ಹಣ್ಣು ಮತ್ತು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ; ರಸ, ಸ್ಕ್ವಾಷ್ ಜಾಮ್, ಜೆಲ್ಲಿ, ಒಣಗಿಸಿದ ಉತ್ಪನ್ನ ಮುಂತಾದವುಗಳನ್ನು ತಯಾರಿಸುವಾಗ ಅನೇಕ ಬಗೆಯ ಅನುಪಯುಕ್ತ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ. ನಿಂಬೆ ಜಾತಿ ಹಣ್ಣುಗಳ ಸಿಪ್ಪೆ, ಬೀಜ ಮತ್ತು ಅನುಪಯುಕ್ತ ಭಾಗಗಳು, ಮಾವಿನ ಹಣ್ಣಿನ ಸಿಪ್ಪೆ ಮತ್ತು ಓಟೆ ಭಾಗ, ಹಲಸಿನ ಹಣ್ಣಿನ ಹೊರಪದರು ಮತ್ತು ಬೀಜ, ಸೀಬೆ ಹಣ್ಣಿನ ದಿಂಡು ಮತ್ತು ಸಿಪ್ಪೆ, ಟೊಮೆಟೊ ಸಿಪ್ಪೆ, ಬೀಜ ಮತ್ತು ಅನುಪಯುಕ್ತ ಭಾಗಗಳು ಇವೇ ಮೊದಲಾದುವುಗಳು ಹಣ್ಣು ಸಂಸ್ಕರಿಸುವಾಗ ಸಿಗುವ ನಿರುಪಯುಕ್ತ ಪದಾರ್ಥಗಳು. ಇವುಗಳ ವಿನಿಯೋಗಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯ. ಇದಲ್ಲದೆ ಹೆಚ್ಚು ಮಾಗಿದ ಮತ್ತು ನ್ಯೂನತೆಯ ಹಣ್ಣು ಮತ್ತು ತರಕಾರಿಗಳ ಸಮಸ್ಯೆಯು ಇದ್ದೇ ಇರುತ್ತದೆ. ಆಹಾರ ಸಂಸ್ಕರಣೆಯ ಉದ್ಯಮದಲ್ಲಿ ಹೆಚ್ಚು ಗಳಿಕೆಯ ದೃಷ್ಟಿಯಿಂದ ಈ ನಿರುಪಯುಕ್ತ ಪದಾರ್ಥಗಳನ್ನು ಲಾಭದಾಯಕ ರೀತಿಯಲ್ಲಿ ಉಪಯೋಗಿಸುವುದು ಅತ್ಯಗತ್ಯ. ನಮ್ಮ ದೇಶದ ಆಹಾರ ಕೈಗಾರಿಕೆಯಲ್ಲಿ ಈ ವಿಷಯದ ಬಗ್ಗೆ ಈಗಾಗಲೇ ಸಾಕಷ್ಟು ಕೆಲಸ ನಡೆದಿದೆ.

ಅನುಪಯುಕ್ತ ಪದಾರ್ಥಗಳ ಉಪಯೋಗ

ವಿವಿಧ ಮೂಲಗಳಿಂದ ದೊರೆಯುವ ಅನುಪಯುಕ್ತ ಪದಾರ್ಥಗಳನ್ನು ಉಪಯೋಗಿಸುವ ವಿಧಾನದ ಬಗ್ಗೆ ಈ ಕೆಳಗೆ ಕೆಲವು ವಿವರಗಳನ್ನು ಕೊಡಲಾಗಿದೆ :

ಸೇಬು : ರಸ ಹಿಂಡಿದ ತಿರುಳಿನ ಭಾಗವನ್ನು ಒಣಗಿಸಿ ಪೆಕ್ಟಿನ್ ತಯಾರಿಸಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಅಧ್ಯಾಯದಲ್ಲಿ ಕೊಡಲಾಗಿದೆ.

ಏಪ್ರಿಕಾಟ್ : ಸಿದ್ದಪ್ಪ ಮತ್ತು ಮಸ್ತಾಫರ ಹೇಳಿಕೆ ಪ್ರಕಾರ ಬಿಳಿ ಏಪ್ರಿಕಾಟ್‌ನ ಸಿಹಿ ಬೀಜದ ಹೊರ ಪದರನ್ನು ಬೇರ್ಪಡಿಸಿ ಉಳಿದ ಬೀಜದ ಭಾಗವನ್ನು ಏಪ್ರಿಕಾಟ್ ಜಾಮ್‌ನೊಡನೆ ಸೇರಿಸಬಹುದು. ಇದರಿಂದ ಜಾಮ್‌ಗೆ ಉತ್ತಮ ರೂಪು ಬರುವುದಲ್ಲದೆ ನೋಡಲು ಆಕರ್ಷಕವಾಗಿರುತ್ತದೆ. ಮಿಠಾಯಿ ಪದಾರ್ಥಗಳಲ್ಲೂ ಇದನ್ನು ಉಪಯೋಗಿಸಬಹುದು. ಕ್ರುಯೆಸ್‌ರ ಹೇಳಿಕೆ ಪ್ರಕಾರ ಒತ್ತಡದಿಂದ ಅಥವಾ ಯುಕ್ತ ದ್ರಾವಕ (ಲೀನಕಾರಿ) ವನ್ನುಪಯೋಗಿಸಿ ತಿರುಳಿನಿಂದ ಎಣ್ಣೆ ತೆಗೆಯಬಹುದು. ಶುದ್ಧೀಕರಿಸಿದ ಈ ಎಣ್ಣೆಯನ್ನು ಬಾದಾಮಿ ಎಣ್ಣೆಯಂತೆ ಬಳಸಬಹುದು. ಅಂಗರಾಗ (ಕ್ರಾಂತಿವರ್ಧಕ) ಮತ್ತು ಔಷಧಿಗಳ ತಯಾರಿಕೆಯಲ್ಲಿಯೂ ಇದು ಉಪಯುಕ್ತವಾಗಿರುತ್ತದೆ. ಏಪ್ರಿಕಾಟ್ ಬೀಜದಿಂದ ಕೆಲವು ವೇಳೆ ಮೆಕರೂನ್ ಪೇಸ್ಟ್ ಸಹ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಬಾದಾಮಿಯಿಂದ ತಯಾರಿಸಲಾಗುತ್ತದೆ. ಎಣ್ಣೆ ತೆಗೆದ ಹಿಂಡಿಯಲ್ಲಿ ಸಸಾರಜನಕ ಅಧಿಕವಾಗಿರುತ್ತದೆ. ಆದುದರಿಂದ ಇದು ದನಗಳ ಆಹಾರವೂ ಆಗಬಲ್ಲದು.

