ಭೂಮಿಕೆ : ನಾದಾತ್ಮಕ ಸಂಗೀತ ಪ್ರಪಂಚದಲ್ಲಿ ಹಿಂದುಸ್ತಾನಿ ಸಂಗೀತವು ತನ್ನದೇ ಆದ ವೈಶಿಷ್ಟ್ಯಗಳಿಂದ ವೈವಿಧ್ಯಪೂರ್ಣ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಮೊಟ್ಟಮೊದಲು ಹಾಡುಗಾರಿಕೆ (ಗಾಯನ) ಶೈಲಿ, ನಂತರ ವಾದನಶೈಲಿ ಮತ್ತು ನೃತ್ಯಶೈಲಿ. ಈ ಮೂರು ಸಂಗೀತ (ಪದ್ದತಿ ) ಶೈಲಿಗಳು ಪಂಡಿತರಿಂದ ಪಾಮರವರೆಗೆ ಸಂಗೀತದ ಆನಂದ ನೀಡುತ್ತ ಆತ್ಮಾವಲೋಕನದೆಡೆಗೆ ಕರೆದೊಯ್ಯುವ ಏಕೈಕ ಮಾರ್ಗ.

ಹಿಂದುಸ್ತಾನಿ ಸಂಗೀತದಲ್ಲಿ ದ್ರುಪದ, ಧಮಾರ -ಹೋರಿ, ಖಯಾಲ (ಖಾಲ) ಠುಮರಿ, ಟಪ್ಪಾ , ಕಜರಿ, ಚೈತಿ, ಚದುರಂಗ, ಕವ್ವಾಲಿ, ಗಜಲ್, ಭಜನ್, ತರಾನಾ, ಸರಿಗಮ, ಗೀತ, ಜಾನಪದ ಗೀತ ಮುಂತಾದ ಗಾನಶೈಲಿಗಳಿವೆ.

ನಾಗರಿಕತೆಯ ವಿಕಾಸದೊಂದಿಗೆ ಸಂಗೀತದ ವಿಕಾಸವೂ ಕೂಡಾ ಆಗುತ್ತ ಬಂದಿದೆ. ಪ್ರಾಚೀನ ಭಾರತದಲ್ಲಿ ಜನರು ದೇವ ಮಂದಿರಗಳಲ್ಲಿ ದೇವರಿಗೆ ಪೊಜೆ ಸಲ್ಲಿಸುವಾಗ ದೇವರ ನಾಮಗಳನ್ನು ಹಾಡುವ ಪದ್ದತಿಯಿತ್ತು ಮತ್ತು ಋಷಿಮುನಿಗಳು ಕೂಡಾ ಸಂಸ್ಕೃತ ಶ್ಲೋಕಗಳನ್ನು ಹಾಡಿ ದೇವರ ಆರಾಧನೆ ಮಾಡುತ್ತಿದ್ದರು. ಇದು ವೇದಕಾಲದ ಯಜ್ಞ-ಯಾಗಾದಿಗಳು ಮಾಡುವಾಗ ಹೇಳುವ ಸ್ವರಯುಕ್ತ ಮಂತ್ರಗಳಿಂದ ಆಧುನಿಕ ಕಾಲದವರೆಗೂ ಅನೇಕ ರೀತಿಯಲ್ಲಿ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ವಿಕಾಸವಾಗಿ ಪ್ರಚಾರ ಪಡೆಯುತ್ತ ಬಂದಿರುವುದು ಪ್ರತ್ಯಕ್ಷ ಸಾಕ್ಷಿ.

ಧ್ರುಪದ ಗಾಯನ ಶೈಲಿಯ ಉತ್ಪತ್ತಿ ಮತ್ತು ವಿಕಾಸ  :

ಧ್ರುಪದ ಗಾಯನ ಶೈಲಿಯ ಆವಿಷ್ಕಾರವು ಎಂದು , ಯಾವಾಗ, ಯಾರಿಂದ ಆಯಿತೆಂದು ಖಚಿತವಾಗಿ ಹೇಳುವುದು ಕಷ್ಟಸಾಧ್ಯವಾದುದು. ಆದರೆ ಕೆಲವು ಪಂಡಿತರು ಮತ್ತು ಸಂಗೀತ ಶಾಸ್ತ್ರಜ್ಞರ ಅಭಿಪ್ರಾಯದಂತೆ 15ನೇ ಶತಮಾನದಲ್ಲಿದ್ದ ಗ್ವಾಲಿಯರನ ರಾಜಾ ಮಾನಸಿಂಹ ತೋಮರನು ಸ್ವಯಂ ಕವಿ ಮತ್ತು ಸಂಗೀತ ವಿದ್ವಾಂಸನಾಗಿದ್ದ. ಇವನು ತನ್ನ ರಾಣಿಯಾದ ಮೃಗನಯನಿಯ ಮನಃತೃಪ್ತಿಗೆ ಕವಿತೆಗಳನ್ನು ರಚಿಸಿ ಹಾಡುತ್ತಿದ್ದ ಹಾಡುಗಳೇ ದ್ರುಪದಗಳು ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ರಾಜಾ- ಮಾನಸಿಂಹ ತೋಮರನೇ ಧ್ರುಪದ ಗಾಯನ ಶೈಲಿಗೆ ಜನ್ಮದಾತನೆಂದು ಒಪ್ಪಿಕೊಂಡಿದ್ದಾರೆ.

ರಾಜ ಮಾನಸಿಂಹ ತೋಮರನು ಪ್ರಾಚೀನ ಗೀತೆಗಳು ಹಾಗೂ ಪ್ರಬಂಧಗಳ ಧಾತು ಮತ್ತು ಅಂಗಗಳ ಆಧಾರನು ಮೇಲೆ ಗ್ವಾಲಿಯರ್ ಭಾಷೆಯಲ್ಲಿ ಧ್ರುಪದಗಳನ್ನು ರಚಿಸಿದ್ದಾನೆಂಬುದು ರಚಿತ ಧ್ರುಪದಗಳನ್ನು ನೋಡಿದಾಗ ತಿಳಿದುಬರುತ್ತದೆ.

