ಬಸವಣ್ಣ ಹುಟ್ಟಲಾಗಿ
ಹೊಸಪೇಟೆ ಕಟ್ಟಲಾಗಿ
ಅಕ್ಕನಾಗಮ್ಮನ ಮಗನೇ
ಚಿಕ್ಕೋನೇ ಚನ್ನಬಸವಣ್ಣ
ರಸುಗಂದ ರಾಯಗಡಲೆಯ
ಬೆಳಿವಂತ ಸೀಮೇತರುಣ
ಬಸವಣ್ಣ ಬಂದವನಲ್ಲಾ
ಕಡದಿನ್ನು ಹೋದಾನಲ್ಲ
ಕಡಲೆಯ ಹೊಲವ ಮೇದು
ಎಡವೇ ಒಂದು ಆಲದಮರವೇ
ನಡುವೇ ಒಂದು ಗೊಲ್ಲಾರದೊಡ್ಡಿ
ಗೊಲ್ಲಾರ ದೊಡ್ಡಿ ವಳಗೆ
ದೊಡ್ಡೋನಾಗಿ ಗೊಲ್ಲರವನು
ಚಿಕ್ಕುಗೊಲ್ಲ ದೊಡ್ಡು ಗೊಲ್ಲ
ದೊಡ್ಡಗೊಲ್ನ ಮಡದಿ ಅವಳು
ಅತ್ತುಗಮ್ಮ ಚಿತ್ತುರಾಣಿ
ಅಣ್ಣಯ್ಯ ದೊಡ್ಡ ಗೊಲ್ಲ
ಅಣ್ಣನಾದ ದೊಡ್ಡು ಗೊಲ್ಲ
ತಮ್ಮಯ್ನ ಕರದವನೆ
ಬಾರೊ ತಮ್ಮಯ್ಯ ಕೇಳಯ್ಯ
ನೀ ದೊಡ್ಡ ಬೆರಳಿ ಎತ್ತನಿಡಿದು
ನೀ ಚಿಕ್ಕ ಬೆರಳಿ ಎತ್ತ ನಿಡಿದು
ನೀ ಕೆಬ್ಬೆ ಹೊಲವ ಉಳಯ್ಯ
ನಿನಗೆ ಹೆಣ್ಣ ನೋಡಿ ನಾನು
ಬರುವೇನೆನುತ ಹೇಳ್ಯವನೆ
ತಮ್ಮನಿಗ್ಹೆಣ್ಣುಗ್ಹೋಗಿ ಬರುವೆ
ಹಂಗಂತ ಹೇಳ್ಯವನೆ
ಮಡದಿ ಮನೆಗೆ ಬಂದವನೆ
ನೀ ಕೇಳೆಲೆ ಎಲೆ ಹೆಣ್ಣೆ
ತಮ್ಮನಿಗ್ಹೆಣ್ಣಿಗೆ ಹೋಗುವೆನೆ
ನೀ ಮೂರು ಬುತ್ತಿ ಕಟ್ಟೆಣ್ಣೆ
ಮೂರು ಬುತ್ತಿ ಕಟ್ಟವಳೆ
ಗಂಡನ ಕೈಗೆ ಕೊಟ್ಟವಳೆ
ಬುತ್ತಿನಾದುರು ತಗೊತಿನ್ನ
ಕೋಟು ಶರಾಯಿ ತೊಟ್ಟವನೆ
ಕುದುರೆನಾದರು ಹಿಡದವನೆ
ಮಡದೀಗೆ ಬುದ್ಧಿ ಹೇಳ್ಯವನೆ
ತಮ್ಮನಿಗ್ಹೊತ್ತಿಗೊತ್ತಿಗೆ
ನೀ ಊಟವ ಕೊಡು ಹೆಣ್ಣೆ
ಕುದುರೆ ಮೇಲೆ ಕುಂತವನೆ
ತಮ್ಮನಿಗ್ಹೆಣ್ಣಿಗೆ ಹೋಗ್ಯವನೆ
ದೊಡ್ಡ ಗೊಲ್ಲ ಅಣ್ಣಯ್ಯ
ಬೇಕಾದ ದೇಶ ತಿರುಗುತಾನೆ
ತಮ್ಮನಿಗ್ಹೆಣ್ಣು ಸಿಕ್ಕಲಿಲ್ಲ
ಕುದುರೆ ಮೇಲಿಂದಿಳೀಲಿಲ್ಲ
ಕಟ್ಟಿದ ಬುತ್ತಿ ಬಿಚ್ಚಲಿಲ್ಲ
ತಮ್ಮನಿಗ್ಹೆಣ್ಣು ಸಿಕ್ಕಲಿಲ್ಲ
ಹನ್ನೆರಡು ವರುಷ ತುಂಬೋಯ್ತು
ಹೆಣ್ಣಿಗ್ಹೋದ ಅಣ್ಣಯ್ಯ
ಹನ್ನೆರಡು ವರುಷ ಬರಲಿಲ್ಲ
ಆ ಮಧ್ಯೆ ಒಂದು ದಿವಸವು
ಇವಳತ್ತಿಗಮ್ಮ ಚಿತ್ತುರಾಣಿ
