ಮೂಲವಸ್ತುಗಳನ್ನು ಸೇರಿಸುವುದು : ಉತ್ತಮ ಗುಣಲಕ್ಷಣಗಳಿರುವ ಸಂಬಾರ ವಸ್ತುಗಳನ್ನು ಉಪಯೋಗಿಸಬೇಕು. ಹಿತವಾದ ಪರಿಮಳ ಬರುವಂತೆ ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಬೇಕು. ಸಂಬಾರ ವಸ್ತುಗಳ ಮಿಶ್ರಣದಲ್ಲಿ ಯಾವುದೊಂದು ವಸ್ತುವೂ ನೈಜವಾದ ಟೊಮೆಟೊ ವಾಸನೆಗಿಂತ ಪ್ರಬಲವಾಗಿರಬಾರದು. ಈ ಕೆಳಗಿನ ವಿಧಾನಗಳಿಂದ ಸಂಬಾರವಸ್ತುಗಳನ್ನು ಉಪಯೋಗಿಸಬಹುದು :

ಚೀಲ ವಿಧಾನ : ಸಂಬಾರ ವಸ್ತುಗಳನ್ನು ಮಸ್ಲಿನ್ ಚೀಲದಲ್ಲಿ ಸಡಿಲವಾಗಿ ಕಟ್ಟಿ ಕುದಿಯುತ್ತಿರುವ ಪಾತ್ರೆಯಲ್ಲಿರುವ ತಿರುಳಿನೊಡನೆ ಇಡಬೇಕು. ಕೆಚಪ್‌ನ್ನು ಸೀಸೆಗಳಲ್ಲಿ ತುಂಬುವ ಮುನ್ನ ಚೀಲಗಳನ್ನು ಈಚೆಗೆ ತೆಗೆಯಬೇಕು. ಈ ವಿಧಾನದ ಪ್ರಮುಖ ದೋಷಗಳು ಮುಂದಿನ ಪುಟದಲ್ಲಿಯಂತಿವೆ.

(i) ಚೀಲ ಕಿತ್ತುಹೋಗುವುದರಿಂದ ಇಡಿಯ ಉತ್ಪನ್ನ ಕೆಡಬಹುದು. ತಿರುಳನ್ನು ಎಷ್ಟೇ ಸೂಕ್ಷ್ಮ ಜರಡಿಯ ಮೂಲಕ ಹಾಯಿಸಿದರೂ, ಸಂಬಾರ ವಸ್ತುಗಳ ಅತಿ ಸೂಕ್ಷ್ಮ ಕಣಗಳು ಜರಡಿಯ ಮೂಲಕ ಹಾದುಬಂದು ಕೆಚಪ್ಪನ್ನು ಕಪ್ಪಾಗಿ ಮಾಡುತ್ತವೆ.

(ii) ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸಿದ ಸಂಬಾರ ವಸ್ತುಗಳ ಮತ್ತು ಅವುಗಳ ಪ್ರಮಾಣ ಹಾಗೂ ಕುದಿಸುವ ಅವಧಿಗನುಗುಣವಾಗಿ ಕೆಚಪ್ ರುಚಿ ಮತ್ತು ವಾಸನೆಯಿರುತ್ತದೆ.

(iii) ಮೊದಲನೆ ಬಾರಿ ಕುದಿಸಿದಾಗ ಸಂಬಾರ ವಸ್ತುಗಳ ವಾಸನೆ ನೀಡುವ ಎಲ್ಲ ಸಾರವೂ ಕೆಚಪ್‌ಗೆ ಬರುವುದಿಲ್ಲ. ಇಷ್ಟೇ ಅಲ್ಲದೆ ಸಾಮಾನ್ಯ ಶಾಖದಲ್ಲಿ ಬೇಗ ಆವಿಯಾಗುವ, ಕೆಲವು ವಾಸನೆ ನೀಡುವ ವಸ್ತುಗಳೂ ನಷ್ಟವಾಗಬಹುದು; ಇದನ್ನು ಪರಿಹರಿಸಲು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಂಬಾರ ವಸ್ತುಗಳನ್ನು ಸೇರಿಸಬೇಕು; ಆದರೆ ಇದರಿಂದ ಕೆಚಪ್ ತಯಾರಿಸುವ ವೆಚ್ಚ ಏರುತ್ತದೆ. ಆದರೆ ಉಪಯೋಗಿಸಿದ ಸಂಬಾರ ವಸ್ತುಗಳನ್ನು ಇನ್ನೊಮ್ಮೆ ಉಪ್ಪಿನಕಾಯಿ ತಯಾರಿಸಲು ಉಪಯೋಗಿಸಬಹುದು.

ಈ ಎಲ್ಲ ದೋಷಗಳಿದ್ದರೂ, ಉತ್ತಮ ಬಗೆಯ ಕೆಚಪ್‌ನ್ನು ಚೀಲ ವಿಧಾನದಿಂದ ತಯಾರಿಸಲು ಸಾಧ್ಯವಿದೆ.

ಸಂಬಾರ ವಸ್ತುಗಳ ತೈಲಗಳ ಬಳಕೆ : ಈ ತೈಲಗಳಲ್ಲಿ ಟ್ಯಾನಿನ್ ಇರುವುದಿಲ್ಲ. ಸಂಬಾರ ವಸ್ತುಗಳನ್ನು ಸೇರಿಸಿದಾಗ ಆಗುವಂತೆ ಈ ತೈಲಗಳನ್ನು ಉಪಯೋಗಿಸಿದಾಗ ಕೆಚಪ್ ಕಪ್ಪಾಗುವುದಿಲ್ಲ. ತೈಲಗಳನ್ನು ಅಗತ್ಯ ರೀತಿ ಸೇರಿಸಬಹುದು. ಆದರೆ ಸಂಬಾರ ವಸ್ತುವಿನ ತೈಲಗಳಿಗೆ ಮೂಲವಸ್ತುವಿನ ಸಹಜ ನೈಜ, ವಾಸನೆಯಿರುವುದಿಲ್ಲ.

ಬಳಸುವ ಸಂಬಾರ ವಸ್ತು ಮತ್ತು ಅದಕ್ಕೆ ಸಮಾನತೂಕದ ತೈಲ ಪ್ರಮಾಣಗಳ ನಡುವಣ ಸಂಬಂಧವನ್ನು ಕ್ಯಾಂಪ್‌ಬೆಲ್‌ ಈ ರೀತಿ ಸೂಚಿಸಿದ್ದಾನೆ :

ಸಂಬಾರ ವಸ್ತು

ಸಮಾನ ತೂಕದ ತೈಲ (ಪೌಂಡ್‌ಗಳಲ್ಲಿ)

ದಾಲ್ಚಿನ್ನಿ ೦.೫
ಲವಂಗ ೧೫.೦
ಜಾಪತ್ರೆ ೩.೫
ಮೆಣಸು ೧.೦
ಏಲಕ್ಕಿ ೩.೦

ಸಂಬಾರ ವಸ್ತುಗಳ ಅಂಟು ತೈಲಸಾರಗಳ ಬಳಕೆ : ಇವುಗಳಿಗೆ ಸಂಬಾರ ವಸ್ತುಗಳ ಸಹಜವಾದ ವಾಸನೆಯಿರುತ್ತದೆ. ಇವುಗಳನ್ನು ಭಾರಿ ಪ್ರಮಾಣದ ಕೆಚಪ್ ತಯಾರಿಕೆಯಲ್ಲಿ ಲಾಭದಾಯಕವಾಗಿ ಬಳಸಬಹುದು. ಇವುಗಳನ್ನು ಕೆಚಪ್ ಕುದಿಸುವ ಕೆಲ ನಿಮಿಷಗಳ ಮೊದಲು ಸೇರಿಸಬೇಕು.

