ಸ್ವತಂತ್ರವಾದನವೆಂದರೆ ಏಕಾಂಗಿಯಾಗಿ ವಾದ್ಯವನ್ನು ನುಡಿಸುವುದಕ್ಕೆ ಅಥವಾ ಒಬ್ಬನೇ ಕಲಾವಿದ ಸ್ವತಂತ್ರವಾಗಿ ತನ್ನ ಪ್ರತಿಭೆಯನ್ನು ತೋರಿಸುವದಕ್ಕೆ ಸ್ವತಂತ್ರವಾದನ ಎನ್ನುತ್ತೇವೆ. ಈ ಸ್ವತಂತ್ರವಾದನದಲ್ಲಿ ತಬಲಾ ಅಷ್ಟೇ ಅಲ್ಲದೇ ಎಲ್ಲ ವಾದ್ಯಗಳಲ್ಲೂ ಸಹಿತ ಕಲಾವಿದರು ತಮ್ಮ ವಾದನವನ್ನು ಪ್ರದರ್ಶಿಸಬಹುದಾಗಿದೆ ಆದರೆ ಯಾರು ಇದರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿರುತ್ತಾರೆಯೋ ಅವರಿಗೆ ಇದು ಸಾಧ್ಯವಾಗಬಹುದು.

ಸಂಗೀತದಲ್ಲಿ ಒಂದು ನಾಣ್ಣುಡಿ ಇದೆ. ಅದೇನೆಂದರೆ ‘ಸ್ವರಃ ಮಾತಾಲಯಃ ಪಿತಾ’. ಇದರರ್ಥ ಸಂಗೀತದಲ್ಲಿ ಸ್ವರಕ್ಕೆ ತಾಯಿಯ ಸ್ಥಾನ ನೀಡಿ, ಲಯಕ್ಕೆ ಸಂಬಂಧಿಸಿದ್ದು. ಅಂದರೆ ಇಲ್ಲಿ ಲಯಕ್ಕೆ ತಂದೆಯ ಸ್ಥಾನವನ್ನು ನಮ್ಮ ಶಾಸ್ತ್ರಕಾರರು ನೀಡಿದ್ದಾರೆ.ಲಯ ಇದು ತಬಲಾಕ್ಕೆ ಸಂಬಂಧಿಸಿದ್ದು. ಅನ್ದರೆ ಇಲ್ಲಿ ಲಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನಮ್ಮ ಹಿರಿಯರು ನೀಡಿದ್ದಾರೆ ಎಂಬುದು ನಮಗೆ ತಿಳಿದು ಬರುತ್ತದೆ. ಆದರೆ ನಾವು ಎರಡಕ್ಕೂ ಪ್ರಾಧಾನ್ಯತೆಯನ್ನು ನೀಡಬೇಕಾಗುತ್ತದೆ. ಒಂದು ಮಗುವಿಗೆ ತಾಯಿ ತಂದೆಯರ ಲಾಲನೆ, ಪೋಷಣೆ ಇದ್ದರೆ ಮಾತ್ರ ಮಗು ಪೌಷ್ಟಿಕವಾಗಿ ಬೆಳೆಯಬಹುದೋ ಹಗೆಯೇ ಸಂಗೀತದಲ್ಲೂ ಸಹಿತ ಕಲಾವಿದರಿಗೆ ಸ್ವರ ಮತ್ತು ಲಯ ತಾಯಿ ತಂದೆ ಇದ್ದಂತೆ. ಇವೆರಡರ ಆಶ್ರಯದಲ್ಲಿ ಅವನು ಅಭ್ಯಾಸ ಮಾಡಬೇಕಾಗುತ್ತದೆ. ಯಾವುದರಲ್ಲೂ ನಿಷ್ಕಾಳಜಿ ಮಾಡುವಂತಿಲ್ಲ. ಆದರೂ ಸಹ ಶಾಸ್ತ್ರಕಾರರು ಅಭಿಪ್ರಾಯದಲ್ಲಿ ಲಯದ ಪ್ರಾಧಾನ್ಯತೆ ಎದ್ದು ಕಾಣುತ್ತದೆ.