ಧರಿಯ ಮೇಲೆ ಬದುಕಿಲ್ಲ
ಧರಿಯ ಮೇಲೆ ಉಳಿದಿಲ್ಲ
ಇವಳ ಮೈದನಿಗೇನು ಕೆಲಸ
ಮಾಡುತಾಳೆ ಚಿತುರಾಣಿ
ತರತರದ ಅಡುಗೆ ಮಾಡಿ
ಇವಳು ಮಲ್ಲಿ ಮಡಿಗ್ಯವಳೆ
ಪಟ್ಟೆಸೀರೆ ಉಟ್ಟವಳೆ
ಅವಳು ಸಾದಿನ ಬಟ್ಟು ಇಟ್ಟವಳೆ
ಪಟ್ಟೆಮಂಚ ಸುಂಗಾರ
ಇವಳು ಅಲಂಕಾರ ಮಾಡ್ಯವ್ಳೆ
ಹನ್ನೆರಡು ಗಂಟೆ ಆಗೈತೆ
ತಮ್ಮಯ್ಯನವರು ಚಿಕ್ಕಗೊಲ್ಲ
ನಮ್ಮ ಅತ್ತುಗಮ್ಮ
ನನಗೆ ಊಟವಾದ್ರೆ ತರುಲಿಲ್ಲ
ಏನಾನೆ ಕೆಲಸಮಾಡ್ಯಾಳು
ನಾನೇ ಹೋಗಿ ತರುತೀನಿ
ಏರನಾದುರೆ ಬಿಟ್ಟುಕೊಂಡು
ಅರಮನೆಗೆ ಬಂದವನೆ
ಕೊಟ್ಟಿಗೆ ದನವ ಕಟ್ಯವನೆ
ತೊಟ್ಟಿ ಕಲ್ಲಮ್ಯಾಲೆ ನಿಂತವನೆ
ಇವಳು ಅತ್ತುಗಮ್ಮ ಚಿತ್ತುರಾಣಿ
ನಗದು ನಾಟ್ಯನಾಡ್ಯವಳೆ
ಮೈದನ ಕೈಗೆ ನೀರ ಬಿಟ್ಲು
ಕೈ ಕಾಲು ಮುಕವ ತೊಳದವನೆ
ನಡುಮಲ್ಲಿ ಕುಂತವನೆ
ಇವಳು ಊಟಕ್ಕಾದರು ಇಟ್ಟವಳೆ
ಊಟನಾದುರೆ ಮಾಡುತವನೆ
ಇವಳು ಬಾಕುಲಲ್ಲಿ ನಿಂತವಳೆ
ಕೇಳಪ್ಪ ಮೈದ ಮೈದಯ್ಯ
ನಾನಿನಿಗೊಂದು ಮಾತ ಹೇಳುತೀನಿ
ನಿಮ್ಮಣ್ಣ ಹೆಣ್ಣುಗೋಗ್ಯವರೊ
ಹನ್ನೆರಡು ವರುಷ ತುಂಬೋಯ್ತು
ನಾನೂ ನೀನೂ ಸೇರೀಗ
ಪಟ್ಟಿಮಂಚದ ಮೇಲೀಗ
ಪಗಾಡೆ ಜೂಜು ಆಡಬೇಕು
ವಿನೋದ ಸರಸ ಆಡಬೇಕು
ಏನಮ್ಮ ತಾಯಿ ನೀನೀಗ
ಅಣ್ಣನ ಮಡದಿ ನೀನಲ್ಲವೇ
ಬಾಯಲ್ಲಿ ನೀನು ತಾಯಮ್ಮ
ಕೆಟ್ಟ ವಾಕ್ಯ ನುಡಿಬ್ಯಾಡ
ಅಣ್ಣಯ್ಯನೀಗ ಬರುತಾನೆ
ನೀನು ಕೇಡು ವಾಕ್ಯ ನುಡಿಬ್ಯಾಡ
ಏನಾಲ ಮೈದ ಮುಟ್ಟಾಳ
ನಿ ಎಂಥಾ ಮಾತ ಹೇಳಿಯೊ
ನನ್ನ ರೂಪು ರೇಖೆ ನೋಡಯ್ಯ
ನಿನ್ನಗೆ ಮನಸೋತೆ ಬಾರಯ್ಯ
ಕೆಟ್ಟುಮಾತ ನುಡಿಬ್ಯಾಡ
ಪಾಪದ ಮಾತ ಆಡುಬ್ಯಾಡ
ಏನೊ ಮೈದ ಬಂದು ನೀನು
ಪಟ್ಟೆಮಂಚ ಏರಬಾರದ
ಹಟ್ಟಿಂದಾಚೆ ಬಿಡೋದಿಲ್ಲ
ಮೈದುನ ಕೈಯ ಹಿಡುದವಳೆ
ಮುಂದೇನ ಗತಿಯ ಮಾಡಲಪ್ಪ
ನನ್ನ ಪಾಪಿಯ ಕರದಿಂದ
