ಅಲೆಮಾರಿಗಳಾದ ಡಕ್ಕಲಿಗರಿಗೆ ತಮ್ಮದೇ ಆದ ನಿಗದಿತ ಸ್ಥಳ ಇರುವುದಿಲ್ಲ. ತಮ್ಮ ವೃತ್ತಿಗಾಗಿ ವರ್ಷದ ಉದ್ದಕ್ಕೂ ಅಲೆಯುವುದರಿಂದ, ಅಲೆಯುವ ಪಾದಗಳಿಗೆ ದಣಿವೆನಿಸಿದರೆ, ಗುಡಿ-ಗುಂಡಾರಗಳೇ ಮನೆಯಾಗುತ್ತವೆ. ಅವು ಕೂಡ ಸಿಗದೇ ಇದ್ದಾಗ ಮಾದಿಗರ ಕೇರಿಯ ಸಮೀಪದ ಬಯಲಿನಲ್ಲಿ, ಇಲ್ಲವೆ ತಿಪ್ಪೆಯ ಹತ್ತಿರ ಅಥವಾ ಮರಗಳ ಕೆಳಗೆ ಬಿಡಾರ ಹೂಡುತ್ತಾರೆ. ಎರಡು ಕಟ್ಟಿಗೆಗಳನ್ನು ನೆಟ್ಟು ಅದರ ಮೇಲೆ ಉದ್ದನೆಯ ಕೋಲನ್ನು ಇಡುತ್ತಾರೆ. ನಾಲ್ಕೂ ಮೂಲೆಗೂ ಗೂಟವನ್ನು ನೆಟ್ಟಿ ಹಗ್ಗದಿಂದ ಬಿಗಿಗೊಳಿಸಿರುತ್ತಾರೆ. ಬಿಡಾರವೂ ಮಳೆಗೆ ಸೋರದಂತೆ ಮೇಲೆ ಪ್ಲಾಸ್ಲಿಕ ಹಾಳೆ, ಕೆಲವರು ಕೌದಿಗಳನ್ನು ಅಥವಾ ತಾಡಪತ್ತಿ ಇಲ್ಲವೆ ಗೋಣಿ ಚೀಲಗಳನ್ನು ಹಾಕಿ ಸಿದ್ಧಪಡಿಸಿರುತ್ತಾರೆ. ಗಾಳಿಗೆ ಹಾರದಂತೆ ನಾಲ್ಕೂ ಬದಿಗೂ ಹಗ್ಗದಿಂದ ಗೂಟಕ್ಕೆ ಕಟ್ಟಿ ಬಿಗಿಗೊಳಿಸಿರುತ್ತಾರೆ.

ಕೆಲವರು ಹಳ್ಳಿಗಳಲ್ಲಿ ಸಣ್ಣದಾದ ಗುಡಿಸಲನ್ನು ಕಟ್ಟಿರುತ್ತಾರೆ. ಮೇಲುಹೊದಿಕೆಯಾಗಿ ಅಡಿಕೆಯ ಸೋಗು, ತೆಂಗಿನ ಸೋಗು ಅಥವಾ ಈಚಲು ಪೊರಕೆ ಇಲ್ಲವೆ ಆಪದ ಹುಲ್ಲನ್ನು ಬಳಸುತ್ತಾರೆ. ಹೀಗೆ ಕಟ್ಟಿದ ಬಿಡಾರಗಳಿಗೆ ಮಣ್ಣಿನ ಗೋಡೆ ಕಟ್ಟಿರುತ್ತಾರೆ. ಕೆಲವರು ಲಕ್ಕಿ ಕಟ್ಟಿಗೆಯ ಗೋಡೆ ಮಾಡಿ ಅದರ ಮೇಲೆ ಸೆಗಣಿಯಿಂದ ಸಾರಿಸಿರುತ್ತಾರೆ. ಇತ್ತೀಚೆಗೆ ಕೆಲವು ಡಕ್ಕಲಿಗರಿಗೆ ಸರ್ಕಾರದವರು ಜನತಾ ಮನೆಗಳನ್ನೂ ಕಟ್ಟಿ ಕೊಡುತ್ತಿರುವುದು ಕಂಡು ಬರುತ್ತದೆ.

ವೃತ್ತಿಗಾಗಿ ಡಕ್ಕಲಿಗರು ಬಂದು ಇಳಿದಾಗ ಆ ಊರಿನ ಕೇರಿಯ ಮಾದಿಗರು ದಿನಕ್ಕೊಂದು ಮನೆಯವರಂತೆ ಅನ್ನ,ನೀರು ತಂದು ಹಾಕುತ್ತಾರೆ. ಡಕ್ಕಲಿಗರಿಗೆ ಇತರೆ ವಸ್ತುಗಳು ಬೇಕೆನಿಸಿದಾಗ ಮಾದಿಗರ ಕಡೆಯಿಂದ ತರಿಸಿಕೊಳ್ಳುತ್ತಾರೆ. ಇತರ ಗುಂಪಿನ ಜನರು ವಸ್ತು-ಇತ್ಯಾದಿಗಳನ್ನು ತಂದುಕೊಟ್ಟರೆ ತೆಗೆದುಕೊಳ್ಳುವುದಿಲ್ಲ.