ದ್ರಾಕ್ಷಿ : ದ್ರಾಕ್ಷಿಯಿಂದ ರಸ ಮತ್ತು ವೈನ್ ತಯಾರಿಸುವಾಗ ಸಿಗುವ ತೊಟ್ಟು ಮತ್ತು ತಿರುಳು ಮುಖ್ಯವಾದ ವ್ಯರ್ಥ ಪದಾರ್ಥಗಳು. ತೊಟ್ಟುಗಳಿಂಧ ಟಾರ್‌ಟಾರಿನ್ ಕೆನೆಯನ್ನು ತಯಾರಿಸಬಹುದು. ರಸತೆಗೆದ ತಿರುಳಿನಿಂದ ಬೀಜವನ್ನು ಪ್ರತ್ಯೇಕಿಸಿ ಒತ್ತಡದಿಂದ ಎಣ್ಣೆ ತೆಗೆಯಬಹುದು; ಶುದ್ಧೀಕರಿಸಿದ ಈ ಎಣ್ಣೆ ಅಡಿಗೆಗೂ ಯೋಗ್ಯವಾಗಿರುತ್ತದೆ. ದ್ರಾಕ್ಷಿ ಹಣ್ಣುಗಳನ್ನು ಒಣಗಿಸುವ ಮೊದಲು ಈ ಎಣ್ಣೆಯಲ್ಲಿ ಅದ್ದಿ ತೆಗೆದರೆ ಒಂದು ರೀತಿಯ ಹೊಳಪು ಬರುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ದನಗಳ ಆಹಾರವಾಗಿ ಉಪಯೋಗಿಸಬಹುದು. ನೀರಿನಲ್ಲಿ ಉಪಚರಿಸಿದ ರಸ ತೆಗೆದ ತಿರುಳಿಗೆ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಕ್ಯಾಲ್ಸಿಯಂ ಕ್ಲೋರೈಡ್‌ನ ಮಿಶ್ರಣವನ್ನು ಸೇರಿಸಬೇಕು. ಆಗ ಕ್ಯಾಲ್ಸಿಯಂ ಟಾರ್‌ಟೇಟ್ ಪ್ರಕ್ಷೇಪಗೊಳ್ಳುತ್ತದೆ. ಈ ಪ್ರಕ್ಷೇಪಿತ ಕ್ಯಾಲ್ಸಿಯಂ ಟಾರ್‌ಟೇಬನ್ನು ಸಜಲ ಸಲ್ಫ್ಯೂರಿಕ್ ಆಮ್ಲದೊಡನೆ ಬೆರೆಸಿದಾಗ ಕ್ಯಾಲ್ಸಿಯಂ ಸಲ್ಫೇಟ್ ಪ್ರಕ್ಷೇಪಗೊಳ್ಳುತ್ತದೆ. ಇದನ್ನು ಶೋಧಿಸಿ ಅನಂತರ ಟಾರ್‌ಟಾರಿಕ್ ಆಮ್ಲವನ್ನು ಹರಳುಗೊಳಿಸಿ ಬೇರ್ಪಡಿಸಬೇಕು. ದ್ರಾಕ್ಷಿ ಬೀಜದ ಹೊರ ಸಿಪ್ಪೆಯಿಂದ ಟ್ಯಾನಿನ್ ಸಾರವನ್ನು ಪಡೆಯಬಹುದು. ಏಲ್‌ವೆಲ್ ಮತ್ತು ಡೇನ್‌ರ ಹೇಳಿಕೆ ಪ್ರಕಾರ ರಸ ತೆಗೆದ ದ್ರಾಕ್ಷಿ ತಿರುಳು ಕೆಲವು ಸಂದರ್ಭಗಳಲ್ಲಿ ವಾಣಿಜ್ಯ ಪೆಕ್ಟಿನ್ ತಯಾರಿಕೆಗೆ ಯೋಗ್ಯ ಮೂಲವಸ್ತುವಾಗಬಲ್ಲುದು.
ಸೀಬೆ : ಇದರ ದಿಂಡು, ಬೀಜ ಮತ್ತು ಹೊರಗಿನ ಸಿಪ್ಪೆಗಳಿಂದ ಚೀಸ್ ಸಿದ್ಧಮಾಡಬಹುದು. ಸೀಬೆಹಣ್ಣಿನ ಚೀಸ್ ನಮ್ಮ ದೇಶದ ಹಲ್ವದಂತಿರುವ ಒಂದು ಹಣ್ಣಿನ ಮಿಠಾಯಿ. ಇದಕ್ಕೆ ದೇಶದ ಒಳಗೂ ಮತ್ತು ಹೊರಗೂ ಒಳ್ಳೆಯ ಮಾರುಕಟ್ಟೆಯ ಭವಿಷ್ಯವಿದೆ. ಇದನ್ನು ತಯಾರಿಸುವ ಸುಧಾರಿಸಿದ ಕ್ರಮವನ್ನು ದಾಸ್ ಮತ್ತು ಗಿರಿಧಾರಿಲಾಲ್ ನಿರ್ಧರಿಸಿದ್ದಾರೆ. ಈ ಲೇಖಕರ ಹೇಳಿಕೆ ಪ್ರಕಾರ ತಣ್ಣಗಿನ ಸ್ಥಿತಿಯಲ್ಲಿ ತಿರುಳು ತೆಗೆಯುವುದು, ಶಾಖದಿಂದ ತೆಗೆಯುವುದಕ್ಕಿಂತ ಅನುಕೂಲ ಮಾತ್ರವಲ್ಲದೆ ಅನೇಕ ರೀತಿಯಿಂದ ಉತ್ತಮವೂ ಆಗಿರುತ್ತದೆ. ಬೀಜ ಮತ್ತು ಬೀಜವನ್ನು ಆವರಿಸಿರುವ ತಿರುಳಿನಿಂದ ತಯಾರಿಸಿದ ಚೀಸ್ ಉತ್ತಮ ಮಟ್ಟದ್ದಲ್ಲ. ಆದರೆ ಸಿಪ್ಪೆ ಮತ್ತು ಇತರ ತಿರುಳಿನ ಭಾಗಗಳಿಂದ ತಯಾರಿಸಿದ ಚೀಸ್ ಉತ್ತಮ ಮಟ್ಟದ್ದಾಗಬಲ್ಲದು; ಹಣ್ಣುಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಬೇಕು ಮತ್ತು ೪೦ – ೫೦ ರಂಧ್ರದ ಜಾಲರಿಯಿಂದ ತಿರುಗಣೆ ರೀತಿಯ ರಸ ಹಿಂಡುವ ಯಂತ್ರದಲ್ಲಿ ಹಾಕಿ ತೆಗೆಯಬೇಕು.

