ಸುವ್ವಿಯೋ, ಚನ್ನಬಸವಯ್ಯ, ಸುವ್ವಿ || ಪ ||
ಹತ್ತೆ ವರುಸದ ಚಿಕ್ಕಪ್ರಾಯದ ಮಗನು
ತಾಯಿಕುಟ್ಟೇನ ಮಾತಾಡುತಾನೆ
“ಕಾಳಿಂಗನ ಹಟ್ಟಳು ಬೆಟ್ಟಕೆ
ಮಿರುಗನ ಬೇಟೆ ಹೋಗುತೀನಿ
ನೀನು ಮುಂಜಾನೆ ಬುತ್ತಿ ಕಟ್ಟೆ ತಾಯಿ.’
“ಹತ್ತು ವರುಸದ ಚಿಕ್ಕ ಪ್ರಾಯದ ಮಗನೆ
ನೀ ಮಿರುಗನ ಬೇಟೆ ಹೋಗಬೇಕ?’
“ಹತ್ತು ವರುಸದ ಕನ್ನೆ ಪ್ರಾಯದ ಮಗ
ನಾನು ಮಿರುಗನ ಬೇಟೆ ಹೋಗುತೀನಿ
ನೀನು ಹಾಲು ಅನ್ನದ ಬುತ್ತಿ ಕಟ್ಟೆ ತಾಯಿ.’

ದಾರಿಲ್ಲಿ ಹುಟ್ಟೋದು ದಾರಿಲ್ಲಿ ಬೆಳೆಯೋದು
ದಾರಿಲ್ಲಿ ಆರತಿ ಬೆಳಗೊ ಮುಳ್ಳು ಹಲಸಿನಕಾಯಿ
ಅದರ ತೊಟ್ಟು ತೆಗೆದು, ಅದರ ಮುಳ್ಳು ತೆಗೆದು
ಅವಳು ಮುಂಜಾಣೆ ಅಡಿಗೆ ಮಾಡಿದಳು;
ಅವಳು ಮಾಡ್ಯಾಳೆ, ತಾಯಮ್ಮ;
ಅವಳು ಹಾಯವಾಗಿ ಬುತ್ತಿ ಕಟ್ಟಾಳೆ
ತ್ವಾಟದಲ್ಲಿ ಹುಟ್ಟೋದು ನೀಟಾಗಿ ಬೆಳಿಯೋದು
ತ್ವಾಟದಲ್ಲಿ ಆರತಿ ಬೆಳಗೋದು
ತ್ವಾಟದಲ್ಲಿ ಆರತಿ ಬೆಳಗೋ ಬಾಳೆಯಕಾಯಿ
ತೊಟ್ಟು ತಗದು ಪಚ್ಚಿಡಿ ಕೂದು

ಅವಳು ಹಾಲು ಅನ್ನದ ಅಡಿಗೆ ಮಾಡ್ಯಾಳೊ
ತಾಯಮ್ಮ ಹಾಯವಾಗಿ ಬುತ್ತಿ ಕಟ್ಯಾಳೊ
ತಾಯಮ್ಮ ಕಾಳಿಂಗಗೆ ನೀರ ಕೊಟ್ಟಾಳೆ
ಮಕಮಜ್ಜನ ಮಾಡ್ಯಾನೆ, ಅರಮನೆಗೆ ಹೋದಾನೆ
ನಾಮದ ಪೆಟ್ಟಿಗೆ ತಗದಾನೆ, ನಾರಯಣನ ನೆನದಾನೆ
ನಾಮವ ಧರಿಸ್ಯಾನೆ, ಈಶ್ವರನ ನೆನದಾನೆ
ವಿಭೂತಿ ಧರಿಸ್ಯಾನೆ, ಈಶ್ವರನ ನೆನದಾನೆ
ತಾಯಮ್ಮ ಹೋದಾಳೆ ಮಂತ್ತಿ ಪರದಾನಿ ಕರಿಸ್ಯಾಳೆ
ಮಂತ್ರಿ ಪರದಾನಿ ಕರೆದೇನಾ ಹೇಳ್ಯಾಳೆ
“ನನ್ನ ಹತ್ತು ವರುಸದ ಚಿಕ್ಕ ಪ್ರಾಯದ ಕಂದ
ಅವನು ಮಿರುಗನ ಬೇಟೆ ಆಡುವಾಗ
ಪರದಾನಿ, ಅವನ ಬಿಟ್ಟೊಂದು ಗಳಿಗೆ ಇರಬೇಡಿ.’

