ಕಾವ್ಯದ ಸಂದರ್ಭದಲ್ಲಿ ಕನಸು ಎಂದೊಡನೆಯೆ ನನಗೆ ತಟಕ್ಕನೆ ನೆನಪಿಗೆ ಬರುವುದು, ನಾನು ಎಳೆಯಂದಿನಲ್ಲಿ ಶಾಲೆಯ ಪಠ್ಯಪುಸ್ತಕವೊಂದರಲ್ಲಿ ಓದಿದ್ದ ‘ತಿರುಕನ ಕನಸು’ ಎಂಬ ಪದ್ಯ. ‘ತಿರುಕನೋರ್ವ ನೂರ ಮುಂದೆ, ಮುರುಕ ಧರ್ಮಶಾಲೆಯಲ್ಲಿ,  ಒರಗಿರುತ್ತಲೊಂದು ಕನಸ ಕಂಡನೆಂತೆನೆ’- ಎಂದು ಆರಂಭವಾಗುವ ಈ ಪದ್ಯ, ತಿರುಕನೊಬ್ಬನಿಗೆ ಕನಸಿನಲ್ಲಿ ಅಯಾಚಿತವಾಗಿ ದೊರೆತ ರಾಜಪಟ್ಟವನ್ನೂ, ಅದರ ವೈಭವಗಳನ್ನೂ, ವರ್ಣಿಸುತ್ತ, ಮತ್ತೆ ಕನಸೊಡೆದು ಎಚ್ಚರವಾದ ಮೇಲೆ ಆತ ಎಂದಿನಂತೆ ತಿರುಪೆಗೆ ಹೊರಟ ಸಂಗತಿಯನ್ನೂ ಕತೆಯ ರೂಪದಲ್ಲಿ ನಿರೂಪಿಸುತ್ತದೆ. ಈ ಲೋಕದ ಭೋಗ ವೈಭವಗಳ ನಶ್ವರತೆಯನ್ನು ಹೇಳುವುದು, ಇದನ್ನು ಬರೆದ ಕವಿಯ ಉದ್ದೇಶವಾದರೂ, ‘ಕನಸು’ಗಳಿಗೆ ಸಂಬಂಧಪಟ್ಟ ಬಹು ಮುಖ್ಯವಾದ ಕೆಲವು ಅಂಶಗಳನ್ನು ಇದು ತಿಳಿಸುತ್ತದೆ. ತಿರುಕನಿಗೆ ಸಂಪತ್ತಿನ, ದೊರೆತನದ ಬಯಕೆ; ಅಂದರೆ ವಾಸ್ತವದಲ್ಲಿ ಯಾವುದು ಅಪ್ರಾಪ್ಯವೋ, ಆದರೂ ಯಾವುದನ್ನು ತಿರುಕನಂಥ ವ್ಯಕ್ತಿ ತನ್ನ ಅಂತರಾಳಗಳಲ್ಲಿ ತೀವ್ರವಾಗಿ ಆಶಿಸಿದ್ದನೋ ಮತ್ತು ಪಡೆಯದೆ ಹತಾಶನಾಗಿದ್ದನೋ ಅದನ್ನು ಕಡೆಯ ಪಕ್ಷ ಕನಸಿನಲ್ಲಾದರೂ ಆತ ಪಡೆದು ಸುಖಿಸಿದಂತೆ ಇಲ್ಲಿ ವರ್ಣಿಸಲಾಗಿದೆ. ಅಂದರೆ, ಕನಸು ಮೂಲತಃ ಒಂದು ಅನುಭವ. ಅದು ತಾತ್ಕಾಲಿಕವಾದದ್ದಾದರೂ,  ವಾಸ್ತವವೆನ್ನಿಸಿದರೂ, ಅದು ವ್ಯಕ್ತಿಯೊಬ್ಬ ತನ್ನ ಪ್ರಜ್ಞೆಯ ಒಂದು ನೆಲೆಯಲ್ಲಿ ಪಡೆದಂಥ ಅನುಭವ. ಅದು ವಾಸ್ತವತೆಗೆ ಅಥವಾ ಜಾಗೃದವಸ್ಥೆಗೆ ಮಿಥ್ಯೆಯಾದರೂ, ಕಾಣುವಷ್ಟು ಕಾಲ, ಸ್ವಪ್ನ ಸ್ಥಿತಿಯಲ್ಲಿ ಅದೊಂದು ಅನುಭವ ಸತ್ಯವಾಗಿತ್ತೆಂಬುದನ್ನು ಕಡೆಗಣಿಸುವಂತಿಲ್ಲ. ಮನುಷ್ಯನ ಬಯಕೆಗಳು, ಭಯಗಳು, ಶಂಕೆಗಳು, ನೆನಪುಗಳು, ಅನುಭವಗಳು- ಇತ್ಯಾದಿಗಳು ಜಾಗೃದವಸ್ಥೆಗೆ ವ್ಯತಿರಿಕ್ತವಾದ ನಿದ್ರಾವಸ್ಥೆಯಲ್ಲಿ, ಬಹು ಬಗೆಯಾಗಿ ಕಾಣಿಸಿಕೊಳ್ಳುತ್ತವೆ. ಈ ಕನಸುಗಳು ಅರ್ಥ ಪೂರ್ಣವಾಗಿರಬಹುದು, ಅರ್ಥಹೀನವಾಗಿರಬಹುದು; ವಾಸ್ತವವನ್ನು ಹೋಲಬಹುದು ಅಥವಾ ಹೋಲದೆ ಇರಬಹುದು; ಸುಸಂಬದ್ಧವಾಗಿರಬಹುದು ಅಥವಾ ಅಸಂಬದ್ಧವಾಗಿರಬಹುದು. ಅಂತೂ ಮನುಷ್ಯನ ಒಳಪ್ರಜ್ಞೆಯ ತಲಾತಲದಲ್ಲಿ ಹುದುಗಿದ ಆಸೆ-ಭಯ-ಆಶಂಕೆ ಇತ್ಯಾದಿಗಳಿಗೆ, ‘ನಿದ್ರಾ ಸಮುದ್ರಶಿಲ್ಪಿ ಕಡೆದೆಬ್ಬಿಸಿದ ಆಕಾರಗಳು’ ಹೇಗಿರುತ್ತವೆ ಎಂಬುದನ್ನು ಸೂತ್ರೀಕರಿಸಿ ಹೇಳಲು ಸಾಧ್ಯವಿಲ್ಲ. ಕುವೆಂಪು ಒಂದೆಡೆ ಹೇಳುವಂತೆ “ಸ್ವಪ್ನವು ಜಾಗೃದವಸ್ಥೆಯ ಅನುಭವಗಳಿಗೆ ಜಾಗ್ರಜ್ಜಗತ್ತಿನ ಆಕಾರಗಳನ್ನೇ ಕಲ್ಪಿಸಿದರೆ ಆಗ ಆ ಸೃಷ್ಟಿ ಪ್ರತಿಕೃತಿಯಾಗುತ್ತದೆ. ಹಾಗಲ್ಲದೆ ಜಾಗ್ರದವಸ್ಥೆಯ ಅನುಭವಕ್ಕೆ ಸಾಂಕೇತಿಕ ಪ್ರತೀಕವನ್ನು ನಿರ್ಮಿಸಿದರೆ ಆಗ ಆ ಸೃಷ್ಟಿ ಪ್ರತಿಮೆಯಾಗುತ್ತದೆ. ಆ ಪ್ರತಿಮೆಯಂತಹ ಆಕೃತಿಯನ್ನು ನಾವು ಜಾಗ್ರದವಸ್ಥೆಯ ಜಗತ್ತಿನಲ್ಲಿ ಎಲ್ಲಿಯೂ ಎಂದೂ ಕಾಣದಿದ್ದರೂ ಅದನ್ನು ‘ಸುಳ್ಳು’ ಎನ್ನಲಾಗುವುದಿಲ್ಲ”[1] ಯಾಕೆಂದರೆ ಕನಸಿಗೆ ಕಾರಣವಾದ ಅನುಭವ ಮಾತ್ರ ಕನಸಿಗೂ ಎಚ್ಚರಕ್ಕೂ ಸತ್ಯ. ಇಂಥ ಸಂದರ್ಭದಲ್ಲಿ ಕನಸಿನ ಅನೇಕ ಸಂಕೇತ ಪ್ರತೀಕಗಳಿಗೆ ಅರ್ಥ ಹೇಳುವ ಸ್ವಪ್ನ ಜ್ಯೋತಿಷ್ಯವೂ ಬೆಳೆದಿದೆ ಎನ್ನುವುದನ್ನು ಇಲ್ಲಿ ನೆನೆಯಬಹುದು. ಒಂದು ನೆಲೆಯಲ್ಲಿ ಸಾಹಿತ್ಯ ನಿರ್ಮಿತಿಯಲ್ಲಿನ, ಸಂಕೇತ, ಪ್ರತೀಕ, ಪ್ರತಿಮೆ ಇತ್ಯಾದಿಗಳಿಗೂ ಇರುವಂಥ ಅರ್ಥ, ಸ್ವಪ್ನಗಳ ಸಂಕೇತ ಪ್ರತೀಕಾದಿಗಳಿಗೂ ಉಂಟು. ಈ ಅರ್ಥದಲ್ಲಿ ಸ್ವಪ್ನಸೃಷ್ಟಿಗೂ, ಕಲಾಸೃಷ್ಟಿಗೂ ಸಂಬಂಧವಿದೆ. ಯಾಕೆಂದರೆ ಅವೆರಡೂ ಮೂಲತಃ ಮನಸ್ಸಿನ ಸೃಷ್ಟಿಗಳು. ಆದರೆ, ಇವೆರಡಕ್ಕೂ ಮುಖ್ಯವಾದ ವ್ಯತ್ಯಾಸವಿರುವುದು, ಸ್ವಪ್ನಗಳು ಜಾಗೃದವಸ್ಥೆಗೆ ಮಿಥ್ಯೆಯಾಗಿ ಬಿಡುತ್ತವೆ. ಕಲಾಕೃತಿಗಳು ಎಷ್ಟೋ ವೇಳೆ ಕನಸಿನಂತೆ ತೋರಿದರೂ, ವಾಸ್ತವದ ನೆಲೆಯಲ್ಲಿ ಮಿಥ್ಯೆಯಾಗದೆ, ಬೇರೊಂದು ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ.

