ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಿಕ್ಕಿದಳು ವಿಧಿತನುಜೆ ಎನ್ನನು |
ಮಿಕ್ಕುವವರಾರಿಹರು ತ್ರಿಜಗದಿ |
ತಕ್ಕುದೇ ಬಂಧುತ್ವವೆನುತಲಿ | ಶಕ್ರ ಬರಲು || ||೯೭||

ಆರ ಕಂಡರು ನುಡಿಸದಿದಿರಿಗೆ |
ದಾರಿ ಪಿಡಿದೈತಹರ ದಂಡಿಸಿ |
ಸಾರುತಿರೆ ನಡೆತಂದು ಪೇಳಿದ | ನಾರದಾಂಕ || ||೯೮||

ತಡೆ ನಿಮಿಷ ನೀ ಬರಿದೆ ಕಷ್ಟವ |
ಪಡುವುದೇತಕೆ ಪುಣ್ಯ ಫಲವಿರೆ |
ಮಡದಿಯಹಳಾಹಲ್ಯೆ ತಿಳಿದುದು | ನುಡಿವೆನೊಂದು || ||೯೯||

ರಾಗ ಬೇಗಡೆ ಅಷ್ಟತಾಳ

ಬಲುವಿಧ ಬಳಲಿದೆ ಭಾಪುರೆ ವೀರ |
ತಿಳುಹುವೆನೊಂದು ನಾನರಿತ ವಿಚಾರ |
ನಳಿನಭವನ ಮನದೊಲವನರಿವೆನೆಂದು |
ನಲವಿಂದ ನಾ ಪೋಗೆ ಕಳೆಯಿತವಧಿ ಎಂದು |
ನಳಿನದಳಾಕ್ಷಿಯನು | ಗೌತಮಮುನಿ |
ಗೊಲಿದೀವಂದದೊಳಿರ್ಪನು | ಯೋಚಿಸಿ ಬಲು |
ಕಳವಳದಿಂದ ನಾ ಪೊರಟು ಬಂದಿಹೆನು || ||೧೦೦||

ಕುಸುಮಗಂಧಿನಿಯನೀ ವ್ರತವ ಗೈದರೆ ಶೋ |
ಭಿಸುವದಾಳ್ವಿಕೆಯೆನಲಿಕುಸುರಿದೆನದನು ಸಾ |
ಧಿಸದೆ ಹಿಂದುಳಿದುದೇನು | ಗೌತಮ ಬಲು |
ಕುಶಲದೊಳೊಯ್ಯುವನು | ಇಂತಾದಮೇ |
ಲಸಮ ಸಾಹಸಿ ನೀನೆಸಗುವುದೇನು || ||೧೦೧||

ರಾಗ ಮಾರವಿ ಏಕತಾಳ

ನೀನೇನೊರೆದರು ನಾನೊಡಬಡೆ ವಿಧಿ | ಯಾನಂದದೊಳೆನ್ನ ||
ತಾ ನಂಬಿಸಿ ಹುಲು ಮೌನಿಗೀಯುತವ | ಮಾನವನೊಡ್ಡುವನೆ || ||೧೦೨||

ಮತಿಹೀನರ ಸೃಜಿಸುತ ನಿರತವು ನಮ | ಗತಿಕಷ್ಟವಗೊಳಿಪ ||
ಸುತೆಯ ಬಗೆಯೊಳೀ ಗತಿ ಗೈದರೆ ಶತ | ಧೃತಿಯಹಿತನು ದಿವಕೆ || ||೧೦೩||

ಭಾಮಿನಿ

ನಿರತ ಸಂಪ್ರೀತಿಯಲಿ ಪಾಲಿಪ
ಹರಿಹರರು ಇದಕೇನನೆಂಬರು
ಧರೆಯನಾಳ್ವರು ನಗರೆ ನಾಕದೊಳಿರುವುದಿನ್ನೆಂತು |
ಮೆರೆಯುತನ್ಯರಿಗಿತ್ತರಾಕೆಯ
ಬೆರೆಯುತೊಂದಿನ ಸುಖಿಸದುಳಿದರೆ
ಸುರಕುಲಾಧಿಪನಲ್ಲ ದಿಟವೆಂದಿತ್ತನಂಬುಗೆಯ || ||೧೦೪||

ರಾಗ ಕೇತಾರಗೌಳ ಝಂಪೆತಾಳ

ಇಂತುಸುರಿ ಮುನಿವರನ್ನ | ಬೀಳ್ಕೊಳುತ | ಚಿಂತಿಸಿದ ಸುರಪ ತನ್ನ ||
ಸಂತೈಸಿ ಕಳುಹುತಜನು | ಬಡಜೋಗಿ | ಗೆಂತು ಸುತೆಯನ್ನಿತ್ತನು || ||೧೦೫||

