ಈ ಕಲಿಯುಗದೊಳಗಿನ ಕತಿs ಕೇಳ್ರಿ ಹಿರಿಯರಾ | ಸಣ್ಣ ದೊಡ್ಡವರಾ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕೀಟ ಮಾಸ್ತsರಾ ಹೋಜೀಜೀಜೀ || ಪ ||
ತಾಯಿ ತಂದಿ ಕರೆದು ಹೇಳ್ತಾರ ತನ್ನ ಮಗನಿsಗಿ | ಹೋಗೋ ಊರಿಗಿ |
ಕರಕೊಂಡು ಬಾರೊ ನಿನ್ನ ಮಡದಿ ಕಾಶಿಬಾಯಿsಗಿ | ಹೋಗೊ ಊರಿಗಿ |
ಕರಕೊಂಡು ಬಾರೊ ನಿನ್ನ ಮಡದಿ ಕಾಶಿಬಾಯಿsಗಿ ಹೋಜೀಜೀಜೀ ||

ತಾಯಿ ತಂದಿ ಮಾತ ಕೇಳಿ ಮಗಾ ಹೊಂಟ ಲಗಿಬಿsಗಿ | ಅತ್ತಿ ಮಾವನ ಮನಿಗಿ |
ಅಳಿಯ ಬಂದಾನಂತ ಬಿಸಿನೀರ ಕೊಟ್ಟರೊ ಕಾಲಿsಗಿ ಹೋ ಜೀಜೀಜೀ ||
ಸತಿಪತಿ ಮಾತಾಡ್ತಾರ ಉಂಡ ಮಂಚದ ಮ್ಯಾಲ ಮಲಗಿ | ಎದ್ದರೊ ಬೆಳಗಾಗಿ |
ಮುಂಜಾನೆದ್ದು ಕೇಳ್ತಾನ ಕಳಸರಿ ನನ್ನ ಸತಿಯಳಿsಗಿ ಹೋ ಜೀಜೀಜೀ ||
ನಾವು ಕಳಸುವಿಲ್ಲಾ ಬಿಸಳ ಭಾಳ ಮಗಳಿsಗಿ | ಸಣ್ಣ ಶಿಸುವಿsಗಿ |
ಸೀರಿ ಕುಪ್ಪಸ ಗಳಿಗಿ ಇನ್ನುs ತಂದಿಲ್ಲೊ ಮಗಳಿsಗಿ ಹೋಜೀಜೀಜೀ ||

ಇಷ್ಟು ಕೇಳಿ ಅಳಿಯ ಖಿನ್ನಾಗಿ |
ಎತ್ತಿಕೊಂಡ ತನ್ನ ಪುತ್ರನಿಗಿ |
ಮುದ್ದಾಡಿ ಅಂತಾನ ಮಗನಿsಗಿ |
ನಿನ್ನ ಮಾರಿ ಎರವ ಆತಲ್ಲೊ ಮಗನೆ ಇಂದಿsಗಿ ಹೋಜೀಜೀಜೀ ||
ನೀ ಬಾರೊ ನನ್ನ ಊರಿsಗಿ |
ನಾ ಬರುವದಿಲ್ಲೊ ತಿರಿತಿರಿಗಿ |
ನಿನ್ನ ಚಿಂತಿ ಆಯಿ-ಮುತ್ತ್ಯಾನಿಗಿ |
ನಿನ್ನ ಮುಖಾ ನೋಡುsದಕಾಗಿ ತಪಾ ಕುಂತಾರೊ ನಿನಗಾsಗಿ ಹೋ ಜೀಜೀಜೀ ||
ಕರದ್ಹೇಳತಾನ ಸತಿಯಳಿಗಿ |
ಬಲು ಜ್ವಾsಕಿ ನನ್ನ ಪುತ್ರನಿಗಿ |
ಸರ್ವರೀತಿಲಿಂದ ಸರಿಯಾಗಿ |
ಸಂರಕ್ಷಣ ಮಾಡಿ ಕರಕೊಂಡು ಬಾರ ಕಂದನಿsಗಿ ಹೋಜೀಜೀಜೀ ||
ಅತ್ತಿ ಹೇಳತಾಳ ಅಳಿಯನಿಗಿ |
ಸಿಟ್ಟ ಹಚಗೋಬ್ಯಾಡ್ರಿ ಮನಸಿsಗಿ |
ಉಂಡು ಹೋಗ್ರಿ ಇನ್ನೊಂದು ತಾಸಿsಗಿ |
ಉಣಲಾರ‍್ದೆ ಹೊಂಟಾನೋ ಮಡದಿ ಬಿದ್ದಾಳೊ ಕಾಲಿsಗಿ ಹೋಜೀಜೀಜೀ ||
ಎಷ್ಟು ಹೇಳಿದರ ಕೇಳಲಿಲ್ಲ ಶಟಗೊಂಡು ಹೊಂಟ ಭರರsರ | ಮಾಡಿ ಅವಸರ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕೀಟ ಮಾಸ್ತsರಾ ಹೋಜೀಜೀಜೀ || ೧ ||

