ಜನದ ಬದುಕಿನ ರೀತಿ-ನೀತಿಗಳು, ದೃಷ್ಟಿ ಧೋರಣೆಗಳು, ಕಟ್ಟಿಕೊಂಡ ಕನಸುಗಳು, ಇಟ್ಟುಕೊಂಡ ಮೌಲ್ಯಗಳು-ಆದರ್ಶಗಳು, ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಈ ಬದುಕಿನ ಮೊತ್ತವನ್ನು ಅಥವಾ ಅಂದಂದಿನ ಜನದ ಬದುಕಿನ ಮನೋಧರ್ಮವನ್ನು, ಹಿಡಿದಿಡುವ ಸಾಧನಗಳಲ್ಲಿ ಮುಖ್ಯವಾದವು ಚರಿತ್ರೆ ಮತ್ತು ಕಲೆಗಳು. ಚರಿತ್ರೆಯ ಗಮನ ಪ್ರಧಾನವಾಗಿ ಆಯಾಕಾಲದ ಜನಜೀವನದ ಬಹಿರಂಗ  ಘಟನೆಗಳ ಕಡೆಗೆ ಕೇಂದ್ರೀಕೃತವಾಗಿದ್ದರೆ, ಕಲೆ ಸಾಹಿತ್ಯಗಳ  ಗಮನ ಪ್ರಧಾನವಾಗಿ ಜನದ ಬದುಕಿನ ಅಂತರಂಗದ ಕಡೆಗೆ ಕೇಂದ್ರೀಕೃತವಾಗಿರುತ್ತದೆ ಎಂದು ಹೇಳಬಹುದು.

ಪ್ರತಿಯೊಬ್ಬ ಕವಿಯೂ ಒಂದು ನಿರ್ದಿಷ್ಟವಾದ ಕಾಲಮಾನದಲ್ಲಿ ಬದುಕುವ ಮನುಷ್ಯನಾದುದರಿಂದ, ಸೂಕ್ಷ್ಮ ಸಂವೇದನೆ ಉಳ್ಳ ಕವಿ ತನ್ನ ಕಾಲದ ಕೇಂದ್ರ ಬಿಂದುವಾಗಿ, ತನ್ನ ಕಾಲಧರ್ಮವನ್ನು ತನ್ನ ಕೃತಿಗಳ ಮೂಲಕ ಪ್ರತಿನಿಧಿಸುತ್ತಾನೆ.

ಕಾಲ ಅನಂತವಾಗಿದೆ ; ಬದುಕು ನಿರಂತರವಾಗಿದೆ. ಈ ನಿರಂತರವಾದ ಬದುಕಿನಲ್ಲಿ ಕಂಡುಬರುವ ಮನೋಧರ್ಮದ ಏರಿಳಿತಗಳನ್ನು ಕಾಲಮಾನಗಳಾಗಿ ಮಾಡಿಕೊಂಡು ಸಾಹಿತ್ಯ ಚರಿತ್ರೆ  ಅಧ್ಯಯನ ಮಾಡುತ್ತದೆ.  ಅಂದಂದು ಬದುಕಿದ ಕವಿಯಲ್ಲಿ ಅಂದಂದಿನ ‘ಕಾಲ’ ಎಷ್ಟರ ಮಟ್ಟಿಗೆ ವ್ಯಕ್ತವಾಗಿದೆ, ಒಂದು ಕಾಲದ ಬದುಕಿನ ರೀತಿ-ನೀತಿ, ಅದಕ್ಕೆ ಹಿನ್ನೆಲೆಯಾದ ಧಾರ್ಮಿಕ-ಸಾಂಸ್ಕೃತಿಕ-ರಾಜಕೀಯ ಕಾರಣಗಳು, ಪ್ರೇರಣೆಗಳು ಯಾವ ಒಂದು ಮನೋಧರ್ಮವನ್ನು ರೂಪಿಸಿವೆ, ಈ ಮನೋಧರ್ಮ ಬದಲಾಗಲು ಕಾಲದಿಂದ ಕಾಲಕ್ಕೆ ಇನ್ನೂ ಯಾವ ಯಾವ ಅಂಶಗಳು ಬೆರೆತುಕೊಂಡಿವೆ, ಅವುಗಳ ಸ್ವರೂಪವೇನು? ಹೀಗೆ ಬೆರೆತುಕೊಂಡವುಗಳಲ್ಲಿ ಸಾರ್ವಕಾಲಿಕವಾದವು ಯಾವುವು? ತಾತ್ಕಾಲಿಕವಾದವು ಯಾವುವು? ಒಂದು ಕಾಲದಲ್ಲಿ ಬರೆದ ಹಾಗೆ ಮತ್ತೊಂದು ಕಾಲದ ಸಾಹಿತಿಗಳು ಬರೆಯದಿರಲು ಕಾರಣವೇನು? ಭಾವದಲ್ಲಿ, ಭಾಷೆಯಲ್ಲಿ, ದೃಷ್ಟಿಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಯಾಗಿದೆಯಲ್ಲ ಏಕೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ, ಕಾಲಧರ್ಮ. ಅಂದಂದಿನ ಕಾಲದಲ್ಲಾದ ಬದುಕಿನ ವೈಚಾರಿಕ ನಿಲುವುಗಳಿಗೆ ಅನುಸಾರವಾಗಿ ಅಂದಂದಿನ ಸಾಹಿತ್ಯದಲ್ಲಿ ಈ ಎಲ್ಲ ಬದಲಾವಣೆಗಳು ಕಾಣುತ್ತವೆ.

ಉದಾಹರಣೆಗೆ ಧರ್ಮದ ವಿಚಾರವನ್ನೇ ತೆಗೆದುಕೊಳ್ಳೋಣ. ಧರ್ಮ, ಮತಧರ್ಮ ಕನ್ನಡ ಸಾಹಿತ್ಯದ ಬಹು ಮುಖ್ಯವಾದ ಪ್ರೇರಕಶಕ್ತಿಯಾಗಿದೆ. ಇದರಿಂದ, ಧರ್ಮಕ್ಕೆ ಏನು ಲಾಭವಾಯಿತು, ನಷ್ಟವಾಯಿತು ; ಧರ್ಮಪ್ರಸಾರದ ಮಾಧ್ಯಮವಾದ ಕಾವ್ಯ-ಕಲೆಗಳಿಗೆ ಏನು ಲಾಭವಾಯಿತು, ಏನು ನಷ್ಟವಾಯಿತು-ಎಂಬುದು ಇನ್ನೂ ವಿಸ್ತಾರವಾದ ಅಧ್ಯಯನದ ವಸ್ತುವಾಗಿ ಉಳಿದಿದೆ. ಈ ಧರ್ಮಶ್ರದ್ಧೆ ಎಲ್ಲೆಲ್ಲಿ ಸಾರ್ವತ್ರಿಕವಾದ ಸತ್ವವಾಗಿದೆ, ಎಲ್ಲೆಲ್ಲಿ ಕೇವಲ ಸಂಕುಚಿತವಾದ ಮತ ಪ್ರಚಾರದ ರಭಸವಾಗಿದೆ ಎಂಬುದನ್ನು ಸಾಹಿತ್ಯದಲ್ಲಿ ಗುರುತಿಸಬಹುದು. ಉದ್ದಕ್ಕೂ ಧರ್ಮದ ಉದ್ದೇಶ ಒಂದೇ ಆಗಿದ್ದರೂ, ಮತೀಯವಾದ ಉದ್ದೇಶಗಳು ಹೇಗೆ ಭಿನ್ನವಾಗಿವೆ, ವೈಯಕ್ತಿಕವಾಗಿ ಎಂಬುದನ್ನು ಕಾಣಬಹುದು. ಒಂದು ಕಾಲಕ್ಕೆ ಇದ್ದ ಧಾರ್ಮಿಕ ಶ್ರದ್ಧೆಯೊಳಕ್ಕೆ, ವೈಚಾರಿಕತೆ ಮತ್ತು ವಿಮರ್ಶನ ದೃಷ್ಟಿ ಬೆರೆತು, ವಚನಕಾರರ ಕಾಲದ ಅಭಿವ್ಯಕ್ತಿ ಹೇಗೆ ಭಿನ್ನವಾಯಿತು ; ಅದೇ ರತ್ನಾಕರನ ಕಾಲಕ್ಕೆ, ‘ತ್ಯಾಗ-ಭೋಗ ಸಮನ್ವಯ’ದ ಕನಸನ್ನು ಕಂಡ ಧರ್ಮ ಶ್ರದ್ಧೆ ಸಮನ್ವಯದ ದಾರಿಯಲ್ಲಿ ಯಾಕೆ ಕಾಲಿಟ್ಟಿತು ಎಂಬುದನ್ನು ಕಾಣಬಹುದು. ಹಾಗೆಯೆ ಕವಿಯಾದವನು ತಾನು ಹುಟ್ಟಿ ಬೆಳೆದ ಮತಧರ್ಮವನ್ನು ಕಾವ್ಯದ ಮೂಲಕ ಪ್ರಸಾರ ಮಾಡುವುದು ತನ್ನ ಜವಾಬ್ದಾರಿಗಳಲ್ಲಿ ಒಂದು ಎಂಬ ಭಾವನೆ ಬಹುಕಾಲ ಇತ್ತು. ಮತ-ಧರ್ಮಗಳು ಕಾಲದಿಂದ ಕಾಲಕ್ಕೆ ಬದಲಾದರೂ ಈ ಒಂದು ಮನೋಧರ್ಮ ಬದಲಾಗಲಿಲ್ಲ. ರಾಘವಾಂಕನಂಥ ಕವಿ ‘ಜಾತ್ಯತೀತ’ ಕೃತಿ-ರಚನೆ ಮಾಡಲು ಹೊರಟು ಯಶಸ್ವಿಯಾದರೂ, ಮತ್ತೆ ಅವನ  ಕಾಲದ ಮತಧರ್ಮ ಅವನನ್ನು ಪ್ರಚಾರದ ಉಪಾಧಿಯೊಳಕ್ಕೆ ಎಳೆದದ್ದು ಅವನ ‘ಕಾಲಧರ್ಮ’ದ ಸಾಕ್ಷಿಯಾಗಿದೆ.  ಹೀಗಾಗಿ ಕವಿ ಎಷ್ಟೇ ಸ್ವತಂತ್ರ ಪ್ರವೃತ್ತಿಯವ-ನಾಗಿದ್ದರೂ ಅಂದಂದಿನ ‘ಕಾಲಧರ್ಮ’ದ ಪ್ರಮುಖ ಶಕ್ತಿಗಳಿಂದ ಆತ ಬಿಡುಗಡೆ ಹೊಂದುವುದು ಅಸಂಭವವಾಗಿತ್ತು. ಆದರೆ ಇಂದಿನ ‘ಕಾಲಧರ್ಮ’ ಬದಲಾಗಿದೆ. ಮತ-ಧರ್ಮಗಳನ್ನು ಕುರಿತು ದೃಷ್ಟಿ ವ್ಯತ್ಯಾಸವಾಗಿದೆ. ಹಿಂದಿನ ಕವಿಯ ಹಾಗೆ ಇಂದಿನ ಕವಿ, ತಾನು ಹುಟ್ಟಿ ಬೆಳೆದ ಮತ-ಧರ್ಮ ಪ್ರಸಾರಕ್ಕೆ ಕಾವ್ಯವನ್ನು ಮಾಧ್ಯಮವನ್ನಾಗಿ ಮಾಡುವ ಹಂಗುಹರಿದು ನಿಂತಿದ್ದಾನೆ. ಯಾವ ಕವಿ ಕೃತಿಯನ್ನಾಗಲಿ ಪರಿಶೀಲಿಸಿ ಅದರ ಆಧಾರದಮೇಲೆ ಅವನ ಮತ-ಧರ್ಮ ಇಂಥದು ಎಂದು ಕಂಡುಹಿಡಿಯುವುದು ಅಸಾಧ್ಯವೆನ್ನಿಸುವಷ್ಟರಮಟ್ಟಿಗೆ, ಇಂದಿನ ಕವಿ ಮನೋಧರ್ಮ ಸ್ವತಂತ್ರವಾಗಿದೆ.