ಸಾರಗಳ ಬಳಕೆ : ಸಂಬಾರ ವಸ್ತುಗಳನ್ನು ದೀರ್ಘಕಾಲ ವಿನಿಗರ್‌ನಲ್ಲಿ ನೆನೆಸಿ ಅಥವಾ ಅದರೊಡನೆ ಕುದಿಸಿ ದೊಡ್ಡ ಪ್ರಮಾಣದಲ್ಲಿ ಸಾರ ತಯಾರಿಸಬಹುದು. ಇಂಥ ಸಾರಗಳನ್ನು ಬಳಸುವುದರಿಂದ ಸಂಬಾರ ವಸ್ತುಗಳ ಪ್ರಮಾಣವನ್ನು ಖಚಿತವಾಗಿ ನಿರ್ಧರಿಸಬಹುದು. ಇದರಿಂದ ಕೆಚಪ್‌ಗೆ ಮೂಲವಸ್ತುವಿನ ರುಚಿ ಹಾಗೂ ವಾಸನೆ ಬರಲು ಸಹಾಯವಾಗುತ್ತದೆ. ನಮ್ಮ ದೇಶದಲ್ಲಿ ಕೆಲವು ಕೆಚಪ್ ತಯಾರಕರು ಇದನ್ನು ಉಪಯೋಗಿಸುತ್ತಿದ್ದಾರೆ.

ಸಕ್ಕರೆ : ಬೇಯಿಸುವ ಮುನ್ನ ಸುಮಾರು ೧/೩ ಭಾಗ ಸಕ್ಕರೆಯನ್ನು ಸೇರಿಸಬೇಕು. ಇದರಿಂದ ಟೊಮೆಟೊ ಬಣ್ಣ ಪ್ರಬಲವಾಗುತ್ತದೆ. ಕೆಚಪ್‌ಗೆ ಅಧಿಕ ಪ್ರಮಾಣದಲ್ಲಿ ಬಣ್ಣ ಬರುತ್ತದೆ. ಕೆಚಪ್‌ಗೆ ಸಿದ್ಧವಾಗುವುದಕ್ಕೆ ಸ್ವಲ್ಪ ಮುಂಚೆ ಮಿಕ್ಕ ಸಕ್ಕರೆಯನ್ನು ಸೇರಿಸಬೇಕು. ಪ್ರಾರಂಭದಲ್ಲೇ ಪೂರ್ತಿಯಾಗಿ ಸಕ್ಕರೆ ಸೇರಿಸಿದರೆ ತಿರುಳನ್ನು ದೀರ್ಘಕಾಲ ಹೆಚ್ಚು ಉಷ್ಣತೆಯಲ್ಲಿ ಕುದಿಸಬೇಕಾಗುತ್ತದೆ. ಇದರಿಂದ ಕೆಚಪ್‌ನ ಬಣ್ಣ ಕೆಡಬಹುದು. ಮಾರುಕಟ್ಟೆಗೆ ಬರುವ ಕೆಚಪ್‌ಗಳಲ್ಲಿ ಶೇಕಡಾ ೧೦ ರಿಂದ ೨೬ ರಷ್ಟು ಸಕ್ಕರೆ ಇರುತ್ತದೆ.

ಅಡುಗೆ ಉಪ್ಪು : ಟೊಮೆಟೊ ಹಣ್ಣಿನ ಬಣ್ಣವನ್ನು ಅಡುಗೆ ಉಪ್ಪು ನಾಶ ಮಾಡುತ್ತದೆ. ಇದಲ್ಲದೆ, ಅಲ್ಪ ಪ್ರಮಾಣದಲ್ಲಿ ಪಾತ್ರೆ ಅಥವಾ ಸುರುಳಿಗಳಲ್ಲಿರುವ ತಾಮ್ರದೊಡನೆ ಇದು ಪರಿವರ್ತಿಸಿ, ಅದರ ಸ್ವಲ್ಪ ಭಾಗವನ್ನು ಕೆಚಪ್‌ನಲ್ಲಿ ಕರಗಿಸುತ್ತದೆ. ಕೆಪಚ್ ಕುದಿಯುವುದು ಮುಗಿದನಂತರ ಅಡುಗೆ ಉಪ್ಪು ಸೇರಿಸುವುದು ಒಳ್ಳೆಯದು. ನುಣ್ಣಗೆ ಪುಡಿ ಮಾಡಿರುವ ಅಡುಗೆ ಉಪ್ಪನ್ನು ಕೆಚಪ್ ಮೇಲೆ ಚಿಮುಕಿಸಿ, ಚೆನ್ನಾಗಿ ಕಲಕಬೇಕು. ಮಾರುಕಟ್ಟೆಯಲ್ಲಿ ದೊರೆಯುವ ಕೆಚಪ್‌ನಲ್ಲಿ ಶೇಕಡಾ ೧.೩ – ೩.೫ ಅಡುಗೆ ಉಪ್ಪಿರುತ್ತದೆ.

ವಿನಿಗರ್ : ಚೆನ್ನಾಗಿ ಹದಗೊಳಿಸಿದ ಮಾಲ್ಟ್ ವಿನಿಗರನ್ನು ಕೆಚಪ್ ತಯಾರಿಸಲು ಬಳಸಬೇಕು. ಸ್ಪಿರಿಟ್ ವಿನಿಗರ್ ಸೇರಿಸಿದರೆ ಕೆಚಪ್ ವಾಸನೆ ಹಿತವಾಗಿರುವುದಿಲ್ಲ. ಸೈಡರ್ ವಿನಿಗರ್ ಹಿತಕರವಾಗಿದ್ದರೂ, ಅದರ ವಾಸನೆ ದುರ್ಬಲವಾಗಿರುತ್ತದೆ. ವಿನಿಗರ್‌ನಲ್ಲಿ ಅಸಿಟಿಕ್ ಆಮ್ಲ ರೂಪದಲ್ಲಿ ಆಮ್ಲೀಯತೆ ಶೇಕಡಾ ೫.೦ – ೫.೫ ಇರಬೇಕು. ಆದರ್ಶ ದರ್ಜೆಯ ಕೆಚಪ್ ತಯಾರಿಸಲು ಒಂದೇ ಆಮ್ಲೀಯತೆ ಮತ್ತು ಗುಣಮಟ್ಟವಿರುವ ವಿನಿಗರ್ ಬೇಕಾಗಿರುತ್ತದೆ. ಕೆಚಪ್ ಕುದಿಸುವ ಕೊನೆಹಂತದಲ್ಲಿ ಅದು ಸಾಕಷ್ಟು ಮಂದವಾದಾಗ ವಿನಿಗರ್ ಸೇರಿಸಬೇಕು. ಇದರಿಂದ ವಿನಿಗರ್ ಬೇಗ ಆವಿಯಾಗುವುದಿಲ್ಲ ಮತ್ತು ಕೆಚಪ್‌ನ ವಾಸನೆಯೂ ಕಡಮೆಯಾಗುವುದಿಲ್ಲ.

