ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಧಮಾರ ಗಾಯನ ಶೈಲಿಯು ಧ್ರುಪದ ಗಾಯನ ಶೈಲಿಯಷ್ಟೇ ಪ್ರಾಚೀನ ಇತಿಹಾಸ ಹೊಂದಿದೆ. ಈ ಗಾಯನ ಶೈಲಿಯು ತನ್ನದೇ ಆದ ವೈಶಿಷ್ಟ್ಯತೆಯೊಂದಿಗೆ ಪ್ರಸಿದ್ಧಿ ಪ್ರಚಾರ ಪಡೆದುಕೊಂಡಿದೆ. ಛಂದ, ಅಲಂಖಾರ, ಭಾವ, ಸೌಂದರ್ಯ, ಶೈಲಿ ಹಾಗೂ ಜನಪದೀಯ ಸೊಗಡು, ಭಾಷೆ, ಪ್ರೇಮಭಕ್ತಿಯಿಂದ ಕೂಡಿದ ಧಮಾರ ಗಾಯನವು ರತಿ-ಕಾಮದೇವ ಮತ್ತು ಕೃಷ್ಣ ರಾಧೆಯರ ಕಥಾ ರೂಪದ ಗೀತೆಗಳಿಗೆ ಧಮಾರ ಗಾಯನವೆಂದು ಕರೆದಿದ್ದಾರೆ.

ಉಗಮ:

ನಮ್ಮ ಸಂಸ್ಕೃತಿಕ ಪರಂಪರೆಯಲ್ಲಿ ಆಚರಿಸುವಂತಹ ಹಬ್ಬಗಳಲ್ಲಿ ಹೋಳಿ ಹಬ್ಬವು ಒಂದಾಗಿದೆ. ಈ ಹಬ್ಬವು ತಿಂಗಳಪರ್ಯಂತ ಆಚರಿಸಿ ಹುಣ್ಣಿಮೆಯ ದಿವಸ ಕಾಮನನ್ನು ದಹಿಸುವ ಪದ್ದತಿ ಇಂದಿಗೂ ಇದೆ. ಈ ತಿಂಗಳಲ್ಲಿ ದಿನನಿತ್ಯವೂ ಕೂಡ ಬೇರೆ ಬೇರೆ ಸಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ನೃತ್ಯ, ನಾಟ್ಯ, ಸಂಗೀತ, ವೇಷಭೂಷಣಗಳು, ರಂಗು ರಂಗಿನ ಬಣ್ಣದಾಟ, ಹಾಡು, ಕುಣಿತ ಹೀಗೆ ವಿವಿಧ ರೀಯಿಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ಕೊನೆಯ ಹುಣ್ಣಿಮೆಯ ದಿನ ಅಂತರಂಗದ ಮನೋವಿಕಾರದ ಕಾಮನೆಗಳ ಪ್ರತೀಕವಾದ ಕಾಮನನ್ನು ಸುಟ್ಟು ಮೌಲ್ಯಾಧಾರಿತ ಬದುಕು ಸಾಗಿಸಬೇಕೆಂದು ಜೀವನ ಸಂದೇಶವೇ ಈ ಹಬ್ಬಾಗಿದೆ.

ಈ ರಾಷ್ಟ್ರೀಯ ಹೋಳಿ ಹಬ್ಬದಲ್ಲಿ ಕೃಷ್ಣ-ರಾಧೆಯರ ಪ್ರೇಮ ಕಥಾ ಗೀತೆ ಹಾಗೂ ಆಮರತಿಯರ ಪ್ರೇಮ ಮತ್ತು ವಿರಹ ಗೀತೆಗೆಳು ನೃತ್ಯ ರೂಪಕಗಳಲ್ಲಿ ಹಾಡುವಂತಹ ‘ ಧಮಾರ ಅಥವಾ ಹೋರಿ’ (ಗೀತ)ಗಾಯನವೆಂದು ಕರೆಯುತ್ತೇವೆ.

