ಬಿಸಿ ಮಾಡುವ ಕ್ರಮ

ನೇರವಾಗಿ ಬಿಸಿ ಮಾಡುವುದು ಮತ್ತು ವಿಕಿರಣ ಕ್ರಿಯೆಯಿಂದ ಬಿಸಿ ಮಾಡುವುದು ಎಂಬ ಎರಡು ವಿಧಾನಗಳಿವೆ. ಮೊದಲ ವಿಧಾನದಲ್ಲಿ ಇಂಧನವಸ್ತು ಮತ್ತು ಬಿಸಿಗಾಳಿ ಒಟ್ಟಿಗೆ ಪದಾರ್ಥದ ಮೂಲಕ ಚಲಿಸುತ್ತದೆ. ಇದು ಅತ್ಯಂತ ಉತ್ತುಮ ವಿಧಾನ. ಆದರೂ ಕೆಲವು ವೇಳೆ ಪದಾರ್ಥಗಳು ಅತ್ಯಂತ ಬಿಸಿಯಾಗುವ ಸಂಭವವಿರುತ್ತದೆ. ಅಲ್ಲದೆ ಮಸಿ ಇತ್ಯಾದಿ ಅಪಾಯಕಾರಿ ವಸ್ತುಗಳು ಪದಾರ್ಥದ ಮೇಲೆ ಕಂಡುಬರುವುದೂ ಇರುತ್ತದೆ.

ಎರಡನೆಯ ವಿಧಾನದಲ್ಲಿ ಕೊಳವೆಗಳನ್ನು ನೇರವಾಗಿ ಒಲೆಗೆ ಜೋಡಿಸಲಾಗಿರುತ್ತದೆ. ಒಲೆಯಿಂದ ಬಂದ ಬಿಸಿಗಾಳಿ ಕೊಳವೆಗಳ ಮೂಲಕ ಚಲಿಸುತ್ತದೆ. ಅದು ಸುತ್ತಮುತ್ತಲಿನ ಗಾಳಿಯನ್ನು ಬಿಸಿ ಮಾಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗಾಳಿಯು ಹೊರಗೆ ಒಲೆಯಲ್ಲಿ ಬಿಸಿಯಾಗುತ್ತದೆ. ಅದನ್ನು ಕೊಳವೆಗಳ ಮುಖಾಂತರ ಎಳೆಯಲಾಗುತ್ತದೆ. ಈ ಕ್ರಮವೂ ಮೊದಲನೆಯದರಷ್ಟೇ ಸಮರ್ಥವಾಗಿರುತ್ತದೆ. ಮತ್ತೊಂದು ಕ್ರಮದಲ್ಲಿ ಉಗಿಯ ಕೊಳವೆಗಳಿಂದ ಗಾಳಿಯು ಬಿಸಿಯಾಗುತ್ತದೆ. ಈ ವ್ಯವಸ್ಥೆಯಲ್ಲಿ ಬಿಸಿಯಾಗುವುದನ್ನು ಸರಿಯಾಗಿ ಹಿಡಿತದಲ್ಲಿಟ್ಟುಕೊಳ್ಳಬಹುದು. ಆದರೆ ಇನ್ನುಳಿದ ಎರಡು ವಿಧಾನಗಳಿಗಿಂತ ಇದಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಮಾತ್ರವಲ್ಲ ಇದರಿಂದ ಉತ್ತಮ ಫಲಿತಾಂಶ ಪಡೆಯಲೂ ಸಾಧ್ಯವಿರುವುದಿಲ್ಲ.

ಗಾಳಿಯ ಪರಿಚಲನೆ : ಗಾಳಿಯನ್ನು ಸುರಂಗದ ಮೂಲಕ ರಭಸದಿಂದ ಎಳೆಯಲು ಅಥವಾ ತಳ್ಳಲು ವಿವಿಧ ಯಾಂತ್ರಿಕ ಬೀಸಣಿಗೆಗಳು ಪ್ರಚಾರದಲ್ಲಿವೆ. ಕ್ರುಯೆಸ್‌ರವರ ಹೇಳಿಕೆ ಪ್ರಕಾರ ಅಕ್ಷದಿಂದ ಬೀಸುವ ಬೀಸಣಿಗೆ ಇನ್ನುಳಿದ ಬೀಸಣಿಗೆಗಳಿಗಿಂತ ಅಂದರೆ, ಮುಂದಕ್ಕೆ ತಳ್ಳಲು ಸಹಾಯವಾಗದ ತಿರುಗುವ ಅಲಗುಳ್ಳ ಬೀಸಣಿಗೆ. ಮಲ್ಟಿವೇನ್ ಬೀಸಣಿಗೆ ಇತ್ಯಾದಿಗಳಿಗಿಂತ ಉತ್ತಮವಾದುದಾಗಿರುತ್ತದೆ. ಒಣಗುವ ಪದಾರ್ಥದ ಹೊರ ಪದರು ಗಟ್ಟಿಯಾಗದಂತೆ ಮತ್ತು ಉಷ್ಣದ ಕಾರ್ಯದಕ್ಷತೆ ಹೆಚ್ಚಿಸಲು ಬಿಸಿಮಾಡಿದ ಮೇಲೆ ಗಾಳಿಯನ್ನು ಭಾಗಶಃ ಇನ್ನೊಮ್ಮೆ ಸುತ್ತಿಸಬೇಕು. ಒಳಸೇರುವ ಗಾಳಿಯ ಉಷ್ಣತೆ ೧೬೦ – ೧೭೦ ಫ್ಯಾ.ನ್ನು ಮೀರಿರಬಾರದು. ಗಾಳಿ ಹೊರಬರುವ ತುದಿಯ ತೇವಾಂಶ ಸಾಧಾರಣ ಶೇಕಡಾ ೬೫ ಇರಬೇಕು. ಒಣಗುವ ವೇಗವು ಸುರಂಗದ ಮೂಲಕ ಹಾದುಹೋಗುವ ಗಾಳಿಯ ವೇಗವನ್ನು ಅವಲಂಬಿಸಿರುತ್ತದೆ. ನಿಕೋಲ್ಸ್ ಮತ್ತು ಸಂಗಡಿಗರ ಹೇಳಿಕೆ ಪ್ರಕಾರ ಗಾಳಿಯ ವೇಗದ ಮಿತಿಯು ನಿಮಿಷಕ್ಕೆ ೬೦೦ – ೮೦೦ ನೇರ ಅಡಿಗಳಷ್ಟಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಒಣಗಿಸುವ ಯಂತ್ರಗಳಲ್ಲಿ ಅಂಕಣಗಳಿದ್ದರೆ ಗಾಳಿಯಗತಿ ಇದಕ್ಕಿಂತಲೂ ಕಡಮೆ ಇರಬಹುದು.

ವಿರುದ್ಧ ದಿಕ್ಕಿಗೆ ಮತ್ತು ಸಮಾನಾಂತರವಾಗಿ (ಒಂದೇ ದಿಕ್ಕಿಗೆ) ಚಲಿಸುವ ವಿಧಾನಗಳು : ಒಣಗುವ ಪದಾರ್ಥದ ವಿರುದ್ಧ ದಿಕ್ಕಿನಿಂದ ಗಾಳಿ ಸಂಚರಿಸುತ್ತಿದ್ದರೆ ವಿರುದ್ಧ ದಿಕ್ಕಿಗೆ ಚಲಿಸುವ ವಿಧಾನವೆನ್ನುತ್ತಾರೆ. ಸಮನಾಂತರವಾಗಿ ಚಲಿಸುವ ವಿಧಾನದಲ್ಲಿ ಗಾಳಿ ಮತ್ತು ಪದಾರ್ಥ ಎರಡೂ ಒಂದೇ ದಿಕ್ಕಿಗೆ ಚಲಿಸುತ್ತಿರುತ್ತವೆ. ಮೊದಲನೇ ಕ್ರಮದಲ್ಲಿ ಪದಾರ್ಥವನ್ನು ಹೊರತೆಗೆಯುವ ತುದಿಯಲ್ಲಿ ಬಿಸಿ ಹೆಚ್ಚಿರುತ್ತದೆ. ಈ ಕಾರಣದಿಂದ ಪದಾರ್ಥ ಸ್ವಲ್ಪ ಸುಟ್ಟು ಹೋಗಲೂಬಹುದು, ಅಲ್ಲದೆ ಉಷ್ಣ ನಷ್ಟವಾಗುವುದೂ ಹೆಚ್ಚು. ಎರಡನೆಯ ಕ್ರಮದಲ್ಲಿ ಪದಾರ್ಥ ಒಳಸೇರುವಲ್ಲಿ ಒಣಗಿದ ಬಿಸಿಗಾಳಿಯಿರುತ್ತದೆ. ಪದಾರ್ಥ ಹೊರಬರುವಲ್ಲಿ ತೇವವಿರುವ ಮಧ್ಯಮ ಉಷ್ಣತೆಯ ಗಾಳಿಯಿರುತ್ತದೆ. ಇದರಲ್ಲಿ ಉಷ್ಣ ನಷ್ಟವಾಗುವುದೂ ಕಡಮೆ. ಕ್ರುಯೆಸ್‌ರ ಹೇಳಿಕೆ ಪ್ರಕಾರ ದ್ರಾಕ್ಷಿ, ಸೇಬಿನ ತುಂಡು ಇತ್ಯಾದಿ ಸಣ್ಣ ಗಾತ್ರದ ಹಣ್ಣುಗಳನ್ನು ಸಮಾನಾಂತರವಾಗಿ ಚಲಿಸುವ ಕ್ರಮದಿಂದ ಒಣಗಿಸಿದರೆ ಸುಟ್ಟುಹೋಗುವುದಲ್ಲದೆ ಹೊರಪದರು ಗಟ್ಟಿಯಾಗುವುದಿಲ್ಲ. ಕೆಲವು ವೇಳೆ ಈ ಎರಡೂ ಕ್ರಮಗಳನ್ನು ದ್ವಿಸುರಂಗ ನಿರ್ಜಲಗೊಳಿಸುವ ವಿಧಾನದಲ್ಲಿ ಕಾಣಬಹುದು.

