ಸಾಹಿತ್ಯ ನಿರ್ಮಿತಿ, ಸಾಹಿತ್ಯ ಅಧ್ಯಯನದಿಂದ ಆಗುವ ಕೆಲಸವಲ್ಲ ; ಸಾಹಿತ್ಯ ನಿರ್ಮಿತಿ ಸಾಹಿತಿಯೊಬ್ಬನ ಜೀವನದ ಅನುಭವದಿಂದ ಆಗತಕ್ಕದ್ದು. ಸಮಕಾಲೀನ ಬದುಕಿನೊಂದಿಗೆ ಹೀಗೆ ಸಂಬಂಧಿಸಿಕೊಂಡಂತಹ ಸಾಹಿತಿಗೆ ಮೊದಲು ಪ್ರಸ್ತುತವಾದದ್ದು ತನ್ನ ಸಮಕಾಲೀನತೆಯಲ್ಲಿ ತನ್ನ ಜತೆಗೋ, ತನಗಿಂತ ಹಿರಿಯರಾಗಿಯೋ ಇರುವಂಥವರ ಬರವಣಿಗೆ; ಅಥವಾ ತನಗೆ ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ. ತನ್ನ ಸುತ್ತ ತನ್ನಂತೆಯೆ, ಸಮಕಾಲೀನತೆಗೆ ಬಾಯಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಿತಿ ಹೆಚ್ಚು ಪ್ರಸ್ತುತವಾಗಿರುತ್ತದೆ. ಅವರಿಂದ ಈತನಿಗೆ ಸಾಹಿತ್ಯ ನಿರ್ಮಿತಿಯ ಕಿಡಿ ಹೊತ್ತಿಕೊಳ್ಳಬಹುದು ; ಅವರ ಬರವಣಿಗೆಯ ಪ್ರಭಾವ ಇಂಥವನ ಬರೆಹದ ಮೇಲೆ ಮೊದಮೊದಲು ಆಗಬಹುದು; ಅವರ ಸಖ್ಯ ಸಂಬಂಧ, ಅವರ ದೃಷ್ಟಿ ಧೋರಣೆಗಳೂ, ಅವರ ಅಭಿವ್ಯಕ್ತಿಯ ವಿಧಾನಗಳೂ ಈತನ ಸಾಹಿತ್ಯ ನಿರ್ಮಿತಿಯ ಮೇಲೆ ತಕ್ಕಷ್ಟು ಪರಿಣಾಮ ಮಾಡಿರಬಹುದು: ಅಥವಾ ಅವರ ನಡುವೆ ಇದ್ದೂ, ತಾನು ಅವರಂತಾಗದೆ ಬೇರೊಂದು ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುವ ಸವಾಲುಗಳೂ ಸಮಸ್ಯೆಗಳೂ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ ನಿಜವಾದ ಸಾಹಿತಿಗೆ ಎದುರಾಗಬಹುದು.

