ಪವಾಡಗಳ ಬಗೆಗೆ ಇರುವ ಆಸಕ್ತಿ ಹಾಗೂ ನಂಬಿಕೆಗಳು ಅತ್ಯಂತ ಪ್ರಾಚೀನ ವಾದವು. ಹಾಗೆಯೇ ಪವಾಡಗಳನ್ನು ಮಾಡಿ ಜನದ ಆಸಕ್ತಿ ಮತ್ತು ನಂಬಿಕೆಗಳನ್ನು ಹುಟ್ಟಿಸುವ ವಿಶಿಷ್ಟ ವ್ಯಕ್ತಿಗಳ ಪರಂಪರೆ ಕೂಡಾ ಪ್ರಾಚೀನವಾದದ್ದು. ಮೊದಮೊದಲು ಮಾಟ ಮಂತ್ರಗಳನ್ನು ಮಾಡುತ್ತ ಆದಿಕಾಲದ ಮಾನವ ಸಮಾಜವನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡ ಪೂಜಾರಿ ಮಾಂತ್ರಿಕ ವರ್ಗ,  ಕ್ರಮಕ್ರಮೇಣ ಧಾರ್ಮಿಕ ನಾಯಕರಿಂದ, ಸಂತ ಯೋಗಿ ಸಿದ್ಧರಿಂದ ಮತ್ತು ಅವರ ಅತೀಂದ್ರಿಯ ಸಾಮರ್ಥ್ಯಗಳ ಕಾರಣದಿಂದ ಹಿಂದಕ್ಕೆ ಹೋಯಿತೆಂಬುದನ್ನು ಮನುಕುಲದ ಚರಿತ್ರೆ ಹೇಳುತ್ತದೆ.  ಯಾವ ವ್ಯಕ್ತಿಗಳು ಮುಖ್ಯವಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೋ ಅವರು, ಮೂಲತಃ ತಮ್ಮ ಅಪೌರುಷೇಯವೆಂಬಂತಹ ಅತೀಂದ್ರಿಯ ಶಕ್ತಿಸಾಮರ್ಥ್ಯಾದಿಗಳ ಪ್ರದರ್ಶನದಿಂದ, ಜನರಿಗೆ ತಮ್ಮ ವ್ಯಕ್ತಿತ್ವದ ಮಹತ್ತನ್ನು ಪ್ರಕಟಿಸುತ್ತ ತಾವು ಹೇಳಲಿರುವ ತತ್ವ ಅಥವಾ ಉಪದೇಶಗಳ ಬಗ್ಗೆ ಜನರ ಶ್ರದ್ಧೆ ಆಸಕ್ತಿಗಳನ್ನು ಉದ್ದೀಪಿಸಲು, ನಡೆಯಿಸಿ ತೋರಿಸಿದ ಅಘಟಿತ ಘಟನೆಗಳೇ ಪವಾಡಗಳು ಎಂದು ಹೇಳಬಹುದು. ಆದುದರಿಂದ ಪವಾಡಗಳನ್ನು ಕುರಿತು ಮಾತನಾಡುವಾಗ, ನಾವು ಮುಖ್ಯವಾಗಿ ಧಾರ್ಮಿಕಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಮಾತ್ರ ಉದ್ದೇಶಿಸಿ ನಮ್ಮ ಚಿಂತನೆಗಳನ್ನು ಸೀಮಿತಗೊಳಿಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಪವಾಡಗಳನ್ನು ಮಾಡಿದವರೆಂದು ಹೇಳಲಾಗಿರುವವರೆಲ್ಲ ಬಹುಮಟ್ಟಿಗೆ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿದ್ದಾರೆ. ಇಂದಿಗೂ ಈ ಮಾತು ನಿಜ.

ಏಸುಕ್ರಿಸ್ತ ನೀರನ್ನು ಸ್ಪರ್ಶ ಮಾತ್ರದಿಂದ ಮಧುವನ್ನಾಗಿ ಮಾಡಿದ; ಮದಿಸಿ ನುಗ್ಗಿ ಬಂದ ಆನೆಯನ್ನು ಬುದ್ಧ ತನ್ನ ದೃಷ್ಟಿ ಮಾತ್ರದಿಂದ ಶಾಂತವನ್ನಾಗಿ ಮಾಡಿದ; ಕೆಲವರು ಜಂಗಮವೇಷಧಾರಿಗಳು, ಲಿಂಗದ ಬದಲು ಕೊರಳಲ್ಲಿ ಬದನೆಕಾಯಿಗಳನ್ನು ಕಟ್ಟಿಕೊಂಡು ಬಂದಾಗ, ಅವರು ಕೊರಳ ಬಟ್ಟೆಯಲ್ಲಿ ಕಟ್ಟಿಕೊಂಡ ಬದನೆಕಾಯಿಗಳನ್ನು, ಬಸವಣ್ಣನವರು ನಿಜವಾದ ಶಿವಲಿಂಗಗಳನ್ನಾಗಿ ಮಾಡಿದರು; ಶ್ರೀರಾಮಕೃಷ್ಣ ಪರಮಹಂಸರು, ಅತ್ಯಂತ ಪ್ರಖರ ವಿಚಾರವಾದಿಯಾಗಿದ್ದ ನರೇಂದ್ರನನ್ನು, ತಮ್ಮ ಸ್ಪರ್ಶಮಾತ್ರದಿಂದ ಸಮಾಧಿಸ್ಥಿತಿಗೆ ಹೋಗುವಂತೆ ಮಾಡಿ, ಅವರನ್ನು ಸ್ವಾಮಿ ವಿವೇಕಾನಂದರನ್ನಾಗಿ ಪರಿವರ್ತಿಸಿದರು- ಇಂಥ ಪವಾಡಗಳು, ಮಹಾ ವ್ಯಕ್ತಿಗಳ ಜೀವನ ಚರಿತ್ರೆಯಲ್ಲಿ ಉಲ್ಲೇಖಿತವಾಗಿವೆ.