ತಬಲಾ ಸ್ವತಂತ್ರವಾದನದಲ್ಲಿ ವಾದಕನು ಸ್ವತಂತ್ರವಾದನ ನುಡಿಸುವಾಗ ಆತ ಹೆಚ್ಚಿಗೆ ಗಮನದಲ್ಲಿಡಬೇಕಾದ ಕೆಲವು ಅಂಶಗಳನ್ನು ತಿಳಿಯೋಣ. ಸೋಲೋ ನುಡಿಸುವವನು ಅವನು ಸತತವಾಗಿ ಅಭ್ಯಾಸದಲ್ಲಿ ನಿರತನಾಗಿರಬೇಕು. ಅದರ ಬಗ್ಗೆ ಆಳವಾದ ಅಧ್ಯಯನ ಮಾಡಿರುವುದು ಅವಶ್ಯವಾಗಿದೆ. ಅಭ್ಯಾಸದಲ್ಲಿ ನಿರತನಾದಾಗ ಲಯ ಎಷ್ಟೇ ಬೆಳೆಸಿದರೂ ಸಹಿತ ನುಡಿಸುವ ಅಕ್ಷರದ ಸ್ಪಷ್ಟತೆ ಕಡಿಮೆಯಾಗ ಕೂಡದು. ಕಠಿಣವಾದ ಬೋಲ್‌ಗಳನ್ನು ನುಡಿಸುವಾಗ ಮುಖವನ್ನು ಕೆಟ್ಟದಾಗಿಸಬಾರದು, ದೇಹವನ್ನು ಅತೀ ಹೊರಳಾಡಿಸಬಾರದು, ಅಧೈರ್ಯ ಹೊಂದಬಾರದು, ಹೆಚ್ಚಾಗಿ ಬೋಲ್‌ಗಳ ಸಂಗ್ರಹಣೆಯನ್ನು ಮಾಡಿಕೊಂಡಿರಬೇಕು.

ತಬಲಾ ವಾದನದಲ್ಲಿ ವಿವಿಧ ಘರಾಣೆಯನ್ನು ನಮ್ಮ ಪೊರ್ವಜರು ನಿರ್ಮಿಸಿದ್ದಾರೆ. ಒಂದೊಂದು ಘರಾಣೆಯ ಬೋಲ್ ಗಳು ಒಂದೊಂದು ವಿಶೇಷತೆಯನ್ನು ಪಡೆದಿವೆ. ಆ ಘರಾಣೆಯ ವಿಶೇಷತೆಯನ್ನು ಗಮನವಿರಿಸಿ ಪ್ರಸ್ತುತ ಪಡಿಸಬೇಕಾಗುತ್ತದೆ. ನಾವು ನುಡಿಸುವ ಬಾಜದ ವಿಶೇಷತೆಯನ್ನು ತೋರಿಸಬೇಕಾಗುತ್ತದೆ. ಇವೆಲ್ಲವುದಕ್ಕಿಂತ ಮುಖ್ಯವಾಗಿ ಗುರುವಿನಲ್ಲಿ ಭಕ್ತಿ ಮತ್ತು ಅಭ್ಯಾಸದಲ್ಲಿ ತಾಳ್ಮೆಯ ಗುಣವನ್ನು ಹೊಂದಿರಬೇಕು.

