ತಬಲಾ ವಾದ್ಯದ ಇತಿಹಾಸ

ನೀರಿನ ಜುಳುಜುಳು ಪ್ರವಾಹ, ತಡಸಲಿನ ಮುತ್ತಿಗೆ, ಗಾಳಿಯ ಗಿರುಸುಳಿದಾಟ, ಪಕ್ಷಿಗಳ ಮಂಜುಳ ನಿನಾದ ಸಂಗೀತಕ್ಕೆ ಪ್ರೇರಕ. ಸಾಮೂಹಿಕ ಹಾಗೂ ವ್ಯಕ್ತಿಗತ ಆನಂದದ ಹಾಗೂ ಉತ್ಸಾಹದ ಅಭಿವ್ಯಕ್ತಿಯ ಮಾಧ್ಯಮ ಸಂಗೀತ. ಹೀಗಾಗಿ ಕಂಟಸಂಗೀತ ಮತ್ತು ವಾದ್ಯ ಸಂಗೀತ ಎರಡೂ ಅತ್ಯಂತ ಪ್ರಾಚೀನ. ಸುಗ್ಗಿಯ ಹಾಡು, ಬೇಟೆಗಾರರ ಹಾಡು, ಮೀನುಗಾರರ ಹಾಡು, ಸಮರಗೀತೆ ಮೊದಲಾದವು ಸಂಗೀತದ ವೈವಿಧ್ಯವನ್ನು ಸೂಚಿಸುತ್ತವೆ.

ಭಾರತೀಯ ಸಂಗೀತ ಶಾಸ್ತ್ರದ ಪ್ರಕಾರ ವಾದ್ಯಗಳ ವರ್ಗೀಕರಣವು (ಪ್ರಕಾರಗಳು) ತಂತುವಾದ್ಯ (ತಂತಿಯ), ಸುಷಿರವಾದ್ಯ (ಗಾಳಿಯ), ಅವನದ್ಧ (ಚರ್ಮದ) ಮತ್ತು ಘನವಾದ್ಯ (ಧಾತುವಿನ) ಎಂದು ಮಾಡಲಾಗುತ್ತದೆ. ತಬಲಾ ಅವನದ್ಧವಾದ್ಯಗಳ ಗುಂಪಿಗೆ ಸೇರುತ್ತದೆ.

ಭರತ ಭೂಮಿಯಲ್ಲಿ ಪ್ರತಿಯೊಂದು ಚರಾಚರವಸ್ತು ಭಗವಂತನ ಅನುಗ್ರಹದಿಂದ ಹುಟ್ಟಿತು ಎಂಬ ನಂಬಿಕೆ ಇದೆ. ಸಂಗೀತ ಹಾಗೂ ಸಂಗೀತ ವಾದ್ಯಗಳು ಪರಮಾತ್ಮನನ್ನು ಒಲಿಸಿಕೊಳ್ಳಲು, ಸಾಕ್ಷಾತ್ಕರಿಸಿಕೊಳ್ಳಲು ಬಳಸಲಾಗುತ್ತವೆ. ಇವು ಅವನ ಅನುಗ್ರಹದಿಂದ ಮನುಷ್ಯನಿಗೆ ಪ್ರಾಪ್ತವಾದ ಪ್ರಸಾದ ಎಂದು ಪುರಾಣ ಕಥೆಗಳು ಹೇಳುತ್ತವೆ. ವೇದಗಳಲ್ಲಿಯ ಸಾಮಗಾನ, ಆಗಮಗಳಲ್ಲಿಯ ಭಕ್ತಿ ಗೀತೆ ಭಾರತೀಯ ಸಂಗೀತದ ಬೆನ್ನೆಲುಬು.

ವಿವಿಧ ಸಂಗೀತವಾದ್ಯಗಳ ಸೃಷ್ಟಿ (ಹುಟ್ಟು) ಹಾಗೂ ಇತಿಹಾಸ (ಬೆಳವಣಿಗೆ) ಕುತೂಹಲಕಾರಿಯಾಗಿರುತ್ತದೆ. ತಬಲಾ ವಾದ್ಯದ ನಿರ್ಮಿತಿ ಎಂದಾಯಿತು. ಹೇಗಾಯಿತು ಎಂಬುದು ಒಂದು ಪ್ರಶ್ನೆ. ಈ ಪ್ರಶ್ನೆಯ ಉತ್ತರವು ಅನೇಕ ದಂತಕಥೆಗಳಿಂದ ಕೂಡಿದೆ. ಸಾಕಷ್ಟು ಭಿನ್ನಾಭಿಪ್ರಾಯಗಳಿಂದ ಕೂಡಿ ತಬಲಾವಾದ್ಯದ ಇತಿಹಾಸ, ಕಲ್ಪನೆಗಳ ಅಗರ.

ಪಖವಾಜ್ ಎಂಬ ವಾದ್ಯವನ್ನು ಇಬ್ಬಾಗಿಸಿದಾಗ ತಬಲಾ ವಾದ್ಯ ಸೃಷ್ಟಿಯಾಯಿತು ಎಂಬುದು ಒಂದು ಊಹೆ. ಮುಸಲ್ಮಾ ಪರಂಪರೆಯ ತಬಲಾವಾದಕರು ತಬಲಾ ವಾದ್ಯದ ಉತ್ಪತ್ತಿ ತಮ್ಮ ವಂಶ ಪರಂಪರೆಯಿಂದ ಆಯಿತು ಎಂದು ಹೇಳುತ್ತಾರೆ.

ದಿಲ್ಲಿಯ ಸುಲ್ತಾನ – ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನದ ತುರ್ಕಿ ಕಲಾಕಾರನಾದ ಅಮೀರ್ ಖುಸ್ರು ಎಂಬುವನು ತಬಲಾ ವಾದ್ಯದ ಜನಕ ಎಂದು ಹೇಳುತ್ತಾರೆ. ಆದರೆ ಇದು ಇತಿಹಾಸದ ಮೂಲಕ ಸಿದ್ಧವಾಗಿಲ್ಲ. ಆದುದರಿಂದ ಇದೂ ಒಂದು ಅನುಮಾನ. ಇರಾನಿ, ತುರ್ಕಿ ಸಂಸ್ಕೃತಿಗಳನ್ನು ಮಿಶ್ರಮಾಡಿ ಭಾರತೀಯ ವಾದ್ಯಗಳಿಗೆ ಮುಸಲ್ಮಾನ ಹೆಸರುಗಳನ್ನು ಇಟ್ಟು ಭಾರತೀಯ ತಬಲಾವಾದನ ಕಲೆಯನ್ನು ತನ್ನ ಕಲೆ ಎಂಬುದಾಗಿ ಅಮೀರ್ ಖುಸ್ರು ಪ್ರಚಾರ ಮಾಡಿದನು. ತಬಲಾ ಉತ್ಪತ್ತಿಯ ವಿಷಯದಲ್ಲಿ ಇದು ಮೊದಲನೆಯ ಊಹೆ. ದಿಲ್ಲಿ ಘರಾಣೆಯ ತಬ್ಲ-ತಬ್ಲಾ-ದಿಂದಲೇ ತಬಲಾ ವಾದ್ಯದ ಉತ್ಪತ್ತಿ ಹಾಗೂ ಬನಾರಸ ಘರಾಣೆಯ ಮೃದಂಗವು ತಬಲಾ ವಾದ್ಯದ ಉತ್ಪತ್ತಿಯ ಮೂಲ ಎನ್ನುವರು. ಈ ವಾದ್ಯದ ಪ್ರವರ್ತಕರು ‘ಉಸ್ತಾದ ಸಿದ್‌ಆರಖಾನ್’ ಡಾಡಿ (ಸುಧಾರ ಖಾನ್) ಎಂದು ಹೇಳಿದರೆ, ಕೆಲವರು ಅಮೀರ್ ಖುಸ್ರುನೇ ಈ ವಾದ್ಯದ ಜನಕ ಎಂದು ಸಾಧಿಸುತ್ತಾರೆ. ಬನಾರಸ ಘರಾಣೆಗೆ ಪಂಜಾಬವು ತಬಲಾ ವಾದ್ಯ ಜನ್ಮಸ್ಥಾನ ಎನ್ನುತ್ತಾರೆ. ಇಂದಿಗೂ ಪಂಜಾಬದಲ್ಲಿ ‘ಡಗ್ಗಾ’ಕ್ಕೆ ಶಾಯಿಯ ಬದಲಾಗಿ ಕಣಕದ (ಗೋದಿಹಿಟ್ಟು) ಶಾಯಿ ಹಾಕಿ ನುಡಿಸುವರು. ಮೃದಂಗವೇ ತಬಲಾ ವಾದ್ಯದ ಮೂಲವಾದ್ಯ ಎಂದು ಬನಾರದ ಘರಾಣೆಯ ಅಭಿಪ್ರಾಯ.

ಉಸ್ತಾದ ಸಿದ್ಧಾರ ಖಾನ್‌ರ ಕಾಲಕ್ಕಿಂತ ಪೂರ್ವದಿಂದಲೂ ತಬಲಾ ವಾದ್ಯ ಪ್ರಚಾರ ಇತ್ತೋ ಇಲ್ಲವೋ ಎಂಬುದರ ಬಗ್ಗೆಯೂ ನಿಶ್ಚಿತಮತವಿಲ್ಲ. ಉಸ್ತಾದ್ ಸಿದ್ದಾರಖಾನನ ಮೊಮ್ಮಗ – ಮೆದೂಖಾನನ ಮದುವೆಯು ಒಬ್ಬ ಪ್ರಸಿದ್ಧ ತಬಲಾ ವಾದಕನ ಮಗಳೊಂದಿಗೆ ಆಯಿತು ಎಂದು ಹೇಳುತ್ತಾರೆ. ಆದರೆ ಈ ತಬಲಾವಾದಕನ ಹೆಸರು ಗೊತ್ತಿಲ್ಲ. ವರದಕ್ಷಿಣೆಯಾಗಿ ಅಳಿಯನಿಗೆ ೫೦೦ ಪಂಜಾಬಿಗತ್ತುಗಳನ್ನು ಮಾವ ಉಡುಗೊರೆಯಾಗಿ ಕೊಟ್ಟ ಎಂಬುದು ಒಂದು ದಂತ ಕಥೆ. ಪಂಜಾಬದ ತಬಲಾ ಗತ್ತುಗಳು ಎಂದಿಗೂ ತಬಲಾವಾದನ ಪರಂಪರೆಯಲ್ಲಿ ಪ್ರಮುಖವಾಗಿವೆ.