ಟೇಶನಕ ಹೋಗುದರೊಳಗೆ ಗಾಡಿ ಬಂದು ಹೋಗಿsತ್ತ | ಮಾಡಲಿಲ್ಲ ಸುಸ್ತ |
ಕಳವಳಿಸುತ ಊರಿಗೆ ಹೋಗ್ಯಾನ ಗಾಡ್ಯಾಗ ಕುಂsತ ಹೋಜೀಜೀಜೀ ||
ಗಂಡ ಹೋದ ಮ್ಯಾಲ ಕಾಶಿಬಾಯಿ ಗೇನಸತಾಳ ನಿಂತ | ಜನ್ಮ ಸುಡಲೆಂತ |
ಹವಣಿsಕಿ ಮಾಡತಾಳ ತಾನು ಹೋಗಬೇಕಂತ ಹೋಜೀಜೀಜೀ ||
ತಾಯಿ ತಂದಿನ ಕೇಳ್ತಾಳ ಮನಸಿನೊಳಗ ಮರುಗುsತ | ಕೇಳ್ರಿ ನನ್ನ ಮಾತ |
ನನ್ನ ಗಂಡನ ಕೂಡ ನಾ ಹೋಗತೀನಿ ಈ ಹೊತ್ತs ಹೋಜೀಜೀಜೀ ||
ಎತ್ತಿಗೊಂಡಾಳ ಕೂಸಿನ ಬಗಲಾಗ ಬಂಗಾರದಂಗ | ಹಂಗ ಅತಗೊsತ |
ಉಣಲಾರ‍್ದೆ ಹೊಂಟಾಳೊ ಗಂಡನ ಮ್ಯಾಲ ಒಂದೊತ್ತ ಹೋಜೀಜೀಜೀ ||

ತಾಯಿ ತಂದಿ ಹೇಳತಾರಲ್ಲ |
ಸಣ್ಣ ಶಾವಿಗಿ ಸಕ್ಕರಿ ಹಾಲ |
ಉಂಡುಟ್ಟ ಹೋಗ ಕುಶಿಯಾಲ |
ನನ್ನ ಗಂಡ ಉಂಡಿಲ್ಲsನಾ ಹ್ಯಾಂಗ ಉಣಲಿ ಉಣ್ಣುದಿಲ್ಲಾ ಹೋಜೀಜೀಜೀ ||
ದಾಟಿ ಬರುವಾಗ ತಲಬಾಗಿಲ |
ಎಡಗಾಲಿಗಿ ಬಡಿತೊ ಹೊಸ್ತಲ |
ಅಪಶಕುನ ಆದಾವ ಸಾಮೀಲ |
ಕಟಕ ಇದಿರಿಗಿ ಬಂದ ತಕ್ಕೊಂಡು ಕತ್ತಿ ಕುಡಗೋsಲ ಹೋಜೀಜೀಜೀ ||
ಇಷ್ಟು ಭಯಾ ಆದರು ಬಿಡಲಿಲ್ಲ |
ತನ್ನ ಪುರುಷ ಮ್ಯಾಲ ಹಂಬಲ |
ನಿಶೆsದಾಗ ಏರಿದಂಗ ಅಮಲ |
ಯಾವ ಮಾತಿನ ಖಬರಿಲ್ಲ ಲಕ್ಷ್ಯ ಗಂಡನs ಮ್ಯಾಲs ಹೋಜೀಜೀಜೀ ||
ಕೆಟ್ಟ ಮಧ್ಯಾಣ ಬ್ಯಾಸಗಿ ಬಿಸಲ |
ಹುಟ್ಟಾ ಬರಿಗಾಲಿಲೆ ನಡದಿಲ್ಲ |
ಲಿಂಬಿ ಹಣ್ಣಿನಂಥ ಮೈದೊಗಲ |
ಕಾಲ ಸುಟ್ಟ ಗುರುಳಿ ಎದ್ದು ಉರಿಯತಾವ ಅಂಗಾsಲ ಹೋಜೀಜೀಜೀ ||
ಸೀರಿ ಕುಪ್ಪಸ ತಪ್ಪನೆ ತೊಯ್ದು ಕೊಳ್ಳsನ ಬೆವsರ | ಹರಿಯತಾವ ನೀರ |
ಕಡ್ಲಿಮಟ್ಟಿs ಟೇಶನದಾಗಿ ಇದ್ದ ತಿಕಿಟ ಮಾಸ್ತsರಾ ಹೋಜೀಜೀಜೀ || ೨ ||

