ಭಾರತೀಯ ವಾದ್ಯಗಳಲ್ಲಿಯೇ ಅತ್ಯಂತ ಮಧುರವೂ ಮೋಹಕವೂ ಜನಪ್ರಿಯವೂ ಆದುದೆಂದರೆ ಸಿತಾರ. ಸಿತಾರದ ಹುಟ್ಟು ಪ್ರಾಚೀನತೆಯಲ್ಲಿ ಹುದುಗಿದೆ. ಸಾಮಾನ್ಯವಾಗಿ ಅದರ ಆವಿಷ್ಕಾರವನ್ನು ಅಮೀರ ಖಸ್ರೂಗೆ (೧೨೫೩-೧೩೨೫) ಗೆ ಆರೋಪಿಸಲಾಗುತ್ತಿದೆ. ಅವನು ಮೂರು ತಂತೆ ಜೋಡಿಸಿ ಸೆಹ್ ತಾರ್ (ಸೆಹ್ = ಮೂರು, ತಾರ್ = ತಂತಿ) ಮಾಡಿದ. ಸೆಹ್ ತಾರದ ಅಪಭ್ರಂಶವೇ ಸಿತಾರ್ ಎಂಬ ವಿಚಾರಸರಣಿ ಇದೆ. ಅಮೀರ ಖುಸ್ರೂ, ಬಹುಮುಖ ಪ್ರತಿಭಾಶಾಲಿಯಾಗಿದ್ದುದು ನಿಜ. ಭಾರತೀಯ ಸಂಗೀತದ ಮೇಲೆ ಅವನ ಪ್ರಭಾವಮುದ್ರೆ ಅಚ್ಚಳಿಯದೆಂಬುದೂ ನಿಜ. ಅಂದ ಮಾತ್ರಕ್ಕೆ ಎಲ್ಲವನ್ನೂ ಅವನಿಗೆ ಆರೋಪಿಸುವದು ಸರಿಯೆ? ಹಾಗೆ ಮಾಡುವದು ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ.

ತ್ರಿತಂತ್ರಿ (ಮೂರು ತಂತಿಗಳ ವಾದ್ಯ) ಮತ್ತು ಸಪ್ತತಂತ್ರಿ (ಏಳು ತಂತಿಗಳ ವಾದ್ಯ) ಅಮೀರ ಖುಸ್ರೂಗಿಂತ ಹಲವಾರು ಶತಮಾನಗಳ ಮೊದಲೆ ಅಸ್ತಿತ್ವದಲ್ಲಿದ್ದವು. ಸೆಹ್ ತಾರ್ ಎಂಬ ಪದ ಪ್ರಯೋಗ ಕೂಡ ಎಷ್ಟೋ ಹಳೆಯದು. ನಾಲ್ಕನೆಯ ಶತಮಾನದಲ್ಲಿ ಜರಹಮ್ ಬಿನತೊಯಿ ಎಂಬ ಕವಿ, ಹಾಡುಗಾರನಿದ್ದನಂತೆ. ಅವನು ಸತತ ಮೂರು ವರ್ಷ ಭಾರತದ ಕವಿ ಸಮ್ಮೇಳನವೊಂದರಲ್ಲಿ ಪಾಲ್ಗೊಂಡಿದ್ದನಂತೆ. ಅವನು ಪ್ರಸ್ತುತಪಡಿಸಿದ ಮೂರು ಕವನಗಳನ್ನು ಮೆಕ್ಕಾದಲ್ಲಿ ಸುವರ್ಣ ಫಲಕದ ಮೇಲೆ ಕೆತ್ತಲಾಗಿದೆ. ಜರಹಮ್ ಬಿನತೊಯಿ ಹೀಗೆ ಬರೆದಿದ್ದಾನೆ: ‘ರಾಜಾ ವಿಕ್ರಮನನ್ನು (ಸಮುದ್ರಗುಪ್ತ) ದೊರೆಯಾಗಿ ಪಡೆದಿರುವ ಭಾರತೀಯರು ಭಾಗ್ಯಶಾಲಿಗಳು. ಅವನು ಉದಾರಿ, ಧಾರ್ಮಿಕ, ಶುದ್ಧಾಂತಃಕರಣಿ ಮತ್ತು ಶ್ರೇಷ್ಟ ಸಂಗೀತಗಾರ ಕೂಡ. ಅವನ ಸೆಹ್ ತಾರ್ ವಾದನ ಶ್ರೋತೃಗಳ ಹೃದಯಮೊಗ್ಗೆಗಳನ್ನು ಅರಳಿಸುವಂತಹದ್ದು. ವಿದೇಶೀಯರಾದ ನಮ್ಮನ್ನು ಅವನು ಚೆನ್ನಾಗಿ ನೋಡಿಕೊಂಡ. ತನ್ನ ಅನೇಕ ವಿದ್ವಾಂಸರನ್ನು ನಮ್ಮ ದೇಶಕ್ಕೆ ಕಳಿಸಿದ. ಈ ಶ್ರೇಷ್ಠರಿಂದ ನಾವು ಈಶ್ವರ ಜ್ಞಾನ, ಸಂಗೀತ ಜ್ಞಾನ, ಕಾವ್ಯಜ್ಞಾನ, ಸಾಮಾಜಿಕ ಜ್ಙಾನವಲ್ಲದೆ ಆತ್ಮಾನಂದಕ್ಕಾಗಿ ಸೆಹ್ ತಾರ್ ನುಡಿಸುವುದನ್ನು ಕಲಿತೆವು’. ರಾಜಾ ವಿಕ್ರಮಾದಿತ್ಯ ಪರಿವಾದಿನಿ ಎಂಬ ವಾದ್ಯ ನುಡಿಸುತ್ತಿರುವ ಮುದ್ರೆಯುಳ್ಳ ನಾಣ್ಯಗಳೂ ಲಭ್ಯವಿವೆ.

