ಕಿಜೋಫ್ರೀನಿಯಾ/ ಹುಚ್ಚು ಕಾಯಿಲೆಇದೂ ಮಿದುಳಿನ ರೋಗವೇ!

ಮನುಷ್ಯನನ್ನು ಕಾಡುವ ಪ್ರಮುಖ ರೋಗಗಳಲ್ಲಿ ಸ್ಕಿಜೋಫ್ರೀನಿಯಾ ಅಥವಾ ಇಚ್ಚಿತ್ತ ವಿಕಲತೆಯೂ ಒಂದು. ಜನಸಂಖ್ಯೆಯ ಶೇಕಡಾ ೦.೫ ರಷ್ಟು ಮಂದಿಯಲ್ಲಿ ಕಾಣಿಸಿಕೊಳ್ಳುವ ಈ ರೋಗದಲ್ಲಿ ಬುದ್ಧಿ ಭ್ರಮಣೆ ಕಾನಿಸುತ್ತದೆ. ಪರಿಸರವನ್ನು  ಯಥಾವತ್ತಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಅಸ್ತವ್ಯಸ್ಥಗೊಳ್ಳುತ್ತದೆ. ರೋಗಿ ತರ್ಕಬದ್ಧವಾಗಿ, ಸರಾಗವಾಗಿ ಆಲೋಚಿಸಲಾರ. ತಪ್ಪಾದ, ಅವಾಸ್ತವಿಕವಾದ ನಂಬಿಕೆಗಳನ್ನು ಹೊಂದಿದ್ದು ಅವುಗಳ ಪ್ರಕಾರವೇ ನಡೆದುಕೊಳ್ಳುತ್ತಾನೆ. ಉದಾಹರಣೆಗೆ: ಹೆಂಡತಿ ತನಗೆ ವಿಷವಿಕ್ಕುತ್ತಾಳೆ ಎಂದು ನಂಬಿ, ಆಕೆ ನೀಡುವ ಆಹಾರವನ್ನು ರೋಗಿ ಉಣ್ಣದಿರಬಹುದು. ತಾನು ಹೊರಗೆ ಬಂದರೆ ತನ್ನನ್ನು ಯಾರೋ ಕೊಲ್ಲುತ್ತಾರೆ ಎಂದು ನಂಬಿದ ರೋಗಿ, ಮನೆ ಬಿಟ್ಟು ಹೊರಬರಲು ನಿರಾಕರಿಸಬಹುದು. (ಡೆಲೂಶನ್ಸ್‌- ಭ್ರಮಾತ್ಮಕ ನಂಬಿಕೆ) ರೋಗಿ ಸಮಯ, ವಿಷಯಕ್ಕೆ ತಕ್ಕಂತಹ ಭಾವನೆಗಳನ್ನು ತೋರಿಸಲಾರ. ವಿನಾಕಾರಣ ಕೋಪ, ಭಯ, ಸುಃಖ, ಸಂತೋಷವನ್ನು ಪ್ರಕಟಿಸಬಹುದು. ಇತರರಿಗೆ ಕೇಳಿಸದ ಧ್ವನಿ-ಮಾತು ರೋಗಿಗೆ ಕೇಳಿಸಬಹುದು. (ಹೆಲೂಸಿನೇಶನ್ಸ್‌- ವಿಭ್ರಮೆ). ಸುತ್ತ ಮುತ್ತ ನಡೆಯುವ ಘಟನೆಗಳನ್ನು ತಪ್ಪಾಗಿ ಅರ್ಥೈಸಬಹುದು. (ಇಲೂಶನ್‌- ಭ್ರಮೆ). ಈ ರೋಗಲಕ್ಷಣಗಳಿಂದಾಗಿ ರೋಗಿಯ ಮಾತು, ವರ್ತನೆ ವಿಚಿತ್ರವಾಗುತ್ತದೆ. ಆತ ಅಸಹಜವಾಗಿ, ಅಸಮಾನ್ಯವಾಗಿ, ತೊಂದರೆದಾಯಕ ಅಥವಾ ಅಪಾಯಕಾರಿಯಾಗಿ ನಡೆದುಕೊಳ್ಳಬಹುದು. ತನ್ನ ಬೇಕು ಬೇಡಗಳನ್ನು ನಿರ್ಲಕ್ಷಿಸಬಹುದು. ಸರಿಯಾಗ ಊಟ ಮಾಡುವುದಿಲ್ಲ. ನಿದ್ರೆ ಮಾಡುವುದಿಲ್ಲ. ದೇಹದ ಸ್ವಚ್ಛತೆ ಅಲಂಕಾರವನ್ನು ಗಮನಿಸುವುದಿಲ್ಲ. ತನ್ನ ಕೆಲಸ-ಕರ್ತವ್ಯಗಳನ್ನು ಮಾಡುವುದಿಲ್ಲ. ಸಮಾಜದಿಂದ ಹುಚ್ಚನೆಂಬ ಬಿರುದು ಪಡೆಯುತ್ತಾನೆ.

ಈ ರೋಗ ೧೫ ರಿಂದ ೩೦ ವರ್ಷ ವಯಸ್ಸಿನವರಲ್ಲಿ ಸಾಮಾನ್ಯವಾಗಿ ನಿಧಾನ ಗತಿಯಲ್ಲಿ ಪ್ರಾರಂಭವಾಗುತ್ತದೆ. ಶೇಕಡಾ ೨೫ ರಷ್ಟು ಪ್ರಕರಣಗಳಲ್ಲಿ ರೊಗ ಥಟ್ಟನೆ ಪ್ರಾರಂಭವಾಗುತ್ತದೆ. ಸೋಲು, ನಷ್ಟ ಆಘಾತದಂತಹ ಜೀವನ ಘಟನೆಯ ನಂತರ ಕಾಣಿಸಿಕೊಳ್ಳಬಹುದು. ಸ್ತ್ರೀ-ಪುರುಷ, ಇಳಿವಯಸ್ಸು-ಮಧ್ಯಮ ವಯಸ್ಸು ಶ್ರೀಮಂತ ಬಡವ, ಹಳ್ಳಿಗ-ಪಟ್ಟಣಿಗೆ ಎಂಬ ಭೇದ ಈ ರೋಗಕಿಲ್ಲ. ಇದರಲ್ಲಿ ಹಲವು ಬಗೆಗಳಿವೆ.

. ಹೆಬಿಫ್ರಿನಿಕ್ ವಿಧ: ಆಲೋಚನೆ ಭಾವನೆ ತೀವ್ರವಾಗಿ ಅಸ್ತವ್ಯಸ್ತಗೊಂಡು, ರೋಗಿ ಬಹು ಬೇಗ ಪರಾವಲಂಬಿಯಾಗುತ್ತಾನೆ. ಅವರ ನಡೆನುಡಿ ವಿಚಿತ್ರವಾಗುತ್ತದೆ.

. ಕೆಟಟೋನಿಕ್ ವಿಧ: ರೊಗಿ ಜಡವಾಗಿ ಕುಳಿತಲ್ಲಿ ಕುಳಿತು, ಮಲಗಿದಲ್ಲಿ ಮಲಗಿ, ನಿಷ್ಕ್ರಿಯನಾಗಿರುತ್ತಾನೆ. ಅಥವಾ ಅತೀ ಚಟುವಟಿಕೆ, ಅಕ್ರಮಣಶೀಲತೆಯನ್ನು ತೋರಬಹುದು.

. ಪೆರನಾಯ್ಡ್ ವಿಧ: ಇತರರ ಬಗ್ಗೆ ಅತಿ ಸಂಶಯ, ತನ್ನ ಜೀವಕ್ಕೆ ಅಪಾಯವಿದೆ, ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ. ತಾನೊಬ್ಬ ಮಹಾನ್ ವ್ಯಕ್ತಿ ಇತ್ಯಾದಿ ಭ್ರಮಾತ್ಮಕ ನಂಬಿಕೆಗಳು ಪ್ರಮುಖ ಲಕ್ಷಣ.

. ಸರಳ ವಿಧ: ದಿನ ಕ್ರಮೇಣ ಜನರ ಸಂಪರ್ಕದಂದ ದೂರವಾಗುತ್ತಾ, ಯಾವೊಂದು ಉಪಯುಕ್ತ ಚಟುವಟಿಕೆಗಳಲ್ಲಿ ಭಾಗವಹಿಸದೇ, ನಿಧಾರಗಳನ್ನು ಮಾಡಲಾಗದೇ, ಕೆಲಸಕ್ಕೆ ಬಾರದ ಯೋಚನೆಗಳಲ್ಲಿ ತೊಡಗುತ್ತಾ ಕಾಲಕಳೆಯುತ್ತಾನೆ.

