ಭಾರತೀಯ ಸಂಗೀತ ವಾಹಿನಿಯಲ್ಲಿ ಮುಖ್ಯವಾಗಿ ಎರಡು ಶೈಲಿಗಳಿವೆ. ಕರ್ನಾಟಕಿ ಹಾಗೂ ಹಿಂದುಸ್ತಾನಿ. ಕರ್ನಾಟಕಿ ಸಂಗೀತವು ಕಾಶ್ಮೀರ, ಪಂಜಾಬ, ಹರಿಯಾಣ, ದಿಲ್ಲಿಯಿಂದ ಹಿಡಿದು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಮತ್ತು ನಿಜಾಮ ಪ್ರಾಂತದ ಕೆಲ ಭಾಗಗಳಲ್ಲಿ ಪ್ರಚಾರದಲ್ಲುಂಟು. ಇದಲ್ಲದೇ ಒಂದು ಕಾಲದಲ್ಲಿ ಹಿಂದೂಸ್ತಾನದ ಭಾಗಗಳಾದ ಪಾಕೀಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿಯೂ ಹಿಂದೂಸ್ತಾನಿ ಸಂಗೀತ ಹರಡಿಕೊಂಡಿದೆ. ಹಿಂದೂಸ್ತಾನಿ ಸಂಗೀತ ಪದ್ಧತಿಯೇ ಹೆಚ್ಚು ಪ್ರದೇಶವನ್ನು ಆವರಿಸಿಕೊಂಡಿದೆ.

ಶೈಲಿಗಳು ವಿವಿಧವಾಗಿದ್ದಂತೆ ಆ ಶೈಲಿಗಳಲ್ಲಿ ನುಡಿಸುವ ವಾದ್ಯಗಳು ವಿಭಿನ್ನವಾಗಿವೆ. ಕರ್ನಾಟಕೀ ಸಂಗೀತದಲ್ಲಿ ವೀಣಾ, ಮೃದಂಗ, ಘಟಂ, ನಾಗಸ್ವರ ಮುಂತಾದ ವಾದ್ಯಗಳಿದ್ದರೆ ಹಿಂದುಸ್ತಾನಿ ಸಂಗೀತದಲ್ಲಿ ಸಿತಾರ, ದಿಲ್ ರುಬಾ, ಸರೋದ, ಸಾರಂಗಿ, ತಬಲಾ ಮುಂತಾದ ವಾದ್ಯಗಳ ಉಪಯೋಗವಾಗುತ್ತದೆ. ಕೊಳಲು, ವಾಯೊಲಿನ್ ಎರಡೂ ಸಂಗೀತಗಳಲ್ಲಿ ನುಡಿಸುತ್ತಾರೆ.

ಕರ್ನಾಟಕಿ ಪದ್ಧತಿಯಲ್ಲಿ ವೀಣೆ ಹೇಗೆ ತಂತೆ ವಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆಯೋ ಅದೇ ರೀತಿ ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಿತಾರ ಪ್ರಮುಖ ಸ್ಥಾನ ಪಡೆದಿದೆ.

ಭಾರತದಲ್ಲಿ ಸಂಗೀತ ವೇದ ಹಾಗೂ ಪೌರಾಣಿಕ ಕಾಲದಲ್ಲಿ ಪ್ರಚಾರದಲ್ಲಿತ್ತು. ಸಾಮವೇದದ ಮಂತ್ರಗಳನ್ನು ಸ್ವರಬದ್ಧವಾಗಿ, ಲಯಬದ್ಧವಾಗಿಯೇ ಅನ್ನಬೇಕಾಗಿತ್ತು.

ಸಂಗೀತದ ಬಗ್ಗೆ ನಮಗೆ ಮೊದಲನೇ ಮೌಲಿಕ ಗ್ರಂಥ ದೊರೆಯುವದು ಭರತಮುನಿಯ ನಾಟ್ಯ ಶಾಸ್ತ್ರ. ಅದರ ನಂತರ ಅಹೋಬಲನ ಸಂಗೀತ ಪಾರಿಜಾತ, ಸಾರಂಗದೇವನ ಸಂಗೀತ ರತ್ನಾಕರ ಮುಂತಾದ ಶಾಸ್ತ್ರೀಯ ಗ್ರಂಥಗಳು ದೊರೆಯುತ್ತವೆ. ಅವುಗಳಲ್ಲಿ ಶಾಸ್ತ್ರದ ಬಗೆಗೆ ಆಳವಾದ ಅಭ್ಯಾಸ ಹಾಗೂ ವಿವರಣೆ ದೊರೆಯುತ್ತದೆ.

ಸಂಗೀತ ಎಂದರೆ ಎಲ್ಲ ವಿದ್ವಾಂಸರು ಒಪ್ಪಿಕೊಂಡಂತೆ ಗಾಯನ, ವಾದನ ಹಾಗೂ ನರ್ತನ. ಪ್ರಾಚೀನ ಕಾಲದಲ್ಲಿ ಈ ಮೂರರ ಸಮ್ಮಿಲನವೇ ಸಂಗೀತ ಎನಿಸಿಕೊಳ್ಳುತ್ತಿತ್ತು.

ಹಿಂದೂ ಧರ್ಮದ ಪ್ರಕಾರ ದೇವಾಧಿದೇವತೆಗಳು ಸಂಗೀತ ಬಲ್ಲವರಾಗಿದ್ದರು. ನಾರದನ ಕೈಯಲ್ಲಿ ತಂಬೂರಿ ಇರುತ್ತಿತ್ತು. ತಂಬೂರಿ ಇಲ್ಲದೆ ನಾರದನನ್ನು ಊಹಿಸಿಕೊಳ್ಳುವದು ಸಾಧ್ಯವಿಲ್ಲ. ಅದೇ ರೀತಿ ಸರಸ್ವತಿಯ ಕೈಯಲ್ಲಿ ವೀಣೆ, ಕೃಷ್ಣನ ಕೈಯಲ್ಲಿ ಕೊಳಲು, ರುದ್ರನ ಕೈಯಲ್ಲಿ ರುದ್ರವೀಣೆ ವಾದ್ಯಗಳು ಕಂಡುಬರುತ್ತವೆ. ಸಿತಾರ ವಾದ್ಯ ಮಾತ್ರ ಯಾವ ದೇವರ ಕೈಯಲ್ಲಿಯೂ ಕಂಡುಬರುವದಿಲ್ಲ. ಕಾರಣ ಪ್ರಾಚೀನ ಪೌರಾಣಿಕ ಕಾಲದಲ್ಲಿ ಸಿತಾರ ಉತ್ಪತ್ತಿಯಾಗಿರಬಹುದು?

ಹೊಸ ವಾದ್ಯ ಉತ್ಪತ್ತಿಯಾಗಲು ಏನಾದರು ಕಾರಣವಿರಬೇಕು. ಇದನ್ನು ಹುಡುಕಿ ತೆಗೆಯುವವನ ಮನಸ್ಸಿನಲ್ಲಿ ಇದರ ಉಪಯೋಗ ಹಾಗೂ ಅವಶ್ಯಕತೆಯ ಅರಿವು ಮೂಡಿರಬೇಕು.

ಶಾಸ್ತ್ರೀಯ ವಾದ್ಯಗಳನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು

1) ತತ್ ವಾದ್ಯಗಳು – ತಂತಿಯಿಂದ ನುಡಿಸುವ ವಾದ್ಯಗಳು ವೀಣಾ, ಸಾರಂಗಿ, ಸಿತಾರ, ಸರೋದ,     ವಾಯೊಲಿನ ಮುಂತಾದವು.

2) ಸುಷಿರ ವಾದ್ಯಗಳು – ಬಾಯಿಯಿಂದ ಊದಿ ಬಾರಿಸುವ ವಾದ್ಯಗಳು. ಕೊಳಲು, ಶಹನಾಯಿ ಮುಂತಾದವು.

3) ಚರ್ಮ ವಾದ್ಯಗಳು – ತಬಲಾ, ಪಖವಜ ಮುಂತಾದವು

ಇವಲ್ಲದೆ ಜಾಗಂಟಿ, ಗಂಟೆ, ನಗಾರಿ, ಶಂಖ ಮುಂತಾದ ವಾದ್ಯಗಳಿಂದ ನಾದ ಹೊರಡಿಸಬಹುದಾದರೂ ಶಾಸ್ತ್ರೀಯ ಸಂಗೀತ ನುಡಿಸಲು ಇವುಗಳ ಉಪಯೋಗವಾಗುವದಿಲ್ಲ.

ಸಿತಾರ ಪೌರಾಣಿಕ ವಾದ್ಯವಲ್ಲ. ಮುಸಲ್ಮಾನ ಅರಸರ ಕಾಲದಲ್ಲಿ ಅಮೀರ ಖುಸ್ರು ಎಂಬ ಸಂಗೀತ ವಿದ್ವಾಂಸ ಇದನ್ನು ಹುಡುಕಿ ತೆಗೆದ. ಇವನೇ ಮೊದಲು ಸಿತಾರ ವಾದನದ ನಿರ್ಮಾತೃ ಎಂದು ಬಹುಜನ ವಿದ್ವಾಂಸರ ಅಭಿಪ್ರಾಯ. ಅಮೀರ ಖುಸ್ರುವಿನ ಪರ್ಷಿಯಾ, ಅರಬ್ಬೀ ಭಾಷೆಗಳು ಗೊತ್ತಿದ್ದವು. ಪರ್ಷಿಯನ್ ಭಾಷೆಯಲ್ಲಿ ಸೆಹ್ ಅಂದರೆ ಮೂರು, ತಾರ ಅಂದರೆ ತಂತಿ, ಎರಡು ಕೂಡಿ ಸೆಹ್ತಾರ-ಸಿತಾರ-ಸತಾರ ಎಂದು ತಾನು ಕಂಡುಹಿಡಿದ ವಾದ್ಯಕ್ಕೆ ನಾಮಕರಣ ಮಾಡಿದ. ಸಿತಾರ ನಿರ್ಮಾಣಗೊಂಡ ಮೇಲೆ ಈಗಿನ ಹಾಗೆ ಅದು ಸ್ವತಂತ್ರ ವಾದ್ಯವಾಗಿರಲಿಲ್ಲ. ಗಾಯಕರು ಹಾಡಿ ನಿಂತ ಸ್ಥಳದಲ್ಲಿ ಸ್ವಲ್ಪ ಹೊತ್ತು ಸಿತಾರದ ಸ್ವರಗಳಿಂದ ಭರಾವ್ ಖಾಲಿಯಾದ ಧ್ವನಿರಹಿತ ಸ್ಥಳ ತುಂಬುವದು ಮಾತ್ರ ಆಗಿತ್ತು. ಈ ಪ್ರಕಾರ ಉಪಯೋಗವಾಗುವ ವಾದ್ಯದಲ್ಲಿ ಕೇವಲ ಮೂರು ತಂತೆ ಹಾಗೂ ಎಂಟು ಪಡದೆಗಳಿದ್ದವು. ಸಿತಾರದ ತಲೆಯ ಭಾಗದ ಈಗಿನ ಕುಂಬಳಕಾಯಿ ಇರುವ ಸ್ಥಳದಲ್ಲಿ ಕಟ್ಟಿಗೆ ಪೊಳ್ಳು ಭಾಗವನ್ನು ಕೂಡ್ರಿಸಿ ಉಪಯೋಗ ಮಾಡುತ್ತಿದ್ದರು. ಮೊದಲಿನ ತಂತಿಯನ್ನು ಮಧ್ಯಮಕ್ಕೆ ಎರಡನೆದನ್ನು ಪಂಚಮಕ್ಕೆ ಮೂರನೇಯ ತಂತಿಯನ್ನು ಷಡ್ಜಕ್ಕೆ ಜೋಡಿಸುತ್ತಿದ್ದರು.

