ಆಕಳು ತಾನು ತಿಂದ ಹುಲ್ಲನ್ನು ಹಾಲಾಗಿ ಪರಿವರ್ತಿಸುವ ಒಂದು ಸಜೀವ ಯಂತ್ರ. ಅದು ಹುಲ್ಲನ್ನು ತಿಂದು ಅಮೃತವನ್ನು ಕೊಡುತ್ತದೆ. ಹಾಲು ಮಾನವರಿಗೆ ಒಂದು ವರದಾನ. ಇದಕ್ಕಾಗಿಯೇ ಆಕಳನ್ನು ಗೋಮಾತೆಯೆಂದು ಪೂಜಿಸುವುದು. . ಗಾವೋ ವಿಶ್ವಸ್ಯ ಮಾತರಂ” ಎಂದು ಹೇಳಿರುವುದು. ಅರ್ಥಪೂರ್ಣವಾಗಿದೆ. ಪಾಶ್ಚಾತ್ಯರೂ ಸಹ ಆಕಳನ್ನು “ಸಾಕುತಾಯಿ” ಎಂದು ಪರಿಗಣಿಸುತ್ತಾರೆ. ಅಮೃತಸದೃಶ ಶುದ್ಧ ಆಕಳ ಹಾಲಿನಲ್ಲಿ ಕೆಳಗಿನಂತೆ ಹಲವಾರು ಗುಣಗಳಿವೆ.

i) ಹಾಲಿನಲ್ಲಿರುವ ಸಸಾರಜನಕವು ಮಾನವ ದೇಹದ ಅಂಗಾಂಶ ಮತ್ತು ಸ್ನಾಯುಗಳ ಬೆಳವಣಿಗೆಗೆ ಅವಶ್ಯವಾಗಿ ಬೇಕಾದ ವಸ್ತು. ಶಾಖಾಹಾರ ಪ್ರಧಾನವಾಗಿರುವ ದೇಶಗಳಲ್ಲಿ ಪ್ರಾಣಿಜನ್ಯ ಸಸಾರಜನಕವನ್ನು ಪೂರೈಸುವ ಮುಖ್ಯ ಸಸ್ಯಾಹಾರವೆಂದರೆ ಹಾಲು ಒಂದೇ. ಬೇರೆ ಯಾವ ಆಹಾರ ಪದಾರ್ಥದೊಳಗಿನ ಸಸಾರಜನಕವೂ ಪೂರ್ಣವಾಗಿ, ಸುಲಭವಾಗಿ ಜೀರ್ಣವಾಗುವುದಿಲ್ಲ. ಆದರೆ ಹಾಲಿನೊಳಗಿನ ಸಸಾರಜನಕ ಸಂಪೂರ್ಣವಾಗಿ, ಸುಲಭವಾಗಿ ರಕ್ತಗತವಾಗುತ್ತದೆ.

ii) ಹಾಲಿನಲ್ಲಿಯ ಶರ್ಕರಪಿಷ್ಟಾದಿಗಳು, ಕೆನೆಯ ರೂಪದಲ್ಲಿರುತ್ತವೆ. ಇದೂ ಸಹ ಮಾನವ ದೇಹದ ಬೆಳವಣಿಗೆಗೆ ಬೇಕಾದ ವಸ್ತು. ಇದರಲ್ಲಿ ಲ್ಯಾಕ್ಟೋಸ್ ಸಕ್ಕರೆ ಭಾಗ ಬಹಳವಿದೆ. ಲ್ಯಾಕ್ಟೋಜ್ ಮತ್ತು ಸಸಾರಜನಕಗಳು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

iii) ಮಾನವ ದೇಹಕ್ಕೆ ಬೇಕಾದ ಕಾವು ಮತ್ತು ಶಕ್ತಿಯನ್ನು ಪೂರೈಸುವ ಕೊಬ್ಬಿದ ಭಾಗ ಹಾಲಿನಲ್ಲಿ ಬೆಣ್ಣೆಯ ರೂಪದಲ್ಲಿ ಅಡಗಿರುತ್ತದೆ. ಹಾಲಿನಲ್ಲಿರುವ ಈ ಸ್ನಿಗ್ಧಭಾಗ ಬೇರೆ ಕೊಬ್ಬಿಗಿಂತ ಬಹಳ ಸುಲಭವಾಗಿ ಜಾಗ್ರತೆಯಾಗಿ ಜೀರ್ಣವಾಗುವ ಸ್ಥಿತಿಯಲ್ಲಿರುತ್ತದೆ.