ಆದರೆ ಉದ್ದಕ್ಕೂ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೇರಿದ ಮಹಾವ್ಯಕ್ತಿಗಳು ಹಲವು ಬಗೆಯ ಪವಾಡಗಳನ್ನು ಮಾಡಿದ್ದರೂ, ಅವುಗಳು ತಮಗೆ ತಾವೇ ಗುರಿ ಎಂದು ಅವರು ಭಾವಿಸಿದಂತೆ ತೋರುವುದಿಲ್ಲ. ಅವುಗಳು, ಜನರ ಭಕ್ತಿಶ್ರದ್ಧೆಗಳನ್ನು ವೃದ್ಧಿಗೊಳಿಸಲು ಮತ್ತು ತಾವು ಹೇಳುವ ಉಪದೇಶಗಳ ಬಗ್ಗೆ ವಿಶ್ವಾಸವನ್ನು ತಾಳುವಂತೆ ಮಾಡಲು, ಅವರು ಅನುಸರಿಸಿದ ಒಂದು ವಿಧಾನ ಮಾತ್ರವಾಗಿವೆ. ಜತೆಗೆ ಪವಾಡಗಳನ್ನು ಮಾಡುವುದು ಅಧ್ಯಾತ್ಮ ಕ್ಷೇತ್ರದ ಕನಿಷ್ಠತಮ ವಲಯಕ್ಕೆ ಸೇರುವ ಸಂಗತಿಯಾಗಿದೆ ಎಂದು ಈ ಶತಮಾನದ ಮಹಾಯೋಗಿ ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ. ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ “ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ” ಎಂದು ಬಸವಣ್ಣನವರು ಪಶ್ಚಾತ್ತಾಪ ಪಟ್ಟಿದ್ದಾರೆ. ಎಂದರೆ ಇಷ್ಟೊಂದು ಪವಾಡಗಳನ್ನು ಮಾಡುವುದರ ಮೂಲಕ, ತನ್ನ ಭಕ್ತಿ ಕೇವಲ ನಾಟಕದ ವೇಷಧಾರಿಯ ಪ್ರದರ್ಶನದಂತೆ, ತೋರಿಕೆಯದಾಯಿತಲ್ಲಾ ಎಂಬುದು ಈ ಮಾತಿನ ಅರ್ಥ. ಆಧ್ಯಾತ್ಮದಲ್ಲಿ ಮುಂದುವರಿದ ವ್ಯಕ್ತಿಗೆ, ಕೆಲವು ಅತೀಂದ್ರಿಯವೆಂಬಂಥ ಅಲೌಕಿಕ ಶಕ್ತಿಗಳು ಅಥವಾ ಸಿದ್ಧಿಗಳು ಪ್ರಾಪ್ತವಾಗುತ್ತವೆಂದೂ,  ಅವುಗಳನ್ನು ಕೇವಲ ಪ್ರದರ್ಶನಗಳಿಗಾಗಿ ಬಳಸಬಾರದೆಂದೂ ಮಹಾವ್ಯಕ್ತಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ ಇಂಥ ಪವಾಡಗಳನ್ನು ಕಂಡ ಜನ, ಅವುಗಳಿಗಷ್ಟೆ ಬೆರಗಾಗಿ, ಅವುಗಳನ್ನೇ ಹಾಡಿ ಹೊಗಳಿ, ತಮ್ಮ ಭಕ್ತಿಗಣಿತದಿಂದ ಅವುಗಳನ್ನು ಗುಣಿಸಿ, ಅವುಗಳನ್ನು ಪ್ರಚಾರ ಮಾಡುವುದರಲ್ಲಿ ಮಗ್ನವಾಗಿರುವುದುಂಟು. ಇವತ್ತಿಗೂ ಈ ಪ್ರವೃತ್ತಿ ಸಮೃದ್ಧವಾಗಿ ಜೀವಂತವಾಗಿದೆ. ಪ್ರತಿಯೊಂದನ್ನೂ ಪ್ರಯೋಗ, ಪರೀಕ್ಷೆಗೆ ಒಳಪಡಿಸಿ ನಂಬಬೇಕೆಂದು ಹೇಳುವ ಈ ವೈಜ್ಞಾನಿಕಯುಗದಲ್ಲಿಯೂ, ಜನಸಾಮಾನ್ಯರಿಗಿರಲಿ, ಅತ್ಯಂತ ಉನ್ನತ ಶಿಕ್ಷಣವನ್ನು ಪಡೆದವರಿಗೂ ಸಹ, ಪವಾಡಗಳನ್ನು ಕುರಿತ, ಪವಾಡ ಪುರುಷರನ್ನು ಕುರಿತ ಆಸಕ್ತಿ, ಶ್ರದ್ಧೆ, ಗೌರವಗಳು ಕಡಿಮೆಯಾಗಿಲ್ಲ. ತರ್ಕಾತೀತವಾದುದರಲ್ಲಿ ಹಾಗೂ ಅತೀಂದ್ರಿಯವಾದದ್ದರ ಬಗೆಗೆ ಇರುವ ತುಡಿತ ಮನುಷ್ಯನ ಮೂಲಭೂತ ಆವಶ್ಯಕತೆಗಳಲ್ಲಿ ಒಂದೇನೋ ಅನ್ನಿಸುವಷ್ಟರ ಮಟ್ಟಿಗೆ, ಇವತ್ತಿನ ಆಧುನಿಕ ಮನುಷ್ಯ ಈ ವಿಷಯಗಳನ್ನು ಕುರಿತು ಅದಮ್ಯವಾದ ಕುತೂಹಲ ಹಾಗೂ ಆಸಕ್ತಿಗಳನ್ನು ಕಾಯ್ದುಕೊಂಡು ಬಂದಿದ್ದಾನೆ.

