ಊರಿಗೆ ಮಳೆ ಹುಯ್ತು ಏರುಕಟ್ಟೋ ಕಂದಯ್ಯ
ಊರು ಮುಂದಿರುವ ಬಸವಣ್ಗೆ | ಕೈ ಮುಗಿದು
ಏರು ಕಟ್ಟೋ ಮುದ್ದು ಮುಖದವನೆ ||

ಹತ್ತು ಸಾವಿರ ಪದವ ಎತ್ತಿನ್ಮೇಲ್ಹೇರ‍್ಕೊಂಡು
ಮತ್ತೆ ಸಾವಿರ ಕೈಲಿ ಹಿಡಕೊಂಡು | ಬಂದಿವ್ನಿ
ಬಾರೋ ಬಸವಣ್ಣ ಬಯಲಿಗೆ ||

ಹಾದೀಯ ಹೊಲದಲ್ಲಿ ಹಾರವರ ಅಟ್ಟಣೆ
ಕಂಚಿನ ಕವಣೆ ಮಿಡಿ ಕಲ್ಲು | ತಕ್ಕೊಂಡು
ಲಗ್ಗೆ ಹಾರಿಸ್ಯಾನೆ ಗಿಳಿ ಹಿಂಡ ||

ಉತ್ತ ಹೊಲದಲ್ಲಿ ಉತ್ರಾಣಿ ಕಾಳಲ್ಲಿ
ಪುಟ್ಟರಾಜಣದ ಬಯಲಲ್ಲಿ | ಬನಶಂಕ್ರಮ್ಮ
ಚಿತ್ರ ಸಾಲಲ್ಲಿ ಬರುತಾಳೆ ||

ಕಾಳ್ಹೋರಿ ಕಪ್ಹೋರಿ ಕಡಲೇ ಬಣ್ಣದ ಹೋರಿ
ಈರಣ್ಣನೆಂಬೋ ಹೊಸ ಹೋರಿ | ಕಟ್ಕೊಂಡು
ನೂರೊಂದು ಸಾಲ ಹೊಡೆದವ್ನೆ ||

ಎತ್ತು ಅನ್ಬೌದೆ ಎಡಗೋಲ ಬಸವಣ್ಣ
ಸುತ್ತೇಳು ಲೋಕ ಮೆರೆಯುವ (ನ) | ಬಸವಣ್ಣ
ಎತ್ತು ಅನ್ಬೌದೆ ಧರೆಯಲ್ಲಿ ||

ಕಡಲೆ ಹೊಲ ಮೆದ್ದು ಕಡೆಯಲ್ಲಿ ನೀರ್ಕುಡಿದು
ಕಡದು ಹೋಗ್ಯವರೆ ಬಸವಣ್ಣ | ನಮ್ಮೂರ
ಕಡೆಯ ಬಾಗ್ಲಲ್ಲಿ ನೆಲಸ್ಯವರೆ ||

ಮಲ್ಲನ್ಮೂಲೇಲಿರುವ ಜಲ್ಲೇಗೂಡಿನ ಬಸವ
ಇಲ್ಲೇಕೆ ನೀವು ನೆಲಸಿದಿರಿ | ಬಸವಣ್ಣ
ನನ್ನ ಮಡದೀರ‍್ಗೆ ನಿದ್ದೆ ಕೊಡಬಾರದೆ ||

ಸುಕ್ಕೀಂದ್ರ ಶೂಲೀಂದ್ರ ಚಿಕ್ಕನು ಬೆಳ್ಳಿದೇವ
ನಮ್ಹೋರಿಗಿಂತ ಕಿರಿಯೋನು | ಬೆಳ್ಳಿದೇವ
ನಾರಿಗರ್ತ ಅರಿಯಾನೊ ||

ನಾಗಾಳೆ ಸೆರೆಗಜ್ಜೆ ನಾಗಾಳ ಉರಿಗೆಜ್ಜೆ
ಚೊಕ್ಕ ಬೆಳ್ಳಿ ಮಕರಂಬ | ನಮ್ಮೂರ
ಉಪ್ಪರಿಕೆ ಚೆನ್ನ ಬಸವಣ್ಣ ||

ಬಸವಯ್ಯ ಹುಟ್ಟಲಿ ಹೊಸಪೇಟೆ ಕಟ್ಟಲಿ
ರಸಬಾಳೆ ಕಬ್ಬು ಬೆಳೆಯಲಿ | ನಮ್ಮೂರ
ಬಸವಣ್ಣನ್ ತೇರು ಹರಿಯಾಲಿ ||