ತಬಲಾ ಸ್ವಾತಂತ್ರ ವಾದನದಲ್ಲಿ ನುಡಿಸಬಹುದಾದ ವಿಶೇಷತೆಗಳೆಂದರೆ ನಾವು ಮೊದಲಿಗೆ ಯಾವ ತಾಲದ ಬಗ್ಗೆ ನುಡಿಸಬಯಸಿರುತ್ತೇವೆಯೋ ಆ ತಾಲದ ಠೇಕಾ ನುಡಿಸಬೇಕು.ನಂತರ ಒಂದೊಂದು ಘರಾಣೆಯಲ್ಲಿ ಅಂದರೆ ಉದಾಹರಣೆಗೆ ಬನಾರಸ ಬಾಜದಲ್ಲಿ ಮೊದಲಿಗೆ ಒಂದು ದಮ್ ದಾರ್ ಉಠಾಣ ಬಾರಿಸಿ ನಂತರ ಪೇಶ್ಕಾರ್ ದಿಂದ ಸ್ವತಂತ್ರವಾದನವನ್ನು ಪ್ರಾರಂಭಿಸಲಾಗುತ್ತದೆ. ಆದರೆ ದಿಲ್ಲಿ ಬಾಜದಲ್ಲಿ ಠೇಕಾ ನುಡಿಸಿದ ನಂತರ ಜಬರದಸ್ತ ಲಯಕಾರಿ ಹೊಂದಿದ ವಿವಿದ ರೀತಿಯ ಪೇಶ್ಕಾರ್ ಬಾರಿಸುವ ಪದ್ದತಿಯಿದೆ. ನಂತರ ಅದೇ ಘರಾಣೆಯ ಕಾಯದಾಗಳು, ಬೇರೆ ಬೇರೆ ಘರಾಣೆಗಳ ಕಾಯದಾಗಳು, ರೇಲಾ ಕಾಯದಾಗಳು, ವಿವಿಧ ರೀತಿಯ ಲಯಕಾರಿ ಹೊಂದಿದ ವಿವಿಧ ರೀತಿಯ ಪೇಶ್ಕಾರ್ ಬಾರಿಸುವ ಪದ್ದತಿಯಿದೆ. ನಂತರ ಅದೇ ಘರಾಣೆಯ ಕಾಯದಾಗಳು, ಬೇರೆ ಬೇರೆ ಘರಾಣೆಗಳ ಕಾಯದಾಗಳು, ವಿವಿಧ ರೀತಿಯ ಲಯಕಾರಿ ಹೊಂದಿದ ಕಾಯದಾಗಳು ನಂತರ ದ್ರತ್ ಲಯದಲ್ಲಿ ಚಕ್ರದಾರ್, ಪದಂತ್ ಅಂದರೆ ಬಾಯಿಂದ ಮೊದಲಿಗೆ ಬೋಲ್ ಗಳನ್ನು ಹೇಳಿ ನಂತರ ಅದೇ ಬೋಲ್ ಗಳನ್ನು ತಬಲಾದ ಮೇಲೆ ನುದಿಸಿ ತೋರಿಸುವುದು, ನಂತರ ನವಹಾಕ್ಕಾ ತಿಹಾಯಿ ಅಂದರೆ ಒಂಭತ್ತು ‘ಧಾ:’ ಹೊಂದಿದ ತಿಹಾಯಿ, ವಿವಿಧ ಲಯಕಾರಿ ಹೊಂದಿದ ತುಕಡಾ ಮುಖಡಾಗಳು, ತಿಹಾಯಿಗಳನ್ನು ನುಡಿಸಿ ಸ್ವತಂತ್ರವಾದನವನ್ನು ಮುಕ್ತಾಯ ಮಾಡುವದು ತಬಲಾ ಸ್ವಾತಂತ್ರವಾದನದಲ್ಲಿ ಬೆಳೆದು ಬಂದ ಪದ್ದತಿಯಾಗಿದೆ.

ಸಾಥ ಸಂಗತ :