ನಮ್ಮತ್ತಿಗೆ ನಾನು ಮುಟ್ಟಿದರೆ
ನನಗೆ ಏನು ಕರಮ ಬಂದಾದೊ
ಉಪಾಯನೇನೆ ತಾಳ್ಯವನೆ
ಮೆಲ್ಲಗೆ ಕೈಯ ಕಿತ್ತವನೆ
ಎತ್ತಿನ ಕೊಟ್ಟಿಗೆ ಹೋಗ್ಯವನೆ
ಎತ್ತುಗೊಳಾದ್ರೆ ಹಿಡುದವನೆ
ಕೆಬ್ಬೆ ಹೊಲತಕ್ಕೆ ಹೊರಟವನೆ
ದುಃಖನಾದುರೆ ಮಾಡುತವನೆ
ನೋಡಲಾ ನನ್ನ ಮಗುನೆ
ನಿನ್ನ ತಲೆ ತಗುಸದಿದ್ರೆ
ನನ್ನ ಹೆಸರು ಏತಕಾಗಿ
ಎದೆನಾದರೆ ಚಚ್ಚವಳೆ
ಲಬ್ಬಂತ ಬಾಯ ಬಡುದವಳೆ
ಅವರಳು ಅತ್ತುಗಮ್ಮ ಚಿತುರಾಣಿ
ತಲೆಯನಾದುರೆ ಕೆದಿರ‍್ಯವಳೆ
ಹುಟ್ಟಿದ ಸೀರೆ ಹರುದವಳೆ
ತೊಟ್ಟಿದ್ದ ಬಳೆಯ ಚಚ್ಚವಳೆ
ಅವಳು ಮೈಯ ಕೈಯ ಗೀಚವಳೆ
ಒಂದು ಮಣ ಬೂದಿ ತಗದು
ತಲೆಯ ತುಂಬ ಹೊಯಿಕೊಂಡ್ಳು
ನಡಿಯಲಾ ನನ್ನ ಮಗನೆ
ನಿನ್ನ ತಲೆಯ ತಗುಸದಿದ್ರೆ
ನನ್ನ ಹೆಸರು ಏತಕಾಗಿ
ಹಂಗಂತ ಹೇಳ್ಯವ್ಳೆ.
ಹನ್ನೆರಡು ವರುಷ ತುಂಬಿತು
ಹೆಣ್ಣಿಗೋದ ಅಣ್ಣಯ್ಯ
ಅವತ್ತು ಆಗ ಬಂದವನೆ
ಬಾಕ್ಲಲ್ಲಾದರೆ ನಿಂತವನೆ
ನೀರನ್ನೆ ಕೊಡೆ ನನ್ನ ಮಡದಿ
ನೀ ಬೇಗ ಬಾರೆ ನನ್ನ ಮಡದಿ
ಮಾತುಕಥೆ ಆಡಲಿಲ್ಲ
ಇವಳು ಬಿರುಬಿರನೆ ಬಂದವಳೆ
ರೂಪುರೇಖೆ ನೋಡ್ಯವನೆ
ಏನೇ ಮಡದಿ ಎಂದವನೇ
ಏನೇನೆ ಮಡದಿ ಈ ಕಥೇ
ರೂಪುರೇಖೆ ಏನೆಣ್ಣೆ
ಕೇಳಯ್ಯ ನೀನು ಮುಟ್ಟಾಳಮುರುವ
ಹನ್ನೆರಡಾನೆ ವರುಷದಿಂದ
ಎಲ್ಲಿಗೆ ನೀನು ಹೋಗಿದ್ದೆ
ನಿನ್ನ ತಮ್ಮ ಚಿಕ್ಕಗೊಲ್ಲಗೆ
ಏನ ಬುದ್ಧಿ ಹೇಳ್ಹೋದೊ
ಏನ ಯುಕ್ತಿ ಹೇಳ್ದೋದೊ
ನಿನ್ನ ತಮ್ಮನಿಗೆ ನಾ ಇದಿರೇನೊ
ನಿನ್ನ ತಮ್ಮನಿಗೆ ನಾ ಎದುರೇನೊ
ಹನ್ನೆರಡು ವರುಷದಿಂದಲು
ಹಗಲು ರಾತ್ರಿ ಅವನೀಗ
ಕಣ್ಣಾಗ ನಿದ್ರೆ ಕೊಡಲಿಲ್ಲ
ಸೀರೆ ರವಕೆ ಬಿಡಲಿಲ್ಲ
ಸೀರೆ ಕುಪ್ಪಸ ಹರುದವನೆ
ತಲೆಗೆ ಬೂದಿ ಊದವ್ನೆ
ಮೊದಲು ಹೋಗಿ ಅವನ ಕಡದು
ಅವನ ರಕ್ತ ತಂದು ನೀನು
ನನ್ನ ಹಣೆಗೆ ಹಚ್ಚಿದರೆ
