ಕನ್ನಡ ನಾಡಿನಲ್ಲಿ ಇನ್ನೂ ಕನ್ನಡ ಭಾಷೆಯ ಸ್ಥಾನಮಾನಗಳಿಗಾಗಿ ಹೊಡೆದಾಡುವಂಥ ಪರಿಸ್ಥಿತಿ ಉಳಿದಿರುವುದು ನಮಗಾರಿಗೂ ಹೆಮ್ಮೆ ತರುವ ಸಂಗತಿ ಅಲ್ಲ. ಪರಕೀಯ ಪ್ರಭುತ್ವದಿಂದ ಪಾರಾಗಿ ಇಷ್ಟು ವರ್ಷಗಳಾದರೂ, ಆಳುವವರ ಭಾಷೆಯಾಗಿ ನಮ್ಮನ್ನು ಹಿಡಿತದಲ್ಲಿರಿಸಿಕೊಂಡ ಇಂಗ್ಲಿಷನ್ನು ಇನ್ನೂ ನಮ್ಮ ಮಕ್ಕಳ ಶಿಕ್ಷಣ ಮಾಧ್ಯಮದ ಭಾಷೆಯನ್ನಾಗಿ ಉಳಿಸಿಕೊಳ್ಳುವ ವಿಚಾರದಲ್ಲಿ ನಾವು ತೋರುತ್ತಿರುವ ಉತ್ಸಾಹ ಅತ್ಯಂತ ವಿಷಾದನೀಯವಾಗಿದೆ. ನಮ್ಮದಲ್ಲದ ಭಾಷೆಯಲ್ಲಿ ನಾವು ಪರಿಣತರಾಗಬಲ್ಲೆವೆಂಬ, ಪರಿಣತರಾಗಿದ್ದೇವೆಂಬ ಭ್ರಮೆಯಲ್ಲಿ ಬದುಕುವ ಜನಕ್ಕೆ ಕನ್ನಡ ನಾಡಿನಲ್ಲಿ ದೊರೆಯುತ್ತಿರುವ ಮನ್ನಣೆ ಆಶ್ಚರ‍್ಯಕರವಾಗಿದೆ. ಇದಕ್ಕೆಲ್ಲ ಕಾರಣ ಏನು? ನಿರಭಿಮಾನವೇ? ಅಜ್ಞಾನವೆ? ಔದಾಸೀನ್ಯವೆ?

ಒಂದು ಮಾತನ್ನು ನೆನಪಿನಲ್ಲಿಡಬೇಕು : ನಾವು ಎಷ್ಟೇ ಶ್ರದ್ಧೆಯಿಂದ ಮತ್ತು ಶ್ರಮದಿಂದ ಕಲಿತರೂ, ನಮ್ಮದಲ್ಲದ ಭಾಷೆಯಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ಕಂಡುಕೊಳ್ಳಲಾರೆವು.  ನಾವು ಮನದೆರೆದು ಮಾತನಾಡಬೇಕಾದರೆ, ನಮಗೆ ಪರಂಪರಾಗತವಾದ ಮತ್ತು ನಮ್ಮ ಪರಿಸರದಲ್ಲಿ ಪ್ರಚಲಿತವಾದ ಮಾತೃಭಾಷೆಯಲ್ಲಿ ಅಲ್ಲದೆ, ಅನ್ಯಭಾಷೆಯಲ್ಲಿ ಸಾಧ್ಯವಿಲ್ಲ. ಈ ಸಂಗತಿಯನ್ನು ಕಳೆದ ಅರ್ಧ ಶತಮಾನದಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಈ ದಿಕ್ಕಿನಲ್ಲಿ ಏನಾದರೂ ಎಚ್ಚರ ಹುಟ್ಟಿದ್ದರೆ, ಅದು ಕನ್ನಡದಲ್ಲಿ ಸ್ವತಃ ಪರಿಶ್ರಮವಿದ್ದ, ಕನ್ನಡ ಭಾಷೆ-ಸಾಹಿತ್ಯಗಳ ಪ್ರಜ್ಞೆ ಇದ್ದ ಸಾಹಿತಿಗಳಿಂದಲೇ ಹೊರತು, ಕನ್ನಡವೆಂದರೆ ಏನು, ಅದು ಯಾವುದರ ಸಂಕೇತ ಎಂಬುದನ್ನರಿಯದ ಕೇವಲ ‘ಅಭಿಮಾನಿ’ಗಳಿಂದ ಖಂಡಿತ ಅಲ್ಲ. ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರಿಂದ ಇಲ್ಲಿನ ತನಕ, ಕನ್ನಡಿಗರಲ್ಲಿ ತಮ್ಮ ಭಾಷೆಯ, ಸಾಹಿತ್ಯದ, ಸಂಸ್ಕೃತಿಯ ಅರಿವನ್ನು ತಂದವರೆಲ್ಲ ಬಹುಮಟ್ಟಿಗೆ ಕನ್ನಡ ಭಾಷೆ-ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿದವರೆ ಎಂಬುದನ್ನು ಮರೆಯಬಾರದು. ಆದರೆ ಈಗ ಕಾಲ ಬದಲಾಗಿದೆ. ಕನ್ನಡದ ಕೆಲಸ ಮಾಡಲು ಸೊಂಟ ಕಟ್ಟಿ ನಿಂತವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಏನೂ ಗೊತ್ತಿರಬೇಕಾಗಿಲ್ಲ ; ಬರೀ ‘ಅಭಿಮಾನ’ ವಿದ್ದರಷ್ಟೇ ಸಾಕು. ಕನ್ನಡದ ಉದ್ಧಾರದ ಬಗ್ಗೆ ಮಾತನಾಡುವುದು, ಕನ್ನಡವನ್ನು ಸಂರಕ್ಷಿಸುವುದು, ಕನ್ನಡಮ್ಮನ ಸೇವೆ ಮಾಡುವುದು ಒಂದು ಲಾಭದಾಯಕವಾದ ಉದ್ಯಮವೆಂಬ ಗುಟ್ಟು ಗೊತ್ತಾಗಿ ಬಿಟ್ಟಿದೆ ! ಇಂಥ ಅಗ್ಗದ ಅಭಿಮಾನಿಗಳನ್ನು ತಯಾರು ಮಾಡಿದವರು ಯಾರು?

