ಹಿಂದೂಸ್ತಾನಿ ಸಂಗೀತದಲ್ಲಿ ಘರಾಣೆಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ವಿಶಿಷ್ಟ ಶೈಲಿ, ವಾದನ ವಿಧಿಯ ಮೂಲಕ ಘರಾಣೆಗಳು ಅಸ್ತಿತ್ವಕ್ಕೆ ಬಂದಿವೆ. ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಘರಾಣೆಗಳಿವೆ. ಘರಾಣಗಳಿಗೆ ‘ಬಾಜ್’ ಗಳೆಂದೂ ಕರೆಯುವದುಂಟು. ಹಿಂದುಸ್ತಾನಿ ಸಂಗೀತದಲ್ಲಿ ಗಾಯನ ಘರಾಣೆ, ಸಿತಾರ ಘರಾಣೆ, ತಬಲಾ ಘರಾಣೆ, ಸರೋದ್ ಘರಾಣೆ ಹೀಗೆ ವಿವಿಧ ಪ್ರಕಾರದ ಘರಾಣೆಗಳನ್ನು ನಾವು ನೋಡುತ್ತೇವೆ. ಪ್ರಸ್ತುತ ಲೇಖನದಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಪ್ರಯೋಗಿಸಲ್ಪಡುವ ಸಿತಾರ ವಾದನದ ವಿವಿಧ ಘರಾಣೆಗಳನ್ನು ವಿವರಿಸಲಾಗಿದೆ.

‘ಸಿತಾರ’ ವಾದ್ಯ ಹಿಂದುಸ್ತಾನಿ ಸಂಗೀತದ ಒಂದು ತಂತಿವಾದ್ಯ. ಅದನ್ನು ಸಂಗೀತ ಶಾಸ್ತ್ರಜ್ಞರು, ‘ತತ್ ವಾದ್ಯ’ ಪ್ರಕಾರಕ್ಕೆ ಸೇರಿಸಿದ್ದಾರೆ. ಹಿಂದುಸ್ತಾನಿ ಸಂಗೀತದ ತಂತುವಾದ್ಯಗಳಲ್ಲಿ ಸಿತಾರ ಅತ್ಯಂತ ಪ್ರಮುಖ ಹಾಗೂ ಮನಮೋಹಕ ವಾದ್ಯವೆನಿಸಿದೆ. ಹೃದಯಸ್ಪರ್ಶಿ ವಾದ್ಯವೆನಿಸಿರುವ ಸಿತಾರಕ್ಕೆ ‘ಸಭಿವಾದ್ಯೋಂಖಠ ಸರ್ದಾರ್’ ಎಂದು ವಿದ್ವಾಂಸರ ಒಂದು ಅಂಬೋಣ. ಅಂದರೆ ವಾದ್ಯ ಸಮೂಹದಲ್ಲಿ ಸಿತಾರ ಮೇರುಸದೃಶವಾದುದೆಂಬುದು ಅದರ ತಾತ್ಪರ್ಯ. ಇಂತಹ ನಾಜೂಕು ಮತ್ತು ಕರ್ಣಾನಂದವಾಗಿರುವ ಸಿತಾರ ವಾದ್ಯಕ್ಕೆ ಉತ್ಕೃಷ್ಟ ಸ್ಥಾನ ಕಲ್ಪಿಸಿದ ಅನೇಕ ಮಹಾನ್ ಸಂಗೀತಗಾರರು ದೇಶದ ಮೂಲೆ ಮೂಲೆಯಲ್ಲಿದ್ದಾರೆ.

ಆಧುನಿಕ ಯುಗದಲ್ಲಿ ಸಿತಾರ ವಾದ್ಯಕ್ಕೆ ವಿಶಿಷ್ಟಸ್ಥಾನ ಕಲ್ಪಿಸಿದವರು ಅನೇಕ ಹೆಸರಾಂತ ಸಿತಾರ ಉಸ್ತಾದರು. ರಹಿಮ್ ಸೇನ್, ಅಮೃತಸೇನ್, ಇಮದಾದಖಾನ್, ಇನಾಯತ್ ಖಾನ್, ವಿಲಾಯತ್ ಖಾನ್, ಮುಂತಾದ ಉಸ್ತಾದರು ಮತ್ತು ಅಂತರಾಷ್ಟ್ರೀಯ ಖ್ಯಾತಿ ಪಡೆದ ಪಂ. ರವಿಶಂಕರ ಮೊದಲಾದ ಸಿತಾರ  ಪಂಡಿತೋತ್ತಮರು. ಮಹಾನ್ ಸಿತಾರವಾದಕರು ನುಡಿಸಿದ ಸಿತಾರವಾದನದ ಭಿನ್ನ ವೈಶಿಷ್ಟದ ಪರಿಣಾಮವಾಗಿ ಮತ್ತು ಆ ಮಹಾನ್ ಕಲಾವಿದರು ವಾಸಿಸುವ ಅಥವಾ ಅಲ್ಲಿ ಜನ್ಮ ಪಡೆದಿರುವ ಸ್ಥಳನಾಮದಿಂದಾಗಿ ಸಿತಾರವಾದನದ ವಿವಿಧ ಘರಾಣೆಗಳು ಹುಟ್ಟಿಕೊಂಡಿವೆ.            ಭಾರತದಲ್ಲಿ ಮಹಮ್ಮದೀಯರ ಆಳ್ವಿಕೆ ಪ್ರಾರಂಭ ಕಾಲದಿಂದ (ಮಧ್ಯಕಾಲ) ಸಂಗೀತದಲ್ಲಿ ಘರಾಣೆಗಳು ಹುಟ್ಟಿಕೊಂಡವು.

