ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಇರಲಿ ಖಾಸಗಿ ಆಸ್ಪತ್ರೆ ಇರಲಿ, ಯಾವುದೇ ಶಾಖೆಯ ತಜ್ಞ ವೈದ್ಯರಿರಲಿ ಉದ್ದನೆಯ ರೋಗಿಗಳ ಸಾಲು ಕಂಡುಬರುತ್ತದೆ. ವೈದ್ಯಕೀಯ ಸೌಲಭ್ಯಗಳು ಎಲ್ಲರಿಗೂ ಬೇಕಾದಾಗ ಸಿಗುತ್ತಿಲ್ಲ. ಸಿಕ್ಕಿದರೂ ದುಬಾರಿ ಬೆಲೆ ತರಬೇಕು. ಬಡವರು, ಮಧ್ಯಮ ವರ್ಗದವರ ಮೇಲೆ ವೈದ್ಯಕೀಯ ಖರ್ಚಿನ ಹೊಡೆತ, ಸಹಿಸಲು, ನಿಭಾಯಿಸಲು ಕಷ್ಟದಾಯಕವಾಗುತ್ತದೆ. ರೋಗಗಳಿಂದ ಉಂಟಾಗುವ ನೋವಿನ ಬಾಧೆ ಒಂದು ತೆರನಾದರೆ, ವೈದ್ಯರು ಆಸ್ಪತ್ರೆ, ಔಷಧ ಚಿಕತ್ಸೆಯ ನೋವು ಇನ್ನೊಂದು ತೆರನಾಗಿ ಜನರನ್ನು ಹಿಂಸಿಸುತ್ತಿವೆ. ರೋಗಗಳು ಬರಲು ಅನೇಕ ಕಾರಣಗಳಿವೆ. ಅಪೌಷ್ಠಿಕತೆ, ಮಲಿನ ಪರಿಸರ, ರೋಗಾಣುಗಳು, ವಿಷವಸ್ತುಗಳು ಇತ್ಯಾದಿ. ಇವುಗಳ ಜೊತೆಗೆ ಮಾನಸಿಕ ಒತ್ತಡವೂ ಸೇರಿಕೊಂಡರೆ ಬೆಂಕಿಗೆ ಬಿರುಗಾಳಿ ಜೊತೆ ಸೇರಿದಂತಾಗುತ್ತದೆ. ಇಂದು ಹೆಚ್ಚಿನ ಜನರನ್ನು ಕಾಡಿಸುತ್ತಿರುವ ಅನೇಕಾನೇಕ ರೋಗಗಳು ಬರಲು ‘ಮಾನಸಿಕ ಒತ್ತಡ’ವೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಎಲ್ಲೆಡೆ ಅದರಲ್ಲೂ ನಗರ ಪ್ರದೇಶಗಳಲ್ಲಿ ಕಂಡುಬರುವ ಅಧಿಕ ಆಮ್ಲಸ್ಥಿತಿ (ಹೈಪರ್‌ ಅಸಿಡಿಟಿ), ಜಠರದ ಹುಣ್ಣು (ಅಲ್ಸರ್), ಕರುಳುರಿತ (ಆಮಶಂಕೆ ಭೇದಿ), ಅಧಿಕ ರಕ್ತದೊತ್ತಡ (ಬಿಪಿ ಕಾಯಿಲೆ), ಹೃದಯಾಘಾತ, ಸಿಹಿಮೂತ್ರ ರೋಗ, ಮೈಗ್ರೇನ್ ತಲೆನೋವು, ಒತ್ತಡದ ತಲೆನೋವು (ಟೆಂಶನ್‌ ಹೆಡ್‌ಏಕ್), ಋತುಚಕ್ರ-ಸ್ರಾವದ ಏರುಪೇರುಗಳು, ಬಂಜೆತನ, ಲೈಂಗಿಕ ದುರ್ಬಲತೆಗಳು, ಎಕ್ಸೀಮಾ, ಸೋರಿಯಾಸಿಸ್ ನಂತಹ ಚರ್ಮದ ಕಾಯಿಲೆಗಳು, ಕೀಲು ಬೇನೆ, ಕೂದಲು ಉದುರುವಿಕೆ ಅಥವಾ ಬಿಳಿಯಾಗುವುದು, ಖಿನ್ನತೆ, ಆತಂಕ, ಉನ್ಮಾದ, ಶಾರೀರಿಕ ನೋವಿನ ರೂಪದ ಮನೋರೋಗಗಳು. ಆತ್ಮಹತ್ಯೆ, ಮಧ್ಯಮಾದಕ ವಸ್ತುಗಳ ದುರ್ಬಳಕೆ ಮತ್ತು ಚಟ, ಅಪರಾಧ ಪ್ರವೃತ್ತಿ, ಹೆಚ್ಚುತ್ತಿರುವ ಅಪಘಾತಗಳು ಇವೆಲ್ಲ ಮಾನದಿಕ ಒತ್ತಡದ ಕೊಡುಗೆಗಳು. ಒತ್ತಡದಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯೂ ಕುಗ್ಗಿ ದೇಹ ಸುಲಭವಾಗಿ ರೋಗಾಣುಗಳ ಸೋಂಕಿಗೆ ಒಳಗಾಗುತ್ತದೆ. ಸಾಮಾನ್ಯ ಜೀವಕೋಶಗಳು ಒತ್ತಡದಿಂದಾಗಿ ಕ್ಯಾನ್ಸರ್ ಕಣಗಳಾಗಿ ಪರಿವರ್ತಿತವಾಗುತ್ತವೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸ ಕುಂಠಿತಗೊಳ್ಳುತ್ತದೆ. ಅವರಲ್ಲಿ ಸಮಾಜ ವಿರೋಧಿ ಪ್ರವೃತ್ತಿ ಮತ್ತು ಗುಣದೋಷದ ನಡವಳಿಕೆಗಳೂ ಹೆಚ್ಚುತ್ತವೆ ಎಂಬುದು ತಿಳಿದುಬರುತ್ತದೆ. ಇಷ್ಟೊಂದು ದುಷ್ಪರಿಣಾಮಗಳನ್ನುಂಟುಮಾಡುವ ಮನುಷ್ಯನಿಗೆ ಮಾರಕವಾಗಿರುವ ಮಾನಸಿಕ ಒತ್ತಡದ ಉಗಮ ಮತ್ತು ಅದರ ನಿವಾರಣೆ ಬಗ್ಗೆ ತಿಳಿದುಕೊಳ್ಳೋಣ.

