ರಾಗ ಮಧ್ಯಮಾವತಿ ಏಕತಾಳ
ಏನಿದು ತ್ವರಿತದ ಗಮನ ಸುರೇಶ |
ಕಾಣಿಸುತಿದೆ ನಿನ್ನಾನನದಿ ಸಂತೋಷ ||
ಕ್ಷೋಣಿ ಮೂರರೊಳು ಸನ್ಮಾನ್ಯನು ನೀನು |
ದಾನವಾರಿಯು ಮಹಾ ಸ್ಥಾನವಿತ್ತಿಹನು || ||೪೯||
ಸುರಪುರದೊಳಗೆಲ್ಲ ಸರಸವೆ ನಿಮಗೆ |
ಭರಿತ ಸೌಭಾಗ್ಯಕಧಿಕಾರಿ ಈ ಕಡೆಗೆ ||
ಸರಿಯಲೇತರ ಕಾರ್ಯವರುಹು ನೀನೆನಲು |
ಸರಸಿಜೋದ್ಭವಗೆಂದನೆರಗಿ ದೈನ್ಯದೊಳು || || ೫೦||
ರಾಗ ಬೇಗಡೆ ಅಷ್ಟತಾಳ
ಚಿತ್ತಾವಧಾನ ಪರಾಕು | ತವ |
ಭಕ್ತನ ಬಯಕೆಯ ಪಾಲಿಸಬೇಕು ||
ನಿತ್ಯಸೇವಿಪ ಸುರ | ಮೊತ್ತಕಖಿಳ ಸುಖ |
ವಿತ್ತು ಪೊರೆವ ಸೃಷ್ಟಿ | ಕರ್ತ ದಯಾನಿಧೆ || ||೫೧||
ನಾರಿಯೋರ್ವಳ ಸೃಜಿಸಿರುವೆ | ಲೋಕ |
ಮೂರರೊಳವಳತಿ ಚೆಲುವೆ ||
ಮಾರನರಸಿಗಿಂತ | ನೂರ್ಮಡಿಯವಳು ವೈ |
ಯಾರಿಯಾಕೆಯಳ ವಿ | ಚಾರವರಿತು ಬಂದೆ || ||೫೨||
ಸಕಲವೈಭವದಿ ನಾಕದಲಿ | ಬಲು |
ಸುಖದಿ ಬಾಳುವೆ ನಿನ್ನಾಜ್ಞೆಯಲಿ ||
ಭಕುತವತ್ಸಲ ನೀನಾ | ವಿಕಸಿತಾಕ್ಷಿಯನಿತ್ತು |
ಪ್ರಕಟಗೊಳಿಸಿ ಕೀರ್ತಿ | ಯಕಳಂಕನೆನಿಸಯ್ಯ || ||೫೩||
ಅನ್ಯನಲ್ಲವು ನಿನಗಾನು | ಸುರ |
ರೆನ್ನನು ಕಳುಹೆ ಬಂದಿಹೆನು |
ಭಿನ್ನಭಾವನೆ ಬಿಟ್ಟು | ಮನ್ನಿಪುದೆನಲು ಹಿ |
ರಣ್ಯ ಗರ್ಭನು ಶತ | ಮನ್ಯುವಿಗುಸುರಿದ || ||೫೪||
ರಾಗ ಶಂಕರಾಭರಣ ತ್ರಿವುಡೆತಾಳ
ವೀರ ನಿನಗೆಣೆಯಾರು ತ್ರಿಜಗದಿ |
ಭೂರಿಭಾಗ್ಯಾಧಿಪನು ಎನ್ನ ಕು |
ಮಾರಿಗೊಪ್ಪುವ ವೀರನಹುದೈ |
ಸಾರ ಸಾಕ್ಷಿಯನೀಯಲು | ಪಣವ ಗೈದೆ || ||೫೫||
ಧರೆಯ ಸುತ್ತಾಡುತ ಮುಹೂರ್ತದಿ |
ಬರುವ ಮೊದಲಿಗಗೀವೆ ನೀನದ ||
ವಿರಚಿಸುತ ಬಲು ತ್ವರ್ಯದಿಂದಲಿ |
ವರಿಸೆ ಮೋಹದ ತನುಜೆಯ | ಸರಸಪಡುವೆ || ||೫೬||