ನಾ ನಿನಗೆ ಹೆಂಡರಾಗುವೆನು
ಹಾಗಂತ ಅವಳು ಹೇಳವ್ಯಳೆ
ಇವನು ಮಡದಿ ಮಾತ ಕೇಳ್ಯವನೆ
ಅದು ಕೆಲಸ ಆಗೇ ಹೋಯ್ತು
ಚಂದ್ರಾಯ್ದು ಕೊಡೆ ಮಡದಿ
ಗಂಡನ ಕೈಗೆ ಚಂದ್ರಾಯ್ದ
ಇವಳು ಮಡದಿ ಕೊಟ್ಟವಳೆ
ಬನ್ನಿ ಬನ್ನಿ ದಮ್ಮಯ್ಯ
ನೀವು ಊಟಮಾಡಿ ಹೋಗವರಿ
ಗಂಡನಿಗೂಟನಿಕ್ಕವಳೆ
ಇವನು ಊಟನಾದರೆ ಮಾಡ್ಯವನೆ
ಮಡದಿಗೆ ಹೇಳ್ಯವನೆ
ಕೇಳೆ ಕೇಳೆ ಎನ್ನ ಮಡದಿ
ಮೂರು ತುತ್ತ ಉಂಡವನೆ
ತಮ್ಮನಿಗಿಷ್ಟು ಊಟ ಕೊಡೆ
ಊಟ ಕೊಟ್ಟು ಪಾಪ ಕಳೆವೆ
ಪಾಪವಾ ನಾನು ಕಳುಕೊಳುವೆ
ಸೀಕು ಹುಳಿಮಜ್ಜಿಗೆ ಕೊಟ್ಟವ್ಳೆ
ತಕ್ಕೊಂಡಾದರೆ ಬರುತಾನೆ
ತಮ್ಮನಿರುವ ಸ್ಥಳಕವನು
ಅಣ್ಣಯ್ಯ ಬರೋದ ನೋಡ್ಯವನೆ
ಏರೋನಾದರೆ ನಿಲಿಸ್ಯವನೆ
ತಮ್ಮ ಓಡೋಡಿ ಬರುತಾನೆ
ಅಣ್ಣನ ಕೊರಳ ತಬ್ಬುತಾನೆ
ದುಃಖವ ಅವನು ಮಾಡುತಾನೆ
ನೀನು ಎಲ್ಲಿಗೋಗಿದ್ದೊ ಅಣ್ಣಯ್ಯ
ಹನ್ನೆರಡು ವರುಷದಿಂದ
ಎಲ್ಲಿ ನೀನು ಬದುಕಿದ್ದೊ
ತಮ್ಮನ ತಪ್ಪ ಕೇಳಲಿಲ್ಲ
ಇವನು ಪಾಪಗೇಡಿ ಅಣ್ಣಯ್ಯ
ಆಗೋ ಕೆಲಸ ಆಗೋಯ್ತು
ನೀ ನಡಿಯೋ ತಮ್ಮ ಹೋಗುವ
ನೀರು ಮರೆತು ಬಂದಿವ್ನಿ
ನಾನು ಊಟ ಮಾತ್ರ ತಂದಿವ್ನಿ
ಕಟ್ಟಿತಕ್ಕೆ ಹೋಗ್ಯವರೆ
ತಮ್ಮನ ಕೈಗೆ ಕೊಟ್ಟವನೆ
ಊಟ ಮಾಡಾಕೋಗ್ನವೆ
ಕೈ ಕಾಲು ಮಕವ ತೊಳದವನೆ
ಕೈಕಾಲು ಮಕವ ತೊಳದವನೆ
ಇವನು ತಂದೆ ತಾಯಿ ನೆನದವನೆ
ಸೂರ್ಯ ಚಂದ್ರ ನೆನದವನೆ
ಬಸವಣ್ಣ ನೆನೆದವನೆ
ಊಟಕ್ಕಾದರು ಕುಂತವನೆ
ಮೂಡಲಾಗಿ ಕುಂತವನೆ
ಹಿಂದಿಲಿಂದ ಬರುತಾನೆ
ಇವನಣ್ಣಯ್ಯ ಅವನೀಗ
ಚಂದ್ರಯ್ದ ತಕ್ಕೊಂಡು ಬಂದವನೆ
ಮೋಸದಿಂದ ಕೊಂದವನೆ
ಒಂದೇ ಏಟಿಗೆ ಹೊಡದವನೆ
ತಮ್ಮನ ತಲೆಯು ಬಿದ್ದೋಯ್ತು
ಮುಂಡ ಒಂದು ಕಡೆ ಬಿದ್ದೋಯ್ತು
ಇವನು ರಕ್ತನಾದ್ರು ತಗದವನೆ
ಮಡದೀಯ ಮನೆಗೆ ಬಂದವನೆ
ಮಡದಿಗೆ ಗುರುತ ಕೊಟ್ಟವನೆ