ಭಾರತದಲ್ಲಿ ಇಂದು ಸಿತಾರವಾದನದಲ್ಲಿ ಸೇನಿಯಾ ಘರಾಣೆ, ಜೈಪೂರ ಘರಾಣೆ, ಬಿಲಾಸಖಾನ್ ಘರಾಣೆ, ಇಟಾವಾ ಘರಾಣೆ, ಮೈಹರ ಘರಾಣೆ, ಇಂದೋರ್ ಘರಾಣೆ, ದರ್ಭಾಂಗ ಘರಾಣೆ, ಲಖನೌ ಘರಾಣೆ, ಕಿರಾನಾ ಘರಾಣೆ ಮತ್ತು ಮಥುರಾ ಘರಾಣೆಗಳೆಂಬ ಹೆಸರಿನ ಒಟ್ಟು ೧೦ ಘರಾಣೆಗಳಿವೆ.

ಸಿತಾರವಾದನದ ಘರಾಣೆಗಳು

. ಸೇನಿಯಾ ಘರಾಣೆ:

ಸಂಗೀತ ಸಾಮ್ರಾಟ ತಾನಸೇನ್ ನ ಮರಣಾನಂತರ ಸೇನಿಯಾ ಘರಾಣೆ ಅಸ್ತಿತ್ವಕ್ಕೆ ಬಂದಿದೆ. ಇದು ಸಿತಾರ ಘರಾಣೆಗಳಲ್ಲಿಯೇ ಪ್ರಥಮ ಹಾಗೂ ಸಿತಾರ ಘರಾಣಾ ಅಸ್ತಿತ್ವಕ್ಕೆ ಭದ್ರಬುನಾದಿ ಹಾಕಿದ ಮಹತ್ವದ ಘರಾಣೆ. ಸೇನಿಯಾ ಘರಾಣೆಯಲ್ಲಿ ಪೂರ್ವ ಸೇನಿಯಾ ಘರಾಣೆ ಮತ್ತು ಪಶ್ಚಿಮ ಸೇನಿಯಾ ಘರಾಣೆಗಳೆಂಬ ಎರಡು ಭಾಗಗಳಿವೆ.

ಭಾರತದ ಪೂರ್ವ ಭಾಗದಲ್ಲಿರುವ ಲಖನೌ ಮತ್ತು ಬನಾರಸಗಳಲ್ಲಿ ಕಾರ್ಯರೂಪಕ್ಕೆ ಬಂದಿರುವ ಈ ಘರಾಣೆಗೆ ಪೂರ್ವ ಸೇನಿಯಾ ಘರಾಣೆಯೆಂದು ಕರೆಯಲಾಗುತ್ತದೆ. ಈ ಘರಾಣೆಯಲ್ಲಿ ಜಾಫರಖಾನ್, ಪ್ಯಾರಖಾನ್ ಮತ್ತು ಬಾಸತಖಾನ್ ಮುಂತಾದ ಪ್ರಸಿದ್ಧ ಸಂಗೀತಜ್ಞರು ಆಗಿಹೋಗಿದ್ದಾರೆ. ರಾಮಪೂರದ ಸೇನಿಯಾ ಘರಾಣೆ ಸುಪ್ರಸಿದ್ಧ ಸೂರಸಿಂಗಾರವಾದಕ ಬಹಾದ್ದೂರ ಹುಸೇನಖಾ, ಅಮೀರ ಖಾ ಅವರಿಂದ ವಿಶೇಷ ಖ್ಯಾತಿ ಪಡೆಯಿತು. ರಾಮಪೂರದ ನವಾಬ ಹಮೀದ್ ಅಲಿಖಾನ್ ಈ ಘರಾಣೆಗೆ ವಿಶೇಷ ಸ್ಥಾನ ನೀಡಿ ಅದನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಿದ್ದಾರೆ. ಅಮೀರ್ ಖಾನ್ ಅವರ ಮಗ ಪ್ರಸಿದ್ಧ ಬೀನ್ ಕಾರ ವಜೀರ್ ಖಾನ್ ಶ್ರೇಷ್ಠ ಸಂಗೀತಗಾರರಾಗಿದ್ದಾರೆ.

