ಒಂದು ಟನ್ ಹಣ್ಣನ್ನು ಸಂಸ್ಕರಿಸಲು ಸರಾಸರಿ ೧೦೦೦ ಗ್ಯಾಲನ್ ನೀರು ಬೇಕಾಗುತ್ತದೆ. ಆದರೆ ಈ ಪರಿಮಾಣ, ವಿವಿಧ ಹಣ್ಣುಗಳು ಮತ್ತು ಉತ್ಪನ್ನಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಬಹುದು. ಸಕ್ಕರೆಪಾಕ ಮತ್ತು ಉಪ್ಪಿನ ದ್ರಾವಣಗಳ ತಯಾರಿಕೆಗೆ ಮಾತ್ರವಲ್ಲದೆ ಹಣ್ಣು ಮತ್ತು ತರಕಾರಿಗಳನ್ನು ತೊಳೆಯುವಿಕೆ, ಕ್ಷಿಪ್ರವಾಗಿ ಸ್ವಲ್ಪ ಬೇಯಿಸುವಿಕೆ, ಸೂಕ್ಷ್ಮ ಜೀವಿನಾಶಗೊಳಿಸುವಿಕೆ ಮತ್ತು ತಂಪು ಮಾಡುವಿಕೆ ಇವೇ ಮೊದಲಾದ ಸಂಸ್ಕರಣೆಯ ವಿವಿಧ ಹಂತಗಳಲ್ಲಿ ನೀರಿನ ಅವಶ್ಯಕತೆಯಿದ್ದೇ ಇರುತ್ತದೆ.

ಡಬ್ಬಿಯಲ್ಲಿ ಸಂಸ್ಕರಿಸುವಾಗ ಶುದ್ಧ ನೀರು ಸಮೃದ್ಧಿಯಾಗಿ ಸಿಗಬೇಕು; ಈ ನೀರಿನಲ್ಲಿ ಯಾವುದೇ ರೀತಿಯ ಕೊಳೆಯೂ ಇರಬಾರದು; ಇದು ಕುಡಿಯಲು ಯೋಗ್ಯವಾದ ನೀರಾಗಿರಬೇಕು; ಖನಿಜ ಪದಾರ್ಥಗಳು ಆದಷ್ಟೂ ಕಡಮೆ ಇರಬೇಕು; ಅದರಲ್ಲೂ ವಿಶೇಷವಾಗಿ ಸಲ್ಫೇಟಿನ ಮತ್ತು ಕಬ್ಬಿಣದ ಲವಣಗಳು ಲವಲೇಶವೂ ಇರಬಾರದು.

ಡಬ್ಬಿಯಲ್ಲಿ ಸಂಸ್ಕರಿಸುವಾಗ ಗಡಸುನೀರನ್ನು ಉಪಯೋಗಿಸಿದರೆ ಪದಾರ್ಥವು ಬಿರುಸಾಗುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್ ಮತ್ತು ಬೈ ಕಾರ್ಬೋನೇಟ್‌ಗಳು ಉಪ್ಪಿನಕಾಯಿಯಲ್ಲಿರುವಾಗ ಲ್ಯಾಕ್ಟಿಕ್ ಆಮ್ಲದೊಡನೆ ಸೇರಿ ಆಮ್ಲೀಯತೆಯನ್ನು ಕಡಮೆ ಮಾಡುತ್ತವೆ. ಇದರ ಪರಿಣಾಮ ಉಪ್ಪಿನಕಾಯಿಯ ವಾಸನೆಯಲ್ಲೂ ಕಂಡುಬರುತ್ತದೆ. ನೀರು ಅತಿ ಕಠಿಣವಾಗಿದ್ದರೆ ಕುದಿಸುವ ಪಾತ್ರೆಯ ಒಳಭಾಗದಲ್ಲಿ ಪರೆಗಳುಂಟಾಗುತ್ತವೆ ಮತ್ತು ಡಬ್ಬಿಯ ಒಳಗೆ ಬಿಳಿಪದರು ಕಾಣಿಸಿಕೊಳ್ಳುತ್ತದೆ. ಇಂಥ ನೀರನ್ನು ಸೂಕ್ತ ಕ್ರಿಯೆಯಿಂದ ಮೃದುಗೊಳಿಸಬೇಕು. ನೀರಿನಲ್ಲಿರುವ ಕಬ್ಬಿಣವು ಹಣ್ಣು ಮತ್ತು ತರಕಾರಿಗಳಲ್ಲಿರುವ ಟ್ಯಾನಿನ್‌ನೊಡನೆ ಸೇರಿ ಕಪ್ಪಾಗಿ ಪರಿವರ್ತನೆಗೊಳ್ಳುತ್ತದೆ. ಈ ಕಾರಣಗಳಿಂದ ಬಣ್ಣ, ವಾಸನೆ ಮತ್ತು ರುಚಿ ಇಲ್ಲದ ಮತ್ತು ಬ್ಯಾಕ್ಟೀರಿಯಾ ರಹಿತವಾದ ಶುದ್ಧ ನೀರನ್ನೇ ಉಪಯೋಗಿಸಬೇಕು. ಮಲದಲ್ಲಿ ಸಾಮಾನ್ಯವಾಗಿರುವ ಬ್ಯಾಸಿಲಸ್ ಕೋಲೈನಂಥ ಸೂಕ್ಷ್ಮಜೀವಿಗಳಾವುವೂ ಇರಬಾರದು. ನೀರಿನ ಕಠಿಣತೆ ೧೦೦ ಲೀಟರಿಗೆ ಸಾಧಾರಣ ೨೦ ಭಾಗ ಅಂದರೆ ಒಂದು ಔನ್ಸಿಗೆ ೦.೦೯೬ ಗ್ರೇನ್ಸ್‌ಗಿಂತ ಅಧಿಕವಾಗಿರಬಾರದು. ಗಡಸುತನದ ಗರಿಷ್ಠ ಮಿತಿ ೧೦೦ ಲೀಟರಿಗೆ ೫೦ ಭಾಗಗಳು. ಪ್ರತಿ ೧೦೦ ಲೀಟರಿಗೆ ೫ ರಿಂದ ೧೦ ರವರೆಗೆ ಗಡಸುತನವಿದ್ದರೆ ಮಿತವಾದ ಮೃದುತ್ವ, ೧೦ ರಿಂದ ೧೫ ಭಾಗವಿದ್ದರೆ ಸ್ವಲ್ಪ ಗಡಸು ಮತ್ತು ೧೫ ರಿಂದ ೨೫ ಭಾಗ ಮಿತವಾದ ಗಡಸುತನವಿದ್ದು, ೨೨ ರಿಂದ ೩೦ ಭಾಗ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಮಿತಿಮೀರಿದ ಗಡಸು ನೀರು ಎನಿಸಿಕೊಳ್ಳುತ್ತದೆ. ಸಾವಯವ ಇಂಗಾಲ ಮತ್ತು ಸಾವಯವ ಸಾರಜನಕಗಳು ಲಕ್ಷ ಭಾಗ ನೀರಿನಲ್ಲಿ ಕ್ರಮವಾಗಿ ೦.೨ ಮತ್ತು ೦.೦೨ ಭಾಗಕ್ಕಿಂತ ಅಧಿಕವಿರಬಾರದು. ಹಾಗೆಯೇ ನೀರಿನಲ್ಲಿ ಬೆರಕೆಯಾಗದ ಅಮೋನಿಯಾ ಪ್ರತಿ ಮಿಲಿಯದಲ್ಲಿ ೦.೦೫ ಭಾಗಕ್ಕಿಂತ ಹೆಚ್ಚಿರಬಾರದು. ಪ್ರತಿ ಗ್ಯಾಲನ್ ನೀರಿನಲ್ಲಿ ೦.೦೫ ಗ್ರೈನ್ ಅಥವಾ ಅದಕ್ಕಿಂತ ಕಡಮೆ ಆಮ್ಲಜನಕವಿದ್ದರೆ ಇದು ಅತ್ಯಂತ ಶುದ್ಧ ನೀರೆನಿಸಿಕೊಳ್ಳುತ್ತದೆ. ಆಮ್ಲಜನಕ ೦.೦೫ – ೦.೧೫ ಗ್ರೈನ್ ಇದ್ದರೆ ಅದನ್ನು ಮಧ್ಯಮ ದರ್ಜೆಯ ನೀರೆಂದು ಪರಿಗಣಿಸಲಾಗುತ್ತದೆ (೦೭ ಗ್ರೈನ್/ಗ್ಯಾಲನ್ = ಪ್ರತಿ ಮಿಲಿಯಕ್ಕೆ ೧೦ ಭಾಗಗಳು).