ಋಷಿಕುಲಾಧಿಪ ತ್ರಿಜಗದಿ | ಸನ್ಮಾನ್ಯ | ಪುಸಿಯೊರೆವನಲ್ಲ ಪಥದಿ ||
ಬಸವಳಿವುದೇಕೆನ್ನುತ | ತೆರಳಿ ವಿಧಿ | ಗಸಮಬಲನೆಂದ ಮಾತ || ||೧೦೬||

ರಾಗ ಪೂರ್ವಿ ರೂಪಕತಾಳ

ಧಾರುಣಿಯ ಸಂಚರಿಸಿ ಬಂದೆ | ಸಾರಸಾಸನ |
ತೀರಿತು ನೀನೆನಗೆ ಪೇಳ್ದ | ಚಾರುಶಾಸನ ||
ಬೇರೆಣಿಸದೆ ನೀಡೆನಗೆ ಕು | ಮಾರಿಯಾಕೆಯ |
ಸೇರಿ ನಿನ್ನ ದಯದೊಳಾಳ್ವೆ | ನಾಕಪದವಿಯ || ||೧೦೭||

ಇನ್ನೇನೊರೆವೆ ಸತಿಯಹಲ್ಯೆ | ಪುಣ್ಯವಂತಳು |
ಪೂರ್ಣಭಾಗ್ಯಕೊಡೆಯನೆನಿಪ | ನೆನ್ನಸೇರ್ದಳು ||
ಬಣ್ಣಿಸಲೇನಿಹುದು ಜವದಿ | ಮನ್ನಿಸಾಕೆಯ |
ಧನ್ಯನಾದೆನೆನಲು ಪೇಳ್ದ | ನಡೆದ ಚರಿತೆಯ || ||೧೦೮||

ರಾಗ ಮುಖಾರಿ ಏಕತಾಳ

ದಣಿದೆ ಶಭಾಸು ಇಂದ್ರ | ಸುಗುಣ ಸಾಂದ್ರ ||
ಅಣುಗೆಯ ಮೇಲಣ | ಮನದಿಂದೆನ್ನಯ |
ಪಣವನು ತೀರ್ಚಿದೆ | ಘನಯುತನಹುದೈ || ||೧೦೯||

ವಿಧಿಸಿದ ಕಾಲದಿ | ಮೊದಲೊದಗಿದವಗೆ |
ಮುದದೊಳೀವೆ ನೆಂ | ದುದ ನುಡಿ ಮರೆತೆಯ || ||೧೧೦||

ಮತಿಯುತ ನಿನ್ನಿಂದ | ಲತಿತ್ವರ್ಯದಿ ಮುನಿ |
ಪತಿ ಗೌತಮ ಸು | ತ್ತುತ ಪತಿಕರಿಸಿದ || ||೧೧೧||

ಭಾಮಿನಿ

ಪುಣ್ಯಫಲವಿದ್ದಂತೆ ಲಭಿಪುದು
ಹೆಣ್ಣು ಹೊನ್ಮಣ್ಣುಗಳು ಬರಿದೇ
ಬಣ್ಣಿಪುದು ವಿಕ್ರಮದಿ ಸಾಧಿಸಲಸದಳವು ನಿನಗೆ |
ಹಣ್ಣದಾದುದೆನುತ್ತ ಮನದೊಳು
ಖಿನ್ನನಾಗದೆ ಗಮಿಸಿ ನೀ ಬಿಡು
ಗಣ್ಣರಂ ಪಾಲಿಸಿ ದಿವದಿ ಸುಖದಿಂದ ನೆಲಸೆಂದ || ||೧೧೨||

ರಾಗ ಮುಖಾರಿ ಏಕತಾಳ

ಭಾಪು ಮೆಚ್ಚಿದೆ ನಿನಗೆ ಬಣ್ಣದ ನುಡಿಗೆ ||
ನೀ ಪೇಳಿದ ತೆರ | ಕೀಪಣದಂತೆ ಸಂ |
ತಾಪ ಪಡಿಸಿ ಕಡೆ | ಗೀಪರಿ ಗೈದೆಯ || ||೧೧೩||

ಕೊಡು ಮೊದಲೆಂದ ತೆರದಿ ಸುತೆಯ | ಮಾತಿಗೆ ತಪ್ಪಿ |
ಕೆಡಿಸಬೇಡವೊ ನಿನ್ನ ಗತಿಯ ||
ಮೃಡಹರಿಮನುಮುನಿ | ಗಡಣ ನಿನ್ನ ದು |
ರ್ನಡತೆಗೆ ಮೆಚ್ಚರು | ಬಿಡೆನಿದನೆಂದಿಗು || ||೧೧೪||