ಭಾರತೀಯ ಸಂಗೀತ ತಜ್ಞ ಹಾಗೂ ವಾಗ್ಗೇಯಕಾರರು ಧ್ರುಪದ ಗಾಯನ ಶೈಲಿಯ ಅವಿಷ್ಕಾರಕನಾದ ರಾಜಾ ಮಾನಸಿಂಹತೋಮರನೇ ಧಮಾರ ಗಾಯನ ಶೈಲಿಯ ಅವಿಷ್ಕಾರಕನೆಂದು ಹೇಳಿದ್ದಾರೆ. ಇನ್ನೂ ಕೆಲವರು ಬ್ರಿಜ್ಭಾಷಾ ಕ್ಷೇತ್ರದ ಮಠ, ಮಂದಿರಗಳಲ್ಲಿ ಭಕ್ತಿ ಸಂಪ್ರದಾಯದಿಂದ ಹುಟ್ಟಿಕೊಂಡಿದೆ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡು ಅಭಿಪ್ರಾಯಗಳು ಮಾನ್ಯವಾಗಿವೆ.

ಇದನ್ನು ಶಾಬ್ದಿಕ ಅರ್ಥದೃಷ್ಟಿಯಿಂದ ನೋಡಿದರೆ ಧಮಾರ, ಧಮಾಲ, ಧಮಾರಿ, ಧಮಾಲಿ, ಹೋರಿ ಎಂದು ಕರೆಯುತ್ತಾರೆ. ಈ ಎಲ್ಲ ಶಬ್ದಗಳ ಮೂಲರೂಪವು ಒಂದೇ ಆಗಿದೆ. ಸಂಸ್ಕೃತದಲ್ಲಿ ‘ಧರ್’ ಎಂದರೆ ಸರಳವಾದ ಎತ್ತರ ದ್ವನಿ ಅಥವಾ ನಾಭಿಯಿಂದ ದೀರ್ಘವಾದ ಉಸಿರಿನಿಂದ ಎತ್ತರದ ದ್ವನಿಯಲ್ಲಿ ಹಾಕುವುದು ಎಂದರ್ಥ. ಇದಕ್ಕೆ ‘ಹೋರಿ’ ಎಂದು ಕೊಡಾ ಕರೆಯುತ್ತಾರೆ. ‘ಹೋರಿ’ ಇದು ಹೋಳಿಯ ಪದದಿಂದ ಬಂದಿದ್ದು. ಹೋಳಿ ಹಬ್ಬದಲ್ಲಿ ಹಾಡುವ ಹಾಡುಗಳಿಗೆ ‘ಹೋರಿ’ ಎಂದು ಕರೆಯುತ್ತಾರೆ. ಆದರೆ ‘ಧಮಾರ’ ಎಂಬ ಪದವು ಬಹಳ ಪ್ರಸಿದ್ಧಿ ಅಂದು ‘ಧಮಾರ’ ಗಾಯನವೆಂದು ಪ್ರಚಾರದಲ್ಲಿದೆ.

ವೈಶಿಷ್ಠ್ಯತೆ:

ಧ್ರುಪದ ಗಾಯನದಂತೆಯೇ ಧಮಾರ ಗಾಯನದಲ್ಲಿಯೂ ಸ್ಥಾಯಿ, ಅಂತರಾ ಎಂಬ ಎರಡು ಭಾವಗಳಿವೆ. ನೋಂ, ತೋಂ, ತನನನ ಎಂಬ ಪದಗಳಿಂದ ಆಲಾಪ ಪ್ರಾರಂಭವಾಗಿ, ಮಧ್ಯವಿಲಂಬಿತಲಯ, ಮಧ್ಯಲಯ ಧೃತ್ ಲಯಗದವರೆಗೆ ಬಹಳ ಸೌಂದರ್ಯಯುಕ್ತ ಆಲಾಪ ಮಾಡಿ ಶ್ರೋತೃಗಳನ್ನು ಸ್ವರಲೋಕಕ್ಕೆ ಕರೆದೊಯ್ದು ಮಂತ್ರಮುಗ್ಧರನ್ನಾಗಿ ಮಾಡಿ ಬಂದಿಶ್ ಹಾಡಲು ಪ್ರಾರಂಭಿಸುತ್ತಾರೆ. ಬಂದಿಶ್‌ವು ಕೂಡ 1, 2, 3, 3ನೇ ಕಾಲದಲ್ಲಿ ಹಾಡಿ, ಬೋಲಬಾಂಟ, ಪ್ರಾರಂಭಿಸುತ್ತಾರೆ. ಬಂದಿಶ್‌ವು ಊಡ 1, 2, 3, 4ನೇ ಕಾಲದಲ್ಲಿ ಹಾಡಿ ಬೋಲಬಾಂಟ, ಲಯಬಾಂಟಗಳ ಲಯಕಾರಿಯನ್ನು ಮಾಡಿ ಗಾಯನ ಸಮಾಪ್ತಿ ಮಾಡುತ್ತಾರೆ. ಇದರಲ್ಲಿ ಪದಗಳಿಗೆ (ಗೀತಕ್ಕೆ)ಅಷ್ಟೇ ಮಹತ್ವ ಕೊಡಲಾಗುತ್ತದೆ.