‘ಹುಸೇನ್ ಡೊಲಕ್’ ಎಂಬುವನು ಮೃದಂಗವನ್ನು ಖಡ್ಗದಿಂದ ಇಬ್ಬಾಗವಾಗಿ ಸೀಳಿ ಅವುಗಳನ್ನು ಉದ್ದಾಗಿ ನಿಲ್ಲಿಸಿ ನುಡಿಸಿ ಸಂತೋಷಪಟ್ಟನು ಎಂದು ಹೇಳುತ್ತಾರೆ. ತಬ್ ಬಿ ಬೋಲಾ (ಆಗಲೂ ನುಡಿಯಿತು) ಎನ್ನುವದೇ ತಬಲಾ ವಾದ್ಯದ ಹೆಸರಿನ ಉತ್ಪತ್ತಿ ಎನ್ನಲಾಗುತ್ತದೆ. ವಾಸ್ವವಿಕವಾಗಿ ಎದು ಅಸ್ವಾಭಾವಿಕ ಮತ್ತು ಅಸಂಗತ ಎನಿಸುತ್ತದೆ. ಅದೇನೇ ಇದ್ದರೂ ಭಾರತೀಯ ಸಂಗೀತ ವಾದ್ಯ ಪ್ರಪಂಚದಲ್ಲಿ ತಬಲಾ ಎಂಬ ಅವನದ್ಧ ವಾದ್ಯವು ಶ್ರೇಷ್ಠ ಮಟ್ಟದ ವಾದ್ಯವೆಂದು ಪರಿಗಣಿಸಲಾಗುತ್ತಿರುವುದು ಸಂತೋಷದ ಸಂಗತಿ.

೧೫ನೇ ಶತಮಾನದ ಹುಮಾಯೂನನ ಕಾಲದಲ್ಲಿ ‘ತಬಲೆ-ಅದಲ್’ ಎಂಬ ಒಂದು ವಾದ್ಯವಿತ್ತು. ಇದರಿಂದ ಮುಸಲ್ಮಾನರ ಕಾಲದಲ್ಲಿ ‘ತಬಲಾ’ ಶಬ್ದವು ಬಂದಿರಬಹುದು ಎಂದು ಊಹೆ. ೧೫ನೇಯ ಶತಮಾನಕ್ಕಿಂತ ಪೂರ್ವದಲ್ಲಿ ತಬಲೆಯು ‘ನಗಾರಿ’ಯ ರೂಪದಲ್ಲಿತ್ತು ಎಂದು ವಾದ್ಯ ಇತಿಹಾಸದಿಂದ ತಿಳಿದುಬರುತ್ತದೆ.

ಇನ್ನೂ ಕೆಲವರ ಅಭಿಪ್ರಾಯದಂತೆ ದಿಲ್ಲಿಯ ಮತ್ತೊಬ್ಬ ಕಲಾಕಾರ – ಭಗವಾನ್ ದಾಸ್ ರನ್ನು ಸುಧಾರ್ ಖಾನರು ಪಖವಾಜ ವಾದನದಲ್ಲಿ ಪರಾಭವಗೊಳಿಸಿ ಪಖವಾಜವನ್ನು ಎರಡು ಭಾಗ ಮಾಡಿದಾಗ ತಬಲಾ ಉತ್ಪತ್ತಿಯಾಯಿತೆಂದು ಹೇಳುತ್ತಾರೆ. ಆದರೆ ಶ್ರೀ ಚಿರಂಜಿತರ ಪ್ರಕಾರ ಸುಧಾರ ಖಾನರಿಂದಲೇ ತಬಲಾದ ಆವಿಷ್ಕಾರವಾಗಿದೆ. ಕೆಲವರು ತಬಲಾ ವಾದ್ಯವು ಮೃದಂಗದಿಂದ ಉತ್ಪತ್ತಿಯಾಗಿದೆ ಎಂದು ಹೇಳಿದರೆ, ಇನ್ನೂ ಕೆಲವರು ಅದು ಡಮರುವಿನಿಂದ ಉತ್ಪತ್ತಿಯಾಗಿದೆ ಎಂದು ಹೇಳುವುದುಂಟು. ‘ತಬ್ಲಾ’ ಎಂಬ ಪಾರಸಿ ಶಬ್ದದಿಂದ ತಬಲಾ ಮತ್ತು ಡಗ್ಗಾದಿಂದ ಕೂಡಿರುವ ತಬಲಾ ಎಂಬ ಸಂಯುಕ್ತ ವಾದಯ ಈಗ ಸದ್ಯಕ್ಕೆ ಪ್ರಚಾರದಲ್ಲಿದೆ. ಈ ವಾದ್ಯಕ್ಕೆ ಸುಮಾರು ೪೦೦ ವರ್ಷಗಳಷ್ಟೇ ಪ್ರಾಚೀನತೆ ಇದೆ. ಒಂದು ದೃಷ್ಟಿಯಲ್ಲಿ ಇದು ಖ್ಯಾಲಗಾಯಕಿಯ ಮೂಲಕ ಪ್ರಚಾರಕ್ಕೆ ಬಂದಿರುವ ನವೀನ ವಾದ್ಯ. ಖ್ಯಾಲ ಗಾಯಕಿಯ ಅವಿಷ್ಕರಣವಾಗಿರದಿದ್ದರೆ ತಬಲಾ ವಾಧ್ಯದ ಉತ್ಪತ್ತಿ ಆಗುತ್ತತ್ತೋ ಇಲ್ಲವೋ? ಖ್ಯಾಲ ಗಾಯನಕ್ಕೆ ಸಾಥ ಸಂಗತ ಮಾಡುವ ವಾದ್ಯ ತಬಲಾ.

ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿಯೂ ಭೇರಿ, ಪಣವ, ನಗಾರಿ, ಮೃದಂಗ, ಡಮರು ಮುಂತಾದ ಅವನದ್ಧ ವಾದ್ಯಗಳಿದ್ದವು ಎಂಬುದಾಗಿ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ.

ವೇದ ಕಾಲದಲ್ಲಿಯ ದುರ್ದರ (ದುರ್ಧರ) ಹಾಗೂ ‘ಅಚಾವಜ’ – (ಅಚಾ=ಮೇಲ್ಬದಿ, ವಜ=ಬಾರಿಸಲಾಗುವ) ವಾದ್ಯಗಳಿಗೆ ತಬಲಾ ವಾದ್ಯ ಹೋಲುತ್ತದೆ ಎಂದೂ ಹೇಳಲಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ತಬಲಾ ವಾದ್ಯದ ಇತಿಹಾಸದಲ್ಲಿ ಯಾವುದು ಮಿಥ್ಯ ಎಂಬುದು ನಿರ್ಣಯಿಸುವದು ಕಷ್ಟ. ಸೂಕ್ಷ್ಮವಾಗಿ ಅವಲೋಕಿಸಿದಾಗ, ಸುಧಾರ್ ಖಾನ್ ರಿಂದಲೇ ತಬಲಾ ವಾದನ ಕಲೆಯು ಬೆಳಕಿಗೆ ಬಂದಿದೆ ಹಾಗೂ ‘ತಬ್ಲ’ ಎಂಬ ಫಾರಸೀ ಅರಬ್ಬಿ ಶಬ್ದದಿಂದ ತಬಲಾ ರೂಪ ಉತ್ಪತ್ತಿಯಾಗಿದೆ ಎಂಬುದು ಖಚಿತವಾಗುತ್ತದೆ. ಕಾಲಿಕಾ ಪುರಾಣದ ಪ್ರಕಾರ – ಕ್ರಿಸ್ತ ಪೂರ್ವದಲ್ಲಿಯೇ ಭಾರತದಲ್ಲಿ ತಬಲಾವಾದ್ಯ ಮೂರ್ತರೂಪ ಪಡೆದು ಪ್ರಚಾರದಲ್ಲಿತ್ತು ಎಂದು ತಿಳಿದುಬರುತ್ತದೆ. ತಬಲಾ ವಾದ್ಯ ಉತ್ಪತ್ತಿಗೆ ಕರ್ನಾಟಕದಲ್ಲಿಯ ಸಂಬಳ (ಸಂಬಲ) ವಾದ್ಯ ಸ್ಫೂರ್ತಿ ಕೊಟ್ಟಿತು ಎಂದೂ ಕೆಲವರ ಅಭಿಪ್ರಾಯ. ಇದು ಏನೇ ಇದ್ದರೂ, ತಬಲಾ ವಾದ್ಯ ಹೆಚ್ಚು ಪ್ರಚಾರ ಪಡೆದಿದ್ದು ಮುಸಲ್ಮಾನರ ಕಾಲದಲ್ಲಿ ಎಂಬುದು ಸರ್ವಸಮ್ಮತವಾದ ವಿಷಯ.