ರಾಗ ಕಾಂಭೋಜಿ ಝಂಪೆತಾಳ

ಲೋಕೇಶನೆಂದ ನೀ ಪಾಕಶಾಸನನೆಂದು |
ಜೋಕೆಯಂ ತಪ್ಪಿ ಎನ್ನಿದಿರು ||
ಕಾಕುತನದಿಂದ ದುರ್ವಾಕು ಗಳಹದೆ ಮರಳಿ |
ನಾಕದೊಳಗಿಹುದು ಸುಖ ನಿನಗೆ || ||೧೧೫||

ಮಾತು ತಪ್ಪಿದ ಪರಮ ಪಾತಕಿಯು ನೀನಾಗಿ |
ಚಾತುರ್ಯ ನುಡಿವೆ ಎನ್ನೊಡನೆ ||
ನೀತಿಬೋಧಿಪಡೆ ನೀನೇತರವ ವಿಶ್ವಾಸ |
ಘಾತಕಿಯೆ ನೀಚ ಪಾಮರನೆ || ||೧೧೬||

ಇಂದ್ರನಿಂತರುಹಲರವಿಂದಭವ ಸಭಿಕರೊಡ |
ನೆಂದನೆನ್ನಿದಿರು ನಿಲಗೊಡದೆ ||
ಮಂದಮತಿಯಂ ತಳ್ಳಿರೆಂದೆನಲು ಸಜ್ಜನರ |
ವೃಂದಮುಳಿಸಿಂದಿದಿರು ಬರಲು || ||೧೧೭||

ಕಂದ

ಪರಿಕಿಸುತೆಲ್ಲರ ಸುರಪತಿ
ಯರಿತನಿವರನಿದಿರೊಳೋರ್ವ ಕಾದುವುದನುಚಿತ |
ತೆರಳುತ ನಿರ್ಜರರೊಡನಿದ
ನೊರೆಯುತ ಕರೆತಹೆನೆನುತ್ತ ಮರಳಿದ ದಿವಕಂ || ||೧೧೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕರೆದು ನಿರ್ಜರರೊಡನೊರೆದ ವಿಧಿ |
ಧರೆಯ ಸಂಚರಿಸುತ ಮುಹೂರ್ತದಿ |
ಬರಲು ತರುಣಿಯ ನೀವೆನೆನಲತಿ | ತ್ವರ್ಯದಿಂದ || ||೧೧೯||

ಸುತ್ತುತವಧಿಗೆ ಬರುವ ಮೊದಲೇ |
ಪುತ್ರಿಯಳ ಗೌತಮನಿಗಿತ್ತುದು |
ಯುಕ್ತವಹುದೆನಲೊರೆದರಾ ದಿವಿ | ಜೋತ್ತಮಂಗೆ || ||೧೨೦||

ಮೊದಲೆ ನಮ್ಮಭ್ಯುದಯಕಾತನು |
ಕುದಿವ ಮತ್ಸರದಿಂದ ಸೃಜಿಸು |
ತ್ತಧಮರಿಗೆ ವರವಿತ್ತು ಕಳುಹುವ | ಕದನಕಿದಿರು || ||೧೨೧||

ಸೃಷ್ಟಿಕರ್ತನೆನುತ್ತಲೇಕೋ |
ನಿಷ್ಠೆಯಿಂದ ನ್ಯಾಯ ನಡತೆಯ |
ದಿಟ್ಟಿಸುತ್ತಲಿ ಸುಮ್ಮನಿರೆ ಬಹು | ಕಷ್ಟವಹುದು || ||೧೨೨||

ರಾಗ ಮಾರವಿ ಏಕತಾಳ

ಈ ತೆರ ಕಷ್ಟ ವಿಧಾತ ಗೈದ ಮೇ | ಲೇತಕೆ ದಿವವೆಮಗೆ ||
ಖ್ಯಾತನಾದ ಸುರನಾಥನಾಶ್ರಿತರು | ಪೇತುಗರೆನಿಸುವುದೆ || ||೧೨೩||

ಮಾನಯುತನಿಗವಮಾನಗಳೊದಗಲು | ಪ್ರಾಣದ ಹಂಗೇನು ||
ಚಾನಾಹಾನಿಯನೆಸಗುವುದೀಕ್ಷಣ | ಸೇನೆಯೊಡನೆ ತೆರಳಿ || ||೧೨೪||

ಎನೆ ಕೇಳುತ್ತಲಿ ಘನವರೂಥ ಸುರ | ರನು ಕೂಡುತ ಭರದಿ |
ರಣದುತ್ಸಾಹದಿ ಕನಲುತ್ತಲಿ ಪೊ | ಕ್ಕನು ವಿಧಿಯಾಲಯಕೆ || ||೧೨೫||

