ಜಾಮ್ ಮೊದಲಾದುವುಗಳನ್ನು ಮಂದವಾಗಿಸಬೇಕಾದರೆ ಪೆಕ್ಟಿನ್ ಬೆರೆಸಬೇಕು. ಇದು ಮುಖ್ಯವಾಗಿ ಹಣ್ಣು ಮತ್ತು ತರಕಾರಿಗಳ ತಿರುಳಿನಿಂದ ಸಿಗುವ ಪದಾರ್ಥ. ಇದನ್ನು ಈ ಮುಂದೆ ಕಾಣಿಸಿದ ಕೆಲವು ಮೂಲಪದಾರ್ಥಗಳಿಂದ ಬಹು ಅಗ್ಗವಾಗಿ ಪಡೆಯಬಹುದು. (i) ಸೇಬಿನ ಮದ್ಯ ತಯಾರಿಸುವಾಗ ಹಿಂಡಿ ತೆಗೆದ ತಿರುಳು; ಡಬ್ಬಿಯಲ್ಲಿ ಸಂಸ್ಕರಿಸುವ, ನಿರ್ಜಲಗೊಳಿಸುವ ಕಾರ್ಖಾನೆಗಳಲ್ಲಿ ಸಿಗುವ ಸೇಬಿನ ಸಿಪ್ಪೆ ಮತ್ತು ದಿಂಡು; ದೋಷಯುಕ್ತ ಸೇಬು; ಮತ್ತು (ii) ನಿಂಬೆ ಜಾತಿ ಹಣ್ಣುಗಳ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಸಿಗುವ ಒಳಗಿನ ದಿಂಡು ಮತ್ತು ತಿರುಳಿನ ಭಾಗ.

ಬಟಾಣಿ ಸಿಪ್ಪೆ, ದ್ರಾಕ್ಷಿಯ ರಸ ಹಿಂಡಿದ ತಿರುಳು ಮತ್ತು ಬೀಟ್‌ರೂಟ್‌ಗಳನ್ನು ಪೆಕ್ಟಿನ್ ತಯಾರಿಕೆಯಲ್ಲಿ ಕಚ್ಚಾಪದಾರ್ಥವಾಗಿ ಉಪಯೋಗಿಸಬಹುದು.

ಕೆಲವು ಕಚ್ಚಾ (ಆಗ ತಾನೇ ಕಿತ್ತ ತಾಜಾ) ಪದಾರ್ಥಗಳಲ್ಲಿರುವ ಶೇಕಡಾಂಶ ಪೆಕ್ಟಿನ್ ಬಗ್ಗೆ ವಿಲ್ಸನ್ನರು ಈ ಕೆಳಗಿನ ಅಂಕಿ ಅಂಶಗಳನ್ನು ನೀಡಿದ್ದಾರೆ :

ಪದಾರ್ಥ ಆಗತಾನೇ ಕಿತ್ತದ್ದು (ತಾಜಾ) (ಶೇಕಡಾ ಪೆಕ್ಟಿನ್) ಒಣಗಿಸಿ ತೂಗಿದಾಗ (ಶೇಕಡಾ ಪೆಕ್ಟಿನ್)
ಸೇಬಿನ ರಸ ತೆಗೆದ ತಿರುಳು ೧.೫ – ೨.೫ ೧೫ – ೧೮
ನಿಂಬೆ ತಿರುಳು ೨.೫ – ೪.೦ ೩೦ – ೩೫
ಕಿತ್ತಳೆ ತಿರುಳು ೩.೫ – ೫.೫ ೩೦ – ೪೦
ಬೀಟ್‌ರೂಟ್‌ನ ತಿರುಳು ೧.೬ ೨೫ – ೩೦
ಗಜ್ಜರಿ ೦.೬೨ ೯ – ೧೪

ಸೇಬು ಪೆಕ್ಟಿನ್

ರೂಕರ್‌ರಂತೆ ಸೇಬಿನ ಪೆಕ್ಟಿನ್ ತಯಾರಿಕೆಯಲ್ಲಿ ಅಡಕವಾಗಿರುವ ವಿವಿಧ ಹಂತಗಳು ಈ ಕೆಳಗೆ ವಿವರಿಸಿದಂತಿರುತ್ತವೆ :

೧. ಸೇಬನ್ನು ತೊಳೆದು, ಜಜ್ಜಿ, ಹಿಂಡಿ ರಸ ತೆಗೆಯುವುದು.

೨. ರಸ ತೆಗೆದ ತಿರುಳನ್ನು ಒಣಗಿಸುವುದು.

೩. ಸ್ರವಿಸುವುದು.

೪. ಪೆಕ್ಟಿನ್‌ಸಾರ ತೆಗೆಯುವುದು.

೫. ಉಪಚರಿಸಿದ ಪದಾರ್ಥವನ್ನು ಹಿಂಡಿ ಪೆಕ್ಟಿನ್ ದ್ರಾವಣ ತಯಾರಿಸುವುದು.

೬. ದ್ರಾವಣದಲ್ಲಿರುವ ಮಡ್ಡಿಯನ್ನು ಕೇಂದ್ರಾಪಗಾಮಿ ಯಂತ್ರದಿಂದ ಇಲ್ಲವೇ ಕೆಳಕ್ಕೆ ತಂಗುವಂತೆ ಮಾಡಿ ಬೇರ್ಪಡಿಸುವುದು.

೭. ಪೆಕ್ಟಿನ್ ದ್ರಾವಣದಿಂದ ಪಿಷ್ಟ ಮತ್ತು ಪ್ರೊಟೀನನ್ನು ಬೇರ್ಪಡಿಸಲು ಯೋಗ್ಯ ಕಿಣ್ವದಿಂದ ಉಪಚರಿಸುವುದು.

೮. ಪೆಕ್ಟಿನ್ ದ್ರಾವಣವನ್ನು ವಿವರ್ಣಗೊಳಿಸುವ ಇಂಗಾಲದಿಂದ ಉಪಚರಿಸಿ ಶುದ್ಧ ಪೆಕ್ಟಿನ್ ಪಡೆಯುವುದು.

೯. ಪೆಕ್ಟಿನ್ ದ್ರಾವಣವನ್ನು ಶೋಧಿಸಿ ಅಪೇಕ್ಷಿತ ಮಟ್ಟದ ಹೊಳಪು ಬರುವಂತೆ ಮಾಡುವುದು.

೧೦. ಪೆಕ್ಟಿನ್ ದ್ರಾವಣವನ್ನು ಸಾಂದ್ರೀಕರಿಸುವುದು.

೧೧. ಪೆಕ್ಟಿನ್ ದ್ರಾವಣವನ್ನು ಅದರ ಜೆಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಮಾನಕಗೊಳಿಸುವುದು.

೧೨. ಮಾನಕಗೊಳಿಸಿದ ದ್ರಾವಣವನ್ನು ಸೀಸೆಗಳಲ್ಲಿ ತುಂಬಿ ಸಂಸ್ಕರಿಸುವುದು.

೧೩. ಪೆಕ್ಟಿನ್ನಿನ ಪುಡಿಯನ್ನು ತಯಾರಿಸುವುದು.

ಸೇಬಿನ ಮೇಲ್ಭಾಗದಲ್ಲಿ ಸಿಂಪರಣೆ ಮಾಡಿದ ರಾಸಾಯನಿಕಗಳ ಅವಶೇಷಗಳಿರಬಹುದು; ಇದನ್ನು ಸಜಲ (ದುರ್ಬಲಗೊಳಿಸಿದ) ಸಲ್ಫ್ಯೂರಿಕ್ ಆಮ್ಲದಿಂದ ತೊಳೆದು ತೆಗೆಯಬೇಕು. ಅನಂತರ ಹಣ್ಣನ್ನು ಜಜ್ಜಿ ಹಿಂಡಬೇಕು. ತಿರುಳನ್ನು ಕೂಡಲೇ ಒಣಗಿಸಬೇಕು. ಇದರಿಂದ ರಸ ತೆಗೆದ ತಿರುಳಿನಲ್ಲಿ ಉಂಟಾಗುವ ಹುದುಗುಕ್ರಿಯೆಯನ್ನು ತಡೆಯಬಹುದು. ಇವುಗಳನ್ನು ತಿರುಗುತ್ತಿರುವ ಪೀಪಾಯಿಗಳನ್ನು ೧೫೦ – ೧೮೦ ಫ್ಯಾ. ನಲ್ಲಿ ಒಣಗಿಸಬಹುದು. ತಿರುಳಿನ ತೇವದ ಮಟ್ಟ ಶೇಕಡಾ ೬-೮ರಷ್ಟು ಆಗುವವರೆಗೆ ಒಣಗಿಸಬೇಕು. ಒಂದು ಟನ್ ಸೇಬಿನಿಂದ ಸಾಧಾರಣ ೧೦೦ ಪೌಂಡು ರಸ ತೆಗೆದ ತಿರುಳನ್ನು ಪಡೆಯಬಹುದು. ಒಣಗಿಸಿದ ಈ ತಿರುಳಿನಲ್ಲಿ ಬಣ್ಣ ಮತ್ತು ಸುವಾಸನೆಯನ್ನುಂಟುಮಾಡುವ ಪದಾರ್ಥಗಳಿರುತ್ತವೆ. ಅಲ್ಲದೆ ಸಕ್ಕರೆ ಅಂಶವ ಇರುವಸಾಧ್ಯತೆಯಿರುತ್ತದೆ. ಇದನ್ನೆಲ್ಲ ತೆಗೆಯಲು ತಿರುಳನ್ನು ತಣ್ಣೀರಿನಿಂದ ಸ್ರವಿಸಬೇಕು. ಇದಕ್ಕೆ ರಂಧ್ರವುಳ್ಳ ಮಿಥ್ಯಾ ತಳಿ ಮತ್ತು ಹೊರಹೋಗಲು ದಾರಿಯಿರುವ ತೊಟ್ಟಿಯನ್ನು ಉಪಯೋಗಿಸಿದರೆ ಈ ಕಾರ್ಯ ಬಹುಸುಲಭವಾಗಿ ಜರುಗುತ್ತದೆ.