ಭಾರತದ ಪಶ್ಚಿಮ ಭಾಗಗಳಲ್ಲಿರುವ ಜೈಪೂರದಲ್ಲಿ ಸೇನಿಯಾ ಘರಾಣೆಯ ಮತ್ತೊಂದು ಶಾಖೆ ಬೆಳೆದು ಬಂದಿದ್ದರಿಂದ ಈ ಘರಾಣೆಗೆ ಪಶ್ಚಿಮ ಸೇನಿಯಾ ಘರಾಣೆ ಎಂದು ಕರೆಯಲಾಗುತ್ತದೆ. ತಾನಸೇನನ ಎರಡನೇ ಮಗ ಸೂರತಸೇನ ವಂಶಜ ರಹೀಮ ಸೇನ ಮತ್ತು ಅವನ ಮಕ್ಕಳಾದ ಅಮೃತಸೇನ ಮತ್ತು ನಇಹಾಲಸೇನ ಇವರ ಪರಿಶ್ರಮದಿಂದಾಗಿ ಪಶ್ಚಿಮ ಸೇನಿಯಾ ಘರಾಣೆ ವ್ಯಾಪಕ ಪ್ರಚಾರ ಪಡೆದಿದೆ. ರಹೀಮಸೇನ ಮತ್ತು ಅಮೃತಸೇನ (ತಂದೆ-ಮಗ) ಇವರು ಸಇತಾರವಾದನದಲ್ಲಿ ವಿಶೇಷ ಪ್ರಗತಿ ಸಾಧಿಸಿ ಸೇನಿಯಾ ಘರಾಣೆಗೆ ಸರ್ವೋಚ್ಛ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ತಂದೆ (ರಹೀಮಸೇನ), ಮಗ (ಅಮೃತಸೇನ) ಇವರು ನುಡಿಸಿದ ಮಸೀತ್ ಖಾನಿ ಶೈಲಿ ಸಿತಾರವಾದನದಲ್ಲಿ ಅತ್ಯಂತ ಜನಪ್ರೀಯತೆ ಪಡೆದು ಇಂದು ಪ್ರಚಲಿತದಲ್ಲಿದೆ. ಅಮೃತಸೇನನು ತಂದೆಯಂತೆಯೇ ವೀಣಾ, ಧೃಪದ್ ಹಾಗೂ ಖ್ಯಾಲ್ ಗಾಯಕಿ ಅಂಗದೊಂದಿದೆ ನುಡಿಸಿ ಸಿತಾರವಾದ್ಯಕ್ಕೆ ವಿಶಿಷ್ಟ ಸ್ಥಾನ ತಂದುಕೊಟ್ಟಿದ್ದಾನೆ.

. ಜೈಪೂರ ಘರಾಣೆ:

ಜೈಪೂರ ಸಂಸ್ಥಾನದ ಪ್ರಸಿದ್ಧ ಸಿತಾರವಾದಕರು ಹುಟ್ಟುಹಾಕಿರುವ ಸಿತಾರವಾದನಕ್ಕೆ ಜೈಪೂರ ಘರಾಣೆ ಎಂದು ಕರೆಯಲಾಗುತ್ತದೆ. ಜೈಪೂರ ಘರಾಣೆ ಗಾಯನಕ್ಕೆ ಹೆಸರಾದಂತೆ ಸಿತಾರವಾದನಕ್ಕೂ ಹೆಸರು ಪಡೆದಿದೆ. ಜೈಪೂರ ಸಂಸ್ಥಾನ ಸಿತಾರ ವಾದಕರಿಗೆ ರಾಜಾಶ್ರಯ ನೀಡಿದ್ದಷ್ಟೇ ಅಲ್ಲದೆ ಸಿತಾರ ಘರಾಣೆಯ ಹುಟ್ಟಿಗೂ ಕಾರಣವಾಗಿದೆ. ಜೈಪೂರ ಸಂಸ್ಥಾನವು ಗಾಯನ ಘರಾಣೆಗೆ ನೀಡಿದಷ್ಟೇ ಮಹತ್ವವನ್ನು ಸಿತಾರ ಘರಾಣೆಗೂ ನೀಡಿರುವದು ಗಮನಾರ್ಹವಾಗಿದೆ. ಈ ಘರಾಣೆಯ ಸುಪ್ರಸಿದ್ದ ಸಿತಾರವಾದಕ ಉಸ್ತಾದ್ ರಹೀಮಸೇನನ ಮಕ್ಕಳಾದ ಅಮೃತಸೇನ, ನ್ಯಾಮತಸೇನ, ಲಾಲಸೇನ ಮತ್ತು ಒಬ್ಬ ಮಗಳು ಸಿತಾರವಾದನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ರಹೀಮಸೇನರ ಶಿಷ್ಯರಲ್ಲಿ ಜೈಪುರ ಘರಾಣೆಯ ಹುಸೇನಖಾನ್ ಶ್ರೇಷ್ಠ ಸಿತಾರವಾದಕರಾಗಿದ್ದಾರೆ. ಅವರು ಜೈಪುರ ಘರಾಣೆಗೆ ವಿಶೇಷ ಖ್ಯಾತಿ ತಂದುಕೊಟ್ಟಿದ್ದಾರೆ. ಜೈಪುರ ಘರಾಣೆಯ ಸಿತಾರವಾದಕರಲ್ಲಿ ಹೆಸರಾಂತ ಸಿತಾರ ವಾದಕ ಉಸ್ತಾದ್ ಬರ್ಕತುಲ್ಲಾಖಾರ ಹೆಸರು ವಿಶೇಷ ಉಲ್ಲೇಖನೀಯವಾಗಿದೆ. ಬರ್ಕತುಲ್ಲಾಖಾನರು ಅನೇಕ ವರ್ಷ ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ಸಂಗೀತಗಾರರಾಗಿ ಕಾರ್ಯಮಾಡಿ ಕರ್ನಾಟಕದಲ್ಲಿ ಸಿತಾರವಾದ್ಯ ನೆಲೆಗೊಳ್ಳುವಲ್ಲಿ ಕಾರಣರಾಗಿದ್ದಾರೆ.

