ಹಟ್ಟಿಲರಗ್ವಾಡೆ ಹಿತ್ತಲೇಲಿ ಸೇದೂಬಾವಿ
ಚಿತ್ತಾರಗೇದ ಅರಮನೆಯ ಒಳಗಿರುವ | ಚಿಕ್ಹೆಣ್ಣೆ
ಕುಡಿಯೋಕೆ ನೀರುಂಟೆ ಕಡುಜಾಣೆ
ಕುಡಿನೀರು ಕೊಡುವೋಕೆ ಅತ್ತಿಲ್ಲ ಮಾವಿಲ್ಲ
ಚಿಕ್ಕೊನು ಮೈದಾಳು ಮನೇಲಿಲ್ಲ | ದೊರೆಮಗನೆ
ನೀ ಹೋಗಯ್ಯ ಹರಿವೊ ಜಲಧೀಗೆ
ಹರು ನೀರು ಹಚ್ಚಾಗೆ ಕೆರೆ ನೀರು ಕೆಂಪೀಗೆ
ನೀ ಕೊಟ್ಟ ನೀರು ಕಡು ರುತಿಯು
ನಾ ಕೊಟ್ಟ ನೀರು ಕಡು ರುತಿಯಾದರೆ
ನಿನಗಿಂಟ ಚಲುವ ಮನೆಯಾತ | ಕಂಡರೆ
ನಿನ್ನ ಬೆನ್ನೇಲಿ ಬಿಡುವರು ಬಿಳಿಯಂಬ
ಬೆನ್ನಲಿ ಬುಟ್ಟಂಬ ಬೆಳ್ಕಲ್ಲಿ ತಗಿಸೂನೆ
ಸುರಗಿರಿ ಕೆಂಬಲ್ಲ ರತ್ನವ | ಕ್ವಾಟೇಲಿರುವ
ತಿರುಗಿ ನೋಡೂನ ಹೆಸರೇನೆ
ಆರು ಪೆಟ್ಟೇಲಿ ಬಣ್ಣ ಮ್ಯಾಲೊಂದ ಬಾಚಣಿಗೆ
ತಂದಿವ್ನಿ ನೋಡೆ ಬೆಲೆಹೆಣ್ಣೆ
ಹತ್ತು ಪೆಟ್ಟೇಲಿ ಬಣ್ಣ ಮ್ಯಾಲೊಂದ ಬಾಚಣಿಗೆ
ತಂದಿವ್ನಿ ನೋಡೆ ಬೆಲೆಹೆಣ್ಣೆ | ನಾನೀಗ
ಇಸ್ತ್ರೆ ತೋಳೇಲಿ ಮಗೂನೆ
ಇಸ್ತ್ರೆ ತೋಳೇಲಿ ವರಗಿದರೆ ದೊರೆಮಗನೆ
ದಂಡ ಕೊಟ್ಟೇನು ಅರಸೀಗೆ
ದಂಡ ನಾ ಕೊಡುವೆ ಹಿಂಡೆಮ್ಮೆ ಹೊಡಿಸೂವೆ
ನನ್ನ ಹೆಂಡರು ಮಕ್ಕಳ ಕೈಸೆರೆಯ ಕಳುವೇನು | ಈ ಮನೆಯ
ಕಡುಜಾಣೆ ನನಗೆ ಒಲಿದಾರೆ
ಉದ್ದುದ್ದನ ತ್ವಾರ ದೊಡ್ಡಮುತ್ತ ನಾ ಕೊಡುವೆ
ದೊಡ್ಡ ಮಾಳಿಗೇಲಿ ಇರಸೂವೆ | ಈ ಮನೆಯ
ಬುದ್ಧಿವಂತೆ ನನಗೆ ಒಲಿದಾರೆ
ಉದ್ದುದನ ತ್ವಾರ ದೊಡ್ಡ ಮುತ್ತು ನನಗುಂಟು
ದೊಡ್ಡ ಮಾಳಿಗೆ ಮಿಗಿಲುಂಟು | ನಂಗೌಡರ
ಉದ್ದೀನ ಗದ್ದೆ ಬೆಳಿಯಾಲೊ