ಸುಖವಾಗಣ್ಣ ಸೇರ‍್ಯವನೆ
ಮಡದಿಯ ಮಲ್ಲಿ ದೊಡ್ಡಗೊಲ್ಲ
ಹೊಲದಲ್ಲಿ ನಿಂತಿದ್ದಂತ
ಬಸವಣ್ಣದೇವರು ಎತ್ತುಗಳು
ವಾಡುಕಾರ ಹೋದನಲ್ಲ
ಅವನಿನ್ನು ಬರಲಿಲ್ಲ
ಜೊತಿಗೆ ಕಣ್ಣಿ ಕಳೀಲಿಲ್ಲ
ನಾವು ಮುಂದೇನು ಗತಿಯಿ ಮಾಡಾನ
ಅದರ ಕೊಂಬಲ್ಲಿ ಇದರ ಜೊತಿಗೆ
ಇದರ ಕೊಂಬಲ್ಲಿ ಅದರ ಜೊತಿಗೆ
ಎರಡೂ ಕಣ್ಣಿ ಕಳಕೊಂಡು
ಕಟ್ಟಿತಾಕ್ಕೆ ಬರುತಾವೆ
ತಲೆಯ ಮುಂಡ ನೋಡ್ಯಾವೆ
ಅವು ದುಃಖನಾದುರೆ ಮಾಡುತಾವೆ
ತಮ್ಮನ ತಲೆಯ ಕಡದವನೆ
ಇವನು ಪಾಪಗೇಡಿ ಅಣ್ಣಯ್ಯ
ಬಾರಪ್ಪ ನನ್ನ ತಮ್ಮನೆ
ಚಿಕ್ಕಬೆಳ್ಳಿ ಎತ್ತೆ ಹೇಳುತೀನಿ
ನಾನು ಸಂಜೀವನ ತರುತೀನಿ
ನೀ ತಲೆಯ ಮುಂಡ ಕಾಯಪ್ಪ
ನಾಲಕ್ಕಾಲ ಮೇಲಕ್ಮಾಡಿ
ನೀ ಮಲಕ್ಕೋಳೊ ನನ್ನ ತಮ್ಮ
ತಲೆಯ ಮುಂಡ ಮಡಗತೀನಿ
ನಾ ಸಂಜೀವನಕೆ ಹೋಗುತೀನಿ
ಹೊತ್ತು ಹುಟ್ಟೋದ್ರೊಳಗಾಗಿ
ನಾ ಬರ್ತೀನಿ ಅಂತ ಹೇಳ್ಯದೆ
ನಾಲ್ಕು ಕಾಲ ಮೇಲಕ್ಮಾಡಿ
ಮಲಗಿಕೊತ್ತು ಚಿಕ್ಕಬೆಳ್ಳಿ
ತಲೆಯ ಮುಂಡ ತಂದದೆ
ಅದರ ಅಡೊಟ್ಟಿಲ್ಲಿ ಮಡಗದೆ
ದೊಡ್ಡಬೆಳ್ಳಿ ಎತ್ತು ಮಡುಗ್ಬುಟ್ಟು
ಸಂಜೀವನಕ್ಕೆ ಹೋಗ್ಯಾದೆ
ಬೇಕಾದ ದೇಶಕ್ಕೆ ಹೋಗ್ಯಾದೆ
ಸಂಜೀವನವೇ ಸಿಕ್ಕಲಿಲ್ಲ
ಏಳು ಸಮುದ್ರದ ಹತ್ತಿರಕೆ
ಬಸವಣ್ಣ ಹೋಗ್ಯವನೆ
ಎಲ್ಲೂವೆ ಅದು ಸಿಕ್ಕಲಿಲ್ಲ
ಏನು ಗತಿಯ ಮಾಡಲಪ್ಪ
ಮಾಯಕಾರ ಶಿವದೇವರು
ಬಸುವಣ್ಣನ ನೋಡ್ಯವರೆ
ಬಸುವಣ್ಣನ ಕಷ್ಟ ನೋಡ್ಯವರೆ
ಅವರು ಅಜ್ಜಜ್ಜ ಮುದುಕನಾಗ್ಯವರೆ
ಅಡುಗೋಳ ಬರುತಾರೆ
ಬಸವಣ್ಣ ಬರುತವನೆ
ಎಲ್ಲಿಗಪ್ಪ ಬಸವಣ್ಣ
ನೀ ದೂರ ಪಯಣ ದೊರಟಿದ್ದೆ
ಏನ ಹೇಳ್ಳಿ ಮುದುಕಪ್ಪ
ತಮ್ಮನ ತಲೆಯ ಕಡುದವರೆ
ಸಂಜೀವನವೆ ಬೇಕಪ್ಪ
ಹಾಗಂತ ಅವನು ಹೇಳುವಾಗ
ಇವನು ಮುದುಕಯ್ಯ ಹೇಳುತಾನೆ
ಬಾರಪ್ಪ ನೀನು ಬಸವಣ್ಣ
