‘ರಾಷ್ಟ್ರ’ ಎಂಬ ಪದ ಅತ್ಯಂತ ಪ್ರಾಚೀನವಾದುದಾದರೂ, ‘ರಾಷ್ಟ್ರೀಯತೆ’ಯ ಕಲ್ಪನೆ ಮಾತ್ರ ಆಧುನಿಕವಾದುದು. ‘ರಾಷ್ಟ್ರೀಯತೆ’ ಎಂಬ ಪದಕ್ಕೆ ಈ ದಿನ ನಾವು ಯಾವ ಅರ್ಥವನ್ನು ಹಚ್ಚಿ ಮಾತನಾಡುತ್ತೇವೆಯೋ, ಆ ಅರ್ಥ ಆ ಪದಕ್ಕೆ ಬಹುಶಃ ಹಿಂದೆ ಇದ್ದಿರಲಿಲ್ಲವೆಂದೇ ತೋರುತ್ತದೆ. ಯಾಕೆಂದರೆ ‘ರಾಷ್ಟ್ರೀಯತೆ’ ಎಂಬ ಮಾತಿಗೆ ರಾಜಕೀಯವಾಗಿ ಇಂದು ಎಂದಿಲ್ಲದ ಮಹತ್ವ ಬಂದಿದೆ. ರಾಜಕೀಯವಾಗಿ ನೋಡುವುದಾದರೆ, ಸ್ವಾತಂತ್ರ್ಯಪೂರ್ವ ಭಾರತದ ಇತಿಹಾಸದಲ್ಲಿ ಈ ದೇಶದ ಜನಕ್ಕೆ ಪರಿಚಿತವಾದದ್ದು ‘ರಾಜಭಕ್ತಿ’ಯೇ ಹೊರತು ‘ರಾಷ್ಟ್ರೀಯತೆ’ ಅಲ್ಲ. ಅನೇಕ ರಾಜ-ಮಹಾರಾಜರುಗಳಿಂದ ಅಳಲ್ಪಡುತ್ತಿದ್ದ ಈ ದೇಶದ ಅನೇಕ ರಾಜ್ಯಗಳ ಜನ, ಅಲ್ಲಲ್ಲಿನ ಪ್ರಭುಗಳ ಬಗ್ಗೆ ಇಟ್ಟುಕೊಂಡಿದ್ದ ನಿಷ್ಠೆ, ತೋರುತ್ತಿದ್ದ ಗೌರವ ‘ರಾಜಭಕ್ತಿ’ ಎಂದು ಅನಿಸಿಕೊಂಡಿತ್ತೇ ಹೊರತು, ‘ರಾಷ್ಟ್ರೀಯತೆ’ ಎಂದು ಅನ್ನಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ರಾಜಭಕ್ತಿ ಆಯಾ ರಾಜ್ಯದ ಜನಮನವನ್ನು ನಿಯಂತ್ರಿಸುವ ಶಕ್ತಿಯಾಗಿತ್ತು. ಯಾವಾಗ  ಈ ರಾಜರುಗಳ ಮೂಲಕ ತಮ್ಮನ್ನಾಳುತ್ತಿದ್ದ ಪರಕೀಯ ಪ್ರಭುತ್ವವನ್ನು ಕಿತ್ತೊಗೆಯುವ, ಸಾತಂತ್ರ್ಯ ಸಂಪಾದನೆಯ ಹೋರಾಟ ಮೊದಲಾಯಿತೋ, ಅದು ರಾಷ್ಟ್ರೀಯ ಚಳುವಳಿ ಎಂದು ಕರೆಯಿಸಿಕೊಂಡಿತು. ಈ  ಚಳುವಳಿಯ ಪರಿಣಾಮವಾಗಿ  ಜನರಲ್ಲಿ ತಾವು ಒಂದು ಸಮಗ್ರ ರಾಷ್ಟ್ರದವರು, ಈ ರಾಷ್ಟ್ರಕ್ಕಾಗಿ ಹೋರಾಡುವುದು ತಮ್ಮ ಕರ್ತವ್ಯ, ಎಂಬ ಭಾವನೆಗಳು ಜಾಗೃತವಾಗಿ, ಸ್ವಾತಂತ್ರ್ಯ ಸಂಪಾದನೆಯೊಂದಿಗೆ, ಅದುವರೆಗೂ ಪರಿಚಿತವಾದ ‘ರಾಜಭಕ್ತಿ’, ‘ರಾಷ್ಟ್ರೀಯತೆ’ಯಾಗಿ ರೂಪಾಂತರ ಹೊಂದಿತು. ಇಷ್ಟರಮಟ್ಟಿಗೆ ರಾಜಕೀಯವಾಗಿ ಭಾರತವು ಹಿಂದೆಂದೂ ಏಕರಾಷ್ಟ್ರವಾಗಿರಲಿಲ್ಲವಾದ ಕಾರಣ, ಈ ದೇಶದ ಜನ, ತಾವು ಸಮಗ್ರ ಭಾರತದವರು ಎಂಬ ‘ರಾಷ್ಟ್ರೀಯತೆ’ಯ ಭಾವನೆಯನ್ನು, ರಾಜಕೀಯವಾಗಿ ಅನುಭವಿಸಿದ್ದು ಇವೇ ಮೊದಲು.

ಹೀಗೆಂದ ಮಾತ್ರಕ್ಕೆ ಈ ದೇಶದ ಜನ ತಾವು ಸಮಗ್ರ ಭರತಖಂಡದವರು ಎಂಬ ಭಾವನೆಯಲ್ಲಿ ಬದುಕಿದ್ದೇ ಇಲ್ಲವೆಂದು  ಅರ್ಥವಲ್ಲ. ಹಿಂದೆ ಈ ದೇಶದ ರಾಜಕೀಯ ಜೀವನ ‘ಛಪ್ಪನ್ನ’ ಮುಖವಾಗಿದ್ದರೂ, ಸಾಂಸ್ಕೃತಿಕವಾಗಿ ಈ ದೇಶ ಅಖಂಡವಾಗಿ ಇತ್ತು ಎಂಬುದನ್ನು ಮರೆಯುವಂತಿಲ್ಲ. ‘ಆಸೇತು ಹಿಮಾಚಲ’ ಎಂಬ ಮಾತು, “ಗಂಗೇಚ ಯಮುನೇಚ ಗೋದಾವರೀಚ” ಎಂಬ ಪಠನ, ತೀರ್ಥಯಾತ್ರೆಯ ಕಲ್ಪನೆ ಇತ್ಯಾದಿಗಳು, ಈ ದೇಶದ ಜನ ತಮ್ಮದೇ ಆದ ಪ್ರಾಂತೀಯ, ಮತೀಯ, ಮತ್ತು ವಿವಿಧ ಭಾಷೆಗಳಿಗೆ ಸಂಬಂಧಿಸಿದ ಪ್ರತ್ಯೇಕತೆಗಳನ್ನು ಹೊಂದಿದ್ದರೂ, ತಾವು ಮೂಲತಃ ಭಾರತೀಯರು ಎಂಬ ಭಾವನೆಯಲ್ಲಿ ಬದುಕುತ್ತಿದ್ದರೆಂಬುದಕ್ಕೆ ದಾಖಲೆಗಳಾಗಿವೆ. ಆದ್ದರಿಂದ ಈಗ ನಾವು ಯಾವುದನ್ನು ರಾಜಕೀಯವಾಗಿ “ರಾಷ್ಟ್ರೀಯತೆ” ಎಂದು ಕರೆಯುತ್ತಿದ್ದೇವೆಯೋ, ಅದು ಸಾಂಸ್ಕೃತಿಕವಾಗಿ “ಭಾರತೀಯತೆ”ಯೇ ಆಗಿತ್ತು ಎಂದು ಭಾವಿಸಬಹುದು. ಯಾಕೆಂದರೆ “ರಾಷ್ಟ್ರೀಯತೆ” ಎಂಬುದು “ರಾಷ್ಟ್ರಕ್ಕೆ ಸಂಬಂಧಿಸಿರುವಿಕೆ” ಎಂಬ ಅರ್ಥವನ್ನು ಕೊಡುವಂತೆ, “ಭಾರತೀಯತೆ” ಎಂಬುದು “ಭಾರತ ದೇಶಕ್ಕೆ ಸಂಬಂಧಿಸಿರುವಿಕೆ” ಎಂಬ ಅರ್ಥವನ್ನು ಕೊಡುತ್ತದೆ. ಅಲ್ಲದೆ ಸಾಂಸ್ಕೃತಿಕವಾಗಿ ಎಂದಿನಿಂದಲೊ ‘ಏಕ’ವಾಗಿದ್ದ ಭಾರತ ರಾಜಕೀಯವಾಗಿಯೂ ಇಂದು ‘ಏಕ’ವಾಗಿರುವ ಕಾರಣ “ಭಾರತೀಯತೆ” ಎಂಬ ಕಲ್ಪನೆ, ಸಹಜವಾಗಿಯೇ “ರಾಷ್ಟ್ರೀಯತೆ”ಯಲ್ಲಿ ಅಂತರ್ಗತವಾಗುತ್ತದೆ.