ತನ್ನ ಮನದಾಗ ತಾನೆ ಅಂತಾದ ಬಗಲಾನ ಕೂಸs | ಎಲೋ ಜಗದೀಶ |
ನಮ್ಮವ್ವ ಎಲ್ಲಿಗೆ ಕರೆದೊಯ್ಯುತಾಳ ಇಂದಿನ ದಿವsಸ ಹೋಜೀಜೀಜೀ ||
ಲಗುಹೋಗಿ ಕೂಡಬೇಕಂತ ಮಾಡ್ಯಾಳ ದಾರಿs ಅವಸರ | ಗಂಡನ ಮ್ಯಾಲ ಮನಸ |
ಮಲ್ಲಿಗ್ಹೂವಿನಂತ ಮುಖಬಾಡಿ ಉಂಡಿಲ್ಲ ಉಪವಾsಸ ಹೋಜೀಜೀಜೀ ||
ಟೇಶನಕ ಹೋಗುದರೊಳಗ ಹೊತ್ತ ಉಳಿದಿತ್ತ ಒಂದತಾಸ | ಆದಿsತ ಮೋಸ |
ಗಂಡ ಗಾಡ್ಯಾಗ ಕುಂತು ಮುಂದ ಹೋಗಿದ್ದ ರಾಜ ಹಂಸ ಹೋಜೀಜೀಜೀ ||
ಅಯ್ಯಯ್ಯೊ ಶಿವಶಿವಾ ಹ್ಯಾಂಗ ಮಾಡಬೇಕೊ ವಾಸs | ಮಾಡತಾಳ ಧ್ಯಾನ |
ಮನಿಮಾರ ಇಲ್ಲದೆ ಎಲ್ಲಿ ಮಾಡಬೇಕೊ ವಾsಸ ಹೋಜೀಜೀಜೀ ||

ಒಬ್ಬಾಕಿ ಕುಂತಾಳೊ ನಿರಾಹಾರ |
ಸುತ್ತಮುತ್ತ ಸುಳುವ ಇಲ್ಲ ಯಾರ |
ಆಗ ಬಂದ ತಿಕಿಟ ಮಾಸ್ತsರ |
ಕಾಶಿಬಾಯಿ ರೂಪನೋಡಿ ತೆಲಗಿ ಏರಿತೊ ಕಾಮಪೂರಾ ಹೋ ಜೀಜೀಜೀ ||
ಬಂದ ಕೇಳ್ತಾನ ನಿಂದ ಯಾವೂರ |
ಏನೈತಿ ನಿನ್ನ ಹೆಸsರಾ |
ಏಸು ಮಂದಿ ನಿನಗ ಪುತ್ರರಾ |
ನಿನ್ನ ಅತ್ತಿ ಮಾವನ ಮನಿ ಊರ ಹೇಳ ನಿರ್ಧಾರs ಹೋಜೀಜೀಜೀ ||
ಮಾಸ್ತರಗ ಹೇಳತಾಳ ಮಜಕೂರ |
ಏನು ತೊಗೊಂಡು ಸುಡತಿ ಮನಿಮಾರ |
ಅತ್ತಿ ಮಾವನ ಮನಿಯು ಶಿವಪೂರ |
ನನ್ನ ಗಂಡನ ನನಗ ದಾರ‍್ಯಾಗಾಯ್ತೊ ಹೇರಫೇರಾ ಹೋ ಜೀಜೀಜೀ ||
ಕರಿsಬಂದ ಗಂಡನ ಕೂಡ ಕಳಸಲಿಲ್ಲ ತವರವsರ | ಮಾಡಿ ತಕರಾರ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರ ಹೋ ಜೀಜೀಜೀ || ೩ ||