ರಾಗ ಕೇತಾರಗೌಳ ಝಂಪೆತಾಳ
ಜಡಜಸಂಭವನೆ ನಿನ್ನಾ | ಪಣದಂತೆ |
ಪೊಡವಿಯಂ ಚರಿಸಿ ಬಹೆ ನಾ ||
ಕೊಡುವುದೆನಗಾಜ್ಞೆ ಎನಲು | ಕಳುಹಲವ |
ನುಡಿದ ಗರ್ವದಿ ತನ್ನೊಳು || ||೫೭||
ಕಲ್ಪತರು ಕಾಮಧೇನು | ಮನದ ಸಂ |
ಕಲ್ಪಸುಖಸಾಧನವನು ||
ಕಲ್ಪಿಸಿರುವಧಿಕಾರಕೆ | ಸತಿಯ ವರಿ |
ಸಲ್ಪೂರ್ಣಮಾಯ್ತು ಬಯಕೆ || ||೫೮||
ಎಂದು ತನ್ನೊಳಗುಬ್ಬುತ | ಪೊರಟ ಸಭೆ |
ಯಿಂದ ಗಜವನ್ನಡರುತ ||
ಹೊಂದಿ ವಿಧಿತನುಜೆಯಳನು | ನಿರತ ಸುಖ |
ದಿಂದಾಳ್ವೆನೆನುತೈದನು || ||೫೯||
ಕಂದ
ಪರಿದಿಕ್ಕುತ ಸಂಸಾರದ
ಪರಿಭವ ಗೌತಮಮುನೀಂದ್ರ ಸಿದ್ಧಾಶ್ರಮದೊಳ್ ||
ವಿರಚಿಸುತಲೆ ತಪನಿಷ್ಠೆಯೊ
ಳಿರುವೆಡೆಗಂ ಸಾರ್ದನಾಗ ನಾರದ ಭರದೊಳ್ || ||೬೦||
ರಾಗ ಸಾವೇರಿ ಏಕತಾಳ
ಕಾಣುತಿದಿರುಗೊಂಡನೆದ್ದು ಮೌನಿಪಾಲ | ವಿಧಿ |
ಸೂನೂವ ಕರತಂದನಾಗ ಮೌನಿಪಾಲ ||
ತಾನೆ ದರ್ಭಾಸನವನಿರಿಸಿ ಮೌನಿಪಾಲ | ಸು |
ಮ್ಮಾನದೊಳುಪಚಾರ ಗೈದ ಮೌನಿಪಾಲ || ||೬೧||
ಸ್ವಾರಿಯಾದುದೆತ್ತಣಿಂದ ಮೌನಿಪಾಲ | ಹಿತ |
ಕಾರಿ ಎನಿಪೆ ಸಕಲ ಜಗಕೆ ಮೌನಿಪಾಲ ||
ಕಾರ್ಯವೆನ್ನೊಳಿರಲು ಮುದದಿ ಮೌನಿಪಾಲ | ದಯ |
ಬೀರಿ ತಿಳುಹೆನಲ್ಕೆ ಪೇಳ್ದ ಮೌನಿಪಾಲ || ||೬೨||
ರಾಗ ಪಂತುವರಾಳಿ ರೂಪಕತಾಳ
ಏನನೆಂಬೆ ಮುನಿಪ ಗೌತಮ | ಎನಗೆ ಕಾಂತಿ |
ಹೀನವಾಗಿ ತೋರ್ಪುದಾಶ್ರಮ ||
ಧ್ಯಾನಯೋಗ ಸಾಧನವ ವಿ | ಧಾನದಂತೆ ನಿರತ ವ್ರತವ |
ಪೂರ್ಣಗೊಳಿಸೆ ಸನ್ನಾಹಗಳಿ | ಗೇನುಪಾಯ ಕಾಣೆನಯ್ಯ || ||೬೩||
ಭೇದವಿಡದೆ ಪೇಳ್ವೆ ನಿನ್ನಲಿ | ಕ್ರೋಧಗೊಳದೆ |
ಆದರಿಪುದು ತ್ವರ್ಯದಿಂದಲಿ ||
ವಾದಿಸುವೊಡೆ ಸಮಯವಿಲ್ಲ | ಖೇದವಪ್ಪ ಬಗೆಯಿದಲ್ಲ |
ಮೋದಗೊಂಡು ಗಮಿಸುತಜನ | ಪಾದಕೆರಗಿ ಸಾಧಿಸದನು || ||೬೪||
