ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲಿ

ಸ್ವಾಮಿ ಸುರಹೊನ್ನೆ ಮರನೇರಿ ಸುವ್ವಲಾಲಿ
ನಾವು ಹುಟ್ಟಿದೋರೊಂದೇಳುಜನ ಸುವ್ವಲಾಲಿ
ನಾವು ಬೆಳೆದೋರೊಂದೇಳುಜನ ಸುವ್ವಲಾಲಿ
ಏಳುಜನ ಅಕ್ಕತಂಗೇರು ಸುವ್ವಲಾಲಿ
ಮದುವೆ ಸೋಬನವಾದೊ ಸುವ್ವಲಾಲಿ
ನಮ್ಮ ಆರುಜನ ಅಕ್ಕತಂಗೇರಿಗೆ ಸುವ್ವಲಾಲಿ
ಮಕ್ಕಳೆ ಆದವು ಸುವ್ವಲಾಲಿ
ನಮ್ಮ ಕಿರಿಯವಳಿಗೆ ಹೊನ್ನಮ್ಗೆ ಸುವ್ವಲಾಲಿ
ಮಕ್ಕಳೆ ಇಲ್ಲವಯ್ಯ ಸುವ್ವಲಾಲಿ
ಕಿರಿಯವಳೆ ಹೊನ್ನಮ್ಮ ಸುವ್ವಲಾಲಿ

ಅಕ್ಕದೀರ ಮಕ್ಕಳಿಗೆ | ಸು | ಕಿರಿಯವಳು ಹೊನ್ನಮ್ಮ | ಸು |

ಸಂತಿಗೆ ಹೋದಳೆ | ಸು | ಅಕ್ಕದೀರ ಮಕ್ಕಳಿಗೆ | ಸು |
ಕಡಲೆ ಬೆಲ್ಲವ ಕೊಂಡು | ಸು | ಅಂಗಿ ಕುವಾಲಿ ಕೊಂಡು | ಸು |
ತುದಿಕಾಲು ವಾಪಸುಕೊಂಡು | ಸು | ಗಂಟು ಮೂಟೆಯಕಟ್ಟಿ | ಸು |
ಅಕ್ಕದೀರ ಮಕ್ಕಳಿಗೆ | ಸು | ತಗಂಡೆ ಹೋಗುತಳೆ | ಸು |
ಆರುಜನ ಅಕ್ಕಗಳೆ | ಸು | ನಿಮ್ಮ ಮಕ್ಕಳೆಲ್ಲ ಹೋದರೆ | ಸು |
ಆಡಕೆ ಹೋಗವರೆ | ಸು | ಓದಾಕೆ ಹೋಗವರೆ | ಸು |
ಆಗಲೆ ಹೊನ್ನಮ್ಮ | ಸು | ಹುಡಿಕಂಡೆ ಹೋದಳೆ | ಸು |
ಮಕ್ಕಳ ಕರಕಂಡು | ಸು | ಬೇಗದಲ್ಲಿ ಬರುತಾಳೆ | ಸು |
ಬೇಗದಲ್ಲಿ ಬಂದಳು | ಸು | ಎತ್ತಿ ಮುದ್ದಾಡ್ಯಾಳು | ಸು |
ಕಚ್ಚಿ ಮುದ್ದಾಡ್ಯಳೆ | ಸು | ಕಡಲೆ ಬೆಲ್ಲವಕೊಟ್ಟು | ಸು |
ಅಂಗಿ ಕುವ್ವಾಲಿ ಕೊಟ್ಟು | ಸು | ಆರುಜನ ಅಕ್ಕಗಳಿರ | ಸು |

ನಾನು ಹೋಗುತಿನಿ ಕಾಣಿರವ್ವ | ಸು | ಹಂಗಂದ ಹೊನ್ನಮ್ಮ | ಸು |

ಹಂಗಂದು ಹೊನ್ನಮ್ಮ | ಸು | ಬಾರೊಂದೆ ಬರುವಾಗ | ಸು |
ಏನು ಮಾತನಾಡುತಾಳೆ | ಸು | ನಮ್ಮ ಬಂಜೆತನ ಹರಿಯಲಿಲ್ಲ | ಸು |
ಜಾರೆಯ ಒಳಗಿನ್ನ | ಸು | ಬಾವಿಯ ತಗಸಬೇಕು | ಸು |
ಸೀಬಿಯ ಹಾಕಸಬೇಕು | ಸು | ಹಣ್ಣು ಹಂಪಲ ಹಾಕಸುವೆ | ಸು |
ಹಂಗಂದು ಹೊನ್ನಮ್ಮ | ಸು | ಒಡ್ಡರ ಕರಿಸ್ಯಾಳೆ | ಸು |
ಹಿಡಿಹೊನ್ನು ಕೊಟ್ಟಳೆ | ಸು | ಬಾವಿಯ ತೆಗಿಸ್ಯಾಳೆ | ಸು |
ಸೀಬಿಯ ಹಾಕಿಸ್ಯಾಳೆ | ಸು | ಕಿತ್ತಲೀಯ ಹಾಕಿಸ್ಯಾಳೆ | ಸು |
ಹೊನ್ನಮ್ಮ ಆಗಲೆ | ಸು | ಮೂಡಲ ಸೀಮಿಂದ | ಸು |
ಗೋವುದನ ಬಂದವೆ | ಸು | ಗೋವುದನ ಬಂದಿನ್ನ | ಸು |
ಬಂಜ್ಯೆ ಕಟ್ಸಿದ್ದ ಬಾವಿ | ಸು | ನಾವು ನೀರ ಕುಡಿದರೆ | ಸು |
ನಾವು ಬಂಜೇರಾಗುತಿವಿ | ಸು | ಮಕ್ಕಳು ಬಂಜೇರಾಗುತಾರೆ | ಸು |
ಅವು ಹಿಂದಕೆ ಹೋಗುತಾವೆ | ಸು | ಹಿಂದಕೆ ಹೋಗುವುದ | ಸು |
ಹೊನ್ನಮ್ಮ ನೋಡುತಾಳೆ | ಸು | ಹೊನ್ನಮ್ಮ ನೋಡಿನ್ನ | ಸು |
ಏನು ಕರ್ಮ ಮಾಡಿದೆನೊ | ಸು | ಏನು ಪಾಪ ಮಾಡಿದೆನೊ | ಸು |