ಸಾಮಾನ್ಯವಾಗಿ ಗಮನಿಸತಕ್ಕ ವಿಷಯಗಳು

ಪ್ರತಿ ಪದರಡಿ ತಟ್ಟೆಗೆ ಸರಾಸರಿ ೩ ಪೌಂಡಿನಷ್ಟು ಆಗತಾನೆ ಕಿತ್ತ ಹಣ್ಣುಗಳನ್ನು ಹರಡಬಹುದು. ಇದರಿಂದ ಸುರಂಗದ ಧಾರಣಶಕ್ತಿಯನ್ನು ಲೆಕ್ಕಹಾಕಬಹುದು. ತಟ್ಟೆಗಳ ಮಧ್ಯದ ಅಂತರ ೨ ಅಂಗುಲವಿರುತ್ತದೆ. ಆರಂಭದ ಮತ್ತು ಅಂತ್ಯದ ತೇವಾಂಶ, ಪದಾರ್ಥದ ಒಣಗುವ ಮೊದಲಿನ ತೂಕ ಮತ್ತು ಒಣಗಲು ಬೇಕಾದ ಸಮಯ ಇವುಗಳಿಂದ ಆವಿಯಾಗುವ ಗತಿಯನ್ನು ಲೆಕ್ಕ ಹಾಕಬಹುದು. ನಿರ್ಜಲಗೊಳಿಸುವ ಯಂತ್ರಗಳಲ್ಲಿ ಉಷ್ಣವು ಅನೇಕ ರೀತಿಯಿಂದ ನಷ್ಟವಾಗುತ್ತದೆ. ಅದು ವಿಕಿರಣದಿಂದ, ಸೋರಿ ಹೋಗುವಿಕೆಯಿಂದ ಮತ್ತು ಕೈಗಾಡಿಗಳನ್ನು ಹೊರ ತೆಗೆಯುವಾಗ ನಷ್ಟವಾಗುತ್ತದೆ. ನಿರ್ಜಲಗೊಳಿಸುವ ಯಂತ್ರಗಳನ್ನು ರಚಿಸುವಾಗ ಇದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಲಾಲ್‌ಸಿಂಗ್ ಮತ್ತು ಗಿರಿಧಾರಿಲಾಲ್ ಇವರುಗಳು ಗಾಳಿ ಅನೇಕ ಬಾರಿ ಬೀಸಿ ಸುತ್ತುವ, ಸಣ್ಣ ಮಾದರಿಯ ಸುರಂಗ ರೀತಿಯ ನಿರ್ಜಲೀಕರಣ ಯಂತ್ರದ ವಿವರಣೆಯನ್ನು ನೀಡಿದ್ದಾರೆ; ಇದನ್ನು ತರಕಾರಿಗಳ ನಿರ್ಜಲೀಕರಣ ಪ್ರಯೋಗಗಳನ್ನು ನಡೆಸಲು ಉಪಯೋಗಿಸಿದರು. (ಚಿತ್ರ ೩೪)

ಇದರಲ್ಲಿ ಮೂರು ಚಲಿಸುವ ಕೈಗಾಡಿಗಳಿರುತ್ತವೆ, ಈ ಕೆಳಗಿನ ಭಾಗಗಳನ್ನು ಇವುಗಳಲ್ಲಿ ಕಾಣಬಹುದು: 

. () ಒಣಗಿಸುವ ಕುಹರ : ಸುರಂಗವು ೧೩ ಅಡಿ ಉದ್ದ, ೫ ಅಡಿಅಗಲ ಮತ್ತು ೬.೨೫ ಅಡಿ ಎತ್ತರವಿರುತ್ತದೆ.

() ಬಿಸಿಮಾಡುವ ಕುಹರ : ಇದು ೧೦.೨೫ ಅಡಿ ಉದ್ದ; ೫ ಅಡಿ ಅಗಲ ಮತ್ತು ೩ ಅಡಿ ಎತ್ತರವಿರುತ್ತದೆ.

ಬೀಸಣಿಗೆ ಕುಹರ : ಇದು ೨.೫ ಅಡಿ ಉದ್ದ; ೫ ಅಡಿ ಅಗಲ ಮತ್ತು ೩ ಅಡಿ ಎತ್ತರವಿರುತ್ತದೆ.

ಒಣಗಿಸುವ ಕುಹರಕ್ಕೆ ಬಿಸಿಗಾಳಿಯನ್ನು ಎಳೆದು ಒಳಗೆ ಬಿಡಲು ಇರುವ ರಂಧ್ರ ೫’ x ೧’ ಬಿಸಿಮಾಡುವ ಕುಹರದಿಂದ ಬಿಸಿಗಾಳಿ ಈ ರಂಧ್ರದ ಮೂಲಕ ಒಣಗಿಸುವ ಕುಹರವನ್ನು ಸೇರುತ್ತದೆ.

. ಹೊಸಗಾಳಿಗೆ ವ್ಯವಸ್ಥೆ : ತಣ್ಣಗಿರುವ ತುದಿಯಲ್ಲಿ ಹೊಸಗಾಳಿಯು ತೇವವನ್ನು ಪಡೆಯುತ್ತದೆ. ಇದರ ಗಾತ್ರ ೩.೫ x ೧.೫ ಗಾಳಿಯ ಚಲನೆಯನ್ನು ಹಿಡಿತದಲ್ಲಿಡಲು ಇದಕ್ಕೆ ಒಂದು ಮುಚ್ಚಳವಿರುತ್ತದೆ. ಇದನ್ನು ಅಗತ್ಯವಿದ್ದಷ್ಟು ತೆರೆದಿಡಬಹುದು.

. ಬದಿಯಲ್ಲಿರುವ (ಪಕ್ಕಗಳಲ್ಲಿರುವ) ತೇವಮಾಡುವ ಸಾಧನಗಳು : ಇದರ ಅಳತೆ ೧೮” x ೯”. ಸರುಂಗದ ತಣ್ಣಗಿರುವ ತುದಿಯ ಎರಡೂ ಪಕ್ಕಗಳಲ್ಲಿ ತೇವವನ್ನುಂಟುಮಾಡುವ ಎರಡು ಸಾಧನಗಳಿರುತ್ತವೆ. ಒಣಗಿಸುವ ಕುಹರದ ತೇವವನ್ನನುಸರಿಸಿ, ಹೊರಹೋಗುವ ಗಾಳಿಯ ಮಿತಿಯನ್ನು ಲೋಹದ ತೂಗಾಡುವ ಮುಚ್ಚಳ ಸರಿಪಡಿಸುತ್ತದೆ.

. ಬಿಸಿಮಾಡುವ ಕ್ರಮ : ಉಗಿಯ ಕೊಳವೆಯಿಂದ ಬಿಸಿಮಾಡಲು ಎರಡುಜೊತೆ ಕೊಳವೆಗಳು ಸುರುಳಿಯಿರುತ್ತದೆ. ಒಂದು ೧೬೦ ಅಡಿ ಉದ್ದವಿದ್ದು ಒಂದು ಅಂಗುಲ ದಪ್ಪವಿದ್ದರೆ ಇನ್ನೊಂದು ೧೧೦ ಅಡಿ ಉದ್ದವಿದ್ದು ೦.೫ ಅಂಗುಲ ದಪ್ಪವಿರುತ್ತದೆ. ಇವೆರಡನ್ನು ಬಿಸಿಮಾಡುವ ಕುಹರದೊಳಗೆ ಪಂಖದ ಮುಂಭಾಗದಲ್ಲಿ ಜೋಡಿಸಿರುತ್ತಾರೆ. ಇದಕ್ಕೆ ಬದಲಾಗಿ ಬಿಸಿಮಾಡುವ ಕುಹರದೊಳಗೆ ಕಲ್ಲಿದ್ದಲಿನ ಒಲೆ ಮತ್ತು ಹೊಗೆ ನಳಿಕೆಯನ್ನು ಜೋಡಿಸುವುದೂ ಇದೆ. ಇದರಿಂದ ಖರ್ಚು ಕಡಮೆಯಾಗುತ್ತದಲ್ಲದೆ, ಕಾರ್ಯದಕ್ಷತೆಯಲ್ಲಿ ಯಾವುದೇ ಕೊರತೆಯೂ ಕಂಡುಬರುವುದಿಲ್ಲ.

. ಗಾಳಿ ಚಲಿಸುವ ಕ್ರಮ : ಪಂಖ ಕುಹರದಲ್ಲಿ ೨೦ ಅಂಗುಲ ವ್ಯಾಸದ ಮತ್ತು ೧೨ ರೆಕ್ಕೆಗಳುಳ್ಳ ಒಂದು ಮಲ್ಟಿವೇನ್ ಪಂಖವಿರುತ್ತದೆ. ಗಾಳಿಯ ಚಲಿಸುವ ವೇಗವು ೧೩ ಅಡಿ ಉದ್ದವಿರುವ ಸುರಂಗಕ್ಕೆ ಪ್ರತಿ ನಿಮಿಷಕ್ಕೆ ೨೦೦ ನೇರ ಅಡಿಗಳಷ್ಟಿದ್ದರೆ ಸಾಕೆಂದು ಅಂದಾಜು ಮಾಡಲಾಗಿದೆ. ಸುರಂಗದ ಪಕ್ಕದಲ್ಲಿರುವ ಮೊದಲನೆಯ ಗಾಡಿಯ ಸುತ್ತಲೂ ಬಿಟ್ಟಿರುವ ಜಾಗ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತದೆ. ಇದರಿಂದ ಒಳಗಿನ ಗಾಳಿ ಯಾವುದೇ ಕಡೆಗೂ ತಪ್ಪಿಸಿಕೊಂಡುಹೋಗಲು ಸಾಧ್ಯವಿರುವುದಿಲ್ಲ. ಒಳಗಿರುವ ಗಾಳಿಯೆಲ್ಲ ಕೈಗಾಡಿಗಳ ಮುಖಾಂತರವೇ ಹಾದುಹೋಗಬೇಕು.