ಕೆಚಪ್‌ನಲ್ಲಿ ಸಾಮಾನ್ಯವಾಗಿ ಶೇಕಡಾ ೧.೨೫ – ೧.೫ ಆಮ್ಲೀಯತೆಯ ಆಸಿಟಿಕ್ ಆಮ್ಲರೂಪದಲ್ಲಿರುತ್ತದೆ. ಕೆಲವು ವೇಳೆ ಮಂಜಿನಂಥ ರೂಪದ ಶೇಕಡಾ ೯೯.೫ ಸಾಂದ್ರತೆಯಿರುವ ಅಸಿಟಿಕ್ ಆಮ್ಲವನ್ನು ಈ ರೀತಿ ಸೇರಿಸುವುದುಂಟು. ಇದನ್ನು ಬಳಸುವುದರಿಂದ ಕೆಲವು ಅನುಕೂಲತೆಗಳಿವೆ, ಅವುಗಳೆಂದರೆ,

(i) ವಿನಿಗರ್‌ಗಿಂತ ಇದು ಅಗ್ಗವಾಗಿರುವಿಕೆ

(ii) ನೀರಿನಂತೆ ವರ್ಣರಹಿತವಾಗಿರುವಿಕೆ; ಇದು ತನ್ನ ಬಣ್ಣವನ್ನು ಕೆಚಪ್‌ಗೆ ಕೊಡುವುದಿಲ್ಲ.

(iii) ಕೆಚಪ್‌ಗೆ ಶೇಕಡಾ ೧೦೦ ಅಸಿಟಿಕ್ ಆಮ್ಲ ಸೇರಿಸಿದಾಗ, ವಾಸನೆ ಮತ್ತು ಆಮ್ಲೀಯತೆ ನಷ್ಟವಾಗದಿರುವಿಕೆ.

ಸಂಬಾರ ಸೇರಿಸಿದ ವಿನಿಗರ್ ಅಥವಾ ಅಸಿಟಿಕ್ ಆಮ್ಲ ಉಪಯೋಗಿಸುವಾಗ ಅದರಲ್ಲಿ ಮೊದಲಿರುವ ವಿನಿಗರ್‌ನ ಆಮ್ಲತೆಯನ್ನು ಗಣನೆಗೆ ತೆಗೆದುಕೊಂಡು ಅನಂತರ ವಿನಿಗರ್ ಸೇರಿಸಬೇಕು.

ಮಂದಕಾರಕಗಳು : ಟೊಮೆಟೊ ಕೆಚಪ್‌ನಲ್ಲಿರುವ ತಿರುಳು ಮತ್ತು ತಿಳಿಯಾದ ರಸ ಕೆಲವು ವೇಳೆ ಬೇರೆ ಬೇರೆಯಾಗುತ್ತವೆ. ಇದು ಅದರಲ್ಲಿರುವ ಪೆಕ್ಟಿನ್‌ನ ಅಂಶವನ್ನು ಅವಲಂಬಿಸಿರುತ್ತದೆ. ಕೆಚಪ್ ಮಂದವಾಗಿರುವಂತೆ ಮಾಡಲು ಸಾಮಾನ್ಯವಾಗಿ ಅದರ ತೂಕದ ಶೇಕಡಾ ೦.೧ – ೦.೨ ಪೆಕ್ಟಿನ್ನನ್ನು ಸೇರಿಸಬೇಕು.

ಬೇಯಿಸುವುದು ಮತ್ತು ಸಾಂದ್ರೀಕರಿಸುವುದು : ಕೆಚಪ್‌ನ ಎಲ್ಲ ಭಾಗಗಳಲ್ಲಿ ಸಮಾನ ರುಚಿ, ವಾಸನೆ, ಸ್ನಿಗ್ಧತೆ ಮತ್ತು ನುಣುಪಾದ ರಚನೆಯಿರುವಂತೆ ಮಾಡಲು ಕೆಚಪ್‌ನಲ್ಲಿರುವ ಒಟ್ಟು ಘನವಸ್ತುಗಳು ಒಂದೇ ನಿಖರ ಪ್ರಮಾಣದಲ್ಲಿರಬೇಕು. ಮಾರುಕಟ್ಟೆಯಲ್ಲಿ ದೊರೆಯುವ ಕೆಚಪ್‌ನಲ್ಲಿ ಈ ಅಂಶ ಶೇಕಡಾ ೨೦ – ೩೭ ಇರುತ್ತದೆ. ಒಟ್ಟು ಶೇಕಡಾ ೨೮ – ೩೦ ಘನವಸ್ತುಗಳಿರುವ ಕೆಚಪ್‌ಗೆ ಶೇಕಡಾ ೩೦ಕ್ಕಿಂತಲೂ ಅಧಿಕ ಘನವಸ್ತುಗಳಿರುವ ಕೆಚಪ್‌ಗಿಂತ ಒಳ್ಳೆಯ ವಾಸನೆಯಿರುತ್ತದೆ. ಇದಕ್ಕಿಂತ ಹೆಚ್ಚು ಘನವಸ್ತುಗಳಿದ್ದರೆ ಅದರಲ್ಲಿರುವ ಹೆಚ್ಚು ಸಕ್ಕರೆ ಮತ್ತು ವಿನಿಗರ್‌ನಿಂದಾಗಿ ಕೆಚಪ್ ದುರ್ಬಲವಾಗುತ್ತದೆ. ಶೇಕಡಾ ೨೮ – ೩೦ ಘನವಸ್ತುಗಳಿರುವ ಕೆಚಪ್‌ನ ಸೀಸೆಯ ಮುಚ್ಚಳ ತೆಗೆದ ಬಳಿಕ ಅದು ಹೆಚ್ಚುಕಾಲ ಸುರಕ್ಷಿತವಾಗಿರುದಿಲ್ಲ. ಆದುದರಿಂದ ಸಾಮಾನ್ಯವಾಗಿ ಶೇಕಡಾ ೩೨ – ೩೭ ಘನ ವಸ್ತುಗಳಿರುವಂತೆ ಕೆಚಪ್ ತಯಾರಿಸಬೇಕು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ, ಅಡುಗೆ ಉಪ್ಪು ಮತ್ತು ವಿನಿಗರ್ ಇರುತ್ತದೆ. ಈ ಕೆಚಪ್ ದಾಸ್ತಾನಿನವಧಿಯಲ್ಲಿ ತನ್ನ ಗುಣಲಕ್ಷಣಗಳನ್ನು ಉತ್ತಮ ರೀತಿ ಕಾಪಾಡಿಕೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿರುವ ಕೆಲವು ಕೆಚಪ್‌ಗಳಲ್ಲಿ ಒಟ್ಟು ಘನವಸ್ತುಗಳು ಶೇಕಡಾ ೩೧.೫ – ೩೨.೬ ಇರುತ್ತವೆ.

ಸ್ಪೆಸಿಫಿಕ್ ಗ್ರಾವಿಟಿ ಹೈಡ್ರೋಮೀಟರಿನಿಂದ ಕೆಚಪ್‌ನ ಒಟ್ಟು ಘನವಸ್ತುಗಳನ್ನು ನಿರ್ಧರಿಸಬಹುದು. ಆದರೆ ಆ ವಿಧಾನ ಶ್ರಮದಾಯಕ. ರಿರ್ಫ್ಯಾಕ್ಟೋ ಮೀಟರಿನಿಂದ ನಿರ್ಧರಿಸುವುದು ಸುಲಭವಾದ ಕ್ರಮ. ಆದರೆ ಕೆಚಪ್‌ನಲ್ಲಿ ಅಡುಗೆ ಉಪ್ಪು, ಅಸಿಟಿಕ್ ಆಮ್ಲ ಮುಂತಾದವುಗಳಿರುವುದರಿಂದ ಇದು ನಿಖರವಾದ ಫಲಿತಾಂಶ ಕೊಡುವುದಿಲ್ಲ. ಅಷ್ಟೇ ಅಲ್ಲದೆ, ರಿರ್ಫ್ಯಾಕ್ಟೋಮೀಟರಿನಲ್ಲಿ ಕಂಡುಬರುವ ಸಂಖ್ಯೆಗೂ ಮತ್ತು ಕೆಚಪ್‌ನಲ್ಲಿರುವ ಒಟ್ಟು ಘನವಸ್ತುಗಳಿಗೂ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಮಾರುಕಟ್ಟೆಗೆ ಕೆಚಪ್ ತಯಾರಿಸುವಾಗ, ರಸವನ್ನು  ಭಾಗವಾಗುವಂತೆ ಸಾಂದ್ರೀಕರಿಸಿ, ಈ ಸಾಂದ್ರತೆಯನ್ನು ಅಳೆಯುವ ಕಡ್ಡಿಯಿಂದ ಕಂಡು ಹಿಡಿಯಬಹುದೆಂದು ಕ್ರುಯೆಸ್ ತಿಳಿಸುತ್ತಾರೆ.