ನೀರಿನ ಪ್ರಾಕೃತಿಕ ಉಗಮ ಸ್ಥಾನಗಳೆಂದರೆ ನದಿ, ಚಿಲುಮೆ, ಆಳವಾದ ಬಾವಿ ಮತ್ತು ಸಮುದ್ರ. ಮಳೆಯ ನೀರು ಆದಿಯಲ್ಲಿ ಶುದ್ಧವಾಗಿರುತ್ತದೆ. ಆದರೆ ವಾತಾವರಣದಲ್ಲಿರುವ ಆಮ್ಲಜನಕ, ಸಾರಜನಕ, ಇಂಗಾಲದ ಡೈ ಆಕ್ಸೈಡ್ ನೈಟ್ರಿಕ್ ಆಮ್ಲ, ಗಂಧಕದ ಡೈ ಆಕ್ಸೈಡ್ ಮುಂತಾದವು ಇದರೊಡನೆ ಸೇರಿಕೊಳ್ಳುತ್ತವೆ. ಸ್ವಚ್ಛವಾದ ಮಹಡಿ ಮೇಲೆ ಬಿದ್ದ ಮಳೆ ನೀರನ್ನು ಶೇಖರಿಸಿ ದಾಸ್ತಾನು ಮಾಡಬಹುದು. ಆದರೆ ಉಪಯೋಗಿಸುವ ಮೊದಲು ಇದನ್ನು ಶೋಧಿಸಬೇಕಾಗುತ್ತದೆ. ನದಿ ನೀರಿನಲ್ಲಿ ಅನಿಶ್ಚಿತವಾದ ಅನೇಕ ಬಗೆಯ ಕೊಳೆಯಿರುತ್ತದೆ. ಇದನ್ನು ಉಪಯೋಗಿಸುವ ಮೊದಲು ಶೋಧಿಸುವುದು ಮಾತ್ರವಲ್ಲದೆ ಶುದ್ಧಗೊಳಿಸುವುದೂ ಅವಶ್ಯವಿರುತ್ತದೆ. ಭೂಮಿಯ ಮೇಲ್ಭಾಗದ ಅಥವಾ ಕೆರೆನೀರಿನಲ್ಲಿ ಸಾವಯವ ಪದಾರ್ಥ ಅಧಿಕವಾಗಿರುತ್ತದೆ. ಇಂಥ ನೀರನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಉಪಯೋಗಿಸುವುದು ಯೋಗ್ಯವಲ್ಲ. ಆಳವಾದ ಬಾವಿಯಿಂದ ತೆಗೆದ ನೀರು ಸಾಮಾನ್ಯವಾಗಿ ಶುದ್ಧವಾಗಿರುತ್ತದೆ. ಈ ನೀರು ಮಣ್ಣಿನಲ್ಲಿ ಹೆಚ್ಚು ದೂರ ಸ್ರವಿಸುವಾಗ ಶೋಧಿಸಲ್ಪಡುತ್ತದೆ. ಅಲ್ಲದೆ ಅದರೊಡನೆ ಗಾಳಿ ಮತ್ತು ಆಮ್ಲಜನಕ ಸೇರಿಕೊಳ್ಳುತ್ತವೆ. ಆದರೂ ಕೆಲವು ಸಂದರ್ಭಗಳಲ್ಲಿ ಪ್ರದೇಶದ ಪರಿಸ್ಥಿತಿಯನ್ನವಲಂಬಿಸಿ ಇದು ಗಡಸಾಗಿಯೂ ಇರಬಹುದು. ಇದಲ್ಲದೆ ಹೊರಗಿನಿಂದ ಕೊಳಚೆ ಬಂದ ಸೇರುವ ಸಾಧ್ಯತೆಯೂ ಇರುತ್ತದೆ. ಈ ಕಾರಣಗಳಿಂದ ಬಾವಿನೀರನ್ನು ಉಪಯೋಗಿಸುವ ಮೊದಲು ಪರೀಕ್ಷೆಗೊಳಪಡಿಸುವುದು ಅಗತ್ಯ.

ನೀರಿನ ಬಗೆಗಳು

ಗಡಸು ಮತ್ತು ಮೃದು ನೀರು : ಮೃದುವಾದ ನೀರು ಸಾಬೂನಿನೊಡನೆ ಕೂಡಲೇ ನೊರೆಯುಂಟುಮಾಡುತ್ತದೆ. ಅದೇ ಗಡಸುನೀರು ಅಷ್ಟು ಸುಲಭವಾಗಿ ನೊರೆಯುಂಟು ಮಾಡುವುದಿಲ್ಲ. ಗಡಸು ನೀರಿನಲ್ಲಿ ತಾತ್ಕಾಲಿಕ, ಸ್ಥಿರವೆಂದು ಎರಡು ಬಗೆಯಿರುತ್ತದೆ. ತಾತ್ಕಾಲಿಕ ಗಡಸುನೀರಿನಲ್ಲಿ ಸುಣ್ಣದ ಮತ್ತು ಮೆಗ್ನೀಸಿಯಂ ಬೈ ಕಾರ್ಬೊನೇಟ್ ಇರುತ್ತವೆ. ಇವುಗಳನ್ನೂ ನೀರನ್ನು ಕುದಿಸಿ ತೆಗೆಯಬಹುದು. ಈ ರೀತಿ ಕುದಿಸಿದಾಗ ಇಂಗಾಲದ ಡೈ ಆಕ್ಸೈಡ್ ಹೊರಬರುತ್ತದೆ. ಆದರೆ, ಕರಗದ ಕಾರ್ಬೊನೇಟ್ ಉಳಿಯುತ್ತದೆ.

ಸ್ಥಿರ ಗಡಸು ನೀರು ಕರಗಿರುವ ಸುಣ್ಣದ ಮತ್ತು ಮೆಗ್ನೀಸಿಯಂನ ಸಲ್ಫೇಟ್ ಮತ್ತು ಕ್ಲೋರೈಡ್‌ಗಳಿಂದ ಉಂಟಾಗುತ್ತದೆ. ಈ ಗಡಸುತನವನ್ನು ನೀರನ್ನು ಕುದಿಸಿ ತೆಗೆಯಲು ಸಾಧ್ಯವಿರುವುದಿಲ್ಲ.

ನೀರನ್ನು ಮೃದುಗೊಳಿಸುವ ವಿಧಾನಗಳು

ನೀರನ್ನು ಕುದಿಸಿ ಇಲ್ಲವೇ ಕ್ಲಾರ್ಕ್‌ನ ವಿದಾನವನ್ನನುಸರಿಸಿ ಮೃದುಗೊಳಿಸಬಹುದು. ಎರಡನೆಯ ವಿಧಾನದಲ್ಲಾದರೆ ಮೊದಲು ನೀರಿನ ಬೈ ಕಾರ್ಬೊನೇಟ್‌ನ ಪರಿಣಾಮವನ್ನು ನಿರ್ಧರಿಸಬೇಕು. ಅನಂತರ ಸುಟ್ಟ ಸುಣ್ಣವನ್ನು ಸಾಕಷ್ಟು ಪರಿಮಾಣದಲ್ಲಿ ಸೇರಿಸಿ ಇಂಗಾಲದ ಡೈ ಆಕ್ಸೈಡನ್ನು ತೆಗೆಯಬೇಕು. ಇದರಲ್ಲಿ ಬೈ ಕಾರ್ಬೊನೇಟ್‌ಗಳು ಕರಗದ ಕಾರ್ಬೊನೇಟ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ. ಸುಟ್ಟ ಸುಣ್ಣವನ್ನು ಸೇರಿಸಿದಾಗ ಇಂಗಾಲದ ಡೈ ಆಕ್ಸೈಡ್ ಕರಗದ ಇನ್ನೊಂದು ಕಾರ್ಬೊನೇಟ್ ಆಗಿ ಪರಿವರ್ತನೆಗೊಳ್ಳುತ್ತದೆ. ಸುಟ್ಟ ಸುಣ್ಣವನ್ನು ನೀರಿಗೆ ಹಾಕಿದಾಗ ಸುಣ್ಣದ ಹೈಡ್ರಾಕ್ಸೈಡ್ ಉತ್ಪಾದನೆಯಾಗುತ್ತದೆ.

ವಾಣಿಜ್ಯ ಕ್ಷೇತ್ರದಲ್ಲಿ ನೀರಿನ ಗಡಸುತನವನ್ನು ಕಾರ್ಬೊನೇಟ್ ಆಗಿ ಸೂಚಿಸಲಾಗುತ್ತದೆ. ಪ್ರತಿ ಗ್ಯಾಲನ್ ನೀರಿನಲ್ಲಿ ಒಂದು ಗ್ರೈನ್ ಗಡಸುತನವಿದೆಯೆಂದು ಭಾವಿಸೋಣ. ಇಂಥ ೧೦೦೦ ಗ್ಯಾಲನ್ ನೀರಿಗೆ ಸಾಧಾರಣ ೧೦ ಔನ್ಸ್ ಸುಟ್ಟ ಸುಣ್ಣ ಬೇಕಾಗುತ್ತದೆ. ನೀರಿನಲ್ಲಿ ಮೆಗ್ನೀಸಿಯಂ ಬೈಕಾರ್ಬೊನೇಟ್ ಇದ್ದರೆ ಇದರ ಎರಡರಷ್ಟು ಸುಟ್ಟ ಸುಣ್ಣ ಬೇಕಾಗುತ್ತದೆ. ಇದನ್ನು ಬೆರೆಸಿದಾಗ ಮಿತವಾಗಿ ಕರಗುವ ಮೆಗ್ನೀಸಿಯಂ ಹೈಡ್ರಾಕ್ಸೈಡ್ ಉತ್ಪನ್ನವಾಗುತ್ತದೆ.

ಸ್ಥಿರಗಡಸುತನ

 

ಸೋಡಿಯಂ ಕಾರ್ಬೊನೇಟ್ ಬೆರೆಸಿದಾಗ ಕ್ಲೋರೈಡ್ ಮತ್ತು ಸಲ್ಫೇಟ್‌ಗಳು ಕರಗದ ಕಾರ್ಬೊನೇಟ್ ಆಗಿ ಪರಿವರ್ತನೆಗೊಳ್ಳುತ್ತವೆ.

