ಸತ್ಯುಳ್ಳ ಶರಣರ ಕಥಿ ಹೇಳತಿನಿ ಕೇಳಿರಿ ಚಿತ್ತವಿಟ್ಟಾ ದೈವಾ
ಸಜ್ಜನ ಸಭಾದೊಳಗೆ ನಿಂತ ಹೇಳುವೆವು ನಾವು                 || ಪಲ್ಲವಿ ||

ಸೋಮರಾಯ ಭೀಮರಾಯ ಜೋಡಿ ಗೆಳೆಯರು
ನಿಷ್ಟಿಲಿಂದ ಕಂಡರು ಮುಕ್ತಿ ಮಾರ್ಗನಾ ಕೇಳಿರಿ ಇದನ್ನೆಲ್ಲ

ಸೋಮರಾಯನ ಮನಿ ಈಚಿ ಓಣೀಲಿ
ಭೀಮರಾಯನ ಮನಿ ಆಚಿ ಓಣೀಲಿ
ಗರಡಿ ಆಲಯ ಇರುವುದು ನಡುಮಧ್ಯದಲ್ಲಿ
ಜೋಡಿ ಗೆಳೆಯರು ಕೂಡಿ ಲಾಠ ಪಟವಾ ತಿರವಿ
ಸಾಮಶಕ್ತಿ ಮಾಡುತಲಿ
ನಿತ್ಯ ಕಾಲದಲ್ಲಿ

ಒಂದಾನೊಂದು ದಿವಸದಲಿ
ಬಂದಾಳೊ ಸೋಮರಾಯನ ಹೆಣ್ತಿ
ಗಂಡಗ ತಾಂಬೂಲ ತರುವುದಕಾಗಿ
ಆಗ ಆಕಿ ಹೋಗುತ್ತಿದ್ದಾಳೊ ಕಿರಾಣಿ ಅಂಗಡಿಗೆ ನಡುಬಾಜಿನಲ್ಲಿ

ಬಾಳ ಸುಂದರಿ ಇದ್ದಾಳೊ ಆಕಿ ರೂಪದಲ್ಲಿ
ನಾರಿ ಹೋಗುವುದ ಕಂಡು ಅಂವ ಶೂರಾ ಭೀಮರಾಯ
ಪೂರಾ ಕಣ್ಣಿಟ್ಟನು ಗೆಳೆಯನ ಹೆಣ್ತಿ ಅನ್ನುದು ಗೊತ್ತಿಲ್ಲಾ
ಬಂದು ಕೇಳ್ಯಾನು ಗೆಳೆಯನ ಆ ಕ್ಷಣದಲಿ
ಆಡ್ಯಾನು ಪ್ರೀತಿ ಮಾತಾ
ಈಕಿ ಯಾರಂತಾ ಆಕಿನ ಕೊಡಸಂತ

ಒಂದು ರಾತ್ರಿ ಕಳೆಯವೆನು ಸಂತೋಷಾ
ಸೋಮರಾಯಗ ಹತ್ತಿತು ಚಿಂತಿ
ಏನ ತಂದಿ ಪರಮೇಶ್ವರಾ           || ಚಾಲ ||

ಕೊಡುಸುದಿಲ್ಲಾ ಅಂದರ ಇಂವ ಮಾಡುವದೈನೈತಿ
ಮಾಡ್ಯಾನೂ ಮನದೊಳಗ ಕೊಡಿಸಬೇಕಂತ          || ಏರ ||

ಗರಡಿ ಆಲಯದೊಳು ಮನಸ ತಡಿಯಲಿಲ್ಲಾ
ಭೀಮರಾಯಗಲ್ಲಿ ಬರುವಳಿಲ್ಲಾ ಈ ರಾತ್ರಿ
ಲಗುಮಾಡಿ ಹೇಳೊ ಗೆಳೆಯ ಇಲ್ಲಿ ಬಿಟ್ಟಿದ್ದೆಲ್ಲ
ಬಿಟ್ಟು ತುರ್ತ ಹೋಗಿ ನೀ ಕೇಳಬೇಕು ಈ ಕ್ಷಣದಲಿ