ಆದರೆ ಸಾಹಿತ್ಯಕ್ಕೆ ಸಂಬಂಧಪಟ್ಟ ನೆಲೆಯಲ್ಲಿ ಮಾತನಾಡುವಾಗ, “ರಾಷ್ಟ್ರೀಯತೆ” ಮತ್ತು “ಭಾರತೀಯತೆ” ಈ ಎರಡೂ ಸಮಾನಾರ್ಥಕಗಳಲ್ಲವೇನೋ ಎಂಬ ಸಂದೇಹ ಬರುವ ಸಂದರ್ಭಗಳು ಪ್ರಾಪ್ತವಾಗಿವೆ. ಯಾಕೆಂದರೆ “ಸಾಹಿತ್ಯದಲ್ಲಿ ರಾಷ್ಟ್ರೀಯತೆ” ಅಥವಾ “ರಾಷ್ಟ್ರೀಯ ಸಾಹಿತ್ಯ” ಎಂದ ಕೂಡಲೆ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ದೇಶಭಕ್ತಿಯಿಂದ ಸ್ಫೂರ್ತಿಗೊಂಡ ರಚನೆಗಳನ್ನು ಬೆರಳಿಟ್ಟು ತೋರುವುದು ಅಭ್ಯಾಸವಾಗಿಬಿಟ್ಟಿದೆ. ಹೋರಾಟಕ್ಕೆ ಕರೆ ನೀಡುವ, ದೇಶಕ್ಕಾಗಿ ಬಲಿದಾನ ಮಾಡುವ, ದೇಶದ ಪರಂಪರೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ ಉಜ್ವಲವಾಗಿ ಉಪನ್ಯಾಸಿಸುವ, ನಾಡುನುಡಿಗಳ ಪ್ರೇಮವನ್ನು ವೈಭವಿಸುವ, ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ವೀರರನ್ನು ಕೊಂಡಾಡುವ, ಭಾವೈಕ್ಯತೆಯನ್ನು ಘೋಷಿಸುವ, ಗಂಡಾಂತರ ಸಮಯಗಳಲ್ಲಿ ರಣೋತ್ಸಾಹಗಳನ್ನು ಪ್ರಚೋದಿಸುವ, ಬರವಣಿಗೆಗಳನ್ನು “ರಾಷ್ಟ್ರೀಯ ಸಾಹಿತ್ಯ”ವೆಂದು ಎಲ್ಲರೂ ಸಾಮಾನ್ಯವಾಗಿ ಗುರುತಿಸುತ್ತಾ ಬಂದಿದ್ದಾರೆ.[1] ಆದರೆ ಸಾಹಿತ್ಯದಲ್ಲಿ “ಭಾರತೀಯತೆ” ಎಂಬ ಮಾತಿನ ಅರ್ಥವೇ ಬೇರೆಯಾಗುವ ಕಾರಣ, ಸಾಹಿತ್ಯದಲ್ಲಿ “ರಾಷ್ಟ್ರೀಯತೆ” ಎಂಬ ಮಾತಿಗೆ ಬಂದಿರುವ ಅರ್ಥದೊಂದಿಗೆ ಹೊಂದಿಕೊಳ್ಳಲಾರದೆ ಅದು ಬೇರೆಯೇ ನಿಲ್ಲುವ ಸಂದರ್ಭ ಇದು.

ಸರಿಯಾಗಿ ವಿಚಾರ ಮಾಡಿದರೆ, “ಭಾರತೀಯತೆ” ಮತ್ತು “ರಾಷ್ಟ್ರೀಯತೆ” ಎಂಬ ಈ ಎರಡು ಪದಗಳಿಗೂ ಮೂಲತಃ ಅಂತಹ ವ್ಯತ್ಯಾಸವೇನೂ ಇಲ್ಲ ಎಂಬುದು ತಿಳಿಯುತ್ತದೆ. ಸಾಹಿತ್ಯಕ ನೆಲೆಯಲ್ಲಿ “ರಾಷ್ಟ್ರೀಯತೆ” ಎಂದ ಕೂಡಲೆ, ದೇಶಭಕ್ತಿ ಮೂಲವಾದ, ಆದರ್ಶ-ಆವೇಶಗಳನ್ನು ಗುರುತಿಸುವ ಅಭ್ಯಾಸಕ್ಕೆ ಮುಖ್ಯ ಕಾರಣ, “ರಾಷ್ಟ್ರೀಯ”, “ರಾಷ್ಟ್ರೀಯತೆ” ಎಂಬ ಮಾತುಗಳಿಗೆ ವಿಶಿಷ್ಟವಾದ ಅರ್ಥ ಹುಟ್ಟಿಕೊಂಡದ್ದು. ರಾಷ್ಟ್ರೀಯ ಚಳುವಳಿ ಎಂದು ಕರೆಯಿಸಿಕೊಂಡ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿಯೆ ಎಂಬುದನ್ನು ಮರೆಯಬಾರದು. ವಾಸ್ತವವಾಗಿ “ರಾಷ್ಟ್ರೀಯತೆ” ಎಂದಾಗ, ಅದು ಸಂದರ್ಭದ ಮಹಿಮೆಯಿಂದ, ದೇಶಭಕ್ತಿ ಮೂಲವಾದ ಆವೇಶ ಆದರ್ಶಗಳನ್ನು ಕುರಿತದ್ದೆಂದು ಭಾವಿತವಾದರೂ, ಅದು ಅಷ್ಟೇ ಅಲ್ಲ ಎಂಬುದನ್ನೂ ನಾವು ತಿಳಿಯಬೇಕು. “ರಾಷ್ಟ್ರೀಯತೆ” ಎಂದರೆ “ರಾಷ್ಟ್ರಕ್ಕೆ ಸಂಬಂಧಿಸಿರುವಿಕೆ” ಎಂಬ ವಿಶಾಲಾರ್ಥವನ್ನು ನಾವು ಗ್ರಹಿಸಬೇಕು. ನಮಗೆ ತಿಳಿದಂತೆ “ರಾಷ್ಟ್ರೀಯತೆ” ಎಂಬ ಮಾತು ಎರಡು ಅರ್ಥಗಳಲ್ಲಿ ಬಳಕೆಯಾಗತೊಡಗಿದೆ. ಒಂದು, ಸಂಕುಚಿತವಾದ ಅರ್ಥದಲ್ಲಿ, ರಾಷ್ಟ್ರವನ್ನು ಕುರಿತು ದೇಶಪ್ರೇಮ ಮೂಲವಾದ ಆರಾಧನೆಯ, ಆವೇಶದ, ಭಾವೈಕ್ಯತೆ ಇತ್ಯಾದಿ ಭಾವನೆಗಳ ಅಭಿವ್ಯಕ್ತಿಯನ್ನು ಕುರಿತದ್ದು. ಇನ್ನೊಂದು, ವಿಶಾಲಾರ್ಥದಲ್ಲಿ, ಸಮಗ್ರ ರಾಷ್ಟ್ರದ ಆಶೋತ್ತರಗಳು, ಸಾಂಸ್ಕೃತಿಕ ಮೌಲ್ಯಗಳು, ಇತ್ಯಾದಿಗಳನ್ನು ಕುರಿತದ್ದು. ರಾಮಾಯಣ, ಮಹಾಭಾರತಗಳನ್ನು ರಾಷ್ಟ್ರೀಯ ಮಹಾಕಾವ್ಯಗಳೆಂದು ಕರೆಯುವಲ್ಲಿ, ನಿಜವಾದ ಮಹಾಕಾವ್ಯ ರಾಷ್ಟ್ರೀಯ  ಮಹತ್ವವನ್ನು ಒಳಗೊಳ್ಳುತ್ತದೆ ಎಂದು ಹೇಳುವಲ್ಲಿ, ಈ ಎರಡನೆಯ ವಿಶಾಲಾರ್ಥವೇ ಸೂಚಿತವಾಗಿದೆ.

ಸಾಹಿತ್ಯದಲ್ಲಿ “ರಾಷ್ಟ್ರೀಯತೆ” ಎಂಬ ಮಾತಿಗೆ ಕೇವಲ ದೇಶಾಭಿಮಾನ, ದೇಶಭಕ್ತಿಗಳನ್ನು ಕುರಿತು ಅಭಿವ್ಯಕ್ತಿ ಎಂಬ ಪರಿಮಿತಾರ್ಥ ಬಂದ ಕಾರಣದಿಂದ. ಅದು ಹೇಗೋ ಸಾಹಿತ್ಯದಲ್ಲಿ “ಭಾರತೀಯತೆ” ಎಂಬುದರೊಂದಿಗೆ ಹೊಂದಿಸಲಾಗದ ಅರ್ಥವನ್ನು ಕೊಡುವ ಪದವೆಂಬಂತೆ ಬಳಕೆಗೆ ಬಂದುಬಿಟ್ಟಿದೆ. ಆದರೆ “ರಾಷ್ಟ್ರೀಯತೆ” ಎಂಬ ಪದಕ್ಕಿರುವ ವಿಶಾಲಾರ್ಥವನ್ನು ಪ್ರಧಾನವಾಗಿರಿಸಿಕೊಂಡರೆ ಅಲ್ಲಿ ಅದು “ಭಾರತೀಯತೆ” ಎಂಬುದರೊಂದಿಗೆ ಮುಖ ತಿರುಗಿಸಿಕೊಂಡು ನಿಲ್ಲುವ ಸಂದರ್ಭವೇ ಬರುವುದಿಲ್ಲ. ಭಾರತದ ವಿವಿಧ ಭಾಷೆಗಳಲ್ಲಿನ ಸಾಹಿತ್ಯಾಭಿವ್ಯಕ್ತಿಗಳು, ತಮ್ಮ ತಮ್ಮ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ವೈಲಕ್ಷಣ್ಯಗಳನ್ನುಳಿಸಿಕೊಂಡೂ “ಭಾರತೀಯ ಸಾಹಿತ್ಯ”ವಾಗಿರುವುದರ ಜತೆಗೆ, ವಿಶಾಲವಾದ ಅರ್ಥದಲ್ಲಿ “ರಾಷ್ಟ್ರೀಯ ಸಾಹಿತ್ಯ”ವೂ ಆಗಿವೆ. ಈ ಅರ್ಥದಲ್ಲಿ “ರಾಷ್ಟ್ರೀಯತೆ” ಹಾಗೂ “ಭಾರತೀಯತೆ”ಗಳನ್ನು ಸಮಾನಾರ್ಥಕಗಳೆಂದು ಭಾವಿಸುವುದು ಒಳ್ಳೆಯದು.