ಕೆಲವು ನೀರಿನಲ್ಲಿ ತಾತ್ಕಾಲಿಕ ಮತ್ತು ಸ್ಥಿರ ಗಡಸುತನಗಳೆರಡೂ ಇರುತ್ತವೆ. ಇವುಗಳಿಗೆ ವಾಣಿಜ್ಯ ಕಾಸ್ಟಿಕ್ ಸೋಡ ಮತ್ತು ಸೋಡಿಯಂ ಕಾರ್ಬೊನೇಟ್ ಇವೆರಡನ್ನೂ ಸೇರಿಸಬೇಕು. ಕಾಸ್ಟಿಕ್ ಸೋಡಾ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಬೈ ಕಾರ್ಬೊನೇಟ್‌ಗಳನ್ನು ತಟಸ್ಥಗೊಳಿಸುತ್ತವೆ; ಇದು ಸಲ್ಫೇಟ್‌ನೊಡನೆ ಪ್ರತಿಕ್ರಿಯೆ ನಡೆಸಿದಾಗ ಕರಗದ ಕಾರ್ಬೊನೇಟ್ ಆಗಿ ವಿಭಜನೆಗೊಳ್ಳುತ್ತದೆ­

ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್‌ಗಳು ೧ ಲಕ್ಷ ಭಾಗ ನೀರಿನಲ್ಲಿ ಕ್ರಮವಾಗಿ ೧.೩ ಮತ್ತು ೦.೯೩ ಭಾಗ ಕರಗುತ್ತವೆ. ಆದುದರಿಂದ ಶುದ್ಧ ಮೃದು ನೀರನ್ನು ಪಡೆಯಲು ಸಾಧ್ಯವೇ ಇಲ್ಲ. ಡಬ್ಬಿಯಲ್ಲಿ ಸಂಸ್ಕರಿಸುವ ಕಾರ್ಖಾನೆಗಳಲ್ಲಿ ಗಡಸುತನವನ್ನು ಸಂಪೂರ್ಣವಾಗಿ ಹೋಗಲಾಡಿಸಿದ ಪರಿಶುದ್ಧ ಮೃದುನೀರಿನ ಅವಶ್ಯಕತೆಯೂ ಇರುವುದಿಲ್ಲ. ೧ ಲಕ್ಷದಲ್ಲಿ ೪ -೫ ಭಾಗ ಗಡಸುತನವಿದ್ದರೂ ಪದಾರ್ಥದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲ. ಆದರೆ ಹಣ್ಣು ಮತ್ತು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಉಪಯೋಗಿಸುವ ನೀರಿನಲ್ಲಿ ತಾತ್ಕಾಲಿಕ ಮತ್ತು ಸ್ಥಿರಗಡಸುತನ ೧,೦೦,೦೦೦ ಭಾಗದಲ್ಲಿ ೧೦-೧೨ ಕ್ಕಿಂತ ಹೆಚ್ಚಿರಬಾರದು. ನೀರಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಲವಣಗಳು ಪೆಕ್ಟಿನ್ನಿನ ಜೊತೆ ಸೇರಿದಾಗ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಬಿರುಸಾಗುತ್ತದೆ. ತಾತ್ಕಾಲಿಕ ಕಠಿಣವಾಗಿರುವ ನೀರನ್ನು ಸೂಕ್ಷ್ಮಜೀವಿ ನಾಶಕ್ರಿಯೆಗೊಳಪಡಿಸಿದಾಗ ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್‌ಗಳು ತಳದಲ್ಲಿ ತಂಗುತ್ತವೆ. ಇದರಿಂದ ದ್ರವವು ಮಸಕಾಗಿ ಕಾಣುತ್ತದಲ್ಲದೆ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥದ ರೂಪವೂ ಕೆಡುತ್ತದೆ.

ಪರ್ಮ್ಯೂಟಿಟ್ ವಿಧಾನ : ಈ ವಿಧಾನದಲ್ಲಿ ಕೃತಕ ಜಿಯೋಲೈಟ್‌ನಿಂದ ಎರಡೂ ವಿಧದ ಕಠಿಣತೆಯಿರುವ ನೀರನ್ನು ಮೃದುಗೊಳಿಸಬಹುದು. ಪರ್‌ಮ್ಯೂಟಿಟ್ ಎಂಬುದು ಸೋಡಿಯಂ ಮತ್ತು ಅಲ್ಯೂಮಿನಿಯಂ ಸಿಲಿಕೇಟ್ (೨SiO, AlO, NaO, ೬HO). ಇದು ನೀರಿನಲ್ಲಿ ಸ್ವಲ್ಪವೂ ಕರಗುವುದಿಲ್ಲ. ದಪ್ಪ ಹರಳುಗಳಾಗಿ ಪುಡಿ ಮಾಡಿದ ಜಿಯೋಲೈಟ್‌ನ್ನು ನಳಿಕೆಯಲ್ಲಿ ತುಂಬಬೇಕು. ನೀರನ್ನು ಇದರ ಮೂಲಕ ಸ್ರವಿಸಿದಾಗ ನೀರಿನಲ್ಲಿರುವ ಲವಣ ಮತ್ತು ಜಿಯೋಲೈಟಿನ ಲವಣಗಳಲ್ಲಿ ದ್ವಿವಿಭಜನೆಯುಂಟಾಗುತ್ತದೆ.

ಈ ಬದಲಾವಣೆಯು ವಿಪರ್ಯಯ ಸಾಧ್ಯವಾಗಿರುತ್ತದೆ. ಪರ್‌ಮ್ಯೂಟಿಟ್‌ನ ಕ್ರಿಯಾಶಕ್ತಿ ತಟಸ್ಥವಾದಾಗ ಪ್ರಬಲ ಸೋಡಿಯಂ ಕ್ಲೋರೈಡ್ ದ್ರಾವಣವನ್ನು ೮ – ೧೦ ಗಂಟೆಗಳ ಕಾಲ ಜಿಯೋಲೈಟಿನ ಮೂಲಕ ಸ್ರವಿಸಬೇಕು. ಇದರಿಂದ ಪರ್‌ಮ್ಯೂಟಿಟ್ ಪುನಃ ಕ್ರಿಯಾಶೀಲವಾಗುತ್ತದೆ.

ನೀರಿನ ಶುದ್ಧೀಕರಣ

 

ನೀರನ್ನು ಸಂಗ್ರಹಿಸಿಟ್ಟಾಗ ಕರಗದ ಕಲ್ಮಶಗಳು ತಳದಲ್ಲಿ ತಂಗುತ್ತವೆ. ಮೇಲ್ಭಾಗದ ನೀರು ತಿಳಿಯಾಗಿರುತ್ತದೆ. ಈ ನೀರನ್ನು ಮರಳಿನ ಮತ್ತು ಸಣ್ಣ ಜೆಲ್ಲಿಯ ಪದರಗಳ ಮೂಲಕ ಹಾಯಿಸಿ ಶೋಧಿಸಬೇಕು. ಈ ಕ್ರಿಯೆಯಲ್ಲಿ ಗಾಳಿಯ ಸಂಪರ್ಕವು ಬರುವುದರಿಂದ ನೀರು ಸಾಕಷ್ಟು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಇನ್ನೊಂದು ವಿಧಾನದಲ್ಲಿ ಪಟಿಕವನ್ನು ಸೇರಿಸುತ್ತಾರೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಜೋಲಾಡುತ್ತಿರುವ ಇತರ ಪದಾರ್ಥಗಳು ಹೆಪ್ಪುಗಟ್ಟುತ್ತವೆ. ಈ ಪದಾರ್ಥಗಳು ತಳದಲ್ಲಿ ತಂಗಿದ ಬಳಿಕ ನೀರನ್ನು ಶೋಧಿಸಬೇಕು.

ಸೂಕ್ಷ್ಮಜೀವಿನಾಶಕ್ರಿಯೆ : ಕ್ಲೋರಿನ್ ಇಲ್ಲವೇ ಚೆಲುವೆಪುಡಿ ಬೆರೆಸಿ ಸೂಕ್ಷ್ಮಜೀವಿಗಳನ್ನು ನಾಶಮಾಡಬಹುದು. ಸಾಧಾರಣ ೧.೫ – ೪.೦ ಪೌಂಡು ಕ್ಲೋರಿನ್ ದ್ರಾವಣವನ್ನು ಅಮೋನಿಯಾದೊಡನೆ ಬೆರೆಸಿ ಒಂದು ಮಿಲಿಯ ಗ್ಯಾಲನ್ ನೀರಿಗೆ ಬೆರೆಸಬಹುದು. ಇದರಿಂದ ಪ್ರತಿ ಮಿಲಿಯ ನೀರಿನಲ್ಲಿ ೦.೧೫ ರಿಂದ ೦.೪೦ ಭಾಗ ಕ್ಲೋರಿನ್ ಇದ್ದಂತಾಗುತ್ತದೆ. ಕ್ಲೋರಿನ್ ಕ್ರಿಯೆಗೊಳಪಡಿಸಿದ ನೀರನ್ನು ಯಾವ ಅಪಾಯವೂ ಇಲ್ಲದೆ ಡಬ್ಬಿಯಲ್ಲಿ ಸಂಸ್ಕರಿಸುವಾಗ ಉಪಯೋಗಿಸಬಹುದು. ಇದಲ್ಲದೆ ನೀರಿನ ಸೂಕ್ಷ್ಮಜೀವಿನಾಶ ಕ್ರಿಯೆಯನ್ನು ಪೊಟ್ಯಾಸಿಯಂ ಪರ್‌ಮ್ಯಾಂಗ್‌ನೇಟ್, ಓಜ್ಹೋನ್ ಅನಿಲ, ಬೆಳ್ಳಿಯ ವಿದ್ಯುತ್‌ವಾಹಿ ಅಯಾನ್, ಅತಿ ನೇರಳೆಕಿರಣ ಇತ್ಯಾದಿಗಳಿಂದಲೂ ನೆರವೇರಿಸಬಹುದು. ಬೆಳ್ಳಿಯ ವಿದ್ಯುತ್‌ವಾಹಿ ಅಯಾನ್‌ನಿಂದ ಸೂಕ್ಷ್ಮಜೀವಿನಾಶಗೊಳಿಸುವುದಕ್ಕೆ ಕಟಡಿನ್ ವಿಧಾನವೆಂದು ಹೆಸರು. ಇದನ್ನು ನಿಂಬೆ, ಸೇಬು, ದ್ರಾಕ್ಷಿ ಇತ್ಯಾದಿ ಹಣ್ಣುಗಳ ರಸಕ್ಕೆ ಸೇರಿಸಬಹುದು.