ರಾಸಾಯನಿಕ ಸಂಯೋಜನೆ

ಪೆಕ್ಟಿನ್‌ಗೆ ನಿಶ್ಚಿತವಾದ ಸಂಯೋಗವಿರುವುದಿಲ್ಲ. ಅದರ ಮಿಶ್ರಣದ ಜೆಲ್ಲಿ ಮಾಡುವ ಸಾಮರ್ಥ್ಯತೆಯಲ್ಲಿ ವೈವಿಧ್ಯತೆ ಕಾಣಬಹುದು. ಅತಿ ಹೆಚ್ಚು ಜೆಲ್ಲಿ ಸಾಮರ್ಥ್ಯವಿರುವ ಪೆಕ್ಟಿನ್ ಮಧ್ಯಮ ವರ್ಗಕ್ಕೆ ಸೇರುತ್ತದೆ. ಇದು ಬಹುಬೇಗನೆ ಪೆಕ್ಟಿಕ್ ಮತ್ತು ಮಿಥೈಲ್ ಆಲ್ಕೋಹಾಲ್ ಆಗಿ ಪರಿವರ್ತನೆ ಹೊಂದುತ್ತದೆ. ಇದರಲ್ಲಿ ಗಮನಿಸಬೇಕಾದ ಮುಖ್ಯ ವಿಷಯಗಳೆಂದರೆ ರಸ ತೆಗೆದ ತಿರುಳನ್ನು ೧೯೦ ಫ್ಯಾ. ನಲ್ಲಿ ೧ – ೧.೫ ಗಂಟೆ ಕಾಲ ಅಥವಾ ೨೧೨ ಫ್ಯಾ.ನಲ್ಲಿ ೩೦ – ೪೦ ನಿಮಿಷ ಕಾಲ ಬಿಸಿ ಮಾಡಬೇಕು. ಬಿಸಿ ಮಾಡುವಾಗ ಪಿಎಚ್ ೩.೫ ಇರಬೇಕು. ಇದಕ್ಕೆ ಸಿಟ್ರಿಕ್, ಟಾರ್ಟ್‌ರಿಕ್ ಅಥವಾ ಲ್ಯಾಕ್ಟಿಕ್ ಆಮ್ಲವನ್ನು ಶೇಕಡಾ ೦.೨ ರಷ್ಟು ಸೇರಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ರಸ ತೆಗೆದ ತಿರುಳನ್ನು ಕುದಿಸಿ ಹಿಂಡಬೇಕು. ಅನಂತರ ಈ ದ್ರಾವಣದಲ್ಲಿರುವ ಮಡ್ಡಿಯನ್ನು ತಳದಲ್ಲಿ ತಂಗುವಂತೆ ಮಾಡಿ ಅಥವಾ ಕೇಂದ್ರಾಪಗಾಮಿ ಕ್ರಿಯೆಯಿಂದ ತಿಳಿಯಾಗಿಸಬೇಕು. ಪ್ರೊಟೀನ್ ಮತ್ತು ಪಿಷ್ಟವನ್ನು ಕಿಣ್ವದಿಂದ ತೆಗೆಯಬಹುದು. ಈ ದ್ರಾವಣವನ್ನು ಬಿಸಿ ಮಾಡಿದಾಗ ಕಿಣ್ವನಾಶವಾಗುತ್ತದೆ. ಬಣ್ಣ ತೆಗೆಯಲು ಕ್ರಿಯಾಶೀಲಗೊಳಿಸಿದ ಇಂಗಾಲವನ್ನು ಉಪಯೋಗಿಸಬೇಕು. ಅನಂತರ ಯಾಂತ್ರಿಕವಾಗಿ ದ್ರಾವಣವನ್ನು ಶೋಧಿಸಬೇಕು. ಇದರಲ್ಲಿ ಶೇಕಡಾ ೦.೭ – ೧.೦ ರಷ್ಟು ಪೆಕ್ಟಿನ್ ಇರುತ್ತದೆ. ಇದನ್ನು ಕಡಮೆ ಒತ್ತಡದಲ್ಲಿ ಸಾಂದ್ರೀಕರಿಸಿ ಶೇಕಡಾ ೪.೫ ಸಾಮರ್ಥ್ಯಕ್ಕೆ ಹೆಚ್ಚಿಸಬಹುದು. ಸಾಂದ್ರೀಕರಿಸಿದ ಈ ಪೆಕ್ಟಿನ್ನನ್ನು ಜೆಲ್ಲಿ ಪರೀಕ್ಷೆಯಿಂದ ಆದರ್ಶಮಾನಕ್ಕೆ ತರಲಾಗುತ್ತದೆ. ಇದನ್ನು ಒಂದು ಇಲ್ಲವೇ ೫ ಗ್ಯಾಲನ್ ಗಾತ್ರದ ಅಧಿಕ ಚಾರ್ ಮಾಡಿದ ತವರದ ತಗಡಿನ ಡಬ್ಬಿಗಳಲ್ಲಿ ಅಥವಾ ಕಡುಗಂದು ಬಣ್ಣದ ಸೀಸೆಗಳಲ್ಲಿ ತುಂಬಬೇಕು. ೧೦ ರ ಡಬ್ಬಿಗಳಲ್ಲಿ ಪೆಕ್ಟಿನ್ ತುಂಬಿ ೩೦ ನಿಮಿಷ ೧೭೦ ಫ್ಯಾ. ಉಷ್ಣತೆಯಲ್ಲಿ ಸಂಸ್ಕರಿಸಬೇಕು. ೫ ಗ್ಯಾಲನ್ನಿನ ಡಬ್ಬಿಗಳಾದರೆ ಪೆಕ್ಟಿನ್ನನ್ನು ೧೬೦ – ೧೭೦ ಫ್ಯಾ. ಉಷ್ಣತೆಯಲ್ಲಿ ತುಂಬ ಬೇಕು ಮತ್ತು ತಲೆಕೆಳಗಾಗಿಟ್ಟು ೩೫ ನಿಮಿಷ ತಣ್ಣಗೆ ಆರಿಸಬೇಕು. ಅನಂತರ ಕೂಡಲೇ ಇವುಗಳನ್ನು ೧೨೦ – ೧೩೦ ಫ್ಯಾ. ಉಷ್ಣತೆಗೆ ನೀರಿನಲ್ಲಿಟ್ಟು ಆರಿಸಬೇಕು. ೮ ಔನ್ಸು ಗಾತ್ರದ ಸೀಸೆಗಳಾದರೆ ೧೧೫ – ೧೨೦ ಫ್ಯಾ. ಉಷ್ಣತೆಯಲ್ಲಿ ತುಂಬಬೇಕು; ೧೭೦ ಫ್ಯಾ. ಉಷ್ಣತೆಯಲ್ಲಿ ೩೦ ನಿಮಿಷ ಪಾಶ್ಚೀಕರಿಸಿ ತಂಪಾಗುವಂತೆ ಆರಿಸಬೇಕು.

ಪೆಕ್ಟಿನ್ ಪುಡಿ

ಪೆಕ್ಟಿನ್ ಪುಡಿ ತಯಾರಿಸಲು ಎರಡು ವಿಧಾನಗಳಿವೆ : ಮೊದಲನೆಯದು ಪೆಕ್ಟಿನ್ ದ್ರವವನ್ನು ಸಿಂಪರಣೆಯಿಂದ ಒಣಗಿಸುವುದು. ಅಸಿಟೋನ್ ಅಥವಾ ಮಧ್ಯ ಸಾರದಿಂದ ಪ್ರಕ್ಷೇಪಿಸಿ ಪುಡಿ ತಯಾರಿಸುವುದು ಎರಡನೆಯದು. ಪೆಕ್ಟಿನ್ ದ್ರಾವಣವನ್ನು ಶೇಕಡಾ ೨೫ ರಿಂದ ೩೦ ಘನ ವಸ್ತುಗಳಿರುವ ಮಂದವಾದ ಗಂಜಿಯಾಗುವತನಕ ಸಾಂದ್ರೀಕರಿಸಬೇಕು. ಅನಂತರ ಇದರ ೩ ಪಾಲು ಶೇಕಡಾ ೯೫ರ ಮದ್ಯಸಾರವನ್ನು ಸೇರಿಸಿದಾಗ ಪೆಕ್ಟಿನ್ ಪ್ರಕ್ಷೇಪಗೊಳ್ಳುತ್ತದೆ; ಇದನ್ನು ಮದ್ಯಸಾರದಿಂದ ತೊಳೆದು, ಒಣಗಿಸಿ, ಪುಡಿಮಾಡಬೇಕು. ಅಲ್ಯೂಮಿನಿಯಂ ಸಲ್ಫೇಟ್ ಮತ್ತು ಅಮೋನಿಯಾದಿಂದಲೂ ಪೆಕ್ಟಿನ್ನನ್ನು ಪ್ರಕ್ಷೇಪಿಸಬಹುದು. ಇವು ಎಲ್ಲ ಪೇಟೆಂಟ್ ಮಾಡಿದ ವಿಧಾನಗಳು. ಇವುಗಳಲ್ಲಿ ಅಡಕವಾಗಿರುವ ಮೂಲತತ್ವಗಳೆಂದರೆ ಇಲ್ಲಿ ಪೆಕ್ಟಿನ್‌ನ ಕಣಗಳು ಋಣವಿದ್ಯುತ್ ಪೂರಿತವಾಗಿರುತ್ತವೆ. ಇದಕ್ಕೆ ಧನ ವಿದ್ಯುತ್ ಪೂರಿತವಾದ ಕಲಿಲ ಕಣಗಳನ್ನು ಸೇರಿಸಿದಾಗ ಪೆಕ್ಟಿನ್ ಪ್ರಕ್ಷೇಪಗೊಳ್ಳುತ್ತದೆ. ಪ್ರಕ್ಷೇಪಗೊಂಡ ಪೆಕ್ಟಿನ್‌ಗೆ ಮದ್ಯಸಾರಯುಕ್ತ ಹೈಡ್ರೋಕ್ಲೋರಿಕ್ ಆಮ್ಲ ಸೇರಿಸಿದಾಗ ಅಲ್ಯೂಮಿನಿಯಂ ಬೇರೆಯಾಗುತ್ತದೆ.