ಧಮಾರ ಗಾಯನವನ್ನು ಧ್ರುಪದದ ನಲ್ಕು ವಾಣಿಗಳ ಗಾಯಕರೂ ಹಾಡುತ್ತಾರೆ. ಧ್ರುಪದ ಗಾಯನ ಮುಗಿದ ನಂತರ ಧಮಾರ ಗಾಯನ ಮಾಡುವುದು ಧ್ರುಪದ ಗಾಯಕರಿಗೆ ಅನಿವಾರ್ಯವೆಂದೇ ಹೇಳಬಹುದು.

ಆದರೆ ಧ್ರುಪದ ಗಾಯನದಂತೆ ಧಮಾರ ಗಾಯನದಲ್ಲಿ ಘನ-ಗಾಂಭೀರ್ಯತೆ ಇರುವುದಿಲ್ಲ. ಏಕೆಂದರೆ ಧ್ರುಪದ ಗಾಐನವು ಭಕ್ತಿ ಮತ್ತು ಗಂಭೀತ ಪ್ರಧಾನವಾದುದು. ಆದರೆ ಧಮಾರವು ಚಂಚಲ ಹಾಗೂ ಶೃಂಗಾರ ಭಕ್ತಿ ಪ್ರಧಾನವಾಗಿದೆ. ಧಮಾರದಲ್ಲಿ ರಾಸಲೀಲೆಗಳ ವರ್ಣನೆ ಶೃಂಗಾರಮಯ ಪದ ಸಂಯೋಜನೆಯ ಕಾರಣದಿಂದ ಇದು ಮಾಧುರ್ಯತೆ ಹಾಗೂ ಸರಳತೆಯಿಂದ ಕೂಡಿದ ಲಾಲಿತ್ಯಪೂರ್ಣ ಗಾಯನ ಶೈಲಿಯಾಗಿದೆ.

ಧಮಾರ ಗಾಯನವು ‘ಧಮಾರ’ ತಾಲದಲ್ಲಿ ಮಾತ್ರ ಹಾಡುತ್ತಾರೆ. ನೇಪಾಳದ ಧ್ರುಪದ ಗಾಯಕರ ಪ್ರಕಾರ ಧಮಾರ ತಾಳವು ೩-೨-೨-೩-೨-೨ = (೧೪) ರಂತೆ ಮಾತ್ರಾಗಳ ವಿಭಜನೆಯಾಗದೇ ೩-೨-೩-೨-೨-೨=(೧೪) ರಂತೆ ಆಗಿದೆ. ಈ ಕಾರಣದಿಂದ ತೀವ್ರಗತಿಯಲ್ಲಿ ಲಯದ ಭೇದ ಕಂಡು ಬರುತ್ತದೆ. ಹೀಗಾಗಿ ಇದು ಗಾಯನಕ್ಕೆ ಕಠೀಣವಾಗಿದೆ. ಈ ಲಯದ ಗತಿಯಲ್ಲಿ ಅನೇಕ ಧಮಾರ ಗೀತೆಗಳ ಸಂಗ್ರಹವಿದೆ. ಆದರೆ ಮಧ್ಯಕಾಲದಿಂದ ಧಮಾರ ತಾಲವು ೫-೨-೩-೪=(೧೪)ರಂತೆ ವಿಭಜನೆಗೊಂಡು ಇದೇ ಲಯದಲ್ಲಿ ಗಾಯನ ಛಂದವು ಅಳವಡಿಸಿಕೊಂಡು ಗಾಯನ ಮಾಡುತ್ತಾರೆ.