ಯಾರು? -ಎಂಬ ಪ್ರಶ್ನೆಗೆ ಉತ್ತರದ ಉತ್ತರಮುಖಿ ಮತ್ತೆ ನಮ್ಮ ಕಡೆಗೇ ತಿರುಗುತ್ತದೆ. ಇಂಥವರನ್ನು ಮತ್ತು ಇಂಥ ಪರಿಸ್ಥಿತಿಯನ್ನು ನಿರ್ಮಿಸಿದವರು ನಾವೆ. ಕನ್ನಡದಬಗ್ಗೆ ತಟಸ್ಥರಾಗಿರುವ ಅಧಿಕಾರಿಗಳು ; ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿತು ನಾಳೆ ಅಂತರ್‌ರಾಷ್ಟೀಯ ವ್ಯಕ್ತಿಗಳಾಗುತ್ತಾರೆಂಬ ಭ್ರಮೆಯಲ್ಲಿ ಬದುಕುವ ತಂದೆತಾಯಂದಿರು ; ಶಿಕ್ಷಣ ಮಾಧ್ಯಮವನ್ನಾಗಿ ಕನ್ನಡವನ್ನು ತೆಗೆದುಕೊಳ್ಳಲು ಹೇಗೋ ಮುಂದೆ ಬಂದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರೆರಚುವ ತಂತ್ರದಲ್ಲಿ ಪರಿಣತರಾದ ಶಿಕ್ಷಣ ಸಂಸ್ಥೆಯವರು ಮತ್ತು ಶಿಕ್ಷಕರು ; ಒಂದೆಡೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ತಯಾರಿಸುತ್ತಾ ಮತ್ತೊಂದೆಡೆ ವಿದ್ಯಾರ್ಥಿಗಳು ಅವುಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ಕಾಪಾಡುವ ವಿಶ್ವವಿದ್ಯಾಲಯಗಳು ; ಇಂಗ್ಲಿಷ್ ಭಾಷೆಯ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗಿರುವ ಅಜ್ಞಾನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕುವ ಬಂದಳಿಕೆಗಳು ; ಕನ್ನಡದಲ್ಲಿ ಏನಿದೆ ಎಂಬ ಬಗ್ಗೆ ತಟಸ್ಥವಾಗಿದ್ದುಕೊಂಡು, ಕನ್ನಡ ಭಾಷೆಯ ಸತ್ವವನ್ನು ಮೈಗೂಡಿಸಿಕೊಳ್ಳಲಾರದ ಸೋಮಾರಿ ಸಾಹಿತಿಗಳು ; ಕನ್ನಡ ನಾಡಿನಲ್ಲಿ  ಕನ್ನಡ ಎಲ್ಲ ಹಂತಗಳ ಆಡಳಿತ ಭಾಷೆಯೂ ಶಿಕ್ಷಣ ಮಾಧ್ಯಮದ ಭಾಷೆಯೂ ಆಗುವುದು ತಮ್ಮ ಸ್ಥಾನಮಾನಗಳಿಗೆ ಪೋಷಕವಾದೀತೆ ಇಲ್ಲವೆ ಎಂದು ಲೆಕ್ಕ ಹಾಕುವ ಪಟ್ಟಭದ್ರ ಹಿತಾಸಕ್ತಿಗಳು ; ನಮ್ಮ ಅಕ್ಕ ಪಕ್ಕದ ರಾಜ್ಯದ ಜನಕ್ಕೆ ಅವರವರ  ಭಾಷೆಯ ಬಗ್ಗೆ ಇರುವ  ಉತ್ಕಟ ಅಭಿಮಾನವನ್ನು ಕಂಡೂ ಕಂಡೂ ಕೊಂಚವೂ ಕಿಡಿ ತಾಗದ ಕೊರಡುಗಳಂತೆ ತಣ್ಣಗಿರುವ ಮಹಾಜನರು-ಈ ನಾವೆಲ್ಲರೂ ಕನ್ನಡ ನಾಡಿನಲ್ಲಿ ಕನ್ನಡದ ಬಗ್ಗೆ ಇನ್ನೂ ಹೊಡೆದಾಡುವಂಥ ಪರಿಸ್ಥಿತಿಯನ್ನು ಉಳಿಸಿ, ಈಗ ಯಾರೆಲ್ಲರೂ ಕನ್ನಡದ ರಕ್ಷಾಮಣಿಗಳಾಗುವ, ವೀರಾಧಿವೀರರಾಗುವ ಹಾಗೆ ಮಾಡಿದ್ದೇವೆ.

ಆದರೆ ಯಾರೊಬ್ಬರೂ-ಕನ್ನಡ ಎಂಬುದು ತನಗಿಂತ ದೊಡ್ಡದು ಎಂದು ತಿಳಿದ ಯಾರೊಬ್ಬರೂ, ಕನ್ನಡವನ್ನು ರಕ್ಷಿಸಬೇಕಾಗಿಲ್ಲ ; ಉದ್ಧಾರ ಮಾಡಬೇಕಾಗಿಲ್ಲ. ಒಂದು ಭಾಷೆಯನ್ನು ಉಳಿಸಿರುವವರು ನೀವು ; ಜನ ಸಮಷ್ಟಿರೂಪದ ನೀವು. ಬೆಳೆಯಿಸುವವರು ನಾವು, ಅಂದರೆ ಜನ ಸಮಷ್ಟಿಯ ಪ್ರತಿನಿಧಿಗಳಾದ ಸಾಹಿತಿಗಳು. ಒಂದು ಭಾಷೆ ಉಳಿಯುವುದೂ ಬೆಳೆಯುವುದೂ ಆಯಾ ಭಾಷೆಯನ್ನಾಡುವ ಜನರಿಂದ ; ಆಯಾ ಭಾಷೆಯಲ್ಲಿ ವಿಚಾರ ಮಾಡುವವರಿಂದ ; ಆಯಾ ಭಾಷೆಯ ಅರ್ಥವಂತಿಕೆಯ ಸಾಧ್ಯತೆಗಳನ್ನು ಅನ್ವೇಷಿಸುವವರಿಂದ ; ಅದರ ಆಯಾಮಗಳನ್ನು ವಿಸ್ತರಿಸುವ ಪ್ರಯೋಗ ಪರಿಣತಮತಿಗಳಿಂದ.

