ಭಾಮಿನಿ

ವನಜಮುಖಿ ಈ ತರದಿ ಕಾಂತನ |
ತನುವಲುಗುತೆಚ್ಚರಗೊಳಿಸಲಾ
ಕ್ಷಣದಿ ಮುನಿವರನೆದ್ದು ಕುಳಿತತಿಜಾಡ್ಯತೆಯನಾಂತು ||
ಮನದೊಳೆಣಿಸಿದ ಚೋದ್ಯವೇನಿದು |
ದಿನಪನುದಯದ ಕಾಲವಿಂದಿನೊ
ಳಿನಿತು ಬೇಗದೊಳೊದಗಿತೇನೆಂದೆನುತ ಸತಿಗೆಂದ || ||೧೬೫||

ರಾಗ ಭೂಪಾಳಿ ಝಂಪೆತಾಳ

ಉದಯ ಬೇಗವಿದೇನೆ | ಮದಗಜ ಸನ್ನಿಭಯಾನೆ |
ಹದನು ಯೋಚಿಸೆ ಕಾರ್ಯ | ವೊದಗಿತಾಶ್ಚರ್ಯ ||
ಅಧಿಕ ಜಗಕಿದು ನಾರಿ | ವಿಧಿಯ ಮೋಹದ ಕುವರಿ |
ಸದಮಳ ಸುಚಾರಿತ್ರೆ | ಪದುಮದಳ ನೇತ್ರೆ || ||೧೬೬||

ತಕ್ಕ ಸಮಯವಿದಲ್ಲ | ಕುಕ್ಕುಟಕೆ ಮತಿಯಿಲ್ಲ |
ರಕ್ಕಸರ ಮಾಯೆಯೊ ಶಿವನೆ ಬಲ್ಲ ||
ಅರ್ಕನುದಯಕ್ಕೆ ಬರ | ಲಿಕ್ಕಹುದು ವೇಳ್ಯವೆನೆ |
ಫಕ್ಕನೇ ಕೇಳಿಸಿತು | ಕೊಕ್ಕೋಕೊ ಎಂದು || ||೧೬೭||

ರಾಗ ಆರಭಿ ಅಷ್ಟತಾಳ

ಆಲಿಸಾಧ್ವನಿ ಪ್ರಿಯ | ಜಾಲವೇ ಮುನಿರಾಯ |
ಕೋಳಿ ಕೂಗಿದುದಲ್ಲವೆ | ಮಾಯಕವೆ ||
ಬಾಲಭಾಸ್ಕರನುದಯ ಸೂಚಿಪ |
ವೇಳೆಯಲಿ ಹಿಮದಾವರಣದಿಂ |
ಗಾಳಿ ತಂಪಿನೋಳೇಳ್ವ ಬ್ರಾಹ್ಮೀ |
ಕಾಲವನು ನೀ ಹಾಳುಗೈವೆಯ || ||೧೬೮||

ಎಂದಿನಂದದಿ ಸ್ನಾನಕೆಂದು | ಪೋಗುವ ಮನ |
ವಿಂದಿಲ್ಲದಾದುದೇನು | ಸುಗುಣ ನೀನು ||
ಮಂದಗಮನೆಯ ಪ್ರೇಮಪಾಶದ |
ಬಂಧನದಿ ನೆರೆಸಿಲುಕಿ ನಿಷ್ಠೆಗೆ |
ಹಿಂದುಳಿದನೆಂದೆನುತ ಸಕಲರು |
ಮುಂದೆ ಲೋಕದಿ ನಿಂದೆಗೈವರು || ||೧೬೯||

ಭಾಮಿನಿ

ನುಡಿಯುತಿರೆ ಹೊರವಲಯ ವೀಕ್ಷಿಸಿ
ದೃಢವೆನುತ ನಿಶ್ಚಯಿಸಿ ಬಲುಪರಿ
ಯಡರಿ ನಿದ್ರೆಯ ಭರದೊಳೀ ಪರಿ ತೋರಿತಿಂದೆನಗೆ ||
ತಡವ ಗೈದರೆ ನಿತ್ಯದಾಹ್ನಿಕ
ಕೆಡುವುದಿದು ದಿಟವೆಂದೆನುತಲವ |
ಮಡದಿಯಳ ಸಂತವಿಸಿ ವೇಗದಿ ನಡೆದ ನದಿಯೆಡೆಗೆ || ||೧೭೦||