ಕವಿಯನ್ನು ಒಬ್ಬ ಕನಸುಗಾರ ಎಂದು ಹೇಳುವುದು ರೂಢಿಯಾಗಿದೆ. ಆದರೆ ಇಲ್ಲಿ ‘ಕನಸು’ ಎಂಬ ಮಾತನ್ನು, ನಿದ್ರೆಮಾಡುವಾಗ ಬೀಳುವ ‘ಕನಸು’ಗಳಿಂದ ಪ್ರತ್ಯೇಕಿಸಿಕೊಂಡೇ ಅರ್ಥ ಮಾಡಿಕೊಳ್ಳಬೇಕು. ಕವಿಯ ಕನಸು, ಆತ ನಿದ್ರೆ ಮಾಡುವಾಗ ಬಿದ್ದುದಲ್ಲ. ಆತ ಎಚ್ಚರವಾಗಿದ್ದಾಗಲೇ ಕಂಡದ್ದು. ಅದು ಅವನ ಪ್ರತಿಭೆ ಎಂಬ ಶಕ್ತಿ ವಿಶೇಷದಿಂದ ರೂಪುಗೊಂಡಿದ್ದು. ಕವಿಯೊಬ್ಬ ಕನಸುಗಾರ, ಎಂದಾಗ, ಕಾವ್ಯವು ಕವಿ ಕಂಡ ಕನಸು ಎಂದಾಗ, ಅದೊಂದು ವಾಸ್ತವದಲ್ಲಿ ಕೆಲಸಕ್ಕೆ ಬಾರದ್ದು, ಕೇವಲ ಮನೋಹರವೂ, ರಂಜಕವೂ, ತಾತ್ಕಾಲಿಕವೂ ಆದದ್ದು ಎಂದು ಅರ್ಥವಲ್ಲ. ಒಂದು ಜನ ಸಮೂಹದ ಪ್ರತಿನಿಧಿಯಾಗಿ, ಕಾವ್ಯವನ್ನು ಬರೆಯುವ ಕವಿ, ತನ್ನ ಜನ ಸಮಷ್ಟಿಯ ಸಮೂಹ ಮನಸ್ಸಿನ ಆಸೆ ಆಕಾಂಕ್ಷೆಗಳಿಗೆ, ಆಲೋಚನೆ ಅನುಭವಗಳಿಗೆ, ಆದರ್ಶಗಳಿಗೆ, ಒಂದು ಸ್ಪಷ್ಟ ಹಾಗೂ ಕಲಾತ್ಮಕವಾದ ಆಕಾರವನ್ನು ಕೊಡುತ್ತಾನೆ ಎಂದು ಅರ್ಥ. ಇದನ್ನೆ ಕುವೆಂಪು ಅವರು ತಮ್ಮದೊಂದು ಕವಿತೆಯಲ್ಲಿ ‘ನಮ್ಮ ಇಂದಿನ ಕನಸು, ನಿಮ್ಮ ನಾಳೆಯ ಮನಸು’ ಎನ್ನುತ್ತಾರೆ. ಆದರೆ ಕನಸುಗಳನ್ನೇ ಕವಿಗಳು ಸಾಹಿತ್ಯದಲ್ಲಿ ಒಂದು ವಸ್ತುವನ್ನಾಗಿ ತೆಗೆದುಕೊಂಡು, ಅದನ್ನೊಂದು ಕಲಾತಂತ್ರವನ್ನಾಗಿ ಮಾಡಿಕೊಂಡಿರುವರೆಂಬ ಸಂಗತಿ ಗಮನಾರ್ಹವಾದುದಾಗಿದೆ. ಕವಿಗೆ ಬದುಕಿನ ಯಾವೆಲ್ಲ ಅನುಭವಗಳೂ ವಸ್ತುವಾಗುವಂತೆ, ‘ಸ್ವಪ್ನ’ಗಳೂ ಆತನ ಕಾವ್ಯದ ಸಾಮಗ್ರಿಯಾಗಿ ಬಳಕೆಯಾಗಿದೆ. ಕವಿ ನಿರ್ಮಿತಿಯಲ್ಲಿ ಬಳಕೆಯಾಗಿರುವ ಸ್ವಪ್ನಗಳ ಸ್ವಾರಸ್ಯವನ್ನು ನಿದರ್ಶಗಳ ಮೂಲಕ ಪರಿಶೀಲಿಸಬಹುದು:

ಪುರಾಣ ಹಾಗೂ ಮಹಾಕಾವ್ಯಗಳಲ್ಲೆಲ್ಲಾ, ‘ಕನಸು’ಗಳು ಮುಖ್ಯವಾಗಿ ಅಂತರಂಗದ ಬಯಕೆಗಳಿಗೆ ಕನ್ನಡಿಯಾಗಿ, ಅಥವಾ ಮುಂದಾಗುವುದನ್ನು ಸೂಚಿಸುವ ಸಂಕೇತಗಳಾಗಿ, ಬಳಕೆಯಾಗಿರುವುದು ಸಾಮಾನ್ಯವಾದ ಸಂಗತಿಯಾಗಿದೆ. ಪುರಾಣ ಮಹಾಕಾವ್ಯಗಳ ನಾಯಕರಾದ ಮಹಾವ್ಯಕ್ತಿಗಳು, ಜನಿಸುವ ಮುನ್ನ, ಅವರ ತಾಯಂದಿರಿಗೆ ವಿಲಕ್ಷಣವಾದ ಶುಭ ಸ್ವಪ್ನಗಳು ಬೀಳುತ್ತವೆಂಬಂತೆ ಚಿತ್ರಿತವಾಗಿರುವುದು, ಒಂದು ಆಶಯವೋ, ಸಿದ್ಧ ತಂತ್ರವೋ ಆಗಿದೆ. ಬುದ್ಧ ಹುಟ್ಟುವ ಮುನ್ನ ಬಿಳಿಯ ಆನೆಯೊಂದು ತನ್ನ ಗರ್ಭವನ್ನು ಪ್ರವೇಶಿಸಿದಂತೆ, ತಾಯಿಯಾದ ಮಾಯಾದೇವಿಗೆ ಕನಸು ಬಿತ್ತೆಂಬುದು ತಿಳಿದ ಸಂಗತಿಯಾಗಿದೆ. ಜೈನ ಪುರಾಣಗಳಲ್ಲಿಯೂ, ತೀರ್ಥಂಕರನಾಗುವ ಜೀವವು ಹುಟ್ಟುವ ಮುನ್ನ, ಆ ‘ಜೀವ’ದ ತಾಯಂದಿರಿಗೆ ಷೋಡಶ ಶುಭ ಸ್ವಪ್ನಗಳು ಬೀಳುತ್ತವೆ. ಆನೆ, ವೃಷಭ, ಸಮುದ್ರ, ಚಂದ್ರಸೂರ್ಯ- ಇತ್ಯಾದಿಗಳು ಆ ಕನಸಿನಲ್ಲಿ ಕಾಣಿಸಿಕೊಂಡು ಮುಂದೆ ಹುಟ್ಟುವ ಆ ಮಹಾ ವ್ಯಕ್ತಿತ್ವದ ಮಹಿಮೆಗೆ ಸಂಕೇತಗಳಾಗುತ್ತವೆ. ಆದಿ ಕವಿ ಪಂಪನ ‘ವಿಕ್ರಮಾರ್ಜುನ ವಿಜಯದಲ್ಲಿ’ ಅರ್ಜುನನ ತಾಯಿಯಾಗಲಿದ್ದ ಕುಂತೀದೇವಿಗೆ ರಾತ್ರಿಯ ಕೊನೆಯ ಜಾವದಲ್ಲಿ ತಾನು ಸಪ್ತ ಸಮುದ್ರಗಳನ್ನು ಕುಡಿದಂತೆಯೂ, ಸಪ್ತಕುಲ ಪರ್ವತಗಳನ್ನು ಏರಿದಂತೆಯೂ, ಬಾಲಸೂರ್ಯನು ಬಂದು ಮಡಿಲು ತುಂಬಿದಂತೆಯೂ,  ತಾವರೆಯೆಲೆಯ ದೊನ್ನೆಯ ನೀರನ್ನೆತ್ತಿ ದಿಗ್ಗಜಗಳು ತನಗೆ ಅಭಿಷೇಕ ಮಾಡಿದಂತೆಯೂ, ಕನಸು ಬಿತ್ತೆಂದು ವರ್ಣಿತವಾಗಿದೆ (ಪಂ.ಭಾ.೧-೧೪೦) ಇದು ಗರ್ಭಿಣಿಯಾದ ಹೆಣ್ಣಿಗೆ ಬಿದ್ದ ಕನಸಿನ ವರ್ಣನೆ. ಬೆಳಗಿನ ಝಾವ ಬಿದ್ದ ಕನಸು ನಿಜವಾಗುತ್ತದೆಂಬ ಒಂದು ನಂಬಿಕೆಯನ್ನು ಇದು ಹೇಳುವುದರ ಜತೆಗೆ ಇಡೀ ಕನಸು ಸಂಪೂರ್ಣ ಸಂಕೇತ ರೂಪವಾಗಿದೆ ಎಂಬುದನ್ನು ಗಮನಿಸಬೇಕು. ಈ ಸಂಕೇತಾರ್ಥವನ್ನು, ಬೆಳಗ್ಗೆ ಋಷಿಗಳು ಹೀಗೆ ವಿವರಿಸಿದ್ದರೆಂದು ಪಂಪ ತಿಳಿಸುತ್ತಾನೆ: ‘ಕುಂತಿ ಸಪ್ತಸಮುದ್ರಗಳನ್ನು ಕುಡಿದಂತೆ ಕನಸು ಕಂಡಿದ್ದರಿಂದ, ಸಪ್ತಸಾಗರ ಪರಿವೃತವಾದ ಭೂ ಮಂಡಲಕ್ಕೆ ಒಡೆಯನಾಗುವಂಥವನನ್ನು, ಸಪ್ತಪರ್ವತಗಳ ನ್ನೇರಿದಂತೆ ಕನಸು ಕಂಡದ್ದರಿಂದ, ಕುಲಪರ್ವತಗಳಿಂದ ಸುತ್ತುವರಿದ ನೆಲವನ್ನಾಳುವವನನ್ನು, ಬಾಲಸೂರ್ಯ ಮಡಿಲು ತುಂಬಿದಂತೆ ಕಂಡದ್ದರಿಂದ, ಸೂರ್ಯನ ಹಾಗೆ ಉದಿತೋದಿತ ಪ್ರತಾಪವಂತನಾದವನನ್ನು, ತಾವರೆಯೆಲೆಯ ದೊನ್ನೆಯಿಂದ ದಿಗ್ಗಜಗಳು ಅಭಿಷೇಕ ಮಾಡಿದಂತೆ ಕಂಡದ್ದರಿಂದ, ಕಮಲದಂತೆ ಸುಮನೋಹರನಾದವನನ್ನು, ಕುಂತಿಯು ಮಗನನ್ನಾಗಿ ಪಡೆಯುತ್ತಾಳೆ’. ಇದು ಸ್ವಪ್ನ ಫಲ. ಸಾಮಾನ್ಯವಾಗಿ ಮಹಾಪುರುಷ ಜನನಕ್ಕೆ ಮುನ್ನ ಅವರ ತಾಯಂದಿರಿಗೆ ಬೀಳುವ ಸ್ವಪ್ನಗಳ ಸ್ವಾರಸ್ಯ ಇಂಥದೇ. ಆನೆ, ವೃಷಭ, ಸಿಂಹ ಇತ್ಯಾದಿಗಳು ತಾಯಂದಿರಿಗೆ ಕನಸಿನಲ್ಲಿ ಕಾಣಿಸುವುದು, ಮುಂದೆ ಹುಟ್ಟುವ ಮಗ ಶ್ರೇಷ್ಠ ವ್ಯಕ್ತಿಯೂ, ಮಹಾ ಪುರುಷನೂ ಆಗುತ್ತಾನೆ ಎಂಬುದರ ಸಂಕೇತ.

ರಮ್ಯ ಮಹಾಕಾವ್ಯಗಳಲ್ಲಿ, ಅಥವಾ ರಮ್ಯಕತೆಗಳಲ್ಲಿ ಬರುವ ಸ್ವಪ್ನಗಳ ಸ್ವಾರಸ್ಯ ಬೇರೆ ರೀತಿಯಾದುದು. ಇಲ್ಲಿನ ಪ್ರಣಯಿಗಳಿಗೆ, ವಿರಹಿಗಳಿಗೆ ಬೀಳುವ ಕನಸುಗಳು, ಮುಖ್ಯವಾಗಿ ಸಮಾಗಮಕ್ಕೆ ಸಂಬಂಧಪಟ್ಟದ್ದು. ಪ್ರೇಮೋತ್ಕಟತೆಗೆ ಸಿಕ್ಕಿಕೊಂಡ ನಲ್ಲ-ನಲ್ಲೆಯರಿಗೆ ಉಳಿದವರಿಗಿಂತ ಹೆಚ್ಚು ಕನಸುಗಳು ಬೀಳುತ್ತವೆಂದು ತೋರುತ್ತದೆ.  ಇದು ಸಹಜ ಕೂಡಾ. ಇರುಳು ಕನಸಿನಲ್ಲಿ ಕಂಡ ಚೆಲುವೆಯನ್ನು, ಹಗಲ ಕನಸಿನ ಲೋಕದಲ್ಲಿ ಹುಡುಕಿಕೊಂಡು ಹೋಗುವುದು, ಕಡೆಗೆ ಅತ್ಯಂತ ಪ್ರಯಾಸದ ಹಾದಿಯಲ್ಲಿ, ತನ್ನ ಕನಸಿನ ನಲ್ಲೆಯನ್ನು ಭೆಟ್ಟಿಯಾಗುವುದು- ಇಂಥ ಕತೆಗಳ ತಂತ್ರವಾಗಿದೆ. ಕನ್ನಡದಲ್ಲಿ ನೇಮಿಚಂದ್ರನ ‘ಲೀಲಾವತಿ’ ಮತ್ತು ದೇವ ಕವಿಯ ‘ಕುಸುಮಾವಳಿ’ ಕಾವ್ಯದ ವಸ್ತು ಈ ರೀತಿಯದು. ಈ ಬಗೆಯ ಆಶಯಗಳು ಜನಪದ ಕತೆಗಳಲ್ಲಿಯೂ ಸಮೃದ್ಧವಾಗಿವೆ. ವಾಸ್ತವದಲ್ಲಿ ಕಂಡದ್ದನ್ನು, ಕನಸಿನಲ್ಲಿ ಕಾಣುವುದು ತೀರಾ ಸಹಜವಾದದ್ದು : ಆದರೆ ಮೊದಲು ಕನಸಿನಲ್ಲಿ ಕಂಡು ಅನಂತರ ಅಂಥ ವ್ಯಕ್ತಿಯನ್ನು, ನೆನಸಿನಲ್ಲಿ ಹುಡುಕಿಕೊಂಡು ಹೋಗುವುದು ವಿಲಕ್ಷಣವಾದ, ಆದರೆ ಸ್ವಾರಸ್ಯವಾದ ಸಂಗತಿಯಾಗಿದೆ.