ಮಹಾಭಾರತದಲ್ಲಿ ಸಪ್ತತಂತಿ (ಸಿತಾರ) ಯನ್ನು ವೀಣೆಯೆಂದು ಕರೆಯಲಾಗಿದೆ. ಇದೆಲ್ಲವನ್ನೂ ನೋಡಿದರೆ ಸಿತಾರ ಬಲು ಪುರಾತನ ಭಾರತೀಯ ವಾದ್ಯವೆಂಬುದಕ್ಕೆ ಪುಷ್ಟಿ ಒದಗುತ್ತದೆ. ಈ ಬಗೆಗೆ ಖಚಿತತೆಯ ಅಭಾವ ಕಂಡುಬಂದರೂ ಅಮೀರ ಖುಸ್ರೂ ಸಿತಾರದ ಜನಕನೆಂಬುದು ಸಮಂಜಸವೆನಿಸದು. ಆದರೊಂದು ಮಾತು. ಅಮೀರ ಖುಸ್ರೂ ಸಿತಾರಿಗೆ ಉತ್ತೇಜನವಿತ್ತು ಅದನ್ನು ಜನಪ್ರಿಯಗೊಳಿಸಿದನೆಂಬುದು ನಿಜ. ಆದರೆ, ಮಧ್ಯಯುಗದ ಹಿಂದೂ – ಮುಸ್ಲಿಮ್ ಯುದ್ಧಗಳಿಂದಾಗಿ ಸಂಗೀತಕ್ಕೆ ಪೆಟ್ಟು ತಗುಲಿತು. ಆ ಸಂಧಿಕಾಲದಲ್ಲಿ ಸಂಗೀತವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅಮೀರ ಖುಸ್ರೂನದು.