ಹೀಗೆ ಸಮಕಾಲೀನ ಸಾಹಿತ್ಯಕ್ಕೆ ಪದಾರ್ಪಣ ಮಾಡಿದ ಲೇಖಕನೊಬ್ಬನಿಗೆ, ಈಗಾಗಲೇ ‘ಗತ’ ಕಾಲಕ್ಕೆ ಸಂದ, ಹಿಂದಿನ ಸಾಹಿತ್ಯ ಕೃತಿಗಳು ಎಷ್ಟರಮಟ್ಟಿಗೆ ಪ್ರಸ್ತುತ? ಹಿಂದಿನವರೆಲ್ಲ ಅವನ ಪಾಲಿಗೆ ಹೆಸರುಗಳಾಗಿ, ಹಾಗೂ ಕೃತಿಗಳಾಗಿ ಇರುವಂಥವರು. ಅವರು ತಮ್ಮ ಸಮಕಾಲೀನತೆಗಳಲ್ಲಿ ಬರೆದ ಕೃತಿಗಳ ವಸ್ತು, ಭಾವ, ಭಾಷೆ, ಶೈಲಿ ಹಾಗೂ ಉದ್ದೇಶಗಳು, ಇಂದಿನ ಸಮಕಾಲೀನ ಸೃಜನಶೀಲ ಲೇಖಕನ ಪಾಲಿಗೆ, ವಿಲಕ್ಷಣವೂ, ಇಂದಿಗೆ ಸಲ್ಲಲಾರವೇನೋ ಎಂಬಂತಹವೂ, ಆಗಿ ತೋರಬಹುದು. ಬದುಕೇ ಬದಲಾಗಿರುವಾಗ, ಒಂದು ಕಾಲದ ಬದುಕಿನ ಅಭಿವ್ಯಕ್ತಿಯಾದ ಸಾಹಿತ್ಯ ನಿರ್ಮಿತಿ ಇಂದಿನ ಲೇಖಕನಿಗೆ ಎಷ್ಟೋ ವಿಷಯಗಳಲ್ಲಿ ಅಪ್ರಸ್ತುತವೆಂದೂ ತೋರಬಹುದು.  ಆದರೆ, ಅದು ಸಂಪೂರ್ಣ ಅಪ್ರಸ್ತುತ ಅಪ್ರಯೋಜಕ ಎಂದು ಇಂದಿನ ಲೇಖಕ  ಅಂದುಕೊಂಡು, ತನ್ನ ಕಾಳಜಿಗಳನ್ನು ಕೇವಲ ತನ್ನ ಸಮಕಾಲೀನ ಅನುಭವಗಳಿಗೆ ಸೀಮಿತ ಮಾಡಿಕೊಳ್ಳಬಹುದೆ ? ಹಾಗೆ ಎಂದುಕೊಂಡದ್ದಾದರೆ, ಇವನು ಇವತ್ತು ಬರೆದದ್ದೂ ನಾಳಿನವರಿಗೆ ಅಷ್ಟೇ ಅಪ್ರಸ್ತುತವೂ ಅಪ್ರಯೋಜಕವೂ ಆಗುತ್ತದೆ ಎಂದಂತೆ ಆಯಿತಲ್ಲವೆ ? ಹಾಗಾದರೆ ಮೂಲತಃ ಯಾವುದೇ ಸಾಹಿತ್ಯ ನಿರ್ಮಿತಿಯೂ ಅಪ್ರಸ್ತುತ, ಅಪ್ರಯೋಜಕ ಎಂದು ಹೇಳಿದಂತೆಯೇ ಆಯಿತು.

ಯಾವುದೇ ಸಾಹಿತ್ಯ ನಿರ್ಮಿತಿ ಮೂಲತಃ ಬದುಕಿನೊಂದಿಗೆ ಸಂಬಂಧಿಸಿದ್ದರೂ, ಈ ಬದುಕು ನಿರಂತರವಾದದ್ದು, ಹಾಗೆಯೇ ಅನಂತವಾದದ್ದು ಎಂಬ ಅರಿವು ಅಗತ್ಯ. ಈ ಮುಗಿವಿಲ್ಲದ ಬದುಕನ್ನು ಸಾವಿರ ಸಾವಿರ ಬೃಹಸ್ಪತಿಗಳು ಪ್ರಯತ್ನ ಪಟ್ಟು, ತಮ್ಮ ತಮ್ಮ ಅಭಿವ್ಯಕ್ತಿಗಳಲ್ಲಿ ಹಿಡಿದಿರಿಸಿದರೂ, ಅದು ನಿಸರ್ಗದಂತೆ ಮುಗಿವಿಲ್ಲದೆ, ಹೊಚ್ಚ ಹೊಸತಾಗಿ ಉಳಿಯುವಂಥಾದ್ದು. ಸಾಹಿತ್ಯ ನಿರ್ಮಿತಿಯೆಲ್ಲವೂ ಅಂದಂದಿನ ಬದುಕಿನೊಳಕ್ಕೆ ಅಂದಂದಿನ ಸಾಹಿತಿಯು ಬೇರೂರಿ ಅರಳಿಕೊಂಡಿದ್ದರ ಪರಿಣಾಮವೇ. ಹಾಗೆ ಅರಳಿಕೊಳ್ಳುವಾಗ ಅವನ ಕಣ್ಣು ಕಂಡದ್ದು, ಅವನ ಮನಸ್ಸು ಉಂಡದ್ದು, ಅವನ ಭಾಷೆ ರೂಪಿಸಿದ್ದು, ಬೇರೆ ಬೇರೆಯಾಗಿರಬಹುದು. ಆದರೆ ಅದೆಲ್ಲಾ ಒಂದು ನಿರಂತರ ಚಲನಶೀಲತೆಯ ಅಥವಾ ಪರಂಪರೆಯ ಒಂದು ಭಾಗವೇ. ಹೀಗೆ ಈ ನಿರಂತರತೆಯ ಒಂದು ಆಂಗವಾಗಿ ನಿಲ್ಲುವ ಸಮಕಾಲೀನ ಸಾಹಿತಿಯ ಹಿಂದೆ, ಹಿಂದಿನ ಒಂದು ಅನುಭವ ಪರಂಪರೆಯೆ ಗಾಢವಾಗಿ ಪ್ರವಹಿಸುತ್ತಿರುತ್ತದೆ; ಹಾಗೂ ನಿಯಂತ್ರಿಸುತ್ತಿರುತ್ತದೆ. ಆದುದರಿಂದ ಯಾವ ಒಂದು ಸಾಹಿತ್ಯ ಪರಂಪರೆಯಲ್ಲಿ, ಅದರದೊಂದು ಅವಿನಾ ಭಾಗವಾಗಿ ಅಥವಾ ಮುಂದುವರಿಕೆಯಾಗಿ ಅಭಿವ್ಯಕ್ತಿ ಕ್ರಿಯೆಯಲ್ಲಿ ತೊಡಗುವ ಸಮಕಾಲೀನ ಸಾಹಿತಿಯಲ್ಲಿ ಈ ಪರಂಪರೆ ಬಹುಶಃ ಎರಡು ರೀತಿಯಲ್ಲಿ ಅರಿವಿಗೆ ಬರುತ್ತದೆ. ಒಂದು, ತಾನು ಬದುಕುವ ಪರಿಸರದ ಹಿಂದಿರುವ, ಪ್ರಜ್ಞಾ ಗೋಚರವಲ್ಲದ, ಆದರೆ ತನ್ನ ಪ್ರಜ್ಞೆಯನ್ನು ನಿಯಂತ್ರಿಸುವ, ಒಂದು ಜೀವನ ವಿಧಾನವಾಗಿ ಅಥವಾ ಸಾಂಸ್ಕೃತಿಕ ಪರಂಪರೆಯಾಗಿ ; ಇನ್ನೊಂದು, ಈ ಸಾಂಸ್ಕೃತಿಕ ಹಿನ್ನೆಲೆಯನ್ನು, ಅಂದಂದಿನ ಸಮಕಾಲೀನತೆಯಲ್ಲಿ, ತಮ್ಮ ಕೃತಿಗಳ ಮೂಲಕ ಹಿಡಿದಿರಿಸಿದ ಹಿಂದಿನ ಕವಿಗಳ ಅಭಿವ್ಯಕ್ತಿಗಳಲ್ಲಿ. ಇದನ್ನೇ ನಾವು ಸಾಹಿತ್ಯ ಪರಂಪರೆ ಎನ್ನಬಹುದು. ಅಂದರೆ ಪ್ರಸ್ತುತ ಸಾಹಿತಿಯ ಹಿಂದೆ, ಒಂದು ಅಖಂಡವಾದ, ಶತಶತಮಾನಗಳ ಜೀವನಾನುಭವ, ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತವೆ. ಈ ಕಾರಣದಿಂದ ವರ್ತಮಾನದ ಜೀವನ ಹಾಗೂ ಸಾಹಿತ್ಯವನ್ನು, ಅದಕ್ಕೆ ಹಿಂದಿನ ಜೀವನ ಹಾಗೂ ಸಾಹಿತ್ಯದಿಂದ ಬೇರ್ಪಡಿಸಲು ಬರುವುದಿಲ್ಲ. ಇವುಗಳಲ್ಲಿ ಯಾವುದನ್ನು, ತನಗೆ ಹಿಂದಿನ ಬದುಕು ಎನ್ನುತ್ತೇವೋ ಅದು, ಲೇಖಕನಿಗೆ ಅರಿವಿಲ್ಲದೆಯೇ ಅವನ ಒಳಪ್ರಜ್ಞೆಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಒಪ್ಪಿದರೂ, ಆ ಜೀವನಾನುಭವದ ದಾಖಲೆಗಳಾದ ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಲೇಖಕನಿಗೆ ಮೈಗೂಡುವ ಸತ್ವ ಬಹಳ ಮುಖ್ಯವಾದದ್ದು. ಹೀಗೆ ಹಿಂದಿನದು ಸ್ವಲ್ಪಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ, ಮತ್ತು ಬಹುಮಟ್ಟಿಗೆ ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಿತಿಗೆ ನೆರವಾಗುತ್ತದೆ. ಈ ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ  ಅಗತ್ಯವಾದ ಪರಿಕರಗಳಲ್ಲಿ ಒಂದಾಗಿದೆ-ಎನ್ನುವುದು.

ಎರಡನೆಯದಾಗಿ, ಒಬ್ಬ ಸೃಜನಶೀಲ ಸಾಹಿತಿ ತಾನು ಯಾವ ಸಾಹಿತ್ಯ ಪರಂಪರೆಯಲ್ಲಿ ನಿಂತು, ಅದರದೊಂದು ಅಂಗವಾಗಿ ಕೆಲಸಮಾಡುತ್ತಿದ್ದೇನೆ ಎನ್ನುವುದನ್ನು ಕಂಡುಕೊಳ್ಳುವುದೂ ಅಗತ್ಯವಾಗಿದೆ. ಯಾಕೆಂದರೆ, ತಾನು ಬೇರೂರಿರುವ ಬದುಕು, ಅದರ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಅದನ್ನು ಅಭಿವ್ಯಕ್ತಪಡಿಸುವ ಭಾಷೆ ಈ ಮೂರರ ಸಂಪರ್ಕಕ್ಕೆ ಈತ ಒಳಗಾಗಿರುತ್ತಾನೆ. ಆ ಬದುಕು ಮತ್ತು ಅದು ಅಭಿವ್ಯಕ್ತಿ-ಗೊಳ್ಳುವ ಭಾಷೆ ಇವೇ ಸಾಹಿತ್ಯದ ಮೂಲ ದ್ರವ್ಯಗಳು.  ತನಗೆ ಹಿಂದಿನ ಲೇಖಕರು,  ಇದೇ ನಿರಂತರವಾದ ಬದುಕನ್ನು, ತಮಗೆ ದತ್ತವಾಗಿ ಬಂದಿರುವ ಇದೇ ಭಾಷಾ ಸಾಮಗ್ರಿಯ ಮೂಲಕ ಹೇಗೆ ಹಿಡಿದು ಮೂಡಿಸಿದ್ದಾರೆನ್ನುವುದು, ಸಮಕಾಲೀನ ಸಾಹಿತಿಗೆ ಅರಿವಿಗೆ ಬರುವುದು, ತನಗೆ ಹಿಂದಿನ ಕೃತಿಗಳ ಅಧ್ಯಯನದಿಂದ ಅಲ್ಲವೆ?