ಹಾಳಾದ ಪಾಪಿಜನ್ಮ | ಸು | ಎನ್ನ ಯಾತಕೆ ಕೊಟ್ಟಿಯೊ | ಸು |

ಹಂಗಂದು ಹೊನ್ನಮ್ಮ | ಸು | ಬಾಳದುಃಖ ಮಾಡುತಾಳೆ | ಸು |
ಮೂಡಲಸೀಮಿಂದ | ಸು | ಅವು ಹಕ್ಕಿ ಪಕ್ಷಿ ಬರುತವೆ | ಸು |
ಹಕ್ಕಿ ಪಕ್ಷಿ ಬಂದಿನ್ನ | ಸು | ನಾವು ಹಣ್ಣ ತಿಂದರೆ | ಸು |
ನಾವು ಬಂಜೆರಾಗುತೀವಿ | ಸು | ಮಕ್ಕಳು ಬಂಜೆರಾಗುತಾರೆ | ಸು |
ಹಂಗಂದು ಗಿಣಿಗಳು | ಸು | ಹಿಂದಕೆ ಹೋಗುತವೆ | ಸು |
ಹಿಂದಕೆ ಹೋಗುವುದ | ಸು | ಹೊನ್ನಮ್ಮ ನೋಡುತಳೆ | ಸು |
ಹೊನ್ನಮ್ಮ ನೋಡಿನ್ನ | ಸು | ಶಿವನೆ ಏನುಪಾಪ ಮಾಡಿದ್ದೆ | ಸು |
ಹಾಳಾದ ಪಾಪಿಜನ್ಮ | ಸು | ಇನ್ನು ಏಕೆ ಶಿವರಾಯ | ಸು |
ಬಾಳದುಃಖ ಮಾಡುತಾಳೆ | ಸು | ಬಾಳದುಃಖ ಮಾಡಿನ್ನ | ಸು |
ಅರಮನೆಗೆ ಬರುತಾಳೆ | ಸು | ಅರಮನೆಗೆ ಬಂದಿನ್ನ | ಸು |
ಏನುಮಾತನಾಡುತಾಳೆ | ಸು | ಗಂಗವ್ನ ಮಾಡಬೇಕು | ಸು |