ಸಲ್ಲಲಿತೆಯಾಹಲ್ಯೆ ಎನುವಳು | ವಿಧಿಯ ತನುಜೆ |
ಚೆಲ್ವೆಯಾತನಲ್ಲೆ ಇರುವಳು ||
ನಿಲ್ಲದವಳ ಕೇಳಿ ವರಿಸಿ | ಇಲ್ಲಿರುವುದು ತಪವ ನಡೆಸಿ |
ಎಲ್ಲ ಕಾರ್ಯ ನಿರ್ವಹಿಪಳು | ಪುಲ್ಲನೇತ್ರೆ ಸುಗುಣೆಯವಳು || ||೬೫||
ಭೂತಳವ ಮುಹೂರ್ತ ಮಾತ್ರದಿ | ಚರಿಸಿ ಬಹನಿ |
ಗಾತನೀವ ಸುತೆಯ ತ್ವರಿಯದಿ |
ರೀತಿಯರಿತುಕೊಂಡು ಕಮಲ | ಜಾತನಾಜ್ಞೆಗೊಳುತ ದಿವಿಜ |
ನಾಥಪೋದನಾತಗರಿದು | ಪ್ರೀತಿಯಿಂದ ನೀನೊಲಿಪುದು || ||೬೬||
ರಾಗ ಕಾಂಭೋಜಿ ಝಂಪೆತಾಳ
ಎನಲೆಂದನೆಲೆ ದೇವ ಮುನಿವರೇಣ್ಯನೆ ನಿನ್ನ |
ಮನಕೆ ಸೊಗಸಪ್ಪುದೇನಯ್ಯ ||
ಘನತರದ ಸಂಸಾರ ವನಧಿಯೊಳು ಬಸವಳಿವು |
ದನು ಕಂಡು ದಣಿಯದಾದೆ ಎಲಾ || ||೬೭||
ಸತಿಸುತರು ಧನಕನಕ ಕ್ಷಿತಿಯ ಸರ್ವಸುಭೋಗ |
ಮತಿವಂತರದರ ಬಯಸುವರೆ ||
ಸತತ ತಪದಿಂದ ಸದ್ಗತಿಯ ಸಾಧಿಪಗೆ ದು |
ರ್ಗತಿಗಿಳಿಪ ತೆರವ ಬೋಧಿಪೆಯ || ||೬೮||
ತಿಳಿದಿರುವೆ ನೀನೆಂದು ತಿಳುಹಿಸಿದೆ ಸಕಲರೀ |
ಕೆಲಸ ಸಾಧಿಸಲು ಲೋಕದಲಿ ||
ಉಳಿವುದೆ ಪ್ರಪಂಚ ಕೈಗೊಳು ಗೃಹಸ್ಥಾಶ್ರಮದಿ |
ಸುಲಭದಿಂ ಮುಕ್ತಿವಶವಹುದು || ||೬೯||
ಅತ್ರಿಯಂತಿರ್ಪನಾ ಪಾವನ ವಸಿಷ್ಠಂಗೆ |
ಪತ್ನಿ ಇಲ್ಲವೆ ಸುರಾಸುರರ ||
ಪೆತ್ತವನ ಪುಣ್ಯ ಚಾರಿತ್ರ್ಯ ಬಣ್ಣಿಪನಾರು |
ಚಿತ್ತದೊಳು ತಿಳಿದು ನಡೆಯೆನಲು || ||೭೦||
ಸರಿನುಡಿದೆ ನಿನ್ನಾಜ್ಞೆಯಂತೆ ವಿರಚಿಪೆನಿದಕೆ |
ಧರೆಯ ಚರಿಸಲು ಸುರಕುಲೇಂದ್ರ ||
ತೆರಳಿ ಪೋದವ ಬರುವ ಮೊದಲು ವರಿಸಲುಪಾಯ |
ವರಿಯೆನೆನೆ ವಿಧಿತನಯನೆಂದ || ||೭೧||
ವಾರ್ಧಕ
ತಪವ ಕೆಲಕಾಲದಿಂ ನಡೆಸಿ ಸಿದ್ಧಿಯ ಗೈದ
ಸಫಲದಿಂದಿಲ್ಲಿಗೈಯುತ ಶೀಘ್ರದಿಂ ದ್ವಿಮುಖ