. ಬಿಲಾಸಖಾ ಘರಾಣೆ:

ತಾನಸೇನನ ಮಗ ಬಿಲಾಸಖಾನ್ ಈತನ ಹೆಸರಿನಿಂದ ಈ ಘರಾಣೆಯನ್ನು ಗುರುತಿಸಲಾಗುತ್ತಿದೆ. ತಾನಸೇನ ಮಗನ ವಂಶಜ ಉಸ್ತಾದ್ ಛಜ್ಮುಖಾನ್ ಈತನ ಹೆಸರು ಈ ಘರಾಣೆಯ ಸಂಗೀತಗಾರರಲ್ಲಿ ವಿಶೇಷ ಉಲ್ಲೇಖನೀಯವಾಗಿದೆ. ಈತನ ಮಕ್ಕಳು ಹಾಗೂ ಶಿಷ್ಯಪರಂಪರೆಯಲ್ಲಿ ಸಿತಾರವಾದ್ಯಕ್ಕೆ ವಿಶೇಷ ಸ್ಥಾನ ಲಭಿಸಿದೆ. ಏಕೆಂದರೆ ಸಿತಾರದ ಪ್ರಸಿದ್ಧ ವಾದನ ಶೈಲಿಯಾಗಿರುವ ‘ಮಸೀತ್ ಖಾನಿಗತ್’ ಶೈಲಿಯ ಪ್ರವರ್ತಕ ಉಸ್ತಾದ್ ಮಸೀತ್ ಖಾ ಮತ್ತು ಅವನ ಮಗ ಬಹಾದ್ದೂರಖಾ ಖ್ಯಾತಿವೆತ್ತ ಸಿತಾರವಾದಕರಾಗಿದ್ದಾರೆ. ಈ ತಂದೆ – ಮಕ್ಕಳು ಬಿಲಾಸಖಾನ್ ಘರಾಣೆಯಲ್ಲಿ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ. ಗುಲಾಮಖಾರ ಪುತ್ರ ಛಜ್ಜುಖಾರ ಸಹೋದರರಾದ ಜ್ಞಾನಖಾನ್, ಜೀವನಖಾನ್ ಮತ್ತು ಮಕ್ಕಳಾದ ಜಾಫರಖಾನ್ ಪ್ಯಾರಖಾನ್, ಬಸತಖಾನ್ ಮತ್ತು ಒಬ್ಬ ಮಗಳು ಹೀಗೆ ಇವರೆಲ್ಲರೂ ಈ ಘರಾಣೆಗೆ ವ್ಯಾಪಕತೆ ನೀಡಿ ಪ್ರಚಾರಕ್ಕೆ ತಂದುದರ ಫಲವಾಗಿ ಸಿತಾರವಾದನದ ಘರಾಣೆಯಲ್ಲಿ ಈ ಘರಾಣೆಗೆ ವಿಶೇಷಸ್ಥಾನವಿದೆ. ಛಜ್ಜುಖಾರ ಈ ನಾಲ್ಕು ಮಕ್ಕಳು ಸಿತಾರವಾದನದ ಜೊತೆಗೆ ರಬಾಬ ಮತ್ತು ಸೂರಸಿಂಗಾರ ವಾದ್ಯದಲ್ಲೂ ವಿಶೇಷ ಪರಿಣಿತಿ ಪಡೆದಿದ್ದರು. ಈ ಘರಾಣೆಯ ಶಿಷ್ಯ ಪರಂಪರೆಯಲ್ಲಿ ಪನ್ನಾಲಾಲ ವಾಜಪೇಯಿ, ವೈದ್ಯ ಅರ್ಜುನದಾಸ, ರಾಮಸೇವಕ ಮಿಶ್ರ ಮತ್ತು ಪ್ಯಾರೆಖಾನ್ ಮುಂತಾದವರ ಹೆಸರು ಉಲ್ಲೇಖನೀಯವಾಗಿವೆ.

. ಇಟಾವಾ ಘರಾಣೆ:

ಸಿತಾರವಾದನ ಪದ್ಧತಿಯಲ್ಲಿ ಪರಿಷ್ಕರಣೆಮಾಡಿ, ವಾದ್ಯ ಸಂಗೀತ ಲೋಕದಲ್ಲಿ ಸಿತಾರಕ್ಕೆ ಉಚ್ಚ ಸ್ಥಾನ ನೀಡಿ, ಅದಕ್ಕೆ ಜನಪ್ರಿಯತೆ ಮತ್ತು ವಾದನೋಪಯೋಗಿ ಮಾಡಿದ ಸಿತಾರ ಘರಾಣೆಗಳಲ್ಲಿ ಇಟಾವಾ ಘರಾಣೆಗೆ ವಿಶೇಷ ಗೌರವಸ್ಥಾನವಿದೆ. ಈ ಘರಾಣೆಯ ಪ್ರಾರಂಭ ಇಮದಾದಖಾನರ ಕಾಲಾವಧಿ ಎಂದು ಹೇಳಲಾಗುತ್ತಿದೆ. ಇಮದಾದಖ ಇವರು ಇಟಾವಾ ನಗರದಲ್ಲಿ ಜನಿಸಿದ್ದರಿಂದ (ಜನನ ೧೯೪೯) ಅವರು ನುಡಿಸುವ ಸಿತಾರವಾದನ ಪದ್ಧತಿಗೆ ‘ಇಟಾವಾ ಘರಾಣೆ’ ಎಂಬ ಹೆಸರು ಬಂದಿದೆ. ವಿಖ್ಯಾತ ಸಿತಾರವಾದಕ ಉಸ್ತಾದ್ ಇಮದಾದಖಾ ಅವರು ಮನೇತ್ ಖಾನಿಗತ್ ಮತ್ತು ರಾಜಾಖಾನಿಗತ್ ಎರಡನ್ನು ಒಬ್ಬನೇ ಸಿತಾರವಾದಕ ನುಡಿಸಿ ಕಛೇರಿ ನೀಡುವ ಪದ್ಧತಿಯನ್ನು ಪ್ರಥಮವಾಗಿ ಹುಟ್ಟು ಹಾಕಿದ್ದರಿಂದ ಇಂದಿಗೂ ಸಹ ಸಂಗೀತಲೋಕದಲ್ಲಿ ಪ್ರತಿಯೊಬ್ಬ ಸಿತಾರ ಕಲಾವಿದ ತನ್ನ ಕಚೇರಿಯಲ್ಲಿ ಎರಡೂ ಗತ್‌ಗಳನ್ನು ನುಡಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಶ್ರೇಯಸ್ಸು ಉಮದಾದಖಾ ಅವರಿಗೆ ಮತ್ತು ತನ್ಮೂಲಕ ಇಟಾವಾ ಘರಾಣೆಗೆ ಸಲ್ಲುತ್ತದೆ. ೭೨ ವರ್ಷ ಬಾಳಿ ಇಟಾವಾ ಘರಾಣೆಗೆ ವಿಶೇಷ ಸ್ಥಾನ ಕಲ್ಪಿಸಿದ ಇಮದಾದಖಾ ಅವರು ಸಂಗೀತಲೋಕದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಮದಾದಖಾ ಅವರ ನಂತರ ಅವರ ಮಗ ಇನಾಯತಖಾ ತಂದೆ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆದು ಅದಕ್ಕೆ ತನ್ನದೇ ಆದ ವಿಶಿಷ್ಠ ವ್ಯಕ್ತಿತ್ವದಿಂದ ಇಟಾವಾ ಘರಾಣೆಗೆ ವಿಶೇಷ ಘನತೆ ತಂದುಕೊಟ್ಟಿದ್ದಾರೆ. ಉಸ್ತಾದ್ ಇನಾಯತ್ ಖಾ ಅವರು ಗತ್ ತೋಡಾ ಮತ್ತು ಝಾಲಾದಲ್ಲಿ ವಿಶೇಷ ಪರಿಣತಿ ಪಡೆದು ತಮ್ಮ ವಾದನದ ಮೂಲಕ ಇಟವಾ ಘರಾಣೆಗೆ ಇನ್ನಷ್ಟು ಮಹತ್ವ ತಂದಿದ್ದಾರೆ. ಇವರ ಶಿಷ್ಯರಲ್ಲಿ ಅಮಿಯಕಾಂತ ಭಟ್ಟಾಚಾರ್ಯ, ಕ್ಷೇಮೇಂದ್ರ ಮೋಹನ ಠಾಕೂರ, ಮಿಮಲಕಾಂತರಾಯ ಚೌಧರಿ, ಕಲ್ಯಾಣಿ ಮಲಿಕ ಮತ್ತು ಬಿಪಿನ ಚಂದ್ರದಾಸ ಉಲ್ಲೇಖನೀಯರಾಗಿದ್ದಾರೆ. ಇನಾಯತಖಾ ಅವರ ನಂತರ ಅವರ ಮಗ ವಿಖ್ಯಾತ ಸಿತಾರವಾದಕ ಉಸ್ತಾದ್ ವಿಲಾಯತ್ ಖಾ ವರ್ರ‍ಮಾನದ ಶ್ರೇಷ್ಠ ಸಿತಾರವಾದಕರೆನಿಸಿದ್ದಾರೆ. ಅವರು ತಮ್ಮ ಪಾಂಡಿತ್ಯದಿಂದ ಈ ಘರಾಣೆಗೆ ವಿಶೇಷ ಗಾಂಭೀರ್ಯ ತಂದುಕೊಟ್ಟಿದ್ದಾರೆ. ಅವರೊಬ್ಬ ಅತ್ಯುತ್ತಮ ಸಿತಾರ ಶಿಕ್ಷಕರಾಗಿದ್ದರು. ಅವರ ಶಿಷ್ಯರಲ್ಲಿ ಇಮರತ್ ಖಾ (ತಮ್ಮ) ರಯಿಸ್ ಖಾ, ಸುಜಾತ ಖಾ (ಮಗ), ಅರವಿಂದ ಫಾರೀಖ, ಕಲ್ಯಾಣಿರಾಯ, ಕಾಶಿನಾಥ ಮುಖರ್ಜಿ ಹಾಗೂ ಬೆಂಜಾಮಿನ್ ಗೋಸ್ವಾಮಿ ಮುಂತಾದವರು ಉಲ್ಲೇಖನೀಯರಾಗಿದ್ದಾರೆ.

. ಮೈಹರ ಘರಾಣೆ:

‘ಮೈಹರ ಘರಾಣೆ’ ಸಿತಾರ ಘರಾಣೆಗಳಲ್ಲಿ ವಿಶಿಷ್ಟ ಹಾಗೂ ಮಹತ್ತರ ಸ್ಥಾನ ಪಡೆದುಕೊಂಡಿದೆ. ಮೈಹರ ಸಂಸ್ಥಾನದಲ್ಲಿ ಆಸ್ಥಾನದ ಸಂಗೀತಗಾರರಾಗಿ ಸಂಗೀತ ಲೋಕದಲ್ಲಿ ಅದ್ವಿತೀಯ ಸ್ಥಾನ ಪಡೆದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರು ನುಡಿಸುವ ವಾದನ ಪದ್ಧತಿಗೆ ‘ಮೈಹರ ಘರಾಣೆ’ ತಂದು ಹೆಸರು ಬಂದಿದೆ. ಉಸ್ತಾದ್ ಅಲ್ಲಾವುದ್ದಿನ್ ಖಾನ್ ಅವರನ್ನು ಬಾಬಾ ಅಲ್ಲಾವುದ್ದೀನ್ ಖಾನ್ ಎಂದು ಕರೆಯಲಾಗುತ್ತದೆ. ಅಲ್ಲಾವುದ್ದೀನ್ ಖಾನ್ ಅವರು ಸಿತಾರ ಮೊದಲ್ಗೊಂಡು ರಬಾಬ್, ಸರೋದ್, ಇಸರಾಜ, ಸೊರಬಹಾರ ಮುಂತಾದ ವಾದ್ಯಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಅವರು ಏಳು ವಾದ್ಯಗಳನ್ನು ಅಷ್ಟೇ ಪ್ರಾನಿಣ್ಯತೆಯಿಂದ ನುಡಿಸುತ್ತಿದ್ದರು. ಅವರ ಸಂಗೀತ ಪ್ರತಿಭೆ ಗುರುತಿಸಿ ಮೈಹರದ (ಮೇಹರ) ಮಹಾರಾಜ ಅವರನ್ನು ತಮ್ಮ ಸಂಸ್ಥಾನಕ್ಕೆ ಆಹ್ವಾನಿಸಿ ಅವರಿಗೆ ಆಸ್ಥಾನ ಸಂಗೀತಗಾರ ಎಂಬ ಗೌರವ ನೀಡಿ ರಾಜಾಶ್ರಯ ಕೊಟ್ಟಿದ್ದರು. ಮೈಹರದಲ್ಲಿ ನೆಲೆಸಿದ ಅಲ್ಲಾವುದ್ದೀನ್ ಖಾನ್ ರ ಸಿತಾರವಾದನದ ಪದ್ಧತಿ ‘ಮೈಹರ ಘರಾಣೆ’ ಎಂದೇ ಹೆಸರು ಪಡೆಯಿತು.

ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರು ಮೈಹರದಲ್ಲಿ ತಮ್ಮ ಮನೆಯಲ್ಲಿ ಅನೇಕ ಶಿಷ್ಯರಿಗೆ ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ನೀಡಿ ಸಂಗೀತ ಲೋಕದಲ್ಲಿ ಅಜರಾಮರವಾಗಿ ನಿಲ್ಲುವಂತಹ ಹೆಸರಾಂತ ಸಂಗೀತಗಾರರನ್ನು ತಯಾರಿಸಿ ಅವರ ಮೂಲಕ ಮೈಹರ ಘರಾಣೆಯನ್ನು ಸಿತಾರದ ಘರಾಣೆಗಳಲ್ಲಿ ಎದ್ದುಕಾಣುವಂತೆ ಮಾಡಿದ್ದಾರೆ.

ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಶಿಷ್ಯರು ಇಂದು ದೇಶ ವಿದೇಶದಲ್ಲಿ ಅಪಾರ ಹೆಸರು ಪಡೆದಿದ್ದಾರೆ. ಅಂಥವರಲ್ಲಿ ಶ್ರೀಮತಿ ಅನ್ನಪೂರ್ಣಾದೇವಿ (ಮಗಳು) ಉಸ್ತಾದ್ ಅಲಿಅಕ್ಬರ್ ಖಾ (ಮಗ), ಪಂ. ರವಿಶಂಕರ (ಅಳಿಯ), ಪಂ. ನಿಖಿಲ ಬ್ಯಾನರ್ಜಿ, ದಾಮೋದರಲಾಲ ಕಾಬರಾ, ಶ್ರೀಮತಿ ಶರನ್ ರಾನಿ, ಪಂ. ಕಾರ್ತಿಕಕುಮಾರ, ಪಂ. ದೀಪಕ ಚೌಧರಿ, ಪಂ. ಇಂದ್ರನೀಲ ಭಟ್ಟಾಚಾರ್ಯ, ಜಯಾಬಸು ಮತ್ತು ಪಂ. ಉಮಾಶಂಕರ ಮಿಶ್ರ ಮುಂತಾದವರು ಉಲ್ಲೇಖನೀಯರಾಗಿದ್ದಾರೆ. ಈ ಎಲ್ಲ ವಿಖ್ಯಾತ ಕಲಾವಿದರು ಮೈಹರ ಘರಾಣೆಯನ್ನು ಉಳಿಸಿ, ಬೆಳೆಸಿ ಅದಕ್ಕೆ ಮತ್ತಷ್ಟು ಘನತೆ ತಂದುಕೊಟ್ಟಿದ್ದಾರೆ. ಅಷ್ಟೇ ಅಲ್ಲ ತಾವೇ ಒಂದೊಂದು ಘರಾಣೆಯನ್ನು ಹುಟ್ಟು ಹಾಕುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.

. ಬಾಬು ಖಾನ್ (ಇಂದೋರ್ ಘರಾಣೆ)

ಬಾಬು ಖಾನ್ ಅವರ ತಂದೆ ಹಸನ ಖಾನ್ ಅವರು ನರವರ ಸಂಸ್ಥಾನದ ಪ್ರಸಿದ್ಧ ಬೀನ್ ಕಾರರಾಗಿದ್ದರು. ತಂದೆಯಂತೆಯೇ ಬಾಬುಖಾನ್ ಅವರು ಬೀನ್ ವಾದನದ ಜೊತೆಗೆ ಸಿತಾರ, ರಬಾಬ್ ಮತ್ತು ಸರೋದ್ ವಾದನದಲ್ಲಿ ಸಿದ್ಧಹಸ್ತರಾಗಿದ್ದರು. ಬಾಬು ಖಾನ್ ಅವರು ಇಂದೋರದಲ್ಲಿ ನೆಲೆಸಿದ್ದರಿಂದ ಅವರು ನುಡಿಸುವ ಸಿತಾರವಾದನ ಪದ್ಧತಿಗೆ ಬಾಬುಖಾನ್ (ಇಂದೋರ್) ಘರಾಣೆ ಎಂಬ ಹೆಸರು ಬಂದಿದೆ. ಬಾಬು ಖಾನ್ ಅವರ ಶಿಷ್ಯರಲ್ಲಿ ವರ್ತಮಾನಕಾಲದ ವಿಖ್ಯಾತ ಸಿತಾರವಾದಕ ಮುಂಬೈಯ ಉಸ್ತಾದ್ ಅಬ್ದುಲ್ ಹಲೀಮ್ ಜಾಫರಖಾನ್ ಅಗ್ರಗಣ್ಯರಾಗಿದ್ದಾರೆ.