ಒಂದು ಪ್ರಶ್ನೆಯನ್ನು ಸಾಹಿತಿಗಳ ಪರವಾಗಿ ಎತ್ತಿಕೊಳ್ಳಲು ಬಯಸುತ್ತೇನೆ. ಸಾಹಿತಿ, ನಿಜವಾದ ಸಾಹಿತಿ ಒಂದು ಭಾಷೆಯಲ್ಲಿ ಯಾಕೆ ಬರೆಯುತ್ತಾನೆ? ಸಾಹಿತಿ ಬರೆಯುತ್ತಾನೆ, ತಾನು ಬರೆಯಲೇಬೇಕಾದ್ದರಿಂದ ; ಬರೆದು ತನ್ನ ಸುತ್ತಣ ಜನಕ್ಕೆ ಹಂಚಿಕೊಳ್ಳುವಂಥ ಮೌಲಿಕವಾದ ಭಾವನೆ, ಸಂವೇದನೆಗಳ ಸೆಳೆತಕ್ಕೆ ಸಿಕ್ಕುವ ಕಾರಣದಿಂದ. ಇಲ್ಲಿ ಒಂದು ವಿಷಯ ನಿರ್ವಿವಾದವಾಗಿ ಸ್ಪಷ್ಟವಾಗುತ್ತದೆ ; ಕನ್ನಡ ಸಾಹಿತಿ ಕನ್ನಡದಲ್ಲಿ ಬರೆಯುವುದು ಕನ್ನಡದ ಮೇಲಿನ ಅಭಿಮಾನದಿಂದ ಅಲ್ಲ. ಹಾಗೆ ಸಾಹಿತಿಯಾದವನು ಕೇವಲ ಅಭಿಮಾನದಿಂದ ಬರೆಯುವುದು ನಿಜವಾಗಿದ್ದ ಪಕ್ಷದಲ್ಲಿ, ಇಂದಿನ ಎಲ್ಲ ಕನ್ನಡ ಅಭಿಮಾನಿಗಳೂ ಸಾಹಿತಿಗಳಾಗಿ ಬಿಡುತ್ತಿದ್ದರು. ಕನ್ನಡ ಸಾಹಿತಿ ಕನ್ನಡದಲ್ಲಿ ಬರೆಯುವುದು, ಕನ್ನಡಭಾಷೆ ತನ್ನ ಸುತ್ತಣ ಜನಸಮಷ್ಟಿಯ ವ್ಯಾವಹಾರಿಕ ಮಾಧ್ಯಮವಾಗಿರುವುದರಿಂದ ; ಪಾರಂಪರಿಕವಾದ ಸಾಂಸ್ಕೃತಿಕ ಸತ್ವ ಆ ಭಾಷೆಯಲ್ಲಿ ಸ್ಥಾಯಿಯಾಗಿರುವುದರಿಂದ ; ತಾನೂ ಆ ಸಾಮಾಜಿಕ ಪರಿಸರದ ಮತ್ತು ಸಾಂಸ್ಕೃತಿಕ ಸತ್ವದ ಒಂದು ಅಂಗವಾಗಿರುವುದರಿಂದ. ಒಂದು ವೇಳೆ ನಾನು ಆಂಧ್ರ ಪ್ರದೇಶದಲ್ಲಿ ಹುಟ್ಟಿದ್ದರೆ, ತೆಲುಗು ಭಾಷೆಯಲ್ಲಿ ಬರೆಯುತ್ತಿದ್ದೆ ; ಗುಜರಾತ್‌ನಲ್ಲಿ ಹುಟ್ಟಿದ್ದರೆ ಗುಜರಾತಿಯಲ್ಲಿ ಬರೆಯುತ್ತಿದ್ದೆ ; ಇಂಗ್ಲೆಂಡಿನಲ್ಲೋ ಅಮೇರಿಕಾದಲ್ಲೊ ಹುಟ್ಟಿದ್ದರೆ ಇಂಗ್ಲಿಷಿನಲ್ಲಿ ಬರೆಯುತ್ತಿದ್ದೆ. ಆದುದರಿಂದ ಸಾಹಿತಿಯಾದವನು ತಾನು ಎಲ್ಲಿದ್ದರೆ ಅಲ್ಲಿ, ಅವನಿಗೆ ಹುಟ್ಟಿನಿಂದ ಪ್ರಾಪ್ತವಾದ ಪರಿಸರದ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವುದು ಸಹಜವೂ, ಅನಿವಾರ್ಯವೂ ಆಗಿದೆ ಎನ್ನಬಹುದೆ ಹೊರತು, ಆಯಾ ಸಾಹಿತಿ ಆಯಾ ಭಾಷೆಯ ಮೇಲಿನ ಅಭಿಮಾನದಿಂದ ಸಾಹಿತ್ಯ ನಿರ್ಮಿತಿಯಲ್ಲಿ  ತೊಡಗುತ್ತಾನೆಂದು ಭಾವಿಸುವುದು ಸರಿಯಲ್ಲ. ಕೇವಲ ಅಭಿಮಾನದಿಂದ ಯಾವ ಸೃಜನಾತ್ಮಕ ಕಾರ್ಯವೂ ಸಾಧ್ಯವಿಲ್ಲ. ಭಾಷೆಯ ಬಗ್ಗೆ ಇರುವ ಪ್ರಜ್ಞೆಯಿಂದ, ಒಂದು ಭಾಷೆಯನ್ನು ಜೀವಂತವಾಗಿ ಬದುಕುವುದರಿಂದ ಸಾಹಿತ್ಯ ನಿರ್ಮಿತಿ ಸಾಧ್ಯ. ಇದರ  ಅರ್ಥ ಸಾಹಿತಿಗೆ ಭಾಷೆಯ ಬಗ್ಗೆ ಅಭಿಮಾನವಿಲ್ಲವೆಂದಾಗಲಿ, ಯಾರಿಗಾದರೂ ಅಭಿಮಾನವಿರುವುದೆ ತಪ್ಪು ಎಂದಾಗಲಿ ಅಲ್ಲ. ಕೇವಲ ಅಭಿಮಾನದ ಇತಿ-ಮಿತಿ ಎಷ್ಟು ಎಂಬುದನ್ನು ಸ್ಪಷ್ಟಪಡಿಸುವುದಷ್ಟೇ ನನ್ನ ಉದ್ದೇಶ.