ಗಂಗವ್ನ ಮಾಡಿದರೆ | ಸು | ಬಂಜೆತನ ಹರುದತೆ | ಸು |

ಹಂಗಂದೆ ಹೊನ್ನಮ್ಮ | ಸು | ಅಟ್ಟಕೆ ಹಾಕ್ಯಾಳೆ | ಸು |
ಹತ್ತು ಕಾಲೇಣಿಯ | ಸು | ಪಟ್ಟೆಸೀರೆ ತೆಗೆದಳೆ | ಸು |
ತಟ್ಟೀಗೆ ಮಡಿಗ್ಯಳೆ | ಸು | ನೆಲಗಳ ಬಳಿದಳೆ | ಸು |
ಮೈಯನೆ ತೊಳುದಳೆ | ಸು | ಮಡಿಗಳ ಉಟ್ಟಳೆ | ಸು |
ಚಿಗಳಿ ತಂಬಿಟ್ಟಿನುಂಡೆ | ಸು | ಬೇಗದಲ್ಲಿ ಮಾಡ್ಯಾಳೆ | ಸು |
ಬೇಗದಲ್ಲಿ ಮಾಡಿನ್ನ | ಸು | ಅಕ್ಷತೊಂಗನೂಲು | ಸು |
ಗಂಧ ಚಂದ್ರಗಳು | ಸು | ತಟ್ಟೀಗೆ ಇಟ್ಟಳೆ | ಸು |
ಊದುಕಡ್ಡಿ ಇಟ್ಟು | ಸು | ಹಣ್ಣು ಕರಪೂರಗಳ | ಸು |
ಬೇಗದಲ್ಲಿ ಇಟ್ಟಳೆ | ಸು | ತಗಂಡೆ ಹೊರಟಳೆ | ಸು |
ಗಂಗವ್ನ ಪೂಜೆಯ | ಸು | ಮಾಡ್ಯಾಳೆ ಹೊನ್ನಮ್ಮ | ಸು |
ಮಾಡಂತಗಳಿಗೇಲಿ | ಸು | ಗಂಗವ್ನೆ ಬತ್ತೋದ್ಲು | ಸು |
ಏನು ಕರ್ಮ ಮಾಡಿದ್ದೆ | ಸು | ಏನು ಪಾಪ ಮಾಡಿದ್ದೆ | ಸು |
ಹಾಳಾದ ಪಾಪಿಜನ್ಮ | ಸು | ಯಾತಕೊ ಶಿವರಾಯ | ಸು |
ಹಂಗಂದೆ ಹೊನ್ನಮ್ಮ | ಸು | ಅರಮನೆಗೆ ಬಂದಳೆ | ಸು |
ಅರಮನೆಗೆ ಬಂದಿನ್ನ | ಸು | ತಟ್ಟೆಯ ಮಡಿಗ್ಯಳೆ | ಸು |
ತಟ್ಟೆಯ ಮಡಗಿನ್ನ | ಸು | ಸಂತೀಗೆ ಹೋದಳೆ | ಸು |
ಅಂಗಿ ಕುವಾಲಿ ಕೊಂಡು | ಸು | ಕಡಲೆ ಬೆಲ್ಲವ ಕೊಂಡು | ಸು |
ತುದಿಕಾಲ್ ಪಾಪಸು ಕೊಂಡು | ಸು | ಗಂಟುಮೂಟೆ ಕಟ್ಟಿಕೊಂಡು | ಸು |
ಅಕ್ಕದೀರ ಮಕ್ಕಳಿಗೆ | ಸು | ಓಡೋಡಿ ಹೋಗುತಾಳೆ | ಸು |
ಆರು ಜನ ಅಕ್ಕದೀರು | ಸು | ಏಳುಸುತ್ತಿನ ಕಲ್ಲುಬಾವಿಗೆ | ಸು |
ನೀರಿಗೆ ಬಂದರೆ | ಸು | ಏನು ಮಾತನಾಡುತಾರೆ | ಸು |
ನಮ್ಮ ಬಂಜ್ಹೊನ್ನಿ ಬರುತಾಳೆ | ಸು | ಮಕ್ಕಳ ಮಡಗಲಬೇಕು | ಸು |
ಬಂಜೆ ತಂದ ತಿಂಡಿ | ಸು | ಮಕ್ಕಳು ತಿಂದರೆ | ಸು |
ನಾವು ಬಂಜೇರು ಆಗುತಿವಿ | ಸು | ನಮ್ಮ ಮಕ್ಕಳು ಬಂಜೇರು ಆಗುತರೆ | ಸು |
ಆರು ಜನ ಅಕ್ಕಗೋಳು | ಸು | ಆ ಮಾತನಾಡುತಾರೆ | ಸು |
ಆ ಮಾತನಾಡಿಕೊಂಡು | ಸು | ಅರಮನೆಗೆ ಬಂದರೆ | ಸು |