. ಅಕ್ಯೂಟ್ ವಿಧ: ಥಟ್ಟನೆ ಪ್ರಾರಂಭವಾಗಿ, ಭ್ರಮೆ-ವಿಭ್ರಮೆ-ಭ್ರಮಾತ್ಮಕ ನಂಬಿಕೆಗಳಿಂದ ರೋಗಿ ಬಳಲಿ ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತವೆ.

. ರೆಸಿಡ್ಯುಯಲ್ ವಿಧ: ಸ್ವಲ್ಪ ಕಾಲ ಮೇಲೆ ಕಾಣಿಸಿದ, ಯಾವುದೇ ವಿಧದ ಲಕ್ಷಣಗಳಿದ್ದು, ಅನಂತರ ರೋಗ ಲಕ್ಷಣಗಳ ತೀವ್ರತೆ ತಗ್ಗಿ ರೋಗಿ ತನ್ನ ಮೊದಲಿನ ಸಾಮರ್ಥ್ಯವನ್ನು ಪಡೆಯದೆ, ಸದಾ ನಿರಾಸಕ್ತಿ, ನಿರ್ಲಕ್ಷ್ಯ, ನಿರ್ಭಾವ, ಸೋಮಾರಿತನದಿಂದ ಇತರರಿಗೆ ಹೊರೆಯಾಗುತ್ತಾನೆ.

ಕಾರಣಗಳು: ಮಿದುಳಿನ ಅಪಕ್ಷ ಬೆಳವಣಿಗೆ

ಕಳೆದ ಹತ್ತು ವರ್ಷಗಳಲ್ಲಿ ನಡೆದ ಮಿದುಳಿನ ಅಧ್ಯಯನಗಳಿಂದ ತಿಳಿದುಬರುವ ಸ್ಪಷ್ಟ ಸಂಗತಿ ಏನೆಂದರೆ, ಸ್ಕಿಜೋಫ್ರೀನಿಯಾ ಖಂಡಿತವಾಗಿ ಒಂದು ಮಿದುಳಿನ ಕಾಯಿಲೆ. ಗರ್ಭಧಾರಣೆಯ ಅವಧಿಯಲ್ಲಿ ವಂಶವಾಹಿನಿಗಳ ವ್ಯತ್ಯಾಸದಿಂದಲೋ, ಮಿದುಳಿನ ರಚನೆಯ ಪ್ರೋಗ್ರಾಂನಲ್ಲಿ ಏನೋ ವ್ಯತ್ಯಾಸವುಂಟಾಗಿ, ಮಿದುಳಿನ ಮೇಲ್ಮೈಯ ವಿಕಾಸ ಕುಂಠಿತವಾಗುತ್ತದೆ. ಮೇಲ್ಮೈನ ಕಪೋಲ ಮತ್ತು ಫ್ರೀ-ಫ್ರಾಂಟಲ್ ಭಾಗದಲ್ಲಿ ಜೀವಕೋಶಗಳ ವಿಭಾಗೀಕರಣ ಸರಿಯಾಗಿ ಆಗುವುದಿಲ್ಲ ಎಂದು ತಿಳಿದು ಬರುತ್ತದೆ. ಫ್ರೀ ಫ್ರಾಂಟಲ್ ಮತ್ತು ಕಪೋಲ-ಲಿಂಬಿಕ್ ವ್ಯವಸ್ಥೆಯ ಸಂಪರ್ಕಗಳು ಸರಿ ಇಲ್ಲವೆಂದೂ ತಿಳಿದುಬರುತ್ತದೆ.

ಔಷಧಿಗಳು ಕೆಲಸ ಮಾಡುವ ರೀತಿಯನ್ನು ಗಮನಿಸಿ, ರೂಪುಗೊಂಡಿರುವ ಸಿದ್ಧಾಂತವೆಂದರೆ ಈ ರೋಗದಲ್ಲಿ ಡೋಪಮಿನ್ ನರವಾಹಕ ವ್ಯವಸ್ಥೆಯ ಈ ರಿಸೆಪ್ಟಾರ‍್ಸ್‌ ಅತಿ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಅವನ್ನು ಔಷಧ ಕಣಗಳು ಬ್ಲಾಕ್ ಮಾಡಿದಾಗ, ಸ್ಕಿಜೀಫ್ರೀನಿಯಾ ರೋಗಲಕ್ಷಣಗಳಾದ ಚಿತ್ತಭ್ರಮೆ, ತಪ್ಪು ನಂಬಿಕೆಗಳು ಮರೆಯಾಗುತ್ತವೆ. ಆದ್ದರಿಂದ ಅತಿ ಸಂವೇದನಾಶೀಲ ಡೋಪಮಿನ್ ವ್ಯವಸ್ಥೆ ಈ ಕಾಯಿಲೆಗೆ ಕಾರಣ ಎನ್ನಲಾಗಿದೆ.

ಧೀರ್ಘಕಾಲ ಸ್ಕಿಜೋಫ್ರೀನಿಯಾದಿಂದ ಬಳಲುವ ರೋಗಿಗಳಲ್ಲಿ ಮಿದುಳಿನ ಸ್ಕ್ಯಾನ್‌, ಎಂಆರ್‌ಐ ಚಿತ್ರಗಳನ್ನು ತೆಗೆದಾಗ, ಮಿದುಳಿನ ಕುಳಿಗಳು ದೊಡ್ಡದಾಗಿರುವುದೂ, ರೋಗಿಯ ವಯಸ್ಸಿಗೆ ಹೋಲಿಸಿದರೆ ಮಿದುಳಿನ ವಸ್ತು ಹೆಚ್ಚು ಸವೆದಿರುವುದೂ ಕಂಡುಬರುತ್ತದೆ.

ಸ್ಕಿಜೋಫ್ರೀನಿಯಾದಲ್ಲಿ ಮಿದುಳು ರೀತಿ ಬದಲಾವಣೆಗೊಳ್ಳಲು ಪ್ರೇರಣೆ ಏನು?

.ಅನುವಂಶಿಕವಾಗಿ ಬರುವ ಜನಿಕ ದೌರ್ಬಲ್ಯ: ಶೇಕಡಾ ೧೦ ರಷ್ಟು ರೋಗಿಗಳಲ್ಲಿ ಆ ಕುಟುಂಬದಲ್ಲಿ ಮತ್ತೊಬ್ಬರಿಗೆ ಈ ರೋಗ ಇದ್ದು ಅಥವಾ ಬರುವ ಸಂಭವ ಇರುತ್ತದೆ. ತಂದೆ-ತಾಯಿ ಇಬ್ಬರಿಗೂ ಈ ರೋಗವಿದ್ದರೆ, ಮಕ್ಕಳಿಗೆ ರೋಗ ಬರುವ ಸಂಭವ ಶೇಕಡಾ ೪೦. ಆದರೂ ಈ ರೋಗ ವಂಶಪಾರಂಪರ್ಯವಾಗಿ ಬರಲೇಬೇಕೆಂಬ ನಿಯಮವಿಲ್ಲ.

. ಅಹಿತಕರ ಬಾಲ್ಯ, ಗೊಂದಲ ಮೂಡಿಸುವ ತಂದೆತಾಯಿ: ಪೋಷಕರ ನಡೆ-ನುಡಿ, ಅನಾರೋಗ್ಯಕರ ಪರಿಸರ, ಈ ರೋಗ ಬರಲು ಪ್ರಕಟಗೊಳ್ಳಲು ಕಾರಣವಾಗಬಹುದು.

೩. ನಿಧಾನಗತಿಯಲ್ಲಿ ಹಾನಿಯುಂಟು ಮಾಡುವ ‘ವೈರಸ್‌’ಗಳ ಸೋಂಕು ಈ ರೋಗಕ್ಕೆ ಕಾರಣ ಎಂಬ ಊಹೆಯೂ ಇದೆ.

ಭೂತ ಪ್ರೇತ, ಮದ್ದು ಮಾಟ ಮಂತ್ರ, ಪೂರ್ವಜನ್ಮದ ಪಾಪಶೇಷ, ದೇವರ ಶಾಪದಿಂದ ಈ ರೋಗ ಬರುತ್ತದೆ ಎಂಬುದು ತಪ್ಪು ನಂಬಿಕೆ.