ಈ ದೃಷ್ಟಿಯಿಂದ ಸಾಹಿತಿಯಾದವನಿಗೂ ತನ್ನ ಪರಿಸರದ ಭಾಷೆಯೊಂದೇ ಗತಿ. ಎಂದರೆ, ಸಾಹಿತಿಯಾದವನು ತನ್ನ ಪರಿಸರದಲ್ಲಿ ಪರಂಪರಾಗತವಾದ ಸಾಹಿತ್ಯದ ಸತ್ವದಿಂದ ಪುಷ್ಟನಾಗದ ಹೊರತು, ಅವನಿಂದ ನಿಜವಾದ ಸಾಹಿತ್ಯ ನಿರ್ಮಿತಿ ಅಸಂಭವವಾಗುತ್ತದೆ. ಸಾಹಿತಿಯಾದವನು ತನ್ನ ವರ್ತಮಾನದ ಕೇಂದ್ರ ಬಿಂದುವಿನಲ್ಲಿ  ನಿಂತಿದ್ದರೂ, ಆತ ತಾನು ನಿಂತ ನೆಲೆಗೆ ಹಿನ್ನೆಲೆಯಾದ ಸಾಹಿತ್ಯ ಪರಂಪರೆಯನ್ನು ಅತ್ಯಂತ ಶ್ರಮದಿಂದ ತನ್ನದನ್ನಾಗಿ ಮಾಡಿಕೊಳ್ಳುವುದು ಆತನ ಜವಾಬ್ದಾರಿಗಳಲ್ಲಿ ಬಹು ಮುಖ್ಯವಾದದ್ದು. ಆದರೆ ಯಾಕೋ ಏನೋ ನಮ್ಮ ಇಂದಿನ ಕನ್ನಡ ಲೇಖಕರಿಗೆ ತಮ್ಮ ಪರಂಪರಾಗತವಾದ ಸಾಹಿತ್ಯದ ಸಂಪರ್ಕ ತಮಗೆ ಅಗತ್ಯವೆಂದಾಗಲಿ, ಅನಿವಾರ್ಯವೆಂದಾಗಾಲಿ ಅನ್ನಿಸುತ್ತಿಲ್ಲ. ಅದರ ಬದಲು ತಮಗೆ ತಮ್ಮ ಹಿಂದಿನ ಸಾಹಿತ್ಯ ಪರಂಪರೆಯ ಅರಿವಿಲ್ಲದಿರುವುದು ಅಷ್ಟೇನೂ ಮಹತ್ವದ ಸಂಗತಿಯಲ್ಲವೆಂದು ಕಡೆಗಣಿಸುವ ಮತ್ತು ಕನ್ನಡದ ಸಾಹಿತ್ಯಕ ಪರಂಪರೆಯಿಂದ ತಾವು ಕಲಿಯಬೇಕಾದುದೇನೂ ಇಲ್ಲವೆಂದು ಘೋಷಿಸುವ ಧೋರಣೆಯೊಂದು ಬೆಳೆದಿದೆ. ಈ ಒಂದು ಮನೋಧರ್ಮವನ್ನು ಖಂಡಿತ ಕನಿಕರಿಸಬೇಕಾಗಿದೆ. ಈ ಧೋರಣೆಯ ಜನ ಎಷ್ಟೇ ಬುದ್ಧಿವಂತರಾಗಿದ್ದರೂ, ಅವರ ಬುದ್ಧಿವಂತಿಕೆಯ ಬಹು ಭಾಗಕ್ಕೆ ಬೇರೆ ಬೇರೆ ದೇಶದ, ಬೇರೆ ಭಾಷೆಯ ಸಾಹಿತ್ಯದ ಸಂಪರ್ಕ ಹಾಗೂ ಪ್ರೇರಣೆಗಳು ಕಾರಣವಾಗಿದ್ದರೂ, ತತ್ಪರಿಣಾಮವಾಗಿ ಇತ್ತೀಚಿನ ಸಾಹಿತ್ಯಾಭಿವ್ಯಕ್ತಿಯಲ್ಲಿ ಕ್ರಾಂತಿಕಾರಕವಾದ ನಾವೀನ್ಯತೆಯೂ, ತಾಂತ್ರಿಕ ಸಫಲತೆಗಳು ಕಾಣಿಸಿಕೊಂಡರೂ, ಈ ನಮ್ಮವರ ಬುದ್ಧಿವಂತಿಕೆಗೆ, ಪ್ರಯೋಗ ಪರಿಣತಿಗೆ, ಕನ್ನಡ ಸಾಹಿತ್ಯ ಪರಂಪರೆಯ ಬುನಾದಿ ಇದ್ದ ಪಕ್ಷದಲ್ಲಿ, ಈಗ ಬಂದ ಹೊಸತನಕ್ಕೆ ಆಂತರಿಕವಾದ ಸತ್ವವೂ, ಬೇರೆಯ ಆಳ-ಅಗಲಗಳೂ ಲಭ್ಯವಾಗಬಹುದಾಗಿತ್ತು ಎನ್ನಿಸುತ್ತದೆ. ಈ ದೃಷ್ಟಿಯಿಂದಲೂ ನಮ್ಮ ಕನ್ನಡ ಸಾಹಿತಿಗಳು ನಿಜವಾದ ಅರ್ಥದಲ್ಲಿ ಮೊದಲು ಕನ್ನಡಿಗರಾಗದ ಹೊರತು, ಕೋಟ್ಯಂತರ ಕನ್ನಡಿಗರ ಆಶೆ-ಆಕಾಂಕ್ಷೆಗಳನ್ನು ಭಾವನೆಗಳನ್ನು ಮತ್ತು ಜೀವನವನ್ನು ಅಭಿವ್ಯಕ್ತಿಸಲು