ಮಾನಸಿಕ ಒತ್ತಡ, ವೈಯಕ್ತಿಕ ವಿಶೇಷ

ಒಬ್ಬನ ಆಹಾರ ಇನ್ನೊಬ್ಬನಿಗೆ ವಿಷವಾಗುತ್ತದೆ ಎಂಬ ನಾಣ್ನುಡಿ ಇದೆ. ಒಬ್ಬನಿಗೆ ಹಿತಕರವಾದ, ಆನಂದದಾಯಕವಾದ ಅಥವಾ ಏನೂ ಅಲ್ಲದ ಕ್ಷುಲ್ಲಕ ವಸ್ತು/ ವಿಷಯ ಮತ್ತೊಬ್ಬನಿಗೆ ಒತ್ತಡದಾಯಕವಾಗಿ ಅಹಿತ ಹಿಂಸೆಯನ್ನುಂಟು ಮಾಡಬಲ್ಲದು. ಯಾವುದೇ ವಸ್ತುವನ್ನು ಸನ್ನಿವೇಶವನ್ನು ಕೆಲಸ ಜವಾಬ್ದಾರಿಯನ್ನು ಅಪಾಯಕಾರಿ ಆತಂಕಕಾರಿ, ಅನಾನುಕೂಲವನ್ನುಂಟು ಮಾಡುವಂತದ್ದು ಎಂದು ಯಾವಾಗ ವ್ಯಕ್ತಿ ಗುರುತಿಸುತ್ತಾನೋ ಆಗ ಆ ವಸ್ತು, ಸನ್ನಿವೇಶ, ಕೆಲಸ, ಜವಾಬ್ದಾರಿ ಆತನಿಗೆ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ.

ವಿಧಗಳು:

ಮಾನಸಿಕ ಒತ್ತಡಗಳನ್ನು ಮೂರು ಬಗೆಗಳಾಗಿ ವಿಂಗಡಿಸಲಾಗುತ್ತದೆ.

. ಯಾವುದೇ ಕಷ್ಟನಷ್ಟ ಸೋಲು, ನಿರಾಶೆಗಳು: ನಿಭಾಯಿಸಲಾಗದ ಸನ್ನಿವೇಶ, ಸಮಸ್ಯೆಗಳು, ರೋಗರುಜಿನಗಳು, ಹಣ-ಸಂಪತ್ತು, ಸ್ಥಾನಮಾನ, ಅಧಿಕಾರದ ನಷ್ಟ, ಕೈಗೊಂಡ ಕೆಲಸ, ಜವಾಬ್ದಾರಿಗಳು, ಗುರಿಗಳಲ್ಲಿ ವಿಫಲತೆ, ಆಸೆ, ನಿರೀಕ್ಷೆಗಳು ಪೂರೈಸದೆ ಆಗುವ ನಿರಾಶೆಗಳು ಅಲ್ಪಕಾಲ ಅಥವಾ ದೀರ್ಘಕಾಲ ಮಾನಸಿಕ ಒತ್ತಡವನ್ನುಂಟು ಮಾಡುತ್ತವೆ.

. ದ್ವಂದ್ವ ಮತ್ತು ಗೊಂದಲಗಳು: ಅಡ್ಡಮಾರ್ಗ ಹಿಡಿದಾದರೂ ಆಸೆಗಳನ್ನು ಪೂರೈಸಿಕೊಳ್ಳೋಣವೇ ಅಥವಾ ನೀತಿ ನಿಯಮಗಳ ಪಾಲನೆ ಮಾಡೋಣವೇ. ಕೋಪವನ್ನು ಪ್ರಕಟಿಸೋಣವೇ ಅಥವಾ ಅದನ್ನು ನಿಯಂತ್ರಿಸೋಣವೇ, ಈ ಕೆಲಸ ಮಾಡುವುದೋ ಬಿಡುವುದೋ, ನನ್ನ ಜೀವನ ಉದ್ದೇಶ ಹೇಗಿರಬೇಕು. ಯಾವ ಮಾರ್ಗ ಉತ್ತಮ? ಹೀಗೆ ಹಲವಾರು ವಿಷಯಗಳ ಬಗ್ಗೆ ನಮ್ಮ ಮನಸ್ಸಿನಲ್ಲಿ ದ್ವಂದ್ವ-ಗೊಂದಲಗಳಿರುತ್ತವೆ. ಈ ದ್ವಂದ್ವ-ಗೊಂದಲಗಳು ಹೆಚ್ಚಾದಷ್ಟು ಅಥವಾ ದೀರ್ಘಕಾಲ ಉಳಿದಷ್ಟು ಮಾನಸಿಕ ಒತ್ತಡ ಹೆಚ್ಚುತ್ತದೆ.

. ಹೆಚ್ಚು ಸಾಧಿಸಲು ಉತ್ತಮ ಗುರಿ ಮುಟ್ಟಲು ಒತ್ತಾಸೆ, ನಿರೀಕ್ಷೆಗಳು: ನಿನ್ನ ಸಾಧನೆ ಏನೇನೂ ಸಾಲದು, ಬೇಗ ಗುರಿಮುಟ್ಟು, ಮತ್ತಷ್ಟು ಸಂಪತ್ತು, ಕೀರ್ತಿ, ಸ್ಥಾನಮಾನಗಳನ್ನು ಸಂಪಾದಿಸು. ಎಲ್ಲರ ಮೆಚ್ಚುಗೆಯನ್ನು ಗಳಿಸು, ಎಲ್ಲರಿಗಿಂತ ನೀನೇ ಮುಂದಿರಬೇಕು ಎಂಬ ಒತ್ತಾಸೆ ನಿರೀಕ್ಷೆಗಳು ವ್ಯಕ್ತಿಯಿಂದಲೇ ಬರಬಹುದು ಅಥವಾ ಮನೆಯವರು, ಸ್ನೇಹಿತರು, ಮೇಲಾಧಿಕಾರಿಗಳಿಂದ, ಸಮಾಜದಿಂದ ಬರಬಹುದು. ಈ ನಿರೀಕ್ಷೆಗಳನ್ನು ಒತ್ತಾಸೆಗಳನ್ನು ವ್ಯಕ್ತಿ ಪೂರೈಸಲು ಕಷ್ಟಸಾಧ್ಯವೆಂದುಕೊಂಡರೆ, ಸಹಜವಾಗಿ ಅತೀವ ಒತ್ತಡಕ್ಕೆ ಒಳಗಾಗುತ್ತಾನೆ.

ಮಾನಸಿಕ ಒತ್ತಡದ ಮೂಲಗಳು

. ವ್ಯಕ್ತಿಯಲ್ಲಿರಬಹುದು: ತನ್ನ ಬಗ್ಗೆ ಕೀಳರಿಮೆ, ಆತ್ಮವಿಶ್ವಾಸದ ಕೊರತೆ ಇರುವ ವ್ಯಕ್ತಿ ಸುಲಭವಾಗಿ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾನೆ. ಶಾರೀರಿಕ ಹಾಗೂ ಮಾನಸಿಕ ನ್ಯೂನತೆಗಳಿರುವ ವ್ಯಕ್ತಿತ್ವ ದೋಷ ಇರುವ, ಪದೇ ಪದೇ ಅಥವಾ ದೀರ್ಘಕಾಲ ಯಾವುದಾದರೊಂದು ರೋಗದಿಂದ ನರಳುವ ವ್ಯಕ್ತಿಗೆ ಮಾನಸಿಕ ಒತ್ತಡ ಹೆಚ್ಚು. ಅಹಿತಕರವಾದ ಬಾಲ್ಯ, ಯೋಗ್ಯ ಶಿಕ್ಷಣವಿಲ್ಲದ ವ್ಯಕ್ತಿ, ಆತಂಕಕಾರಿ, ಅನಾರೋಗ್ಯಕಾರಿ ಪರಿಸರದಲ್ಲಿ ಬೆಳೆದು ಬರುಕಿರುವ ವ್ಯಕ್ತಿಗೆ ಮಾನಸಿಕ ದ್ವಂದ್ವಗಳು ಹೆಚ್ಚು. ಅತಿ ಸ್ವಾರ್ಥ, ವಾಸ್ತವಿಕ ಪ್ರಜ್ಞೆಯ ಕೊರತೆ, ನೈತಿಕ ಮೌಲ್ಯಗಳ ಬಗ್ಗೆ ಗೊಂದಲ ಇವೂ ಒತ್ತಡವನ್ನು ಹೆಚ್ಚಿಸುತ್ತವೆ.