ನಿಂಬೆ ಜಾತಿ ಹಣ್ಣುಗಳಿಂದ ಪೆಕ್ಟಿನ್

ನಿಂಬೆಜಾತಿಯ ಹಣ್ಣುಗಳ ಸಿಪ್ಪೆ ಮತ್ತು ಅವಶೇಷಗಳಲ್ಲಿ ಶೇಕಡಾ ೨.೫ – ೫.೫ ರಷ್ಟು ಪೆಕ್ಟಿನ್ ಇರುತ್ತದೆ. ಈ ಹಣ್ಣುಗಳಿಂದ ಮೊದಲು ಸುಗಂಧ ತೈಲ ಮತ್ತು ರಸ ತೆಗೆದು ಉಳಿದ ಅವಶೇಷವನ್ನು ಒಣಗಿಸಬೇಕು. ಚೂರು ಮಾಡಿದ ಸಿಪ್ಪೆಯನ್ನು ಪುಡಿ ಮಾಡಿ ಜಾಲರಿಯಲ್ಲಿಟ್ಟು ತಣ್ಣೀರಿನಿಂದ ತೊಳೆಯಬೇಕು. ಅನಂತರ ೪೦ – ೪೫ ನಿಮಿಷ ೦.೦೧೫ ನಿಂದ ೦.೦೨ ಸಾಮಾನ್ಯ ಹೈಡ್ರೋಕ್ಲೋರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲ ಇಲ್ಲವೇ ೦.೦೨೫ ಮೋಲಾರ್ ನಿಂಬೆ ಆಮ್ಲದೊಡನೆ ಕುದಿಸಬೇಕು. ಬಳಿಕ ಇದನ್ನು ಹಿಂಡಿ ಶೋಧಿಸಬೇಕು. ಇಲ್ಲಿಯೂ ಸೇಬಿನಿಂದ ಪೆಕ್ಟಿನ್ ಬೇರ್ಪಡಿಸುವ ವಿಧಾನವನ್ನು ಬಳಸಿ ಪೆಕ್ಟಿನ್ನನ್ನು ಬೇರ್ಪಡಿಸಬಹುದು.

ಇತರ ಪದಾರ್ಥಗಳಿಂದ ಪೆಕ್ಟಿನ್

ಉತ್ತಮ ಮಟ್ಟದ ಪೆಕ್ಟಿನ್ನನ್ನು ಹಸುರು ಪರಂಗಿಕಾಯಿ, ಹಲಸಿನ ಹಣ್ಣಿನ ದಪ್ಪ ಸಿಪ್ಪೆ, ಬೇಲದ ಹಣ್ಣು, ಸೀಬೆಹಣ್ಣು ಇವೇ ಮೊದಲಾದುವುಗಳಿಂದ ತಯಾರಿಸಬಹುದು. ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಈ ವಿಷಯದ ಬಗ್ಗೆ ಉಪಯುಕ್ತ ಸಂಶೋಧನೆಗಳು ನಡೆದಿವೆ. ಜೈನ್ ಮತ್ತು ಗಿರಿಧಾರಿಲಾಲ್‌ರವರು ಹಸುರಾದ ಮತ್ತು ಮೆತ್ತಗಿನ ಹಲಸಿನ ಹಣ್ಣಿನ ಸಿಪ್ಪೆಯ ಪದರದಿಂದ ಮತ್ತು ಬೇಲದ ಹಣ್ಣಿನಿಂದ ಪೆಕ್ಟಿನ್ ತಯಾರಿಸುವ ವಿಧಾನದ ಕ್ರಮವನ್ನು ನಿರ್ಧರಿಸಿದ್ದಾರೆ. ಲೂಯಿಸ್, ದ್ವಾರಕನಾಥ್ ಮತ್ತು ಜೋಹರ್‌ರವರು ಹುಣಿಸೆ ಹಣ್ಣಿನ ತಿರುಳಿನಿಂದ ಉತ್ತಮ ದರ್ಜೆಯ ಪೆಕ್ಟಿನ್ ತಯಾರಿಸಬಹುದೆಂದು ತಿಳಿಸಿದ್ದಾರೆ. ಜಲರಹಿತ ಆಧಾರದ ಪ್ರಕಾರ ಇದರ ಉತ್ಪನ್ನ ಶೇಕಡಾ ೨.೩೧ – ೩.೭೦ ಆಗುವುದು.

ಜೆಲ್ಲಿ ದರ್ಜೆಯನ್ನು ನಿರ್ಧರಿಸುವುದು

ರಾಸಾಯನಿಕ ವಿಧಾನಗಳಿಂದ ಅಥವಾ ನೈಜವಾಗಿ ಜೆಲ್ಲಿ ಕುದಿಸುವ ಪ್ರಯೋಗಗಳಿಂದ ಪೆಕ್ಟಿನ್ನಿನ ಜೆಲ್ಲಿ ದರ್ಜೆಯನ್ನು ಗೊತ್ತುಮಾಡಬೇಕು. ಪೆಕ್ಟಿನ್ನನ್ನು ಕ್ಯಾಲ್ಸಿಯಂ ಪೆಕ್ಟೇಟಾಗಿ ಸೂಚಿಸಲಾಗುತ್ತದೆ. ಇದಕ್ಕೆ ಕಾರೆ ಮತ್ತು ಹೈನ್ಸ್ ವಿಧಾನವನ್ನು ಅನುಸರಿಸಲಾಗುತ್ತದೆ. ಶುದ್ಧಗೊಳಿಸಿದ ಪೆಕ್ಟಿನ್‌ಗಳ ರಾಸಾಯನಿಕ ಸಂಯೋಗದಲ್ಲಿ ಅನೇಕ ವೈವಿಧ್ಯತೆ ಕಂಡುಬರುತ್ತದೆ. ಆದುದರಿಂದ ಈ ವಿಧಾನವನ್ನನುಸರಿಸಿ ಪೆಕ್ಟಿನ್ನಿನ ಜೆಲ್ಲಿ ಸಾಮರ್ಥ್ಯವನ್ನು ಖಚಿತವಾಗಿ ನಿರ್ಣಯಿಸಲಾಗುವುದಿಲ್ಲ. ಜೆಲ್ಲಿ ಮಾಡುವ ಪರೀಕ್ಷೆಯಿಂದಾದರೆ ಬಹಳ ಮಟ್ಟಿಗೆ ಖಚಿತವಾಗಿಯೇ ನಿರ್ಧರಿಸಬಹುದು.

ಅಧಿಕ ಎಸ್ಟರ್ ಇರುವ ಪೆಕ್ಟಿನ್ನನ್ನು ಶೇಕಡಾ ೬೫ರಷ್ಟು ಕರಗುವ ಘನಪದಾರ್ಥಗಳಿರುವ ಜೆಲ್ಲಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಈ ಪೆಕ್ಟಿನ್ನಿನ ದರ್ಜೆ ಗೊತ್ತು ಮಾಡಲು ಒಂದು ವಿಧಾನವಿದೆ. ಈ ಪೆಕ್ಟಿನ್‌ಗಳಲ್ಲದೆ ಇತ್ತೀಚೆಗೆ ಕಡಮೆ ಎಸ್ಟರ್ (ಕಡಮೆ ಮಿಥಾಕ್ಸಿಲ್)ದ ಪೆಕ್ಟಿನ್‌ಗಳು ಬಳಕೆಯಲ್ಲಿವೆ. ಇವುಗಳಲ್ಲಿ ಅತ್ಯಂತ ಕಡಮೆ ಕರಗುವ ಘನ ವಸ್ತುಗಳಿರುವುದರಿಂದ ಉತ್ತಮ ಮಟ್ಟದ ಪೆಕ್ಟಿನ್ ಪಡೆಯಬಹುದು.