ಆರ್ಯ ಸವಾಯ್ ಏಕತಾಳ

ಯಮಿವರನೀಪರಿ ಸಾರಲು ದ್ವಾರವ |
ಸಮತೆಯಿಂ ಬಂಧನಗೈಯುತಲಿ |
ಸುಮಗಂಧಿನಿಯಾಶ್ರಮದಿ ಪವಡಿಸ |
ಲ್ಕಮರಾಧೀಶನು ತವಕದಲಿ || ||೧೭೧||

ಕಮಲಜನಣುಗೆಯ ರಮಿಸುವೆ ತಾನೀ |
ಸಮಯಕೆ ಯತ್ನದೊಳೆಂದೆನುತ |
ಭ್ರಮೆಯಿಂದಲಿ ಗೌತಮ ರೂಪಾಂತಾ |
ಭ್ರಮರಕುಂತಳೆಗುಸುರಿದ ಮಾತ || ||೧೭೨||

ರಾಗ ಹಂಸಧ್ವನಿ ರೂಪಕತಾಳ

ನೀರಜಾನನೆ | ಮೋಹನೆ ಘನೆ || ಪಲ್ಲವಿ ||

ದ್ವಾರ ತೆರೆಯೆ ವಿಚಾರವರಿಯದೆ |
ಘೋರ ನಿಶಿಯೊಳ್ದೂರ ಸಾರಿದೆ |
ಕಾರಗತ್ತಲೆ ಊರ ಮುಸುಕಿದೆ |
ಸಾರಸಸಖ ಬಾರನುದಯಕೆ || ನೀರಜಾನನೆ || ||೧೭೩||

ಕುಂದದೆಚ್ಚರದಿಂದ ನದಿಯು |
ಬಂದಾಮುನಿಪನೆಂದಾದರದಿ |
ನಿಂದಾಳಿದಿರು ಇಂದಾನೈದಿದು |
ಮುಂದಾದುದರಿಂದ ಮರಳಿದೆ || ನೀರಜಾನನೆ || ||೧೭೪||

ಕಂದ

ಎಚ್ಚರಗೊಳುತಾ ಮಾನಿನಿ
ಯಚ್ಚರಿಪಟ್ಟಾಗ ಬೇಗ ಬರುವೆನೆನುತ್ತಂ |
ಸಚ್ಚಿತ್ತದೊಳೆಣಿಸುತ್ತಿರೆ
ದುಶ್ಚರಿತಂ ರಮಿಪೆನೆಂದು ಮಗುಳಿಂತೆಂದಂ || ||೧೭೫||

ರಾಗ ಪೀಲು ಅಷ್ಟತಾಳ

ಪದುಮದಳಾಂಬಕಿ ಮದಗಜಯಾನೆ |
ಒದಗಿನಿಂ ಕದ ತೆರೆ ಸದಯೆ ಪ್ರವೀಣೆ ||
ನದಿಯೆಚ್ಚರಿದುದಿಲ್ಲ ಉದಯಕಾಲವಿದಲ್ಲ |
ವಿಧ ವಿಧ ಕಷ್ಟದಿ ಬೆದೆಬೆಂದೆನಲ್ಲ || ||೧೭೬||

ಚಳಿಮಳೆಯೊಳು ಸಾರಿ ಬಳಲಿದೆ ಭಾರಿ |
ತಿಳಿಯದೆ ನಿನಗಿದು ಲಲನೆ ವೈಯಾರಿ |
ನಿಲಲಾರೆ ನಾ ಹೊರವಲಯದೊಳೀ ತೆರ |
ಛಲ ತೊರೆದು ದಯ ಮುಳಿದು ನಿದ್ರಿಪೆಯ || ||೧೭೭||