ವಿಶಾಲವಾದ ಅರ್ಥದಲ್ಲಿ ನೋಡುವುದಾದರೆ ನಮ್ಮರಾಷ್ಟ್ರದ ಸಾಹಿತ್ಯವೆಲ್ಲವೂ “ರಾಷ್ಟ್ರೀಯ ಸಾಹಿತ್ಯ”ವೇ. ಆದರೆ ಭಾರತವೆಂಬ ಈ ರಾಷ್ಟ್ರ ಕಾಲದಿಂದ ಕಾಲಕ್ಕೆ ವಿವಿಧ ಪ್ರಾದೇಶಿಕ ಭಾಷಾ ಸಾಹಿತ್ಯಗಳ ಮೂಲಕ ತನ್ನ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿದೆ.ಆದರೆ ಈ ರಾಷ್ಟ್ರದ ಯಾವ ಒಂದು ಪ್ರಾದೇಶಿಕ ಸಾಹಿತ್ಯ, ಸತ್ವದಲ್ಲಿ ರಾಷ್ಟ್ರೀಯವಾಗಿದ್ದೂ, ತನ್ನದೇ ಆದ ಪ್ರತ್ಯೇಕ ದೃಷ್ಟಿ-ಧ್ಯೇಯ-ಧೋರಣೆಗಳನ್ನು ವಿಶಿಷ್ಟ ರೀತಿಯಲ್ಲಿ ಅಭಿವ್ಯಕ್ತಪಡಿಸಿಕೊಂಡಿದೆಯೋ ಅಂಥ ಸಾಹಿತ್ಯಾಭಿವ್ಯಕ್ತಿಯನ್ನು “ಉಪರಾಷ್ಟ್ರೀಯ ಸಾಹಿತ್ಯ”ವೆಂದೂ, ಅದರಲ್ಲಿ ಮೈದೋರಿರುವುದು “ಉಪರಾಷ್ಟ್ರೀಯತೆ” ಎಂದೂ ಕರೆಯಬಹುದು.[2]

“ಉಪರಾಷ್ಟ್ರೀಯತೆ” ಎಂಬ ಮಾತಿನ ಬಗ್ಗೆ ಇನ್ನಷ್ಟು ವಿವರಣೆ ಅಗತ್ಯವೆಂದು ಕಾಣುತ್ತದೆ. ಭಾರತವನ್ನು ಒಂದು ರಾಷ್ಟ್ರ ಎಂದು ಕರೆಯುತ್ತೇವೆ. ಆದರೆ ಇದರೊಳಗಿನ ಒಂದೊಂದು ರಾಜ್ಯವನ್ನೂ ರಾಷ್ಟ್ರ ಎಂದು ಕರೆಯುವುದಿಲ್ಲ. ಹಾಗೆ ನೋಡಿದರೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಇಂಥ ರಾಜ್ಯಗಳು ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಮತ್ತಿತರ ದೇಶಗಳಷ್ಟೇ ದೊಡ್ಡವಾಗಿವೆ. ಆದರೆ ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಇತ್ಯಾದಿಗಳನ್ನು ರಾಷ್ಟ್ರಗಳೆಂದು ಕರೆಯುತ್ತಾರೆ. ಯಾಕೆಂದರೆ ಅವುಗಳಿಗೆ ಪ್ರತ್ಯೇಕವಾದ ಒಂದು ಅಸ್ತಿತ್ವವಿದೆ. ಆದರೆ ಭರತಖಂಡದೊಳಗಿರುವ, ಅದೇ ಪ್ರಮಾಣದ ವಿವಿಧ ರಾಜ್ಯಗಳನ್ನು ನಾವು ಪ್ರತ್ಯೇಕ ರಾಷ್ಟ್ರಗಳೆಂದು ಕರೆಯುವುದಿಲ್ಲ. ಯಾಕೆಂದರೆ ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಅವು ಒಂದು ವ್ಯವಸ್ಥೆಯಲ್ಲಿ ಬದ್ಧವಾಗಿವೆ. ಆದರೆ ಇವುಗಳಲ್ಲಿ ಅನೇಕವುಗಳಿಗೆ ತಮ್ಮದೇ ಆದ ಭಾಷೆ ಮತ್ತು ವಿಶಿಷ್ಟವಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಪ್ರಾಪ್ತವಾಗುವ ಪ್ರತ್ಯೇಕತೆ ಇರುವ ಕಾರಣದಿಂದ, ಇವುಗಳನ್ನು “ಉಪರಾಷ್ಟ್ರ”ವೆಂದು ಯಾಕೆ ಕರೆಯಬಾರದು? ಈ ಉಪರಾಷ್ಟ್ರೀಯತೆ, ಕನ್ನಡನಾಡಿನ ಮಟ್ಟಿಗೆ ಅದರ “ಕರ್ನಾಟಕತ್ವ”ದಲ್ಲಿದೆ. ಈ ಕರ್ನಾಟಕತ್ವ “ಭಾರತೀಯತ್ವ”ದ ಒಂದು ಭಾಗವೇ. ಈ ಕರ್ನಾಟಕದಲ್ಲಿ ಸಂಭವಿಸುವ ಸಾಹಿತ್ಯದಲ್ಲಿ “ಉಪರಾಷ್ಟ್ರೀಯತೆ” ಇದೆ ಎಂಬುದೇ ಇಲ್ಲಿ ಗಮನಿಸಬೇಕಾದ ಅಂಶ. “ಉಪ” ಎಂಬ ಶಬ್ದ ಅನೇಕರಿಗೆ ರುಚಿಸದಿರಬಹುದು. ಕೈ, ಕಾಲು, ಕಣ್ಣು ಇತ್ಯಾದಿಗಳು ದೇಹದ ಉಪಾಂಗಗಳೆಂದ ಮಾತ್ರಕ್ಕೆ ಅವು ದೇಹದ ಒಟ್ಟು ರಚನೆಯಿಂದ, ಕ್ರಿಯೆಯಿಂದ ಹೇಗೆ ಭಿನ್ನವಲ್ಲವೋ ಹಾಗೆಯೇ, ಈ “ಉಪರಾಷ್ಟ್ರೀಯತೆ” ಎಂಬ ಮಾತು “ರಾಷ್ಟ್ರೀಯತೆ”ಯಿಂದ ಬೇರೆ ಆಗುವುದಿಲ್ಲ.

ಹಾಗೆ ನೋಡಿದರೆ “ಉಪರಾಷ್ಟ್ರೀಯತೆ” ಎಂಬುದು, “ಪ್ರಾಂತೀಯತೆ” ಎಂಬುದಕ್ಕೆ ಇಟ್ಟ ಗಂಭೀರವಾದ ಹೆಸರು! “ಪ್ರಾಂತೀಯತೆ” ಎಂಬುದು “ರಾಷ್ಟ್ರೀಯತೆ” ಎಂಬುದರೊಂದಿಗೆ ವಿರುದ್ಧಾರ್ಥದಲ್ಲಿ ನಿಲ್ಲುವುದನ್ನು ನಿವಾರಿಸಲು, “ಪ್ರಾಂತೀಯತೆ”ಗೆ, “ಉಪರಾಷ್ಟ್ರೀಯತೆ” ಎಂಬ ವೇಷ ತೊಡಿಸಿ ಒಂದು ಬಗೆಯ ಸಂಧಾನವನ್ನು ಸಂಘಟಿಸುವ ಚಾತುರ್ಯ ಇಲ್ಲಿದೆ. ನಿಜವಾಗಿ ನೋಡಿದರೆ “ಪ್ರಾಂತೀಯತೆ” ಎಂಬುದು “ರಾಷ್ಟ್ರೀಯತೆ”ಗೆ ವಿರುದ್ಧವಾದ ಭಾವನೆಯಾಗಲಿ, ಮಾತಾಗಲಿ ಅಲ್ಲ. ಆದರೆ ಯಾಕೋ ಏನೋ “ಪ್ರಾಂತೀಯತೆ” ಎಂಬ ಮಾತು “ಸಂಕುಚಿತತೆ”ಯನ್ನೂ, “ರಾಷ್ಟ್ರೀಯತೆ” ಎಂಬುದು “ವಿಶಾಲತೆ”ಯನ್ನೂ ಸೂಚಿಸುವ ಪದಗಳಾಗಿ ಗೃಹೀತವಾಗಿರುವ ಕಾರಣ“ಪ್ರಾಂತೀಯತೆ”ಗೆ “ಉಪರಾಷ್ಟ್ರೀಯತೆ” ಎಂದು ನಾಮಕರಣ ಮಾಡಿ, “ರಾಷ್ಟ್ರೀಯತೆ”ಗೆ ಪೂರಕವಾಗುವ ಅರ್ಥದಲ್ಲಿ ಬಳಸಲು ಪ್ರಯತ್ನ ನಡೆದಿದೆ ಇಲ್ಲಿ!