ಕಪಿಲೆಯಂ ನಿರ್ಮಿಸುತ ಪೂಜಿಸಿ ಪ್ರದಕ್ಷಿಣೆಯ ಬರಲು ಧರೆ ಸಂಚರಿಸುವ |
ಅಪರಿಮಿತ ಪುಣ್ಯಕಿಮ್ಮಡಿಯಹುದು ನಿಜಸರೀ
ಸೃಪವೇಣಿಯಂ ವರಿಸಲೈದು ನಾ ಬಹೆನೆನುತ
ಸುಪವಿತ್ರನವನ ಸಂತೈಸಿ ಕಮಲಜನೆಡೆಗೆ ಕಳುಹಿ ತಾ ಪೊರಮಟ್ಟನು || ||೭೨||
ರಾಗ ದೇಶಿ ಅಷ್ಟತಾಳ
ಸಾರಿ ಗೌತಮ ವಿಧಿಯಡಿಗೆರಗಲು |
ಕಾರಣೀಕನ ಕುಳ್ಳಿರಿಸುತುಪ | ಚಾರವೆಸಗುತಲೆಂದನು || ||೭೩||
ಬಂದುದೇಕೆ ಮುನೀಂದ್ರನೆನ್ನಿಂದಪ್ಪ |
ಹೊಂದಿಕೆಯನೀ ತಿಳುಹೆನಲು ನಡೆ | ತಂದು ನಾರದ ಮಣಿಯುತ || ||೭೪||
ಕಂದ
ಮುನಿಗೌತಮನಂ ಈಕ್ಷಿಸಿ
ವಿನಯದಿ ಕರಮುಗಿಯುತೆಂದ ನಿನ್ನಾಗಮದಿಂ |
ಮನಕತಿಚೋದಿಗಮೆನಲಾ
ಮಣಿದುಸುರಿದ ದೈನ್ಯದಿಂದ ವಿಧಿಯೊಡನಾಗಳ್ || ||೭೫||
ರಾಗ ಬೇಗಡೆ ಏಕತಾಳ
ಲಾಲಿಸೆನ್ನ ಮಾತ | ವಿಧಾತ ||
ಕಾಲ ಕಳೆದೆ ನಿಜ ತಪದೊಳಗಂ ಪೊಸ |
ತಾಲೋಚನೆಯನು | ಪೇಳಲು ಬಂದಿಹೆ || ಪಲ್ಲವಿ ||
ಪರಿಗ್ರಹಿಸುತ ಸತಿಯ | ತಪವನು |
ವಿರಚಿಸಲನುಮತಿಯ || ಪಾಲಿಸಿ |
ಕರುಣದಿ ತವ ಸುತೆಯ | ನಿತ್ತುಪ |
ಚರಿಸುತೆನ್ನ ವ್ಯಥೆಯ | ಪರಿ |
ಹರಿಸೆನ್ನುತ ಪದ | ಕೆರಗಿ ಕೇಳ್ದೆ ಗುಣ |
ಭರಿತ ಶರಣ ಸು | ದ್ಧರಣ ಕೃಪಾಂಬುಧಿ || ||೭೬||
ರಾಗ ಆರ್ಯಸವಾಯ್ ಏಕತಾಳ
ಉತ್ತಮನೆನಿಸಿ ಗೃಹಸ್ಥಾಶ್ರಮದೊಳು |
ಮುಕ್ತಿಯ ಕಾಂಬುತ್ಸವವೆನುತಾ ||
ಭಕ್ತಿಯಿಂದ ಮಣಿಯುತ್ತಿರಲಜನಿಗೆ |
ಬಿತ್ತರಿಸಿದ ಸುರಮುನಿನಗುತ || ||೭೭||
ರಾಗ ಬೇಹಾಗ್ ರೂಪಕತಾಳ
ಅಹುದು ಮನಿಪ ಪೇಳ್ದ ಮಾತು | ಸಹಜವೆನ್ನ ಮನಕೆ |
ಸಹಿಸಿ ಕಷ್ಟಗಳನ್ನು ತಪದಿ | ಬಹು ಬಳಲ್ದನಿದಕೆ || ||೭೮||
ಫುಲ್ಲನೇತ್ರೆ ಸುಗುಣೆ ನಮ್ಮ | ಹಲ್ಯೆ ಸಚ್ಚರಿತ್ರೆಯ ||
ನಲ್ಲನಾಗೆ ಎರಕ ನೀತ | ನಲ್ಲದಿಲ್ಲ ನಿಶ್ಚಯ || ||೭೯||