. ದರಭಾಂಗ ಘರಾಣೆ

ಹೆಸರಾಂತ ಸಿತಾರವಾದಕ ಪಂ. ರಾಜುಕುಮಾರ ಪಾಠಕ ಅವರು ನುಡಿಸುವ ಸಿತಾರವಾದನ ಪದ್ಧತಿಗೆ ದರಬಾಂಗ ಘರಾಣೆ ಎಂಬ ಹೆಸರು ಬಂದಿದೆ. ರಾಜಕುಮಾರ ಪಾಠಕ ಅವರ ಮಗ ಅಪೂಧ ಪಾಠಕ ಹಾಗೂ ಅವರ ಮೂರು ಜನ ಮಕ್ಕಳಾದ ರಾಮೇಶ್ವರ ಪಾಠಕ, ರಾಮಗೋವಿಂದ ಪಾಠಕ ಮತ್ತು ಗಣೇಶ ಪಾಠಕ ಇವರು ಈ ಘರಾಣೆಯ ಪರಂಪರೆ ಉಳಿಸಿ ಅದನ್ನು ಲೋಕಪ್ರಿಯಗೊಳಿಸುತ್ತಿದ್ದಾರೆ. ರಾಮೇಶ್ವರ ಪಾಠಕ ಅವರು ಈ ಘರಾಣೆಯಲ್ಲಿ ವಿಶೇಷ ಹೆಸರು ಸಂಪಾದಿಸಿದ್ದಾರೆ. ರಾಮೇಶ್ವರ ಪಾಠಕ ಅವರ ಮಗ ಬಲರಾಮ ಪಾಠಕ ಇಂದು ಅಪಾರ ಹೆಸರು ಗಳಿಸಿದ್ದಾರೆ.

. ಲಖನೌ ಘರಾಣೆ

ಸಿತಾರದ ಘರಾಣೆಯಲ್ಲಿ ಲಖನೌ ಘರಾಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಘರಾಣೆಯಲ್ಲಿ ಪೂರ್ವಿಬಾಜ್ ಶೈಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಈ ಘರಾಣೆಯಲ್ಲಿ ಅನೇಕ ಹೆಸರಾಂತ ಸಿತಾರವಾದಕರಾಗಿದ್ದಾರೆ. ಅಂತವರಲ್ಲಿ ಮಹಮ್ಮದ ಹುಸೇನ ಖಾನ್ ರಜಾ ಹುಸೇನಖಾನ್ ರಹಮತ ಹುಸೇನ ಖಾನ್, ಬಶರತ ಹುಸೇನ ಖಾನ್ ತಜಮ್ಮುಲಖಾನ್ ನವಾಬ ಹಶಮತ ಜಂಗ, ಕುತುಬ ಅಲಿ, ನವಾಬ ಅಲಿ, ನಕಿಖಾ, ಅಬ್ದುಲಗನಿಖಾನ್, ಯೂಸುಫ್ ಅಲಿಖಾನ್, ಇಸ್ಮಾಯಿಲ್ ಖಾನ್, ಇಲಿಯಾಸ ಖಾನ್, ಪನ್ನಾಲಾಲ ಬಾಜಪೇಯಿ, ಗೋಸ್ವಾಮಿ ಪನ್ನಾಲಾಲ, ವೈದ್ಯ ಅರ್ಜುನದಾಸಖನ್ನಾ ಮುಂತಾದವರು ನಾಮಾಂಕಿತರಾಗಿದ್ದಾರೆ.