ಭಾಮಿನಿ

ಸತ್ಯಲೋಕವ ಪೊಕ್ಕು ದಿವಿಜರ
ಮೊತ್ತ ನಾಲ್ದೆಸೆ ಕವಿದು ನೆರೆದು ಮ
ಹಾತ್ಮರಂ ದಂಡಿಸುತಿರಲು ಕಾಣುತ್ತ ಖತಿಯಲ್ಲಿ |
ಕೃತ್ತಿವಾಸನ ತೆರದಿ ಕಿಡಿಗೆದ |
ರುತ್ತ ಕಮಲಜನೆದ್ದು ತಾ ಕೈ
ಎತ್ತಿರಲು ಮಾರಾಂತು ಮಾರುತನೆಂದ ಮೂದಲಿಸಿ || ||೧೨೬||

ರಾಗ ಭೈರವಿ ಅಷ್ಟತಾಳ

ಭಳಿರೆ ವಾಣೀಶ ನಿನ್ನ | ಬಾಳುವೆ ಸುಡು | ಇಳೆಯ ಸಂಚರಿಪ ಪಣ ||
ತಿಳುಹಿ ಸುರೇಂದ್ರನ | ಕಳುಹಿ ಮೌನಿಪಗಿತ್ತೆ | ಲಲನೆಯನೆಲೊ ದುರ್ಗುಣ || ||೧೨೭||

ಮೊದಲು ಬಂದವಗೀವುದು | ಎನ್ನಯ ಪಣ | ವದ ಮುದದಲಿ ಮೆರೆದು |
ತುದಿ ಮೊದಲರಿಯದೆ | ತ್ರಿದಶರ ಕರೆತರೆ | ಕದನದಿ ಲೇಸಾಗದು || ||೧೨೮||

ನಿರತ ನಿನ್ನಾಶ್ರಿತರು | ಲೋಕದಿ ಕೀರ್ತಿ | ಭರಿತರು ಗುಣಯುತರು ||
ಸುರರೆಂಬ ಭಾವನೆ | ಮರೆದು ನಮ್ಮೊಡೆಯಗೀ | ತೆರ ಕೃತ್ಯ ಗೈದೆ ಎಲೈ || ||೧೨೯||

ಪೇಳಿದಂದದಿ ಸುತೆಯ | ಮೌನಿಪಗಿತ್ತೆ | ಕೇಳದೆನ್ನಯ ನೀತಿಯ ||
ಹಾಳೆಸಗಿದ ನಿಮ್ಮ | ಬಾಳ್ವೆಯ ಸುರಪತಿ | ಖೂಳತನದಿ ನಿಶ್ಚಯ || ||೧೩೦||

ಕಳಕೊಂಡೆ ಶಿರವೊಂದನು | ಮೊದಲೆ ಸುತೆ | ಯಳ ನೆವದಿಂದ ನೀನು ||
ಉಳಿದುದಕಳಿಗಾಲ | ತೋರುವೆನೆನುತಲಿ | ಮುಳಿಸಿಂದ ಶರವೆಚ್ಚನು || ||೧೩೧||

ಕಂದ

ಬಳಿಗಂ ಹೊದ್ದದ ತೆರದಲಿ
ನಳಿನಾಸನ ಶಕ್ತಿಯಿಂದ ತಳದೆಲ್ಲವನುಂ |
ಕಲಹವ ಗೆಲಿದೈತರಲಾ
ತಿಳಿಯುತಲದ ಪೇಳ್ದನಗ್ನಿ ತಡೆದಾತನೊಳಂ || ||೧೩೨||

ರಾಗ ಶಂಕರಾಭರಣ ಮಟ್ಟೆತಾಳ

ಭಳಿರೆ ಲೇಸು ಕಾರ್ಯಗೈದೆ ನಳಿನಸಂಭವ |
ಸಲಹುವಾತ ಸೃಷ್ಟಿಕರ್ತನೆಂದು ಪಾದವ ||
ಬಲವಿರೋಧಿ ನಂಬಿದುದಕೆ ಬಳಲಿಸುತ್ತಲಿ |
ಕಳೆದ ಮಾನತೋರ್ದ ತಕ್ಕ ಫಲವನಿಂದಿಲಿ || ||೧೩೩||