ಸಾಥ ಸಂಗತ ಎಂದರೆ ಇದು ಗಾಯನ, ವಾದನ ಹಾಗೂ ನೃತ್ಯದಲ್ಲಿ ಲಯವನ್ನು ಪ್ರಧಾನವಾಗಿ ಮಾಡಿ ನುಡಿಸಬೇಕಾಗುತ್ತದೆ. ಇದರಲ್ಲಿ ತಬಲಾ ಪ್ರಮುಖ ಪಾತ್ರವಹಿಸುತ್ತದೆ. ತಬಲಾವಾದಕ ಈ ಕ್ರಿಯೆಯಲ್ಲಿ ಹೋಗುವಮೊದಲು ತಿಳಿಯಬೇಕಾದ ವಿಷಯವೆಂದರೆ ತಬಲಾ ಸ್ವತಂತ್ರವಾದನದಲ್ಲಿ ಎಷ್ಟು ವಿಶೇಷತೆ ಇದೆಯೋ ಅದಕ್ಕಿಂತಲೂ ಹೆಚ್ಚಿನ ವಿಶೇಷತೆ ಸಾಥ ಸಂಗತದಲ್ಲಿ ಇದೆ.ಏಕೆಂದರೆ ಸಾಥ ಸಂಗತದಲ್ಲಿ ಗಾಯಕ, ವಾದಕ, ನರ್ತನಕಾರರ ಜೊತೆಯಲ್ಲಿ ತಬಲಾ ನುಡಿಸುವವರು ಕಲಾವಿದರಿಗೆ ಹೊಂದಿಕೊಂಡು ಸಹಕಾರ ಮನೋಭಾವದಿಂದ, ಪ್ರಥಮ ಪ್ರಧಾನ್ಯತೆ ಮುಖ್ಯ ಕಲಾವಿದರಿಗೆ ನೀಡಿ ಎಚ್ಚರವಹಿಸಿ ಸಾಥಿಮಾಡಬೇಕಾಗುತ್ತದೆ. ಕಲಾವಿದರು ನೀಡಿದ ಲಯದಲ್ಲಿ ನುಡಿಸಬೇಕು. ಲಯವನ್ನು ಅವರು ಬೆಳೆಸಿದಾಗ ಮಾತ್ರ ಬೆಳೆಸಬೇಕು. ಎಲ್ಲೆಂದರಲ್ಲಿ ಬೋಲ್ಗಳನ್ನು ನುಡಿಸಬಾರದು, ಅವರ ಸಂಜ್ಞೆಯ ಮುಖಾಂತರ ಬೋಲ್‌ಗಳನ್ನು ನುಡಿಸಬೇಕು. ಗಾಯಕನ ಧ್ವನಿಯ ಏರಿಳಿತವನ್ನು ಅರಿತುಕೊಂಡು ನುಡಿಸಬೇಕು. ಒಂದು ಆವರ್ತನ ಮುಗಿಸಿ ಸಮ್ ಗೆ ಬಂದಾಗ ಜೋರಾಗಿ ಅವರಿಗೆ ತಿಳಿಯುವ ರೀತಿಯಲ್ಲಿ ಸಮ್ ನ್ನು ತೋರಿಸಬೇಕು, ಗಾಯಕರು ವಿಭಿನ್ನ ರೀತಿಯ ತಾನ್‌ಗಳನ್ನು ಹಾಡುವಾಗ ಅದಕ್ಕೆ ಉತ್ತೇಜನ ನೀಡುವಂತೆ, ಪ್ರೇರೇಪಿಸುವಂತೆ ನುಡಿಸಬೇಕು, ಠೇಕಾ ನುಡಿಸುವುದು ಸ್ಪಷ್ಟತೆಯಿಂದ ಕುಡಿರಬೇಕು. ಇವು ತಬಲಾ ಸಾಥಿದಾರನು ನಿರ್ವಹಿಸಬೇಕಾದ ಕೆಲವು ಕರ್ತವ್ಯಗಳು.

ನಮ್ಮ ಶಾಸ್ತ್ರಜ್ಞರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ಪದ್ದತಿಯಲ್ಲಿ ವಿವಿಧ ಶೈಲಿಯನ್ನು ನಿರ್ಮಿಸಿದ್ದಾರೆ. ಆ ಶೈಲಿಗಳಿಗೆ ಇದೆ ತೆರನಾಗಿ ಸಾಥಿ ಮಾಡಬೇಕೆಂಬ ಕಾಯ್ದೆಗಳನ್ನೂ ಸಹ ಮಾಡಿದ್ದಾರೆ.