. ಕಿರಾಣಾ ಘರಾಣೆ

ಖ್ಯಾಲ ಗಾಯನದಲ್ಲಿ ಕಿರಾಣಾ ಘರಾಣೆ ಪ್ರಸಿದ್ಧ ಘರಾಣೆಯಾಗಿರುವಂತೆ ಸಿತಾರವಾದನದಲ್ಲಿ ಕಿರಾಣಾ ಘರಾಣೆ ಪ್ರಚಾರದಲ್ಲಿ ಬಂದಿದೆ. ಖ್ಯಾಲಗಾಯನದ ಕಿರಾಣಾ ಘರಾಣೆಯ ಕೆಲವು ಜನ ಸಂಗೀತಗಾರರು ವಾದಯ ಸಂಗೀತದಲ್ಲಿ ವಿಶೇಷ ಪರಿಣತಿ ಪಡೆದು ಸಿತಾರವಾದನದಲ್ಲಿ ಕಿರಾಣಾ ಘರಾಣೆ ಸ್ಥಾಪಿಸುವಷ್ಟರ ಮಟ್ಟಿಗೆ ಅವರು ಪ್ರಸಿದ್ಧಿ ಪಡೆದು ‘ಕಿರಾಣಾ ಘರಾಣೆ’ ಸ್ಥಾಪನೆಗೆ ಕಾರಣರಾಗಿದ್ದಾರೆ. ಇವರ ನಂತರ ಬಂದ ಗುಲಾಮ ಮಹಮ್ಮದ ಖಾನ್ ಮತ್ತು ಸಜ್ಜಾದ ಮಹಮ್ಮದ ಖಾನ್ ಈ ತಂದೆ ಮಗರ ಜೋಡಿ ಸೊರಬಹಾರ ಮತ್ತು ಸಿತಾರವಾದನದಲ್ಲಿ ಈ ಘರಾಣೆಗೆ ವಿಶೇಷ ಘನತೆ ತಂದುಕೊಟ್ಟಿದ್ದಾರೆ. ಅವರ ಶಿಷ್ಯರಲ್ಲಿ ಯೋಗೇಶ ಚಕ್ರವರ್ತಿ, ಭೋಲಾನಾಥ ಚಕ್ರವರ್ತಿ, ಶಂಭು ಗೋಸ್ವಾಮಿ, ಅಶೋಕ ಗೋಸ್ವಾಮಿ, ಪನ್ನಾಲಾಲ ಭಟ್ಟಾಚಾರ್ಯ ಮುಂತಾದವರು ಈ ಘರಾಣೆಯ ಪರಂಪರೆಯಲ್ಲಿ ಬೆಳೆದುಬಂದ ವಿಖ್ಯಾತ ಸಿತಾರವಾದಕರೆನಿಸಿದ್ದಾರೆ.

೧೦. ಮಥುರಾ ಘರಾಣೆ:

ಸಿತಾರವಾದನದ ಘರಾಣೆಗಳಲ್ಲಿ ‘ಮಥುರಾ ಘರಾಣೆ’ ವಿಶೇಷ ಉಲ್ಲೇಕನೀಯವಾಗಿದೆ. ಸಿತಾರವಾದನಕ್ಕೆ ಈ ಘರಾಣೆಯ ಸಂಗೀತಗಾರರ ಕೊಡುಗೆ ಅಪಾರವಾಗಿದೆ. ಈ ಘರಾಣೆಯ ಹೆಸರಾಂತ ಸಿತಾರವಾದಕರಲ್ಲಿ ಬುಲಾಕಿ ಖಾನ್, ಮೀರಬಕ್ಷ ಖಾನ್, ಇವರ ಮಕ್ಕಳಾದ ನಕೀರ ಖಾನ್, ಕಾಲೇ ಖಾನ್ ಮೊದಲಾದವರು ಉಲ್ಲೇಖನೀಯರಾಗಿದ್ದಾರೆ, ಇವರಲ್ಲದೆ ಫೈಯಾಜ್ ಖಾನ್ (ಗುಲಾಮ ಹಸನಖಾನ್ ರ ಪುತ್ರ) ಮತ್ತು ಮುನ್ನಾ ಖಾನ್ ಈ ಘರಾಣೆಯ ಪ್ರಸಿದ್ಧ ಸಿತಾರವಾದಕರಾಗಿದ್ದಾರೆ.

ಹೀಗೆ ಹಿಂದುಸ್ತಾನಿ ಸಂಗೀತದಲ್ಲಿ ಇತರ ಘರಾಣೆಗಳಂತೆ, ಸಿತಾರವಾದನ ಘರಾಣೆಯ ಪ್ರಸಿದ್ಧಿ ಪಡೆದು ಇಂದು ಜನಪ್ರಿಯತೆಯೊಂದಿಗೆ ಲೋಕ ಮಾನ್ಯತೆಗಳಿಸಿದೆ. ಸಿತಾರದ ಘರಾಣೆದಾರ ಪರಂಪರೆಯನ್ನು ಮೈಗೂಡಿಸಿಕೊಂಡು ತಮ್ಮ ವಿಶೇಷ ಪರಿಶ್ರಮದಿಂದ ಸಿತಾರವಾದಕರು ಇಂದು ತಮ್ಮ ಹೆಸರಿನಲ್ಲಿಯೇ ಒಂದೊಂದು ಘರಾಣೆ ಸ್ಥಾಪಿಸುವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾರೆ. ಪಂ. ರವಿಶಂಕರ, ಉಸ್ತಾದ್ ವಿಲಾಯತ ಖಾನ್, ಉಸ್ತಾದ್ ಅಲಿ ಅಕ್ಬರ ಖಾನ್ ಹಾಗೂ ಶ್ರೀಮತಿ ಅನ್ನಪೂರ್ಣಾದೇವಿ ವರ್ತಮಾನಕಾಲದಲ್ಲಿ ಅಪಾರ ಸಿದ್ಧಿ ಪ್ರಸಿದ್ಧಿ ಪಡೆದು ತಾವೇ ಒಂದು ಘರಾಣೆಯಾಗುವಷ್ಟರ ಮಟ್ಟಿಗೆ ಇದು ಬೆಳೆದು ನಿಂತಿದ್ದಾರೆ. ಮುಂದೊಂದು ದಿನ ಸಿತಾರದಲ್ಲಿ ರವಿಶಂಕರ ಘರಾಣೆ, ವಿಲಾಯತ ಖಾನ್ ಘರಾಣೆ, ಅಲಿಅಕ್ಬರ ಖಾನ್ ಘರಾಣೆ ಮತ್ತು ಅನ್ನಪೂರ್ಣಾದೇವಿ ಘರಾಣೆ ಅಸ್ತಿತ್ವಕ್ಕೆ ಬಂದರೆ ಆಶ್ಚರ್ಯವಿಲ್ಲ.