ಅರಮನೆಗೆ ಬಂದಿನ್ನ | ಸು | ಕೊಡಗಳ ಮಡಿಗ್ಯಾರೆ | ಸು |

ಕೊಡಗಳ ಮಡಗಿನ್ನ | ಸು | ಬಾಕಲಲ್ಲಿ ನಿಂತವರೆ | ಸು |
ಹೊನ್ನಮ್ಮ ಆಗಲೆ | ಸು | ಓಡೋಡಿ ಹೋಗುತಾಳೆ | ಸು |
ಬಾಕುಲಾಗೆ ಕೂತುಗಂಡು | ಸು | ಏನುಮಾತನಾಡುತಾರೆ | ಸು |
ಆರುಜನ ಅಕ್ಕಗೊಳು | ಸು | ಮಕ್ಕಳ ಮಡಗಬೇಕು | ಸು |
ಆರು ಜನ ಮಕ್ಕಳ | ಸು | ಬೇಗದಲ್ಲಿ ಕರೆದರು | ಸು |
ಬೇಗದಲ್ಲಿ ಕರೆದಿನ್ನ | ಸು | ವಾಡೆ ಮೂಡಿಗೆ ತುಂಬಿ | ಸು |
ಬಾಕಲಲ್ಲಿ ಕುಂತವರೆ | ಸು | ಹೊನ್ನಮ್ಮ ಹೋಗುತಾಳೆ | ಸು |
ಹೊನ್ನಮ್ಮ ಹೋಗಿನ್ನ | ಸು | ಆರುಜನ ಅಕ್ಕಗಳಿರ | ಸು |
ಆಡಾಕೆ ಹೋಗ್ಯವರೆ | ಸು | ಬಾಳದುಃಖ ಮಾಡುತಾಳೆ | ಸು |
ಓಡೋಡಿ ಹೋಗುತಾಳೆ | ಸು | ದನಕಾಯೊ ಮಕ್ಕಳಿರ | ಸು |
ಆಡುಕಾಯೊ ಮಕ್ಕಳಿರ | ಸು | ನಮ್ಮ ಮಕ್ಕಳ ಕಾಣಿರೇನೊ | ಸು |
ನಿಮ್ಮ ಮಕ್ಕಳು ಇಲ್ಲವಲ್ಲ | ಸು | ನಾವೆಯ ಇದ್ದೀವಿ | ಸು |
ನಮ್ಮ ಆಟಕೆ ಬರಲಿಲ್ಲ | ಸು | ಆಗಲೆ ಹೊನ್ನಮ್ಮ | ಸು |
ಗುಡ್ಡಗ್ವಾರಣ್ಯವ | ಸು | ಹುಡುಕ್ಯಾಳೆ ಹೊನ್ನಮ್ಮ | ಸು |
ಮಕ್ಕಳೆ ಸಿಕ್ಕಲಿಲ್ಲ | ಸು | ಓಡೋಡಿ ಬರುತಾಳೆ | ಸು |
ಓಡೋಡಿ ಬಂದಿನ್ನ | ಸು | ಆರುಜನ ಅಕ್ಕಗಳಿರ | ಸು |
ನಿಮ್ಮ ಮಕ್ಕಳೆ ಸಿಕ್ಕಲಿಲ್ಲ | ಸು | ನನ್ನ ಆರು ಜನ ಅಕ್ಕಗಳು | ಸು |
ಮೂಲೇಲಿ ಇದ್ದಂಥ | ಸು | ಒನಕೆಯಮಂಡಿಯ | ಸು |
ಬೇಗದಲಿ ತಕ್ಕಂಡು | ಸು | ಕಣಕಾಲ ಮುರಿದರು | ಸು |
ಮೊಣಕೈಯ ಮುರಿದರು | ಸು | ಕೊರಕಲಿಗೆ ಎಸೆದರು | ಸು |
ಆಗಲೆ ಹೊನ್ನಮ್ಮ | ಸು | ಏನು ಶಾಪ ಇಡುತಾಳೆ | ಸು |
ಇವರ ವಾಡೇಲಿದ್ದ ಮಕ್ಕಳು | ಸು | ಹುಳುತೇಯ ಹೋಗಲಿ | ಸು |

ಅರಣ್ಯ ಅಡವ್ಯಾಗೆ | ಸುವ್ವಲಾಲೆ |

ಮಧ್ಯ ಚದುರದಲ್ಲಿ | ಸು | ಕೊರಗುತ ಮನಗವಳೆ | ಸು |
ಶಿವನು ಪಾರ್ವತದೇವಿ | ಸು | ಈರೊಂಬತ್ತು ಕೋಟಿಗೆ | ಸು |
ಪಡಿದಾನ ಅಳಕೊಂಡು | ಸು | ಚಂಚರಣೆ ಬರುವಾಗ | ಸು |
ಪಾರ್ವತಿ ಏನಂದು | ಸಯ | ಯಾರಿಗೊ ಮಾಶಿವನೆ | ಸು |
ಬಾಳ ಕಷ್ಟ ಬಂದೈತೆ | ಸು | ಹೋಗಾನ ಬಲ್ಲಿ ಶಿವನೆ | ಸು |
ಗಾಳೊಂದೊ ನಾಕಾಣೆ | ಸು | ಪೀಡೊಂದೊ ನಾಕಾಣೆ | ಸು |
ಬಾರಲ ಪಾರ್ವತಿ | ಸು | ಬರುದಾಲೆ ಹೋದರೆ | ಸು |
ನಿಮ್ಮ ಪಾದದಮೇಲಿನ್ನ | ಸು | ನಾಲಗೆ ಹಿರಕಂಡು | ಸು |
ನಮ್ಮ ಪ್ರಾಣವ ಬಿಡುತೀನಿ | ಸು | ಹಾಳಾದ್ಹೆಂಗ್ಸಿನಕುಟ್ಟೆ | ಸು |
ಒಂದೀಗೆ ಬರಬಾರ‍್ದು | ಸು | ಹಂಗಂದು ಮಾ ಶಿವನು | ಸು |
ಬೇಗದಲಿ ಬರುತಾನೆ | ಸು | ಬೇಗದಲಿ ಬಂದಿನ್ನ | ಸು |
ನಿಂತುಗಂಡೆ ನೋಡುತಾರೆ | ಸು | ಮೇಲಕೆ ಎಳೆದಾರೆ | ಸು |
ಮೇಲಕೆ ಎಳೆದಿನ್ನ | ಸು | ನಿನಗೆ ಏನು ಕಷ್ಟ ಬಂದಿತು | ಸು |
ನೀನು ಹೇಳಲೆಬೇಕಿನ್ನ | ಸು | ಹಾರಿಸೋರು ನೀವಲ್ಲ | ಸು |
ತೀರಿಸೋರು ನೀವಲ್ಲ | ಸು | ನಿನ್ನ ಕಷ್ಟ ಹೇಳಲುಬೇಕು | ಸು |
ಆಗಲೆ ಮಾ ಶಿವನು | ಸು | ಮಂತ್ರಾಕ್ಷಿಕಡ್ಡಿ ತೆಗೆದು | ಸು |
ಮಂತುರಿಸಿ ಬಿಟ್ಟರು | ಸು | ಆಕೆ ಜೀವವ ಪಡೆದಾರು | ಸು |
ಸುವ್ವಿ ಸುವ್ವಮ್ಮ ಲಾಲೆ ಸುವ್ವಲಾಲೆ |
ಜಾಣೆ ಜಾಗರದ್ಹೆಣೆ ಸುವ್ವಲಾಲೆ ||
ಹೇಳಲೆ ಬೇಕಿನ್ನ ಸುವ್ವಲಾಲೆ | ಸು | ಹೇಳಿದಳು ಹೊನ್ನಮ್ಮ ಸುವ್ವಲಾಲೆ | ಸು |
ನಾವು ಹುಟ್ಟಿದೊಂದೇಳು ಜನ | ಸು | ಬೆಳೆದುದ್ದೊಂದೇಳುಜನ | ಸು |
ಬೆಳಿದೊಂದೇಳು ಜನರು | ಸು | ಮದುವೆ ಸೋಬನ ಆಗಿ | ಸು |
ಆರು ಜನ ಅಕ್ಕಗಳಿಗೆ | ಸು | ಮಕ್ಕಳೆ ಆದವು | ಸು |
ಕಿರಿಯೋಳು ಹೊನ್ನಮ್ಮ | ಸು | ಮಕ್ಕಳೆ ಇಲ್ಲವಲ್ಲ | ಸು |
ಅಕ್ಕದಿರ ಮಕ್ಕಳಿಗೆ | ಸು | ನಾನು ಸಂತೀಗೆ ಹೋಗಿನ್ನ | ಸು |
ಕಡಲೆ ಬೆಲ್ಲವ ಕೊಂಡೆ | ಸು | ಅಂಗಿ ಕುವಾಲಿಕೊಂಡೆ | ಸು |
ತುದಿಗಾಲ್ ಪಾಪಸು ಕೊಂಡೆ | ಸು | ಗಂಟುಮಾಡಿ ಕಟ್ಟಿಕೊಂಡು | ಸು |
ಓಡೋಡಿ ಹೋದೆನು | ಸು | ಕಡಲೆ ಬೆಲ್ಲವ ಕೊಟ್ಟು | ಸು |
ಎತ್ತಿ ಮುದ್ದಾಡೇನು | ಸು | ಕಚ್ಚಿ ಮುದ್ದಾಡೇನು | ಸು |