ಖಯಾಲ (ಖ್ಯಾಲ) : ಖ್ಯಾಲ ಗಾಯನದಲ್ಲಿ ಎರಡು ಪ್ರಕಾರಗಳುಂಟು. 1. ಬಡಾ ಖ್ಯಾಲ 2. ಛೋಟಾ ಖ್ಯಾಲ.ಬಡಾ ಖ್ಯಾಲನ್ನು ವಿಲಂಬಿತಲಯದಲ್ಲಿ ಅದರಲ್ಲೂ ಬೇರೆ ಬೇರೆ ಲಯದಲ್ಲಿ ಹಾಡುತ್ತಾರೆ. ಇಲ್ಲಿ ಹೆಚ್ಚಾಗಿ ವಿಲಂಬಿತ ತೀನತಾಲ, ವಿಲಂಬಿತ ಝುಪ್ತಾಲ, ವಿಲಂಬಿತ ಏಕತಾಲಗಳ ಪ್ರಯೋಗ ಇರುತ್ತದೆ. ಮತ್ತು ಛೋಟಾಖ್ಯಾಲನ್ನು ದ್ರುತ್ ಲಯದಲ್ಲಿ ಇದರಲ್ಲೂ ವಿವಿದ ಲಯಗಳಲ್ಲಿ ಹಾಡುತ್ತಾರೆ. ಇಲ್ಲಿ ದ್ರತ್ ತೀನತಾಲ, ದೃತ್ ಏಕತಾಲದ ಪ್ರಯೋಗವನ್ನು ನಾವು ಕಾಣಬಹುದು.

ಠುಮರಿ ಗಾಯನ : ಈ ಗಾಯನ ಶೈಲಿಯಲ್ಲಿ ಮೊದಲಿಗೆ ದೀಅಚಂದಿ, ಅದ್ದಾ ತೀನತಾಲ, ರೊಪಾ ಈ ತಾಲಗಳಲ್ಲಿ ವಿಲಂಬಿತ ಗತಿಯಲ್ಲಿ ಹಾಡಿ ನಂತರ ಕೆಹರವಾದಲ್ಲಿ ಹಾಡಲಾಗುತ್ತದೆ. ಆಗ ತಬಲಾವಾದಕ ಆಕರ್ಷಣೀಯ ಲಗ್ಗಿಗಳನ್ನು ನುಡಿಸಿ ಗಾಯನಕ್ಕೆ ಮೆರುಗನ್ನು ನೀಡುತ್ತಾನೆ. ನಂತರ ಮುಕ್ತಾಯ ಸಮಯಕ್ಕೆ ಮತ್ತೊಮ್ಮೆ ವಿಲಂಬಿತಕ್ಕೆ ಹಿಂತಿರುಗಿ ಒಂದು ಆವರ್ತನ ನುಡಿಸಿ ಮುಕ್ತಾಯಗೊಳಿಸುವುದು ಇಲ್ಲಿ ಪದ್ದತಿ ಇದೆ.

ತರಾನಾ ಗಾಯನ: ಈ ಪದತಿಯಲ್ಲಿ ಅರ್ಥವಿಲ್ಲದ ನಿರರ್ಥಕ ಶಬ್ದಗಳ ಪ್ರಯೋಗ ಇದ್ದರೂ ಸಹ ಇದಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕಾರಣ ಇದರಲ್ಲಿ ಸ್ವರಗಳ ಹಾಗೂ ಲಯಗಳ ಜಗಳಾಟವನ್ನು ನೋಡಬಹುದು. ಉದಾಹರಣೆಗೆ ಗಂಡ ಹೆಂಡಿರ ಜಗಳದ ಹಾಗೇ, ಎಷ್ಟೇ ಜಗಳವಾಡಿದರೂ ಮತ್ತೆ ಒಂದಾಗುವ ಹಾಗೇ ಈ ತರಾನಾ ಗಾಯನದಲ್ಲಿ ವಿವಿಧ ಪ್ರಕಾರದ ಲಯದಲ್ಲಿ ಹಾದಿ ಮರಳಿ ಗಾಯಕ, ವಾದಕರು ತಮ್ಮ ಕಲೆಯನ್ನು ಶ್ರೋತೃಗಳ ಮುಂದೆ ಇಡುತ್ತಾರೆ.