. ಕುಟುಂಬದಲ್ಲಿರಬಹುದು: ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಇಲ್ಲದ ಕುಟುಂಬದ ಸದಸ್ಯರು ವ್ಯಕ್ತಿಯ (ಎಲ್ಲರ) ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಾರೆ. ಅಪನಂಬಿಕೆ, ಅನುಮಾನ, ತಿರಸ್ಕಾರ, ಹೀನಾಯವಾದ ಟೀಕೆಗಳಿಂದ ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತಾರೆ. ಕುಟುಂಬದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಬೇಕು. ಕುಟುಂಬದ ಒಳಿತಿಗಾಗಿ, ಪ್ರಗತಿಗಾಗಿ ಶ್ರಮಿಸಬೇಕು. ಹಾಗೆ ಮಾಡದೆ ತಮ್ಮ ಕೆಲಸ ಕರ್ತವ್ಯ ಜವಾಬ್ದಾರಿಗಳನ್ನು ನಿರ್ಲಕ್ಷಿಸಿದರೆ, ಮನೋಕ್ಲೇಶ ಹೆಚ್ಚುತ್ತದೆ.

. ಹಣಕಾಸಿನ ವ್ಯವಸ್ಥೆಯಲ್ಲಿರಬಹುದು: ಜೀವಿಸಲು, ನೆಮ್ಮದಿಯಿಂದಿರಲು ಹಣಬೇಕು. ಕಡಿಮೆ ಆದಾಯ ಸಂಪನ್ಮೂಲಗಳ ಕೊರತೆಯಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಸಾಲ ಮಾಡಿ ಅದನ್ನು ತೀರಿಸಲಾಗದಿದ್ದಾಗ ಉಂಟಾಗುವ ಮಾನಸಿಕ ಯಾತನೆ ವರ್ಣನಾತೀತ. ಹಾಗೆಯೇ ಅಗತ್ಯಕ್ಕಿಂತ ಹೆಚ್ಚು ಹಣ ಸಂಪನ್ಮೂಲಗಳೂ ಮಾನಸಿಕ ಒತ್ತಡಕ್ಕೆ ಎಡೆ ಮಾಡಿಕೊಡುತ್ತವೆ. ಈ ಹೆಚ್ಚು ಹಣವನ್ನು ಸಂರಕ್ಷಣೆ ಮಾಡುವುದು. ಅದು ವೃದ್ಧಿಯಾಗುತ್ತಿರುವಂತೆ ಮಾಡುವುದು ಆತಂಕದಾಯಕ ಕೆಲಸವಾಗುತ್ತದೆ.

. ಉದ್ಯೋಗದಲ್ಲಿರಬಹುದು: ವ್ಯಕ್ತಿಯ ಉದ್ಯೋಗ ಅವನಿಗೆ ಇಷ್ಟವಿಲ್ಲದ್ದಾದರೆ, ಬಲವಂತಕ್ಕೆ ಒಂದು ಉದ್ಯೋಗ ಮಾಡಬೇಕಾಗಿ ನಂದರೆ, ಮೇಲಾಧಿಕಾರಿ, ಸಹೋದ್ಯೋಗಿ- ಕೆಳಗಿನ ಉದ್ಯೋಗಿಗಳ ಕಿರುಕುಳ ಇದ್ದರೆ, ಉದ್ಯೋಗದಲ್ಲಿ ಕಾಲಕಾಲಕ್ಕೆ ಬಡ್ತಿ, ಪ್ರೋತ್ಸಾಹ, ಬಹುಮಾನಗಳು ಇಲ್ಲದೇ ಹೋದರೆ, ಪದೇ ಪದೇ ಹಾಗೂ ಅನ್ಯಾಯವೆನಿಸುವ ರೀತಿಯಲ್ಲಿ ವರ್ಗಾವಣೆ, ಸ್ಥಾನಪಲ್ಲಟವಾಗುತ್ತಿದ್ದರೆ, ವ್ಯಕ್ತಿ ಅತೀವ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ.

. ಲೈಂಗಿಕ ವಿಚಾರಗಳಲ್ಲಿರಬಹುದು: ನಮ್ಮಲ್ಲಿ ಲೈಂಗಕತೆ ಒಂದು ರಹಸ್ಯ. ಲೈಂಗಿಕ ಕ್ರಿಯೆ ಮತ್ತು ಸುಖದ ಬಗ್ಗೆ ಅನಾಕಾನೇಕ ತಪ್ಪು, ಅವಾಸ್ತವಿಕ ಹಾಗೂ ಅವೈಜ್ಞಾನಿಕ ನಂಬಿಕೆ ಆಚರಣೆಗಳಿವೆ. ಲೈಂಗಿಕತೆ ಬಗ್ಗೆ ಇರುವ ಅನುಮಾನಗಳು, ಸಮಸ್ಯೆಗಳನ್ನು ನಿವಾರಿಸುವ ‌ವ್ಯವಸ್ಥೆ ಇಲ್ಲ. ಹೀಗಾಗಿ ಲೈಂಗಿಕ ಸಮಸ್ಯೆ ಇರುವ ವ್ಯಕ್ತಿ ಅದನ್ನು ಹೇಳಿಕೊಳ್ಳಲೂ ಆಗದೇ ಅನುಭವಿಸಲೂ ಆಗದೇ ಮೌನವಾಗಿ ನರಳುವಂತಾಗುತ್ತದೆ. ವ್ಯಕ್ತಿಯ ವಿವಾಹೇತರ ಸಂಬಂಧಗಳು, ಲೈಂಗಿಕ ರೋಗಗಳು, ಲೈಂಗಿಕ ದುರ್ಬಲತೆ ಅತೃಪ್ತಿಗಳು ಅವನಿಗೂ, ಸಂಗಾತಿಗೂ ಸಾಕಷ್ಟು ಮಾನಸಿಕ ಒತ್ತಡವನ್ನು ತರುತ್ತವೆ.