ಇಷ್ಟು ಆಗುದರೊಳಗ ತಾಯಿ ಹೊಟ್ಟ್ಯಾಗ ಸೂರ‍್ಯಾ ಹೋದ | ಬಿದ್ದಿತೋ ಗಾಢ |
ಆ ಕಾಶಿಬಾಯಿಗೆ ಮಾಸ್ತರ ಕೊಡsತಾನ ಬೋಧs ಹೋ ಜೀಜೀಜೀ ||
ಈ ಟೇಶನದೊಳಗ ಹುಲಿಕರಡಿ ತೋಳಿನ ಬಾಧಾ | ಮಾಡತಾವ ಶಬ್ದ |
ಹೊಸ ಮನಶ್ಯಾರ ನಾತಕ ಬರತಾವ ಗಿಡಗಂಟಿ ಹಿಡsದ ಹೋ ಜೀಜೀಜೀ
ಇಷ್ಟು ಕೇಳಿ ಕಾಶಿಬಾಯಿ ಭಯಪಟ್ಟು ಎದಿ ಒಡsದ | ನಿಂತಾಳ ಹುಚ್ಚ ಹಿಡದ |
ಹ್ಯಾಂಗ ಮಾಡಲಿ ಶಿವನೆ ಇದರಾಗುಳಿಯುsದ ಆಗsದ ಹೋ ಜೀಜೀಜೀ ||
ಮಾಸ್ತರ ಅಂತಾನ ದೂರಲಿಂದ ದಾರಿ ನಡsದ | ಮಲಗತಿsದಿ ದಣದ |
ನಾ ತಿಕೀಟ ಕೊಂಡೋಮುಂದ ಯಾರ ಎಬ್ಬಿಸತಾರ ಬಂದs ಹೋಜೀಜೀಜೀ ||
ಈ ಟೇಶನ ಕಾರಭಾರ ನಂದ |
ಇಲ್ಲಿ ಅಂಜಿಕಿಲ್ಲ ಯಾವಂದ |
ನಿನ್ನ ಯಾರ ಕೇಳತಾರ ಬಂದ |
ಇಷ್ಟ ಹೇಳಿ ಮಲಗಿಸಿ ತಿಕೀಟ ಖೋಲಿಗಿ ಬಂದs ಹೋಜೀಜೀಜೀ ||

ಮಾಸ್ತರ ಅಂತಾನ ಖುಷಿಲಿಂದ |
ಇಂಥ ಹೆಣ್ಣ ಕಂಡಿಲ್ಲೊ ಎಂದೆಂದ |
ಪರಮಾತ್ಮ ನನ್ನ ದsಸಿಂದ |
ಬೇಕಂತ ನನಗಾಗಿ ಕಳಿಸ್ಯಾನ ಕೈಲಾಸದಿಂದs ಹೋಜೀಜೀಜೀ ||
ಕಾಶಿಬಾಯಿ ಅಂತಾಳ ಮನನೊಂದ |
ಇವ ಏನ ಮಾಡತಾನ ಮುಂದ |
ನನ್ನ ರೂಪಕ ಮರುಳಾಗಿ ಬಂದ |
ಪರಾಮರಿಕಿ ಮಾಡುದರೊಳಗ ಗುಣಾ ತಿಳಿsತ ದುಷ್ಟಂತ ಹೋಜೀಜೀಜೀ ||
ಪರಮಾತ್ಮ ಗಂತಾಳ ಹ್ಯಾಂಗ ಮಾಡತಿsದಿ ಪಾರಾ | ಸ್ವಾಮಿ ಶಂಕರಾ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋಜೀಜೀಜೀ || ೪ ||

ಗಂಡನ ಸ್ಮರಣೆಮಾಡಿ ಒಂಟಗಾಲಿನ ಮ್ಯಾಲ ನಿಂತ | ಗೆಲಿಸೊ ನನ್ನ ಪಂತ |
ಹುಲಿ ಬಾಯಾಗ ಸಿಕ್ಕಿನಿ ಬಿಡಸವರಿಲ್ಲೊ ಈ ಹೊತ್ತ ಹೋಜೀಜೀಜೀ ||
ಅತ್ತಿ ಮಾವನ ನೆನಸ್ತಾಳ ದೊಡ್ಡವರಿಲ್ಲ ನಿಮಕಿಂತ | ಜಲ್ಮದ (ಸೊತ್ತ) |
ಪತಿವ್ರತಾ ಇಂದಿಗಿ ಹಾನಿಯಾಗುವದು ಬಂತ ಹೋಜೀಜೀಜೀ ||
ಬಾಗಿಲ ತೆರದ ಹೊರಗ ಬಂದೇನಂದ್ರ ಕೀಲಿ ಮಜಬೂತ | ಕಿಡಿಕಿ ಬಂದೋಬಸ್ತ |
ಇವನ ತಾಬೇದಾಗ ಆಗೀನಿ ಕಾಯೊ ಭಗವಂತs ಹೋಜೀಜೀಜೀ ||
ಇಷ್ಟ ಆಗುದರೊಳಗ ಗಾಡಿ ಬಂದು ಹೋಗಿತ್ತ | ಮಾಡಲಿಲ್ಲ ಸುಸ್ತ |
ಯಾವಾಗ ನೋಡೆನಂತ ಕಾಶಿಬಾಯಿ ಮ್ಯಾಲ ಅವನ ಚಿತ್ತs ಹೋಜೀಜೀಜೀ ||
ಅಲ್ಲಿsದಲ್ಲೆ ಇಟ್ಟ ಮೇಜಿನ ಮ್ಯಾಲ |
ರೊಕ್ಕ ರೂಪಾಯಿ ಗಜನಿಯ ಚೀಲ |
ಸಂದುಕದ ಬಾಯಿ ಮುಚ್ಚಿಲ್ಲ |
ದಪ್ತರ ಗಂಟ ಕಾಗದ ಪತ್ರ ಸುತ್ತಿ ಇಡಲಿಲ್ಲ ಹೋಜೀಜೀಜೀ ||
ಕಾಶಿಬಾಯಿ ಮ್ಯಾಲ ಅವನ ಖ್ಯಾಲ |
ನೋಡಬೇಕು ಅಂಬುs ಹಂಬಲ |
ಜೀವದಾಗ ಸಮಾಧಾನ ಇಲ್ಲ |
ಮನ್ಮಥ ಬಾಣ ಸಂದಿ ಸಂದಿಗೆ ಸೇರಿsತಲ್ಲ ಹೋಜೀಜೀಜೀ ||