ಚಿಕಿತ್ಸೆ: ಸ್ಕಿಜೋಫ್ರೀನಿಯಾ ವಾಸಿಯಾಗುವಂತಹ ರೋಗ. ಹಲವು ಚಿಕಿತ್ಸಾ ವಿಧಾನಗಳಿಂದ ರೋಗ ಹತೋಟಿಗೆ ಬರುತ್ತದೆ.

. ಔಷಧಿಗಳು: ಪ್ರಧಾನ ಶಮನಕಾರಿಗಳಾದ ಕ್ಲೋರ್‌ಪ್ರೋಮಜಿನ್, ರಿಸ್ಪಿರಿಡಾನ್, ಹಲೋಪೆರಿಡಾಲ್ ನಂತಹ ಔಷಧಿಗಳು ಮತ್ರೆ, ಸೂಜಿಮದ್ದು ಹಾಗೂ ದ್ರವರೂಪದಲ್ಲಿ ಲಭ್ಯವಿದೆ. ಕೆಲವು ತಿಂಗಳುಗಳು ಅಥವಾ ಕೆಲವು ವರ್ಷಗಳಷ್ಟು ಕಾಲ, ಔಷಧಿಯನ್ನು ಬಿಡದೇ ಸೇವಿಸಬೇಕು.

.ವಿದ್ಯುತ್ ಕಂಪನ ಚಿಕಿತ್ಸೆ: ಆರರಿಂದ ಹತ್ತು ಬಾರಿ, ವಿದ್ಯುತ್ ಕಂಪನ ಚಿಕಿತ್ಸೆಯನ್ನು ಕೆಲವು ಆಯ್ದ ಪ್ರಕರಣಗಳಲ್ಲಿ ಕೊಡಲಾಗುತ್ತದೆ.

. ಚಟುವಟಿಕೆಉದ್ಯೋಗ ಚಿಕಿತ್ಸೆ: ವ್ಯಕ್ತಿ ಜಡನಾಗಲು, ಸೋಮಾರಿಯಾಗಲು ಬಿಡದೆ ಮನೆಗೆಲಸ ಅಥವಾ ಸರಳ ಉದ್ಯೋಗ ಮಾಡಿ, ಚಟುವಟಿಕೆಯಿಂದಿರಲು, ಸ್ವಾವಲಂಬಿಯಾಗಲು ತರಪೇತಿ, ಪ್ರೋತ್ಸಾಹ ಅವಕಾಶಗಳನ್ನು ಕೊಡಬೇಕು.

 

(vi) ಮೇನಿಯಾಖಿನ್ನತೆ ಕಾಯಿಲೆ

ಅವಧಿಗೊಂದಾವರ್ತಿ ಬರುವ ಬಂದರೆ ೩ ರಿಂದ ೧೨ ತಿಂಗಳವರೆಗೆ ಇರುವ ಈ ಕಾಯಿಲೆಯಲ್ಲಿ ಎರಡು ಹಂತಗಳಿವೆ. ಒಂದು ಹಂತವನ್ನು ಮೇಲಿಯಾ ಎಂದು ಕರೆದರೆ, ಇನ್ನೊಂದನ್ನು ಖಿನ್ನತೆ ಎಂದು ಕರೆಯುತ್ತಾರೆ. ಈ ಎರಡೂ ಹಂತಗಳಲ್ಲಿ ಮಿದುಳಿನಲ್ಲಿ ನರಕೋಶಗಳಲ್ಲಿ ಡೋಪಮಿನ್ ಹೆಚ್ಚಾಗಿರುತ್ತದೆ. ಇಲ್ಲವೇ ಕಡಿಮೆಯಾಗಿರುತ್ತದೆ. ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆಯನ್ನು ಬರದಂತೆ ತಡೆಗಟ್ಟುವ ಔಷಧಿಗಳಿವೆ. ಲಿಥಿಯಂ, ಕಾರ್ಬಮಜೆಪಿನ್, ವಾಲ್ಪ್ರೊಯೇಟ್ ಔಷಧಿಗಳು ಬಹಳ ಪರಿಣಾಮಕಾರಿ.

ಮೇನಿಯಾ ಎಂದರೇನು?

ಇಲ್ಲಿ ಎಲ್ಲವೂ ಹೆಚ್ಚು, ಎಲ್ಲವೂ ವಿಪರೀತ. ಖುಷಿ ಅಥವಾ ಕೋಪ ಹೆಚ್ಚು. ಮಾತು ಹೆಚ್ಚು. ಚಟುವಟಿಕೆಯೂ ಹೆಚ್ಚು. ತನ್ನ ಬಗ್ಗೆ ಜಂಬ ಕೊಚ್ಚಿಕೊಳ್ಳುವುದೂ ವಿಪರೀತ. ತಾನೇ ಬುದ್ಧಿವಂತ ತಾನೇ ಸೂಪರ್ ಮ್ಯಾನ್. ತನ್ನ ಕೈಲಾಗದ್ದು ಯಾವುದೂ ಇಲ್ಲ ಎಂದು ಹೇಳುತ್ತಾನೆ. ಇತರರೊಂದಿಗೆ ವಾದಿಸುತ್ತಾ, ಕಾಲು ಕೆರೆದು ಜಗಳ ತೆಗೆಯುತ್ತಾನೆ. ಊಟ, ನಿದ್ರೆ, ವಿಶ್ರಾಂತಿಯ ಬಗ್ಗೆ ಗಮನವಿರುವುದಿಲ್ಲ. ಅತಿ ಉದಾರಿಯಾಗಿ, ಹಣವನ್ನು ನೀರಿನಂತೆ ಖರ್ಚು ಮಾಡಬಹುದು. ಯಾವುದೇ ಉಪಯುಕ್ತ ಕೆಲಸ ಕಾರ್ಯ ಮಾಡದೇ, ತನ್ನ ಕರ್ತವ್ಯ ಜವಾಬ್ದಾರಿಗಳನ್ನು ಉಪೇಕ್ಷಿಸಬಹುದು. ಪರಿಚಿತರು, ಅಪರಿಚಿತರೆನ್ನದೆ ಎಲ್ಲರೊಡನೆ ಅತಿ ಸಲುಗೆ ತೋರಬಹುದು. ಸಭೆ ಸಮಾರಂಭಗಳಿಗೆ ಆಹ್ವಾನವಿಲ್ಲದೆ ನುಗ್ಗಬಹುದು. ಅಲ್ಪ ಪ್ರವೋಚನೆಗೆ ಆಕ್ರಮಣಕಾರೀ ವರ್ತನೆ ತೋರಿ, ಹಿಂಸಾಚಾರಕ್ಕೆ ಇಳಿಯಬಹುದು. ಮೇನಿಯಾ ರೋಗ ಉಗ್ರಮಟ್ಟದಲ್ಲಿ ರೋಗಿ ತನಗೂ ಇತರರಿಗೂ ಅಪಾಯಕಾರಿಯಾಗಬಲ್ಲ. ಮೇನಿಯಾ ಹತೋಟಿಗೆ ಬಂದ ನಂತರ ರೋಗಿ ಖಿನ್ನತೆಗೆ ಒಳಗಾಗಬಹುದು. ಮೇನಿಯಾ ಖಿನ್ನತೆ ಪುನರಾವರ್ತನೆಗೊಳ್ಳಬಹುದು.

ಖಿನ್ನತೆ ಕಾಯಿಲೆ ಎಂದರೇನು?

ಖಿನ್ನತೆ ಎಂಬುದು ಮಾಮೂಲಿನ ಬೇಸರವಲ್ಲ. ನಾವೆಣಿಸಿದ್ದು ಆಗದಿದ್ದಾಗ, ತೊಂದರೆ, ಕಷ್ಟಗಳು ಬಂದಾಗ ಬೇಸರವಾಗುತ್ತದೆ. ಧುಃಖವಾಗುತ್ತದೆ. ಆದರೆ ಸ್ವಲ್ಪಹೊತ್ತು ಅಥವಾ ಒಂದೆರಡು ದಿನಗಳಿದ್ದು ಮರೆಯಾಗುತ್ತದೆ. ಆದರೆ ಖಿನ್ನತೆ ಕಾಯಿಲೆ ಬಂದಾಗ ಈ ಬೇಸರ ದುಃಖದ ಭಾವನೆಗಳು ಹೆಚ್ಚೂ ಕಡಿಮೆ ಸದಾ ಇದ್ದು, ಎರಡು ವಾರಗಳು ಅಥವಾ ಹೆಚ್ಚಿನ ಅವಧಿ, ಕೆಲವೊಮ್ಮೆ ತಿಂಗಳುಗಟ್ಟಳೆ ನಮ್ಮನ್ನು ಕಾಡುತ್ತವೆ. ಅಥವಾ ಕೆಲವು ವಾರಗಳು, ತಿಂಗಳು ಕಾಲ ಇದ್ದು ಮರೆಯಾಗಿ ಮತ್ತೆ ಮತ್ತೆ ಬರುತ್ತದೆ.