. ಜೀವನದ ಘಟನೆಗಳು: ಪ್ರತಿಯೊಬ್ಬರ ಜೀವನದ್ಲಲೂ ಆಗಿಂದಾಗ್ಯೆ ಅಥವಾ ಮೇಲಿಂದ ಮೇಲೆ ಸಣ್ಣ-ದೊಡ್ಡ ಘಟನೆಗಳು ನಡೆಯುತ್ತಿರುತ್ತವೆ. ಕೆಲವು ಹಿತಕರವಾಗಿದ್ದರೆ, ಹಲವು ಅಹಿತಕಾರಿಯಾಗಿರುತ್ತವೆ. ಹುಟ್ಟು, ಸಾವು, ಅಗಲಿಕೆ, ಕಷ್ಟ-ನಷ್ಟ, ಪರೀಕ್ಷೆಗಳು, ಬಡ್ತಿ, ವರ್ಗಾವಣೆ, ಸ್ಥಳ ಬದಲಾವಣೆ, ಸ್ಥಾನ-ಮಾನ-ಅಧಿಕಾರದಲ್ಲಿ ಏರುಪೇರು, ಬೆಳೆದ ಮಕ್ಕಳ ಮದುವೆ, ಅಗಲಿಕೆ, ರೋಗ ರುಜಿನ, ಪ್ರವಾಸ, ಕಾನೂನು-ಕೋರ್ಟು, ಸಮಸ್ಯೆಗಳು, ಹೊಸ ಜವಾಬ್ದಾರಿಗಳು ಇತ್ಯಾದಿ ಅನಿರೀಕ್ಷಿತ ಅಪಘಾತ, ದುರಂಗಳೂ ಸಂಭವಿಸಬಹುದು. ಈ ಘಟನೆಗಳು ವ್ಯಕ್ತಿಯ ನೆಮ್ಮದಿಗೆ ಭಂಗ ತಂದರೆ, ಆತನ ಜೀವನಶೈಲಿಗೆ ಅಡೆತಡೆಯುಂಟು ಮಾಡಿದರೆ, ಅನಿರೀಕ್ಷಿತವಾಗಿ ಘಟಿಸಿ ಅವನಿಗೆ ದಿಗ್ಭ್ರಾಂತಿಯನ್ನುಂಟು ಮಾಡಿದರೆ, ಇತರರೊಡನೆ ಇರುವ ಸಂಬಂಧಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದರೆ, ವ್ಯಕ್ತಿಯ ಮಾನಸಿಕ ಒತ್ತಡ ಏರುತ್ತದೆ.

. ಸಮಾನದಲ್ಲಿರಬಹುದು: ವಿಪರೀತ ಸ್ಪರ್ಧೆ, ಅವ್ಯವಸ್ಥೆ, ಅಭದ್ರತೆ, ಶೋಷಣೆ, ಸಂಪನ್ಮೂಲಗಳ ಅಸಮತೋಲನ ವಿತರಣೆ. ಪ್ರತಿಭೆಗೆ ಪುರಸ್ಕಾರವಿಲ್ಲದಿರುವುದು. ಹಣ ಅಧಿಕಾರಕ್ಕೆ ಅನಗತ್ಯ ಮನ್ನಣೆ, ನೈತಿಕ ಮೌಲ್ಯಗಳ ಕುಸಿತ, ಮಾನವೀಯ ನಡೆವಳಿಕೆಗಳ ಅಭಾವ, ನಿರುದ್ಯೋಗ, ಸುಳ್ಳು, ಮೋಸ ವಂಚನೆ ಮಾಡುವವರಿಗೆ ತಕ್ಕ ಶಿಕ್ಷೆ ಇಲ್ಲದಿರುವುದು, ಅರಾಜಕತೆ ವಿಪರೀತ ಜನಸಾಂದ್ರತೆ, ಶ್ರೀಮಂತಿಕೆ ಮತ್ತು ಬಡತನಗಳ ನಡುವಿನ ದೊಡ್ಡ ಅಂತ-ಇವೆಲ್ಲ ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ.

. ಕೊರತೆಗಳು ಮತ್ತು ಹೆಚ್ಚಳಗಳು: ಹಣ ಸಂಪನ್ಮೂಗಳು, ಸಮಯ, ಶಕ್ತಿ, ಸಾಮರ್ಥ್ಯಗಳು, ಆಸರೆ ಪ್ರೋತ್ಸಾಹಗಳು, ಮಾನ್ಯತೆ, ರಕ್ಷಣೆ, ಪ್ರೀತಿ ವಿಶ್ವಾಸಗಳು, ನೀತಿ ನಿಯಮಗಳು, ನೈತಿಕ ಮೌಲ್ಯಗಳಲ್ಲಿನ ಕೊರತೆಯಿಂದ ಮಾನಸಿಕ ನೆಮ್ಮದಿ ಕದಡುತ್ತದೆ. ಹಾಗೆಯೇ ಆಸೆಯ ಹೆಚ್ಚಳ, ದುರಾಸೆ, ಅಗತ್ಯಗಳು, ಸ್ಪರ್ಧೆ, ಜವಾಬ್ದಾರಿಗಳು, ಸಾಮಾಜಿಕ ಅನಿಷ್ಟಗಳು, ಅವ್ಯವಸ್ಥೆಗಳು, ಅನಿಶ್ಚಯತೆಗಳು ಹೆಚ್ಚಿದರೆ ಮಾನಸಿಕ ಒತ್ತಡವೂ ಹೆಚ್ಚುತ್ತದೆ.

ಮಾನಸಿಕ ಒತ್ತಡದ ಪರಿಣಾಮಗಳು

ಒತ್ತಡ ಹೆಚ್ಚಿದಾಗ ಮಿದುಳಿನ ರಾಜಗ್ರಂಥಿ ಪಿಟ್ಯೂಟರಿಯು ಹೈಪೋಥಲಾಮಸ್‌ನ ಆದೇಶದ ಮೇರೆಗೆ ಚುರುಕಾಗಿ ದೇಹದಲ್ಲಿರುವ ಅಡ್ರಿನಲಿನ್‌ ಗ್ರಂಥಿಯು ಹೆಚ್ಚು ಅಡ್ರಿನಲಿನ್ ರಸದೂತವನ್ನು ಉತ್ಪಾದಿಸುವಂತೆ ಪ್ರೇರೇಪಿಸುತ್ತದೆ. ಯಾವಾಗ ರಕ್ತದಲ್ಲಿ ಅಡ್ರಿನಲಿನ್‌ ರಸದೂತದ ಪ್ರಮಾಣ ಹೆಚ್ಚುತ್ತದೆಯೋ ಆಗ ವ್ಯಕ್ತಿ ಹೋರಾಟಕ್ಕೆ ಅಥವಾ ಪಲಾಯನಕ್ಕೆ ಸಜ್ಜಾಗುತ್ತಾನೆ.