iv) ಹಾಲಿನಲ್ಲಿರುವ ಕ್ಯಾಲ್ಸಿಯಂ ಲವಣವು ಮಾನವ ಶರೀರದಲ್ಲಿರುವ ಎಲುಬುಗಳ ಬೆಳವಣಿಗೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿ ಮಾಡುವುದಕ್ಕೆ ಬೇಕಾದ ವಸ್ತು. ಈ ಕ್ಯಾಲ್ಸಿಯಂ ಲವಣಾಂಶ ಬೆಣ್ಣೆ ತೆಗೆದ ಹಾಲಿನಲ್ಲಿ ಮತ್ತು ತಾಜಾ ಮಜ್ಜಿಗೆಯಲ್ಲಿ ಹೆಚ್ಚಿಸುವುದೂ ಹಾಗೂ ಶ್ರಮ, ಬ್ರಮ, ಮದ, ದಾರಿರ್ದ್ರ್‌ತ್ವ ಶ್ವಾಸ, ಕೆಮ್ಮು, ನೀರಡಿಕೆ, ಹಸಿವು ಮತ್ತು ಜೀರ್ಣ ಜ್ವರಗಳನ್ನು ನಾಶಮಾಡುವುದೂ ಆಗಿದೆಯೆಂದು ಹೇಳಿರುತ್ತಾನೆ.

ಆಕಳು ಹಾಲು ಮಕ್ಕಳಿಗೆ ಅಮೃತ

ಮಕ್ಕಳ ದೇಹದ ಬೆಳವಣಿಗೆಗೆ ಮತ್ತು ಪೋಷಣೆಗೆ ಬೇಕಾದ ಹೆಚ್ಚಿನ ಆಹಾರ ವಸ್ತುಗಳೆಲ್ಲವನ್ನೂ ಒಳಗೊಂಡಿರುವ ಆಹಾರವೆಂದರೆ ಹಾಲು. ಆದುದರಿಂದ ಹಾಲನ್ನು ಆಹಾರ ವಸ್ತುಗಳಲ್ಲೆಲ್ಲಾ ಶ್ರೇಷ್ಠ ವಾದ ಮತ್ತು ಪರಿಪೂರ್ಣವಾದ ಆಹಾರವೆಂದು ಪರಿಗಣಿಸಲಾಗಿದೆ.