ನೀರಿನ ವಿಶ್ಲೇಷಣೆ

ನೀರನ್ನು ರಾಸಾಯನಿಕ ವಿಶ್ಲೇಷಣೆಗೊಳಪಡಿಸುವುದರ ಜೊತೆಗೆ ಅದರಲ್ಲಿರುವ ಬ್ಯಾಕ್ಟೀರಿಯಾಗಳ ವರ್ಗವನ್ನು ತಿಳಿದುಕೊಳ್ಳಬೇಕು. ನೂರು ಘ.ಸೆಂ.ಮೀ. ಶುದ್ಧೀಕರಿಸಿದ ಅಥವಾ ಆಳಬಾವಿಯ ನೀರಿನಂಥ ಶುದ್ಧನೀರಿನಲ್ಲಿ ಬ್ಯಾಸಿಲಸ್ ಕೋಲೈಗಳು ಕಂಡುಬರುವುದಿಲ್ಲ. ಈ ರೀತಿಯ ಗುಣಮಟ್ಟದ ನೀರನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ಉಪಯೋಗಿಸಬೇಕು. ನೀರಿನ ಮಾದರಿಯನ್ನು ಅತಿ ಜಾಗರೂಕತೆಯಿಂದ ಸಂಗ್ರಹಿಸಿ ಕೂಡಲೇ ವಿಶ್ಲೇಷಿಸಬೇಕು. ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ನೀರಿನ ಪರಿಪೂರ್ಣ ವಿಶ್ಲೇಷಣೆ ಮಾಡುತ್ತಾರೆ.

. ಬಣ್ಣ : ನೀರನ್ನು ಒಂದು ಉದ್ದ ನಳಿಕೆಯಲ್ಲಿ ಹಾಕಿ, ಪರೀಕ್ಷಿಸಿದಾಗ ಹಳದಿ ಅಥವಾ ಕಂದುಬಣ್ಣದ ಛಾಯೆ ಕಂಡುಬಂದರೆ ಅದರಲ್ಲಿ ಸಾವಯವ ಪದಾರ್ಥವಿದೆಯೆಂಬುದರ ಸೂಚನೆಯಾಗಿರುತ್ತದೆ.

. ವಾಸನೆ : ಮುಚ್ಚಳವಿರುವ ಸೀಸೆಯಲ್ಲಿ ನೀರನ್ನು ಹಾಕಿ, ಕದಡಿ, ಮೂಸಿ ವಾಸನೆ ತಿಳಿಯಬೇಕು.

. ಘನಪದಾರ್ಥಗಳ ಮೊತ್ತ : ಒಂದು ಪ್ಲಾಟಿನಂ, ನಿಕ್ಕಲ್ ಇಲ್ಲವೇ ಪಿಂಗಾಣಿಯ ಕಿರಿದಾದ ಬಟ್ಟಲಿನಲ್ಲಿ ೧೦೦ ಗ್ರಾಮ್ ನೀರನ್ನು ಆವಿಯಾಗಿಸಬೇಕು. ಕಡೆಗೆ ಉಳಿದವಶೇಷವನ್ನು ತೂಕ ಮಾಡಿದಾಗ ಘನ ಪದಾರ್ಥಗಳ ಮೊತ್ತ ಸಿಗುತ್ತದೆ.

. ಸಾವಯವ ಪದಾರ್ಥ : ಆವಿಯಾದ ಮೇಲೆ ಉಳಿಯುವ ಅವಶೇಷವನ್ನು ಜ್ವಾಲೆಯ ಮೇಲಿಟ್ಟು ಸುಟ್ಟು ಇದನ್ನು ಕಂಡುಹಿಡಿಯಬೇಕು.

. ನೀರಿನೊಡನೆ ಸೇರಿರದ ಕ್ಲೋರಿನ್ : ಇದನ್ನು ವರ್ಣಮಾಪಕದಿಂದ ನಿರ್ಧರಿಸಬೇಕು.

. ಕ್ಲೋರೈಡ್ಗಳು : ಇದನ್ನು N/೫೦ ಸಿಲ್ವರ್ ನೈಟ್ರೇಟ್ ದ್ರಾವಣದಿಂದ ಅನುಮಾಪನ ಮಾಡಬೇಕು; ಪೊಟ್ಯಾಸಿಯಂ ಕ್ರೋಮೇಟನ್ನು ಸೂಚಕವಾಗಿ ಉಪಯೋಗಿಸಬೇಕು.

ತಾತ್ಕಾಲಿಕ ಗಡಸುತನ

ನೂರು ಘ.ಸೆಂ.ಮೀ. ನೀರನ್ನು N/೧೦ ಸಲ್ಫ್ಯೂರಿಕ್ ಆಮ್ಲದೊಡನೆ ಮಿಥೈಲ್ ಆರೆಂಜನ್ನು ಸೂಚಕವಾಗಿ ತೆಗೆದುಕೊಂಡು ನಸುಗೆಂಪು ಬಣ್ಣ ಬರುವವರೆಗೆ ಅನುಮಾಪನ ಮಾಡಬೇಕು (ಒಂದು ಘ.ಸೆಂ.ಮೀ. N/೫೦ ಸಲ್ಫ್ಯೂರಿಕ್ ಆಮ್ಲ = ೧೦೦ ಘ.ಸೆಂ.ಮೀ. ನೀರಿನಲ್ಲಿ ೦.೦೦೧೧ ಗ್ರಾಮ್ ಕ್ಯಾಲ್ಸಿಯಂ ಕಾರ್ಬೊನೇಟ್) ೧,೦೦,೦೦೦ ಭಾಗ ನೀರಿನಲ್ಲಿ ಎಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್ (ಅಥವಾ ಮೆಗ್ನೀಸಿಯಂ ಕಾರ್ಬೊನೇಟ್) ಇದೆಯೆಂದು ಸೂಚಿಸಬೇಕು. ೧,೦೦,೦೦೦ ದಲ್ಲಿ ಒಂದು ಭಾಗವಾದರೆ ಪ್ರತಿ ಗ್ಯಾಲನ್ನಿಗೆ ೦.೭ ಗ್ರೈನ್ ಎಂದಾಗುತ್ತದೆ; ಪ್ರತಿ ಗ್ಯಾಲನ್‌ನಲ್ಲಿ ಒಂದು ಗ್ರೈನ್ ಕ್ಯಾಲ್ಸಿಯಂ ಕಾರ್ಬೊನೇಟ್ ಇದ್ದರೆ ಅದು ಒಂದು ಡಿಗ್ರಿ ಗಡಸುತನವೆನಿಸುತ್ತದೆ (ಕ್ಲಾರ್ಕ್)

ಒಂದು ಶಂಖಾಕಾರದ ಸೀಸೆಯಲ್ಲಿ ೧೦೦ ಘ.ಸೆಂ.ನೀರು ತೆಗೆದುಕೊಳ್ಳಬೇಕು. ಅದಕ್ಕೆ ಒಂದು ತೊಟ್ಟು ಮಿಥೈಲ್ ಆರೆಂಜನ್ನು ಸೂಚಕ ಬಣ್ಣವಾಗಿ ಬೆರೆಸಬೇಕು. N/೫೦ ರ ಸಲ್ಫ್ಯೂರಿಕ್ ಆಮ್ಲವನ್ನು ದ್ರಾವಣದ ಬಣ್ಣ ನಸುಗೆಂಪು ಆಗುವವರೆಗೆ  ಬ್ಯೂರೆಟ್ಟಿನಿಂದ ಬಿಡಬೇಕು.