. ಮಿದುಳು ಮತ್ತು ಬೌದ್ಧಿಕ ಚಟುವಟಿಕೆಗಳ ಮೇಲೆ ಆಗುವ ಪರಿಣಾಮಗಳು: ವ್ಯಕ್ತಿ ಪ್ರಶಾಂತವಾಗಿದ್ದಾಗ, ಪ್ರತಿಸಲ ಹೃದಯ ಸಂಕುಚನಗೊಂಡಾಗ ಹೊರಬರುವ ಶುದ್ಧ ರಕ್ತದ ಶೇಕಡ ೪೦ ಭಾಗವು ಮಿದುಳಿಗೆ ಹೋಗುತ್ತದೆ. ಕೋಟ್ಯಾಂತರ ನರಕೋಶಗಳಿಗೆ ಆಹಾರ-ಆಮ್ಲಜನಕದ ಪೂರೈಕೆಯಾಗುತ್ತದೆ. ಆದರೆ ಒತ್ತಡ ಹೆಚ್ಚಿದಾಗ ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ತತ್ಪರಿಣಾಮವಾಗಿ ವ್ಯಕ್ತಿಯ ಏಕಾಗ್ರತೆ, ಹೊಸತನ್ನು ಕಲಿಯುವ ಶಕ್ತಿ, ನೆನಪು, ವಿವೇಚನೆ, ಕಣ್ಣು ಕಿವಿಗಳು ಗ್ರಹಿಸಿದ್ದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಎಲ್ಲವೂ ಕುಗ್ಗುತ್ತದೆ. ಮಾನಸಿಕ ದಣಿವು ಹೆಚ್ಚುತ್ತದೆ. ಒಟ್ಟಿನಲ್ಲಿ ಆತನ ಮನೋಸಾಮರ್ಥ್ಯ ತಗ್ಗುತ್ತದೆ. ದೀರ್ಘಕಾಲದ ಮಾನಸಿಕ ಒತ್ತಡದಿಂದ ಮಿದುಳಿನ ಹಿಪ್ಪೊಕ್ಯಾಂಪಸ್ ಶೇಕಡಾ ೧೨ ರಷ್ಟು ಗಾತ್ರದಲ್ಲಿ ತಗ್ಗುತ್ತದೆ. ಇದರಿಂದ ಮರೆವು ಹೆಚ್ಚಾಗುತ್ತದೆ.

. ಭಾವನೆಗಳು: ಬೇಸರ, ದುಃಖ, ಭಯ, ಸಿಟ್ಟು, ಕೋಪಗಳಂತಹ ಅಹಿತಕಾರಿ ಭಾವನೆಗಳು ಮನಸ್ಸನ್ನು ಆವರಿಸುತ್ತವೆ.

. ಶಾರೀರಿಕ ಪ್ರಾಥಮಿಕ ಕ್ರಿಯೆಗಳ ಏರುಪೇರು:

. ಹಸಿವು: ಹಸಿವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಬಾಯಿರುಚಿ ಹಾಳಾಗುತ್ತದೆ. ಕೆಲವು ಸಲ ಅಸಿವು ಹೆಚ್ಚಾಗಿ ವ್ಯಕ್ತಿ ಮಾಮೂಲಿಗಿಂತ ಹೆಚ್ಚು ಆಹಾರ ಸೇವಿಸತೊಡಗುತ್ತಾನೆ. ಇದು ದೀರ್ಘಕಾಲ ನಡೆದರೆ ವ್ಯಕ್ತಿಯ ತೂಕ ಹೆಚ್ಚುತ್ತದೆ. ಬೊಜ್ಜು ಬರುತ್ತದೆ ಅಥವಾ ವ್ಯಕ್ತಿಯ ಆಹಾರ ಸೇವನೆ ಕುಗ್ಗಿ ಆತ ಸಣ್ಣಗಾಗಬಹುದು. ಅಪೌಷ್ಟಿಕತೆಗೆ ತುತ್ತಾಗಬಹುದು.

. ನಿದ್ರೆ: ಸಾಮಾನ್ಯವಾಗಿ ನಿದ್ರೆ ಭಂಗವಾಗುತ್ತದೆ. ನಿದ್ರೆ ಬರಲು ಕಷ್ಟ ಅಥವಾ ಮಧ್ಯೆ ಮಧ್ಯೆ ಎಚ್ಚರವಾಗುವುದು, ಬಿದ್ದ ಕನಸುಗಳು, ಹೆಚ್ಚಾಗಿ ನೆನಪಿಗೆ ಬರುವುದು ಆಗಬಹುದು. ಕೆಲವರಲ್ಲಿ ನಿದ್ರೆ ಹೆಚ್ಚಾಗಬಹುದು ಅಥವಾ ನಿದ್ರಾಚಕ್ರ ವ್ಯತ್ಯಾಸವಾಗಿ ರಾತ್ರಿ ನಿದ್ರೆ ಇಲ್ಲದಾಗಬಹುದು. ಹಗಲಿನಲ್ಲಿ ಕೆಲಸ ಮಾಡಬೇಕಾದ ವೇಳೆಯಲ್ಲಿ ನಿದ್ರೆ ಬರಬಹುದು.

. ಮಲಮೂತ್ರ ವಿಸರ್ಜನೆಯಲ್ಲಿ ಏರುಪೇರು: ಮಲಬದ್ಧತೆ, ಬೇಧಿ, ಪದೇ ಪದೇ ಮೂತ್ರ ಹೋಗುವುದು, ನಿದ್ರೆಯಲ್ಲಿ ಅನಿಯಂತ್ರಿತ ಮೂತ್ರ ವಿಸರ್ಜನೆಯಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು.

. ಲೈಂಗಿಕ ಆಸೆ ಕ್ರಿಯೆಗಳ ಏರುಪೇರು: ಮಾನಸಿಕ ಒತ್ತಡ ಹೆಚ್ಚಿದ್ದಾಗ ಲೈಂಗಿಕ ಆಸೆ ತಗ್ಗುತ್ತದೆ. ಅನುವೇದಕ ನರ ವ್ಯವಸ್ಥೆ ಚುರುಕುಗೊಳ್ಳುವುದರಿಂದ ಜನನಾಂಗದ ಉದ್ರಾಕ ಬೇಗ ಇಳಿದು ಹೋಗುವುದು. ಶೀಘ್ರ ವೀರ್ಯಸ್ಖಲನ, ಲೈಂಗಿಕ ಕ್ರಿಯೆಯಿಂದ ಸಿಗಬೇಕಾದ ಸುಖ ತೃಪ್ತಿ ಸಿಗದಿರುವುದು- ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

. ಹೊರ ಅಂಗಾಂಗಗಳಲ್ಲಾಗುವ ಬದಲಾವಣೆ:

. ಸ್ನಾಯುಗಳು: ಹೆಚ್ಚಿನ ಸ್ನಾಯುಗಳು ಸದಾ ಸಂಕುಚನ ಸ್ಥಿತಿಯಲ್ಲೇ ಉಳಿಯುವುದರಿಂದ ಬಿಗಿತ, ದಣಿವು, ನೋವು ಕಾಣಿಸಿಕೊಳ್ಳುತ್ತವೆ. ತಲೆನೋವು, ಎದೆ ನೋವು, ಬೆನ್ನು-ಸೊಂಟ ನೋವು, ಕೈಕಾಲು ನೋವು, ದಣಿವು ಸಾಮಾನ್ಯ ರೋಗಲಕ್ಷಣಗಳಾಗುತ್ತವೆ.

ಆ. ಕೀಲುಗಳು ಹೆಚ್ಚು ಸವೆದು ಕೀಲು ಬೇನೆ ಕಾಣಿಸಿಕೊಳ್ಳಬಹುದು. ರುಮಾಟಾಯಿಡ್ ಸಂಧಿವಾತ ಒಂದು ಮನೋದೈಹಿಕ ಬೇನೆ.