ಸ್ವಪ್ನಗಳನ್ನು, ಕಥನತಂತ್ರದ ಒಂದು ಅಂಗವಾಗಿ ಬಳಸಿಕೊಳ್ಳುವುದು ಮಹಾ ಕಾವ್ಯಗಳ ಒಂದು ಲಕ್ಷಣವಾಗಿದೆ : ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ದೇವತೆಗಳು ಸ್ವಪ್ನಗಳ ಮೂಲಕ, ತಮ್ಮ ಪಕ್ಷಪಾತದ ವೀರರುಗಳಿಗೆ ಸೂಚನೆಯನ್ನು ಕೊಡುವಂತೆ ಚಿತ್ರಿತವಾಗಿರುವ ಪ್ರಸಂಗಗಳಿವೆ. ಹೋಮರ್ ಕವಿಯ ಇಲಿಯಡ್‌ನಲ್ಲಿ ದೇವಲೋಕದ ಪ್ರಭುವಾದ ಸ್ಯೂಸ್‌ದೇವನು ಒಂದು ವಿಪತ್ಕಾರಕವಾದ ಸ್ವಪ್ನವನ್ನು ಕರೆದು ತನ್ನ ಸಂದೇಶವನ್ನು ಆಗಮಮ್‌ನನ್ನನ ಕಿವಿಯಲ್ಲಿ ಉಸುರುವಂತೆ ಆಜ್ಞಾಪಿಸುತ್ತಾನೆ. ಆ ಕನಸು ಧರೆಗಿಳಿದು ಬಂದು, ಆಗಮಮ್‌ನನ್ ಕಿವಿಯಲ್ಲಿ ಜ್ಯೂಸ್ ದೇವನ ಸಂದೇಶವನ್ನು ಮತ್ತು ಅನೇಕ ಬಗೆಯ ಆಸೆ ಆಮಿಷಗಳನ್ನು ತುಂಬುತ್ತದೆ. ಬೆಳಗಾದಾಗ ಆಗಮಮ್‌ನನ್, ತನ್ನ ನಾಯಕರ ಸಭೆ ಸೇರಿಸಿ, ಕನಸಿನ ಸಂಗತಿಯನ್ನು ತಿಳಿಸಿ ಯುದ್ಧದ ಬಗ್ಗೆ ನಿರ್ಣಯವನ್ನು ಕೈಕೊಳ್ಳುತ್ತಾನೆ. ಮಿಲ್ಟನ್‌ನ ಪ್ಯಾರಡೈಸ್‌ಲಾಸ್ಟ್ ಮಹಾಕಾವ್ಯದಲ್ಲಿ, ಸೇಟನ್ನನು ಸುಂದರವಾದ ದೇವತೆಯಂತೆ ಈವ್ ಳ ಕನಸಿನಲ್ಲಿ ಕಾಣಿಸಿಕೊಂಡು, ಜ್ಞಾನವೃಕ್ಷದ ನಿಷಿದ್ಧ ಫಲವನ್ನು, ನೀವು ತಿಂದು ಯಾಕೆ ದೇವತೆಗಳಂತೆ ಆಗಬಾರದು ಎಂಬ ಪ್ರಲೋಭನೆಯನ್ನು ಬಿತ್ತುತ್ತಾನೆ. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಮಂಥರೆಗೆ ಬೀಳುವ ಕನಸೂ ಇಂಥದೇ. ಶ್ರೀರಾಮನಿಗೆ ಯುವರಾಜ್ಯಾಭಿಷೇಕವನ್ನು ಮಾಡಬೇಕೆಂದು, ದಶರಥನು ನಿರ್ಣಯವನ್ನು ಕೈಕೊಂಡ ದಿನ, ಕೈಕೆ- ಭರತರಿಗಾಗಿಯೇ ಬದುಕಿದ್ದ ‘ಮಮತೆಯ ಸುಳಿ ಮಂಥರೆ’ಗೆ ಆ ಇರುಳು ಬೀಳುವ ಕನಸು ಹೀಗಿದೆ:

‘ಮುದುಕಿಯಾದಾ ನಕೈಕೆ ಭರತನಂ ಕೈವಿಡಿದು
ಮರುಧರೆಯನೆಲೆಯುತಿರ್ದಳ್ ವಿಧವೆಯೋಲ್. ಕುಬ್ಜೆ
ಕರೆದೊಡಂ ಕಿವಿಗೊಡದೆ, ಮಗನೊಡನೆ ಕಿರಿರಾಣಿ
ಮುಂದು ಮುಂದೆಯ್ದುತಿರೆ, ಬೈಗುಗಳ್ತಲೆಯಿಳಿದು
ನುಂಗಿದತ್ತಿರ್ವರಂ. ತೊಳ ತೊಳಲಿ ನೀರಡಸಿ
ದೆಸೆದೆಸೆಗೆ ಬಾಯ್ಬಿಟ್ಟು ನಿಡುವೊರಲಿ ಗೂನಿ ತಾಂ
ಕೆಡೆದಳಾ ಮರಳುಗಾವಲಿಯಿಳೆಗೆ, ರಾಮನಂ
ಕರೆಕರೆದು ನಿಡುಸರದೊಳಾಕ್ರಂದಿಸುತೆ ಕೂಗಿ.
ಕ್ರೂರದುಃಸ್ವಪ್ನ ಜೇಡನ ಪೀಡನೆಗೆ ಸಿಲ್ಕಿ ನಡು
ನಡುಗುತೊದ್ದಾಡಿತ್ತು ಮಂಥರೆಯೊಡಲ್
ಬಲೆಗೆ ಬಿಳ್ದೊಂದು ಪುಳುವಂತೆ. ಹಾಸಗೆ ಕೆದರೆ
ಕುಳ್ತಳ್ ಧಿಗಿಲ್ಲೆಂದು. ಬಡಿದುದು ಭಯಗ್ರಹಂ
ಮಂಥರೆಗೆ ಕೇಡದೇನಂ ಸ್ವಪ್ನ ಮಾಡಿದುದೊ
ತನಗೆನುತ ಚಿಂತಿಸುತ್ತಿರೆ, ಕಿವಿಗೆ ವಂದುದಯ್
ನಲಿವ ಮಂಗಳವಾದ್ಯ ಸಂಭ್ರಮಂ[2]

ಈ ಕನಸಿನ ಸಾಂಕೇತಿಕತೆ, ರಾಮನ ಪಟ್ಟಾಭಿಷೇಕದಿಂದ, ಕೈಕೆ ಭರತರಿಗೆ ಎಂತಹ ದುಃಸ್ಥಿತಿ ಒದುಗುವುದೆಂದು, ಮಂಥರೆಯ ಮನಸ್ಸು ಕಲ್ಪಿಸಿಕೊಂಡಿತೋ ಅದಕ್ಕೆ ತಕ್ಕುದಾಗಿದೆ. ಈಗ ನಿರೂಪಿಸಿದ ಮೂರು ಕನಸುಗಳೂ, ಈ ಮಹಾಕಾವ್ಯಗಳ ಸಂದರ್ಭದಲ್ಲಿ, ಕತೆಯ ಕ್ರಿಯೆ ಮುಂದುವರಿಯುವುದಕ್ಕೆ ಅತ್ಯಂತ ಅಗತ್ಯವಾದ ತಂತ್ರಗಳಾಗಿವೆ ಎಂಬುದನ್ನು ಗಮನಿಸಬೇಕು.