ಸಾಂಗತ್ಯ ರೂಪಕತಾಳ

ಈ ತೆರದಲಿ ಸುರನಾಥ ನುಡಿದ ಮೃದು |
ಮಾತನಾಲಿಸಿ ಬಲು ವಿಧದಿ ||
ಪ್ರೀತನು ದಣಿದನೆಂದಾತುರದಿಂ ದ್ವಾರ |
ವಾ ತತೂಕ್ಷಣದೊಳು ತೆರೆದು || ||೧೭೮||

ವಲ್ಲಭನೆಂದು ಕೈಗೊಟ್ಟು ಕತ್ತಲೆಯೊಳಾ |
ಹಲ್ಯೆಯು ಕರೆತರುತವನ ||
ಸಲ್ಲಲಿತೆಯು ಭಕ್ತಿಯಲ್ಲಿ ಚರಣಸೇವೆ |
ನಿಲ್ಲದೆ ಕೈಗೊಳುತಿರಲು || ||೧೭೯||

ಅಂತರ್ಯಕರಿವಾಗದಂತೆ ಮಾತಾಡುತ್ತ |
ದಂತಿವಾಹನ ಬಲು ವಿಧದಿ ||
ಸಂತೈಸುತಲಿ ಮುನಿಕಾಂತೆಯ ರಮಿಸುತೇ |
ಕಾಂತದೊಳಿರ್ದನಾಶ್ರಮದಿ || ||೧೮೦||

ಭಾಮಿನಿ

ಅರಸ ಕೇಳೈ ನಿದ್ರಿಸಿದ ಫಣಿ |
ವರನ ಬಾಯೊಳಗಿರುವ ರತುನವ
ಕರ ತುಡುಕಿ ವಶಗೈದವನವೋಲ್ಸುರಪ ನಿರಲಿತ್ತ |
ತೆರಳಿ ಗೌತಮ ಸ್ನಾನಕೆನುತಲಿ
ಪರಿಕಿಸಲು ನದಿಗೆಚ್ಚರಿಲ್ಲದ
ತೆರವರಿತು ಬಲು ಬೆರಗುಗೊಳುತವ ಮನದೊಳಿಂತೆಂದ || ||೧೮೧||

ಶ್ರೀರಾಗ ಏಕತಾಳ

ಮೋಸ ಹೋದೆನು | ಉದಯವೆಂದು  || ಪಲ್ಲವಿ ||

ಸೂಸುವ ಕತ್ತಲೆಯುಲಿವ | ಲೇಶವು ಹಿಂಜರಿದುದಿಲ್ಲ |
ಬೇಸರಾಂತೆ ಸ್ನಾನದಭಿ | ಲಾಷೆಯೊಳೀ ಸಾರಿ ಬಂದು || ||೧೮೨||

ನಿಚ್ಚ ನಾನೈದಲು ಭರದಿ | ಎಚ್ಚರಗೊಳ್ಳುತ ನದಿ |
ಹೆಚ್ಚುವಳಾನಂದವಾಂತು | ಬೆಚ್ಚಿಹಳಾಶ್ಚರ್ಯವಿಂತು || ||೧೮೩||

ಬೀಳುವ ಮಳೆಯ ಚಳಿಗಾಳಿಯನ್ನು ತಾಳಲೆಂತು |
ಪೇಳಲೇನು ನಾಲ್ಕು ದೆಸೆಯಿಂ | ಗೋಳೆಂದು ಕೇಳುತ್ತಲಿದೆ || ||೧೮೪||

ಫುಲ್ಲನೇತ್ರೆ ವಲ್ಲಭೆಯಾ | ಹಲ್ಯೆ ವನದಲ್ಲಿ ಓರ್ವ |
ಳ್ತಲ್ಲಣಗೊಳ್ಳದೆ ಎಂತು | ನಿಲ್ವಳೊ ನಾನಲ್ಲಿಗೈವೆ || ||೧೮೫||

