ಮಾನಸಿಕ ಆರೋಗ್ಯವೆಂದರೇನು?

ಚಂಚಲವಾಗಿರುವುದೇ ಮನಸ್ಸಿನ ಹುಟ್ಟು ಗುಣ. ಪರಿಸರದಲ್ಲಿರುವ ಹಲವು ಹನ್ನೊಂದು ಸಂಗತಿಗಳನ್ನು ಅದು ಗಮನಿಸುತ್ತಿರುತ್ತದೆ. ಪ್ರತಿಕ್ರಿಯಿಸುತ್ತಿರುತ್ತದೆ. ಪರಿಸರದ ಅನೇಕ ಪ್ರಚೋದನೆಗಳು ಮನಸ್ಸಿಗೆ ಹಿತವಾಗಿರುವುದಿಲ್ಲ. ಆಗ ಅದು ದುಃಖ, ಕೋಪ, ಭಯವನ್ನು ಪ್ರಕಟಿಸುತ್ತದೆ. ಯಾವುದಾದರೊಂದು ಉಪಯುಕ್ತ ವಿಚಾರ ಮತ್ತು ಕೆಲಸದಲ್ಲಿ ನಾವು ಮಗ್ನರಾಗಬೇಕು. ಕೆಲಸ ಚಟುವಟಿಕೆಗಳನ್ನು ಸಕಾಲದಲ್ಲಿ ಪೂರೈಸುವ ತಾಳ್ಮೆ, ಕೌಶಲ ಮತ್ತು ಹಠ ನಮಗಿರಬೇಕು. ಆದರೆ, ಮನಸ್ಸಿಗೆ ಇವು ಇಲ್ಲದಿರಬಹುದು. ಕಷ್ಟ ಸಮಸ್ಯೆಗಳು ಸಹಜ. ಅವು ಬಂದಾಗ ನಮ್ಮ ಮನಸ್ಸು ತಳಮಳಕ್ಕೆ ಒಳಗಾಗುತ್ತದೆ. ಧೈರ್ಯ ಕಳೆದುಕೊಳ್ಳುತ್ತದೆ. ನಮ್ಮ ಎಷ್ಟೋ ಬೇಕು ಬೇಡಗಳನ್ನು ನಾವು ಗಮನಿಸಲಾಗುವುದಿಲ್ಲ. ಆಗ ಮನಸ್ಸು ಪ್ರತಿಭಟಿಸುತ್ತದೆ. ನಮ್ಮ ಸಂಪನ್ಮೂಲಗಳು ಸೀಮಿತವಾಗಿದ್ದಾಗ, ನಾವು ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಮನಃಶಾಸ್ತ್ರಜ್ಞ ಸಿಗ್ಮಂಡ್‌ ಫ್ರಾಯ್ಡ್‌ ಹೇಳಿದ್ದಾನೆ. ಮನಸ್ಸಿನಲ್ಲಿ ಮೂರು ಭಾಗಗಳಿವೆ. ಆಸೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಸದಾ ಮಗ್ನವಾಗಿರುವ ಭಾಗವೇ ‘ಇದ್’. ಹೇಗೋ ಬಯಕೆಗಳನ್ನು ಪೂರೈಸಿಕೊಂಡು ಸುಖಿಸುವುದೇ ಇದರ ಪರಮ ಗುರಿ. ಹೀಗಾಗಿ ಇದು ವಾಸ್ತವಿಕತೆಯನ್ನಾಗಲೀ, ಕಾರ್ಯ ಕಾರಣಗಳನ್ನಾಗಲೀ, ಸರಿ-ತಪ್ಪುಗಳನ್ನಾಗಲೀ ಗುರುತಿಸುವುದಿಲ್ಲ. ಆದರೆ, ಮನಸ್ಸಿನ ಇನ್ನೊಂದು ಭಾಗ ‘ಈಗೋ’ ವಾಸ್ತವಿಕತೆಯನ್ನೂ ಅರ್ಥಮಾಡಿಕೊಳ್ಳುತ್ತದೆ. ವಾಸ್ತವಿಕತೆಯ ಇತಿಮಿತಿಯಲ್ಲಿ ‘ಇದ್‌’ನ ಬೇಡಿಕೆಗಳನ್ನೂ ಮುಂದೂಡಲು ಅಥವಾ ಬೇಡ ಎನ್ನಲು ಪ್ರಯತ್ನಿಸುತ್ತದೆ. ಮನಸ್ಸಿನ ಮತ್ತೊಂದು ಭಾಗ ‘ಸುಪರ್ ಈಗೋ’. ಸಾಮಾಜಿಕ, ನೈತಿಕ, ಧಾರ್ಮಿಕ ನಿಯಮಗಳನ್ನು ಕಲಿತುಕೊಂಡು ಪಾಲಿಸಲು ಪ್ರಯತ್ನಿಸುತ್ತದೆ. ಹೀಗಾಗಿ ‘ಇದ್‌’, ‘ಈಗೋ’, ಮತ್ತು ‘ಸುಪರ್‌ ಈಗೋ’ ನಡುವೆ ಸದಾ ಒಂದಿಲ್ಲ ಒಂದು ವಿಷಯಕ್ಕಾಗಿ ಘರ್ಷಣೆ, ತಾಕಲಾಟ ನಡೆದಿರುತ್ತದೆ. ಮಾನಸಿಕ ಆರೋಗ್ಯವೆಂದರೆ ಈಗೋ ಬಲವಾಗಿರುವುದು. ಆಗ ಅದು ಇದ್ ಮತ್ತು ಸುಪರ್ ಈಗೋ ವನ್ನು ನಿಭಾಯಿಸುತ್ತಾ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ನೆರವಾಗುತ್ತಾ ಆತ ಇತರರೊಡನೆ ಹೊಂದಿಕೊಂಡು ಬಾಳಲು ಈಗೋ ಯಶಸ್ವಿಯಾಗಿ ನೆರವಾಗುತ್ತದೆ. ಅಂದರೆ ಮಾನಸಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಯ ಲಕ್ಷಣಗಳು ಇವು:

೧. ವಾಸ್ತವಿಕ ಪ್ರಜ್ಞೆ ಚೆನ್ನಾಗಿರುತ್ತದೆ. ಭ್ರಮೆಗೆ ಹಗಲುಗನಸುಗಳಿಗೆ ಎಡೆ ಇರುವುದಿಲ್ಲ.