ಮಾನ ಕಳೆವರನ್ಯರಿಲ್ಲ ತಾನೆ ತನ್ನಯ |
ಹಾನಿ ಬರಿಸಿಕೊಂಬೆ ತಿಳಿಯದಾದೆ ನಿರ್ಣಯ ||
ಜ್ಞಾನಶೂನ್ಯವಾದ ಗೀರ್ವಾಣರೆರೆಯನು |
ಕ್ಷೋಣಿ ಬೇಗ ಸಂಚರಿಪ ವಿಧಾನವರಿಯನು || ||೧೩೪||

ಬರಿದೆ ದಣಿಸಿದೇಕೆ ಮೊದಲೆ ಒರೆಯಲಾತನು |
ತೊರೆದು ಸತಿಯ ತೆರಳುತಿರ್ದ ಸೃಷ್ಟಿಕರ್ತನು ||
ಹಿರಿಯ ನೀತಿಯಂತೆ ಪೊರೆವನೆನುತ ನಿನ್ನನು |
ನಿರತ ಪೂಜಿಪಂಗೆ ತೋರ್ದೆ ತಕ್ಕ ಫಲವನು || ||೧೩೫||

ಹಿರಿಯ ಕಿರಿಯ ಹಿತವಹಿತವನರಿಯೆ ಮರುಳನು |
ಸುರಪನಿಂದು ಭ್ರಾಂತನಾಗಿ ನೆರಹಿ ಸುರರನು ||
ಧುರಕೆಯೆನ್ನೊಳಿದಿರಿಗಾಗಿ ಮುದದಿ ಬಂದುದು |
ಉರಿಯ ಶಲಭಕುಲವು ಮುತ್ತಿದಂದವಾದುದು || ||೧೩೬||

ಮರುಳ ಜನರನೆಲ್ಲ ಭ್ರಾಂತರೆನುವ ತೆರದೊಳು |
ಮರೆದು ನ್ಯಾಯ ಒರೆವೆ ಪರಿಕಿಸೆನುತಲೆಸೆಯಲು ||
ಬರಿಯ ಗೈಯುತಜನು ವರುಣ ನಿರುತಿಮುಖ್ಯರ |
ಮರಳಿಸಲ್ಕೆ ತಡೆಯುತೆಂದನಾಗ ಸುರವರ || ||೧೩೭||

ರಾಗ ಭೈರವಿ ಏಕತಾಳ

ಜರೆದೆಂದನು ವಿಧಿ ನೀನು | ಬಲು | ಸುರರ ಗೆಲಿದ ಶೌರ್ಯವನು ||
ಮೆರೆಸಲು ಎನ್ನಿದಿರಿನಲಿ | ಮುಂ | ದ್ವರಿಯದಿರೈ ಧೈರ್ಯದಲಿ || ||೧೩೮||

ಬಾಳಿರಿ ನಾಕದೊಳೆಂದು | ನಿ | ನ್ನೇಳಿಗೆಗಾಗಿರಲಿಂದು ||
ಹಾಳೆಸಗಿದೆ ಗರ್ವದಲಿ | ಕಡೆಗಾಲವು ಬಂತಿಂದಿನಲಿ || ||೧೩೯||

ಹರಿಹರರಾಶ್ರಯದಿಂದ | ನಾ | ವಿರಲು ಸೃಜಿಸಿ ಖಳವೃಂದ ||
ಪರಿಪರಿ ವರಗಳನಿತ್ತು | ನೀ | ಬರಿಸುವೆ ದಿವಕಾಪತ್ತು || ||೧೪೦||

ದುಷ್ಟರ ವಧಿಸುವ ಬಗೆಗೆ | ಶ್ರಮ | ಪಟ್ಟು ತಿಳುಹಿ ಹರಿಹರರ್ಗೆ ||
ಕಷ್ಟವ ಪರಿಹರಿಸಿದೆನು | ಸುರ | ರ್ಗಿಷ್ಟವ ಕರೆದಿತ್ತಿಹೆನು || ||೧೪೧||

ನೆರವಾಗಿರೆ ನೀನೆನಗೆ | ಧರೆ | ಚರಿಸಲಟ್ಟುತನ್ಯರಿಗೆ ||
ತರಳೆಯ ನಿತ್ತವಮಾನ | ಗೈ | ದರುಹುವೆ ದುರ್ನುಡಿಹೀನ || ||೧೪೨||

ಸಲುಗೆಯನಿತ್ತುದರಿಂದ | ನೀ | ಗಳಹುವೆ ತೊಲಗಿದಿರಿಂದ ||
ಛಲಗೈದರೆ ಸುಮನಸರ | ಕುಲ | ವಳಿವುದು ತಿಳಿ ನಿರ್ಧಾರ || ||೧೪೩||

ಕೇಳುತ ನಾಲ್ದೆಸೆಗಳಲಿ | ಸುರ | ಜಾಲ ಮುಸುಕೆ ಖಾತಿಯಲಿ ||
ಮೂಲಶಕ್ತಿ ಕೊಳಲಜನು | ಉರಿ | ಜ್ವಾಲೆಯು ಹತ್ತಿದುದಿನ್ನು || ||೧೪೪||