ಕಂದ

ಪರಿಕಿಸೆ ಸುಜ್ಞಾನದಿ ಮುನಿ
ವರ ನಟ್ಟಿರುಳೆಂದೆನುತ್ತ ತಿಳಿದತಿ ಜವದಿಂ |
ಸರಿದಾಶ್ರಮ ಬಾಗಿಲೊಳಾ
ತರುಣಿಯನೆಚ್ಚರಿಪೆನೆಂದು ಕರೆದಿಂತೆಂದಂ || ||೧೮೬||

ರಾಗ ಬಿಲಹರಿ ಅಷ್ಟತಾಳ

ಕೇಳೆನ್ನ ಮನದನ್ನೆ ಬಾಲೆಯಹಲ್ಯೆ |
ಕೋಳಿ ಕೂಗಿದುದೇಕೊ ನಿಶಿ ಇಹುದಲ್ಲೆ |
ನಾ | ನಿಲ್ಲಿರಲೊಲ್ಲೆ | ಏ | ಳೇಳೆನ್ನ ನಲ್ಲೆ || ||೧೮೭||

ನದಿ ಎಚ್ಚರಿತುದಿಲ್ಲ ಹದನವೇನೆಂದು
ತುದಿಗೆ ಜ್ಞಾನದಿ ನೋಡೆ ನಡು ನಿಶಿ ಎಂದು |
ವೇ | ಗದೊಳಿಲ್ಲಿ ಬಂದು | ಬಾ | ಯಾರಿಹೆನಿಂದು || ||೧೮೮||

ಬೀಸುವ ಚಳಿಗಾಳಿ ಸಹಿಸದು ಕಾಣೆ |
ಸೂಸುವ ಮಳೆಯು ಘಾಸಿಪುದು ನಿನ್ನಾಣೆ |
ಬೇ | ಸರವೆ ಪ್ರವೀಣೆ | ದ್ವಾ | ರವ ತೆರೆ ಜಾಣೆ || ||೧೮೯||

ಕಂದ

ಏನಿದು ವಿಪರೀತವಿದೀ
ಕಾನನದೊಳಗಿಂದಿಗೆಂದು ಬಲು ಬಗೆಯಿಂದಂ |
ಮಾನಿನಿ ಯೋಚಿಸುತಿರಲಾ
ಮೌನೀಶಂ ಪೇಳ್ದನಾಗ ಸುಪ್ರೀತಿಯೊಳಂ || ||೧೯೦||

ರಾಗ ಆರಭಿ ಏಕತಾಳ

ಪದುಮಗಂಧಿನಿ ಶಶಿವದನೆ ಮೋಹದ ಕಣಿ |
ವದಗಿನಿಂ ಕದವ ನೀ ತೆರೆಯೆ ||
ಬೆದರುತೆಂದಳು ಪರಸುದತಿಯ ನಿಶಿಯೊಳೀ |
ವಿಧ ಪೇಳ್ವ ಹದನವೇನರಿಯೆ || ||೧೯೧||

ಬೆಳಗಾದುದೆಂದು ದೃಢ | ತಿಳಿಯದೈದಿದ ಮುನಿ |
ತಿಲಕ ಗೌತಮ ನಾನೆ ಕಾಣೆ ||
ಒಳಗೊಬ್ಬ ಗೌತಮ | ಬಳಿಯೊಳಗಿಹ ಹೊರ |
ವಳಯದೊಳಾರೆಂದಳ್ಜಾಣೆ || ||೧೯೨||

ಭಾಮಿನಿ

ಏನು ದುರ್ಘಟವೆನುತ ಮುನಿವರ
ತಾನೆಣಿಕೆಗೊಳಲಿಂದ್ರ ನಡುಗಲು
ಮಾನಿನಿಯು ಕೇಳಿದಳು ಮಾಯವೊ ಭೀತಿಯೇನೆನಲು |
ಮಾನವಂತೆಗೆ ಪೇಳ್ದನಾಗೀ
ರ್ವಾಣರಧಿಪತಿ ತಪ್ಪನೆಸಗಿದ
ಮಾನಪ್ರಾಣವನುಳುಹಿ ಪಾಲಿಸೆನುತ್ತ ಕೈಮುಗಿದ || ||೧೯೩||