ಸೀಸೆಗಳಲ್ಲಿ ತುಂಬುವುದು : ಕೆಚಪ್ ಬೇಯಿಸಿದ ಅನಂತರ ಅದನ್ನು ಸೂಕ್ಷ್ಮ ರಂಧ್ರಗಳಿರುವ ಜರಡಿಯಂಥ ಯಂತ್ರದ ಮೂಲಕ ಹಾಯಿಸಿದಾಗ ಕೆಚಪ್‌ನಲ್ಲಿರಬಹುದಾದ ಹಣ್ಣಿನ ನಾರು ಅಲ್ಲದೆ ಸಕ್ಕರೆ, ಸಂಬಾರ ವಸ್ತುವಿನ ಮೂಲಕ ಬಂದಿರಬಹುದಾದ ಕಾಗದ ಅಥವಾ ಮರದ ಚೂರುಗಳು ಬೇರ್ಪಡುತ್ತವೆ.

ಕೆಚಪ್‌ ಕಪ್ಪಾಗದಂತೆ ಅಥವಾ ಅದರ ಸಂಗ್ರಹಣೆಯ ಅವಧಿಯಲ್ಲಿ ವಿಟಮಿನ್‌ಗಳು ನಷ್ಟವಾಗದಂತೆ ಅದನ್ನು ಸುಮಾರು ೧೯೦ ಫ್ಯಾ. ಉಷ್ಣತೆಯಲ್ಲಿ ಸೀಸೆಗಳಿಗೆ ತುಂಬಬೇಕು. ತಣ್ಣಗಾದ ನಂತರ ಸೀಸೆಯಲ್ಲಿರುವ ಕೆಚಪ್ ಕುಗ್ಗಿದಂತಾಗಿ ಅದರ ಮುಚ್ಚಳದಡಿ ಸ್ವಲ್ಪ ನಿರ್ವಾತ ಪ್ರದೇಶ ಉಂಟಾಗುತ್ತದೆ. ಕೆಲವು ವೇಳೆ ಸೀಸೆಯಲ್ಲಿರುವ ಕೆಚಪ್‌ನಲ್ಲಿ ಅದರ ಕುತ್ತಿಗೆಯ ಬಳಿ ಒಂದು ಉಂಗುರದಂಥ ಕಪ್ಪು ಬೆಳವಣಿಗೆ ಕಂಡುಬರುತ್ತದೆ. ಇದನ್ನು ‘ಕಪ್ಪು ಕುತ್ತಿಗೆ’ ಎನ್ನುತ್ತಾರೆ. ಯಂತ್ರೋಪಕರಣಗಳಲ್ಲಿರುವ ಕಬ್ಬಿಣಾಂಶ ಕೆಚಪ್‌ಗೆ ಸೇರಿ ಉತ್ಕರ್ಷಣ ಕ್ರಿಯೆಗೊಳಗಾದಾಗ ಹೀಗಾಗಬಹುದು. ಸೀಸೆಯನ್ನು ಮೊಹರು ಮಾಡುವ ಮುಚ್ಚಳದ ಲೋಹ ಅಸಿಟಿಕ್ ಆಮ್ಲದೊಡನೆ ವರ್ತಿಸಿದಾಗಲೂ ಸಹ ಹೀಗಾಗಬಹುದು. ಸಂಬಾರ ವಸ್ತುಗಳ ಟ್ಯಾನಿನ್‌ಗಳು ಕಬ್ಬಿಣದೊಡನೆ ಸಂಪರ್ಕ ಪಡೆದಾಗ ಫೆರಸ್ ಟ್ಯಾನೆಟ್ ಆಗುತ್ತದೆ. ಇದು ಮುಂದೆ ಉತ್ಕರ್ಷಣದ ಫಲವಾಗಿ ಕಪ್ಪುಬಣ್ಣದ ಫೆರಿಕ್ ಟ್ಯಾನೇಟ್ ಆಗುತ್ತದೆ. ಇದನ್ನು ನಿವಾರಿಸಲು ಕೆಚಪ್‌ನಲ್ಲಿರುವ ಗಾಳಿಯನ್ನು ಹೊರದೂಡಿಸಿ, ಮುಚ್ಚಳಗಳ ಅಡಿಯಲ್ಲಿ ತವರದ ಒಳಪದರ ಕೊಡಬೇಕು. ಕಪ್ಪುಕುತ್ತಿಗೆ ಉಂಟಾಗುವುದನ್ನು ತಡೆಯಲು ಸಿದ್ಧಪ್ಪ ಮತ್ತು ಸಂಗಡಿಗರು ಇತ್ತೀಚೆಗೆ ಅಸ್ಕೋರ್ಬಿಕ್ ಆಮ್ಲವನ್ನು ಕೆಚಪ್‌ಗೆ ಸೇರಿಸಿದಾಗ ಉಂಟಾಗುವ ಅನುಕೂಲ ಪ್ರತಿಕ್ರಿಯೆಯನ್ನು ಅಭ್ಯಸಿಸಿದ್ದಾರೆ.

ಪಾಶ್ಚೀಕರಣ : ಬಹು ಅನುಕೂಲಕರ ಸಂದರ್ಭಗಳಲ್ಲಿ ಸಹ ತಯಾರಿಸಿದ ಕೆಚಪ್‌ನ್ನು ಪಾಶ್ಚೀಕರಿಸುವುದು ಅಗತ್ಯವಾಗಿದೆ. ಕೆಚಪ್‌ ತುಂಬಿದ ಸೀಸೆಗಳನ್ನು ಮೊಹರು ಮಾಡಿ ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿಟ್ಟಾಗ, ಬಿಸಿ ಕೆಚಪ್ ಮುಚ್ಚಳದೊಡನೆ ಸಂಪರ್ಕ ಹೊಂದಿ ಅಲ್ಲಿರಬಹುದಾದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆಂಬ ಅಭಿಪ್ರಾಯವಿದೆ. ಧಾರಕದ ವಿವಿಧ ಭಾಗಗಳಲ್ಲಿ ಉಷ್ಣತೆಯಲ್ಲಿ ವ್ಯತ್ಯಾಸವಿರುವುದರಿಂದ ಇದು ಯಾವಾಗಲೂ ಸುರಕ್ಷಿತ ವಿಧಾನವಲ್ಲ. ಸೀಸೆಯ ಮಧ್ಯದ ಉಷ್ಣತೆ ಕೆಚಪ್ ತುಂಬುವಾಗಿನ ಉಷ್ಣತೆಯಷ್ಟಿರುತ್ತದೆ. ಆದರೆ ಸೀಸೆಯ ತಳ, ಪಕ್ಕಗಳು ಮತ್ತು ಕುತ್ತಿಗೆ ಪ್ರದೇಶಗಳಲ್ಲಿ ಇದು ಬಹುಮಟ್ಟಿಗೆ ಕೆಳಮಟ್ಟದ್ದಾಗಿರುತ್ತದೆ. ಕೇವಲ ಕೆಚಪ್‌ನ ಸಂಪರ್ಕದಿಂದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆಯೇ ಇಲ್ಲವೇ ಎಂದು ತಿಳಿಯುವುದು ಕಷ್ಟವಾಗುತ್ತದೆ. ಆದುದರಿಂದ ಸೀಸೆಗಳಲ್ಲಿ ಕೆಚಪ್ ತುಂಬಿದ ನಂತರ ಪಾಶ್ಚೀಕರಿಸುವುದು ಉತ್ತಮ. ಸುಮಾರು ೧೯೦ ಫ್ಯಾ. ನಲ್ಲಿ ಕೆಚಪನ್ನು ಸೀಸೆಗಳಿಗೆ ತುಂಬಿ, ಮುಚ್ಚಳಗಳನ್ನು ಮೊಹರು ಮಾಡಿ, ೩೦ – ೩೫ ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಪಾಶ್ಚೀಕರಣ ಮಾಡಬೇಕು.