ಒಬ್ಬ ಬರೆಹಗಾರನಾಗಿ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿ ಹೇಳುವುದಾದರೆ, ನನಗೆ ಪವಾಡಗಳಲ್ಲಾಗಲೀ ಪವಾಡಪುರುಷರಲ್ಲಾಗಲೀ ಆಸಕ್ತಿ ಇಲ್ಲ. ಆದರೆ ಪವಾಡಗಳೆಲ್ಲಾ ಸುಳ್ಳು ಎಂದಾಗಲೀ, ಭ್ರಮೆ ಎಂದಾಗಲೀ, ಮೋಸ ಎಂದಾಗಲೀ ಹೇಳಲಾರೆ. ಹಾಗೆಂದರೆ ಕೆಲವು ಪವಾಡ ಪುರುಷರು ಜನರನ್ನು ಮರುಳುಗೊಳಿಸುತ್ತಾರೆ, ಅವರ ಮೌಢ್ಯಗಳನ್ನು ಕದಲಿಸದೆ ಅವನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಸುಲಿಯುತ್ತಾರೆ, ಅಥವಾ ಮೋಸಗೊಳಿಸಲು ಸಾಧ್ಯವಿದೆ-ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಪವಾಡಗಳೆಂದರೆ ಏನು? ಅವುಗಳನ್ನು ಮಾಡುವವರು ಅವುಗಳನ್ನು ಯಾವ ಯಾವ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ-ಇತ್ಯಾದಿಗಳನ್ನು ತೆರೆದ ಮನಸ್ಸಿನಿಂದ ವಿಚಾರ ಮಾಡುವ ಪ್ರವೃತ್ತಿಯೂ ನಮ್ಮಲ್ಲಿ ಇಂದು ಬೆಳೆಯಬೇಕಾಗಿದೆ. ಯಾಕೆಂದರೆ ಸತ್ಯದ ಅನ್ವೇಷಣೆಗೆ ಯಾವ ಕ್ಷೇತ್ರವೂ ಹೊರತಾಗಬಾರದು.

ಮೂಲತಃ ಸಾಹಿತಿಯಾದವನು, ಸಾಹಿತ್ಯ ನಿರ್ಮಿತಿಗೆ ತನ್ನ ಅನುಭವಗಳನ್ನೇ ಆಶ್ರಯಿಸುತ್ತಾನಾದರೂ, ಅಲ್ಲಿಯೂ ಒಂದರ್ಥದಲ್ಲಿ ಒಂದು ಬಗೆಯ ಅಘಟಿತ ಘಟನೆ ನಡೆಯುತ್ತದೆ ಎಂಬುದನ್ನು ಗುರುತಿಸಿಕೊಳ್ಳಬೇಕಾಗಿದೆ. ಸಾಹಿತ್ಯ ನಿರ್ಮಿತಿ ಕೇವಲ ಬುದ್ಧಿಪೂರ್ವಕವಾದ ಒಂದು ‘ರಚನೆ’ಯಾಗಿದ್ದರೆ ಬಹುಶಃ ಎಲ್ಲರೂ ಸಾಹಿತಿ- ಗಳಾಗುತ್ತಿದ್ದರೇನೋ. ಆದರೆ ಪರಿಸ್ಥಿತಿ ಹಾಗಿಲ್ಲ. ಸಾಹಿತ್ಯ ಎಂಬುದು ಒಂದು ಸೃಷ್ಟಿ ಅಥವಾ ಕೇವಲ ರಚನೆಗೆ ಮೀರಿದ್ದು. ಈ ಕಾರಣದಿಂದ ಆ ಸೃಜನೆಯ ಒಳವಿವರಗಳು ಸಾಹಿತಿ ಎಂಬ ಮನುಷ್ಯನಿಗೂ ತಿಳಿಯದವುಗಳಾಗಿವೆ. ಒಂದು