ಪ್ರಬಂದದ ಆರು ಅಂಗಗಳಾದ ಸ್ವರ, ವಿರುದ, ತೇನ, ಪದ, ಪಾಠ ಮತ್ತು ತಾಲ ಇವುಗಳ ಆಧಾರದ ಮೇಲೆ ದ್ರುಪದಗಳು ರಚನೆಯಾಗಿದೆ. ಇವುಗಳಲ್ಲಿ ಪದ ಮತ್ತು ತೇನ ಪ್ರಮುಖ ಸ್ಥಾನದಲ್ಲಿವೆ. (ಇವು ಪ್ರಕಾಶವನ್ನು ಕೊಡುವ ನೇತ್ರಗಳಿದ್ದಂತೆ) ವಿರುದ್ಧ ಮತ್ತು ಪಾಠ (ವಿರುದದ ಅರ್ಥ ಯಶ ಎಂದು, ಪಾಠ ಎಂದರೆ ಪಾದಾಕ್ಷರಗಲ ಉತ್ಪತ್ತಿ) ಇವು ಪಾದಸ್ಥಾನದಲ್ಲಿವೆ. ವಿಭಿನ್ನವಾದ ಸ್ವರ ವಿಶೇಷಣ ಪದಗಳು ಕೂಡ ವಿರುದ, ಎಂದು ಕರೆದಿದ್ದಾರೆ. ಮುಖ್ಯವಾಗಿ ಇದರಲ್ಲಿ ಈಶ್ವರ ಸ್ತುತಿ ಮತ್ತು ಮಂಗಲಯುಕ್ತ ಶಬ್ದಗಳಿವೆ. ತ, ನ, ತೊಂ, ಇಂತಹ ನಿರರ್ಥಕ ಅಕ್ಷರಗಳಿಗೆ , ತೇನ ಎಂದು ವಾದ್ಯಾಕ್ಷರಗಳಿವೆ. ಪಾಠ ಎಂದು ಉಳಿದ ಪದ, ಮಂಠ ಮತ್ತು ತಂಕಾಲ ಶಬ್ದಗಳಿಗೆ ತಾಲ ಎಂದು ಹೇಳಿದ್ದಾರೆ.

ಈ ಪ್ರಾಚೀನ ಪ್ರಬಂಧ ಮತ್ತು ಪ್ರಬಂಧದ ಅಂಗಗಳಿಂದ ಧ್ರುಪದ ಅಷ್ಟಪತಿ ಮುಂತಾದ ಗೀತ ಪ್ರಕಾರಗಳು ಹುಟ್ಟಿಕೊಂಡವು. ಇವುಗಳ ವ್ಯತ್ಯಾಸ (ಭೇದ) ಗಳು ತಿಳಿದುಕೊಳ್ಳುವ ಸಲುವಾಗಿ ಮೇಲೆ ತಿಳಿಸದ ಅರ್ಥವಿವರಣೆ ತಿಳಿದುಕೊಳ್ಳಬೇಕಾಗಿದ್ದು ಭಹಳ ಮುಖ್ಯವಾಗಿದೆ. ಧ್ರುಪದದ ಆದಿಯಲ್ಲಿ ವರ್ಣ್, ಅರ್ಥಾತ್ ಶಬ್ದಗಳ ಅಲ್ಪತೆಯಿದು, ಸ್ವರಗಳ ವಿಸ್ತಾರವು ಹೆಚ್ಚಾಗಿರುತ್ತದೆ. ಆದರೆ ಪ್ರಬಂಧಗಳಲ್ಲಿ ಶಬ್ದಗಳ ಪ್ರಮುಖವಾಗಿದೆ.

ಸಂಸ್ಕೃತ, ಮಧ್ಯದೇಶಿ ಭಾಷೆಯಲ್ಲಿ ರಚನೆಯಾದ ‘ ಅನೂಪ ಸಂಗೀತ ರತ್ನಾಕರ’ ಗ್ರಂಥದಲ್ಲಿ ಮೊಟ್ಟಮೊದಲು ಧ್ರುಪದಗಾಯನದ ಲಕ್ಷ್ಯಣಗಳು ಕುರಿತು ವ್ಯಾಖ್ಯಾನಿಸಿದಾರೆ.

ಗೀರ್ವಾಣ ಮಧ್ಯ ದೇಶಿಯ ಭಾಷಾ ಸಾಹಿತ್ಯ ರಾಜಿತಮ್ !
ದ್ವಿಚತುರ್ವಾಕ್ಯ
ಸಂಪನ್ನ ನರನಾರಿತಥಾಶ್ರಯಮ್ !!
ಶೃಂಗಾರ
ರಸಭಾವಾದ್ಯಂ ರಾಗಾಲಾಪ ಪಾದಾತ್ಮಕಮ್ !
ಪಾದಾಂತುನಾ
ಪ್ರಾಸಯುಕ್ತಂ ಪಾದನ ಯುಗರಂಚವಾ !!
ಉದ್
ಗ್ರಹ ದ್ರುವಕಾಭೋಗಾಂತರಂ ದ್ರುವಪದಂ ಸ್ಕೃತಮ್ !!
                                       ‘ಅನೂಪ ಸಣ್ಗೀತ ರತ್ನಾಕರ

ಅರ್ಥಾತ್ ದ್ರುಪದವು ಗೀರ್ವಾಣ, ಮದ್ಯ ದೇಶಿಯ (ಬ್ರಿಜ್ ) ಭಾಷೆಯಲ್ಲಿ ರಚಿತವಾಗಿದೆ. ಇದರಲ್ಲಿ ಎಂಟೆಂಟು ಸಾಲುಗಳಿವೆ. ಇವು ನರನಾರಿಯರ (ಶೃಂಗಾರ)ಕಥಾ ರಚನೆಗಳನ್ನೊಳಗೊಂಡು ಶೋಭಿಸುತ್ತವೆ ಮತ್ತು ಪ್ರಮುಖವಾಗಿ ಶೃಂಗಾರ ರಸಬಾವಯುಕ್ತವಾಗಿ ರಾಗದಲ್ಲಿ ಪದಗಳನ್ನು ಮಾಲೆಯಂತೆ ಪೋಣಿಸಿದ ಧ್ರುಪದಗಳ ರಚನೆಯು ಸಾಮಾನ್ಯವಾಗಿ  ಎರೆಡೆರಡು ಮತ್ತು ನಾಲ್ಕು ನಾಲ್ಕು ಸಾಲುಗಳಲ್ಲಿ ಅಂತ್ಯಪ್ರಾಸ ಹಾಗೂ ಅನುಪ್ರಾಸವನ್ನು ಹೊಂದಿದ್ದು, ಪ್ರತಿಯೊಂದು ಪಾದವು ಪ್ರಾರಂಭದಲ್ಲಿ ನಿಬದ್ದವಾಗಿ ಉದ್ಗ್ರಾಹ, ದ್ರುವಕ, ಆಭೋಗ ಮತ್ತು ಅಂತರಾಗಳನ್ನೊಳಗೊಂಡಿರುತ್ತದೆ.

ಧ್ರುಪದದಲ್ಲಿ ನಾಲ್ಕು ಭಾಗಗಳಿವೆ. ಸ್ಥಾಯೀ, ಅಂತರಾ, ಸಂಚಾರಿ ಮತ್ತು ಅಭೋಗ. ಇವು ಮೇಲೆ ತಿಳಿಸಿದ ಉದ್ಗ್ರಾಹ, ದ್ರುವಕ, ಆಭೋಗ ಮತ್ತು ಅಂತರಾಗಳ ಜೊತೆ ಸಾಮ್ಯ ಹೊಂದುತ್ತವೆ. ಈ ನಾಲ್ಕು ಹಂತಗಳು ದ್ರುಪದ ಗಾಯನದಲ್ಲಿ ಇವತ್ತಿಗೂ ಕೂಡ ಪ್ರಸ್ತುತವಾಗಿವೆ.

ಧ್ರುಪದದ ಗೇಯಾಂಶದಲ್ಲಿ ಸ್ಥಾಯಿಯು ಸಾಮಾನ್ಯವಾಗಿ ಮಂದ ಮತ್ತು ಮಧ್ಯಮ ಸ್ಥಾನದ ಪೂರ್ವಾರ್ಧದಲ್ಲಿ  ಬದವಾಗಿರುತ್ತದೆ. ಅಂತರಾದ ಉಠಾಣವು ರಾಗದ ನಿಯಮಾನುಸಾರ ಮದ್ಯದ ಅಥವಾ ಪಂಚಮೈಂಅ ಪ್ರಾರಂಭವಾಗಿ ತಾರ ಷಡ್ಜದ ಮೇಲೆ ಹೋಗಿ ಸ್ವಲ್ಪ ಸಮಯ ನಿಂತು ಮತ್ತೆ ಮಧ್ಯಸ್ಥಾನಾ ಉತ್ತರಾರ್ಧ ಹಾಗೂ ತಾರಸ್ಥಾನದ ಪೂರ್ವಾರ್ಧದಲ್ಲಿ ಸ್ವರ-ಸಂಯೋಜನೆಯಾಗುತ್ತದೆ. ಸಂಚಾರಿಯು ಮಧ್ಯಸ್ಥಾನದಲ್ಲಿ ಸಂಚಾರ ಮಾಡುತ್ತದೆ. ಕೊನೆಯಲ್ಲಿ ಅಭೋಗವು ಅಂತರಾದ ಹಾಗೆಯೇ ಮದ್ಯ ಮತ್ತು ತಾರಸಪ್ತಕಗಳ ಪ್ರಧಾನ ಸ್ವರ ಸಂಯೋಜನೆಯೊಂದಿಗೆ ದ್ರುಪದ ಗಾಯನವು ಪ್ರಾರಂಭಿಕ ನಿಯಮಾನುಸಾರ ಸ್ಥಾಯಿ ಮತ್ತು ಅಂತರಾಗಳನ್ನು ಹಾಡಿದ ನಂತರ ಸ್ಥಾಯಿಯ ಪ್ರಥಮ ಪಂಕ್ತಿಯನ್ನು ಪುನರಾವರ್ತನೆ ಮಾಡಲಾಗುತ್ತದೆ. ಆದರೆ ಸಂಚಾರಿ ಮತ್ತು ಆಭೋಗದ ಮಧ್ಯದಲ್ಲಿ ಹೀಗೆ ಆಗುವುದಿಲ್ಲ. ಮಧ್ಯಸ್ಥಾನದ ಪೂರ್ವಾರ್ಧ ಅಥವಾ ಷಡ್ವದ ಮೇಲೆ ಸಂಚಾರಿಯು ಸಮಾಪ್ತವಾಗುತ್ತದೆ. ನಂತರ ಅಭೋಗದ ಉಠಾಣವು ಮಧ್ಯಸ್ತಾನದ ಉತ್ತರಾರ್ಧದಿಂದ ತಾರಷಡ್ಜದವರೆಗೆ ಹೋಗುವ ಸ್ವರ – ಸಂಯೋಜನೆಯಲ್ಲಿಯೇ ಈ ಎರಡು ಖಂಡಗಳು ಬೇರೆ –  ಬೇರೆಯಾಗಿ ಕಾಣಿಸಿಕೊಳ್ಳುತ್ತವೆ.

ಧ್ರುಪದವು ಅತೀ ವಿಲಂಬಿತದಲ್ಲಿ ಹಾಡುವುದಿಲ್ಲ.ಆದರೆ ಮಧ್ಯ ವಿಲಂಬಿತದಲ್ಲಿ ಹಾಡಲಾಗುತ್ತದೆ. ದ್ರುಪದ ಬಂದಿಶಗಳಲ್ಲಿ ಶಬ್ದಗಳನ್ನು ಲಯ ಮತ್ತು ಮಾತ್ರಾಗಳಿಗನುಗುಣವಾಗಿ ಬಂದಿಸಿರುತ್ತಾರೆ. ಮತ್ತು ಸಾಮಾನ್ಯವಾಗಿ ಒಂದು ಮಾತ್ರಾದಲ್ಲಿ ಒಂದು ಅಥವಾ ಎರಡು ಸ್ವರಗಳು, ಒಂದೊಂದು ಕಡೆ ಎರಡು ಅಕ್ಷರಗಳು ಬರುವ ಸಾಧ್ಯತೆಗಳಿವೆ. ಈ ಗಾಯನ ಶೈಲಿಯಲ್ಲಿ ವಿವಿಧ ಪ್ರಾಕಾರದ ಕ್ಲೀಷ್ಟವಾದ ಲಯಪ್ರಯೋಗದ ದೃಷ್ಟಿಯಿಂದ ಇದು ಬಹಳ ಅವಶ್ಯಕವಾಗಿದೆ.