. ಚರ್ಮ: ಹೆಚ್ಚು ಬೆವರುವುದು, ಜಿಡ್ಡು ಹೆಚ್ಚಾಗುವುದು, ಮೊಡವೆ, ಕುರುಗಳು ಏಳುವುದು, ಏಕ್ಸೀಮಾ ಅಲರ್ಜಿ, ಸೋರಿಯಾಸಿಸ್‌ನಂತಹ ಚರ್ಮಕಾಯಿಲೆಗಳು ಕಂಡುಬರುತ್ತವೆ.

ಈ. ಬೊಜ್ಜುತನ

. ಒಳ ಅಂಗಾಗಗಳಲ್ಲಿ ಬದಲಾವಣೆ

ಜಠರ, ಕರುಳು, ಹೃದಯ, ರಕ್ತನಾಳಗಳು, ಶ್ವಾಸನಾಳ-ಶ್ವಾಸಕೋಶಗಳು, ನಿರ್ನಾಳ ಗ್ರಂಥಿಗಳು, ಜನನಾಂಗಗಳು, ಲಿಂಫ್‌ ರಸ ಮತ್ತು ಲಿಂಫ್ ವ್ಯವಸ್ಥೆ, ರೋಗ ನಿರೋಧಕ ವ್ಯವಸ್ಥೆ ಹಾನಿಗೀಡಾಗುತ್ತವೆ. ಈ ಅಂಗಾಂಗಗಳಿಗೆ ಸಂಬಂಧಿಸಿದಂತೆ ಅನೇಕ ಮನೋದೈಹಿಕ ರೋಗಗಳು ಕಾಣಿಸಿಕೊಳ್ಳುತ್ತವೆ.

. ಕುಟುಂಬದ ಮೇಲೆ ಪರಿಣಾಮಗಳು

ಕೌಟುಂಬಿಕ ಸಾಮರಸ್ಯ ಹಾಳಾಗುತ್ತದೆ. ದಾಂಪತ್ಯ ವಿರಸ ತಲೆ ಹಾಕುತ್ತದೆ. ಕುಟುಂಬದ ಸದಸ್ಯರುಗಳ ನಡುವೆ ಮನಃಸ್ತಾಪ, ಅತೃಪ್ತಿ, ಸಿಟ್ಟು, ಕೋಪ ಜಗಳಗಳು ಹೆಚ್ಚುತ್ತವೆ. ಮಕ್ಕಳ ಮನೋವಿಕಾಸ ಕುಂಠಿತವಾಗಿ ಅವರು ಶಾಲೆಯಲ್ಲಿ ಹಿಂದುಳಿಯುತ್ತಾರೆ. ಗುಣದೋಷದ ನಡವಳಿಕೆಗಳನ್ನು ಪ್ರಕಟಿಸುತ್ತಾರೆ. ಕುಟುಂಬ ಒಡೆದು ಹೋಗಬಹುದು ಅಥವಾ ರೋಗಗ್ರಸ್ತವಾಗಬಹುದು.

ಮಾನಸಿಕ ಒತ್ತಡ ಹೆಚ್ಚಿದಾಗ ಜನ ಏನು ಮಾಡುತ್ತಾರೆ?

ಮಾನಸಿಕ ಒತ್ತಡ ಹೆಚ್ಚಿದಾಗ ಜನ ತಮಗೆ ಅರಿವಿಲ್ಲದಂತೆಯೇ ಅನೇಕ ರೀತಿಯ ವರ್ತನೆಗಳನ್ನು ತೋರುತ್ತಾರೆ. ಇದಕ್ಕೆ ಸುಪ್ತ ಮನಸ್ಸಿನ ರಕ್ಷಣಾ ಕ್ರಮಗಳು ಎಂದು ಮನಃಶಾಸ್ತ್ರಜ್ಞರು ಕರೆಯುತ್ತಾರೆ (ಡಿಫೆನ್ಸ್ ಮೆಕಾನಿಸಮ್ಸ್‌), ವಾಸ್ತವಿಕತೆಯನ್ನು, ಸತ್ಯವನ್ನು ಒಪ್ಪದೆ ನಿರಾಕರಿಸುವುದು, ಕಲ್ಪನಾ ಲೋಕದಲ್ಲಿ ವಿಹರಿಸುವುದು, ಕಷ್ಟ-ಸಮಸ್ಯೆ-ದಂದ್ವವನ್ನು ಸುಪ್ತ ಮನಸ್ಸಿನೊಳಕ್ಕೆ ತಳ್ಳಿ ಮರೆತಂತೆ ಇರುವುದು, ಆದ ತಪ್ಪು, ಕಷ್ಟ-ನಷ್ಟಗಳಿಗೆ ಇತರರನ್ನು ದೂಷಿಸುವುದು, ದುರಾದೃಷ್ಟ, ವಿಧಿಲಿಖಿತ ಎಂದುಕೊಳ್ಳುವುದು, ಒಂದು ಸನ್ನಿವೇಶದ ಕೋಪವನ್ನು ಮತ್ತೊಂದು ಸನ್ನಿವೇಶದಲ್ಲಿ ಪ್ರಕಟಿಸುವುದು ಅಥವಾ ಒಬ್ಬರ ಮೇಲಿನ ಕೋಪವನ್ನು ಇನ್ನೊಬ್ಬರ ಮೇಲೆ  ತೋರಿಸುವುದು, ವಿಫಲತೆಗೆ ತಾರ್ಕಕ ವಿವರಣೆ ಅಥವಾ ವೇದಾಂತ ಹೇಳುವುದು. ಅನಗತ್ಯವಾಗಿ ಇತರರನ್ನು ಅವಲಂಬಿಸುವುದು, ತಪ್ಪೊಪ್ಪಿಕೆ, ಕಠಿಣ ವ್ರತ ನಿಯಮಗಳನ್ನು ಅನುಸರಿಸುವುದು, ಒಂದು ಗುರಿಯಲ್ಲಿ ವಿಫಲವಾದಾಗ, ಪರ್ಯಾಯ ಗುರಿಗಳನ್ನಿಟ್ಟುಕೊಂಡು ಅವನ್ನು ಸಾಧಿಸಲು ಪ್ರಯತ್ನಿಸುವುದು. ಪರ್ಯಾಯ ಪರಿಹಾರಗಳನ್ನು ಪಡೆಯುವುದು, ನಕ್ಕು, ಹಾಸ್ಯ ಪ್ರಜ್ಞೆಯನ್ನು ಪ್ರಕಟಿಸುವುದು, ಸೃಜನಶೀಲ ಚಟುವಟಿಕೆ- ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಹೆಚ್ಚು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದು- ಈ ರಕ್ಷಣಾ ಕ್ರಮಗಳ ನಮೂನೆಗಳು.