ಸೋಮರಾಯ ಮನಿಗೆ ಬಂದು ಮಡದಿ ಕೇಳುತಲಿ
ಮಡದಿಗೆ ಹೇಳುತಲಿ ಹಾ ಹಾ ಪ್ರೀತಿಯದು
ಋಣ ತಪ್ಪಿತು ನಂದು ನಿಂದು
ಇಂದಿನ ದಿನದೊಳು ಪತಿವ್ರತೆ ಹಾನಿಯಾಗುದು
ವಚನ ಕೊಟ್ಟಾಳೊ ಆ ಕ್ಷಣದೊಳು            || ಚಾಲ ||

ಗಂಡ ಹೆಂಡಿರು ಆಡ್ಯಾರೊ ಪತಿವ್ರತೆ
ಮಂಚಹಾಕಿ ಹಾಸಿ ಅಂತಾರೊ ಇನ್ಯಾತಕ ತಡ
ಸಮೆ ತುಂಬಿ ಇಟ್ಟರು ನಾಕು ಕಡೆ
ಎಲಿ ಅಡಿಕೆ ಇಲ್ಲ ಸಂಗೀತ
ಅಷ್ಟ ತಂದ ಕಸ್ತೂರಿ ಸಿಸ್ತಿನ ತಂಬಾಳ ತುಂಬಿ
ಇಟ್ಟಾರೊ ಸಜ್ಜ ಮಾಡಿ               || ಇಳವು ||

ಗಂಡ ಹೆಂಡಿರಿಬ್ಬರು ಕೂಡಿ ಪ್ರೀತಿಲಿಂದ ಉಂಡು
ಹೆಣ್ತಿ ಹೇಳ್ಯಾಳೊ ಗಂಡಗ ನೀ ಲಗುಮಾಡಿ ಹೊಂಡು
ತೀವ್ರ ಮಾಡಿ ಬರಬೇಕು ಗೆಳೆಯನ ಕರಕಂಡು
ಗಂಡ ಹೆಣ್ತಿ ಹಿಂಗ ಮಾತನಾಡಿ               || ಏರ ||

ಸೋಮರಾಯ ಬಂದ ಗರಡಿ ಆಲಯಕ
ಗೆಳೆಯನ ಕರಿಲಾಕ ತನ್ನ ಮನಿಗೆ ಕಳಸುದಕ
ಇಬ್ಬರು ಜತೀಲೆ ಕೂಡಿ ಬಂದಾರೊ ಮನಿತನೇಕ
ಗೆಳೆಯನ ಕಳಿಸಿ ಹೊಂಟನು ತಾ ಹಿಂದಕ

ಮಂಚದ ಮೇಲೆ ಕುಳಿತುಕೊಂಡು
ಮಂದಗಮನಿ ಬಾ ಎಂದು ಕರದಾನು
ಮಂಚೆ ದೀಪ ಹೋಗತದ ಬತ್ತಿ ಮುಂದಕ ಚಾಚಂದನು
ಬಿಟ್ಟಲಿ ಬತ್ತಿ ಚಾಚಿ ಅಂತಾಳೊ ಬರತೀನಿ
ತಡ ಮಾಡುದಿಲ್ಲ ನಾನು
ದಿಟ್ಟ ಭೀಮರಾಯ ಇವಳ ನಡತೆ ನೋಡಿ
ಕೂನಾ ಹಿಡಿದಾನು ಮನದಾಗ
ಇವಳು ಸೂಳಿ ಅಲ್ಲ ಅಂದನು                 || ಚಾಲ ||

ಭೀಮರಾಯ ಅತ್ತ ಇತ್ತ ನೋಡುವುದರೊಳಗ
ಹತಿಯಾರ ಇತ್ತ ಗೂಟದ ಮೇಗ ರುಮಾಲ
ಹತಿಯಾರ ಕೈಯೊಳು ತಗಂಡು ಅಂತಾನೊ ಮನದಾಗ
ನನ್ನ ಗೆಳೆಯನ ಹತಿಯಾರ ಎಂದು ಹೊಳೆಯಿತು ಭೀಮರಾಯಗ         || ಇಳವು ||