ಧ್ರುಪದವು ಒಂದು ಪ್ರಬಂಧ-ವಿಶೇಷವೂ ಹೌದು ಮತ್ತು ಒಂದು ವಿಶೇಷ ಗಾಯನ ಶೈಲಿಯು ಕೊಡ. ಈ ಎರಡನ್ನೂ ಬೇರ್ಪಡಿಸಿ ವಿಚಾರ ಮಾಡುವುದು ಬಹಳ ಕಷ್ಟಕರವಾದದ್ದು. ಏಕೆಂದರೆ ಉತ್ತರಭಾರತೀಯ ಸಂಗೀತ ಪದ್ಧತಿಯಲ್ಲಿ ನಿಬದ್ಧ ಮತ್ತು ಅನಿಬದ್ಧಗಳು ಒಂದಕ್ಕೊಂದು ಘನಿಷ್ಠ ರೂಪದಿಂದ ಕೂಡಿಕೊಂಡಿವೆ ಮತ್ತು ಅವಲಂಬಿಸಿವೆ. ಈ ಗಾಯನ ಶೈಲಿಯು ಬೇರೆ ಎಲ್ಲ ವಿದ್ಯೆಗಳಿಗಿಂತಲೂ ಭಿನ್ನ ಮತ್ತು ವಿಶಿಷ್ಟವಾಗಿದೆ.

ಗಾಯನದ ವಿಧಾನ ಮತ್ತು ಕ್ರಮ :

ಗಾಯನ ಪ್ರಾರಂಭದ ಮೊದಲು ನೊಂ, ನರೀ ಮುಂತಾದ ನಿರರ್ಥಕ ಅಕ್ಷರಗಳ ಮೂಲಕ-ಖಂಡಬಧವಾಗಿ ‘ರಾಗಾಲಪ್ತಿ’ ಮಾಡುತ್ತಾರೆ. ಈ ಅಕ್ಷರಗಳ ಈಶ್ವರ ವಾಚಕ – ‘ಓಂ, ತ್ವಮನಂತ, ಹರಿ’ ಇತ್ಯಾದಿ ವಿಕೃತ ಆವಶೇಷಗಳಿಗೆ ಪ್ರಬಂಧದ ಅಂಗವಾದ ತೇನ ದಲ್ಲಿ ಸ್ವೀಕರಿಸಲಾಗಿದೆ. ನೊಂ, ತೊಂ ಆಲಾಪವು ಪ್ರಾರಂಭದಲ್ಲಿ ಲಯರಹಿತವಾಗಿ ವಿಲಂಬಿತಗತಿಯಲ್ಲಿ ಮೀಂಡ ಪ್ರಧಾನವಾಗಿರುತ್ತದೆ. ನಿಧಾನವಾಗಿ ಲಯವು ಬೆಳೆದಂತೆ ಲಯಬದ್ಧವಾಗಿ ಒನೆಯಲ್ಲಿ ಗಮಕಯುಕ್ತ ದ್ರುತ್ ತಾನಗಳ ರೂಪ ಪಡೆಯುತ್ತದೆ. ತದನಂತರ ದ್ರುಪದದ ಪದಗಳು ಮಧ್ಯ – ವಿಲಂಬಿತ ಲಯದಲ್ಲಿ ಹಾಡಲಾಗುತ್ತದೆ. ದ್ರುತ್ ಲಯದ ನೊಂ, ತೊಂ ಆಲಾಪವು ಮುಗಿದ ನಂತರ ತತ್ ಕ್ಷಣದಲ್ಲಿಯೇ ಮಧ್ಯಲಯ ವಿಲಂಬಿತ ಪದಗಾಯನದಲ್ಲಿ ಯಾವ ಒಂದು ವೈಪರೇತ್ಯ (ವೈಚಿತ್ರ್ಯ) ಸೃಷ್ಟಿಯಾಗುತ್ತದೆಯೋ ಅದೇ ಕ್ಷಣದಲ್ಲಿ ಶ್ರೋತೃವರ್ಗದ ಸಹೃದಯರ ಮನೋವೃತ್ತಿಯ ಮೇಲೆ ಗಾಯನದ ಪ್ರಭಾವವಾಗುತ್ತದೆ. ಇಂತಹ ಒಂದು ಅದ್ಭುತ ವಾತಾವರಣದ ಸೃಷ್ಟಿಗೆ ಧ್ರುಪದ ಗಾಯನದ ಪ್ರಾಣ ಎಂದು ಕರೆದಿದ್ದಾರೆ. ಯಾಕಂದರೆ ದ್ರುತ್ ಲಯದಿಂದಾ ಚಿತ್ತ ವೃತ್ತಿಯು ‘ಧೃತಿ’ ಯ ಸ್ಥಿತಿಯಲ್ಲಿ ಬಂದನಂತರ ಪದಗಳು ಪ್ರಾರಂಭವಾಗುತ್ತದೆ. ಇದರ ಜೊತೆಗೆಯೇ ಚಿತ್ತವು ಪೂರ್ಣ ವಿಶ್ರಾಂತವಾಗಿ ಸ್ಥಿರವಾಗುತ್ತದೆ. ಮತ್ತು ಗಾಯಕನ ಕಂಠದ  ಮೇಲಿನ ಗಂಭೀರತೆ, ಉತ್ಕ್ರಷ್ಟ  ಪದರಚನೆ, ಮಧ್ಯ ವಿಲಂಬಿತಲಯದ ಛಂದ ಮತ್ತು ಪಕ್ವಾಜದ ಸಾತ-ಸಂಗತದಿಂದ ಮನಸ್ಸಿಗೆ ಅಪೂರ್ವ ಆನಂದ ಪ್ರಾಪ್ತಿಯಾಗುತ್ತದೆ. ನಂತರ ಲಯಬಾಂಟ, ಬೋಲಬಾಂಟ್‌ಗಳ ಪ್ರಯೋಗವಾಗುತ್ತದೆ. ಲಯಬಾಂಟ ದಲ್ಲಿ ವಿಭಿನ್ನ ಪ್ರಾಕಾರದ ಸರಳ, ಅಡ್ದಲಯಗಳು ಅಂದರೆ ದುಗುನ್, ತಿಗುನ್, ಚೌಗುನ್ ಆಡಿ, ಉವಾಡಿ ಇತ್ಯಾದಿ ಲಯಪ್ರಕಾರಗಳಲ್ಲಿ ಗೀತ ಶಬ್ದಗಳನ್ನು ವಿಭಿನ್ನ ಸ್ವರ ಮಾಹುರ್ಯದೊಂದಿಗೆ ಹಾಡುತ್ತಾರೆ ಮತ್ತು ಗಾಯಕನಿಗೆ ಇಂಥಹ ಲಯದಲ್ಲಿ ಚಾಣಾಕ್ಷತನ, ತರ್ಕಬದ್ದ ಬುದ್ಧಿವಂತಿಕೆ, ಲಯ -ತಾಳಗಳ ಗಟ್ಟಿತನ, ಕಂಠದ ಮೇಲೆ ಪ್ರಭುತ್ವ ಮತ್ತು ಸ್ಥಿರತೆ ಇವೆಲ್ಲದರ ಮೇಲೆ ಪ್ರಭುತ್ವ ಸಾಧಿಸಬೇಕಾದುದು ಅನಿವಾರ್ಯವಾಗಿದೆ. ಆದರೆ ಶ್ರೋತೃಗಳು ಬಲ್ಲವರಾಗಿ, ಗಾಯಕರನ್ನು ವ್ಹಾ! ವ್ಹಾ! ಎಂದು ಪ್ರೋತ್ಸಾಹನೆಯಿಂದ ಗಾಯಕನು ಒಂದು ಅಲೌಕಿಕ ಅದ್ಭುತ ವಾತಾವರಣವೇ ನಿರ್ಮಾಣ ಮಾಡುತ್ತಾನೆ.

