ವಿಮರ್ಶೆ ಎಂದರೆ ಸಾಧಾರಣವಾಗಿ ಎಲ್ಲರಿಗೂ ಗೊತ್ತಿರುವಂತೆ ಕವಿ ಕೃತಿಯೊಂದನ್ನು ಸಮರ್ಥನಾದ ಓದುಗ ತನಗಾಗಿ ಅರ್ಥಮಾಡಿಕೊಳ್ಳುವ ಮತ್ತು ತನ್ನ ಸುತ್ತಣವರಿಗೆ ಅರ್ಥಮಾಡಿಕೊಡುವ ಒಂದು ಪ್ರಾಮಾಣಿಕವಾದ ಪ್ರಯತ್ನ ಎನ್ನುವುದು ಒಂದು ; ಹಾಗೆ ಅರ್ಥಮಾಡಿಕೊಂಡ ಕೃತಿಯ ‘ಮೌಲ್ಯ’ವನ್ನು ನಿರ್ಣಯಿಸುವುದು ಮತ್ತೊಂದು. ಎಂದರೆ ವಿಮರ್ಶೆಯಲ್ಲಿ ಬಹು ಮುಖ್ಯವಾದ ಕಾರ್ಯಗಳು ಈ ಎರಡು ಎಂಬುದಂತೂ ನಿರ್ವಿವಾದ : ಕೃತಿಯನ್ನು ಅರ್ಥಮಾಡಿ- ಕೊಳ್ಳುವುದು ಮತ್ತು ಅದರ ಬೆಲೆಯನ್ನು ತೂಗಿ ನೋಡುವುದು. ಈ ಎರಡರಲ್ಲಿ ಮೊದಲನೆಯದಂತೂ ಎಲ್ಲಾ  ಕಾಲದಲ್ಲಿಯೂ ಅಂದಂದಿನ ಕೃತಿಗಳ ಬಗೆಗೆ ಅಂದಂದಿನ ವಿಮರ್ಶಕರಿಂದ ನಡೆಯುವ ಮತ್ತು  ನಡೆಯಬೇಕಾದ ಕಾರ್ಯ. ಇನ್ನು ಎರಡನೆಯದಾದ ಮೌಲ್ಯನಿರ್ಧಾರ ಇಷ್ಟೇ ಸುಲಭವಾಗಿ ಸಮರ್ಪಕವಾಗಿ ನಡೆಯುತ್ತದೆಂದು ಹೇಳಲು ಸಾಧ್ಯವಿಲ್ಲ. ಎಂದರೆ ಮೌಲ್ಯನಿರ್ಧಾರದ ಪ್ರಯತ್ನ ಅಲ್ಲಿ ಇರುವುದಿಲ್ಲವೆಂದಾಗಲೀ, ಇದ್ದರೂ ಅದು ಸಮರ್ಪಕವಾಗಿರುವುದು ತೀರಾ ಅಸಂಭವ ಎಂದಾಗಲೀ ಅರ್ಥವಲ್ಲ. ಆದರೆ ಅಂದಂದಿನ ಕೃತಿಗಳ ಬಗೆಗೆ ಅಂದಂದಿನ ವಿಮರ್ಶಕರ ಕೆಲಸ, ಕೇವಲ ಅರ್ಥಮಾಡಿಕೊಳ್ಳುವ ಪ್ರಯತ್ನಗಳಷ್ಟರಲ್ಲಿಯೇ ಪರ‍್ಯವಸಾನವಾಗುವ ಸಂಭವಗಳೇ ಹೆಚ್ಚು ಎಂದು ನಮ್ಮ ಭಾವನೆ. ಕಾರಣವೇನೆಂದರೆ, ಮೊದಲನೆಯದಾಗಿ, ಸಮಕಾಲೀನ ಕವಿಯ ಜತೆಗೇ ಬದುಕುವ ವಿಮರ್ಶಕ, ಕವಿ ಇನ್ನೂ ಬರೆಯುತ್ತಾ ಇರುವುದನ್ನು ಉದ್ದಕ್ಕೂ ಗಮನಿಸುತ್ತಲೇ ಇರುತ್ತಾನೆ. ಹೀಗಾಗಿ ಅವನಿಗೆ ಕವಿಕೃತಿಯ ಸಮಗ್ರ ಸ್ವರೂಪದ ದರ್ಶನ ಸಾಧ್ಯವಾಗುವುದಿಲ್ಲ.[1] ಎರಡನೆಯದಾಗಿ ಅಂದಂದಿನ ಕವಿಯೊಂದಿಗೆ ವಿಮರ್ಶಕನಾದವನು ಕಾಲ-ದೇಶ ಸಹಜವಾದ ಹಲವು ಬಗೆಯ ಸಂಬಂಧಗಳನ್ನು ಹೊಂದಿರುವುದು ಅನಿವಾರ್ಯ. ಹೀಗಾಗಿ ಅವನು ಕವಿಯಿಂದ ರಚಿತವಾದ ಹಾಗೂ ರಚಿತವಾಗುತ್ತಿರುವ ಕೃತಿಗಳನ್ನು ಅಭ್ಯಸಿಸುತ್ತಾ, ಪರಿಶೀಲಿಸುತ್ತಾ, ಚರ್ಚಿಸುತ್ತಾ, ಕವಿಕೃತಿಯನ್ನು ಮೊದಲು ತಾನು ಅರ್ಥಮಾಡಿಕೊಳ್ಳುವ ಮತ್ತು ತನ್ನ ಕಾಲದವರಿಗೆ ಅರ್ಥಮಾಡಿಸುವ ಪ್ರಯತ್ನದಲ್ಲಿರುತ್ತಾ, ವಿಮರ್ಶೆಯ ಬಹುಮುಖ್ಯವಾದ ಇನ್ನೊಂದು ಕಾರ್ಯವಾದ ‘ಮೌಲ್ಯನಿರ್ಧಾರ’ ಕ್ಕೆ ತನ್ನದೇ ಆದ ಕೆಲವು ಅಂಶಗಳನ್ನು ನೀಡುತ್ತಾನೆ. ಕೃತಿಯೊಂದನ್ನು ಅರ್ಥಮಾಡಿಕೊಳ್ಳಲು ಬೇಕಾದದ್ದು ಸಹೃದಯತೆ, ಸೂಕ್ಷ್ಮ ಸಂವೇದನೆ, ಆಳವಾದ ಪರಿಶೀಲನೆ ಮತ್ತು ತಾನು ಅರ್ಥಮಾಡಿಕೊಳ್ಳಲು ಬಯಸುತ್ತಿರುವ ಕೃತಿ ಅದರ ಹಿನ್ನೆಲೆಗಿರುವ ಪರಂಪರೆಯಿಂದ ಎಷ್ಟರಮಟ್ಟಿಗೆ ಪುಷ್ಟವಾಗಿದೆ ಹಾಗೂ ಭಿನ್ನವಾಗಿದೆ ಅಥವಾ ವಿಶಿಷ್ಟವಾಗಿದೆ ಎಂದು