ಸಂಘಟನೆ ಮಾನವರಲ್ಲಿ ಮಾತ್ರವಲ್ಲ ಪ್ರಾಣಿ ಪಕ್ಷಿಗಳಲ್ಲಿಯೂ ಕೂಡ ಕಂಡು ಬರುತ್ತದೆ. ಇವು ಆಯಾ ಜೀವಿಗಳಿಗೆ ಒಂದು ಬಗೆಯ ಒಗ್ಗಟ್ಟು ಅಥವಾ ಏಕಮುಖತೆಯ ಸಂಕೇತವೆನ್ನಬಹುದು. ಆದರೆ ಮಾನವ ಸಮುದಾಯದಲ್ಲಿ ಈ ಬಗೆಯ ಏಕತೆ ಅಥವಾ ಒಗ್ಗಟ್ಟು ಅವರವರ ನಡುವೆ ಏರ್ಪಟ್ಟು ವಾಸ್ತವಿಕನೆಲೆಯ ಆಂತರಿಕ ಗಾಢ, ನಿಕಟ ಸಂಬಂಧಗಳನ್ನು ಅವಲಂಬಿಸಿರುತ್ತದೆ. ಅದು ಒಂದು ರೀತಿಯ ವ್ಯವಸ್ಥೆಯನ್ನು ಪಡೆದುಕೊಂಡಿದ್ದು ಕೆಲವು ನೀತಿ ಸೂತ್ರ ಶಿಸ್ತುಗಳಿಗೆ ಒಳಪಟ್ಟ ಸುಸಂಘಟಿತವಾದ ಅವರದೇ ಸಮಾಜವೆನ್ನುವಂತೆ ಕಂಡು ಬರುತ್ತದೆ. ಒಂದು ದೃಷ್ಟಿಯಿಂದ ಯಾವಾಗಲೂ ವ್ಯಕ್ತಿಗಳ ವ್ಯವಸ್ಥಿತ ಸಮೂಹಕ್ಕೆ ಸಮಾಜಪದ ಅನ್ವಯಿಸುತ್ತದೆ. ಒಂದು ಸಮಾಜದಲ್ಲಿ ವಿವಿಧ ಅಂಗಗಳಿರುತ್ತವೆ. ಕುಟುಂಬ, ಗುಂಪು, ವರ್ಗ ಇತ್ಯಾದಿ. ಆದರೆ ವಾಸ್ತವವಾಗಿ ಈ ಎಲ್ಲ ಸಂಗತಿಗಳ ಪೂರ್ಣ ತಿಳುವಳಿಕೆಯಿಲ್ಲದೆ ಸಂಘಟಿತವಾಗಿ ಜೀವನ ನಿರ್ವಹಿಸುವ ಹಲವಾರು ಜನಪದ ಗುಂಪುಗಳಲ್ಲಿ ಡಕ್ಕಲಿಗರದೂ ಒಂದು ಎಂದು ಹೇಳಬಹುದು.

ಡಕ್ಕಲಿಗರು ತಮ್ಮ ಹೊಟ್ಟೆಪಾಡಿಗಾಗಿ ಹರಿದು ಹಂಚಿಹೋದರೂ ಮಳೆಗಾಲ ಆರಂಭವಾಗುತ್ತಲೇ ಮರಳಿ ಗೂಡಿನ ಕೋಗಿಲೆಯಂತೆ ತಮ್ಮ ಊರುಗಳಿಗೆ ಮರಳುತ್ತಾರೆ. ಅವರು ವೃತ್ತಿಗಾಗಿ ಹೊರಗೆ ಹೋದಾಗ ಮಾದಿಗರಕೇರಿಯ ತಿಪ್ಪೆಯ ಹತ್ತಿರ ತಮ್ಮ ಬಿಡಾರ ಹೂಡುತ್ತಾರೆ. ಮಾದಿಗರೆ ತಮಗೆ ಗೌಡ, ಬುದ್ಧಿ ಎಂದು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಇವರು ತಮ್ಮ ಹಳ್ಳಿಗಳಲ್ಲಿ ದುರ್ಗಮ್ಮ, ಎಲ್ಲಮ್ಮ, ಸಂಕಾಲಮ್ಮ ಈ ಯಾವುದಾದರೊಂದು ಶಕ್ತಿದೇವತೆಯ ಹೆಸರಿನ ಮೇಲೆ ಚಪ್ಪರ ಅಥವಾ ಗುಡಿ ಕಟ್ಟಿರುತ್ತಾರೆ. ಹೊಲ ಮನೆ ಮದುವೆ ಸಂಬಂಧಿ, ವ್ಯಭಿಚಾರ ಮುಂತಾದವುಗಳ ಸಂಬಂಧ ಜಗಳವಾದಲ್ಲಿ ಕಟ್ಟೆಮನೆಯನ್ನು ಮೀರಿ ಕೋರ್ಟುಗಳ ಕಟ್ಟೆ ಇವರು ಹತ್ತುವುದಿಲ್ಲ. ಏನೇ ವ್ಯಾಜ್ಯ ಬಂದರೂ ಅದನ್ನು ತಮ್ಮ ತಮ್ಮಲ್ಲಿಯೇ ಸರಿಪಡಿಸಿಕೊಳ್ಳುತ್ತಾರೆ. ಕಡುಬಡವರಾದರೂ ಇವರು ನಿಯತ್ತಿನಿಂದ ಬದುಕುತ್ತಾರೆ. ಉಂಡಮನೆಯ ಋಣದ ಭಾರ ಮರೆಯುವುದಿಲ್ಲ. ಏನೇ ಆದರೂ ಕುಟುಂಬದ ಹಿರಿಯರು ಅಥವಾ ಕೇರಿಯ ಯಜಮಾನರು ಹಾಕಿದ ಲಕ್ಷ್ಮಣ ರೇಖೆ ದಾಟುವುದಿಲ್ಲ.