ಸೀಬೆಹಣ್ಣಿನ ಚೀಸ್ : ಇದರ ತಯಾರಿಕೆಗೆ ಬೇಕಾದ ಪರಿಕರಗಳು ಮುಂದೆ ಕಾಣಿಸಿದ ಪಟ್ಟಿಯಂತಿರುತ್ತವೆ. :

ಪಾಕಪರಿಕರ ಪಟ್ಟಿ

ತಿರುಳು = X ಪೌಂಡುಗಳು
ಸಕ್ಕರೆ = ಜೆಲ್ಲಿ ತಯಾರಿಸಲು ಜೆಲ್ಲಿ ಮೀಟರಿನಲ್ಲಿ ತೋರಿಸಿದ ಪ್ರಮಾಣದ ಶೇಕಡಾ ೬೭; ಅಂದರೆ ೦.೬೭ XY ಪೌಂಡ್ (Y = ಜೆಲ್ಲಿಯ ಒಂದು ಪೌಂಡ್ ತಿರುಳಿಗೆ ಬೇಕಾದ ಸಕ್ಕರೆ ಪ್ರಮಾಣ ಪೌಂಡುಗಳಲ್ಲಿ)
ಸಿಟ್ರಿಕ್ ಆಮ್ಲ = ಪ್ರತಿ ೧೦೦ ಪೌಂಡ್ ಸಕ್ಕರೆಗೆ ೪.೫ ಔನ್ಸ್
ಅಡಿಗೆ ಉಪ್ಪು = ಪ್ರತಿ ೧೦೦ ಪೌಂಡ್ ಸಕ್ಕರೆಗೆ ೧೪.೦ ಔನ್ಸ್
ಬೆಣ್ಣೆ ಅಥವಾ ವನಸ್ಪತಿ ಇಲ್ಲವೇ ಗಟ್ಟಿ ಮಾಡಿದ ಎಣ್ಣೆ = ಪ್ರತಿ ೧೦೦ ಪೌಂಡ್ ಸಕ್ಕರೆಗೆ ೨೫ ಔನ್ಸ್

ಮೇಲೆ ತಿಳಿಸಿದ ಪದಾರ್ಥಗಳಲ್ಲಿ ಸಿಟ್ರಿಕ್ ಆಮ್ಲವನ್ನು ಬಿಟ್ಟು ಮಿಕ್ಕ ಎಲ್ಲ ಪದಾರ್ಥಗಳನ್ನೂ ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಬೇಕು. ಉಷ್ಣತೆ ೨೧೨ ಫ್ಯಾ. ಗೆ ಬಂದಾಗ ಇದರಲ್ಲಿ ಶೇಕಡಾ ೩೬ ಇನ್‌ವರ್ಟ್ ಸಕ್ಕರೆಯಿರಬೇಕು. ಇದಕ್ಕೆ ಸರಿಯಾಗಿ ಸಿಟ್ರಿಕ್ ಆಮ್ಲ ಸೇರಿಸಬೇಕು. ಸಮುದ್ರ ಮಟ್ಟದಲ್ಲಿ ಉಷ್ಣತೆ ೨೩೯ ಫ್ಯಾ. ಗೆ ಬಂದಾಗ, ಕುದಿಸುವುದನ್ನು ನಿಲ್ಲಿಸಬೇಕು. ಬೇಯಿಸಿದ ಪದಾರ್ಥವನ್ನು ನುಣುಪಾದ ಮೇಲ್ಮೈಯಿರುವ ತಟ್ಟೆಗೆ ಹಾಕಬೇಕು. ಈ ತಟ್ಟೆಗೆ ಮೊದಲೇ ಬೆಣ್ಣೆ ಅಥವಾ ವನಸ್ಪತಿ ಇಲ್ಲವೇ ಗ್ಲಿಸರಿನ್ ಸವರಿರಬೇಕು. ಅನಂತರ ಆರಿಸಿ ಹದಬರಲು ಬಿಡಬೇಕು. ಈ ಚೀಸ್ ಉತ್ತಮ ರೀತಿಯಲ್ಲಿ ಹದವಾಗುತ್ತದೆ. ತಿಳಿ ಕಂದು ಬಣ್ಣದ ಈ ಪದಾರ್ಥಕ್ಕೆ ಉತ್ತಮ ಮಟ್ಟದ ಪರಿಮಳವಿರುತ್ತದೆ.

