ಬರಬೇಕು ಬಾ ತಾಯಿ ಮನೆಗೆ
ಗಿರಿಯೊಳು ಇರುವುದು ತರವಲ್ಲ ನಿನಗೆ
ಬಾಳ ಹೇಳುವದೇನು ಬಾರಮ್ಮ ಮನೆಗೆ
ಬರಬೇಕು ಬಾ ತಾಯಿ ಮನೆಗೆ      ೧

ಹತ್ತೆಂಟು ಮಕ್ಕಳ ಸುತ್ತಿಟ್ಟು ಕೊಲ್ಲಾರಿ
ಬಳಲಿದ ಬಗತರು ಬರುವರಮ್ಮ
ಗಿರಿಯೊಳು ಇರುವುದು ತರವಲ್ಲ ನಿನಗೆ
ಬರಬೇಕು ಬಾ ತಾಯಿ ಮನೆಗೆ      ೨

ಕರಿಯ ಸೀರೆಯನುಟ್ಟಿವ್ವ ನೀನು
ಪಂಚೇರು ಬೆಳ್ಳಿಯ ಧರಿಸೀದಿ ನೀನು
ಬೆಳಗಾಂವಿ ನಾಡ ಅಳವ್ಯಾಡಿ ಬಂದಿ
ಬರಬೇಕು ಬಾ ತಾಯಿ ಮನೆಗೆ      ೩

ಕೆಂಪು ಸೀರೆಯನುಟ್ಟಿವ್ವ ನೀನು
ಪಂಚೇರು ಬಂಗಾರ ಧರಿಸಿದೆವ್ವ ನೀನು
ಮೊಗಲಾಯಿ ದೇಶದೊಳಗ ಮಿಗಿಲಾಗಿ ಬಂದೆವ್ವ
ಬರಬೇಕು ಬಾ ತಾಯಿ ಮನೆಗೆ      ೪

ಬಂಗಾರದ  ಕೋಡಣ ಹಚ್ಚಿ
ಬೆಳ್ಳಿಯ ಎಳಿಹಗ್ಗ ಬಿಟ್ಟು
ಮೊನ್ನೆ ಬಿಟ್ಟ ಹೋರಿ ನಿನ್ನ ಬರಲಿಲ್ಲ
ಬರಬೇಕು ಬಾ ತಾಯಿ ಮನೆಗೆ      ೫

ಕಣ್ಣಿಗಿ ಕಾಣ್ದಂತ ಹೋರಿ
ಕಯ್ಯಾಗ ಸಿಗದಂತ ಹೋರಿ
ಮಾಯದ ಹೋರಿ ಭೂಮ್ಯಾಗ ಹೊಕ್ಕೈತಿ
ಬರಬೇಕು ಬಾ ತಾಯಿ ಮನೆಗೆ      ೬

ಮೊನ್ನೆ ಬಿತ್ತಿದ ಹೊಲ
ನಿನ್ನೆ ಮೇದೈತೆ ಹೋರಿ
ಕಯ್ಯಾಗ ಸಿಗದಂತ ಹೊರಿ
ಬರಬೇಕು ಬಾ ತಾಯಿ ಮನೆಗೆ      ೭

ಬಾಳ ಹೇಳುವದೇನು ನಿನಗ
ಪರಿಪರಿ ದಿನದಲ್ಲೆ ಕರದಿದ್ದೆ ನಾನು
ಗಿರಿಯೊಳು ಇರುವುದು ತರವಲ್ಲ ನಿನಗೆ
ಬರಬೇಕು ಬಾ ತಾಯಿ ಮನೆಗೆ      ೮