ಒತ್ತಡದ ಹಿಂಸೆಯಿಂದ ಪಾರಾಗಲು ಕೆಲವರು ಸ್ಥಳ ಬದಲಾವಣೆ ಮಾಡುತ್ತಾರೆ. ಕಷ್ಟ ಸಮಸ್ಯೆ, ಸನ್ನಿವೇಶಗಳಿಂದ ದೂರವಿರಲು ಯತ್ನಿಸುತ್ತಾರೆ. ಧೂಮಪಾನ, ಮದ್ಯಪಾನ, ನಿದ್ರಾಮಾತ್ರಗಳ ಸೇವನೆ, ಮಾದಕ ವಸ್ತುಗಳ ಬಳಕೆ ಮಾಡುತ್ತಾರೆ. ರೋಮಾಂಚಕಾರಕ, ಖುಷಿದಾಯಕ ಮನರಂಜನಾ ಚಟುವಟಿಕೆ, ಕ್ರೀಡೆಗಳಲ್ಲಿ ತೊಡಗುತ್ತಾರೆ.

ಮಾನಸಿಕ ಒತ್ತಡಕ್ಕೆ ಪರಿಹಾರಗಳು

ವ್ಯಕ್ತಿ ತನ್ನ ನಿಲುವು, ಧೋರಣೆಗಳಲ್ಲಿ ಮತ್ತು ಜೀವನ ಶೈಲಿಯಲ್ಲಿ ಸೂಕತ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಚಿಂತೆ ಮಾಡುವುದನ್ನು ಬಿಟ್ಟು ಕಾರ್ಯೋನ್ಮುಖರಾಗಬೇಕಾಗುತ್ತದೆ. ವೈಮನಸ್ಸುಗಳನ್ನು ವಿರಮಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಮನೆಯವರ, ಸಂಬಂಧಪಟ್ಟವರ ಆಸರೆಯನ್ನು ಪಡೆಯಬೇಕಾಗುತ್ತದೆ. ಲಭ್ಯವಿರುವ ಸಂಪನ್ಮೂಲಗಳು ಮತ್ತು ತನ್ನ ಇತಿಮಿತಿಯಲ್ಲಿ ಸರಳ ತೃಪ್ತ ಜೀವನವನ್ನು ನಡೆಸುವುದು ಹೇಗೆ ಎಂದು ಕಲಿಯಬೇಕಾಗುತ್ತದೆ. ವೈದ್ಯರ ಮಾರ್ಗದರ್ಶನದಲ್ಲಿ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

. ವಾಸ್ತವಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬೇಕು: ತನ್ನ ಇತಿಮಿತಿ, ತನ್ನ ಕುಟುಂಬ ಸಮಾಜಗಳ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಸಂಪನ್ಮೂಲಗಳು ಎಷ್ಟು ತನ್ನ ಸಾಮರ್ಥ್ಯ ಕೊರತೆಗಳು ಎಷ್ಟು, ತಾನು ಏನು ಮಾಡಬಲ್ಲೆ, ಏನು ಮಾಡಲಾರೆ ಎಂಬುದನ್ನು ವಸ್ತುನಿಷ್ಠವಾಗಿ ವಿವೇಚಿಸಿ, ವಾಸ್ತವಿಕತೆಯನ್ನು ಒಪ್ಪಿಸಿಕೊಳ್ಳಬೇಕು. ಇತರರಿಗೆ ತನ್ನನ್ನು ಹೋಲಿಸಿಕೊಂಡು, ಕೀಳರಿಮೆಯ ಭಾವನೆಗಳನ್ನು ಬೆಳೆಸಿಕೊಳ್ಳುವ ಪರಿಪಾಠವನ್ನು ತ್ಯಜಿಸಬೇಕು.

. ಸಕಾರಾತ್ಮಕ ಧೋರಣೆ: ತನ್ನಲ್ಲಿರುವ ತನ್ನ ಮನೆಯವರು, ಬಂಧು-ಮಿತ್ರರು, ಉದ್ಯೋಗ, ಸಮಾಜದಲ್ಲಿರುವ ಒಳ್ಳೆಯ ಅಂಶಗಳನ್ನು ಗುರುತಿಸಿ ಸಂತೋಷ ಹೆಮ್ಮೆ ಪಡಬೇಕು. ತನ್ನ ಸಾಧನೆಗಳನ್ನು ಪಟ್ಟಿ ಮಾಡಿ, ತೃಪ್ತಿಪಡಬೇಕು. ಕುಂದುಕೊರತೆಗಳ ಬಗ್ಗೆಯೇ ಚಿಂತಿಸಿ ಖಿನ್ನನಾಗಬಾರದು. ಅವನ್ನು ಕಡಿಮೆ ಮಾಡಲು ಸಾಧ್ಯವಾದ ಪ್ರಯತ್ನ ಮಾಡಬೇಕು.

. ಅಗತ್ಯ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬೇಕು: ಸರಳ ಜೀವನದ ಮಾರ್ಗ ಹಿಡಿದರೆ, ನಮ್ಮ ಅಗತ್ಯಗಳು, ಬೇಡಿಕೆಗಳು, ನಿರೀಕ್ಷೆಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತವೆ. ಹಣ, ಭೋಗ, ಭಾಗ್ಯಗಳು, ಸಂಪತ್ತಿನ ಸಂಗ್ರಹಣೆ ನಮ್ಮ ಗುರಿ ಆಗಬಾರದು.

. ಶಿಸ್ತು ವ್ಯವಸ್ಥೆ: ನಮ್ಮ ದೈನಂದಿನ ಚಟುವಟಿಕೆಗಳು, ನಮ್ಮ ಕೆಲಸ ಕರ್ತವ್ಯಗಳನ್ನು ಮೊದಲೇ ಯೋಜಿಸಿ ವ್ಯವಸ್ಥಿತಿವಾಗಿ ಮಾಡಬೇಕು. ಇದರಿಂದ ಅಮೂಲ್ಯವಾದ ಹಣ, ಸಮಯ, ಶ್ರಮಗಳ ಸದುಪಯೋಗವಾಗುತ್ತದೆ.

. ಆತ್ಮೀಯರಲ್ಲಿ ಕಷ್ಟಸುಖಗಳನ್ನು ಹಂಚಿಕೊಳ್ಳುವುದು: ಸುಖ ಹಂಚಿಕೊಂಡಷ್ಟೂ ಹೆಚ್ಚುತ್ತದೆ. ದುಃಖ ನೋವು ಹಂಚಿಕೊಂಡರೆ ತಗ್ಗುತ್ತದೆ. ಸಹಾನುಭುತಿಯಿಂದ ವಿಶ್ವಾಸದಿಂದ ನಮ್ಮ ಕಷ್ಟ ನೋವುಗಳನ್ನು ಡೈರಿಯಲ್ಲಿ ಬರೆಯಿರಿ. ಸೃಜನಶೀಲ ಕಲಾ ಮಾಧ್ಯಮಗಳ ಮೂಲಕ ಪ್ರಕಟಿಸಿ.