ಹೊನ್ನಮ್ಮ ತನ್ನ ಬಂಜೆತನದ ವ್ಯಥೆಯನ್ನೆಲ್ಲ, ತನ್ ಕತೆಯನ್ನೆಲ್ಲ ವಿವರಿಸುತ್ತಾಳೆ. ಶಿವಪಾರ್ವತಿಯರಿಗೆ ಆರುಮಂದಿ ಅಕ್ಕಂದಿರ ವರ್ತನೆಯನ್ನು ಬಣ್ಣಿಸುತ್ತಾಳೆ.

ಹಳಾದ ಬಂಜೆತನ | ಸು | ಹರಿಸಲೆ ಬೇಕಪ್ಪ | ಸು |

ಆದರೆ ಆಗಲಮ್ಮ | ಸು | ನಿನಗೊಂದು ಫಲವುಂಟು | ಸು |
ಮಾಯದ ಮಾವಿನಮರ | ಸು | ಮಾಡ್ಯಾರು ಮಾಶಿವನು | ಸು |
ಜೋಳಿಗೆ ಹಾಕ್ಕೊಂಡು | ಸು | ಮೇಲಕೆ ಹತ್ಯರೆ | ಸು |
ಮರನೆಲ್ಲ ಹುಡುಕ್ಯರೆ | ಸು | ಒಂದೇಯ ಹಣ್ಣೇಯ | ಸು |
ಕುಯ್ಕೊಂಡ ಮಾಶಿವನು | ಸು | ಬೇಗದಲ್ಲಿ ಬಂದರು | ಸು |
ಏನಂದು ಕೇಳುತಾರೆ | ಸು | ಒಂದೇಯ ಫಲವುಂಟು | ಸು |
ಗಂಡು ಮಗನ ಕೊಡುತೀನಿ | ಸು | ಹನ್ನೆರಡು ವರ್ಷವೇ | ಸು |
ಆದರೆ ಆಗಿನ್ನ | ಸು | ಕುಯ್ದೇಯ ಬಿಟ್ಟೀಗ | ಸು |
ಅಡಿಗೆಯ ಮಾಡಿನ್ನ | ಸು | ನಮಗೂಟಕೆ ಇಡಬೇಕು | ಸು |
ಆದರಾಗಲಿ ಶಿವನೆ | ಸ | ಬಂಜೆತನ ಹರಿಯಲೊ | ಸು |
ಹಂಗಂದು ಹೊನ್ನಮ್ಮ | ಸು | ಭಾಷೆಯ ಕೊಡಬೇಕು | ಸು |
ಬಲಗೈಭಾಷೆಯಕೊಟ್ಟು | ಸು | ಎಡಗೈ ನಂಬಿಕೆಕೊಟ್ಟು | ಸು |
ಬಂಜೆತನ ಹರಿಯಲಿ | ಸು | ಹಂಗಂದ ಮಾಶಿವನು | ಸು |
ಹಣ್ಣಾನೆ ಕೊಡುತರೆ | ಸು | ಪೂಜೆಯ ಮಾಡಿನ್ನ | ಸು |
ಹಣ್ಣನ್ನೆ ತಿನ್ನಮ್ಮ | ಸು | ಹಣ್ಣಾನೆ ಈಸಿಗಂಡ್ಲು | ಸು |
ಅರಮನೆಗೆ ಬರುತಾಳೆ | ಸು |