ಹಾತೊರೆದ ತಡಾ ಮಾಡಲಿಲ್ಲ |
ಬಂದ ತೆರೆದ ಕೋಲಿ ಬಾಗಿಲ |
ಕಾಶಿಬಾಯಿ ಮನಸಿನಾಗ ಜಲ್ಲ |
ಅಂತಾಳ ಎನ್ನ ಪತಿವ್ರತಾsಕ ಬಂದಿತ ಉರsಲ ಹೋ ಜೀಜೀಜೀ ||
ಮಾಸ್ತರಗ ಹೇಳತಾಳ ಅಕಲ |
ಜರಾ ಸಮಾಧಾನ್ರಿ ಗುಣಪಾಲ |
ನನಗ ತೀರಿಲ್ಲ ನಿದ್ದಿಯ ಅಮಲ |
ಕಾಲ್ಮಡದ ಬರತೀನಿ ಕೂಸಿಗಿ ಹೊಚ್ಚರಿ ಶಾsಲಾ ಹೋ ಜೀಜೀಜೀ ||
ಕಾಲ್ಮಡಿಲಾಕ ಬರುವಾಗ ಒಳಗ ಇದ್ದನೋ ಚೋರಾ | ಎಂಥ ಪಾಮರ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋ ಜೀಜೀಜೀ || ೫ ||

ಕಾಲ್ಮಡಿಲಾಕ ಬರುವಾಗ ಜಗ್ಗಿ ಖೋಲಿ ಬಾಗಿಲಕ | ಹಾಕಿದಾಳು ಚಿಲಕ |
ಮಾಸ್ತsರ ಅಂತಾನ ಅವಧಿ ಬಂತೋ ಜಲ್ಮsಕ ಹೋ ಜೀಜೀಜೀ ||
ಬಾಗಿಲದ್ಹೊರಗ ಬಂದು ನಿಂತಿsನಿ ಅಂಜುsದಿನ್ಯಾಕ | ಆದೆ ಕಡಿಯಾಕ |
ಮಾಸ್ತsರ ಅಂತಾನ ಕಾಶಿಬಾಯಿ ಬರಲಿಲ್ಲಾ ಕsಹೋ ಜೀಜೀಜೀ ||
ಕುಂತsವ ಎದ್ದು ಬಂದ ನಿಂತ ಬಾಗಿಲದ ಹಂತ್ಯಾಕ | ತಪ್ಪಿತೋ ದಿಕ್ಕ |
ಕೈಮುಗಿದು ಕರವುತಾನ ಬಾರ ನನ್ನ ಅನುಕೂಲಕ ಹೋ ಜೀಜೀಜೀ ||
ತೆಲಿಗೇರಿದ ಮನ್ಮಥ ಇಳಿದು ಬಂತೊ ಕೆಳಿಯಾsಕ | ಆದಿsತೋ ತರ್ಕ |
ಅವನ ಪಾಲಿಗಿ ಮುಳುಗಿದಂಗ ಆದಿsತ ಮೂರೂ ಲೋಕs ಹೋ ಜೀಜೀಜೀ ||
ಕಿಡಿಕ್ಯಾಗ ನೋಡತಾನ ಹಣಕಿ |
ನೋಡಲಾರ‍್ದೆ ಆsಕಿ ಚೆಲುವಿsಕಿ |
ಮನದಾಗ ಮಾಡತಾನ ಹೂಣಿಕಿ |
ಏನ ಬೇಡತೀದಿ ಬೇಡs ಕೊಡತೀನಿ ರೋಕಾರೋಕಿ ಹೋ ಜೀಜೀಜೀ ||