ಬಿಲ್ಲು ಬಾಣವ ಬೆನ್ನಿಗೆ ಕಟ್ಟಿಕೊಂಡ
ಮಂತ್ರಿ ಪರದಾನಿ ಕರಕೊಂಡ, ಕಾಳಿಂಗ
ತಾಯಿ ಕೊಟ್ಟೀಳೇವ ಈಸಿಕೊಂಡ, ಕಾಳಿಂಗ
ಬಗ್ಗಿ ಎರಡು ಪಾದ ಹಿಡಕೊಂಡ, ಕಾಳಿಂಗ
ಹಿಡಕೊಂಡೇನಂದನೆ : ತಾಯಿ ನಿನ ಪಾದ ಗತಿಯೆಂದ
ಹೋಗುವಾಗ ದುಃಕ ಎರಗೀತು ಹಡದವ್ವಗೆ
ದುಃಕ ಎರಗಿದ್ದ ನೋಡ್ಯಾನೇ ಕಾಳಿಂಗ
ಮಲ್ಲಿಗೆ ವನಕೆ ಹೋದಾನೆ ಕಾಳಿಂಗ
ಮಲ್ಲಿಗೆ ವನಕೆ ಹೋಗಿ ಮಲ್ಲಿಗೆ ಗಿಡವಾ ತಂದು
ಮನೆಯ ಹಿಂದೆ ಹಾಕ್ಯಾನೆ ಕಾಳಿಂಗ
“ಈ ಮಲ್ಲಿಗೆ ಗಿಡ ಚಿಗುತರೆ
ಮಲ್ಲಿಗೆ ಗಿಡ ಚಿಗುತು ಪಲ್ಲೈಸಿದರೆ
ನನ್ನ ಮಗ ಚನ್ನಾಗಿ ಅವನೆಂದು ತಿಳಿಯವ್ವ’

ಸುವ್ವಿಯೋ ಚನ್ನಬಸವಯ್ಯ ಸುವ್ವಿ
ಬಿಲ್ಲು ಬಾಣವ ಅವನು ಬೆನ್ನಿಗೆ ಕಟ್ಟುಕೊಂಡ
ಅವನು ಹಟ್ಟಳು ಬೆಟ್ಟಕೆ ಹೋದನು ಕಾಳಿಂಗ
ಹಟ್ಟಳು ಬೆಟ್ಟದಲಿ ಚೆದರಿಕೊಂಡರು ಮಂತ್ರೀರು
ಮನಗಿದ ಮಿರುಗ ಎದ್ದುನಿಂತೊ
ಸಣ್ಣ ಸಣ್ಣ ಮಿರುಗ ಎದ್ದುನಿಂತೊ
ಕಾಳಿಂಗ ಅವನೊಡನೆ ಬಾಣದ ತುದಿಯಲ್ಲಿ
ಕಾಳಿಂಗ ಅವರು ಮಂತ್ರಿ ಪರದಾನಿ ಹತ್ತಿರಕೆ ಕರೆದಾನೆ
“ಮಂತ್ರಿ ಪರದಾನಿ ನೀನಿಲ್ಲಿ ಬಾರೊ
ಹೊಡಿದಿರೊ ಮಿರುಗನ ಊರಿಗೆ ಕಳಿಸೋನು’