ಇವತ್ತಿನ ಕವಿಯನ್ನು ಕುರಿತು ಹೇಳುವುದಾದರೆ, ಇದು ವೈಚಾರಿಕತೆಯ, ವೈಜ್ಞಾನಿಕ ಮನೋಧರ್ಮದ ಯುಗವೆಂದು ಕರೆಯಬಹುದು. ಭಾರತೀಯ ಪರಿಸರದ ಮಟ್ಟಿಗೆ ಹೇಳುವುದಾದರೆ ನಮ್ಮ ಕಾಲಧರ್ಮವನ್ನು ಸ್ವಾತಂತ್ರ್ಯಪೂರ್ವ ಹಾಗೂ  ಸ್ವಾತಂತ್ಯೋತ್ತರ ಕಾಲಧರ್ಮ ಎಂದು ವಿಭಾಗಿಸಿ ನೋಡಲು ಸಾಧ್ಯವಿದೆ.  ಸ್ವಾತಂತ್ರ್ಯಪೂರ್ವದ ಉತ್ಸಾಹ ಆವೇಶ ಆದರ್ಶಪರತೆಗಳಿಗೂ, ಸ್ವಾತಂತ್ರ್ಯೋತ್ತರದ ವಾಸ್ತವತೆ, ವಿಷಣ್ಣತೆ, ನಿರುತ್ಸಾಹ, ಲಘುಪ್ರವೃತ್ತಿಗಳಿಗೂ ವ್ಯತ್ಯಾಸವಿದೆ. ಸ್ವಾತಂತ್ರ್ಯಪೂರ್ವಕಾಲದ ನವೋದಯ ಕಾವ್ಯ ಪ್ರತಿನಿಧಿಸುವ ಕಾಲಧರ್ಮಕ್ಕೂ, ಸ್ವಾತಂತ್ರ್ಯೋತ್ತರ ಕಾಲದ ‘ನವ್ಯಕಾವ್ಯ’ ಪ್ರತಿನಿಧಿಸುವ ಕಾಲಧರ್ಮಕ್ಕೂ ವ್ಯತ್ಯಾಸವಿದೆ. ಪ್ರತಿಯೊಂದು ಕಾಲದ ಈ ಮನೋಧರ್ಮ ಅಂದಂದಿನ ಕಾಲದ ಕವಿಗಳಲ್ಲಿ ವ್ಯಕ್ತವಾಗಿರುತ್ತದೆ. ಒಂದು ‘ಕಾಲಧರ್ಮ’ದಿಂದ ಮತ್ತೊಂದು ಕಾಲಧರ್ಮ ಅದರ ವೈಚಾರಿಕ ಅಂಶಗಳಲ್ಲಿ ಭಿನ್ನವಾಗಿರುವುದರಿಂದ ಬೇರೆ ಬೇರೆಯ ಕಾಲದ ಸಾಹಿತ್ಯ, ಬೇರೆ ಬೇರೆಯಾಗಿರುವುದು ಸಹಜ. ಒಂದು ‘ಕಾಲಧರ್ಮ’ದಲ್ಲಿ ಬದುಕಿದ  ಕವಿಯ ಕಾವ್ಯವನ್ನು ಮತ್ತೊಂದು ಕಾಲ ಧರ್ಮದಲ್ಲಿ ಬದುಕಿದ ಕವಿಗಳು, ಸಾಹಿತ್ಯೇತರ ಕಾರಣಗಳಿಗಾಗಿ ಖಂಡಿಸಿ ಮಾತನಾಡುವುದನ್ನು ವಿಮರ್ಶೆ ಎಂದು ಭ್ರಮಿಸುವುದು ವಿಚಿತ್ರವಾಗಿದೆ. ಆದ್ದರಿಂದ ಈ ವಿಚಾರ ಭೇದಗಳು, ಒಂದು ಪರಿಸರದ ವೈಚಾರಿಕ ಪ್ರಗತಿಯಲ್ಲಿ ಪರಸ್ಪರ ಪೂರಕಗಳೇ ಹೊರತು, ಒಂದು ಮತ್ತೊಂದಕ್ಕಿಂತ ಶ್ರೇಷ್ಠವೋ, ಕನಿಷ್ಠವೋ ಎಂಬ ಸ್ಪರ್ಧೆಗೆ ಅರ್ಹವಾದ ಸಂಗತಿಗಳಲ್ಲ.