ಸುಮಾರು ೧೫೦೦ ರಿಂದ ೧೭೦೦ ರಕಾಲವು ಒಂದು ಹೊಸ ಪ್ರವಾಹದ ಕಾಲ. ಈ ಕಾಲದಲ್ಲಿಯೇ ಖ್ಯಾಲ ಗಾಯಕಿ ಹಾಗೂ ತಬಲಾ ವಾದನದ ಸಾಥ ಸಂಗತ ಪದ್ಧತಿ ಪ್ರಚಾರ ಪಡೆದು ಜನಪ್ರಿಯವಾದವು. ತಬ್ಲ ಎಂದರೆ ನಗಾರಿ, ದೇವಾಲಯಗಳಲ್ಲಿ ನಗಾರಿ ವಾದ್ಯ ನನಾದಿಸುವಂತೆ ಖ್ಯಾಲ ಗಾಯನ ಪೀಠದಲ್ಲಿ ಮಧುರವಾದ ತಬಲಾ ವಾದನವು ಶ್ರಾವ್ಯವಾಯಿತು. ತಬಲಾ ವಾದನ ಸ್ವತಂತ್ರ ವಾದಯವಾದನ ಕಲೆಯಾಗಿಯೂ ಪ್ರತಿಷ್ಠೆ ಪಡೆಯಿತು. ಹೀಗಾಗಿ ತಬಲಾ ಶಾಸ್ತ್ರೀಯ ಹಾಗೂ ಇತರೆ ಎಲ್ಲಾ ಸಂಗೀತದ ಅವಿಭಾಜ್ಯ ಅಂಗವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಹಿಂದುಸ್ತಾನಿ ಸಂಗೀತದಲ್ಲಿ ತಬಲಾದ ಮೂಲಕವೇ ತೇಜ, ರಂತ, ಶೋಭೆ ಬರುತ್ತದೆ. ಹಾಡುಗಾರಿಕೆಯಾಗಲಿ, ತಂತುವಾದ್ಯ ವಾದನವಾಗಲಿ ತಬಲಾದ ಸಾಥ್ ಸಂಗತ ಇರದಿದ್ದರೆ ನಿಸ್ತೇಜವಾಗುತ್ತದೆ. ಏಕೆಂದರೆ ತಬಲಾ ವಾದನ, ಸಂಗೀತದ ಲಯ ಹಾಗೂ ಕಾಲಗಳ ದಿಕ್ ಸೂಚಿ ಶಾಸ್ತ್ರವಾಗಿದೆ. ಹಿಂದುಸ್ತಾನಿ ಸಂಗೀತ ಪ್ರಿಯ ಕಲಾ ರಸಿಕರಿಗೆ ಸಂಗೀತ ಕಚೇರಿಗಳಲ್ಲಿ ತಬಲಾ ವಾದ್ಯದ ಸಾಥ್ ಸಂಗತ ಬೇಕೇ ಬೇಕು. ಇದರಿಂದ ಕಚೇರಿಗೆ ರಂಗೇರುವುದು. ಆನಂದ ಪರಿಣಾಮವನ್ನುಂಟು ಮಾಡುವ ತಬಲಾ ವಾದನ ಕಲೆ ಅತ್ಯಂತ ಪರಿಶ್ರಮದಿಂದ ಸಾಧಿಸಬಹುದಾದ ಕಠೀಣವಾದ ಕಲೆ.

ತಬಲಾ ವಾದ್ಯವನ್ನು ಯಾರು ನೋಡಿಲ್ಲಾ? ತಬಲಾ ನುಡಿಸುವದನ್ನು ಯಾರು ಕೇಳಿಲ್ಲಾ? ಹಾಡುಗಾರನ ಬಲಕ್ಕೆ ಕುಳಿತುಕೊಳ್ಳುವವನೆ ತಬಲಾ ವಾದಕ. ಹಾಡುಗಾರದ ಕಂಠದ ಅನುಕರಣವನ್ನು ಮಾರ್ಮಿಕವಾಗಿ ಮಾಡಿ ಸಂಗೀತಕ್ಕೆ ಶೋಭೆ ತರುವವನೆ ತಬಲಾವಾದಕ. ಆದುದರಿಂದ ತಬಲಾವಾದನ ಎಂಬುದು ಸಾಧನೆಯಿಂದ ಸಾಧಿಸಬೇಕಾದ ಕೌಶಲ್ಯ. ಇದೊಂದು ಜನಪ್ರಿಯ ಲಲಿತ ಕಲೆ.

ವಾದನ ತಂತ್ರ

ತಬಲಾ ವಾದನದಲ್ಲಿಯ ವಾದನ ತಂತ್ರ ಎಂದರೆ ತಬಲಾ ವಾದನ ಶೈಲಿ ಎಂದರ್ಥ. ವಾದನ ಶೈಲಿಯು ಪರಂಪರೆಯನ್ನು ಅವಲಂಬಿಸಿರುತ್ತದೆ. ಆಯಾ ಪರಂಪರೆ (ಘರಾಣೆ) ಗಳಲ್ಲಿ ಪರಂಪರಾಗತವಾಗಿ ಬಂದ ವಾದನ ತಂತ್ರ, ತನ್ನದೇ ಆದ ಗೊತ್ತು ಗುರಿ ಹಾಗೂ ವಾದನದ ಪರಿಶುದ್ಧತೆಯಿಂದ ಕೂಡಿರುತ್ತದೆ. ಇದರಿಂದ ಘರಾಣೆಗಳಲ್ಲಿರುವ ವಿಶೇಷತೆ, ಮೆರಗು ಅಲ್ಲದೆ ವಾದನ ತಂತ್ರಗಾರಿಕೆಯ ವೈವಿದ್ಯತೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ವಾದನ ತಂತ್ರ ವಿಶೇಷತೆಯನ್ನು ತಿಳಿದಿಕೊಳ್ಳಬೇಕಾದಲ್ಲಿ ಮೊದಲು ತಬಲಾದ ಘರಾಣೆಗಳ ಬಗ್ಗೆ ತಿಳಿದುಕೊಳ್ಳುವದು ಅವಶ್ಯಕ.

ಘರಾಣೆ ಹಾಗೂ ಶೈಲಿಯ ಪರಿಚಯ

ಹಳೆಯ ಕಾಲದಲ್ಲಿ ಸಂಗೀತ ಭೋದನೆ ಹಾಗೂ ಸಾಧನೆ ಇವು ಪೂರ್ವಜನ್ಮದ ಪುಣ್ಯಾವಶೇಷಗಳು ಎಂದು ಭಾವಿಸಿ, ಹೆಚ್ಚಿನ ಆಸಕ್ತಿಯಿಂದ, ಆತ್ಮ ತೃಪ್ತಿಗಾಗಿ ಮಾಡಲಾಗುತ್ತಿದ್ದವು. ಗುರು ತನ್ನ ಮಕ್ಕಳಿಗೆ, ಸಹೋದರರಿಗೆ ಅಥವಾ ಪಟ್ಟ ಶಿಷ್ಯರಿಗೆ ಮಾತ್ರ ವಿದ್ಯಾದಾನ ಮಾಡುತ್ತಿದ್ದ. ಹೀಗಾಗಿ ಹಾಡುಗಾರಿಕೆ ಮತ್ತು ವಾದ್ಯವಾದನ ಕಲೆ ಮನೆತನದ ಪರಂಪರೆಯಾಗಿ ಕಾಪಾಡಲಾಗುತ್ತಿದ್ದವು.

ಈಗಿನಂತೆ ಸಂಗೀತ ವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ, ಸಂಗೀತ ಕಾಲೇಜ್, ಶಾಲೆಗಳ ರೂಢಿ ಇರಲಿಲ್ಲ. ಶಿಷ್ಯರಿಂದ ಶಿಷ್ಯರಿಗೆ ಸಂಗೀತ ವಿದ್ಯಾದಾನ ಪರಂಪರೆಗೆ ಹೆಚ್ಚು ಮಹತ್ವ ಇತ್ತು. ಗುರುಗಳು ಶಿಷ್ಯವನ್ನು ತಯಾರು ಮಾಡುವದು, ವಿದ್ಯೆಯ ಪರಿಪಕ್ವತೆಗೆ ಲಕ್ಷ್ಯ (ಗಮನ) ಕೊಡುವದು ಹಳೆಯ ರೂಢಿ. ಹೀಗಾಗಿ ಪರಂಪರೆಯ ಶುದ್ಧಿಗೆ ಮಹತ್ನ ಇತ್ತು. ಘರಾಣೆಗಳ ಸೃಷ್ಟಿಗೆ ಮೇಲೆ ವಿವರಿಸಿದ ಹಿನ್ನೆಲೆಯೇ ಕಾರಣ.

ತಬಲಾ ವಾದನದಲ್ಲಿ ಅನಾಮಾನ್ಯ ಕರ್ತೃತ್ವ ಪ್ರತಿಭೆಯುಳ್ಳ ಕಲಾವಿದರು ತಮ್ಮದೇ ಆದ ಸ್ವತಂತ್ಯ್ರ ಶೈಲಿಯನ್ನು ನಿರ್ಮಿಸಿದರು. ಶೈಲಿಯ ಪರಂಪರೆಯಲ್ಲಿ ವಿವಿಧ ಬಂದಿಶ್ಗಳ ಸೃಷ್ಟಿಸಲಾಯಿತು. ಈ ಬಂದಿಶ್ ಗಳ ಆಧಾರದ ಮೇಲಿಂದ ನಿರ್ದಿಷ್ಟವಾದ ಘರಾಣೆಯನ್ನು ಗುರುತಿಸಬಹುದು. ತಬಲಾವಾದನ ಘರಾಣೆಗಳಿಗೆ ಮನೆತನ (ಪರಂಪರೆ) ಎಂದು ಕರೆಯುವ ರೂಢಿ ಇದೆ. ಘರಾಣೆಎಂದರೆ ಪರಂಪರಾಗತವಾಗಿ ಬಂದಿರುವ ಪದ್ಧತಿ ಎಂದು. ಬಾಜ್ಎಂದರೆ ಆಯಾ ಘರಾಣೆಯಲ್ಲಿ ನುಡಿಸುವ ಶೈಲಿಅಥವಾ ನುಡಿಸುವ ಪದ್ಧತಿಕರೆಯುತ್ತಾರೆ. ಬಾಜ್ಗಳಲ್ಲಿ ಎರಡು ಪ್ರಕಾರ. ಮೊದಲನೆಯದು ಬಂದ್ ಅಥವಾ ಬಂದಿಶ್ ಬಾಜ್, ಎರಡನೆಯದು ಖುಲ್ಲಾ ಬಾಜ್’.

ಈ ಬಗೆಯ ತಬಲಾ ವಾದನ ಕಲೆಯಲ್ಲಿ ಮುಖ್ಯವಾಗಿ ಆರು ಘರಣೆಗಳು ಪ್ರಚಾರದಲ್ಲಿವೆ. ಅವುಗಳು ಹೀಗಿವೆ.