ಅವರ ತಂದೆ ಕತ್ತಲೆರಾಯ ಹಾಲು ಅನ್ನ ಉಂಡು
ಸಣ್ಣ ಪಟ್ಟೆಮಂಚದ ಮ್ಯಾಲೆ ವೀಳ್ಯೇನಾದರೆ ಮೆಲುವಾಗ
ಪರದಾನಿ ಸತ್ತ ಮಿರುಗನ ಹೂತುಕೊಂಡು ಬಂದಾನೆ
ತಂದೆ ಇದಿರಿಗೆ ಮಡಿಗ್ಯಾನೆ. ಕತ್ತಲೆರಾಯ
“ಎಂತೆಂತ ಮಿರುಗ ಹೊಡದನೊ, ಪರದಾನಿ
ಇದು ಎಷ್ಟೋ ಇದರ ಮರಿ ಎಷ್ಟೋ, ಪರದಾನಿ
ಈ ಶಾಪ ಎಲ್ಲಿ ಕಳಿಯನೋ, ಪರದಾನಿ.’
ಆ ಮಾತ ತಗೊಂಡು ಹತ್ತೆ ವರುಸದ

ಚಿಕ್ಕ ಪ್ರಾಯದ ಮಗ ಪರದಾನಗೇನಂತ ಹೇಳುತಾನೆ
“ಇಂತಿಂತ ಮಿರುಗ ಹೊಡದೊ
ಇದೆಷ್ಟೊ ಇದರ ಮರಿಯಷ್ಟೊ, ಪರದಾನಿ?
ಈ ಪಾಪ ನಾವೆಲ್ಲಿ ಕಳಿಯಾನೊ, ಪರದಾನಿ?
ಅಡವಿ ವಳಗೆ ಈರಣ್ಣನ ಗುಡಿವುಂಟು
ಈರಣ್ಣನ ಗುಡಿಗೆ ಹೋಗನಾ ಪರದಾನಿ
ಈರಣ್ಣನ ಪೂಜೆ ಮಡನಾ

ಈರಣ್ಣನ ಪೂಜೆ ಮಾಡಿದರೆ ಪಾಪ ಪರಿಹಾರ
ಪರದಾನಿ ಕಾಳಿಂಗನು ಮಾತಾಡಿಕೊಂಡು
ಅರಣ್ಯ ಅಡವೀಲಿ ಹೋಗುತಾರೆ
ಅರಣ್ಯ ಅಡವೀಲಿ ಹೋಗುವಾಗ ಕಾಳಿಂಗ
ಕಾಡಕ್ಕಿ ಮಟ್ಟೆ ಇಕ್ಯವೆ
ಕಾಡಕ್ಕಿ ಮಟ್ಟೆ ಇಕ್ಕಿದ ಕಾಲದಲ್ಲಿ
ಸರಪ ಹೋಗಿ ಮಟ್ಟೆ ನುಂಗತದೆ
ಕಾಳಿಂಗ ನೋಡಿದ ಸರಪನ
“ಅಲ್ಲಿ ನೋಡೊ ಪರದಾನಿ, ಅವಲಕ್ಷಣವ’
ಅಂದನು ಅವನು ಹಿಂದಿರುಗಿ ಬರುತಾನೆ
ಹಿಂದಿರುಗಿ ಬರುವ ಕಾಲದಲ್ಲಿ
ಮನಗಿದ್ದ ಹುಲಿ ರಕ್ಕುಲಿಸಿ ಎದ್ದತ್ತೋ
ಕಾಳಿಂಗರಾಯ ಭೂಮಿಗೆ ಬಿದ್ದನೊ ಅಡಿಯಾಗಿ
ನಿಂತಿದ್ದ  ಪರದಾನಿ ಹಚ್ಚಡವ ಮರೆಮಾಡಿ
ಸತ್ತಿದ್ದ ಶವವ ಹೊತ್ತುಕೊಂಡ ಪರದಾನಿ
ಬಂದನು ಊರಿಗೆ ಪರದಾನಿ
ಅವರ ತಂದೆ ಕತ್ತಲೆರಾಯ ಗೋಳು ಗೋಳೊ
ಎಲ್ಲರು ಗೋಳು ಗೋಳಂದರು
ಕತ್ತಲೆರಾಯ ಏನಂದು ಹೇಳುತಾನೆ
“ಸಿದ್ದರಾಳಿನಲ್ಲಿ ಸುಡು’ ಹೋಗಿರೊ ವರದಾನಿ
ಸತ್ತ ಶವವ ಎಷ್ಟೊತ್ತು ಮಡಗೋದು?
ಸಿದ್ದರಾಳಿನಲ್ಲಿ ಗಂಧದ ಸೌದೇಲಿ
ಸುಡುಹೋಗಿರೋ ಪರದಾನಿ’ ಅನ್ನೊವತ್ತಿಗೆ
ಹೆತ್ತವ್ವ ಏನು ಮಾತ ಹೇಳುತಾಳೆ
“ಹೆತ್ತ ಕಳ್ಳು ನನಗೆ ತಡೆಯದು ಪರದಾನಿ
ಗೊಂಬೆಮಂಟಪಕೆ ಹೊತ್ತುಕೊಳ್ಳೊ ಪರದಾನಿ
ನನ್ನ ಸತ್ತು ಮಗನ ಮದುವೆ ಮಾಡಬೇಕು, ಪರದಾನಿ
ಗೊಂಬೆ ಮಂಟಪಕೆ ಹೊತ್ತುಕೊಂಡು ಹೋದರು ಸುವ್ವಿ
ಸುವ್ವಿ ದೇವರ ನೆನದೇವು ಸುವ್ವಿ
ನಂಜನಗೂಡು ನಂಜುಂಡೇಶ್ವರನ ನೆನದೇವು ಸುವ್ವಿ !