ಅರಮನೆಗೆ ಬಂದಿನ್ನ | ಸುವ್ವಲಾಲೆ |

ಒಂಬತ್ತು ದಿವಸವು | ಸು | ಪೂಜೆಯ ಮಾಡುತಾಳೆ | ಸು |
ಪೂಜೆಯ ಮಾಡಿನ್ನ | ಸು | ಹಣ್ಣನೆ ತಿನ್ನುತಳೆ | ಸು |
ಗಂಡುಮಗುವ ಪಡೆದಳು | ಸು | ಗೆಜ್ಜೆ ಕಾಲಿನ ಮಗುವ | ಸು |
ಗಿಲಿಗಿಲಿನ ಬರುತಾನೆ | ಸು | ಆರುಜನ ಅಕ್ಕಗಳು | ಸು |
ಉಣ್ಣಾಕೆ ಅನ್ನಿಲ್ಲ | ಸು | ಉಡುವಕೆ ಬಟ್ಟಿಲ್ಲ | ಸು |
ವಾಡೇಲಿದ್ದ ಮಕ್ಕಳು | ಸು | ಹುಳುತೇಯ ಹೋಗ್ಯವರೆ | ಸು |
ಸವದೇನು ಹೊತ್ತುಗಂಡು | ಸು | ಎಲಿಗಳ ಹೊತ್ತುಗಂಡು |
ತಂಗೀಯ ಮನೆಮುಂದೆ | ಸು | ಸೌದೆಯ ಕೊಳ್ಳಿರಮ್ಮ | ಸು |
ಆಗಲೆ ಹೊನ್ನಮ್ಮ | ಸು | ಮಗನು ಲಿಂಗಧರನ | ಸ |
ಆಡುತಲಿದ್ದನು | ಸು | ಹೊನ್ನಮ್ಮ ಈಚಿಗ್ಬಂದ್ಲು | ಸು |
ಬಾಕಲಲ್ಲಿ ನಿಂತಗಂಡು | ಸು | ಏನು ಮಾತನಾಡುತಾಳೆ | ಸು |
ಸೌದೆ ಹಾಕಿಸಿಕೊಂಡು | ಸು | ಹಣವನ್ನೆ ಕೊಡಿರಮ್ಮ | ಸು |
ಆಗಲೆ ಹೊನ್ನಮ್ಮ | ಸು | ಎರಡನೆ ದುಡ್ಡುಗಳ | ಸು |
ಕೊಟ್ಟಳೆ ಹೊನ್ನಮ್ಮ | ಸು | ಏನಂದು ಹೇಳುತಾಳೆ | ಸು |
ನಾಳೆಯೆ ನಾವೆಲ್ಲ | ಸು | ಹಬ್ಬವ ಮಾಡುತಿವಿ
ನಿಮ್ಮ ಮಕ್ಕಳ ಕರಕಂಡು | ಸು | ನಿಮ್ಮ ಗಂಡದಿರ ಕರಕಂಡು | ಸು |
ನೀವು ಸೌದೆಯ ಹೊತ್ತುಗಂಡು | ಸು | ಬಲ್ಲಿರೆ ಅಮ್ಮಗಳಿರ | ಸು |
ಹಂಗಂದು ಹೊನ್ನಮ್ಮ | ಸು |
ಏನುಮಾತನಾಡುತಾಳೆ | ಸು |
ನಾಳೆಯ ದಿವಸಿನ್ನ | ಸು | ಬಾಳದುಡ್ಡಕೊಡುತಾಳೆ | ಸು |
ಎಲಿಗಳ ತಕ್ಕಂಡು | ಸು | ಮಕ್ಕಳ ಕರಕಂಡು | ಸು |
ನಾವು ಬರಲೇಯ ಬೇಕಿನ್ನ | ಸು | ಹಂಗಂದು ಹೋಗವರೆ | ಸು |
ಬೇಗದಲ್ಲಿ ಬರುತಾರೆ | ಸು | ಎಲಿಗಳ ಹಾಕ್ಯರೆ | ಸು |
ಉಣ್ಣಾಕೆ ಅನ್ನವಿಲ್ಲ | ಸು | ಉಡುವಾಕೆ ಬಟ್ಟಿಲ್ಲ | ಸು |
ಆಗಲೆ ಹೊನ್ನಮ್ಮ | ಸು | ಆರುಜನ ಅಕ್ಕಗಳ | ಸು |