ಒಂದು ಘ.ಸೆಂ.ಮೀ. N/೫೦ ಸಲ್ಫ್ಯೂರಿಕ್ ಆಮ್ಲವು ೧೦೦ ಘ.ಸೆಂ.ಮೀ. ನೀರಿನಲ್ಲಿ ೦.೦೦೧ ಗ್ರಾಂ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದನ್ನು ಸೂಚಿಸುತ್ತದೆ. ಇದರ ಪ್ರಕಾರ ಉಪಯೋಗಿಸಲ್ಪಟ್ಟ ಸಲ್ಫ್ಯೂರಿಕ್ ಆಮ್ಲವನ್ನು (ಘ.ಸೆಂ.ಮೀ. ಲೆಕ್ಕದಲ್ಲಿ) ೦.೦೦೧ ರಿಂದ ಗುಣಿಸಿದರೆ ನೇರವಾಗಿ ೧೦೦ ಗ್ರಾಂ ನೀರಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್ (ಮೆಗ್ನೀಸಿಯಂ ಕಾರ್ಬೊನೇಟ್) ನ ಪರಿಮಾಣ ಸಿಗುತ್ತದೆ.

ಒಂದು ನಿಶ್ಚಿತ ಸಂದರ್ಭದಲ್ಲಿ ೧೦೦ ಘ.ಸೆಂ.ಮೀ. ನೀರಿನಲ್ಲಿರುವ ಬೈಕಾರ್ಬೊನೇಟನ್ನು ತಟಸ್ಥಗೊಳಿಸಲು ೧೫ ಘ.ಸೆಂ.ಮೀ. N/೫೦ ರ ಸಲ್ಫ್ಯೂರಿಕ್ ಆಮ್ಲ ಬೇಕೆಂದಿಟ್ಟುಕೊಳ್ಳೋಣ. ಇದರ ಪ್ರಕಾರ ೧೦೦ ಘ.ಸೆಂ.ಮೀ. ನೀರಿನಲ್ಲಿ ೧೫ x ೦.೦೦೧ = ೦.೦೧೫ ಗ್ರಾಂ ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಅದಕ್ಕೆ ಸಮನಾದ ಮೆಗ್ನೀಸಿಯಂ ಕಾರ್ಬೊನೇಟ್ ಇದೆಯೆಂದ ಹಾಗಾಯಿತು. ಆದುದರಿಂದ ೧,೦೦,೦೦೦ ಗ್ರಾಂ (೧ ಘ.ಸೆಂ.ಮೀ. ನೀರು ೧ ಗ್ರಾಂ ನೀರಿಗೆ ಸಮ) ನೀರಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್‌ನ ಪರಿಮಾಣವು ೧,೦೦,೦೦೦ x 0.015 / 100; ಅಂದರೆ ಪ್ರತಿ ೧೦೦ ಲೀಟರಿನಲ್ಲಿ ೧೫ ಭಾಗವಿರುತ್ತದೆ. ೧,೦೦,೦೦೦ ಭಾಗ ನೀರಿನಲ್ಲಿ ಒಂದು ಕ್ಯಾಲ್ಸಿಯಂ ಇದ್ದರೆ ಅದು ಒಂದು ಡಿಗ್ರಿ ಗಡಸುತನವಾಗುತ್ತದೆ. ಇದರಂತೆ ಮೇಲೆ ವಿವರಿಸಿದ ನೀರಿನಲ್ಲಿ ೧೫ ಡಿಗ್ರಿ ತಾತ್ಕಾಲಿಕ ಗಡಸುತನವಿದೆ ಎಂದಾಗುತ್ತದೆ.

ಸ್ಥಿರಗಡಸುತನ

ಸ್ಥಿರ ಗಡಸುತನವು ಯಾವಾಗಲೂ ಕ್ಯಾಲ್ಸಿಯಂ ಸಲ್ಫೇಟಿನಿಂದ ಬರುವುದೆಂದು ನಂಬಲಾಗಿದೆ. ಇದು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಸಲ್ಫೇಟ್ ಮತ್ತು ಕ್ಲೋರೈಡ್‌ಗಳಿಂದಾಗಿಯೂ ಬರುವ ಸಾಧ್ಯತೆ ಇರುತ್ತದೆ.

ನೂರು ಗ್ರಾಂ ನೀರನ್ನು ಚೆನ್ನಾಗಿ ಕುದಿಸಿ ಅದರಲ್ಲಿರುವ ಕಾರ್ಬನ್ ಡೈ ಆಕ್ಸೈಡನ್ನು ಹೊರಹಾಕಬೇಕು. ಇದಕ್ಕೆ N/೧೦ ರ ೧೦ ಘ.ಸೆಂ.ಮೀ. ಸೋಡಿಯಂ ಹೈಡ್ರಾಕ್ಸೈಡ್‌ ಮತ್ತು ಅದೇ ಪರಿಮಾಣದ ಸೋಡಿಯಂ ಕಾರ್ಬೊನೇಟನ್ನು ಬೆರೆಸಬೇಕು. ಅನಂತರ, ಇದರ ಪರಿಮಾಣವು ಸಾಧಾರಣ ೪೦ ಘ.ಸೆಂ.ಮೀ. ಆಗುವವರೆಗೆ ಇಂಗಿಸಬೇಕು; ಮತ್ತು ದ್ರಾವಣವನ್ನು ತಂಪು ಮಾಡಿ ಶೋಧಿಸಬೇಕು. ಶೋಧಿಸಿದ ಕಾಗದದ ಮೇಲಿರುವ ಅವಶೇಷಗಳನ್ನು ಕಾರ್ಬನ್ ಡೈ ಆಕ್ಸೈಡ್ ಸೇರಿರದ ಬಟ್ಟಿ ಇಳಿಸಿದ ನೀರಿನಿಂದ ತೊಳೆಯಬೇಕು. ತೊಳೆದ ನೀರಿನಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ಇಲ್ಲವೆಂದು ಖಚಿತಮಾಡಿಕೊಳ್ಳಬೇಕು; ಸೋಡಿಯಂ ಹೈಡ್ರಾಕ್ಸೈಡಿನ ಇರವನ್ನು ತಿಳಿಯಲು ಫಿನಾಫ್ತಲೀನನ್ನು ಉಪಯೋಗಿಸಬಹುದು. ಹೀಗೆ ಶೋಧಿಸ ಪಡೆದ ಈ ದ್ರಾಣವವನ್ನು ೧೦೦ ಘ.ಸೆಂ.ಮೀ. ಆಗುವಂತೆ ಮಾಡಿ ಅದರಲ್ಲಿ ಪ್ರತಿಕ್ರಿಯೆ ಆಗದಿರುವ ಕ್ಷಾರವನ್ನು N/೧೦ ಸಲ್ಫ್ಯೂರಿಕ್ ಆಮ್ಲವನ್ನುಪಯೋಗಿಸಿ ತಿಳಿದುಕೊಳ್ಳಬೇಕು; ಈ ಸಂದರ್ಭದಲ್ಲಿ ಮಿಥೈಲ್ ಆರೆಂಜನ್ನು ಸೂಚಕ ಬಣ್ಣವಾಗಿ ಉಪಯೋಗಿಸಬಹುದು.

ಕ್ಷಾರವನ್ನು (N/೧೦ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಸೋಡಿಯಂ ಕಾರ್ಬೊನೇಟ್, ಪ್ರತಿಯೊಂದೂ ೧೦ ಘ.ಸೆಂ.ಮೀ.) ತಟಸ್ಥಗೊಳಿಸಲು ಬೇಕಾದ N/೧೦ ಸಲ್ಫ್ಯೂರಿಕ್ ಆಮ್ಲದ ಪರಿಣಾಮವನ್ನು ಗೊತ್ತು ಮಾಡಬೇಕು. ಅನಂತರ ನೀರಿನಲ್ಲಿರುವ ಅಧಿಕ ಕ್ಷಾರವನ್ನು ತಟಸ್ಥಗೊಳಿಸಲು ಬೇಕಾದ N/೧೦ ಸಲ್ಫ್ಯೂರಿಕ್ ಆಮ್ಲದ ಪರಿಮಾಣವನ್ನು ಗೊತ್ತು ಮಾಡಬೇಕು. ಅನಂತರ ನೀರಿನಲ್ಲಿರುವ ಅಧಿಕ ಕ್ಷಾರವನ್ನು ತಟಸ್ಥಗೊಳಿಸಲು ಬೇಕಾದ N/೧೦ ಸಲ್ಫ್ಯೂರಿಕ್ ಆಮ್ಲದ ಪರಿಮಾಣವನ್ನು ಕಂಡುಹಿಡಿಯಬೇಕು. ಇವೆರಡರ ವ್ಯತ್ಯಾಸವೇ ನೀರಿನ ಸ್ಥಿರವಾದ ಗಡಸುತನವನ್ನು ಹೋಗಲಾಡಿಸಲು ಬೇಕಾದ ಕ್ಷಾರದ ಸಮಗಾತ್ರದ ಆಮ್ಲ. ಈ ಸಂದರ್ಭದಲ್ಲಿ ೨೦ ಘ.ಸೆಂ.ಮೀ. ಆಮ್ಲವು ೧೦ ಘ.ಸೆಂ.ಮೀ. N/೧೦ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ೧೦ ಘ.ಸೆ.ಮೀ. ಸೋಡಿಯಂ ಕಾರ್ಬೊನೇಟ್‌ಗೆ ಸಮವಾಗಿರುತ್ತದೆ. ಹೆಚ್ಚಿನ ಕ್ಷಾರವನ್ನು ತಟಸ್ಥಗೊಳಿಸಲು ೧೬ ಘ.ಸೆಂ.ಮೀ. N/೧೦ ಸಲ್ಫ್ಯೂರಿಕ್ ಆಮ್ಲ ಬೇಕಾಗುತ್ತದೆಂದು ಇಟ್ಟುಕೊಳ್ಳೋಣ. ಆಗ ೨೦ – ೧೬ = ೪ ಘ.ಸೆಂ.ಮೀ. N/೧೦ ಸಲ್ಫ್ಯೂರಿಕ್ ಆಮ್ಲವು ಸ್ಥಿರ ಗಡಸುತನಕ್ಕೆ ಕಾರಣವಾದ ಲವಣಗಳನ್ನು ಹೋಗಲಾಡಿಸಲು ಬೇಕಾದ ಕ್ಷಾರದ ಸಮಪರಿಮಾಣವೆಂದಾಗುತ್ತದೆ.