ಸೀಬೆಹಣ್ಣಿನ ಸಿಪ್ಪೆ, ಬೀಜ ಮತ್ತು ಬೀಜವನ್ನು ಆವರಿಸಿರುವ ತಿರುಳುಗಳು ಮೇಲೆ ತಯಾರಿಸಿದ ಚೀಸ್ ಕಡು ಕಂದು ಬಣ್ಣದಲ್ಲಿದ್ದು ಒಳ್ಳೆ ಹದ ಬರುತ್ತದೆ. ಇದರ ಪರಿಮಳವೂ ಉತ್ತಮ ರೀತಿಯದಾಗಿರುತ್ತದೆ. ಬೀಜದಿಂದ ತಯಾರಿಸಿದ ಚೀಸ್ ಅಂಟಿನಂತಿದ್ದು ಒಳ್ಳೆ ಪರಿಮಳದಿಂದ ಕೂಡಿರುತ್ತದೆ. ಬೀಜವನ್ನು ಆವರಿಸಿರುವ ತಿರುಳಿನಿಂದ ಮೂಡಿದ ಚೀಸ್ ಬಹಳ ಮೆದುವಾಗಿರುತ್ತದೆ; ಪರಿಮಳವೂ ಸಾಕಷ್ಟಿರುತ್ತದೆ.

ಹಲಸು : ಇದರಲ್ಲಿ ಸಿಗುವ ವ್ಯರ್ಥ ಪದಾರ್ಥಗಳೆಂದರೆ ದಪ್ಪವಾದ ಹೊರಗಿನ ಸಿಪ್ಪೆ ಮತ್ತು ಒಳಗಿನ ಇತರ ವ್ಯರ್ಥ ಪದಾರ್ಥಗಳು ಇದರಿಂದ ಉತ್ತಮವಾದ ಜೆಲ್ಲಿಯನ್ನು ತಯಾರಿಸಬಹುದು. ಸಿದ್ಧಪ್ಪ ಮತ್ತು ಭಾಟಿಯ ಇವರ ಸಂಶೋಧನೆಯಿಂದ ತಿಳಿದುಬಂದಿದೆ. ಇದರಿಂದ ಪೆಕ್ಟಿನ್ ಸಹ ತಯಾರಿಸಬಹುದು. ಬೀಜಗಳಲ್ಲಿ ಪಿಷ್ಟ ಹೆಚ್ಚಿರುತ್ತದೆ. ಇವುಗಳನ್ನು ಹುರಿದು ಇಲ್ಲವೇ ಬೇಯಿಸಿ ತಿನ್ನಬಹುದು. ಹಲಸಿನ ಬೀಜದ ಪುಡಿಯನ್ನು ಇತರ ಧಾನ್ಯಗಳೊಂದಿಗೆ ಸೇರಸಬಹುದು.

ಮಾವು : ಮಾವಿನ ಹಣ್ಣಿನ ಸಿಪ್ಪೆಯಿಂದ ನೀರನ್ನು ಉಪಯೋಗಿಸಿ ಸಾರ ತೆಗೆಯಬಹುದು; ಇದನ್ನು ಹುದುಗಿಸಿ ವಿನಿಗರ್ ತಯಾರಿಸಬಹುದು. ಓಟೆಯ ಒಳಗಿನ ಬೀಜವನ್ನು ಒಣಗಿಸಿ, ಪುಡಿ ಮಾಡಿ, ಖಾದ್ಯ ಪದಾರ್ಥವಾಗಿ ಉಪಯೋಗಿಸಬಹುದು. ನಮ್ಮಲ್ಲಿ ಈಗ ಆಹಾರದ ಕೊರತೆಯು ತೀರ ಉತ್ಕಟಾವಸ್ಥೆಯಲ್ಲಿದೆ. ಮಾವಿನ ಹಣ್ಣಿನ ಓಟೆಯನ್ನು ಆಹಾರವಾಗಿ ಉಪಯೋಗಿಸುವುದು ಈ ದಿಶೆಯಲ್ಲಿ ಒಂದು ಸೂಕ್ತ ಸಲಹೆಯಾಗಿದೆ.

ಪ್ಯಾಶನ್ಹಣ್ಣು : ಹಣ್ಣಿನ ದಪ್ಪ ಹೊರಪದರದಿಂದ ಪೆಕ್ಟಿನ್ ಪಡೆಯಬಹುದಲ್ಲದೆ ಬೀಜದಿಂದ ಎಣ್ಣೆ ತೆಗೆಯಬಹುದು.

ಪೀಚ್ : ಏಪ್ರಿಕಾಟ್ ಹಣ್ಣಿನ ಬೀಜದಿಂದ ಎಣ್ಣೆ ತೆಗೆಯುವ ರೀತಿಯಲ್ಲಿಯೇ ಇದರ ಬೀಜದಿಂದಲೂ ಎಣ್ಣೆ ಪಡೆಯಬಹುದು.

ಪೇರ್ : ಸಿಪ್ಪೆ ಮತ್ತು ದಿಂಡನ್ನು ಹುದುಗಿಸಿ ಪೆರಿ ಅಥವಾ ವಿನಿಗರ್ ತಯಾರಿಸಬಹುದು. ಇವುಗಳನ್ನು ಒಣಗಿಸಿದರೆ ದನಗಳಿಗೆ ಉತ್ತಮ ಆಹಾರವಾಗಬಲ್ಲದು.

