ಬರಿಯ ಮಣ್ಣಲ್ಲ ಕಾಣೆ ಭೂಮಿತಾಯಿ-ಅವ್ಳು
ಸಿರಿಯ ಮೇರುತ್ಗೆ ಕಾಣೆ ಭೂಮಿತಾಯಿ | ಸೊಲ್ಲು |

ಮಣ್ಣೆಲ್ಲ ಹೊನ್ನು ಕಾಣೆ ಭೂಮಿತಾಯಿ
ಹೊನ್ನೆಲ್ಲ ಸಿರಿಯು ಕಾಣೆ
ಸಿರಿಯ ಮೇರುತ್ಗ ಕಾಣೆ
ಅಂಥ – ಸಿರಿಯ ಮಣ್ಣು ಕಾಣೆ
ಮಧುರಾಪಟ್ಟಣವು
ಅದನಾಳುವ ರಾಜಶೂರ
ಮಣ್ಣೊಕ್ಲು ಹಬ್ಬಕೆ
ತನ್ನ-ಬಂಧುಬಳಗಾನೆಲ್ಲ
ತನ್ನ-ನೆಂಟಾರು ಇಷ್ಟರ
ಕರಿಸಿಕೊಂಡು ರಾಜ       ೧೦

ಇಜ್ರಂಬುಣಿಯಿಂದ
ಹಬ್ಬಾವ ಮಾಡಿದನು |
ಕೊಡಗು ಮಲೆಯಾಳದ
ಮೈಸೂರು ಸೀಮಿಂದ
ರಾಜಶೂರನ ನಂಟು
ಅವ್ನ ಚಿಕ್ಕಪ್ಪನ ಮಗ
ಭೋಜರಾಜನಾದರೆ
ಮಣ್ಣೊಕ್ಲು ಹಬ್ಬಕೆ
ಹೆಂಡತಿ ಜೊತೆಯಲ್ಲಿ
ಅಣ್ಣಾನ ಮನೆಗಾದ್ರೆ
ಹಬ್ಬಾಕೆ ಬಂದಿದ್ದನು |      ೨೦

ಅವ್ರು ಹಬ್ಬಾವ ಮಾಡಿ
ಊಟ ಭೋಜುಣಿ ಮಾಡಿ
ಹಚ್ಚೆಟ್ಲೆಯಿಂದ
ಸಂತೋಷಪಟ್ಟುಕೊಂಡು
ಸುಕುವಾಗಿ ಇರುವಾಗ
ಅಯ್ಯ – ಭರಣಿ ಮಳೆಹೂದು
ಧರಣೀಯ ಮ್ಯಾಲೆಲ್ಲ
ನೀರು ಉಳ್ಳಾಡಿ ಹರ‍್ದು
ಉಳುಮೆಗೆ ಹದುವಾಯ್ತು | ೩೦

ಉಳುಮೆಯ ಮಾಡಬೇಕು
ರಾಗೀಯ ಬಿತ್ತಬೇಕು
ಅಂತ್ಹೇಳಿ ರಾಜಶೂರ
ಹೆಂಡ್ತೀಯ ಕರುದಾನು
ಪೆಟ್ಟೇಲಿ ಮಡಗಿರೊ
ಬಿತ್ತನೆ ರಾಗೀಯ
ತಗ್ದು ಕುಕ್ಕೆಗೆ ತುಂಬಿ
ಆರ ಕೆಟ್ಟ ಬೇಕಂತ
ನೇಗೀಲ ನೊಗಗಳ
ಕೂರಿಗೆ ಕುಂಕ್ಲುಗಳ        ೪೦

ಹದಗೂಡಿಕೊಂಡನು
ಕೆಂದೆತ್ತು ಜೊತೆಗಳ
ನೇಗಿಲಿಗೆ ಹೂಡಿದನು
ಪೂಜೆ ಸಾಮಾನುಗಳ
ಹದಗೂಡಿಕೊಂಡನು
ಜೊತೆಗೆ ಭೋಜನನು
ಕರಕೊಂಡು ಹೊಂಟನು
ಬಿತ್ನೆ ರಾಗಿ ಕುಕ್ಕೆಯ
ಹೆಂಡ್ತಿ ಹೊತ್ತು ನಡೆದಳು |
ಕೆಬ್ಬೆ ಹೊಲಕೆ ಬಂದು
ಬಸ್ರೀಮರದ ಕೆಳಗೆ        ೫೦