ಖಿನ್ನತೆ ಕಾಯಿಲೆಯಿಂದಾಗಿ, ಜೀವನದ ಎಲ್ಲ ನಗು ನಲಿವು ಮರೆಯಾಗುತ್ತವೆ. ನಾವು ಅಸಹಾಯಕರಾಗುತ್ತೇವೆ, ನಾನು ಅಪ್ರಯೋಜಕ, ಕೆಲಸಕ್ಕೆ ಬಾರದವನು, ಯಾವ ಕೆಲಸ ಕರ್ತವ್ಯವನ್ನು ನಿಭಾಯಿಸಲಾರೆ ಎಂದು ಕೊಳ್ಳುತ್ತೇವೆ. ಒಳ್ಳೆಯ ದಿನಗಳು ಸುಖ ಸಂತೋಷ ಮತ್ತೆ ಬಾರವು ಎಂದು ನಿರಾಶರಾಗುತ್ತೇವೆ.

ಖಿನ್ನತೆ ಕಾಯಿಲೆ ಇದೆ ಎಂದು ಗುರುತಿಸುವುದು ಹೇಗೆ?

ನಮಗೆ ಅಥವಾ ನಮ್ಮ ಮನೆಯವರಿಗೆ ಬಂಧು ಮಿತ್ರರಲ್ಲಿ ಒಬ್ಬರಿಗೆ ಖಿನ್ನತೆ ಕಾಯಿಲೆ ಬಂದರೆ ಗುರುತಿಸುವುದು ಹೇಗೆ? ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಈ ಕೆಳಕಾಣುವ ಲಕ್ಷಣ/ ತೊಂದರೆಗಳಿವೆಯೇ ಗಮನಿಸಿ.

 • ಯಾವಾಗಲೂ ಬೇಸರ, ದುಃಖದ ಭಾವನೆ. ಇದರಿಂದಾಗಿ ಅಳುಬರುವುದು.
 • ಎಲ್ಲದರಲ್ಲೂ ನಿರಾಸಕ್ತಿ
 • ಹಿಂದೆ ಸಂತೋಷ, ಉತ್ಸಾಹಗಳನ್ನು ನೀಡುತ್ತಿದ್ದ ಚಟುಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ.
 • ಅಸಹಾಯಕ ಹಾಗೂ ನಿರಾಶಾಭಾವನೆ.
 • ನಾನು ಅಪ್ರಯೋಜಕ, ಯಾವ ಕೆಲಸವೂ ನನ್ನಿಂದಾಗದು ಇನ್ನೊಬ್ಬರಿಗೆ, ಮನೆಯವರಿಗೆ, ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ.
 • ನಗು-ನಲಿವು, ಯಶಸ್ಸು, ಒಳ್ಳೆ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು.
 • ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ.
 • ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು.
 • ತೂಕ ಕಡಿಮೆಯಾಗುವುದು.
 • ದೇಹದ ಚಲನ-ವಲನಗಳು ನಿಧಾನವಾಗುವುದು.
 • ಮನಸ್ಸಿನ ಆಲೋಚನೆ ನಿರ್ಧಾರ ಮಾಡುವ ಪ್ರಕ್ರಿಯೆಗಳೂ ನಿಧಾನವಾಗಿ, ವ್ಯಕ್ತಿ ಮಂಕಾಗುವುದು.
 • ಅಸ್ಪಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು, ಸುಸ್ತು, ನಿಶ್ಯಕ್ತಿ  ಕಾಣಿಸಿಕೊಳ್ಳುವುದು.
 • ಸಾಯುವ ಇಚ್ಛೆ, ಆತ್ಮಹತ್ಯೆಯ ಆಲೋಚನೆ, ಪ್ರಯತ್ನ.

ಖಿನ್ನತೆ ಕಾಯಿಲೆಯನ್ನು ಅಂತಿಮವಾಗಿ ನಿರ್ಣಯಿಸುವವರು ವೈದ್ಯರು. ಮೇಲೆ ಕಾಣಿಸಿದ ಲಕ್ಷಣಗಳಲ್ಲಿ ಮೂರಕ್ಕಿಂತ ಹೆಚ್ಚಿನ ಲಕ್ಷಣಗಳು ಯಾರಲ್ಲಾದರೂ ಇದ್ದರೆ ಅವರು ವೈದ್ಯರನ್ನು ಅಥವಾ ಮನೋವೈದ್ಯರನ್ನು ಕಾಣಬೇಕು.

ಖಿನ್ನತೆ ಕಾಯಿಲೆ ಏಕೆ ಬರುತ್ತದೆ?

ಅನೇಕ ಅಂಶಗಳು ಒಟ್ಟುಗೂಡಿದಾಗ, ಖಿನ್ನತೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕೆಲವು ಸಂಗತಿಗಳು, ಜೀವನದ ಘಟನೆಗಳು, ವ್ಯಕ್ತಿಯ ಮನೋಭಾವ, ಧೋರಣೆ ಮತ್ತು ಪರಿಸರಗಳು ಖಿನ್ನತೆಯನ್ನು ಪ್ರಚೋದಿಸುತ್ತವೆ. ಉದಾಹರಣೆಗೆ ನಿರೀಕ್ಷಿಸದ ದಿಡೀರ್ ಕಷ್ಟ ನಷ್ಟ, ಸೋಲು, ನಿರಾಶೆಗಳು, ಮೇಲಿಂದ ಮೇಲೆ ಬರುವ ಕಷ್ಟ-ನಷ್ಟಗಳು, ಸಾವು, ಅಗಲಿಕೆ, ಗುರಿ-ಉದ್ದೇಶಗಳು ಈಡೇರದಿರುವುದು. ಪ್ರೀತಿ ವಿಶ್ವಾಸಗಳ ಅಭಾವ, ವಿಪರೀತ ಟೀಕೆ ಟಿಪ್ಪಣಿಗಳು, ಅವಮಾನಗಳು, ದೀರ್ಘಕಾಲ ಕಾಡುವ ಅಥವಾ ಸಾಮಾಜಿಕ ಕಳಂಕ ತರುವ ಕಾಯಿಲೆಗಳು, ಅಸಾಧ್ಯ ನೋವು, ನರಳಿಕೆ ಮತ್ತು ಪರಾವಲಂಬನೆ ಹಾಗೂ ಸಾವನ್ನು ತರುವ ಕಾಯಿಲೆಗಳು, ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಅತೃಪ್ತ, ಕೆಲವು ಔಷಧಿಗಳು (ಮುಖ್ಯವಾಗಿ ಅಧಿಕ ರಕ್ತದೊತ್ತಡಕ್ಕೆ ಕೊಡುವ ಮಾತ್ರಗಳು, ಗರ್ಭ ನಿರೋಧಕ ಗುಳಿಗೆಗಳು) ಋತುಚಕ್ರ, ಋತುಬಂಧ, ಇಳಿವಯಸ್ಸು ಇತ್ಯಾದಿ.

ಶೇಕಡಾ ೧೦ ರಷ್ಟು ಪ್ರಕರಣಗಳಲ್ಲಿ ಖಿನ್ನತೆ ಅನುವಂಶಿಕವಾಗಿಯೂ ಬರುತ್ತದೆ.

ಖಿನ್ನತೆಯಲ್ಲಿ ಮಿದುಳಿನಲ್ಲಾಗುವ ವ್ಯತ್ಯಾಸಗಳೇನು?

ಮಿದುಳು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತದೆ. ಯಾವ ರೀತಿಯ ನ್ಯೂನತೆ-ಕೊರತೆ-ಹಾನಿ ಕಂಡುಬರುವುದಿಲ್ಲ. ನರಕೋಶಗಳು ಒಂದಕ್ಕೊಂದು ಕೂಡುವ ಸ್ಥಳಗಳಲ್ಲಿ (ಸೈನಾಪ್ಸ್‌) ನರವಾಹಕ ವಸ್ತುಗಳಾದ ಡೋಪಮಿನ್ ಮತ್ತು ಸೆರೋಟೋನಿನ್‌ಗಳ ಪ್ರಮಾಣ ಕಡಿಮೆ ಇರುತ್ತದೆ.