ಪ್ರತಿಯೊಂದು ಪ್ರಾಣಿಯೂ ಶೈಶವಾವಸ್ಥೆಯಲ್ಲದ್ದಾಗ ತನ್ನ ತಾಯಿಯ ಹಾಲಿನಿಂದ ಪೋಷಣೆ ಹೊಂದಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಹಾಲು ಕುಡಿದೇ ಎಲ್ಲರೂ ದೊಡ್ಡವಾರಾಗಿ ಬೆಳೆದಿದ್ದಾರೆ. ಮಕ್ಕಳ ಆಹಾರದಲ್ಲಿ ಹಾಲೇ ಪ್ರಧಾನ ವಸ್ತು. ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲ ಆಹಾರಾಂಶಗಳು ಹಾಲಿನಲ್ಲವೆ. ಹುಟ್ಟಿದ ಮಕ್ಕಳಿಗೆ ಕೆಲವು ತಿಂಗಲ ತನಕ ಬಾಯಲ್ಲಿ ಹಲ್ಲುಗಳಿರುವುದಿಲ್ಲ ಹಾಗೂ ಜಠರವು ಅತಿ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಗಟ್ಟಿಯಾದ ಪದಾರ್ಥ ತಿಂದು ಜೀರ್ಣಿಸಿಕೊಳ್ಳವ ಶಕ್ತಿ ಇರುವುದಿಲ್ಲ. ಇವುಗಳನ್ನೆಲ್ಲ ನೋಡಿದರಡೆ ಹುಟ್ಟಿದ ಕೂಸು ಸ್ವಲ್ಪ ಕಾಲದವರೆವಿಗಾದರು ಮೊದಲು ತನ್ನ ತಾಯಿಯ ಹಾಲಿನಿಂದಲೂ, ಆಮೇಲೆ ಬೇರೆ ಹಾಲನ್ನು ಕುಡಿದು ಇಲ್ಲವೇ ಹಗುರವಾಗು ಜೀರ್ಣವಾಗುವ ಪದಾರ್ಥ ತಿಂದು ಬೆಳೆಯಬೇಕು. ತಾಯಿಯ ಹಾಲನ್ನು ಬಿಟ್ಟರೆ ಉಳಿದ ಹಾಲುಗಳಲ್ಲಿ ಹಸುವಿನ ಹಾಲನ್ನೇ ಮಕ್ಕಳಿಗೆ ಹೆಚ್ಚಾಗಿ ಬಳಸುವರು. ಮೊದಲು ಪರಾವಂಲಂಬಿಯಾದ ಮತ್ತು ಇನ್ನೋಬ್ಬರ ಆಶ್ರಯದಲ್ಲಿ ಬೆಳೆದು ಕೂಸು, ಆಕಳ ಹಾಲನ್ನು ಕುಡಿದು ಅದರ ಪ್ರಭಾವದಿಂದ ದಿನದಿನಕ್ಕೆ ಪ್ರಬಲವಾಗಿ ಬೆಳೆದು, ಪ್ರಾಪ್ತವಯಸ್ಸಿಗೆ ಬಂದಾಗ ಅದ್ಭುತ ಕಾರ್ಯ ಮಾಡಬಲ್ಲ ದೇಹಶಕ್ತಿ ಮತ್ತು ಬುದ್ದಿಶಕ್ತಿಯನ್ನು ಪಡೆಯುತ್ತದೆ. ಆಕಳ ಮತ್ತು ಎಮ್ಮೆ ಹಾಲಿನ ಗುಣವಿಶೇಷಣಗಳನ್ನು ಪರೀಕ್ಷಿಸಿ ತುಲನೆ ಮಾಡಿ ನೋಡಿದಲ್ಲಿ ಸೇವನೆಗೆ ಆಕಳ ಹಾಲೇ ಉತ್ತಮವಾದುದು. ಆಕಳ ಹಾಲು ಎಮ್ಮೆ ಹಾಲಿಗಿಂತ ತಾಯಿಯ ಮೊಲೆ ಹಾಲಿಗೆ ಸರಿಸಮಾನವಾದದ್ದು.

ಹೆಚ್ಚಾಗಿ ಎಮ್ಮೆಯ ಹಾಲನ್ನು ಅದರಲ್ಲಿನ ಅದಿಕ ಪ್ರಮಾಣದಲ್ಲಿರುವ ಬೆಣ್ಣೆಗಾಗಿ ಮೆಚ್ಚಿ ಉಪಯೋಗಿಲಾಗುತ್ತದೆ. ಪ್ರತಿದಿನದ ಆಹಾರದಲ್ಲಿ ನಾವು ಹೆಚ್ಚಾಗಿ ಅಕ್ಕಿ, ಜೋಳ, ಗೋದಿ, ರಾಗಿ, ಸಜ್ಜೆ, ಕೊಬ್ಬರಿ, ಕಡಲೆಕಾಯಿ(ಶೇಂಗಾ) , ತೊಗರಿ ಉಪಯೋಗಿಸುತ್ತೇವೆ. ಇವುಗಳಲ್ಲಿ ಪಿಷ್ಟ ಮತ್ತು ಮೇದಸ್ಸು(ಕೊಬ್ಬು) ಅಂಶಗಳು ಸಾಕಷ್ಟು ಪ್ರಮಾಣದಲ್ಲಿರುವುದರಿಂದ ನಮಗೆ ಕೊಬ್ಬಿನ ಕೊರತೆ ಅಷ್ಟೇನೂ ಕಂಡು ಬರುವುದಿಲ್ಲ. ಆದರೆ ನಮ್ಮ ಆಹಾರದಲ್ಲಿ ಇಂದು ಹೆಚ್ಚಿನ ಕೊರತೆ ಸಸಾರಜನಕ, ಖನಿಜಪದಾರ್ಥಗಲು ಮತ್ತು ಜೀವಸತ್ವಗಳದ್ದು.