ದೃಪದ ಗಾಯನ: ಈ ಶೈಲಿಯೂ  ಸಹ ಒಂದು ವಿಶೇಷ ಸ್ಥಾನವನ್ನು ಪಡೆದಿದೆ. ಇದು ಲಯ ಪ್ರಧಾನವಾಗಿದೆ. ಈ ಪದ್ಧತಿಯು ಗಂಭೀರ ಸ್ವರೂಪದ್ದಾಗಿದ್ದು, ಇದನ್ನು ಚೌತಾಲ, ಧಮಾರ ತಾಲಗಳಲ್ಲಿ ಹೆಚ್ಚಾಗಿ ಹಾಡಲಾಗುತ್ತದೆ. ಈ ತಾಲಗಳನ್ನು ಖುಲ್ಲಾ ಬಾಜದಲ್ಲಿ ನುಡಿಸಲಾಗುತ್ತದೆ

ಸುಗಮ ಸಂಗೀತ : ಇಲ್ಲ ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಭಾವಗೀತೆಯಲ್ಲಿ ಮನಸ್ಸಿನ ಭಾವನೆ, ಪ್ರೇಮ ಮತ್ತು ವಿರಹಗೀತೆಗಳು, ಭಕ್ತಿ ಪ್ರಧಾನವಾದ ಭಕ್ತಿಗೀತೆಗಳು, ಶರಣರ ದಾಸರ ನುಡಿ ಮುತ್ತುಗಳು ಹೀಗೆ ಸುಗಮ ಸಂಗೀತದಲ್ಲಿ ಇನ್ನು ಅನೇಕ ಪ್ರಕಾರದ ಗೀತೆಗಳು ಸಮ್ಮಿಲಿತಗೊಂಡಿವೆ. ಆ ಹಾಡಿಗೆ ತಕ್ಕಂತೆ ಛಂದಸ್ಸನ್ನು ತುಂಬಿ ಶೃಂಗಾರ ಮಾಡುವ ಹೊಣೆಯನ್ನು ತಬಲಾ ವಾದಕನು ನಿರ್ವಹಿಸಬೇಕಾಗುತ್ತದೆ. ಹೀಗೆಯೇ ಚಿತ್ರಸಂಗೀತದಲ್ಲೂ ಸಹ ಸಾಥ ಸಂಗತದ ನಿರ್ವಹಣೆಯನ್ನು ಜಗರೂಕತೆಯಿಂದ ಛಂದಸ್ಸನ್ನು ತುಂಬಿ ನಿರ್ವಹಿಸಬೇಕಾಗುತ್ತದೆ. ಹೀಗೆ ಅನೇಕ ವಿಧದ ಗಾಯನ ಪ್ರಕಾರಗಳಿಗೆ, ವಾದನ ಶೈಲಿಗಳಿಗೆ ಕಲಶ ಪ್ರಾಯದಂತೆ ಲಯವು ಇರುವುದರಿಂದ ಸ್ವತಂತ್ರವಾದನವಿರಲಿ, ಗಾಯನವಿರಲಿ, ವಾದನವಿರಲಿ ಅವುಗಳ ಪದ್ಧತಿ ಹೇಗೆ ಇರುತ್ತದೆಯೋ ಹಾಗೆಯೇ ಅದನ್ನು ಚಾಚು ತಪ್ಪದೇ ಯಶಸ್ವಿಯಾಗಿ ನಿರ್ವಹಿಸುವ ಹೊಣೆ ತಬಲಾ ವಾದಕನದ್ದಾಗಿರುತ್ತದೆ.