ಅನಾನಸ್ಸು : ಕ್ರುಯೆಸ್‌ರ ಹೇಳಿಕೆ ಪ್ರಕಾರ ಹೊರಗಿನ ಸಿಪ್ಪೆ ಹಣ್ಣನ್ನು ಸಮಮಾಡುವಾಗ ಸಿಗುವ ಚೂರುಗಳು ಮತ್ತು ಇತರ ವ್ಯರ್ಥ ಭಾಗಗಳನ್ನು ಸಣ್ಣ ಚೂರು ಮಾಡಿ ರಸ ತೆಗೆಯಬಹುದು. ಇದಕ್ಕೆ ಎಡೆಬಿಡದೆ ಕಾರ್ಯ ನಡೆಸುವ ಹಿಂಡುವ ಯಂತ್ರ ಬಳಕೆಯಲ್ಲಿದೆ. ಈ ರಸದ ಆಮ್ಲೀಯತೆ ಮತ್ತು ಬಣ್ಣವನ್ನು ಹೋಗಲಾಡಿಸಬಹುದು. ಅನಂತರ ಶುದ್ಧೀಕರಿಸಿ ಈ ರಸವನ್ನು ಸಕ್ಕರೆ ಪಾಕದೊಡನೆ ಬೆರೆಸಿ ಡಬ್ಬಿಯಲ್ಲಿ ತುಂಬಲು ಉಪಯೋಗಿಸಬಹುದು. ಹಿಂದಿನ ಕಾಲದಲ್ಲಿ ಇದನ್ನು ಹುದುಗಿಸಿ ಮದ್ಯಸಾರ ತಯಾರಿಸುತ್ತಿದ್ದರು. ಅಲ್ಲದೆ, ಇದನ್ನು ಮೋಟಾರು ವಾಹನ ಚಲನೆಗೂ ಬಳಸಲಾಗುತ್ತಿತ್ತು. ಅನಾನಸ್ಸಿನ ರಸದಿಂದ ಸಿಟ್ರಿಕ್ ಆಮ್ಲ ದೊರೆಯುತ್ತದೆ. ಈ ರಸಕ್ಕೆ ಮೊದಲು ಕ್ಯಾಲ್ಸಿಯಂ ಕಾರ್ಬೊನೇಟ್ ಸೇರಿಸಿ ತಟಸ್ಥಗೊಳಿಸಬೇಕು. ಅನಂತರ ನಿಂಬೆ ರಸದಿಂದ ಸಿಟ್ರಿಕ್ ಆಮ್ಲ ಪಡೆಯುವ ರೀತಿಯಲ್ಲಿಯೇ ಇದಕ್ಕೂ ಕ್ಯಾಲ್ಸಿಯಂ ಸಿಟ್ರೇಟ್ ಸೇರಿಸಿ ಸಿಟ್ರಿಕ್ ಆಮ್ಲವನ್ನು ಪಡೆಯಬಹುದು. ಅನಾನಸ್ಸಿನ ದಿಂಡಿನಿಂದ ಹಳಕು ತಯಾರಿಸಬಹುದು ಇಲ್ಲವೇ ರಸ ತೆಗೆಯಬಹುದು. ರಸ ತೆಗೆದ ಮೇಲೆ ಸಿಗುವ ಹಿಪ್ಪೆಯನ್ನು ಒಣಗಿಸಿದರೆ ದನಗಳ ಆಹಾರವಾಗಬಲ್ಲುದು. ಹಣ್ಣಿನ ರಸ ಹಿಂಡಿದ ಮೇಲೆ ಉಳಿಯುವ ಹಿಪ್ಪೆ, ದಿಂಡು ಮತ್ತು ಸಜ್ಜುಗೊಳಿಸುವಾಗ ಸಿಗುವ ಚೂರು ಇವುಗಳು ಜಾಮ್ ತಯಾರಿಸಲು ಯೋಗ್ಯವಲ್ಲ.

ಬಟಾಣಿ : ಗಿಡದ ಬಳ್ಳಿ ಮತ್ತು ಕಾಯಿಯನ್ನು ಹಾಗೆಯೇ ಅಥವಾ ಒಣಗಿಸಿ ದನಗಳ ಆಹಾರವಾಗಿ ಉಪಯೋಗಿಸಬಹುದು.

ಟೊಮೆಟೊ : ಹಣ್ಣಿನ ಸಿಪ್ಪೆಯಿಂದ ಬೇರ್ಪಡಿಸಿದ ಬೀಜಗಳಿಂದ ಅಡಿಗೆಗೆ ಯೋಗ್ಯವಾದ ಎಣ್ಣೆ ತೆಗೆಯಬಹುದು. ಹಣ್ಣುಗಳನ್ನು ಸಜ್ಜುಗೊಳಿಸುವಾಗ ಸಿಗುವ ಚೂರುಗಳಿಂದ ರಸ ಅಥವಾ ಕೆಚಪ್ ತಯಾರಿಸಬಹುದು. ತಣ್ಣಗಿನ ಸ್ಥಿತಿಯಲ್ಲಿ ರಸ ತೆಗೆಯುವಾಗ ಸಿಗುವ ಬೀಜ ಬಿತ್ತನೆಗೂ ಯೋಗ್ಯವಾಗಿರುತ್ತದೆ.

ಇತರ ತರಕಾರಿಗಳು : ಆಲೂಗೆಡ್ಡೆ, ಎಲೆಕೋಸು, ಹೂಕೋಸು, ಸಿಹಿಗೆಣಸು, ಬೀನ್ಸ್ ಮುಂತಾದವುಗಳನ್ನು ಒಣಗಿಸಲು ತಯಾರಿಸುವಾಗ ಸಿಗುವ ವ್ಯರ್ಥ ಪದಾರ್ಥಗಳು ದನಗಳ ಆಹಾರವಾಗಬಲ್ಲವು. ವ್ಯರ್ಥವಾಗುವ ತರಕಾರಿಯ ಎಲೆಗಳಿಂದ ಕೆಲವು ಉಪಯುಕ್ತ ಆಹಾರ ಪದಾರ್ಥಗಳನ್ನು ತಯಾರಿಸಬಹುದು.

