ಬೇಟೆ ಎಂದರೆ ಡಕ್ಕಲಿಗರಿಗೆ ಅತೀವ ಹುಚ್ಚು. ಕೆರೆ-ಹಳ್ಳ ನದಿಗಳಲ್ಲಿ ಬಲೆಹಾಕಿ ಮೀನು ಹಿಡಿಯುವುದರಲ್ಲಿ ಇವರು ಜಾಣರು. ಕೆಲವರು ಬೆನ್ನಮೇಲೆ ಕಲ್ಲನ್ನಿಟ್ಟುಕೊಂಡು ನೀರಲ್ಲಿ ಮುಳುಗಿ ಮೀನ, ಏಡಿ, ಆಮೆ ಮುಂತಾದ ಜಲಚರಗಳನ್ನು ಹಿಡಿಯುತ್ತಾರೆ. ಒಳ್ಳೆ ತಳಿಯ ಬೇಟೆ ನಾಯಿಗಳನ್ನು ಮತ್ತು ಕೌಜಗಗಳನ್ನು ಸಾಕಿ ಅವುಗಳಿಗೆ ಸರಿಯಾಗಿ ತರಬೇತಿಯನ್ನು ನೀಡಿರುತ್ತಾರೆ. ಹಲವಾರು ಬೇಟೆಗಾರರು ಇವರಿಂದ ನಾಯಿಮರಿ ಹಾಗೂ ಕೌಜುಗದ ಮರಿಗಳನ್ನು ಕೊಂಡು ಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಮೂರು-ನಾಲ್ಕು ಜನ ಕೂಡಿಕೊಂಡು ತಾವು ನೆಲೆನಿಂತ ಪ್ರದೇಶದ ಸುತ್ತಮುತ್ತ ಅಡವಿಗೆ ಬೇಟೆಯಾಡಲು, ಜೊತೆಗೆ ನಾಯಿಗಳನ್ನು ಪಳಗಿಸಿದ ಕೌಜುಗನ್ನು ಮತ್ತು ಬಲೆಯನ್ನು ತೆಗೆದುಕೊಂಡು ಹೋಗುತ್ತಾರೆ. ಕೌಜುಗ, ಬುರಲ, ಪಾರಿವಾಳ ಇವುಗಳನ್ನು ಹಿಡಿಯುವ ಬಲೆ ಬೇರೆಯಿದ್ದರೆ ಇವರು ಮೊಲ ಹಿಡಿಯುವ ಬಲೆ ಬೇರೆಯಾಗಿರುತ್ತದೆ. ಒಂದು ಕಡೆಗೆ ಬಲೆಹಾಕಿ ನಾಯಿಗಳಿಗೆ ಬಿಡುತ್ತಾರೆ. ಬೇಟೆನಾಯಿಗಳು ಪ್ರಾಣಿಗಳನ್ನು ಪತ್ತೆಹಚ್ಚಿ ಶಬ್ದ ಮಾಡುವುದರ ಮೂಲಕ ತಮ್ಮ ಒಡೆಯನಿಗೆ ಸೂಚನೆಯನ್ನು ನೀಡುತ್ತವೆ. ತಕ್ಷಣವೆ ಹೋಗಿ ಮರಗಳ ಪೊದೆಗಳಲ್ಲಿ, ಕಲ್ಲಿನ ಪಡಿಗಳಲ್ಲಿ ಅಥವಾ ಕುಳಿತ ಜಾಗದಲ್ಲಿಯೇ ಹಿಡಿಯುತ್ತಾರೆ. ಒಂದು ವೇಳೆ ಸಿಗದೆ ಓಡಿ ಹೋದರೆ ನಾಯಿಗಳಿಂದ ಬೆನ್ನಟ್ಟಿ ಹಿಡಿಯುತ್ತಾರೆ. ನಾಯಿಗಳಿಗೂ ಸಿಗದೆ ಇದ್ದ ಪಕ್ಷದಲ್ಲಿ ಬಲೆಯಲ್ಲಿ ಬೀಳುವಂತೆ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಹೆಚ್ಚು ಬೇಟೆಯಾಡಿದರೆ ಇತರರಿಗೆ ಮಾರುತ್ತಾರೆ. ಇವರು ಬೇಟೆಯಾಡುವ ಪ್ರಾಣಿ ಪಕ್ಷಿಗಳೆಂಧರೆ ಮೊಲ, ನರಿ, ಮುಂಗಸಿ, ಮುಳ್ಳಹಂದಿ, ಉಡ, ಕೌಜುಗ, ಬುರಲಿ, ಪಾರಿವಾಳ, ನೀರಕೋಳಿ ಮುಂತಾದವುಗಳು.