೧. ದಿಲ್ಲಿ ಘರಾಣೆ

೨. ಲಖನೌ ಅಥವಾ ಪೂರಬ್ ಘರಾಣೆ

೩. ಅಜರಡಾ ಘರಾಣೆ

೪. ಫರೂಕಆಬಾದ ಘರಾಣೆ

೫. ಬನಾರಸ ಘರಾಣೆ ಮತ್ತು

೬. ಪಂಜಾಮ ಘರಾಣೆ

. ದಿಲ್ಲಿ ಘರಾಣೆ :

ತಬಲಾ ವಾದನ ಕಲೆಯ ಇತಿಹಾಸದಲ್ಲಿ ದಿಲ್ಲಿ ಘರಾಣೆ (ಬಾಜ್) ಮೊದಲನೆಯದು ಹಾಗೂ ಮಹತ್ವದ್ದು. ಆದುದರಿಂದ ವಿದ್ಯಾರ್ಥಿಗಳು ದಿಲ್ಲಿ ಬಾಜಿನ ವೈಶಿಷ್ಟ್ಯ ಹಾಗೂ ಪ್ರತ್ಯೇಕತೆಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯ.

ಈ ವಾದನ ಶೈಲಿಯಲ್ಲಿ ಮಧ್ಯ ಹಾಗೂ ತೋರು ಬೆರಳು (ಬಲಗೈಯ ೨ನೇಯ ಹಾಗೂ ೩ನೇಯ ಬೆರಳು) ಗಳ ಉಪಯೋಗ ಹೆಚ್ಚು. ಕೇವಲ ಈ ಎರಡು ಬೆರಳುಗಳು ಹೆಚ್ಚು ಉಪಯೋಗ ಈ ಶೈಲಿಯ ತಿರುಳು. ತಬಲಾದ ಕಿನಾರೆ (ಚಾಟಿ) ಮೇಲೆ ಬೋಲ್ ಗಳನ್ನು ನುಡಿಸುವ ಶೈಲಿಯ ಮೂಲಕ ಈ ವಾದನ ಕಲೆಗೆ ಕಿನಾರೆ ಬಾಜ್ಎಂಬುದಾಗಿಯೂ ಕರೆಯಲಾಗುತ್ತದೆ. ಡಗ್ಗಾ ವಾದನ ಸೂಕ್ಷ್ಮತೆಯೂ ಈ ಶೈಲಿಯ ಪ್ರಮುಖವಾದ ಲಕ್ಷಣವಾಗಿದೆ. ಧಿಬಾಗಿನಾ, ಧಾತಿಟ, ತಿರಕಿಟ, ಧಾತಿ, ಗಿನತಿಟ, ಕಿಟತಕ, ಧಾತಿ ಧಾಗೆ ಮುಂತಾದ ಬೋಲ್ಗಳ ಪ್ರಯೋಗ ಈ ಶೈಲಿಯ ವೈಶಿಷ್ಟ್ಯ.

ಪೇಶಕಾರ, ಕಾಯ್ದಾ, ರೇಲಾ, ಗತ್, ಮುಕಡಾ ಮುಂತಾದ ಲಯಕಾರಿಯತ್ತ ಸಂಕ್ಷಿಪ್ತ ಬೋಲ್ ಗಳು ವಿಶೇಷ ಢಂಗಿನಿಂದ ನುಡಿಸಲಾಗುತ್ತವೆ. ಪರನ್ ಹಾಗೂ ಉಠಾನ್ ಗಳ ಪ್ರಯೋಗ ಈ ಬಾಜಿನಲ್ಲಿ ಕಂಡು ಬರುವದಿಲ್ಲ.

ದಿಲ್ಲಿ ಘರಾಣೆಯ ಪ್ರವರ್ತಕ – ಉಸ್ತಾದ್ ಸುಧಾರ ಖಾನ್ (ಸಿದ್ದಾರ ಖಾನ್ ಡಾಡಿ) ಎಂದು ಹೇಳಲಾಗುತ್ತದೆ. ಉಸ್ತಾದ್ ಮುನೀರ ಖಾನ್, ಉಸ್ತಾದ್ ಶಮ್ ಸುದ್ದೀನ್ ಖಾನ್ ಮೊದಲಾದವರು ಈ ಘರಾಣೆಯ ಪ್ರಮುಖ ತಬಲಾವಾದಕರಾಗಿದ್ದಾರೆ.

ದಿಲ್ಲಿ ಘರಾಣೆಯ ವಿಶೇಷತೆಗಳು:

೧. ಮಧ್ಯ ಮತ್ತು ತೋರು ಬೆರಳುಗಳ ಪ್ರಯೋಗ ಹೆಚ್ಚು

೨. ತಬಲಾದ ಕಿನಾರೆ ಮೇಲೆ ಬೋಲುಗಳನ್ನು ನುಡಿಸುವದು ವಿಶೇಷ. ಇದಕ್ಕೆ ಕಿನಾರೆ ಬಾಜ್‌’ ಎಂದು ಕರೆಯುವರು.

೩. ಸೂಕ್ಷ್ಮವಾಗಿ ನುಡಿಸುವದರಿಂದ ಮುಲಾಯಮ್ ಬಾಜ್ಎಂದು ಸಹ ಕರೆಯುತ್ತಾರೆ.

೪. ಈ ಘರಾಣೆಯಲ್ಲಿ ಚತುಷ್ಟ ಜಾತಿ ಬೋಲುಗಳ ಪ್ರಯೋಗ ಹೆಚ್ಚು.

೫. ಸಾಥ ಸಂಗತಗಿಂದ ಸ್ವತಂತ್ಯ್ರ ವಾದನಕ್ಕೆ ಹೆಚ್ಚು ಮಹತ್ವ ಇದರಲ್ಲಿ ಪೇಶಕಾರ್, ಕಾಯ್ದಾ,                                     ಮುಕಡಾ, ತುಕಡಾಗಳ ಪ್ರಯೋಗ.

. ಪೂರಬ್ ಅಥವಾ ಲಖನೌ ಘರಾಣೆ:

ಈ ಘರಾಣೆಯಲ್ಲಿ ದಿಲ್ಲಿ ಹಾಗೂ ಅಜರಾಡ ತಬಲಾ ವಾದನ ಶೈಲಿಗಿಂತ ಅಧಿಕವಾಧ ಜೋರ್ ದಾರ್ ಹಾಗೂ ಖುಲ್ಲಾ ಬೋಲ್ ಗಳ ವಾದನದ ರೂಢಿ ಇದೆ. ಕಾಯ್ದಾ ಹಾಗೂ ರೇಲಾಗಳನ್ನು ವಿಶೇಷವಾದ ರೀತಿಯಿಂದ ನುಡಿಸಲಾಗುತ್ತದೆ. ಲವ (ಮೈದಾನ್) ಹಾಗೂ ಶಾಹಿಗಳ ಮೇಲೆ ಬೋಲ್ ಗಳನ್ನು ಹೆಚ್ಚಾಗಿ ನುಡಿಸುತ್ತಾರೆ. ದಿಲ್ಲಿ ಘರಾಣೆಯ ಅನೇಕ ಅಂಶಗಳನ್ನು ಈ ಘರಾಣೆ ಒಳಗೊಂಡಿದ್ದರಿಂದ ಇದು ಕೂಸ ದಿಲ್ಲಿ ಘರಾಣೆಯ ಒಂದು ಪ್ರಮುಖ ಪ್ರಕಾರವಾಗಿದೆ ಎಂದೇ ಹೇಳಬೇಕಾಗುತ್ತದೆ. ದಿಲ್ಲಿ ಬಾಜಿನಲ್ಲಿರುವ ಸೂಕ್ಷ್ಮತೆ ಪೂರಬ್ ಬಾಜಿನಲ್ಲಿ ಇಲ್ಲ. ಪಖವಾಜ್ ವಾದ್ಯದಲ್ಲಿ ನುಡಿಸುವ ಬೋಲ್ ಹಾಗೂ ನೃತ್ಯ ಕಲೆಗೆ ಸಂಬಂಧಿಸಿದ ಬೋಲ್ ಗಳನ್ನು ಆಧರಿಸಿ ಪೂರಬ್ ಘರಾಣೆಯ ಬೋಲ್ ಗಳು ರೂಢಿಯಲ್ಲಿವೆ.

ಧಿಟತಿಟ, ಕ್ಡಧಾತಿಟ, ಗದ್ದಿಗನ್, ಕ್ಡಾನ್ ಧ, ಗಿಡನಗ ಧಾಗೆತ್ರಕ್, ಧಿರಧಿರ, ಧಿನತಕ, ಇತ್ಯಾದಿ ಬೋಲ್ ಗಳಿಗೆ ಈ ಶೈಲಿಯಲ್ಲಿ ಮಹತ್ವವಿದೆ. ಗತ್, ತುಕಡಾ, ಮುಕಡಾ, ಪರಣ, ತಿಪಲ್ಲಿ, ಚೌಪಲ್ಲಿ ಮುಂತಾದವುಗಳನ್ನು ಈ ಶೈಲಿಯಲ್ಲಿ ವಿಶೇಷವಾಗಿ ನುಡಿಸುತ್ತಾರೆ.

ಲಖನೌ ಅಥವಾ ಪೂರಬ್ ಘರಾಣೆಯ ವಿಶೇಷತೆಗಳು

೧. ಲವ ಮತ್ತು ಶಾಯಿಯ ಮೇಲೆ ಬೋಲುಗಳ ಪ್ರಯೋಗ ಹೆಚ್ಚು.

೨. ಗತ್, ತುಕಡಾ, ಪರಣ, ಚಕ್ರದಾರ ಗತ್‌ಗಳ ಪ್ರಯೋಗ ಹೆಚ್ಚಾಗಿದ್ದು, ಖುಲ್ಲಾ ಹಾಗೂ ಜೋರುದಾರಗಳಿಂದ ಕೂಡಿರುತ್ತದೆ.

೩. ಕಿನಾರೆಯ ಬದಲಾಗಿ ಲವದಲ್ಲಿ ಬೋಲುಗಳನ್ನು ಹೆಚ್ಚಾಗಿ ನುಡಿಸುವರು.

೪. ಠುಮ್ರಿಯೊಂದಿಗೆ ಸಾಥಸಂಗತ ಮಾಡುವವರ ಸಂಖ್ಯೆ ಈ ಘರಾಣೆಯಲ್ಲಿ ಹೆಚ್ಚಾಗಿ ಕಂಡುಬರುವದು.

