ಲಂಬಾಣಿ ಸಂಸ್ಕೃತಿ ಒಂದು ಸಂಕೀರ್ಣ ಸಮುಚ್ಚಯ ಎಂದು ಹೇಳಲಾಗಿದೆ. ಸಂಕೀರ್ಣ ಸಮುಚ್ಚಯ ಎನ್ನುವಲ್ಲಿ ಎರಡು ಭಾಗಗಳಿವೆ. ಒಂದು ಸಂಕೀರ್ಣ, ಇನ್ನೊಂದು ಸಮುಚ್ಚಯ. ಸಂಕೀರ್ಣ ಎನ್ನುವಾಗ ಅದು ಸುಲಭವಾಗಿ ಹಿಡಿತಕ್ಕೆ ಸಿಕ್ಕದ ಮತ್ತು ಯಾವುದೇ ಮಾನದಂಡದಿಂದ ಅಳೆದರೂ ಉಳಿಯಬಹುದಾದ ಎನ್ನುವ ಅರ್ಥ ಬರಬಹುದು. ಆದ್ದರಿಂದ ಸಮುಚ್ಚಯ ಎನ್ನುವಲ್ಲಿ ರಂಗುರಂಗಿನ ಚಿತ್ರಕ್ಕೆ ಮುದವನ್ನು ಕೊಡುವ ಸಂತೋಷವನ್ನು ಒದಗಿಸುವ ಒಂದು ಸಂಪೂರ್ಣ ಗುಚ್ಚ ಎಂದಾಗಬಹುದು. ಆದ್ದರಿಂದ ಲಂಬಾಣಿ ಬದುಕು ರಾತ್ರಿಯ ನಂತರ ಬೆಳಗು, ಕತ್ತಲೆಯ ನಂತರ ಬೆಳಕು ಇರುವ ಹಾಗೆ, ಜೀವನದ ಸುಖ-ದುಃಖಗಳನ್ನು ಸಮಮಾಡಿ ಹಂಚಿಕೊಂಡು ಅನುಭವಿಸುವ ಮತ್ತು ಅದರಿಂದ ಸಂತೋಷವನ್ನು ಪಡೆಯುವ ವಸ್ತು ಎಂದಾಗುತ್ತದೆ. “ಸುಖೇ ದುಃಖೇ ಸಮೇ ಕೃತ್ವಾ” ಲಂಬಾಣಿ ಸಂಸ್ಕೃತಿಯು ಹಾಗೇನೆ ವರ್ಣಮಯವಾಗಿದ್ದು, ಮರುಕ್ಷಣದಲ್ಲಿ ದುಃಖಮಯವೂ ಆಗಬಹುದು.

“ತಾಂಡಾ ಸಾಂಸ್ಕೃತಿ”ಯೆನ್ನುವಲ್ಲಿ ಪ್ರತಿಯೊಂದು ಲಂಬಾಣಿ ತಾಂಡಾದ ಒಳ ಹೊರಗೆ ನಡೆಯುವ ಕಾರ್ಯಗಳೇ ಸಾಕ್ಷಿ. ಮನುಷ್ಯನ ಜಗಳವಂತೂ ಸರಿಯೇ. ಆದರೆ ಕೋಳಿ ಕಾಳಗದಿಂದ ಹಿಡಿದು, ಕೋಣ, ಹೋರಿ ಕಾಳಗದವರೆಗೂ ಇದರ ವ್ಯಾಪ್ತಿ. ಹೀಗಾಗಿ “ತಾಂಡಾ ಸಂಸ್ಕೃತಿ” ಮೇಲ್ನೋಟಕ್ಕೆ ಸ್ವಲ್ಪ ಒರಟು ಎನಿಸಿದರೂ ಅದು ತನ್ನ ಎಲ್ಲ ರಂಗುರಂಗಿನ ಗರಿಗೆದರಿದ ನವಿಲಿನ ಹಾಗೆ ಇರುತ್ತದೆ ಎಂದು ಹೇಳುವುದು ಸೂಕ್ತ. ಏಕೆಂದರೆ ಈ ತಾಂಡಾದಲ್ಲಿ ಒಮ್ಮೊಮ್ಮೆ ಸೇವಾಲಾಲರ ಪುರಾಣ, ಭಜನೆ ಮೇಳೆ ನಡೆದರೆ, ಕೆಲವೊಮ್ಮೆ ಜನಪದ ವೃತ್ತಿಗಾಯಕ “ಢಾಡಿ” ವೃತ್ತಿ ಗಾಯಕರ ಗಾಯನಗಳು ನಡೆಯುತ್ತವೆ. ಆದ್ದರಿಂದ “ತಾಂಡಾ ಸಂಸ್ಕೃತಿ” ಲಂಬಾಣಿ ಜನಾಂಗಕ್ಕೆ ಮಾತ್ರ ಸೀಮಿತವಾಗುತ್ತದೆ.