. ತಟ್ಟೆಗಳು ಮತ್ತು ಕೈಗಾಡಿಗಳು : (೧) ತಟ್ಟೆಗಳು : ೨.೨೫ + ೨ ಅಡಿಗೆ ೦.೧೨ ಅಂಗುಲ ರಂಧ್ರವಿರುವ ತಂತಿಯ ಜಾಲರಿಯನ್ನು ಮರದ ಚೌಕಟ್ಟಿಗೆ ಜೋಡಿಸಿರುತ್ತದೆ. (೨) ಕೈಗಾಡಿಗಳು : ೨.೫ ಅಡಿ ಉದ್ದ, ೪.೬೬ ಅಡಿ ಅಗಲ ಮತ್ತು ೫.೬೫ ಅಡಿ ಎತ್ತರವಿರುತ್ತವೆ. ಇಂಥ ನಾಲ್ಕು ಗಾಡಿಗಳಿರುತ್ತವೆ; ಪ್ರತಿಯೊಂದರಲ್ಲಿಯೂ ೪೦ ತಟ್ಟೆಗಳನ್ನು ೨ ಸಾಲಿನಲ್ಲಿಡಲು ಬೇಕಾದ ಅವಕಾಶವಿರುತ್ತದೆ. ತಟ್ಟೆಗಳನ್ನು ಜೋಡಿಸಿದಾಗ ಮಧ್ಯದ ಅಂತರ ೨ ಅಂಗುಲ. ಒಂದು ಸುರಂಗದಲ್ಲಿ ೩ ಕೈಗಾಡಿಗಳನ್ನು ಏಕಕಾಲದಲ್ಲಿಡಬಹುದು. ಪದಾರ್ಥ ತುಂಬಲು ಇನ್ನೊಂದು ಕೈಗಾಡಿ ಪ್ರತ್ಯೇಕವಾಗಿದೆ.

. ಕೈಗಾಡಿಯ ದಾರಿ ಮತ್ತು ತಿರುಗುವ ಮೇಜುಗಳು : ಗಾಡಿಗಳನ್ನು ಒಳಗೆ ತಳ್ಳಲು ಮತ್ತು ಹೊರಕ್ಕೆ ತೆಗೆಯಲು ೧೦೦ ಅಡಿ ಉದ್ದದ ಮತ್ತು ೨ ಅಡಿ ೪ ಅಂಗುಲ ಅಗಲದ ದಾರಿಯಿರುತ್ತದೆ. ಇದರಲ್ಲಿ ೩ ತಿರುಗುವ ಮೇಜುಗಳಿರುತ್ತವೆ.

ಕೆಲಸ ಮಾಡುವಾಗ ಅನುಸರಿಸಬೇಕಾದ ನಿಯಮಗಳು : ಪದಾರ್ಥಗಳನ್ನು ಸಿದ್ಧಗೊಳಿಸಿ (ಈ ಸಂದರ್ಭದಲ್ಲಿ ಆಲೂಗೆಡ್ಡೆ ತುಂಡುಗಳು) ತಟ್ಟೆಯಲ್ಲಿಡಬೇಕು (ಪ್ರತಿ ಚದರ ಅಡಿಗೆ ೧-೧.೨೫ ಪೌಂಡಿನಷ್ಟು). ಅನಂತರ ತಟ್ಟೆಗಳನ್ನು ಕೈಗಾಡಿಯಲ್ಲಿ ತುಂಬಬೇಕು. ಸುರಂಗದ ತಣ್ಣಗಿರುವ ಕೊನೆಯಿಂದ ಗಾಡಿಯನ್ನು ಒಳಕ್ಕೆ ತಳ್ಳಿ ಬಾಗಿಲುಗಳನ್ನು ಮುಚ್ಚಬೇಕು. ಸುರಂಗದ ತಣ್ಣಗಿನ ಕೊನೆಯಲ್ಲಿನ ಉಷ್ಣತೆ ೧೪೦ – ೧೫೦ ಫ್ಯಾ. ಇರಬೇಕು. ಮೊದಲನೆ ಗಾಡಿ ಒಳಕ್ಕೆ ತಳ್ಳಿ ಸಾಧಾರಣ ೨.೫ ಗಂಟೆ ನಂತರ ತುಂಬಿದ ೨ ನೆಯ ಗಾಡಿಯನ್ನು ಒಳದೂಡಬೇಕು. ಸುರಂಗದ ಬಾಗಿಲನ್ನು ಗಾಳಿ ಸಂಚಾರಕ್ಕೆ ಎಡೆಯಿಲ್ಲದಂತೆ ಮುಚ್ಚಬೇಕು. ಮೂರನೆಯ ಗಾಡಿಯನ್ನು ಇದೇ ರೀತಿ ಒಳಕ್ಕೆ ತಳ್ಳಬೇಕು. ಇದಾದ ೨.೫ ಗಂಟೆ ಬಳಿಕ ಮೊದಲ ಕೈಗಾಡಿಯ ಆಲೂಗಡ್ಡೆ ತುಂಡುಗಳು ಸಾಕಷ್ಟು ಒಣಗಿರುತ್ತವೆ. ಅದನ್ನು ಹೊರತೆಗೆಯಬೇಕು. ಈ ವಿಧಾನವನ್ನು ಇದೇ ರೀತಿ ಎಡೆಬಿಡದೆ ಮುಂದುವರಿಸಬಹುದು. ಉಷ್ಣತೆ ಮತ್ತು ತೇವವನ್ನು ಈ ಕೆಳಗೆ ತಿಳಿಸಿದ ವಿಧಾನದಿಂದ ಹತೋಟಿಯಲ್ಲಿಡಬಹುದು :

ಉಷ್ಣತೆ

ತೇವಾಂಶ

ಸುರಂಗದ ತಣ್ಣಗಿರುವ ಕೊನೆ (ತೇವವಿರುವ ತುದಿ) ೧೪೦ – ೧೪೫ ಫ್ಯಾ. ೪೦ – ೪೫%
ಸುರಂಗದ ಬಿಸಿಯಿರುವ ಕೊನೆ ೧೬೦ – ೧೬೫ ಫ್ಯಾ. ೨೦ – ೨೫%

ಸುರಂಗದೊಳಗಿನ ತೇವವನ್ನು ಒಣ ಮತ್ತು ಒದ್ದೆ (ತೇವ) ಬುರುಡೆ ಉಷ್ಣಮಾಪಕದಿಂದ ೩೦ ನಿಮಿಷಕ್ಕೊಮ್ಮೆ ನೋಡುತ್ತಿರಬೇಕು. ಒಂದು ಕೈಗಾಡಿಯ ಪದಾರ್ಥ ಒಣಗಲು ಸಾಧಾರಣ ೭-೮ ಗಂಟೆ ಬೇಕಾಗುತ್ತದೆ. ನಿರ್ಜಲಗೊಳಿಸುವ ಯಂತ್ರಗಳ ಸಾಮರ್ಥ್ಯವು ಎಡೆಬಿಡದೆ ೨೪ ಗಂಟೆಗಳ ಕಾಲ ಕೆಸಲ ಮಾಡಿದಾಗ ಸಾಧರಣ ೩೨೦ ಪೌಂಡು ಒಣಗಿದ ಆಲೂಗೆಡ್ಡೆ ತಯಾರಿಸುವಷ್ಟಿರುತ್ತದೆ. ವಾಣಿಜ್ಯ ಮಟ್ಟದ ಕೆಲಸಕ್ಕೆ ೧೩ ಅಡಿ ಉದ್ದದ ಸುರಂಗವು ಚಿಕ್ಕದಾಗುತ್ತದೆ; ಕಡಮೆ ಎಂದರೆ ಇದರ ಎರಡರಷ್ಟು ಪರಿಮಾಣವಾದರೂ ಇರಬೇಕು.

ಸಂಸ್ಕರಣೆಯ ವೈವಿಧ್ಯತೆ

ಪೂರ್ವಭಾವಿಯಾಗಿ ತಯಾರಿಸಿದ ಪದಾರ್ಥಗಳನ್ನು ಗಂಧಕದಿಂದ ಉಪಚರಿಸಿ, ನಿರ್ಜಲೀಕರಣಗೊಳಿಸಬೇಕು. ಹಣ್ಣಿನ ಮಾದರಿಯನ್ನವಲಂಬಿಸಿ ನಿರ್ಜಲೀಕರಣಗೊಳಿಸುವಾಗಿನ ಉಷ್ಣತೆ ಮತ್ತು ತೇವವನ್ನು ಬದಲಾಯಿಸಬೇಕಾಗುತ್ತದೆ. ಈ ವಿವರಣೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಟ್ಟಿದೆ :

ಸೇಬು : ಸಿಪ್ಪೆ ತೆಗೆದ ಸೇಬನ್ನು ಕೊರೆದು ಘನಾಕಾರವಾಗಿ ಅಥವಾ ಹೋಳುಗಳಾಗಿ ತುಂಡು ಮಾಡಬೇಕು. ಇವುಗಳನ್ನು ೧೫ – ೩೦  ನಿಮಿಷ ಗಂಧಕದಿಂದ ಉಪಚರಿಸಬೇಕು ಮತ್ತು ೬ ರಿಂದ ೧೦ ಗಂಟೆಗಳ ಕಾಲ ೧೪೦ – ೧೬೦ ಫ್ಯಾ. ನಲ್ಲಿ ಒಣಗಿಸಿದರೆ ಸಾಕು. ಒಣಗಿದ ಸೇಬಿನ ಇಳುವರಿ ಶೇಕಡಾ ೧೦ – ೧೫ ರಷ್ಟು ಇರುತ್ತದೆ.