ಆಧುನಿಕ ರೀತಿಯ ಕೆಚಪ್ ತುಂಬುವ ಯಂತ್ರವಿದ್ದರೆ, ಕೆಚಪ್‌ನ್ನು ೧೯೦ ಫ್ಯಾ. ನಲ್ಲಿ ಸೀಸೆಗಳಿಗೆ ತುಂಬಿ, ಮುಚ್ಚಳಗಳನ್ನು ಮೊಹರು ಮಾಡಿ, ಬಿಸಿನೀರಿನಲ್ಲಿ ಸೀಸೆಗಳನ್ನು ತೊಳೆದು, ಅವುಗಳಿಗೆ ಅಂಟಿರಬಹುದಾದ ಕೆಚಪ್‌ಅನ್ನು ಒರೆಸಿ ತೆಗೆಯಬೇಕು; ಈ ಸೀಸೆಗಳನ್ನು ಪಾಶ್ಚೀಕರಿಸಬೇಕಾಗಿಲ್ಲ; ಏಕೆಂದರೆ ಕೆಚಪ್‌ ತುಂಬುವ ಉಷ್ಣತೆ ಸೂಕ್ಷ್ಮಜೀವಿಗಳನ್ನು ನಾಶಮಾಡಲು ಸಾಕಾಗುತ್ತದೆಂಬ ಭಾವನೆಯಿದೆ, ಆದರೆ ಕೆಚಪ್ ತುಂಬುವಾಗ ಅದರ ಉಷ್ಣತೆ ಎಂದೂ ೧೯೦ ಫ್ಯಾ.ಗಿಂತ ಕಡಮೆಯಾಗದಂತೆ ಎಚ್ಚರಿಕೆ ವಹಿಸಬೇಕು.

ಉತ್ತಮ ಮಟ್ಟದ ಟೊಮೆಟೊ ಹಣ್ಣಿನಿಂದ ಸರಿಯಾದ ಪ್ರಮಾಣದಲ್ಲಿ ವಿನಿಗರ್, ಸಕ್ಕರೆ, ಅಡುಗೆ ಉಪ್ಪು ಮತ್ತು ಸಂಬಾರ ವಸ್ತುಗಳನ್ನು ಸೇರಿಸಿ ತಯಾರಿಸಿದ ಕೆಚಪ್, ಸೀಸೆಗಳ ಮುಚ್ಚಳ ತೆಗೆದು, ತಣ್ಣಗಿನ ಸ್ಥಳದಲ್ಲಿಟ್ಟರೆ ಹೆಚ್ಚು ಕಾಲ ಕೆಡದೆ, ಸುರಕ್ಷಿತವಾಗಿರುತ್ತದೆ. ಶೇಕಡಾ ೦.೦೨೫ ಸೋಡಿಯಂ ಬೆಂಜೋಯೇಟ್‌ಅನ್ನು ಕೆಚಪ್‌ಗೆ ಸೇರಿಸಿ ಅನಂತರ ಸೀಸೆಗಳಲ್ಲಿ ತುಂಬಿ ಪಾಶ್ಚೀಕರಿಸುವುದು ಉತ್ತಮ. ಇದರಿಂದ ಕೆಚಪ್ ೩ – ೪ ವಾರಗಳ ಕಾಲ ಸುರಕ್ಷಿತವಾಗಿರಲು ಸಾಧ್ಯ. A. O. A. C ಯಲ್ಲಿ ಸೂಚಿಸಿರುವ ಕ್ರಮಪಡಿಸಿದ ವಿಧಾನಗಳಿಂದ ಕೆಚಪ್‌ನಲ್ಲಿರುವ ಸೋಡಿಯಂ ಬೆಂಜೋಯೇಟನ್ನು ನಿರ್ಧರಿಸಬಹುದು.

ಮೆಣಸಿನಕಾಯಿ ಸಾಸ್

ಇದು ಅಧಿಕ ಪ್ರಮಾಣ ಸಂಬಾರ ವಸ್ತುಗಳಿರುವ ಸಾಸ್. ಗಿಡದಲ್ಲಿ ಮಾಗಿದ ಟೊಮೆಟೊಗಳ ಸಿಪ್ಪೆ ಸುಲಿದು ಸಾಸ್ ತಯಾರಿಸಲು ಉಪಯೋಗಿಸಬಹುದು. ಈ ಸಾಸ್‌ಅನ್ನು ಬಹುಪಾಲು ಅಡುಗೆಗಳಿಗೆ ವಾಸನೆ ನೀಡಲು ಉಪಯೋಗಿಸುತ್ತಾರೆ. ನೇರವಾಗಿ ಊಟದೊಡನೆ ಈ ಸಾಸ್‌ಅನ್ನು ಅಲ್ಪಪ್ರಮಾಣದಲ್ಲಿ ಬಳಸುವುದೂ ಉಂಟು.

ತಯಾರಿಸುವ ವಿಧಾನ : ಟೊಮೆಟೊಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಗಾಯವಾದ ಮತ್ತು ಕೆಟ್ಟುಹೋದ ಭಾಗಗಳನ್ನು ತೆಗೆಯಬೇಕು. ನೀರಿನ ಆವಿ ಅಥವಾ ಬಿಸಿ ನೀರಿನಲ್ಲಿ ಇವುಗಳ ಸಿಪ್ಪೆ ಸಡಿಲವಾಗುವಂತೆ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಅನಂತರ ಅವು ಮುಂದೆ ಹೆಚ್ಚಾಗಿ ಬೇಯದಂತಿರಲು ಮತ್ತು ಹಣ್ಣುಗಳು ಮೃದುವಾಗಲು ತಣ್ಣೀರಿನಲ್ಲಿ ಅದ್ದಬೇಕು. ಸಿಪ್ಪೆ ಸುಲಿದ ಹಣ್ಣುಗಳನ್ನು ಬೀಜ ಸಹಿತವಾಗಿ ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಬೇಕು. ಪಾತ್ರೆಗಳಲ್ಲಿ ಈ ಚೂರುಗಳನ್ನು ಹಾಕಿ ಬೇಯಿಸಬೇಕು, ಸಂಬಾರ ವಸ್ತುಗಳಿರುವ ಚೀಲವನ್ನು ಪಾತ್ರೆಯಲ್ಲಿಡಬೇಕು.

ಲಾಲ್‌ಸಿಂಗ್, ಗಿರಿಧಾರಿಲಾಲ್ ಮತ್ತು ಸಹೋದ್ಯೋಗಿಗಳು ಮೆಣಸಿನಕಾಯಿ ಸಾಸ್ ತಯಾರಿಸಲು ಈ ಕೆಳಗಿನ ವಿಧಾನ ಬಳಸಬೇಕೆಂದು ಸಲಹೆ ಮಾಡಿದ್ದಾರೆ.