ಕವಿತೆಯನ್ನು ಬರೆಯುವ ಕವಿಗೇ, ತನ್ನೊಳಗಿನಿಂದ ಹುಟ್ಟಿಕೊಂಡು ಬರುವ ಕವಿತೆ ಒಂದು ಪವಾಡದಂತೆ ತೋರುತ್ತದೆ ಎಂದರೆ ಯಾರೂ ಅಲ್ಲಗಳೆಯಬೇಕಾಗಿಲ್ಲ. ಮೂಲತಃ ಎಲ್ಲ ಸೃಜನೆಗಳೂ, ಮನಸ್ಸಿನ ಅಗೋಚರ ಪದರದೊಳಗಿನಿಂದ ಆವಿರ್ಭವಿಸತಕ್ಕವು. ಆ ಸೃಜನೆಯ ಸ್ವಲ್ಪಭಾಗ ಪ್ರಜ್ಞಾಗೋಚರವೆಂಬಂತೆ ತೋರಿದರೂ ಅದರ ಬಹಳಷ್ಟು ಭಾಗ ಅರಿವಿಗೆ ನಿಲುಕದ ಆಳದೊಳಗೆ ರೂಪುಗೊಳ್ಳುತ್ತದೆ. ಸಾಹಿತಿಯಾದವನಿಗೇ ತಾನು ಬರೆದ ಕೃತಿ ಒಂದು ಆಶ್ಚರ್ಯದಂತೆ, ಒಂದು ಅಘಟಿತ ಘಟನೆಯಂತೆ ತೋರುವುದು ಈ ಕಾರಣದಿಂದಲೇ. ಓದುಗರು ಸಾಹಿತ್ಯ ನಿರ್ಮಿತಿಯನ್ನು ಒಂದು ‘ಪವಾಡ’ ಎಂದು ವರ್ಣಿಬಹುದು. ಆದರೆ ಸಾಹಿತಿಯನ್ನು ಯಾರೂ ಪವಾಡಪುರುಷನೆಂದು ಕರೆಯುವುದಿಲ್ಲ; ಯಾಕೆಂದರೆ ಸಾಹಿತ್ಯ ನಿರ್ಮಿತಿ, ತಕ್ಕಮಟ್ಟಿಗೆ ವಿವರಿಸಬಹುದಾದಂಥ ಸಾಹಿತಿಯೊಬ್ಬನ ಸಹಜವಾದ ಕ್ರಿಯೆ.

ಬೆಳಗಾದರೆ ಹಚ್ಚ ಹಸುರಿನ ಗಿಡದಲ್ಲಿ ಬೆಳ್ಳನೆಯ ದಳ ತೆರೆದು ಕಣ್ಣನ್ನು ತುಂಬುವ ಹೂವು, ಬಾನಗಲಕ್ಕೂ ಸಪ್ತವರ್ಣದ ಕಮಾನು ಕಟ್ಟುವ ಕಾಮನ ಬಿಲ್ಲು; ದಂಡುದುಂಡಾಗಿ, ಬೆಟ್ಟಬೆಟ್ಟವಾಗಿ ಆಕಾಶದ ನೀಲಿಯಲ್ಲಿ ದಟ್ಟೈಸುವ ಮೋಡಗಳು ಮಿಂಚು ಗುಡುಗುಗಳಿಂದ ಹುಟ್ಟಿಸುವ ಬೆರಗು ಭಯಗಳು; ಹಸುರು ಹುಲ್ಲಿನ ಮೇಲೆ ಕಿಡಿಕಿಡಿ ಮಿರುಗುವ ಅಸಂಖ್ಯಾತ ಹಿಮಮಣಿಗಳು- ಇತ್ಯಾದಿ ಇತ್ಯಾದಿ ಅನಂತ  ಸಂಖ್ಯೆಯ ಸಂಗತಿಗಳು, ಆಶ್ಚರ್ಯಪೂರ್ವಕವಾದ ಅಘಟಿತ ಘಟನೆಗಳಂತೆ ತೋರುವುದರಿಂದ ಇವೆಲ್ಲವನ್ನೂ ಪವಾಡಗಳೆಂದೇ ಹೇಳಬಹುದಲ್ಲವೆ?  