ಬಗಳಾಂಬಕಿ ನಿನ್ನ ಹೊಗಳುವೆ ಪೊಗಳುವೆ
ಮಹಾಕಾಳಿ ಮೊದಲೆನಗೆ ಒಲಿಯಮ್ಮ | ಎನಗೆ ಒಲಿಯಮ್ಮ
ಸರ್ವಕಾಲದಲ್ಲಿ ನಿನ್ನ ಸ್ಮರಣೆಯ ಮಾಡುವೆ
ಭಾಗ್ಯದ ನಿಜದೇವಿ ಬಾರಮ್ಮ | ದೇವಿ ಬಾರಮ್ಮ       ೧

ಆದಿ ಅನಾದಿ ಸಾಧಿಸಿ ಬಂದು ನೀ
ಆ ಮಹಾದೇವಗ ಕಾಡಿದಿ ದೇವಿ | ನೀ ಕಾಡಿದಿ ದೇವಿ
ಏಳು ಹೇಳಲಿ ದೇವಿ ನಿನ್ನ ಐಶ್ವರ್ಯ
ಮೂರು ಲೋಕಕ ಮುಂದಾದಾಕಿ | ದೇವಿ ಮುಂದಾದಾಕಿ        ೨

ಧರ್ಮರಾಜನ ಐಶ್ವರ್ಯಕಳಕಲಿಲ್ಲ
ಗಳಿಗ್ಯಾಗ ಅಳಿಗಾಲ ತರಿಸಿದಿ | ದೇವಿ ತರಿಸಿದಿ
ಸೌತಿ ಬಳ್ಳಿಯ ಕಾಯಿ ಧರ್ಮ ಹರಿದಾನೆಂದು
ದೃಢವಿಲ್ಲದ ರುಂಡ ತೋರಿಸಿದಿ | ದೇವಿ ತೋರಿಸಿದಿ   ೩

ವಿಕ್ರಮರಾಜನ ದಿಕ್ಕುಪಾಲ ಮಾಡಿಸಿ
ಅನ್ನಕೊಬ್ಬರ ಮನೆಗೆ ಸೇರಿಸಿದಿ | ದೇವಿ ಸೇರಿಸಿದಿ
ಗೂಟಕ್ಹಾಕಿದ ಹಾರ ನುಂಗಿತೋ ಹಂಸಪಕ್ಷಿ
ಕಟಕ ಎಂದು ಕೈಕಾಲ ಕಡಿಸಿದಿಯಾ | ದೇವಿ ಕಡಿಸಿದಿಯಾ ೪

ಹರಿಶ್ಚಂದ್ರ ರಾಜನಂಥ ಸತ್ಯವಂತ ಯಾರಿಲ್ಲ
ವೀರಬಾಹುಕನ ಮನೆಗೆ ಸೇರಿಸಿದಿ | ದೇವಿ ಸೇರಿಸಿದಿ
ಹೊಟ್ಟಿ ಮಗನ ಮೆಟ್ಟಿ ಹುಗಿಯುವ ಕಾಲಕ್ಕೆ
ಆಣೆ ರೊಕ್ಕಕ್ಕ ಹೆಣ ತರಬಿಸಿದಿ | ದೇವಿ ತರಬಿಸಿದಿ     ೫

ಮೂಗಂಡಗ ಹಾರ ವಿಷಯ ಮಾದೇವನ
ಜಡೆಯೊಳು ತಣ್ಣಗೆ ಕುಳಿತೀದಿ | ದೇವಿ ಕುಳಿತೀದಿ
ಇಳೆಯೊಳು ಹೊಳೆಯುವ ಸ್ಥಳದ ಸದ್ಗುರು
ಮಳೆಯ ಸ್ವಾಮಿಗೆ ಹಿರಿಯ ಮಗಳಾದಿ | ದೇವಿ ಮಗಳಾದಿ      ೬