ಮುಂದ ಒಗದಾನ ಬಂಗಾರ ವಂಕಿ |
ತಾ ಗಳಸಿದ್ದು ಇಡಲಿಲ್ಲ ಬಾಕಿ |
ಅಷ್ಟು ಇಷ್ಟು ಅನ್ನಲಿಲ್ಲ ಎಣಿಕೆ |
ಕಿಡಿಕ್ಯಾಗ ಹಾsಸಿ ಎಲ್ಲಾ ಒಗದ ಉಳಿಯಲಿಲ್ಲ ಬೋಕಿ ಹೋ ಜೀಜೀಜೀ ||
ಇದ ಅಲ್ಲದೆ ದೌತಿ ಲೆಕ್ಕಣಿಕಿ |
ನಿನಗ ಬರದ ಕುಡತೀನಿ ಮಾಸ್ತರಿಕಿ |
ತರಿಸುವೆ ಮೇಣೆ ಪಲ್ಲಕ್ಕಿ |
ನನಗ ಬೇಕಾಗಿಲ್ಲ ಅದರಾಗ ನೀನೆ ಕೂಡಕ್ಕಿs ಹೋ ಜೀಜೀಜೀ ||
ಕಿಡಿಕ್ಯಾಗ ಹಾsಸಿ ಎಲ್ಲಾ ಒಗದ ಉಳಿಯಲಿಲ್ಲ ಚೂರಾ | ಬೆಳ್ಳಿ ಬಂಗಾರ |
ಕಡ್ಲಿ ಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋ ಜೀಜೀಜೀ || ೬ ||

ಕಾಶಿಬಾಯಿ ಅಂತಾಳ ಏನ ಮಾತನಾಡಿದೆಲ್ಲೊ ನನಗ | ಹಳ್ಳ ಕಡದಂಗ |
ಪತಿವ್ರತಾ ಗರತಿ ನಾನು ಮಾಡುದಿಲ್ಲೊ ಗಂಡನ ಮ್ಯಾಗ ಹೋ ಜೀಜೀಜೀ ||
ಏನಂತ ಬ್ರಹ್ಮ ಬರದಾನೊ ನಿನ್ನ ಫಣಿಯೊಳಗ | ತಿಳಿಲಿಲ್ಲೇನೊ ನಿನಗ |
ಏನು ಜವಾಬ ಕೊಡತಿsದಿ ನೀನು ನಾಳೆ ಮಾದೇವಗ ಹೋ ಜೀಜೀಜೀ ||
ನಿನ್ನ ಬೆಳ್ಳಿಬಂಗಾರದಷ್ಟು ಆಳ ಮಕ್ಕಳ ಮೈಮ್ಯಾಗ | ನನ್ನ ಮನಿಯಾಗ |
ನನ್ನ ಗಂಡ ಉಣ್ಣುದುs ಬಂಗಾರ ಗಂಗಾಳದಾsಗ ಹೋ ಜೀಜೀಜೀ ||
ಕಿಡಿಕ್ಯಾಗ ಹಾsಸಿ ಉಗಳ್ಯಾಳ ಮಾರಿಯ ಮ್ಯಾಗ | ಮಳ್ಳ ಮಾಸ್ತರಗ |
ಬದಕಿದ್ರ ನಾಳೆ ದಾನ ಧರ್ಮ ಮಾಡೊ ಬಲ್ಲಂಗs ಹೋ ಜೀಜೀಜೀ ||
ಇಷ್ಟು ಕೇಳಿ ಮಾಸ್ತರ ಆದ ಖಿನ್ನ |
ಬದಲಾದಿತ ಮಾರಿಯ ಚಿನ್ನs |
ಅಪ್ಪಳಿಸಿ ಭೂಮಿ ಬಡಿದ್ಯಾನ |
ನಿನ್ನ ಬಿಟ್ಟರ ನಾ ಬದಲುತ್ತರದವ ಅಂತಾನs ಹೋ ಜೀಜೀಜೀ ||
ಎಡಬಲಕ ಹೊರಳಿ ನೋಡ್ಯಾನ |
ಮಲಗಿsದ ಕೂಸಿನ ಎಬ್ಬಿಸ್ಯಾನ |
ಮಲ್ಲಿಗ್ಹೂವಿನಂಥ ಶಿಶುವಿsನ |
ಕೈಯಾಗ ಹಿಡದ ಈಗ ಕೊಲ್ಲತೀನಿ ಅಂತಾsನ ಹೋ ಜೀಜೀಜೀ ||

ಈಗ ಬಂದರ ಬಿಡತೀನ ನಾನs |
ಬರದಿದ್ರ ಹೊಡಿಯತೀನಿ ಪ್ರಾಣ |
ನನ್ನ ಕೈಯಾಗ ಕೂಸಿನ ಮರಣ |
ಇದು ಸುಳ್ಳ ಅಲ್ಲ ಖರೆ ನಿನ್ನ ಗಂಡನ ಪ್ರಮಾsಣ ಹೋ ಜೀಜೀಜೀ ||
ಕಾಶಿಬಾಯಿ ಅಂತಾಳ ಕೇಳ ಶ್ವಾನ |
ಬದಕಿರಲಿ ನನ್ನ ಒಗತಾನ |
ಇಂಥಾವ ಏಸೊ ಮಂದಿ ಮಕ್ಕಳನ |
ನನ್ನ ಗಂಡಗಾಸೆ ಇದ್ರ ಮುಂದ ಎತ್ತಿ ಇಳಿಸೇನ ಹೋ ಜೀಜೀಜೀ ||
ಇದು ಒಂದು ಸುತ್ತು ಹೋಗಲಿ ನನ್ನ ಪುತ್ತsರ | ಇಲ್ಲ ದರಕಾರ ||
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋ ಜೀಜೀಜೀ || ೭ ||