ಬೋಲಬಾಂಟವು ದ್ರುಪದ ಗಾಯನ ಶೈಲಿಯ ಅಂತಿಮ ಭಾಗವಾಗಿದೆ. ಭೋಲಬಾಂಟ ಎಂದರೆ ಸ್ವಲ್ಪ ಶಬ್ದಗಳು ಅಥವಾ ಒಂದು ಖಂಡದ ಎಲ್ಲ ಶಬ್ದಗಳನ್ನು ತೆಗೆದು ಕೊಂಡು ವಿಭಿನ್ನ ಪ್ರಕಾರದ ಲಯಕಾರಿಗಳನ್ನು ಮಾಡುತ್ತಾ ಗಾಯನ ಮಾಡುತ್ತಾರೆ. ಅಂದರೆ ಇಲ್ಲಿ ಗೀತ ಶಬ್ದಗಳನ್ನು ತೆಗೆದುಕೊಂಡು ಗೇಯದ ‘ಭಂಜನ’ ಮಾಡಲಾಗುತ್ತದೆ. ಅದಕ್ಕಾಗಿ ಇದನ್ನು ಭಂಜನ ರೂಪಕಾಲಪ್ತಿ‘ ಎಂದು ಕರೆಯುತ್ತಾರೆ. ಇದರಲ್ಲಿ ಸ್ವರ-ಲಯಗಳ ವಿವಿಧತೆ ಇರುವ ಕಾರಣ ವಿಶೇಷ ಆನಂದ ಪ್ರಾಪ್ತವಾಗುತ್ತದೆ. ಹೀಗಾಗಿ ಸ್ವರ, ತಾಲ ಮತ್ತು ಪದಗಳ ಉತ್ಕೃಷ್ಟವಾದ ಸಮನ್ವಯತೆ ಮತ್ತು ಸಂತುಲನೆಯ ಸಮರಸವೂ ಈ ವಿಧಾನದಲ್ಲಿದೆ.

ಉಸ್ತಾದ ಜಿಯಾವುದ್ದೀನ್ ಖಾನ್ ಸಹೇಬರ ಧ್ರುಪದ ರಚನೆಗಳಲ್ಲಿ ಒಂದನ್ನು ಇಲ್ಲಿ ನೋಡಬಹುದು.

ಧ್ರುವಪದ (ದೇವಸಾಖ) (ಪು. ಸಂ. 14-15)

ಸ್ಥಾಯಿ:
ನವರೋಜ ಬಹೆಲುವಾ ಶುಭ ಘಡಿ ಶುಭ ಘಡಿ
ಶುಭದಿನ ಬೈಠೆ ತಖ್ತ ಮುಬಾರಕ ಹಜರತ ಅಲಿ!

ಅಂತರಾ :
ಅಲಿ ಬಲಿ ಶಾಹ ದಿನ ಪನಾಹ ಬೈಲೊ ಜಗತಮೆ ಸಬತಮೆ ಸಬಓರ ಆನಂದ !

ಸಂಚಾರಿ :
ಬೈಟೆ ಸಾಹಬ ಸಿರತಾಜ ದೀನದುನಿಕೆ ಭೀ ಜಗತ ಸೋಹಾಯೆ ಆಯೆ ಪಾಯೆ ತನಾಹ !

ಅಭೋಗ :
ನರನಾರಿ ಮಿಲಗಾವೊ ಬಜಾವೋ ಥಪ್ಪಥಪ್ಪಾ ತನಉದಿನಾ ತೋಮ
ತನ ನಾದಿರನಾ ಬಜೋರೆ ಮಧುರಲಾ ಬಾಜ್ !!