೬. ಕಷ್ಟ -ಸಮಸ್ಯೆಗಳನ್ನು ಜವಾಬ್ದಾರಿಗಳನ್ನು ಎದುರಿಸುವಾಗ ಪ್ರಯತ್ನ ನನ್ನದು, ಫಲ ಭಗವಂತನದು ಎಂಬ ಧೋರಣೆ ಇಟ್ಟುಕೊಳ್ಳಿ. ಫಲಿತಾಂಶದ ಬಗ್ಗೆ ಆತಂಕ, ಚಿಂತೆ ಬೇಡ, ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲ ಸಿಕ್ಕೇ ಸಿಕ್ಕುತ್ತದೆ ಎಂಬ ಆಶಾವಾದವಿರಲಿ.

. ಜನ ಬೆಂಬಲ ಇಟ್ಟುಕೊಳ್ಳಿ: ಮೃದುವಾದ ನಡೆ ನುಡಿಗಳಿಂದ, ಸ್ನೇಹಭಾವದಿಂದ ಆದಷ್ಟು ಹೆಚ್ಚೆಚ್ಚು ಜನರೊಂದಿಗೆ ಸುಮಧುರ ಬಾಂಧವ್ಯ ಇಟ್ಟುಕೊಳ್ಳಿ. ಸಾಧ್ಯವಾದಷ್ಟು ಇತರರಿಗೆ ನೆರವಾಗಿ, ಆಗ ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಿಮಗೆ ಆಸರೆ ನೀಡುತ್ತಾರೆ.

. ಆರೋಗ್ಯಕರ ಮನರಂಜನಾ ಚಟುವಟಿಕೆಗಳಿಗಾಗಿ ಪ್ರತಿದಿನ ಸ್ವಲ್ಪ ಹೊತ್ತನ್ನು ಮೀಸಲಾಗಿಡಿ. ನಿಮ್ಮ ಅಭಿರುಚಿ ಅನುಕೂಲಕ್ಕೆ ತಕ್ಕಂತೆ, ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಅದು ಕ್ರೀಡೆ ಆಗಬಹುದು. ಸಂಗೀತ-ಸಾಹಿತ್ಯವಾಗಬಹುದು. ಮಕ್ಕಳೊಂದಿಗೆ ಆಟವಾಡುವುದಾಗಬಹುದು. ವ್ಯಾಯಾಮ, ವಾಯು ವಿಹಾರ, ಯೋಗ, ಪ್ರಣಾಯಾಮ ಆಗಬಹುದು. ತೋಟಗಾರಿಕೆ, ಅಪೂರ್ವ ವಸ್ತುಗಳ ಸಂಗ್ರಹಣೆ ಆಗಬಹುದು. ಪ್ರವಾಸವಾಗಬಹುದು, ಕರಕುಶಲ ವಸ್ತುಗಳನ್ನು ಮಾಡುವುದಾಗಬಹುದು.

. ನಿಮ್ಮ ಜ್ಞಾನ, ಕೌಶಲಗಳನ್ನು ಹೆಚ್ಚಿಸಿಕೊಳ್ಳಿ: ಸದಾ ಏನನ್ನಾದರೂ ಹೊಸತನ್ನು ಕಲಿಯಿರಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಹೆಚ್ಚಿನ ಜ್ಞಾನ ಆತ್ಮವಿಶ್ವಾಸವನ್ನು ತರುತ್ತದೆ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

೧೦. ನಿಮ್ಮ ಆರೋಗ್ಯ ಪಾಲನೆ: ನಿಮ್ಮ ಆರೋಗ್ಯವರ್ಧನೆಗೆ ಹೆಚ್ಚು ಗಮನ ಕೊಡಿ. ಹಣದಿಂದ ಔಷಧವನ್ನು, ವೈದ್ಯರನ್ನು ಖರೀದಿಸಬಹುದು. ಆದರೆ, ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಸತತ ಪ್ರಯತ್ನ, ಸಾಧನೆ, ಮುಂಜಾಗ್ರತಾ ಕ್ರಮಗಳಿಂದ ಶೇಕಡಾ ೭೫ ರಷ್ಟು ರೋಗಗಳು ಬರದಂತೆ ಮಾಡಲು ಸಾಧ್ಯವಿದೆ.

. ಹಿತಮಿತವಾದ ಆಹಾರ ಸೇವನೆ: ನಿಯಮಿತವಾಗಿ, ಸರಳ ಅದರ ಸಮತೋಲನ ಆಹಾರವನ್ನು ಸೇವಿಸಿ. ಸೊಪ್ಪು, ತರಕಾರಿ, ಹಣ್ಣು ಬೇಳೆಕಾಳುಗಳನ್ನು ದಿನನಿತ್ಯ ಸೇವಿಸಿ. ಸಕ್ಕರೆ, ಉಪ್ಪು, ಮಸಾಲೆ, ಜಿಡ್ಡು ಕಡಿಮೆ ಮಾಡಿ.

ಆ. ಶಾರೀರಿಕ ಮತ್ತು ಪರಿಸರದ ಸ್ವಚ್ಛತೆಗೆ ಹೆಚ್ಚು ಗಮನಕೊಡಿ. ಆಹಾರವನ್ನು ತಯಾರಿಸುವಾಗ, ಬಡಿಸುವಾಗ, ಊಟ ಮಾಡುವಾಗ ನಿಮ್ಮ ಕೈಗಳು ಸ್ವಚ್ಛವಾಗಿರಲಿ, ಆಹಾರ, ನೀರು, ಮನೆಯ ಒಳಗೂ ಮತ್ತು ಹೊರಗೂ ಮಲಿನಗೊಳ್ಳಲು ಬಿಡಬೇಡಿ. ನಿತ್ಯ ಸ್ನಾನ, ಮಡಿ ಬಟ್ಟೆಗಳನ್ನು ಹಾಕಿಕೊಳ್ಳಿ. ಮನೆಯ ಸುತ್ತಮುತ್ತ ಕ್ರಿಮಿ-ಕೀಟಗಳನ್ನು ಆದಷ್ಟು ನಿವಾರಿಸಿಕೊಳ್ಳಿ. ಕಸ-ಕೊಳಕಿನ ಸೂಕ್ತ ವಿಲೇವಾರಿ ಮಾಡಿ.

ಇ. ದೇಹಕ್ಕೆ ವ್ಯಾಯಾಮವಾಗುವಂತಹ ಚಟುವಟಿಕೆಗಳಲ್ಲಿ ತೊಡಗಿ. ದೇಹ ಸೋಮಾರಿಯಾಗಲು ಬಿಡಬೇಡಿ.

ಈ. ವಿಶ್ವಾಸ ಪಾತ್ರರಾದ ಒಬ್ಬ ವೈದ್ಯರ ಮಾರ್ಗದರ್ಶನದಲ್ಲಿ ನಿಮ್ಮ ಮತ್ತು ಮನೆಯವರೆಲ್ಲರ ಅನಾರೋಗ್ಯಗಳ ಚಿಕಿತ್ಸೆ ಮಾಡಿಸಿ, ಔಷಧಗಳ ದುರ್ಬಳಕೆಯನ್ನು ತಪ್ಪಿಸಿ.

ಉ. ಆತಂಕ ರಹಿತ ನೆಮ್ಮದಿಯ ಬದುಕು ಹಾಗೂ ಜೀವನ ಶೈಲಿಗೆ ಆದ್ಯತೆ ನೀಡಿ.