ಆಹಾರ ಪದಾರ್ಥಗಳನ್ನು ಒಣಗಿಸಿ ಸಂರಕ್ಷಿಸುವುದು ಹೊಸದೇನಲ್ಲ. ಇದು ಪ್ರಾಚೀನ ಕಾಲದಿಂದಲೂ ಪ್ರಚಾರದಲ್ಲಿದ್ದ ಒಂದು ವಿಧಾನವೆನ್ನಬಹುದು. ಪ್ರಪಂಚದ ವಿವಿಧ ಭಾಗಗಳಲ್ಲಿ ಅಂದರೆ ಏಷ್ಯಾ ಮೈನರ್, ಗ್ರೀಸ್, ಸ್ಪೇನ್ ಮತ್ತು ಇತರ ಮೆಡಿಟರೇನಿಯನ್ ಪ್ರದೇಶ, ಅರೇಬಿಯಾ ಮತ್ತು ಆಫ್‌ಘಾನಿಸ್ತಾನಗಳಲ್ಲಿ ಹಣ್ಣುಗಳನ್ನು ಅಧಿಕ ಪ್ರಮಾಣದಲ್ಲಿ ಸೂರ್ಯನ ಶಾಖದಿಂದ ಒಣಗಿಸುತ್ತಾರೆ. ಆಧುನಿಕ ವಿಧಾನದಿಂದ ನಿರ್ಜಲಗೊಳಿಸುವ ಕ್ರಿಯೆ ಈಗ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇದರಿಂದ ಹಣ್ಣು ಮತ್ತು ತರಕಾರಿಗಳ ಉಷ್ಣತೆ ಮತ್ತು ತೇವವನ್ನು ಹಿಡಿತದಲ್ಲಿಟ್ಟು ಒಣಗಿಸಲು ಸಾಧ್ಯವಾಗುತ್ತದೆ. ಎರಡನೆ ಜಾಗತಿಕ ಯುದ್ಧ ಸಮಯದಲ್ಲಿ ಆಹಾರವನ್ನು ನಿರ್ಜಲಗೊಳಿಸುವ ಉದ್ಯಮಕ್ಕೆ ಹೆಚ್ಚು ಉತ್ತೇಜನ ದೊರೆಯಿತೆನ್ನಬಹುದು. ಸಾಂದ್ರೀಕರಿಸಲ್ಪಟ್ಟ ಸ್ಥಿತಿಯಲ್ಲಿರುವ ಈ ಆಹಾರಕ್ಕೆ ತಗಲುವ ಕಡಿಮೆ ಖರ್ಚು ಮತ್ತು ಸೌಕರ್ಯ ಅಲ್ಲದೆ ಸಾಗಾಣಿಕೆಯಲ್ಲಿರುವ ಸೌಲಭ್ಯತೆಗಳಿಂದಾಗಿ ಇದು ಸೈನಿಕರಲ್ಲಿ ಬಹುಜನಪ್ರಿಯವಾಗಿದೆ.

ಸೂರ್ಯನ ಶಾಖದಿಂದ ಒಣಗಿಸುವಿಕೆ

ಸೂರ್ಯನ ಶಾಖದಲ್ಲಿ ಒಣಗಿಸಲು ತೀವ್ರತರವಾದ ಬಿಸಿಲಿನ ಶಾಖ ಅಗತ್ಯ. ಒಣಗಿಸುವಾಗ ಮಳೆ ಬರಬಾರದು. ಈ ರೀತಿಯ ಹವಾಗುಣವುಳ್ಳ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಸೂರ್ಯನ ಶಾಖದಿಂದ ಒಣಗಿಸುವ ವಿಧಾನವನ್ನು ಅನುಸರಿಸಬಹುದು. ಒಣಗಿಸುವ ತಟ್ಟೆ, ಚಾಕು, ಕ್ಷಾರ ದ್ರಾವಣ ಇವೇ ಇದಕ್ಕೆ ಬೇಕಾದ ಮುಖ್ಯ ಸಲಕರಣೆಗಳು, ಒಣಗಿಸುವ ಜಾಗದಲ್ಲಿ ಧೂಳು, ನೊಣ, ಜೇನು ಹುಳು ಇತ್ಯಾದಿಗಳಿರಬಾರದು.

ಒಣಗಿಸಬೇಕಾದ ಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು ಚಪ್ಪಟೆ ತಳವಿರುವ ಮರದ ತಟ್ಟೆಯಲ್ಲಿಡಬೇಕು. ಅನಂತರ ಅವುಗಳ ಬಣ್ಣ ಬದಲಾಗದಂತೆ ಮತ್ತು ಸೂಕ್ಷ್ಮ ಜೀವಿಗಳಿಂದ ಕೆಡದಂತೆ ಗಂಧಕದ ಹೊಗೆಯಿಂದ ಉಪಚರಿಸಬೇಕು. ಗಂಧಕವನ್ನು ಒಂದು ಸಣ್ಣ ಕೋಣೆಯ ಒಳಗೆ ಪಾತ್ರೆಯಲ್ಲಿಟ್ಟು ಸುಡಬೇಕು. ಬಳಿಕ ಹಣ್ಣು ತುಂಬಿದ ತಟ್ಟೆಗಳನ್ನು ಈ ಕೋಣೆಯ ಒಳಗೆ ಜೋಡಿಸಬೇಕು. ಚಪ್ಪಟೆ ತಳವಿರುವ ಈ ತಟ್ಟೆಯ ಗಾತ್ರ ೩’ x ೨’ ಇರಬೇಕು ಮತ್ತು ಅಂಚು ೨ ಅಂಗುಲ ಎತ್ತರಕ್ಕೆ ಬಾಗಿರಬೇಕು. ದ್ರಾಕ್ಷಿ, ಪೀಚ್ ಮೊದಲಾದ ದಪ್ಪ ಸಿಪ್ಪೆಯ ಹಣ್ಣುಗಳ ಸಿಪ್ಪೆಯನ್ನು ಕ್ಷಾರದ್ರಾವಣದಲ್ಲಿ ಉಪಚರಿಸಿ ಚೆಕ್ ಮಾಡಬೇಕು. ಇದರಿಂದ ಸುಲಭವಾಗಿ ಸಿಪ್ಪೆ ತೆಗೆಯಬಹುದಲ್ಲದೆ ಹಣ್ಣು ಬಹು ಬೇಗನೆ ಒಣಗಲೂ ಸಹಾಯವಾಗುತ್ತದೆ. ಗಂಧಕದಿಂದ ಉಪಚರಿಸಿದ ಮೇಲೆ (ಪ್ರತಿ ಟನ್ ಹಣ್ಣಿಗೆ ೪ ರಿಂದ ೮ ಪೌಂಡ್ ಗಂಧಕ ಬೇಕಾಗುತ್ತದೆ) ತಟ್ಟೆಗಳನ್ನು ಸೂರ್ಯನ ಶಾಖದಲ್ಲಿಡಬೇಕು. ಹಣ್ಣುಗಳು ಸರಿಯಾಗಿ ಒಣಗುವವರೆಗೆ ಆಗಾಗ್ಗೆ ಕೈಯಾಡಿಸುತ್ತಿರಬೇಕು. ಒಣಗಿದ ಹಣ್ಣುಗಳಲ್ಲಿರುವ ತೇವವನ್ನು ಸರಿಯಾಗಿಸಲು ಅವುಗಳನ್ನು ಪೆಟ್ಟಿಗೆ ಇಲ್ಲವೇ ತೊಟ್ಟಿಗಳಲ್ಲಿ ಜೋಡಿಸಿಡಬೇಕು. ಈ ವಿಧಾನಕ್ಕೆ ‘ಬೆವರಿಸುವುದು’ ಎನ್ನುತ್ತಾರೆ. ಅನಂತರ ಹಣ್ಣುಗಳನ್ನು ಪೆಟ್ಟಿಗೆಗಳಲ್ಲಿ ತುಂಬಿ  ಕೋಣೆಯಲ್ಲಿ ದಾಸ್ತಾನಿಡಬೇಕು. ಹೆಗ್ಗಣ ಮತ್ತು ಕ್ರಿಮಿಕೀಟಗಳು ಬರದಂತೆ ಮೊದಲೇ ಕಾರ್ಬನ್ ಡೈ ಸಲ್ಫೈಡ್‌ನಿಂದ ಧೂಪಿಸಬೇಕು.