ಕೆಲ ವಿದ್ವಾಂಸರು ಸಿತಾರದ ಹುಟ್ಟಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತ ಮಾಡುತ್ತಿದ್ದಾರೆ. ಭಾರತದ ಸುವರ್ಣ ಯುಗ ಎಂದು ಕರೆಯಲ್ಪಡುವ ಮೌರ್ಯರ ಕಾಲದಲ್ಲಿ ಗ್ರೀಕ ದೇಶದಿಂದ ಆಗಮಿಸಿದ ಹೆಲಿಓದರ್ ಮತ್ತು ದಿವ್ಹ ಮುಂತಾದವರು ‘ಸಪ್ತಸುರ’ ಎನ್ನುವ ವಾದ್ಯವನ್ನು ಗ್ರೀಕ ದೇಶಕ್ಕೆ ಒಯ್ದು ಅದರಲ್ಲಿ ಸ್ವಲ್ಪ ಪರಿವರ್ತನೆ ಮಾಡಿ ಹಾರ್ಪ (Harp) ಎಂಬ ವಾದ್ಯ ನಿರ್ಮಾಣ ಮಾಡಿದನು. ಈ ಸಪ್ತಸ್ವರ ಎಂಬ ಮೌರ್ಯರ ಕಾಲದಲ್ಲಿದ್ದ ವಾದ್ಯವೇ ಸಿತಾರ ಇರಬಹುದೆಂದು ಕೆಲ ಜನರು ಸಿತಾರಕ್ಕೆ ಆಕರ್ಷಿತರಾಗಿ ಸ್ಪೇನಕ್ಕೆ ಹೋಗಿ ಅದನ್ನೇ ಗಿಟಾರ್ ಎಂದು ಕರೆದರು.

ಇನ್ನೊಂದು ಅಭಿಪ್ರಾಯದ ಪ್ರಕಾರ ಅಬ್ದು ಅಮೀರ ಅಬ್ದುಲ್ ಅಸಮರಿಂದ ಬರೆಯಲ್ಪಟ್ಟ ‘ಸಜರುಲ್ ಉಕೋಲ್’ ಎಂಬ ಪುಸ್ತಕ ದೊರಕಿದ್ದು ಅದರಲ್ಲಿ ಮಕ್ಕಾದ ಸಾಮಾಜಿಕ ಹಾಗೂ ಮೇಲಾ ಜಾತ್ರೆಯ ವರ್ಣನೆ ಇದ್ದುದು ಕಂಡು ಬರುತ್ತದೆ. ಇದರಲ್ಲಿ ಹಾಡುಗಳನ್ನು ಹಾಡುವದಕ್ಕೋಸ್ಕರ ಸಿತಾರದಂತೆ ಕಾಣುವ ಒಂದು ವಾದ್ಯ ಕಂಡುಬರುತ್ತದೆ. ಸಿತಾರದ ತೊಂಬಾಕ್ಕೆ ಬದಲಾಗಿ ಆಡಿನ ಚರ್ಮದ ಹೊದಕೆ ಹಾಕಿ ಸಿತಾರದಂತೆ ನುಡಿಸುತ್ತಿದ್ದರು. ಇದರಲ್ಲಿ ಸಿತಾರದಲ್ಲಿ ಇರುವ ಹಾಗೆ ಏಳು ತಂತಿಗಳು ಇರುತ್ತಿದ್ದವು.

ಹಜರತ ಮೊಹಮ್ಮದ ಬಿನತೊಯ ಎನ್ನುವ ಕವಿ, ಗಾಯಕ ತನ್ನ ಒಂದು ಕವಿತೆಯಲ್ಲಿ ರಾಜಾ ವಿಕ್ರಮನ – ಸಮುದ್ರ ಗುಪ್ತನ – ವರ್ಣನೆ ಮಾಡುತ್ತಾ ಅವನ ಕಾಲದ ಶಾಂತಿ ಕಲೆ ಹಾಗೂ ರಾಜವೈಭವವನ್ನು ಎತ್ತಿ ತೋರಿಸುತ್ತಾನೆ. ರಾಜಾ ಧರ್ಮಾತ್ಮ ಪ್ರಜಾಪಾಲಕ ಹಾಗೂ ಸಂಗೀತ ಬಲ್ಲವನಾಗಿದ್ದನೆಂದು ಅವನು ನುಡಿಸಿದ ಸಿತಾರ ಕೇಳುವದರಿಂದ ಮನಸ್ಸು ಪಫುಲ್ಲಿತ ಆಗುವದೆಂದು ಹೊಗಳಿದ್ದಾನೆ.

ಬಹುಜನ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಹಿಂದೂರಾಜರ ಕಾಲದಲ್ಲಿ ಈ ವಾದ್ಯ ಹುಟ್ಟಿರಲಿಕ್ಕಿಲ್ಲ. ಹಿಂದೂ ಜನರು ಸಂಘರ್ಷದಲ್ಲಿಯೇ ತಮ್ಮ ಸಮಯ ಕಳೆಯಬೇಕಾದ್ದರಿಂದ ಕಾವ್ಯ ಸಂಗೀತದ ಬೆಳವಣಿಗೆ ಅವರ ಆಶ್ರಯದಲ್ಲಿ ಆಗಲಿಲ್ಲ. ಹಾಗೂ ಸಿತಾರ ವಾದ್ಯ ಕೂಡ ಹಿಂದೂ ರಾಜರ ಕಾಲದಲ್ಲಿ ಆವಿರ್ಭಾವ ಆಗಲಿಲ್ಲ. ಹಿಂದೂ ರಾಜರು ಸಂಘರ್ಷಮಯ ಜೀವನ ನಡೆಸಿ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಿರುವಾಗ ಗಾಯನ, ವಾದನ, ನರ್ತನ, ಕವಿತೆ ಇದಾವುದರ ಬೆಳವಣಿಗೆ ಸಾಧ್ಯವಾಗುವದಿಲ್ಲ. ಕಲೆಯ ಬೆಳವಣಿಗೆ ಸಾಧ್ಯವಾಗಬೇಕಾದರೆ ಸಮಾಜ ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸಿದಾಗ ಮಾತ್ರ ಸಾಧ್ಯ.

ಗುಲಾಮ್ ವಂಶದ ಕೊನೆಯ ಬಾದಶಹ ನಾಸಿರುದ್ದೀನನ ಸೇನಾಪತಿ ಬಲ್ಬನ್ನ ಕಾಲದಲ್ಲಿ ಅಮೀರ ಖುಸ್ರು ಎನ್ನುವವರ ಸಿತಾರ ವಾದನದ ನಿರ್ಮಾತೃ ಎಂಬ ವಾದವನ್ನೇ ಬಹುಜನ ವಿದ್ವಾಂಸರು ಬೆಂಬಲಿಸುವರು.

ಪ್ರಾಚೀನ ಕಾಲದ ಸಿತಾರಕ್ಕೂ ಈಗಿನ ಕಾಲದ ಸಿತಾರಕ್ಕೂ ಬಹಳಷ್ಟು ಬದಲಾವಣೆ ಕಾಣುತ್ತೇವೆ. ಅದು ಸಿತಾರದ ಬೆಳವಣಿಗೆಯ ಇತಿಹಾಸದ ಕಡೆಗೆ ಗಮನ ಸೆಳೆಯುತ್ತದೆ. ಕಾಲಕಾಲಕ್ಕೆ ಬದಲಾವಣೆ ನಡೆದಿದೆ. ಮೊದಲಿನ ಸಿತಾರದಲ್ಲಿ ಕೇವಲ ಮೂರು ತಂತಿಗಳಿದ್ದರೆ ಈಗ ಮೇಲ್ಭಾಗದಲ್ಲಿ ಏಳು ಹಾಗೂ ಕೆಳಭಾಗದಲ್ಲಿ ತರಘದ ೧೧ ತಂತಿಗಳನ್ನು ಜೋಡಿಸಿದ್ದಾರೆ. ಸಿತಾರದ ಆಕಾರದಲ್ಲಿಯೂ ಧ್ವನಿಯಲ್ಲಿಯೂ ನಾವು ಬದಲಾವಣೆ ಗುರ್ತಿಸಬಹುದು. ಇಂದು ಸಿತಾರ ಇಷ್ಟು ಜನಪ್ರಿಯ ವಾದ್ಯವಾಗಿ ಬೆಳೆಯಲು ಕಾರಣವೆಂದರೆ ಅದನ್ನು ನುಡಿಸಲು ಇರುವ ಅನುಕೂಲತೆಗಳು.

ಗುರುಗಳು ಸಿತಾರವನ್ನು ಶೃತಿ ಮಾಡಿಕೊಟ್ಟ ಮೇಲೆ ಸ್ವರಾಜ್ಞಾನವಾಗಿದ್ದರೂ ಸಿತಾರ ನುಡಿಸಲು ಆರಂಭಿಸಬಹುದು. ಎರಡನೆಯದಾಗಿ ಸಿತಾರ ಅತ್ಯಂತ ಹಗುರಾದ ವಾದ್ಯ.

ಮಧುರವಾದ ಧ್ವನಿ ಹಾಗೂ ಗುಂಜಾರವ ಕೇಳಲು ತರಫ ಜೋಡಿಸಿದ್ದರಿಂದ ನಾದ ಬಹಳ ಹೊತ್ತು ಉಳಿಯಬಲ್ಲದು. ತರಫ ಇಲ್ಲದ ಸಿತಾರ ನಮಗೆ ಇಂದು ನೋಡಲು ಕೂಡ ಸಿಗುವದಿಲ್ಲ. ತರಫನ್ನು ರಾಗದಲ್ಲಿರುವ ಸ್ವರಗಳಿಗನುಸಾರವಾಗಿ ಸ ರಿ ಗ ಮ ಪ ದ ನಿ ಸ ಕೂಡಿಸುತ್ತಾರೆ. ಮೇಲಿನ ಎರಡು ತಂತಿಗಳಲ್ಲಿ ಮೊದಲಿನ ಎರಡು ಬಹು ಮುಖ್ಯ. ಮೊದಲಿನ ತಂತೆ ಮುಖ್ಯ ತಂತೆ. ಅದನ್ನು ಮಧ್ಯಮಕ್ಕೆ ನಂತರದ ತಂತಿಯನ್ನು ಆಧಾರ ಷಡ್ಜಕ್ಕೆ ಕೂಡ್ರಿಸುವರು ಶುದ್ಧ ಮಧ್ಯಮ ಸ್ಟೀಲಿನದು ಆಧಾರ ಷಡ್ಜ ತಾಮ್ರದ್ದು ಇರುತ್ತದೆ. ಮೂರನೇ ತಂತಿ ಖರಜ ಪಂಚಮ ಇರುತ್ತದೆ. ನಾಲ್ಕನೇಯದು ಷಡ್ಜ (ಲರಜ). ಐದನೇಯದನ್ನು ಮಂದ್ರ ಪಂಚಮ್ ಹಾಗೂ ಆರನೇಯದನ್ನು ಮಧ್ಯಸಪ್ತಕ ಷಡ್ಜ ಹಾಗೂ ಏಳನೇಯದನ್ನು ತಾರಸಪ್ತಕ ಷಡ್ಜವನ್ನಾಗಿ ಕೂಡಿಸುವರು.