ಮಾಸ್ತರಗ ಕರುಣ ಬರಲಿಲ್ಲ ಕನಕದಂಥ ಪಿಂಡ | ಕಾಲ ಹಿಡಕೊಂಡ |
ಹರತುಳ್ಳ ಚಾಕುದಲೆ ಕೂಸಿನ ಹಸ್ತ ಕೊಯ್ಕೊಂಡ ಹೋ ಜೀಜೀಜೀ ||
ಕಾಶಿಬಾಯಿ ಅಂತಾಳ ಒದ್ದಾಡುs ಕೂಸಿನ ಕಂಡ | ಶಿವಗ ಬಲಗೊಂಡ |
ಈ ವ್ಯಾಳ್ಯಾದಾಗ ಇದ್ರ ಮಾರಿs ನೋಡತಿದ್ದ ಗಂಡs ಹೋ ಜೀಜೀಜೀ ||

ಮತ್ತ ಮಾಸ್ತರ ಮಾಡ್ಯಾನ ಕೂಸಿನ ಕೈಕಾಲ ತುಂಡ | ಕೊಯ್ದ ಇಟ್ಟ ರುಂಡ |
ಕಿಡಿಕ್ಯಾಗ ಹಾsಸಿ ಒಗಿತಾನ ಒಂದೊಂದ ತುಂಡ ಹೋ ಜೀಜೀಜೀ ||
ಕಾಶಿಬಾಯಿ ಕಮಲಮುಖಿ ಎಲ್ಲ ತುಣುಕ ಅಯ್ಕೊಂಡ | ಉಡಿಯಾಗ ಕಟಕೊಂಡ |
ಪರಮಾತ್ಮಗ ಅಂತಾಳ ನೀನೆ ನೋಡ ಗsತಿ ಹೋ ಜೀಜೀಜೀ ||
ಬೆಳತನಕ ನಡಿತೋ ಈ ಕುಸ್ತಿ |
ಕಡಿಮ್ಯಾಯ್ತೊ ಮಾಸ್ತರನ ಹ್ಯಾಸ್ತಿ |
ಇದಕೇsನ ಮಾಡತಾನ ಜಾಸ್ತಿ |
ಅವನ ಬಾಗಿಲ ಮುಂದ ನಿಂತು ಬೆಳತಾನ ಮಾಡ್ತಾಳೋ ಗಸ್ತಿs ಹೋ ಜೀಜೀಜೀ ||
ಕಾಶಿಬಾಯಿ ಗಂಡನ ಮ್ಯಾಲ ಭಕ್ತಿ |
ದುಷ್ಟಂದು ನಡಿಯಲಿಲ್ಲೊ ಯುಕ್ತಿ |
ಅಂಥವನು ಹ್ಯಾಂಗ ಉಳದು ಹೋಗ್ತಿ |
ಅಷ್ಟರೊಳಗ ಗಾಡಿ ಬಂದು ತಾಸ ಹೊತ್ತ ಏರೈತಿ ಹೋ ಜೀಜೀಜೀ ||
ಆಗ ಬೇಗದಿಂದ ಗುಣವಂತಿ |
ಚಾಂಗುsಳಿಯಂಥ ಸತ್ಯವಂತಿ |
ಗಾಡಿ ತೊಗೋತಿತ್ತೊ ವಿಶ್ರಾಂತಿ |
ಸಾಯಬ ಇಳಿದು ಬರುವಾಗ ಅಡ್ಡಬಿದ್ದ ಮಾಡ್ಯಾಳ ವಿನಂತs ಹೋ ಜೀಜೀಜೀ ||
ಕಾಶಿಬಾಯಿ ಮಾರಿ ಒಣಗೈತಿ |
ಸೀರೆಲ್ಲ ರಕ್ತ ಮುಣಗೈತಿ |
ತಾಯವ್ವನ ಹುಚ್ಚ ಹಿಡಿದೈತಿ |
ಉಡಿಬಿಚ್ಚಿ ತೋರಸ್ತಾಳ ನನ್ನ ಸುಲಿಗಿ ಹೀಂಗಾಯ್ತ ಹೋ ಜೀಜೀಜೀ ||
ಚಿಲ್ಲಾಳನಂಥ ಮಗನ ಕಡದ ಮಾಡ್ಯಾನ ಚೂರಚೂರ | ನೋಡ್ರಿ ಸಾಹೇಬರಾ |
ಕಡ್ಲಿಮಟ್ಟಿs ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋ ಜೀಜೀಜೀ || ೮ ||