ಕೆಲವು ಪ್ರಮುಖ ಹಣ್ಣುಗಳನ್ನು ಸೂರ್ಯನ ಶಾಖದಿಂದ ಒಣಗಿಸುವ ವಿಧಾನವನ್ನು ಈ ಕೆಳಗೆ ವಿವರಿಸಿದೆ:

ಏಪ್ರಿಕಾಟ್ : ಚಿಕ್ಕದಾದ ಬಿಳಿ ಏಪ್ರಿಕಾಟ್ ಅದರಲ್ಲೂ ವಿಶೇಷವಾಗಿ ಶತಾರ್ ಪಾರ ಜಾತಿಯ ಹಣ್ಣುಗಳನ್ನು ಆಫ್‌ಘಾನಿಸ್ತಾನದಲ್ಲಿ ಇಡಿಯಾಗಿಯೇ ಒಣಗಿಸುತ್ತಾರೆ. ಇದನ್ನು ನಮ್ಮ ದೇಶಕ್ಕೆ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಏಪ್ರಿಕಾಟ್ ಹಣ್ಣನ್ನು ಮರದಲ್ಲಿಯೇ ಸಂಪೂರ್ಣ ಮಾಗಲು ಬಿಡಬೇಕು. ಇವುಗಳನ್ನು ಕಿತ್ತು ಹೋಳುಮಾಡಿ, ತಗ್ಗು ಭಾಗವನ್ನು ಕೊರೆದು ತೆಗೆಯಬೇಕು. ಒಳಕ್ಕೆ ಬಾಗಿದ ನಿಮ್ನ ಭಾಗ ಮೇಲಕ್ಕೆ ಇರುವಂತೆ ತಟ್ಟೆಯಲ್ಲಿಡಬೇಕು. ಅನಂತರ ಸಾಧಾರಣ ೩ ಗಂಟೆ ಕಾಲ ಗಂಧಕದ ಹೊಗೆಯಿಂದ ಉಪಚರಿಸಿ ಒಣಗಿಸಬೇಕು. ಒಣಗಿದ ಹಣ್ಣುಗಳನ್ನು ತುಂಬಲು ಚೀಲಗಳನ್ನು ಉಪಯೋಗಿಸಬಹುದು. ಫ್ರಾನ್ಸ್, ಏಷ್ಯಾ ಮೈನರ್ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಏಪ್ರಿಕಾಟನ್ನು ಹೆಚ್ಚು ಪ್ರಮಾಣದಲ್ಲಿ ಒಣಗಿಸುತ್ತಾರೆ. ಇದರಲ್ಲಿ ಟೆಲ್ಟನ್ ಮತ್ತು ಮೂರ್ ಪಾರ್ಕ್‌ಗಳು ಒಣಗಿಸಲು ಉಪಯೋಗಿಸುವ ಮುಖ್ಯ ತಳಿಗಳಾಗಿವೆ.

ಬಾಳೆಯಹಣ್ಣು : ಮಾಗಿದ ಒಣ ಬಾಳೆಯ ಹಣ್ಣಿಗೆ ಬನಾನಾ ಫಿಗ್ ಎನ್ನುತ್ತಾರೆ. ಸಿಪ್ಪೆ ತೆಗೆದ ಬಾಳೆಯ ಹಣ್ಣನ್ನು ಉದ್ದಕ್ಕೆ ಹೋಳುಮಾಡಿ, ಗಂಧಕದ ಹೊಗೆಯಿಂದ ಉಪಚರಿಸಬೇಕು. ಒಣಗಿಸಲು ಸೂರ್ಯನ ಶಾಖ ಅಥವಾ ನಿರ್ಜಲಗೊಳಿಸುವ ಯಂತ್ರಗಳನ್ನು ಉಪಯೋಗಿಸಬಹುದು. ಬಾಳೆಯ ಕಾಯಿಯಾದರೆ ಕುದಿಯುವ ನೀರಿನಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿ ಸಿಪ್ಪೆ ತೆಗೆಯಬೇಕು. ಅನಂತರ ಬಿಲ್ಲೆಗಳಾಗಿ ಕತ್ತರಿಸಿ ಒಣಗಿಸಬೇಕು. ಒಣಗಿಸಿದ ಹೋಳುಗಳು ಬೇಯಿಸಲು ಅಥವಾ ಹುರಿಯಲು ಉತ್ತಮವಾಗಿರುತ್ತವೆ. ಇವುಗಳಿಂದ ಬಾಳೆಕಾಯಿಯ ಪುಡಿಯನ್ನು ತಯಾರಿಸಬಹುದು. ಇದನ್ನು ಆಹಾರ ಧಾನ್ಯದ ಜೊತೆ ಸೇರಿಸಿ ಉಪಯೋಗಿಸುವುದೂ ಇದೆ. ಜೈನ್, ದಾಸ್ ಮತ್ತು ಸಿದ್ಧಪ್ಪ ಇವರು ಬಾಳೆಯ ಹಣ್ಣು ಮತ್ತು ಇತರ ಹಣ್ಣುಗಳಿಂದ ಟಾಫಿ ತಯಾರಿಸುವ ವಿಧಾನದ ಬಗ್ಗೆ ಒಂದು ಸ್ವಾಮ್ಯವನ್ನು ಪಡೆದಿದ್ದಾರೆ.