ಯಾಚಿಪನಿಂಗೀವುದೆನ್ನಾ | ಲೋಚನೆಗೆ ಸಮವು |
ಯೋಚನೆ ಯಾಕಿದಕೆ ಕಾರ್ಯ | ವಾಚರಿಪುದು ಶುಭವು || ||೮೦||
ರಾಗ ಕೇದಾರಗೌಳ ಅಷ್ಟತಾಳ
ಸರಸಿಜಭವನೆಂದ ಸರಿಯಾದರೇನ್ಗೈವೆ |
ಧರೆಯ ಮುಹೂರ್ತದಲಿ ||
ಚರಿಸಿ ಬಹನಿಗೀವೆ ತರುಣಿಯನೆಂದು ನಿ |
ರ್ಧರಗೈದೆನಾದಿಯಲಿ || ||೮೧||
ಪಣವನು ನಡೆಸುವೆ ನೆನುತಲೆನ್ನಾಜ್ಞೆಯೊ |
ಳನಿಮಿಷಾಧಿಪ ಪೋಗಿಹ ||
ಕ್ಷಣ ತಡೆಯದೆ ಬಹ ತನುಜೆಯ ನಿನಗೀವು |
ದನುಚಿತವಪ್ಪುದಯ್ಯ || ||೮೨||
ತ್ರಿದಶ ತಿರುಗಿ ಬಪ್ಪ ಮೊದಲಾಗಿ ಪಣವನೀ |
ಒದಗಿನಿಂ ನಡೆಸಿದರೆ ||
ಪದುಮ ನೇತ್ರೆಯನೀವೆನಿದು ಸಿದ್ಧವೆನಲಾತ |
ಮುದವ ತಾಳಿದ ಮನದಿ || ||೮೩||
ಭಾಮಿನಿ
ಕೇಳಿ ನಾರದ ನುಡಿದ ನಾ ಸುರ
ಪಾಲಕನಿಗೆಂತಹುದೊ ಪಣವಿದ
ಪೇಳಿದಂದದಿ ನಡೆಸಲಸದಳವೆನಲು ಗೌತಮನು |
ಕಾಲಿಗೆರಗುತಲೆಂದನಾಜ್ಞೆಯ
ಪಾಲಿಸೆನಲೊಪ್ಪಂ ಕೊಡಲು ಶುಭ
ಕಾಲವೊದಗಿದುದೆನುತ ನಾರದ ಪೊರಟನಾ ಸಭೆಯ || ||೮೪||
ರಾಗ ಕಾಂಭೋಜಿ ಝಂಪೆತಾಳ
ವಿಧಿತನಯನಿಂತರುಹಿ ತೆರಳಲಾ ಗೌತಮನು |
ವಿಧಿಯಂತೆ ಸಂಕಲ್ಪ ಗೈದು ||
ಸದಮಲದ ಮಂತ್ರಜಲ ಪ್ರೋಕ್ಷಿಸಲು ಕಪಿಲೆಯಾ |
ದುದು ಪ್ರಸವ ಕಾಲವನುಸರಿಸಿ || ||೮೫||
ಅಮಿತ ಭಕ್ತಿಯೊಳದಕೆ ನಮಿಸಿ ಪೂಜಿಸುತಲಾ |
ಯಮಿಪ ಪ್ರದಕ್ಷಿಣೆಯ ಗೈದು ||
ಕಮಲಜಗೆ ಸಾಷ್ಟಾಂಗ ವಂದಿಸುತಲಿರ್ದನಾ |
ಭ್ರಮರಕುಂತಳೆಯ ನೀಡೆನುತ || ||೮೬||
ಧರೆಯಂ ಮುಹೂರ್ತದಲಿ ಚರಿಪ ಪಣವೆಂದು ನಾ |
ನೊರೆದೆ ಕಪಿಲೆಗೆ ಪ್ರದಕ್ಷಿಣೆಯ ||
ವಿರಚಿಸುತಲರೆಕ್ಷಣದಿ ಕೇಳಿದರೆ ನಿನಗೆಂತು |
ತರಳೆಯನು ಕರೆದೀವೆನೆಂದ || ||೮೭||
ಸಾರಸಾಸನ ವೇದಸಾರಶಾಸ್ತ್ರವಿಚಾರ |
ಸಾರುವುದು ಇನಿತು ಗೈದವಗೆ ||