ಕಲ್ಯಾಣಿ ಹತ್ರ ಹೋಗಪ್ಪ
ಕಲ್ಲಾಗಿ ನೀನು ಕರೆಯಪ್ಪ
ಅವಳು ನಾಗಲೋಕದ ನಾಗರಗನ್ನೆ
ತಾನ ಜಪಕೆ ಬರುತಾಳೆ
ಕೊಳದತ್ರ ನಾಗರಗನ್ನೆ
ನಾಗಲೋಕ ಇಳಿಸ್ಯವಳೆ
ಹೊಸದುರುಗ ಗೇಯ್ದವಳೆ
ಅಲ್ಲೊಂದು ಪಟ್ಟ ಕಟ್ಟವಳೆ
ಮಂತ್ರವಾನೆ ಹೊಡದವಳೆ
ಇವಳು ಸಂಜೀವನವ ತಗುದವಳೆ
ಹೊಸ ಮಡಿಯ ತಗುದವಳೆ
ಅವಳು ಸಂಜೀವನವೆ ಕೊಡುತಾಳೆ
ಚಿಕ್ಕೋನನ್ನು ಉಳುಸ್ತಾಳೆ
ಅವಳೇ ಲಗ್ನ ಆಯ್ತಾಳೆ
ಕಲ್ಯಾಣಿ ಹತ್ತ ಬಂದವನೆ
ಕಲ್ಲಾಗಿ ಬಸವ ಕರದವನೆ
ನಾಗರಗನ್ನೆ ಬಂದವಳೆ
ತಾನ ಜಪವ ಮಾಡುತವಳೆ
ಸೀರೆ ಕುಪ್ಪಸ ತೊಟ್ಟವಳೆ
ಇವಳು ಮೂರು ಹೆಜ್ಜೆ ಇಟ್ಟವಳೆ
ಕಾಲು ಕೆರೆದು ಗುಟರೆಯ
ಬಸವಣ್ಣ ಹೊಡೆದವನೆ
ಜಕ್ಕಂದ ನಿಂತವಳೆ
ನೀನೆಲ್ಲಿಂದ ಬಂದ್ಯೊ ಬಸವಣ್ಣ
ಕೇಳೇಳೆ ತಾಯಿ ನನ್ನಮ್ಮ
ನನ್ನ ಕಷ್ಟ ಹೇಳುವೆ
ಅಣ್ಣಯ್ಯವನು ಸೂಳೆಮಗ
ತಮ್ಮನ ತಲೆಯ ಕಡುದವನೆ
ಸಂಜೀವನವೆ ಬೇಕಮ್ಮ
ನಾ ತಮ್ಮನ ಪ್ರಾಣ ಉಳಸ್ಬೇಕು
ನಡಿಯಪ್ಪ ಬಸವಣ್ಣ
ಕಟ್ಟೆ ಹತ್ರ ಬಂದವಳೆ
ಬಸವಣ್ಣನ ನೋಡ್ಯವಳೆ
ಬಾಳ ಚಿಂತೆ ಮಾಡ್ಯವಳೆ
ಹೊಸ ಮಡಿ ಹಾಸ್ಯವಳೆ
ಮುಂಡ ತಲೆಯ ಇರಿಸ್ಯವಳೆ
ಸಂಜೀವನವ ತಗುದವಳೆ
ಮೂರು ಸರ್ತಿ ಜಪಿಸ್ಯವಳೆ
ಚಿಕ್ಕಗೊಲ್ಲ ಕಂದಮಗನ
ತಲೆ ಮುಂಡ ಕೂಡಿಕೊತ್ತು
ಜೀವಗಾಳಿ ಕೂಡ್ಯವಳೆ
ಇವನು ಮೇಲಕ್ಕಾದರು ಎದ್ದವನೆ
ನೋಡು ನೋಡ್ತಾ ಎದ್ದವನೆ
ಬಸವಣ್ಣನ ಪಾದ ಕಟ್ಯವನೆ
ಚಿಕ್ಕಬೆಳ್ಳಿ ಆಗಾಲೆ
ಮೇಲುಕಾದರೆ ಎದ್ದಾದೆ
ಏನಂತಾವ ಹೇಳುತಾಳೆ
ನಾಗರಗನ್ನೆ ಚೆಲುವಲ್ಲವೊ
ಕಟ್ಟಿತಾವ ಧಾರೆಮೂರ್ತ
ಧಾರೆಮೂರ್ತೆ ಮಾಡಾಲಿ
ನನ್ನ ಬಸವಣ್ಣ ದೇವರು
ಹೊಸುಪಟ್ಣಕೆ ಬಂದಾರೆ
ತಮ್ಮನು ಚಿಕ್ಕಗೊಲ್ಲ
ಅವನು ಚೆನ್ನಾಗಿ ಬದುಕ್ತಾನೆ
ಇವನು ದೊಡ್ಡಗೊಲ್ಲಗೆ
ಭಾರಿ ಕಷ್ಟ ಬರ‍್ತಾದೆ
ಉಣ್ಣಾಕು ಅನ್ನ ಇಲ್ಲವಲ್ಲೊ