ಏಪ್ರಿಕಾಟ್ : ಬಿಳಿ ಮತ್ತು ಅರಿಶಿನ ಬಣ್ಣದ ಏಪ್ರಿಕಾಟ್‌ಅನ್ನು ಇಡಿಯಾಗಿ ಇಲ್ಲವೇ ಭಾಗಗಳಾಗಿ ಕತ್ತರಿಸಿ ಒಣಗಿಸಬಹುದು. ಗಂಧಕದಿಂದ ಉಪಚರಿಸಬೇಕಾದ ಕಾಲ ೧೫ – ೨೫ ನಿಮಿಷಗಳು; ೧೦ ರಿಂದ ೨೦ ಗಂಟೆಗಳ ಕಾಲ ೧೪೦ – ೧೬೦ ಫ್ಯಾ.ನಲ್ಲಿ ಒಣಗಿಸಬೇಕು. ಒಣಗಿದ ಹಣ್ಣಿನ ಇಳುವರಿ ಶೇಕಡಾ ೧೫ – ೧೯.

ಬಾಳೆ : ಬಾಳೆಯಕಾಯಿ ಮತ್ತು ಬಾಳೆಯಹಣ್ಣು ಇವೆರಡನ್ನು ನಿರ್ಜಲಗೊಳಿಸಬಹುದು. ಸಿಪ್ಪೆತೆಗೆದು, ಹೋಳುಗಳಾಗಿ ಕತ್ತರಿಸಿ ಅನಂತರ ೧೫ – ೩೦ ನಿಮಿಷ ಗಂಧಕದಿಂದ ಉಪಚರಿಸಿ ೧೮ – ೨೦ ಗಂಟೆ ೧೩೦ – ೧೬೦ ಫ್ಯಾ. ಉಷ್ಣತೆಯಲ್ಲಿ ಒಣಗಿಸಬೇಕು. ನಮ್ಮ ದಕ್ಷಿಣ ದೇಶದ ಅನೇಕ ಪ್ರಖ್ಯಾತ ತಳಿಗಳು ಒಣಗಿಸಲು ಯೋಗ್ಯವಾದವುಗಳೆಂದು ತಿಳಿದುಬಂದಿದೆ. ಇವುಗಳನ್ನು ಬನಾನಾ ಪಿಗ್ಸ್ ಅಥವಾ ಬಾಳೆಹಣ್ಣಿನ ಪುಡಿಯನ್ನು ತಯಾರಿಸಲು ಒಣಗಿಸಬಹುದು. ಒಣಗಿದ ಹಣ್ಣಿನ ಇಳುವರಿ ಶೇಕಡಾ ೧೪ – ೨೦ ರಷ್ಟಾಗುತ್ತದೆ.

ದ್ರಾಕ್ಷಿ : ದ್ರಾಕ್ಷಿಯನ್ನು ಒಣಗಿಸುವ ಮೊದಲು ಕ್ಷಾರದ್ರಾವಣದಲ್ಲಿ ಮುಳುಗಿಸಬೇಕು. ಸಾಧಾರಣ ೩೦ ನಿಮಿಷ ಗಂಧಕದಿಂದ ಉಪಚರಿಸಿ ೨೦ – ೩೦ ಗಂಟೆ ೧೫೦ – ೧೮೦ ಫ್ಯಾ. ಉಷ್ಣತೆಯಲ್ಲಿ ಹಣ್ಣನ್ನು ಒಣಗಿಸಬೇಕು. ಒಣಗಿದ ದ್ರಾಕ್ಷಿಯ ಇಳುವರಿ ಶೇಕಡಾ ೨೧ – ೨೭ ರಷ್ಟು ಸಿಗುತ್ತದೆ.

ಮಾವು, ಸೀಬೆ ಮತ್ತು ಹಲಸು : ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಈ ಹಣ್ಣುಗಳನ್ನು ಒಣಗಿಸುವ ಕ್ರಮ ನಿರ್ಧರಿಸಲಾಗಿದೆ. ಹಣ್ಣುಗಳ ತಿರುಳಿನಿಂದ ಒಣಗಿಸಿದ ಪದರು ಅಥವಾ ಹಾಳೆಗಳನ್ನು ಮಾಡುವ ಕ್ರಮದ ಬಗ್ಗೆ ಇತ್ತೀಚೆಗೆ ಒಂದು ಸ್ವಾಮ್ಯವನ್ನು ಪಡೆಯಲಾಗಿದೆ.

ಪೀಚ್ : ಭಾಗಗಳಾಗಿ ಕತ್ತರಿಸಿದ ಹಣ್ಣುಗಳನ್ನು ೧೫ – ೨೦ ನಿಮಿಷ ಗಂಧಕದಿಮದ ಉಪಚರಿಸಿ, ೧೫ – ೨೪ ಗಂಟೆ ೧೪೫ – ೧೫೫ ಫ್ಯಾ. ಉಷ್ಣತೆಯಲ್ಲಿ ಒಣಗಿಸಬೇಕು. ಒಣಗಿಸಿದ ಈ ಹಣ್ಣಿನ ಇಳುವರಿ ಶೇಕಡಾ ೧೦ – ೧೯ ರವರೆಗೆ ಸಿಗುತ್ತದೆ.

ಪೇರ್ : ಹಣ್ಣಾದ ಪೇರಿನ ಸಿಪ್ಪೆ ತೆಗೆದು, ಭಾಗ ಮಾಡಿ, ಮಧ್ಯದ ದಿಂಡು ತೆಗೆಯಬೇಕು. ಅನಂತರ ೧೫ – ೨೪ ನಿಮಿಷ ಗಂಧಕದಿಂದ ಉಪಚರಿಸಿ ೧೫ – ೨೪ ಗಂಟೆ ೧೪೦ – ೧೪೫ ಫ್ಯಾ. ಉಷ್ಣತೆಯಲ್ಲಿ ಒಣಗಿಸಬೇಕು.

ಇತರ ಹಣ್ಣುಗಳು : ಬೆರ್ರಿಜಾತಿ ಹಣ್ಣುಗಳು, ಪ್ರೂನ್, ಬೆರ್ರಿ ಮುಂತಾದ ಹಣ್ಣುಗಳನ್ನು ನಿರ್ಜಲಗೊಳಿಸಬಹುದು.

ಗಂಧಕದ ಡೈ ಆಕ್ಸೈಡ್ ಪರಿಮಾಣ

ಮಾರಿಸ್ ಅವರ ಹೇಳಿಕೆ ಪ್ರಕಾರ ವಿವಿಧ ದೇಶಗಳಲ್ಲಿ ಗಂಧಕದ ಡೈ ಆಕ್ಸೈಡ್‌ನ ಬಳಕೆಗೆ ನಿರ್ಧರಿಸಿದ ಮಿತಿ ಈ ರೀತಿ ಇದೆ :

ದೇಶ ಅಥವಾ ರಾಜ್ಯ ಪ್ರತಿ ಮಿಲಿಯದಲ್ಲಿ ಗಂಧಕದ ಡೈ ಆಕ್ಸೈಡಿನ ಭಾಗ
ಇಂಗ್ಲೆಂಡ್ ೨೦೦೦ (೭೫೦ ದ್ರಾಕ್ಷಿಗೆ)
ಕೆನಡ ೨೫೦೦
ಸ್ವಿಟ್ಜರ್‌ಲ್ಯಾಂಡ್ ೨೦೦೦
ಜರ್ಮನಿ, ಆಸ್ಟ್ರಿಯಾ ೧೨೫೦
ಜೆಕೋಸ್ಲಾವೇಕಿಯಾ ೧೨೫೦ (ದ್ರಾಕ್ಷಿಗೆ ಮಾತ್ರ)
ಫ್ರಾನ್ಸ್ ೧೦೦೦
ಜಪಾನ್ ೧೦೦೦ (ಏಪ್ರಿಕಾಟ್‌ಗೆ ಮಾತ್ರ) ಇತರ ಹಣ್ಣುಗಳಲ್ಲಿ ಸ್ವಲ್ಪವೂ ಇರಬಾರದು.
ಅಮೆರಿಕದ ಸಂಯುಕ್ತ ಸಂಸ್ಥಾನ (ನ್ಯೂಯಾರ್ಕ್‌ ರಾಜ್ಯ) ೨೦೦೦
ಅಮೆರಿಕದ ಸಂಯುಕ್ತ ಸಂಸ್ಥಾನ (ನ್ಯೂ ಹ್ಯಾಂಪ್‌ಶಯರ್) ಏನೂ ಇಲ್ಲ