ವಾರ್ಧಕ

ತಳಮಳಿಸೆ ಮೂಲೋಕ ಬ್ರಹ್ಮದಂಡದ ಹತಿಗೆ
ಉಳಿಗಾಲವಿಲ್ಲೆಂದು ಸುರರು ಕಂಡೆಡೆ ಸಾರೆ
ವಲವೈರಿ ಕಂಡಂಜಿ ಸಮರಮಂ ಬಿಟ್ಟೋಡಿ ನಾಕಕೈತಂದು ಮನದಿ |
ಹಲವು ಹಂಬಲಿಸುತೆಂದನು ಸತಿಯ ನೆವದಿಂದ
ಬಳಲಿಸಿದೆ ನಿರ್ಜರರ ಬಳಗಮಂ ಬರಿದೆ ಮುನಿ
ತಿಲಕ ನಾರದಗೆ ಭಾಷೆಯನಿತ್ತು ಹಾಳಾದುದೆನ್ನ ಬಾಳುವೆ ಎನ್ನುತ || ||೧೪೫||

ಕಂದ

ಮಾನವಳಿದು ನಾಕದಿ ಗೀ
ರ್ವಾಣರ ಒಡೆತನವನೆಂತು ವಿರಚಿಪೆನೆನುತಂ |
ಮೌನದೊಳಿರಲಾ ಶಿಖಿ ಪವ
ಮಾನಾದ್ಯರು ಪೇಳ್ದರಾಗ ಕಳವಳಗೊಳುತಂ || ||೧೪೬||

ರಾಗ ತೋಡಿ ತ್ರಿವುಡೆತಾಳ

ಚಿಂತಿಪುದೇತಕಯ್ಯ | ನಿರ್ಜರರೆರೆಯ |
ಚಿಂತಿಪುದೇತಕಯ್ಯ ||
ಅಂತರಂಗದೊಳಿಂತು ದುಗುಡವ |
ನಾಂತು ಕುಳಿತಿಹುದೇಕೆ ವದನದ |
ಕಾಂತಿ ಕುಂದಿರಲೇನು ಪರಿಭವ |
ಬಂತು ತಿಳುಹಿಸು ದಂತಿವಾಹನ || ||೧೪೭||

ಹರಿಹರರೊಲುಮೆಯೊಳು | ಸುಕ್ಷೇಮದೊ |
ಳಿರುವೆವು ನಾಕದೊಳು ||
ಸರಸಿರುಹಭವನಿಂದ ಹೊದ್ದದು |
ದುರಿತಗಳು ಸಂಗರದ ಸೋಲದಿ |
ಕೊರತೆಯಪ್ಪುದೆ ಸೃಷ್ಟಿಕರ್ತನ |
ಕರುಣವಳಿದರೆ ಮರುಗಲೇತಕೆ || ||೧೪೮||

ಹೆಣ್ಣುಹೊನ್ಮಣ್ಣುಗಳು | ಸೇರ್ವದು ಪೂರ್ವ |
ಪುಣ್ಯದ ಘಟನೆಯೊಳು ||
ಎಣ್ಣದಾ ಬಗೆ ಪಾಲಿಸೈ ಬಿಡು |
ಗಣ್ಣರನು ಎಂದೆನಲು ಮನದೊಳು |
ಖಿನ್ನನಾಗುತ ಲೊರೆದನಾ ಶತ |
ಮನ್ಯು ವಿಧಿಸುತೆಯನ್ನು ನೆನೆಯುತ || ||೧೪೯||

ರಾಗ ಯಮುನಾಕಲ್ಯಾಣಿ ಝಂಪೆತಾಳ

ಹಾಳೆಸಗಿದೆನು ಎನ್ನ | ಬಾಳುವೆಯನದನು |
ಪೇಳಿ ಫಲವನು ಕಾಣೆ | ವಿಧಿಯಿಂದಾದುದನು ||
ಬಾಲೆಯಹಲ್ಯೆಯನು | ವರಿಸುವಾತುರದಿ |
ಭೂಲೋಕ ಸಂಚರಿಸಿ | ನಡೆತರಲು ಪಥದಿ || ೧೫೦ ||

ಸುರಮುನಿಪ ಕರೆದೆನ್ನೊ | ಳೊರೆದ ವಂಚಿಸಿ ನಿನ್ನ |
ತರುಣಿಯನು ಗೌತಮಂ | ಗಿತ್ತ ನೀನಿದಕೆ ||
ಬರಿದೆ ಬಳಲಿದೆ ಎನಲು | ನೆರೆಯದಿರಲೊಂದು ದಿನ |
ಸರುವಥಾ ದಿವದಿ ಬಾ | ಳಿರಲಾರೆನೆಂದು || || ೧೫೧ ||