ಹಾಗಾದರೆ ತನಗಿಂತ ಹಿಂದಿನ ಸಾಹಿತ್ಯವನ್ನು ಅಧ್ಯಯನ ಮಾಡದೆ, ತನ್ನ ಸಮಕಾಲೀನ ಜೀವನಾನುಭವ, ಹಾಗೂ ತಾನು ಕಿವಿದೆರೆದು ಕೇಳುವ ಭಾಷೆ- ಇಷ್ಟರಿಂದಲೆ ಸಾಹಿತ್ಯ ನಿರ್ಮಿತಿ ಸಾಧ್ಯವಿಲ್ಲವೇನು ? ಇವತ್ತಿನ ಕನ್ನಡ ಕವಿ, ಪಂಪ-ರನ್ನ-ವಚನಕಾರರು-ಹರಿಹರ-ಕುಮಾರವ್ಯಾಸ ಇವರುಗಳನ್ನು ಓದಿಕೊಳ್ಳದೆಯೂ ಉತ್ತಮ ಸಾಹಿತ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲವೇನು ? ಉತ್ತರ : ಖಂಡಿತ ಆಗುತ್ತದೆ ; ಆದರೆ ಹಾಗೆ ರಚಿತವಾದ ಸಾಹಿತ್ಯ ಎಂಥದ್ದಾಗುತ್ತದೆ, ಯಾವ ಮಟ್ಟದ್ದಾಗುತ್ತದೆ ಎನ್ನುವುದು ಬೇರೆಯ ಮಾತು. ಆದರೆ ಮುಖ್ಯವಾದ ಮಾತೆಂದರೆ, ಯಾವುದೇ ಒಂದು ಪರಂಪರೆಗೆ ತನ್ನನ್ನು ಸಂಬಂಧಿಸಿಕೊಳ್ಳದ ಯಾವ ನಿಜವಾದ ಸಾಹಿತಿಯೂ ತನಗೆ ತಾನೇ ಪ್ರತ್ಯೇಕವಾಗಿ ಇರಲಾರ ಎಂಬುದು. ಹೊಸದಾಗಿ ಬರವಣಿಗೆಗೆ ತೊಡಗುವ ತರುಣ ಲೇಖಕರೂ ಸಹ ಮೊದಮೊದಲು ತಮ್ಮ ಪರಿಸರದ ಸಿದ್ಧ-ಪ್ರಸಿದ್ಧ ಲೇಖಕರ ಪ್ರಭಾವದೊಳಕ್ಕೆ ಸಿಕ್ಕಿಕೊಂಡೇ ಇರುತ್ತಾರೆ. ಆನಂತರ ಇಂಥವರ ಪ್ರಭಾವಗಳಿಂದ ಬಿಡಿಸಿಕೊಂಡು ತಮ್ಮ ಸಹಜಾಭಿವ್ಯಕ್ತಿಯನ್ನುಸಾಧಿಸಿಕೊಳ್ಳುವ ಕಡೆಗೆ ಮುಂದುವರಿಯುತ್ತಾರೆ. ಆ ‘ಸಿದ್ಧ’ ಲೇಖಕರೂ, ಈ ವೇಳೆಗೆ ‘ಸಿದ್ಧ’ರಾಗಿರುವುದು ತಾವು ಒಂದು ಸಾಹಿತ್ಯ ಪರಂಪರೆಯ ಭಾಗವಾಗಿರುವುದರಿಂದಲೇ. ನಿದರ್ಶನಕ್ಕೆ, ನನ್ನಂಥವರು ಬರೆಯಲು ಶುರುಮಾಡುವ ಹೊತ್ತಿಗೆ, ಕುವೆಂಪು, ಬೇಂದ್ರೆ, ಪು.ತಿ.ನ ಇವರು ಆಗಲೇ ನೆಲೆನಿಂತ ‘ಸಿದ್ಧ’ ಲೇಖಕರಾಗಿದ್ದರು. ಅವರ ಹಿಂದೆ ಒಂದು ಪರಂಪರೆ,-ಪ್ರಾದೇಶಿಕ, ಭಾರತೀಯ ಮತ್ತು ಇತರ ಒಂದು ಪರಂಪರೆ-ಇತ್ತು ; ಅದರ ಸತ್ವದಿಂದ ಅವರು ಪುಷ್ಪರಾಗಿದ್ದರು. ಈ ವೇಳೆಗೆ ಬರೆಯಲು ಮೊದಲು ಮಾಡಿದ ನನ್ನಂಥವರಿಗೆ, ಇವರಿಂದ ಪ್ರೇರಣೆ, ಪ್ರಚೋದನೆ, ಪ್ರಭಾವಗಳು