ವಿವೇಚನೆ ಮಾಡಲು ಆಗತ್ಯವಾದ ಚಿಂತನಪರತೆ. ಆದರೆ ವಿಮರ್ಶೆಯ ಇನ್ನೊಂದು ಬಹುಮುಖ್ಯವಾದ ಮೌಲ್ಯನಿರ್ಧಾರಕ್ಕೆ ಅಗತ್ಯವಾದದ್ದು, ಈ ಅರ್ಥಮಾಡಿಕೊಳ್ಳಲು ಬೇಕಾಗುವ ಸಾಮರ್ಥ್ಯಗಳ ಜತೆಗೆ ಒಂದು ಕಾಲಾತೀತವಾದ ನಿಲುವಿಗೆ ಪ್ರಾಪ್ತವಾಗುವ ವಸ್ತುನಿಷ್ಠ ಮನೋಧರ್ಮ. ಈ ಕಾಲಾತೀತವಾದ ನಿಲುವು ಗತಕಾಲದ ಕವಿಕೃತಿಗಳನ್ನು ಪರಿಶೀಲಿಸುವಾಗ ತಾನೇ ತಾನಾಗಿ ಒದಗುವಷ್ಟು ಸುಲಭವಾಗಿ ಸಮಕಾಲೀನ ಕೃತಿಗಳನ್ನು ಪರಿಶೀಲಿಸುವಾಗ ಒದಗುವುದು ಕಷ್ಟ. ಸಮಕಾಲೀನ ವಿಮರ್ಶೆ ಕೇವಲ ಕೃತಿಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಮಾಡಿಕೊಡುವ ಪ್ರಯತ್ನಗಳಲ್ಲಿಯೆ ಬಹುಮಟ್ಟಿಗೆ ಪ್ರವೃತ್ತವಾಗುವ ಕಾರಣ ಇದು ಅರ್ಧವಿಮರ್ಶೆಯಾಗುವುದು ಅನಿವಾರ‍್ಯ. ಇನ್ನು ಮೌಲ್ಯನಿರ್ಧಾರವೆಂಬುದು ಮುಂದೆ ಇಂಥ ಅರ್ಥ ಮಾಡಿಕೊಡುವ ಪ್ರಯತ್ನಗಳ ಪರಿಣಾಮವಾಗಿ ನಿಷ್ಪನ್ನವಾಗತಕ್ಕದ್ದು. ಬಹುಶಃ ಇದರಿಂದಲೇ ಏನೋ ಸಮಕಾಲೀನ  ಕವಿಗಳಿಗೆ ಸಮಕಾಲೀನ ವಿಮರ್ಶಕರಿಂದ ಎಂದೂ ನ್ಯಾಯ ಸಲ್ಲಲಾರದು-ಎಂಬ ಮಾತು ಹುಟ್ಟಿಕೊಂಡಂತೆ ತೋರುತ್ತದೆ.

ಸಮಕಾಲೀನ ಕವಿಗಳಿಗೆ ಸಮಕಾಲೀನ ವಿಮರ್ಶಕರಿಂದ ಎಂದೂ ನ್ಯಾಯ ಸಲ್ಲಲಾರದು ಎಂಬ ಮಾತು ಸಂಪೂರ್ಣ ಸತ್ಯವಲ್ಲದಿದ್ದರೂ, ಸಮಕಾಲೀನ ಕೃತಿಗಳ ಬಗೆಗೆ ಸಮಕಾಲೀನ ವಿರ್ಮಶಕರಿಂದ ಎಂದೆಂದೂ ಅನ್ಯಾಯವೆ ಆಗುತ್ತದೆಂಬ ಭಾವನೆ ನಿಜವಲ್ಲ. ಆದರೆ ವಿರ್ಮಶೆಗೆ, ‘ಕಾಲಾತೀತ’ವಾದ ಒಂದು ನಿಲುವಿಗೆ ಪ್ರಾಪ್ತವಾಗುವ ಮನೋಧರ್ಮ ವಿಮರ್ಶಕನಿಗೆ ಒದಗಿದಾಗಲೆ ವಿಮರ್ಶನ  ಕ್ರಿಯೆ ಹೆಚ್ಚು ನಿರ್ದುಷ್ಟವೂ ಪೂರ್ಣವೂ ಆಗುವುದೆಂಬುದರಲ್ಲಿ ಸಂದೇಹವಿಲ್ಲ. ಸಮಕಾಲೀನ ವಿಮರ್ಶಕನಿಗೆ ತನ್ನ ಕಾಲದಲ್ಲಿಯೆ ಬದುಕುತ್ತಿರುವ ಕವಿ ಹಾಗೂ ಕೃತಿಯೊಂದಿಗೆ ಇರುವ ‘ಉಭಯ ದೇಶ-ಕಾಲ’ ಸಂಬಂಧದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾದ ಕಾರಣ, ಈ ‘ಕಾಲಾತೀತ’ ಸ್ಥಿತಿ ಅವನಿಗೆ ಪ್ರಾಪ್ತವಾಗುವುದು ಕಷ್ಟ. ಆದರೂ ಸಮಕಾಲೀನ ವಿಮರ್ಶಕ ಕೆಲವು ಕೃತಿಗಳ ವಿಚಾರದಲ್ಲಿ ಎಲ್ಲ ಕಾಲಕ್ಕೂ ನಿಲ್ಲುವಂಥ ಮಾತುಗಳನ್ನು ಹೇಳಿರುತ್ತಾನೆಂಬುದನ್ನು ನಾವು ಅಲ್ಲಗಳೆಯಬಾರದು. ಏಕೆಂದರೆ ಕೆಲವು ವೇಳೆ, ಕೆಲವು ಕೃತಿಗಳ ಗುಣಗಳ ಬಗೆಗಾಗಲಿ, ದೋಷಗಳ ಬಗೆಗಾಗಲಿ ಅವನ ಮಾತಿನಲ್ಲಿ ಉತ್ಪ್ರೇಕ್ಷೆ ಇರಬಹುದು ; ಕೃತಿಯ ಬೆಲೆಯನ್ನು ಕುರಿತು ಅವನು ಹೇಳಿದ ಮಾತು ಕೆಲವು ಸಲ ಸಮತೂಕದ್ದಾಗಿರಲೂಬಹುದು. ತೂಕ ತಪ್ಪಿದ ಮಾತು ಯಾವ ಕಾಲಕ್ಕೂ ಮಾನ್ಯವಾಗದೆ ಹೋಗುತ್ತದೆಂಬದು ನಿಜವಾದರೂ, ಸಮತೂಕದ ಮಾತುಗಳ ಬೆಲೆ ಬೇರೆಬೇರೆಯ ಕಾಲದಲ್ಲಿ ಬೇರೆ ಬೇರೆಯ ಕಾರಣಗಳಿಂದಾಗಿ ಕಿಂಚಿತ್ ತೂಗಾಡಿದರೂ, ತೂಕ ತಪ್ಪಿ ಬಿದ್ದು ಹೋಗುವ ಸಂಭವಗಳಿಲ್ಲವೆಂಬುದು ನಿಜ. ಎಂದೋ ಒಮ್ಮೆ ಒಂದು ಕೃತಿಯ ಬಗೆಗೆ ಯಾರೋ ಹೇಳಿದ ಮಾತು ಎಷ್ಟೋ ಸಂದರ್ಭಗಳಲ್ಲಿ ಇಂದಿಗೂ ಸತ್ಯವಾಗಿರಬಹುದು. ಮುಂದಿನ ವಿರ್ಮಶಕರು ಹಿಂದೆ ವಿಮರ್ಶೆಗೊಳಗಾದ ಕೃತಿಯನ್ನೂ ಮತ್ತು ಅದರ ವಿಮರ್ಶಕನನ್ನೂ ‘ಕಾಲಾತೀತ’ವಾದ ನಿಲುವಿನಲ್ಲಿರಿಸಿ ನೋಡಲು ಸಾಧ್ಯವಾಗುವುದರಿಂದ, ಕವಿ ಮತ್ತು ಕೃತಿಸಂಬಂಧವಾದ “ಉಭಯದೇಶ-ಕಾಲಪರಿತ್ಯಾಗ”ದಿಂದ ಲಭಿಸಿದ ಕಾಲಾತೀತ ಸ್ಥಿತಿ ಮುಂದಿನ ವಿಮರ್ಶಕನಿಗೆ ಸಹಜವಾಗುವುದರಿಂದ, ಅಂಥವರ ಮಾತು ಹಿಂದಿನವರ ಮಾತಿಗಿಂತ ಹೆಚ್ಚು ವಿಶ್ವಸನೀಯವೂ ಮತ್ತು ಬೆಲೆಯುಳ್ಳದ್ದೂ ಆಗಿರುತ್ತದೆ. ಅಂದರೆ ಒಂದು ಕೃತಿಯ ವಿಮರ್ಶೆ ಎನ್ನುವುದು, ಆ ಕೃತಿ ರಚಿತವಾದ ಕಾಲದ ವಿಮಶರ್ಕರಿಂದಲೆ ಆಗಿ ಮುಗಿಯುವ ಕಾರ್ಯವಲ್ಲ. ನಿಜವಾದ ಕೃತಿ ಎಲ್ಲ ಕಾಲದ ವಿರ್ಮಶಕರಿಂದಲೂ ಪರಿಶೀಲನೆಗೆ ಒಳಗಾಗುತ್ತಲೇ ಇರುತ್ತದೆ. ಹಾಗೆ ಎಲ್ಲ ಕಾಲದ ವಿಮರ್ಶಕರ ವಿಚಾರಕ್ಕೆ ಒಳಗಾಗುವುದು ಆ ಕೃತಿ ನಿಜವಾಗಿಯೂ ಮಹತ್ವದ್ದು ಎಂಬುದರ ಸಂಕೇತ. ಕೃತಿವಿಮರ್ಶೆ ಎನ್ನುವುದು ಯಾವಾಗಲೊ ಒಮ್ಮೆಗೆ ಅಭಿಪ್ರಾಯಗಳ, ಮೌಲ್ಯ ವಿವೇಚನೆಯ, ಸುರುಳಿಯಲ್ಲಿ ಸುತ್ತಿ ಭದ್ರವಾಗಿರಿಸುವ ಪ್ರಯತ್ನವಲ್ಲ. ಅದೊಂದು ನಿರಂತರ ಕ್ರಿಯೆ. ಕವಿಗಳ ಹಾಗೂ ಕೃತಿಗಳ ಬಗೆಗೆ ಒಂದು ‘ಕಾಲಾತೀತ’ವಾದ ಸ್ಥಿತಿ ಪ್ರಾಪ್ತವಾಗುವಂತಹ ಸಮಯದಲ್ಲಿ, ಎಂದರೆ ಸಾಹಿತ್ಯ ನಿರ್ಮಿತಿ ನಿಲುಗಡೆಗೆ ಬಂದಂತೆ ತೋರುವ ಆ ಒಂದು ಶತಮಾನ ಕಡೆಯ ಘಟ್ಟದಲ್ಲಿ, ಸರಿಯಾದ ವಿಮರ್ಶಕನೊಬ್ಬ ಆ ಕಾಲದ ಕೃತಿಗಳನ್ನೂ ಕವಿಗಳನ್ನೂ ಅಳೆದು ತೂಗಿ ಒಂದು ರೀತಿಯ ಪುನರ್‌ವ್ಯವಸ್ಥೆ ಮಾಡುವ ಕಾರ್ಯ ನಡೆಯುತ್ತದೆ.[2] ಮತ್ತೆ ಮತ್ತೆ ಹೀಗೆ ಕಾಲದಿಂದ ಕಾಲಕ್ಕೆ ಪುನರ್ ಮೌಲ್ಯವಿವೇಚನೆಯ ಹೆಸರಿನಲ್ಲಿ ಹಿಂದಿನ ಕವಿ ಕೃತಿಗಳ ವಿಮರ್ಶೆ ನಡೆಯುತ್ತಲೇ ಇರುತ್ತದೆ. ಈ ನಿರಂತರ ವಿಮರ್ಶೆಯಿಂದ ಕವಿಗಳ ಹಾಗೂ ಕೃತಿಗಳ ಬಗೆಗೆ ಜನಮನದಲ್ಲಿ ರೂಪುಗೊಳ್ಳುವ ‘ಮೌಲ್ಯ’ಗಳ ಮೊತ್ತವೇ ವಿಮರ್ಶೆಯ ಸಾರ.

ಆದರೆ ಪ್ರತಿಯೊಂದು ಕಾಲವೂ ‘ನಿಜವಾದ ವಿಮರ್ಶಕ ನಾನಲ್ಲ, ನಿಜವಾದ ವಿಮರ್ಶೆ ನಡೆಯಬೇಕಾದದ್ದು ಏನಿದ್ದರೂ ಮುಂದಿನವರಿಂದ’ ಎಂದು ಕೈಕಟ್ಟಿ ಕೂತರೆ ಅದು ಕೇವಲ ತಟಸ್ಥವಾದವಾದೀತು. ಎಲ್ಲ ಕಾಲವೂ ಅಂದಂದಿನ ಕೃತಿಗಳ ಬಗೆಗೆ ವಿಮರ್ಶಾರೂಪದ ಪ್ರತಿಕ್ರಿಯೆಯನ್ನು ತೋರಿಸದೆ ಹೋದರೆ ಅಂದಿನ ಕಾಲ ವೈಚಾರಿಕವಾಗಿ ದೃಷ್ಟಿಯಿಂದ ಜೀವಂತವಾಗಿಲ್ಲ ಎಂದು ಹೇಳಬೇಕಾಗುತ್ತದೆ.