೫. ಬನಾರಸ ವಾದನ ಶೈಲಿಯ ಬೋಲುಗಳು ಹೆಚ್ಚಾಗಿ ಕಂಡು ಬರುತ್ತವೆ. ‘ಗತ್’ ಗಳ ಪ್ರಯೋಗ ಹೆಚ್ಚಾಗಿದ್ದು ಇವುಗಳಿಗೆ ದಹೇಜಿ ಗತ್ ಎಂದು ಕರೆಯುತ್ತಾರೆ.

೬. ಲಯಕಾರಿಯುಕ್ತಾ ಕಾಯ್ದಾ, ವಿವಿಧ ಪ್ರಕಾರದ ಚಕ್ರದಾರ ಗತ್‌ಗಳು ಹೆಚ್ಚಾಗಿದ್ದು ನಗನಗ ಧಿರಧಿರ, ಧಿಟಧಿಟ, ಘೇತಿಟತಾನ, ತಗನ್ ಮುಂತಾದ ಬೋಲ್ ಗಳ ಪ್ರಯೋಗ ಕಂಡುಬರುತ್ತವೆ.

. ಅಜರಾಡಾ ಘರಾಣೆ:

ಇದು ದಿಲ್ಲಿ ಘರಾಣೆಯ ಶಾಖೆ. ದಿಲ್ಲಿ ಬಾಜಿನ ಪ್ರಮುಖವಾದ ಅಂಶಗಳೆಂದರೆ ಈ ಘರಾಣೆಯಲ್ಲಿ ಅಡಕವಾಗಿದೆ. ದಿಲ್ಲಿ ಬಾಜಿನ ಪೇಶಕಾರ, ಕಾಯ್ದಾ ಹಾಗೂ ರೇಲಾಗಳು ಅಜರಡಾ ವಾದನ ಶೈಲಿಯಲ್ಲಿಯೂ ಚಲಾವಣೆಯಲ್ಲಿವೆ. ಡಗ್ಗಾದ ಪ್ರಯೋಗ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತದೆ. ಲಯಗಳಲ್ಲಿ ಆಡಿಲಯಬೋಲ್‌ಗಳನ್ನು ವಿಶೇಷವಾಗಿ ನುಡಿಸಲಾಗುತ್ತವೆ. ಆದುದರಿಂದ ಆಡಿಲಯದ ಕಾಯ್ದಾಗಳಿಗೆ ಅಜರಾಡಾ ಕಾಯ್ದಾ ಎಂದೂ ಕರೆಯುವರು. ಧಿಂಗ ಧಿನಾಗಿನಾ, ಧಾಧಾನ, ಗಿಡನಗ, ಧಿಕಿಟ ಧಾಗೆನ, ಧಾಧಾ ಗೆಗೆನಕ, ಕಿಡನಗ ಇತ್ಯಾದಿ ಬೋಲ್ ಗಳಿಗೆ ಅಜರಾಡ ಘರಾಣೆಯಲ್ಲಿ ಪ್ರಾಧಾನ್ಯ.

ಮೇರಠ ಜಿಲ್ಲೆಯಲ್ಲಿಯ ‘ಅಜರಾಡ್’ ಎಂಬ ಗ್ರಾಮದಲ್ಲಿ ಈ ಘರಾಣೆಯ ಉದಯವಾಯಿತು. ಉಸ್ತಾದ್ ಕಲ್ಲೂಖಾನ್ ಮತ್ತು ಮೀರೂಖಾನ್ ಇವರೇ ಈ ಘರಾಣೆಯ ಪ್ರವರ್ತಕರು ಉಸ್ತಾದ್ ಶಮ್ಮುಖಾನ್, ಉಸ್ತಾದ್ ಹಬೀಬುದ್ದೀನ್ ಖಾನ್, ರಮ್‌ಜಾನ್ ಮೊದಲಾದವರು ಈ ಘರಾಣೆಯ ಪ್ರಖ್ಯಾತ ತಬಲಾವಾದಕರಾಗಿದ್ದಾರೆ.

ಅಜರಾಡಾ ಘರಾಣೆಯ ವಿಶೇಷತೆಗಳು:

೧. ಕಾಯ್ದಾಗಳ ಚಲನೆ ತೀಸ್ರ ಜಾತಿಯಲ್ಲಿ ಹೆಚ್ಚಾಗಿ ಬರುವದು ಈ ಘರಾಣೆ ವಿಶೇಷ.

೨. ಡಗ್ಗಾದ ಪ್ರಯೋಗ ಹಾಗೂ ಅದರಲ್ಲಿ ಸ್ವರ ತೆಗೆಯುವುದು ವಿಶೇಷತೆ.

೩. ಮಧ್ಯ ಮತ್ತು ತೋರು ಬೆರಳುಗಳ ಪ್ರಯೋಗ ತಬಲಾ ಹಾಗೂ ಡಗ್ಗಾ ಎರಸರಲ್ಲೂ ಕಂಡು ಬರುತ್ತದೆ.

೪. ಅನಾಮಿಕ (ಉಂಗುರ ಬೆರಳು) ಬೆರಳಿನ ಪ್ರಯೋಗ ತಬಲಾದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಬರುವ ಅಕ್ಷರಗಳು ಧಿನ್ನಾಗಿನ್ನಾ, ಗಿಡನಗ, ಧಿಗನ, ಘೆನಕ ಮುಂತಾದವುಗಳು.

. ಫರೂಕಾಬಾದ್ ಘರಾಣೆ:

ಲಖನೌ ಘರಾಣೆಯ ಉಸ್ತಾದ ಬಕ್ಷುಕಾನ್‌ರು ತಮ್ಮ ಮಗಳ ಮದುವೆಯನ್ನು ಫರೂಕಾಬಾದ್ ನಿವಾಸಿಯಾದ ಉಸ್ತಾದ ವಿಲಾಯತ್ ಅಲೀ ಖಾನ್ (ಹಾಜಿ) ಸಾಹೇಬರೊಂದಿಗೆ ಮಾಡಿದನು. ಅಳಿಯನಿಗೆ ವರದಕ್ಷಿಣೆಗಾಗಿ ಕೆಲವು ಮಹತ್ವದ ಬೋಲ್‌ಗಳನ್ನೇ ದಾನ ಮಾಡಿದನು ಎಂಬ ಒಂದು ರಮಣೀಯವಾದ ದಂತಕಥೆ ಪ್ರಚಾರದಲ್ಲಿದೆ. ಉಸ್ತಾದ್ ವಿಲಾಯತ್ ಅಲೀಖಾನ್ ಇವರಿಂದಲೆ ಫರೂಕಾಬಾದ್ ಘರಾಣಿಯು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಈ ವಾದನ ಶೈಲಿಯಲ್ಲಿ ಲಖನೌ (ಪೂರಬ್) ಘರಾಣೆಯ ಸಾಮ್ಯವನ್ನು ಗುರುತಿಸಲಾಗುತ್ತದೆ. ಗತ್’ ‘ತಿಹಾಯಿಗಳ ರಚನೆ ಈ ವಾದನ ಶೈಲಿಯಲ್ಲಿ ಅಧಿಕ. ಪಖವಜ್ ವಾದನ ಶೈಲಿಯಂತೆ ಈ ಘರಾಣೆಯಲ್ಲಿ ಖುಲ್ಲಾ ಬೋಲ್ ಗಳಿಗೆ ಹೆಚ್ಚು ಪ್ರಾದಾನ್ಯವಿದೆ. ಆದುದರಿಂದ ಈ ವಾದನ ಶೈಲಿ ನೃತ್ಯಕ್ಕೆ ಹೆಚ್ಚು ಅನುಕೂಲ ಕಾಯ್ದಾ, ರೇಲಾ, ಪೇಶಕಾರ್, ತುಕಡಾ ಹಾಗೂ ಮುಕಡಾ, ಪರಣ್ ಮುಂತಾದವುಗಳು ಫರೂಕಾಬಾದ್ ಶೈಲಿಯ ವೈಶಿಷ್ಟ್ಯಗಳಾಗಿವೆ. ನಿರ್ಧಿಷ್ಟವಾದ ತಿಪಲ್ಲಿ, ಚೌಪಲ್ಲಿ, ಪೇಶಕಾರ, ಗತ್ ಗಳು ಪ್ರಮುಖ.

ಧಗತ್ತಕಿಟ, ಧಾತ್ರಕಧಿಕಿಟ, ತಕತಕತಕ, ಧೀನಾಗದ್ದಿಗನ, ಮೊದಲಾದ ಬೋಲ್‌ಗಳ ಬಳಕೆ ಈ ಘರಾಣೆಯಲ್ಲಿ ಹೆಚ್ಚು. ಉಸ್ತಾದ್ ನನ್ನೇಖಾನ್, ಉಸ್ತಾದ್ ಕಮಾಮತುಲ್ಲಾಖಾನ್, ಉಸ್ತಾದ್ ಇಮಮ್ ಬಕ್ಷಿ, ಉಸ್ತಾದ್ ಗುಲಾಮ ಹುಸೇನ್, ಉಸ್ತಾದ್ ಶಮ್ ಸುದೀನ್, ಸ್ತಾದ್ ಅಹಮ್ಮದ್ ಜಾನ್ ತಿರಕವಾ, ಉಸ್ತಾದ್ ಶೇಖದಾವೂದ್ ಖಾನ್, ಪಂ. ಜ್ಞಾನಘೋಷ, ಉಸ್ತಾದ್ ಬಂದೇ ಹುಸೇನ್ ಖಾನ್ ಮುಂತಾದವರು ಫರೂಕಾಬಾದ್ ಘರಾಣೆಯ ಪ್ರಮುಖ ತಬಲಾವಾದರು.

ಫರೂಕಾಬಾದ್ ಘರಾಣೆಯ ವಿಶೇಷತೆಗಳು:

ಈ ಘರಾಣೆಯು ದಿಲ್ಲಿ ಹಾಗೂ ಲಖನೌ ಘರಾಣೆಯ ವಾದನ ಶೈಲಿಯನ್ನು ಅನುಸರಿಸುತ್ತದೆ.

೧.ರೇಲಾಹಾಗೂ ರೌಗಳ ಪ್ರಯೋಗ ಹೆಚ್ಚಾಗಿದ್ದು ಲಯಕಾರಿಯಿಂದ ಕೂಡಿದ ವಿವಿಧ ಜಾತಿಯ ಬೋಲ್ ಗಳನ್ನು ನುಡಿಸುವುದು ಈ ಘರಾಣೆಯ ವೈಶಿಷ್ಟ್ಯ.