ಒಂದಿಷ್ಟಗಲ ಜಾಗವ
ಕೆತ್ತಿ ಮಟ್ಟ ಮಾಡಿ
ಸಗಣಿ ಬಗ್ಗಡದಲ್ಲಿ
ತಾರ‍್ಸಿ ರಂಗ್ವಾಲೆನಿಕ್ಕಿ
ಮೂಡ್ಲು ಮುಕನಾಗಿ
ಬೆನಕನ ತಾಪಸಿ
ಮೂರು ಸಣ್ಣ ಕಲ್ಲುಗಳ
ತೊಳ್ದು ಮೂಡು ಮುಕನಾಗಿ
ಮೂರು ದೇವೀರ ಪೂಜಿ
ತುಪ್ಪಾದ ದೀಪ ಹಸ್ಸಿ
ಕಾಯಿ ಕರ್ಪೂರ ಮಡಗಿ
ಅರಿಸೀನ ಕೂಕುಮ        ೬೦

ಪತ್ರೆ ಪುಷ್ಪ ಮಡುಗಿ
ಹಣ್ಣ ತೊಟ್ಟಾ ಮುರ‍್ದು
ಗಂಧದ ಕಡ್ಡಿ ಬೆಳಗಿ
ಬೆಲ್ಲದನ್ನವ ತಂದು
ಅಲ್ಲಿ ಎದೆಮಾಡಿ
“”ಮೇಲೆ ಮಳೆ ಕರೆಯೊ
ಆಕಾಸದಮ್ಮ ತಾಯಿ      ೭೦

ಕೆಳಗೆ ಸಾರವ ಕೊಡುವ
ಪಾತಾಳದಮ್ಮ ತಾಯಿ
ನೆಲದ ಮ್ಯಾಲೆ ನಮಗೆ
ಫಲ ಕೊಡೊ ಭೂಮಿತಾಯಿ
ನಿಮ್ಮ ಪಾದವೇ ಗತಿ”
ಅಂತ್ಹೇಳಿ ಪೂಜೆ ಮಾಡಿ
ಮಂಗಳಾರ್ತಿ ಬೆಳಗಿದರು |
ಕೆಂದೆತ್ತುಗಳ ಪೂಜಿ
ನೇಗಿಲು ನೊಗ ಪೂಜಿ
ಕೂರಿಗೆ ಕುಕ್ಕೆಗಳ ೮೦

ಪೂಜೆಯ ಮಾಡಿದರು
ಮುನುಮುಂದೆ ರಾಜಶೂರ
ಹಿನುಹಿಂದೆ ಭೋಜರಾಜ
ಆರುಗಳ ಕಟ್ಟುಕೊಂಡು
ಹೊಲಗಳ ಉತ್ತಾರು |
ಹೊಲಗಳ ಉಳುಳುತ
ಬೀಜಗಳ ಬಿತ್ತುತ
ಆರುಗಳು ಹೋಗುವುದ
ಭೂಮಿ ತಾಯಿ ನೋಡಿದಳು
“”ಇಂಥ ಶೂರ ನನ್ನ ಮಗ  ೯೦

ಬೆಳೆಸಾಯ ಮಾಡುತಾನೆ
ಇವುನ್ಗೆ-ಧನಲಕ್ಷ್ಮಿ ಧಾನ್ಯಲಕ್ಷ್ಮಿ
ಭಾಗ್ಯಲಕ್ಷ್ಮಿ ರಾಜ್ಯಲಕ್ಷ್ಮಿ
ಸಂತಾನ ಲಕ್ಷ್ಮಿಯರ
ಸಾಸ್ವತ ಮಾಡಬೇಕು”
ಅಂತ್ಹೇಳಿ ಭೂಮಿತಾಯಿ
ಮುಂದ್ಲಾರು ಬರುವಾಗ
ಕುನಿಯಲ್ಲಿ ಗುಳವನ್ನು
ಜಗ್ಗೀಸಿ ತಡೆದಳು |
ಆಗ ಶೂರ        ೧೦೦

ಇದು ಆಶ್ಚರ್ಯವು
ಎಂದು ಹೇಳುತಲಲ್ಲಿ
ಕುನಿಯ ಬಗ್ಗೆ ನೋಡಲಾಗಿ
ಕುನಿಯಿಂದ ಭೂಮಿ ತಾಯಿ
ಮ್ಯಾಲಕೆದ್ದು ಬಂದಳು |
“”ಅಯ್ಯಾ ರಾಜಾಶೂರ
ನಿನ್ನ ಭಕ್ತೀಗೆ ಮೆಚ್ಚೀದೆ
ನಿನ್ನ ರಾಜ್ಯಾದ ಪ್ರಜೆಗಳು
ಸುಕುವಾಗಿ ಇರಬೇಕು
ಅದಕಾಗಿ ನಿನಗಾದ್ರೆ        ೧೧೦