ಖರ್ಜೂರ : ಟ್ಯುನೀಸಿಯಾ, ಈಜಿಪ್ತ್, ಆಲ್ಜೀರಿಯಾ ಮತ್ತು ಅರೇಬಿಯಾ ದೇಶಗಳು ಖರ್ಜೂರ ಬೆಳೆಯುವುದರಲ್ಲಿ ಪ್ರಮುಖವಾದ ದೇಶಗಳು. ಡೆಗ್‌ಲೆಟ್ – ನೂರ್, ಖರ್ದಾವಿ ಮತ್ತು ಹಲಾವಿಗಳು ಮುಖ್ಯ ಖರ್ಜೂರ ತಳಿಗಳಾಗಿವೆ. ಗಟ್ಟಿ ಒಣಗಿಸಿದ ಖರ್ಜೂರದಲ್ಲಿ ಸುಕ್ರೋಸ್ ಸಕ್ಕರೆ ಹೆಚ್ಚಿರುತ್ತದೆ. ಆದರೆ ಮೃದುವಾಗಿ ಒಣಗಿದ ಖರ್ಜೂರದಲ್ಲಿ ಇನ್‌ವರ್ಟ್‌ ಸಕ್ಕರೆ ಅಧಿಕವಾಗಿರುತ್ತದೆ. ನಮ್ಮ ದೇಶದಲ್ಲಿ ಖರ್ಜೂರವನ್ನು ‘ಡಂಗ್’ ಹಂತದಲ್ಲಿರುವಾಗ ಅಂದರೆ ಹಣ್ಣಿನ ತುದಿಯು ಭಾಗಶಃ ಪಾರದರ್ಶಕ ಕಂದು ಬಣ್ಣವಿದ್ದಾಗ ಕೀಳುತ್ತಾರೆ. ಅವುಗಳನ್ನು ಚಾಪೆಯ ಮೇಲೆ ೫ – ೮ ದಿನಗಳತನಕ ಹರವಿ ಹದಬರಿಸಬೇಕು. ಇದನ್ನು ಅನೇಕ ಸಲ ಕಟಾವು ಮಾಡಬೇಕಾಗುತ್ತದೆ. ಆದ್ದರಿಂದ ಇದಕ್ಕೆ ತಗಲುವ ಖರ್ಚೂ ಹೆಚ್ಚು. ಲಾಲ್‌ಸಿಂಗ್ ಮತ್ತು ಬಾಲ್‌ಸಿಂಗ್ ಉತ್ತಮ ರೀತಿ ಒಣಗಿದ ಖರ್ಜೂರವನ್ನು ಪಡೆಯಲು ಒಂದು ವಿಧಾನವನ್ನು ಕಂಡುಹಿಡಿದಿದ್ದಾರೆ; ಇದರ ಪ್ರಕಾರ ಖರ್ಜೂರವನ್ನು ಅದರ ‘ಡಂಗ್’ ಹಂತಕ್ಕೆ ತಲುಪುವ ೩ – ೪ ದಿನ ಮೊದಲೇ ಕಟಾವು ಮಾಡಬೇಕು. ಶೇಕಡಾ ೦.೫ ರಿಂದ ೨.೫ ರ ಕಾಸ್ಟಿಕ್ ಸೋಡಾ ದ್ರಾವಣದಲ್ಲಿ ೩೦ ಸೆಕೆಂಡಿನಿಂದ ೨ ನಿಮಿಷ ಮುಳುಗಿಸಿ ಅನಂತರ ಒಣಗಿಸಬೇಕು. ಈ ವಿಧಾನದಿಂದ ಗಾಳಿ, ಮಳೆ ಇಲ್ಲವೇ ಧೂಳಿನಿಂದ ಸಂಭವಿಸಬಹುದಾದ ನಷ್ಟ ಕಡಿಮೆಯಾಗುತ್ತದೆ.

ಅಂಜೂರ : ಸ್ಮಿರ್ನಾ, ಅಂಜೂರದ ಪ್ರಮುಖ ಕೇಂದ್ರವಾಗಿದೆ. ಒಣಗಿಸಲು ಹೆಚ್ಚಾಗಿ ದೊಡ್ಡ ಗಾತ್ರದ ಬಿಳಿಯ ಸ್ಮಿರ್ನಾ ಅಂಜೂರವನ್ನು ಉಪಯೋಗಿಸುತ್ತಾರೆ. ನಸುಗೆಂಪು ಬಣ್ಣದ ತಿರುಳಿರುವ ‘ಅಡ್ರಿಯಾಟಿಕ್’ ಅಂಜೂರವನ್ನು ಒಣಗಿಸುವುದೂ ಉಂಟು. ಅಂಜೂರವನ್ನು ಮರದಲ್ಲಿಯೇ ಹಣ್ಣಾಗಲು ಬಿಡಬೇಕು. ಮರದಿಂದ ಬಿದ್ದ ಹಣ್ಣುಗಳನ್ನು ಶೇಖರಿಸಿ, ಅಂಗಳದಲ್ಲಿ ತೆಳುವಾಗಿ ೩ – ೪ ದಿನಗಳ ತನಕ ಹರವಿ ಒಣಗಿಸಬೇಕು. ಒಣಗಿದ ಹಣ್ಣುಗಳನ್ನು ವರ್ಗೀಕರಿಸಿ ತುಂಬಿಡಬೇಕು. ಕ್ರುಯೆಸ್‌ರ ಹೇಳಿಕೆ ಪ್ರಕಾರ ಕ್ಯಾಲಿಫೋರ್ನಿಯಾದಲ್ಲಿ ಕಾಲಿಮಿರ್ನ ಅಂಜೂರದ ಸಿಪ್ಪೆ ಮೇಲಿರುವ ರೋಮದೆಳೆಗಳನ್ನು ತೆಗೆಯಲು ಮತ್ತು ಹಣ್ಣನ್ನು ಮೃದುಮಾಡಲು ಸುಣ್ಣ ಮತ್ತು ಉಪ್ಪು ನೀರಿನಲ್ಲಿ (ಇವುಗಳಲ್ಲಿ ಪ್ರತಿ ೧೦೦ ಗ್ಯಾಲನ್‌ಗೆ ೧೦ ಪೌಂಡಿನಷ್ಟು) ಉಪಚರಿಸುತ್ತಾರೆ. ಆದರೆ ಇವುಗಳನ್ನು ಗಂಧಕದಿಂದ ಉಪಚರಿಸುವ ಅಗತ್ಯವಿರುವುದಿಲ್ಲ. ಒಣಗಿದ ಅಂಜೂರವನ್ನು ಬೆರಳುಗಳ ಮಧ್ಯೆ ಹಿಸುಕಿದಾಗ ರಸ ಹೊರಬರದಿದ್ದರೆ ಒಣಗುವ ಕ್ರಿಯೆ ಸಂಪೂರ್ಣವಾಯಿತೆನ್ನಬಹುದು.

ದ್ರಾಕ್ಷಿ : ಬೀಜವಿಲ್ಲದ ಕಿಶ್ಮಿಶ್ ದ್ರಾಕ್ಷಿಯನ್ನು ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶಕ್ಕೆ ಆಫ್‌ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಮಾಗಿದ ಹಣ್ಣಿನ ಗೊಂಚಲು ಹಸುರು ಅಥವಾ ತಿಳಿ ಹಳದಿ ಬಣ್ಣವಾಗುವವರೆಗೆ ಕತ್ತಲೆಕೋಣೆ ಅಥವಾ ಕಿಶ್ಮಿಶ್ ಖಾನಾಸ್ದಲ್ಲಿ ತೂಗುಹಾಕುತ್ತಾರೆ. ಇವು ಸಾಧಾರಣವಾಗಿ ಸೂರ್ಯನ ಶಾಖದಿಂದ ಒಣಗಿಸಿದ ಅಥವಾ ನಿರ್ಜಲಗೊಳಿಸಿದ ದ್ರಾಕ್ಷಿಗಿಂತ ಉತ್ತಮವಾದುವೆಂದು ಪರಿಗಣಿಸಲಾಗಿದೆ. ಮೆನ್ಯೂಕಾ ಅಥವಾ ರೈಸಿನ್ ಇನ್ನೊಂದು ಮುಖ್ಯವಾದ ಒಣಗಿದ ದ್ರಾಕ್ಷಿ, ಇದನ್ನು ದೊಡ್ಡ ಬೀಜದ ಹೃತಾ ದ್ರಾಕ್ಷಿಯನ್ನು ಕ್ಷಾರದ್ರಾವಣದಲ್ಲಿ ಮುಳುಗಿಸಿ, ಸೂರ್ಯನ ಶಾಖದಲ್ಲಿ ಒಣಗಿಸಿ ಪಡೆಯಬಹುದು. ಬಲೂಚಿಸ್ಥಾನದಲ್ಲಿ ದ್ರಾಕ್ಷಿ ಒಣಗಿಸುವ ವಿಧಾನದ ಸಂಪೂರ್ಣ ವಿವರಣೆಯನ್ನು ಸಿದ್ಧಪ್ಪನವರು ನೀಡಿದ್ದಾರೆ.

ಒಣಗಿಸಲು ಉಪಯೋಗಿಸುವ ದ್ರಾಕ್ಷಿಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಅಂದರೆ, ೨೦ – ೨೪ ಬ್ರಿಕ್ಸ್ ಇರಬೇಕು. ಈ ದೃಷ್ಟಿಯಿಂದ ಕೆಲವು ತಳಿಗಳು ಒಣಗಿಸಲು ಯೋಗ್ಯವಲ್ಲ. ಇಂಥ ದ್ರಾಕ್ಷಿಯನ್ನು ಗಂಧಕದಿಂದ ಉಪಚರಿಸದೆಯೆ ಅವುಗಳಲ್ಲಿ ಹೊರ ಬರುವ ರಸ ನಿಲ್ಲುವವರೆಗೆ ಒಣಗಿಸಬೇಕು. ಒಣಗಿದ ಪದಾರ್ಥದ ಇಳುವರಿ ಮತ್ತು ಗುಣಮಟ್ಟ ದ್ರಾಕ್ಷಿಯನ್ನು ಕೀಳುವಾಗ ಇರುವ ಬ್ರಿಕ್ಸ್‌ನ್ನು ಅವಲಂಬಿಸಿರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಸುಲ್ತಾನಿನಾ ಅಥವಾ ಬೀಜವಿಲ್ಲದ ಥಾಮ್‌ಸನ್ ತಳಿಗಳನ್ನು ಸೂರ್ಯನ ಶಾಖದಿಂದ ಒಣಗಿಸುತ್ತಾರೆ. ದ್ರಾಕ್ಷಿಗಳನ್ನು ಕೆಲವು ವೇಳೆ ಕಾಸ್ಟಿಕ್ ಸೋಡಾ ದ್ರಾವಣದಲ್ಲಿ ೩ ರಿಂದ ೬ ಸೆಕೆಂಡುಗಳ ತನಕ ಮುಳುಗಿಸಿಡುವುದೂ ಉಂಟು ಇಲ್ಲವೇ ತೆಳುವಾದ ಆಲಿವ್ ಎಣ್ಣೆಯ ಪದರಿರುವ ಸೋಡಿಯಂ ಬೈಕಾರ್ಬೋನೇಟ್ ಮತ್ತು ಕಾಸ್ಟಿಕ್ ಸೋಡಾಗಳ ಮಿಶ್ರದ್ರಾವಣದಲ್ಲಿ ಮುಳುಗಿಸುತ್ತಾರೆ. ಈ ವಿಧಾನದಿಂದ ಹಣ್ಣಿನ ಸಿಪ್ಪೆಯಲ್ಲಿ ಬಿರುಕುಂಟಾಗುವುದಿಲ್ಲ. ಮೇಣ ಮತ್ತು ಹೂವಿನಂಶ ಮಾತ್ರ ಬೇರ್ಪಡುತ್ತದೆ. ಒಣಗಿದ ಈ ದ್ರಾಕ್ಷಿಗೆ ಹೊರಥಳುಕಿನ ರೂಪವಿರುತ್ತದೆ. ಕ್ಷಾರದ್ರಾವಣದಲ್ಲಿ ಮುಳುಗಿಸಿದ ದ್ರಾಕ್ಷಿಯನ್ನು ಕೆಲವು ವೇಳೆ ೩ – ೫ ಗಂಟೆಗಳ ಕಾಲ ಗಂಧಕದ ಹೊಗೆಯಲ್ಲಿ ಉಪಚರಿಸಿ ವರ್ಣನಾಶ ಮಾಡಬೇಕಾಗುತ್ತದೆ. ಇಂಥ ಹಣ್ಣುಗಳಿಗೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.