೧ ಘ.ಸೆಂ.ಮೀ. N/೧೦ ಸಲ್ಫ್ಯೂರಿಕ್ ಆಮ್ಲ = ೦.೦೫ ಗ್ರಾಂ ಕ್ಯಾಲ್ಸಿಯಂ ಕಾರ್ಬೊನೇಟ್ ಆದುದರಿಂದ, ೪ ಘ.ಸೆಂ.ಮೀ. N/೧೦ ಸಲ್ಫ್ಯೂರಿಕ್ ಆಮ್ಲ = ೧೦೦ ಗ್ರಾಂ ನೀರಿನಲ್ಲಿ ೦.೦೦೫ x ೪ ಗ್ರಾಂ ಕ್ಯಾಲ್ಸಿಯಂ ಕಾರ್ಬೊನೇಟ್.

ಆದುದರಿಂದ, ಪ್ರತಿ ೧,೦೦,೦೦೦ ಭಾಗಕ್ಕೆ ಸ್ಥಿರಗಡಸುತನವು

೦.೦೨೦ x ೧.೦೦,೦೦೦ / ೧೦೦ = ೨೦ ಕ್ಕೆ ಸಮ.

ನೀರಿನ ಒಟ್ಟು ಗಡಸುತನ ನೀರಿನ ತಾತ್ಕಾಲಿಕ ಕಠಿಣತೆ ಮತ್ತು ಸ್ಥಿರ ಕಠಿಣತೆಗಳ ಮೊತ್ತ.

ಗಡಸುತನವನ್ನು ನಿರ್ಧರಿಸುವುದು : ಕೆಲವು ವೇಳೆ ಗಡಸುತನವನ್ನು ಆದರ್ಶ ಮಾನ ದರ್ಜೆಯ ಸಾಬೂನಿನ ದ್ರಾವಣದೊಡನೆ ಅದು ಉಂಟು ಮಾಡುವ ನೊರೆಯಿಂದ ನಿರ್ಣಯಿಸಲಾಗುತ್ತದೆ. ಆದರೆ ರಾಸಾಯನಿಕ ವಿಧಾನದಿಂದ ನಿರ್ಧರಿಸುವುದು ಸಮಂಜಸವಾದ ಕ್ರಮ.

ನೀರಿನ ಕ್ಷಾರತೆ ಕಾರ್ಬೊನೇಟ್ ಮತ್ತು ಬೈಕಾರ್ಬೊನೇಟ್‌ಗಳಿಂದಾಗಿ ಉಂಟಾಗುತ್ತದೆ. ನೀರಿಗೆ ಪಿನಾಫ್ತಲಿನ್ ಸೇರಿಸಿದಾಗ ಬಣ್ಣ ನಸುಗೆಂಪಾದರೆ ಕಾರ್ಬೊನೇಟ್‌ಗಳು ಇವೆಯೆಂದು ತಿಳಿಯಬೇಕು. ಮೊದಲು ೧೦೦ ಘ.ಸೆಂ.ಮೀ. ನೀರನ್ನು N/೫೦ ಹೈಡ್ರೋಕ್ಲೋರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲದ ಜೊತೆ ಅನುಮಾಪನ ಮಾಡಬೇಕು. ಆಗ ಫಿನಾಪ್ತಲಿನನ್ನು ಸೂಚಕ ಬಣ್ಣವಾಗಿ ಉಪಯೋಗಿಸಬೇಕು. ಇದರಿಂದ ಕಾರ್ಬೊನೇಟ್‌ಗಳು ಬೈಕಾರ್ಬೊನೇಟ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ.

ಇನ್ನೊಂದು ಸೀಸೆಯಲ್ಲಿ ೧೦೦ ಘ.ಸೆಂ.ಮೀ. ನೀರು ತೆಗೆದುಕೊಳ್ಳಬೇಕು. ಇದು N/೫೦ ಹೈಡ್ರೋಕ್ಲೋರಿಕ್ ಆಮ್ಲದಿಂದ ಅಥವಾ ಸಲ್ಫ್ಯೂರಿಕ್ ಆಮ್ಲದಿಂದ ಅನುಮಾಪನ ಮಾಡಬೇಕು; ಈ ಸಂದರ್ಭದಲ್ಲಿ ಮಿಥೈಲ್ ಆರೆಂಜನ್ನು ಸೂಚಕ ಬಣ್ಣವಾಗಿ ಉಪಯೋಗಿಸಬೇಕು. ಅದರ ಬಣ್ಣ ನಸುಗೆಂಪಾಗುವವರೆಗೆ ಅನುಮಾಪನ ಮಾಡಬೇಕು. ಆಗ ನೀರಿನಲ್ಲಿರುವ ಬೈಕಾರ್ಬೊನೇಟಿನ ಜೊತೆ ಅನುಮಾಪನ ಮಾಡಿದಂತಾಗುತ್ತದೆ.

೧. ಫಿನಾಫ್ತ್‌ಲಿನನ್ನು ಸೂಚಕ ಬಣ್ಣವಾಗಿ ಉಪಯೋಗಿಸಿದಾಗ ಬೇಕಾದ ಆಮ್ಲದ ಪರಿಣಾಮ x ೨ = ಕಾರ್ಬೊನೇಟ್ ತಟಸ್ಥಗೊಳಿಸಲು ಉಪಯೋಗಿಸಿದ ಆಮ್ಲದ ಪರಿಣಾಮ.

೨. ಮಿಥೈಲ್ ಆರೆಂಜನ್ನು ಸೂಚಕಬಣ್ಣವಾಗಿ ಉಪಯೋಗಿಸಿದಾಗ ಬೇಕಾದ ಆಮ್ಲದ ಪರಿಣಾಮ – (ಕಳೆದಾಗ) = ಕಾರ್ಬೊನೇಟ್‌ನ್ನು ತಟಸ್ಥಗೊಳಿಸಲು ಉಪಯೋಗಿಸಿದ ಆಮ್ಲದ ಪರಿಮಾಣ = ಬೈಕಾರ್ಬೊನೇಟನ್ನು ತಟಸ್ಥಗೊಳಿಸಲು ಉಪಯೋಗಿಸಿದ ಆಮ್ಲ.

ಒಂದು ನಿಶ್ಚಿತ ಸಂದರ್ಭದಲ್ಲಿ ೧೦೦ ಘ.ಸೆಂ.ಮೀ. ನೀರಿನಲ್ಲಿರುವ ಫಿನಾಫ್ತ್‌ಲಿನ್‌ನ ನಸುಗೆಂಪು ಬಣ್ಣವನ್ನು ಹೋಗಲಾಡಿಸಲು ೫ ಘ.ಸೆಂ.ಮೀ. N/೫೦ ಹೈಡ್ರೋಕ್ಲೋರಿಕ್ ಆಮ್ಲ ಬೇಕಾಗುವುದೆಂದಿಟ್ಟುಕೊಳ್ಳೋಣ ಮತ್ತು ೧೦೦ ಘ.ಸೆಂ.ಮೀ. ನೀರಿನಲ್ಲಿರುವ ಮಿಥೈಲ್ ಆರೆಂಜಿನ ಹಳದಿ ಬಣ್ಣವನ್ನು ನಸುಗೆಂಪು ಬಣ್ಣಕ್ಕೆ ಪರಿವರ್ತಿಸಲು ೧೮ ಘ.ಸೆಂ.ಮೀ. N/೧೦ ಹೈಡ್ರೋಕ್ಲೋರಿಕ್ ಆಮ್ಲ ಬೇಕೆಂದು ಭಾವಿಸೋಣ. ಇದರಿಂದ ತಿಳಿಯುವುದೇನೆಂದರೆ :

೧. ೧೦೦ ಘ.ಸೆಂ.ಮೀ. ನೀರಿನಲ್ಲಿರುವ ಕಾರ್ಬೊನೇಟನ್ನು ತಟಸ್ಥಗೊಳಿಸಲು ಬೇಕಾದ ಆಮ್ಲದ ಪರಿಣಾಮ = ೫ x ೨ = ೧೦ = ಘ.ಸೆಂ.ಮೀ. N/೫೦ ಹೈಡ್ರೋಕ್ಲೋರಿಕ್ ಆಮ್ಲ