ಸಂಸ್ಕೃತಿ ನಿರ್ಮಾಣ ಎನ್ನುವುದು ಹಾಡ ಹಾಡುತ್ತ, ನೋಡ ನೋಡುತ್ತ ರೂಪಗೊಳ್ಳುವಂಥದ್ದು. ಆದರೆ ಇದು ಜೀವವಿಮುಖವಲ್ಲ. ಕಾರಣ “ತಾಂಡಾ ಸಂಸ್ಕೃತಿ”ಯೇ ಒಂದು ವಿಶಿಷ್ಟವಾದದ್ದು ಎಂದು ಹೇಳಬಹುದು. ಏಕೆಂದರೆ ಲಂಬಾಣಿ ಬುಡಕಟ್ಟಿಗೆ ದುಡಿಯುತ್ತ ಹಾಡುವುದೇ ಒಂದು ಉತ್ಸಾಹದ ಕಾಯಕ. ಹಾಗೆಂದು ಲಂಬಾಣಿ ಜನಾಂಗ ಆಧುನಿಕ ಜೀವನದ ಪ್ರಕ್ರಿಯೆಗಳಿಂದ ವಂಚಿತರಾದವರಲ್ಲ. ರಾಷ್ಟ್ರಪ್ರೇಮದ ಗೀತೆಗಳು ಲಂಬಾಣಿಗರಲ್ಲಿ ಲಭ್ಯವಾಗುತ್ತವೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯಸ್ಥರಾದ ತಿಲಕ ಗೋಖಲೆ, ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರೂ, ವಲ್ಲಭಭಾಯಿ ಪಟೇಲ, ಸುಭಾಸ್‌ ಚಂದ್ರ ಭೋಸ್ ಮುಂತಾದವರನ್ನು ಎಷ್ಟು ಹೊಗಳಿದರೂ ಕಡಿಮೆ ಎನ್ನುವ ರೀತಿಯಲ್ಲಿ ಇವರು ಇಂದಿಗೂ ಹಾಡುವುದನ್ನು ಕೇಳಬಹುದು. ವಿಶೇಷವಾಗಿ “ರಾಜನಾಳ ತಾಂಡಾ” ಮುಂತಾದ ಕಡೆಗಳಲ್ಲಿ “ಅವತಾರಿ ಮಹಾತ್ಮಾ ಗಾಂಧಿ” ಹಾಡನ್ನು ಎಷ್ಟೋ ಸಲ ಅನೇಕ ವಿದ್ವಾಂಸರು ಮತ್ತು ಪ್ರಾಧ್ಯಾಪಕರು ಸ್ಮರಿಸಿಕೊಂಡಿದ್ದುಂಟು. ಹಾಗೆಂದು ಬರಿ ಹೊಗಳುವುದಷ್ಟೇ ಇವರ ಕೆಲಸ ಎಂದು ಯಾರೂ ಭಾವಿಸಿಕೊಳ್ಳಬಾರದು. ದೋಷಗಳು ಕಂಡರೆ ಖಂಡಿಸುವುದು ಇವರ ಸ್ವಭಾವ. ಭಾರತಮಾತೆಯನ್ನು ಕುರಿತು ಅಪಾರ ಭಕ್ತಿ ಈ ಜನಾಂಗದವರಿಗಿದೆ. ಆದ್ದರಿಂದಲೇ ಈ ಬುಡಕಟ್ಟು ಇವತ್ತಿಗೂ ತಮ್ಮಮೌಖಿಕ ಪರಂಪರೆಯಲ್ಲಿಯೇ ಎಲ್ಲ ಹಾಡುಗಳನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಬಂದಿದ್ದಾರೆ. ಹೂನಾಸತಿಯಂಥ ಪತಿವ್ರತೆಯನ್ನು ಇವರು ಹಾಡುವ ಹಾಡನ್ನು ಕೇಳದವರಿಲ್ಲ. ಹಾಗೆಯೇ ಹಾಮು ಭುಕ್ಯಾ, ಮೀಟು ಭುಕ್ಯಾ, ಭೀಮಾ ನಾಯಕ, ಲಖಿತಶಹಾ ಬಂಜಾರಾ ಮುಂತಾದ ಸಾಂಸ್ಕೃತಿಕ ವೀರರನ್ನು ಕುರಿತು ಹಾಡದ ಬಾಯಿ ಇಲ್ಲ.