ಆಸ್ಟ್ರೇಲಿಯಾದಲ್ಲಿ ಪೊಟ್ಯಾಸಿಯಂ ಕಾರ್ಬೊನೇಟ್‌ಗೆ ಆಲಿವ್‌ ಎಣ್ಣೆ ಅಥವಾ ಕೆಲವು ವೇಳೆ ದ್ರಾಕ್ಷಿಯ ಬೀಜದ ಎಣ್ಣೆಯನ್ನು ಸೇರಿಸಿ ಅದರಲ್ಲಿ ಮುಳುಗಿಸಿಡುತ್ತಾರೆ. ದ್ರಾಕ್ಷಿಯನ್ನು ಒಣಗಿಸಲು ತಂತಿಯ ಬಲೆಯಿಂದ ಮಾಡಿದ ಚೌಕಟ್ಟನ್ನು ಕೋಣೆಯ ಒಳಗೆ ಅಂತರಂತರವಾಗಿ ಜೋಡಿಸಬೇಕು. ದ್ರಾಕ್ಷಿಯ ತಳಿಯ ವೈವಿಧ್ಯತೆಯನ್ನನುಸರಿಸಿ ೧೦ ರಿಂದ ೨೦ ದಿನಗಳ ಕಾಲ ಒಣಗಿಸಬೇಕಾಗುತ್ತದೆ.

ಹಲಸಿನ ಹಣ್ಣು : ಹಲಸಿನಹಣ್ಣಿನ ತೊಳೆಗಳನ್ನು ಭಾಗ ಮಾಡಿ, ಬೀಜ ತೆಗೆದು ಗಂಧಕದ ಹೊಗೆಯಿಂದ ಉಪಚರಿಸಿ ಇಲ್ಲವೇ ಹಾಗೆಯೇ ಒಣಗಿಸಬೇಕು. ಈ ತೊಳೆಗಳ ತಿರುಳನ್ನು ಮುದ್ದೆಯಂತೆ ಮಾಡಿ ಅನಂತರ ಹಾಳೆಯಂತೆ ಪದರವಾಗಿ ಸಹ ಒಣಗಿಸಬಹುದು. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಒಳ್ಳೆ ರಚನಾ ಕ್ರಮ, ರುಚಿ ಹಾಗೂ ವಾಸನೆಯಿಂದ ಕೂಡಿದ ಪದಾರ್ಥವನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದು ಸ್ವಾಮ್ಯ ಪಡೆದ ವಿಧಾನವಾಗಿದೆ.

ಮಾವಿನಹಣ್ಣು : ನಮ್ಮ ದೇಶದಲ್ಲಿ ಹಸುರು ಮಾವಿನಕಾಯಿ ಸಿಪ್ಪೆ ತೆಗೆದು ಹೋಳುಮಾಡಿ, ಸೂರ್ಯನ ಶಾಖದಿಂದ ಒಣಗಿಸುತ್ತಾರೆ. ಇದು ಮಾವಿನಪುಡಿ ತಯಾರಿಸಲು ಬಹು ಉಪಯುಕ್ತವಾಗಿರುತ್ತದೆ. ತಿಂಡಿಯನ್ನು ಸ್ವಾದಿಷ್ಟಗೊಳಿಸಲೂ ಸಹ ಒಣಗಿಸಿದ ಮಾವಿನಕಾಯಿಯ ಹೋಳುಗಳನ್ನು ಉಪಯೋಗಿಸಬಹುದು. ಉತ್ತರದ ಸಿರ್‌ಕಾರ್‌ಗಳಲ್ಲಿ ‘ರಸಂ’ ಎನ್ನುವ ರಸಹೆಚ್ಚಿರುವ ಮಾವಿನ ತಳಿಗಳನ್ನು ಮುಂದೆ ಕಾಣಿಸಿದ ವಿಧಾನದಲ್ಲಿ ಸಂಸ್ಕರಿಸುತ್ತಾರೆ. ಹಣ್ಣಿನ ತಿರುಳನ್ನು ಹಿಂಡಿ ರಸತೆಗೆದು, ಬಿದಿರು ಚಾಪೆಗಳಲ್ಲಿ ಹರವಿ, ಅದರ ಮೇಲೆ ಸ್ವಲ್ಪ ಸಕ್ಕರೆಯನ್ನು ಉದುರಿಸುತ್ತಾರೆ. ಮೊದಲು ಪದರ ಒಣಗಿದಾಗ ಇನ್ನೊಂದು ಪದರನ್ನು ಅದರ ಮೇಲೆ ಹರವುತ್ತಾರೆ. ಪದರಿನ ದಪ್ಪ ಸಾಧಾರಣ ೦.೫ ದಿಂದ ೧ ಅಂಗುಲವಾಗುವವರೆಗೆ ಇದೇ ರೀತಿ ಒಂದರ ಮೇಲೊಂದು ಪದರು ಹಾಕುತ್ತಿರುತ್ತಾರೆ. ತಿಳಿ ಹಳದಿ ಬಣ್ಣದ ಈ ಪದಾರ್ಥ ತಿನ್ನಲು ಸ್ವಾದಿಷ್ಟವಾಗಿರುತ್ತದೆ. ಆದರೆ ಇದು ಕೀಟಗಳ ಬಾಧೆ ಮತ್ತು ಬಣ್ಣ ಬದಲಾಗುವಿಕೆಗಳಿಂದ ಕೆಲವು ತಿಂಗಳುಗಳಲ್ಲೇ ಕೆಡುತ್ತದೆ. ಈ ನ್ಯೂನತೆಗಳನ್ನು ವೈಜ್ಞಾನಿಕ ವಿಧಾನವನ್ನನುಸರಿಸಿ ಹೋಗಲಾಡಿಸಬಹುದು. ಈ ಪದಾರ್ಥದ ತಯಾರಿಕೆಯನ್ನು ವೃದ್ಧಿಪಡಿಸಿದುದೇ ಆದರೆ ಇದಕ್ಕೆ ಉತ್ತಮ ಭವಿಷ್ಯವಿದೆ. ಈ ಬಗ್ಗೆ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಸಿದ್ದಪ್ಪ ಮತ್ತು ಸಂಗಡಿಗರು ಒಂದು ಸುಧಾರಿಸಿದ ರೀತಿಯನ್ನು ಕಂಡುಹಿಡಿದು ಅದರ ಸ್ವಾಮ್ಯವನ್ನು ಪಡೆದಿದ್ದಾರೆ.