ನಿಂಬೆ ಜಾತಿ ಹಣ್ಣುಗಳ ಉಪ ಉತ್ಪನ್ನಗಳು

ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಕಾರ್ಡಿಯಲ್ ತಯಾರಿಕೆಯಲ್ಲಿ ನಿಂಬೆರಸದ ತಳದಲ್ಲಿ ನಿಲ್ಲುವ ಹಣ್ಣಿನ ಪರೆಯ ಚೂರುಗಳು, ಬೀಜ, ಮತ್ತು ಮಡ್ಡಿ ಇವೆಲ್ಲ ಮುಖ್ಯ ನಿರುಪಯುಕ್ತ ಪದಾರ್ಥಗಳಾಗಿರುತ್ತವೆ. ಆದರೆ ಈ ಸಿಪ್ಪೆಗಳಿಂದ ಹಳಕು ತಯಾರಿಸಬಹುದು ಇಲ್ಲವೇ ಬಟ್ಟಿ ಇಳಿಸಿ ಸುಗಂಧತೈಲ ಪಡೆಯಬಹುದು. ಈ ತೈಲಕ್ಕೆ ಮಿಠಾಯಿ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಣ್ಣಿನ ಪರೆಯ ಚೂರುಗಳಿಂದ ಪೆಕ್ಟಿನ್, ಮಾರ್ಮಲೇಡ್ ಮತ್ತು ಟಾಫಿಗಳನ್ನು ತಯಾರಿಸಬಹುದು; ಒಣಗಿಸಿದರೆ ಇದು ದನಗಳ ಆಹಾರವಾಗುತ್ತದೆ. ನಿಂಬೆ ರಸದ ತಳದಲ್ಲಿ ನಿಲ್ಲುವ ಮಡ್ಡಿಯಂಥ ಪದಾರ್ಥವನ್ನು ಬಟ್ಟಿ ಇಳಿಸಿದರೆ ನಿಂಬೆ ತೈಲ ಸಿಗುವುದೆಂಬುದಾಗಿ ಜೈನ್‌ದಾಸ್ ಮತ್ತು ಗಿರಿಧಾರಿಲಾಲ್ ತಿಳಿಸಿರುತ್ತಾರೆ; ಇದು ಸಿಟ್ರಿಕ್ ಆಮ್ಲ ತಯಾರಿಸಲು ಯೋಗ್ಯವಾಗಿರುತ್ತದೆ. ಕಿತ್ತಳೆಯ ಅನುಪಯುಕ್ತ ಭಾಗಗಳನ್ನು ಹುದುಗಿಸಿದಾಗ ವಿನಿಗರ್ ಉತ್ಪನ್ನವಾಗುತ್ತದೆ.

ಸಿಟ್ರಿಕ್ ಆಮ್ಲ : ಲಾಲ್‌ಸಿಂಗ್ ಮತ್ತು ಗಿರಿಧಾರಿಲಾಲ್ ಇವರ ಹೇಳಿಕೆ ಪ್ರಕಾರ ದೋಷಯುಕ್ತ ನಿಂಬೆ, ಗಲ್‌ ಗಲ್‌, ಖಟ್ಟಾ ಮುಂತಾದವುಗಳಿಂದ ಸಿಟ್ರಿಕ್ ಆಮ್ಲ ತಯಾರಿಸಬಹುದು. ರಸವನ್ನು ಮೊದಲು ನೈಜವಾಗಿ ಹುದುಗಿಸಿದರೆ ಶೋಧಿಸುವಾಗ ಅಡಚಣೆಯನ್ನುಂಟುಮಾಡುವ ಗೋಂದು, ಪೆಕ್ಟಿನ್ ಮತ್ತು ಸಕ್ಕರೆಯನ್ನು ಬೇರ್ಪಡಿಸಬಹುದು. ಹುದುಗಿಸಿದ ರಸವನ್ನು ಕೈಸಲ್‌ಗುರ್ ಮಾದರಿಯ ಶೋಧಿಸುವ ಸಹಾಯಕದೊಂದಿಗೆ ೧೪೦ – ೧೫೦ ಫ್ಯಾ.ನಲ್ಲಿ ಉಪಚರಿಸಬೇಕು. ಇದಕ್ಕೆ ಜಲಯುಕ್ತ ಸುಣ್ಣ ಮತ್ತು ಕ್ಯಾಲ್ಸಿಯಂ ಕಾರ್ಬೋನೇಟನ್ನು ಸೇರಿಸಿದಾಗ ಕ್ಯಾಲ್ಸಿಯಂ ಸಿಟ್ರೇಟ್ ಪ್ರಕ್ಷೇಪಗೊಳ್ಳುತ್ತದೆ. ಇದನ್ನು ಬೇರ್ಪಡಿಸಿ ಕೂಡಲೇ ಒಣಗಿಸಬೇಕು. ಇದರಿಂದ ಅದರ ಬಣ್ಣ ಬದಲಾಗುವುದನ್ನು ತಡೆಯಬಹುದು. ಕ್ಯಾಲ್ಸಿಯಂ ಸಿಟ್ರೇಟನ್ನು ನೇರವಾಗಿ ಸಿಟ್ರಿಕ್ ಆಮ್ಲವಾಗಿ ಪರಿವರ್ತಿಸಬೇಕಾದರೆ ತೆಳ್ಳಗಿನ ಗಂಜಿರೂಪದಲ್ಲಿ ಉಪಯೋಗಿಸಬೇಕು. ಇದನ್ನು ಗೊತ್ತಾದ ಪ್ರಮಾಣದಲ್ಲಿ ಪ್ರಬಲ ಸಲ್ಫೂರಿಕ್ ಆಮ್ಲದೊಡನೆ ಬೆರೆಸಿದಾಗ ಸಿಟ್ರೇಟಿನಿಂದ ಸಿಟ್ರಿಕ್ ಆಮ್ಲವು ವಿಭಜನೆಗೊಳ್ಳುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಸಲ್ಫೇಟ್ ಪ್ರಕ್ಷೇಪಗೊಳ್ಳುತ್ತದೆ. ಇದನ್ನು ಬೇರ್ಪಡಿಸಿ ಉಳಿದ ದ್ರವಾಂಶವನ್ನು ಸಾಂದ್ರೀಕರಿಸಿದಾಗ ಸಿಟ್ರಿಕ್ ಆಮ್ಲದ ಹರಳು ದೊರೆಯುತ್ತದೆ. ಹುದುಗಿಸದಿರುವ ರಸದಿಂದ ಕ್ಯಾಲ್ಸಿಯಂ ಸಿಟ್ರೇಟನ್ನು ತಯಾರಿಸಬಹುದು. ಪ್ರಬಲ ಸೋಡಿಯಂ ಕಾರ್ಬೊನೇಟ್ ದ್ರಾವಣವನ್ನು ಸೇರಿಸಿದರೆ ಇದು ಸೋಡಿಯಂ ಸಿಟ್ರೇಟ್ ಆಗಿ ಪರಿವರ್ತನೆಗೊಳ್ಳುತ್ತದೆ; ಕ್ಯಾಲ್ಸಿಯಂ ಕಾರ್ಬೋನೇಟ್ ಪ್ರಕ್ಷೇಪಗೊಳ್ಳುತ್ತದೆ; ಇದನ್ನು ಶೋಧಿಸಿ ಬೇರ್ಪಡಿಸಬೇಕು. ಅನಂತರ ದ್ರಾವಣವನ್ನು ಸಾಂದ್ರೀಕರಿಸಿದಾಗ ಹರಳುಗಳ ರೂಪದಲ್ಲಿ ಸೋಡಿಯಂ ಸಿಟ್ರೇಟ್ ಸಿಗುತ್ತದೆ.