ಈ ಎಲ್ಲಾ ಕೊರತೆಗಳನ್ನು ಆಕಳ ಹಾಲು ಬಹುಮಟ್ಟಿಗೆ ಎಮ್ಮೆಯ ಹಾಲಿಗಿಂತ ಹೆಚ್ಚು ಸಮರ್ಪಕಿವಾದ ರೀತಿಯಲ್ಲಿ ಪೂರೈಸಬಲ್ಲದು. ಎಮ್ಮೆಯ ಹಾಲಿನಲ್ಲಿ ಬೆಣ್ಣೆಯ ಅಂಶ ಅದಿಕಪ್ರಮಾಣದಲ್ಲಿದೆ. ಮತ್ತು ಎಮ್ಮೆಯ ಹಾಲಿನಲ್ಲಿರುವ ಬೆಣ್ಣೆಯ ಕಣಗಳು ಮತ್ತು ಅದರ ಕೆನೆಯಲ್ಲಿ ಅಡಗಿರುವ ಸಸಾರಜನಕದ ಕಣಗಳು ಗಾತ್ರದಲ್ಲಿ ಬಹಳ ದೊಡ್ಡದಾಗಿರುವುದಲ್ಲದೆ, ಬಹಳ ದಟ್ಟವಾಗಿ ಕೂಡಿಕೊಂಡಿರುವುದರಿಂದ ಸುಲಭವಾಗಿ ಕರಗದೆ, ಬೇಗನೆ ಜೀರ್ಣವಾಗದೆ ಸುಲಭವಾಗಿ ರಕ್ತಗತವಾಉವ ಪರಿಸ್ಥಿತಿಯಲ್ಲಿಲ್ಲ. ಇವುಗಳನ್ನು ಕರಗಿಸಿ ಜೀರ್ಣವಾಗುವಂತೆ ಮಾಡಲು ನಮ್ಮಲ್ಲಿಯ ಜೀರ್ಣರಸಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಯಕೃತ್ತಿನ ಮೇಲೆ ಅದಿಲ ಒತ್ತಡ ಬೀಳುತ್ತದೆ. ಈ ಹೆಚ್ಚಿನ ಒತ್ತಡದಿಂದ ಯಕೃತ್ತಿನ ಕಾರ್ಯದಲ್ಲಿ ವ್ಯತ್ಯಯವಾಗಿ ಅದು ಕೆಡುವ ಸಂಭವವುಂಟು. ಹೀಗಾದಲ್ಲಿ ರೋಗಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ. ಈ ದುಷ್ಪರಿಣಾಮ ಚಿಕ್ಕ ಮಕ್ಕಳ ಯಕೃತ್ತಿನ ಮೇಲೆ ಹೆಚ್ಚು. ಅದೇ ಆಕಳ ಹಾಲಿನಲ್ಲಿರುವ ಬೆಣ್ಣೆಯ ಕಣಗಳು ಮತ್ತು ಸಸಾರಜನಕ ಕಣಗಳು ಗಾತ್ರದಲ್ಲಿ ಬಹಳ ಸಣ್ಣವಾಗಿಯೂ ಬಹಳ ಮೃದುವಾಗಿಯೂ ಇರುವುದಲ್ಲದೆ ದ್ರವರೂಪದಲ್ಲಿರುವುದರಿಂದ ಇವು ಸುಲಭವಾಗಿ ಕರಗಿ ಜೀರ್ಣವಾಗಿ ರಕ್ತಗತವಾಗುತ್ತವೆ. ಇದರಿಂದ ಜೀರ್ಣರಸಗಳನ್ನು ಸ್ರವಿಸುವ ಗ್ರಂಥಿಗಳು ಹೆಚ್ಚು ಶ್ರಮಿಸಬೇಕಾಗುವುದಿಲ್ಲ. ಯಕೃತ್ತಿನ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಆದುದರಿಂದ ಎಮ್ಮೆಯ ಹಾಲಿಗಿಂತ ಆಕಳ ಹಾಲು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಮತ್ತು ಆರೋಗ್ಯಕರ.