ಗೊಂಬೆ ಮಂಟಪಕೆ ಮಡಗ್ಯಾರೆ
ತಾಯಮ್ಮ ಪರದಾನಿ ಕರದು,
ಹತ್ತು ಸಾವಿರ ಮೇಲೆ ಒಂದು ಸಾವಿರ ಕೊಡುತೀನಿ
ಮೇಲೆ ವಜುರದ ಪದಕವ ಕೊಡುತೀನಿ
ನನ್ನ ಮಗ ಸತ್ತೊನಿಗೆ ಹೆಣ್ಣು ತಾರೋಗೊ
ಹತ್ತೆ ಸಾವಿರವ ಕಟ್ಟಿಕೊಂಡ, ಪರದಾನಿ
ಹೆಣ್ಣ ತರಲೋದ ಪರದಾನಿ
ಬೀದಿ ಬೀದಿಲಿ ಹೋದ ಕೇರಿ ಕೇರಿಲಿ ಹೋದ
ಏನಂದು ಅವರು ಸಾರುತಾನೆ :
“ಸತ್ತೋನಿಗೆ ಹೆಣ್ಣ ಕೊಡಿರಮ್ಮ’
ಹೆಣ್ಣು ಕೊಡಿ ಎಂದು ಸಾರಿಕೊಂಡೋಗುವಾಗ
ಎಲ್ಲರೂ ನಗುಪಾಟ್ಟು ಮಾಡಿ
“ಸತ್ತೋನಿಗೆ ಹೆಣ್ಣು ಕೊಡುವುದುಂಟೇನೊ, ಪರದಾನಿ !’
ಪರದಾನಿ, ಕೇರಿ ಕೇರಿಲ್ಲಿ ಸಾಕಿಕೊಂಡೋಗುವಾಗ
ಆ ಕೇರಿಲ್ಲಿ ಒಬ್ಬ ಬಡ ಬ್ರಾಹ್ಮಣ
ತಾಮ್ರದ ಪಾತ್ರೆ ಹಿಡಕೊಂಡು
ಕೇರಿ ಕೇರಿಲ್ಲಿ ಬಿಕ್ಸವ ಮಾಡುವಾಗ
“ಏನಯ್ಯ ಪರದಾನಿ ಸಾರುವುದು?’ ಎಂದು
ನಿಂತುಕೊಂಡು ಕೇಳ್ಯಾನೆ ಆ ಬಡಬ್ರಾಹ್ಮಣ
ಪರದಾನಿ, “ಹತ್ತು ಸಾವಿರ ಕೊಡುತೀನಿ
ಮೇಲೊಂದು ಸಾವಿರ ಕೊಡುತೀನಿ
ಸಾವಿರದ ಮೇಲೆ ರುಲಿ ಪದಕವ ಕೊಡುತೀನಿ
ಸತ್ತೋನಿಗೆಣ್ಣ ಕೊಡಿ’ ಎಂದ
“ಆದರಾಯಿತು ಬಾರಯ್ಯ’ ಎಂದು
ಬಸವಣ್ಣನ ಗುಡಿಗೆ ಹೋದಾರೆ ಇಬ್ಬರು
ಚ್ಯಾಪೆಯ ಹಚ್ಚಡವ ಹಾಸ್ಯಾನೆ ಬ್ರಾಹ್ಮಣ
ಪರದಾನಿ ಹತ್ತು ಸಾವಿರವ ಸುರದಾನೊ
ಹತ್ತು ಸಾವಿರದ ಮೇಲೆ ಒಂದೆ ಸಾವಿರವ
ಒಂದು ಸಾವಿರದ ಮೇಲೆ ರುಲಿ ಪದಕವ ಕೊಟ್ಟನು
ಎಲ್ಲಾವ ಬ್ರಾಹ್ಮಣ ಕಟ್ಟಿಕೊಂಡು

ಮೂಟೆಯನೊತ್ತು ಹೋದನು ತನ್ನರಮನೆಗೆ
ಗಂಟ ಹೊತ್ತುಕೊಂಡು ಬಂದದ್ದು
ಬ್ರಾಹ್ಮಣಗಿತ್ತಿ ನೋಡುತಾಳೆ :
“ಯಾರ ಮನೆ ನುಗ್ಗಿದಿರಿ? ಯಾರ ಮನೆ ಕಳ್ಳತನ ಮಾಡಿದಿರಿ?’
“ಯಾರ ಮನೆ ನುಗ್ಗಲಿಲ್ಲ, ಯಾರ ಮನೆ ಕಳ್ಳತನ ಮಾಡಲಿಲ್ಲ
ಚಿಕ್ಕೋಳು ಚನ್ನವ್ವನೀ ಕಟವಿನ
ದೆಸೆಯಿಂದ ನನ್ನ ಸಾಲ ಸೋಲೆಲ್ಲ ಹರಿದೋದೊ !’
ಹಣವಿನ ಗಂಟ ಹಟ್ಟಿಗೆ ಎಸೆದಳು :
“ಸತ್ತೋನಿಗೆ ಹೆಣ್ಣ ಕೊಡುಲಾರೆ’

ಹೋಗಿ ಮೂರು ಗುದ್ದ ಹೊಡೆದನು, ಬ್ರಾಹ್ಮಣ.
ಹೋಗಿ ಮೂರು ಗುದ್ದ ಹೊಡಿಯೋವತ್ತಿಗೆ
ಚಿಕ್ಕೋಳು ಚನ್ನಮ್ಮ ಓಡೋಡಿ ಬಂದಳು
“ನಮ್ಮವ್ವನ ನೀನೇಕೆ ಹಡೊದೀ?
ನನ್ನಪ್ಪ ನಿನ್ನ ಸಾಲಸೋಲವ ತೀರಿಸಿಕೊಳ್ಳಿ.
ತುಪ್ಪ ಅನ್ನವ ಸುಖವಾಗಿ ಉಣ್ಣಪ್ಪ
ನನ್ನವ್ವನ್ಯಾಕೆ ಹೊಡೆದೀಯೊ ನನ್ನಪ್ಪ?
ತುಂಬಿದೇರಿಯ ಮ್ಯಾಲೆ ಮಂಡೆಯ ವದರಿದ್ದೆ
ನೀರಿಗೆ ತಂಬುಲವ ಉಗದಿದ್ದೆ
ನೀರಿಗೆ ತಂಬುಲವ ಉಗದಿದ್ದ ಕಾರಣ
ಸತ್ತೋನಿಗೆ ನಾನು ಮದುವೆ ಆಗಬೇಕು’
ಹಣವ ಕೊಟ್ಟಿದ್ದ ಪರದಾನಿ ಬಂದು
“ಎಷ್ಟೊತ್ತು ಬ್ರಾಹ್ಮಣ ತಡಮಾಡೋದು?’
ಆ ಮಾತ ಕೇಳಿ ಅವರ ತಾಯಿ ಆಗ
ಆರು ಸೇರು ಅಕ್ಕಿ ಹಾಕಿದಳು
ಆರು ವರದ ಗಾಲಿಗೆ ಹರಿವಾಣದಲ್ಲಿ
ಅವರಣ್ಣ ತಂಗೇರು ಉಣಕೂತು ಏನ ಹೇಳುತಾರೆ;
“ಅಕ್ಕ ತಂಗೇರು ಋಣ ಹರಕೊಳ್ಳಿ’
ಎಂಟೆ ವರದ ಗಟ್ಟಿ ಹರಿವಾಣದಲ್ಲಿ
ಅವರಕ್ಕ ತಂಗೇರು ಉಣಕೂತು ಏನಂದಾರೆ