ಲಂಬಾಣಿ ಅಲೆಮಾರಿ ಜನಾಂಗದವರೂ ಇದು ತಕ್ಕ ಶಿಸ್ತು, ಕಲಾತ್ಮಕತೆ ರೂಢಿಸಿಕೊಂಡು ಬಂದ ಜನಾಂಗ. ಇದಕ್ಕೆ ಕಾರಣ ಇವರ “ಬದುಕೊಂದು ಚಿತ್ತಾರ”. ಬುಡಕಟ್ಟಿನಿಂದ ಬಂದ ಈ ಜನಾಂಗ ಮಾನವ ಜನಾಂಗಕ್ಕೆ ಒಂದು ಸಂಸ್ಕೃತಿ, ಶಿಸ್ತು, ಸಂಯಮ ಒದಗಿಸುವ ಒಂದು ಮಹೋನ್ನತ ಬುಡಕಟ್ಟು ಆಗಿದೆ. ಜನಾಂಗವೂ ಆಗಿದೆ. ಇವರು ಬದುಕುವಾಗ ಅಲೆಮಾರಿ, ಜೀವಿಸುವಾಗ ಬುಡಕಟ್ಟು. ಹೀಗಾಗಿ ಎರಡು ಬಗೆಯ ಬದುಕನ್ನು ಬಾಳಿದರು. ಇವರೊಂದು ಸುವ್ಯವಸ್ಥಿತ ಜನಾಂಗ. ಆದ್ದರಿಂದಲೇ “ಉರಿ ಬರಲಿ ಸಿರಿ ಬರಲಿ ಮಾನವ ಸೇವೆಯನ್ನು ಮಾಡುವ ಭಾಗ್ಯ ನಮಗಿರಲಿ” ಎಂದು ಲಂಬಾಣಿಗರು ಯಾವಾಗಲೂ ಹಾಡುತ್ತಾರೆ.

“ಕಾಮಕರನ ಜಗೋ ಗೋರಮಾಟಿ
ಭಗವಾನ ದೀಯ ಅಪಣೂನ ಬಾಟಿ  || ಪಲ್ಲ ||

ನೇಮ ನಿಷ್ಠಾತಿ ತಮಿ ಚಾಲಣು
ಕಾಯತತ್ವೇತಿ ಕಾಮ ಕರಣು
ಕಷ್ಟ ಸುಖೇನ ಸಮಾಳನ ಲೇಣು    || ೧ ||

ಮನಕ್ಯಾರೋ ಸೇವಾ ಅಪಣ ಕರಣು
ಛ ಜೇರ ಮಾಯಿ ಸುಖ-ದುಃಖ ದೇಕಣು
ಸುಖ ಸಂಪತ್ತೇರ ಲಾರ ನ ಲಾಗಣು || ೨ ||