ವಾರ್ಧಕ

ಎಲವೊ ಬಾಹಿರ ಹೇಡಿ ದುರ್ಮತಿ ದುರಾಚಾರಿ
ಕುಲವಂತೆಯಂ ಕೆಡಿಸಿದಧಮ ಪಾಮರ ನೀಚ
ತಿಳಿದು ದುಷ್ಕೃತ್ಯವೆಸಗಿದೆಯಲೈ ಬಾಳ್ವೆ ಸುಡು ಸುರರಾಳ್ತನವ ಸುಮ್ಮನೆ |
ಕಳೆದ ಮದಗರ್ವದಿಂದೊಲಿಸಿದೆಯ ದುರ್ಗತಿಯ
ಲಲನೆ ಎನ್ನನ್ನಿನಿತು ಕಳವಳಕ್ಕೊಳಗೈದೆ
ಒಳವರಿಯದೀ ತೆರನ ಕೆಲಸವಾದುದು ಮೌನಿತಿಲಕ ನೀ ಸಲಹೆಂದಳು || ||೧೯೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮನದಿ ಯೋಚಿಸುತಿರಲು ಮುನಿವರ |
ನಿನಿತರಿತು ದ್ವಾರವನು ಭೇದಿಸಿ |
ಮುನಿಸಿನಿಂದೊಳ ಸರಿದು ಪೇಳ್ದನು | ವನಿತೆಯೊಡನೆ || ||೧೯೫||

ಘಾತವೆಸಗಿದೆ ಎನ್ನ ನಿಶಿಯೊಳು |
ಮಾತಿನಿಂದೊಡಬಡಿಸಿ ಕಳುಹುತ |
ಈತನನು ಒಳ ಕರೆದು ನೆರೆದೆಯ | ಪ್ರೀತಿಯಿಂದ || ||೧೯೬ ||

ಫಡಫಡೆಲೊ ಸುರಪಾಲ ನಿನ್ನನು |
ಕೆಡುಕಳೀ ಪರಿಕರೆದಡೆಯು ಮುನಿ |
ಮಡದಿಯೆಂಬುದನರಿಯದಾದೆಯ | ಕಡುಹಿನಿಂದ || ||೧೯೭||

ಒಮ್ಮತದಿ ನೀವೀರ್ವರೀ ದು |
ಷ್ಕರ್ಮ ನಡೆಸಿದಿರಕಟ ಬಡ ಮುನಿ |
ಸುಮ್ಮತಿಪನೆಂದರಿತಿರೇ ಮದ | ಹಮ್ಮಿನಿಂದ || ||೧೯೮||

ಸುಡುವೆನೀರ್ವರನೊಮ್ಮೆಗೆನುತಲಿ |
ಕಡೆಯ ಕಾಲದ ಮೃಡನ ತೆರದೊಳು |
ಕಿಡಿಗೆದರೆ ನಡುನಡುಗಿ ಮಾನಿನಿ | ನುಡಿದಳಾಗ || ||೧೯೯||

ರಾಗ ನೀಲಾಂಬರಿ ಏಕತಾಳ

ಅಪರಾಧ ಕ್ಷಮಿಸು ಜೀಯ | ನಾ ತಿಳಿಯದೆ | ವಿಪರೀತವಾಯ್ತು ಕಾರ್ಯ ||
ಸುಫಲದಾಯಕ ನಿನ್ನನು | ಎಚ್ಚರಿಸಿದೆ | ತಪಸಿನಾಚರಣೆಗಾನು || ||೨೦೦||

ಕುಕ್ಕುಟ ಕೂಗಿದೊಂದು | ಕೇಳಿದೆಯಲ್ಲೊ | ತಕ್ಕುದೀ ಸಮಯವೆಂದು |
ತಕ್ಕೈಸಿ ಕಳುಹಿದೆನು | ತಿಳಿಯದಾದೆ | ಠಕ್ಕಿನ ಬಗೆಗೆಳನ್ನು || ||೨೦೧||