ಖಂಡಿತ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಈ ಸಂದರ್ಭದಲ್ಲಿ, ಕೆಲವು ವರ್ಷಗಳ ಹಿಂದೆ ಹೊಸ ಕಾವ್ಯದ ಘೋಷಣೆಗಳಲ್ಲಿ ಒಂದಾದ “ಕಾವ್ಯದಲ್ಲಿ ಮಣ್ಣಿನ ವಾಸನೆ ಹೊಡೆಯಬೇಕು”-ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಈ ಘೋಷಣೆಯಲ್ಲಿ “ಮಣ್ಣು” ಎಂದರೆ ತನ್ನ ಪರಿಸರ, ತನ್ನ ಸುತ್ತಣ ಜನರ ಬದುಕು, ತನ್ನ ಸಾಹಿತ್ಯಕ ಪರಂಪರೆ ಎಂಬ ವಿಶಾಲಾರ್ಥವನ್ನು ಕೊಟ್ಟುಕೊಳ್ಳುವುದಾದರೆ, ಕನ್ನಡನಾಡಿನ ಲೇಖಕ ಕನ್ನಡ ನಾಡಿನ ಮಣ್ಣಿನಲ್ಲಿ ಮೊದಲು ಬೇರೂರಿದವನಾಗಬೇಕು ಎನ್ನುವ ಸಾಂಸ್ಕೃತಿಕ ಜವಾಬ್ದಾರಿಯನ್ನು ಈ ಘೋಷಣೆ ಹೇಳುತ್ತದೆ ಎಂದು ಭಾವಿಸುವುದು ಉಚಿತ.

ನಮ್ಮ ಇತ್ತೀಚಿನ ಸಾಹಿತ್ಯ ನಿರ್ಮಿತಿಯಲ್ಲಿ ನಾವೀನ್ಯತೆ ಎದ್ದು ಕಾಣುವ ಗುಣವಾದರೂ, ಅದರಲ್ಲಿ ಸಮಗ್ರತೆ ಸಾಲದು. ಇದಕ್ಕೆ ಕಾರಣ ನಮ್ಮ ತರುಣ ಜನಾಂಗಕ್ಕೆ ಆಳವಾದ ಅಧ್ಯಯನದ ಹಿನ್ನೆಲೆ ಸಾಲದು, ಎಂಬುದೇ ಆಗಿದೆ. ಅವರಿವರ ವಿಚಾರಗಳ ಮೇಲೆ ಬಹುಕಾಲ ಬದುಕುತ್ತಾ ಹೋಗುವುದು ಸಾಧ್ಯವಿಲ್ಲ ಎಂಬ ಅರಿವು ಅವರಿಗೆ ಮೂಡಬೇಕಾಗಿದೆ. ನಾವು, ನಾವು ಬದುಕುವ ಆವರಣ, ನಮ್ಮ ಮಿತ್ರವಲಯದ ವಿಚಾರವಂತಿಕೆ, ಇದರಿಂದಾಚೆಗಿನ ನಿಜ ಜೀವನದಲ್ಲಿ ಸಾಹಿತಿಯಾದವನು ಬೇರೂರಿ ಬದುಕಬೇಕು. ಒಂದು ವಯಸ್ಸಿನ, ಮತ್ತು ಒಂದು ಪರಿಮಿತ ಪರಿಸರದಿಂದ ರೂಪಿತವಾದ ಮನಸ್ಸಿನ ಭಾವನೆಗಳು, ಅವೆಷ್ಟೇ ರೋಚಕವಾಗಿದ್ದರೂ, ಅವುಗಳಿಂದ ಪಾರಾಗಿ ತನ್ನತನವನ್ನು ಕಂಡುಕೊಳ್ಳುವ ಹೋರಾಟದಲ್ಲಿ ಸಾಹಿತಿ ತೊಡಗಬೇಕಾಗಿದೆ. ಇಂದು ಸಂದದ್ದು ನಾಳೆಯೂ ಸಲ್ಲುವಂತಾಗುವ ಗುಣವನ್ನು ಪಡೆದುಕೊಂಡಿದೆಯೆ ಎಂಬುದರ ಕಡೆಗೆ ಗಮನ ಹರಿಯಬೇಕಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ವೈಚಾರಿಕ ವಲಯದಲ್ಲಿ ಕಂಡುಬರುವ ಪ್ರಯತ್ನಗಳು ಪ್ರಶಂಸನೀಯವಾಗಿವೆ. ಅದರಲ್ಲೂ ಸಂಶೋಧನೆ ಹಾಗೂ ವಿಮರ್ಶೆಯ ದಿಕ್ಕಿನಲ್ಲಿ ಕಂಡುಬರುವ ಪ್ರಗತಿ ವಿಶೇಷ ರೀತಿಯಾಗಿದೆ. ನನಗೆ ತೋರುವ ಮಟ್ಟಿಗೆ ಇದೀಗ ಸಾಹಿತ್ಯದ ಪುನರ್ ಮೌಲ್ಯಮಾಪನಕ್ಕೆ ಸರಿಯಾದ ಸಮಯ. ಪಂಪನಿಂದ ಹಿಡಿದು ಇಂದಿನ ತನಕ ಹರಹಿರುವ ಸಾಹಿತ್ಯ ರಾಶಿಯನ್ನು ಪುನರ್ ವಿಮರ್ಶಿಸುವ ಗುರುತರವಾದ ಕಾರ್ಯ ಕಾದಿದೆ. ಇದರ ಜೊತೆಗೆ ಈ ಸಾಹಿತ್ಯವನ್ನು ಕುರಿತು ನಡೆದ ವಿಮರ್ಶೆಯನ್ನೂ ಮತ್ತೆ ವಿಮರ್ಶಿಸುವ ಕಾರ್ಯವೂ ಇದರಲ್ಲಿ ಸಮಾವೇಶವಾಗಬೇಕಾಗಿದೆ. ಇದುವರೆಗೂ ಬಂದ ವಿಮರ್ಶೆಯಲ್ಲಿ ಗಟ್ಟಿಯಾದುದೇನೂ ಇಲ್ಲವೆಂಬ ಕಾರಣದಿಂದ ಈ ಕಾರ್ಯ ನಡೆಯಬೇಕೆಂದು ನಾವು ಈ ಮಾತನ್ನು ಹೇಳುತ್ತಿಲ್ಲ. ನಮ್ಮ ಹಿಂದಿನ ಕೃತಿಗಳನ್ನು ಕುರಿತು ನಡೆದ ವಿಮರ್ಶೆಯ ಬಹು ಭಾಗ, ವರ್ಣನಾತ್ಮಕವಾದದ್ದು ; ಕವಿಗಳ ಮತ್ತು ಕೃತಿಗಳ ಕಡೆಗೆ ಓದುಗರ ಗಮನವನ್ನು ಸೆಳೆದು ಅಭಿರುಚಿಯನ್ನು ಹುಟ್ಟಿಸುವಂಥಾದ್ದು. ಆದುದರಿಂದ ಯುಗ ಯುಗದ ಸಾಹಿತ್ಯವನ್ನು ಆಧುನಿಕ ರೀತಿಯಲ್ಲಿ ವಿಮರ್ಶಿಸಿ ಬೆಲೆಕಟ್ಟುವ ಬಹು ದೊಡ್ಡ ಕಾರ್ಯ ಇನ್ನೂ ಆಗಬೇಕಾಗಿದೆ. ‘ಆಧುನಿಕ’ ರೀತಿಯಲ್ಲಿ  ಎಂದರೆ ಪಾಶ್ಚಾತ್ಯ ವಿಮರ್ಶೆಯ ಅಭ್ಯಾಸದಿಂದ ಕಲಿತ ಸೂತ್ರಗಳನ್ನು ಅನ್ವಯಿಸಿ ನಮ್ಮ ಸಾಹಿತ್ಯವನ್ನು ಅಳೆಯುವುದೆಂದು ಅರ್ಥವಲ್ಲ ; ಅಥವಾ ಮತ್ತೆ ಹಳೆಯ ಆಲಂಕಾರಿಕ ಪದ್ಧತಿಯನ್ನು ಹೊಸದಾಗಿ ಅನ್ವಯಿಸಿ ನೋಡುವುದು ಎಂದೂ ಅರ್ಥವಲ್ಲ. ಪಾಶ್ಚಾತ್ಯ ವಿಮರ್ಶೆಯಿಂದ ಪ್ರಾಪ್ತವಾದ ಹೊಸ ದೃಷ್ಟಿ ಮತ್ತು ನಮ್ಮ ಸಾಹಿತ್ಯಕ ಪರಂಪರೆಯನ್ನು ಅರಗಿಸಿಕೊಂಡ ಸತ್ವ ಇವೆರಡೂ ಮೇಳವಿಸಿದ ವಿಮರ್ಶಕನಿಂದ ಈ ಕಾರ್ಯ ಸಾಧ್ಯ. ಇಂಥ ವಿಮರ್ಶಕರು ಈಗ ಬರಬೇಕಾಗಿದೆ. ಈ ಹೊತ್ತಿನಲ್ಲಿ ನಮ್ಮ ವಿಮರ್ಶಕರೆನ್ನಿಸಿಕೊಂಡವರು ಏನು ಮಾಡುತ್ತಿದ್ದಾರೆ? ಅವರು ತಮ್ಮ ಹಿಂದಿನ ಸಾಹಿತ್ಯ ಪರಂಪರೆಯ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಕೇವಲ ಹೊಸ ಕಾವ್ಯದ ಮಹತ್ತನ್ನು ಸಾರುವ ರಭಸದಲ್ಲಿದ್ದಾರೆ.  