ಸಾವಿರೆತ್ತಿನ ಮುಂದೆ ಹೋಗೋದು ನಮ್ಮೆತ್ತು
ಪಾದಕ್ಕೆ ಜಂಗು ಮೊಕರಂಬೆ | ಹಾಕ್ಕೊಂಡು
ಓಲಾಡಿ ಗಿರಿಯ ಇಳಿದಾವು

ಮುತ್ತೀನ ಕೋಲು ಮುಂಗೈಲಿ ಹಿಡಕೊಂಡು
ಮುಂದ್ಹೇರು ಹೊಡೆವ ಮೂಗಣ್ಣ | ನಿನ್ನೆತ್ತು
ಕಲ್ಲ್ಹತ್ತಿ ಜಾರಿ ಇಳಿದಾವೊ

ಎತ್ತು ಕಾಯುವವನಿಗೆ ಎಳೆ ಸಣ್ಣ ಅರುಕಡ್ಡಿ
ಪಚ್ಚೆ ತೆನೆಯಂತ ನಾಗಸರ | ತಕ್ಕೊಂಡು
ಎತ್ತೀನ ಜ್ಞಾನ ಮರೆತಾನು

ಹೊತ್ತು ಮೀರಿತು ಹೋರಾಟ ಬಿಡದಲ್ಲ
ಹೊಣೆಯಣ್ಣ ದೂರ ಗಿರಿಸೀಮೆ | ನಂಜಯ್ನ
ತೋಳು ಬಾಪುರಿಯ ಬೆಳಕಲ್ಲಿ

ಹಂಚೀ ಮೇದಾವೊ ಮಿಂಚೀವೊ ನಮ್ಮೆತ್ತು
ಪಂಚಮುಖದೊಡೆಯ ದಾಸಯ್ಯ | ನಮ್ಮೆತ್ತು
ಮಿಂಚೂತ ಬೆಟ್ಟ ಇಳಿದಾವು

ಸೋದರಮಾವನೆತ್ತು ಸೋಗೆಹಲ್ಲು ಮೇದೊ
ಸೋಬಾನೆಕೆಟ್ಟೆ ತಿಳಿನೀರು | ಕಡಿದು
ಓಲಾಡಿ ಗಟ್ಟ ಇಳಿದಾವು

ಗಿಂಡೆತ್ತು ಗಿಣಿರಾಮ ಗಿಣಿರಾಮ
ಮುಂದೈತೊ ಮಗನೆ ನಿನ | ಎಳೆತಾಸುಗಗೂಡ
ಸಣ್ಣ ಮಳಲಾಗೆ ಸವಲಗ್ಗೆ

ಎತ್ತು ಎನಬಹುದೇ ಎಡಜೋರಿ ಬಸವಾನ
ಸುತ್ತೇಳು ಲೋಕ ಸಲುವವನ | ಬಸವಾನ
ಸತ್ವ ಮರೆಯುವುದೆ ಧರೆಯಲ್ಲಿ

ಎತ್ತುನಿಂತ ಗದ್ದೇಲಿ ಬಿತ್ತುತ ನಿಂತನ್ಯಾರೆ
ಮುತ್ತಿನಂತೆ ಕಾಲು ನಿಡಿದೋಳು | ಬಾಲಯ್ಯ
ಖಂಡ್ಗವ ಬಿತ್ತಿ ಕಾಡಿ ಬೆಳೆವ