ಮೊದಲಿನ ಸಿತಾರಕ್ಕೆ ಎಂಟು ಪಡದೆಗಳಿದ್ದವು ಈಗ ಹತ್ತೊಂಭತ್ತು ಪಡದೆಗಳನ್ನು ಕಟ್ಟುತ್ತಾರೆ. ಕೆಲವರು ೨೩ ಪಡದೆಗಳನ್ನು ಕಟ್ಟಿ ಅಚಲ ಥಾಟದಲ್ಲಿ ಸಿತಾರ ನುಡಿಸುವರು. ಆದರೆ ಅಚಲ ಥಾಟ ಅಂದರೆ ೧೯ ಪಡದೆ ಕಟ್ಟಿ ರಾಗಕ್ಕೆ ಅನುಕೂಲ ಆಗುವ ಹಾಗೆ ಕೆಲ ಪಡದೆಗಳನ್ನು ಮೇಲೆ ಕೆಳಗೆ ಸರಿಸುವರು. ಪಡದೆಗಳನ್ನು ಹಿತ್ತಾಳೆಯಿಂದ ಮಾಡಿರುತ್ತಾರೆ. ಸಿತಾರದ ಅಳತೆಗೆ ಅನುಗುಣವಾಗಿ ೬ ಅಥವಾ ೭ ನಂಬರ ಪಡದೆ ಉಪಯೋಗಿಸುವರು.

ಸಿತಾರದಲ್ಲಿ ಅತ್ಯಂತ ಪ್ರಮುಖ ಅಂದರೆ ಜವಾರಿ ಇದಕ್ಕೆ ಘೋಡಿ ಅಥವಾ ಬ್ರಿಜ್ ಎಂದೂ ಕರೆಯುವರು. ಇದು ಮನುಷ್ಯನ ಹೃದಯವಿದ್ದಂತೆ. ಜವಾರಿಯ ಮೇಲಿಂದ ಹಾಯ್ದು ಹೋಗುವ ತಂತಿಗಳಿಂದಲೇ ಧ್ವನಿಯ ಮಾಧುರ್ಯತೆ ಕೇಳಿಬರುವದು. ಈ ಜವಾರಿಯನ್ನು ಮೊದಲು ಹಸ್ತಿದಂತದಿಂದ ಮಾಡುತ್ತಿದ್ದರು. ಈಗ ಹಸ್ತಿದಂತ ಅಲಭ್ಯವಾದ್ದರಿಂದ ಚಿಗರೆಯ ಕೋಡಿನಿಂದ ಜವಾರಿ ಮಾಡುತ್ತಾರೆ. ಬಹುದಿನಗಳವರೆಗಿನ ಸಿತಾರ ನುಡಿಸಿದ ಮೇಲೆ ಜವಾರಿಯ ಮೇಲೆ ಗೆರೆಗಳು ಬೀಳುತ್ತವೆ. ಮತ್ತೇ ಅದನ್ನು ಪಾಲಿಷ ಕಾಗದದಿಂದ ತಿಕ್ಕಿ ಸರಿ ಮಾಡಲು ನುರಿತ ಕಾರಿಗರನೇ ಬೇಕು. ಜವಾರಿ ತೆಗೆಯುವದೆಂದರೆ ಸಿತಾರಕ್ಕೆ ಪುನಃ ಜೀವ ತುಂಬಿದಂತೆ. ಸಿತಾರಕ್ಕೆ ತಂತಿ ಹಾಕಬಹುದು. ಪಡದೆ ಕಟ್ಟಬಹುದು. ಆದರೆ ಜವಾರಿ ತೆಗೆಯಲು ಪರಣತಿಯನ್ನು ಹೊಂದಲೇಬೇಕು.

ಈ ದೊಡ್ಡ ಜವಾರಿಯ ಮೇಲೆ ೭ ತಂತಿಗಳು ಹಾಯುವವು. ಅವುಗಳನ್ನು ಖೊಂಟಿಯಿಂದ ತಿರುವಿ ಸ್ವರಬದ್ಧಗೊಳಿಸುವರು. ಈ ದೊಡ್ಡ ಜವಾರಿಯ ಕೆಳಗೆ ಒಂದು ಸಣ ಜವಾರಿ ಇದ್ದು ಅದರ ಮೇಲಿಂದ ತರಫದ ೧೧ ತಂತಿಗಳು ಸಣ್ಣ ಖೊಂಟಿಗಳಿಗೇ ಜೋಡಿಸುವರು.

ಸಿತಾರದ ಧ್ವನಿಯು ಆಂತರಿಕ ಸೌಂದರ್ಯ. ಬಾಹಿಕಾರವು ಸುಂದರವಾಗಿ ಕಾಣಲು ಸಿತಾರ ಮೇಕರ್ ಬಹಳ ಶ್ರಮ ಪಡುತ್ತಾನೆ. ಸಿತಾರದ ತಬಲಿಯ ಮೇಲೆ, ದಾಡಿಯ ಸುತ್ತ ಕಾರಿಗರ ಸಲ್ಯುಲೈಡದಿಂದ ನಕ್ಷೆ ತೆಗೆಯುವನು. ಅದರಲ್ಲಿಯೇ ತನ್ನ ಕೌಶಲ್ಯ ತೋರಿಸುವನು. ಇತ್ತೀಗಚೆಗೆ ಸಲ್ಯೂಲೈಡದ ಅಭಾವವಾಗಿರುವದರಿಂದ ಈ ಕೆಲಸವನ್ನು ಪ್ಲಾಸ್ಟಿಕ್‌ದಿಂದ ಮಾಡುತ್ತಿದ್ದಾರೆ. ಸಿತಾರದ ದಾಂಡಿ, ಗಲ, ತಬಲಿ ಹಾಗೂ ತೂಂಬಾ ಜಾಯಿಂಟ ಮಾಡಲು ಮೊದಲು ಮೇನಸರ್ಸ ಉಪಯೋಗಿಸುತ್ತಿದ್ದರು. ಈಗ ಫೆವಿಕಾಲ್ ಉಪಯೋಗಿಸುತ್ತಿದ್ದಾರೆ.

ಈಗಿನ ಸಿತಾರದಲ್ಲಿ ಎರಡು ತೂಂಬಾಗಳಿರುತ್ತವೆ. ಒಂದು ಸಣ್ಣದು ಒಂದು ದೊಡ್ಡದು. ಸಣ್ಣದನ್ನು ಗುಂಜಾರವ ಉಂಟಾಗಲು ಹಾಗೂ ಸಮತಲಗೊಳಿಸಲು ಉಪಯೋಗಿಸುತ್ತಾರೆ. ಎರಡೂ ತೂಂಬಾದ ಒಳಗೆ ಹುಳು ಹತ್ತಬಾರದೆಂದು  ವಿಷಯುಕ್ತ ಪದಾರ್ಥವನ್ನು ಸವರುತ್ತಾರೆ. ಸಿತಾರಕ್ಕೆ ಪಾಲಿಷ ಮಾಡಿ ಹೊಳೆಯುವಂತೆ ಮಾಡುತ್ತಾರೆ. ಮರಹಮ ಅಥವಾ ಕಪ್ಪು ಬಣ್ಣದ ಸಿತಾರ ತಯಾರ ಮಾಡುವರು. ಹಿಂದೂಸ್ತಾನದಲ್ಲಿ ಮಿರಜ, ಕಲ್ಕತ್ತಾ ಹಾಗೂ ಲಖನೌದಲ್ಲಿ ಮಾತ್ರ ಸಿತಾರ ಮೇಕರ್ಸ ದೊರೆಯುವರು.

ವಿಕಸನ

ಮುಸಲ್ಮಾನ ಅರಸರ ಕಾಲದಲ್ಲಿ ಹುಟ್ಟಿ ಬೆಳೆದ ಸಿತಾರ ವಿಕಾಸ ಹೊಂದುತ್ತಾ ಮೂಲರೂಪವನ್ನು ಉಳಿಸಿಕೊಂಡು ಬಾಹ್ಯ ಹಾಗೂ ಆಂತರಿಕವಾಗಿ ಬದಲಾವಣೆ ಹೊಂದಿ ಈಗಿನ ರೂಪಕ್ಕೆ ಬಂದು ತಲುಪುತ್ತದೆ. ಸಿತಾರ ವಿಕಾಸಕ್ಕೆ ತಾನಸೇನನ ವಂಶಸ್ಥರಾದ ಇಮ್ರಾತ್ ಸೇನ ಹಾಗೂ ನಿಹಾಲಸೇನ ಬಹಳ ಕೊಡುಗೆ ನೀಡಿದ್ದಾರೆ. ಸಿತಾರಕ್ಕೆ ಎರಡು ತಂತಿಗಳನ್ನು ಹೆಚ್ಚು ಜೋಡಿಸಿ ಐದು ತಂತಿಗಳನ್ನು ಹಾಕಿದರು. ಅವುಗಳನ್ನು ಕ್ರಮವಾಗಿ ಮ…ಸಾ…ಪ (ಖರಜ) ಸಾ…ಸಾ ಜೋಡಿಸಿದರು. ಇದರ ಮುಖ್ಯ ಉದ್ದೇಶ ಸರಳ ಬದ್ಧವಾಗಿ ಹೊಂದಿಡಿ ನುಡಿಸುವದಾಗಿತ್ತು. ಒಂದೇ ತೂಂಬಾ ಇದ್ದುದನ್ನು ಇಬ್ಬರು ಸಹೋದರರು ಕೂಡಿ ಎರಡು ತೂಂಬಾ ಜೋಡಿಸಿದರು. ಎರಡನೆ ತೂಬಾ ಮೊದಲನೇ ತೂಂಬಾಕ್ಕೆ ಹೊಂದಿಸಿಯೇ ಬಾರಿಸತೊಡಗಿದರು. (ಎರಡನೇ ತೂಂಬಾ ಈಗಿನ ಹಾಗೆ ವಿರುದ್ಧ ಬದಿಯಲ್ಲಿರಲಿಲ್ಲ) ಎರಡನೇ ತೂಂಬಾ ಚಿಕ್ಕದಾಗಿತ್ತು. ಧ್ವನಿಮಾಧುರ್ಯ ಹೆಚ್ಚಿಸಲು ಗುಂಜನ ವರ್ಧಿಸಲು ಪ್ರಯೋಗ ಮಾಡಿ ನೋಡಿದರು. ಈ ಅವಧಿಯಲ್ಲಿಯೇ ಸಿತಾರ ಸಂಗತ್ ಸಲುವಾಗಿ ಉಪಯೋಗವಾಗುವದನ್ನು ಬಿಟ್ಟು ಸ್ವತಂತ್ರ ವಾದ್ಯವಾಗಿ ಮಾರ್ಪಟ್ಟಿತು.