ತರಕಾರಿಗಳ ಸಂಸ್ಕರಣೆ ವಿಧಾನ

ನಮ್ಮ ದೇಶದಲ್ಲಿ ಗಮನಾರ್ಹವಾದ ಪ್ರಮಾಣದಲ್ಲಿ ಹೂಕೋಸು, ಎಲೆ ಕೋಸು, ಹಾಗಲಕಾಯಿ, ಗಜ್ಜರಿ, ಟರ್ನಿಪ್, ಬೆಂಡೆ, ಬಾಳೆಹಣ್ಣು ಮುಂತಾದುವುಗಳನ್ನು ಸೂರ್ಯನ ಶಾಖದಿಂದ ಒಣಗಿಸುತ್ತಾರೆ. ಈ ರೀತಿ ಒಣಗಿಸಿದ ಪದಾರ್ಥದ ಗುಣಮಟ್ಟ ಅಷ್ಟು ಉತ್ತಮ ಮಟ್ಟದ್ದಾಗಿರುವುದಿಲ್ಲ. ಈ ತರಕಾರಿಗಳನ್ನು ಒಣಗಿಸುವ ಮೊದಲು ಕ್ಷಿಪ್ರವಾಗಿ ಸ್ವಲ್ಪ ಬೇಯಿಸುವುದಿಲ್ಲ; ಹೀಗೆ ಬೇಯಿಸುವುದರಿಂದ ತರಕಾರಿಗಳ ಬಣ್ಣ ಬದಲಾಗಲು ಕಾರಣವಾದ ಕಿಣ್ವಗಳು ನಾಶಹೊಂದುತ್ತವೆ. ಲಾಲ್‌ಸಿಂಗ್ ಮತ್ತು ಗಿರಿಧಾರಿಲಾಲ್ ಇವರು ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿದ ತರಕಾರಿಗಳನ್ನು ಸೂರ್ಯನ ಶಾಖದಿಂದ ಒಣಗಿಸಿ ಶೇಖರಿಸಿಟ್ಟರು. ಒಂದು ವರ್ಷ ದಾಸ್ತಾನಿಟ್ಟಾಗ ಅವು ತಮ್ಮ ಗುಣಮಟ್ಟವನ್ನು ಕಳೆದುಕೊಂಡುವಲ್ಲದೆ ಬಣ್ಣವೂ ಕೆಟ್ಟಿತು. ಅಲ್ಲದೆ ದೀರ್ಘಕಾಲ ಬೇಯಿಸಿದರೂ ಅವುಗಳ ಬಿರುಸುತನವನ್ನು ಹೋಗಲಾಡಿಸಲಾಗಲಿಲ್ಲ. ಒಣಗಿಸಿದ ಹಣ್ಣುಗಳನ್ನು ಬೆವರಿಸಲು ಮಣ್ಣಿನ ಜಾಡಿಗಳು ಉಪಯುಕ್ತವಾಗಿ ಕಂಡರೂ ಸಂಗ್ರಹಣೆಗೆ ಅವು ಯೋಗ್ಯವಲ್ಲ. ಅವುಗಳಲ್ಲಿರುವ ಅತ್ಯಂತ ಸೂಕ್ಷ್ಮ ರಂಧ್ರಗಳ ಮೂಲಕ ನೀರಿನ ಕಣಗಳು ಒಳಗೆ ಪ್ರವೇಶಿಸಿ ಪದಾರ್ಥವನ್ನು ಕೆಡಿಸುತ್ತವೆ.

ದೊಡ್ಡ ಪ್ರಮಾಣದಲ್ಲಿ ಒಣಗಿಸಿದ ಪದಾರ್ಥ ಉತ್ಪಾದಿಸಲು ನಿರ್ಜಲೀಕರಣವೇ ಯೋಗ್ಯ ಕ್ರಮ. ಎರಡನೇ ಜಾಗತಿಕ ಯುದ್ಧ ಸಮಯದಲ್ಲಿ ಲಾಲ್‌ಸಿಂಗ್ ಮತ್ತು ಗಿರಿಧಾರಿಲಾಲ್ ಮತ್ತು ಜೈನ್ ಇವರು ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಹೂಕೋಸು ಮುಂತಾದುವುಗಳನ್ನು ನಿರ್ಜಲೀಕರಣಗೊಳಿಸುವ ವಿಧಾನಗಳನ್ನು ಕ್ರಮಪಡಿಸಿದ್ದಾರೆ. ಇದು ಈ ದಿಶೆಯಲ್ಲಿ ಮುಂದಿನ ಸಂಶೋಧನೆಗಳಿಗೆ ನಾಂದಿಯಾಯಿತೆನ್ನಬಹುದು. ಈ ಹಿಂದೆ ಇವರು ಪ್ರಾಯೋಗಿಕವಾಗಿ ಬಳಸಿದ ನಿರ್ಜಲೀಕರಣ ಯಂತ್ರವನ್ನೇ ಇಲ್ಲಿಯೂ ಉಪಯೋಗಿಸಿದರು. ಕೆಲವು ಪ್ರಮುಖ ತರಕಾರಿಗಳನ್ನು ನಿರ್ಜಲೀಕರಣಗೊಳಿಸುವ ಬಗೆಗಿನ ವಿವರವನ್ನು ಈ ಕೆಳಗೆ ಕೊಡಲಾಗಿದೆ :

ಬೀನ್ಸ್ : ಮೃದುವಾಗಿರುವ ಸ್ಟ್ರಿಂಗ್ ಬೀನ್ಸನ್ನು ನಿರ್ಜಲೀಕರಣಕ್ಕೆ ಉಪಯೋಗಿಸಬೇಕು. ಸಣ್ಣ ತುಂಡುಗಳಾಗಿ ಕತ್ತರಿಸಿ, ೩ – ೬ ನಿಮಿಷ ಉಗಿಯಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಹೊರಗಿನ ಎರಡೂ ಪದರಗಳು ಮತ್ತು ಒಳಗಿನ ಬೀಜ ಬಿರುಸಾಗುವವರೆಗೆ ಒಣಗಿಸಬೇಕು. ಒಣಗುವ ಅನುಪಾತ ೭ : ೧.

ಹಾಗಲ : ಇದರ ಮೇಲ್ಭಾಗವನ್ನು ತೆಗೆದು, ದಿಂಡನ್ನು ಕೊರೆದು, ೦.೨೫ ಅಂಗುಲ ದಪ್ಪದ ಹೋಳುಗಳಾಗಿ ಕತ್ತರಿಸಬೇಕು. ಈ ಹೋಳುಗಳನ್ನು ಕುದಿಯುವ ನೀರಿನಲ್ಲಿ ೭ – ೮ ನಿಮಿಷ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿ ೭ – ೯ ಗಂಟೆಗಳ ಕಾಲ ೧೫೦ ರಿಂದ ೧೬೦ ಫ್ಯಾ. ಉಷ್ಣತೆಯಲ್ಲಿ ಒಣಗಿಸಬೇಕು. ಒಣಗುವ ಅನುಪಾತ ೨೬ : ೧.

ಬದನೆ : ಬದನೆಕಾಯಿಯನ್ನು ಉದ್ದವಾಗಿರುವಂತೆ ಮತ್ತು ೦.೨೫ ಅಂಗುಲ ದಪ್ಪ ಹೋಳುಗಳಾಗಿ ಕತ್ತರಿಸಿ ೧.೫ ಗಂಟೆ ಶೇಕಡಾ ೦.೫ ರ ಗಂಧಕದ ಡೈ ಆಕ್ಸೈಡಿನ ದ್ರಾವಣದಲ್ಲಿ ಮುಳುಗಿಸಬೇಕು. ಈ ತುಂಡುಗಳನ್ನು ೪ – ೫ ನಿಮಿಷ ಕಾಲ ಕುದಿಯುವ ನೀರಿನಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿ ೯ – ೧೧ ಗಂಟೆ ೧೨೦ – ೧೩೦ ಫ್ಯಾ.ನಲ್ಲಿ ಒಣಗಿಸಬೇಕು. ಒಣಗುವ ಅನುಪಾತ ೩೩ : ೧. ಬದನೆಕಾಯಿಗೆ ಕಬ್ಬಿಣದ ಸಂಪರ್ಕ ಬರದಂತೆ ಎಚ್ಚರಿಕೆ ವಹಿಸಬೇಕು.

ಎಲೆಕೋಸು : ಹೊರಭಾಗದ ಎಲೆಗಳನ್ನು ಕಿತ್ತು, ದಿಂಡನ್ನು ಬೇರ್ಪಡಿಸಿ, ೩/೧೬ ಅಂಗುಲ ದಪ್ಪದ ತುಂಡುಗಳಾಗಿ ಕತ್ತರಿಸಬೇಕು. ಈ ತುಂಡುಗಳನ್ನು ೫ – ೧೦ ನಿಮಿಷ ಉಗಿ ಅಥವಾ ೨-೩ ನಿಮಿಷ ಶೇಕಡಾ ೧.೦ ರ ಕುದಿಯುವ ಸೋಡಿಯಂ ಬೈಕಾರ್ಬೊನೇಟ್ (ಅಡಿಗೆಸೋಡ) ದ್ರಾವಣದಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಕ್ರುಯೆಸ್‌ರ ಹೇಳಿಕೆ ಪ್ರಕಾರ ಇದಕ್ಕೆ ಶೇಕಡಾ ೦.೫ ಸಲ್ಫೈಟ್ ಮತ್ತು ಬೈ ಸಲ್ಫೈಟ್‌ನ ಮಿಶ್ರ ದ್ರಾವಣವನ್ನು ಸೇರಿಸಿದರೆ ಒಣಗಿದ ಪದಾರ್ಥಕ್ಕೆ ಒಳ್ಳೆಯ ಬಣ್ಣ ಬರುತ್ತದೆ. ಈ ತುಂಡುಗಳನ್ನು ೧೨ – ೧೪ ಗಂಟೆಕಾಲ ೧೪೦ – ೧೫೦ ಫ್ಯಾ.ನಲ್ಲಿ ಒಣಗಿಸಬೇಕು. ಒಣಗುವ ಅನುಪಾತ ೧೮ : ೧.