ನಮ್ಮ ದೇಹಪೋಷಣೆಗೆ ಮತ್ತು ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾದ ಜೀವಸತ್ವಗಳು ಆಕಳ ಹಾಲಿನಲ್ಲಿ ಹೇರಳವಾಗಿವೆ. ಇವುಗಳಲ್ಲಿ   A -ಜೀವಸತ್ವ ಬಹಳ ಮುಖ್ಯವಾದದ್ದು.  A- ಜೀವಸತ್ವ ಕೆರೋಟಿನ್ ನಲ್ಲಿ ಅಡಗಿರುತ್ತದೆ. ಆಕಳ ಹಾಲಿನಲ್ಲಿ ಈ ಕೆರೋಟಿನ್ ಅದಿಕ ಪ್ರಮಾಣದಲ್ಲಿರುವುದರಿಂದ  A-ಜೀವಸತ್ವ ಎಮ್ಮೆಯ ಬೆಣ್ಣೆಯಲ್ಲಿರುವುದಕ್ಕಿಂತ ೧೦ ಪಟ್ಟು ಹೆಚ್ಚು ಪ್ರಮಾಣದಲ್ಲಿರುತ್ತದೆ. ಆಕಳ ಹಾಲಿನ ಸೇವನೆಯಿಂದ ನಾವು ಸುಲಭವಾಗಿ  A – ಜೀವಸತ್ವವನ್ನು ಪಡೆಯಬಹುದು. ಆಕಳ ಬೆಣ್ಣೆಯಲ್ಲಿ ಕೆರೋಟಿನ್ ಹೆಚ್ಚಾಗಿರುವುದರಿಂದ ಆಕಳ ತುಪ್ಪವನ್ನು ಕಾಯಿಸಿದಾಗ A – ಜೀವಸತ್ವ ಬೇಗನೆ ನಾಶವಾಗದಂತೆ ಈ ಕೆರೋಟಿನ್ ಕಾಪಾಡುತ್ತದೆ. ನಾವು ಆಕಳ ಹಾಲಿನಿಂದ   B1, B2   ಮತ್ತು   D- ಜೀವಸತ್ವಗಳನ್ನು ಸುಲಭವಾಗಿ ಪಡೆಯಬಹುದು.

ಶರೀರದಲ್ಲಿರುವ ಅವಯವಗಳಲ್ಲಿ ನಿರಂತರವಾಗಿ ಕೆಲಸ ನಡೆಯುತ್ತಿರುವುದರಿಂದ ಹಲವು ಜೀವಕೋಶಗಳು ಬಹಳ ಬೇಗನೆ ಸವೆಯುತ್ತವೆ ಮತ್ತು ಕೆಲವು ಅದಿಕ ಸಂಖ್ಯೆಯಲ್ಲಿ ಸಾಯುತ್ತಿರುತ್ತವೆ. ಈ ಜೀವಕೋಶಗಳಲ್ಲಿನ ಜೀವಧಾತುದ್ರವವಸ್ತುವು ಸಸಾರಜನಕಗಳಿಂದ ತುಂಬಿರುತ್ತದೆ. ಈ ಜೀವಕೋಶಗಳ ಕೆಲಸಕ್ಕೆ ಸಸಾರಜನಕಗಳು ಬಹಳ ಅವಶ್ಯಕ.

ಸಸಾರಜನಕವು ಶರೀರದಲ್ಲಿ ಉಂಟಾಗುವ ಸವಕಳಿಯನ್ನು ಪೂರೈಸುವುದಲ್ಲದೆ ಹೊಸ ಜೀವಕೋಶಗಳನ್ನು ರಚಿಸುತ್ತದೆ. ಬೆಳೆಯುವ ಕರುಗಳಿಗೆ, ಹೋರಿಗಳಿಗೆ ಗಬ್ಬದ ಹಸುಗಳಿಗೆ ಮತ್ತು ಕರುಹಾಕಿದ ಹಸುಗಳಿಗೆ ಇದು ಅವಶ್ಯಕವಾಗಿ ಬೇಕೆಬೇಕು. ಹಾಲಿನಲ್ಲಿರುವ ಸಸಾರಜನಕವು ದೇಹದ ತಂತು ಮತ್ತು ಸ್ನಾಯುಗಳ ಬೆಳವಣಿಗೆಗೆ ಅವಶ್ಯಕವಾಗಿ ಬೇಕಾದ ವಸ್ತು. ಶಾಖಾಹಾರ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಪ್ರಾಣಿಜನ್ಯ ಸಸಾರಜನಕವನ್ನು ಪೂರೈಸುವ ಮುಖ್ಯ ಶಾಖಾಹಾರವೆಂದರೆ ಹಾಲೊಂದೆ. ಬೇರೆ ಯಾವ ಆಹಾರ ಪದಾರ್ಥದೊಳಗಿನ ಸಸಾರಜನಕವೂ ಪೂರ್ಣವಾಗಿ ಜೀರ್ಣವಾಗುವುದಿಲ್ಲ.