ಪರಿಸರದಲ್ಲಿ ವ್ಯಕ್ತಿಯ ಜೀವನದಲ್ಲಿ ಯಾವ ಕಷ್ಟ ನಷ್ಟಗಳಿಲ್ಲದಿದ್ದರೂ, ಮಿದುಳಿನಲ್ಲಾಗುವ ಈ ರಾಸಾಯನಿಕ ಬದಲಾವಣೆಯಿಂದ ತೀವ್ರ ಖಿನ್ನತೆ ಕಾಣಿಸಿಕೊಳ್ಳಬಹುದು. ಇದಕ್ಕೆ ಒಳಜನ್ಯ ಖಿನ್ನತೆ-ಎಂಡೋಜಿನಸ್ ಡಿಪ್ರೆಶನ್ ಎನ್ನುತ್ತಾರೆ.

ಖಿನ್ನತೆ ಕಾಯಿಲೆ ಯಾರಲ್ಲಿ ಹೆಚ್ಚು?

ವಿವಿಧ ಅಧ್ಯಯನಗಳ ಪ್ರಕಾರ, ಯಾವುದೇ ಸಮುದಾಯದಲ್ಲಿ ಕನಿಷ್ಠ ಶೇಕಡಾ ೧೦ ಜನರಿಗೆ ಖಿನ್ನತೆ ಕಾಯಿಲೆ ಇರುತ್ತದೆ. ಯಾವುದೇ ಚಿಕಿತ್ಸಾಲಯ ಆಸ್ಪತ್ರೆಗಳಲ್ಲಿ ವೈದ್ಯ ಸಹಾಯಕ್ಕಾಗಿ ಹೋಗುವ ರೋಗಿಗಳಲ್ಲಿ ಶೇಕಡಾ ೪೦ ರಿಂದ ೫೦ ರಷ್ಟು ಜನರಿಗೆ ಖಿನ್ನತೆ ಕಾಯಿಲೆ ಇರುತ್ತದೆ ಎಂದರೆ ಈ ಕಾಯಿಲೆಯ ಆಗಾಧತೆ ಅರ್ಥವಾಗುತ್ತದೆ. ಈ ಕಾಯಿಲೆ ಹೆಂಗಸರಲ್ಲಿ ಹೆಚ್ಚು. ಹದಿವಯಸ್ಸು ಮಧ್ಯ ವಯಸ್ಸು, ಇಳಿವಯಸ್ಸಿನವರಲ್ಲಿ ಹೆಚ್ಚು. ಇದಕ್ಕೆ ಬಡವ, ಶ್ರೀಮಂತ, ಗ್ರಾಮೀಣ, ನಗರ ಪ್ರದೇಶವೆಂಬ ಬೇಧ ಭಾವ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರಿಗೆ ಎಲ್ಲರಲ್ಲಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು.

ಖಿನ್ನತೆ ಕಾಯಿಲೆ ಹಚ್ಚಲು ಪರೀಕ್ಷೆಗಳಿವೆಯೇ?

ನಿರ್ದಿಷ್ಟ ಪರೀಕ್ಷೆಗಳಾವುವೂ ಇಲ್ಲ. ರೋಗಲಕ್ಷಣಗಳನ್ನು ಗಮನಿಸಿ ವೈದ್ಯರು ತಮ್ಮ ಅನುಭವದ ಮೇಲೆ ರೋಗ ನಿರ್ಣಯ ಮಾಡುತ್ತಾರೆ. ರೋಗ ಲಕ್ಷಣಗಳು, ಇತರ ಶಾರೀರಿಕ ಕಾಯಿಲೆಗಳಿಂದ ಬಂದದ್ದಲ್ಲ ಎಂದು ಖಾತ್ರಿ ಮಾಡಿಕೊಳ್ಳಲು ಮಾಮೂಲಿನ ರಕ್ತ ಪರೀಕ್ಷೆ, ಕ್ಷಕಿರಣ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಬಹುದು ಅಷ್ಟೇ. ಖಿನ್ನತೆಯ ಕಾಯಿಲೆಯ ಜೊತೆಗೆ ಇನ್ಯಾವುದಾದರೂ ಶಾರೀರಿಕ ಅಥವಾ ಮಾನಸಿಕ ರೋಗವಿದೆಯೇ ಎಂಬುದನ್ನು ಅವರು ಗಮನಿಸುತ್ತಾರೆ.

ಖಿನ್ನತೆಗೆ ಸರಿಯಾದ ಚಿಕಿತ್ಸೆ ಯಾವುದು?

. ಔಷಧಿಗಳು: ಇಮಿಪ್ರಮಿನ್, ಅಮಿಟ್ರಿಫ್ಟಲಿನ್, ಡಾತಿಪಿನ್, ನಾರ್‌ಟ್ರಿಪ್ಟಲಿನ್, ಪ್ಲೂಯಾಕ್ಸೆಟೀನ್, ಸಾರ್ಟ್ರಾಲಿನ್‌ಗಳು ಈಗ ಲಭ್ಯವಿದೆ. ಇವೆಲ್ಲ ಮಿದುಳಿನ ಮೇಲೆ ಪರಿಣಾಮ ಬೀರಿ, ಡೊಪಮಿನ್ ಮತ್ತು ಸೆರೋಟೊಮಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.

ಇವು ನಿದ್ರಾ ಮಾತ್ರಗಳಲ್ಲ, ಅಭ್ಯಾಸವನ್ನುಂಟು ಮಾಡುವುದಿಲ್ಲ. ಸುರಕ್ಷಿತವಾದ ಔಷಧಿಗಳು ಎಂಬುದನ್ನು ಗಮನಿಸಿ. ಕೆಲವು ಅಡ್ಡ ಪರಿಣಾಮಗಳಾಗಬಹುದು. ಬಾಯಿ ಒಣಗುವುದು, ಮಲಬದ್ಧತೆ, ಕಣ್ಣು ಮಂಜಾಗುವುದು, ತಲೆಸುತ್ತು, ನಿದ್ರೆ ಹೆಚ್ಚುವುದು, ತೂಕಡಿಕೆ, ಮೂತ್ರ ಬಂದ್ ಆಗುವುದು, ಇತ್ಯಾದಿ ವೈದ್ಯರಿಗೆ ತಿಳಿಸಿ.

ಔಷಧಿಗಳು ಕೆಲಸ ಮಾಡಿ, ಖಿನ್ನತೆಯ ಲಕ್ಷಣಗಳು ಕಡಿಮೆಯಾಗಲು, ಎರಡು ಮೂರು ವಾರಗಳು ಬೇಕಾಗಬಹುದು. ಸಹನೆ ಇರಲಿ.

ಔಷಧಿಗಳನ್ನು ಕನಿಷ್ಠ ೨ ತಿಂಗಳು ಸೇವಿಸಬೇಕು. ಎಷ್ಟು ಕಾಲ ಸೇವಿಸಬೇಕೆಂಬುದನ್ನು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಔಷಧಿ ಸೇವಿಸಬೇಕಾಗಿ ಬರಬಹುದು.

ಈ ಔಷಧಿ ಸೇವಿಸುವಾಗ ಇತರ ಕಾಯಿಲೆಗಳು ಬಂದರೆ ಬೇರೆ ಔಷಧಿ ಸೇವಿಸಲು ಅಡ್ಡಿ ಇಲ್ಲ. ಆದರೆ, ವೈದ್ಯರ ಉಸ್ತುವಾರಿ ಅಗತ್ಯ.

. ಆಪ್ತ ಸಲಹೆ, ಸಮಾಧಾನ: ರೋಗಿಯೊಂದಿಗೆ ಸ್ನಾಹಪೂರಕವಾಗಿ ಮಾತನಾಡಿ. ಆತನ ಕಷ್ಟ ಸುಖ ಸಮಸ್ಯೆಗಳನ್ನು ವಿಚಾರಿಸಿ, ಆಪ್ತ ಸಲಹೆ ಸಮಾಧಾನ ನೀಡುವುದು ಒಂದು ಮೌಲಿಕವಾದ ಚಿಕಿತ್ಸಾ ವಿಧಾನ. ಇದನ್ನು ವಾರಕ್ಕೆ ಎರಡು ಮೂರು ಸಲ-ಪ್ರತಿ ಸಲ ೩೦ ರಿಂದ ೪೦ ನಿಮಿಷಗಳ ಕಾಲ ಮಾಡಬೇಕಾಗುತ್ತದೆ. ವ್ಯಕ್ತಿಯ ಮನಸ್ಸನ್ನಾವರಿಸಿರುವ ನಕಾರಾತ್ಮಕ ಆಲೋಚನೆಗಳು, ತೀರ್ಮಾನಗಳನ್ನು ತೆಗೆದು, ಸಕಾರಾತ್ಮಕ ಹಾಗೂ ಉತ್ತೇಜನಾತ್ಮಕ ಆಲೋಚನೆಗಳನ್ನು, ತೀರ್ಮಾಗಳು ಬರುವಂತೆ ಮಾಡಬೇಕು. ಕಷ್ಟ-ನಷ್ಟಗಳನ್ನು ನಿಭಾಯಿಸಲು, ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಬೇಕು.