ಗಜ್ಜರಿ : ಹಳದಿ ಬಣ್ಣದ ಗಜ್ಜರಿ ಒಣಗಿಸಲು ಉತ್ತಮವೆನಿಸಿದೆ. ಮೇಲ್ಭಾಗವನ್ನು ಕೆರೆದು, ತೊಟ್ಟು ಮತ್ತು ತುದಿಭಾಗವನ್ನು ಬೇರ್ಪಡಿಸಬೇಕು. ಅನಂತರ ಸುಮಾರು ೩/೧೬ ಅಂಗುಲ ದಪ್ಪದ ತುಂಡುಗಳಾಗಿ ಕತ್ತರಿಸಿ, ೨ – ೪ ನಿಮಿಷ ಶೇಕಡಾ ೨ – ೪ ಸಾಂದ್ರತೆಯ ಕುದಿಯುವ ಅಡಿಗೆ ಉಪ್ಪಿನ ದ್ರಾವಣದಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿ ಒಣಗಿಸಬೇಕು. ಒಣಗಿಸುವ ಉಷ್ಣತೆ ೧೮೫ – ೧೬೫ ಫ್ಯಾ. ಇರಬೇಕು. ಸಂಪೂರ್ಣ ಒಣಗಲು ೧೪ – ೧೬ ಗಂಟೆ ಬೇಕಾಗುವುದು. ಒಣಗುವ ಅನುಪಾತ ೧೮ : ೧.

ಹೂಕೋಸು : ಹೂವಿನ ಭಾಗವನ್ನು ಬೇರ್ಪಡಿಸಿ, ತುಂಡುಗಳಾಗಿ ಕತ್ತರಿಸಿ ಕುದಿಯುವ ನೀರಿನಲ್ಲಿ ೪ – ೫ ನಿಮಿಷ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಅನಂತರ ಸುಮಾರು ಒಂದು ಗಂಟೆಕಾಲ ಶೇಕಡಾ ೦.೫ ಗಂಧಕದ ಡೈ ಆಕ್ಸೈಡ್ ದ್ರಾವಣದಲ್ಲಿ ಮುಳುಗಿಸಿ ತೊಳೆಯಬೇಕು. ಒಣಗಿಸುವ ಉಷ್ಣತೆ ೧೪೦ – ೧೪೫ ಫ್ಯಾ. ಇದ್ದು ೧೦ – ೧೨ ಗಂಟೆ ಕಾಲ ಒಣಗಿಸಬೇಕು. ಒಣಗುವ ಅನುಪಾತ ೩೫ : ೧.

ಬೆಳ್ಳುಳ್ಳಿ : ಇವುಗಳ ಭಾಗಗಳನ್ನು ಕೈಯಿಂದ ಬಿಡಿಸಬೇಕು. ಒಣಗಿಸುವ ಉಷ್ಣತೆ ೧೩೫ – ೧೪೦ ಫ್ಯಾ. ಇದಕ್ಕೆ ಕ್ಷಿಪ್ರವಾಗಿ ಬೇಯಿಸುವ ಇತ್ಯಾದಿ ಯಾವುದೇ ಪೂರ್ವಭಾವಿ ಕ್ರಿಯೆಯ ಅಗತ್ಯವಿಲ್ಲ.

ನವಿಲ್ಕೋಸು (ನವಿಲುಗೆಡ್ಡೆ) (ನೂಲ್ಕೋಲ್) : ಸಿಪ್ಪೆ ತೆಗೆದ ನವಿಲ್ ಕೋಸನ್ನು ೩/೧೬ ಅಂಗುಲ ದಪ್ಪದ ತುಂಡುಗಳಾಗಿ ಕತ್ತರಿಸಬೇಕು. ಈ ತುಂಡುಗಳನ್ನು ಅಂತೆಯೇ ಅಥವಾ ೩೦ – ೪೦ ನಿಮಿಷ ಶೇಕಡಾ ೦.೨೫ ರ ಗಂಧಕದ ಡೈ ಆಕ್ಸೈಡ್‌ ದ್ರಾವಣದಲ್ಲಿ ಮುಳುಗಿಸಿ ಒಣಗಿಸಬೇಕು. ಒಣಗಿಸುವ ಉಷ್ಣತೆ ಮತ್ತು ಸಮಯ ಕ್ರಮ ಪ್ರಕಾರವಾಗಿ ೧೩೦ – ೧೪೦ ಫ್ಯಾ. ಮತ್ತು ೧೧ – ೧೩ ಗಂಟೆ ಒಣಗುವ ಅನುಪಾತ ೧೯ : ೧.

ಬೆಂಡೆ : ಬೆಂಡೆಕಾಯಿಯನ್ನು ಇಡಿಯಾಗಿ ಅಥವಾ ಉದ್ದವಾದ ಹೋಳು ರೂಪದಲ್ಲಿ ಕತ್ತರಿಸಿ ಒಣಗಿಸಬೇಕು. ಉರುಟಾದ ಬಿಲ್ಲೆಗಳಾಗಿ ಕತ್ತರಿಸುವುದೂ ಇದೆ. ಈ ಬಿಲ್ಲೆಗಳು ೦.೨೫ ಅಂಗುಲ ದಪ್ಪವಿರಬೇಕು. ಇವುಗಳನ್ನು ಕುದಿಯುವ ನೀರಿನಲ್ಲಿ ೪ – ೮ ನಿಮಿಷ ಅಥವಾ ಉಗಿಯಲ್ಲಿ ೨ – ೫ ನಿಮಿಷ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಅನಂತರ ತಣ್ಣೀರಿನಲ್ಲಿ ಅದ್ದಿ ಮೇಲ್ಭಾಗದಲ್ಲಿರುವ ಜಿಲೇಟಿನಂಥ ಲೇಪನವನ್ನು ತೆಗೆಯಬೇಕು. ಒಣಗಿಸುವಾಗ ಉಷ್ಣತೆ ೧೪೫ – ೧೫೫ ಫ್ಯಾ. ಇದ್ದು ೬ – ೮ ಗಂಟೆಕಾಲ ಒಣಗಿಸಬೇಕು. ಒಣಗುವ ಅನುಪಾತ ೧೨ : ೧.

ಈರುಳ್ಳಿ : ಹೊರಭಾಗದ ಸಿಪ್ಪೆ ತೆಗೆದ ಈರುಳ್ಳಿಯನ್ನು ೧/೧೦ ಅಂಗುಲ ದಪ್ಪದ ತುಂಡುಗಳಾಗಿ ಕತ್ತರಿಸಬೇಕು. ಶೇಕಡಾ ೫ ರ ಅಡುಗೆ ಉಪ್ಪಿನ ದ್ರಾವಣದಲ್ಲಿ ೧೦ ನಿಮಿಷ ಮುಳುಗಿಸಿಟ್ಟು ಅನಂತರ ಬಸಿಯಬೇಕು. ಒಣಗುವಾಗ ೧೪೫ – ೧೫೦ ಫ್ಯಾ. ಉಷ್ಣತೆಯಿದ್ದು, ಒಣಗಲು ೧೧ – ೧೩ ಗಂಟೆ ಬೇಕಾಗುತ್ತದೆ. ಉಷ್ಣತೆ ೧೩೫ ಫ್ಯಾ. ಗಿಂತ ಕಡಮೆ ಎಂದೂ ಇರಬಾರದು. ಒಣಗುವ ಅನುಪಾತ ೧೦ : ೧ ಒಣಗಿದ ಈರುಳ್ಳಿ ಪುಡಿಯನ್ನು ಅನೇಕ ವಿಧದಲ್ಲಿ ಉಪಯೋಗಿಸಬಹುದು.

ಬಟಾಣಿ : ಮೃದುವಾದ ಬಟಾಣಿ ಮಾತ್ರ ನಿರ್ಜಲಗೊಳಿಸಲು ಉಪಯುಕ್ತವಾಗಿರುತ್ತದೆ. ಕುದಿಯುವ ನೀರಿನಲ್ಲಿ ೧ – ೨ ನಿಮಿಷ ಕ್ಷಿಪ್ರವಾಗಿ ಸ್ವಲ್ಪ ಬೇಯಸಿ ಅನಂತರ ಉಷ್ಣತೆ ೧೪೫ ಫ್ಯಾ. ಗೆ ಹೆಚ್ಚಾಗದಂತೆ ಒಣಗಿಸಬೇಕು.