ಭಕ್ತಿ ಹಾಗೂ ಅನುಭಾವ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಕನಸುಗಳು, ಮೂಲತಃ ಆಯಾ ಭಕ್ತನ ಅಥವಾ ಅನುಭಾವಿಯ ಮನಸ್ಸಿನೊಳಗಣ ದೈವೀಪರವಾದ ಹಂಬಲಗಳನ್ನು, ಆಶಯಗಳನ್ನು, ಕನಸುಗಳನ್ನು ಪ್ರತಿನಿಧಿಸುತ್ತವೆ. ಹರಿಹರನ ಬಸವರಾಜದೇವರ ರಗಳೆಯಲ್ಲಿ ಕಪ್ಪಡಿ ಸಂಗಮದಲ್ಲಿ, ಪೂಜಾ ಸುಖದಲ್ಲಿ ಮಗ್ನನಾಗಿದ್ದ ಬಸವಣ್ಣನವರಿಗೆ ಸಾಕ್ಷಾತ್ ಶಿವನು ಕನಸಿನಲ್ಲಿ ಕಾಣಿಸಿಕೊಂಡು:

‘ಎಲೆ ಮಗನೆ ಬಸವ, ಬಸವಣ್ಣ, ಬಸವಿದೇವ ನಿನ್ನಂ ಮಹೀತಳದೊಳು ಮೆರೆದಪೆವು… ನೀಂ ಬಿಜ್ಜಳ ರಾಯನಿಪ್ಪ ಮಂಗಳವಾಡಕ್ಕೆ ಪೋಗು”[3] ಎಂದು ನಿರ್ದೇಶಿಸುತ್ತಾನೆ. ಆದರೆ ಬಸವಣ್ಣನವರು ಕಪ್ಪಡಿ ಸಂಗಮದ ಶಿವನ ಸಾನ್ನಿಧ್ಯವನ್ನು ಬಿಟ್ಟು ಹೋಗಲಾರೆನೆಂದು ಪೂಜೆಯ ವೇಳೆ ಮತ್ತೆ ಶಿವನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಆದರೆ ಮತ್ತೆ ಅಂದಿನ ರಾತ್ರಿ ಶಿವನು ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು-

‘ ಎಲೆ ಮಗನೆ ಎಲೆ ಕಂದ ಎಲೆ ಬಸವ ನಿನ್ನನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ? ಬೇಡಯ್ಯ, ಬೇಡೆನ್ನರಸ, ಬೇಡೆನ್ನ ಭಕ್ತ ನಿಧಿಯೆ, ನಿನ್ನೊಡನೆ ಬಿಡದೆ ಬಪ್ಪೆಂ, ನಾಳೆ ಮಧ್ಯಾಹ್ನದೊಳು ಶುದ್ಧಾಂಗನಾಗಿ ಬಂದು ನಂದೀಕೇಶ್ವರನ ಮುಂದೆನ್ನ ನೆನೆವುತ್ತಂ ಕುಳ್ಳಿರೆ, ವೃಷಭನ ಮುಖಾಂತರದಿಂ ನಾವೆ ಬಂದಪೆವು. ಆತಂ ನಿನಗೆ ಸದ್ಗುರು, ಅಲ್ಲಿಂಬಳಿಕ್ಕೆ ಎಮ್ಮನರ್ಚಿಸುತ್ತ ಭಕ್ತರ ಬಂಧುವಾಗಿ ಶರಣರ ಪರುಷದ ಕಣಿಯಾಗಿ ನಿತ್ಯಸುಖಿಯಾಗಿ ಪರಸಮಯದ ಗರ್ವಮಂ ನಿಲಿಸಿ ಭಕ್ತರಂ ಗೆಲಿಸಿ ಪ್ರತ್ಯಕ್ಷಂಗಳಂ ತೋರಿ ಲೌಕಿಕ ಧರ್ಮವಂ ಮೀರಿ ಕಡುನಿಷ್ಠೆಯಂ ಹೇರಿ ಪರಮ ಸುಖದಿಂದಿರ್ಪುದು’.[4]

ಎಂದು ಆದೇಶಿಸುತ್ತಾನೆ. ಒಂದು ದಿನ ಕನಸು, ಮತ್ತೊಂದು ದಿನದ ಕನಸಿನಲ್ಲಿ ಮುಂದುವರಿದಂತಿರುವ ಈ ಸ್ವಪ್ನದ ಸ್ವಾರಸ್ಯವು, ಬಸವಣ್ಣನವರ ಭಕ್ತ ಜೀವನದ ಅದ್ವೈತ ಸ್ಥಿತಿಯನ್ನೂ ಮತ್ತು ಬಸವಣ್ಣನ ಲೋಕ ಜೀವನವು ಶಿವನ ನಿರ್ದೇಶನ ಹಾಗೂ ಮಾರ್ಗದರ್ಶನದಿಂದ ರೂಪುಗೊಂಡಿತೆಂಬುದನ್ನೂ ಸೂಚಿಸುತ್ತದೆ.

ಅನುಭಾವಿಯಾದ ಅಕ್ಕಮಹಾದೇವಿ ಶಿವನನ್ನು ತನ್ನ ಗಂಡನನ್ನಾಗಿ ಸ್ವೀಕರಿಸಿದವಳು. ನಿದ್ರೆ ಎಚ್ಚರಗಳಲ್ಲಿ ಆಕೆಯ ಮನಸ್ಸನ್ನು ವ್ಯಾಪಿಸಿಕೊಂಡ ಶಿವನನ್ನು ಕುರಿತು ಅಕ್ಕ ತಾನು ಕಂಡ ಶಿವನ ಸ್ವಪ್ನ ದರ್ಶನವನ್ನು ತನ್ನ ಕೆಳದಿಯೊಬ್ಬಳಿಗೆ, ಎಚ್ಚರದಲ್ಲಿ ಹೀಗೆ ನಿರೂಪಿಸುತ್ತಾಳೆ.

ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದು ಕನಸಕಂಡೆ
ಅಕ್ಕಿಯಡಕೆ ಓಲೆ ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಬಂದುದ ಕಂಡೆ
ಮಿಕ್ಕು ವಿರಿ ಹೋಹನ ಬೆಂಬತ್ತಿ ಕೈಪಿಡಿದೆನು
ಚೆನ್ನಮಲ್ಲಿಕಾರ್ಜುನಯ್ಯನ ಕಂಡು ಕಣ್ತೆರೆದೆನು.[5]

ಈ ವಚನ ಅಕ್ಕಮಹಾದೇವಿಯ ಭಕ್ತಿಯ ಉತ್ಕಟತೆಗೆ ಒಂದು ಸಾಕ್ಷಿಯಾಗಿದೆ. ಇಂಥ ಇನ್ನೂ ಒಂದೆರಡು ವಚನಗಳಲ್ಲಿ ಆಕೆ ಸ್ವಪ್ನಾನುಭವದಲ್ಲಿ ತನ್ನ ದೈವಪತಿಯನ್ನು ಕೈಹಿಡಿದು ಕೂಡಿದ ವರ್ಣನೆಗಳಿವೆ. ಇದರಂತೆಯೆ ಹರಿದಾಸರ ಹಲವು ಕೀರ್ತನೆಗಳಲ್ಲಿಯೂ ಭಕ್ತ ಹೃದಯದ ಅಭೀಪ್ಸೆ ‘ಸ್ವಪ್ನ’ ಸಂಕೇತಗಳಲ್ಲಿ ಅಭಿವ್ಯಕ್ತವಾಗಿದೆ.

ಕಂಡೆನಾ ಕನಸಿನಲಿ ಗೋವಿಂದನ
ಕಂಡೆನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ
ಉಟ್ಟ ಪೀತಾಂಬರ ಉಡಿಯ ಕಾಂಚೀಧಾಮ
ತೊಟ್ಟ ಮುತ್ತಿನಹಾರ ಕೌಸ್ತುಭವು.[6]

ಭಕ್ತಿ ಸಾಹಿತ್ಯದ ಈ ಬಗೆಯ ಕನಸುಗಳು ಭಕ್ತ ಹಾಗೂ ಭಗವಂತ ಇವರಿಗಿರುವ ಭಾವಮಯ ಸಂಬಂಧಗಳಿಗೆ ಸಂಕೇತವಾಗಿದೆ.