ಕರತಟ್ಟಿ ಭಾಷೆಯ | ನ್ನರುಹಿದೆನು ಮೂಲೋಕ |
ಚರಿಪನೆಲ್ಲರೊಳೊರೆದು | ಪರಿಹಾಸಗೈವ ||
ಸುರರೊಡೆಯನೆನಗಿನಿತು | ಪರಿಭವವು ಒದಗಲೆಂ |
ತಿರುವೆ ಮೊಗ ತೋರಿಸುತ | ನಿರತ ನಾಕದಲಿ || ೧೫೨ ||

ರಾಗ ಬೇಗಡೆ ಅಷ್ಟತಾಳ

ಧೀರವೀರೋದ್ಧಾರ ಸುರವರ್ಯ | ನೀನಿದಕೆ ಸುಮ್ಮನೆ |
ಗಾರುಗೆಟ್ಟಿರಲೆಂತಹುದು ಕಾರ್ಯ ||
ವಾರಿಜಾಸನ ನಿನ್ನ ವಂಚಿಸಿ | ನಾರಿಯಂ ಗೌತಮನಿಗಿತ್ತರೆ |
ಊರನಗಲುವುದೇತಕೈ ಪ್ರತೀ | ಕಾರದಿಂ ನುಡಿ ಪೂರಯಿಸುವುದು || ೧೫೩ ||

ನಡುನಿಶಿಗೆ ಮುನಿಯಾಶ್ರಮದ ಬಳಿಗೆ | ಒಮ್ಮತದೊಳೆಲ್ಲರು |
ನಡೆದು ಕುಕ್ಕುಟವಾಗಿ ನಾ ಕೂಗೆ ||
ಮಡದಿ ಉದಯವಿದೆನುತ ಎಚ್ಚರ | ಪಡಿಸಿ ಪತಿಯಂ ಸ್ನಾನಕಾ ನದಿ |
ಎಡೆಗೆ ಕಳುಹುವಳೊಡನೆ ಯತ್ನದಿ | ದೃಢ ಕೆಡಿಸಿ ನೆರೆ ಜಡಜನೇತ್ರೆಯ || ೧೫೪ ||

ನಿತ್ಯ ನಿಷ್ಠೆಗಳೆಲ್ಲ ತೀರಿಸುತ | ಮುನಿಪಾಲ ಮರಳುವ |
ಮಿತ್ರನುದಯಕೆ ವೇಳೆಯರಿಯುತ್ತ ||
ಮತ್ತಕಾಶಿನಿಯೊಡನೆ ರಮಿಸುತ | ಲಿತ್ತ ನಡೆತರೆ ಪೇಳಿದಂದದಿ |
ಕೃತ್ಯಗೈದನೆನುತ್ತ ಸಕಲರು | ಬಿತ್ತರಿಪರೆನಲರ್ತಿಯಾಂತನು || ೧೫೫ ||

ರಾಗ ಜಂಜೂಟಿ ರೂಪಕತಾಳ

ಲೇಸು ಕಾರ್ಯವರುಹಿದೆ ವಾ | ಣೀಶನೆನ್ನನು ||
ಭಾಷೆಯಿತ್ತು ತಪ್ಪಿ ಮಾನ | ಘಾಸಿಗೈದನು ||
ಮೋಸವಿದರೊಳಿಲ್ಲ ನಡೆಸಿ | ವಾಸಿ ಪಂಥವ |
ಆ ಸರೋಜಾಕ್ಷಿಯನು ಕೂಡಿ | ತಾಳ್ವೆ ಸರಸವ || ೧೫೬ ||

ಎಂದು ಮನದೊಳುಬ್ಬುತಿರಲು | ಇಂದ್ರನಾಗಲು |
ಸಂದ ರವಿಯು ಪಶ್ಚಿಮಾಬ್ಧಿ | ಗಂದು ನಿಶಿಯೊಳು ||
ಒಂದೆ ಮತದೊಳಿಳಿದರಿಳೆಗೆ | ಗಂಧವಾಹನ |
ಹೊಂದುತನಲ ವರುಣ ಸಹಿತ | ಬಂದರಾಕ್ಷಣ || ೧೫೭ ||