೨. ಆತ ತನ್ನ ಬೇಕು ಬೇಡಗಳನ್ನು ಸಾಮಾಜಿಕ ಮತ್ತು ನೈತಿಕ ನಿಯಮಗಳ ಚೌಕಟ್ಟಿನೊಳಗೇ ಪೂರೈಸಿಕೊಳ್ಳಲು ಪ್ರಯತ್ನಿಸುತ್ತಾನೆ.

೩. ಆತ ಸ್ನೇಹಮಯಿ, ದಯಾಮಯಿ ಯಾರಿಗೂ ತೊಂದರೆ ಕೊಡದೆ ಕೆಡುಕು ಮಾಡದೇ ಎಲ್ಲರೊಡನೆ ಹೊಂದಿಕೊಂಡು ಬಾಳಲು ಪ್ರಯತ್ನಿಸುತ್ತಾನೆ.

೪. ಸ್ವಾರ್ಥಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದೆ, ಇತರರ ಬೇಕು ಬೇಡಗಳನ್ನು ಗಮನಿಸುತ್ತಾನೆ. ಸಮಾಜದ ಏಳಿಗೆಗೆ ದುಡಿಯುತ್ತಾನೆ.

೫. ಕಷ್ಟ ಸಮಸ್ಯೆಗಳು ಎದುರಾದಾಗ, ಧೈರ್ಯದಿಂದ ಎದುರಿಸುತ್ತಾನೆ. ಪರಿಹಾರೋಪಾಯಗಳನ್ನು ಯೋಚಿಸಿ ಕಾರ್ಯಗತ ಮಾಡುತ್ತಾನೆ.

೬. ಸಮಯ, ಸಂದರ್ಭಕ್ಕೆ ತಕ್ಕ ನಡೆ, ನುಡಿ ಭಾವನೆಗಳನ್ನು ಪ್ರಕಟಿಸುತ್ತಾನೆ. ಭಾವೋದ್ರೇಕಕ್ಕೆ ಒಳಗಾಗುವುದಿಲ್ಲ. ಸಮಚಿತ್ತನಾಗಿರುತ್ತಾನೆ.

೭. ಪೂರ್ವಾಗ್ರಹ ಪೀಡಿತನಾಗದೇ ಮುಕ್ತ ಮನಸ್ಸಿನವನಾಗಿರುತ್ತಾನೆ. ತನ್ನ ತಿಳುವಳಿಕೆ ಜ್ಞಾನವನ್ನು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಾನೆ.

೮. ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುತ್ತಾನೆ.

೯. ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಳ್ಳುತ್ತಾನೆ. ಆಹಾರ ಸೇವನೆ, ನಿದ್ರೆ, ಮೈಥುನ, ಸ್ವಚ್ಛತೆ, ವ್ಯಾಯಾಮ, ಮನರಂಜನೆ ವಿಷಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುತ್ತಾನೆ. ಅನಾರೋಗ್ಯದ ಲಕ್ಷಣಗಳನ್ನು ಗಮನಿಸಿ ತಕ್ಷಣ ಅವನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತಾನೆ. ತನ್ನ ಮತ್ತು ತನ್ನವರ ಆರೋಗ್ಯಕ್ಕೆ ಆದ್ಯತೆ ನೀಡುತ್ತಾನೆ.

೧೦. ಉದ್ಯೋಗಶೀಲನಾಗಿ, ತನ್ನ ಕೆಲಸ ವೃತ್ತಿಯನ್ನು ಪ್ರೀತಿಸುತ್ತಾನೆ. ತನ್ಮೂಲಕ ಇತರರಿಗೆ ನೆರವಾಗುತ್ತಾನೆ.

೧೧. ಸರ್ವಾಧಿಕಾರಿಯಂತೆ ವರ್ತಿಸದೆ ಇತರರ ಅನಿಸಿಕೆ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಾನೆ. ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾನೆ.

೧೨. ನೈತಿಕ ಮೌಲ್ಯಗಳನ್ನು ಪಾಲಿಸುವುದರಲ್ಲಿ ಸಂತೋಷವನ್ನು ಹೆಮ್ಮೆಯನ್ನು ಕಾಣುತ್ತಾನೆ.

ಇಂತಹ ಮಾನಸಿಕ ಆರೋಗ್ಯ ನಿಮ್ಮದಾಗಲಿ. ಮಾನಸಿಕ ಆರೋಗ್ಯದಿಂದ, ದೇಹದ ಆರೋಗ್ಯವೃದ್ಧಿಯಾಗುತ್ತದೆ. ನಿಮ್ಮ ದೈಹಿಕ-ಮಾನಸಿಕ ಸಾಮರ್ಥ್ಯಗಳು ಹೆಚ್ಚುತ್ತವೆ. ಇದರಿಂದ ನಿಮ್ಮ ಪ್ರಗತಿ ಸಾಧ್ಯ. ತನ್ಮೂಲಕ ಸಮೃದ್ಧಿ ಸಂತೃಪ್ತಿ ನಿಮ್ಮದಾಗಲಿ.