ಡಕ್ಕಲಿಗರಲ್ಲಿ ಕುಟುಂಬದ ಯಜಮಾನ ಮನೆಯ ಆಗು-ಹೋಗುಗಳಿಗೆ ಪ್ರಮುಖನಾಗಿರುತ್ತಾನೆ. ಹಾಗೆಯೇ ಡಕ್ಕಲಿಗ ಗುಂಪಿನ ಮುಖ್ಯಸ್ಥನು ಆಯಾ ಗ್ರಾಮದ ಡಕ್ಕಲಿಗರಿಗೆ ಮುಖ್ಯಸ್ಥನಾಗಿರುತ್ತಾನೆ. ಈ ಎಲ್ಲ ಡಕ್ಕಲಿಗರಿಗೂ ಸೇರಿ ಮತ್ತೊಬ್ಬ ದೊಡ್ಡ ಯಜಮಾನ ಇರುತ್ತಾನೆ. ಆಮೇಲೆ ಪ್ರಾದೇಶಿಕ ವಿಭಾಗ ಕ್ರಮದಿಂದಾಗಿ ಡಕ್ಕಲಿಗರು ಹೆಚ್ಚಾಗಿರುವ ಪ್ರದೇಶವನ್ನು ಆಯ್ಕೆಮಾಡಿ ‘ಕಟ್ಟಿಮನಿ’ ಎಂದು ಗುರುತಿಸಿ ಅದಕ್ಕೆ ಒಬ್ಬ ಮುಖ್ಯಸ್ಥನನ್ನು ಸಮಾಜದವರೆಲ್ಲರೂ ಸೇರಿ ಆಯ್ಕೆಮಾಡುತ್ತಾರೆ. ಈ ಕಟ್ಟಿಮನಿ ಯಜಮಾನ ಡಕ್ಕಲಿಗರ ಪ್ರಾದೇಶಿಕ ವಿಭಾಗದ ಪ್ರತಿನಿಧಿಯಾಗಿದ್ದು ತಮ್ಮ ಗುಂಪಿನವರಲ್ಲಿ ತಂಟೆ-ತಕರಾರು ಹಾಗೂ ಇತರೆ ವಿಷಯಗಳನ್ನು ಪ್ರತಿವರ್ಷ ನಿಗದಿತಕಾಲದಲ್ಲಿ ಎಲ್ಲ ಯಜಮಾನರ ಸಮ್ಮಖದಲ್ಲಿ ಪ್ರಸ್ತಾಪಿಸುತ್ತಾನೆ. ಈ ವಿಷಯಗಳನ್ನು ಪರಿಗಣಿಸಿ ತಮ್ಮ ತಮ್ಮ ಸಮಸ್ಯೆಯ ಬಗೆಗೆ ಒಂದೊಂದರಂತೆ ನ್ಯಾಯ ನಡೆಸುತ್ತಾರೆ ಇದಕ್ಕೆ ಕಟ್ಟಿಮನಿ ಕೂಡುವುದೆಂದು ಕರೆಯುತ್ತಾರೆ. ಡಕ್ಕಲಿಗರಿಗೆ ಪ್ರಮುಖವಾದ ಈ ಕೆಲವು ಮಠಗಳಿವೆ ಎಂದು ವಕ್ತೃಗಳ ಹೇಳಕೆ. ಮಹಾಲಿಂಗಪೂರ ತಾಲೂಕಿನ ಬೊಬಲಾದಿ ಮಠ, ಹಂಪೆಯ ಶೆಟ್ರಮಠ, ಗಂಗಾವತಿ ತಾಲೂಕಿನ ಮುದಗಲ್‌ ಮಠ ಇತ್ಯಾದಿ. ವ್ಯಾಜ್ಯ ಬಗೆ ಹರಿಯದಿದ್ದಾಗ ಈ ಮಠಗಳಿಗೆ ದೂರು ಸಲ್ಲಿಸುತ್ತಾರಂತೆ!

ಮಾದಿಗರ ಇಂತಿಷ್ಟು ಮನೆಗಳು ಕಡ್ಡಾಯವಾಗಿ ಡಕ್ಕಲಿಗರಿಗೆ ಅನ್ನ-ಬಟ್ಟೆ ನೀರುಗಳನ್ನು ನೀಡಿ ನೋಡಿಕೊಳ್ಳಬೇಕೆಂದು, ಅವುಗಳನ್ನು ಕುಟುಂಬಗಳ ಆಧಾರದ ಮೇಲೆ ಕಟ್ಟಿಮನಿ ಯಜಮಾನರುಗಳು ಹಂಚಿಕೊಟ್ಟಿರುತ್ತಾರೆ. ಉದಾ: ಹನ್ನೊಂದು ಪಾಲು, ಇಪ್ಪತ್ತು ಪಾಲು, ಹದಿನಾರು ಪಾಲು, ಮೂವತ್ತು ಪಾಲು. ಹೀಗೆ ಒಕ್ಕಲುತನ ಮಾಡುವ ಮಾದರ ಮನೆಗಳನ್ನು ಡಕ್ಕಲಿಗರ ಉಪಜೀವನಕ್ಕೆ ಆಹಾರ ಸಂಗ್ರಹಣೆಯ ಪ್ರಮುಖ ವಿಧಾನವಾಗಿದೆ.