“ನಿನ್ನ ಎದೆಯ ಹಾಲಿನ ಋಣವ ಹರಕೊಳ್ಳೆ’
ಊಟ ಮಾಡಾಯಿತು, ಸೀರೆ ಉಡಿಸಾಯಿತು
ಬಳೆ ಬಂಗಾರ ತೊಡಿಸ್ಯಾರೊ ಚನ್ನವ್ವಗೆ
ಮರುಗ ಮಲ್ಲಿಗೆ ಮಡಿಸ್ಯಾರೊ ಚನ್ನವ್ವಗೆ
ಮಡುಲಕ್ಕಿ ಹೂದಾರೊ ಚನ್ನವ್ವಗೆ’
ಅವರಪ್ಪನ ಮನೆ ತಮ್ಮಟದ ಬುತ್ತಿ ಕಟ್ಟಿಕೊಂಡು
ಒಳಬಾಕಲ ಬಿಟ್ಟು ಬರುವಾಗ
ಗೌಳಿ ಏನಂತ ನುಡದಾವೊ :
“ನಿನ್ನ ಮುತ್ತೈದೆತನ ಸ್ಥಿರವಾಗಲಿ’

ಮಗಳ ಕಳುಹ್ಯಾಳೊ ಅವಳು ಮಂಚಕೆ ಮಲಿಗ್ಯಾಳೊ
ಮಗಳ ಕಳುಹ್ಯಾಳೊ ಅವಳು ಮಂಚಕೆ ಮಕಾಡೆ ಮಲಿಗ್ಯಾಳೊ
ಮಗಳ ಕರಕೊಂಡು ಹೋದನು, ಬ್ರಾಹ್ಮಣ
ಬಸವಣ್ಣನ ಗುಡಿ ಮುಂದಕೆ
ದೇವರಿಗೆ ಪೂಜೆ ಮಾಡ್ಯಾರೊ
ದೇವರ ಪೂಜೆ ಮಾಡಿಕೊಂಡು
ಚನ್ನವ್ವನ ಕೈಯ ಹಿಡಕೊಂಡು
ಏನಂತ ಹೇಳುತಾನೆ ಬ್ರಾಹ್ಮಣ :