ಕೂನ ಹಿಡಿದಾನ ಸೋಮರಾಯನ
ಇದು ಸೋಮರಾಯನ ಹೆಣ್ತಿ ಈಕಿ ಅಂತಾನೊ ಮನದಾಗ
ಆಗ ಕೇಳತಾನ ಸೋಮರಾಯನ ಹೆಣ್ತಿಗೆ               || ಏರ ||

ಅವ್ವ ನಾರಿ ನೀನು ಯಾರು
ಯಾವ ಪುರುಷನ ಸತಿಯಳು ನೀನು
ಒಂದೂ ಉಳಿಯದಂಗ ಹೇಳಬೇಕು
ನಿನ್ನ ಕೂನವನ ನಾನು ಮಾಡಿದೆನು
ಎಂಥ ಕೆಟ್ಟ ಕೆಲಸವನ್ನು ನಾ
ಮುಂಜಾಲೆದ್ದು ಗೆಳೆಯನಗ ಮುಖ ತೋರಲೆಂದು
ಹತಾರದಿಂದ ಇರಿದುಕೊಂಡ ಭೀಮರಾಯ
ಸತ್ತ ಹೋದ ಒಂದೇ ಹಟದಿಂದ

ಗೆಳತಿಗೆ ಹತ್ತಿತೊ ಚಿಂತಿಯನಾ
ಹಂಚಿಕಿ ಏನು ಮಾಡಬೇಕು

ಇದಕಿನ್ನ ನಾಳೆ ಉದಯಕ
ಸೋಮ ಸುಗುಣ ಜಾಣ
ಬಂದ ಕೊಲ್ಲತಾನೊ ನನ್ನ ಪ್ರಾಣ             || ಚಾಲ ||

ಹ್ಯಾಂಗ ಸಾಯುವುದಕ್ಕಿಂತ ಹಿಂಗ ಸಾವುದು ಲೇಸೈತಿ
ಕೈಯೊಳಗ ತೆಗೆದುಕೊಂಡಳು ಹತಾರ
ಮಾಡಿಕೊಂಡಳೂ ಪ್ರಾಣಹತಿ
ಬಿದ್ದವು ಅವರೆಣಾ
ಕೇಳಿರಿ ಸಜ್ಜನ ಕುಂತಾ
ಸೋಮರಾಯ ಬೆಳಗಿಂದ ಬಂದ ನಿಂತ                || ಇಳವು ||

ಹೆಣ ನೋಡಿ ಅಂತಾನ ಯವ್ವ
ಅನುಕೂಲಕ ಸರಿ ಹೆಣತಿ
ಎಲ್ಲ ಹುಡುಕಿದರ ಸಿಕ್ಕಾಳೊ ಇಂಥ ಸತಿ
ಭೀಮ ಬಿಟ್ಟು ಹೋದ ನನ್ನ ಜತಿ
ಯಾರಗೂಡ ನಾ ಆಡಲೊ ಕುಸ್ತಿ
ಇಂತಿಂಥವರ ಹೋದಮ್ಯಾಲೆ ನಂದೇನೈತಿ
ಕೈಯಾಗ ತಗೊಂಡಾನೊ ಅಂವ ಹತಾರ              || ಏರ ||

ಸೋಮರಾಯ ಹತಾರದಿಂದ ಗೋಣು
ಕುಯ್ದುಕೊಳ್ಳುವುದರೊಳಗ ಹಸ್ತ
ಹಿಡಿದಾನ ಸಾಕ್ಷಾತ್ ಶಿವನು
ಅಂವ ಮುವ್ವರ ಪ್ರಾಣ ಬದುಕಿಸಿಟ್ಟನು ಆಕ್ಷಣ
ಶಿವನು ತಾ ಇವರ ನಿಷ್ಠಗೆ
ಮೆಚ್ಚಿ ಹಸ್ತಲಿಟ್ಟನು ತಲಿಮ್ಯಾಗ
ಮೋಕ್ಷವಾಗಲೆಂದು ಮಾಯವಾದಾಗ*      ಸೋಮರಾಯ ಭೀಮರಾಯ; ರಾಜಪ್ಪ ಟಿ.ಎಸ್. ರಾಯಚೂರು ಜಿಲ್ಲೆಯ ಜನಪದ ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೪. ಪು.ಸಂ. ೬೫-೬೮.