ಸಿತಾರದ ತಾಯಿ

ಬೀನ (ವೀಣೆ) ಸಿತಾರದ ತಾಯಿ ಎಂಬುದು ಸರ್ವಸಮ್ಮತ. ಸಿತಾರದ ಪ್ರಾಬಲ್ಯಕ್ಕೆ ಮುಂಚೆ ವಾದ್ಯಗಳಲ್ಲಿ ಬೀನ ಮತ್ತು ಗಾಯನದಲ್ಲಿ ಧುಪ್ರದ ಪ್ರಾಮುಖ್ಯತೆ ಪಡೆದಿದ್ದವು. ಅದು ಕಾರಣ, ಬೀನನ್ನು ಧ್ರುಪದ ಶೈಲಿಯಲ್ಲಿ ನುಡಿಸುವದು ವಾಡಿಕೆಯಾಗಿತ್ತು. ಸಿತಾರ ಮುಂಚೂಣಿಗೆ ಬರುವ ಕಾಲಕ್ಕೆ ಖ್ಯಾಲ ಪದ್ಧತಿಯೂ ತಳವೂರಲಾರಂಭಿಸಿತು. ಸಂಗೀತಗಾರರು ದ್ರುತ್ ಲಯದಲ್ಲಿ ತಾನಗಳು ಮತ್ತು ಲಯಕಾರಿಯ ವಿವಿಧ ರೀತಿಗಳನ್ನು ಮೆಚ್ಚತೊಡಗಿದ್ದರು. ಬೀನದಲ್ಲಿ ‘ದಿರ್’ ಬೋಲ್ ಇರದಿದ್ದುದರಿಂದ ಅದು ಧ್ರುಪದ ಲಯದಲ್ಲಿ ವಿಶೇಷ ಆನಂದ ನೀಡಲಶಕ್ಯವಾಗಿತ್ತು. ಬೀನದ ಗಾಂಭೀರ್ಯವನ್ನು ಕೈಬಿಡದೆ ಸಿತಾರದಲ್ಲಿ ‘ದಿರ್’ ಬೋಲ್ ಅಳವಡಿಸಿದಾಗ ಸಿತಾರ ಧ್ರುತ್ ಲಯದಲ್ಲಿಯೂ ಸಮರ್ಪಕ ರಂಜನೆ ನೀಡಿತು. ಈ ಕಾಲಕ್ಕೆ ಅನೇಕ ವಾದಕರು ಸಿತಾರದತ್ತ ಆಕರ್ಷಿತರಾದರು ಮತ್ತು ಅದನ್ನು ಪರಿಪೂರ್ಣಗೊಳಿಸಿದರು. ಇದರಿಂದಾಗಿ, ಬೀನವಾದನ ಮತ್ತು ಧ್ರುಪದ ಗಾಯನದಲ್ಲಿನ ಉತ್ತಮಾಂಶಗಳನ್ನು ಬಿಟ್ಟುಕೊಡದೆ ಸಿತಾರದಲ್ಲಿ ಖ್ಯಾಲ ಗಾಯನ ಮತ್ತು ತರಾನಾಗಳನ್ನು ಅಳವಡಿಸಲಾಯಿತು.