ಆಲೂಗೆಡ್ಡೆ : ರೋಗರಹಿತವಾದ, ದೊಡ್ಡ ಗಾತ್ರದ ಸಂಪೂರ್ಣವಾಗಿ ಬಲಿತ ಆಲೂಗೆಡ್ಡೆಯನ್ನು ಆಯ್ದುಕೊಳ್ಳಬೇಕು. ಮೇಲ್ಭಾಗದಲ್ಲಿ ಹೆಚ್ಚು ಕಣ್ಣುಗಳಿರಬಾರದು. ನೀರಿನಲ್ಲಿ ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಬೇಕು. ಇದಕ್ಕೆ ಚಾಕುವನ್ನು ಬಳಸಬಹುದು; ಸಿಪ್ಪೆ ತೆಗೆಯುವ ಯಂತ್ರವೂ ಇದೆ. ಸಿಪ್ಪೆಯನ್ನು ನೀರಿನಿಂದ ತೊಳೆದು ಬೇರ್ಪಡಿಸಬೇಕು ಮತ್ತು ಸಜ್ಜುಗೊಳಿಸಬೇಕು. ತಣ್ಣೀರಿನಲ್ಲಿಟ್ಟರೆ ಇವು ಕಂದುಬಣ್ಣಕ್ಕೆ ತಿರುಗುವುದಿಲ್ಲ. ಹೋಳುಗಳು ೩/೧೬ ರಿಂದ ೧/೪ ಅಂಗುಲ ದಪ್ಪವಿರಬಹುದು; ಕತ್ತರಿಸಲು ಒಂದು ಪ್ರತ್ಯೇಕ ಯಂತ್ರವಿರುತ್ತದೆ. ಹೋಳುಗಳನ್ನು ಯಾವತ್ತು ನೀರಿನಲ್ಲಿಯೇ ಇಡಬೇಕು. ಅದರಲ್ಲೂ ಹೆಚ್ಚು ಕಾಲ ನೀರಿನಲ್ಲಿ ಬಿಡಬೇಕೆಂದಿದ್ದರೆ ನೀರಿಗೆ ಶೇಕಡಾ ೦.೦೫ ಪೊಟ್ಯಾಸಿಯಂ ಮೆಟಾ ಬೈ ಸಲ್ಫೇಟನ್ನು ಬೆರೆಸಬೇಕು. ಒಣಗಿಸುವ ಮೊದಲು ತುಂಡುಗಳನ್ನು ಕುದಿಯುವ ನೀರಿನಲ್ಲಿ ೩ – ೪ ನಿಮಿಷ ಕಾಲ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ತಂತಿಯ ತಟ್ಟೆಗಳಲ್ಲಿ ಪ್ರತಿ ಚದರ ಅಡಿಗೆ ೧ – ೧.೫ ಪೌಂಡಿನಂತೆ ಇದನ್ನು ಹರವಬಹುದು. ಈ ತಟ್ಟೆಗಳನ್ನು ಕೈಗಾಡಿಯಲ್ಲಿಟ್ಟು ನಿರ್ಜಲೀಕರಣ ಯಂತ್ರದೊಳಗಿಡಬೇಕು. ಒಳಭಾಗದ ಉಷ್ಣತೆಯ ಅಂತರ ೧೪೦ – ೧೫೦ ಫ್ಯಾ. (ಅಂದರೆ ತಣ್ಣಗಿನ ಭಾಗದಲ್ಲಿ ೧೪೦ ಮತ್ತು ಬಿಸಿ ಭಾಗದಲ್ಲಿ ೧೫೦ ಫ್ಯಾ.) ಇರಬೇಕು. ಒಣಗಲು ೭ – ೮ ಗಂಟೆ ಬೇಕಾಗುತ್ತದೆ. ತಯಾರು ಮಾಡದಿದ್ದ ಆಲೂಗಡ್ಡೆಯಾದರೆ ಒಣಗುವ ಅನುಪಾತ ೭ : ೧ ಒಣಗಿಸಿದ ಆಲೂಗೆಡ್ಡೆಯ ತೂಕದ ೪ – ೫ ಪಾಲು ನೀರು ಸೇರಿಸಿ ಖಾದ್ಯ ಪದಾರ್ಥ ತಯಾರಿಸಬಹುದು. ಇವುಗಳನ್ನು ಸಾರಜನಕದಂಥ ಜಡ ಅನಿಲದೊಡನೆ ಧಾರಕಗಳಲ್ಲಿ ತುಂಬಿದರೆ ಒಳ್ಳೆಯದು.

ಕುಂಬಳ : ನಿರ್ಜಲೀಕರಣಕ್ಕೆ ಉಪಯೋಗಿಸುವ ಕುಂಬಳಕಾಯಿ ಚೆನ್ನಾಗಿ ಬಲಿತಿರಬೇಕು. ಇದನ್ನು ಮೊದಲು ತುಂಡು ಮಾಡಿಕೊಂಡರೆ ಸಿಪ್ಪೆ ತೆಗೆಯಲು ಅನುಕೂಲವಾಗುತ್ತದೆ. ಅನಂತರ ಮೂರನೇ ಒಂದು ಅಂಗುಲ ದಪ್ಪದ ಹೋಳುಗಳಾಗಿ ಕತ್ತರಿಸಿ ಶೇಕಡಾ ೨ ರ ಕುದಿಯುವ ಅಡುಗೆ ಉಪ್ಪಿನ ದ್ರಾವಣದಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಅನಂತರ ಇವುಗಳನ್ನು ೯ – ೧೧ ಗಂಟೆಕಾಲ ೧೫೦ – ೧೬೦ ಫ್ಯಾ. ಉಷ್ಣತೆಯಲ್ಲಿ ಒಣಗಿಸಬೇಕು. ಒಣಗುವ ಅನುಪಾತ ೧೯ : ೧.

ಸ್ಪಿನಾಚ್ : ಸ್ಪಿನಾಚ್ ಎಲೆಗಳನ್ನು ಚೆನ್ನಾಗಿ ತೊಳೆದು ಅವು ಇದ್ದಂತೆಯೇ ಹಸಿಯಾಗಿ ಇಲ್ಲವೇ ೪ – ೫ ನಿಮಿಷ ಉಗಿಯಿಂದ ಬೇಯಿಸಿ ೧೪೫ – ೧೫೫ ಫ್ಯಾ. ಉಷ್ಣತೆಯಲ್ಲಿ ೭-೮ ಗಂಟೆ ಕಾಲ ಒಣಗಿಸಬೇಕು. ಒಣಗುವ ಅನುಪಾತ ೨೨ : ೧.

ಟೊಮೆಟೊ : ಟೊಮೆಟೊಗಳನ್ನು ಕುದಿಯುವ ನೀರಿನಲ್ಲಿ ೩೦ – ೬೦ ಸೆಕೆಂಡು ಸ್ವಲ್ಪ ಮೃದುವಾಗುವಂತೆ ಮಾಡಿ ಸಿಪ್ಪೆ ತೆಗೆಯಬೇಕು ಮತ್ತು ೧/೪ ಮತ್ತು ೩/೮ ಅಂಗುಲ ದಪ್ಪವಿರುವಂತೆ ಕತ್ತರಿಸಬೇಕು. ಈ ತುಂಡುಗಳನ್ನು ೧೪೦ – ೧೫೦ ಫ್ಯಾ. ಉಷ್ಣತೆಯಲ್ಲಿ ೯ – ೧೦ ಗಂಟೆಗಳ ಕಾಲ ಒಣಗಿಸಬೇಕು. ಒಣಗುವ ಅನುಪಾತ ೨೭ : ೧, ಟೊಮೆಟೊ ಪುಡಿ ತಯಾರಿಸುವಾಗ ಸಿಪ್ಪೆ ತೆಗೆಯಬೇಕಾಗಿಲ್ಲ.

ಟರ್ನಿಪ್‌ : ಟರ್ನಿಪಿನ ಸಿಪ್ಪೆ ತೆಗೆದು ೩/೧೬ ಅಂಗುಲ ದಪ್ಪದ ತುಂಡುಗಳಾಗಿ ಕತ್ತರಿಸಬೇಕು ಮತ್ತು ಶೇಕಡಾ ೦.೫ ಗಂಧಕದ ಡೈ ಆಕ್ಸೈಡ್ ದ್ರಾವಣದಲ್ಲಿ ೧ – ೨ ಗಂಟೆ ಕಾಲ ಮುಳುಗಿಸಬೇಕು. ಬಳಿಕ ಕುದಿಯುವ ನೀರಿನಲ್ಲಿ ೨-೪ ನಿಮಿಷ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕು. ಅನಂತರ ೧೨೫ – ೧೩೫ ಫ್ಯಾ.ನಲ್ಲಿ ೧೧ – ೧೩ ಗಂಟೆ ಕಾಲ ಒಣಗಿಸಬೇಕು. ಒಣಗುವ ಅನುಪಾತ ೨೮ : ೧.

ಪ್ಯಾಕ್ಮತ್ತು ದಾಸ್ತಾನು ಮಾಡುವಿಕೆ

ಹಣ್ಣು ಮತ್ತು ತರಕಾರಿಗಳನ್ನು ಕ್ರಮ ಪ್ರಕಾರ ಒಣಗಿಸಿ ದಾಸ್ತಾನು ಮಾಡಿದರೂ ಅವುಗಳಿಗೆ ಕೀಟಗಳ ಬಾಧೆ ತಪ್ಪಿದ್ದಲ್ಲ. ಕೀಟಗಳು ಪದಾರ್ಥವನ್ನು ತಿಂದು ಹಾಳು ಮಾಡುತ್ತವೆ. ಇದೂ ಅಲ್ಲದೆ ಅದರಲ್ಲಿ ಅವು ಬಿಟ್ಟು ಹೋದ ಅವಶೇಷಗಳಿಂದ ಪದಾರ್ಥದ ಸ್ವರೂಪ ಕೆಡುತ್ತದೆ. ಈ ಕೀಟಗಳ ಹಾವಳಿಯನ್ನು ತಪ್ಪಿಸಲು ತುಂಬಿಡುವ ಕೋಣೆ ಮತ್ತು ದಾಸ್ತಾನಿನ ಮಳಿಗೆಗಳನ್ನು ಕಟ್ಟುವಾಗಲೇ ಅತ್ಯಂತ ಜಾಗರೂಕತೆವಹಿಸಬೇಕು. ಜೀರುಂಡೆ ಮತ್ತು ಪತಂಗ ಜಾತಿಯ ಹುಳುಗಳು ಬಹು ಉಪದ್ರವಕಾರಕ ಕೀಟಗಳು. ಇವುಗಳ ಬಾಧೆಯನ್ನು ತಡೆಯಲು ಪರಿಹಾರ ಕಾರ್ಯಕ್ರಮ ಕೈಕೊಳ್ಳುವುದು ಕಷ್ಟಕರವಾದ ಕೆಲಸ. ಇದಕ್ಕಿಂತ ಪದಾರ್ಥಕ್ಕೆ ಇವು ಸೇರದಂತೆ ಮುಂಜಾಗ್ರತೆ ವಹಿಸುವುದೇ ಸುಲಭ ವಿಧಾನ. ಈ ಕೀಟಗಳ ಪರಿಹಾರ ಕಾರ್ಯಕ್ರಮಕ್ಕೆ ಎರಡು ಮುಖ್ಯ ವಿಧಾನಗಳಿವೆ : ೧) ಉಷ್ಣೋಪಚಾರ ಮತ್ತು ೨) ಧೂಪನ ಕ್ರಿಯೆ.