ಯಾವ ಕಾಲದಲ್ಲಿಯೇ ಆಗಲಿ ವಿಮರ್ಶೆಯ ಅರ್ಥವನ್ನು ಕುರಿತು ಯೋಚಿಸುವಾಗ ಸಮಕಾಲೀನ ವಿಮರ್ಶೆಗಳ ಸಮಸ್ಯೆಗಳ ಮೇಲಿನಿಂದಲೇ ವಿಚಾರ ಮಾಡಬೇಕಾಗುತ್ತದೆ.  ನಮ್ಮ ಸುತ್ತ-ಮುತ್ತಲ ವಿಮರ್ಶೆಯ ವೃತ್ತಿ-ಪ್ರವೃತ್ತಿಗಳನ್ನು ಗಮನಿಸಿದರೆ ವಿಮರ್ಶೆ ಎಂದರೆ ಹೇಗಿರಬೇಕು, ಹೇಗಿರಬಾರದು ಎಂಬುದರ ಮೇಲಿನಿಂದ ವಿಮರ್ಶೆಯ ಅರ್ಥ ನಿರ್ಣಯಿತವಾಗುತ್ತದೆ.

ಎಲ್ಲ ಕಾಲದಲ್ಲಿಯೂ ಸಾಹಿತ್ಯದಲ್ಲಿ ಪಕ್ಷ-ಪ್ರತಿಪಕ್ಷಗಳಿದ್ದೇ ಸಾಹಿತ್ಯದ ಪ್ರಗತಿಗೆ ಕಾರಣವಾದ ಒಂದು ಚಳುವಳಿ ನಡೆಯುವ ಕಾರಣ, ಆಯಾ ಪಕ್ಷದ ಕವಿಗಳೋ, ಓದುಗರೋ ವಿಮರ್ಶಕರ ಪಾತ್ರವನ್ನು ವಹಿಸುವುದು ಸ್ವಪಕ್ಷದ ಹಿತಸಾಧನೆಗೆ ಅನಿವಾರ್ಯವಾಗುತ್ತದೆ. ಇಂಥ ಹೊತ್ತಿನಲ್ಲಿ ತಾವು ವಹಿಸಿಕೊಂಡ ಪಕ್ಷವೊಂದರ ಕಾವ್ಯವನ್ನೋ ಕವಿಯನ್ನೋ ಎತ್ತಿ ಹಿಡಿದು ಘೋಷಿಸುವ ಮಾನವಸಹಜವಾದ ಅಭಿಮಾನದ ಕಾರಣದಿಂದ, ತಮಗಿಂತ ಹಿಂದಿನ ಕವಿಗಳನ್ನೊ ಕೃತಿಗಳನ್ನೋ ತೆಗಳುವ ಕಾರ್ಯವೊಂದು ವಿಮರ್ಶೆ ಎಂಬ ಹೆಸರಿನಲ್ಲಿ ಪ್ರಚಲಿತವಾಗುವುದುಂಟು. ವಿಮರ್ಶೆ ಮಾಡತಕ್ಕವರು ಎಷ್ಟೇ  ವಿದ್ಯಾವಂತರೂ, ಬುದ್ಧಿವಂತರೂ ಆಗಿದ್ದರೂ, ಅವರು ಯಾವ ಪಕ್ಷವನ್ನು ವಹಿಸಿಕೊಂಡು ಮಾತನಾಡುವರೋ ಆ ಕವಿಯ ಸಾಮರ್ಥ್ಯ ಮತ್ತು ಕೃತಿ ನಿಜವಾಗಿಯೂ ಸತ್ವಶಾಲಿಯಾದದ್ದಾದರೂ, ಆ ಕವಿ ಅಥವಾ ಕೃತಿಯನ್ನು ಕುರಿತು ಈ ಬುದ್ಧಿವಂತರಾದ ವಿಮರ್ಶಕರು ನಿಷ್ಪಕ್ಷಪಾತವಾಗಿ ವಿಮರ್ಶಿಸುತ್ತಿದ್ದಾರೆಂದು ನಂಬಿಕೆ ಬಾರದೆ ಹೋಗುವಂಥ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆ ವಿಮರ್ಶಕರು ಆ ಕವಿಗೆ ತೀರಾ ಹತ್ತಿರದ ಸ್ನೇಹಿತರೋ, ಹಿತೈಷಿಗಳೋ ಆಗಿರುವುದರಿಂದಲೋ ಅಥವಾ ತಾವು ಇದುವರೆಗೂ ಕಂಡ ಕಾವ್ಯಮಾರ್ಗದ ಚರ್ವಿತಚರ್ವಣದ ಬೇಸರದ ಸ್ಥಿತಿಯನ್ನು ಈ ಕವಿ ತನ್ನ ನವನಿರ್ಮಿತಿಯಿಂದ ಮುರಿದು ನೂತನ ಚೈತನ್ಯವನ್ನು ತಂದನೆಂಬ ಸ್ವಾಗತಾರ್ಹವಾದ ಬದಲಾವಣೆಯಿಂದ ಪ್ರಾಪ್ತವಾದ ಉಲ್ಲಾಸ-ಸಂಭ್ರಮದಿಂದಲೋ, ತಟಕ್ಕನೆ ಈ ಕವಿ-ಕಾವ್ಯಪರವಾದ ಪಕ್ಷಪಾತ ನೇರವಾದ ಪ್ರಶಂಸೆಯೊ, ಅಥವಾ ತಾರ್ಕಿಕವಾಗಿ, ಬೌದ್ಧಿಕವಾಗಿ ವಿಶ್ಲೇಷಿಸುವ ನೆಪದಲ್ಲಿ ವಿಮರ್ಶೆ ಎಂಬ ಹೆಸರಿನಲ್ಲಿ ಬಚ್ಚಿಟ್ಟುಕೊಂಡ ಪಂಥಪ್ರವೃತ್ತಿಯೊ ಆಗುವುದು ತೀರ ಸಾಮಾನ್ಯವಾದ ಸಂಗತಿಯಾಗಿದೆ.

