ಡಕ್ಕಲಿಗರಲ್ಲಿ ವೈಯಕ್ತಿಕ ಕಲಹ, ಹೊಲಮನೆ, ಗಂಡ-ಹೆಂಡರ ಜಗಳ, ಮದುವೆ ಸಂಬಂಧಿ, ವ್ಯಭಿಚಾರ ಈ ವೃತ್ತಿಗೆ ಸಂಬಂಧಿಸಿ ಮುಂತಾದ ಹತ್ತು ಹಲವರು ವಿಷಯಗಳ ಸಂಬಂಧ ತಕರಾರು ಬಂದಾಗ ಅವರು ತಮ್ಮ ಸಮಾಜದ ಹಿರಿಯರ ಜೊತೆಗೆ ಸರಿಯಾಗಿ ಸಮಾಲೋಚಿಸಿ ನ್ಯಾಯವನ್ನು ಬಗೆಹರಿಸಿಕೊಳ್ಳುತ್ತಾರೆ. ಒಂದು ವೇಳೆ ಸಮಾಜದ ಹಿರಯರಲ್ಲಿ ಸೂಕ್ತವಾದ ನ್ಯಾಯ ದೊರೆಯದೇ ಹೋದಾಗ ಕಟ್ಟಿಮನಿ ಯಜಮಾನರಿಗೆ ದೂರು ಸಲ್ಲಿಸುತ್ತಾರೆ. ಕಟ್ಟಿಮನಿ ಯಜಮಾನ ಸಂಬಂಧಪಟ್ಟ ಕೇರಿಯ ಪ್ರಮುಖರನ್ನು ಮತ್ತು ದೂರು ಸಲ್ಲಿಸಿರುವವರನ್ನು ಕರೆದು ಕಟ್ಟಿಮನಿ ಕೂಡಿಸಿ ಪರಿಹಾರ ಹುಡುಕುತ್ತಾರೆ. ಈ ಬಗೆಯ ಕೆಲವು ಉದಾಹರಣೆಗಳನ್ನು ಈ ಕೆಳಗಿನಂತೆ ಕೊಡಲಾಗಿದೆ.

೧. ವೃತ್ತಿಗಾಗಿ ಹೋದಾಗ ಡಕ್ಕಲಿಗರಿಗೆ ಆ ಊರಿಗೆ ಸಂಬಂಧಪಟ್ಟ ಮಾದಿಗರು ಅನ್ನ-ನೀರು ಹಾಕದಿದ್ದಾಗ ಅಂಥ ಡಕ್ಕಲಿಗರು, ಆ ಕೇರಿಯ ಮಾದಿಗರು ನೀರು ಸೇದುವ ಬಾವಿಗೆ (ಕುದುರೆ ಜವೆ, ಉಣ್ಣೆ ಮತ್ತು ಕೂದಲು ಈ ಮೂರು ಪ್ರಕಾರದಿಂದ ತಾವೇ ಸಿದ್ಧಪಡಿಸಿರುವ) ಹಗ್ಗವನ್ನು ಕಟ್ಟಿ ಬಾವಿಯ ಹತ್ತಿರ ಧರಣಿ ಕೂಡುತ್ತಾರೆ. ಆ ಬಾವಿಗೆ ತಪ್ಪಿತಸ್ಥ ಮಾದಿಗನು ನೀರು ಸೇದುವಂತಿಲ್ಲ. ಒಂದು ವೇಳೆ ಒತ್ತಾಯದಿಂದ ನೀರು ಸೇದಿದರೆ, ಕೇರಿಯ ಯಜಮಾನನಿಗೆ ದೂರು ಸಲ್ಲಿಸುತ್ತಾರೆ. ಆಗ ಕೇರಿಯ ಜನ ಸೇರಿ, ಅಂಥ ಮಾದಿಗನಿಗೆ ಥೂ…..ಛೀ ಹೇಳಿ “ನೆಲಕ್ಕೆ ಮೂಗು ಹಚ್ಚುವಂತೆ ಶಿಕ್ಷೆ ವಿಧಿಸುತ್ತಾರೆ. ತಪ್ಪಿತಸ್ಥರು ಪಂಚರಿಗೆ ಕುಡಿಯಲಿಕ್ಕೆ ಹೆಂಡವನ್ನು ಕೊಟ್ಟು ತಪ್ಪು ಒಪ್ಪಿಕೊಳ್ಳಬೇಕು.

೨. ಡಕ್ಕಲಿಗರಲ್ಲಿ ಹೆಣ್ಣುಮಗಳು ಮದುವೆಯ ಮುಂಚೆ ಅನೈತಿಕ ಸಂಬಂಧದಿಂದ ಬಸುರಿಯಾಗಿದ್ರೆ ಸಮಾಜದ ಹಿರಿಯರು ಸೇರಿ ಅಂಥವಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ, ನಂತರ ಅವಳನ್ನು ಸಮಾಜದಲ್ಲಿ ಸೇರಿಸಿಕೊಳ್ಳುತ್ತಾರೆ.

೩. ಹೆಣ್ಣು ಗಂಡಿನ ಮದುವೆ ಸಂಬಂಧಿ ಮಾತುಕತೆಗಳಿಂದ ಹೆಚ್ಚು-ಕಡಿಮೆಯಾಗಿ ನೆಂಟಸ್ತಿಕೆ ಮುರಿದು ಹೋದರೆ ಅಥವಾ ಮುರಿದು ಹೋಗುವ ಸಂಭವವಿದ್ದರೆ, ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿಸಿ ನ್ಯಾಯ ಬಗೆಹರಿಸುತ್ತಾರೆ.

ಒಟ್ಟಾರೆ ಇವರ ನ್ಯಾಯ ಪದ್ಧತಿ ಬಹು ವಿಶಿಷ್ಟವಾಗಿದ್ದು, ಸುತ್ತಲೂ ಕರಿ ಹಗ್ಗವನ್ನು ಕಟ್ಟಿ ನಡುವೆ ಕುಲಸ್ತರೆಲ್ಲಾ ನ್ಯಾಯ ನಡೆಸುತ್ತಾರೆ. ಹಲವಾರು ಬಾರಿ ಡಕ್ಕಲಿಗರು ಇತರ ಜನಪದ ವೃಂದದವರಾದ ಕೊರಚರು, ಕೊರಮರು, ಗೊಲ್ಲರಿಗೂ ನ್ಯಾಯ ಬಗೆಹರಿಸಿದ ಉದಾಹರಣೆ ಹೇಳುತ್ತಾರೆ. ಹೀಗಾಗಿ ನ್ಯಾಯ ನೀಡುವುದರಲ್ಲಿ ಡಕ್ಕಲಿಗರು ಶ್ರೇಷ್ಠರೆನಿಸಿದ್ದಾರೆ. ನ್ಯಾಯದ ನಂತರ ಸಂಬಂಧಪಟ್ಟವರು ಮಾಂಸದ ಊಟ ಹಾಗೂ ಹೆಂಡ-ಸರಾಯಿ ಕೊಡಬೇಕಾಗುತ್ತದೆ. ಕೋರ್ಟಿನ ಮೆಟ್ಟಿಲು ಹತ್ತದೆ ತಮ್ಮ ಕುಲ – ಬಾಂಧವರಲ್ಲಿಯೇ ನ್ಯಾಯ ಬಗೆಹರಿಸಿಕೊಳ್ಳುತ್ತಾರೆ. ತಮ್ಮ ಕಟ್ಟಿಮನಿಯೇ ತಮ್ಮ ಪಾಲಿಗೆ ಕೋರ್ಟು ಎಂದು ಭಾವಿಸುತ್ತಾರೆ.