ಡಕ್ಕಲಿಗರಲ್ಲಿ ಕೌಜಲು ಬೇಟೆ ಹೆಚ್ಚಾಗಿ ಕಂಡು ಬರುತ್ತದೆ. ಈ ಪ್ರಕಾರದ ಬೇಟೆಯನ್ನು ನಾವು ಹಕ್ಕಾಪಿಕ್ಕಿ ಜನಾಂಗ ಹಾಗೂ ಬಡಗ ಜಂಗಮರಲ್ಲೂ ಸಹ ಕಾಣುತ್ತೇವೆ. ಇದು ಡಕ್ಕಲರಲ್ಲಿನ ಒಂದು ವೈಶಿಷ್ಟ್ಯವೂ ಹೌದು. ಕೌಜಲು ಹಕ್ಕಿಗಳಿಗಾಗಿ ತೆಂಗಿನಗರಿಯ ಕಡ್ಡಿ ಅಥವಾ ಬಿದಿರಿನ ಕಡ್ಡಿಗಳಿಂದ ಜೋಡಿ ಪಂಜರದ ಎರಡು ಬುಟ್ಟಿಗಳನ್ನು ತಾವೇ ಹೆಣೆಯುತ್ತಾರೆ. ಇದಕ್ಕೆ ಕೌಜಲು ಪುಟ್ಟಿ ಎಂದು ಕರೆಯುತ್ತಾರೆ. ನಂತರ ಚಿಕ್ಕಂದಿನಿಂದಲೂ ಸಾಕಿದ ಎರಡು ಕೌಜುಗಗಳನ್ನು ಈ ಬುಟ್ಟಿಯಲ್ಲಿ ಬೇರೆ ಬೇರೆಯಾಗಿ ಇಟ್ಟು ಅವಕ್ಕೆ ಬೇಕಾದ ಆಹಾರ ಧಾನ್ಯಗಳನ್ನು ಹಾಕಲು ಒಳಗೆ ಒಂದು ಸಣ್ಣ ಮುಚ್ಚಳವನ್ನು ಇಟ್ಟಿರುತ್ತಾರೆ. ಬೇಟೆಗಾರರು ಧ್ವನಿ ಮಾಡಿದರೆ ಅದಕ್ಕೆ ಸ್ಪಂದಿಸುವಂತೆ ಪಂಜರದ ಕೌಜಲುಗಗಳು ಕೂಗುತ್ತವೆ. ಹೀಗೆ ತರಬೇತಿ ನೀಡಿದ ಕೌಜುಗಗಳನ್ನು ಬೇಟೆಗೆ ಬಳಸುತ್ತಾರೆ. ಕೌಜುಗಗಳು ಹೆಚ್ಚಾಗಿರುವ ಸ್ಥಳಗಳಿಗೆ ತಮ್ಮ ಬೇಟೆಯ ಕೌಜುಗದ ಪಂಜರವನ್ನು ತೆಗೆದುಕೊಂಡು ಹೋಗಿ ಗಿಡದ ಮರೆಯಲ್ಲಿ ಇಟ್ಟು ಈ ಪಂಜರದಿಂದ ಸುಮರು ೧೦-೧೫ ಅಡಿಗಳ ಸುತ್ತ ಉರುಳುಕಟ್ಟೆಯನ್ನು ಬಿಟ್ಟು ಬೇಟೆಗಾರರು ಮರೆಯಲ್ಲಿ ಕುಳಿತು ತಮ್ಮ ಬೇಟೆಯ ಕೌಜುಗಕ್ಕೆ ಶಬ್ದ ಮಾಡುತ್ತಾರೆ. ಆಗ ಪಂಜರದ ಕೌಜುಗಗಳು ಜೋರಾಗಿ ಕೂಗಿಕೊಳ್ಳುತ್ತವೆ. ಇದನ್ನು ಕೇಳಿ ಕಾಡಿನಲ್ಲಿನ ಸುತ್ತಮುತ್ತಲ ಕೌಜುಗಗಳು ಇವುಗಳೊಡನೆ ಕಾಳಗಕ್ಕೆ ಬರುತ್ತವೆ. ಇವುಗಳು ಬರುವ ವೇಳೆಗೆ ಮತ್ತೊಮ್ಮೆ ಕೂಗುವಂತೆ ಅವಕ್ಕೆ ಬೇಟೆಗಾರ ಸೂಚಿಸುತ್ತಾನೆ. ಬೇಟೆ ಕೌಜುಗಗಳು ಮತ್ತೊಮ್ಮೆ ಕೂಗಿದ ನಂತರ ನಿಖರವಾದ ಸ್ಥಳವನ್ನು ಗೊತ್ತುಮಾಡಿಕೊಂಡು ಕಾಡಿನ ಕೌಜುಗಗಳು ಆ ಸ್ಥಳಕ್ಕೆ ಎದುರಾಳಿಯೊಡನೆ ಕಾದಾಡಲು ವೇಗವಾಗಿ ಬಂದು ಗಿಡಗಳ ನಡುವೆ ಬಿಟ್ಟ ಉರುಳುಕಟ್ಟೆಯ ಉರುಳಿಗೆ ಸಿಕ್ಕಿ ಹಾಕಿಕೊಳ್ಳುತ್ತವೆ. ನಂತರ ಇವುಗಳನ್ನು ಹಿಡಿದು ಬುಟ್ಟಿಗೆ ತುಂಬಿಕೊಳ್ಳುತ್ತಾರೆ. ಹೀಗೆ ಕಾಡಿನ ಅಥವಾ ಗುಡ್ಡಗಾಡು ಪ್ರದೇಶದ ವಿವಿಧ ಸ್ಥಳಗಳಿಗೆ ಕೌಜುಗಗಳನ್ನು ಹಿಡಿಯುತ್ತಾರೆ. ಇವರ ಹೇಳಿಕೆಯ ಪ್ರಕಾರ ಒಂದು ದಿನಕ್ಕೆ ಸರಿಯಾಗಿ ಇವರು ಬೇಟೆಯಾಡಿದರೆ ಐವತ್ತರಿಂದ ಅರವತ್ತು ಕೌಜಗಗಳು ಸಿಕ್ಕಿಬೀಳುತ್ತವೆಯಂತೆ. ಹೀಗೆ ಬೇಟೆಯಾಡಿದ ಕೌಜುಗಗಳನ್ನು ಮಾರಾಟ ಮಾಡುತ್ತಾರೆ. ಹಾಗೂ ಒಮ್ಮೊಮ್ಮೆ ತಾವು ಸಹ ಅಡಿಗೆ ಮಾಡಿ ಊಟ ಮಾಡುತ್ತಾರೆ (ಚೆಲುವರಾಜು. ೧೯೯೩:೩೬-೩೭).