ತನ್ನ ಮುಂಗೈ ತಾ ಕಡಕೊಂಡು ಸಾಯಬ ಅಂತಾನ | ಎಲೋ ಬೇಮಾನ |
ಕಟಕಾದರು ಕಡಿಲಾಕಿಲ್ಲ ಇಂಥs ಕೂಸಿನ್ನ ಹೋ ಜೀಜೀಜೀ ||
ಹೆಡಮುರಗಿ ಕಟ್ಟಿ ಹಿಡಿs ತಂದ್ರೊ ಮಳ್ಳ ಮಾಸ್ತರನ | ಕಳ್ಳ ಕಾಸ್ತರನ |
ಗಲ್ಲ ಚಡಾವ್ ಮಾಡ್ರ್ಯಂತ ಸಾಯಬ ಹುಕುಮ ಕೊಟ್ಟಾನs ಹೋ ಜೀಜೀಜೀ ||
ಈ ಕಲಿಯುಗದಾಗ ಗಂಡಸರ |
ಮಹಾ ಪಾಪಿ ಕರ್ಮಿ ಪಾತಕರ |
ಯಮ ಧರ್ಮsನ ಹಸ್ತಕರ |
ಪರಹೆಣ್ಣಿನ ಮ್ಯಾಲ ಮನಸಿಟ್ಟು ಪ್ರಾಣಕೊಡುವsರ ಹೋ ಜೀಜೀಜೀ ||
ಈಗಾದರೂ ಆದಾರೊ ಅಂಥವರ |
ಆ ಕಾಶಿಬಾಯಿಯಂಥವರ | ಪತಿಯಾಜ್ಞೆ ಮೀರದಂಥವರ |
ಅsಕಿ ಕಾಶಿ ಖರೇ ಗಂಡ ರಾಮೇಶ್ವರ ಅನ್ನವsರಾ ಹೋ ಜೀಜೀಜೀ ||
ಡೋಣಿಸಾಲಾsಗ ಇಂಗಳಿಗೆವರ |
ಮಲ್ಲ ಹಸನ ಎಂಬುವಂಥವರ |
ಇಬ್ರಾಮ ಚಾಂದ ಸೇವಕರ |
ಕಾಶಿಬಾಯಿ ಪದs ಕೊಟಬಾಳ ನಿಂಗಣ್ಣ ಹಾಡವsರಾ ಹೋ ಜೀಜೀಜೀ ||
ಮಹಮ್ಮದ ಇಮಾಮಸಾ ಎಂಬವರ |
ಅಂಥವರನ ಕಾಯೊ ನಮ್ಮವರ
ಒಬ್ಬರ ತೆಲಿಮ್ಯಾಲ ಒಬ್ಬರ |
ಕವಿ ಅರ್ಕದಂತೆ-ಮುಂದೆ ಕವೀಕಟ್ಟಿ ಹಾಡವsರಾ ಹೋ ಜೀಜೀಜೀ ||
ಸಾಧುಪಕೀರ ಅಂತಾನ ಮಾಸ್ತರ ಎಂಥ ಮುಡದಾರ |
ಕೇಳ್ರಿ ಕುಂತ ಜನರ |
ಕಡ್ಲಿಮಟ್ಟಿ ಟೇಶನದಾಗ ಇದ್ದ ತಿಕಿಟ ಮಾಸ್ತsರಾ ಹೋ ಜೀಜೀಜೀ || ೯ ||

 

ಪಾಠಾಂತರಗಳು :

೧) ಕಾಶಿಬಾಯಿ ಲಾವಣಿ; ಹೆಂಡಿ ಬಿ.ಬಿ., ಸುಂಕಾಪುರ ಎಂ.ಎಸ್. ಆಯ್ದ ಜನಪದ ಕಥನ ಗೀತೆಗಳು. ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೮, ಪು.ಸಂ. ೭೯-೯೯.

೨) ಕಾಶನ್ಮಳ ಹಾಡು; ಹೆಬ್ಬಾಳೆ ಜಗನ್ನಾಥ, ಬುಲಾಯಿ ಹಾಡುಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೬೨-೬೫.*      ಕಡ್ಲಿಮಟ್ಟಿ ಕಾಶಿಬಾಯಿ ಹಾಡು; ನಾಗೇಗೌಡ ಎಚ್.ಎಲ್. ದುಂಡಮಲ್ಲಿಗಿ ಹೂವ ಬುಟ್ಟಿಲಿ ಬಂದಾವ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫, ಪು.ಸಂ. ೧೪೧-೧೫೦.