ಪೀಚ್ : ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಕ್ಯಾಲಿಫೋರ್ನಿಯಾ ದೇಶಗಳು ಪೀಚ್ ಒಣಗಿಸುವ ಪ್ರಸಿದ್ಧ ದೇಶಗಳಾಗಿವೆ. ಜಟೆ ಬಿಟ್ಟಿರುವ ಜಾತಿಗೆ ಸೇರಿದ ಮಾಯಿರ್ ಸಾಲವೇ ಮತ್ತು ಎಲ್‌ಬೆರ್ಟಾ ತಳಿಪೀಚ್‌ಗಳನ್ನೇ ಹೆಚ್ಚಾಗಿ ಒಣಗಿಸುವುದಕ್ಕೆ ಬಳಸಲಾಗುತ್ತದೆ. ಸಂಪೂರ್ಣ ಬಲಿತು ಮಾಗಿದ ಹಣ್ಣುಗಳನ್ನು ಕಿತ್ತು ಏಪ್ರಿಕಾಟ್ ಹಣ್ಣುಗಳನ್ನು ಉಪಚರಿಸುವ ರೀತಿಯಲ್ಲಿ ಇವುಗಳನ್ನು ಉಪಚರಿಸಬೇಕು.

ಪೇರು : ಬಾರ್ಟ್‌‌ಲೆಟ್ ಮತ್ತು ವಿಲಿಯಂಸ್‌ಗಳು ಒಣಗಿಸುವ ಮುಖ್ಯ ಪೇ‌ರ್ ತಳಿಗಳಾಗಿವೆ. ಹಣ್ಣುಗಳನ್ನು ಉದ್ದವಾಗಿ ಇಬ್ಭಾಗಮಾಡಿ, ಸಿಪ್ಪೆ ತೆಗೆಯದೆ ತುಂಡು ಮಾಡಿ, ಕೊರೆದು, ಗಂಧಕದಿಂದ ಉಪಚರಿಸಿ ಒಣಗಿಸಬೇಕು. ಕ್ಯಾಲಿಫೋರ್ನಿಯಾದಲ್ಲಿ ೧ ರಿಂದ ೨ ದಿನ ಇವುಗಳನ್ನು ಸೂರ್ಯನ ಶಾಖದಲ್ಲಿ ಒಣಗಿಸುತ್ತಾರೆ. ಒಣಗಿಸುವುದನ್ನು ನೆರಳಲ್ಲಿ ಪೂರ್ಣಗೊಳಿಸಿದರೆ ನೋಡಲು ಆಕರ್ಷಕವಾಗಿರುವ ಪದಾರ್ಥ ದೊರಕುತ್ತದೆ.

ಇತರ ಹಣ್ಣುಗಳು : ದಾಳಿಂಬೆ ಹಣ್ಣಿನ ಬೀಜಗಳನ್ನು ಒಣಗಿಸಿ ಹುಣಿಸೆ ಹಣ್ಣಿನ ತರಹ ಹುಳಿಗೆ ಉಪಯೋಗಿಸಬಹುದು. ಸೇಬಿನ ಉರುಟು ಬಿಲ್ಲೆಗಳನ್ನು ಪೋಣಿಸಿ ತೂಗುಹಾಕಿ, ಸೂರ್ಯನ ಶಾಖದಿಂದ ಒಣಗಿಸುತ್ತಾರೆ. ಪ್ರೂನ್, ಪರ್ನಿಮಾನ್, ಚೆರ್ರಿ, ಬೆರ್ರಿಹಣ್ಣು, ಪರಂಗಿಹಣ್ಣು, ಸೀಬೆ, ಟೊಮೆಟೊ ಮುಂತಾದುವುಗಳನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಒಣಗಿಸುತ್ತಾರೆ.

ಯಾಂತ್ರಿಕ ವಿಧಾನದಿಂದ ನಿರ್ಜಲಗೊಳಿಸುವಿಕೆ

ಯಾಂತ್ರಿಕ ಸಲಕರಣೆಗಳನ್ನುಪಯೋಗಿಸಿ ನಿರ್ಜಲಗೊಳಿಸುವುದು ಸೂರ್ಯನ ಶಾಖದಿಂದ ಒಣಗಿಸುವುದಕ್ಕಿಂತ ಭಿನ್ನ ವಿಧಾನವಾಗಿದೆ. ಈ ವಿಧಾನದಲ್ಲಿ ಹಣ್ಣು ಅಥವಾ ತರಕಾರಿಗಳನ್ನು ನಿರ್ಜಲಗೊಳಿಸುವ ಕೋಣೆಯಲ್ಲಿಡಬೇಕು. ಇಲ್ಲಿ ಉಷ್ಣ ತೇವಾಂಶ ಮತ್ತು ಗಾಳಿ ಚಲನೆಯ ಗತಿಯನ್ನು ನಿಯಂತ್ರಿಸಬಹುದು. ಮನೆಮಟ್ಟದಲ್ಲಿ ಉಪಯೋಗಿಸುವ ಚಿಕ್ಕ ನಮೂನೆಯಿಂದ ವಾಣಿಜ್ಯ ಮಟ್ಟದ ದೊಡ್ಡ ಯಂತ್ರಗಳ ತನಕ ಇವು ಅನೇಕ ಗಾತ್ರದಲ್ಲಿರುತ್ತವೆ. ಇವುಗಳ ರಚನಾಕ್ರಮ ಮತ್ತು ಕೆಲಸದ ರೀತಿಯನ್ನು ಮೊರಿಸ್ ಮತ್ತು ವಾನ್‌ ಲೊಸೆಕೆ ವಿವರಿಸಿದ್ದಾರೆ.