ಕನಸುಗಳು ಮುಂದೆ ಒದಗುವ ಘಟನೆಗಳಿಗೆ ಕನ್ನಡಿ ಹಿಡಿಯುತ್ತವೆ ಎಂಬ ಒಂದು ನಂಬಿಕೆಯೂ ಪ್ರಚಲಿತವಾಗಿದೆ. ಈ ನಂಬಿಕೆಯನ್ನು, ಕವಿಗಳು, ‘ಸ್ವಪ್ನತಂತ್ರ’ವನ್ನಾಗಿ ಬಳಸಿಕೊಂಡಿರುವುದನ್ನು ಗಮನಿಸಬಹುದು. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ, ವಿಶ್ವಾಮಿತ್ರನು ಸೃಜಿಸಿದ ಮಾಯಾವರಾಹದ ಬೆನ್ನಟ್ಟಿ, ಬೇಟೆಯಾಯಾಸದಿಂದ ಬಳಲಿದ ಹರಿಶ್ಚಂದ್ರನು, ತನ್ನ ಗುರುವಾದ ವಶಿಷ್ಠರ ಮಾತನ್ನೂ ವಿರಿ ವಿಶ್ವಾಮಿತ್ರನ ಆಶ್ರಮ ಪ್ರದೇಶದ ವನದಲ್ಲಿ ವಿಶ್ರಾಂತಿಗಾಗಿ ಮಲಗಿರುವಾಗ ಅವನಿಗೆ ಬೀಳುವ ಕನಸು ಹೀಗಿದೆ. ಅದನ್ನು ಕನಸಿನಿಂದ ಎಚ್ಚೆತ್ತ ಹರಿಶ್ಚಂದ್ರನು ತನ್ನ ಸತಿಯಾದ ಚಂದ್ರಮತಿಗೆ ನಿರೂಪಿಸುತ್ತಾನೆ:

ಘುಡುಘುಡಿಸುತೊಬ್ಬ ಮುನಿ ಬಂದು ನಾನೋಲಗಂ
ಗೊಡುವ ಮಣಿ ಮಂಟಪದ ಕಂಭವೆಲ್ಲವನು ತಡೆ
ಗಡಿದು ಹೊಂಗಳಸಂಗಳಂ ಮಾಣದೊಡಬಡಿದ ನೆರೆದ
ಸಭೆಯೊಳಗೆನ್ನನು ಕೆಡಹಿ
ಸಿಂಹಾಸನವನೊಯ್ವಾಗಳೆನ್ನೆದೆಯ ನಡರ್ದೊಂದು
ಕಾಗೆ ಕರೆದುದು ಬಳಿಕ್ಕಾಂ ಗಿರಿಯ
ನಡರ್ದು ಶಿಖರದೊಳೆಸೆವ ಮಣಿಗೃಹಂ ಬೊಕ್ಕೆನಿ
ದರಂತಸ್ಥವೇನೆಂದನು[7]

ತೀರಾ ಸ್ಪಷ್ಟವೆಂಬಂತಿರುವ ಈ ಸ್ವಪ್ನ ಪ್ರತೀಕ, ಹರಿಶ್ಚಂದ್ರನ ಸತ್ಯಸಾಧನೆಯ ಹಾದಿಯಲ್ಲಿ ಮುಂದೊದಗಲಿರುವ ಕೇಡುಗಳನ್ನೂ, ನಷ್ಟಗಳನ್ನೂ, ಮತ್ತು ಕಡೆಯಲ್ಲಿ ಇವುಗಳ ಮೂಲಕವೆ ಹರಿಶ್ಚಂದ್ರನು ಪಡೆಯುವ ಅಭ್ಯುದಯವನ್ನೂ ನಿರೂಪಿಸುತ್ತದೆ.

ಕುವೆಂಪು ಅವರ ‘ರಾಮಾಯಣ ದರ್ಶನಂ’ದಲ್ಲಿ ‘ದಶಾನನ ಸ್ವಪ್ನ ಸಿದ್ಧಿ,’ಎಂಬ (ಶ್ರೀ ಸಂಪುಟದ ಏಳನೆಯ ಸಂಚಿಕೆ) ಭಾಗದಲ್ಲಿ ರಾವಣನಿಗೆ ಬಿದ್ದ ಅದ್ಭುತವಾದ ಕನಸಿನ ವಿಸ್ತೃತವಾದ ಪ್ರತಿಮೆ, ಕನ್ನಡ ಸಾಹಿತ್ಯದಲ್ಲಿಯೆ ಒಂದು ಅಭೂತಪೂರ್ವವಾದ ಚಿತ್ರವಾಗಿದೆ. ರಾವಣನ ಒಳ ಮನಸ್ಸಿನಲ್ಲಿ ಸೀತೆಯ ವಿಚಾರದಲ್ಲಿ ಮೊದಲಿಗೆ ಇದ್ದ ‘ಕಾಮ’ ಹೇಗೆ ಕ್ರಮಕ್ರಮೇಣ ಪರಿವರ್ತಿತವಾಗಿ, ಉದಾತ್ತೀಕೃತವಾಗಿ, ಜನ್ಮಜನ್ಮಾಂತರದ ಹಾದಿಯಲ್ಲಿ ಸಾತ್ವಿಕದ ಭಾವ ಶುದ್ಧಿಯನ್ನು ಪಡೆಯುವುದರ ಮೂಲಕ ಪೂರ್ಣತೆಯನ್ನು ಸಾಧಿಸಿಕೊಂಡ ಸಂಗತಿ, ಈ ಅದ್ಭುತವಾದ ಕನಸಿನ ಪ್ರತಿಮೆಯಲ್ಲಿ ಚಿತ್ರಿತವಾಗಿದೆ. ಶ್ರೀರಾಮಾಯಣ ದರ್ಶನದಲ್ಲಿ ಆರು ಸ್ವಪ್ನ ಪ್ರಸಂಗಗಳು ಇವೆ. ಅವುಗಳಲ್ಲಿ ‘ದಶಾನನ ಸ್ವಪ್ನಸಿದ್ಧಿ’ ಸುದೀರ್ಘವಾದುದು. ಜಾನಪದ ಗೀತೆಯಾದ ‘ಕೆರೆಗೆ ಹಾರ’ ಎಂಬ ವಿಶಿಷ್ಟವಾದ ಲಾವಣಿಯೊಂದರಲ್ಲಿ, ಕನಸು ವ್ಯಕ್ತಿಯೊಬ್ಬನಿಗೆ, ಮುಂದೆ ಆಗುವುದರ ಅಲ್ಲ, ಈಗಾಗಲೇ ಆದದ್ದರ, ಆದರೆ ತನಗೆ ಪ್ರಜ್ಞಾಪೂರ್ವಕವಾಗಿ ತಿಳಿಯದಿದ್ದ, ದುರ್ಘಟನೆಗೆ ಸಂಕೇತವಾಗಿ ತೋರಿದ ಚಿತ್ರವೊಂದಿದೆ. ತನ್ನ ಮುದ್ದಿನ ಮಡದಿಯಾದ ಭಾಗೀರಥಿಯನ್ನು ಕಲ್ಲನಕೇರಿಯಲ್ಲಿ ‘ಕೆರೆಗೆ ಹಾರ’ವಾಗಿ ತನ್ನ ಮಾವ ಬಲಿಕೊಡುತ್ತಾನೆ. ದೂರದ ದಂಡಿನಲ್ಲಿದ್ದ ಗಂಡ ಮಹಾದೇವರಾಯನಿಗೆ, ಅದೇ ಸಮಯದಲ್ಲಿ ಕನಸೊಂದು ಬೀಳುತ್ತದೆ:

ಗಂಡ ಮಹದೇವರಾಯ ದಂಡಿನೊಳಗೈದಾನು
ದಂಡಿನೊಳಗೈದಾನು ಕಂಡಾನು ಕೆಟ್ಟಕನಸ:
ಸೆಲ್ಯ ಸುಟ್ಟಂಗಾತು, ಕೋಲು ಮುರಿದಂಗಾತು
ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗಾತು.[8]

ಮೈಮೇಲಿನ ಬಟ್ಟೆ ಸುಟ್ಟ ಹಾಗಾಯಿತು : ಹಿಡಿದ ಕೋಲು ಮುರಿದ ಹಾಗಾಯಿತು; ಕಟ್ಟಿಸಿದ ಭಾರಿ ಮಹಲೇ ತಟ್ಟನೆ ಬಿದ್ದ ಹಾಗಾಯಿತು. ಕೂಡಲೆ ಕನಸಿನಿಂದ ಎಚ್ಚೆತ್ತ ಮಹಾದೇವರಾಯ, ಅವಸರದಿಂದ ಊರಿಗೆ ಧಾವಿಸಿದನೆಂದು ಈ ಲಾವಣಿ ಹೇಳುತ್ತದೆ. ಇಲ್ಲೂ ‘ಸಂಕೇತ’ಗಳ  ಮೂಲಕ ನಡೆದ ದುರ್ಘಟನೆಯನ್ನು ಕನಸು ಕಟ್ಟಿಕೊಟ್ಟಿದೆ.