ಉಂಟಾದಾಗ ಸಹಜವಾಗಿಯೇ ನನ್ನಂಥವರು, ಆ ಪರಂಪರೆಯ ಸೆಳೆತಕ್ಕೆ ಒಳಗಾದಂತಾಯಿತು. ಇದನ್ನು, ಅಂದರೆ ತಮಗೆ ಹಿಂದಿನ ಪರಂಪರೆಯನ್ನು ವಿರೋಧಿಸಿ, ನವ್ಯಕಾವ್ಯವನ್ನು ನೆಲೆಗೊಳಿಸಿದ ಅಡಿಗರು ಬರೆಯುವ ಕಾಲಕ್ಕೆ, ಅವರ ಪ್ರೇರಣೆ-ಪ್ರಭಾವಕ್ಕೆ ಒಳಗಾದ ತರುಣ ಲೇಖಕರು, ಅಡಿಗರು ಯಾವ ಪರಂಪರೆಯ (ಈ ಬಗೆಯ ಪರಂಪರೆಯ ನಿರಾಕರಣೆಗೊ ಒಂದು ಪರಂಪರೆ ಇದೆ!) ಹಾಗೂ ಪ್ರಭಾವಗಳ ಒಂದು ಭಾಗವಾಗಿದ್ದರೋ ಅದನ್ನು ಒಪ್ಪಿಕೊಂಡಂತಾಯಿತು. ಇದು ಎಲ್ಲ ಕಾಲದ ಲೇಖಕರ ವಿಚಾರದಲ್ಲಿಯೂ ನಿಜವೆಂದು ತೋರುತ್ತದೆ. ಒಂದು ಅರ್ಥದಲ್ಲಿ ತನಗೆ ತಾನೇ ಸ್ವತಂತ್ರವಾದ ಸೃಜನ ಸಾಮರ್ಥ್ಯ ಎಂಬುದೇ ಇರಲಾರದು; ಎಲ್ಲ ಸೃಜನಶೀಲ ವ್ಯಕ್ತಿತ್ವವೂ ಒಂದು ಸೃಜನಶೀಲ ಪರಂಪರೆಯ ಒಂದು ಭಾಗವಾಗಿಯೇ ಇರುತ್ತದೆ. ಈ ಸೃಜನಶೀಲ ಪರಂಪರೆ, ಪ್ರತಿಯೊಬ್ಬ ಸಾಹಿತಿಯೂ ಮೈಗೂಡಿಸಿಕೊಳ್ಳಬೇಕಾದ ಅಗತ್ಯವಾದ ಅಂಶವಾಗಿದೆ. ಯಾಕೆಂದರೆ ಪ್ರತಿಯೊಬ್ಬ ಸಾಹಿತಿಯೂ ಒಂದು ಭಾಷೆಯ ಚಲನಶೀಲ ಚರಿತ್ರೆಯ ಒಂದು ಭಾಗವಾಗಿರುವುದರಿಂದ, ಈ ಚರಿತ್ರೆಯ ವಿವಿಧ ಹಂತಗಳ, ವಿವಿಧ ಕವಿ ಮನೋಧರ್ಮಗಳ ಅಭಿವ್ಯಕ್ತಿಯನ್ನು, ಮತ್ತು ಆಯಾ ಅಭಿವ್ಯಕ್ತಿಯ ಸಂದರ್ಭಗಳಲ್ಲಿ ಅವರು ಎದುರಿಸಬೇಕಾಗಿ ಬಂದ ಸಮಸ್ಯೆಗಳನ್ನೂ, ಸವಾಲುಗಳನ್ನೂ ಅದರ ಸೋಲು-ಗೆಲುವುಗಳನ್ನೂ, ಸಾಧನೆ-ಸಿದ್ಧಿಗಳನ್ನೂ, ಹಿಂದಿನ ಸಾಹಿತ್ಯದ ಅಧ್ಯಯನದ ಮೂಲಕವೆ ಅರಿವಿಗೆ ತಂದುಕೊಳ್ಳುವುದು ಅವನ ಕಾವ್ಯೋದ್ಯೋಗದ ಬಹುಮುಖ್ಯವಾದ ಪರಿಕರಗಳಲ್ಲಿ ಒಂದಾಗಿದೆ. ಈ ಕ್ರಿಯೆಯನ್ನೇ ಇಲಿಯೆಟ್ ‘ಚಾರಿತ್ರಿಕ ಪ್ರಜ್ಞೆ’ (Historical sense) ಎಂದು ಕರೆಯುತ್ತಾನೆ. ಈ ದೃಷ್ಟಿಯಿಂದ ಸಮಕಾಲೀನ ಕನ್ನಡ ಸಾಹಿತಿಗೆ, ತನಗೆ ಹಿಂದಿನ ಸಾಹಿತ್ಯದ ಅಧ್ಯಯನ ಬಹುಮುಖ್ಯವಾದುದು.