ಈ ಬೆಳವಣಿಗೆ ಹೊಂದಿದ ಸಿತಾರ ವಾದ್ಯವನ್ನು ಲೋಕಪ್ರಿಯ ಮಾಡಿದ ಶ್ರೇಯಸ್ಸು ಮಸೀದಖಾನ ಹಾಗೂ ರಜಾ ಖಾನರಿಗೆ ಸಲ್ಲುತ್ತದೆ. ಇವರಿಬ್ಬರೂ ಧೃಪದ, ಧಮಾರ ನುಡಿಸುವ ಪದ್ಧತಿ ತೊರೆದು ‘ಗತ್’ ನುಡಿಸುವ ಪದ್ಧತಿ ಆರಂಭಿಸಿದರು. ಇದೇ ವೇಳೆಗೆ ಗಾಯನದಲ್ಲಿ ಖಯಾಲ ಪಾದಾರ್ಪಣ ಮಾಡತೊಡಗಿತು.

ಗತ್ತು ಸಿತಾರಕ್ಕೆ ಅತ್ಯಂತ ಯೋಗ್ಯವಾಗಿತ್ತು. ಕಲ್ಪನಾ ಮುಖೇನ ಬಾರಿಸಲು ಕಲಾವಿದರಿಗೆ ಅವಕಾಶ ದೊರೆಯತೊಡಗಿತು. ಮಸೀದಖಾನ ಹುಡುಕಿ ತೆಗೆದ ಗತ್ತಿಗೆ ‘ಮಸೀದಖಾನಿ ಗತ್’ (ದಿಲ್ಲಿ ಬಾಜ) ಎಂದೂ ರಜಖಾನ ಹುಡುಕಿ ತೆಗೆದ ಗತ್ತಿಗೆ ‘ರಜಾಖಾನಿ ಗತ್’ (ಪೂರ್ವಿ ಬಾಜ) ಎಂದೂ ಪ್ರಚಾರ ಪಡೆದವು. ಈ ಕಾಲದಲ್ಲಿಯೇ ಸಿತಾರಕ್ಕೆ ಪ್ರತಿಷ್ಠೆ ಪ್ರಾಪ್ತವಾಗತೊಡಗಿತು. ೨೩ ಪಡದೆ ಹಾಕಿ ಅಚಲ ಥಾಟದಲ್ಲಿ ಬಾರಿಸತೊಡಗಿದರು ಸಣ್ಣ ತೂಂಬಾ ತೆಗೆದರು. ಗತ್ತುಗಳನ್ನು ಸ್ವತಂತ್ಯ್ರವಾಗಿ ನುಡಿಸಲು ಅನುಕೂಲವಾಗಲೆಂದು ಸುಸ್ಪಷ್ಟವಾಗಿ ನುಡಿಸುವ ಸಲುವಾಗಿ ೭ ತಂತಿ ಜೋಡಿಸಿದರು. ಅವು ಯಾವವೆಂದರೆ ಮ…ಸಾ…ಸಾ ಪ…ಪ… (ಖರಜ) ಸಾ…ಸಾ (ಒಂದು ಸಪ್ತಕ ಹೆಚ್ಚಿಗೆ) ಈ ಸಹೋದರ ನಂತರ ಸಿತಾರದಲ್ಲಿ ಹೆಚ್ಚು ಬದಲಾವಣೆಯಾಗಲಿಲ್ಲ. ಅದರ ಬದಲಾಗಿ ಸಿತಾರದಂತೆ ಕಾಣುವ ಒಂದು ಹೊಸ ವಾದ್ಯವೇ ಹುಟ್ಟುಕೊಂಡಿತು. ಸಾಹಬ ದಾದಾಖಾನ್ ಈ ಹೊಸ ವಾದ್ಯಕ್ಕೆ ‘ಸುರ್ ಬಹಾರ್’ ಎಂದು ಕರೆದರು. ಈ ಸುರ್ ಬಹಾರ್ ಆಕಾರದಲ್ಲಿ ದೊಡ್ಡದಾಗಿತ್ತು. ದಪ್ಪ ತಂತಿಗಳನ್ನು ಹಾಕಿ ಗಂಡು ಅವಾಜ ಬರುವಂತೆ ಹಾಗೂ ಧ್ವನಿ ಬಹು ಹೊತ್ತಿನವರೆಗೆ ಇರುವಂತೆ ನೋಡಿಕೊಳ್ಳಲಾಯಿತು. ಸಿತಾರಕ್ಕಿಂತ ಒಂದು ತಂತಿ ಹೆಚ್ಚು ಹಾಕಿ ೮ ತಂತಿಯುಳ್ಳದ್ದು ಸುರ್ ಬಹಾರ್ ಎಂದು ಪ್ರಚಾರ ಪಡೆಯತೊಡಗಿತು. ತಂತಿಗಳನ್ನು ಮ…ಸಾ…ಪ (ಖರಜ) ಸಾ… (ಖರಜ) ಪ…ಸಾ…ಸಾ…ಸಾ (ಒಂದು ಸಪ್ತಕ ಹೆಚ್ಚು) ಸಿತಾರ ಗತ್ತು ಬಾರಿಸುವದಕ್ಕೆ ಉಪಯೋಗವಾದರೆ ಸುರ್ ಬಹಾರ್ ಆಲಾಪ ಮಾಡುವದಕ್ಕೆ ಉಪಯೋಗ ಮಾಡಲಾಯಿತು. ಸುರಬಹಾರದ ಅವಾಜ ಗಂಭೀರ ಹಾಗೂ ಗಡಸಾಗಿತ್ತು. ಈ ವಾದನವನ್ನು ಸಾವಕಾಶ ಹಾಗೂ ಗಂಭೀರ ಪ್ರಕೃತಿಯ ರಾಗಗಳಿಗೆ ಆಲಾಪ ಮಾಡಲು ಯೋಗ್ಯವೆಂದು ಪರಿಗಣಿಸಲ್ಪಡತೊಡಗಿತು. ಸಿತಾರ ಹಾಗೂ ಸುರಬಹಾರ್ ಒಂದಕ್ಕೊಂದು ಪೂರಕ ವಾದ್ಯಗಳಾಗಿ ಕಾಣಿಸಲ್ಪಡತೊಡಗಿದವು. ಸುರ್ ಬಹಾರದಲ್ಲಿ ಆಲಾಪ ಮಾಡಿ ಮುಗಿಸಿದ ಮೇಲೆ ಸಿತಾರದಲ್ಲಿ ಮಸೀದ ಖಾನಿ ಹಾಗೂ ರಾಜಖಾನಿ ಗತ್ತು ನುಡಿಸಿ ತಾನುಗಳನ್ನು ಬಾರಿಸಿದ ಮೇಲೆ ಝುಲಾ ಬಾರಿಸಿ ಸಮಾಪನಗೊಳಿಸುವ ಪದ್ಧತಿ ಜಾರಿಯಲ್ಲಿ ಬಂದಿತು.

೨೩ ಪಡದೆಗಳನ್ನು ಹಾಕಿ ಅಚಲ ಥಾಟದಲ್ಲಿ ಬದಲಾವಣೆ ತಂದವರೂ ಉಸ್ತಾದ ಇಮದಾದ್ ಖಾನರು ಕೇವಲ ೧೯ ಪಡದೆ ಹಾಕಿ ಥಾಟ ಮಾಡಿ ಬೇಕಾದ ಸ್ವರಗಳನ್ನು ಮೀಂಡದಲ್ಲಿ ತೆಗೆಯತೊಡಗಿದರು. ಸಿತಾರದಲ್ಲಿ ನಾಲ್ಕು ಸ್ವರಗಳವರೆಗೆ ಮೀಂಡ ತೆಗೆಯಬಹುದಾದರೆ ಸುರ್ ಬಹಾರದಲ್ಲಿ ೭ ಸ್ವರಗಳವರೆಗೆ ಮೀಂಡ ತೆಗೆಯತೊಡಗಿದರು. ಇಮ್ದಾದಖಾನರಿಗಿಂತ ಮೊದಲು ತರಫ ಇನ್ನೂ ಪ್ರಚಾರಕ್ಕೆ ಬಂದಿರಲಿಲ್ಲ. ಇವರು ತರಫ ಹಾಕಿ ಸವರಗಳ ಗುಂಜನವನ್ನು ಹೆಚ್ಚಿಸಿದರು. ಸಿತಾರದ ವ್ಯಾಪಕತೆ ಸಮೃದ್ಧಿ ಹೆಚ್ಚಿ ಕಿವಿಗೆ ಮಧುರವಾಗಿ ಕೇಳತೊಡಗಿತು. ೧೧ ಸ್ವರಗಳ ತರಫ ಹಾಕಿ ರಾಗದಲ್ಲಿರುವ ಸ್ವಗಳಿಗೆ ಅನುಕೂಲ ಆಗುವ ಹಾಗೆ ಪರಿವರ್ತನೆ ಮಾಡಿಕೊಳ್ಳಬಹುದಾಗಿತ್ತು. ಇಮ್ದಾದಖಾನರ ಮಗ ಇನಾಯತ್ ಖಾನ ಎರಡನೇ ತೂಂಬಾ (ಚಿಕ್ಕದು) ಕೆಳಬದಿಗೆ ಜೋಡಿಸಿದರು. ಈಗ ನಮ್ಮ ಕಣ್ಣೆದುರಿಗೆ ಕಾಣುವ ಸಿತಾರ ಈ ಪ್ರಕಾರದ್ದು. ಜವಾರಿಯಲ್ಲಿಯೂ ಹೊಸ ಪ್ರಯೋಗ ಮಾಡಿ ತನಗೆ ಬೇಕಾದ ಧ್ವನಿ ಹೊರಡಲು ಜವಾರಿ ತಿಕ್ಕಬಹುದೆಂಬುದನ್ನು ತೋರಿಸಿಕೊಟ್ಟರು.

