ಸುತ್ತ ಕುಂತೀರಿ ಗುರುಹಿರಿಯರ
ಶರಣು ಮಾಡಿ ಹೇಳುವೆನು ಶಾಸ್ತರ
ಜಗದೊಳು ಇದ್ದ ಒಬ್ಬ ಸಾವುಕಾರ
ಸಾವುಕಾರನ ಹೆಂಡರು ಸೌಂಸೌತೇರ ||

ಸಾವುಕಾರ ಇದ್ದ ಭಾಳ ಸರದಾರ
ಅವನ ಸುತ್ತಮುತ್ತ ಮಂದಿ ಇತ್ರಿ ಜುಮ್ಮಾರs
ಸಾವಿರಾರು ಒಡ್ಡಿಲಿ ಸಾಲ ಒಯ್ಯುವರ
ಹಿಂಗ ಇತ್ರಿ ಅವನ ಬಲ್ಲಿ ವಿಸ್ತಾರ ||

ಭಾಳದಿನಕೆ ಕೊಟ್ಟಿದಾನೊ ದೇವರs
ಗಂಡಸಮಗ ಹುಟ್ಟಿದಾನಿ, ಪುತ್ತರ
ತಾಯಿತಂದಿ ನೋಡಿ ಹರುಷ ಪಡಿಹುವಣ
ಚಿಂತಿ ಪರಿಹಾರ ಮಾಡೆನ ದೇವರ ||

ಏನು ಹೇಳಲಿ ಕೂಸಿನ ಸಿನಗಾರ
ಅವನ ವರ್ಣನ ನೋಡಿದ್ರ ಹುಣ್ವೆಚಂದಿರ
ಮೈಮ್ಯಾಲ ವಡಿವಸ್ತ ಭರಪೂರ
ಬಂಗಾರ ಟೊಪ್ಪಿಗೆ ಮ್ಯಾಲ ಜರತರ ||

ಊರಿಗಿ ಊರ ಚಿನ್ನ ಹೇಳಿದರ
ಅಲ್ಲಿ ತಾಯಿ ತಂದಿ ತಾಯಿ ಮುತ್ಯಾ ಬಂದಿದಾರ
ಜೋಗುಳ ಹಾಡಿ ತೊಟ್ಟಿಲತೊಳಗೆ ಹಾಕಿದರ
ಆಯೇರಿ ಆಗಿದಾವೊ ಆಯನೂರ ||

ಹಳ್ಳಿಪಳ್ಳಿ ತಿರಗತಿದ್ದ ಸಾವುಕಾರ
ನಿತ್ಯತಿರುಗಿ ಮಾಡತಿದ್ದ ಯಾಪಾರ
ಮನಿಯಲ್ಲಿ ಇರುತ್ತಿದ್ದರಿಬ್ಬರು ಹೆಂಡಿರ
ಜಿಂವ ಜಿಂವ, ಇದ್ದರು ಸೌಂಸೌಂತೇರ ||

ಸೌಂತೇರ ಸೌಂತೇರ ಕೂಡಿ ಮತಾಡ್ತಾರs
ಮಕ್ಕಳ ಮನಿಯಲ್ಲಿ ಎಣ್ಣೆ ಉಡುವದು ಜೋರ
ಹೀಗೆಂದು ಜೌಡಲ ಹರದಾರ
ಜೌಡಲ ಕುಟ್ಟಿ ಒಲಿಯ ಮ್ಯಾಲ ಇಟ್ಟಾರ
ಹಿರಿಯಾಕಿ ಹೋದಾಳೊ ತರಲಾಕ ನೀರs
ಸಣ್ಣಕ್ಕಿ ಹೊಟ್ಟಾಗ ಬೆಂಕಿ ಬಿತ್ತೊ ಪೂರ
ಜೌಡಲ ಗಡಗ್ಯಾಗ ಹಾಕಿದಳೋ ಪುತ್ತರ
ಮ್ಯಾಲ ಹುಟ್ಟಿ ತಿರವಿದಾಳೊ ಗರs ಗರs ||

ಹಿರಿಯಾಕಿ ಸಾಕ ಮಾಡಳ ನೀರs
ಎಣ್ಣೆ ಬಸಿಲಾಕ ಕುಂತಿದಾರ ಇಬ್ಬರ
ಚೌಡಲ ಗಡಿಗ್ಯಾಗ ಹೊಂಟಿತೊ ನೆತ್ತರ
ತಾಯಿ ನೋಡಿ ಅಗಿದಾಳೊ ದಿಲ್ಲೀರ ||