“ಅಪ್ಪನ ಮನೆಯೆಂದು ಆಸೆ ಮಾಡಬೇಡ’
“ಅಪ್ಪನ ಮನೆಯೆಂದು ನಾನು ಆಸೆ ಮಾಡೋದಿಲ್ಲ’
ಮಗಳ ಕಳುಹಿಸಿಬಿಟ್ಟು ಮನೆಗೆ ಹೋದಾನೆ.
ಅವಳ ಕರಕೊಂಡು ಪರದಾನಿ ಹೋದಾನೆ
ಅವಳ ಮಾವನ ಮುಂದಕೆ ನಿಲ್ಲಿಸ್ಯಾನೆ
ಮಾವನ ಮುಂದಕೆ ನಿಲ್ಲಿಸೋವತ್ತಿಗೆ
ಒಂಬತ್ತೆ ದೀಪ ಕತ್ತಿಕೊಂಡೊ !
“ಏನಯ್ಯ ಪರದಾನಿ ಈ ಹೆಣ್ಣ ಎಲ್ಲಿ ತಂದ್ಯೋ
ತಾಯಿ ತಂದೆರು ಇಲ್ಲವೇನೊ?
ಇವಳ ಯಂಗೆ ಮುಂಡೆ ಮಾಡಾನೊ ಪರದಾನಿ?
ಮದುವೆ ಆದ ಮೇಲೆ ಒಡವೆ ಬಿಚ್ಚಿಕೊಂಡು
ಅವರಪ್ಪನ ಮನೆಗೆ ಕಳುಹಾನಾ, ಪರದಾನಿ’
ಕಲ್ಯಾಣವೇ ಲಕ್ಷ್ಮಿ ಕಲ್ಯಾಣವೇ
ಕಲ್ಯಾಣವೆನ್ನಿ ಜನರೆಲ್ಲ
ಅಡಿಕೆ ಚಪ್ಪರ ಎಂಬತ್ತೆ ಗಾವುದ;
ಬಾಳೆ ಚಪ್ಪರ ಅರುವತ್ತೆ ಗಾವುದ
ಕಲ್ಯಾಣವೇ ಲಕ್ಷ್ಮಿ ಕಲ್ಯಾಣವೇ
ಮದುವೆ ಮಾಡ್ಯಾದೊ, ಚಪ್ಪರ ಶಾಸ್ತ್ರ ಮುಗಿದೋದೊ
ಅವರ ಬಂಡಿ ಬಂದು ಅಂಗಳದಲ್ಲಿ ನಿಂತವೆ
’ಚಿಕ್ಕೋಳೆ ಚನ್ನವ್ವ ಮಡಿ ಹೋಗೆ’
“ಗಂಡನ ತಿನ್ನೋಳಿಗೆ ಹೂವಿನ ಹಂಬಲವೇಕೆ?
“ನೀ ಮುತ್ತೈದೆ ಹೋಗಿ ಮಡಿ ಅತ್ತೆ !’
“ಹತ್ತು ಬಂಡಿ ಬಂದು ಹಟ್ಟೀಲಿ ನಿಂತವೆ
ಚಿಕ್ಕೋಳು ಚನ್ನವ್ವ ಮಡಿ ಹೋಗೆ’
“ಗಂಡನ ತಿನ್ನೋಳಿಗೆ ಹಂಬಲವೇಕೆ?
ಮುತ್ತೈದೆ ನೀ ಮಡಿ ಹೋಗತ್ತೆ !’
ಅವರಪ್ಪನ ಮನೆ ಬಸಣ್ಣ ಜೋಗಿ ರೂಪಾಗಿ ಬಂದ;
“ಇನ್ನೊಷ್ಟು ದಾನವ ಮಾಡೋಗೆ’
ಚಿನ್ನದ ಮುತ್ತಲಲ್ಲಿ ರತ್ನವ ತುಂಬಿಕೊಂಡು
“ಕೊಳಿ ಸ್ವಾಮಿ ಬಿಕ್ಷವಾ !’
“ಬಿಕ್ಷವಾ ನಾನೊಲ್ಲೆ, ನಾ ಮುತ್ತು ರತ್ನವನೊಲ್ಲೆ
ನೀನು ಉಟ್ಟಿರುವ ಸೀರೆ ಮುಸುಕನು
ಹರಕೊಂಡು ಸುತ್ತಿ ಮಿಕ್ಕ ಸೆರಗನು
ದುಂಡುದೋಳಿಗೆ ಸುತ್ತಿ ಮೆರದೇನು
ನನ್ನ ಪಾಗಿಗೆ ಸುತ್ತಿ ಮೆರದೇನು
ನಿನ್ನ ಮುತ್ತೈದತನ ಸ್ಥಿರವಾಗಲಿ !’
ಆಗ ಹೊರಟಳೊ ಸಾಗಿ ಹೊರಟಳೊ, ಚನ್ನವ್ವ
ಗಂಧದ ಕಂತೆ ಹಿಡಕೊಂಡು
ಅವರ ತಂದೆ ತಾಯಿ ಪಾದ ನೆನಕೊಂಡು
ಕೊಂಡ ಮೂರು ಸುತ್ತು ಬಂದಳು, ಶಿವನೆ
ಕೊಂಡದ ಮ್ಯಾಕ್ಕೆ ಹತ್ತಿ ಕೂತಳು, ಚನ್ನವ್ವ
ಅವಳು ಸಭಿಗೆಲ್ಲ ಕೈಯ ಮುಗುದಳು