ನಮ್ಮ ಕೆಲವು ವಿಮರ್ಶಕರ ಬುದ್ಧಿವಂತಿಕೆಯಾಗಲಿ, ವ್ಯುತ್ಪತ್ತಿಯಾಗಲಿ, ವಿಮರ್ಶನ ಸಾಮರ್ಥ್ಯವಾಗಲಿ ಕಡಿಮೆ ದರ್ಜೆಯದೇನಲ್ಲ. ಆದರೆ ಇಡೀ ಸಾಹಿತ್ಯ ನಿರ್ಮಿತಿಯಾಗಲಿ, ಸಾಹಿತ್ಯ ವಿಮರ್ಶೆಯಾಗಲಿ ಇದೀಗ ತಮ್ಮಿಂದ ಕನ್ನಡದಲ್ಲಿ ಆರಂಭವಾಗುತ್ತಿದೆ ಎಂಬ ಧೋರಣೆ ಮೆಚ್ಚತಕ್ಕದ್ದಲ್ಲ. ಹಾಗೆಯೆ ಹೊಸ ಕಾವ್ಯವನ್ನು ಕುರಿತು ಬರುತ್ತಿರುವ ವಿಮರ್ಶೆಯೆಲ್ಲ ಸಮತೂಕದ್ದೆಂದು ನಂಬುವಂತೆಯೂ ಇಲ್ಲ. ಉದಾಹರಣೆಗೆ ಒಬ್ಬ ಕವಿಯನ್ನು ಕುರಿತು ಇವರಲ್ಲಿ ಯಾರೋ ಒಬ್ಬರು ಒಂದು ಮಾತನ್ನು ಎಂದೋ ಹೇಳಿದರೆಂದರೆ, ಅದು ಉಳಿದವರ ಪಾಲಿಗೆ ಪ್ರಶ್ನಾತೀತನಾದ, ಮೌಲಿಕವಾದ ಕಡೆಯ ಮಾತೆಂಬಂತೆ ಭಾಸವಾಗಿ ಪುನರಾವರ್ತನೆಯಾಗುತ್ತಾ ಹೋಗುತ್ತದೆ. ಇನ್ನು ವಿಮರ್ಶೆಯ ಭಾಷೆಯೋ, ಅದರಲ್ಲಿ ಯಾವ ಯಾವ ದೇಶದ ವಾಸನೆ ಹೊಡೆಯುತ್ತದೆ ಎಂಬುದನ್ನು ಬಲ್ಲವನೇ ಬಲ್ಲ. ಇದಕ್ಕೆ ಕಾರಣ, ಮತ್ತೊಮ್ಮೆ ಹೇಳುವುದಾದರೆ, ನಮ್ಮ ಇಂದಿನ ಲೇಖಕರಾಗಲಿ, ವಿಮರ್ಶಕರಿಗಾಗಲಿ ತಾವು ಯಾವ ನೆಲದ ಮೇಲೆ ನಿಂತು ಬರೆಯುತ್ತಿದ್ದೇವೆ ಎಂಬುದರ ಅರಿವಿಲ್ಲದಿರುವುದೇ ಆಗಿದೆ. ಯಾವ ಒಂದು ಭಾಷೆಯಲ್ಲಿ ತಾವು ಬರೆಯುತ್ತಿದ್ದೇವೆಯೊ ಆ ಒಂದು ಭಾಷೆ ತನ್ನ ಪಾರಂಪರಿಕ ವಿಕಾಸದಲ್ಲಿ ಯಾವ ಯಾವ ಮಹತ್ವದ ಕವಿಗಳ ಪ್ರಭಾವಗಳನ್ನು ಸಂಸ್ಕಾರಗಳನ್ನು ಒಳಗೊಂಡಿದೆ ಎಂಬುದರ ಅರಿವಿಲ್ಲದೆಯೂ, ಆ ಭಾಷೆಯನ್ನು ಬಳಸುವ ಕಲೆಗಾರಿಕೆಯನ್ನು ನಾವು ಸಾಧಿಸಿಕೊಳ್ಳ ಬಲ್ಲೆವೆಂಬ ಧಾರ್ಷ್ಟ್ಯ ಒಂದು; ಈ ಒಂದು ಭಾಷೆ ತಮಗಿಂತ ಹಿಂದಿನ ವಿಮರ್ಶಕರ ವಿಚಾರಮಾಧ್ಯಮವಾದಾಗ, ಅವರು ರೂಪಿಸಿಕೊಂಡ ವಿಮರ್ಶೆಯ ಭಾಷೆಯಿಂದ ತಮ್ಮ ಇಂದಿನ ವಿಮರ್ಶೆಗೂ ಸಹಾಯಕವಾಗುವ ಸಾಧ್ಯತೆಗಳುಂಟೆ ಅಥವಾ ಇಲ್ಲವೆ ಎಂಬುದರ ಕಡೆಗಿರುವ ನಿರ್ಲಕ್ಷ್ಯ ಮತ್ತೊಂದು; ಬೇರೆಯ ದೇಶದ ವಿಮರ್ಶೆಯ ಮಾತುಗಳು, ಸೂತ್ರಗಳು ಆಯಾ ಸಾಹಿತ್ಯದ ಆವಶ್ಯಕತೆಯಿಂದ ಮತ್ತು ಅಲ್ಲಿನ ಪರಂಪರೆಯಿಂದ ಬಂದುವೆನ್ನುವ  ಸಂಗತಿ ಮರೆತು ಹೋಗಿ, ನಾವೀನ್ಯತೆಗಾಗಿ ಅಲ್ಲಿನ ವಿಮರ್ಶೆಯ ಮಾನದಂಡಗಳನ್ನು ಇಲ್ಲಿನ ಸಾಹಿತ್ಯ ಮಾಪನಕ್ಕೆ ಬಳಸುವಲ್ಲಿನ ರಭಸ ಇನ್ನೊಂದು-ಈ ಮೂರು ಕಾರಣಗಳಿಂದಾಗಿ ನಮ್ಮವರ ವಿಮರ್ಶೆಯ ಭಾಷೆ ಒಂದು ರೀತಿಯಲ್ಲಿ ವಿಲಕ್ಷಣವಾಗಿದೆ. ಈ ಕಾರಣದಿಂದಲೇ ಕನ್ನಡದ ಬುದ್ಧಿ ಜೀವಿಗಳು ಮೊದಲು ಕನ್ನಡಿಗರಾಗುವ ಅಗತ್ಯ ಎಂದಿಗಿಂತ ಇಂದು ವಿಶೇಷವಾಗಿದೆ ಎಂದು ಹೇಳಿದ್ದು.