ಹಾಗೆ ನೋಡಿದರೆ ಒಂದು ದೇಶದ ‘ಕಾಲಧರ್ಮ’ವೆಂಬುದು ಇದು ಇಷ್ಟೇ ಎಂದು ಖಚಿತಗೊಳಿಸಿ ಹೇಳುವುದು ಕಷ್ಟ. ಕಾಲಧರ್ಮ ಎನ್ನುವುದು, ಅತ್ಯಂತ ಸಂಕೀರ್ಣವಾದ, ಜೀವನದ ಮೊತ್ತ. ಇದರಲ್ಲಿ ತೀರಾ ವಿರುದ್ಧವಾದ ಸಂಗತಿಗಳ ಸಮಾವೇಶವೂ ಇರುತ್ತದೆ. ಈ ಸಂಕೀರ್ಣವಾದ ಸಮಷ್ಟಿ ಜೀವನದ ಯಾವುದೋ ಒಂದು ಮುಖವನ್ನು ಸಾಹಿತಿಯಾದವನು ದೊಡ್ಡದು ಮಾಡಿ, ಇದೇ ನಮ್ಮ ‘ಕಾಲಧರ್ಮ’ ಎಂದು ಉಗ್ಗಡಿಸಿ, ತಾನಲ್ಲದೆ ಬೇರೆಯವರಲ್ಲಿ ಅಭಿವ್ಯಕ್ತವಾಗು-ತ್ತಿರುವುದು ಇವತ್ತಿನ ‘ಕಾಲಧರ್ಮ’ವೇ ಅಲ್ಲವೆಂದು ಘೋಷಿಸುವ ಪ್ರವೃತ್ತಿಯೂ ಉಂಟು. ನಂಬಿಕೆ-ಅಪನಂಬಿಕೆ ; ಶ್ರದ್ಧೆ-ನಾಸ್ತಿಕತೆ ; ವೈಚಾರಿಕತೆ-ಅಜ್ಞತೆ, ಸಹನೆ- ದೌರ್ಬಲ್ಯ-ಇತ್ಯಾದಿಗಳ ಸಮ್ಮಿಶ್ರವನ್ನು ಕಾಣುವ ಈ ಕಾಲದಲ್ಲಿ ಯಾವುದನ್ನು ಪ್ರಧಾನವೆಂದು ಪರಿಗಣಿಸಬೇಕು? ವಿವೇಕಾನಂದ-ಗಾಂಧಿ-ಅರವಿಂದರು ಬದುಕಿದ ಕಾಲದಲ್ಲೇ, ಅತ್ಯಂತ ನಿರಾಸೆ, ಶೂನ್ಯತೆ, ಹತಾಶೆಯ ಹಿಪ್ಪೀ ಮನೋಧರ್ಮಗಳೂ ಸುತ್ತಲೂ ಇದ್ದವು. ಹಾಗಾದರೆ ಯಾವುದನ್ನು ನಾವು ‘ಕಾಲಧರ್ಮ’ ಎನ್ನಬೇಕು? ನಾಲ್ಕು ಜನ ನಗರದ ನಡುವೆ ಅನುಭವಿಸುವ ಬದುಕಿನ ಸಂಕೀರ್ಣತೆಯನ್ನು ಇಂದಿನ ‘ಯುಗಧರ್ಮ’ವೆಂದು ಎತ್ತಿಹಿಡಿದು, ಈ ಬದುಕಿನಾಚೆಯ ಕೋಟ್ಯಂತರ ಜನರಲ್ಲಿರಬಹುದಾದ ಶ್ರದ್ಧೆ-ನಂಬಿಕೆಗಳನ್ನು ನಿರ್ಲಕ್ಷಿಸುವುದು ಉಚಿತವೆ? ಈ ಕೆಲವು ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ನಿಜ, ಜಗತ್ತಿನ ಕಲ್ಪನೆ ಬದಲಾಗಿದೆ. ಹಿಂದಿನ ಕವಿಗಳ ಬದುಕಿನ ಪರಿಸರ ಪರಿಮಿತವಾದದ್ದರಿಂದ, ಅವರ ಅನುಭವ ಪರಿಸರವೂ ಪರಿಮಿತವಾಗಿರುತ್ತಿತ್ತು ; ಕೇವಲ ಧರ್ಮಶ್ರದ್ಧೆ, ಸ್ವಾಮಿಭಕ್ತಿ, ವೀರ-ಇತ್ಯಾದಿ ಕೆಲವು ಮೌಲ್ಯಗಳನ್ನು ಬಿಗಿಯಾಗಿ ಅವಲಂಬಿಸಿ, ಕಾವ್ಯದ ಮೂಲಕ ಎತ್ತಿ ಹಿಡಿಯುತ್ತಿದ್ದರು. ಈ ದಿನ ಜಗತ್ತು ವಿಶಾಲವಾಗಿದೆ ; ಭಾರತದ ಆಚೆಯ ಬದುಕಿನ ಅಲ್ಲೋಲ-ಕಲ್ಲೋಲಗಳು ಭಾರತೀಯನಾದ ಕವಿಯ ಸಂವೇದನೆಯ  ವಸ್ತುಗಳಾಗುತ್ತವೆ.  ಜಗತ್ತಿನಲ್ಲಾಗುವ ಸಮಸ್ತ ವ್ಯಾಪಾರಗಳು ಕವಿಯಾದವನಿಗೆ ಕಾಲಧರ್ಮದ ಅಂಶಗಳೇ ಆದರೂ, ತಾನು  ಬದುಕಿದ ಪರಿಸರದಲ್ಲಿ ಅವುಗಳ ಪರಿಣಾಮ ಎಷ್ಟು, ಎಂಬುದನ್ನು ಯೋಚಿಸಬೇಕು. ಭಾರತೀಯನಾದ ಕವಿಗೆ ‘ಕಾಲಧರ್ಮ’, ಭಾರತೀಯನಲ್ಲದ ಕವಿಯ ‘ಕಾಲಧರ್ಮ’ ಭಿನ್ನವಾಗಿರುವುದು ಸಹಜವಾದದ್ದು. ಯಾಕೆಂದರೆ, ಈ ‘ಕಾಲಧರ್ಮ’ ಆಯಾ ದೇಶದ ಕವಿಗೆ, ಅವನವನ ಪರಿಸರದ-ಸಾಂಸ್ಕೃತಿಕ-ಸಾಮಾಜಿಕ ಪರಿಸ್ಥಿತಿಯಿಂದ ನಿರ್ಣಯವಾಗುತ್ತದೆ.

ನಮ್ಮ ಕಾಲ ವೈಜ್ಞಾನಿಕಯುಗ. ಇದರ ಪರಿಣಾಮವಾಗಿ ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಚಾರಮಾಡುವ ಪ್ರವೃತ್ತಿ ನಮ್ಮಲ್ಲಿ  ಬೆಳೆಯಬೇಕು. ಮತ-ಧರ್ಮ -ನಂಬಿಕೆಗಳನ್ನು ಕುರಿತು ನಮ್ಮಲ್ಲಿ ಎಷ್ಟು ಜನ ವೈಜ್ಞಾನಿಕವಾಗಿ ವಿಚಾರ ಮಾಡುತ್ತಿದ್ದಾರೆ? ಕವಿಗಳ ಕಾವ್ಯದ ಮೇಲೆ ಈ ವೈಜ್ಞಾನಿಕ ದೃಷ್ಟಿ ಸಾಕಷ್ಟು ಪರಿಣಾಮ ಬೀರಿದೆಯೆ? ವೈಜ್ಞಾನಿಕ ಪ್ರಗತಿಯ ಕಾರಣದಿಂದ, ಯಂತ್ರಯುಗ ತಂದ ಗೊಂದಲದಲ್ಲಿ ಮಾನವೀಯ ಮೌಲ್ಯಗಳ ಪತನವನ್ನೂ, ತತ್ಪರಿಣಾಮವಾದ ನಿರಾಸೆ, ಗೊಂದಲಗಳನ್ನು ತಕ್ಕಷ್ಟು ತನ್ನ ಮೂಲಭೂತ ಸಾಮಗ್ರಿಯನ್ನಾಗಿ ಮಾಡಿಕೊಂಡ ಕವಿತೆ, ಇಂದು ಮಾನವನ ಚಂದ್ರಯಾನದಂತಹ ಅಪೂರ್ವ ವೈಜ್ಞಾನಿಕ ಸಾಧನೆಗಳ ಹಿಂದಿನ ಪೌರುಷ ಪ್ರಾಧಾನ್ಯತೆಯನ್ನೂ, ಅನ್ವೇಷಕ ಸಾಮರ್ಥ್ಯವನ್ನು ಯಾಕೆ ತನ್ನ ಸಂವೇದನೆಯ ಸಾಮಗ್ರಿಯನ್ನಾಗಿ ಮಾಡಿಕೊಂಡಿಲ್ಲ ?