ಅರ್ಥ : ಶ್ರಮಜೀವನದಲ್ಲಿ ಸಂತೃಪ್ತಿ ಕಂಡ ಲಂಬಾಣಿ ಬುಡಕಟ್ಟು, ಕಾಯಕದಿಂದ ಜೀವನ ಸಾಗಿಸಿದರೆ ಭಗವಂತ ನಮಗೆ ಅನ್ನದ ದಾರಿ ಮಾಡಿಕೊಡುತ್ತಾನೆ. ಜಗತ್ತಿನಲ್ಲಿ ಕಷ್ಟದಿಂದ ದುಡಿದು ಸಂಪಾದನೆ ಮಾಡಿ ಜೀವಿಸಬೇಕು. ಬಡತನ, ಸಿರಿತನ ಜೀವನದ ಏರಿಳಿತಗಳು, ಅದನ್ನು ನಿಭಾಯಿಸುವ ಸಾಮರ್ಥ್ಯ ನಮಗಿರಲಿ. ಮಾನವ ಸೇವೆಯೇ ಅತೀ ಮಹತ್ವದ್ದು. ಇದ್ದುದರಲ್ಲಿಯೇ ಸುಖ ಕಾಣಬೇಕು. ಸುಖ ಸಂಪತ್ತಿನ ಬೆನ್ನು ಹತ್ತಿದರೆ ಮನುಷ್ಯ ಉದ್ಧಾರ ಆಗುವುದಿಲ್ಲ – ಎಂದು ಈ ಪದ್ಯದಲ್ಲಿ ಹೇಳಲಾಗಿದೆ.

ಕಾರಣ ಇವರ ಹಾಡು ಸದಾ ನಾವು ನೆನಪಿಡಬೇಕಾದ ಸಂದರ್ಭವಿದೆ. ಮಾನವ ಸೇವೆಯೇ ನಮ್ಮ ಜೀವನದ ಗುರಿಯಾಗಿರಲಿ ಎನ್ನುವ ಸಂದೇಶವಿದೆ. ಅದನ್ನು ಈ ಜನಾಂಗ ನಿತ್ಯ ಪಠಿಸುತ್ತದೆ, ನಿತ್ಯ ಹಾಡುತ್ತದೆ. ಏಕೆಂದರೆ ಸೇವೆಯನ್ನು ಬಿಟ್ಟು, ಬೇರೆ ಆಸೆಗಳನ್ನು “ಲಂಬಾಣಿ ಬುಡಕಟ್ಟು” ಎಂದೂ ಬೆನ್ನಟ್ಟಿದವರಲ್ಲ. ಮಾನವ ಸೇವೆಯೇ ನಮ್ಮ ಗುರಿಯಾಗಿರಲಿ ಎಂದು ಹೇಳುವಾಗ, ಕೊನೆಯವರೆಗೂ ಇಂಥ ಸೇವೆಯನ್ನೇ ನಮಗೆ ಕರುಣಿಸು ಎಂದು ಪ್ರಾರ್ಥಿಸುವುದು ಅರ್ಥವಾಗುತ್ತದೆ. ಕಾರಣ “ಲಂಬಾಣಿ ಬುಡಕಟ್ಟು”, ಮಾನವ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡಂಥ ಬುಡಕಟ್ಟು. ಏಕೆಂದರೆ ಸೇವೆ ಎನ್ನುವುದು ಇವರ ಜೀವನದ ಉಸಿರು. ಲಂಬಾಣಿಗರು ಸುಖ ಸಂಪತ್ತನ್ನು ಬೆನ್ನಟ್ಟಿ ಹೋಗಲಿಲ್ಲ. ಇವರು ಬೆನ್ನಟ್ಟಿದ್ದು ಸೇವೆಯನ್ನು ಮಾತ್ರ. ಅದಕ್ಕೆ ಸೇವೆಗೆ ಸದಾಕಾಲ ಅವಕಾಶಗಳಿವೆ.

* * *