ಹಿಂದಿನ ಕವಿಗಳ, ಮಹಾಕಾವ್ಯ ರೀತಿಯ ಬರವಣಿಗೆಗಳಲ್ಲಿ ಮಾತ್ರವಲ್ಲ, ಆಧುನಿಕ ಭಾವಗೀತೆಗಳಲ್ಲಿಯೂ, ಕನಸುಗಳನ್ನು ಅಭಿವ್ಯಕ್ತಿಯ ತಂತ್ರಗಳನ್ನಾಗಿ ಬಳಸಿಕೊಂಡ ನಿದರ್ಶನಗಳಿವೆ. ಶ್ರೀ ಕೆ.ಎಸ್.ನ ಅವರ ‘ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚಂದ ನಿನಗಾವುದೆಂದು’ ಎಂದು ಮೊದಲಾಗುವ ನಲ್ಲ-ನಲ್ಲೆಯರ ಸಂವಾದ ಕನಸಿನ ಚೌಕಟ್ಟಿನಲ್ಲಿಯೆ ನಡೆಯುವಂಥದು. ಬೇಂದ್ರೆಯವರ, ‘ಕನಸಿನೊಳಗೊಂದು ಕನಸು’ ಇದಕ್ಕೆ ಒಳ್ಳೆಯ ಉದಾಹರಣೆ, ಮೂವತ್ತು ವರ್ಷಗಳಿಗೂ ಹಿಂದಿನ ಈ ಕವಿತೆ,  ಅಂದಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಗತಿಯನ್ನು, ಕನಸಿನ ತಂತ್ರದಲ್ಲಿ ನಿರೂಪಿಸುತ್ತದೆ. ಕವಿತೆಯ ಉದ್ದಕ್ಕೂ, ಕವಿಗೂ, ಕನ್ನಡ ತಾಯಿಗೂ ನಡೆಯುವ ಸಂಭಾಷಣೆಯನ್ನು ಹಿಡಿದಿರಿಸಿದೆ :

‘ಯಾರು ನಿಂದವರಲ್ಲಿ ತಾಯೆ; ಎಂದೆ’
‘ಯಾರು ಕೇಳುವರೆನಗೆ ಯಾಕೆ ತಂದೆ?
ಬೇಸರ ದನಿಯೇಕೆ ಹೆಸರ ಹೇಳಯ್ಯ’

ಹೀಗೆ ಶುರುವಾದ ಸಂವಾದ ತುದಿಗೆ

‘ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?’

ಎಂದು ಕೇಳಿದ ಕವಿಗೆ ಆಕೆ ಹೇಳುತ್ತಾಳೆ:

‘ಗಂಡುಸಾದರೆ ನಿನ್ನ ಬಲಿಗೊಡುವೆಯೇನು’
‘ಮನವು ನಡುಗಿತು ತನುವು ನವಿರಿಗೊಳಗಾಯ್ತು;
ನೆನವು ನುಗ್ಗಿತು- ಹೊರಗೆ ಕಂಡೆ-ಬೆಳಗಾಯ್ತು.’[9]

ಹೀಗೆ ಕವಿತೆ ಮುಗಿಯುತ್ತದೆ. ಕನ್ನಡ ನಾಡಿನ ದುಃಸ್ಥಿತಿ; ಅದರ ಜನದ ನಿರ್ವೀರ‍್ಯತೆ ಮತ್ತು ಕನ್ನಡವನ್ನುಳಿಸಲು ಬೇಕಾದ ಬಲಿದಾನ ಇತ್ಯಾದಿಗಳನ್ನು ‘ಸ್ವಪ್ನ ತಂತ್ರ’ದಲ್ಲಿ ನಿರೂಪಿಸುವ ಈ ಕವಿತೆ ಒಂದು ಐತಿಹಾಸಿಕ ದಾಖಲೆಯಾಗಿದೆ. ಇದೇ ಬಗೆಯ ಸ್ವಪ್ನತಂತ್ರದಲ್ಲಿ ರಚಿತವಾದ ಕುವೆಂಪು ಅವರ ಎರಡು ಕವಿತೆಗಳು ತೀರಾ ಗಮನಿಸತಕ್ಕವುಗಳಾಗಿವೆ. ಒಂದು ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಎಂಬ ವಿಡಂಬನ ಕವಿತೆ. ಮತ್ತೊಂದು ಕಲ್ಕಿ ಎಂಬ ಕವಿತೆ. ಮೊದಲನೆಯದು, ರಷ್ಯಾದ ಸಮತಾವಾದವನ್ನು ಕುರಿತು, ವ್ಯಂಗ್ಯ-ವಿನೋದಗಳಿಂದ ನಿರೂಪಿತವಾದ ಕವಿತೆ. ದೂರದ ರಷ್ಯಾಕ್ಕೆ ಕನಸಿನಲ್ಲಿ ಹೋಗಿ ಕವಿ ಕಂಡದ್ದೆಂಬಂತಹ ಅನುಭವವನ್ನು ಕುರಿತದ್ದು. ಇನ್ನು ಕಲ್ಕಿ ಪದ್ಯವಂತೂ, ಅತ್ಯಂತ ಶಕ್ತವಾದದ್ದು

ನಿದ್ದೆಯಲೋಕದಿ ಕನಸಿನ ಬೀದಿ
ತಿರುಗಿದೆ, ತೊಳಲಿದೆ ತಪ್ಪಿತು ಹಾದಿ[10]

ಎಂದು ಆರಂಭವಾಗುವ ಈ ಕವಿತೆ, ಕ್ರಮಕ್ರಮವಾಗಿ ಈ ದೇಶದ ಸಾಮಾಜಿಕ ಅಸಮತೆಯ ಪರಿಣಾಮವಾದ ದಾರಿದ್ರ್ಯ- ಹಾಗೂ ಶ್ರೀಮಂತಿಕೆಗಳನ್ನು ಮುಖಾಮುಖಿಯಾಗಿ ಚಿತ್ರಿಸುತ್ತ, ಬಡವರ ಜಠರಾಗ್ನಿಯ ಬೆಂಕಿ ಹೇಗೆ ಸಮಾಜವನ್ನೇ ಕಬಳಿಸುತ್ತದೆ ಎಂಬುದನ್ನೂ, ಕಡೆಗೆ ಈ ಕ್ರಾಂತಿಯ ಪ್ರತಿಮೂರ್ತಿಯಾಗಿ ಕಲ್ಕಿಯು, ಎಲುಬಿನ ಕುದುರೆಯ ಮೇಲೆ, ಕೂತು ರಕ್ತದ ಹೊಳೆಯಲಿ ಬರುವನೆಂಬುದನ್ನೂ ವರ್ಣಿಸುತ್ತಾರೆ. ಕಡೆಗೆ,

‘ಕಲ್ಕಿ, ಕಲ್ಕಿ, ಎನ್ನುತ ಚೀರಿ
ಕನಸೊಡೆದೆದ್ದೆ,
ಇನ್ನೆಲ್ಲಿಯ ನಿದ್ದೆ?[11]

ಎಂದು ಮುಕ್ತಾಯವಾಗುವ ಈ ಕವಿತೆ, ಈ ದೇಶದ ದಾರಿದ್ರ್ಯ-ದುಃಖ,  ಅಸಮಾನತೆಗಳನ್ನು ಕಂಡ ಮೇಲೆ, ಇನ್ನು ಯಾರೂ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವೇ ಇಲ್ಲ ಎಂಬ ಅರ್ಥದಲ್ಲಿ ನಿಲ್ಲುವ ರೀತಿ ಅಪೂರ್ವವಾಗಿದೆ.