ನಿಜವಾದ ಅರ್ಥದಲ್ಲಿ ಮಹಾಕೃತಿ ಎಂದು ಯಾವುದನ್ನು ಕರೆಯುತ್ತೇವೆಯೋ, ಅದರಲ್ಲಿ ಒಂದು ಸಮಗ್ರ ಕಾಲವೇ ಪ್ರತಿಮಿತವಾಗಿರುತ್ತದೆ ಎಂದು ಹೇಳುವುದುಂಟು. ಯಾವ ಒಬ್ಬ ಮಹತ್ವದ ಕವಿಯನ್ನೂ, ಆತನ ಕಾಲಧರ್ಮದಿಂದ ಪ್ರತ್ಯೇಕಿಸಿ ನೋಡುವುದು ಅಸಂಭವವೆಂಬಷ್ಟರಮಟ್ಟಿಗೆ ಆತ ಆ ಯುಗದ ಸತ್ವದಿಂದ ಬದ್ಧನಾಗಿರು-ತ್ತಾನೆ. ಹಾಗೆಂದರೆ ಆತನಲ್ಲಿ ಅವನಿಗಿಂತ ಹಿಂದಿನದು ಏನೂ ಇಲ್ಲವೆಂದಾಗಲಿ, ಅವನ ನಂತರ ಅವನ ಕೃತಿಯಿಂದ ಉಪಯೋಗವಿಲ್ಲವೆಂದಾಗಲಿಅರ್ಥವಲ್ಲ. ಆದರೆ ಅವನು, ತಾನು ಬದುಕಿದ ಕಾಲಮಾನದ ವೈಶಿಷ್ಟ್ಯಗಳನ್ನು ಕೃತಿಯಲ್ಲಿ ಹಿಡಿದಿರಿಸಿದರೂ ಅವನು, ತನ್ನ ಹಿಂದೆ ಇರುವ ಭೂತಕಾಲದ ಸತ್ವವನ್ನು ಮೈಗೂಡಿಸಿಕೊಂಡು ತನ್ನ ‘ವರ್ತಮಾನ’ವನ್ನು ರೂಪಿಸಿಕೊಳ್ಳುತ್ತಾನೆ. ಹಾಗೆಯೇ ತನ್ನ ಮುಂದಿನ ಕಾಲದ ಮೇಲೂ ಪ್ರಭಾವವನ್ನು ಬೀರುವ ಸಾರ್ವತ್ರಿಕತೆಯನ್ನು ಸಾಧಿಸಿಕೊಳ್ಳುತ್ತಾನೆ. ನಿಜವಾದ ಕೃತಿ ಕಾಲ-ದೇಶಬದ್ಧವಾದ ಒಂದು ‘ವರ್ತಮಾನ’ದಲ್ಲಿ ಹುಟ್ಟಿದರೂ ಸಂತತ ವರ್ತಮಾನಕ್ಕೆ ಸಲ್ಲುವ ಕಲಾತ್ಮಕತೆಯನ್ನು ಹೊಂದಿರುತ್ತದೆ. ಆದರೆ ಯಾವ ಕೃತಿ ಕೇವಲ ಒಂದು ಕಾಲಕ್ಕೆ ಮಾತ್ರ ಸೀಮಿತವಾಗುವ ಸಂಗತಿಗಳ ಮೇಲೆ ರಚಿತವಾಗಿರುತ್ತದೋ ಆ ಸಂಗತಿಗಳು ತತ್ಕಾಲಕ್ಕೆ ಎಷ್ಟೇ ಮಹತ್ವವೆಂಬಂತೆ ಭಾಸವಾದರೂ, ಅದು ಆ ಕಾಲದ ನಂತರ, ಕೇವಲ ಸಪ್ಪೆಯಾಗಿ ಚಾರಿತ್ರಿಕ ದಾಖಲೆಗಳ ಸಾಲಿಗೆ ಸೇರುತ್ತದೆ.

ನವೋದಯ-೧೯೭೬