ವಿವಿಧ ದರ್ಜೆಗಳಾಗಿ ವಿಂಗಡಿಸುವ ವಿಧಾನ : ಪೆಕ್ಟಿನ್ನನ್ನು ವಿವಿಧ ದರ್ಜೆಗಳಾಗಿ ವಿಂಗಡಿಸುವಾಗ ದ್ರಾವಣದ ಸ್ನಿಗ್ಧತೆಗೂ ಮತ್ತು ಜೆಲ್ಲಿಯ ಸಾಮರ್ಥ್ಯಕ್ಕೂ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸಲಾಗಿದೆ. ಒಂದೇ ಚರಿತ್ರೆಯುಳ್ಳ ಅನೇಕ ಪೆಕ್ಟಿನ್ ದ್ರಾವಣಗಳಿರುವಾಗ ಈ ಪರೀಕ್ಷೆ ಉಪಯುಕ್ತವಾಗಿದೆ. ಕ್ರಮ ನಿರ್ಧರಿಸಿ ಎಳೆದ ವಕ್ರರೇಖೆಗಳ ಸಹಾಯದಿಂದ ಪೆಕ್ಟಿನ್‌ನ ಜೆಲ್ಲಿ ದರ್ಜೆಯನ್ನು ಸಾಕಷ್ಟು ಸರಿಯಾಗಿಯೇ ನಿರ್ಧರಿಸಬಹುದು. ಸ್ನಿಗ್ಧತೆಯನ್ನು ಅನೇಕ ವಿಧಾನಗಳಿಂದ ಅಳೆಯಬಹುದು. ಇದರಲ್ಲಿ ಓಗ್‌ನ ಫಾಲಿಂಗ್‌ಬಾಲ್ ವಿಸ್ಕೊಮಾಪಕ ಒಂದು ವಿಧಾನವಾದರೆ ಸಾಮಾನ್ಯವಾಗಿ ಜೆಲ್ ಮಾಪಕವೆಂದು ಹೇಳಿಸಿಕೊಳ್ಳುವ ಬೇಕರನ ಸರಳ ರೀತಿಯ ಲೋಮನಾಳವುಳ್ಳ ನಳಿಕೆ ಇನ್ನೊಂದು ಮಾದರಿಯದಾಗಿದೆ. ಈ ಎರಡನೇ ವಿಧಾನವನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ವಿಧಾನದಿಂದ ಶೇಕಡಾ ೦.೫ – ೧.೦ ರ ಸ್ನಿಗ್ಧತೆಯಿರುವ ಪೆಕ್ಟಿನ್ ದ್ರಾವಣವನ್ನು ಅಳೆಯಬಹುದು. ಅನಂತರ ಪೆಕ್ಟಿನ್‌ದ ದರ್ಜೆ ಮತ್ತು ಸಾಪೇಕ್ಷ ಸ್ನಿಗ್ಧತೆಗೆ ಸಂಬಂಧ ಸೂಚಿಸುವ ಒಂದು ವಕ್ರರೇಖೆಯನ್ನು ಎಳೆಯಬೇಕು. ಈ ವಕ್ರರೇಖೆಯಿಂದ ಯಾವುದೇ ಪೆಕ್ಟಿನ್ನಿನ ದರ್ಜೆಯನ್ನು ಸುಮಾರಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ವಾಸ್ತವ (ನೈಜ) ಪರೀಕ್ಷೆ : ನೈಜವಾದ ಪರೀಕ್ಷೆಯಲ್ಲಿ ಕೆಳಗೆ ಕಾಣಿಸಿದ ಸಮಸ್ಯೆಗಳು ತಲೆದೋರುತ್ತವೆ :

೧. ಜೆಲ್ಲಿ ತಯಾರಿಸುವ ವಿಧಾನದಲ್ಲಿ ವೈವಿಧ್ಯತೆ.

೨. ಅಳೆಯುವ ಗುಣಲಕ್ಷಣ ಮತ್ತು ಅಳೆಯುವ ವಿಧಾನಗಳಲ್ಲಿ ವೈವಿಧ್ಯತೆ.

೩. ಜೆಲ್ಲಿಯ ಅಪೇಕ್ಷಣೀಯ ಗುಣಲಕ್ಷಣಗಳು.

ಜೆಲ್ಲಿ ತಯಾರಿಸುವ ವಿಧಾನವು ಅದರ ಗುಣಲಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕೆ ಅಮೆರಿಕದ ಸಂಯುಕ್ತ ಸಂಸ್ಥಾನದ ವ್ಯವಸಾಯ ವಿಭಾಗ ಒಂದು ವಿಧಾನವನ್ನು ಗೊತ್ತುಮಾಡಿದೆ. ಇದರ ಪ್ರಕಾರ ಆದರ್ಶಮಾನಗೊಳಿಸಿದ ೧೦೦ ನೇ ದರ್ಜೆಯ ಪೆಕ್ಟಿನ್‌ನಿಂದ ನಿಶ್ಚಿತ ಆದರೂ ಆದರ್ಶಮಾನ ದರ್ಜೆಯ ಜೆಲ್ಲಿ ತಯಾರಿಸಬೇಕು. ಅನಂತರ ಇದನ್ನು ಆದರ್ಶಮಾನ ದರ್ಜೆಯ ಜೆಲ್ಲಿಯೊಡನೆ ಹೋಲಿಸಬೇಕು. ಇವೆರಡೂ ಜೆಲ್ಲಿಗಳನ್ನೂ ಒಂದೇ ಪರಿಸ್ಥಿತಿಯಲ್ಲಿ ತಯಾರಿಸಿರಬೇಕು.

ಜೆಲ್ಲಿ ದರ್ಜೆಯನ್ನು ಪರೀಕ್ಷಿಸಲು ಕರ್ಟಿಸ್ ಈ ಮುಂದೆ ಕಾಣಿಸಿದ ವಿಧಾನವನ್ನು ಸೂಚಿಸಿದ್ದಾರೆ.

ಪೆಕ್ಟಿನ್ ಸಂಯೋಗವನ್ನು ತಯಾರಿಸಬೇಕಾದ ಸಾಮಾನ್ಯ ಪರಿಸ್ಥಿತಿಗಳೆಂದರೆ : (i) ಜೆಲ್ಲಿಯಲ್ಲಿ ಶೇಕಡಾ ೬೫ ಸಕ್ಕರೆ ; (ii) ಜೆಲ್ಲಿಯ ಪಿಎಚ್ ೩.೦  ೦.೦೫ ; ಮತ್ತು (iii) ತಯಾರಿಸಿದ ೧೮ ಗಂಟೆಗಳ ನಂತರ ಜೆಲ್ಲಿ ಸಾಮರ್ಥ್ಯವನ್ನು ನಿರ್ಧರಿಸಬೇಕು.

ಗಾಜಿನ ಒಂದು ಪಾತ್ರೆ ಮತ್ತು ಗಾಜಿನ ಕಡ್ಡಿಯನ್ನು ತೂಕ ಮಾಡಬೇಕು; ೩೨೦ ಮಿ.ಲೀ. ಬಟ್ಟಿಯಿಳಿಸಿದ ತಣ್ಣೀರು, ೫೦೦ ಗ್ರಾಂ ಸಕ್ಕರೆ ಮತ್ತು ಮೇಲಿನ ಪಟ್ಟಿಯಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ವಾಣಿಜ್ಯ ಪೆಕ್ಟಿನ್ ತಯಾರಿಕೆಯ ಆಹಾರ (ವಾ.ಪೆ.ತ.ಆ.) ತೆಗೆದುಕೊಳ್ಳಬೇಕು. ಸಕ್ಕರೆಯ ಒಂದು ಭಾಗದೊಡನೆ ಪೆಕ್ಟಿನ್ನನ್ನು ಬೆರೆಸಬೇಕು. (ಸಾಧಾರಣ ಅದರ ತೂಕ ೫ ಪಾಲು). ಸಾಧಾರಣ ೦.೫ ಮಿ.ಲೀ. ಸಿಟ್ರಿಕ್ ಆಮ್ಲ ದ್ರಾವಣ (೫೦ ಗ್ರಾಂ ಸಿಟ್ರಿಕ್ ಆಮ್ಲ ೧೦೦ ಮಿ.ಲೀ. ದ್ರಾವಣದಲ್ಲಿ) ಮತ್ತು ಒಂದು ಮಿ.ಲೀ. ಸೋಡಿಯಂ ಸಿಟ್ರೇಟನ್ನು (೨೫ ಗ್ರಾಂ ಸೋಡಿಯಂ ಸಿಟ್ರೇಟ್ ೧೦೦ ಮಿ.ಲೀ. ದ್ರಾವಣದಲ್ಲಿ) ನೀರಿನೊಡನೆ ಬೆರೆಸಬೇಕು. ಎಂಟು ಔನ್ಸ್ ಗಾತ್ರದ ಮೂರು ಜೆಲ್ಲಿ ಸೀಸೆಗಳನ್ನು ಆರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ೨ ಮಿ.ಲೀ. ಸಿಟ್ರಿಕ್ ಆಮ್ಲ ದ್ರಾವಣ ಮತ್ತು ೦.೫ ಮಿ.ಲೀ. ಸೋಡಿಯಂ ಸಿಟ್ರೇಟ್ ದ್ರಾವಣವನ್ನು ತುಂಬಬೇಕು.