ಈ ದೃಷ್ಟಿಯಿಂದ, ಕನ್ನಡನಾಡಿನ ಸಾಹಿತ್ಯದ ಹಿನ್ನೆಲೆ ಭಾರತೀಯವಾಗಿದ್ದರೂ,  ರಾಷ್ಟ್ರೀಯವಾಗಿದ್ದರೂ, ಕನ್ನಡಕ್ಕೆ ತನ್ನದೇ ಆದ ಪ್ರತ್ಯೇಕವಾಗಿ ಗುರುತಿಸುವಂಥ ಪ್ರಾದೇಶಿಕ ಅಂಶಗಳೂ, ವಿಶಿಷ್ಟತೆಗಳೂ ವ್ಯಕ್ತವಾಗಿರುವುದರಿಂದ ಅದನ್ನು “ಉಪರಾಷ್ಟ್ರೀಯತೆ” ಎಂದು ಕರೆಯಬೇಕಾಗುತ್ತದೆ. ಈ ರೀತಿಯ ಒಂದು “ಉಪರಾಷ್ಟ್ರೀಯತೆ” ಇರುವುದರಿಂದಲೇ, ಕನ್ನಡ ಸಾಹಿತ್ಯ ಇತರ ಭಾರತೀಯ ಭಾಷಾ ಸಾಹಿತ್ಯಾಭಿವ್ಯಕ್ತಿಗಳಿಂದ ಭಿನ್ನವಾದ ದೃಷ್ಟಿ-ಧ್ಯೇಯ-ಧೋರಣೆಗಳನ್ನು ಎಷ್ಟರಮಟ್ಟಿಗೆ ಹೊಂದಿದೆ ಎಂಬುದನ್ನು ಗುರುತಿಸಲು ಸಾಧ್ಯವಿದೆ. ಯಾಕೆಂದರೆ ಕನ್ನಡ ನಾಡಿಗೆ ತನ್ನದೇ ಆದೊಂದು ಜೀವನಕ್ರಮ, ಒಂದು ದೃಷ್ಟಿಕೋನ, ಒಟ್ಟಿನಲ್ಲಿ ಒಂದು ಸಾಂಸ್ಕೃತಿಕ ಪರಂಪರೆ ಇದೆ. ಹೀಗಿದ್ದಾಗಲೇ ಭಾರತೀಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಏನಾದರೂ ಉಂಟೆ, ಅಥವಾ ರಾಷ್ಟ್ರೀಯತೆಯಿಂದ ಭಿನ್ನವಾದ “ಉಪರಾಷ್ಟ್ರೀಯತೆ” ಯೇನಾದರೂ ಉಂಟೆ ಎಂದು ವಿಚಾರ ಮಾಡಲು ಸಾಧ್ಯವಾಗುತ್ತದೆ. ವಾಸ್ತವವಾಗಿ ಭಾರತದಂತಹ ಬಹುಭಾಷಾ ಸಾಹಿತ್ಯಗಳಿರುವ ದೇಶದಲ್ಲಿ, ಒಂದೊಂದು ಭಾಷಾ ಸಾಹಿತ್ಯವೂ ತನ್ನದೇ ಆದ ಪ್ರಾದೇಶಿಕ ಸಾಂಸ್ಕೃತಿಕ ವೈಲಕ್ಷಣ್ಯಗಳನ್ನು ಪ್ರಕಟಿಸುವುದರ ಮೂಲಕವೇ “ಉಪರಾಷ್ಟ್ರೀಯತೆ”ಯನ್ನು ಕಾಯ್ದುಕೊಂಡಿದೆ ಎನ್ನಬಹುದು. ಕನ್ನಡ ಸಾಹಿತ್ಯದ ಮಟ್ಟಿಗಂತೂ ಈ ಮಾತು ತೀರಾ ಸತ್ಯ. ಕನ್ನಡ ವಿಶಿಷ್ಟತೆ ಇರುವುದು ಅದರ “ಉಪರಾಷ್ಟ್ರೀಯತೆ”ಯಲ್ಲಿಯೇ ಎಂಬುದನ್ನು ಒತ್ತಿ ಹೇಳಬೇಕಾಗಿದೆ.

ಕನ್ನಡದಲ್ಲಿಯೇ ಏಕೆ, ಭಾರತೀಯವಾದ ಇತರ ದೇಶೀಯ ಸಾಹಿತ್ಯಗಳಿಗೆ ಅಂತಹ “ಉಪರಾಷ್ಟ್ರೀಯತೆ”ಯೇನೂ ಇಲ್ಲ, ಇರುವುದೇನಿದ್ದರೂ “ರಾಷ್ಟ್ರೀಯತೆಯೇ”; ರಾಮಾಯಣ ಮಹಾಭಾರತ ಪುರಾಣೇತಿಹಾಸಗಳು ಎಲ್ಲ ದೇಶಭಾಷಾ ಸಾಹಿತ್ಯಾಭಿವ್ಯಕ್ತಿಯ ಮೂಲದ್ರವ್ಯವಾಗಿರುವುದರಿಂದ, ಎಲ್ಲ ದೇಶೀಯ ಸಾಹಿತ್ಯಗಳೂ ಹೊಸತೇನನ್ನೂ ಹೇಳಲು ಸಾಧ್ಯವಾಗಿಲ್ಲ. ಅಥವಾ ‘ಉಪರಾಷ್ಟ್ರೀಯತೆ’ಯನ್ನು ರೂಪಿಸಿಕೊಳ್ಳಲಾಗಿಲ್ಲ; ಆದುದರಿಂದ ಅಭಿವ್ಯಕ್ತವಾಗಿರುವುದೇನಿದ್ದರೂ ‘ರಾಷ್ಟ್ರೀಯತೆ’ ಎಂಬ ತಪ್ಪು ತಿಳುವಳಿಕೆ ಹಲವರಲ್ಲಿದೆ.[3] ಆದರೆ ಇಂಥ ರಾಷ್ಟ್ರೀಯ ಮಹತ್ವವುಳ್ಳ ರಾಮಾಯಣ ಮಹಾಭಾರತಾದಿ ವಸ್ತುಗಳನ್ನು ತೆಗೆದುಕೊಂಡೂ ಕೂಡ, ನೋಡುವ ದೃಷ್ಟಿ, ಹೇಳುವ ರೀತಿ, ಬೇರೆಯಾಗಿದೆ. ಕನ್ನಡ ಕವಿಗಳಾದ ಪಂಪ, ರನ್ನ, ಹರಿಹರ, ರಾಘವಾಂಕ ಇವರನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಪಂಪಭಾರತ ವ್ಯಾಸ  ಭಾರತದ ಪಡಿನೆಳಲಲ್ಲ ; ಅದರ ಮೂಲ ಸಾಮಗ್ರಿಯಿಂದ ಮೂಡಿದ ಬೇರೊಂದು ರೂಪ. ಅರಿಕೇಸರಿ-ಅರ್ಜುನರ ಅಭೇದ ಕಲ್ಪನೆಯ ‘ಸಮಸ್ತಭಾರತ’ ತಂತ್ರದಿಂದ ಪಂಪಭಾರತಕ್ಕೆ ಲಭಿಸಿರುವ ಸ್ವರೂಪ ನಿಜವಾಯೂ ‘ಉಪರಾಷ್ಟ್ರೀಯತೆ’ಗೆ ಒಂದು ನಿದರ್ಶನ. ರನ್ನನ ‘ಗದಾಯುದ್ಧ’ದ ‘ಸಿಂಹಾವಲೋಕನ ಕ್ರಮ’ ಅತ್ಯಾಧುನಿಕವಾಗಿದ್ದು, ರನ್ನನ ಕಾಲದ ವೀರಜೀವನದ ದಾಖಲೆಯಾಗಿ ಕನ್ನಡ ನಾಡಿನ ಕವಿಯ ‘ಉಪರಾಷ್ಟ್ರೀಯತೆ’ಯನ್ನು ಪ್ರಕಟಿಸುತ್ತದೆ. ಹರಿಹರನ ‘ಗಿರಿಜಾಕಲ್ಯಾಣ’ವಂತೂ, ಶಿವಪುರಾಣ ಹಾಗೂ ‘ಕುಮಾರ ಸಂಭವ’ಗಳಿಂದ ಭಿನ್ನವಾದ ರೂಪಾಂತರವನ್ನು, ಕನ್ನಡ ನಾಡಿನ ‘ಮಣ್ಣಿನವಾಸನೆ’ಯೊಂದಿಗೆ ತಾಳಿದೆ. ಇದಕ್ಕಿಂತ ಮಿಗಿಲಾಗಿ ವಚನಕಾರರ ಹಾಗೂ ಹರಿದಾಸರ ಅಭಿವ್ಯಕ್ತಿಗಳೂ, ‘ಉಪರಾಷ್ಟ್ರೀಯ’ವೆಂದು ಮಾತ್ರ ಹೆಸರಿಸಬಹುದಾದವು. ಈ ಅರ್ಥದಲ್ಲಿ ಹಿಂದಿನ ಕನ್ನಡ ಸಾಹಿತ್ಯ ಸಾಕಷ್ಟು ‘ಉಪರಾಷ್ಟ್ರೀಯ’ವಾಗಿದೆ ಎನ್ನಬಹುದು.