ಕನ್ನಡಿಗರು-ಅವರು ಸಾಹಿತಿಗಳಾಗಿರಲಿ, ಇಲ್ಲದಿರಲಿ – ಮೊದಲು ಕನ್ನಡಿಗರಾಗಬೇಕು ಎಂದರೆ ಅವರಿಗೆ ಬೇರೆ ಭಾಷೆಯ, ಬೇರೆ ಸಾಹಿತ್ಯದ ಸಂಪರ್ಕಗಳು ಬೇಡ ಎಂದು ಅರ್ಥವಲ್ಲ. ಯಾಕೋ ಏನೊ ಕನ್ನಡದ ಬಗ್ಗೆ  ಮಾತನಾಡುವುದು ಎಂದರೆ, ಬೇರೆ ಭಾಷೆಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುವ ಕೂಪ ಮಂಡೂಕ ಪ್ರವೃತ್ತಿ ಎಂಬ ಅಪಾರ್ಥ ಬಂದುಹೋಗಿದೆ. ಕನ್ನಡ ಮಾಧ್ಯಮದ ಬಗ್ಗೆ ಮಾತನಾಡುವವರು ಇಂಗ್ಲಿಷ್ ಅಥವಾ ಹಿಂದಿ ಭಾಷೆಯ ವಿರೋಧಿಗಳೆಂಬ ಅರ್ಥವೂ ಆಗಾಗ ಬಂದಿದೆ. ಆದರೆ ನಮಗೆ ಎಲ್ಲ ಭಾಷೆಗಳ ಬಗೆಗೂ ಗೌರವವಿದೆ, ನಾವು ಸಾಧ್ಯವಾದಷ್ಟೂ ಬೇರೆಯ ಭಾಷೆಗಳನ್ನೂ ಕಲಿಯಲು ಪ್ರಯತ್ನಿಸೋಣ; ಆದರೆ ಇದಕ್ಕೆ ಮೊದಲು ನಮ್ಮ ಭಾಷೆಯಾದ ಕನ್ನಡದಲ್ಲಿ ಬೇರೂರಿ ಬೆಳೆಯೋಣ. ನಮ್ಮದಲ್ಲದ ಭಾಷೆ ಎಂದೂ, ಯಾವ ಕಾರಣಕ್ಕೂ ನಮ್ಮ ಅಂತರಂಗದ ಭಾಷೆಯಾಗಲಾರದು. ಈ ದೃಷ್ಟಿಯಿಂದಲೇ ಕನ್ನಡ ಮಾಧ್ಯಮದ ಅಗತ್ಯವನ್ನು ಒತ್ತಿ ಹೇಳುವುದು. ನಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬೇಡ ಎಂದರೆ, ಇಂಗ್ಲಿಷ್ ಭಾಷೆ ಬೇಡ ಎಂದು ಅರ್ಥವಲ್ಲ. ಇಂಗ್ಲಿಷನ್ನು ಇತರ ಭಾಷೆಗಳ ಒಂದು ಭಾಷೆಯನ್ನಾಗಿ ಅಭ್ಯಾಸ ಮಾಡುವುದೇ ಬೇರೆ; ಇಂಗ್ಲಿಷನ್ನು ಶಿಕ್ಷಣ ಮಾಧ್ಯಮದ ಭಾಷೆಯನ್ನಾಗಿ ಇರಿಸಿಕೊಳ್ಳವುದೇ ಬೇರೆ. ಈ ಎರಡನ್ನೂ ಒಂದರಲ್ಲೊಂದು ಬೆರೆಸಬಾರದು. ಖಂಡಿತವಾಗಿಯೂ ನಮಗೆ ಇಂಗ್ಲಿಷ್ ಬೇಕು; ಇಂಗ್ಲಿಷ್ ಮಾಧ್ಯಮ ಬೇಡ. ಇಂಗ್ಲಿಷ್ ಒಂದೇ ಏಕೆ, ಕಲಿಯುವ ಸಾಮರ್ಥ್ಯವಿರುವ ಕನ್ನಡಿಗ  ಇನ್ನೂ ಇತರ ಭಾಷೆಗಳಿಂದ, ಸಾಹಿತ್ಯಗಳಿಂದ ತನ್ನ ಪುಷ್ಟಿಯನ್ನು ಪಡೆಯಲು ಅಡ್ಡಿಯೇನಿಲ್ಲ. ಆದರೆ ಕನ್ನಡಕ್ಕೆ ತರ್ಪಣಕೊಟ್ಟು ಉಳಿದ ಭಾಷೆ-ಸಾಹಿತ್ಯಗಳ ಒಲವನ್ನು ಬೆಳೆಯಿಸಿಕೊಳ್ಳುವ ಹೆಮ್ಮೆ ಮಾತ್ರ ಬೇಡ. ಕನ್ನಡಿಗನಾದವನು ಮೊದಲು ತನ್ನ ಮಾತೃಭಾಷೆಯಲ್ಲಿ ಪರಿಣತನಾಗುವುದರ ಮೂಲಕ, ಪ್ರಾದೇಶಿಕವಾಗಿ ಕನ್ನಡಿಗನೂ, ಸಾಂಸ್ಕೃತಿಕವಾಗಿ ಭಾರತೀಯನೂ ಆಗುತ್ತಾನೆ.  ಭಾರತೀಯ ಸಾಂಸ್ಕೃತಿಕ ಸತ್ವ ಕನ್ನಡ ಭಾಷೆಯನ್ನೂ ತನ್ನದೊಂದು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡಿದೆ. ಈ ದೃಷ್ಟಿಯಿಂದ ವಿಚಾರ ಮಾಡಿದರೆ ತನ್ನ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ಸತ್ವದ ಸೋಂಕಿಲ್ಲದ ವ್ಯಕ್ತಿಗಳ ‘ಕನ್ನಡ ಅಭಿಮಾನ’ ಕೇವಲ ತೋರಿಕೆಯದಾದೀತು; ಕನ್ನಡ ಸಾಹಿತ್ಯ ಪರಂಪರೆಯ ಪ್ರಜ್ಞೆಯಿಲ್ಲದವರ ಸಾಹಿತ್ಯನಿರ್ಮಿತಿ ಅಸಮರ್ಪಕವಾದೀತು.

ನವೋದಯ-೧೯೭೬