ಕೋಷ್ಟಕ ೧೩. ವಾ.ಪೆ... ಪ್ರಕಾರ ಪೆಕ್ಟಿನ್ ದರ್ಜೆ ನಿರ್ಧರಿಸಲು ಜೆಲ್ಲಿ ಪರೀಕ್ಷೆಯಲ್ಲಿ ಉಪಯೋಗಿಸುವ ಪೆಕ್ಟಿನ್ ಪರಿಮಾಣ

ದರ್ಜೆ ತೂಕ (ಗ್ರಾಂ) ದರ್ಜೆ ತೂಕ (ಗ್ರಾಂ)
೧೦ ೫೦.೦೦ ೧೨೦ ೪.೧೭
೨೦ ೨೫.೦೦ ೧೩೦ ೩.೮೫
೩೦ ೧೬.೬೬ ೧೪೦ ೩.೫೭
೪೦ ೧೫.೫೦ ೧೫೦ ೩.೩೩
೫೦ ೧೦.೦೦ ೧೬೦ ೩.೧೨
೬೦ ೮.೩೩ ೧೭೦ ೨.೯೪
೭೦ ೭.೧೪ ೧೮೦ ೨.೭೮
೮೦ ೫.೨೫ ೧೯೦ ೨.೬೩
೯೦ ೫.೫೫ ೨೦೦ ೨.೫೦
೧೦೦ ೫.೦೦ ೨೧೦ ೨.೩೮
೧೧೦ ೪.೫೫ ೨೨೦ ೨.೨೫

ಪೆಕ್ಟಿನ್ ಸಕ್ಕರೆ ಮಿಶ್ರಣವನ್ನು ನೀರಿನಲ್ಲಿ ಕದಡಬೇಕು. ಇದನ್ನು ಕಾಯಿಸಿ, ಕದಡುತ್ತ ಬೇಗನೆ ಕುದಿಯುವ ಮಟ್ಟಕ್ಕೆ ತರಬೇಕು. ೩೦ ಸೆಕೆಂಡು ತಂಪು ಮಾಡಿ ಉಳಿದ ಸಕ್ಕರೆಯನ್ನು ಸೇರಿಸಬೇಕು ಮತ್ತೆ ಪುನಃ ಕದಡುತ್ತ ಅದರ ನಿವ್ವಳ ತೂಕ ೭೭೦ ಗ್ರಾಂ ಆಗುವಂತೆ ಮಾಡಬೇಕು. ಪಾತ್ರೆಯನ್ನು ಆಗಾಗ್ಗೆ ಒಲೆಯಿಂದ ತೆಗೆದು ಅದರ ತೂಕದ ಲೆಖ್ಖ ತಾಳೆ ನೋಡುತ್ತಿರಬೇಕು. ಸರಿಯಾದ ಅಳತೆಗೆ ತಲುಪಿದಾಗ ಕುದಿಸುವುದನ್ನು ನಿಲ್ಲಿಸಬೇಕು ಮತ್ತು ೩೦ ಸೆಕೆಂಡು ಕಾಲ ತಂಪಾಗಲು ಬಿಡಬೇಕು. ಕಲ್ಮಶದಿಂದ ಕೂಡಿದ ನೊರೆಯಿದ್ದರೆ ತೆಗೆಯಬೇಕು. ಅನಂತರ ಜೆಲ್ಲಿಯನ್ನು ಸೀಸೆಗಳಿಗೆ ತುಂಬಿ ಗಾಜಿನ ಕಡ್ಡಿಯಿಂದ ಕದಡುತ್ತಿರಬೇಕು. ಈ ಜೆಲ್ಲಿಯನ್ನು ೨೬ ಸೆ. ನಲ್ಲಿ ೧೮ ಗಂಟೆಗಳ ತನಕ ಹದಬರಲು ಬಿಟ್ಟು ಸೀಸೆಗಳಿಂದ ಹೊರತೆಗೆಯಬೇಕು ಮತ್ತು ಚಪ್ಪಟೆ ತಳದ ಧಾರಕದಲ್ಲಿ ಹಾಕಬೇಕು. ಇದರ ದೃಢತೆಯನ್ನು ಅದೇ ಸಮಯದಲ್ಲಿ, ಅದೇ ಪರಿಸ್ಥಿತಿಯಲ್ಲಿ ಮತ್ತು ನಿಧಾನವನ್ನನುಸರಿಸಿ ತಯಾರಿಸಿದ ಆದರ್ಶಮಾನ ದರ್ಜೆಯ ಜೆಲ್ಲಿಯೊಡನೆ ಹೋಲಿಸಬೇಕು. ಸಾಮಾನ್ಯವಾಗಿ ಜೆಲ್ಲಿಯ ಒಂದು ತುಂಡನ್ನು ಹೆಬ್ಬೆರಳು ಮತ್ತು ತೋರುಬೆರೆಳುಗಳ ಮಧ್ಯೆ ಇಟ್ಟು ಬಿರಿಯುವವರೆಗೆ ಹಿಚುಕಬೇಕು. ಇದರಲ್ಲಿ ಸಾಕಷ್ಟು ಅನುಭವವಿದ್ದರೆ ಶೇಕಡಾ ೫ ರಷ್ಟು ವ್ಯತ್ಯಾಸವಿರುವ ಜೆಲ್ಲಿಯನ್ನು ಕಂಡುಹಿಡಿಯಬಹುದು.

ಜೈನ್ ಮತ್ತು ಗಿರಿಧಾರಿಲಾಲ್‌ರವರು ಹಸುರು ಪರಂಗಿಕಾಯಿ, ಬೇಲದಹಣ್ಣು ಮತ್ತು ಹಲಸಿನ ಹಣ್ಣಿನಿಂದ ಪೆಕ್ಟಿನ್ ತಯಾರಿಸುವ ವಿಧಾನವನ್ನು ಕ್ರಮಪಡಿಸಿದ್ದಾರೆ. ಸಿದ್ಧಪ್ಪ ಮತ್ತು ಭಾಟಿಯಾರವರ ಹೇಳಿಕೆ ಪ್ರಕಾರ ಹಲಸಿನ ಹಣ್ಣಿನ ವ್ಯರ್ಥಭಾಗದಲ್ಲಿ ಶೇಕಡಾ ೨ ರಷ್ಟು ಪೆಕ್ಟಿನ್ ಇರುತ್ತದೆ. ಇದು ಉತ್ತಮ ಮಟ್ಟದ ಜೆಲ್ಲಿ ಕೊಡುವುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ದಾಸ್-ಸಿದ್ದಪ್ಪ ಮತ್ತು ಗಿರಿಧಾರಿಲಾಲ್‌ರವರು ಪೆಪೇನ್ ಕಿಣ್ವವನ್ನು ತೆಗೆದು ಪರಂಗಿಕಾಯಿಯಿಂದ ಯಾವುದೇ ನಷ್ಟವಿಲ್ಲದೆ ಪೆಕ್ಟಿನ್ ತಯಾರಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಲ್ಲದೆ ಪೆಪೇನ್ ಕಿಣ್ವವನ್ನು ತೆಗೆದನಂತರ ಪರಂಗಿಕಾಯಿಯನ್ನು ನಿರ್ಜಲಗೊಳಿಸಿ ಒಣಪ್ರದೇಶದಲ್ಲಿ ದಾಸ್ತಾನು ಮಾಡಿದರೆ ಮುಂದೆ ಪೆಕ್ಟಿನ್ ತಯಾರಿಸಲು ಉಪಯೋಗಿಸಬಹುದು.

ನಮ್ಮ ದೇಶೀಯ ವಸ್ತುಗಳಿಂದ ಪೆಕ್ಟಿನ್ ತಯಾರಿಸುವ ಬಗ್ಗೆ ಕ್ರಮ ನಿರ್ಧರಿಸಲಾಗಿದೆ. ಇದರ ವಿವರವನ್ನು ಸಂಕ್ಷಿಪ್ತವಾಗಿ ಈ ಮುಂದೆ ಕೊಟ್ಟಿದೆ :

ಪರಂಗಿ, ಬೇಲ ಮತ್ತು ಹಲಸುಗಳಿಂದ ಪೆಕ್ಟಿನ್ ಉತ್ಪಾದನೆ

ಕಚ್ಛಾವಸ್ತುಗಳನ್ನು ಸಂಸ್ಕರಿಸುವುದು : ಹಸುರಾದ ಪರಂಗಿಹಣ್ಣನ್ನು ತೊಳೆದು ಯಂತ್ರದಲ್ಲಿ ಚೂರು ಮಾಡಬೇಕು. ಇಲ್ಲವೇ ತುರಿಯಬೇಕು. ಬೇಲದ ಹಣ್ಣಿನ ತಿರುಳನ್ನು ಚಮಚೆ ಆಕಾರದ ಹರಿತವಾದ ಸ್ಟೇನ್‌ಲೆಸ್‌ಸ್ಟೀಲ್ ಚಾಕುವಿನಿಂದ ತೆಗೆದು, ಅನಂತರ ಸಣ್ಣ ಚೂರುಗಳಾಗಿ ಮಾಡಬೇಕು. ಹಲಸಿನ ಹಣ್ಣನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಸಿಗುವ ಅನುಪಯುಕ್ತ ಪದಾರ್ಥಗಳಾದ ದಿಂಡು, ದಪ್ಪಸಿಪ್ಪೆ ಮತ್ತು ಒಳಗಿನ ಇತರ ಭಾಗಗಳನ್ನು ಸಣ್ಣ ತುಂಡು ಅಥವಾ ತೆಳ್ಳಗೆ ಹೋಳು ಮಾಡಬೇಕು.