೧೦೦ ಪೌಂಡ್ ಸಿಪ್ಪೆತೆಗೆದ ಟೊಮೆಟೊ ಹಣ್ಣಿಗೆ ೨ ೧/೨ ಪೌಂಡ್ ಸಕ್ಕರೆ, ೧೦ ಗ್ರಾಂ ಕೆಂಪುಮೆಣಸಿನಕಾಯಿ (ಕಾಶ್ಮೀರಿ), ೨ ಪೌಂಡ್ ತೊಳೆದು, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಗೂ ಈ ಕೆಳಗೆ ಕಾಣಿಸಿದ ಬಟ್ಟೆಯಲ್ಲಿ ಕಟ್ಟಿದ ಸಂಬಾರವಸ್ತುಗಳನ್ನು ಸೇರಿಸಬೇಕು.

ಜಾಪತ್ರೆ ೭ ಗ್ರಾಂ
ದಾಲ್ಚಿನ್ನಿ ಚೂರುಗಳು ೧೮ ಗ್ರಾಂ
ಜೀರಿಗೆ, ಏಲಕ್ಕಿ ಮತ್ತು ಕರಿಮೆಣಸು ಸಮಪ್ರಮಾಣದಲ್ಲಿ ೨೨.೫ ಗ್ರಾಂ
ಬಿಳಿ ಮೆಣಸುಪುಡಿ ೧೦ ಗ್ರಾಂ
ಶುಂಠಿ ಜಜ್ಜಿದ್ದು ೧೦ ಗ್ರಾಂ

ಟೊಮೆಟೊ ಹಣ್ಣು ಮತ್ತು ಇತರ ವಸ್ತುಗಳನ್ನು ಉಗಿಯ ಹೊರಕವಚವಿರುವ ಪಾತ್ರೆಯಲ್ಲಿ ೫೦ ಪೌಂಡ್ ಆಗುವವರೆಗೆ ಬೇಯಿಸಬೇಕು. ಅಗತ್ಯವಿದ್ದರೆ ಮಿಶ್ರಣವನ್ನು ಸೌಟಿನಿಂದ ಆಗಾಗ್ಗೆ ಕಲಕಬೇಕು. ಅನಂತರ ೪ ೩/೪ ಪೌಂಡ್ ಸಕ್ಕರೆ, ೧ ೧/೨ ಪೌಂಡ್ ಅಡುಗೆಉಪ್ಪು ಮತ್ತು ಕೊನೆಯದಾಗಿ ೩ ೧/೨ ಪೌಂಡ್ (ಶೇಕಡಾ ೧೦ರ) ವಿನಿಗರ್ ಸೇರಿಸಬೇಕು. ಈ ಮಿಶ್ರಣವನ್ನು ೫ – ೧೦ ನಿಮಿಷಗಳ ಕಾಲ ಬೇಯಿಸಬೇಕು; ತಕ್ಷಣವೇ ಸಾದಾ A ೨ ೧/೨ ಡಬ್ಬಿಗಳಿಗೆ ಮೊಹರು ಮಾಡಿ, ಅರ್ಧಗಂಟೆಕಾಲ ಕುದಿಯುವ ನೀರಿನಲ್ಲಿ ಸಂಸ್ಕರಿಸಬೇಕು.

ತಾಂಡನ್‌ರವರು ಉತ್ತಮ ಗುಣವುಳ್ಳ ಸಾಸ್ ತಯಾರಿಸಲು ಈ ಕೆಳಗಿನ ವಿಧಾನವನ್ನು ಸೂಚಿಸಿದ್ದಾರೆ :

ಸಿಪ್ಪೆ ತೆಗೆದ ಟೊಮೆಟೊ ೫೦ ಪೌಂಡ್
ಸಕ್ಕರೆ ೫ ಪೌಂ. ೧೦ ಔನ್ಸ್
ಅಡುಗೆ ಉಪ್ಪು ೯ ಔನ್ಸ್
ಮೆಣಸಿನ ಪುಡಿ ೧ ೧/೨ ಔನ್ಸ್
ಬೆಳ್ಳುಳ್ಳಿ ಕೊಚ್ಚಿದ್ದು ೯ ಔನ್ಸ್
ಈರುಳ್ಳಿ ಕೊಚ್ಚಿದ್ದು ೩ ೧/೨ ಔನ್ಸ್
ವಿನಿಗರ್ (ಶೇಕಡಾ ೫ ಅಸಿಟಿಕ್ ಆಮ್ಲ) ೧೯ ಪೌಂಡ್

ಟೊಮೆಟೊ ಹಣ್ಣಿಗೆ ವಿನಿಗರ್ ಬಿಟ್ಟು ಮಿಕ್ಕ ಎಲ್ಲ ವಸ್ತುಗಳನ್ನು ಸೇರಿಸಿ. ಮಿಶ್ರಣ ಮಂದವಾಗುವಂತೆ ಬೇಯಿಸಬೇಕು. ವಿನಿಗರ್ ಸೇರಿಸಿ ಅನಂತರ ಕೆಲವು ನಿಮಿಷಗಳ ಕಾಲ ಕುದಿಸಬೇಕು. ಅಗಲವಾದ ಬಾಯಿಯಿರುವ ಸೀಸೆಗಳಿಗೆ ಬಿಸಿ ಸಾಸ್ ತುಂಬಿ ಮುಚ್ಚಳಗಳನ್ನು ಜೋಡಿಸಿ ೩೦ ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಸಂಸ್ಕರಿಸಬೇಕು. ಇದರಿಂದ ಸಾಸ್‌ನಲ್ಲಿರಬಹುದಾದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ.

ಟೊಮೆಟೊ ಸಾಸ್

ಸಿದ್ಧಪ್ಪ, ಭಾಟಿಯ ಮತ್ತು ಗಿರಿಧಾರಿಲಾಲ್‌ರವರು ಟೊಮೆಟೊ ಸಾಸ್ ತಯಾರಿಸಲು ಈ ಕೆಳಗಿನ ವಿಧಾನವನ್ನು ಕ್ರಮಪಡಿಸಿದ್ದಾರೆ. ಬೇಯಿಸಿದ ಬೀನ್ಸ್ (ತಿಂಗಳು ಹುರುಳಿ) ಕಾಳುಗಳನ್ನು ಸಾಸ್‌ಗೆ ಸೇರಿಸಿ, ಡಬ್ಬಿಗಳಲ್ಲಿ ಸಂಸ್ಕರಿಸಲು ಈ ವಿಧಾನ ತೃಪ್ತಿಕರವಾಗಿದೆ.

ಪಾಕ ಪರಿಕರ ಪಟ್ಟಿ

ಟೊಮೆಟೊ ತಿರುಳು (ಶೇಕಡಾ ೬ ಕರಗುವ ಘನವಸ್ತುಗಳಿರುವ) ೬೫ ಪೌಂ.
ಏಲಕ್ಕಿ, ಮೆಣಸು ಮತ್ತು ಜೀರಿಗೆ ಸಮಪ್ರಮಾಣದಲ್ಲಿ ೮.೫ ಗ್ರಾಂ.
ದಾಲ್ಚಿನ್ನಿ ಚೂರುಗಳು ೧೦ ಗ್ರಾಂ.
ಲವಂಗ (ತಲೆಭಾಗವಿಲ್ಲದೆ) ೮.೫ ಗ್ರಾಂ.
ಜಾಪತ್ರೆ ೫.೭ ಗ್ರಾಂ.
ಅಡುಗೆ ಉಪ್ಪು ೧ ೧/೨ ಪೌಂ.
ಈರುಳ್ಳಿ ಕೊಚ್ಚಿದ್ದು ೫ ೧/೨ ಔನ್ಸ್
ಬೆಳ್ಳುಳ್ಳಿ ಜಜ್ಜಿದ್ದು ೧೮ ಗ್ರಾಂ.
ಸಕ್ಕರೆ ೪ ೩/೪ ಪೌಂ.
ಬಿಳಿ ವಿನಿಗರ್, ೧೦೦ ಗ್ರೈನ್ ೫೮೦ ಘ.ಸೆಂ.ಮೀ.