ವಿಲಾಯತ್ ಖಾನರು (ಇನಾಯತ ಖಾನರ ಮಗ) ಸಿತಾರದಲ್ಲಿ ತುಂಬಾ, ತಂತಿ, ಪಡದೆ ಮುಂತಾದವುಗಳಲ್ಲಿ ಬದಲಾವಣೆ ಮಾಡಿ ಈಗಿದ್ದ ರೂಪಕ್ಕೆ ತಂದ ಮನೆತನದಲ್ಲಿಯೇ ಹುಟ್ಟಿದವರು. ಇವರು ಸಿತಾರ ನುಡಿಸುವ ಕಲಾವಿದರಲ್ಲಿ ಅತ್ಯಂತ ಪ್ರಮುಖರು. ಇವರೂ ಕೂಡಾ ತಮ್ಮ ಮನೆತನದ ಇತಿಹಾಸಕ್ಕೆ ಅನುಗುಣವಾಗಿ ಸಿತಾರದಲ್ಲಿ ಬದಲಾವಣೆ ಮಾಡಿ ‘ಗಾಯಕಿ’ ಅಂಗ ಆರಂಭ ಮಾಡಿದರು. ಖರಜ, ಲರಜ ನುಡಿಯುವ ಎರಡು ತಂತೆ ತೆಗೆದು ಅವುಗಳಿಗೆ ಬದಲಾಗಿ ಸ್ಟೀಲಿನ ತಂತಿ ಜೋಡಿಸಿದರು. ಗಾಯಕಿ ಅಂಗ ಬಾರಿಸುವಾಗ ಖರಜ ಹಾಗೂ ಲರಜ ನುಡಿಸುವ ತಂತಿಗಳ ಅವಶ್ಯಕತೆ ಕಂಡುಬರಲಿಲ್ಲ. ಹಾಗೂ ಬಂಭೀರಯುಕ್ತ ರಾಗದ ಆಲಾಪನೆಗೆ ಈಗಾಗಲೇ ಸುರ್ ಬಹಾರ್ ಉಪಯೋಗವಾಗತೊಡಗಿದ್ದರಿಂದ ಕೇವಲ ೬ ತಂತಿಯ ಸಿತಾರ ನುಡಿಸತೊಡಗಿದರು.

ಇದಕ್ಕೆ ತದ್ವಿರುದ್ಧವಾಗಿ ಪಂಡಿತ ರವಿಶಂಕರ ಅವರು ಒಂದು ತಂತಿ ಜೋಡಿಸಿ ದಪ್ಪ ತಂತಿಯಲ್ಲಿ ಖರಜ, ಲರಜ ಸ್ವರಗಳು ಹೊರಡುವಂತೆ ಮಾಡಿ ಒಂದೇ ವಾದ್ಯದಲ್ಲಿ ಸುರ್ ಬಹಾರದಂತೆ ಆಲಾಪ ಮಾಡಿ ಗತ್ ಬಾರಿಸಬಹುದೆಂಬುದನ್ನು ತೋರಿಸಿದರು.

ಮೇಲೆ ಕಾಣಿಸಿದ ಸಿತಾರ್ ವಿಕಾಸ ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗಬಹುದು. ಅದೆಂದರೆ ಸಿತಾರ ಹುಟ್ಟಿದಂದಿನಿಂದ ಇಲ್ಲಿಯವರೆಗೆ ಆದ ವಿಕಾಸ ಕೇವಲ ಮುಸಲ್ಮಾನ ಅರಸರ ಕಾಲದಲ್ಲಿ ಹಾಗೂ ಮುಸಲ್ಮಾನ ಕಲಾವಿದರಿಂದ ಮಾತ್ರ. ಅದಕ್ಕಿಂತ ಹೆಚ್ಚಾಗಿ ಕೇವಲ ಒಂದೆರಡು ಮನೆತನದವರು ಮಾತ್ರ ಇದರಲ್ಲಿ ವಿಕಾಸ ಹಾಗೂ ಪರಿವರ್ತನೆ ಮಾಡುತ್ತಾ ಹೋದರು. ಮತ್ತು ಆ ಸಿತಾರ ವಾದನ ಕಲೆಯನ್ನು ತಮ್ಮ ಮನೆತನದಲ್ಲಿಯೇ ಇಟ್ಟುಕೊಂಡರು. ಏಕೆ? ಕಾರಣ ಇತಿಹಾಸದಲ್ಲಿಯ ಪರಿಸ್ಥಿತಿಗಳು ಹಾಗಿದ್ದರಿಂದ ಬೇರೆ ಮನೆತನದವರಿಗೆ ಬದಲಾವಣೆ ಮಾಡುವದು ಸಾಧ್ಯವಾಗಲಿಲ್ಲ. ಸಿತಾರ ವಾದನದ ಕಲಾಪ್ರದರ್ಶನ ಕೇವಲ ರಾಜನ ಎದುರಿಗೆ ಮಾತ್ರ ನಡೆಯುತ್ತಿತ್ತು. ಏಕೆಂದರೆ ರಾಜನಿಗೆ ಹಾಗೂ ಅವನ ದರ್ಬಾರದಲ್ಲಿರುವ ಮಂತ್ರಿಗಳಿಗೆ ಮಾತ್ರ ಸಂಗೀತ ಕೇಳಲು ಸಿಗುತ್ತಿತ್ತು. ಸಾಮಾನ್ಯ ಜನರಿಗೆ ಮಾತ್ರ ಹೊಲದಲ್ಲಿ ಕೆಲಸ. ರಾಜನ ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುವದು ಇದ್ದುದರಿಂದ ಶ್ರೋತೃ ವರ್ಗ ಈಗಿನಂತೆ ಬೆಳೆಯಲಿಲ್ಲ. ರಾಜನು ಕೂಡ ತನ್ನ ಐಶಾರಾಮಿಗಾಗಿ ಸಂಗೀತ ಕೇಳುತ್ತಿದ್ದನೇ ಹೊರತು ಒಬ್ಬ ನುರಿತ ಕಲಾರಸಿಕನಾಗಿ ಕೇಳುತ್ತಿದ್ದಿಲ್ಲ. ಅವನಿಗೆ ಸಂಗೀತವನ್ನು ಆಸ್ವಾದಿಸುವ ಕಿವಿ ಹಾಗೂ ಹೃದಯವಿರಲಿಲ್ಲ. ಔರಂಗಜೇಬನು ಸಂಗೀತ ವಿರೋಧಿಯಾಗಿದ್ದರಿಂದ ದರ್ಬಾರದ ಕಲಾವಿದರು ಬೇರೆ ಸಣ್ಣ ಪುಟ್ಟ ರಾಜರನ್ನು ಅವಲಂಬಿಸಬೇಕಾಯಿತು.

ಸಂಗೀತದಲ್ಲಿ ನನಗೆ ತೀವ್ರಗತಿಯ ಬದಲಾವಣೆ ಕಂಡುಬರುವದು ಬ್ರಿಟಿಷರು ನಮ್ಮ ದೇಶದಲ್ಲಿ ಬಂದು ಆಳತೊಡಗಿದ ಮೇಲೆ. ಬ್ರಿಟಿಷರು ಬಂದ ಮೇಲೆ ಕೆಲ ರಾಜ್ಯಗಳು ಆಳಿದವು ಕೆಲವು ಉಳಿದವು. ಕಲಾವಿದರು ಈ ಪರಿಸ್ಥತಿಯ ಲಾಭ ಪಡೆದರು. ಕಲಾ ಪ್ರದರ್ಶನಕ್ಕಾಗಿ ರಾಜರ ಕಡೆಗೆ ವರ್ಷಕ್ಕೆ ಎರಡು ಮೂರು ಸಲ ಹೋಗತೊಡಗಿದರು. ಸಾಮಾನ್ಯ ಜನರಲ್ಲಿದ್ದ ಕಲಾರಸಿಕರಿಗೂ ತಮ್ಮ ಸಂಗೀತ ವಿದ್ಯೆಯನ್ನು ಪ್ರದರ್ಶಿಸಿ ಸಂಗೀತ ಗಾಯನ, ವಾದನ, ನರ್ತನ ಕಲೆ ಉಳಿಸಿದರು, ಬೆಳೆಸಿದರು. ಸಂಗೀತ ‘ಮನೆತನದ’ ಸೀಮೆ ದಾಟಿ ಗುರುಶಿಷ್ಯ ಪರಂಪರೆ ಬೆಳೆಸಿದರು. ಆದ್ದರಿಂದಲೇ ಉಸ್ತಾದ ವಿಲಾಯತ್ ಖಾನರ ಶಿಷ್ಯ ಅರವಿಂದ ಪಾರಿಖ ಹಾಗೂ ಉಸ್ತಾದ ಅಲ್ಲಾವುದ್ದೀನ ಖಾನರ ಶಿಷ್ಯ ಪಂಡಿತ ರವಿಶಂಕರ ಸಿತಾರ ಕಲಾವಿದರಾಗಿ ಎದ್ದು ಕಾಣುತ್ತಿದ್ದಾರೆ.

ಕರ್ನಾಟಕದಲ್ಲಿ ಮೈಸೂರು ಅರಸರ ಕಾಲದಲ್ಲಿ ಸಂಗೀತಕ್ಕೆ ಮಹತ್ವ ಕೊಟ್ಟಿದ್ದರು. ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ಹಾಡುವ ಹಾಗೂ ವಾದ್ಯ ನುಡಿಸುವ ಕಲಾವಿದರು ಮೈಸೂರ ಅರಸರ ದರ್ಬಾರದಲ್ಲಿದ್ದರು. ಉಸ್ತಾದ ಬರ್ಖತ್ ಉಲ್ಲಾ ರಾಜರೆದುರಿಗೆ ಸಿತಾರ ನುಡಿಸಿ ತನ್ನ ಅಪಾರ ಪಾಂಡಿತ್ಯ ತೋರಿಸಿ ರಾಜರಿಂದ ಮೆಚ್ಚುಗೆ ಪಡೆದು ಹೋಗುತ್ತಿದ್ದ. ಪಂಡಿತ್ ಹುಲಗೂರ ಕೃಷ್ಣಾಚಾರ್ಯರು ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರು. ಅವರ ವಾಸ ಹುಬ್ಬಳ್ಳಿಯಾಗಿದ್ದರೂ ಮೈಸೂರು ಅರಸರ ಆಜ್ಞೆ ಬಂದಾಗ ಹಾಗೂ ದಸರಾ ಉತ್ಸವದಲ್ಲಿ ಪಾಲ್ಗೊಂಡು ಸಿತಾರ ನುಡಿಸಲು ಮೈಸೂರಿಗೆ ಮೇಲಿಂದ ಮೇಲೆ ಹೋಗುತ್ತಿದ್ದರು. ಅವರು ಸಿತಾರ ಹಾಗೂ ಕಿನ್ನರಿ ಎರಡೂ ವಾದ್ಯ ನುಡಿಸಬಲ್ಲವರಾಗಿದ್ದರು. ಅವರ ಶಿಷ್ಯರಾದ ದಿ!! ಶ್ರೀ ಆರ್.ವ್ಹಿ. ಗುಡಿಹಾಳ ಅವರು ಮದ್ರಾಸದ ಫಿಲ್ಮ ಲ್ಯಾಂಡಿನಲ್ಲಿಯೂ ಧಾರವಾಡ ಆಕಾಶವಾಣಿ ನಿಲಯ ಕಲಾವಿದರಾಗಿಯೂ ಸೇವೆ ಸಲ್ಲಿಸಿ ಅನೇಕ ಶಿಷ್ಯಂದಿರನ್ನು ತಯಾರ ಮಾಡಿದ್ದಾರೆ. ಅವರಂತೆ ಉಸ್ತಾದ ರೆಹಮತ್ ಖಾನ ಪಂಡಿತ್ ರಾಮರಾವ್ ಮುಂತಾದವರು ಕರ್ನಾಟಕದಲ್ಲಿ ಸಿತಾರ ಕಲೆ ಬೆಳೆಯಲು ಸಾಕಷ್ಟು ಶ್ರಮಿಸಿದ್ದಾರೆ. ಗುಡಗೇರಿಯಲ್ಲಿ ಪಂಡಿತ್ ಸೋಮಭಟ್ಟ ಎನ್ನುವವರೊಬ್ಬರೂ ಸಿತಾರ ನುಡಿಸುತ್ತಿದ್ದರು. ಆ ಊರಿನ ಸುತ್ತಮುತ್ತಲಿನ ಜನ ಅವರು ಸಿತಾರ ನುಡಿಸುವದನ್ನು ಕೇಳಿದ್ದಾರೆ.