ತೊಳೆಯುವುದು ಮತ್ತು ಸ್ರವಿಸುವುದು : ಪರಂಗಿಕಾಯಿ ಮತ್ತು ಬೇಲದ ಹಣ್ಣುಗಳಲ್ಲಿರುವ ಸಕ್ಕರೆ ಮುಂತಾದವುಗಳನ್ನು ನೀರಿನಿಂದ ತೊಳೆಯಬೇಕು. ಹಲಸಿನಹಣ್ಣನ್ನು ತೊಳೆದು ಶೇಕಡಾ ೦.೧ ರ ಪೊಟ್ಯಾಸಿಯಂ ಮೆಟಾಬೈಸಲ್ಫೈಟ್ ಮತ್ತು ಶೇಕಡಾ ೦.೦೫ ರ ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ತೊಳೆದ ನೀರಿನ ಬ್ರಿಕ್ಸ್ ಸೊನ್ನೆಯಾಗುವವರೆಗೆ ತೊಳೆಯುವುದನ್ನು ಮುಂದುರವರಿಸಬೇಕು. ಬೇಲದ ಹಣ್ಣನ್ನು ಜಾಗರೂಕತೆಯಿಂದ ತೊಳೆದರೆ ಅದರಿಂದ ಬೇಲದ ಸಿರಪ್ ತಯಾರಿಸಲು ಯೋಗ್ಯವಾದ ಸಾರವನ್ನು ಪಡೆಯಬಹುದು. ಹಲಸಿನಹಣ್ಣಿನ ಮೇಲ್ಭಾಗದ ದಪ್ಪ ಸಿಪ್ಪೆಯನ್ನು ಸಹ ಜಾಗರೂಕತೆಯಿಂದ ತೊಳೆಯಬೇಕು. ಇದರಿಂದ ಅದರಲ್ಲಿರುವ ಶೇಕಡಾ ೫-೭ ರಲ್ಲಿ ಹೆಚ್ಚಿನ ಅಂಶ ಸಕ್ಕರೆಯನ್ನು ಪಡೆಯಬಹುದು.

ಸಾರ ತೆಗೆಯುವುದು : ಪರಂಗಿ ಮತ್ತು ಹಲಸಿನ ಹಣ್ಣುಗಳನ್ನು ತೊಳೆದು ಸ್ರವಿಸಿದ ಮೇಲೆ N/೬೦ – N/೫೦ ರ ಹೈಡ್ರೋಕ್ಲೋರಿಕ್ ಆಮ್ಲದಿಂದ ಸಾರ ತೆಗೆಯಬೇಕು. ಬೇಲದ ಹಣ್ಣಿನ ತಿರುಳಿಗೆ ಶೇಕಡಾ ೦.೫ ರ ಪೊಟ್ಯಾಸಿಯಂ ಮೆಟಾಬೈಸಲ್ಫೈಟನ್ನು ಉಪಯೋಗಿಸಬೇಕು. ಸಾರ ತೆಗೆಯುವುದನ್ನು ೯೭ – ೧೦೦ ಸೆ. ಉಷ್ಣತೆಯಲ್ಲಿ ಮೂರು ಸಲ ಪರಾಮರ್ಶಿಸಬೇಕು. ಪ್ರತಿಯೊಂದು ಬಾರಿಯೂ ಅರ್ಧ ಗಂಟೆ ಕಾಲ ಬಿಸಿ ಮಾಡಬೇಕು. ಅನಂತರ ಸೂಕ್ತ ರಂಧ್ರವುಳ್ಳ ಜಾಲರಿಯಲ್ಲಿ ಶೋಧಿಸಿ ಸಾರ ತೆಗೆದ ದ್ರವವನ್ನು ಬೇರ್ಪಡಿಸಬೇಕು. ಪೆಕ್ಟಿನ್ ಅಣುಗುಚ್ಛದಂತಾಗುವುದನ್ನು ಕಡಮೆ ಮಾಡಲು ಸಾರವನ್ನು ಕೂಡಲೇ ತಣಿಸಬೇಕು. ಮೊದಲನೆಯ ಬಾರಿ ಸಾರ ತೆಗೆಯಲು ಉಪಯೋಗಿಸುವ ನೀರಿನ ಪ್ರಮಾಣ ಪದಾರ್ಥದ ತೂಕದ ೧.೫ – ೨ ಪಾಲು ಇರಬೇಕು. ಎರಡನೆಯ ಮತ್ತು ಮೂರನೆಯ ಬಾರಿಯ ನೀರಿನ ಪ್ರಮಾಣ ೧ – ೧.೨೫ ಇದ್ದರೆ ಸಾಕು. ಪ್ರತಿ ಬಾರಿ ಸಾರ ತೆಗೆಯುವಾಗಲೂ ನೀರಿಗೆ ಆಮ್ಲ ಅಥವಾ ಪೊಟ್ಯಾಸಿಯಂ ಮೆಟಾಬೈಸಲ್ಫೈಟನ್ನು ಸೇರಿಸಬೇಕು ಮತ್ತು ಕುದಿಯುವ ನೀರಿಗೆ ಪದಾರ್ಥವನ್ನು ಸೇರಿಸಬೇಕು. ಸಾರ ದ್ರವದೊಡನೆ ಪದಾರ್ಥದ ಅವಶೇಷಗಳೂ ಸೇರಿರುತ್ತವೆ. ಇದನ್ನು ಬೇರ್ಪಡಿಸಲು ೮ – ೧೦ ರಂಧ್ರವಿರುವ ಜಾಲರಿಯನ್ನು ಶೋಧಿಸಬೇಕು. ಅನಂತರ ಈ ಅವಶೇಷಗಳನ್ನು ಬಾಸ್ಕೆಟ್ ಒತ್ತು ಯಂತ್ರದಲ್ಲಿ ಸೌಮ್ಯವಾಗಿ ಹಿಂಡಬೇಕಲ್ಲದೆ ಕೂಡಲೇ ಎರಡನೆಯ ಸಲ ಸಾರ ತೆಗೆಯಲು ಉಪಯೋಗಿಸಬೇಕು. ಕಡೆಗೆ ಈ ಸಾರವನ್ನು ೮೦ – ೯೦ ರಂಧ್ರವಿರುವ ಜಾಲರಿಯಲ್ಲಿ ಇಲ್ಲವೇ ಮಸ್ಲಿನ್ ಬಟ್ಟೆಯಲ್ಲಿ ಶೋಧಿಸಿ ಒರಟು ತಿರುಳನ್ನು ಬೇರ್ಪಡಿಸಬೇಕು.

ತಿಳಿಯಾಗಿಸುವುದು ಮತ್ತು ಬಣ್ಣ ತೆಗೆಯುವುದು : ಸಾರ ತೆಗೆದ ದ್ರವವನ್ನು ಶೋಧಿಸಿದ ನಂತರ ಶಾರ್ಪಲ್ಸ್‌ನ ಉಚ್ಛಮಟ್ಟದ ಕೇಂದ್ರಾಪಗಾಮಿ ಯಂತ್ರದ ಮೂಲಕ ಹಾಯಿಸಿ ಇನ್ನಷ್ಟು ತಿಳಿಯಾಗಿಸಬೇಕು. ತಿಳಿಯಾಗಿಸಲು ಯಾವುದೇ ಅನ್ಯ ಪದಾರ್ಥ ಬೇಕಾಗಿಲ್ಲ. ಮೇಲೆ ಹೇಳಿದ ಉಚ್ಛ ಮಟ್ಟದ ಕೇಂದ್ರಾಪಗಾಮಿ ಯಂತ್ರ ಸಿಗದಿದ್ದರೆ ಇನ್ನೊಂದು ವಿಧಾನವನ್ನನುಸರಿಸಬಹುದು. ಸಾರತೆಗೆದ ದ್ರವವನ್ನು ಸ್ವಲ್ಪ ಕಾಲ ಹಾಗೆಯೇ ಇಡಬೇಕು. ಆಗ ದಪ್ಪ ಗಾತ್ರದ ಕಣಗಳು ತಳದಲ್ಲಿ ತಂಗುತ್ತವೆ. ಅನಂತರ ಡ್ರಿಲ್ ಬಟ್ಟೆಯಿಂದ ಒತ್ತಡದಿಂದ ಶೋಧಿಸುವ ಯಂತ್ರವನ್ನು ಉಪಯೋಗಿಸಿ ಶೋಧಿಸಬಹುದು. ಹಲಸಿನ ಹಣ್ಣಿನ ಮತ್ತು ಬೇಲದ ಹಣ್ಣಿನ ಸಾರಕ್ಕೆ ತಳದಲ್ಲಿ ತಂಗಿಸುವ ಮತ್ತು ಶೋಧಿಸುವ ಕ್ರಿಯೆಗಳು ಮುಖ್ಯವಾಗಿ ಬೇಕಾಗಿರುತ್ತವೆ. ಹಲಸಿನ ಹಣ್ಣಿನ ಮತ್ತು ಪರಂಗಿ ಹಣ್ಣಿನ ಸಾರದಿಂದ ಬಣ್ಣ ತೆಗೆಯುವ ಅಗತ್ಯವಿಲ್ಲ. ಆದರೆ ಬೇಲದ ಹಣ್ಣಿನ ತಿರುಳಿನ ಸಾರದಿಂದ ಬಣ್ಣ ತೆಗೆಯಲೇಬೇಕು. ಇದಕ್ಕೆ ಶೇಕಡಾ ೧.೦ ರ ಕ್ರಿಯಾಶೀಲಗೊಳಿಸಿದ ಇಂಗಾಲವನ್ನು ಉಪಯೋಗಿಸಬಹುದು. ಆದರೆ ಈ ಸಾರವನ್ನು ಶೋಧಿಸಲು ಮುಂದೆ ಅಡಚಣೆಯುಂಟಾಗುತ್ತದೆ. ಶಾರ್ಪಲ್ಸ್‌ನ ಉಚ್ಛಮಟ್ಟದ ಕೇಂದ್ರಾಪಗಾಮಿ ಯಂತ್ರ ಬಹಳ ಪ್ರಯೋಜನಕಾರಿಯಾಗಿದೆ. ತಿಳಿಯಾಗಿಸುವ ಮತ್ತು ತೆಗಯುವ ಕ್ರಿಯೆಗಳೆರಡೂ ಒಟ್ಟಿಗೆ ನಡೆಯುವಂತೆ ಅಳವಡಿಸಬಹುದು.