೨. ಚಾಲ ಅಥವಾ ಚಲನ್ ನುಡಿಸುವ ವಿಶೇಷ. ಸ್ವರಂತ್ರ ವಾದನಕ್ಕೆ ಹೆಚ್ಚು ಮಹತ್ವ ಈ ಘರಾಣೆಯಲ್ಲಿದೆ.

. ಬನಾರಸ್ ಘರಾಣೆ:

ಲಖನೌ ಘರಾಣೆಯ ಒಂದು ಶಾಖೆ – ಬನಾರಸ್ ಘರಾಣೆ. ಲಖನೌ (ಪೂರಬ್) ಘರಾಣೆಯ ಉಸ್ತಾದ ಮೋದುಖಾನ್‌ರ ಶಿಷ್ಯರಾದ ಬನಾರಸದ ಪಂಡಿತ ರಾಮಸಹಾಯ ಮಿಶ್ರರೆ ಬನಾರಸ್ ಘರಾಣೆಯ ಪ್ರವರ್ತಕರು.

ಕಾಯ್ದಾ, ಉಠಾನ್, ಗತ್, ಪರಣ್, ಮೊಹರಾ, ರೇಲಾ, ಬಾಂಟ್ (ಬಾಂಟಿ) ಲಗ್ಗಿ, ಲಡಿ ಮುಂತಾದ ವಾದನ ವೈಶಿಷ್ಟ್ಯ ಬನಾರಸ ಬಾಜಿನದ್ದಾಗಿದೆ. ತಬಲಾದ ಲವ (ಮೈದಾನ) ಮತ್ತು ಶಾಹಿಯ ಮೇಲೆ ಹೆಚ್ಚು ಬೋಲ್‌ಗಳನ್ನು ಬಾಜಿನದ್ದಾಗಿದೆ. ತಬಲಾದ ಲವ (ಮೈದಾನ) ಮತ್ತು ಶಾಹಿಯ ಮೇಲೆ ಹೆಚ್ಚು ಬೋಲ್‌ಗಳನ್ನು ನುಡಿಸುವದು ರೂಢಿ. ಪಖವಾಜ್ ವಾದ್ಯದ ಬೋಲ್‌ಗಳನ್ನೇ ತಬಲಾದಲ್ಲಿ ನುಡಿಸುತ್ತಾರೆ. ಆದುದರಿಂದ ಜೋರ್ ದಾರ್ ಮತ್ತು ಖುಲ್ಲಾ ಬೋಲ್ ಗಳ ಬಳಕೆ ಹೆಚ್ಚು.

ತಬಲಾ ಸ್ವತಂತ್ರವಾದನ (ಸೋಲೋ ಪ್ರಾರಂಭದ ಪೇಶಕಾರ್ ದ ಬದಲಾಗಿ ‘ಉಠಾನ್’ ಎಂಬ ಒಂದು ಆಕರ್ಷಕ ಬೋಲ್ ನುಡಿಸುವದು ಬನಾರಸ್ ಬಾಜದ ವೈಶಿಷ್ಟ್ಯ. ಈ ಘರಾಣೆಯ ತಬಲಾವಾದಕರು ಹೆಚ್ಚಾಗಿ ನೃತ್ಯದೊಂದಿಗೆ ಸಾಥ ಸಂಗತ ಮಾಡುತ್ತಾರೆ.

ಪಂಡಿತ ಭೈರವ ಸಹಾಯ, ಪಂಡಿತ ಬಲದೇವ ಸಹಾಯ, ಪಂಡಿತ ಬೀರೂ ಮಿಶ್ರ, ಬಾಜಾ ಮಿಶ್ರಾ, ದುರ್ಗ ಸಹಾಯ, ಕಂಠ ಮಹಾರಾಜ, ಪಂಡಿತ ಜಾನಕಿ ಸಹಾಯ, ನನ್ನೂ ಸಹಾಯ, ಪಂಡಿತ ಸಮತಾ ಪ್ರಸಾದ ಮಿಶ್ರ, ಪಂಡಿತ ಅನೋಕೆಲಾಲ ಮಿಶ್ರ, ಪಂಡಿತ ಕಿಷನ್ ಮಹಾರಾಜ ಮುಂತಾದವರು ಈ ಘರಾಣೆಯ ಪ್ರಮುಖ ತಬಲಾವಾದಕರಾಗಿದ್ದಾರೆ.

ಬನಾರಸ್ ಘರಾಣೆಯ ವಿಶೇಷತೆಗಳು:

ಈ ಘರಾಣೆಯು ಲಖನೌ ಘರಾಣೆಯ ಒಂದು ಶಾಖೆಯಾಗಿದೆ.
೧. ತಬಲಾದ ಲವ ಮತ್ತು ಶಾಯಿಯ ಮೇಲೆ ಬೋಲ್ ಗಳ ಪ್ರಯೋಗ ಹೆಚ್ಚು.

೨. ಪಖವಾಜ್ ವಾದ್ಯದ ಖುಲ್ಲಾ ಬೋಲುಗಳನ್ನು ತಬಲಾದ ಮೇಲೆ ನುಡಿಸುವ ಪದ್ಧತಿ.

೩. ತಬಲಾ ಸ್ವತಂತ್ರವಾದನದ ಪ್ರಾರಂಭದ ಪೇಶ್ ಕಾರ್ದ ಬದಲಾಗಿ ಉಠಾನ್ಎಂಬ ಆಕರ್ಷಕ ಬೋಲ ನುಡಿಸುವುದು ಈ ಘರಾಣೆಯ ವಿಶೇಷ.

೪. ಈ ಘರಾಣೆಯ ವಾದಕರು ಹೆಚ್ಚಾಗಿ ನೃತ್ಯದೊಂದಿಗೆ ಸಾಥಸಂಗತ ಮಾಡುತ್ತಾರೆ. ತಾಳದ ಠೇಕಾದ ಪ್ರಕಾರಗಳನ್ನು ಹೆಚ್ಚಾಗಿ ನುಡಿಸುತ್ತಾರೆ.

ಇದರಲ್ಲಿ ಬರುವ ಬೋಲಗಳ ಅಕ್ಷರಗಳು ಧಿಕ್ ಧಿನ್ನಾ, ಗದಿಗನ, ಕ್ಡಧಾನ್, ಘಿಡಾನ್, ಧಿಟ, ಧಿಟಕತಕ ಮುಂತಾದವುಗಳು ಅತೀ ಧೃತ್ ವಲಯದಲ್ಲಿ ಬೋಲ್‌ಗಳನ್ನು ಸ್ಪಷ್ಟವಾಗಿ ನುಡಿಸುವದು ಈ ಘರಾಣೆಯ ವಿಶೇಷತೆ.

. ಪಂಜಾಬ ಘರಾಣೆ:

ಪಂಜಾಬ ಘರಾಣೆಯ ತಬಲಾ ವಾದನ ಪದ್ಧತಿಯು, ಪಖವಾಜ್ ವಾದನವನ್ನು ಆಧರಿಸಿ ಸ್ವತಂತ್ರವಾಗಿ ಬೆಳೆದು ಬಂದಿರುವ ವಿಶಿಷ್ಟ ಶೈಲಿ. ಈ ಬಾಜಿನ ಕಲಾವಿದರು ಪಖವಾಜ ಬೋಲುಗಳನ್ನು ಬಂದಿಶ್ಮಾಡಿ ತಬಲಾ ಬೋಲ್‌ಗಳಾಗಿ ನುಡಿಸುತ್ತಾರೆ. ಇದರಿಂದ ಒಂದು ವಿಶಿಷ್ಟವಾದ ನಾದ ಹೊರಹೊಮ್ಮಿಸುವುದೇ ಈ ಘರಾಣೆಯ ವೈಶಿಷ್ಟ್ಯ.

ಪಂಜಾಬ ಘರಾಣಾದಲ್ಲಿ ಕಾಯ್ದಾಗಳು ದಿಲ್ಲಿ ಘರಾಣೆಯಂತೆಯೇ ಇದ್ದು ವಿಸ್ತಾರವಾಗಿ ಜೋರದಾರಿಯಿಂದ ಕೂಡಿರುತ್ತವೆ. ವಿಸ್ತಾರವಾದ ಗತ್, ಚಕ್ರಧಾರ, ಫರಮಾಯಿಷಚಕ್ರಧಾರ ಮತ್ತು ಇವುಗಳಲ್ಲದೆ ಅನೇಕ ಲಯಕಾರಿಯುಕ್ತ ತಿಹಾಯಿಗಳು ಹೆಚ್ಚಾಗಿ ನುಡಿಸಲಾಗುತ್ತವೆ. ಚೋಪ್ಮತ್ತು ತಯಾರಿಯು ಈ ಬಾಜಿನ ಹೆಗ್ಗುರುತು.

ಧಾತಿನ್ ನಾಡ್, ಕೃಧಾನ್, ಗಿಡತಕ, ಧಿಕ್ ಧಿನ್ನಾ, ಗೇತಕ್ ಗೇತಕ ಧಿನ್ನಾ, ನಗ ಮುಂತಾದ ಬೋಲ್ ಗಳ ಪ್ರಯೋಗ ಪಂಜಾಬ ಘರಾಣೆಯಲ್ಲಿ ಕೇಳಿಬರುತ್ತವೆ. ಉಸ್ತಾದ್ ಫಕೀರ ಭಕ್ಷಖಾನ್ ಈ ಘರಾಣೆಯ ಪ್ರವರ್ತಕರೆಂಬ ಮನ್ನಣೆ ಪಡೆದಿದ್ದಾರೆ. ಉಸ್ತಾದ್ ಕಾದಿರ್ ಭಕ್ಷಖಾನ್, ಉಸ್ತಾದ್ ಕರಾಮಹಿಲಾಯಿ ಖಾನ್, ಉಸ್ತಾದ್ ಅಲ್ಲಾರಖಾ, ಉಸ್ತಾದ್ ಜಾಕೀರ ಹುಸೇನ್ ಮುಂತಾದವರು ಈ ಘರಾಣೆಯ ಪ್ರಖ್ಯಾತ ಕಲಾವಿದರು.