ಹೇಳಬಹುದು; ಆದರೆ, ವಾಸ್ತವವಾಗಿ ಅವುಗಳನ್ನು ಪವಾಡಗಳೆನ್ನಲುಬಾರದು. ಕಾರಣವೇನೆಂದರೆ ಈ ಪ್ರಾಕೃತಿಕ ಸಂಗತಿಗಳ ‘ಸಂಘಟನೆ’ಗಳನ್ನು ವೈಜ್ಞಾನಿಕವಾಗಿ ಹಾಗೂ ಶಾಸ್ತ್ರೀಯವಾಗಿ ವಿವರಿಸಬಹುದು. ಆದರೆ ಸಂತನೋ ಸಿದ್ಧನೋ ನೋಡನೋಡುತ್ತಲೇ ಹೂವೊಂದನ್ನು ಸೃಷ್ಟಿಸಿ ತನ್ನ ಭಕ್ತಾದಿಗಳಿಗೆ ಕೊಡುತ್ತಾನೆಂದು ಭಾವಿಸೋಣ. ಆಗ ಅದು ಪವಾಡ. ಕವಿಯೊಬ್ಬ ಸುಂದರವಾದ ಕವಿತೆಯೊಂದನ್ನು ಬರೆದರೆ, ಗಿಡವೊಂದರಲ್ಲಿ ಬಣ್ಣದ ಹೂವು ಅರಳಿದರೆ ಅದು ಸಹಜ ಹಾಗೂ ನೈಸರ್ಗಿಕ. ಆದರೆ ಸಂತನೊಬ್ಬ ತಟಕ್ಕನೆ ಹೂವೊಂದನ್ನು ಸೃಷ್ಟಿಸಿ ಭಕ್ತರಿಗೆ ಹಂಚಿದರೆ ಅದು ಪವಾಡ. ಹೀಗಾಗಿ ಜಾದೂಗಾರನೊಬ್ಬ ಹೂವೊಂದನ್ನು ಸೃಷ್ಟಿಸಿ ಪ್ರೇಕ್ಷಕರನ್ನು ಬೆರಗುಗೊಳಿಸಿದರೆ ಅದನ್ನು ‘ಪವಾಡ’ ಅನ್ನುವುದಿಲ್ಲ. ಅದನ್ನು ‘ಜಾದೂ’, ‘ಮ್ಯಾಜಿಕ್’ ಎನ್ನುತ್ತೇವೆ. ಆದರೆ ‘ಪವಾಡ’ದಲ್ಲಿ ಜಾದೂಗಾರಿಕೆಯ ಲಕ್ಷಣಗಳಿದ್ದರೂ, ಅದನ್ನು ಕೇವಲ ಜಾದೂ ಎಂದು ಕರೆಯಲುಬಾರದು. ಈ ದೃಷ್ಟಿಯಿಂದ ‘ಪವಾಡ’ಗಳೇ ಬೇರೆ. ‘ಜಾದುಗಾರಿಕೆ’ಯೇ ಬೇರೆ. ಅದನ್ನು ಮಾಡುವವರ ವ್ಯಕ್ತಿತ್ವ ಹಾಗೂ ಉದ್ದೇಶಗಳ ಮೇಲಿನಿಂದ ಈ ಎರಡರ ವ್ಯತ್ಯಾಸವನ್ನು ಗುರುತಿಸಿಕೊಳ್ಳುವುದು ಒಳ್ಳೆಯದು. ‘ಪವಾಡ’ ಎಂದರೆ, ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೇರಿದ ವ್ಯಕ್ತಿಗಳು ಜನರ ಭಕ್ತಿ ಶ್ರದ್ಧೆಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಮತ್ತು ಲೋಕಾನುಕಂಪದಿಂದ, ಪ್ರಾಸಂಗಿಕವಾಗಿ ಪ್ರದರ್ಶಿಸುವ ಕೆಲವು ಅಘಟಿತ ಘಟನೆಗಳು ಎಂದು ಹೇಳಬಹುದು. ನೋಡುವವರಲ್ಲಿ ಆಶ್ಚರ್ಯವನ್ನು ಹುಟ್ಟಿಸುವುದು ಅದರ ಮೊದಲ ಲಕ್ಷಣ; ದೈನಂದಿನ ಪರಿಚಿತ ಸಂಗತಿಗಳಿಂದ ಭಿನ್ನವಾದ, ನಮ್ಮ ತಿಳಿವಳಿಕೆಯ ಮೂಲಮಾನದಿಂದ ಅದರ ಸ್ವರೂಪವನ್ನು ವಿವರಿಸಲಾಗದಂಥ ಒಂದು ವಿಲಕ್ಷಣವಾದ ಅಥವಾ ಅತೀಂದ್ರಿಯ ಸಾಮರ್ಥ್ಯದ ಪರಿಣಾಮ ಅದು.