ಧ್ರುಪದ ಗಾಯನಕ್ಕೆ ಪೌರುಷಯುಕ್ತ ಗಾಯನ ಎಂದು ಕರೆದಿದ್ದಾರೆ. ಈ ಗಾಯನವು ಪುರುಷರಿಗಷ್ಟೇ ಸೀಮಿತವಾಗದೆ ಸಮನ್ವಯತೆಯನ್ನು ಕಾಯ್ದುಕೊಂಡು ಬಂದಿದು ಶೈಲಿಯ ವಿಶೇಷತೆ. ಇದರ ವಿಕಾಸಕ್ಕೆ ಮಹಿಳೆಯರ ಪಾತ್ರವು ಕೂಡ ಅಷ್ಟೇ ಹಿರಿದಾಗಿದೆ. ವರ್ತಮಾನ ಸಮಯದಲ್ಲಿಯು ಕೂಡ ನೇಪಾಳ ದರಬಾರಿನಲ್ಲಿ ಗಾಯಕಿಯರಿಂದ ಧ್ರುಪದ ಗಾಯನ ನಡೆಯುತ್ತದೆ. ಇವರ ಜೊತೆ ಪಕ್ವಾಜ ಸಾಥಿದಾರರಾಗಿ ಗುರು-ಸಹೋದರಿಯರು ಇರುತ್ತಾರೆ. ಹಾಗೂ ಇದರಿಂದ ನೃತ್ಯಾಭಿನಯವು ಕೂಡಾ ನಡೆಯುತ್ತದೆ. ಇಂತಹ ಸಮನ್ವತೆ ಇವತ್ತಿಗೂ ಕೂಡ ಸಂಗೀತರು ಮತ್ತು ಶ್ರೋತೃವರ್ಗದವರು ನೆನಪಿಸಿಕೊಳ್ಳುತ್ತರೆ. ಇಂತಹ ಎಲ್ಲ ವಿಷಯಗಳನ್ನು ಉರಿತು ಸಾರಂಗ ದೇವನು ತನ್ನ ಮೇರು ಕೃತಿ ಸಂಗೀತ ರತ್ನಾಕರದಲ್ಲಿ ಉಲ್ಗೇಖಿಸಿದ್ದಾರೆ.

ಧ್ರುಪದ ಗಾಯನದ ಚತುರ್ವಾಣಿಗಳು

ಪ್ರಾಚೀನ ಕಾಲದಲ್ಲಿ ಧ್ರುಪದ ಗಾಯಕನಿಗೆ ‘ಕಲಾವಂತ’ ನೆಂದು ಕರೆಯುತ್ತಿದರು. ದ್ರುಪದ ಗಾಯಕರು ಬೇರೆ ಬೇರೆ ಪ್ರದೇಶಗಳಲ್ಲಿ ವಾಸ ಮಾಡುವುದರಿಂದ ಆಯಾ ಪ್ರದೇಶದಲ್ಲಿ ಮಾತನಾಡುವ ಭಾಷಾ ಶೈಲಿ ಮತ್ತು ಹಬ್ಬ ಹರಿದಿನಗಳನ್ನು ಆಚರಣೆ ಮಾಡುವ ಶೈಲಿ ಹಾಗೂ ವಿವಿಧ ಪ್ರಕಾರಗಳಲ್ಲಿ ಆಚರಿಸುವುದರಿಂದ ಗಾಯನ ಶೈಲಿಯಲ್ಲಿ ಆಯಾ ಪ್ರದೇಶದ ಬಾಷೆ ಮತ್ತು ಸಂಸ್ಕೃತಿ ಚಟುವಟಿಕೆಗಳ ಪ್ರಭಾವದಿಂದ ಗಾಯನವು ಆಯಾ ಪ್ರಭಾವಕ್ಕೊಳಗಾಗಿ ತನ್ನದೆ ಆದ ಶೈಲಿ ಹೊಂದಿರುವುದರಿಂದ ಬೇರೆ ಬೇರೆ ‘ವಾಣಿ’ಗಳು ಹುಟ್ಟಿಕೊಂಡು ಪ್ರಚಾರಕ್ಕೆ ಬಂದು ಪ್ರಸಿದ್ಧಿ ಪಡೆದ ನಾಲ್ಕು ಪ್ರಕಾರದ ವಾಣಿಗಳು ಈ ಕೆಳಗಿಂತಿವೆ.

1) ಗೋಬರ ಹಾರವಾಣಿ ಅಥವಾಶುದ್ಧವಾಣಿ

2) ಖಂಡಹಾರ ವಾಣಿ

3) ಡಾಗೂರ ವಾಣಿ

4) ನೋಹಾರ ವಾಣಿ

ಮೇಲ್ಕಾಣಿಸಿದ ನಾಲ್ಕು ವಾಣಿಗಳ ಬಗ್ಗೆ ‘ಹಕೀಂ ಮಹಮ್ಮದ ಕರಮ ಇಮಾಮ’ರು ತಮ್ಮ ‘ಮಾದಮಲ್ ಮೌಸೀಕ’ ಎಂಬ ಗ್ರಂಥದಲ್ಲಿ ವಿವರವಾಗಿ ತಿಳಿಸಿದ್ದಾರೆ. ಅಕ್ಬರ ಬಾದಶಹನ ಆಸ್ಥಾನದಲ್ಲಿ ಸುಪ್ರಸಿದ್ಧ ಸಂಗೀತ ವಿದ್ವಾಂಸರಾದ ಸಂಗೀತ ಸಾಮ್ರಾಟ್ ತಾನಸೇನ, ಬ್ರಜಚಂದ ಬ್ರಾಹ್ಮಣ, ರಾಜಾ ಸುಮೋಖನ ಸಿಂಹ (ವೀಣಾವಾದಕ) ಶ್ರೀ ಚಂದ ರಾಜಪೂತ ಇವರಿಂದ ಈ ಎಲ್ಲ ವಾಣಿಗಳ ಆವಿಷ್ಕಾರವಾಗಿ ಪ್ರಚಾರಕ್ಕೆ ಬಂದಿವೆ.

ತಾನಸೇನನು ಗೌಡ ಬ್ರಾಹ್ಮಣನಾಗಿದ್ದುದರಿಂದ ಆತನ ವಾಣಿಯನ್ನು ಗೌಡೀಯ ಅಥವಾ ಗೋಬರಹಾರವಾಣಿ ಎಂದು ಕರೆದರು. ಸುಪ್ರಸಿದ್ಧ ವೀಣಾವಾದಕನಾದ ಸುಮೋಖನ ಸಿಂಹನು ಖಂಡಾರ ಗ್ರಾಮದ ನಿವಾಸಿಯಾಗಿದ್ದರಿಂದ ಆತನ ವಾಣಿಗೆ ಖಂಡಾರವಾಣಿಯೆಂದು ಕರೆದರು. ಈತನು ಮುಂದೆ ಸಾಮ್ರಾಟ ತಾನಸೇನನ ಮಗಳನ್ನು ಮದುವೆಯಾಗಿ ನೌಬತ್ ಖಾನ್ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದನು.