ಭಕ್ತ ಸಂಪ್ರದಾಯದ ಕೊಡುಗೆ :

ಕೆಲವು ವಿದ್ವಾಂಸರ ಅಭಿಪ್ರಾಯದಂತೆ ಧಮಾರ ಗಾಯನದ ಉಗಮ ಪ್ರಾಚೀನ ಕಾಲದ ದೇವಾಲಯದಲ್ಲಿ ಆಗಿದೆ ಎಂದು ಹೇಳಿದ್ದಾರೆ.  ರಾಧಾ ಕೃಷ್ಣೋಪಾಸಕ ಸಂತರ ರಚನೆಗಳು ಅಧಿಕವಾಗಿವೆ. ವೈಷ್ಣವ ಸಂಪ್ರದಾಯದ ಕೀರ್ತನಕಾರರು ಮತ್ತು ಸಮಾಜ ಗಾಯಕರ ಪರಂಪರಾಗತ ರಚನೆಗಳಲ್ಲಿ ಧಮಾರ ಶೈಲಿಗೆ ಪ್ರಮುಖ ಸ್ಥಾನವಿದೆ. ಮಧ್ಯಕಾಲದಲ್ಲಿ ಭಕ್ತಿ ಆಂದೋಲನದ ಪ್ರಚಾರದ  ಜೊತೆಗೆ ವಿವಿಧ ಸಂಪ್ರದಾಯಗಳ ಅವಿರ್ಭಾವವಾಗಿದೆ.

ಹರಿದಾಸ ಸಂಪ್ರದಾಯ, ಗೌಡಿಯ ಸಂಪ್ರದಾಯ,

ರಾಮಾನುಜ ಸಂಪ್ರದಾಯ, ವಲ್ಲಭ ಸಂಪ್ರದಾಯ,

ರಾಧಾ ವಲ್ಲಭ ಸಂಪ್ರದಾಯ, ನಿಂಬಾರ್ಕ ಸಂಪ್ರದಾಯ ಇತ್ಯಾದಿ.

ಈ ಎಲ್ಲ ಸಂಪ್ರದಾಯದ ಆಚಾರ್ಯರು ತಮ್ಮ ವಾಣಿಗಳ ಮಾಧ್ಯಮದಿಂದ ಸ್ವರಚಿತ ಪದಗಳನ್ನು ರಚಿಸಿ ಸಾಹಿತ್ಯದ ಸೃಜನ ಕ್ರಿಯೆಯನ್ನು ಬಹುಮುಖವಾಗಿ ಬೆಳೆಸಿದ್ದಾರೆ. ಈ ಸಂಪ್ರದಾಯಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಹರಿದಾಸ ಸಂಪ್ರದಾಯ :

ವಾಣಿಗಳನ್ನು ಈ ಸಂಪ್ರದಾಯದಲ್ಲಿ ಅತ್ಯಂತ ಪೂಜ್ಯವಾಗಿ ಕಾಣಲಾಗುತ್ತಾದೆ. ಇಲ್ಲಿ ಗುರುಗಳ ವಾನಿಯೇ ವೇದ. ಹೀಗಾಗಿ ಇಲ್ಲಿ ಭಕ್ತಿ, ಭಾವ ಸ್ಥಿರತೆಯು ಉಳಿಸಿಕೊಂಡು ಬಂದಿದೆ. ಇದರ ಪ್ರವರ್ತಕರು ಸ್ವಾಮಿ ಹರಿದಾಸರೆಂದು ಹೇಳಲಾಗಿದೆ. ಇದರಲ್ಲಿ ಸಖೀ ಸಂಪ್ರದಾಯವೂ ಕೂಡ ಇದೆ. ಪ್ರವರ್ತಕರು  ಆಚಾರ್ಯ ಲಲಿತಾ ಸಖೀಯರ ಉಪಾಸಕರಾಗಿದ್ದರಿಂದ ಈ ಸಂಪ್ರದಾಯಕ್ಕೆ ‘ಸಂಜ್ಞೆ’  ಪ್ರಧಾನವಾದ ‘ಸಖಿ ಸಂಪ್ರದಾಯ’ ವೆಂದು ಕರೆದಿದ್ದಾರೆ.