ಎರಡನೆಯದಾಗಿ ಇಂಥ ವಿಮರ್ಶೆ ಪ್ರಚಲಿತವಾದಾಗ ಅದು ತಾನು ಯಾವ ಪಕ್ಷಕ್ಕೆ ಸೇರಿರುವುದೋ ಆ ಪಕ್ಷದ ಕವಿಯ ಬಗೆಗೆ ಪ್ರಕಟವಾಗುವ ಪ್ರಶಂಸೆಯಷ್ಟೇ ಆಗದೆ, ಹಿಂದಿನ ಕಾವ್ಯಪಂಥದ ನಿಸ್ಸತ್ವದ ನಿರ್ಘೋಷವಾಗುವುದಂತೂ ಕೇವಲ ವ್ಯಾಪಾರೀ ಮನೋಧರ್ಮವನ್ನು ಮಾತ್ರ ಪ್ರಕಟಿಸುತ್ತದೆ. ಟಿ. ಎಸ್. ಇಲಿಯಟ್ ಹೇಳುತ್ತಾನೆ : “ಎಲ್ಲಿ ಒಂದು ಉತ್ತಮ ಪರಂಪರೆ ಇದೆಯೊ ಅಂಥ ಸಾಹಿತ್ಯದಲ್ಲಿ ಅದನ್ನು ಉಳಿಸಿಕೊಂಡು ಬರುವುದು ವಿಮರ್ಶೆಯ ಕರ್ತವ್ಯಗಳಲ್ಲಿ ಒಂದು,”[3] ಮತ್ತು “ಯಾವ ಒಬ್ಬ ಕವಿಕೃತಿಯನ್ನೆ ಆಗಲಿ, ಅದು ತನಗೆ ತಾನೆ ಪ್ರತ್ಯೇಕವಾದ ಘಟಕವೆಂದಷ್ಟೆ ಭಾವಿಸದೆ, ಗತಕಾಲದ ಕವಿಕೃತಿಗಳ ಸಾಲಿನಲ್ಲಿರಿಸಿ ತೌಲನ ಕ್ರಮದಲ್ಲಿ ನೋಡಬೇಕು”[4] -ಎಂದು. ಈ ಎರಡು ಮಾತುಗಳ ಅರ್ಥ ವಿಮರ್ಶಕನಿಗೆ ಪರಂಪರೆಯ ಪ್ರಜ್ಞೆ ಹಾಗೂ ಗೌರವ ಅಗತ್ಯ ಎನ್ನುವುದು ಒಂದು. ಹಾಗೆಯೆ ಯಾವ ಒಂದು ಕವಿಕೃತಿಯೂ ತನ್ನ ಹಿಂದಿನ ಪರಂಪರೆಗೆ ತೀರಾ ವಿರುದ್ಧವಾದುದಾಗಲಿ, ವಿಮುಖವಾದುದಾಗಲಿ ಅಲ್ಲ.  ನಿಜವಾದ ಕವಿ ತನ್ನ ಪರಂಪರೆಯ ಸತ್ವವನ್ನು ಹೀರಿಕೊಂಡೇ ಬೆಳೆಯುತ್ತಾನೆ ಎಂಬುದು. ಅವನ ಕೃತಿ ಮೇಲೆ ನೋಡುವುದಕ್ಕೆ ತನಗೆ ತಾನೇ ಬೇರೆ ಎಂಬಂತೆ ತೋರಿದರೂ, ವಾಸ್ತವವಾಗಿ ಅದು ತನ್ನ ಹಿಂದಿನ ಪರಂಪರೆಯ ಪರಿಣಾಮದಿಂದಲೆ ಆವಿರ್ಭವಿಸುತ್ತದೆ. ಆದರೆ ಒಂದು ನವೀನಕಾವ್ಯಪಂಥದ ಪಕ್ಷವನ್ನು ವಹಿಸಿಕೊಂಡು ಮಾತನಾಡುವವರು ಈ ಎರಡು ಅಂಶಗಳ ಬಗೆಗೆ ತಿಳಿದೋ ತಿಳಿಯದೆಯೋ ಕುರುಡಾದಾಗ, ಹಿಂದಿನ ಪರಂಪರೆಯನ್ನು ಕುರಿತು ಅದರ ನಿಸ್ಸತ್ವ ನಿರ‍್ವೀರ‍್ಯತೆಗಳ ಬಗೆಗೆ, ಅದರ ದೋಷಗಳ ಬಗೆಗೆ ಅತಿ ರಂಜಿತವಾಗಿ ಮಾತನಾಡುವುದರ ಮೂಲಕವೇ ತಮ್ಮ ಹೊಸ ಪಂಥ ತನಗೆ ತಾನೇ ಹೇಗೆ ವಿನೂತನವಾಗಿದೆ, ಜ್ವಲಂತವಾಗಿದೆ ಎಂಬುದನ್ನು ಘೋಷಿಸುತ್ತಾರೆ. ತಮ್ಮ ಹಿಂದಿನ ಪರಂಪರೆಯಲ್ಲಿ ಏನೇನೂ ಇರಲಿಲ್ಲವೆಂದೂ, ಏನಿದ್ದರೂ ಇದೀಗ ಪ್ರಪ್ರಥಮವಾಗಿ ತಮ್ಮ ಕಾವ್ಯಪಂಥದಿಂದಲೇ ಸಾಹಿತ್ಯದ ಇತಿಹಾಸದ ಆರಂಭವಾಗುತ್ತಿದೆಯೆಂದೂ ಅರ್ಥ ಬರುವ ಮಾತುಗಳನ್ನಾಡುತ್ತಾರೆ. ಅಷ್ಟೇ ಅಲ್ಲ, ಹಿಂದಿನ ಪರಂಪರೆಗೆ ಸೇರಿದ ತಮ್ಮ ಸಮಕಾಲೀನ ಅಥವಾ ಸಮೀಪಕಾಲೀನ ವ್ಯಕ್ತಿಗಳ ಸಾಧನೆ-ಸಿದ್ಧಿಗಳ ಬಗೆಗೂ ಲಘುವಾಗಿ ಮಾತನಾಡುವ ಪ್ರವೃತ್ತಿಯೂ ವಿಮರ್ಶೆ ಎಂಬ ಹೆಸರಿನಲ್ಲಿ ಪ್ರಚಲಿತವಾಗುವುದುಂಟು. ತಮಗೆ ಹಿಂದಿನ ಆ ಹಿರಿಯರು ಅವರವರಿಗೆ ಒಡ್ಡಿನಿಂತ ಪರಿಸರದೊಂದಿಗೆ ಹೋರಾಡುವಲ್ಲಿ, ಹಾಗೆ ಹೋರಾಡಿ ಹೊಸ ರೂಪಗಳನ್ನು ಸಿದ್ಧಪಡಿಸುವಲ್ಲಿ ಅವರು ಎಂತೆಂತಹ ಪರಿಸ್ಥಿತಿಗಳನ್ನೆದುರಿಸಬೇಕಾಯಿತೆಂಬುದನ್ನು ಸ್ವಲ್ಪವೂ ಗಣನೆಗೆ ತೆಗೆದುಕೊಳ್ಳದೆ, ತಾವು ಇಂದು ಎದುರಿಸಬೇಕಾಗುತ್ತಿರುವ ಪರಿಸ್ಥಿತಿಯೊಂದಿಗೆ ತಾವು ನಡೆಸುವ ಹೋರಾಟದ ಮಹತ್ವವನ್ನೇ ದೊಡ್ಡದು ಮಾಡಿ, ಹಿಂದಿನವರ ಆ ಸಾಧನೆಗಳನ್ನು ಸಿದ್ಧಿಗಳನ್ನು ಲಘುವಾಗೆಣಿಸುವುದು ಪರಂಪರೆಯ ಹಾಗೂ ಐತಿಹಾಸಿಕ ಪ್ರಜ್ಞೆಯ ಅಭಾವವನ್ನು ಸೂಚಿಸುವಂತೆ ತೋರುತ್ತದೆ.