ವಾದನ ತಂತ್ರ

ಆಧುನಿಕ ಸಂಗೀತ ಕ್ಷೇತ್ರದಲ್ಲಿ ಸಿತಾರ ಅತ್ಯಂತ ಪ್ರಭಾವಶಾಲಿ ವಾದ್ಯ. ಎಲ್ಲ ಸಂಗೀತ ಸಮ್ಮೇಳನಗಳಲ್ಲಿ ಸಿತಾರ ಕಲಾವಿದರು ಇದ್ದೇ ಇರುತ್ತಾರೆ. ಪ್ರಾಚೀನ ಕಾಲದಿಂದ ಈಗಿನವರೆಗೆ ಸಿತಾರ ನುಡಿಸುವ ಕಲೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಒಂದು ಕಾಲದಲ್ಲೋ ಸಿತಾರ ಕೇವಲ ಗಾಯನಕ್ಕಾಗಿ ಸಾಥಕ್ಕಾಗಿ ಪ್ರಯೋಗವಾಗುತ್ತಿತ್ತು. ಆದರೆ ಈಗ ಅದು ಸ್ವತಂತ್ರ ವಾದ್ಯಕ್ಕಾಗಿ ಬೆಳೆದುದಲ್ಲದೇ ವ್ಯವಸ್ಥಿತವಾಗಿ ನುಡಿಸುವ ಕ್ರಮವನ್ನು ಸಿತಾರ ಕಲಾವಿದರು ಅನುಸರಿಸುತ್ತಿದ್ದಾರೆ.

ಸಿತಾರವನ್ನು ರಾಗಕ್ಕೆ ಅನುಗುಣವಾಗಿ ಕೂಡಿಸಿದ ಮೇಲೆ ಆಲಾಪದೊಂದಿಗೆ ಕಾರ್ಯಕ್ರಮ ಆರಂಭ ಮಾಡುತ್ತಾರೆ. ಆಲಾಪ ವಿಲಂಬಿತ ಗತಿಯಲ್ಲಿರುತ್ತದೆ. ಸ್ವರಗಳನ್ನು ಅವಿಚ್ಛಿನ್ನವಾಗಿ ನುಡಿಸುತ್ತಿರಬೇಕು. ಎಲ್ಲಿಯೂ ಸ್ವರ ಕಟ್ ಆಗಬಾರದು ಆಲಾಪದಲ್ಲಿ ಮೀಂಡನ್ನೇ ಹೆಚ್ಚಾಗಿ ಉಪಯೋಗಿಸಿ ರಾಗ ಪರಿಚಯ ಮಾಡಿಕೊಡುವರು. ಯಾವ ಪಡದೆಯ ಮೇಲೆ ಎಷ್ಟು ಸ್ವರಗಳವರೆಗೆ ಮೇಂಡ ತೆಗೆಯಬೇಕೆಂಬುದನ್ನು ಎಷ್ಟು ಜೋರಿನಿಂದ ನಖಿಯಿಂದ (ಮಿಜರಾಬ) ಆಘಾತ ಮಾಡಬೇಕೆಂಬುದನ್ನು ಅನುಭವದಿಂದಲೇ ಕಲಿಯಬೇಕು. ಆಲಾಪವನ್ನು ವಾದಿ ಸ್ವರದಿಂದ ಅಥವಾ ಮಧ್ಯಸಪ್ತಕ ಷಡ್ಜದಿಂದ ಆರಂಭಮಾಡಿ ಕೇವಲ ತಾರಸಪ್ತಕದ ಷಡ್ಜದ ಅಲ್ಪಸ್ಪರ್ಷ ಮಾಡಿ ಮಧ್ಯಸಪ್ತಕಕ್ಕೆ ಬದು ತಿಯಾ ಮಾಡಿ ಆಲಾಪದ ಮೊದಲಿನ ಭಾಗ ಮುಗಿಸಬೇಕು. ವರ್ಜಿತ ಸ್ವರದ ಪಡದೆಯ ಮೇಲೆ ಮೀಂಡ ತೆಗೆದಾಗ ರಾಗ ಸೌಂದರ್ಯ ಹೆಚ್ಚಾಗುವದಾದರೆ ಅಲ್ಲಿಯೂ ಮೀಂಡ ತೆಗೆಯಬೇಕು. ಆದರೆ ರಾಗ ಹಾನಿಯಾಗದಂತೆ ನೋಡಿಕೊಳ್ಳಬೇಕು.

ರಾಗಲಾಪದಲ್ಲಿ ಸ್ಥಾಯಿ, ಅಂತರಾ, ಸಂಚಾರಿ, ಆಭೋಗ ಎಂದು ನಾಲ್ಕು ಭಾಗಗಳು. ಸ್ಥಾಯಿ ಆಲಾಪ ತಾರಸಪ್ತಕ ಷಡ್ಜ ಕೇವಲ ಅಲ್ಪಸ್ಪರ್ಶ ಮಾಡಿ ಮಧ್ಯಸಪ್ತಕ ಷಡ್ಜಕ್ಕೆ ಬಂದು ತಿಯಾಮಾಡಿ ಮುಗಿಸಿದರೆ ಆಲಾಪದ ಸ್ಥಾಯಿ ಮುಗಿದಂತೆ.

ಇದಾದ ನಂತರ ಅಂತರಾ. ಅಂತರಾದ ಆರಂಭ ಗಾಂಧಾರ, ಮಧ್ಯಮ ಅಥವಾ ಪಂಚಮದಿಂದ ಮಾಡುವರು. ಅಂತರಾದಲ್ಲಿ ತಾರಸಪ್ತಕ ಷಡ್ಜ ಹೆಚ್ಚು ಹೆಚ್ಚಾಗಿ ಹೊಳೆಯುವದು. ಹೊಸ ಹೊಸ ಸ್ವರ ಸಂಯೋಜನೆ ಮಾಡಿ ತಾರಸಪ್ತಕದಲ್ಲಿ ತಿಯಾ ಷಡ್ಜದ ಜೊತೆಗೆ ಮಾಡಿ ಮತ್ತೇ ಮಧ್ಯಸಪ್ತಕದ ಷಡ್ಜಕ್ಕೆ ಬರುವರು. ಇದಾದ ನಂತರ ಸಂಚಾರಿ ಆಲಾಪ. ಈ ಸಂಚಾರಿ ಆಲಾಪ ಮಧ್ಯಲಯದಲ್ಲಿ ಮಾಡುವರು. ಸಂಚಾರಿಯಲ್ಲಿಯೇ ಗಮಕ ಹಾಗೂ ಸ್ವರಕಂಪನ ತೋರಿಸುವರು. ಮಧ್ಯ ಹಾಗೂ ಮಂದ್ರ ಸಪ್ತಕದಲ್ಲಿ ಸಂಚಾರಿ ಇರುವದು.

ಆಭೊಗವನ್ನು ಅಂತರಾದ ಪುನರುಕ್ತಿ ಎಂದು ಹೇಳಬಹುದು. ರಾಗದ ಸ್ವಭಾವಕ್ಕನುಗುಣವಾಗಿ ಎಲ್ಲಾ ಸಪ್ತಕದಲ್ಲಿಯೂ ನುಡಿಬಹುದು.

ಪೂರ್ವಾಂಗವಾದಿ ರಾಗಗಳ ಆಲಾಪ ಷಡ್ಜ ಅಥವಾ ಪಂಚಮ ಅಥವಾ ವಾದಿ ಸ್ವರದಿಂದ ಆರಂಭ ಮಾಡಿ ಸಣ್ಣ ಸಣ್ಣ ಸ್ವರಗುಚ್ಚ ತೋರಿಸಿ ತಿಯಾ ಆಡಿ ಭಾಗಶಃ ಅಥವಾ ಆಲಾಪ ಮುಗಿಸುತ್ತಾರೆ. ಉದಾ: ನಿ ನಿ ರಿ – ಸಾ – ಇದಕ್ಕೆ ಆಲಾಪದ ಸಮ್ ಎಂದು ಕರೆಯುವ ರೂಢಿ ಆಲಾಪದಲ್ಲಿ ದಾಡಾ ದಾಡಾ ಎಂಬ ಬೋಲನ್ನೇ ಉಪಯೋಗಿಸುವರು. ರಾಗಾಲಾಪದಲ್ಲಿಯೇ ಸಿತಾರ ಕಲಾವಿದ ತನ್ನ ಕೌಶಲ್ಯ ತೋರಿಸಿ ಶ್ರೋತೃಗಳ ಮೇಲೆ ಆಳ ಪ್ರಭಾವ ಬೀರುತ್ತಾನೆ.

ಜೋಡ

ಆಲಾಪ ಮುಗಿಸಿ ಸಮ್‌ಗೆ ಬಂದ ಮೇಲೆ ಜೋಡ ಆರಂಭ. ಬೇರೆ ಬೇರೆ ಸ್ವರ ಸಮುದಾಯಗಳನ್ನು ಜೋಡಿಸಿ ರಾಗದ ಕಲ್ಪನೆ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತಾನೆ. ಪ್ರತಿಸಲವೂ ಸ್ವರ ಸಂಯೋಜನೆ ಹೊಸದೆಂದೆನಿಸಿರಬೇಕು. ಹಾಗೂ ರಾಗ ಹಾನಿಯಾಗವಾರದು. ಆಲಾಪದ ಎರಡನೇ ಮೆಟ್ಟಿಲು ಜೋಡ ಆಲಾಪ. ಮಧ್ಯಲಯದಲ್ಲಿಯೇ ಜೋಡಲಾಪ ನಡೆಯುವದು. ಜೋಡದಲ್ಲಿ ಮೀಂಡದ ಕೆಲಸ ಕಡಿಮೆ. ಆದರೆ ಗಮಕ ಕಂಪನ ಹೆಚ್ಚಾಗಿರುವದರಿಂದ ಮನಸ್ಸಿಗೆ ಹಿತವಾಗಿ ಪರಿಣಮಿಸುವದು. ಯಾವ ಸ್ವರ ಸಂಯೋಜನೆ ಮಾಡುವುದರಿಂದ ರಾಗದ ಛಾಯೆ ಎದ್ದು ಕಾಣುವದೆಂಬುದು ಅರಿವಿರಬೇಕು. ಗಮಕ ಮಾಡಿ ತೋರಿಸುವಾಗ ಅಪಸ್ವರವಾಗಬಾರದು. ಕಲಾವಿದನಿಗೆ ರಾಗಪರಿಜ್ಞಾನ ಚೆನ್ನಾಗಿದ್ದರೆ ರಾಗ ಹಾನಿಯಾಗದಂತೆ ಮತ್ತೊಂದು ರಾಗ ಭಾಸವಾಗದಂತೆ ಜೋಡಲಾಪ ಮಾಡಿ ಕಲಾ ನೈಪುಣ್ಯತೆ ತೋರಿಸಬಲ್ಲ. ಮುಖ್ಯ ಮುಖ್ಯ ಸ್ವರಗಳ ಸಂಯೋಜನೆ ಮಾಡಿ ಸಮ್‌ಗೆ ಬರಬೇಕು. ಆದರೆ ಸ್ವರ ಸಂಯೋಜನೆ ‘ಟುಕಡಾ’ ಅಥವಾ ತಾನ ಆಗಿರಬಾರದು. ಒಂದು ಸಲ ತೆಗೆದುಕೊಂಡ ಸ್ವರಗಳ ಗುಂಪನ್ನು ಪುನರಾವರ್ತಿಸಬಾರದು.