(೫೮ ಘ. ಸೆಂ. ಶೇಕಡಾ ೧೦೦ ಅಸಿಟಿಕ್ ಆಮ್ಲ)

ಕೆಂಪು ಮೆಣಸಿನಕಾಯಿ ೧೫ ಗ್ರಾಂ

ಮಿಶ್ರಣ ಅರ್ಧ ಪ್ರಮಾಣ ಬರುವವರೆಗೆ, ಎಂದರೆ ರಿರ್ಫ್ಯಾಕ್ಟೋ ಮೀಟರಿನಲ್ಲಿ ಘನವಸ್ತುಗಳು ಶೇಕಡಾ ೨೬ – ೨೮ ಆಗುವವರೆಗೆ ಬೇಯಿಸಬೇಕು. ಈ ರೀತಿ ಬೇಯಿಸುವಾಗ, ಟೊಮೆಟೊ ಕೆಚಪ್ ಬೇಯಿಸುವಾಗ ವಹಿಸುವ ಮುನ್ನೆಚ್ಚರಿಕೆಯನ್ನು ಇಲ್ಲಿಯೂ ಗಮನದಲ್ಲಿಡಬೇಕು. ಸಾದಾ A ೨ ೧/೨ ಡಬ್ಬಿಗಳಲ್ಲಿ ಸಾಸ್ ತುಂಬಿ, ಮುಚ್ಚಳಗಳನ್ನು ಮೊಹರುಮಾಡಿ, ಕುದಿಯುವ ನೀರಿನಲ್ಲಿ ೪೫ ನಿಮಿಷಗಳವರೆಗೆ ಸಂಸ್ಕರಿಸಬೇಕು.

ಟೊಮೆಟೊ ಸೂಪ್

ಟೊಮೆಟೊ ರಸ ತಯಾರಿಸುವಾಗ ತಿರುಳು ಸಿದ್ಧಗೊಳಿಸುವ ವಿಧಾನವನ್ನೇ ಇಲ್ಲಿಯೂ ಅನುಸರಿಸಬೇಕು. ಇದು ತಯಾರಿಕೆಯ ಮೊದಲ ಹಂತ ಈ ಸಾಸ್‌ನಲ್ಲಿರುವ ಪ್ರಮುಖ ವಸ್ತುಗಳೆಂದರೆ, ಟೊಮೆಟೊ ರಸ, ಬೆಣ್ಣೆ ಅಥವಾ ಹಾಲಿನ ಕೆನೆ, ಸಂಬಾರ ವಸ್ತುಗಳು, ಅರಾರೋಟ್ (ಸೂಪ್ ಮಂದಕಾರಕ) ಮುಂತಾದವು. ಅಪೇಕ್ಷಿತ ರುಚಿಗನುಗುಣವಾಗಿ ಇವುಗಳನ್ನು ವಿವಿಧ ಪ್ರಮಾಣಗಳಲ್ಲಿ ಉಪಯೋಗಿಸಬೇಕು. ಈ ಮುಂದೆ ತಿಳಿಸಿದ ಮಾದರಿ ಸೂತ್ರವನ್ನು ಅನುಸರಿಸಿ ಉತ್ತಮ ಬಗೆಯ ಸೂಪ್ ತಯಾರಿಸಬಹುದು:

ಟೊಮೆಟೊ ರಸ (ವಿಶಿಷ್ಟ ಗುರುತ್ವ ೧.೦೨೨) ೭ ಗ್ಯಾಲನ್
ಈರುಳ್ಳಿ ಸೂಕ್ಷ್ಮವಾಗಿ ಕೊಚ್ಚಿದ್ದು ೧೩ ಔನ್ಸ್
ದಾಲ್ಚಿನ್ನಿ ಚೂರುಗಳು ೫ ಗ್ರಾಂ.
ಲವಂಗ, ತಲೆಭಾಗವಿಲ್ಲದ ಇಡಿಯಾಗಿರುವ ೫ ಗ್ರಾಂ.
ಬಿಳಿ ಮೆಣಸು ಪುಡಿ ೭ ಗ್ರಾಂ.
ಕೆಂಪು ಮೆಣಸಿನಕಾಯಿ (ಕಾಶ್ಮೀರಿ) ಪುಡಿ ೦.೭ ಗ್ರಾಂ.
ಜೀರಿಗೆ, ಏಲಕ್ಕಿ ಮತ್ತು ಕರಿಮೆಣಸು (ಸಮಪ್ರಮಾಣ) ೫.೩ ಗ್ರಾಂ.
ಒಣ ಶುಂಠಿಪುಡಿ ೪.೨ ಗ್ರಾಂ.
ಹಾಲಿನ ಕೆನೆ (ಶೇಕಡಾ ೩೦) ಅಥವಾ ಬೆಣ್ಣೆ ೧ ೧/೪  ಪೌಂ. ಅಥವಾ ೬ ೩/೪  ಔನ್ಸ್
ಅರಾರೋಟ್ ಪಿಷ್ಟ ೪ ೧/೪  ಔನ್ಸ್
ಸಕ್ಕರೆ ೧೭ ಔನ್ಸ್
ಅಡುಗೆ ಉಪ್ಪು ೪ ೧/೪  ಔನ್ಸ್

ತಯಾರಿಸುವ ವಿಧಾನ : ಹಣ್ಣಿನ ರಸದ ಆಮ್ಲೀಯತೆಯ ೧/೬ ರಷ್ಟು ಭಾಗವನ್ನು ತಟಸ್ಥಗೊಳಿಸಬೇಕು. ಸೋಡಿಯಂ ಬೈಕಾರ್ಬೊನೇಟ್‌ಗೆ ನೀರು ಸೇರಿಸಿ ಸಿದ್ಧಗೊಳಿಸಿದ ತೆಳುಪೇಸ್ಟ್ ರಸಕ್ಕೆ ಸೇರಿಸಿದರೆ ಈ ರೀತಿ ತಟಸ್ಥಗೊಳ್ಳುತ್ತದೆ. ಆರು ಗ್ಯಾಲನ್ ರಸವನ್ನು ಕುದಿಸುವ ಪಾತ್ರೆಗೆ ಹಾಕಿ ಕಾಯಿಸಬೇಕು. ಟೊಮೆಟೊ ಕೆಚಪ್ ತಯಾರಿಸುವಾಗ ಅನುಸರಿಸುವ ವಿಧಾನವನ್ನೇ ಬಳಸಿ ಸಂಬಾರ ವಸ್ತುಗಳನ್ನು ಮಸ್‌ಲಿನ್ ಬಟ್ಟೆಯಲ್ಲಿ ಸಡಿಲವಾಗಿ ಕಟ್ಟಿ ಮಿಶ್ರಣದಲ್ಲಿಡಬೇಕು. ಈ ವೇಳೆಗೆ ಅರಾರೋಟ್ ಮತ್ತು ಬೆಣ್ಣೆ ಅಥವಾ ಕೆನೆಯನ್ನು ಉಳಿದ ಒಂದು ಗ್ಯಾಲನ್ ರಸದೊಡನೆ ಬೆರೆಸಿ, ಮೃದುವಾದ ಪೇಸ್ಟ್ ಮಾಡಬೇಕು. ಕುದಿಯುತ್ತಿರುವ ರಸ ಸಾಂದ್ರೀಕೃತವಾದಾಗ ಈ ಪೇಸ್ಟ್ ಸೇರಿಸಬೇಕು. ಅಪೇಕ್ಷಿತ ಹದ ಬರುವವರೆಗೆ ಮಿಶ್ರಣವನ್ನು ಕುದಿಸಬೇಕು. ಪಿಷ್ಟ ಮುಂತಾದ ವಸ್ತುಗಳು ಗೆಡ್ಡೆಕಟ್ಟದಂತೆ ಕುದಿಯುವ ಮಿಶ್ರಣವನ್ನು ಎಡೆಬಿಡದೆ ಕಲಕುತ್ತಾ ಇರಬೇಕು. ಕೊನೆಯಲ್ಲಿ ಸಕ್ಕರೆ ಮತ್ತು ಅಡುಗೆ ಉಪ್ಪು ಸೇರಿಸಿ, ಅವು ಕರಗಲು ಸುಮಾರು ಎರಡು ನಿಮಿಷ ಕುದಿಸಬೇಕು. ಸೂಪನ್ನು ಡಬ್ಬಿಯಲ್ಲಿ ತುಂಬಿ ಸಂಸ್ಕರಿಸಬೇಕು.