ಪವಾಡಗಳ ಉಲ್ಲೇಖ ಜಗತ್ತಿನ ಎಲ್ಲ ಭಾಷೆಯ ಸಾಹಿತ್ಯದಲ್ಲೂ, ಬಹು ಹಿಂದಿನಿಂದ ಇಂದಿನವರೆಗೆ ಕಾಣಿಸಿಕೊಳ್ಳುತ್ತವೆ. ಅದರಲ್ಲಿಯೂ ಧಾರ್ಮಿಕ ಮಹಾವ್ಯಕ್ತಿಗಳನ್ನು ಕುರಿತ ಕಥನಗಳಲ್ಲಿ ಇವು ಸಮೃದ್ಧವಾಗಿವೆ. ಜನರ ಕಷ್ಟ ಸಂಕಟಗಳನ್ನು ನಿವಾರಿಸಲು, ತಮ್ಮ ವ್ಯಕ್ತಿ ಮಹಿಮೆಯನ್ನು ಪ್ರಕಟಪಡಿಸಲು, ಇಂಥ ಮಹಾವ್ಯಕ್ತಿಗಳು ಮಾಡಿ ತೋರಿಸಿದ ವಿಶೇಷ ಸಾಮರ್ಥ್ಯಗಳು ಪವಾಡಗಳೆಂದು ನಿರೂಪಿತವಾಗಿವೆ. ಕನ್ನಡ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಪವಾಡಗಳು ಸಾಹಿತ್ಯದಲ್ಲಿ ದಾಖಲಾಗಿರುವುದು ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಕೆಲವರನ್ನು ಕುರಿತು ರಚಿತವಾಗಿರುವ ಕೃತಿ ಪರಂಪರೆಯಲ್ಲಿ. ಅದುವರೆಗಿನ ಕಥಾವಸ್ತು ಪ್ರಾಚೀನ ಪುರಾಣೇತಿಹಾಸಗಳಿಂದ ಎತ್ತಿಕೊಂಡದ್ದಾದ್ದರಿಂದ, ಆ  ಪುರಾಣಗಳೊಳಗೆ ಬರುವ ಅಘಟಿತ ಘಟನೆಗಳನ್ನೆಲ್ಲ ‘ಪವಾಡ’ಗಳೆಂದು ಕರೆಯುವಂತಿಲ್ಲ. ಆ ಪುರಾಣಗಳಲ್ಲಿ ಬರುವ ಮುಖ್ಯ ನಾಯಕ ಪಾತ್ರಗಳ ವ್ಯಕ್ತಿತ್ವದಲ್ಲೇ ಒಂದು ಬಗೆಯ ಅಪೌರುಷೇಯತೆ ತಾನೇ ತಾನಾಗಿರುವುದರಿಂದ ಮತ್ತು ಆಯಾ ಕಥಾ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ದೇವಾನುದೇವತೆಗಳ ನಡವಳಿಕೆಯಲ್ಲಿ ಅಲೌಕಿಕತೆ ಅವುಗಳ ಆತ್ಮ ಲಕ್ಷಣವಾಗಿರುವುದರಿಂದ, ಆ ಪುರಾಣೇತಿಹಾಸಗಳ ಇಂಥ ಪಾತ್ರಗಳ ನಡವಳಿಕೆಗಳನ್ನು ‘ಪವಾಡ’ಗಳೆಂದು ವ್ಯಾಖ್ಯಾನಿಸಲು ಬರುವುದಿಲ್ಲ. ಆದರೆ ಹನ್ನೆರಡನೆಯ ಶತಮಾನದನಂತರ, ವೀರಶೈವ ಕವಿಗಳು ತಮಗೆ ಸಮೀಪಕಾಲದವರಾಗಿದ್ದ ಬಸವ, ಸಿದ್ಧರಾಮ, ಅಲ್ಲಮ ಇಂತಹ ಚಾರಿತ್ರಿಕ ವ್ಯಕ್ತಿಗಳನ್ನು ತಮ್ಮ ಕೃತಿಯ ಕಥಾನಾಯಕರನ್ನಾಗಿ ಯಾವಾಗ ಮಾಡಿಕೊಂಡಿರೋ, ಆಗ ಆ ವ್ಯಕ್ತಿಗಳನ್ನು ದೇವಾಂಶ ಸಂಭೂತರೆಂದೋ, ಅಲೌಕಿಕ ಮಹಿಮಾಶಾಲಿಗಳೆಂದೋ ವೈಭವಿಸುವ ಉದ್ದೇಶದಿಂದ, ಅವರು ಅನೇಕ ಪವಾಡಗಳನ್ನು ಮಾಡಿದರೆಂಬಂತೆ, ಕತೆಯನ್ನು ಕಲ್ಪಿಸಿದ್ದಾರೆ. ಇದಕ್ಕೆ ನಮ್ಮ ಕನ್ನಡ ಕವಿಗಳಿಗೆ ಇರುವ ಚಾರಿತ್ರಿಕ ಪ್ರಜ್ಞೆಯ ಅಭಾವ ಒಂದು