ನಿನ್ನ ಪಾದಕ ಬಿದ್ದೇನಿ
ಬಿದ್ದಾವ ಎದ್ದೀನಿ ತಾಯಿ
ಮತ್ತ ಬಿಳದಾಂಗ ನೋಡವ್ವ
ಮಾದೇವಿ ನೀ ನನ್ನ ತಾಯಿ         ೧

ನಿನ್ನಂಗ ಯಾರಿಲ್ಲ
ನಿನ್ನ ಬಿಟ್ರ ಬ್ಯಾರಿಲ್ಲ
ಹತ್ತೂರ‍್ಗೆ ನಮಸ್ಕಾರಿಲ್ಲ
ನೀನೊಬ್ಬಾಕಿ ನೋಡವ್ವ ಮಾದೇವಿ           ೨

ಹತ್ತು ದಿಕ್ಕಿಗೆ ಮನಸು
ಹರಿದಿತತ್ತು ನೋಡವ್ವ
ನೀ ಕಾಡಿದರೂ ನನಗೆ ಲೇಸು
ನೀ ನನಗೆ ಪಾಡವ್ವ ದೇವಿ           ೩

ಕಾಯಿ ಹಣ್ಣಿಲ್ಲ
ಕರ್ಪೂರಕ್ಕ ಗತಿಯಿಲ್ಲ
ದೀಪಕ್ಕ ಎಣ್ಣಿಲ್ಲ
ಭಕುತಿ ಒಂದೈತಿ ನೋಡವ್ವ         ೪

ಹಂಗಂತ ಹಿಂಗಂತ ಹೇಳಿದ್ರು
ಏನೇನೊ ಅಂತಾ
ಎಲ್ಲ ಬಿಟ್ಟೇನ ನಿನಗೆ ಸ್ವಂತ
ನಾನಂದ್ರ ದೇವಿಗೆ ಬಂತ  ೫

ಸಾಕಾಕಿ ಸಲುವಾಕಿ ನೀನ
ನನಗೆ ಬರಿ ನಿನ್ನ ಧ್ಯಾನ
ನಿನ್ನ ಪಾದಕ ಬಿದ್‌ಏನಿ
ಬಿದ್ದಾವ ಎದ್ದೇನಿ  ೬

ಎಚ್ಚರಾತು ಸಾಕವ್ವ
ನಿನ್ನ ಧ್ಯಾನದಾಗ ನಾ ಇರತೇನಿ
ನನ್ನ ಮ್ಯಾಲ ಕರುಣ ತೋರವ್ವ
ಸದಾ ನಿನ್ನ ಸ್ಮರಣಿ ಮಾಡತೇನಿ    ೭