ಪಂಜಾಬ ಘರಾಣೆಯ ವಿಶೇಷತೆಗಳು:

೧. ಈ ಘರಾಣೆಯು ಪಖವಾಜ್ ವಾದನವನ್ನು ಆಧರಿಸಿ ಸ್ವತಂತ್ರವಾಗಿ ಬೆಳೆದು ಬಂದಿವೆ. ಇದರಲ್ಲಿ ಪಖವಾಜ್ ಬೋಲ್ ಗಳನ್ನು     ಬಂದೀಶ್ಮಾಡಿ, ತಬಲಾ ಬೋಲ್ ಗಳಾಗಿ ನುಡಿಸುತ್ತಾರೆ.

೨. ಕಾಯ್ದಾಗಳು ದಿಲ್ಲಿ ಘರಾಣೆಯಂತೆ ಇದ್ದು ವಿಸ್ತಾರವಾಗಿ, ಜೋರದಾರಿನಿಂದ ಕೂಡಿರುತ್ತವೆ.

೩. ಸ್ವತಂತ್ರವಾದನದಲ್ಲಿ ಬಾಯಿಂದ ಬೋಲ್ ಗಳನ್ನು ಹೇಳುವದು (ಪಂಡಿತ್) ವಿಶೇಷ, ಧಾತಿಧಾಧಾ, ಘಿನ್ನಡಾನ್, ಕ್ಡಧಾನ್ ಮುಂತಾದವುಗಳ ಪ್ರಯೋಗ.

. ತಬಲಾದ ಮೇಲೆ ಕೈ ಇಡುವ ಪದ್ಧತಿ:

ತಬಲಾದ ಮೇಲೆ ಕೈ ಇಡುವಾಗ – ಇಡೀ ದೇಹ ಸಡಿಲುಗೊಳಿಸಿ ಹಾಗೂ ಕೈಯನ್ನು ಬಿಗಿಗೊಳಿಸದೆ ಇಡಬೇಕು. ಅನಾಮಿಕ (೪ನೇ ಬೆರಳು) ಶಾಯಿಯ ಅಂಚಿನಲ್ಲಿ ಇಟ್ಟು ತೋರುಬೆರಳಿನಿಂದ (೨ನೇ ಬೆರಳು) ಕಿನಾರೆಯ ಮೇಲೆ (ಚಾಟಿ) ಸ್ಪರ್ಷಿಸುತ್ತಿರಬೇಕು. ಮಧ್ಯ ಬೆರಳು (೩ನೇ ಬೆರಳು) ಮೇಲಕ್ಕೆತ್ತಿ ಹೆಬ್ಬೆರಳುಗಳನ್ನು ಯಾವಾಗಲೂ ಇಂಡಿ (ಗಜರೆ) ಯ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಕೈಯನ್ನು ತಬಲಾದಿಂದ ತುಂಬಾ ಮೇಲಕ್ಕೆ ಎತ್ತಲೇಬಾರದು. ಕಿರುಬೆರಳನ್ನು ೪ನೇಯ ಬೆರಳಿನೊಂದಿಗೆ ಹಗುರವಾಗಿ ಇಟ್ಟು, ಹೆಬ್ಬೆರಳು ಇಂಡಿಯ ಮೇಲೆ ಇರಬೇಕು. ಅಥವಾ ಇಂಡಿಯನ್ನು ಸ್ಪರ್ಷಿಸುತ್ತಿರಬೇಕು. ತೋರು ಬೆರಳು ಕಿನಾರೆಯ ಮೇಲೆ ಬಲವಾಗಿ ಆಘಾತ ಮಾಡಬೇಕು. ಈ ಆಘಾತದ ಪೆಟ್ಟು ನಾಅಥವಾ ತಾ ಅಕ್ಷರವನ್ನು ಹೊರಹೊಮ್ಮಿಸುತ್ತದೆ. ಕಿನಾರೆ (ಚಾಟಿ) ಯನ್ನು ಯಾವಾಗ ಜೋರಾಗಿ ನುಡಿಸುತ್ತೇವೆಯೋ ಆಗ ಮಧ್ಯ ಬೆರಳು ಮೇಲಕ್ಕೆ ಎತ್ತಿರಬೇಕು. ಇದರ ಮೂಲಕ ಕಿನಾರೆ ಸುನಾದವನ್ನು ಸ್ಪಷ್ಟವಾಗಿ ಹೊರಹೊಮ್ಮಿಸುತ್ತದೆ. ಈ ಪದ್ಧತಿ ಗುರುವಿನ ಮಾರ್ಗದರ್ಶನದಿಂದ ಮಾತ್ರ ಖಚಿತವಾಗುತ್ತದೆ. ಇದರ ಅಭ್ಯಾಸವನ್ನು ವಿದ್ಯಾರ್ಥಿಗಳು ತಾಳ್ಮೆಯಿಂದ ಮಾಡಬೇಕು.

ಪ್ರಮುಖ ಆರು ಘರಾಣೆಗಳಲ್ಲಿ ತಿರಕಟನುಡಿಸುವ ಪದ್ಧತಿಯ ಅವಲೋಕನ

ಘರಾಣೆಗಳು

ತಿ

ಕಿ

ದಿಲ್ಲಿ ಮಧ್ಯ ಬೆರಳು ತಬಲಾದ ಶಾಯಿಯ ಮೇಲೆ ತೋರು ಬೆರಳು ತಬಲಾದ ಶಾಯಿಯ ಮೇಲೆ ಮುಂಗೈ ಡಗ್ಗಾದ ಮೇಲೆ ಮಧ್ಯ ಬೆರಳು ತಬಲಾದ ಶಾಯಿಯ ಮೇಲೆ
ಪೂರಬ್ (ಲಖನೌ) ಮಧ್ಯ ಹಾಗೂ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ ತೋರು ಬೆರಳು ತಬಲಾದ ಶಾಯಿಯ ಮೇಲೆ ಮುಂಗೈ ಡಗ್ಗಾದ ಮೇಲೆ ಮಧ್ಯ ಹಾಗೂ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ
ಅಜರಾಡ ಮಧ್ಯ ಬೆರಳು ತಬಲಾದ ಶಾಯಿಯ ಮೇಲೆ ತೋರು ಬೆರಳು ತಬಲಾದ ಶಾಯಿಯ ಮೇಲೆ ಮುಂಗೈ ಡಗ್ಗಾದ ಮೇಲೆ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ
ಫರೂಕಾಬಾದ್ ಮಧ್ಯ ಬೆರಳು ತಬಲಾದ ಶಾಯಿಯ ಮೇಲೆ ತೋರು ಬೆರಳು ತಬಲಾದ ಶಾಯಿಯ ಮೇಲೆ ಮುಂಗೈ ಡಗ್ಗಾದ ಮೇಲೆ ಮಧ್ಯ ಹಾಗೂ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ
ಬನಾರಸ ಮಧ್ಯ ಹಾಗೂ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ ತೋರು ಬೆರಳು ತಬಲಾದ ಶಾಯಿಯ ಮೇಲೆ ಮುಂಗೈ ಡಗ್ಗಾದ ಮೇಲೆ ಮಧ್ಯ ಹಾಗೂ ಅನಾಮಿಕ ಬೆರಳು ತಬಲಾದ ಶಾಯಿಯ ಮೇಲೆ
ಪಂಜಾಬ ಮಧ್ಯ ಹಾಗೂ ಅನಾಮಿಕ ಬೆರಳು ತೋರು ಬೆರಳು ತಬಲಾದ ಮುಂಗೈ ಡಗ್ಗಾದ ಮೇಲೆ ತೋರು ಬೆರಳು ಹೊರತು ಪಡಿಸಿ ಉಳಿದ ಮೂರು ಬೆರಳುಗಳು (ಮಧ್ಯೆ, ಅನಾಮಿಕ ಹಾಗೂ ಕಿರುಬೆರಳು) ತಬಲಾದ ಶಾಯಿಯ ಮೇಲೆ

 

(ಸೂ: ಷೂರಬ (ಲಖನೌ) ಮತ್ತು ಬನಾರಸ ಘರಾಣೆಯಲ್ಲಿ ಒಂದೇ ರೀತಿಯಾಗಿದ್ದು, ದಿಲ್ಲಿ, ಅಜರಾಡ, ಫರೂಕಾಬಾದ್ ಮತ್ತು ಪಂಜಾಬ ಘರಾಣೆಯಲ್ಲಿ ಭಿನ್ನತೆಯನ್ನು ಕಾಣಬಹುದು)

 

ಹೆಬ್ಬೆರಳು ತೋರು ಬೆರಳು ಮಧ್ಯ ಬೆರಳು ಅನಾಮಿಕ ಬೆರಳು ಕಿರು ಬೆರಳು

 

. ಡಗ್ಗಾದ ಮೇಲೆ ಕೈ ಇಡುವ ಪದ್ಧತಿ:

ಡಗ್ಗಾದ ಮುಚ್ಚಿಗೆ (ಪುಡಿ) ಯ ಮೇಲೆ ಎಡಗೈಯನ್ನು ಹಗುರವಾಗಿ ಶಾಹಿಯ ಅಂಚಿನ ಭಾಗದಲ್ಲಿ ಇರಿಸಿ, ಮುಂಗೈಯನ್ನು ಹಾವಿನ ಹೆಡೆಯ ಹಾಗೆ ಎತ್ತಿ, ಮಧ್ಯಬೆರಳು ಹಾಗೂ ತೋರುಬೆರಳಿನಿಂದ (೩ ನೇಯ ಹಾಗೂ ೨ ನೇಯ ಬೆರಳಿನಿಂದ) ಅನುಕ್ರಮವಾಗಿ ಒಂದಾದ ಅನಂತರ ಒಂದರಿಂದ ಶಾಹಿಯ ಮುಂಭಾಗದ ಮೇಲೆ ಜೋರಾಗಿ ಆಘಾತ ಮಾಡಬೇಕು. ಆಗ – , ಗೇ, , ಗಿ – ಅಕ್ಷರಗಳು ಹೊರಹೊಮ್ಮುವವು.