೨. ೧೦೦ ಘ.ಸೆಂ.ಮೀ. ನೀರಿನಲ್ಲಿರುವ ಬೈ ಕಾರ್ಬೊನೇಟನ್ನು ತಟಸ್ಥಗೊಳಿಸಲು ಬೇಕಾದ ಆಮ್ಲದ ಪರಿಣಾಮ ೧ ಘ.ಸೆಂ.ಮೀ. N/೫೦ ಹೈಡ್ರೋಕ್ಲೋರಿಕ್ ಆಮ್ಲ = ೧೮ – ೧೦ = ೮ ಘ.ಸೆಂ.ಮೀ. N/೧೦ ಹೈಡ್ರೋಕ್ಲೋರಿಕ್ ಆಮ್ಲ. ೧ ಘ.ಸೆಂ.ಮೀ. N/೫೦ ಹೈಡ್ರೋಕ್ಲೋರಿಕ್ ಆಮ್ಲ = ೦.೦೦೧೦೬ ಗ್ರಾಂ ಸೋಡಿಯಂ ಕಾರ್ಬೊನೇಟ್. ೧ ಘ.ಸೆಂ.ಮೀ. N/೫೦ ಹೈಡ್ರೋಕ್ಲೋರಿಕ್ ಆಮ್ಲ = ೦.೦೦೧೬೮ ಗ್ರಾಂ ಸೋಡಿಯಂ ಬೈ ಕಾರ್ಬೊನೇಟ್. ಇದೇ ಪ್ರಕಾರ, ೧೦ ಘ.ಸೆಂ.ಮೀ. ನೀರಿನಲ್ಲಿರುವ ಸೋಡಿಯಂ ಕಾರ್ಬೊನೇಟ್‌ನ ತೂಕ = ೧೦ x ೦.೦೦೧೦೬ = ೦.೦೧೦೬ ಗ್ರಾಂಗಳು

ಆದುದರಿಂದ ೧೦೦ ಲೀಟರ್ ನೀರಿನಲ್ಲಿರುವ ಸೋಡಿಯಂ ಕಾರ್ಬೊನೇಟ್ = ೧,೦೦,೦೦೦ – ೦.೦೧೦೬ / ೧೦೦ = ೧೦.೬ ಗ್ರಾಂ

೧೦೦ ಘ.ಸೆಂ.ಮೀ. ನೀರಿನಲ್ಲಿರುವ ಬೈಕಾರ್ಬೊನೇಟ್‌ನ ತೂಕ = ೮ x ೦.೦೦೧೬೮ = ೦.೦೧೩೪೪ ಗ್ರಾಂಗಳು

ಆದುದರಿಂದ, ೧೦೦ ಲೀಟರ್ ನೀರಿನಲ್ಲಿರುವ ಸೋಡಿಯಂ ಬೈ ಕಾರ್ಬೊನೇಟ್‌ = ೧,೦೦,೦೦೦ – ೦.೦೧೩೪೪ / ೧೦೦ = ೧೩.೪೪ ಗ್ರಾಂಗಳು.

ಪ್ರಮುಖ ಖನಿಜ ಘಟಕಗಳು

ಸಿಲಿಕ : ಒಂದು ಲೀಟರ್ ನೀರನ್ನು ಇಂಗಿಸಿ ಸಿಕ್ಕಿದ ಘನ ಪದಾರ್ಥಗಳನ್ನು ಸುಟ್ಟು ಇದನ್ನು ಕಂಡುಹಿಡಿಯಬೇಕು. ಇದನ್ನು ಸಿಲಿಕಾನ್ ಡೈ ಆಕ್ಸೈಡ್ ಆಗಿ ನಿರೂಪಿಸಬೇಕು.

ಕಬ್ಬಿಣ : ಸಿಲಿಕವನ್ನು ಗೊತ್ತು ಮಾಡುವಾಗ ದೊರೆತ ಶೋಧಿತ ದ್ರವದಿಂದ ನೀರಿನಲ್ಲಿರುವ ಕಬ್ಬಿಣವನ್ನು (FeO) ಕಂಡುಹಿಡಿಯಬೇಕು. ಇದನ್ನು ಕಬ್ಬಿಣದ ಆಕ್ಸೈಡ್‌ಆಗಿ ನಿರೂಪಿಸಬೇಕು.

ಸುಣ್ಣ : ಕಬ್ಬಿಣದ ಪರಿಮಾಣವನ್ನು ಅಂದಾಜು ಮಾಡುವಾಗ ದೊರೆತ ಶೋಧಿತ ದ್ರವದಿಂದ ಸುಣ್ಣದಂಶವನ್ನು ಕಂಡುಹಿಡಿಯಬೇಕು. ಇದನ್ನು ಗಾತ್ರಾತ್ಮಕವಾಗಿ ಅಥವಾ ಭಾರಾತ್ಮಕವಾಗಿ ಸುಣ್ಣದ ಆಕ್ಸೈಡ್ ರೂಪದಲ್ಲಿ ಗೊತ್ತು ಮಾಡಬಹುದು.

ಮೆಗ್ನೀಸಿಯಂ : ಸುಣ್ಣವನ್ನು ಅಂದಾಜು ಮಾಡುವಾಗ ದೊರೆತ ಶೋಧಿತ ದ್ರವದಿಂದ ಮೆಗ್ನೀಸಿಯಂನ್ನು ಕಂಡುಹಿಡಿಯಬೇಕು. ಇದರಲ್ಲಿ ಮೆಗ್ನೀಸಿಯಂನ್ನು ಅದರ ಫಾಸ್ಫೇಟಾಗಿ ಪ್ರಕ್ಷೇಪಿಸಬೇಕು. ಮೆಗ್ನೀಸಿಯಂ ಆಕ್ಸೈಡ್ ರೂಪದಲ್ಲಿ ಅಂದಾಜು ಮಾಡಬೇಕು.

ಕ್ಷಾರ ಲೋಹಗಳು : ಸಲ್ಫೇಟ್‌ಗಳು, ಕಬ್ಬಿಣ, ಮೆಗ್ನೀಸಿಯಂ, ಸುಣ್ಣ ಮತ್ತು ಬೇರಿಯಂಗಳನ್ನು ವಿಶೇಷ ಕ್ರಿಯೆಗಳಿಂದ ಬೇರ್ಪಡಿಸಿದ ಮೇಲೆ ಕ್ಷಾರ ಲೋಹದ ಕ್ಲೋರೈಡ್‌ಗಳನ್ನು ಸುಟ್ಟು ತೂಕ ನೋಡಬೇಕು.

ನೀರಿನೊಡನೆ ಬೆರಕೆಯಾಗದ ಮತ್ತು ಲವಣದೊಡನೆ ಸೇರಿಸುವ ಅಮೋನಿಯ, ಆಲ್ಬ್ಯೂಮಿನೊಡಗೂಡಿದ ಅಮೋನಿಯಂ, ನೈಟ್ರೇಟ್‌, ನೈಟ್ರೈಟ್ ಆಮ್ಲಜನಕವನ್ನು ೧೫ ನಿಮಿಷ ಮತ್ತು ೪ ಗಂಟೆಗಳಲ್ಲಿ ಹೀರಿಕೊಳ್ಳುವ ಪರಿಮಾಣ ಮುಂತಾದವುಗಳನ್ನು ನೀರಿನ ವಿಶ್ಲೇಷಣೆಗೆ ಕ್ರಮಪಡಿಸಿದ ರೀತಿಯನ್ನನುಸರಿಸಿ ಕಂಡುಹಿಡಿಯಬೇಕು.