ಎದಿ ಎದೀ ಬಡಕೊಂಡಾಳೊ ಸೌಂತೀ ಎದುರ
ಏನಂತ ಕೊಲ್ಲಿದೆ ಸೂಳಿ ಪುತ್ತರ
ತಾಯಿ ಹೊಟ್ಟ್ಯಾಗ ಬೆಂಕಿ ಅಭಂಕಾರ
ಅನು ಅನುತೆ ತಿಂದಾಳೊ ಸುಂಬಳ ಖಾರ
ಅಷ್ಟರದೊಳಗ ಬಂದಿದಾರ ಸಾವುಕಾರs
ಮನಿವೊಳಗ ಅಂಜಕಿ ಇತ್ತೊ ಭಾಳ ಜೋರ
ಅಷ್ಟು ಎಲ್ಲ ಕೇಳಿಕೊಂಡ ಮಜಕೂರ
ನಿಂದರ ನಿಂದರಕಿಲ್ಲೆ ಹೊಡಕೊಂಡ ಹತಿಯಾರ ||

ಊರಿಗೆ ಊರ ಆಯ್ತೋ ಪುಕಾರs
ಗೌಡ ಕುಲಕರ್ಣಿ ರೈತರು ಬಂದಿದಾರ
ಪಂಚನಾಮ ಮಾಡಿ ಕಾಗದ ಬರದಾರ
ಹೀಂಗ ಸನಿ ಇತ್ರಿ ಅಲ್ಲಿ ಸರಕಾರ
ಪಂಚನಾಮ ಮಾಡಿ ಕಾಗದ ಬರೆದಾರ
ಒಯ್ದು ಠಾಣೆದವರ ಕೈಯ್ದಾಗ ಕೊಟ್ಟಾರ
ಫೌಜದಾsರ ತಾಲುಕದಾsರ
ಮತ್ತ ಜವಾನ ಬಂದಾರ ಕೊತ್ವಾಲರ ||

ಕರಕೊಂಡು ಒಯ್ದಾರ ಸರಕಾರ ಎದರ
ನಿಂದರಸಿ ಕೇಳತಾರ ಹುಜಿಯೇರ
ಅಷ್ಟ ಎಲ್ಲ ಕೇಳಕೊಂಡ ಮಜಕೂರ
ಒಯ್ದು ಗಲ್ಲಗೇರಿಸಿ ಜಿಂವ ಹೊಡಸ್ಯಾರ ||

ದಂಡೋತಿ ಊರಾದಪ ಭಾರ
ಅರ್ಜುನಪ್ಪ ಮಾರಾಜ ಹೀಂಗ ಹೇಳತಾರ
ತಾಸಿನೊಳಗ ನಾಕು ಜೀಂವ ಹೋದುಪೂರ
ಎಂದೆಂದು ಮಾಡ್ಕೊಬಾರ‍್ದೊ ಇಬ್ಬರ‍್ಹೆಂಡರ ||

 

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ರಾಮ ಕೆಂದಾಲಿಹೂವು; ಹೆಗಡೆ, ಎಲ್.ಆರ್. ತಿಮ್ಮಕ್ಕನ ಪದಗಳು ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೬೯ ಪು.ಸಂ. ೧೩೨-೧೪೭.

೨) ಕಾನ್‌ಕಾನ್ ಕನ್ನಡಿ; ಹೆಗಡೆ ಎಲ್.ಆರ್. ಗುಮ್ಮನ ಪದಗಳು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ೧೯೭೩, ಪು.ಸಂ. ೨೫-೩೭.

೩) ಧರ್ಮಳ್ಳಿ ದರಿರಾಜ ಮತ್ತು ಅಸ್ತುರಿ; ನಾಯಕ ಎನ್.ಆರ್. ಕೋಮಾರಪಂತರ ಕಥನ ಕವನಗಳು ಜಾನಪದ ಪ್ರಕಾಶನ ಹೊನ್ನಾವರ ೨೦೦೪, ಪು.ಸಂ. ೭೦-೮೨.*      ಸೌಂಸೌತೇರು; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು, ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೮ ಪು.ಸಂ. ೧೫೮-೧೬೦.