ಕಡಕಡಲೆ ತ್ವಾರ ಕಡದ್ಹವಳ ನಾ ಕೊದುವೆ
ಕಡೆಯ ಮಾಳಗೇಲಿ ಇರಸೂವೆ | ಈ ಮನೆಯ
ಕಡುಜಾಣೆ ನನಗೆ ಒಲಿದಾರೆ
ಕಡಕಡಲೆ ತ್ವಾರ ಕಡದ್ಹವಳ ನನಗುಂಟು
ಕಡೆಯ ಮಾಳಿಗೆ ಮಿಗಿಲುಂಟು | ನಂಗೌಡರ
ಕಡಲೇಯ ಗದ್ದೆ ಬೆಳಿಯಾಲೊ
* * *
ಜ್ವಾಳದ ಹೊಲಕೆ ಕೂಳ ಕೊಂಡ್ಹೋಗಳೆ
ಜಾಣೆ ಒಕ್ಕಲಗಿತ್ತಿ ಕಡುಚೆಲುವೆ | ನೀನೀಗ
ಇತ್ತೊಂದ ತುತ್ತ ನೀದೋರೆ
ಒಬ್ಬರಿಗಟ್ಟುಡುಗೆ ಇಬ್ಬರಿಗೆ ಆದಾವೆ
ಇಬ್ಬಂದಿರಿಗಾರ ದೊರೆಮಗನೆ | ನನ್ನೋರು
ಒಬ್ಬರಿಗೆ ಧಾರೆ ಎರದವರೆ
ಹಳ್ಳಾದ ಹೊಲಕೆ ಕೂಳ ಕೊಂಡ್ಹೋಗೂಳೆ
ಉತ್ತುಮೊಕ್ಕಲಗಿತ್ತಿ ಕಡುಚಲುವೆ | ನೀನೀಗ
ಮತ್ತೊಂದ ತುತ್ತ ನೀದೋರೆ
ಇಬ್ಬಂದಿಗಾರ ದೊರೆಮಗನೆ ನನ್ನೋರು
ಒಬ್ಬರಿಗೆ ಧಾರೆ ಎರದವರೆ
ಹೊಲೆಯ ನೇದ ಬಟ್ಟೆ ತಲೆಮ್ಯಾಲೆ ಹಾಕೊಂಡು
ಮೂಡಲಾಗಿ ಹೊಲವ ಉಳುವಾ(ನ) | ಒಕ್ಕಲಮಗನ
ನೀ ಏನ ಮೆಚ್ಚೀದೆ ಬೆಲೆ ಹೆಣ್ಣೆ
ಹೊಲೆಯ ನೇದಬಟ್ಟೆ ತಲೆಮ್ಯಾಲೆ ಹಾಕೊಂಡು
ಮೂಡಲಾಗಿ ಹೊಲವ ಉಳುವಾ (ನ) | ಒಕ್ಕಲುಮಗನ
ಭಾವಾವ ನೋಡೊ ದೊರೆಮಗನೆ
ಮಾದಿಗ ನೇದ ಮಿಣಿಯ ಮಂಡೆಮ್ಯಾಲ್ಹಾಕೊಂಡು
ತೆಂಕಲಾಗಿ ಹೊಲವ ಉಳುವಾ (ನ) | ಒಕ್ಕಲಮಗನ
ನೀ ಏನ ಮೆಚ್ಚೀದೆ ಬೆಲೆಹೆಣ್ಣೆ
ಮಾದಿಗ ನೇದ ಮಿಣಿಯ ಮಂಡೆಮ್ಯಾಲ್ಹಾಕೊಂಡು
ತೆಂಕಲಾಗಿ ಹೊಲವ ಉಳುವಾ (ನ) | ಒಕ್ಕಲುಮಗನ
ಚಂದಾವ ನೋಡೊ ದೊರೆಮಗನೆ
ಹತ್ತು ಬೆರಳಿಗೆ ಹತ್ತು ತೆತ್ತೇಸ್ಹೊನ್ನುಂಗುರ
ಎತ್ತೀಗೆ ಹುಲ್ಲ ಇರುವೋನ | ಒಕ್ಕಲ ಮಗನ
ನೀನೇನ ಮೆಚ್ಚೀದೇ ಬೆಲೆಹೆಣ್ಣೆ
ಹತ್ತು ಬೆರಳಿಗೆ ಹತ್ತು ತೆತ್ತೇಸ್ಹೊನ್ನುಂಗುರ
ಎತ್ತೀಗೆ ಹುಲ್ಲಿರುವೋನ | ಒಕ್ಕಲಮಗನ
ಅಂದಾವ ನೋಡೋ ದೊರೆಮಗನೆ
ಕಡಾಯದೇಲಿ ನೀರು ಗಡಗುಟ್ಟಿ ಕಾದಾವೆ
ಹಣ್ಣೊಕ್ಕಲ ಮಗ ಶನಿವಾರ | ಮೀದ ನೀರ
ನೀ ನಾಯಾಗಿ ಉಳ್ಳೊ ದೊರೆಮಗನೆ
ಕೊಪ್ಪರಿಕೇಲಿ ನೀರು ಉಕ್ಕುಕ್ಕಿ ಕಾದಾವು
ಉತ್ತುಮೊಕ್ಕಲ ಮಗ ಸ್ವಾಮಾರ | ಮೀದ ನೀರ
ನೀ ಕತ್ತೆಯಾಗಿ ಮೀಯೊ ದೊರೆಮಗನೆ
ಎಣ್ಣೇಲಿ ಬೆಂದೊ ಹನ್ನೆರಡು ಕಜ್ಜಾಯ
ಹೆಣ್ಣೊಕ್ಕಲ ಮಗ ಶನಿವಾರ | ಉಂಡೆಲೆಯ
ನೀ ನಾಯಾಗಿ ನೆಕ್ಕೊ ದೊರೆಮಗನೆ
ತುಪ್ಪದೇಲಿ ಬೆಂದೊ ಇಪ್ಪತ್ತು ಕಜ್ಜಾಯ
ಉತ್ತುಮೊಕ್ಕಲ ಮಗ ಸ್ವಾಮಾರ | ಉಂಡೆಲೆಯ
ನೀ ಬೆಕ್ಕಾಗಿ ನೆಕ್ಕೊ ದೊರೆಮಗನೆ
ಎಷ್ಟು ಹೇಳಿದರೂ ಕೇಳೊಲ್ಲೊಕ್ಕಲಗಿತ್ತಿ
ಹಾಸೆ ಮುತ್ತೀನ ಜೋತುರವ | ಕಡುಜಾಣೆ
ನಿನ್ನ ಸಂಗಡರಗಳಿಗೆ ಇರುವೇನು
ಆರುವರ ಕೊಟ್ಟಿ ಆರು ವಲ್ಲಿಯ ನೆಯ್ಸಿ
ಲಾಳದ ಕೊಳವೇಲಿ ಅಡಗಿರುವ | ಜೋತುರವ
ಹಾಸಿದರೆ ನಿನ್ನೊಡಲು ಉರಿಯಾದೆ
ನಮ್ಮತ್ತೆ ಮಾವರು ಒಪ್ಪಿ ಮತ್ತೆ ಬಂಧುಗರೊಪ್ಪಿ
ಮುಕ್ಕಣೀಶ್ವರರು ವನಗೂಡಿ | ಬಂದೈರದಾಲಿ
ಹೋದರೆ ನಿನ್ನೊಡಲು ಉರಿಯಾದೆ
ಅತ್ತೆ ಮಾವರು ಒಪ್ಪಿ ಮತ್ತೆ ಬಂಧುಗರೊಪ್ಪ
ದಾಯದೋರೊಪ್ಪಿ ಗುರುವೊಪ್ಪಿ | ತಂದವರೆ
ನಾನ್ಯಾವ ಗಂಗೇಲಿ ಕಳಿಯಾಲೊ
ಎಲ್ಲಾನು ಗೆದ್ದೆಲ್ಲೆ ಜಲ್ಲಾಳೊಕ್ಕಲಗಿತ್ತಿ
ಕೊಳ್ಳೆತನ ಕಯ್ನ ಬಿಳಿಯೆಲೆಯ | ನನ್ನೂರ
ಹಳ್ಳದಿಂದಾಚೆ ನೆನೆಕೊಳ್ಳೆ