ಕದವನ್ನು ಬಂಧಿಸುತ | ನಿದ್ರಿಸಲಾನು | ಉದಯವಿದಲ್ಲೆ ವ್ಯರ್ಥ |
ನದಿಗೈದಿ ಬಳಲಿದೆನು | ತೆರೆ ಬಾಗಿಲೆಂದು | ಸದಯ ನಿನ್ನಂತೆ ಪೇಳ್ದನು || ||೨೦೨||

ಭಾಮಿನಿ

ತೆರೆದು ದ್ವಾರವ ನೀನೆನುತ್ತೊಳ
ಕರೆದು ಕಾಲನ್ನೊತ್ತಿ ಸರಸವ |
ಬರಿಸಿದೆನು ಹೊರತನ್ಯ ಭಾವನೆಯೆಣ್ಣದಿಂದಿನಲಿ |
ಅರಿಯದಾದೆನು ಕಪಟವೆಂಬುದ
ಮರೆಯುತಪರಾಧಗಳ ಕರುಣದಿ
ಚರಣದಾಸಿಯನುದ್ಧರಿಸು ಎಂದಳುತ ಪೊರಳಿದಳು || ||೨೦೩||

ರಾಗ ಭೈರವಿ ಅಷ್ಟತಾಳ

ಎಲೆ ಮದಾಂಧಳೆ ನಿನ್ನನು | ಬಲ್ಲೆನು ಸಾಧ್ವಿ | ಕುಲವತಿಯೆಂಬುದನು ||
ಒಳಕರೆಯುತಲೀತನೊಳು ಬೆರೆದಂತರ್ಯ | ತಿಳಿಯೆ ನಾನೆಂಬುದೇನು || ||೨೦೪||

ಕಾಲವಲ್ಲದ ಕಾಲದಿ | ಪತ್ನಿಯ ಸಾನು | ಕೂಲ ಸುಖಾಗಮದಿ ||
ಮೇಲಾಗಿ ಮನಸಿಡುವನೆ ಬಲ್ಲಿದನೆಂಬು | ದಾಲೋಚಿಸದೆ ಮುದದಿ || ||೨೦೫||

ತಲ್ಲಣಗೊಳ್ಳದಿಂದು | ಕೂಡಿದರಿಂದ | ಕಲ್ಲಾಗಿ ಪಥದಿ ನಿಂದು |
ಎಲ್ಲವರೊದ್ದಾಟದಲ್ಲಿರು ಚಳಿಮಳೆ | ಯಲ್ಲಿ ಯೋಚಿಸದೆ ಕುಂದು || ||೨೦೬||

ರಾಗ ನೀಲಾಂಬರಿ ರೂಪಕತಾಳ

ಮುನಿವರನಿತ್ತಿಹ ಶಾಪವ | ನೆನೆಯುತಲೆಂದಳು ಮಾನಿನಿ |
ಮನವರಿಯದೆ ನಾನೆಸಗಿರು | ವನುಚಿತ ಕಾರ್ಯದಲಿ ||
ಘನಮಹಿಮನು ನೀ ಮುನಿದರೆ | ಎನಗಿಲ್ಲವು ಗತಿ ಮುಂದಕೆ |
ಜನುಮವಿದೆಂದಿಗೆ ಬರುವುದೊ | ಎನುವದನಾನರಿಯೆ || ||೨೦೭||

ಶಿಲೆಯಾಗುತಲೆಂತಿರುವುದು | ಚಳಿಮಳೆಗಾಳಿ ಬಿಸಿಲಿನೊಳು |
ತುಳಿ ತುಳಿದೆಲ್ಲರು ಬಲುವಿಧ | ಹಳಿವರು ಅಕಟಕಟಾ ||
ಬಳಸಿದ ದುರ್ಧರ ಪಾತಕ | ತೊಲಗಿಸಿ ತವ ಪದ ಸೇವೆಯ |
ನಲವಿಂದಲಿ ಗೈಸುತ್ತಲಿ | ಸಲಹೈ ಗುಣನಿಧಿಯೆ || ||೨೦೮||