ಪ್ರತಿಭಾವಳಿ

ಶತಮಾನಗಳುದ್ದಕ್ಕೂ ಅನೇಕ ಪ್ರತಿಭಾವಂತರು ಆಕರ್ಷಿತರಾದುದು ಸಿತಾರದ ಭಾಗ್ಯ. ಲಭ್ಯವಿರುವ ಆಧಾರದನ್ವಯ ಅಮೀರ ಖುಸ್ರುರ ವಂಶದ ಫಿರೋಜಖಾನ್ ಪ್ರಥಮ ಶ್ರೇಷ್ಠ ಸಿತಾರವಾದಕ. ಚಾರ್ ತಾಲದಲ್ಲಿ ಅವನು ಗತ್ ಗಳನ್ನು ರಚಿಸಿದ. ಅದಕ್ಕೆ ಫಿರೋಜಖಾನಿ ಬಾಜ್ ಎಂದು ಹೆಸರು. ಮಸೀದ ಖಾನ್ ತೀನ್ ತಾಲದಲ್ಲಿ ತಬಲಾದೊಂದಿಗೆ ನುಡಿಸುವ ಗತ್ ಗಳನ್ನು ರಚಿಸಿದ. ಫಿರೋಜಖಾನಿ ಬಾಜ್ ಮರೆತು ಮಸೀದ್ ಖಾನಿ ಗತ್ ಪ್ರಚಲಿತವಾಯಿತು. ಮಸೀದ ಖಾನಿ ಗತ್ ನ ವೈಶಿಷ್ಟ್ಯ ದ್ರುತ್ ಲಯ. ಲಕ್ನೋದ ಗುಲಾಮ ರಝಾಕ್ ನಿಂದ ಅದಕ್ಕೆ ರಝಾಖಾನಿ ಅಥವಾ ಪೂರ್ವಿ ಗತ್ ಎಂಬ ಹೆಸರು ಬಂದಿದೆ. ಮಸೀದ ಖಾನಿ ಗತ್ ಖ್ಯಾಲದಂತಿದ್ದರೆ ರಝಾಖಾನಿ ಗತ್ ಠುಮರಿಯಂತಿದೆ. ಒಂದು ಘನ ಗಂಭೀರ, ಇನ್ನೊಂದು ಚುರುಕು, ಚಂಚಲ, ಮಸೀದಖಾನಿ ಗತ್ ನಲ್ಲಿ ಮೀಂಡ್, ಗಮಕ್, ಕ್ರಂತನ್, ಜಮಜಮಾ, ಮುರ್ಕಿ ಮೊದಲಾದವುಗಳನ್ನು ರಾಗಗಳ ಸೊಗಸು ಹೆಚ್ಚಿಸಲೋಸುಗ ನುಡಿಸಲಾಗುತ್ತಿದೆ.

ರಹೀಮಸೇನ್ ತಾನಸೇನನ ಎರಡನೆಯ ಮಗನಾದ ಸುರತಸೇನನ ವಂಶಜ. ಅವನು ಧ್ರುಪದ ಗಾಯನವನ್ನು ಬಿಟ್ಟು ಸಿತಾರವಾದನಕ್ಕೆ ತಿರುಗಿದಾಗ ಯಾರೋ ಅವನಿಗೆ ತಮಾಷೆ ಮಾಡಿದರಂತೆ: ‘ನೀನು ಹೀಗೆಯೇ ದಿರ್, ದಿರ್, ದಿರ್, ದಿರ್ ಬಾರಿಸುತ್ತರು’. ಅದಕ್ಕೆ ರಹೀಮಸೇನನ ಸ್ವಾಭಿಮಾನಿ ಉತ್ತರ: ‘ನಿಜವಾಗಿಯೂ ಧ್ರುಪದ್ ಗೆ ಹೋಲಿಸಿದರೆ ಸಿತಾರ ಏನೂ ಅಲ್ಲ. ಆದರೆ ನಾನು ಈ ಕಲ್ಲಿನಂತಿರುವ ವಾದ್ಯವನ್ನು ಮಾಣಿಕ್ಯವನ್ನಾಗಿ ಮಾರ್ಪಡಿಸಬೇಕಾಗಿದೆ’. ಅವನು ಅದನ್ನು ಸಾಧಿಸಿ ತೋರಿಸಿದ. ಸಿತಾರವಾದನ ತಂತ್ರದಲ್ಲಿ ರಹೀಮಸೇನ್ ಮಹತ್ವಪೂರ್ಣ ಸುಧಾರಣೆ ಮಾಡಿದ.