ಝಾಲಾ

ಸ್ಪಷ್ಟ ಹಾಗೂ ಮಧುರವಾದ ಸ್ವರ ಸಮೂಹಗಳನ್ನು ಬೇರೆ ಬೇರೆ ಸಮಯಗಳಲ್ಲಿ ನುಡಿಸುವದು ಝಾಲಾ ಎನಿಸುವದು. ಝಲಾ ಬಾರಿಸುವಾಗ ಬಲಗೈ ಕಿರುಬೆರಳನ್ನು ಉಪಯೋಗಿಸುವರು. ಝಾಲಾದಲ್ಲಿ ಕೆಲವೊಂದು ಸಲ ಒಂದೇ ಸ್ವರದಲ್ಲಿ ನಿಂತು ಕೊನೆಯ ಮೂರು ತಂತಿಗಳನ್ನು ಸ್ವರ ಸ್ವರೂಪ ಸುಂದರವಾಗಿ ಕಾಣಲು ತೀವ್ರಗತಿಯಲ್ಲಿ ನುಡಿಸುತ್ತಾರೆ. ಲಯಬದ್ಧವಾಗಿ ಭಂದೋಬದ್ಧವಾಗಿ ನಿಶ್ಚಿತ. ಝಾಲಾ ಬಾರಿಸಲು ಕಡಿಮೆ ಮಾಡಿಕೊಂಡು ಮಧ್ಯ ಸಪ್ತಕದಲ್ಲಿ ತಿಯಾ ಮಾಡಿ ಮುಗಿಸಿದಾಗ ಝಾಲಾ ಮುಗಿದಂತೆ.

ಆಲಾಪ ಜೋಡ ಝಾಲಾ ಮುಗಿಸಿದ ನಂತರ ಗತ್ ಬಾರಿಸಬೇಕು. ಸಾಮಾನ್ಯವಾಗಿ ವಿಲಂಬಿತ ತೀನತಾಲದಲ್ಲಿ ಮಸೀದಖಾನಿ ಗತ್ ಬಾರಿಸುವರು. ಮಸೀದ ಖಾನಿ ಗತ್ ಬಾರಿಸುವಾಗ ಚೌಗುನ ಅಥವಾ ಅಠಗುನ ಲಯದಲ್ಲಿ ತಾನು ಗಳ ಪ್ರಯೋಗ ಆಗುವದು. ತಾನುಗಳ ಪ್ರಯೋಗ ಯಾವುದೇ ಮಾತ್ರಾದಿಂದ ಆರಂಭ ಮಾಡಬಹುದು.

ಮಸೀದಖಾನಿ ಗತ್ತು ೧೬ ಮಾತ್ರಾದ್ದು ಇದ್ದು ಅದರ ಬೋಲನ್ನು ಮಸೀದ ಖಾನ ಹುಡುಕಿದ್ದರಿಂದ ಅದಕ್ಕೆ ಮಸೀದಖಾನಿ ಗತ್ತು ಎನ್ನುವರು.

ದಿಡ ದಾ ದಿಡ ದಾ ಡಾ ದಾ ದಾ ಡಾ
೧೨ ೧೩ ೧೪ ೧೫ ೧೬

೮ ಮಾತ್ರಾದ ಈ ಬೋಲು ಪುನರಾವೃತ್ತಿ ಮಾಡಿ ೧೬ ರ ಮಾತ್ರಾಯದಲ್ಲಿ ವಿಲಂಬಿತ ಲಯದಲ್ಲಿ ಯಾವುದೇ ರಾಗ ಬಾರಿಸಲು ಅನುಕೂಲ. ಮಸೀದ ಖಾನನು ಈ ಗತ್ತು ಹುಡುಕುವುದಕ್ಕಿಂತ ಮೊದಲು ಸಿತಾರದಲ್ಲಿ ದೃಪದ, ಧಮಾರ ಮಾತ್ರ ನುಡಿಸುತ್ತಿದ್ದರು.

ವಿಲಂಬಿತ ಲಯದಲ್ಲಿ ಬಾರಿಸಲು ಅನುಕೂಲ ಆಗುವ ಹಾಗೆ ಮಸೀದ ಖಾನ ಈ ಗತ್ತು ಹುಡುಕಿದ. ರಜಾಖಾನ ಎಂಬುವನು ಧೃತ ಲಯದಲ್ಲಿ ಬಾರಿಸಲು ಹೊಸ ಬೋಲ ಹುಡುಕಿದ. ಅದಕ್ಕೆ ರಜಾಖಾನಿ ಗತ್ತು ಎಂದು ಹೆಸರು. ಇದಕ್ಕೆ ಪೂರ್ವಿಬಾಜ ಎಂದೂ ಕರೆಯುವರು.

ರಜಾಖಾನಿ ಗತ್ ಬಾರಿಸಿದ ಮೇಲೆ ತಾನುಗಳನ್ನು ಬಾರಿಸುವರು. ತಾನುಗಳು ದುಗುನ್ ಲಯದಲ್ಲಿ ಬಾರಿಸುವರು. ಮೊದಮೊದಲು ಚಿಕ್ಕ ಚಿಕ್ಕ ತಾನುಗಳನ್ನು ನುಡಿಸಿ ಐದು ಆರು ಆವೃತ್ತಿಯ ತಾನುಗಳನ್ನು ನುಡಿಸಿ ಆದ ಮೇಲೆ ಝಾಲಾ ಬಾರಿಸಿ ಸಿತಾರ ವಾದನ ಸಮಾಪನಗೊಳಿಸುವರು. ಆದರೆ ಇತ್ತೀಚೆಗೆ ಸವಾಲ ಜವಾಬ ಎನ್ನುವ ಒಂದು ಹೊಸ ಪ್ರಯೋಗ ಜಾರಿಯಲ್ಲಿ ಬಂದಿದೆ. ಸಿತಾರದಲ್ಲಿ ಯಾವ ಬೋಲುಗಳನ್ನು ಯಾವ ರೀತಿ ನುಡಿಸುವನೋ ಅದೇ ರೀತಿ ತಬಲಾ ವಾದಕ ಕೂಡ ನುಡಿಸಿ ತೋರಿಸುವನು. ಮೊದಲು ಚಿಕ್ಕ ತಾನುಗಳನ್ನು ಅಥವಾ ಮೀಂಡಯುಕ್ತ ತಾನುಗಳನ್ನು ನಂತರ ತೀವ್ರವಾಗಿ ಅತೀ ಚಪ್ಪಾಳೆ ತಟ್ಟುವರು. ಇಡೀ ಸಭಾಗೃಹ ಆನಂದದ ಅಲೆಗಳಿಂದ ತುಂಬಿ ಹೋಗುತ್ತದೆ. ಇದರಿಂದ ರಾಗದ ಶಾಸ್ತ್ರೀಯತೆ ಕಡಿಮೆಯಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಕಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ರಾಗದ ಗಂಭೀರತೆ ಕಡಿಮೆಯಾಗಿ ರಸಭಂಗವಾಗುವದೇ ಹೆಚ್ಚು.

ಸಿತಾರ ನುಡಿಸುವಾಗ ಕೆಲ ಪದ ಪ್ರಯೋಗದ ಜ್ಞಾನವಿದ್ದರೆ ಅನುಕೂಲ

. ಲಾಗಡಾಟ: ಎಡಗೈ ತರ್ಜಿನಿ ಬಟ್ಟನ್ನು ಒಂದು ಪಡದೆ ಮೇಲೆ ಇಟ್ಟು ಬಲಗೈ ನಖಿಯಿಂದ ಆಘಾತ ಮಾಡಿ ಎಡಗೈ ಬೆರಳನ್ನು ಇನ್ನೊಂದು ಸ್ವರದವರೆಗೆ ಜಗ್ಗಿದರೆ ಆರಂಭದ ಸ್ವರಕ್ಕೆ ಲಾಗ ಎಂದೂ ಮುಟ್ಟಿದ ಸ್ವರಕ್ಕೆ ಡಾಟ ಎಂದು ಕರೆಯುವರು. ಆರೋಹ ಅಥವಾ ಅವರೋಹದಲ್ಲಿ ಒಂದು ಸ್ವರಕ್ಕೆ ಆಘಾತ ಮಾಡಿ ಇನ್ನೊಂದು ಸ್ವರಕ್ಕೆ ಬಂದು ನಿಲ್ಲುವದೇ ಲಾಗಡಾಟ ಅನ್ನಿಸಿಕೊಳ್ಳುವದು. ಉದಾ: ನಿ….ರಿ ಈ ಪ್ರಕಾರ ಪಡದೆಯ ಮೇಲೆ ಘಸೀಟ ಸಪಾಟ ಆಗಿ ಎಳೆಯುತ್ತಾ ಹೋಗುವದೇ ಲಾಗಡಾಟ.

. ಜಮಜಮಾ: ಎಡಗೈಯ ತರ್ಜಿನಿ ಒಂದು ಪಡದೇ ಮೇಲೆ ಇಟ್ಟು ಆಘಾತ ಮಾಡಿ ಇನ್ನಂದು ಸ್ವರಕ್ಕೆ ನಡುಬೆರಳನ್ನು ಇಡಬೇಕು. ಆಗ ಆಘಾತ ಮಾಡಬಾರದು. ಈ ಪ್ರಕಾರ ಎರಡನೇಯ ಸ್ವರವು ಆಘಾತ ಮಾಡದೇ ಇರುವುದರಿಂದ ಕ್ಷೀಣವಾಗಿ ಕೇಳಿಸುವುದು. ಇದಕ್ಕೆ ಜಮಜಮಾ ಅನ್ನುವರು.

ಉದಾ:
ಸಾ…..ರಿ    ರಿ…..ಗ
ದಾ…..     ದಾ….