1) ಗೋಬರ ಹಾರವಾಣಿ ಅಥವಾ ಶುದ್ಧವಾಣಿ : ಇದರ ಮುಖ್ಯವಾದ ಲಕ್ಷಣಗಳೆಂದರೆ: ಪ್ರಸಾದಗುಣ, ಶಾಂತರಸ, ಭಾವಾಭಿವ್ಯಕ್ತಿ, ಧೀರಗತಿ ಮತ್ತು ಸ್ವರಗಳ ಸ್ಪಷ್ಟತೆ ಈ ವಾಣಿಯ ವೈಶಿಷ್ಟ್ಯತೆ ಇರುವುದರಿಂದ ಇದಕ್ಕೆ ‘ಶುದ್ಧವಾಣಿ ’ ಎಂದು ಕರೆಯುತ್ತಾರೆ.

2) ಖಂಡಹಾರ ವಾಣಿ : ಈ ವಾಣಿಯು ವಿಲಾಸ ಪೂರ್ಣವಾಗಿದ್ದು ಐಶ್ವರ್ಯದ ಆಡಂಬರತೆಯ ಪ್ರಕಾಶ ‘ತೀವ್ರ ಭಾವರಸೋದ್ವೀಪಕ’ವಾಗಿದೆ ಮತ್ತು ಸ್ವರಗಳನ್ನು ಖಂಡ-ಖಾವಾಗಿ ಪ್ರಯೋಗಿಸಿ ಏಕ ಸೂತ್ರತೆಯನ್ನು ಸಾಧಿಸಿ ತನ್ಮೂಲಕ ರಸಿಕತೆಯ ಸಾಮಿಪ್ಯ ರಸೋಮಯವು ಈ ವಾಣಿಯ ವೈಶಿಷ್ಟ್ಯತೆಯಾಗಿದೆ. ಈ ವಾಣಿಯಲ್ಲಿ ಭಿನ್ನ- ಭಿನ್ನ ಸ್ವರಾಲಂಕಾರಗಳನ್ನು ರಚಿಸಿ ಪ್ರಯೋಗಿಸುವುದರಿಂದ ಸಂಸ್ಕೃತ ಗ್ರಂಥಕಾರರು ಇದಕ್ಕೆ ‘ಭಿನ್ನಾಗೀತಿ’ ಎಂದು ಕರೆದಿದ್ದಾರೆ. ಸ್ವರಗಳನ್ನು ಖಂಡ-ಖಂಡವಾಗಿ ಪ್ರಯೋಗಿಸುವಾಗ ಗಮಕ ಸೂಕ್ಷ್ಮತೆ ಕಂಡುಬರುವುದರಿಂದ ವಾಣಿಯ ವೈಖರಿ, ಮಧುರತೆಯು ತನ್ನಿಂದ ತಾನೆ ಮೂಡಿಬರುತ್ತಎ. ಸೇನಿ, ಪಂಗಡದ ಕಲಾವಿದರು ವೀಣಾವಾದನದಲ್ಲಿ ಮಧ್ಯ ಮತ್ತು ಹ್ರುತ್ ಲಯಗಳಲ್ಲಿ ಖಂಡಾರವಾಣಿಯನ್ನು ನುಡಿಸುತ್ತ ವೈವಿಧ್ಯಪೂರ್ಣ ಗಮಕಾಲಂಕಾರಗಳನ್ನು ಪ್ರದರ್ಶಿಸುತ್ತಾರೆ. ಮತ್ತು ರಬಾಬ್ ವಾದನದ ಮುಖಾಂತರ್ ಶುದ್ಧವಾಣಿಯನ್ನು ನುಡಿಸಲಾಗುತ್ತಿತ್ತು. ರಬಾಬ್ ನುಡಿಸುವಾಗ ಮಧ್ಯದಲ್ಲಿ ಆಲಾಪಾ ಅಂಗವು ವಿಲಂಬಿತ, ಮಧ್ಯ ಮತ್ತು ದೃತ ಲಯಗಳಲ್ಲಿ ಪರಿಶುದ್ಧತೆಯು ಬೇರೆ ವಾದನದಲ್ಲಿ ಸಾಧ್ಯವಿಲ್ಲ.

3) ಡಾಗೂರ ವಾಣಿ : ಈ ವಾಣಿಯ ಮುಖ್ಯ ಗುಣಗಳೆಂದರೆ, ಸರಳತೆ, ಸೌಂದರ್ಯತೆ, ಗತಿಯಲ್ಲಿ ಸಹಜತೆ ಮತ್ತು ವಕ್ರ ಸ್ವರಗಳ ವಿಶೇಷ ಸೌಂದರ್ಯತೆ ಇರುವುದರಿಂದ ಭಾವನೆಗಳ ಸ್ವಛಂದತೆ ಅಭಿವ್ಯಕ್ತಿ ಇದರಲ್ಲಿದೆ.

4) ನೋಹಾರ ವಾಣಿ : ಶ್ರೀ ಚಂದ ರಾಜಪೂತನ ಗ್ರಾಮದ ಹೆಸರಿನಿಂದ ಈ ವಾಣಿಯನ್ನು ಗುರುತಿಸುತ್ತಾರೆ. ಇದು ಸಿಂಹದಂತೆ ಧಿರೋದಾತ್ತ ಗತಿ ಮತ್ತು ಗಂಭೀರತೆ ಹೊಂದಿದ್ದು. ಇದರ ಗತಿಯು ಒಂದು ಸ್ವರದಿಂದ ಪ್ರಾರಂಭಿಸಿ ಮುಂದಿನ ಎರಡು ಮೂರು ಸ್ವರಗಳನ್ನುಲಂಘಿಸಿ ಪುನಃ ಪ್ರಾರಂಭದ ಸ್ವರಕ್ಕೆ ಲೀಲಾಜಾಲವಾಗಿ ಬಂದು ಸ್ವರಾಂತರಗಳ ವರ್ಣವೈಖರಿಗಳನ್ನು ತೋರಿಸುವುದು ಈ ವಾಣಿಯ ವಿಶೇಷತೆಯಾಗಿದೆ.