ಹಿಂದಿನ ಕವಿಗಳಿಗೇನೋ, ತಮ್ಮ ಪ್ರಾದೇಶಿಕ ಸಾಹಿತ್ಯ ಪರಂಪರೆ ಮತ್ತು ಅದಕ್ಕೆ  ಹಿನ್ನೆಲೆಯಾಗಿದ್ದ ಭಾರತೀಯ ಪರಂಪರೆ ಇಷ್ಟೇ ಸಾಕಾಗಬಹುದಾಗಿತ್ತು. ಆದರೆ ಇವತ್ತಿನ ಲೇಖಕನಿಗೆ, ‘ಪರಂಪರೆ’ ಎಂಬುದರ ಅರ್ಥ ಬೇರೆಯೆ ಆಗುತ್ತದೆ. ಸಮಕಾಲೀನ ಕನ್ನಡ ಸಾಹಿತಿಗೆ, ಹಿಂದಿನಂತೆ ಇಂದು, ತನ್ನ ಸ್ವದೇಶೀಯವಾದ ಪರಂಪರೆಯ ಹಿನ್ನೆಲೆಯಷ್ಟೇ ಸಾಲದು ; ಅವನಿಗೆ, ತನ್ನ ಪರಿಚಯ ಹಾಗೂ ಕಲಿಕೆಯ ಮೂಲಕ ಪಡೆದುಕೊಳ್ಳಬಹುದಾದ ಭಾರತೀಯೇತರ ಭಾಷಾ ಸಾಹಿತ್ಯಗಳೂ ಅವನ ‘ಪರಂಪರೆಯ’ ಒಂದು ಭಾಗವಾಗುತ್ತವೆ.ಆದರೆ ತನ್ನ ಪ್ರಾದೇಶಿಕತೆಗೆ ಹೊರತಾದ ಉಳಿದ ಯಾವ ಪಾರಂಪರಿಕ ಪ್ರಭಾವಗಳು ತನ್ನ ಮೇಲೆ ಆದರೂ, ಅಭಿವ್ಯಕ್ತಪಡಿಸುವವನು, ತಾನು ಹುಟ್ಟಿ ಬೆಳೆದ ಒಂದು ಭಾಷೆಯ ಪರಂಪರೆಗೆ ಸೇರಿದವನಾದ್ದರಿಂದ, ಮೊದಲು ಆತನಿಗೆ ತನ್ನ ಭಾಷೆ-ಸಾಹಿತ್ಯಗಳಲ್ಲಿ ನಡೆದಿರುವ ಸೃಜನಶೀಲ ಕಾರ್ಯಗಳ ಗಾಢವಾದ ಅರಿವು ಆತನಿಗೆ ಅಗತ್ಯವಾದದ್ದು.

ಪ್ರತಿಕ್ರಿಯೆ-೧೯೮೨