ಬೇಗದಲ್ಲಿ ಹೊನ್ನಮ್ಮ | ಸು | ಆಕೆ ನೀರನೆ ಕಾಸ್ಯಳೆ | ಸು |

ಮೈಯನೆ ತೊಳಿಸ್ಯಾಳೆ | ಸು | ಮಡಿಗಳ ಕೊಟ್ಟಳು | ಸು |
ಆರುಜನ ಮಾವಗಳಿಗೆ | ಸು | ಉಡುವುದಕೆ ಬಟ್ಟಿಕೊಟ್ಟು | ಸು |
ಅಂಗಿ ಕುವಾಲಿ ಕೊಟ್ಲು | ಸು | ಗೆಜ್ಜೆಕಾಲಿನ ಮಗನ | ಸು |
ಲಿಂಗಧಾರಣೆ ಮಾಡುತಾಳೆ | ಸು | ಲಿಂಗಧಾರಣೆ ಮಾಡುವಾಗ | ಸು |
ಆರುಜನ ಅಕ್ಕಗಳಿಗೆ | ಸು | ಊಟಕೆ ಇಡುತಳೆ | ಸ |
ರನ್ನದ ಸೌಟನ್ಹಾಕಿ | ಸು | ಹಂಗಿಸ್ಹಂಗಿಸಿ ತುಪ್ಪಗಳ | ಸು |
ಎರುದಾಳೆ ಹೊನ್ನಮ್ಮ | ಸು | ಗೆಜ್ಜೆ ಕಾಲಿನವನ | ಸು |
ಕಚ್ಚಿ ಮುದ್ದಾಡುತಳೆ | ಸು | ಆರುಜನ ಅಕ್ಕಗಳು | ಸು |
ಬಹಳ ದುಃಖ ಮಾಡುತಾರೆ | ಸು | ಹೊನ್ನಮ್ಮನೆನ್ನುತ್ತಾಳೆ | ಸು |
ನೀವು ಮಾಡಿದ ಕರ್ಮ | ಸು | ನಿಮಗೆ ಇರಲಿ ಎಂದು | ಸು |
ಅರಮನೆಗೆ ಹೋಗುತಾಳೆ | ಸು | ಶಿವನೂ ಪಾರ್ವತದೇವಿ | ಸು |
ಬೇಗದಲ್ಲಿ ಬರುತಾರೆ | ಸು | ಬೇಗದಲ್ಲಿ ಬಂದಿನ್ನ | ಸು |
ಹೊನ್ನಮ್ಮ ಬರುತಾಳೆ | ಸು | ಇದ್ದೊಷ್ಟೆ ಬಿಸಿನೀರ | ಸು |
ಇದೊಷ್ಟೆ ತಣ್ಣೀರ | ಸು | ಭದ್ರೇಯ ಗಿಂಡೀಲಿ | ಸು |
ಹದಮಾಡಿ ತಂದರೆ | ಸು | ಹದಮಾಡಿ ತಂದಿನ್ನ | ಸು |
ಶಿವರಾಯರ ಪಾದವ | ಸು | ತೊಳುದಾಳೆ ಹೊನ್ನಮ್ಮ | ಸು |
ಪಾದಕೆ ಎರುಗಾಳೆ | ಸು | ಒಳವೀಕೆ ಕರೆದಳೆ | ಸು |
ಒಳವೀಕೆ ಕರೆದಿನ್ನ | ಸು | ಮಣೆಗಳ ಹಾಕುತಾಳೆ |
ಮಣೆಗಳ ಹಾಕಿನ್ನ | ಸು | ಮಗನನ್ನೆ ನೋಡುತಾಳೆ | ಸು |
ಗೆಜ್ಜೆ ಕಾಲಿನ ಮಗನು | ಸು | ಓದಾಕೆ ಹೋಗವನೆ | ಸು |
ಬೇಗನೆ ಬಾರಪ್ಪ | ಸು | ಓದಾನೆ ಮಠದಿಂದ | ಸು |
ಶಿವನೆ ಓಡೋಡಿ ಬರುತಾನೆ | ಸು | ಓಡೋಡಿ ಬಂದೀಗ | ಸು |
ಬಾಗುಲಲ್ಲಿ ಕಡುದಳೆ | ಸು | ಅಡುಗೆಯ ಮಾಡುತಳೆ | ಸು |
ಊಟಾಕೆ ಇಡುತಳೆ | ಸು | ಶಿವರಾಯ್ನ ಕೇಳುತಾಳೆ | ಸು |
ಬಂಜೆತನ ಹರಿಸಿದ್ರಿ | ಸು | ಎಂದೀಗ ಪಾದಕೆ | ಸು |
ಎರಗಿದಳು ಹೊನ್ನಮ್ಮ | ಸು | ಆದರೆ ಆಗಲಮ್ಮ | ಸು |
ನಿನ್ನ ಪ್ರೀತಿಗೆ ಮೆಚ್ಚಿದೆ | ಸು | ನಿನಗೆ ಹಾಲೊಕ್ಕಲಾಗಮ್ಮ | ಸು |
ನಿನ್ನ ಹೊನ್ನೊಕ್ಕಲಾಗಲಮ್ಮ | ಸು | ಆದರಾಗಲಿ ಶಿವನೆ | ಸು |
ಬಂಜೆತನ ಹರಿಯಿತು | ಸು | ಕೊಟ್ಟನೆ ಭಾಷೆಗೆ | ಸು |
ತಪ್ಪಲೆ ಇಲ್ಲವಂದು | ಸು | ನಿನ್ನ ಮಗನನ್ನೇ ಬೇಗದಲ್ಲಿ | ಸು |
ನೀನು ಬಾಕಲಲ್ಲಿ ನಿಂತಗಂಡು | ಸು | ಮಗನನ್ನೆ ಕರೆಯಮ್ಮ | ಸು |
ಹಂಗಂದ ಮಾ ಶಿವನು | ಸು | ಮಾಯವಾಗಿ ಹೋದನು | ಸು |
ಆಗಲೆ ಹೊನ್ನಮ್ಮ | ಸು | ಗೆಜ್ಜೆಕಾಲಿನ ಮಗನೆ | ಸು |
ಬೇಗದಲ್ಲಿ ಬಾರಪ್ಪ | ಸು | ಹಂಗಂದು ಹೊನ್ನಮ್ಮ | ಸು |
ನಿಂತುಗಂಡೆ ಕರೆದಳು | ಸು | ಓಡೋಡಿ ಬಂದನು | ಸು |
ಎತ್ತಿ ಮುದ್ದಾಡ್ಯಾಳು | ಸು | ಕಚ್ಚಿ ಮುದ್ದಾಡ್ಯಾಳು | ಸು |
ಬಂಜೆತನ ಹರಿಯಿತೆಂದು | ಸು | ಗೆಜ್ಜೆಕಾಲಿನ ಮಗನ | ಸು |
ಎತ್ತಿ ಮುದ್ದಾಡ್ಯಾಳೆ | ಸು | ನನಗೆ ಶಿವಕೊಟ್ಟ ಭಾಗ್ಯವು | ಸು |
ಆಗಲೆ ಹೊನ್ನಮ್ಮ | ಸು | ಬಾಲನ ಸಾಕ್ಯಾಳೆ | ಸು |
ಬಾಲನ ಸಾಕಿನ್ನ | ಸು | ಲಗ್ನವ ಮಾಡ್ಯಾಳೆ | ಸು |
ಹೊನ್ನೊಕ್ಕಲಾದಳೆ | ಸು | ಹಾಲೊಕ್ಕಲಾದಳೆ | ಸು |
ಹಾಲೊಕ್ಕಲಾಗಿನ್ನು | ಸು | ಸುಖವಾಗಿ ಬದುಕ್ಯಾಳೆ | ಸು |