ಕಾರಣವಾದರೆ, ಜನಸಾಮಾನ್ಯರಿಗೆ ಪವಾಡಗಳ ಬಗೆಗೆ ಇರುವ ವಿಲಕ್ಷಣವಾದ ಆಸಕ್ತಿಯೂ ಒಂದು ಕಾರಣವೆನ್ನಬಹುದು. ಯಾವುದೇ ವ್ಯಕ್ತಿಯನ್ನು ಅವನಲ್ಲಿರಬಹುದಾದ ಶ್ರೇಷ್ಠ ಮಾನವೀಯ ಮೌಲ್ಯಗಳ ಕಾರಣಗಳಿಗಾಗಿ ಗೌರವಿಸುವುದಕ್ಕಿಂತ, ಅವನ ಅಲೌಕಿಕ ಅಪೌರುಷೇಯವೆಂಬಂಥ ಸಾಮರ್ಥ್ಯಗಳಿಗಾಗಿ ಮೆಚ್ಚಿಕೊಳ್ಳುವುದು ಎಲ್ಲ ಕಾಲದ ಜನಸಮೂಹಕ್ಕೆ ಇರುವ ದೌರ್ಬಲ್ಯವೋ ಲಕ್ಷಣವೋ ಆಗಿದೆ. ಹೀಗಾಗಿ ಚಾರಿತ್ರಿಕ ವ್ಯಕ್ತಿಗಳಾದ ಮತ್ತು ಕರ್ನಾಟಕ ಧಾರ್ಮಿಕ ಕ್ಷೇತ್ರವೊಂದರ ನಾಯಕರಾದ, ಬಸವಣ್ಣನವರಿಗೆ ತೀರ ಸಮೀಪಕಾಲದವನಾದ ಹರಿಹರ, ತಾನು ಬರೆದ ‘ಬಸವರಾಜದೇವರ ರಗಳೆ’ಯಲ್ಲಿ ಬಸವಣ್ಣನವರು ಮಾಡಿದರೆನ್ನಲಾದ ಎಂಟು ಪವಾಡಗಳನ್ನು ಮೊಟ್ಟಮೊದಲಿಗೆ ತಂದಿದ್ದಾನೆ. ಮುಂದೆ ಬಸವಣ್ಣನವರನ್ನು ಕುರಿತು ಪುರಾಣಗಳನ್ನು ಬರೆಯುತ್ತಾ ಹೋದವರು ಈ ಪವಾಡಗಳ ಸಂಖ್ಯೆಯನ್ನು ಎಂಬತ್ತೆಂಟರಷ್ಟಕ್ಕೆ ಏರಿಸಿದ್ದಾರೆ. ಇದೇ ರೀತಿ ಇತರ ಶಿವಶರಣರನ್ನು ಕುರಿತು ಕೃತಿಗಳಲ್ಲಿಯೂ ಪವಾಡಗಳು ಸಮೃದ್ಧವಾಗಿ ಸೇರಿಕೊಂಡಿವೆ. ವಾಸ್ತವವಾಗಿ ಬಸವಾದಿಗಳು ಮೂಲತಃ ಪವಾಡ ಪುರುಷರಲ್ಲ; ಆದರೆ ಅವರ ನಡವಳಿಕೆಯಲ್ಲಿ ಪ್ರಾಸಂಗಿಕವಾಗಿ ಪ್ರಕಟವಾಗಿರಬಹುದಾದ ಕೆಲವು ವಿಶೇಷ ಸಂಗತಿಗಳು, ಅವರ ಅಭಿಮಾನಿಗಳ ಕಲ್ಪನೆಯಲ್ಲಿ ‘ಪವಾಡ’ಗಳೆಂಬ ಪ್ರತೀತಿಯನ್ನು ಪಡೆದು ಕೊಂಡಿರಬಹುದು. ಇಂಥವರ ಬದುಕನ್ನು ಕುರಿತು ಬರೆಯುವ ವೇಳೆಗೆ, ಜನಮನದಲ್ಲಿ ಈ ಧಾರ್ಮಿಕ ವ್ಯಕ್ತಿಗಳನ್ನು ಕುರಿತು ಹುಟ್ಟ್ಟಿಕೊಂಡ ಕತೆಗಳೂ, ಕಲ್ಪನೆಗಳೂ, ಪವಾಡ ಪ್ರತೀತಿಗಳೂ ಕವಿಯ ಕಥಾವಸ್ತುವಾಗಿ ಒದಗಿಬರುತ್ತವೆ. ಕವಿ ಕೃತಿಗಳಲ್ಲಿ ಪವಾಡ ಸಂಗತಿಗಳು ಸೇರಿಕೊಳ್ಳುವುದು ಹೀಗೆ. ಆದರೆ ಹೀಗೆ ವರ್ಣಿತವಾಗಿರುವ ಪವಾಡಗಳು ಧಾರ‍್ಮಿಕ ನಾಯಕನೊಬ್ಬನ ಕಥೆಯನ್ನು ಬರೆಯುವ ಕವಿಗೆ ಎಷ್ಟು ಮಟ್ಟಿಗೆ ಅವನ ಕಲಾತಂತ್ರಗಳಾಗಿ ಒದಗಿಬಂದಿವೆ ಎಂಬುದನ್ನೂ ನಾವು ನೋಡಲು ಕಲಿಯಬೇಕು. ಎಷ್ಟೋ ವರ್ಣಿತವಾದ ‘ಪವಾಡ’ಗಳು ನಡೆದಂಥ ವಾಸ್ತವ ಸಂಗತಿಗಳಿಗೆ ಕೊಟ್ಟ ಅತಿಶಯವಾದ ರೂಪಗಳೋ, ಇನ್ನೆಷ್ಟೋ ಅವರ ಮಹಿಮಾದಿಗಳಿಗೆ ಸಂಕೇತ ಪ್ರತೀಕಗಳೋ, ಮತ್ತಿನ್ನೆಷ್ಟೋ ಉದ್ದೇಶಪೂರ್ವಕವಾಗಿ ಹೊಸೆದು ಸೇರಿಸಿದ ಪವಾಡಗಳೋ ಆಗಿರುವುದುಂಟು. ಈ ಪವಾಡಗಳಲ್ಲಿ ಆರೋಗ್ಯಕರವಾದವೂ ಉಂಟು; ಅನಾರೋಗ್ಯಕರವಾದವೂ ಉಂಟು.  