ಪ್ರದರ್ಶನಾತ್ಮಕ ಕಲೆಗಳು ಅಥವಾ ಮೇಳಗಳು ಹೆಚ್ಚಾಗಿ ಕಂಡುಬರದಿದ್ದರೂ, ಡಕ್ಕಲಿಗರಲ್ಲಿ ಕಿನ್ನರಿಮೇಳ ಹಾಗೂ ನವಿಲು ಕುಣಿಸುವ ಕಲೆ ಮಾತ್ರ ಪ್ರಮುಖವಾದದ್ದು. ವೃತ್ತಿಗಾಗಿ ಊರೂರು ಅಲೆಯುವುದರಿಂದ ತಮ್ಮ ಪೋಷಕರಾದ ಮಾದಿಗರು ಇವರಿಗೆ ಅನ್ನ, ನೀರು ಹಾಕಿ ಚೆನ್ನಾಗಿ ನೋಡಿಕೊಳ್ಳುವುದರ ಪ್ರತಿಫಲವಾಗಿ ಮಾದಿಗರ ಕೇರಿಯ ಮಧ್ಯದಲ್ಲಿ ಸಂಜೆಯ ಹೊತ್ತಿಗೆ ತಮ್ಮ ಬಳಿ ಇರುವ ಸೋರೆಕಾಯಿ ಅಥವಾ ಕುಂಬಳಕಾಯಿಯ ಮೇಲೆ ಬಟ್ಟೆಯಿಂದ ಮಾಡಿರುವ ಬಣ್ಣದ ನವಿಲನ್ನು ದಾರ ಅಥವಾ ಉಕ್ಕಿನ ತಂತಿಗಳಿಂದ ಬಿಗಿಗೊಳಿಸಿ ಅದನ್ನು ಅದ್ಭುತವಾಗಿ ತಮ್ಮ ಕೈ ಚಳಕದಿಂದ ಕುಣಿಸಿ ಕಿನ್ನರಿ ನುಡಿಸುತ್ತ ಹಲವಾರು ಪೌರಾಣಿಕ ಕತೆ, ಪುರಾಣ ಹಾಡುಗಳನ್ನು ಹೇಳುತ್ತಾರೆ, ಉದಾಹರಣೆಗೆ:

“ಸಿಬ್‌ ಸಿಬಾಸ್‌ ನವಿಲು

ಸಿಬ್‌ ಸಿಬಾಸ್‌ ನವಿಲು
ಅಟ್ಟಕಾರಿಗೆ ಅರಬರು
ಪಾಂಚಾಳ ಪ್ರಬರು
ಜಗತ್ತಿಗೆ ಜಾಂಬಗುರು
ಜಾಂಬ ಗುರುವಿಗೆ
ನಮಸ್ಕಾರ ಮಾಡು
ಕೊಟ್ಟಮನೆ ಬಂಗಾರವಾಗಲಿ
ತೂಗು ತೊಟ್ಟಿಲುವಾಗಲಿ
ಬೆಳ್ಳಿ ಬಟ್ಟಲವಾಗಲಿ
ಒಂದು ಮನೆ ನೂರಾಗಲಿ
ನೂರ ಮನೆ ಸಾವಿರಾಗಲಿ”

ಹೀಗೆ ಅನೇಕ ಹಾಡುಗಳನ್ನು ಹಾಡಿ ಜನರಿಗೆ ಮನರಂಜನೆ ಒದಗಿಸುತ್ತಾರೆ.  ಕೊನೆಗೆ ಬಾಯಿ ತುಂಬ ಹರಕೆ ಸಲ್ಲಿಸಿ ಇಡೀ ವರ್ಷ ಕೇರೆಯು ಸಂತಸದಿಂದ ಪುಳಕಿತವಾಗಿರಲಿ, ಮತ್ತು ಜಾಂಬಮುನಿಯ ಆಶೀರ್ವಾದ ಸದಾ ಈ ಕೇರಿಯ ಜನತೆಗಿರಲಿ ಎಂದು ಹರಿಸಿ ಹೋಗುತ್ತಾರೆ. ಈ ಕಲೆಯು ಬೆಳೆದು ಬರಲಿಕ್ಕೆ ತಮ್ಮದೇ ಆದ ಒಂದು ಪೌರಾಣಿಕ ಕಥೆಯನ್ನು ಹೇಳುತ್ತಾರೆ.

ಪೂರ್ವದಲ್ಲಿ ಶಿವನು ನವಿಲಿನ ವೇಷ ಹಾಕಿ ಕುಣಿದಿದ್ದನಂತೆ. ನವಿಲು ಮಾದಿಗರಿಗೆ ಮಾತಂಗಿ ದೇವತೆ ಆದುದರಿಂದ ಕಲಿಯುಗದಲ್ಲಿ ಕುಂಬಳಕಾಯಿ ಮೇಲೆ ಕಟ್ಟಿಗೆಯ ನವಿಲನ್ನು ಮಾಡಿ ಕುಣಿಸುತ್ತೇವೆ ಎಂದು ಅವರು ಹೇಳುತ್ತಾರೆ. ಮಾದಿಗರ ಕೇರಿಯಲ್ಲಿ ಡಕ್ಕಲಿಗರು ಬಟ್ಟೆಯ ನವಿಲನ್ನು ಕುಣಿಸಿ ಹಾಡಿದರೆ ತಮ್ಮ ಕೇರಿಯು ಪವಿತ್ರವಾಯಿತೆಂದು ಭಾವಿಸುತ್ತಾರೆ. ಇಡೀ ವರ್ಷ ಆ ಕೇರಿಯಲ್ಲಿ ಯಾವುದೇ ರೋಗ-ರುಜೀನಗಳು, ಕಾಡು-ಕಂಟಕ ಬರುವುದಿಲ್ಲವೆಂಬುದು ಇವರ ನಂಬುಗೆ.