ಅವನ ಮಗ ಅಮೃತಸೇನ್‌ನನ್ನುಳಿದು ರಹೀಮಸೇನನಿಗೆ ಯಾರೂ ಸರಿಸಾಟಿಯಾಗಿರಲಿಲ್ಲ. ಅಮೃತಸೇನ್ (೧೮೧೩-೧೯೮೩) ತಂದೆಗಿಂತ ಎಷ್ಟೊಂದು ಮಿಗಿಲಾಗಿದ್ದನೆಂದರೆ ರಹೀಮಸೇನನೇ ಒಮ್ಮೆ ಹೀಗೆಂದನಂತೆ: ‘ಅಮೃತಸೇನ್ ನನ್ನ ಮಗನಾಗಿರುವದು ಒಳಿತಾಯಿತು. ಅವನು ಬೇರೆ ಮನೆತನದಲ್ಲಿ ಹುಟ್ಟಿ ಹೀಗೆ ಅಮೋಘವಾಗಿ ಸಿತಾರ ನುಡಿಸುತ್ತಿದ್ದರೆ ನಾನು ವಿಷ ತೆಗೆದುಕೊಳ್ಳುತ್ತಿದ್ದೆ’.

ಅಮೀರ ಕಾನ್ ಅಮೃತಸೇನನ ಪ್ರಧಾನ ಶಿಷ್ಯ. ಅವನಿಗಿಬ್ಬರು ಶಿಷ್ಯರು: ಬರಕುತುಲ್ಲಾಖಾನ್ ಮತ್ತು ಇಮದಾದ್ ಖಾನ (೧೮೪೮-೧೯೨೦) ಇಮದಾದ್ ಖಾನನ ಮಗ ಇನಾಯತ ಖಾನ್ (೧೮೬೫-೧೯೩೮) ಬಲು ದೊಡ್ಡ ಸಿತಾರ ಕಲಾವಿದನಾಗಿದ್ದ. ಅವನು ಸಿತಾರವಾದನದ ಗುಣಮಟ್ಟ ಎತ್ತರಿಸಿದ್ದಲ್ಲದೆ ಗಾಯಕಿ ಅಂಗ ಅಳವಡಿಸಿದ. ಇನಾಯತಖಾನನ ಮೂವರು ಶಿಷ್ಯೋತ್ತಮರಲ್ಲಿ ಪ್ರಖ್ಯಾತ ಸಿತಾರಪಟುವಾಗಿರುವ ಮಗ ವಿಲಾಯತ್ ಖಾನ್ ಒಬ್ಬರು.

ಸಿತಾರ ರತ್ನ

ಸಿತಾರದ ಬೆಳವಣಿಗೆಯಲ್ಲಿ ಇನ್ನೊಂದು ಮೈಲುಗಲ್ಲೆಂದರೆ ಸಿತಾರರತ್ನ ರಹಿಮತ್ ಖಾನ್ (೧೮೫೪-೧೯೫೪) (ಗಾಯಕ ಭೂಗಂಧರ್ವ ರಹಿಮತ್ ಖಾನ್ ಬೇರೆ) ರಿಂದ ಖರ್ಜ ಷಡ್ಜ ತಂತಿಯ ಜೋಡಣೆ, ಅದಿಲ್ಲದೆ ಆಲಾಪ ಕುಂಠಿತವಾಗಿತ್ತು. ಬೀನದಲ್ಲಿ ನುಡಿಸಬಹುದಾದ ಆಲಾಪ, ಜೋಡ್, ಬಢತ್, ಝಾಲಾ ಈ ಮೊದಲಿನ ಸಿತಾರದಲ್ಲಿ ಸಾಧ್ಯವಿರಲಿಲ್ಲ. ರಹಿಮತ್ ಖಾನರ ಸಂಶೋಧಕ ಬುದ್ಧಿ ಕಾರ್ಯೋನ್ಮುಖವಾಯಿತು. ಅವರು ಖರ್ಜ ಷಡ್ಜ ತಂತಿ ಜೋಡಿಸಿ ಮಿಕ್ಕ ತಂತಿಗಳನ್ನು ಮರುಹೊಂದಿಸಿದರು. ಇದರಿಂದ ಸಿತಾರದಲ್ಲಿ ಅಧಿಕ ಮಾಧುರ್ಯ, ಮೃಧತ್ವ, ವೈವಿಧ್ಯಗಳಿಗೆ ಎಡೆಯಾಯಿತು. ಈಗ ನಾಲ್ಕು ಸಪ್ತಕಗಳಿಂದ ಪರಿಪೂರ್ಣವಾದ ಸಿತಾರ ಬೀನ ಮತ್ತು ಸೊರಬಹಾರ ಮಾಡುವದೆಲ್ಲವನ್ನು ಮಾಡಬಲ್ಲದಾಯಿತು. ಈಗ ನಾಲ್ಕು ಸಪ್ತಕಗಳಿಂದ ಪರಿಪೂರ್ಣವಾದ ಸಿತಾರ ಬೀನ ಮತ್ತು ಸೊರಬಹಾರ ಮಾಡುವದೆಲ್ಲವನ್ನು ಮಾಡಬಲ್ಲದಾಯಿತು. ಧ್ರುಪದ ಮತ್ತು ಖ್ಯಾಲ ಶೈಲಿಗಳೆರಡರಲ್ಲೂ ನುಡಿಸುವ ಸಾಮರ್ಥ್ಯವುಳ್ಳದ್ದಾಯಿತು. ಮೋಹರಾಗಗಳಿಂದ ಅಲಂಕೃತವಾದ ಗಾಯಕಿ ಅಂಗ ಶೈಲಿ ರಹಿಮತ್ ಖಾನಿ ಬಾಜ್ ಎಂದೇ ಪ್ರಸಿದ್ಧಿ ಪಡೆಯಿತು.