ನಿಜವಾಗಿಯೂ, ಈ ‘ಉಪರಾಷ್ಟ್ರೀಯತೆ’ಯನ್ನು ಗುರುತಿಸುವುದು ಒಂದು ಸಾಹಿತ್ಯದ ಭಾಷೆಯಿಂದ ಮಾತ್ರವಲ್ಲ; ಪ್ರತಿಯೊಂದು ಭಾಷೆಯೂ, ಇನ್ನೊಂದು ಭಾಷೆಯಿಂದ ಬೇರೆ ಎಂಬಂತೆ ತೋರಿದರೂ, ಯಾವ ಒಂದು ಪ್ರದೇಶಕ್ಕೆ ತನ್ನದೇ ಆದೊಂದು ವಿಶಿಷ್ಟ ಸಾಂಸ್ಕೃತಿಕ ಜೀವನವಿದೆಯೋ ಮತ್ತು ಕವಿ ಯಾವುದೇ ವಸ್ತುವನ್ನು ತೆಗೆದುಕೊಂಡರೂ, ಅದು ಆತನ ಪರಿಸರದ ವಿಶಿಷ್ಟ ಲಕ್ಷಣಗಳನ್ನು, ತನ್ನ ಕೃತಿಯಲ್ಲಿ ಮೂಡಿಸಿದೆಯೋ ಅಂಥದನ್ನು ‘ಉಪರಾಷ್ಟ್ರೀಯತೆ’ ಎನ್ನಬಹುದು. ಉದಾಹರಣೆಗೆ ರಾಮಾಯಣ ಮಹಾಭಾರತಗಳನ್ನು ವಸ್ತುವನ್ನಾಗಿ ತೆಗೆದುಕೊಂಡ ಎಷ್ಟೋ ಕವಿಗಳು, ವಾಲ್ಮೀಕಿ-ವ್ಯಾಸಾದಿಗಳ ಮೇಲಿನ ಗೌರವದಿಂದ, ಮೂಲವನ್ನು ಯಥಾವತ್ತಾಗಿ ಶ್ರದ್ಧೆಯಿಂದ ಅನುಸರಿಸಿ ತಮ್ಮ ತಮ್ಮ ಭಾಷೆಗಳಲ್ಲಿ ಅನುವಾದಿಸಿ ತಾವು ಕೃತಾರ್ಥರಾದೆವೆಂದು ಭಾವಿಸಿದ್ದುಂಟು. ಅಂಥವರ ಕೃತಿ ನಿಜವಾದ ಅರ್ಥದಲ್ಲಿ ‘ಉಪರಾಷ್ಟ್ರೀಯ’ವಾಗುವುದಿಲ್ಲ. ಯಾಕೆಂದರೆ ಅವರು ಆ ಮೂಲ ಕಾವ್ಯಗಳು ತಮ್ಮ  ‘ಉಪರಾಷ್ಟ್ರೀಯತೆ’ಯಲ್ಲಿ ಸಂಭವಿಸುವಂತೆ ಮಾಡುವ ಸ್ವೋಪಜ್ಞತೆಯನ್ನು ಪ್ರಕಟಿಸುವುದಿಲ್ಲ. ಹೀಗಾಗಿ ಅವರು ತಮ್ಮ ‘ಉಪರಾಷ್ಟ್ರೀಯತೆ’ಯನ್ನು ನಿರ್ಲಕ್ಷಿಸುತ್ತಾರೆ. ಕನ್ನಡದ ತೊರವೆಯರಾಮಾಯಣವನ್ನಾಗಲಿ, ಮತ್ತು ಮೂಲವನ್ನು ಯಥಾವತ್ತಾಗಿ ಹೇಳಲು ಬದ್ಧವಾದ ಇನ್ನಾವ ಕೃತಿಗಳನ್ನಾಗಲಿ ನೋಡಬಹುದು. ಅವುಗಳಲ್ಲಿ, ಅದನ್ನು ಬರೆದ ಕವಿಗಳಿಗೆ “ಸ್ವಂತದ್ದು”-ಎಂದರೆ “ಉಪರಾಷ್ಟ್ರೀಯ”ವಾದದ್ದೇನನ್ನೂ ತರುವ ಉದ್ದೇಶವಿರುವುದಿಲ್ಲ. ಆದರೆ ವ್ಯಾಸಭಾರತದ ಕತೆಯನ್ನು ತೆಗೆದುಕೊಂಡು ಪಂಪ “ವಿಕ್ರಮಾರ್ಜುನ ವಿಜಯ”ವನ್ನು ಬರೆಯುವಲ್ಲಿ, ಅದನ್ನು ನಿಜವಾದ ಅರ್ಥದಲ್ಲಿ “ಉಪರಾಷ್ಟ್ರೀಯ ಕಾವ್ಯ”ವನ್ನಾಗಿ ಮಾಡಿದ್ದಾನೆ. ವ್ಯಾಸರ ಬಗೆಗೆ ಪಂಪನಿಗೆ ಗೌರವಿದ್ದರೂ, ಮೂಲಭಾರತದ ಕಥಾಭಿತ್ತಿಯ ಮೇಲೆ, ತನ್ನ ಕಾಲದ ಐತಿಹಾಸಿಕ ಸಂಗತಿಗಳನ್ನು, ತನ್ನ ಸಮಕಾಲೀನ ಸಾಮಾಜಿಕ ಜೀವನವನ್ನು, ತಾನು ಕಂಡ ವ್ಯಕ್ತಿಗಳನ್ನು, ತನ್ನ ಕಾಲದ ಮೌಲ್ಯಗಳನ್ನು, ತನಗೂ ರಾಜನಾದ ಅರಿಕೇಸರಿಗೂ ಇದ್ದ ಸ್ನೇಹಾನುಬಂಧಗಳನ್ನೂ, ತಾನು ಸುತ್ತಾಡಿ ಮೆಚ್ಚಿದ ಬನವಾಸಿಯ ಪ್ರೀತಿಯನ್ನೂ, ತನ್ನ ಸ್ವಂತ ರುಚಿ ಹಾಗೂ ಅಭಿರುಚಿಗಳನ್ನೂ, ತನ್ನ ಯುದ್ಧಾನುಭವಗಳನ್ನೂ-ಒಟ್ಟಿನಲ್ಲಿ ಹತ್ತನೆಯ ಶತಮಾನದ ಕನ್ನಡನಾಡಿನ ಜೀವನವನ್ನೇ ಚಿತ್ರಿಸಿ, “ವಿಕ್ರಮಾರ್ಜುನ ವಿಜಯ”ವನ್ನು “ಉಪರಾಷ್ಟ್ರೀಯಕಾವ್ಯ”ವನ್ನಾಗಿ ಮಾಡಿದ್ದಾನೆ. ಈ “ಉಪರಾಷ್ಟ್ರೀಯತೆ” “ರಾಷ್ಟ್ರೀಯತೆ”ಯಿಂದ ಭಿನ್ನವೇ ಹೊರತು, “ಅರಾಷ್ಟ್ರೀಯ” ವಾಗುವುದಿಲ್ಲ. ಯಾಕೆಂದರೆ ಇಂಥ ಕವಿಗಳು ಆರಿಸಿಕೊಂಡಿದ್ದು “ರಾಷ್ಟ್ರೀಯ ಮಹತ್ವ”ವುಳ್ಳ ವಸ್ತುಗಳನ್ನೇ ಮತ್ತು ಇಂಥ ವಸ್ತುಗಳ ಪುನರ್‌ಭವಕೃತಿಗಳು “ಉಪರಾಷ್ಟ್ರೀಯ”ವಾದರೂ, ಈ “ಉಪರಾಷ್ಟ್ರೀಯತೆ” ಕೂಡಾ ನಮ್ಮ ರಾಷ್ಟ್ರೀಯತೆಯ ಒಂದು ಅಂಗವೇ. ಈ ಬಗೆಯ ವಸ್ತುಗಳನ್ನು ಬಿಟ್ಟು, ಪ್ರಾದೇಶಿಕ ಮಹತ್ವವುಳ್ಳ ವಸ್ತುಗಳನ್ನು ನಿರ್ವಹಿಸಿದ ಕವಿಕೃತಿಗಳಲ್ಲಿ ಈ “ಉಪರಾಷ್ಟ್ರೀಯತೆ” ಇನ್ನೂ ಪರಿಸ್ಫುಟವಾಗಿ ಕಾಣುತ್ತದೆ. ಆಂಡಯ್ಯನ “ಕಬ್ಬಿಗರ ಕಾವ”, ನಂಜುಂಡನ “ಕುಮಾರರಾಮ ಸಾಂಗತ್ಯ” ಮತ್ತು ಕನ್ನಡ ನಾಡಿನ ಅನೇಕ ವೀರರನ್ನು ಕುರಿತು ರಚಿತವಾದ ಶಾಸನ ಹಾಗೂ ಲಾವಣಿಗಳು-ನಿಜವಾದ ಅರ್ಥದಲ್ಲಿ “ಉಪರಾಷ್ಟ್ರೀಯತೆ”ಯ ಉತ್ತಮ ನಿದರ್ಶನಗಳಾಗಿವೆ. ಇನ್ನು ವಚನಕಾರರ ಹಾಗೂ ಹರಿದಾಸರ ಅಭಿವ್ಯಕ್ತಿಗಳಂತೂ, ರಾಷ್ಟ್ರೀಯ ಸಾಹಿತ್ಯದಲ್ಲಿ ಈ ಮೊದಲು ಕಾಣಬಾರದ ಅಭಿವ್ಯಕ್ತಿ ಪ್ರಕಾರಗಳಾದರೂ ನಿಜವಾದ ಅರ್ಥದಲ್ಲಿ “ಉಪರಾಷ್ಟ್ರೀಯ”ವಾದರೂ, ಅವುಗಳ ಹಿನ್ನೆಲೆಗಿರುವುದು ಭಗವತ್‌ಪರವಾದ ಭಕ್ತಿ-ಶ್ರದ್ಧೆಗಳು, ಸಮಾಜ ವಿಮರ್ಶೆಯ ಧೋರಣೆಗಳು, ರಾಷ್ಟ್ರೀಯ ಅಂಶಗಳೇ ಆಗಿವೆ. ಆದರೆ “ವಚನ ಸಾಹಿತ್ಯ”ವಂತೂ, ಭಕ್ತಿ ಇತ್ಯಾದಿಗಳಲ್ಲಿ ರಾಷ್ಟ್ರೀಯವಾದರೂ, ಅದಕ್ಕೆ ಹಿನ್ನೆಲೆಯಾದ ಧಾರ್ಮಿಕ ಸಾಮಾಜಿಕ ಕ್ರಾಂತಿಯಿಂದ ಮತ್ತು ಅನನ್ಯವಾದ ಅಭಿವ್ಯಕ್ತಿಯಿಂದ ಮೂಲತಃ “ಉಪರಾಷ್ಟ್ರೀಯ”ವಾಗಿದ್ದುಕೊಂಡು, ರಾಷ್ಟ್ರೀಯ ಸಾಹಿತ್ಯಕ್ಕೆ ಮತ್ತು ವಿಶ್ವ ಸಾಹಿತ್ಯಕ್ಕೆ  ಅಮೂಲ್ಯವಾದ ಕೊಡುಗೆಯಾಗಿದೆ.