ಒಟ್ಟಿನಲ್ಲಿ, ಸಾಹಿತ್ಯದಲ್ಲಿ ಉಲ್ಲೇಖಿತವಾಗಿರುವ ಪವಾಡಗಳು, ಆಯಾ ಕವಿಗಳು ಚಿತ್ರಿಸುವ ವ್ಯಕ್ತಿಗಳು ಅಸಾಧಾರಣ ಮಹಿಮಾವಂತರೂ, ಲೋಕಾನುಕಂಪೆಯುಳ್ಳವರೂ, ಜನರನ್ನು ಸನ್ಮಾರ್ಗದಲ್ಲಿ ನಡೆಯಿಸುವವರೂ ಆಗಿದ್ದರೆಂಬುದನ್ನು ಸಾಂಕೇತಿಸುವ ಉದ್ದೇಶಕ್ಕೆ ಬಳಕೆಯಾಗಿವೆಯೋ ಹೊರತು, ಆಯಾ ಮಹಾವ್ಯಕ್ತಿಗಳು ಪವಾಡಗಳನ್ನು ಮಾಡಿದ್ದರಿಂದಲೇ ದೊಡ್ಡವರಾಗಿದ್ದಾರೆ ಎಂಬ ಪ್ರತೀತಿಯನ್ನುಂಟುಮಾಡುವ ಉದ್ದೇಶಕ್ಕಲ್ಲ. ಆದರೆ ಎಷ್ಟೋವೇಳೆ, ಸರಿಯಾದ ಮೌಲ್ಯ ಪ್ರಜ್ಞೆ ಇಲ್ಲದ ಹಾಗೂ ಕಲಾಪ್ರಜ್ಞೆ  ಇಲ್ಲದ ಲೇಖಕನ ನಿರ್ವಹಣೆಯಲ್ಲಿ, ಈ ಉದ್ದೇಶ ವಿಫಲವಾಗಿ ಜನರನ್ನು ದಾರಿತಪ್ಪಿಸುವುದೂ ಸಾಧ್ಯ. ಅಂಥ ಸಂದರ್ಭಗಳಲ್ಲಿ ‘ಪವಾಡ’ಗಳು, ಆಯಾ ಮಹಾ ವ್ಯಕ್ತಿಗಳ ಅಸಾಧಾರಣತೆಯನ್ನು ಸಾಂಕೇತಿಸಲು ಕವಿ ಅನುಸರಿಸಿರುವ ಒಂದು ಕಲಾ ತಂತ್ರ ಎಂದು ಅನ್ನಿಸದೆ, ಆಯಾ ಮಹಾವ್ಯಕ್ತಿಗಳ ಮಹತ್ತು ನಿಂತಿರುವುದೇ ಅವರು ಮಾಡಿದ ಪವಾಡಗಳಿಂದ ಎಂದು, ಸಾಕಷ್ಟು ವಿಚಾರ ಮಾಡದ ಜನ ತಪ್ಪಾಗಿ ಭಾವಿಸುವ ಸಂಭವವಿದೆ. ಇದು ಸಾಹಿತ್ಯದಲ್ಲಿ ಹೇಗೋ ವಾಸ್ತವ ಬದುಕಿಗೂ ಹಾಗೆಯೇ ಅನ್ವಯಿಸುತ್ತದೆ. ಈ ದೃಷ್ಟಿಯಿಂದ ಹಿಂದಿನ ಸಾಹಿತ್ಯದಲ್ಲಿ ದಾಖಲಾಗಿರುವ ಪವಾಡಗಳನ್ನು ಕುರಿತು, ಅವುಗಳನ್ನು ನೋಡುವ ಹಾಗೂ ಗ್ರಹಿಸುವ ವಿಮರ್ಶನ ವಿಧಾನಗಳನ್ನು ನಮ್ಮ ಓದುಗರಿಗೆ ತಿಳಿಯಪಡಿಸುವುದರ ಜತೆಗೆ, ನಮ್ಮ ಸುತ್ತಣ ಪರಿಸರದಲ್ಲಿ ಜನರು ಪವಾಡ  ಹಾಗೂ ಪವಾಡ ಪುರುಷರ ಬಗ್ಗೆ ಕಣ್ಣು ಮುಚ್ಚಿಕೊಂಡು ಮರುಳಾಗುವ ಪ್ರವೃತ್ತಿಯ ವಿರುದ್ಧ, ಅಗತ್ಯವಾದ ವೈಚಾರಿಕ ಎಚ್ಚರವನ್ನೂ ಮೌಲ್ಯ ಪ್ರಜ್ಞೆಯನ್ನೂ, ಮೂಡಿಸುವುದು ಇಂದಿನ ಸಾಹಿತಿಗಳ ಬಹು ಮುಖ್ಯವಾದ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು.

ಬೆಡಗು : ೧೯೮೯.