ಕಂದ

ಆ ದಿವಿಜೇಶಂ ನಿಶಿಯೊಳು
ಕಾದಿರ್ದಂ ಮುನಿವರೇಂದ್ರನಾಶ್ರಮದೆಡೆಯಂ |
ಸಾಧಿಸಿ ನಿಷ್ಠೆಯ ಗೌತಮ
ನಾ ದಿನ ಪವಡಿಸಲಹಲ್ಯೆ ಸೇವೆಯೊಳಿರ್ದಳ್ || ೧೫೮ ||

ವಾರ್ಧಕ

ಹತ್ತಿದುದು ನಿದ್ರೆಯಾತಂಗೆ ತಿಳಿದದನು ವಿಧಿ
ಪುತ್ರಿಯೊಂದೆಡೆ ಪವಡಿಸಲಿಕೆ ಕಣ್ಣಾಲಸ್ಯ
ವೆತ್ತಿರುವ ವೇಳೆಯಲಿ ಉದಯಮಂ ಸೂಚಿಸುವ ತೆರದಿ ಮಾರುತ ಬೀಸಲು |
ಒತ್ತಿನೊಳು ವರುಣ ಸಾಧ್ವಿಯ ವಂಚಿಸುವೆನೆಂದು
ಮುತ್ತಿದಂ ಕಿರುವನಿಗಳಾಗಿ ನಾಲ್ದೆಸೆಗಳಂ
ಸುತ್ರಾಮಗನುವಾಗುತನಲ ಚರಣಾಯುಧಂ ತಾನೆನಿಸಿ ಬಳಿ ಸಾರುತ || ೧೫೯ ||

ರಾಗ ತೋಡಿ ಅಷ್ಟತಾಳ

ಕೊಕ್ಕೋಕೊ ಎಂದು ಕುಕ್ಕುಟ ಕೂಗಿತು |
ದಿಕ್ಕೆಲ್ಲ ಕೇಳ್ವಂತೆ ಕೊಕ್ಕೋಕೊ ||
ಅಕ್ಕೋ ರವಿಯುದಯಕ್ಕೆ ಬರುವನೀಗ |
ದಕ್ಕದು ನಿದ್ರೆಯು ಕೊಕ್ಕೋಕೊ || ೧೬೦ ||

ತಕ್ಕುದಾದ ಸ್ನಾನಕ್ಕೆ ವೇಳ್ಯವಿದು |
ಅಕ್ಕರೆಯಿಂದೇಳಿ ಕೊಕ್ಕೋಕೊ ||
ಅರ್ಕಗರ್ಘ್ಯವನೀಯಲಿಕ್ಕೆ ಮುಹೂರ್ತವು |
ಫಕ್ಕನೆ ಬರುವುದು ಕೊಕ್ಕೋಕೊ || ||೧೬೧||

ಕಂದ

ಈ ಪರಿಯಿಂ ಕುಕ್ಕುಟ ಧ್ವನಿ
ಯಾ ಪಾವನೆ ಕೇಳುತೆದ್ದು ಕುಳಿತಾ ಕ್ಷಣಕಂ |
ನಾ ಪವಡಿಪುದನುಚಿತವೆಂ
ದಾ ಪತಿಯನ್ನಲುಗಿಸುತ್ತ ಕರೆದಿಂತೆಂದಳ್ || ||೧೬೨||

ರಾಗ ಸಾವೇರಿ ತ್ರಿವುಡೆತಾಳ

ಕೋಳಿ ಕೂಗಿದುದಲ್ಲ | ಏಳೆನ್ನ ನಲ್ಲ |
ಮೇಲಾದ ನಿದ್ರೆಗೆ | ವೇಳೆ ಇನ್ನಿಲ್ಲ |
ಕಾಲಕಾಲಕು ಎಚ್ಚರದೊಳನು |
ಕೂಲಮಾಗಿಯೆ ನದಿಗೆ ಪೋಗುವ |
ಕಾಲ ಒದಗಿದುದಮಿತಕೀರ್ತಿ ವಿ |
ಶಾಲ ಸದ್ಗುಣಶೀಲ ಮುನಿವರ || ||೧೬೩||

ಇಷ್ಟು ದಿವಸ ನೇಮ | ನಿಷ್ಠೆಯ ನಿಯಮ |
ಕೆಟ್ಟುದಿಲ್ಲವಿದೇನು | ಕಷ್ಟವಿಂದಮಮಾ |
ತುಷ್ಟಿಯಿಂದೊಳಪಟ್ಟ ಸಿದ್ಧಿಯ |
ಬಿಟ್ಟು ನರಕದೊಳಾಳ್ವ ಬಲು ನಿ|
ಕೃಷ್ಟಗತಿಗೊಡಂಬಟ್ಟಪೆಯ ಮಮ |
ಭೀಷ್ಟ ಪಾಲಿಪ ಶ್ರೇಷ್ಠ ಮೂರುತಿ || ||೧೬೪||