[5] ಇಂಥ ಸಮಯದಲ್ಲಿ ಸಮಕಾಲೀನ ವಿಮರ್ಶೆ ಕೇವಲ ಪಕ್ಷಪಾತದಿಂದ ದಾರಿತಪ್ಪಿ, ಸಾಕಷ್ಟು ಯೋಚನೆ ಮಾಡಲಾರದ ಬಹು ಮಂದಿಯನ್ನು ದಾರಿ ತಪ್ಪಿಸುತ್ತದೆ. ಅದರೆ ಇಂಥ ಪರಿಸ್ಥಿತಿಗಳನ್ನು ಕೊಂಚ ಸಾವಧಾನದಿಂದ ಪರಿಶೀಲಿಸಿದರೆ ತಿಳಿಯುತ್ತದೆ, ಸಾಹಿತ್ಯ ಚಳವಳಿಗಳ ಕಾಲದಲ್ಲಿ ಇಂಥ ವಿಚಾರದ ಗೊಂದಲಗಳೂ ಪ್ರಚಾರದ ವೈಖರಿಗಳೂ ತೀರಾ ಸಹಜವಾದುವೇ ಎಂಬುದು. ಇನ್ನೂ ಉದಾರವಾಗಿ ನೋಡುವುದಾದರೆ, ಇದು ಪರಂಪರೆಯ ಪ್ರಜ್ಞೆಯ ಅಭಾವವಷ್ಟರಿಂದಲೆ ಬಂದದ್ದೆನ್ನುವದಕ್ಕಿಂತಲೂ, ಹೊಸದಾಗಿ ಬರೆಯುವ ಕವಿಗಳೂ ಮತ್ತು ಅವರ ಬೆಂಬಲಿಗರಿಂದ, ಅವರ ಹಿಂದಿನ ಪರಂಪರೆಯ ನಾಗಬಂಧದಿಂದ ತಪ್ಪಿಸಿಕೊಳ್ಳಲೆಳಸುವಾಗ ಅವರು ಹೂಡುವ ಹೋರಾಟಕ್ಕೆ ಅನಿವಾರ್ಯವಾಗಿ ಪ್ರಾಪ್ತವಾಗುವ ಒಂದು ಆವೇಶದ ಮನಃಸ್ಥಿತಿ ಎಂದು ವರ್ಣಿಸಬಹುದು. ಇದು ಸ್ವನಿರ್ಮಿತಿಯಲ್ಲಿ ಅಥವಾ ಸ್ವಪಕ್ಷದಲ್ಲಿ ಒಂದು ರೀತಿಯ ನಿಷ್ಠೆಯನ್ನು ವಹಿಸಿಕೊಳ್ಳುವ ಸಲುವಾಗಿ ತಾಳಿಕೊಳ್ಳುವ ಒಂದು “ಮಾಹೇಶ್ವರಸ್ಥಲ”. ಇದನ್ನು ಸಾಹಿತ್ಯ ಚಳುವಳಿಯ ಕಾಲದಲ್ಲಿಯೂ ಸಹಜವಾಗಿ ಬಂದು ಹೋಗುವ ಒಂದು ಅವಸ್ಥಾಂತರವೆಂದು ಭಾವಿಸುವುದು ಉಚಿತ. ಇಂಥ ಸಂದರ್ಭಗಳಲ್ಲಿ ಆಯಾ ಕವಿಗಳೂ ಮತ್ತು ಅವರ ಪರವಾಗಿ ನಿಂತು ಮಾತನಾಡುವ ವಿಮರ್ಶಕರೂ ‘ಕಾಲಾತೀತ   ಮನೋಧರ್ಮ’ವನ್ನು ಸಾಧಿಸಿಕೊಳ್ಳಲು ಅಸಾಧ್ಯವಾಗುವಂಥ ಹೊತ್ತಿನಲ್ಲಿ ಆಡುವ ಮಾತುಗಳನ್ನು, ಅವು ಎಷ್ಟೇ ಬುದ್ಧಿವಂತಿಕೆಯಿಂದ ಕೂಡಿರಲಿ, ಕೇವಲ ಕುತೂಹಲದಿಂದ ನೋಡಬಹುದೇ ಹೊರತು ಎಲ್ಲ ಕಾಲಕ್ಕೂ ನಿಲ್ಲುವಂಥವುಗಳೆಂದು ಭಾವಿಸುವುದು ಅಪಾಯಕಾರಿ.

ಕೆಲವು ವೇಳೆ ಒಂದು ಉತ್ತಮ ಪರಂಪರೆಯ ಹಿನ್ನೆಲೆಯಿರುವ ಸಾಹಿತ್ಯ ಕ್ಷೇತ್ರದಲ್ಲಿ ನಿಂತು ಮಾತನಾಡುವವರೂ, ಆ ತಮ್ಮ ಪರಂಪರೆಯ ಬಗ್ಗೆ ತಕ್ಕಷ್ಟು ತಿಳಿವಳಿಕೆಯುಳ್ಳವರಾಗಿರುವುದಿಲ್ಲ-ಬೇರೆ ಬೇರೆಯ ಕಾರಣಗಳಿಂದಾಗಿ. ನಿದರ್ಶನಕ್ಕೆ ಕೇವಲ ಪಾಶ್ಚಾತ್ಯ ಪರಂಪರೆಯಷ್ಟನ್ನೆ ಬುದ್ಧಿಯ ಮೂಲಕ ಮೈಗೂಡಿಸಿಕೊಂಡ ಕೆಲವು ವಿಮರ್ಶಕರೆನ್ನಿಸಿಕೊಂಡವರು ಮಾತನಾಡಿದರೆ, ಬರೆದರೆ ಅವರ ಮಾತಾಗಲಿ ಬರಹವಾಗಲಿ ಯಾವುದೋ ವಿದೇಶೀಯವಾದೊಂದು ಮಾದರಿಯಲ್ಲಿ ಎರಕ ಹೊಯ್ದ ಹಾಗೆ ತೋರುತ್ತದೆ. ಆದರೆ ಯಾರು ಮೂಲತಃ ತಾವು ಬೇರೂರಿ ಬೆಳೆದ ಭಾಷೆಯ ಸಾಹಿತ್ಯ ಪರಂಪರೆಯ ಪ್ರಜ್ಞೆಯುಳ್ಳವರಾಗಿರುತ್ತಾರೋ ಅಂಥವರು, ಬೇರೆ ಬೇರೆ ದೇಶದ, ಭಾಷೆಯ ಸಾಹಿತ್ಯ ವಿಮರ್ಶೆಯ ವಿಧಾನಗಳನ್ನೂ ಆ ಪರಂಪರೆಯ ವಿಶಿಷ್ಟತೆಗಳನ್ನೂ ಓದಿಕೊಂಡು ಮಾರುಹೋದರೂ, ಅಂಥವರ ವಿಮರ್ಶೆಯ ವಿಧಾನ ಅದನ್ನೂ ಇದನ್ನೂ ತಮ್ಮ ವ್ಯಕ್ತಿತ್ವದಲ್ಲಿ ಮೇಳವಿಸಿಕೊಂಡ ಪರಿಣಾಮದಿಂದ ಹೊಸ ಹೊಗರನ್ನೂ ಸಮತೂಕವನ್ನೂ ತಾಳಬಲ್ಲುದು. ನಮ್ಮಲ್ಲಿ ಇತ್ತೀಚೆಗೆ ವಿಮರ್ಶೆಯ ಹೆಸರಿನಲ್ಲಿ ಬರುತ್ತಿರುವ ಎಷ್ಟೋ ಲೇಖನಗಳನ್ನು ನೋಡಿದಾಗ ಅಲ್ಲಿನ ವಿಮರ್ಶೆಯ ಭಾಷೆ ಯಾವ ಭಾಷೆಯ ಜಾಯಮಾನದಿಂದ ಸಂಭವಿಸಿದ್ದೋ ಹೇಳಲು ಬರುವುದಿಲ್ಲ; ಅಪ್ಪಿ ತಪ್ಪಿ ಕೂಡ ಭಾರತೀಯ ಕಾವ್ಯಮೀಮಾಂಸೆಯ ಪದಗಳಾಗಲಿ, ಭಾವ-ಭಾವನೆಗಳಾಗಲಿ ಕಾಣಿಸದ ಒಂದು ಬಗೆಯ ಗೊಂದಲದ ಗರಡೀಮನೆಯ ವಿಲಕ್ಷಣವಾದ ಪಟ್ಟುಗಳಂತೆ ತೋರುತ್ತದೆ ಆ ಬರವಣಿಗೆ. ಭಾರತೀಯ ಕಾವ್ಯ ಮೀಮಾಂಸೆಯ ಪರಿಚಯವಿದ್ದವರಿಗೆ ತಿಳಿಯುತ್ತದೆ : ಈ ದೇಶದಲ್ಲಿ ಕಾವ್ಯ ಮತ್ತು ಕಾವ್ಯವಿಮರ್ಶೆಯನ್ನು ಕುರಿತು ಅತ್ಯಂತ ಮೇಧಾವಿಗಳು ಸಹಸ್ರಾರು ವರ್ಷಗಳುದ್ದಕ್ಕೂ ಯೋಚನೆ ಮಾಡಿದ್ದಾರೆ ; ಇನ್ನೂ ಪಾಶ್ಚಾತ್ಯ ವಿಮರ್ಶಕರ ಬುದ್ಧಿಗೆ ಗೋಚರವಾಗದ ಕಾವ್ಯತತ್ವಗಳನ್ನು ಆಗಲೇ ಮಂಡಿಸಿದ್ದಾರೆ ; ಕಾವ್ಯಮೀಮಾಂಸೆಯ ಭಾಷೆ-ಪರಿಭಾಷೆಗಳನ್ನು ಸಿದ್ಧಪಡಿಸಿದ್ದಾರೆ, ಎಂಬುದು. ಅದನ್ನರಿಯದವರಂತೆ ಎಲ್ಲೆಲ್ಲಿಯದೋ ಎರವಲು ತಂದ ಮಾತಿನಲ್ಲಿ, ತಮ್ಮದಲ್ಲದ ಅಭಿಪ್ರಾಯಗಳನ್ನು ತಮ್ಮದೆಂಬಂತೆ ಹೇಳುವ ಈ ಅಭಿನಯಶೈಲಿಯ ಅನಾಥಸ್ಥಿತಿಯಿಂದ ನಮ್ಮ ಬುದ್ಧಿವಂತ ವಿಮರ್ಶಕರು ಪಾರಾಗುವ ತನಕ ನಮ್ಮಲ್ಲಿ ನಿಜವಾದ ವಿಮರ್ಶೆ ಬೆಳೆಯಲಾರದು. ಇವೆಲ್ಲ ಮಾತುಗಳ ಸಾರಾಂಶವಿಷ್ಟೆ : ನಿಜವಾದ ವಿಮರ್ಶೆಗೆ ಒಂದು ‘ಕಲಾತೀತ ನೆಲೆ’ಯಲ್ಲಿ ನಿಲ್ಲುವ ಮನೋಧರ್ಮ ಬೇಕು. ಅದು ತತ್ಕಾಲೀನ ಪಂಥ ಪ್ರವೃತ್ತಿಗಳಿಂದ ಆದಷ್ಟು ಪಾರಾಗುವುದರಿಂದ ಮಾತ್ರ ಸಾದ್ಯ. ಹಾಗಾಗಬೇಕಾದರೆ ವಿಮರ್ಶಕನು ಯಾವ ಒಬ್ಬ ಕವಿಯ ಕೃತಿಯನ್ನು ಪರಿಶೀಲಿಸುವಾಗ, ಆ ಕವಿಯನ್ನು ಕೇವಲ ತನ್ನ ಸಮಕಾಲೀನನೆಂದು ಮಾತ್ರ ನೋಡದೆ, ಕವಿಯೊಂದಿಗೆ ಮತ್ತು ಹೊಸ ರೀತಿಯಲ್ಲಿ ರಚಿತವಾಗುವ ಕೃತಿಯೊಂದಿಗೆ ಇರುವ ‘ಉಭಯ ದೇಶ-ಕಾಲ’ ಸಂಬಂಧದಿಂದ ಪಾರಾಗಿ, ಆ ಕೃತಿಯ ಹಾಗೂ ಕವಿಯ ಹಿಂದಿರುವ ಪರಂಪರೆಯ ಕವಿಗಳ ಸಾಧನೆ ಹಾಗೂ ಸಿದ್ಧಿಗಳೊಡನೆ ಗಂಭೀರವಾದ ರೀತಿಯಲ್ಲಿ ತೂಗಿ ನೋಡುವಂಥ ಮನೋಭಾವವನ್ನು ಬೆಳೆಯಿಸಿಕೊಳ್ಳಬೇಕು. ಅನ್ಯದೇಶೀಯವಾದ, ಅನುಕರಣಮೋಹಕವಾದ ವಿಮರ್ಶೆಯ ವಿಧಾನಗಳನ್ನು ಕೇವಲ ತನ್ನ ಅಭಿವ್ಯಕ್ತಿಯ ತಂತ್ರಕ್ಕಾಗಿಯೋ, ವೈವಿಧ್ಯತೆಗಾಗಿಯೋ, ಸ್ವೀಕರಿಸಿ ತನ್ನ ಮೂಲ ಪ್ರಜ್ಞೆಯನ್ನು ತನ್ನ ಪರಂಪರೆಯ ಅಂಶಗಳಿಂದ ಪುಷ್ಟಿಗೊಳಿಸಿಕೊಳ್ಳಬೇಕು. ಈ ಕೆಲಸ ಇನ್ನೂ ಮುಂದಿನವರಿಂದ ನಡೆಯಬೇಕಾಗಿದೆ.