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಎಲೆಗೌರಿ; ಹೆಗಡೆ ಎಲ್.ಆರ್. ಗುಮ್ಮನ ಪದಗಳು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೩. ಪು.ಸಂ. ೧೯-೨೪.

೨) ಬಂಜೆ ಹೊನ್ನಮ್ಮ; ಕಾಳೇಗೌಡ ನಾಗವಾರ ಬಯಲು ಸೀಮೆಯ ಲಾವಣಿಗಳು ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು ೧೯೭೩ ಪು.ಸಂ. ೮೯-೯೫.

೩) ಬಂಜೆ ಹೊನ್ನಮ್ಮ ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬ ಪು.ಸಂ. ೨೦೩-೨೧೪.

೪) ಮಕ್ಕಳಿಲ್ಲದ ಬಂಜೆ ಹೊಕ್ಕಳು ನಂಜನಗೂಡು; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬, ಪು.ಸಂ. ೨೮೨-೨೮೪.

೫) ಬಾಳುಗಂಚಿ ಬಂಜೆ ಹೊನ್ನಮ್ಮ; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬, ಪು.ಸಂ. ೨೩೬-೨೪೭.

೬) ಬಂಜೆಗೌರಿ; ಹೆಗಡೆ ಎಲ್.ಆರ್. ಗುಮಟೆಯ ಪದಗಳು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮, ಪು.ಸಂ. ೬೩-೬೪.

೭) ಹೊನ್ನಮ್ಮ; ಕಂಬಾರ ಚಂದ್ರಶೇಖರ ಮತ್ತು ಬರಗೂರು ಜಯಪ್ರಕಾಶ್ ಮುತ್ತು ಮುತ್ತನತ್ವಾಟ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೮೧.

೮) ನಾಗಮ್ಮನ ಶಾಪ; ಹೆಗಡೆ ಎಲ್.ಆರ್. ಮಾಚಿಯ ಕಥನ ಗೀತೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೨, ಪು.ಸಂ. ೯೪-೧೦೧.*      ಹೊನ್ನಮ್ಮ; ಪರಮಶಿವಯ್ಯ ಜೀ.ಶಂ. ಜಾನಪದ ಖಂಡಕಾವ್ಯಗಳು, ಶಾರದಾ ಮಂದಿರ, ಮೈಸೂರು ೧೯೬೮ ಪು.ಸಂ. ೪೯-೫೭.