. ವಿದ್ಯುತ್ ಕಂಪನ ಚಿಕಿತ್ಸೆ: ಕೆಲವು ತೀವ್ರ ಪ್ರಕರಣಗಳಲ್ಲಿ ಆತ್ಮಹತ್ಯೆ ಅಪಾಯ ಹೆಚ್ಚಿರುವವರಲ್ಲಿ ವಾರಕ್ಕೆ ಮೂರು ಸಲ ವಿದ್ಯುತ್ ಕಂಪನ ಚಿಕಿತ್ಸೆ (E.C.T.) ಸಹಾಯಕಾರಿ. ಇದು ಸುರಕ್ಷಿತವಾದ ಚಿಕಿತ್ಸೆ.

 

(Vii) ಮಿದುಳಿನ ಕಾಯಿಲೆ ಎಂದು ಈಗ ಸಾಬೀತಾಗಿರುವ ಮಾನಸಿಕ ರೋಗಗೀಳು ಬೇನೆ

‘ನನ್ನದೊಂದು ಸಮಸ್ಯೆ ಇದೆ ಡಾಕ್ಟರೇ. ನನ್ನ ಮನಸ್ಸು ನನ್ನ ಹತೋಟಿಯಲ್ಲಿಲ್ಲ. ವಿಚಿತ್ರವಾದ ಆಲೋಚನೆಗಳು ಬೇಡ ಎಂದರೂ ಬರುತ್ತವೆ. ಉದಾಹರಣೆಗೆ ಯಾವುದೇ ಕೆಲಸ ಮಾಡುವ ಮೊದಲು ಒಂದರಿಂದ ಒಂಬತ್ತರವರೆಗೆ ಎಣಿಸಬೇಕೆನಿಸುತ್ತದೆ. ಎಣಿಸದಿದ್ದರೆ ಏನೋ ಕೆಡಕಾಗುತ್ತದೆ ಎನಿಸಿ, ಚಡಪಡಿಸುವಂತಾಗುತ್ತದೆ. ಹೀಗಾಗಿ ಸ್ನಾನ ಮಾಡುವ ಮೊದಲು, ತಿಂಡಿ ತಿನ್ನುವ ಮೊದಲು ಹೊರಗೆ ಹೋಗುವಾಗ, ಬಸ್ ಹತ್ತುವಾಗ, ಕಚೇರಿಯಲ್ಲಿ ಕುಳಿತು ಫೈಲ್ ನೋಡುವಾಗ, ಈ ಎಣಿಸುವ ಕೆಲಸವನ್ನು ಮಾಡಲೇಬೇಕಾಗುತ್ತದೆ. ಇದಲ್ಲದೆ ವಿಪರೀತ ಅನುಮಾನಗಳು ನನ್ನನ್ನು ಕಾಡುತ್ತವೆ. ಸ್ಕೂಟರ್‌ನಲ್ಲಿ ಹೋಗುವಾಗ ಪೆಟ್ರೋಲ್ ಮುಗಿದು ಹೋದರೆ, ಬ್ರೇಕ್‌ ಹಿಡಿಯದಿದ್ದರೆ ಎಂದು ಪದೇ ಪದೇ ಚೆಕ್ ಮಾಡುವಂತಾಗುತ್ತದೆ. ಬೆಳಿಗ್ಗೆ ತಾನೇ ಪೆಟ್ರೋಲ್ ತುಂಬಿಸಿರುತ್ತೇನೆ. ಸ್ವಲ್ಪ ಹೊತ್ತಾರ ಮೇಲೆ, ಪೆಟ್ರೋಲ್ ಲೀಕ್ ಆಗಿಬಿಟ್ಟಿರಬೇಕು, ಪಾರ್ಕಿಂಗ್ ಮಾಡಿದಾಗ ಯಾರೋ ಕದ್ದಿರಬಾರದೇಕೆನಿಸಿ, ಟ್ಯಾಂಕ್ ತೆಗೆದು ಚೆಕ್ ಮಾಡಲೇಬೇಕೆನಿಸುತ್ತದೆ. ಬಾತ್ ರೂಂನ ನಲ್ಲಿಯನ್ನು ನಿಲ್ಲಿಸಿದ್ದೇನೆಯೋ ಇಲ್ಲವೋ, ನನ್ನ ಹೆಂಡತಿ ಗ್ಯಾಸ್ ಸ್ವಚನ್ನು ಸರಿಯಾಗಿ ತಿರುಗಿಸಿದ್ದಾಳೆಯೋ ಇಲ್ಲವೋ, ಫ್ರಿಕ್‌ನ ಬಾಗಿಲನ್ನು ಸರಿಯಾಗಿ ಒಂದೆರಡು ಸಲ ಚೆಕ್ ಮಾಡಿದರೂ ಸಮಾಧಾನವಾಗುವುದಿಲ್ಲ. ನಿಮಗೆ ತಲೆ ಕೆಡುತ್ತಿದೆ ಎಂದು ರತ್ನ ಮೂದಲಿಸುತ್ತಾಳೆ. ನನಗೂ ಅದೇ ಭಯ ಶುರುವಾಗಿದೆ ಸಾರ್. ಎಲ್ಲಿ ನನಗೆ ಹುಚ್ಚು ಹಿಡಿದು, ಅಲೆಮಾರಿಯಾಗುತ್ತೇನೋ ಎಂಬ ಆಲೋಚನೆಯೂ ಬರುತ್ತದೆ. ಇದೇನು ಕಾಯಿಲೆಯೇ? ಇದಕ್ಕೆ ಚಿಕಿತ್ಸೆ ಉಂಟೇ?’ ಎಂದು ಆತಂಕದಿಂದ ಪ್ರಶ್ನಿಸಿದ ಶಿವಮೂರ್ತಿ.

* * *

‘ಇವಳ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಆಶ್ರಮದ ಎಲ್ಲ ಹುಡುಗಿಯರಿಗೆ, ರಮಾ ಒಂದು ದೊಡ್ಡ ಸಮಸ್ಯೆಯಾಗಿದ್ದಾಳೆ. ಮುಖ ತೊಳೆಯಲು ನಲ್ಲಿಯ ಬಳಿಗೆ ಹೋದರೆ, ಅರ್ಧ ಗಂಟೆಯಾದರೂ ಮುಖ ತೊಳೆಯುವ ಕೆಲಸ ಮುಗಿಯುವುದಿಲ್ಲ. ಊಟದ ತಟ್ಟೆ, ಕಾಫಿ ಲೋಟವನ್ನು ತೊಳೆಯಲು ಅವಳಿಗೆ ಕನಿಷ್ಠ ಹದಿನೈದು ನಿಮಿಷ ಬೇಕು. ಸ್ನಾನ ಮಾಡಲು ಬಚ್ಚಲು ಮನೆಗೆ ಹೋದರೆ ಎರಡು ಗಂಟೆಯಾದರೂ, ಈಚೆಗೆ ಬರುವುದಿಲ್ಲ. ಪದೇ ಪದೇ ಸೋಪು/ ಸಿಗೇಕಾಯಿ ಹಾಕುತ್ತಾಳೆ. ನೀರು ಸುರಿದುಕೊಳ್ಳುತ್ತಾಳೆ. ಏಕೆ ಹೀಗೆ ಮಾಡುತ್ತೀ ಎಂದರೆ, ಸ್ವಚ್ಛವಾಗಿರಬೇಡವೇ ಎನ್ನುತ್ತಾಳೆ. ಅವಳಿಗೆ ಒಂದೆರಡು ಸಲ ಸೋಪು ಹಾಕದಿದ್ದರೆ ಸಮಾಧಾನವಾಗುವುದಿಲ್ಲವಂತೆ. ಕನಿಷ್ಠ ಹತ್ತು ಸಲವಾದರೂ ಸೋಪು ಹಾಕಿ ತಿಕ್ಕಿ ತೊಳದರೆ, ನೆಮ್ಮದಿಯಂತೆ. ಮೊದಲೇ ನಮ್ಮ ಆಶ್ರಮದಲ್ಲಿ  ಬಾತ್‌ರೂಂಗಳು ಟಾಯ್ಲೆಟ್‌ಗಳ ಸಂಖ್ಯೆ ಕಡಿಮೆ, ಜನ ಹೆಚ್ಚು. ನೀರಿಗೂ ಅಭಾವವಿದೆ. ಈ ರಮಾ ಇರುವ ನೀರನ್ನೆಲ್ಲಾ ಖರ್ಚು ಮಾಡಿ, ಬೇರೆಯವರಿಗೆ ಒಂದು ತೊಟ್ಟು ನೀರಿಲ್ಲದಂತೆ ಮಾಡುತ್ತಾಳೆ. ಇದರಿಂದ ಆಶ್ರಮದಲ್ಲಿ ದಿನನಿತ್ಯ ಜಗಳ ರಂಪಾಟ’ ಎಂದರು ಅಬಲಾಶ್ರಮದ ನಿರ್ವಾಹಕಿ ಅಂಜನಾ.