ನಿಂಬೆಹಣ್ಣಿಗೆ ನಮ್ಮಲ್ಲಿ ಅತಿಹೆಚ್ಚು ಬೆಲೆಯಿದೆ. ಈ ದೃಷ್ಟಿಯಿಂದ ಸಿಟ್ರಿಕ್ ಆಮ್ಲವನ್ನು ಭಾರಿ ಪ್ರಮಾಣದಲ್ಲಿ ತಯಾರಿಸುವುದು ಲಾಭದಾಯಕವಲ್ಲ. ಪರದೇಶಗಳಿಂದ ಆಮದು ಮಾಡಿದ ಸಿಟ್ರಿಕ್ ಆಮ್ಲದ ಬೆಲೆ ಪೌಂಡಿಗೆ ಕೇವಲ ೨ -೩ ರೂಪಾಯಿಯಷ್ಟಿರುತ್ತದೆ. ಇದು ಬಹಳ ಅಗ್ಗವೆಂದೇ ಹೇಳಬಹುದು. ಇದಕ್ಕೆ ಕಾರಣ ಪರದೇಶಗಳಲ್ಲಿ ಸಿಟ್ರಿಕ್ ಆಮ್ಲವನ್ನು ಹುದುಗಿಸಿದ ಸಕ್ಕರೆಯಿಂದ ತಯಾರಿಸುತ್ತಾರೆ.

ಪೆಕ್ಟಿನ್ : ಕಿತ್ತಳೆಯಿಂದ ರಸಹಿಂಡಿ ಉಳಿದ ಗಲ್ ಗಲ್ ಅಥವಾ ಅನುಪಯುಕ್ತ ಭಾಗಗಳಿಂದ ಪೆಕ್ಟಿನ್ ಉತ್ಪಾದಿಸಬಹುದು. ಇದರ ವಿಧಾನವನ್ನು ಅಧ್ಯಾಯ ೧೮ರಲ್ಲಿ ವಿವರಿಸಲಾಗಿದೆ.

ನಿಂಬೆತೈಲ : ಲಾಲ್‌ಸಿಂಗ್ ಮತ್ತು ಗಿರಿಧಾರಿಲಾಲ್ ಇವರ ಹೇಳಿಕೆ ಪ್ರಕಾರ ತಣ್ಣಗಿನ ಸ್ಥಿತಿಯಲ್ಲಿ ನಿಂಬೆ ಸಿಪ್ಪೆಯನ್ನು ಹಿಂಡಿದರೆ ಶೇಕಡಾ ೦.೫೪ ರಷ್ಟು ತೈಲಪಡೆಯಬಹುದು. ಇದು ಬಟ್ಟಿ ಇಳಿಸಿ ತೆಗೆದ ತೈಲಕ್ಕಿಂತ ಉತ್ತಮ ಮಟ್ಟದ್ದಾಗಿರುತ್ತದೆ. ಇದಕ್ಕೆ ಹೆಚ್ಚಿನ ಬೆಲೆಯೂ ಸಿಗುತ್ತದೆ. ಸಿಪ್ಪೆಯಿಂದ ತೈಲ ತೆಗೆಯಲು ಅನೇಕ ವಿಧಾನಗಳಿವೆ. ಇಟಲಿ ದೇಶದಲ್ಲಿ ನಿಂಬೆ ಸಿಪ್ಪೆಯನ್ನು ಕೈಯಿಂದ ಹಿಂಡುತ್ತಾರೆ; ರಸ ಮತ್ತು ತೈಲವನ್ನು ಸ್ಪಂಜು ಹೀರಿಕೊಳ್ಳುತ್ತದೆ. ಈ ಸ್ಪಂಜನ್ನು ಪದೇ ಪದೇ ಹಿಂಡಿ ರಸ ಮತ್ತು ತೈಲವನ್ನು ಪಡೆಯಬಹುದು. ಈ ಮಿಶ್ರಣದಿಂದ ತೈಲವನ್ನು ಬಸಿದು ಬೇರ್ಪಡಿಸಬೇಕಾಗುತ್ತದೆ.

ಕಿತ್ತಳೆ ಹಣ್ಣುಗಳನ್ನು ತಿರುಗುವ, ಒರಟಾಗಿರುವ ಬಿಲ್ಲೆಗಳಿಂದ ಕೆರೆಯುತ್ತಾರೆ. ಕೆರೆದ ಈ ಹಣ್ಣುಗಳನ್ನು ಸ್ಪಂಜಿನಲ್ಲಿ ಉಜ್ಜುತ್ತಾರೆ. ಆಗ ಅದು ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ಇನ್ನೊಂದು ರೀತಿಯಲ್ಲಿ ಕಿತ್ತಳೆ ಅಥವಾ ನಿಂಬೆ ಹಣ್ಣುಗಳನ್ನು ಮೊನಚಾದ ಅನೇಕ ಮುಳ್ಳುಗಳಿರುವ ಯಂತ್ರದಲ್ಲಿ ಉರುಳಿಸುತ್ತಾರೆ. ಇದರಿಂದ ತೈಲ ಕೋಶಗಳಲ್ಲಿ ಸಣ್ಣ ರಂಧ್ರಗಳುಂಟಾಗಿ ತೈಲ ಹೊರಬರುತ್ತದೆ. ನೀರನ್ನು ಸಿಂಪಡಿಸಿ ತೈಲವನ್ನು ತೊಳೆದು ತೆಗೆಯಬೇಕು. ಅನಂತರ ಕೇಂದ್ರಾಪಗಾಮಿ ಬೇರ್ಪಡಿಸುವ ಯಂತ್ರಗಳಿಂದ ಈ ತೈಲವನ್ನು ಮರಳಿ ಪಡೆಯಬಹುದು.