ಆಗ ಶಿವನು ಪಾರ್ವತಿ-
“ಅಲ್ಲಿ ನೋಡಿ, ಸ್ವಾಮಿ, ಚಿಕ್ಕ ಹೆಣ್ಣು’
ಮಾಯದ ಮಳೆಯೇ ಬಂದಿತು
ಕಡಲೆಕಾಳಲ್ಲಿ ಕಣ್ಣ ಮಾಡ್ಯಾಳೆ, ಶಿವನೆ
ನಮ್ಮಪ್ಪ ಬಸವಣ್ಣ ಗುಟ್ಟಿಕೆ ಹೊಡದನು
ಮಲಗಿದ್ದ ಕಾಳಿಂಗ ಎದ್ದು ಕೂತನು
ಪಕ್ಕದಲ್ಲಿ ಕಂಡು ಚನ್ನವ್ವನ
“ಎಲ್ಲಿಂದ ಬಂದೆ ಹೆಣ್ಣೆ?’ ಎಂದನು.
ಅಲ್ಲಿಗೆ ಶಿವನು ಬಂದನು;
ಶಿವನು ಪಾರ್ವತಿ ಬಂದು ಕಾಳಿಂಗಗೆ ಬುದ್ಧಿ ಹೇಳಿದರು :
“ನಿಮ್ಮ ತಾಯಿ ತಂದೆ ತಂದು ಮಾಡ್ಯವರೆ
ನೀನು ಚೆನ್ನವ್ವನ ಲಗ್ನವಾಗಿ
ಸುಖವಾಗಿ ಬಾಳು !’ ಎಂದು.
ಶಿವನು ಪಾರ್ವತಿ ಮಾಯವಾದರು.
ಪಾಲಕಿ ಮೇಲೆ ಮೆರವಣಿಗೆ ಮಾಡಿ
ಕರೆದುಕೊಂಡೋದರು ಶಿವನೆ.

 

ಪಾಠಾಂತರಗಳು ಮತ್ತು ಸಮಾನ ಆಶಯ ಪಠ್ಯಗಳು

೧) ಭುಲಾಯಿ ಪದಗಳು; ರಾಮಣ್ಣ, ಕ್ಯಾತನಹಳ್ಳಿ, ಕನ್ನಡ ಬೀದರ ಜಿಲ್ಲೆಯ ಜನಪದ ಗೀತೆಗಳು, ಕ.ಅ.ಸಂ. ಮೈ.ವಿ.ವಿ. ೧೯೭೬ ಪು.ಸಂ. ೧೯೫-೨೦೦.

೨) ಕಾಳಿಂಗರಾಯ; ಮೈಲಹಳ್ಳಿ ರಾಮಣ್ಣ, ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೮೪, ಪು.ಸಂ. ೨೭-೯೦.

೩) ಕಾಳಿಂಗರಾಯನ ಹಾಡು, ಹೆಬ್ಬಾಳೆ ಜಗನ್ನಾಥ; ಬುಲಾಯಿ ಹಾಡುಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೪-೨೩.

೪) ಕಾಳಿಂಗರಾಯನ ಹಾಡು; ನಾಯಕ ಡಿ.ಬಿ. ಬುಲಾಯಿ ಹಾಡುಗಳು, ಬಂಜಾರ ಪ್ರಕಾಶನ ಗುಲ್ಬರ್ಗಾ ೨೦೦೧. ಪು.ಸಂ. ೯೪-೯೭.

೫) ಗುರಗಂಜಿ ಕುಮಾರ; ಭಾನುಮತಿ, ವೈ.ಸಿ. ಪುಟ್ಟಮಲ್ಲಿಗೆ ಹಿಡಿತುಂಬ ತಾರಾ ಪ್ರಿಂಟಿಂಗ್ ಪ್ರೆಸ್, ಮೈಸೂರು ೨೦೦೧, ಪು.ಸಂ. ೧೪೨-೧೪೯.*      ಕರ್ತಿರಾಯ; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೬ ಪು.ಸಂ. ೨೫೯-೨೬೫