ಸಾಂದ್ರೀಕರಣ ಮತ್ತು ಪ್ರಕ್ಷೇಪಣ : ತಿಳಿಯಾದ ಮತ್ತು ಬಣ್ಣ ತೆಗೆದ ಪೆಕ್ಟಿನ್ ಪಡೆಯುವ ವಿಧಾನವನ್ನು ಈ ಹಿಂದೆ ವಿವರಿಸಿಯಾಯಿತು. ಇದನ್ನು ೫೦ ಸೆ. ಉಷ್ಣತೆಯಲ್ಲಿ ೨೬ – ೨೮ ಅಂಗುಲ ನಿರ್ವಾತದಲ್ಲಿ ೩೦ – ೪೦ ಬ್ರಿಕ್ಸ್ ಬರುವತನಕ ಸಾಂದ್ರೀಕರಿಸಲ್ಪಟ್ಟ ಸಾರಕ್ಕೆ ಅದರ ಎರಡರಷ್ಟು ಪ್ರಮಾಣ ಶೇಕಡಾ ೯೫ರ ಮದ್ಯಸಾರವನನು ಸೇರಿಸಬೇಕು. ಆಗ ಪೆಕ್ಟಿನ್ ಪ್ರಕ್ಷೇಪಗೊಳ್ಳುತ್ತದೆ. ಈ ಮದ್ಯಸಾರಕ್ಕೆ ನಿಶ್ಚಿತ ಪ್ರಮಾಣದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಮೊದಲೇ ಸೇರಿಸಿರಬೇಕು. ಅಂತ್ಯ ದ್ರಾವಣದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸಾಂದ್ರತೆ ೦.೧ N ಇರಬೇಕು. ಸಾಂದ್ರೀಕರಿಸಿದ ಸಾರಕ್ಕೆ ಮದ್ಯಸಾರ ಸೇರಿಸುವ ಮೊದಲು ಶೇಕಡಾ ೦.೫ ರ ಪೊಟ್ಯಾಸಿಯಂ ಮೆಟಾ ಬೈ ಸಲ್ಫೈಟನ್ನು ಸೇರಿಸುವುದು ಒಳ್ಳೆಯದು. ಇದರಿಂದ ಪ್ರಕ್ಷೇಪಗೊಂಡ ಪೆಕ್ಟಿನ್ನಿನ ಬಣ್ಣವು ಸುಧಾರಿಸುತ್ತದೆ. ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಗಂಧಕದ ಡೈ ಆಕ್ಸೈಡಿನ ಸಂಪರ್ಕದೊಡನೆ ಪೆಕ್ಟಿನ್ನನ್ನು ಒಂದು ರಾತ್ರಿ ಇಡಬೇಕು. ಮಾರನೆಯ ದಿನ ಬೆಳಿಗ್ಗೆ ಕೇಂದ್ರಾಪಗಾಮಿ ಯಂತ್ರದಿಂದ ಅಥವಾ ದಪ್ಪ ಬಟ್ಟೆಯಿಂದ ಹಿಂಡಿ ಪೆಕ್ಟಿನ್ನನ್ನು ಬೇರ್ಪಡಿಸಬೇಕು. ಅನಂತರ ಇದನ್ನು ಶೇಕಡಾ ೮೦ ರ ಮದ್ಯಸಾರದಲ್ಲಿ ಎರಡು ಬಾರಿ ತೊಳೆಯಬೇಕು. ಮೂರನೆಯ ಬಾರಿ ಶೇಕಡಾ ೯೫ರ ಮದ್ಯಸಾರದಲ್ಲಿ ತೊಳೆಯಬೇಕು.

ಒಣಗಿಸುವುದು ಮತ್ತು ಪುಡಿ ಮಾಡುವುದು : ಪ್ರಕ್ಷೇಪಿತ ಪೆಕ್ಟಿನ್ನನ್ನು ಅನಂತರ ಒಣಗಿಸಬೇಕು. ಇದಕ್ಕೆ ೪೦ ಸೆ. ಉಷ್ಣತೆಯಲ್ಲಿ, ನಿರ್ವಾತದಲ್ಲಿ ಒಣಗಿಸುವ ಯಂತ್ರವನ್ನುಪಯೋಗಿಸಬೇಕು. ಇಲ್ಲದಿದ್ದರೆ, ಕೋಣೆಯ ಉಷ್ಣತೆಯಲ್ಲಿ ಅಥವಾ ಸೂರ್ಯನ ಶಾಖದಿಂದ ಇಲ್ಲವೇ ಸಾಧಾರಣ ಒಲೆಯಲ್ಲಿಯೂ ಒಣಗಿಸಬಹುದು. ಒಣಗಿದ ಪೆಕ್ಟಿನ್ನನ್ನು ಪುಡಿ ಮಾಡಿ ೧೦೦ – ೧೨೦ ರಂಧ್ರವಿರುವ ಜಾಲರಿಯಲ್ಲಿ ಹಾಯಿಸಿದರೆ ವಾಣಿಜ್ಯ ಮಟ್ಟದ ಪೆಕ್ಟಿನ್ ಪುಡಿ ಸಿಗುತ್ತದೆ.

ಆದರ್ಶಮಾನವನ್ನು ನಿರ್ಧರಿಸುವುದು : ಶೇಕಡಾ ೧.೦ ಪೆಕ್ಟಿನ್ ಇರುವಂಥ ೨೦.೦, ೨೨.೫, ೨೫.೦, ೨೭.೫ ಮತ್ತು ೩೦.೦ ಘ.ಸೆಂ. ಪ್ರಮಾಣದ ಜೆಲ್ಲಿಯನ್ನು ತಯಾರಿಸಬೇಕು. ಇದಕ್ಕೆ (೫೦ – x) ಗ್ರಾಂ ಸಕ್ಕರೆಯನ್ನು ಸೇರಿಸಬೇಕು. ಹಾಗೆಯೇ ಶೇಕಡಾ ೧೦ ರ ಸಿಟ್ರಿಕ್ ದ್ರಾವಣವನ್ನು ಸೇರಿಸಿ ಅಂತಿಮ ಪಿಎಚ್‌ನ್ನು ೨.೯ ರಿಂದ ೩.೧ ಕ್ಕೆ ತರಬೇಕು. ಮೇಲೆ ಸೂಚಿಸಿದ X ನ ಬೆಲೆಯು ಪೆಕ್ಟಿನ್ ಪ್ರಮಾಣ ಮತ್ತು ಸಿಟ್ರಿಕ್ ಆಮ್ಲದಲ್ಲಿರುವ ಘನವಸ್ತು ಇವುಗಳೆರಡರ ಮೊತ್ತಕ್ಕೆ ಸಮವಾಗಿರಬೇಕು ಮತ್ತು ಮೇಲಿನ ಪ್ರತಿಯೊಂದೂ ಅಳತೆಗೂ ಇದನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಿ ಸೇರಿಸಬೇಕು. ಈ ವಸ್ತುಗಳನ್ನು ಒಂದು ಚೊಕ್ಕವಾದ ಗಾಜಿನ ಕೊಕ್ಕು ಪಾತ್ರೆ (ಬೀಕರ್)ಗೆ ಹಾಕಬೇಕು. ಇದಕ್ಕೆ ಬಟ್ಟಿಯಿಳಿಸಿದ ನೀರನ್ನು ಸೇರಿಸಿ ಒಟ್ಟು ತೂಕ ೯೦೦ ಗ್ರಾಂಗೆ ಸರಿಯಾಗುವಂತೆ ಮಾಡಬೇಕು. ಈ ಮಿಶ್ರಣವನ್ನು ವಿದ್ಯುತ್ತಿನ ಬಿಸಿ ತಟ್ಟೆಯಲ್ಲಿಟ್ಟು ೭೭.೦ ಗ್ರಾಂಗೆ ಇಂಗಿಸಬೇಕು. ಅನಂತರ ಒಂದು ಚೊಕ್ಕದಾದ ಒಣಗಿದ ೪ ಔನ್ಸು ಜೆಲ್ಲಿ ಸೀಸೆಗೆ ಸುರಿಯಬೇಕು. ಶೇಕಡಾ ೬೫ರಷ್ಟು ಕರಗುವ ಘನವಸ್ತುಗಳಿರುವ ಜೆಲ್ಲಿಯ ಅಂತಿಮ ತೂಕ ೭೬.೯ ಗ್ರಾಂ ಇರುತ್ತದೆ. ಬೇಯಿಸುವುದನ್ನು ೭೭.೦ ಗ್ರಾಂಗೆ ನಿಲ್ಲಿಸಬೇಕು; ಏಕೆಂದರೆ, ಜೆಲ್ಲಿಯನ್ನು ಸೀಸೆಗೆ ಸುರಿದ ನಂತರವೂ ಸ್ವಲ್ಪ ಭಾಗ ಆವಿಯಾಗಿ ಅಂತಿಮ ತೂಕವು ಸರಿಯಾಗಿ ೭೬.೯ ಗ್ರಾಂ ಆಗುತ್ತದೆ. ವಿವಿಧ ಜೆಲ್ಲಿಗಳ ಸಾಮರ್ಥ್ಯವನ್ನು ೨೦ ಗಂಟೆ ನಂತರ ಇದೇ ರೀತಿ ತಯಾರಿಸಿದ ಪೆಕ್ಟಿನ್ ಜೊತೆ ಹೋಲಿಸಬೇಕು. ಈ ಆದರ್ಶಮಾನಗೊಳಿಸಿದ ಪೆಕ್ಟಿನ್ ತಯಾರಿಸಲು ಒಂದು ನಿಶ್ಚಿತ ಆದರ್ಶಮಾನದ ಜೆಲ್ಲಿಯನ್ನು ಉಪಯೋಗಿಸಬೇಕು. ಕೆಲಿಫೋರ್ನಿಯಾದ ನಿಂಬೆ ಬೆಳೆಗಾರರ ವಿನಿಮಯದ ೧೫೦ ನೆಯ ದರ್ಜೆಯ ನಿಂಬೆ ಜಾತಿಯಿಂದ ತಯಾರಿಸಿದ ಪೆಕ್ಟಿನ್ ಪುಡಿಯನ್ನು ಆದರ್ಶಮಾನ ಪೆಕ್ಟಿನ್ ಆಗಿ ತೆಗೆದುಕೊಳ್ಳಬಹುದು.