ನೃತ್ಯದಲ್ಲಿ ಸಾಥ ಸಂಗತ : ತಬಲಾ ವಾದನದಲ್ಲಿ ಮತ್ತು ನೃತ್ಯದಲ್ಲಿ ಲಯವು ಪ್ರಧಾನವಾಗಿರುವುದದರಿಂದ ಯಾವ ಬೋಲ್‌ಗಳನ್ನು ತುಕಡಾ, ಮುಖಡಾ ರೂಪದಲ್ಲಿ ನುಡಿಸಲಾಗುತ್ತದೆ. ಆದರೆ ಒಳ್ಳೆಯ ನೃತ್ಯಗಾರರು ಉತ್ತಮ ಪ್ರದರ್ಶನ ನೀಡಲಿಕ್ಕೆ ಆಡಿ ಲಯದಲ್ಲಿ ಕಠಿಣ ಹಾಗೂ ಆಕರ್ಷಣೀಯ ಬೋಲ್‌ಗಳಿಗೆ ಹೆಜ್ಜೆ ಹಾಕುವುದುಂಟು. ಈ ಕಾರಣಕ್ಕಾಗಿಯೇ ನೃತ್ಯದಲ್ಲಿ ಸಾಥ ಸಂಗತದ ಅನುಭವವಿದ್ದ ತಬಲಾ ವಾದಕರನ್ನೇ ನೃತ್ಯ ಕಲಾವಿದರು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಕಾಲಿನಲ್ಲಿ ಹಾಕುವ ನೃತ್ಯದ ಬೋಲ್‌ಗಳ ಜೊತೆ ತಬಲಾ ವಾದಕನ ಬೋಲ್ ಗಳು ಹೊಂದಬೇಕು ನಂತರ ನೃತ್ಯದ ಜೊತೆಯಲ್ಲಿ ಗಾಯಕ ಕಲಾಕಾರರು ಇರುವುದರಿಂದ ತಬಲಾವಾದಕರು ಅವರ ಜೊತೆಯಲ್ಲಿಯೂ ಸಹ ಹೊಂದಿಕೊಂಡು ಅವರು ಬಾಯಿಂದ ಹೇಳುವಂತಹ ಬೋಲ್ ಗಳಿಗೆ ಹೊಂದಿಕೊಂಡು ನುಡಿಸುವುದು ತಬಲಾ ವಾದಕನ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ನೃತ್ಯದ ಜೊತೆಯಲ್ಲಿ ಸಾಥಿ ಮಾಡುವ ತಬಲಾ ವಾದಕ ಉತ್ತಮ ತಬಲಾವಾದಕನಾಗಿದ್ದರೆ ಮಾತ್ರ ಉತ್ತಮ ನೃತ್ಯದ ಜೊತೆ ಉತ್ತಮ ಸಾಥಿ ಮಾಡಲು ಸಾದ್ಯವಾಗಬಹುದು.

ಈ ಎಲ್ಲ ವಿಷಯಗಳನ್ನು ನಾವು ಕೊಲಂಕುಶವಾಗಿ ನೋಡಿದರೆ ಮುಖ್ಯ ಕಲಾವಿದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು, ಶ್ರೋತೃಗಳ ಮನ ತಣಿಸಲು ಅವನ ಸಾಮರ್ಥ್ಯ, ಜವಾಬ್ದಾರಿ ಎಷ್ಟು ಇರುತ್ತದೋ ಅಷ್ಟೇ ಜವಾಬ್ದಾರಿ ಸಾಥಿ ಮಾಡುವ ಕಲಾವಿದರದ್ದೂ ಇರುತ್ತದೆ. ಕೆಲವು ಕಲಾವಿದರು ಸಾಥಿದಾರರನ್ನು ಸಾಥಿದಾರರೆಂದು ನಿಷ್ಕಾಳಜಿ ಮಾಡುವುದುಂಟು. ಸಾಥಿದಾರರೆಂದರೆ ಮುಖ್ಯ ಕಲಾವಿದನಿಗೆ ಹಾಡಲು ಅಥವಾ ನರ್ತಿಸಲು ಉತ್ತೇಜನ ನೀಡುವ ಹೊಣೆ ಸಾಥಿದಾರನದ್ದಾಗಿರುತ್ತದೆ. ಆದ್ದರಿಂದ ಸ್ವತಂತ್ರವಾದನ ಹಾಗೂ ಸಾಥ ಸಂಗತ ಇವೆರಡೂ ಸಹಿತ ತಬಲಾ ವಾದನದಲ್ಲಿ ಇರಬೇಕಾದ ಮುಖ್ಯ ಅಂಶಗಳು.