ಹಸುವಿನ ಹಾಲಿನಲ್ಲಿ ಎಂಟು ತೆರನಾದ ಸಸಾರಜನಕ ವಸ್ತುಗಳು ಹತ್ತು ಪ್ರಕಾರದ ಅಮೈನೋ ಆಮ್ಲಗಳು, ಹನ್ನೋಂದು ನಮೂನೆಯ ಸ್ನಿಗ್ದ ಆಮ್ಲಗಳು, ಆರು ತೆರನಾದ ಜೀವಸತ್ವಗಳು, ಎಂಟು ತೆರನಾದ ಜೀವಾಣುರಹಿತ ಕಿಣ್ವಗಳೇ ಮೊದಲಾದ ಬೇರೆ ಬೇರೆ ಪದಾರ್ಥಗಳು ಇರುತ್ತವೆ. ಹಾಲಿನ ಈ ಎಲ್ಲ ಗುಣವಿಶೇಷಗಳನ್ನು ಕಂಡುಕೊಂಡು ಅಮೆರಿಕಾ, ಇಂಗ್ಲೆಂಡ್, ಡೆನ್ ಮಾರ್ಕ್. ಆಸ್ಟ್ರೇಲಿಯಾ ಮೊದಲಾದ ದೇಶಗಳ ಜನರು ತಮ್ಮ ಸೇವನೆಗೆ ಆಕಳ ಹಾಲನ್ನೇ ಉಪಯೋಗಿಸುತ್ತಾರೆ. ಎಮ್ಮೆ ಅವರಲ್ಲಿಲ್ಲ. ಆಕಳ ಹಾಲನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸುತ್ತಿರುವ ಅವರ ದೇಹದ ಬೆಳವಣಿಗೆ ಮತ್ತು ಆರೋಗ್ಯಗಳು ಉತ್ತಮವಾಗಿವೆ.

ಒಟ್ಟಿನಲ್ಲಿ ಆಕಳ ಹಾಲು, ರುಚಿಯಲ್ಲಿ, ಸುವಾಸನೆಯಲ್ಲಿ ಸುಲಭವಾಗಿ ಜಾಗ್ರತೆಯಾಗಿ ಪಚನವಾಗುವುದರಲ್ಲಿ, ಮನಸ್ಸನ್ನು ಶಾಂತವಾಗಿ ಮತ್ತು ಸಮಾಧಾನಕರ ಸ್ಥಿತಿಯಲ್ಲಿಡುವುದರಲ್ಲಿ ತನ್ನ ವೈಶಿಷ್ಟವನ್ನು ಹೊಂದಿರುತ್ತದೆ. ಈ ಎಲ್ಲ ಉತ್ತಮ ಗುಣಗಳಿಗಾಗಿ ಆಕಳ ಹಾಲು ಮಕ್ಕಳಿಗೆ ಅತ್ಯಾವಶ್ಯಕ. ಯುವಕರಿಗೆ ಆರೋಗ್ಯಕರ ಮುದುಕರಿಗೆ ಉತ್ತಮ ಪೇಯ ರೋಗಿಗಳಿಗೆ ಶಕ್ತಿವರ್ಧಕ. ಹುಟ್ಟಿದ ಮಗುವಿನಿಂದ ಹಿಡಿದು ಸಾಯುವ ಮುದುಕರವರೆಗೂ ಅತಿ ಉತ್ತಮ ಆಹಾರವೆಂದರೆ, ಆಕಳಹಾಲು.