* * *

ನನಗೆ ತುಂಬಾ ಭಯವಾಗುತ್ತದೆ ಡಾಕ್ಟರೇ. ನನಗೆ ಬಹಳ ಅಪಾಯಕಾರಿಯಾದಂತಹ ಯೋಚನೆಗಳೂ ಪದೇ ಪದೇ ಮನಸ್ಸಿನೊಳಕ್ಕೆ ಬರುತ್ತವೆ. ಅಡುಗೆ ಮನೆಗೆ ಹೋಗಿ ಅಲ್ಲಿ ಚಾಕು, ಈಳಿಗೆ ಮಣೆಯನ್ನು ನೋಡಿದರೆ, ಅದನ್ನು ಕೈಗೆತ್ತಿಕೊಂಡು ಯಾರನ್ನಾದರೂ ಚುಚ್ಚೋಣ, ಗಾಯ ಮಾಡೋಣ ಎನಿಸುತ್ತದೆ. ಗುಂಡು ಸೂಜಿ, ಪಿನ್ನು, ಸೂಜಿಯನ್ನು ಕಂಡಾಗ ಎತ್ತಿಕೊಂಡು ಕಣ್ಣಿಗೆ ತಿವಿಯೋಣ ಎನಿಸುತ್ತದೆ. ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ, ಓಡುವ ವಾಹನದಿಂದ ಕೆಳಕ್ಕೆ ಜಿಗಿಯೋಣ ಎನಿಸುತ್ತದೆ. ರಸ್ತೆಯ ಪಕ್ಕದಲ್ಲಿ ಹೋಗುತ್ತಿರ ಬೇಕಾದರೆ, ತತ್‌ಕ್ಷಣ ರಸ್ತೆಯ ಮಧ್ಯೆ ನಿಲ್ಲಬೇಕು ಅಥವಾ ಮಲಗಬೇಕು ಎನಿಸುತ್ತದೆ. ಯಾವುದಾದರೂ ಮಹಡಿ ಮನೆಯ ಮೇಲೆ ನಿಂತಿದ್ದಾಗ ಪಕ್ಕದಲ್ಲಿ ನಿಂತಿರುವವರನ್ನು ಕೆಳಕ್ಕೆ ತಳ್ಳಬೇಕು ಎನಿಸುತ್ತದೆ. ಹೀಗೆ ಅಸಂಬದ್ಧವಾದ ಆದರೆ, ಅಪಾಯಕಾರಿಯಾದ ವಿಚಾರಗಳು ಪದೇ ಪದೇ ಬಂದು ನನ್ನನ್ನು ಕಾಡುತ್ತದೆ. ಎಲ್ಲಿ ಆ ಆಲೋಚನೆಗಳನ್ನು ಕಾರ್ಯಗತ ಮಾಡಿಬಿಡುತ್ತೇನೋ ಎಂದು ದಿಗಿಲಾಗುತ್ತದೆ. ಪುಣ್ಯವಶಾತ್ ಇದುವರೆಗೆ ನಾನು ಯಾವ ಆಲೋಚನೆಯನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಆದರೆ ಮುಂದೇನಾಗುತ್ತದೋ ಎಂಬ ಭಯವಿದೆ. ಇದೇನು ಮಾನಸಿಕ ಕಾಯಿಲೆಯೇ ಎಂದಳು ವನಜಾ.

* * *

‘ಒಂದು ವರ್ಷದ ಹಿಂದೆ, ಪ್ರಯಾಣ ಮಾಡುವಾಗ ಒಂದು ಊರಿನ ಬಸ್ ನಿಲ್ದಾದ ಶೌಚಾಲಯಕ್ಕೆ ಹೋಗಿ, ಅಲ್ಲಿನ ಹೊಲಸನ್ನು ಕಂಡು ವಾಂತಿ ಬರುವಂತಾಯಿತು. ಆನಂತರ ನನ್ನ ಕಣ್ಣ ಮುಂದೆ ಅದೇ ಹೊಲಸಿನ ಚಿತ್ರ ಪದೇ ಪದೇ ಬರುತ್ತದೆ ಸಾರ್. ಊಟ ಮಾಡುವಾಗ, ಕೆಲಸ ಮಾಡುವಾಗ, ಪ್ರಯಾಣ ಮಾಡುವಾಗ ಯಾವಾಗೆಂದರೆ ಆವಾಗ ಈ ಹೊಲಸು ದೃಶ್ಯ ಕಾಣಿಸಿಕೊಂಡು ಅಸಹ್ಯವೆನಿಸುತ್ತದೆ. ನನಗೆ ಜೀವನವೇ ಬೇಸರವೆನಿಸಿಬಿಟ್ಟಿದೆ. ಈಗ ಎಷ್ಟು ಪ್ರಯತ್ನಪಟ್ಟರೂ ಆ ದೃಶ್ಯವನ್ನು ತೆಗೆಯಲು ಆಗುವುದಿಲ್ಲ. ಒಳ್ಳೆಯ ದೃಶ್ಯವನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ಈ ಕೆಟ್ಟ ದೃಶ್ಯಗಳು ಬರದಿರುವಂತೆ ಮಾಡಿ ಸಾರ್. ಇಲ್ಲದಿದ್ದರೆ, ಆತ್ಮಹತ್ಯೆಯೇ ನನಗೆ ಉಳಿದಿರುವ ದಾರಿ’ ಎಂದು ಗದ್ಗದ ಕಂಠದಿಂದ ನುಡಿದ ಪ್ರಭಾಕರ.

* * *

ಶಿವಮೂರ್ತಿ, ರಮಾ, ವನಜಾ, ಪ್ರಭಾಕರ ಇವರೆಲ್ಲ ಗೀಳು ಮನೋಬೇನೆಯಿಂದ ಬಳಲುತ್ತಿದ್ದಾರೆ. ಇದನ್ನು ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂದು ವೈದ್ಯ ಭಾಷೆಯಲ್ಲಿ ಕರೆಯಲಾಗುತ್ತದೆ. ಇದೇನೂ ಅಪರೂಪವಾದ ಮಾನಸಿಕ ಕಾಯಿಲೆ ಅಲ್ಲ. ಒಂದು ಸಾವಿರ ಜನಸಂಖ್ಯೆಯಲ್ಲಿ ಒಬ್ಬಿಬ್ಬರಿಗೆ ಈ ಕಾಯಿಲೆ ಇರುವ ಸಂಭವ ಇರುತ್ತದೆ. ಗಂಡಸರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಇದು ಸ್ವಲ್ಪ ಹೆಚ್ಚು. ಯಾವ ವಯಸ್ಸಿನಲ್ಲಾದರೂ ಇದು ಕಂಡುಬರಬಹುದಾದರೂ ಹದಿವಯಸ್ಸು ಮತ್ತು ವಯಸ್ಕರಲ್ಲಿ ಹೆಚ್ಚು. ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ, ಯಾವುದೇ ಆಲೋಚನೆ, ವಿಚಾರ, ದೃಶ್ಯ ಅಥವಾ ಅನುಮಾನ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ, ಆತನ ಮನಸ್ಸಿನೊಳಕ್ಕೆ ಪದೇ ಪದೇ ಬರುತ್ತಿರುತ್ತದೆ. ಈ ಆಲೋಚನೆ, ವಿಚಾರ, ದೃಶ್ಯ, ಅರ್ಥಹೀನ, ಅಸಂಬದ್ಧ ಅನಾವಶ್ಯಕ ಎಂದು ವ್ಯಕ್ತಿಗೆ ಗೊತ್ತು. ಅದು ಬರುವುದನ್ನು ಆತ ತಡೆಯಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಬೇಡದ ಈ ವಿಚಾರ ದೃಶ್ಯಗಳು ಆತನಿಗೆ ಅಹಿತಕರವಾಗಿರುತ್ತವೆ. ಆತಂಕ, ಖಿನ್ನತೆಯನ್ನುಂಟು ಮಾಡುತ್ತವೆ. ಪದೇ ಪದೇ ಕೆಲವು ಕೆಲಸ, ವರ್ತನೆಯನ್ನು ಪ್ರಕಟಿಸುತ್ತಾ, ಹೆಚ್ಚಿನ ಸಮಯವನ್ನು ಅದಕ್ಕೇ ವಿನಿಯೋಗಿಸಬೇಕಾಗುತ್ತದೆ. ಉದಾಹರಣೆಗೆ ಕೈ-ಮೈ ತೊಳೆಯುವುದು, ಮನೆ ವಸ್ತುಗಳನ್ನು  ಸ್ವಚ್ಛ ಮಾಡುವುದು, ಎಣಿಸುವುದು, ಪರೀಕ್ಷಿಸುವುದು, ಜೋಡಿಸುವುದು ಇತ್ಯಾದಿ.