ಉಡುವುದಕ್ಕೆ ಬಟ್ಟೆ ಇಲ್ಲವಲ್ಲೊ
ಸೌದೆನಾದ್ರು ಕಡುಕೊಂಡು
ತಮ್ಮನ ಪಟ್ಟಣಕೋಯ್ತಾನೆ
ಸೌದೆ ಸೌದೆ ಸಾರುತಾನೆ
ತಮ್ಮಯ್ಯಾಗ ಕೂಗ್ಯವನೆ
ಬಾರಪ್ಪ ನೀನು ಕೂಲಿಗಾರ
ನೀ ವ್ಯಾಪಾರಾವ ಹೇಳಯ್ಯ
ಕೊಟ್ಟಷ್ಟು ಕೊಡಿ ದಮ್ಮಯ್ಯ
ನನಗೆ ಗೊತ್ತೆ ಇಲ್ಲ ಎಂದವನೆ
ಒಂದು ರೂಪಾಯಿ ಬಾಳೊ ಸೌದೀಗೆ
ಎರಡು ರೂಪಾಯಿ ಕೊಟ್ಟವನೆ
ಬಾರಪ್ಪ ನೀನು ಕೂಲಿಗಾರ
ನಾಳಿಕಾದುರೆ ನನ್ನ ಮನಿಗೆ
ಯಾಕಾಸಿ ಹಬ್ಬ ಮಾಡಬೇಕು
ನೀವು ಹೆಂಡತಿ ಗಂಡ ಬನ್ನಿರಪ್ಪ
ಹಾಳೆಯೊ ಅಂಚೀಕಡ್ಡಿ
ತಕ್ಕೊಂಡು ಮಾತ್ರ ಬನ್ನಿರಪ್ಪ
ಬತ್ತೀನಿ ಸ್ವಾಮಿ ಅಂದೋನು
ಹಂಗಂತಾ ಅವನೇಳ್ಯವನೆ
ಮಡದಿಯ ಮನಿಗೆ ಬಂದವನೆ
ಊಟಮಾಡಿ ಮಲಗವರೆ
ಬೆಳಗೆ ಅವರು ಬಂದವರೆ
ಹಂಚೀಕಡ್ಡಿ ಕೂದವರೆ
ತ್ಯಾಗದೆಲೆಯ ಕಿತ್ತವರೆ
ಅವರಿಬ್ಬರು ಕೂಡಿ ಬರುತವರೆ
ತಮ್ಮನ ಪಟ್ಟಕ್ಕೆ ಬರುತಾರೆ
ತಮ್ಮನು ಆಳುಕಾರ‍್ನ ಕಾವಲಿಟ್ಟು
ಇವನು ಏನು ಬುದ್ಧಿ ಹೇಳ್ಯವ್ನೆ
ಇಬ್ಬರೂವೆ ಇಲ್ಲಿಗೆ ಬರುತಾರೆ
ನೀವು ಹೆಂಗ್ಸರ ಮಾತ್ರ ಒಳೀಕಾದ್ರೆ
ಖಂಡಿತ ಕರತರಬೇಡ್ರಪ್ಪ
ನಿನಿಗ್ಯಾಕೊ ಅಂತ ಕೇಳ್ಯವ್ರೆ
ಯಾರೂ ಇಲ್ಲ ಕಾಣಪ್ಪ
ನಾನು ಹುಟ್ಟಿದೋನೆ ಒಬ್ಬ ಎಂದವ್ನೆ
ಯಾಕಪ್ಪ ಸುಳ್ಳ ಹೇಳುತೀಯೆ
ನೀನು ಪಾಪುಗೇಡಿ ಅಣ್ಣಯ್ಯ
ಕಟ್ಟೇತಾವು ಕಡಿದಲ್ಲೊ
ನೀವು ಹೊರಗೆ ಕುಂಡ್ರಿಸಿ ಬನ್ನಿರಯ್ಯ
ಗಂಡುಸಾರ ನೀವು ಕರಕೊಂಡು
ಒಳುಗಡೆ ಬನ್ನಿರಯ್ಯ
ಪಟ್ಟಣಕಾದ್ರು ಬಂದವರೆ
ಆಳುಕಾರ್ರು ಕುಂತವರೆ
ಇಲ್ಲೇ ಇರೆ ತಾಯಿ
ನಿನ್ನ ಗಂಡನ ಕೈಲಿ ದುಡ್ಡು ಕೊಟ್ಟು
ನಾವ್ ಕಳಿಸ್ತೀವಿ ಬೇಗದಿಂದ
ಅವಳಲ್ಲಿಯ ಕುಂಡ್ರಿಸ್ಯವರೆ
ದೊಡ್ಡಗೊಲ್ನ ತಕ್ಕೊಂಡೋಗಿ
ಅವರು ಚೆನ್ನಾಗಿ ಸ್ನಾನ ಮಾಡಿಸ್ಯವ್ರೆ
ಹೊಸ ಮಡಿಯ ಕೊಟ್ಟವರೆ