ನವೋದಯ ಸಾಹಿತ್ಯದ ಕಾಲಕ್ಕೆ, ಕನ್ನಡದಲ್ಲಿ “ಉಪರಾಷ್ಟ್ರೀಯತೆ” ಇನ್ನಷ್ಟು ಎದ್ದು ಕಾಣುವಂತಾಯಿತು. ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಣೆ ಪಡೆದು ರೂಪುಗೊಂಡ ನವೋದಯ ಸಾಹಿತ್ಯ, ಪಾಶ್ಚಾತ್ಯದ ಅನುಕರಣವೆಂಬಂತೆ ತೋರದೆ ತನ್ನದೇ ಆದ ಪ್ರಾದೇಶಿಕ ಸೊಗಸನ್ನು ಅನೇಕ ಕವಿಗಳ ವಿವಿಧ ಕಾವ್ಯಾಭಿವ್ಯಕ್ತಿಗಳಲ್ಲಿ ಪ್ರಕಟಪಡಿಸಿತು. ಕವಿತೆ, ಕತೆ, ನಾಟಕ, ಕಾದಂಬರಿ ಇತ್ಯಾದಿ ಪ್ರಕಾರಗಳಲ್ಲಿ ಈ ಸಾಹಿತ್ಯ ಕನ್ನಡದ್ದೇ, ಕನ್ನಡ ಜನತೆಯ ಜೀವನದಿಂದ ಸಂಭವಿಸಿದ್ದೇ ಎಂಬುದನ್ನು ಖಚಿತಪಡಿಸಿತು. ಈ  ಸಾಹಿತ್ಯದ ಹಿನ್ನೆಲೆಗೆ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯೂ, ಕರ್ನಾಟಕ ಏಕೀಕರಣ ಚಳುವಳಿಗಳೂ ಇದ್ದ ಕಾರಣ, ದೇಶಭಕ್ತಿ ಮೂಲವಾದ, ಕನ್ನಡ ನಾಡು-ನುಡಿಗಳ ಅಭಿಮಾನವನ್ನು ಕುರಿತಾದ ಸಾಹಿತ್ಯಾಭಿವ್ಯಕ್ತಿಗಳೂ ಕಾಣಿಸಿಕೊಂಡವು. ರಾಷ್ಟ್ರೀಯ ಚಳುವಳಿಯ ಕಾರಣದಿಂದ, ರಾಷ್ಟ್ರವನ್ನು ಒಂದು ತಾಯಿ ಎಂದು ಭಾವಿಸುವ, ತಾನು ಅದರ ಮಗು ಎಂದುಕೊಳ್ಳುವ, ರಾಷ್ಟ್ರಕ್ಕೆ ಸಮಸ್ತವನ್ನೂ ತ್ಯಾಗಮಾಡುವ, ಪರಕೀಯ ಪ್ರಭುತ್ವವನ್ನು ಕಿತ್ತೊಗೆಯಲು ಸತ್ವತಃ ತಾನು ಭಾರತೀಯನಾಗುವ, ಮತ್ತು ರಾಷ್ಟ್ರದ ಸಂಸ್ಕೃತಿಯನ್ನು, ವೀರ ಜೀವನವನ್ನು ಪ್ರಶಂಸಿಸುವ, ಆರಾಧನಾಮೂಲವಾದ, ಆದರ್ಶ ಆವೇಶಗಳು ಈ ಕಾಲದ ಸಾಹಿತ್ಯದ ಮುಖ್ಯ ವಸ್ತ್ತುಗಳಾದವು. ಹೀಗಾಗಿ ರಾಷ್ಟ್ರೀಯ ಸಾಹಿತ್ಯವೆಂದರೆ, ಕೇವಲ ದೇಶಭಕ್ತಿ ಮೂಲವಾದ ಆವೇಶ ಆರಾಧನಾಭಾವನೆಯನ್ನು ಕುರಿತದ್ದು ಎಂಬ ಪರಿಮಿತಾರ್ಥವೆ ಪ್ರಧಾನವಾಗಲು, ಈ ಸಾಹಿತ್ಯಕ್ಕೆ ಹಿನ್ನೆಲೆಯಾಗಿ ಬಂದ ಸ್ವಾತಂತ್ರ್ಯ ಚಳುವಳಿಯೆ ಕಾರಣ. ಈ ಕಾಲದ ಸಾಹಿತ್ಯದ ಇತರ ಸಾಧನೆಗಳನ್ನು ಕಡೆಗಣಿಸಿ, ಇತ್ತೀಚಿನ ನವ್ಯರು, ನವೋದಯಕಾವ್ಯ ಭಾವಾತಿರೇಕದಿಂದ, ಅತಿಯಾದ ಆವೇಶದಿಂದ, ಆದರ್ಶ ಮಯತೆಯಿಂದ ನರಳುತ್ತದೆಂದು ಆಪಾದಿಸಿದರು. ಈ ಆಪಾದನೆಯ ಬಹುಪಾಲು ಅಂಶ, ನವೋದಯ ಸಾಹಿತ್ಯಕ್ಕೆ ಹಿನ್ನೆಲೆಯಾಗಿದ್ದ ರಾಷ್ಟ್ರೀಯ ಚಳುವಳಿ ಮತ್ತು ಅದಕ್ಕೆ ಅಂಟಿಕೊಂಡು ಬಂದ ಭಾವುಕತನದಲ್ಲಿದೆ. ಆದರೆ ಆ ಕಾಲಕ್ಕೆ ಅದು ಅನಿವಾರ‍್ಯವೂ ಆಗಿತ್ತೆಂಬುದನ್ನು ಮರೆಯಬಾರದು. ದುರದೃಷ್ಟವಶಾತ್ “ರಾಷ್ಟ್ರೀಯತೆ” ಎಂಬ ಮಾತಿಗೆ, ದೇಶಭಕ್ತಿ, ಸ್ವಾತಂತ್ರ್ಯಕ್ಕಾಗಿ ಹೋರಾಟ, ನಾಡು-ನುಡಿಗಳ ಮೇಲಿನ ಪ್ರೇಮ ಎಂಬ ಅರ್ಥಗಳಷ್ಟೇ ಗೂಡುಕಟ್ಟಿಕೊಂಡದ್ದು ವಿಷಾದಕರ.