ಧಾರಿಣಿ ಪ್ರದಕ್ಷಿಣೆಯ ಪುಣ್ಯದಿಂದಧಿಕ ಫಲ |
ಸೇರುವುದು ಸಿದ್ಧವೆನುತಿರಲು || ||೮೮||
ಅದರನನುಸರಿಸಿದೆನು ಪದುಮಸಂಭವ ನಿನ್ನ |
ಹದನ ಬೇರಿರೆ ಮಾಳ್ಪುದೇನು ||
ಬದಲೊಂದನರಿಯೆನಾ ತುದಿ ಬುಡ ವಿಚಾರಿಸೆನೆ |
ವಿಧಿ ಮೆಚ್ಚಿ ಮುನಿಪಗಿಂತೆಂದ || ||೮೯||
ರಾಗ ಧನ್ಯಾಸಿ ಏಕತಾಳ
ಸರಿ ಸರಿ ನೀ ಗೈದಿರುವ ಕಾರ್ಯವಿದು |
ಪರಿಕಿಸಿದಡೆ ನಿಗಮಾಗಮ ||
ಧರಣಿಯ ಚರಿಸುತ ಬರುವುದಕಿಮ್ಮಡಿ |
ದೊರೆವುದು ಫಲವೆಂಬುದು ಸಮ || ||೯೦||
ಅಲ್ಲಗಳೆವನಾನಲ್ಲವು ಮನದೊಳು |
ತಲ್ಲಣಗೊಳದಿರು ಸಾಮದಿ ||
ಫುಲ್ಲನೇತ್ರೆಯಾಹಲ್ಯೆಯ ಕೊಡುವೆನು |
ನಿಲ್ಲದೆ ವರಿಸೈ ಪ್ರೇಮದಿ || ||೯೧||
ನಂದನೆಯಳ ಕರೆದೆಂದನೆನ್ನ ಪಣ |
ದಂದವರಿತು ಮುನಿವಂದ್ಯನು ||
ಒಂದು ಮುಹೂರ್ತದಿ ಕುಂದದೆ ದೃಢಮನ |
ದಿಂದಲಿಳೆಗೆ ಬಲ ಬಂದನು || ||೯೨||
ಅದಕಾನೀವೆನು ಪದುಮದಳಾಂಬಕಿ |
ಮುದದಿಂ ನೀ ಬಾಳೆನ್ನುತ |
ವಿಧಿ ಮಂತ್ರೋಕ್ತದಿ ಚದುರೆಯನೊಪ್ಪಿಸಿ |
ಸದಮಲಗೆಂದನು ಪರಸುತ || ||೯೩||
ರಾಗ ಸಾರಂಗ ಅಷ್ಟತಾಳ
ನಿನಗಿತ್ತೆ ಮುನಿಕುಲೇಂದ್ರ | ಎನ್ನಯ ಮೋಹ |
ದಣುಗೆಯ ಸುಗುಣಸಾಂದ್ರ ||
ದಿನದಿನದೊಳು ಸೇವೆ | ಯನು ಗೈಸುತಿವಳಿಗೆ
ಅನುಕೂಲನಾಗಿ ಬಾಳು | ಸಂತಸದೊಳು || ||೯೪||
ಸಾರಿ ನೀನಾಶ್ರಮಕೆ | ತಪದೊಳಿರು |
ಬೇರೆಣಿಸದೆ ಮನಕೆ ||
ತಾರುಣ್ಯದಿಂದಾಗಿ | ನಾರಾಯಣನು ಸುಖ |
ತೋರಿ ಪಾಲಿಸುವನೆಂದು | ಕಳುಹಿದನಂದು || ||೯೫||
ಕಂದ
ವಿಧಿ ಬೀಳ್ಕೊಡಲಾ ಗೌತಮ
ಸುದತಿಯ ಕರಕೊಳುತ ಪೋಗಲಾಶ್ರಮದೆಡೆಗಂ |
ಮುದದಿಂದುಬ್ಬುತಲಿತ್ತಲು
ತ್ರಿದಶಾಧಿಪ ಚರಿಸುತಿರ್ದನಿಳೆಯಂ ಭರದೊಳ್ || ||೯೬||
Leave A Comment