ಎಡಗೈಯ ಐದೂ ಬೆರಳು ಪ್ರತಿ ಆಘಾತ ಪ್ರಸಂಗದಲ್ಲಿಯೂ ಒಂದಕ್ಕೊಂದು ಹತ್ತಿರವಿದ್ದು ಶಾಹಿಯು ಕಾಣದ ಹಾಗೆ ಮುಚ್ಚಿ ಆಘಾತಿಸಿದಾಗ – , ಕಾ, ಕಿ, ಕೀ, ಕತ್ – ಅಕ್ಷರಗಳು ಹೊರಹೊಮ್ಮುವಂತೆ ನುಡಿಸಬೇಕು. ಇದಕ್ಕೆ ‘ಚೋಪು’ ಎಂದೂ ಕರೆಯುವರು.

ಡಗ್ಗಾ ತೊಡೆಯಲ್ಲಿರಿಸಿಕೊಂಡು ಅಥವಾ ಡಗ್ಗಾದ ಚರ್ಮವನ್ನು ತಿಕ್ಕುತ್ತ ಬಾರಿಸುವುದು ಸರಿಯಲ್ಲ. ಶಾಸ್ತ್ರ ಸಮ್ಮತವೂ ಅಲ್ಲ. ಕೈಯ ನಯಕ್ಕೆ ಇದರಿಂದ ಬಾಧೆ ಉಂಟಾಗುತ್ತದೆ. ಅಸ್ತವ್ಯಸ್ತ ಕುಳಿತುಕೊಳ್ಳುವದು, ತಬಲಾ ಬಾರಿಸುವಾಗ ಮುಖವನ್ನು ವಿರೂಪಗೊಳಿಸುವದು. ಶರೀರವನ್ನು ಬಿಗಿ ಹಿಡಿಯುವುದು ಅಥವಾ ಅತಿ ತೂಗಾಡಿಸುವುದು ಶ್ರೋತಗಳ ಕೇಳಿಕೆಯ ಹದವನ್ನು ಕೆಡಿಸುತ್ತದೆ. ತಬಲಾ ಡಗ್ಗಾದ ಮಾಧುರ್ಯಕ್ಕೆ ಆತಂಕ ಉಂಟಾಗುತ್ತದೆ. ಆದುದರಿಂದ ತಬಲಾ ವಿದ್ಯಾರ್ಥಿಗಳು ಮೊದಲಿನಿಂದಲೂ ವಾದನ ಪದ್ಧತಿಯ ಆಸನಾದಿಗಳನ್ನು ಉತ್ತಮ ರೀತಿಯಲ್ಲಿ ರೂಢಿಸಿಕೊಳ್ಳುವುದು ಅವಶ್ಯ.

ಉಗುರುಗಳನ್ನು ಹೆಚ್ಚು ಬೆಳೆಸದೆ ಇರುವುದು, ಕೈ ಬೆರಳುಗಳ ಬಗ್ಗೆ ಹೆಚ್ಚಿನ ಕಾಳಜಿ ಇವು ತಬಲಾ ವಾದಕನು ಗಮನದಲ್ಲಿಡಬೇಕಾದ ವಿಷಯಗಲಾಗಿವೆ. ತಬಲಾ ಸೋಲೋ ಅಥವಾ ಸಾಥ ಸಂಗತ ಮಾಡುವಾಗ ಗಮನವು ನುಡಿಸಬೇಕಾದ ಅಕ್ಷರ, ಮಾಧುರ್ಯ, ತಾಳ, ಲಯ ಇವುಗಳ ಕಡೆಗೆ ಸ್ಥಿರಗೊಳಿಸಬೇಕು. ತಬಲಾವಾದನ ಅಭ್ಯಾಸದ ಕಾಲಕ್ಕೆ ಬೋಲ್ ಗಳ ಸ್ಫುಟವಾದ ಸುಮಧುರವಾದ ಹೊರಹೊಮ್ಮಿಕೆಯ ಕಡೆಗೆ ಲಕ್ಷ್ಯವಿರಬೇಕು. ಕಲಾಭ್ಯಾಸದಲ್ಲಿ ಇಚ್ಛೆ ಹಾಗೂ ಅಭಿರುಚಿಗೆ ಪ್ರಧಾನ್ಯವಿರುತ್ತದೆ. ಸಂಗೀತ ಸರಸ್ವತಿಯ ಆರಾಧನೆಯಲ್ಲಿ ವಿಶೇಷ ಆಸಕ್ತಿ ಹಾಗೂ ಗುರುಗಳ ಮಾರ್ಗದರ್ಶನದಂತೆ ನಡೆಯುವ ಛಲವಿರಬೇಕು.

ತಬಲಾವಾದಕರು ಅಥವಾ ವಿದ್ಯಾರ್ಥಿಗಳು ಪ್ರತಿ ದಿವಸ ಎರಡರಿಂದ ನಾಲ್ಕು ಗಂಟೆ ಸತತವಾಗಿ ತಬಲಾ ನುಡಿಸುವುದನ್ನು ರೂಢಿಸಿಕೊಳ್ಳಬೇಕು. ಅಭ್ಯಾಸದ ಅನಂತರ ಕೆಲವೊಂದು ಪೌಷ್ಠಿಕ ಪದಾರ್ಥಗಳನ್ನು ತಿನ್ನಬೇಕು. ಖೂಬ್ ಖಾನಾ, ಖೂಬ್ ಬಜಾನಾಎಂದು ಉಸ್ತಾದರು ಹೇಳಿದ್ದಾರೆ.

ತಬಲಾ ವಾದನ ಅಭ್ಯಾಸವನ್ನು ಯಾವಾಗಲೂ ಠಾಯ(ಒಂದನೇ ಕಾಲ) ಲಯದಲ್ಲಿ, ಪ್ರತಿಯೊಂದು ಬೋಲಿನ ವಿಲಂಬಿತ ಲಯದಲ್ಲಿ ಮಾಡಬೇಕು. ಇದರ ಮೂಲಕ ನುಡಿಸುವ ಬೋಲಿನಲ್ಲಿ ಸ್ಪಷ್ಟತೆ ಸಾಧಿಸಲು ಸಾಧ್ಯವಾಗುತ್ತದೆ. ಒಮ್ಮೆ ಕೈ ಕುಳಿತ ಮೇಲೆ ಲಯವನ್ನುನಿಧಾನವಾಗಿ ಬೆಳೆಸುತ್ತಾ ಹೋಗಬೇಕು. ಇದು ಹಸ್ತ ಸಾಧನೆ. ಇದರಿಂದ ವಾದಕನ ಆತ್ಮಸ್ಥೈರ್ಯ ಬೆಳೆಯಲು ಅನುಕೂಲವಾಗುತ್ತದೆ.

ತಬಲಾ ವಾದಕನ ಕೈ ಬೆರಳುಗಳು ಅತಿಯಾಗಿ ಬೆವರುವದು, ಅಥವಾ ವಿಶೇಷ ಶಕ್ತಿ ಹಾಕಿ ತಬಲಾ ನುಡಿಸುವದು ಯೋಗ್ಯವಲ್ಲ. ದೋಷಗಳ ತ್ಯಾಗ, ಗುಣಗಳ ಸಾಧನೆ – ಇದೇ ವಾದಕನ ಅಂತಿಮ ಗುರಿಯಾಗಿರಬೇಕು.

ಈ ಎಲ್ಲ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಯು ತಬಲಾ ಅಭ್ಯಾಸವನ್ನು, ಹಸ್ತ ಸಾಧನೆಯನ್ನು ವಿಶೇಷ ಆಸಕ್ತಿಯಿಂದ, ಅಭಿರುಚಿಯಿಂದ, ಆನಂದದಿಂದ ಪ್ರತಿನಿತ್ಯ ಮಾಡುವುದು ಅವಶ್ಯ.

ವಾದನ ತಂತ್ರಗಾರಿಕೆಯಲ್ಲಿ ಎರಡು ಪ್ರಮುಖ ಅಂಶಗಳು ನಮಗೆ ತಿಳಿದುಬರುತ್ತದೆ. ಒಂದು ತಬಲಾ ಸ್ವತಂತ್ರವಾದ (ತಬಲಾ ಸೋಲೋ) ಎರಡನೇದು ತಬಲಾ – ಸಾಥ್ ಸಂಗತ್, ಈ ಎರಡು ವಿಷಯಗಳು ಒಂದಕ್ಕೊಂದು ಪೂರಕವಾಗಿದ್ದರೂ ಅನೇಕ ಭಿನ್ನತೆಯಿಂದ ಕೂಡಿದೆ.

ಸ್ವತಂತ್ರವಾದನದಲ್ಲಿ ಗುರುಪರಂಪರೆ ಪದ್ಧತಿ, ಬಾಜಿನ ವೈಶಿಷ್ಠ್ಯತೆ, ತಬಲಾ ಬೋಲಿನಲ್ಲಿ ಸ್ಪಷ್ಟತೆ, ಅದರಲ್ಲಿ ಪೇಶಕಾರ, ಕಾಯ್ದಾ, ರೇಲಾ, ತಿಹಾಯಿ, ಮುಕುಡಾ, ತುಕುಡಾ, ಚಕ್ರದಾರ ಮುಂತಾದ ಪ್ರಕಾರಗಳನ್ನು ಗುರುಮುಖೇನ ಕಲಿತು, ಕರಗತ ಮಾಡಿಕೊಂಡು ತನ್ನದೇ ಆದ ಛಾಪನ್ನು ಮೂಡಿಸುವದು ಒಂದು ತಂತ್ರಗಾರಿಕೆಯಾಗಿದೆ. ಸಾಥ ಸಂಗತ್ ನಲ್ಲಿ ಪ್ರಮುಖ ಗಾಯಕ ಅಥವಾ ವಾದಕರಿಗೆ ಅನುಗುಣವಾಗಿ, ಲಯಬದ್ಧವಾಗಿ, ಮುಖ್ಯ ಕಲಾವಿದನಿಗೆ ತೊಂದರೆಯಾಗದಂತೆ ನುಡಿಸಿ, ಸಂಗೀತ ಕಛೇರಿಗೆ ಸ್ಪೂರ್ತಿ ಹಾಗೂ ಮೆರಗನ್ನು ತಂದುಕೊಡುವುದು ಮುಖ್ಯವಾಗಿರುತ್ತದೆ.