ನೆನೆವೆ ನನ್ನಪ್ಪಾನ ನೆನೆವೆ ನನ್ನವ್ವಾನ
ನೆನೆವೆ ನನ್ನೇಳ ಬಳಗಾವ | ದೊರೆಮಗನೆ
ನಿನ್ಯಾಕೆ ನೆನೆಯಲೊ ನನ್ನ ಹಳೆಗೆರವ
ನೆನೆವೆ ನನ್ನಪ್ಪಾನ ನೆನೆವೆ ನನ್ನವ್ವಾನ
ನೆನೆವೆ ನನ್ನೇಳ ಬಳಗಾವ | ನನ್ನೂರ
ಹೊಸಮಾರಿ ನನ್ನ ಮುರಿಯಲೊ
ಹೊಸಮಾರಿ ನಿನ್ನ ದೆಸೆಯೋರ ಮುರಿಯಾಲಿ
ನನ್ನ ವಸ್ತ್ರದಲ್ಲಿರುವ ಹಣಕಾ(ಸು) | ಸೊಂದುಂಟಾದ್ರೆ
ಇಸ್ತ್ರೆರೈವಾರ ತರುವೇನು
ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು
೧) ಎಳ್ಳಮಾಸೀ ಹಾಡು ಕಾವಸೆ ರೇವಪ್ಪ; ಮಲ್ಲಿಗೆ ದಂಡೆ, ಸಮಾಜ ಪುಸ್ತಕಾಲಯ ಧಾರವಾಡ, ೧೯೭೦. ಪು.ಸಂ. ೩೯-೪೧.
೨) ಮುತ್ತಿನಶೆಟ್ಟಿ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರ ೧೯೭೩ ಪು.ಸಂ. ೧೧೭-೧೧೯.
೩) ದಿಗಿಲಾಗಿ ನಿಂತಾಳ; ರಾಮಣ್ಣ, ಕ್ಯಾತನಹಳ್ಳಿ, ಬೀದರ ಜಿಲ್ಲೆಯ ಜನಪದ ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ಮೈಸೂರು ೧೯೭೬, ಪು.ಸಂ. ೧೩೬-೧೩೯.
೪) ಗೌಡರ ಸೊಸಿ ಮ್ಯಾಲೆ ನನ್ನ ಮನಸು; ಕೃಷ್ಣಯ್ಯ, ಎಸ್.ಎ. ಬಾಚಿಗೊಂಡನಹಳ್ಳಿ ಮತ್ತು ಏಣಗಿ ಬಸಾಪೂರದ ಜನಪದ ಗೀತೆಗಳು, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ೧೯೯೨. ಪು.ಸಂ. ೧೩೯೦೧೪೦.
* ಒಬ್ಬರಿಗಟ್ಟುಡುಗೆ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಮೈಸೂರು ೧೯೭೩ ಪು.ಸಂ. ೧೧೧-೧೧೪.
Leave A Comment