ಊಟಕ್ಕಾದರು ಬಡಿಸ್ಯವರೆ
ಏನು ಕಾಣೆ ಭಗವಂತ
ನನಗಿಂತ ಉಪಚಾರ ಮಾಡುತಾರೆ
ಅಂಜುತ್ತುವ ಅಳುಕುತ್ತವ
ತಮ್ಮನಿರುವ ಅರಮನೆಗೆ
ಕರಕೊಂಡೋಗಿ ಬುಟ್ಟವರೆ
ಕೇಳುತಾನೆ ತಮ್ಮಯ್ಯ
ಬಾರಪ್ಪ ಬಲು ಬಲ್ಲಿಗಾರ
ನಿನಗೊಬ್ಬ ತಮ್ಮ ಇದ್ದುನಲ್ಲ
ನಿನಗೆರಡೆತ್ತು ಇದ್ದುವಲ್ಲ
ಏನಾದವು ಎನ್ನೊವತ್ತಿಗೆ
ಬಡಸ್ತಾನ ಬಂದೈತಲ್ಲ
ಮದುವೆ ಸೋಬನ ಮಾಡ್ಯವನೆ
ಹೊಸದುರ್ಗ ರಾಜ್ಯದಲ್ಲಿ
ಅರ್ಧಭಾಗ ಕೊಟ್ಟವನೆ
ಕಾಡುಬೆಳ್ಳಿ ಎತ್ತನ್ನೆ
ನೀ ಮಡುದಿ ಮಾತ ಕೇಳಿದಲ್ಲೊ
ತಮ್ಮ ಯಾರು ನೋಡಯ್ಯ
ಪಾಪಗೇಡಿ ಸೂಳೆಮಗನೆ
ಅಲ್ಲೆಯ್ಯ ನೋಡವನೆ
ತಮ್ಮಯ್ಯನ ಮಕವನೆ ಕಂಡವನೆ
ತಮ್ಮನ ಪಾದ ಹಿಡಿದವನೆ
ನೀನು ಹ್ಯಾಗೆ ಉಳುದೊ ತಮ್ಮಯ್ಯ
ಬಾರಿ ದುಃಖ ಮಾಡ್ಯವನೆ
ಬಾರೊ ತಮ್ಮ ಹೇಳುತೀನಿ
ನಿನ್ನ ಕಡದ ಚಂದ್ರಾಯ್ದ
ನಿನ್ನ ಕೈಲಿ ಕೊಡುತೀನಿ
ನಿಮ್ಮ ಅತ್ತಿಗೆ ಕಡದುಬುಟ್ಟು
ಬೇಗದಿಂದ ಬರೋಗಪ್ಪ
ಪಾಪಿ ಮುಂಡೆ ದರ್ಶನವ
ನಾನು ಮಾಡೆನೇನೊ ಅಣ್ಣಯ್ಯ
ಆಳುಕಾರ ಕಳಿಸ್ಯವರೆ
ಅವರ ಕೈಯಿ ಕಾಲ ಕಟ್ಟಿಸ್ಯವರೆ
ಹಾಳು ಬಾವಿಗಾಕ್ಯವರೆ
ಸುಣ್ಣ ತಂದು ತುಂಬಿಸ್ಯವರೆ
ಸುಣ್ಣದಲ್ಲಿ ಸುಟ್ಟವರೆ
ಚಿಕ್ಕಗೊಲ್ಲ ದೊಡ್ಡಗೊಲ್ಲ
ಚಿಕ್ಕಗೊಲ್ಲ ದೊಡ್ಡಗೊಲ್ಲಗೆ
ಅವರಣ್ಣಯ್ಗೆಣ್ಣ ನೋಡ್ಯವನೆ
ಅಣ್ಣನ ಲಗ್ನ ಮಾಡ್ಯವನೆ
ಅಣ್ಣಗೆ ಆಗ್ಲೆ ಕೊಟ್ಟವನೆ
ಎರಡು ಎರಡು ಭಾಗ ಮಾಡಿಕೊಂಡು
ಹೊಸದುರ್ಗ ಸೇರ‍್ಯವರೆ
ಹೊಸದುರ್ಗ ಸೇರಿಕೊಂಡು
ಇವರು ರಾಜ್ಯಭಾರ ಮಾಡುತಾರೆ
ಧರುಮ ಧರುಮ ಆಗಾಲಿ
ಕರುಮ ಕತ್ತುಲೆ ಆಗಾಲಿ
ಬಸುವಣ್ಣನ ನನ್ನ ದೊರೆ
ಕಥೆ ಇಲ್ಲಿಗೆ ಮುಗಿತಲ್ಲ
ಅಕ್ಕ ನೀನು ನಾಗಮ್ಮ
ಚಿಕ್ಕೋನೆ ಅವನು ಮಗನವನು
ಚನ್ನಬಸವಣ್ಣನ ಪಾದಕ್ಕೆ
ಮತ್ತೊಂದು ಶರಣು ಹೇಳುತೀವಿ
ಇವರು ರಾಜ್ಯಭಾರ ಮಾಡುತಾರೆ