ಮುಂದೆ ಬಂದ ನವ್ಯ ಸಾಹಿತ್ಯದವರು, ನವೋದಯ ಸಾಹಿತ್ಯದ  ಅತಿಭಾವುಕತನ, ಆದರ್ಶಪರತೆ, ಇತ್ಯಾದಿಗಳ ಬಗೆಗೆ ಬಂಡೆದ್ದು, ನವೋದಯ ಕವಿಗಳು ಪೋಷಿಸಿಕೊಂಡ ದೇಶಪ್ರೇಮಮೂಲವಾದ ರಾಷ್ಟ್ರೀಯತೆಯ ಧೋರಣೆಯನ್ನು ಸಂಪೂರ್ಣವರ್ಜಿಸಿದರು.  ಭರತಮಾತೆ, ಕನ್ನಡಾಂಬೆ ಇತ್ಯಾದಿ ಮಾತುಗಳು ಇವರಿಗೆ ತಮಾಷೆಯ ಮಾತುಗಳಾದವು. ರಾಷ್ಟ್ರೀಯ ಗಂಡಾಂತರದ ಸಂದರ್ಭಗಳಲ್ಲಿ ಕೂಡ ನವ್ಯ ಸಾಹಿತ್ಯ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ತಟಸ್ಥವಾದ, ತೀರಾ ವೈಯಕ್ತಿಕ ನಿಲುವನ್ನು ತಾಳಿತು. ಈ ಸಮಯದಲ್ಲಿ ಅಲ್ಲೋಲಕಲ್ಲೋಲವಾದ ಭಾರತದ ಜನಮನದೊಂದಿಗೆ ಸ್ಪಂದಿಸಿದ ಕವಿಗಳು ಈ ಸಾಹಿತ್ಯದ ದೃಷ್ಟಿಯಿಂದ ‘ಸರ್ಕಾರಿ ಕವಿ’ಗಳಾದರು. “ರಾಷ್ಟ್ರೀಯತೆ” ಎಂದರೆ, ನವೋದಯ ಸಾಹಿತ್ಯದಲ್ಲಿ ವ್ಯಕ್ತವಾದಂತೆ, ಕೇವಲ ದೇಶಭಕ್ತಿಮೂಲವಾದ ಅನಿಸಿಕೆಗಳ ಉದ್ಗಾರ ಮಾತ್ರವಲ್ಲವಾದರೂ, ತಾವು ಸಮಗ್ರ ಭಾರತದವರು ಇದರ ಸಾಂಸ್ಕೃತಿಕ ಪರಂಪರೆಯನ್ನು ಮೈಗೂಡಿಸಿಕೊಳ್ಳುವುದು ಸಾಹಿತಿಯ ಜವಾಬ್ದಾರಿಗಳಲ್ಲಿ  ಬಹು ಮುಖ್ಯವಾದದ್ದು ಎಂಬ ಅರಿವಿಗೇ ಹೊರತಾದಂತೆ ನವ್ಯರು ಬದುಕುವ ಪ್ರಯತ್ನ ಮಾಡಿದರು. ಹೀಗಾಗಿ ‘ಉಪರಾಷ್ಟ್ರೀಯ’ವಾದ, ಮತ್ತು ‘ರಾಷ್ಟ್ರೀಯ’ವಾದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸಿಕೊಂಡ ಆ ಲೇಖಕರು, ತಮ್ಮ ಪ್ರೇರಣೆ ಹಾಗೂ ಪುಷ್ಟಿಗಳಿಗಾಗಿ, ಅನ್ಯದೇಶೀಯವಾದ ಪರಂಪರೆಗಳ ಕಡೆಗೆ, ತಾತ್ವಿಕ ವಲಯಗಳ ಕಡೆಗೆ ತಮ್ಮ ಬೇರುಗಳನ್ನು ಚಾಚಿದರು. ಒಟ್ಟಿನಲ್ಲಿ ನವ್ಯ ಸಾಹಿತ್ಯ ‘ಉಪರಾಷ್ಟ್ರೀಯ’ ಹಾಗೂ ‘ರಾಷ್ಟ್ರೀಯ’ವಾಗುವುದರ ಬದಲು, ‘ಅಂತರ್‌ರಾಷ್ಟ್ರೀಯ’ (International) ವಾಗುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿತು. ಹೀಗೆಂದರೆ ನವ್ಯ ಸಾಹಿತ್ಯದಲ್ಲಿ ‘ರಾಷ್ಟ್ರೀಯತೆ’ ಲವಲೇಶವೂ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಅದರಲ್ಲಿ ‘ರಾಷ್ಟ್ರೀಯತೆ’ ಇರುವುದಾದರೆ, ಅದು ಈ ರಾಷ್ಟ್ರಜೀವನದ ಸಮಕಾಲೀನ ಪರಿಸ್ಥಿತಿಗಳನ್ನು ಕುರಿತು ವಿಡಂಬನೆಯಲ್ಲಿದೆ. ಆ ವಿಡಂಬನೆಯ ಉದ್ದೇಶ ಮೂಲತಃ ರಾಷ್ಟ್ರಜೀವನದ ಶ್ರೇಯಸ್ಸಿನ ಬಗೆಗೆ ಆ ಸಾಹಿತಿಗಳು ವಹಿಸಿದ ಕಾಳಜಿಗಳ ಪರಿಣಾಮವೇ  ಎಂದು ಭಾವಿಸಬಹುದು. ನವೋದಯ ಸಾಹಿತಿಗಳ ‘ರಾಷ್ಟ್ರೀಯತೆ’ ಪ್ರಶಂಸಾಮೂಲವಾದ ಹಾಗೂ ಆರಾಧನಾಪ್ರಧಾನವಾದ ‘ರಾಷ್ಟ್ರೀಯತೆ’ಯಾಗಿದ್ದರೆ, ನವ್ಯ ಸಾಹಿತಿಗಳದು ವಿಮರ್ಶನಮೂಲವಾದ ಹಾಗೂ ವಿಡಂಬನ ಪ್ರಧಾನವಾದ “ರಾಷ್ಟ್ರೀಯತೆ”ಯಾಗಿದೆ ಎನ್ನಬಹುದು.  ಆದರೆ ಈ ಎರಡು ಸಾಹಿತ್ಯ ಪರಂಪರೆಗಳ “ರಾಷ್ಟ್ರೀಯತೆ”ಯಲ್ಲಿ  ಇನ್ನೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಕನ್ನಡದ ನವೋದಯ ಸಾಹಿತಿಗಳು ಈ ರಾಷ್ಟ್ರದ ಹಾಗೂ ತಮ್ಮ ‘ಉಪರಾಷ್ಟ್ರೀಯತೆ’ಯ ಚಾರಿತ್ರಿಕ ಪ್ರಜ್ಞೆ[4] (Historical sense)ಯುಳ್ಳವರಾಗಿದ್ದರು; ಮತ್ತು ತಾವು ಬರೆಯುತ್ತಿರುವುದು ಭಾರತೀಯ ಪರಿಸರದಲ್ಲಿ ಅದರಲ್ಲೂ ಕನ್ನಡ ನಾಡಿನಲ್ಲಿ ಎಂಬುದನ್ನು ಖಚಿತಪಡಿಸುತ್ತಿದ್ದರು. ಆದರೆ ನವ್ಯಸಾಹಿತಿಗಳು ತಾವು ಬರೆಯುತ್ತಿರುವುದು ಭಾರತೀಯ ಪರಿಸರದಲ್ಲಿ ಅದೂ ಕನ್ನಡ ನಾಡಿನಲ್ಲಿ ಎಂಬುದನ್ನು ಅಷ್ಟಾಗಿ ಖಚಿತಪಡಿಸುವುದಿಲ್ಲ. ಹೀಗಾಗಿ ‘ಉಪರಾಷ್ಟ್ರೀಯತೆ’ಯನ್ನು ಪ್ರಕಟಪಡಿಸುವುದರಲ್ಲಿ ಈ ಸಾಹಿತ್ಯ ಯಶಸ್ವಿಯಾಗಿಲ್ಲ. ಹೀಗೆಂದರೆ ಅದು ಸಾಹಿತ್ಯವಾಗಿ ಯಶಸ್ವಿಯಾಗಿಲ್ಲ ಎಂದು  ಅರ್ಥವಲ್ಲ. ಯಾವ ಸಾಹಿತಿಯೇ ಆಗಲಿ “ರಾಷ್ಟ್ರೀಯತೆ” ಅಥವಾ “ಉಪರಾಷ್ಟ್ರೀಯತೆ”ಯನ್ನು ಪ್ರಕಟಿಸಲೆಂದೇ ಸಾಹಿತ್ಯ ನಿರ್ಮಿತಿಗೆ ತೊಡಗುವುದಿಲ್ಲ; ತೀರಾ ವ್ಯಕ್ತಿವಿಶಿಷ್ಟವಾದ ಲೇಖಕನಿಗೆ ಈ ಎರಡೂ ಲಕ್ಷ್ಯದಲ್ಲಿರುವುದಿಲ್ಲ. ನವ್ಯ ಸಾಹಿತ್ಯ ಹಿಂದಿನ ಸಾಹಿತ್ಯ ಪರಂಪರೆಗಿಂತ ತೀರಾ ವ್ಯಕ್ತಿ ವಿಶಿಷ್ಟವಾದದ್ದರಿಂದ, ಬರೆಯುವ ಸಾಹಿತಿಗೆ ಕೇವಲ ಬದುಕು ಮುಖ್ಯವಾಗುತ್ತದೆಯೇ ಹೊರತು,  ಇದು  “ರಾಷ್ಟ್ರೀಯತೆ” ಇದು “ಉಪರಾಷ್ಟ್ರೀಯ” ಎನ್ನುವುದು ಮುಖ್ಯವಾಗುವುದಿಲ್ಲ. ಆದರೆ ನವ್ಯ ಸಾಹಿತಿಗಳಿಗೆ ತಮ್ಮ ಉಪರಾಷ್ಟ್ರೀಯ ಸಾಹಿತ್ಯಕ ಪರಂಪರೆಯ ಹಿನ್ನೆಲೆ ಇದ್ದಿದ್ದರೆ, ಈ ಸಾಹಿತ್ಯ ನಿಜವಾಗಿಯೂ, ನಾವೀನ್ಯತೆಯ ಜತೆಗೆ ಇನ್ನಷ್ಟು ಗಟ್ಟಿಮುಟ್ಟಾಗಬಹುದಾಗಿತ್ತಲ್ಲ ಎಂದು ಯಾರಿಗಾದರೂ ಅನಿಸಿದರೆ ಅದು ತಪ್ಪಲ್ಲ.