ಗತಿಬಿಂಬ-೧೯೬೯


[1] ಕೆಲವು ಕವಿಗಳ ರಚನೆ ಅವರ ಯಾವುದೋ ಒಂದು ವಯಸ್ಸಿಗೆ ಒಂದು ಪರಿಪಾಕಕ್ಕೆ ಬಂದು ನಿಲ್ಲುವುದುಂಟು ; ಅಥವಾ ಕೆಲವರು ಬರೆಯುವುದನ್ನೇ ನಿಲ್ಲಿಸಿಬಿಡುವ ಸಂದರ್ಭಗಳೂ ಉಂಟು. ಅಂಥ ಹೊತ್ತಿನಲ್ಲಿ ಅವರ ಕೃತಿಯ ಸಮಗ್ರ ಸ್ವರೂಪ ವಿಮರ್ಶಕನ ಅಭ್ಯಾಸಕ್ಕೆ ದೊರೆಯಬಹುದಲ್ಲ ಎಂದು ವಾದಿಸಬಹುದು. ಆದರೆ ಅತ್ಯಂತ ಸೃಜನಶೀಲನಾದ ಕವಿ ತನ್ನ ಉಸಿರಿರುವತನಕವೂ ಬರೆಯುತ್ತಲೇ ಬೆಳೆಯುತ್ತಲೇ ಇರುತ್ತಾನೆ. ಹೀಗಿರುವಾಗ ಅಂಥ ಕವಿಯ ಕೃತಿರಚನೆಯ ಸಮಗ್ರಸ್ವರೂಪದ ಕವಿ ಜೀವಿಸಿರುವಾಗಲೇ ದೊರೆಯುತ್ತದೆನ್ನುವುದು ಅಸಂಭವ. ಆದರೂ ಆ ಕವಿಯ ಸಾಧನೆಯ ಮುಖ್ಯ ಲಕ್ಷಣಗಳನ್ನು ವಿಮರ್ಶಕ ಗುರುತಿಸುವುದು ಸಾಧ್ಯ.

[2] “From time to time, every hundred years or so, it is desirable that some critic shall appear to review the past of our literature, and set the poets and the poems in a new order. This task is not one of the revolution but of re-adjustment.” T. S. Eliot : Selected Prose-P 17.

[3] “It is a part of the business of criticism to preserve tradition where a good tradition exists” : T. S. Eliot ; Sacred Wood. P. xx-xvi (Introduction : 1982 Edn).

[4] “No poet, no artist of any art, has his complete meaning alone. His significance, his appreciation is the appreciation to his relation to dead poets and artists. Yoy can not value him alone ; yoy must set him for contrast and comparison among the dead.”: T. S. Eliot. ಅಲ್ಲೇ. ಪು. ೫೩.

[5] ನಿದರ್ಶನಕ್ಕೆ ಶ್ರೀ ಗೋವಿಂದ ಪೈಗಳು ಕಾವ್ಯ ಬರೆಯುತ್ತಿದ್ದ ಕಾಲದಲ್ಲಿ ದ್ವಿತೀಯಾಕ್ಷರ ಪ್ರಾಸವನ್ನು ಬಿಟ್ಟು ಬರೆಯುವುದೇ ಒಂದು ದೊಡ್ಡ ಸಾಧನೆಯಾಯಿತೆಂಬುದು ಎಷ್ಟು ಜನಕ್ಕೆ ಗೊತ್ತಿದೆ? ೧೯೧೧ ರ ಏಪ್ರಿಲ್ ತಿಂಗಳಲ್ಲಿ ಬಡೋದಾ ರಾಜ್ಯದ ನವಸಾರಿ ಎಂಬಲ್ಲಿ ಒಂದು ದಿನ ಪೈಗಳು ಶತಪಥ ಸುತ್ತುತ್ತಾ “ಪ್ರಾಸವನೀಗಲೆ ತೊರೆದುಬಿಡುವುದೇ ನಿಶ್ಚಯಂ” ಎಂಬ ನಿರ್ಧಾರವನ್ನು ಕೈಕೊಂಡ ಪರಿಸ್ಥಿತಿ ಇಂದಿನವರಿಗೆ ಅರ್ಥವೇ ಆಗಲಾರದು. ಏಕೆಂದರೆ, ಇವತ್ತಿನ ಆವರಣದಲ್ಲಿ ಅಂಥ ಯಾವ ಪ್ರಾಥಮಿಕ ಆತಂಕಗಳೂ ಇಲ್ಲ. ಪೈಗಳು ಪ್ರಾಸ ಬಿಟ್ಟು ಬರೆದ ಪದ್ಯ ಪ್ರಕಟವಾದಾಗ ಅದಕ್ಕೆ ಅಂದು ಎಷ್ಟೊಂದು ಪ್ರತಿಭಟನೆ ಬಂತೆಂಬುದನ್ನು ನೆನೆದರೆ (ನೋಡಿ : ಎಸ್. ಅನಂತನಾರಾಯಣ ಅವರ “ಕನ್ನಡ ಕಾವ್ಯದ ಮೇಲೆ  ಇಂಗ್ಲೀಷ್ ಕಾವ್ಯದ ಪ್ರಭಾವ”) ನಮಗೆ ನಗೆಬರಿಸುವ ಸಂಗತಿಯಂತೆ ತೋರಿದರೂ, ಅಂದಿನ ಕಾಲಕ್ಕೆ ಅದೊಂದು ದೊಡ್ಡ ಪ್ರಶ್ನೆಯೇ ಆಗಿತ್ತೆಂಬುದು ನಿರ್ವಿವಾದ. ಹಾಗೆಯೆ ಆಚಾರ್ಯ ಶ್ರೀಯವರು ಇಂಗ್ಲೀಷ್ ಗೀತಗಳ ಅನುವಾದದ ಮೂಲಕವೆ, ಹಿಂದಿನ ರೂಪಗಳನ್ನು ಮುರಿದು, ಹೊಸಗನ್ನಡಕ್ಕೆ ಹೊಸ ರೂಪಗಳನ್ನು ನಿರ್ಮಿಸುವ ಹೋರಾಟವನ್ನು ಪ್ರಕಟಿಸಿದ್ದಾರೆ ಎಂಬುದನ್ನು ಗೌರವಪೂರ್ವಕವಾಗಿ ನೆನೆಯಬೇಕು. ನವೋದಯಕಾಲದ ಮಾರ್ಗ ನಿರ್ಮಾಪಕರಾಗಲಿ, ಅಥವಾ ಅವರ ಆನಂತರದ ಕವಿಗಳಾಗಲಿ, ಹೊಸಕಾವ್ಯದ ರೂಪಗಳನ್ನು ಸಿದ್ಧಪಡಿಸುವಲ್ಲಿ ಯಾವ ರೀತಿಯ ಹೋರಾಟವನ್ನು ತಮ್ಮ ಪರಿಸರದೊಂದಿಗೆ ನಡೆಸಬೇಕಾಯಿತೆಂಬುದನ್ನು ತಣ್ಣಗೆ ಮರೆತು ಇಂದು ಮಾತನಾಡುವುದು ಸಾಹಿತ್ಯಕ್ಕೆ ಅಪಚಾರ ಮಾಡಿದಂತಾಗುತ್ತದೆ.