. ಮುರಖಿ: ನಖಿಯಿಂದ ಒದೇ ಆಘಾತದಲ್ಲಿ ಮೂರು ಸ್ವರಗಳನ್ನು ನುಡಿಸುವದು ಮುರಖಿ ಅನ್ನಿಸಿಕೊಳ್ಳುವದು. ರಿಸನಿ ಒಂದೇ ಮಾತ್ರಾದಲ್ಲಿ ಒಂದೇ ಆಘಾತದಲ್ಲಿ ಮೂರು ಸ್ವರಗಳು ಕೇಳುವವು.

. ಗಿಟಕರಿ: ಇದು ಕೂಡಾ ಮುರಖಿ ಹಾಗೆ ಇರುವದು. ಆದರೆ ಇದರಲ್ಲಿ ನಾಲ್ಕು ಸ್ವರಗಳು ನುಡಿಯುವವು. ಮುರಖಿಯ ಹಾಗೆ ಬಾರಿಸಿ ನಡುವಿನ ಬಟ್ಟನ್ನು ಮುಂದಿನ ಸ್ವರದಲ್ಲಿ ಇಟ್ಟರೆ ಗಿಟಕರಿ ಆಗುವದು. ಉದಾ: ರಿಸಾನಿಸಾ.

. ಕಣ:            ಇದಕ್ಕೆ ಸ್ಪರ್ಶ ಎಂದೂ ಹೆಸರು. ಅಜಮಾಸಾಗಿ ತಂತಿಯನ್ನು ಎಳೆದು ಆ ಸ್ವರಕ್ಕೆ ನಖಿಯಿಂದ ನುಡಿಸಿ ಪಡದೆಯ ಮೇಲೆ ಸ್ವರಕ್ಕೆ ಬಂದರೆ ಅದು ಕಣ ಅನ್ನಿಸಿಕೊಳ್ಳುವದು. ಉದಾ: ರಿ, ಸಾ, ರಿ ಸ್ವರಕ್ಕೆ ಆಘಾತ ಮಾಡಿ ಸ ಸ್ವರಕ್ಕೆ ತಂತಿ ದಾ…. ಬಿಡಬೇಕು ಇದಕ್ಕೆ ಷಡ್ಜದ ಮೇಲಿನ ಕಣ ಎಂದು ಹೇಳುವರು. ಆದರೆ ರಿಷಭದಿಂದ ಷಡ್ಜ ಸ್ವರಕ್ಕೆ ಸಾವಕಾಶವಾಗಿ ಬಂದರೆ ಮೀಂಡ ಅನ್ನಿಸಿಕೊಳ್ಳುವದು.

. ಕ್ರಂದನ:      ನಖಿಯಿಂದ ಪಡದೆ ಮೇಲೆ ನಾಲ್ಕೈದು ಸ್ವರಗಳವರೆಗೆ ನುಡಿಸಿದರೆ ಅದಕ್ಕ ಕ್ರಂದನ ಅನ್ನುವರು. ಆಘಾತ ಒಂದೇ ಇರಬೇಕು.

ಆಸನ (ಕುಳಿತುಕೊಳ್ಳುವದು ಪದ್ಧತಿ)

ಸಿತಾರ ನುಡಿಸುವಾಗ ಒಂದೇ ಆಸನದಲ್ಲಿ ಕುಳಿತುಕೊಳ್ಳಬೇಕು. ಮೊದಲು ಎರಡು ಕಾಲು ಎಡಬದಿಗೆ ಹಿಂದೆ ಮಡಚಿ ಸಿತಾರ ನುಡಿಸುತ್ತಿದ್ದರು. ಈಗ ಯಾರೂ ಹೀಗೆ ಬಾರಿಸುವುದಿಲ್ಲ. ಕಾರಣ ಕೈಯಲ್ಲಿ ಸಿತಾರ ಹಿಡಿತಕ್ಕೆ ಸಿಗುವದಿಲ್ಲ. ಈಗಿನ ಕಾಲದಲ್ಲಿ ಎಡಗಾಲನ್ನು ಮಡಚಿ ಅದರ ಮೇಲೆ ಬಲಗಾಲು ಹಾಕಿ ಸಿತಾರನ್ನು ಬಲಗಾಲ ಮಂಡಿಗೆ ಆನಿಸುವರು. ತೂಂಬಾ ಎಡಗಾಲಿನ ಹದಡದ ಮೇಲೆ ಸ್ಥಿರವಾಗಿ ಕೂಡುವದು. ಬಲಗೈಯ ಹೆಬ್ಬಟ್ಟು ದಾಂಡಿ ಹಾಗೂ ತೂಂಬಾ ಜಾಯಿಂಟ ಆದ ಸ್ಥಳ್ಲದಲಿ ಇಟ್ಟು ತರ್ಜನಿಯಿಂದ ದಾಡಾ ದಾಡಾ ನುಡಿಸಬೇಕು. ಎಡಗೈ ದಾಂಡಿಯ ಮೇಲಿನ ಕೈಯನ್ನು ಮೇಲೆ ಕೆಳಗೆ ಸರಾಗವಾಗಿ ಸರಿದಾಡುವಂತೆ ಇಟ್ಟುಕೊಳ್ಳಬೇಕು. ಸಿತಾರ ನುಡಿಸುವವರ ಶ್ವಾಸೋಚ್ಛಾಸ ಸರಾಗವಾಘಿರಬೇಕು. ಶರೀರ ಬಿಗಿ ಹಿಡಿದು ಬಾರಿಸಬಾರದು. ಸಿತಾರ ನುಡಿಸುತ್ತಾ ಹೋದಂತೆ ತಲ್ಲೀನವಾಗಿ ಭವನೆಗಳನ್ನು ಸ್ವರಗಳಲ್ಲಿ ರೂಪಗೊಳ್ಳುವವು.

ಸಿತಾರ ನುಡಿಸುವ ಕಲಾವಿದನಿಗೆ ಆಲಾಪವೇ ಮುಖ್ಯ. ತನ್ನ ಭಾವನೆಗಳು ಜಾಗೃತಗೊಂಡ ಮೇಲೆ ಸಂಗೀತ ರಸಿಕರ ಕಡೆಗೆ ಅವನ ಲಕ್ಷ್ಯ ಹೋಗುವದು. ಸಿತಾರ ಕಲಾವಿದರಿಗೆ ತಾಳದ ಜ್ಞಾನ ಅವಶ್ಯವಿರಬೇಕು. ಮಸೀದ ಖಾನಿ ಗತ್ ಬಾರಿಸುವಾಗ ೧೨ನೇ ಮಾತ್ರಾ ಎಲ್ಲಿ ಬಂದು, ಸಮ್ ಎಲ್ಲಿ ಬಂತು ಹುಸಿ ಎಲ್ಲಿದೆ ಎಂದು ತಬಲಾದಲ್ಲಿ ಕಂಡುಹಿಡಿಯುವ ಜ್ಞಾನವಿರಬೇಕು.

ಸಿತಾರ ವಾದ್ಯ ತಂತು ವಾದ್ಯಗಳಲ್ಲಿಯೇ ಅತ್ಯಂತ ಆಕರ್ಷಕ ಹಾಗೂ ಸುಲಭವಾಗಿ ನುಡಿಸಬಲ್ಲ ಉಪಕರಣ. ಆಕರ್ಷಕವಾಗಿ ಕಾಣಲು ಸಿತಾರದ ತಬಲಿ ಹಾಗೂ ದಾಂಡಿಯ ಸುತ್ತಲೂ ಕಾರಿಗರ ತನ್ನ ಕೌಸಲದಿಂದ ಚಿತ್ತಾರ ಬರೆದು ನೋಡಲು ಸುಂದರವಾಗಿ ಕಾಣುವಂತೆ ಮಾಡುತ್ತಾನೆ. ಆದರೆ ಇದು ಕೇವಲ ಬಾಹ್ಯ ಸೌಂದರ್ಯ. ಆಂತರಿಕ ಸೌಂದರ್ಯ ಸಿತಾರ ಧ್ವನಿಯಲ್ಲಿ ಕಾಣುವದು. ಸಿತಾರದಲ್ಲಿ ಆಳವಾದಿ ಧ್ವನಿಯನ್ನು ಗಂಭೀರವಾದ ಧ್ವನಿಯನ್ನು ಆಲಾಪ ಹಾಗೂ ಮೀಂಡ ಮುಖಾಂತರ ತೋರಿಸಬಹುದು. ಆದರೆ ಸ್ವರ ಜ್ಞಾನ ಇನ್ನೂ ಆಗದೇ ಇರುವ ಸಾಧಕನಿಗೆ ನುಡಿಸಲು ಪಡದೇ ಇರುವುದರಿಂದ ಬಹುಸುಲಭವಾಗಿ ಸಿತಾರ ಕಲಿಯಬಲ್ಲ. ತಂತು ವಾದ್ಯಗಳಾದ ಸಾರಂಗಿ, ಸರೋದ, ಮುಂತಾದ ವಾದ್ಯಗಳಲ್ಲಿ ಪಡದೇ ಇರುವದಿಲ್ಲ. ಸ್ವರ ಹುಡುಕುವದು ಕಷ್ಟ. ಇದೇ ಕಾರಣದಿಂದ ಸಾಧಕ ಸ್ವರಜ್ಞಾನ ಪಡೆಯುತ್ತಾ ನುಡಿಸುವ ಕಲೆಯನ್ನು ಪಡೆಯುತ್ತಾ ಹೋಗಬಹುದು. ವಾಯೋಲಿನ್ ಹೆಚ್ಚಾಗಿ ಗಾಯನದ ಸಾಥವಾಗಿಯೇ ಬಳಕೆಯಲ್ಲಿದೆ. ಅದರಲ್ಲಿ ಗಂಭೀರ ಧ್ವನಿ ಹೊರಡಿಸಲು ಸಾಧ್ಯವಿಲ್ಲ. ಸಾರಂಗಿ ಬಹು ಕಠಿಣ ವಾದ್ಯ. ಆದ್ದರಿಂದ ಅದನ್ನು ನುಡಿಸುವ ಕಲಾವಿದರು ವಿರಳವಾಗುತ್ತಿದ್ದಾರೆ. ಇವರ ಬದಲಾಗಿ ಸಿತಾರ ನುಡಿಸುವ ಕಲಾವಿದರು ಹೆಚ್ಚುತ್ತಿದ್ದಾರೆ. ಶ್ರದ್ಧೆಯಿಂದ ಕಲೆಗಾಗಿ ಸಮಯವನ್ನು ಮುಡುಪಾಗಿಟ್ಟು ಸಾಧನೆ ಮಾಡುವವರು ಈಗಿನ ಕಾಲದಲ್ಲಿ ಕಡಿಮೆಯೆಂದೇ ಹೇಳಬಹುದು. ಮೊದಲು ಗುರುಶಿಷ್ಯ ಪರಂಪರೆ ಮುಂದುವರಿಯುತ್ತಿತ್ತು. ಈಗ ಆ ಪರಂಪರೆ ಹೋಗಿ ಹೊಸ ಸ್ವರೂಪದಿಂದ ಸಂಗೀತ ಸಿತಾರ ಶಿಕ್ಷಣ ನಡೆಯಬೇಕಿದೆ.