ವಲ್ಲಭ ಸಂಪ್ರದಾಯ :

ಶ್ರೀವಲ್ಲಭಾಚಾರ್ಯರು ಈ ಸಂಪ್ರದಾಯದ ಪ್ರವರ್ತಕರಾಗಿದ್ದಾರೆ. ಇದರ ಗಾಯನ ಪದ್ಧತಿಯನ್ನು ಕೀರ್ತನೆಗಳು ಎಂದು ಕರೆಯಲಾಗುತ್ತದೆ. ವೈಷ್ಣವ ಮಂದಿರಗಳಲ್ಲಿ ರಾಗ, ಭೋಗ, ಶೃಂಗಾರಮಯವಾದ ವ್ಯಾಖ್ಯಾನಶಾಸ್ತ್ರಗಳನ್ನು ಕಲಿತವರಿಗೆ ಮಾತ್ರ ಮಂದಿರಗಳಲ್ಲಿ ಪ್ರವೇಶ ಕೊಡಲಾಗುತ್ತಿತ್ತು. ಈ ಸಂಪ್ರದಾಯದಲ್ಲಿ ದಾಶ್ಯಸೇವಾ, ನೃತ್ಯಸೇವಾ, ವಾರ್ಷಿಕ ಸೇವಾ, ವಾತ್ಸಲ್ಯ ಅಥವಾ ಮಾಧುರ್ಯ ಭಕ್ತಿಭಾವಗಳಲ್ಲಿ ಪ್ರಧಾನವಾಗಿರುತ್ತವೆ. ಇಲ್ಲಿ ಕೀರ್ತನೆಗಳೇ ಮುಖ್ಯವಾಗಿರುವುದರಿಂದ ಇದನ್ನು ‘ಕೀರ್ತನ ಸಮಾಜ’ ವೆಂದೇ ಕರೆಯುತ್ತಾರೆ. ಈ ಪರಂಪರೆಯು ಇಂದಿಗೂ ಜೀವಂತವಾಗಿದೆ.

ರಾಧಾ ವಲ್ಲಭ ಸಂಪ್ರದಾಯ :

ಇದು ಶುದ್ಧರಸ, ಮಾರ್ಗೀಯ ಭಕ್ತಿ ಸಂಪ್ರದಾಯವಾಗಿದೆ. ರಾಧಾ ವಲ್ಲಭರೇ ಇದರ ಆರಾಧ್ಯ ದೇವರಾಗಿದ್ದಾರೆ. ಪ್ರೇಮವು ಇದರ ಮೂಲಾಧಾರ. ಪ್ರೇಮ ಪ್ರತೀಕವಾಗಿ ಗೋಸ್ವಾಮಿಜೀಯವರು ಪೂಜೆ, ಅರ್ಚನೆಯ ವಿಧಿ-ವಿಧಾನಗಳಿಂದ ಅಷ್ಟಮಯ ಸೇವಾ, ಉತ್ಸವ ಸೇವಾ ಮುಂತಾದವುಗಳನ್ನು ಆಚರಿಸುತ್ತಾರೆ. ಇದರಲ್ಲಿ ಪರಂಪರಾಗತ ‘ರಸಿಕ ವಾಣಿ’ಗಳಿವೆ. ಪ್ರೇಮಿಗಳ ಸುಂದರ ವರ್ಣನೆಗಳಿವೆ. ಉದಾಹರಣೆಗಾಗಿ ರಾಗ ಬಿಭಾಸದಲ್ಲಿ ಸಂಪ್ರದಾಯದ ಪ್ರೇಮ ಸಿದ್ಧಾಂತದ ಪ್ರತಿಪಾದನೆ ಮಾಡಿದ್ದಾರೆ.