[1]

ಬಿಡಾರದ ಒಳಗಡೆಗೆ ಕೆಲವು ಅಡಿಗೆಯ  ಸಾಮಾನುಗಳು, ಚಾದರ ಹೊದ್ದಿಕೊಳ್ಳುವ ಇತರೆ ಬಟ್ಟೆಗಳು ಒತ್ತಟ್ಟಿಗೆ ಇಟ್ಟಿರುತ್ತಾರೆ. ಬಿಡಾರದ ಅಕ್ಕ ಪಕ್ಕದಲ್ಲಿ ಕೆಲವು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮಚ್ಚು, ಕುಡುಗೋಲು, ಕೊಡಲಿಯನ್ನು ಇಟ್ಟಿರುತ್ತಾರೆ. ಪ್ಲಾಸ್ಟಿಕ ಕೊಡ, ಅಲ್ಯುಮಿನಿಯಂ ತಟ್ಟೆ, ತಂಬಿಗೆ, ಮಣ್ಣಿನ ಬಿಂದಿಗೆಗಳು ಕಾಣಸಿಗುತ್ತವೆ. ಆದರೆ ಇವರಲ್ಲಿ ಬೆಲೆಬಾಳುವ ವಸ್ತುಗಳು ಕಾಣಸಿಗುವುದಿಲ್ಲ.

ಡಕ್ಕಲಿಗರು ಅಲೆಮಾರಿಯಗಿ ವರ್ಷದ ಉದ್ದಕ್ಕೂ ಸಂಚರಿಸುವುದರಿಂದ ತಮ್ಮ ಸಹಕುಟುಂಬ ಪರಿವಾರದೊಂದಿಗೆ ಪ್ರಯಾಣ ಬೆಳೆಸುತ್ತಾರೆ. ಕತ್ತೆ, ಹಂದಿ, ನಾಯಿ, ಕೋಳಿ, ಮೇಕೆಗಳನ್ನು ಸಾಕುತ್ತಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವಾಗ ಇವುಗಳು ಸಾಗಿಸಲು ಅನುಕೂಲವಾಗುವುದರಿಂದ ಈ ಕೆಲವು ಪ್ರಾಣಿಗಳನ್ನು ಸಾಕುತ್ತಾರೆ. ಮೇಕೆಗಳನ್ನು ಮಾದಿಗರ ಕಡೆಯಿಂದ ಬಳುವಳಿಕೆಯಾಗಿ ಪಡೆದುಕೊಂಡದ್ದೇ ಹೆಚ್ಚು. ಡಕ್ಕಲಿಗರಲ್ಲಿ ಚಕ್ಕಡಿ ಇದ್ದವನೆ ಸಿರಿವಂತ.[1] ದಿನಾಂಕ ೨೨-೯-೧೯೮೮ ರಂದು ಕ್ಷೇತ್ರಕಾರ್ಯಕ್ಕಾಗಿ ಬಸವಕಲ್ಯಾಣಕ್ಕೆ ಹೋಗಿದ್ದಾಗ ಸಹಜವಾಗಿ ಡಕ್ಕಲಿಗರ ಭೇಟಿಯಾಯಿತು. ನಾನು ಒಯ್ದಿದ್ದ ಒಂದು ಡಜನ್‌ ಬಾಳೆಹಣ್ಣನ್ನು ಕೊಟ್ಟಾಗ ತೆಗೆದುಕೊಳ್ಳಲಿಲ್ಲ. ಏಕೆಂದು ಪ್ರಶ್ನಿಸಿದಾಗ ನಮಗೆ ಮಾದಿಗರನ್ನು ಬಿಟ್ಟು ಬೇರೆಯವರು ಕೊಟ್ಟುದನ್ನು ತೆಗೆದುಕೊಳ್ಳಬಾರದೆಂದು ಜಾಂಬಋಷಿಯ ವಚನವಿದೆ. ಒಂದು ವೇಳೆ ತೆಗೆದುಕೊಂಡರೆ ನಮ್ಮ ಕುಲಕ್ಕೆ ಮತ್ತು ಜಾಂಬಋಷಿಗೆ ದ್ರೋಹ ಮಾಡಿದಂತಾಗುತ್ತದೆಂದರು. ಆಮೇಲೆ ಬೇರೊಬ್ಬ ಮಾದಿಗರ ಕೈಯಲ್ಲಿ ಬಾಳೆಹಣ್ಣನ್ನು ತೆಗೆದುಕೊಳ್ಳಲಿಕ್ಕೆ ಹೇಳಿ ಆಮೇಲೆ ತಾವು ಪಡೆದುಕೊಂಡರು. ಈ ರೀತಿಯ ವಿಶಿಷ್ಟ ಸಂಪ್ರದಾಯ ಡಕ್ಕಲಿಗರಲ್ಲಿ ರೂಢಿಯಲ್ಲಿರುವುದು ಕಂಡುಬರುತ್ತದೆ.