ರಾಸಾಯನಿಕ ವಸ್ತುವಿನ ಏರುಪೇರು:

ಮಿದುಳಿನ ನರವಾಹಕ ವಸ್ತುಗಳಲ್ಲಿ ಒಂದಾದ ಸೆರೋಟೊನಿನ್‌ನ ಅಭಾವವೇ ಗೀಳು ಮನೋಬೇನೆಗೆ ಕಾರಣ ಎಂದು ಗೊತ್ತಾಗಿದೆ. ಇದು ಅನುವಂಶಿಕವಾಗಿ ಕೂಡ ಬರಬಹುದು. ಬಾಲ್ಯದಲ್ಲಿ ಅಭದ್ರತೆಯ ಭಾವನೆಗಳು, ತಂದೆ-ತಾಯಿಗಳ ಗೊಂದಲಮಯ ಪಾಲನೆ ಪೋಷಣೆ ಕ್ರಮಗಳು, ವ್ಯಕ್ತಿಯ ಅಂತರಾಳದ ದ್ವಂದ್ವಗಳೂ ಈ ಬೇನೆ ಬರಲು ಪ್ರೇರಕವಾಗಬಹುದು ಎಂಬ ವಾದ ಹಿಂದೆ ಇತ್ತು.

ವಿವಿಧ ಬಗೆಯ ಗೀಳು:

. ಆಕ್ರಮಣಕಾರಿ ಆಲೋಚನೆಗಳು: ಬೇರೆಯವರನ್ನೂ ತನ್ನನ್ನೂ ಹೊಡೆಯುವ, ಘಾಸಿಗೊಳಿಸುವ, ವಸ್ತುಗಳನ್ನು ವಿರೂಪಗೊಳಿಸುವ, ಹಾನಿಯುಂಟು ಮಾಡುವ, ಕೊಲ್ಲುವ ಆಲೋಚನೆ ಬಯಕೆಗಳು.

. ಕೊಳಕುಹೊಲಸಿನ ವಿಷಯಗಳು: ತನ್ನ ಶರೀರ ಮಲಿನವಾಗಿದೆ; ಧೂಳು, ಕೊಳಕಿನಿಂದ ತುಂಬಿದೆ, ರೋಗಾಣುಗಳು, ಮಲಮೂತ್ರಗಳು, ಕೆಟ್ಟ ಬೆವರು, ವೀರ್ಯ, ಋತುಸ್ರಾವ, ಕೀವು, ರಕ್ತ ಈ ವಿಷಯಗಳು ಪುನರಾವರ್ತನೆಯಾಗುವುದು.

. ಅಚ್ಚುಕಟ್ಟಿನ ವ್ಯವಸ್ಥೆ: ಹೀಗೆ ಇರಬೇಕೆಂಬ ಆದಮ್ಯ ಬಯಕೆ, ಶಿಸ್ತು, ಪ್ರತಿಯೊಂದು ವಸ್ತು ನಿರ್ದಿಷ್ಟ ಸ್ಥಳದಲ್ಲೇ ಇರಬೇಕು. ಅವುಗಳನ್ನು ಜೋಡಿಸಬೇಕು ಎಂಬ ಬಯಕೆಗಳು.

೪. ಸ್ವಚ್ಚ ಮಾಡುವ, ತೊಳೆಯುವ, ಒರೆಸುವ, ಉಜ್ಜುವ ಗೀಳು.

೫. ಎಣಿಸುವುದು, ಪರೀಕ್ಷಿಸುವುದು, ಸೂಕ್ಷ್ಮವಾಗಿ ಗಮನಿಸುವುದು.

೬. ದೃಶ್ಯಗಳು, ಬಿಂಬಗಳು, ದ್ವಂದ್ವಗಳು.

ಚಿಕಿತ್ಸೆ : ಗೀಳು ಮನೋಬೇನೆಗೆ ಪರಿಣಾಮಕಾರಿ ಚಿಕಿತ್ಸೆಗಳಿವೆ

. ಔಷಧಗಳು: ಫ್ಲೂಯಾಕ್ಸೆಟಿನ್, ಕ್ಲೋಮಿಪುಮಿನ್, ಬುಸ್ಪಿನ್‌ನಂತಹ ಖಿನ್ನತೆ ನಿವಾರಕ, ಶಮನಕಾರಿ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಪ್ರಮಾಣ ಎಷ್ಟೆಂದು ನಿರ್ಧರಿಸಿ ಸೇವಿಸಬೇಕು. ಹಲವಾರು ವರ್ಷಗಳ ಕಾಲ ಸೇವಿಸಬೇಕು. ಈ ಔಷಧಗಳು ಸುರಕ್ಷಿತವಾದುವು. ದೀರ್ಘಕಾಲ ತೆಗೆದುಕೊಳ್ಳಲು ಹಿಂಜರಿಯಬೇಕಿಲ್ಲ.

೨. ಮನೋ ಮತ್ತು ನಡವಳಿಕೆ ಚಿಕಿತ್ಸೆ: ಆಲೋಚನೆಗಳು ವಿಚಾರ ಬಂದಾಗ, ಅದರ ಪ್ರತಿಕ್ರಿಯೆಯಾಗಿ ಬರುವ ವರ್ತನೆಗಳನ್ನು ತಡೆಗಟ್ಟುವುದು. ಉದಾಹರಣೆಗೆ ಕೊಳಕಿದೆ, ಹೊಲಸಿದೆ ಎಂಬ ವಿಚಾರ ಬಂದಾಗ, ತೊಳೆಯಬೇಕು ಎಂಬ ವರ್ತನೆಯನ್ನು ತಡೆಯುವುದು. ವ್ಯಕ್ತಿಗೆ ಮತ್ತು ಮನೆಯವರಿಗೆ, ಈ ಕಾಯಿಲೆಯ ಸ್ವರೂಪವನ್ನು ವಿವರಿಸಿ, ಇದನ್ನು ಹತೋಟಿಗೆ ತರುವ ವಿಧಾನಗಳನ್ನು ವಿವರಿಸಲಾಗುವುದು. ಬೇಡದ ವಿಚಾರಗಳು/ ಅನುಮಾನಗಳು ಬಂದಾಗ, ಅವನ್ನು ಉದಾಸೀನತೆಯ  ಮೂಲಕ ತಿರಸ್ಕರಿಸುವುದು. ಮನಸ್ಸನ್ನು ಇತರ ಆಕರ್ಷಕ ಚಟುವಟಿಕೆಯತ್ತ ಹರಿಸುವುದು. ಏನಾದರೊಂದು ಚಟುವಟಿಕೆ ಮಾಡತ್ತಾ, ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಚಿಕಿತ್ಸೆಯ ಒಂದು ಭಾಗವಾಗುತ್ತದೆ. ಸಂಗೀತ, ಓದು, ಯೋಗ, ಧ್ಯಾನ, ತೋಟಗಾರಿಕೆ, ಕರಕುಶಲ ವಸ್ತುಗಳನ್ನು ತಯಾರಿಸುವುದು ಇತ್ಯಾದಿ ಆರೋಗ್ಯಕರ ಹವ್ಯಾಸಗಳು ಬಹಳ ಸಹಕಾರಿ.