ಪಂಚಲಕ್ಷ್ಮಿಯರ
ನಿನಗೆ ಕೊಡುತಿವಿನಿ”
ಪೆಟ್ಟಿಗೆಯ ತಗ್ದು
ಆ ರಾಜಾಶೂರನಿಗೆ
ಕೊಟ್ಟಾಳು ಭೂಮಿತಾಯಿ |
ಆ ರವತ್ನಾವ ಪೆಟ್ಟಿಗೆಯ
ತಕ್ಕೊಂಡು ರಾಜಶೂರ
ಭೂಮಿತಾಯಿಗಾದ್ರೆ
ಕರಜೋಡ್ಸಿ ಕೈಮುಗಿದು   ೧೨೦

ಶಿರಬಾಗಿ ಶರಣೆಂದು
ಪೆಟ್ಟಿಗೆಯ ತಕೊಂಡನು
ತಾಯಿ ಭೂಮಿತಾಯಿ
ಅಸೋರ‍್ವಾದ ಮಾಡಿ
ಭೂಮಿಯಲ್ಲಿ ಮೆರೆಯಾದ್ಲು |
ಆಗ ರಾಜಾಶೂರ
ಪೆಟ್ಟಿಗೆಯ ತಕ್ಕೊಂಡು
ಅರಮನೆಗೆ ಬಂದಾನು
ಕಡ್ಡಿ ಕರ್ಪೂರಗಳ
ಹಸ್ಸಿ ಪೂಜೆಯ ಮಾಡಿ     ೧೩೦

ಪೆಟ್ಟಿಗೆಯ ಬಾಕಲ
ತಗದು ನೋಡಿದನು |
ಅಲ್ಲಿ ಧನಲಕ್ಷ್ಮಿ
ಧಾನ್ಯಲಕ್ಷ್ಮಿ ಭಾಗ್ಯಲಕ್ಷ್ಮಿ
ರಾಜ್ಯಲಕ್ಷ್ಮಿ ಸಂತಾನಲಕ್ಷ್ಮಿ
ಅನ್ನುವಂತೆ ಐದು ಮಕ್ಳು
ಪೆಟ್ಟಿಗೇಲಿದ್ದವು.
ಅದ ಕಂಡು ರಾಜಶೂರ
ಭೋಜ ರಾಜನ ಕರದು
“”ಇದು ಏನು ಆಶ್ಚರ್ಯ?” ೧೪೦

ಐದು ಹೆಣ್ಣು ಮಕ್ಕಳು
ಕುನಿಯ ಪೆಟ್ಟಿಗೆಯಿಂದ
ಭೂಮಿತಾಯಿ ಕೊಡಲಾಗಿ
ನಮಗೆ ಮಕ್ಕಳಾದವು
ಈ ಐದು ಮಕ್ಕಳಲ್ಲಿ
ನಿನಗೆ ಬೇಕಾದಂತ
ಒಬ್ಬಾಳು ಮಗಳ ನೀನು
ತಕ್ಕೊಳ್ಳಪ್ಪ” ಅಂತ್ಹೇಳಿ
ಭೋಜನಿಗೆ ಹೇಳಿದನು
ಮಕ್ಕಳು ಮರಿಯಿಲ್ಲ        ೧೫೦

ಭೋಜರಾಜನಾದ್ರೆ
ಸಂತೋಷ ಪಟ್ಟುಕೊಂಡು
ಧಾನ್ಯಲಕ್ಷ್ಮಿಯಾದ
ಕುನಿದೇವಿಯನ್ನು
ತನಗೆ ಬೇಕೆಂದು
ಕೇಳಿ ಪಡದುಕೊಂಡು
ಆ ಕುನಿಯ ಧಾನ್ಯಲಕ್ಷ್ಮಿ
ಭೋಜನ ಮಗಳಾಗಿ
ಭೋಜನ ರಾಜ್ಯಕೆ
ಕುನಿತಲ ಎಂದಾಯ್ತು
ಆ ಹೆಣ್ಣ ಮಗಳಿಗೆ ೧೬೦

ಕುಂತಿ ಅನ್ನೊ ಹೆಸರಾಯ್ತು
ಆ ಕುಂತಿಯೇ ನಮಗೆ
ಕೊಂತಮ್ಮ ಆದಳು |
ಕೊಂತಮ್ಮ ಬಂದಂಥ
ಕಾಲುಗುಣದಲ್ಲಿ
ಭೋಜರಾಜ್ನ ಹೆಂಡ್ತಿ
ಬಸುರಿ ಆದಳು   ೧೭೦