ಹಿಂದಿನ ಕಾಲದಲ್ಲಿ ಸಿತಾರ ಪ್ರವೀಣರು ಒಂದೊಂದು ಅಂಶಕ್ಕೆ ಪ್ರಾಧಾನ್ಯ ನೀಡುತ್ತಿದ್ದರು. ಒಬ್ಬ ಖಾನಸಾಹೇಬ ಜೋಡ್ ನುಡಿಸುವಲ್ಲಿ ನಿಷ್ಣಾತನಾಗಿದ್ದರೆ ಇನ್ನೊಬ್ಬ ಗಮಕ್ ಅಥವಾ ಝಾಲಾ ನುಡಿಸುವಲ್ಲಿ, ಇಂದು ಹಾಗಿಲ್ಲ. ಪ್ರತಿ ಸಿತಾರವಾದಕ ಸರ್ವತೋಮುಖ ಪ್ರಾವಿಣ್ಯ ಸಾದಿಸಲೆತ್ನಿಸುತ್ತಾನೆ. ಯಾವುದೊಂದು ಅಂಶ ಕೊರತೆಯಾದರೂ ಅಷ್ಟುಮಟ್ಟಿಗೆ ಅವನ ಕಲೆ ಅಪೂರ್ಣವೆಂದು ಭಾವಿಸಲಾಗುತ್ತದೆ. ಇಂದು ನಮ್ಮ ಮಧ್ಯದಲ್ಲಿ ರವಿಶಂಕರ, ವಿಲಾಯತ್ ಖಾನ್, ನಿಖಿಲ್ ಬ್ಯಾನರ್ಜಿ, ಅಬ್ದುಲ್ ಹಾಲಿಮ್ ಜಾಫರ ಖಾ ಮೊದಲಾದ ಪ್ರತಿಭಾವಂತ ಸಿತಾರಪಟುಗಲ ಪುಂಜವಿದೆ. ಪಾಶ್ಚಾತ್ಯರಿಗೂ ಸಿತಾರದ ರುಚಿ ಹಚ್ಚಿದವರು ರವಿಶಂಕರ.

ಸಿತಾರ ಕಲಿಯಲು ಸುಲಭ, ಪ್ರಭುತ್ವ ಸಂಪಾದಿಸಲು ಕಠಿಣ. ಎಷ್ಟು ನುರಿತರೂ ಇನ್ನೂ ಇದ್ದೇ ಇರುತ್ತದೆ. ಸಂಗೀತವೇ ಹಾಗೆ, ಅದೊಂದು ಸಾಗರ.