ಮನೆಮಟ್ಟದಲ್ಲಿ ಒಣಗಿಸುವ ಯಂತ್ರ : ಇದು ಸಾಧಾರಣ ಒಂದು ಮಧ್ಯಮ ಗಾತ್ರದ ಕಪಾಟಿನಂತಿರುತ್ತದೆ. ಇದು ಹಣ್ಣು ಮತ್ತು ತರಕಾರಿಗಳನ್ನು ಸಣ್ಣ ಪ್ರಮಾಣದಲ್ಲಿ ನಿರ್ಜಲಗೊಳಿಸಲು ಉಪಯುಕ್ತವಾಗಿರುತ್ತದೆ. ಇದರಲ್ಲಿ ಮುಖ್ಯವಾಗಿ ವಿದ್ಯುದ್ಮುಲಾಮು ಮಾಡಿದ ೩’ x ೨’ x ೩’ ಗಾತ್ರದ ಕಬ್ಬಿಣದ ತಗಡಿನ ಪೆಟ್ಟಿಗೆ ತಳದಲ್ಲಿ ರಂಧ್ರವಿರುವ ತಗಡು ಜೋಡಿಸಲ್ಪಟ್ಟಿರುತ್ತದೆ. ಈ ಪೆಟ್ಟಿಗೆಯ ಪಕ್ಕಗಳು ಮತ್ತು ಮೇಲ್ಭಾಗದಲ್ಲಿ ಮರದ ಚೌಕಟ್ಟಿರುತ್ತದೆ. ಇಡಿಯ ಉಪಕರಣವನ್ನು ಸಾಧಾರಣ ೧.೨೫ ಅಡಿ ಎತ್ತರವಿರುವ ಕಬ್ಬಿಣದ ಪೀಠವನ್ನು ಆಧರಿಸಿರುತ್ತದೆ. ಒಳಗಿನ ತೇವ ಹೊರಹೋಗಲು ಎರಡು ರಂಧ್ರಗಳಿರುತ್ತವೆ; ಇವು ಉದ್ದವಾಗಿರುವ ಭಾಗದ ಮೇಲಿನ ಅಂಚಿನ ೨ x ೧.೫ ಅಡಿಯಲ್ಲಿ ಮತ್ತು ತುದಿಯಿಂದ ೪ ಅಂಗುಲ ಕೆಳಗಿರುತ್ತವೆ. ಈ ರಂಧ್ರಗಳಿಗೆ ಲೋಹದ ಮುಚ್ಚಳಗಳಿರುತ್ತವೆ. ಇದನ್ನು ಬೇಕಾದಾಗ ತೆರೆದು ಮುಚ್ಚಬಹುದು, ಪೆಟ್ಟಿಗೆಯಲ್ಲಿ ೨.೭೫ x ೨ ಅಡಿ ಗಾತ್ರದ ೭ ತಟ್ಟೆಗಳನ್ನು ಇಡಲು ಅವಕಾಶವಿರುತ್ತದೆ. ವಿವಿಧ ಅಂತರಗಳಲ್ಲಿಡಲು ಬೇಕಾದ ಆಧಾರವನ್ನು ಪೆಟ್ಟಿಗೆಯ ಒಳಗೆ ಅಳವಡಿಸಲಾಗಿರುತ್ತದೆ. ರಂಧ್ರದ ತಗಡನ್ನು ಇದ್ದಿಲು ಅಥವಾ ಸ್ಟೌವನ್ನು ಉರಿಸಿ ಬಿಸಿಮಾಡಬಹುದು.

ವಾಣಿಜ್ಯ ಮಟ್ಟದಲ್ಲಿ ನಿರ್ಜಲಗೊಳಿಸುವ ಯಂತ್ರ

ದೊಡ್ಡ ಪ್ರಮಾಣದಲ್ಲಿ ನಿರ್ಜಲಗೊಳಿಸುವ ಯಂತ್ರಗಳು ಅನೇಕ ರೀತಿಯಲ್ಲಿರುತ್ತವೆ. ಇವುಗಳಲ್ಲಿ ಗಾಳಿಯ ಸ್ವಾಭಾವಿಕ ಚಲನೆಯಿಂದ ಒಣಗುವುದು ಒಂದು ರೀತಿಯದು. ಇನ್ನೊಂದು ವಿಧಾನದಲ್ಲಿ ಗಾಳಿಯನ್ನು ಎಳೆದು ಸುತ್ತಿಸಲಾಗುತ್ತದೆ. ಆವಿಗೆ, ತಟ್ಟೆ ಜೋಡಿಸಿ ಒಣಗಿಸುವ ಮತ್ತು ಒರೆಗಾನ್ ಸುರಂಗದಲ್ಲಿ ಒಣಗಿಸುವ ವಿಧಾನಗಳೆಲ್ಲ ನೈಜವಾದ ಗಾಳಿ ಸಂಚಾರದಿಂದ ನಡೆಯುತ್ತವೆ. ಆಧುನಿಕ ರೀತಿ ಒಣಗಿಸುವ ಯಂತ್ರ ಗಾಳಿಯನ್ನು ಎಳೆದು ಸುತ್ತಿಸುವ ವಿಧಾನವನ್ನು ಆಧರಿಸಿರುತ್ತದೆ. ಕಡಮೆ ಉಷ್ಣತೆಯಲ್ಲಿ ಒಣಗಿಸಬೇಕಾದರೆ ನಿರ್ವಾತಸ್ಥಿತಿಯನ್ನುಂಟು ಮಾಡಬೇಕು. ಆದರೆ ಇದು ಹೆಚ್ಚು ವೆಚ್ಚದಾಯಕವಾಗಿರುವುದರಿಂದ ಇದು ಸಾಮಾನ್ಯವಾಗಿ ಬಳಕೆಯಲ್ಲಿಲ್ಲಿ. ಗಾಳಿಯನ್ನು ಎಳೆದು ಒಣಗಿಸುವಾಗ ಉಷ್ಣತೆ ಮತ್ತು ತೇವಾಂಶವನ್ನು ಹಿಡಿತದಲ್ಲಿಡಬಹುದು ಮತ್ತು ಇದರಿಂದ ಉತ್ತಮ ಮಟ್ಟದ ನಿರ್ಜಲಗೊಳಿಸಿದ ಪದಾರ್ಥವನ್ನು ಪಡೆಯಬಹುದು.

ಆವಿಗೆಗಳಲ್ಲಿ ಒಣಗಿಸುವುದು : ಆವಿಗೆಗಳು ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿವೆ. ಇವುಗಳನ್ನು ಸೇಬು, ಹಾಪ್ಸ್ ಮುಂತಾದುವನ್ನು ಒಣಗಿಸಲು ಉಪಯೋಗಿಸುತ್ತಾರೆ. ಇದರ ಎರಡು ಅಂತಸ್ತುಗಳುಳ್ಳದ್ದಾಗಿರುತ್ತದೆ. ಮೇಲ್ಗಡೆ ಹಂತದಲ್ಲಿ ಹಣ್ಣನ್ನು ಹರವಿದರೆ ತಳಭಾಗದ ಹಂತದಲ್ಲಿ ಒಲೆಯಿರುತ್ತದೆ. ಒಣಗಿಸಲು ಅಗತ್ಯವಾದ ಉಷ್ಣವು ಕೊಳವೆಗಳ ಮುಖಾಂತರವಾಗಿ ಚಲಿಸುತ್ತದೆ. ಮೇಲ್ಭಾಗದಲ್ಲಿರುವ ಒಂದು ಸಣ್ಣ ರಂಧ್ರದ ಮೂಲಕ ಒಳಗಿನ ಗಾಳಿ ಹೊರಹೋಗುತ್ತದೆ.