ಸೂಕ್ಷ್ಮಜೀವಿ ನಾಶಕ್ರಿಯೆ : A ೨ ಡಬ್ಬಿಗಳನ್ನು ೪೫ ನಿಮಿಷಗಳ ಕಾಲ ಮತ್ತು ಜಾಮ್‌ ಅಥವಾ ಹಾಲಿನ ೧ ಪೌಂಡ್ ಡಬ್ಬಿಗಳನ್ನು ೪೦ ನಿಮಿಷ ಕಾಲ ಕುದಿಯುವ ನೀರಿನಲ್ಲಿ ೨೪೦ ಫ್ಯಾ. ಉಷ್ಣತೆಯಲ್ಲಿ ಸಂಸ್ಕರಿಸಿ ಅವುಗಳಲ್ಲಿರಬಹುದಾದ ಸೂಕ್ಷ್ಮ ಜೀವಿಗಳನ್ನು ನಾಶಮಾಡಬೇಕು.

ಕೀಳುದರ್ಜೆಯ ಟೊಮೆಟೊಗಳನ್ನು, ಟೊಮೆಟೊ ಉತ್ಪನ್ನ ತಯಾರಿಕೆಗೆ ಬಳಸಿದಾಗ ಬೂಷ್ಟುಗಳು, ಯೀಸ್ಟ್‌ಗಳು, ಬ್ಯಾಕ್ಟೀರಿಯಾ ಮತ್ತು ಕೀಟಗಳ ಭಾಗಗಳು ಮಿತಿಮೀರಿದ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಇಂಥ ಉತ್ಪನ್ನಗಳ ಗುಣಮಟ್ಟ ಕೆಳದರ್ಜೆಯದಾಗುತ್ತದೆ. ಟೊಮೆಟೊಗಳ ಉತ್ಪನ್ನಗಳಲ್ಲಿರಬಹುದಾದ ಬೂಷ್ಟು ಯೀಸ್ಟ್ ಮತ್ತು ಬ್ಯಾಕ್ಟೀರಿಯಾಗಳ ಮಿತಿಯನ್ನು ಅಮೆರಿಕದ ಸಂಯುಕ್ತ ಸಂಸ್ಥಾನಗಳ ವ್ಯವಸಾಯ ಇಲಾಖೆಯವರು ನಿಗದಿಪಡಿಸಿದ್ದಾರೆ. ಈ ಪೈಕಿ ಬೂಷ್ಟಿನ ಎಣಿಕೆ ಬಹು ಮುಖ್ಯವಾದುದು. ಭಾರತ ಸರ್ಕಾರದವರು ಟೊಮೆಟೊರಸ, ಪ್ಯೂರಿ ಮತ್ತು ಕೆಚಪ್‌ಗಳ ತಯಾರಿಕೆ ನಿಯಂತ್ರಿಸಲು ಸೂಕ್ತ ನಿಯಮಾವಳಿಗಳನ್ನು ನಮೂದಿಸಿರುತ್ತಾರೆ.

ಅಮೇರಿಕದ ಸಂಯುಕ್ತ ಸಂಸ್ಥಾನಗಳ ಆಹಾರವನ್ನು ಡಬ್ಬಿಯಲ್ಲಿ ಸಂಸ್ಕರಿಸುವವರ ರಾಷ್ಟ್ರೀಯ ಸಂಘದ ಸಂಶೋಧನಾ ಪ್ರಯೋಗ ಶಾಲೆಯಲ್ಲಿ ಬಿಗೆಲೊ, ಸ್ಮಿತ್ ಮತ್ತು ಗ್ರೀನ್‌ಲೀಪ್‌ರವರು ಟೊಮೆಟೊ ತಿರುಳು, ಟೊಮೆಟೊ ಪ್ಯೂರಿ ಮತ್ತು ಟೊಮೆಟೊ ಪೇಸ್ಟ್‌ನಲ್ಲಿರುವ ಒಟ್ಟು ಘನವಸ್ತುಗಳ ವಿಶಿಷ್ಟ ಗುರುತ್ವ, ರಿರ್ಫ್ಯಾಕ್ಟೋ ಮೀಟರಿನಲ್ಲಿ ನಿರ್ಧರಿಸಿದ ಘನವಸ್ತುಗಳ ಮೌಲ್ಯ ಮತ್ತು ರಸದ ವಿಶಿಷ್ಟ ಗುರುತ್ವಗಳ ನಡುವಣ ಪರಸ್ಪರ ಸಂಬಂಧಗಳನ್ನು ವಿವರಿಸುವ ಹಲವು ಪಟ್ಟಿಗಳನ್ನು ತಯಾರಿಸಿದ್ದಾರೆ. ಇದಲ್ಲದೆ, ಇದೇ ರೀತಿ ಟೊಮೆಟೊ ಕೆಚಪ್‌ದಲ್ಲಿರುವ ಘನವಸ್ತುಗಳ ಶೇಕಡಾ ಪ್ರಮಾಣ, ವಿಶಿಷ್ಟ ಗುರುತ್ವ ಮತ್ತು ಅಬ್ಬೆ ರಿರ್ಫ್ಯಾಕ್ಟೋ ಮೀಟರಿನಲ್ಲಿ ಸೂಚಿತ ಘನವಸ್ತುಗಳ ಪರಸ್ಪರ ಸಂಬಂಧವನ್ನು ವಿವರಿಸುವ ವಿವಿಧ ಪಟ್ಟಿಗಳನ್ನು ಅವರು ತಯಾರಿಸಿದ್ದಾರೆ. ಜೊತೆಗೆ ವಿಶಿಷ್ಟ ಗುರುತ್ವ, ಬ್ರಿಕ್ಸ್‌ನಲ್ಲಿ ಸೂಚಿತವಾದ ಘನವಸ್ತುಗಳು ಮತ್ತು ವಕ್ರೀಕರಣ ಸೂಚಿಗಳಿಗೆ ಸರಿಪಡಿಸಬೇಕಾದ ಸಂಖ್ಯಾಪಟ್ಟಿಗಳನ್ನು ತಯಾರಿಸಿದ್ದಾರೆ.