ನವೋದಯ-೧೯೭೬


[1] ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯ ಕುಗ್ಗದೆಯೆ ನುಗ್ಗಿ ನಡೆ ಮುಂದೆ                      -ಕುವೆಂಪು
‘ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?
ಗಂಡುಸಾದರೆ ನಿನ್ನ ಬಲಿಗೊಡುವೆಯೇನು?’                        -ಬೇಂದ್ರೆ
‘ನೆನೆನೆನೆ ಆ ದಿನವ, ಓ ಭಾರತ ಬಾಂಧವ
ನೆನೆನೆನೆ ಆ ದಿನವ’                                                                         -ಅಡಿಗ
ಕಟ್ಟಿಮನಿಯವರ ‘ಸ್ವಾತಂತ್ರ್ಯದೆಡೆಗೆ’; ಅ. ನ. ಕೃ. ಅವರ ‘ಅಮರ ಆಗಸ್ಟ್’
ಮಿರ್ಜಿಯವರ ‘ರಾಷ್ಟ್ರ ಪುರುಷ’-ಇಂಥ ಕಾದಂಬರಿಗಳು

[2] ಈ ಬಗೆಯ ‘ಉಪರಾಷ್ಟ್ರೀಯತೆ’ಯನ್ನು ಭಾರತ ಹಾಗೂ ರಷ್ಯಾದಂಥ ರಾಷ್ಟ್ರಗಳಲ್ಲಿನ ವಿವಿಧ ದೇಶಭಾಷಾ ಸಾಹಿತ್ಯಾಭಿವ್ಯಕ್ತಿಯಲ್ಲಿ ಗುರುತಿಸಬಹುದು. ಜರ್ಮನಿ, ಫ್ರಾನ್ಸ್, ಜಪಾನ್ ಇಂಥ ದೇಶದ ಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ.

[3] ರಾಮಾಯಣ ಮಹಾಭಾರತ ಪುರಾಣೇತಿಹಾಸಗಳು ಭಾರತದ ಬಹುಪಾಲು ದೇಶ ಭಾಷಾ ಸಾಹಿತ್ಯದ ಮೂಲವಸ್ತುಗಳಾಗಿರುವುದರಿಂದ, ಆ ಪುರಾಣೇತಿಹಾಸಗಳು ಮೂಲತಃ ವೈದಿಕ ಸಂಸ್ಕೃತಿಯ ಗಣಿಗಳಾಗಿರುವುದರಿಂದ ಎಲ್ಲ ದೇಶಾಭಾಷಾಭಿವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಅವುಗಳನ್ನು ಪುನರಾವರ್ತಿಸಿವೆಯೇ ಹೊರತು, ಹೊಸತೇನನ್ನೂ ಹೇಳಿಲ್ಲ; ಹೀಗಾಗಿ ರಾಮಾಯಣ ಮಹಾಭಾರತಗಳ ನಂತರ ಈ ರಾಷ್ಟ್ರದಲ್ಲಿ ಅಂಥ ಸೃಜನಾತ್ಮಕವಾದ ಕಾರ್ಯವೇನೂ ನಡೆದಿಲ್ಲ-ಎಂದು ಕೆಲವರ ಅಭಿಪ್ರಾಯ. ಆದರೆ ಇದು ದಾರಿ ತಪ್ಪಿಸುವ ಮಾತಾಗಿದೆ. ರಾಮಾಯಣ ಮಹಾಭಾರತಗಳು ಇಡೀ ಭಾರತದ ಎಲ್ಲ ಸಾಹಿತ್ಯಕ್ಕೆ ಮೂಲವಾಗಿವೆ ಎನ್ನುವುದು, ಅವುಗಳ ವ್ಯಾಪಕತ್ವಕ್ಕೂ ಮತ್ತು ಸತ್ವಕ್ಕೂ ಸಾಕ್ಷಿಯಾಗಿವೆ. ಅವುಗಳನ್ನು ಮೀರಿಸುವ ಕೃತಿಗಳು ಭಾರತದಲ್ಲೇ ಏಕೆ, ಜಗತ್ತಿನಲ್ಲೇ ಇಲ್ಲ. ಆದರೆ ಈ ದೇಶದಲ್ಲಿ, ಆ ಕೃತಿಗಳ ನಂತರ ಅಂಥ ಸೃಜನಾತ್ಮಕವಾದದ್ದೇನೂ ನಡೆದೇ ಇಲ್ಲ ಎಂಬ ಮಾತು ನಿಜವಲ್ಲ;  ಆ ಮಟ್ಟದಲ್ಲಿ ಸೃಜನಾತ್ಮಕತೆ ಅಭಿವ್ಯಕ್ತವಾಗಿಲ್ಲ ಎಂದು ಬೇಕಾದರೆ ಒಪ್ಪಬಹುದು. ಈ ವಸ್ತುಗಳನ್ನು ತೆಗೆದುಕೊಂಡರೂ, ನಿಜವಾದ ಕವಿಗಳು ಅವುಗಳ ‘ಪುನರ್ಭವ’ವನ್ನು ಆಯಾ ಭಾಷೆಯಲ್ಲಿ ನೀಡಿದ್ದಾರೆ. ಹಾಗೆ ವೈದಿಕ ಸಂಸ್ಕೃತಿಗೆ ಪ್ರತಿಭಟನೆಯಾಗಿ ಹುಟ್ಟಿಕೊಂಡ, ಬೌದ್ಧ, ಜೈನ, ವೀರಶೈವ ಸಾಹಿತ್ಯಾಭಿವ್ಯಕ್ತಿಗಳೂ ಈ ರಾಷ್ಟ್ರದಲ್ಲಿವೆ ಎಂಬುದನ್ನು ಮರೆಯಬಾರದು.

ಕನ್ನಡ ಸಾಹಿತ್ಯವನ್ನು ಐತಿಹಾಸಿಕವಾಗಿ ಪರಿಶೀಲಿಸಿದರೆ ಗೊತ್ತಾಗುತ್ತದೆ. ಈ ಸಾಹಿತ್ಯದ ಆರಂಭವೇ ವೈದಿಕ ಸಂಸ್ಕೃತಿಯ ಬಗ್ಗೆ ಪ್ರತಿಭಟನೆ ತೋರಿದ ಜೈನಧರ್ಮದ ಕವಿಗಳಿಂದ ಎನ್ನುವುದು. ಇದೇ ಮನೋಧರ್ಮ ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಮುಂದುವರಿಯಿತು. ರಾಮಾಯಣ ಮಹಾಭಾರತದಂಥ ವಸ್ತುಗಳನ್ನು ಜೈನಕವಿಗಳು ತೆಗೆದುಕೊಂಡರೂ, ಅವುಗಳನ್ನು ಅವರು ವೈದಿಕ ಪರಂಪರೆಯ ರೀತಿಯಲ್ಲಿ ಹೇಳಲಿಲ್ಲ; ವೀರಶೈವರಂತೂ ರಾಮಾಯಣ ಮಹಾಭಾರತಗಳನ್ನು ತಮ್ಮ ಕಾವ್ಯದ ವಸ್ತುಗಳನ್ನಾಗಿ ತೆಗೆದುಕೊಳ್ಳಲೇ ಇಲ್ಲ; ನಿಜವಾದ ವೈದಿಕ ಸಾಹಿತ್ಯ ಆರಂಭವಾದದ್ದು ಹದಿನೈದನೆ ಶತಮಾನದ ವೇಳೆಗೆ, ಕುಮಾರವ್ಯಾಸನಿಂದ. ಅಲ್ಲದೆ ವೈದಿಕ ಸಂಸ್ಕೃತಿಯಿಂದ ಭಿನ್ನವಾದ ಸಾಂಸ್ಕೃತಿಕ ಪರಂಪರೆಗಳೂ ಈ ದೇಶದಲ್ಲಿವೆ. ಆದ್ದರಿಂದ ಈ ರಾಷ್ಟ್ರದುದ್ದಕ್ಕೂ ಅಭಿವ್ಯಕ್ತವಾಗಿರುವುದು ಕೇವಲ ವೈದಿಕ ಸಂಸ್ಕೃತಿಯೆ ಎಂದು ಭಾವಿಸುವುದೂ ತಪ್ಪಾಗುತ್ತದೆ.

[4] “the historical sense involves a perception, not only of the pastness of the past, but of its presence; the historical sense compels a man to write not merely with his own generation in his bones, but with a feeling that the whole of the literature of Europe from Homer and within it the whole of the literature of his own country has a simultaneous existence and composes a simultaneous order. this historical sense, which is a sense if the timeless as well as of the temporal together is what makes a writer traditional.  And it is at the same time what makes a writer most acutely conscious of his place in time, of his own contemporaneity”.

T. S. Eillot : Selected Prose-P. 23.