ನಾವು ಗಾಯನ ಶೈಲಿಗಳಲ್ಲಿ ಯಾವುದಕ್ಕೆ ‘ಶುದ್ಧವಾಣಿ’ಯೆಂದು ಕರೆಯುತ್ತೇವೆಯೋ ಅದು ಕೇವಲ ಗೋಬರವಾಣಿ ಮತ್ತು ಡಾಗೂರ ವಾಣಿಗಳ ರೂಪಾಂತರ ನಾಮವಾಗಿದೆ. ಶುದ್ಧವಾಣಿಯು ಸಂಗೀತದ ಆತ್ಮ ಮತ್ತು ಆನಂದದ ಆಗರವಾಗಿದೆ. ಅಂತೆಯೇ ತಾನಸೇನನ ವಾಣಿಯ ಪರಂಪರೆಯ ಕಲಾವಿದರು ಗಾಯನ ಶೈಲಿಯಲ್ಲಿ ಸ್ವರ ಶುದ್ಧತೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿರುವುದು ಔಚಿತ್ಯ ಪೂರ್ಣ.

ಸಂಗೀತ ರಸಿಕರು ಗೋಬರವಾಣಿಯನ್ನು ರಾಜನೆಂದು, ಡಾಗೂರ ವಾಣಿಯನ್ನು ಮಂತ್ರಿಯೆಂದು, ಖಂಡಾರವಾಣಿಯನ್ನು  ಸೇನಾಧಿಪತಿಯೆಂದು ಮತ್ತು ನೋಹಾರವಾಣಿಯನ್ನು ಭೃತ್ಯನೆಂದು ಈ ನಾಲ್ಕು ವಾಣಿಗಳ ಗತ್ತು ತಮ್ಮತ್ತುಗಳು, ಸ್ವಭಾವ ವೈಶಿಷ್ಟ್ಯತೆಗಳ ಮೇಲಿಂದ ಅರ್ಥಪೂರ್ಣವಾಗಿ ಉಪಮಿಸಿದ್ದಾರೆ.

ಧ್ರುಪದ ಗಾಯನವು ಗೋಪಾಲ ನಾಯಕ-ಬೈಜು, ಭಕ್ಷು, ಸ್ವಾಮಿ ಹರಿದಾಸ, ತಾನಸೇನ ,ಇಂತಹ ಸಮರ್ಥರಿಂದ, ಸಾಹಿತ್ಯ ಪ್ರತಿಭಾನ್ವಿತತೆಯನ್ನು ಪಡೆದು ಅಪ್ರತಿಮ ಸಂಗೀತಜ್ಞರಿಂದ ಪಾಲನೆ-ಘೋಷಣೆ ಪಡೆದು, ಮೇರು ಪರ್ವತವೇ ತಾನದ ಧ್ರುಪದ ಗಾಯನವು ಸುಮಾರು 400 ವರ್ಷಗಳವರೆಗೆ ಸಂಗೀತ ಕ್ಷೇತ್ರದಲ್ಲಿ ಸ್ವಯಂ ಪ್ರಕಾಶವುಳ್ಳ ಪ್ರಜ್ಯೋತಿ.

ನಂತರ ಖಯಾಲಗಾಯನವು ಪ್ರಚಾರಕ್ಕೆ ಬಂದು ಪ್ರಚುರ ಪಡೆಯಿತು. ಖಯಾಲವು ಎಷ್ಟೆ ಪ್ರಚಾರ ಪಡೆದು ಪ್ರಸಿದ್ದಿಗೆ ಬಂದರೂ  ಕೂಡ ದ್ರುಪದ ಗಾಯನದ ಮೇಲೆ ಯಾವುದೇ ಪ್ರಭಾವ ಬೀಳಲ್ಲಿಲ್ಲ. ಈ ಆಧುನಿಕ ಕಾಲದಲ್ಲಿ ಧ್ರುಪದ ಗಾಯನದ ಪ್ರಚಾರ ಕಡಿಮೆ ಇದ್ದರೂ ಕೂಡ ತನ್ನ ಯಾವುದೇ ಘನ – ಗಾಂಭೀರ್ಯತೆ, ನೀತಿ ನಿಯಮಾವಳಿ ಮತ್ತು ಶಾಸ್ತ್ರಬದ್ಧವಾದ ಸೌಂದರ್ಯಕ್ಕೆ ಧಕ್ಕೆ ಬರದಂತೆ ಉಳಿಸಿಕೊಂಡಿರುವುದು ಗಾಯನಾ ವಿಶೇಷತೆ.

20ನೇ ಶತಮಾನದ ಸರ್ವಶ್ರೇಷ್ಟ ದ್ರುಪದ ಗಾಯಕರಾದ ದಿ|| ರಾಧಿಕಾ ಮೋಹನ ಗೋಸ್ವಾಮಿ (ಕಲ್ಕತ್ತಾ), ಉಸ್ತಾದ ಕಾಲೇಖಾನ್ (ಬೆತಿಯ), ದಿ|| ನಾರಾಯಣ ಮುಖ್ಯೋಪಾದ್ಯಾಯ (ವಾರನಾಸಿ) , ದಿ|| ಚಂದನ ಚೌಬೆ (ಮಥುರಾ) ಉಸ್ತಾದ್ ನಸಿರುದ್ದೀನ್ ಖಾನ (ಇಂದೋರ) ಉಸ್ತಾದ ಖುರ್ಷಿದ್ ಅಲಿಖಾನ್ (ಲಾನೌ), ಇಂತಹ ಅನೇಕ ಮಹಾನ್ ಕಲಾವಿದರಿಂದ ಹಿಡಿದು ಪಾಠಕ ಬಂಧುಗಳು ಮತ್ತು ಡಾಗೂರ ಬಂದುಗಳು ಇವರು ಎಂತಹ ಕಷ್ಟ-ನಷ್ಟ ಬಂದರೂ ಕೂಡ ಗಾಯನ ಶೈಲಿಯನ್ನು ಪರಂಪರಾಗತವಾಗಿ ಉಳಿಸಿ ಬೆಳೆಸಿಕೊಂಡು ಬಂದು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾದ ಗೌರವ ಇವರಿಗಿದೆ.

ಫಿಲ್ಮಿ, ಪಾಪ್ ಸಂಗೀತದ ಕಾಲದಲ್ಲಿಯೂ ಕೂಡ ಧ್ರುಪದ ಗಾಯನ ಶೈಲಿಯು ತನ್ನದೆ ಆದ ಅಸ್ತಿತ್ವ ಉಳಿಸಿಕೊಂಡು ಬಂದಿರುವುದು ಗಮನಾರ್ಹವಾದುದು.