ಈ ಬಗೆಯ ಕವಿತೆಗಳನ್ನು, ಕವಿ ಮೊದಲು ಕನಸಿನಲ್ಲಿಯೆ ಕಂಡು ಅನಂತರ ಪದ್ಯ ರೂಪದಲ್ಲಿ ಬರೆದರೆಂದೇ ಅರ್ಥ ಮಾಡಬೇಕಾಗಿಲ್ಲ. ಎಷ್ಟೋ ವೇಳೆ ‘ಸ್ವಪ್ನ’ ಎಂಬುದು ಅಭಿವ್ಯಕ್ತಿಯ ತಂತ್ರವಾಗಿರಬಹುದು. ಬಹುಶಃ ಈ ಪದ್ಯಗಳ ವಿಚಾರದಲ್ಲೂ ಈ ಮಾತು ನಿಜವಿರಬಹುದು.

ವಾಸ್ತವವಾಗಿ, ತಮಗೆ ಬಿದ್ದ ಕನಸಿನ ಅನುಭವವನ್ನು, ಎಚ್ಚರವಾದ ನಂತರ ಪದ್ಯ ರೂಪದಲ್ಲಿ ಹಿಡಿದಿರಿಸಿರುವ ಕವಿಯ ಪ್ರಯತ್ನಗಳು ಇರುವಂತೆಯೇ, ಕನಸಿನ ನೆಲೆಯಲ್ಲಿಯೇ ರಚಿತವಾದ ಪದ್ಯಗಳು ಅಥವಾ ಪದ್ಯದ ಪಂಕ್ತಿಗಳು, ಅನಂತರ ಎಚ್ಚರದ ನೆಲೆಯಲ್ಲಿ ದಾಖಲೆಯಾದ ಅಥವಾ ಕವನ ರಚನೆ ಮುಂದುವರಿದು ಪೂರ್ಣವಾದ ನಿದರ್ಶನಗಳೂ ಉಂಟು. ಮೊದಲಿನದಕ್ಕೆ ನಿದರ್ಶನವಾಗಿ ‘ಗಂಗಾವತರಣ’ ಸಂಗ್ರಹದಲ್ಲಿರುವ ‘ಕನಸಿನ ಕತೆ’ಯನ್ನೇ ನೋಡಬಹುದು. ತಮಗೆ ಬಿದ್ದ ಕನಸೊಂದನ್ನು ಮಗಳಿಗೆ ನಿರೂಪಿಸಿದಂತಿರುವ ಈ ಕವಿತೆಯಲ್ಲಿ :

ನಿನಗಾಗಿ ಈ ಕತೆಯ ನೆನಪು ಇಟ್ಟೆ
ಹೇಳುವಾಗಲೆ ಮಾತು ಬಿಗಿದು ಬಿಟ್ಟೆ[12]

ಎಂದು, ಕನಸಿನ ಅನುಭವಕ್ಕೆ ಕವಿತೆಯ ಮೈ ತೊಡಿಸಿದ ಸಂಗತಿಯನ್ನು ಹೇಳುತ್ತಾರೆ. ಮತ್ತೊಂದು ಕವಿತೆ, ‘ತೇಲಾಡುವಾಗ’ ಎನ್ನುವುದು. ಇದೂ ಗಂಗಾವತರಣ ಸಂಗ್ರಹದಲ್ಲಿದೆ. ಯಾವುದೋ ಒಂದು ಪಾಪ ಪ್ರಜ್ಞೆಯಲ್ಲಿ ತೊಳಲಾಡಿದ ಕವಿಯ ಮನಸ್ಸು, ಕನಸಿನಲ್ಲಿ ಪಟ್ಟ ತಾಕಲಾಟ, ಪಶ್ಚಾತ್ತಾಪ, ಅದಕ್ಕೆ ಉತ್ತರವಾಗಿ ಬಂದ ಕೃಪೆಯ ಅಭಯ ಇವುಗಳನ್ನು ನಿರೂಪಿಸುವ ಕವಿತೆಯ ಮೊದಲ ನಾಲ್ಕು ಸಾಲುಗಳು-

‘ತೇಲಾಡುವಾಗ ಮನಸು
ಮೇಲಾಡುತಾವ ಕನಸು
ತಾಕಾಡುವಾಗ ಇತ್ತ
ತೇಕಾಡತಾವ ಚಿತ್ತ’[13]

ಇವು ವಾಸ್ತವವಾಗಿ ಹೊಳೆದವುಗಳೆಂದೂ ಅನಂತರದ ಮುಂದಿನ ಕವಿತೆ, ಎಚ್ಚರದಲ್ಲಿ ಮುಂದುವರಿದು ಮುಕ್ತಾಯವಾಯಿತೆಂದು ಬೇಂದ್ರೆಯವರೇ ಹೇಳಿದ್ದಾರೆ.

ಸ್ವಪ್ನಗಳು, ಕವಿಗಳ ಪಾಲಿಗೆ ಅನುಭವ ದ್ರವ್ಯದ ಒಂದು ಭಾಗ. ಸ್ವಪ್ನಗಳನ್ನು ಕಾವ್ಯದ ವಸ್ತುವನ್ನಾಗಿ, ಸಂಕೇತ, ಪ್ರತೀಕ ಪ್ರತಿಮೆಗಳನ್ನಾಗಿ, ತಮ್ಮ ನಿರೂಪಣೆಯ ತಂತ್ರಗಳನ್ನಾಗಿ ಬಳಸಿಕೊಂಡಿರುವುದು ಒಂದು ಸ್ವಾರಸ್ಯದ ಸಂಗತಿಯಾಗಿದೆ.

ವಿಸ್ತರಣ : ೧೯೯೫


[1] ತಪೋನಂದನ : ಪ್ರತಿಮಾ ಮತ್ತು ಪ್ರತಿಕೃತಿ., ಪು. ೨೯,೩೦.

[2] ಕುವೆಂಪು : ಶ್ರೀರಾಮಾಯಣ ದರ್ಶನಂ (ಸಂಪುಟ. ೧) ಪು.೭೧ ಪಂಕ್ತಿ ೧೩೬-೧೫೨ (೧೯೭೧)

[3] ಹರಿಹರ : ಬಸವರಾಜದೇವರಗಳೆ. ಸಂ.ಟಿ.ಎಸ್. ವೆಂಕಣ್ಣಯ್ಯ, ಪು.೨೧

[4] ಅಲ್ಲೇ : ಪು. ೫.

[5] ಅಕ್ಕನ ವಚನಗಳು, ಸಂ. ಡಾ. ಎಲ್. ಬಸವರಾಜು. ಪು೮೭. ವ. ೮೬

[6] ಉಲ್ಲೇಖ ಸಮಗ್ರ ಗದ್ಯ (ಜಿ.ಎಸ್. ಶಿವರುದ್ರಪ್ಪ) ಸಂಪುಟ. ೧. ಪು.೨೯೪

[7] ರಾಘವಾಂಕ : ಹರಿಶ್ಚಂದ್ರ ಕಾವ್ಯ. ಸಂ. ಎನ್. ಬಸವಾರಾಧ್ಯ ೬-೫೫

[8] ಉಲ್ಲೇಖ : ಭಾರತೀಯ ಕಾವ್ಯಮೀಮಾಂಸೆ (೧೯೬೧) ತೀ.ನಂ. ಶ್ರೀಕಂಠಯ್ಯ. ಫು. ೨೯೭

[9] ದ.ರಾ. ಬೇಂದ್ರೆ :  ಗರಿ. ಪು. ೩೫

[10] ಕುವೆಂಪು : ಪಾಂಚಜನ್ಯ

[11] ಕುವೆಂಪು : ಪಾಂಚಜನ್ಯ

[12] ಬೇಂದ್ರೆ : ಗಂಗಾವತರಣ

[13] ಅಲ್ಲೇ