ಜೋಯಿ ಜೋಯಿ ಪ್ಯಾರೈ ಕರೋ ಸೋಯಿ ಮೋಹಿ ಭಾವೈ |
ಭಾವೈ
ಮೋಹಿ ಜೋಯಿ ಸೋಯಿ ಕರೈ ಪ್ಯಾರೈ |

ನಿಂಬಾರ್ಕ ಸಂಪ್ರದಾಯ :

ಶ್ರೀ ನಿಂಬಾರ್ಕಆಚಾರ್ಯರು ಈ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ನಿಂಬ ಗ್ರಾಮದಲ್ಲಿ ಸಾಲಿಗ್ರಾಮದ ಪೂಜೆಯಾಗುತ್ತದೆ. ರಾಧಾ-ಕೃಷ್ಣರ ಭಕ್ತಿ ಪರಂಪರೆ ಇದೆ. ಎಲ್ಲ ಸಂಪ್ರದಾಯಗಳಲ್ಲಿ ಇದು ಪ್ರಾಚೀನವಾಗಿದೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿದೆ.

ಹೀಗೆ ಧಮಾರ ಗಾಯನವು ಒಂದು ದೇಶಿ ಪರಂಪರೆಯಿಂದ ಬೆಳೆದು ಬಂದರೆ ಇನ್ನೊಂದು ಭಕ್ತಿ ಸಂಪ್ರದಾಯದಿಂದ ಬೆಳೆದು ಬಂದಿದೆ. ಪ್ರಸ್ತುತ ಸಂದರ್ಭದ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಧಮಾರ ಗಾಯನ ಶೈಲಿಯು  ಸಂಪ್ರದಾಯಗಳಲ್ಲಿ ವ್ಯವಹರಿಸುವ ಗಾಯನ ಶೈಲಿಯಾಗಿವೆ. ಹೀಗೆ ಸಮಾಜ ಗಾನವು ಶಾಸ್ತ್ರೀಯ ಸಂಗೀತಕ್ಕೆ  ಎರಡು ಅಮೂಲ್ಯ ಗಾಯನ ಶೈಲಿಗಳನ್ನು ನೀಡಿದೆ. ಅವೇ ‘ಧ್ರುಪದ’, ‘ಧಮಾರ’ ಗಳೆಂದು ಪ್ರಸಿದ್ಧಿ ಪಡೆದಿವೆ.

ಧಮಾರ ಗಾಯನದಲ್ಲಿ ಶಾಸ್ತ್ರೀಯ ಸಂಗೀತಾತ್ಮಕ ತತ್ವಗಳ ಜೊತೆ ಜೊತೆಗೆ  ಅತ್ಯಂತ ಕರ್ಣಪ್ರಿಯ, ಹೃದಯಸ್ಪರ್ಶಿ, ರಾಗಪ್ರಧಾನ ಹಾಗೂ ಲೋಕ ಸಂಗೀತದ ಪ್ರಧಾನ ತತ್ವಗಳ ಸಮಾವೇಶ ಮಾಡಲಾಗಿದೆ. ಧ್ರುಪದ ಗಾಯಕರು ತಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಧಮಾರ ಗಾಯನ ಪ್ರಸ್ತುತಪಡಿಸುತ್ತಾರೆ. ಹಾಗೂ ವಿದ್ಯಾಲಯ, ಮಹಾವಿದ್ಯಾಲಯ, ಹಾಗೂ ವಿಶ್ವವಿದ್ಯಾಲಯಗಳಲ್ಲಿ ಧಮಾರ ಗಾಯನದ ಕಾರ್ಯಕ್ರಮಗಳು ವಿಚಾರ ಸಂಕೀರ್ಣಗಳು ನಡೆಯುತ್ತವೆ. ಇದು ಶಾಸ್ತ್ರೀಯವಾದರೂ ಇದರಲ್ಲಿ ಮಾಧುರ್ಯ ಭಾವ, ರಸ, ಚಮತ್ಕಾರಿಕೆಗಳು ಕ್ಲಿಷ್ಟತೆಯಿಂದ ಕೂಡಿವೆ. ಈ ಗಾಯಕೀಯ ಪ್ರಕಾರವು ಶಿಕ್ಷಣ ಸಂಸ್ಥೆಗಳಲ್ಲಿ ನಡೆದುಕೊಂಡು ಬಂದರೆ ಧಮಾರ ಗಾಯನದ ವಾಸ್ತವಿಕ ರೂಪವು ನಿಶ್ಚಿತವಾಗಿ ಉಳಿಯಲು ಸಾಧ್ಯವಾಗುತ್ತದೆ.