ಗೋಪುರ ರೀತಿಯ ಅಥವಾ ತಟ್ಟೆಗಳನ್ನು ಅಂತರವಾಗಿ ಜೋಡಿಸಿ ಒಣಗಿಸುವ ವಿಧಾನ : ಇದರಲ್ಲಿ ಬೆಂಕಿ ಉರಿಸುವ ವಿಭಾಗದಲ್ಲಿ ಒಂದು ಒಲೆಯಿರುವುದಲ್ಲದೆ ಬಿಸಿ ಮಾಡುವ ಕೊಳವೆಯೂ ಇರುತ್ತದೆ. ಹೆಣ್ಣುಗಳ ತಟ್ಟೆಗಳನ್ನಿಟ್ಟು ಒಣಗಿಸಲು ಕಪಾಟಿರುತ್ತದೆ. ಬಿಸಿ ಗಾಳಿ ಒಲೆಯಿಂದ ತಟ್ಟೆಗಳ ಮೂಲಕ ಹಾದು ಮೇಲೇರುತ್ತದೆ; ಸ್ವಲ್ಪ ಸಮಯದ ನಂತರ ತಟ್ಟೆಗಳನ್ನು ಮೇಲಿನಿಂದ ಕೆಳಗೆ ಅದಲು ಬದಲು ಮಾಡಬೇಕು. ಕಪಾಟಿನಲ್ಲಿ ಒಣಗಿಸುವುದು ತಟ್ಟೆಗಳನ್ನು ಅಂತರವಾಗಿ ಜೋಡಿಸಿ ಒಣಗಿಸುವ ವಿಧಾನದಂತೆಯೇ ಇರುತ್ತದೆ. ತಟ್ಟೆಗಳ ಮಧ್ಯ ಹಾದುಹೋಗುವ ಉಗಿ ಸುರುಳಿಯಿಂದ ಉಷ್ಣತೆಯುಂಟಾಗುತ್ತದೆ.

ಒರೆಗಾನ್ ಸುರಂಗದಲ್ಲಿ ಒಣಗಿಸುವ ಯಂತ್ರ : ಕ್ರುಯೆಸ್‌ರ ಹೇಳಿಕೆ ಪ್ರಕಾರ ಇದರ ಒಂದು ವಿಭಾಗದಲ್ಲಿ ಒಲೆಯಿರುತ್ತದೆ. ಅದರ ಮೇಲ್ಗಡೆ ಅನೇಕ ಚಿಕ್ಕ ಕೋಣೆಗಳಿರುತ್ತವೆ. ಇವು ಸಮನಾಂತರವಾಗಿದ್ದು ಸ್ವಲ್ಪ ಇಳುಕಲಾಗಿರುತ್ತವೆ. ಇಳುಕಲಾದ ಈ ಆಧಾರದ ಮೇಲೆ ತಂತಿಯ ತಟ್ಟೆಗಳನ್ನಿಡುತ್ತಾರೆ. ಪ್ರತಿಯೊಂದು ಸುರಂಗವೂ ೨೦ ಅಡಿ ಉದ್ದ, ೫ ಅಡಿ ಎತ್ತರ ಮತ್ತು ೩ ಅಡಿ ಅಗಲವಿರುತ್ತದೆ. ಪ್ರತಿ ಅಡಿಗೆ ೨ ಅಂಗುಲದಷ್ಟು ಇಳಿಜಾರುಮಟ್ಟವಿರುತ್ತದೆ. ಹಣ್ಣಿನ ತಟ್ಟೆಗಳು ಮೇಲಿನ ತುದಿಯಲ್ಲಿರುವ ಚಲಿಸುವ ದಾರಿಯ ಮೂಲಕ ಒಳ ಸೇರುತ್ತವೆ. ಈ ತುದಿ ತಣ್ಣಗಾಗಿರುತ್ತದೆ. ಅಲ್ಲಿಂದ ಮುಂದೆ ಕೆಳಗಿನ ತುದಿಗೆ ಬರುತ್ತ ಬಿಸಿ ಹೆಚ್ಚಾಗುತ್ತದೆ. ಹಣ್ಣುಗಳು ಕೆಳಕೊನೆಗೆ ಬರುವಾಗ ಒಣಗಿರುತ್ತವೆ. ಅಲ್ಲಿಂದ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ.

ಸುರಂಗದಲ್ಲಿ ಗಾಳಿಯನ್ನು ಎಳೆದು ಒಣಗಿಸುವ ವಿಧಾನ : ಇದರಲ್ಲಿ ಒಂದು ಉದ್ದವಾದ ಕೋಣೆಯ ಮೂಲಕ ಕೈಗಾಡಿಯಲ್ಲಿ ಹಣ್ಣಿನ ತಟ್ಟೆಗಳು ಮುಂದೆ ಚಲಿಸುತ್ತವೆ. ಬಿಸಿಗಾಳಿ ಒಂದು ತುದಿಯಿಂದ ಒಳಸೇರುತ್ತದೆ. ಇನ್ನೊಂದು ತುದಿಯಿಂದ ಈ ಗಾಳಿಯನ್ನು ಎಳೆಯಲಾಗುತ್ತದೆ. ಈ ಕೈಗಾಡಿಗಳನ್ನು ಗಾಳಿ ಪ್ರತಿರೋಧಕ ಬಾಗಿಲಿನ ಮೂಲಕ ಸುರಂಗದ ಒಳಗೆ ತಳ್ಳಲಾಗುತ್ತದೆ. ಒಣಗಿದ ಹಣ್ಣುಗಳನ್ನು ತುಂಬಿದ ಒಂದು ಕೈಗಾಡಿ ಹೊರ ಬರುವಾಗ ಹೊಸ ಹಣ್ಣುಗಳನ್ನು ತುಂಬಿದ ಇನ್ನೊಂದು ಕೈಗಾಡಿ ವಿರುದ್ಧವಾದ ದಾರಿಯಿಂದ ಒಳಸೇರುತ್ತದೆ. ಯಾಂತ್ರಿಕ ಬೀಸಣಿಗೆ ಮೂಲಕ ಒಣಗಿಸಲು ಬೇಕಾದ ಗಾಳಿ ಒಳಗೆ ಸುತ್ತುತ್ತಿರುತ್ತದೆ. ಗಾಳಿಯಲ್ಲಿ ತೇವ ಉಂಟು ಮಾಡುವ ಸಾಧನದ ಮೂಲಕ ಗಾಳಿಯನ್ನು ಒಳಕ್ಕೆ ಬಿಡಬೇಕು. ಇದರಿಂದ ಒಳಗಿನ ತೇವಾಂಶವನ್ನು ಹಿಡಿತದಲ್ಲಿಡಲು ಸಾಧ್ಯವಾಗುತ್ತದೆ.