ಉಷ್ಣೋಪಚಾರ : ಒಣದ್ರಾಕ್ಷಿ, ಅಂಜೂರ, ಪೀಚ್ ಮುಂತಾದವುಗಳಲ್ಲಿರುವ ಕೀಟಗಳನ್ನು ನಾಶಪಡಿಸಲು ಕುಡಿಯುವ ನೀರು, ಇಲ್ಲವೇ ಅಡುಗೆ ಉಪ್ಪಿನ ಅಥವಾ ಸೋಡಿಯಂ ಬೈ ಕಾರ್ಬೊನೇಟ್ ದುರ್ಬಲ ದ್ರವದಲ್ಲಿ ಮುಳುಗಿಸಬೇಕು. ನಿರ್ಜಲೀಕರಣ ಕ್ರಿಯೆಯಲ್ಲಿ ಉಷ್ಣತೆ ೧೩೦ – ೧೫೦ ಫ್ಯಾ. ಇರಬೇಕು. ಒಣಗಿದ ತರಕಾರಿಗಳನ್ನು ಪೂರ್ವಭಾವಿಯಾಗಿ ಯಾವುದರಲ್ಲೂ ಮುಳುಗಿಸದೆ ಅಂತೆಯೇ ಬಿಸಿ ಮಾಡಬಹುದು. ಉಷ್ಣತೆಯಿಂದ ಕೀಟನಾಶಗೊಳಿಸಿದ ಪದಾರ್ಥಕ್ಕೆ ಪುನಃ ಕೀಟ ಬಾರದಂತೆ ಆದಷ್ಟು ಬೇಗನೆ ಕೀಟರಹಿತ ಧಾರಕಗಳಲ್ಲಿ ತುಂಬಬೇಕು.

ಧೂಪನಕ್ರಿಯೆ : ಮಾರುಕಟ್ಟೆಯಲ್ಲಿ ಅನೇಕ ವಿಧದ ಧೂಪಕಗಳು ದೊರೆಯುತ್ತವೆ. ಆದರೆ ಒಣಗಿದ ಹಣ್ಣು ಮತ್ತು ತರಕಾರಿಗಳಿಗೆ ಇವುಗಳಿಂದ ಅಷ್ಟೇನೂ ಉಪಯೋಗವಾಗುವುದಿಲ್ಲ. ಧೂಪನದಿಂದ ಕೀಟಗಳು ಮಾತ್ರವಲ್ಲ. ಅವುಗಳ ಮೊಟ್ಟೆಗಳೂ ಸಹ ನಾಶವಾಗುತ್ತವೆ. ಧೂಪನಕ್ರಿಯೆಯಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಇವುಗಳಲ್ಲಿ ಕೆಲವಕ್ಕೆ (ಇಂಗಾಲದ ಡೈ ಆಕ್ಸೈಡ್ ಮತ್ತು ಹೆಡ್ರೋಸೈನಿಕ್ ಆಮ್ಲದ ಅನಿಲ) ಪಕ್ಕನೆ ಬೆಂಕಿ ಹತ್ತಿಕೊಳ್ಳುತ್ತದೆ ಇಲ್ಲವೇ ಇವು ವಿಷಕಾರಿಯಾಗಲೂಬಹುದು. ಹೈಡ್ರೋಸೈನಿಕ್ ಆಮ್ಲವನ್ನು ಕೆಲವು ವೇಳೆ ಹಣ್ಣುಗಳು ಹೀರಿಕೊಳ್ಳಬಹುದು. ಇದರಿಂದ ಪದಾರ್ಥ ವಿಷಪೂರಿತವಾಗುತ್ತದೆ. ಆದರೆ ಈ ಎರಡೂ ಧೂಪಕಗಳು ಈಗ ಹೆಚ್ಚಿನ ಉಪಯೋಗದಲ್ಲಿಲ್ಲ. ಈಚೆಗೆ ಮಿಥೈಲ್ ಬ್ರೊಮೈಡ್ ಹೆಚ್ಚಿನ ಪರಿಣಾಮಕಾರಿಯಾದುದರಿಂದ ಬಹು ಜನಪ್ರಿಯವಾಗಿದೆ. ಈ ಅನಿಲವು ಗಾಳಿಗಿಂತ ಭಾರವಾಗಿರುತ್ತದೆ. ಆದುದರಿಂದ ಇದನ್ನು ದಾಸ್ತಾನು ಮಾಡಿದ ಪದಾರ್ಥದ ಮೇಲ್ಭಾಗದಿಂದ ಹಾಯಿಸಬಹುದು; ಇದನ್ನು ಉಪಯೋಗಿಸಬೇಕಾದ ಪ್ರಮಾಣದ ಬಗ್ಗೆ ಸರಬರಾಜು ಮಾಡುವವರೇ ತಿಳಿಸುತ್ತಾರೆ. ಇದಕ್ಕೆ ಸ್ಫೋಟಕ ಗುಣವಿರುವುದಿಲ್ಲ. ಆದರೆ ಮನುಷ್ಯರಿಗೂ ಇದು ನಂಜಾಗಿ ಪರಿಣಮಿಸುತ್ತದೆ. ಧೂಪನಕ್ಕೆ ಎಥಿಲಿನ್ ಡೈ ಕ್ಲೋರೈಡ್ ಮತ್ತು ಇಂಗಾಲದ ಟೆಟ್ರಾಕ್ಲೋರೈಡ್, ಎಥಿಲಿನ್ ಆಕ್ಸೈಡ್ ಮತ್ತು ಡೈ ಕ್ಲೋರೈಡ್‌ನ ಮಿಶ್ರಣಗಳನ್ನು ಸಹ ಉಪಯೋಗಿಸಬಹುದು. ಎಥಿಲಿನ್ ಆಕ್ಸೈಡ್ ಅತ್ಯಂತ ಸ್ಫೋಟಕಾರಿಯಾಗಿದ್ದು ಇದಕ್ಕೆ ಬೇಗನೆ ಬೆಂಕಿಹತ್ತಿಕೊಳ್ಳುತ್ತದೆ. ಆದರೂ ಆಹಾರ ಪದಾರ್ಥಗಳಿಗೆ ಇದು ಒಂದು ಆದರ್ಶ ಧೂಪಕವಾಗಿರುತ್ತದೆ. ಇದು ನಳಿಕೆಗಳಲ್ಲಿ ದೊರೆಯುತ್ತದೆ; ಗಾಳಿ ಸಂಚಾರವಿಲ್ಲದಿರುವ ದಾಸ್ತಾನಿನ ಮಳಿಗೆಗಳಲ್ಲಿ ಹಾಕಿದಾಗ ಇದು ಆವಿಯಾಗುತ್ತದೆ. ಕ್ರುಯೆಸ್‌ರ ಹೇಳಿಕೆ ಪ್ರಕಾರ ವಾಲ್‌ನಟ್‌ ಮತ್ತು ಬಾದಾಮಿಯಂಥ ಪದಾರ್ಥಗಳಿಗೆ ಧೂಪನಕ್ರಿಯೆಯನ್ನು ನಿರ್ವಾತದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮಾಡಬಹುದು.

ನಿರ್ಜಲೀಕರಣದ ಕೈಗಾರಿಕೆ ಫಲಪ್ರದವಾಗಬೇಕಾದರೆ ಪದಾರ್ಥಗಳನ್ನು ಸರಿಯಾಗಿ ಒಣಗಿಸಿದ ಮೇಲೆ ತುಂಬಿಡುವುದೂ ಒಂದು ಮಹತ್ವದ ಕಾರ್ಯ. ಒಣಗಿಸಿದ ಹಣ್ಣು ಮತ್ತು ತರಕಾರಿಗಳು ಸಾಕಷ್ಟು ಶುಷ್ಕವಾಗಿರಬೇಕು. ತೇವವನ್ನು ತಡೆಯಬಲ್ಲ ತವರದ ಧಾರಕಗಳಲ್ಲಿ ಇದನ್ನು ತುಂಬಬೇಕು. ನೀರಿನ ಅಂಶ ಹೆಚ್ಚಿದ್ದರೆ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು, ಧಾರಕಗಳಲ್ಲಿರುವ ಪದಾರ್ಥಗಳಿಗೆ ಇದರಿಂದ ಬೂಷ್ಟು ಬರುವ ಸಂಭವವೂ ಇರುತ್ತದೆ. ಮರದ ಮತ್ತು ರಟ್ಟಿನ ಪೆಟ್ಟಿಗೆ ಸಾಮಾನ್ಯವಾಗಿ ನೀರಿನ ಕಣ ಮತ್ತು ಕೀಟಗಳು ಒಳಸೇರಲು ಅವಕಾಶ ಮಾಡಿಕೊಡುತ್ತದೆ. ಆದರೆ ಮೇಣದ ಕಾಗದ ಒಳಪದರಾಗಿದ್ದರೆ, ಧಾರಕಗಳನ್ನು ಸರಿಯಾಗಿ ಮುಚ್ಚಿ ನೀರಿನ ಕಣ ಮತ್ತು ಕೀಟಗಳು ಒಳಸೇರದಂತೆ ಮಾಡಬಹುದು. ಧಾರಕಗಳಲ್ಲಿ ಸಾರಜನಕದಂಥ ಜಡಅನಿಲಗಳನ್ನು ತುಂಬಿ ಒಣಗಿದ ತರಕಾರಿಗಳ ಗುಣಮಟ್ಟವನ್ನು ದಾಸ್ತಾನಿನಲ್ಲಿ ಕಾಯ್ದುಕೊಳ್ಳಬಹುದು.