ಆಗ ತಾನೆ ಕಿತ್ತ ಸಡಿಲಸಿಪ್ಪೆಯ ಕಿತ್ತಳೆಯಿಂದಲೂ ಉತ್ತಮ ಮಟ್ಟದ ತೈಲವನ್ನು ಪಡೆಯಬಹುದು. ಇದಕ್ಕೆ ಸಿಪ್ಪೆಯನ್ನು ಬೆರಳುಗಳ ಮಧ್ಯೆ ಇಟ್ಟು ಬಾಗಿಸಬೇಕು. ಆಗ ತೈಲ ಮತ್ತು ರಸ ಹೊರಬರುತ್ತದೆ. ಸೀಸೆಗೆ ನಳಿಕೆಯನ್ನಿಟ್ಟು ಅದರ ಚೂಪಾದ ಅಂಚಿಗೆ ತೆರೆದಾಗ ರಸ ಮತ್ತು ತೈಲ ಸೀಸೆಯಲ್ಲಿ ಶೇಖರವಾಗುತ್ತದೆ; ರಸದ ಮೇಲ್ಭಾಗದಲ್ಲಿ ತೈಲ ಸಂಗ್ರಹವಾಗಿರುತ್ತದೆ. ಬೇರ್ಪಡಿಸುವ ನಳಿಕೆ ಮೂಲಕ ಇಲ್ಲವೇ ಬಸಿಯುವುದರಿಂದ ತೈಲವನ್ನು ಪ್ರತ್ಯೇಕಿಸಬಹುದು. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದವರು ಸಿಪ್ಪೆಯಿಂದ ತಣ್ಣಗಿನ ಸ್ಥಿತಿಯಲ್ಲಿ ತೈಲ ತೆಗೆಯುವ ಬಗ್ಗೆ ಅನೇಕ ಸರಳವಿಧಾನಗಳನ್ನು ಕಂಡುಹಿಡಿದಿದ್ದಾರೆ. ಸಿಪ್ಪೆಯನ್ನು ಪೂರ್ವಭಾವಿಯಾಗಿ ಸುಣ್ಣ ಅಥವಾ ಕ್ಯಾಲ್ಸಿಯಂ ಕ್ಲೋರೈಡಿನಲ್ಲಿ ಉಪಚರಿಸಿದರೆ ತೈಲ ತೆಗೆಯಲು ಅನುಕೂಲವಾಗುತ್ತದೆ.

ಆಗ ತಾನೆ ಕಿತ್ತಹಣ್ಣಿನ ಸಿಪ್ಪೆಯನ್ನು ಉಗಿಯಿಂದ ಉಪಚರಿಸಿ ಅಥವಾ ನೀರನೊಡನೆ ಬಟ್ಟಿಯಿಳಿಸಿ ತೈಲವನ್ನು ಪಡೆಯಬಹುದು. ಇವುಗಳನ್ನು ಬಿಸಿಲಿನಲ್ಲಿ ಒಣಗಿಸಿಯೂ ತೈಲ ತೆಗೆಯುತ್ತಾರೆ; ಇದಕ್ಕೆ ಸಿಪ್ಪೆಯನ್ನು ಸ್ವಲ್ಪ ಸಮಯ ನೆನೆಸಬೇಕು. ಅನಂತರ ತೈಲವನ್ನು ಬಟ್ಟಿಯಿಳಿಸಿ ತೆಗೆಯಬಹುದು. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ನಡೆಸಿದ ಪ್ರಯೋಗಗಳಿಂದ ಸಿಪ್ಪೆಯನ್ನು ಚೂರು ಮಾಡಿ ಬಟ್ಟಿಯಿಳಿಸಿದರೆ ತೈಲಬೇಗನೆ ಬೇರ್ಪಡುವುದೆಂದು ತಿಳಿದುಬಂದಿದೆ. ಪ್ರುಥಿ ಮತ್ತು ಗಿರಿಧಾರಿಲಾಲ್ ಇವರು ನಾಗಪುರದ ಮೆಂಡರಿನ್ ಕಿತ್ತಳೆ ಸಿಪ್ಪೆಯಿಂದ, ತೈಲವನ್ನು ತಣ್ಣಗಿನ ಸ್ಥಿತಿಯಲ್ಲಿ ಹಿಂಡಿ ತೆಗೆದಿದ್ದಾರೆ.

ನಾಗಪುರ ಕಿತ್ತಳೆಯಲ್ಲಿ ತೈಲದ ಎಸ್ಟರಿನ ಅಂಶವು ಇದೆ; ಆದರೆ, ಫ್ಲೋರಿಡಾದಲ್ಲಿ ತಯಾರಿಸಿದ ತೈಲಕ್ಕಿಂತಲೂ ಅಧಿಕವಾಗಿರುತ್ತದೆ. ನಾಗಪುರ ಕಿತ್ತಳೆ ತೈಲದ ನಿಶ್ಚಿತ ಘಟಕಗಳು ಅಮೆರಿಕದ ಸಂಯುಕ್ತ ಸಂಸ್ಥಾನದ ವ್ಯವಸಾಯ ವಿಭಾಗದವರು ಟೇಂಗರಿನ್ ಎಣ್ಣೆಗೆ ನಿಗದಿಪಡಿಸಿದ ನಿಶ್ಚಿತ ಘಟಕಗಳನ್ನು ನಿಕಟವಾಗಿ ಹೋಲುತ್ತದೆ.