ಈ ಮೇಲಿನ ಪರೀಕ್ಷೆಗಳಲ್ಲಿ ಆದರ್ಶಮಾನಗೊಳಿಸಿದ ಜೆಲ್ಲಿಗಿಂತ ಸ್ವಲ್ಪ ದುರ್ಬಲ ಮತ್ತು ಸ್ವಲ್ಪ ಹೆಚ್ಚು ಸಾಮರ್ಥ್ಯದ ಜೆಲ್ಲಿಯನ್ನು ನಿರ್ಧರಿಸಬಹುದು. ಇದಕ್ಕೆ ಅನ್ವಯಿಸುವ ದ್ರಾವಣಗಳು ಎಷ್ಟು ಪ್ರಮಾಣದವುಗಳೆಂದು ನೋಡಿಕೊಳ್ಳಬೇಕು. ಅನಂತರ ಇನ್ನೊಂದು ಶ್ರೇಣಿಯ ಜೆಲ್ಲಿಯನ್ನು ತಯಾರಿಸಬೇಕು. ಇದಕ್ಕೆ ಮೇಲೆ ತಿಳಿಸಿದ ಎರಡು ಪ್ರಮಾಣಗಳ ಅಂತರದಲ್ಲಿರುವ ಪೆಕ್ಟಿನ್ ದ್ರಾವಣವನ್ನು ಆಯ್ದುಕೊಳ್ಳಬೇಕು. ಪ್ರತಿ ಹಂತದಲ್ಲಿ ೦.೫ ಘ.ಸೆಂ. ಹೆಚ್ಚಿರುವಂತೆ ವಿವಿಧ ಪ್ರಮಾಣದ ದ್ರಾವಣಗಳನ್ನು ತಯಾರಿಸಬೇಕು. ಆದರ್ಶಮಾನಕಗೊಳಿಸಿದ ಜೆಲ್ಲಿಯು ಯಾವ ಪ್ರಮಾಣದ ದ್ರಾವಣದಿಂದ ಸಿಗುತ್ತದೆಂದು ಗೊತ್ತುಮಾಡಿಕೊಳ್ಳಬೇಕು. ಇದಾದ ಮೇಲೆ ಇದಕ್ಕೆ ಬೇಕಾದ ಪೆಕ್ಟಿನ್ನಿನ ಮೊತ್ತವನ್ನು ಕಂಡುಕೊಳ್ಳಬಹುದು ಮತ್ತು ಪೆಕ್ಟಿನ್ ದರ್ಜೆಯ ಲೆಕ್ಕ ಹಾಕಬಹುದು.

ಮಾದರಿ ಪೆಕ್ಟಿನ್ನಿನ ದರ್ಜೆ ೨೫ಕ್ಕಿಂತ ಹೆಚ್ಚಿದ್ದರೆ ಶೇಕಡಾ ೧.೦ ಕ್ಕೆ ಬದಲಾಗಿ ಶೇಕಡಾ ೦.೫ ರ ದ್ರಾವಣವನ್ನು ಉಪಯೋಗಿಸುವುದು ಉತ್ತಮ. ಪೆಕ್ಟಿನ್ನಿನ ದರ್ಜೆಯು ೧೫೦ಕ್ಕಿಂತ ಕಡಮೆಯಿದ್ದರೆ ದುರ್ಬಲ ದ್ರಾವಣವನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದಕ್ಕಿಂತ ಶೇಕಡಾ ೨.೦ ದ್ರಾವಣವನ್ನು ಉಪಯೋಗಿಸಬಹುದು.

ಪೆಕ್ಟಿನ್ನಿನ ಉಪಯೋಗಗಳು

ಕೆಚಪ್, ಸಾಸ್, ಜಾಮ್ ಮುಂತಾದವುಗಳನ್ನು ಮಂದಗೊಳಿಸಲು ಪೆಕ್ಟಿನ್ ಬಳಸಬೇಕಾಗುತ್ತದೆ. ಕಾಡ್‌ಲಿವರ್‌ಎಣ್ಣೆ, ಐಸ್‌ಕ್ರೀಮ್, ಮೆಯೋನೈಸ್ ಮುಂತಾದ ಪದಾರ್ಥಗಳನ್ನು ತಯಾರಿಸುವಾಗ ಎಣ್ಣೆಯೊಡನೆ ನೀರಿನ ಕಣಗಳು ಬೆರಕೆಯಾಗುವಂತೆ ಮಾಡಲು ಪೆಕ್ಟಿನ್ ಉಪಯೋಗಿಸಲಾಗುತ್ತದೆ. ಅನಿಲವು ನೀರಿನಲ್ಲಿ ಹೆಚ್ಚು ಬುರುಗು ಬರುವಂತೆ ಮಾಡಲು ಮತ್ತು ಹಣ್ಣಿನ ಹಳಕು ತಯಾರಿಸುವಾಗ ನುಣುಪಾದ ಹೊಳಪು ಬರುವಂತೆ ಮಾಡಲು ಇದು ಉಪಯುಕ್ತವಾಗಿರುತ್ತದೆ. ಇದಲ್ಲದೆ ಪೆಕ್ಟಿನ್ನನ್ನು ಸ್ಫೋಟಕ ವಸ್ತು, ಅರಗು ಮತ್ತು ಲೋಶನ್ ತಯಾರಿಸುವಾಗ ಮತ್ತು ಬಟ್ಟೆಯನ್ನು ಹದ ಮಾಡುವಾಗ ಸಹ ಬಳಸಲಾಗುತ್ತದೆ. ರಕ್ತೋಪಚಾರದಲ್ಲಿ ಎಗ್ಲುಟಿನೆಂಟ್ ಆಗಿ ಇದು ಉಪಯೋಗದಲ್ಲಿದೆ.

ಪೆಕ್ಟಿನ್ನಿನ ಪುಡಿ ಸುಲಭವಾಗಿ ಕರಗುವುದಿಲ್ಲ. ಅದಕ್ಕೆ ಗಂಟಾಗುವ ಪ್ರವೃತ್ತಿ ಇರುತ್ತದೆ. ಈ ದೃಷ್ಟಿಯಿಂದ ಜಾಮ್ ಮಾಡುವಾಗ ಅದನ್ನು ಅದರ ತೂಕದ ೫ – ೬ ಪ್ರಮಾಣದಷ್ಟು ಸಕ್ಕರೆಯೊಡನೆ ಬೆರೆಸಬೇಕು. ಅನಂತರ ೬೦ – ೭೦ ಸೆ. ನೀರಿನಲ್ಲಿ ಸ್ವಲ್ಪ ಸಮಯ ಕದಡಬೇಕು. ಇದನ್ನು ಸಕ್ಕರೆ ಜೊತೆ ಬೆರೆಸಿ ಜಾಮ್‌ನ ಪಾಕ ಕುದಿಯುತ್ತಿರುವಾಗ ಅದರ ಮೇಲೆ ಉದುರಿಸಬಹುದು.

ಇಂಗ್ಲೆಂಡ್ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ದ್ರವರೂಪದ ಸೇಬಿನ ಪೆಕ್ಟಿನ್ ಮತ್ತು ನಿಂಬೆಜಾತಿಯ ಹಣ್ಣಿನಿಂದ ತಯಾರಿಸಿದ ಪೆಕ್ಟಿನ್ ಪುಡಿ ಬಹು ಮುಖ್ಯವಾದ ವಾಣಿಜ್ಯ ಪದಾರ್ಥಗಳಾಗಿವೆ. ನಮ್ಮಲ್ಲಿ ದೊರೆಯುವ ದೇಶೀಯ ವಸ್ತುಗಳಿಂದಲೂ ಇಂಥ ಪದಾರ್ಥಗಳನ್ನು ತಯಾರಿಸಲು ಹೆಚ್ಚು ಅವಕಾಶಗಳಿವೆ.