ಬ್ಯಾಕ್ಟೀರಿಯಾಗಳ ಪರೀಕ್ಷೆ

೫೦೦ ಘ.ಸೆಂ.ಮೀ. ಮಾದರಿ ನೀರನ್ನು ೬೦೦ ಘ.ಸೆಂ.ಮೀ. ಗಾತ್ರದ ಸೂಕ್ಷ್ಮಜೀವಿನಾಶಗೊಳಿಸಿದ ಸೀಸೆಗಳಲ್ಲಿ ತುಂಬಬೇಕು. ಇದನ್ನು ಮಂಜುಗೆಡ್ಡೆ ಜೊತೆ ಪ್ಯಾಕ್ ಮಾಡಿ ಕೂಡಲೇ ವಿಶ್ಲೇಷಣೆ ಮಾಡಲು ರವಾನಿಸಬೇಕು. ಸೂಕ್ಷ್ಮಜೀವಿ ಸಾಕಣೆ ಮಾಧ್ಯಮದ ಪ್ರಣಾಳಗಳಲ್ಲಿ ೫೦, ೨೦, ೧೦ ಮತ್ತು ೫ ಘ.ಸೆಂ.ಮೀ. ಪರಿಮಾಣದಲ್ಲಿಡಬೇಕು. ಈ ಸೀಸೆಗಳನ್ನು ೩೭ ಸೆ. ನಲ್ಲಿ ೪೮ ಗಂಟೆಗಳ ಕಾಲ ಸೂಕ್ಷ್ಮಜೀವಿಗಳನ್ನು ಬೆಳೆಯಲು ಬಿಟ್ಟು, ಅನಂತರ ಆಮ್ಲ, ಅನಿಲ ಮತ್ತು ಮಸಕಾಗಿರುವಿಕೆಗಳಿಗೆ ಪರೀಕ್ಷಿಸಬೇಕು. ಈ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾಗಳಿವೆಯೆಂದು ಕಂಡುಬಂದರೆ ನೀರಿನಲ್ಲಿ ಬ್ಯಾಸಿಲಸ್ ಕೊಲೈಗಳ ಇರವನ್ನು ತಿಳಿದ ಹಾಗಾಯಿತು. ಇದಕ್ಕೆ ಉಪಯೋಗಿಸುವ ಗಂಜಿಯಂತ ಬೆಳೆಯುವ ಮಾಧ್ಯಮದಲ್ಲಿ ಬೈಲ್ ಲವಣ-ಲಿಟ್ ಮಸ್ = ಲ್ಯಾಕ್ಟೋಸ್ ಇರುತ್ತದೆ. ಕೆಲವು ವೇಳೆ ಲ್ಯಾಕ್ಟೋಸ್‌ನ ಬದಲು ಗ್ಲೂಕೋಸ್ ಉಪಯೋಗಿಸುವುದೂ ಇದೆ. ಇದು ಹುದುಗು ಬರಿಸುವ ಸೂಕ್ಷ್ಮಜೀವಿಗಳ ಇರವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡುತ್ತದೆ. ಮಾದರಿ ನೀರಿನಲ್ಲಿ ಸೂಕ್ಷ್ಮಜೀವಿಗಳು ಇರುವ ಸೂಚನೆ ಕಂಡುಬಂದರೆ ಈ ಸೂಕ್ಷ್ಮಜೀವಿಗಳು ಮಲಕ್ಕೆ ಸಂಬಂಧಪಟ್ಟ ಬಿ. ಕೋಲೈಗಳೇ ಅಥವಾ ಅದೇ ಗುಂಪಿನ ಇತರ ಅಣುಜೀವಿಗಳೇ ಎಂದು ನಿರ್ಧರಿಸಬೇಕು. ಇವುಗಳಲ್ಲಿ ಹೆಚ್ಚಾಗಿ ಬ್ಯಾಸಿಲ್ಲಸ್ ಅರೋಜೆನಿಸ್‌ನ ಉಪಪಂಗಡಕ್ಕೆ ಸೇರಿದವುಗಳು ಪ್ರಬಲವಾದವುಗಳು. ಇವು ಮಣ್ಣು ಮತ್ತು ಸಸ್ಯಗಳಲ್ಲಿ ಹೆಚ್ಚಾಗಿ ಜೀವಿಸುತ್ತವೆ. ಇವುಗಳನ್ನು ಬ. ಕೋಲೈಗಳಿಂದ ಪ್ರತ್ಯೇಕಿಸಿ ಗುರುತಿಸಬೇಕಾದರೆ ಒಂದು ವಿಶೇಷ ಮಾಧ್ಯಮವನ್ನುಪಯೋಗಿಸಬೇಕು. ತಟಸ್ಥ – ಕೆಂಪು – ಲ್ಯಾಕ್ಟೋಸ್ – ಬೈಲ್ ಲವಣದಂಥ ಮಾಧ್ಯಮದಲ್ಲಿ ಬೆಳೆಸಬೇಕು. ಈ ಎರಡು ಬಗೆಯ ಸೂಕ್ಷ್ಮಜೀವಿಗಳ ಬೆಳವಣಿಗೆಯಲ್ಲಿ ವೈವಿಧ್ಯತೆಯಿರುವುದರಿಂದ ಅವುಗಳ ಗುಂಪನ್ನು ಪ್ರತ್ಯೇಕವಾಗಿ ನೋಡಬಹುದು.

ವಿಶ್ಲೇಷಣೆಯ ಅರ್ಥವಿವರಣೆ

ಆಲ್ಬ್ಯೂಮಿನಾಯ್ಡ್ ಅಮೋನಿಯ : ಅತಿ ಶುದ್ಧ ನೀರಿನಲ್ಲಿ ಆಲ್ಬ್ಯೂಮಿನಾಯ್ಡ್ ಅಮೋನಿಯ ೧,೦೦,೦೦೦ಕ್ಕೆ ೦.೦೪ ಭಾಗಕ್ಕಿಂತ ಹೆಚ್ಚು ಇರುವುದಿಲ್ಲ. ಸಾಧಾರಣ ಶುದ್ಧನೀರಿನಲ್ಲಿ ಇದು ೦.೦೦೮ ಭಾಗಕ್ಕಿಂತ ಹೆಚ್ಚು ಇರುವುದಿಲ್ಲ.

ನೀರಿನ ವರ್ಗೀಕರಣ

  ೧೦೦ ಘ.ಸೆಂ.ಮೀ. ನೀರಿನಲ್ಲಿ ಕೋಲಿ ಫಾರಂಗಳ ಸಂಖ್ಯೆ
ಬಹು ತೃಪ್ತಿಕರವಾದುದು ೧ ಕ್ಕಿಂತ ಕಡಮೆ
ತೃಪ್ತಿಕರವಾದುದು ೧ – ೨
ಸಂಶಯಾತ್ಮಕವಾದುದು ೩ – ೧೦
ಅತೃಪ್ತಿಕರವಾದುದು ೧೦ಕ್ಕಿಂತ ಹೆಚ್ಚು
ಕ್ಲೋರಿನ್‌ನಿಂದ ಉಪಚರಿಸಲ್ಪಟ್ಟ ನೀರು ಬಹು ತೃಪ್ತಿಕರ

 

ನೀರಿನಲ್ಲಿ ಸೇರಿರದ ಮತ್ತು ಲವಣಯುಕ್ತ ಅಮೋನಿಯ : ನೀರಿನ ಉಗಮವನ್ನು ಅವಲಂಬಿಸಿ ಇದರಲ್ಲಿ ಅತ್ಯಂತ ಹೆಚ್ಚಿನ ವ್ಯತ್ಯಾಸ ಅಂದರೆ, ೧,೦೦,೦೦೦ ದಲ್ಲಿ ೦.೦೦೫ – ೦.೧ ಭಾಗ ಕಂಡುಬರುತ್ತದೆ. ಆಳವಾದ ಬಾವಿಯ ನೀರಿನಲ್ಲಿ ೦.೧ ಭಾಗದಷ್ಟು ಕಂಡರೂ ಸಂಶಯಪಡಬೇಕಾಗಿಲ್ಲ.

ನೈಟ್ರೇಟ್ಗಳು : ಇದರ ಇರುವಿನ ಸೂಚನೆ ಕಂಡುಬಂದರೂ ಸಾಮಾನ್ಯವಾಗಿ ಇದು ಸಂಶಯ ಸೂಚಕವೆಂದು ಹೇಳಬಹುದು. ಕಾರಣ ಈ ನೈಟ್ರೇಟ್‌ಗಳು ನೀರು ಆಗ ತಾನೆ ಕಲುಷಿತವಾಗಿರುವುದನ್ನು ಸೂಚಿಸುತ್ತವೆ.

ನೈಟ್ರೇಟ್ಗಳು : ನೀರಿನಲ್ಲಿ ನೈಟ್ರೇಟ್ ಇದ್ದರೆ ಅದು ನೀರಿನ ಹಿಂದಿನ ಚರಿತ್ರೆಯನ್ನು ತಿಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಗೊಬ್ಬರ ಅಥವಾ ಊರಿನ ಕೊಚ್ಚೆನೀರಿನಿಂದ ಕಲುಷಿತವಾಗಿರುವುದನ್ನು ಸೂಚಿಸುತ್ತದೆ. ಎತ್ತರ ಪ್ರದೇಶದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಮತ್ತು ಚಿಲುಮೆ ನೀರಿನಲ್ಲಿ ನೈಟ್ರಿಕ್ ಸಾರಜನಕ ಪ್ರತಿ ೧,೦೦,೦೦೦ ಭಾಗ ನೀರಿನಲ್ಲಿ ಸೊನ್ನೆಯಿಂದ ೧.೫ ಭಾಗದ ಅಂತರದಲ್ಲಿರುತ್ತದೆ. ಬಾವಿಯ ನೀರು ಮೇಲ್ಭಾಗದಲ್ಲಿ ನೈಟ್ರೇಟ್‌ಗಳು ೦-೨೦ ಭಾಗ ಇರುತ್ತವೆ.

ಆಮ್ಲಜನಕದ ಹೀರುವಿಕೆ

ಹೆಚ್ಚು ಶುದ್ಧ ನೀರು ೧,೦೦,೦೦೦ ಕ್ಕೆ ೦.೦ – ೦.೫ ಭಾಗ
ಸಾಧಾರಣ ಮಟ್ಟದ ನೀರು ೧,೦೦,೦೦೦ ಕ್ಕೆ ೦.೧ – ೦.೩ ಭಾಗ
ಅಶುದ್ಧ ನೀರು ೧,೦೦,೦೦೦ ಕ್ಕೆ ೦.೪ ಭಾಗಕ್ಕಿಂತ ಹೆಚ್ಚು

 

ಕ್ಲೋರಿನ್ : ಇದು ಪ್ರತಿ ೧,೦೦,೦೦೦ ಕ್ಕೆ ೨.೫ ಭಾಗಕ್ಕಿಂತ ಹೆಚ್ಚಿರಬಾರದು.

ಗಡಸುತನ : ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸುವ ಗಡಸುತನ ೧೦ – ೧೨ ಡಿಗ್ರಿಗಿಂತ ಹೆಚ್ಚಿರಬಾರದು. ಸಿಲಿಕ : ಡಬ್ಬಿಯಲ್ಲಿ ಸಂಸ್ಕರಿಸಲು ಉಪಯೋಗಿಸುವ ನೀರಿನಲ್ಲಿ ೨೫೦ ಘ.ಸೆಂ.ಮೀ.ನಲ್ಲಿ) ಸಿಲಿಕ ಸ್ವಲ್ಪವೂ ಇರಬಾರದು. ಇಲ್ಲವೇ ರಾಸಾಯನಿಕವಾಗಿ ಕಂಡು ಹಿಡಿಯಲಾರದಷ್ಟು ಅಲ್ಪ ಪ್ರಮಾಣದಲ್ಲಿರಬೇಕು.