ವಾರ್ಧಕ

ಈ ತೆರದೊಳಳುತ ಮುನಿನಾಥನಂಘ್ರಿಯ ಬಿಡದೆ
ಕಾತರಿಪ ಸತಿಯ ಕಂಡಾ ತತೂಕ್ಷಣಕವನ
ಖಾತಿ ಹಿಂಜರಿದು ತುಸು ಪ್ರೀತಿ ಪುಟ್ಟಲ್ಕೆ ಕರೆದಾ ತರುಣಿಗಿಂತೆಂದನು |
ಯಾತುಧಾನರ ಕುಲವ ಘಾತಿಸುವ ಬಗೆಗೆ ಶ್ರೀ
ನಾಥ ರಾಮಾಖ್ಯೆಯಲಿ ಭೂತಳದೊಳುದಿಸಿಬಹ
ನಾತನಡಿ ಸೋಕಲು ಪುನೀತಳಹೆ ನೀನೆಂದು ಮಾತ ಸುರನಾಥಗೆಂದ || ||೨೦೯||

ರಾಗ ಪಂತುವರಾಳಿ ಅಷ್ಟತಾಳ

ಧೀರನಹೆ ಭಳಿರೇ | ಪುರಂದರ | ಧೀರನಹೆ ಭಳಿರೆ ||
ಮೂರು ಲೋಕದಿ ನಿನಗಾರು ಸಮಾನರು || ಪಲ್ಲವಿ ||

ಉತ್ತಮ ಸುರರೊಡೆತನವ | ನಡೆ | ಸುತ್ತಿಹೆ ನಿನ್ನಾ ವೈಭವವ |
ವಿಸ್ತರಿಸುವುದೇನು ಕೃತ್ರಿಮದಲಿ ಎನ್ನ |
ಪತ್ನಿಯ ನೆರದೆಯಲ್ಲ | ನಿನ್ನೇಳ್ಗೆಗೀ |
ಕೃತ್ಯವು ಸರಿಯೆ ಖುಲ್ಲ | ಕೀರ್ತಿಯು ಬಲು |
ವಿಸ್ತಾರವಾದುದಲ್ಲ | ಧೀರನಹೆ || ||೨೧೦||

ಧರಣಿಯ ಯಾಗಭಾಗವನು | ಕೊಂಬ |
ಪರಮ ವೈಭವಶಾಲಿ ನೀನು |
ಗುರುಧೀಷಣ ಪರಿಪರಿ ನೀತಬೋಧೆಯ |
ನರುಹಿ ಸಂತೈಸುವನು | ಪಡೆದು ಬಾಳ್ವೆ |
ಹರಿಹರರೊಲುಮೆಯನು | ದುಷ್ಕೃತ್ಯದಿ |
ಸರಿಕಾಣೆ ನಿನಗೆ ನಾನು | ಧೀರನಹೆ || ||೨೧೧||

ಭಾಮಿನಿ

ಅಮಮ ಧೈರ್ಯವನೇನೊರೆವೆ ಮಮ
ರಮಣಿಯನು ಕೃತ್ರಿಮದಿ ನೆರೆಯ
ಲ್ಕಮಿತ ಸಾಹಸ ತೋರ್ದೆ ಕೊಲ್ಲಲಿಕಮರನಾಗಿರುವೆ |
ರಮಿಸಿದರು ರಂಭಾದಿ ಸ್ತ್ರೀಯರ
ಭ್ರಮೆಯು ಹೆಚ್ಚಿದೆ ನಿನ್ನ ತನುವಿದು |
ಸಮನಿಸಲಿ ಭಗವಾಗಿ ಹೇಡಿಯೆ ತೊಲಗು ತೊಲಗೆಂದ || ||೨೧೨||

ಕಂದ

ಮುನಿವರನೀ ಪರಿ ಶಪಿಸ
ಲ್ಕನಿಮಿಷವರಗಾದುದಾಗ ಯೋನಿಗಳಮಿತಂ |
ತನು ಹೇಸಿಗೆಗೊಂಡಿರಲಾ
ಮನದೊಳು ಕಳವಳಿಸುತೆಂದನಡಿಗೆರಗುತ್ತಂ || ||೨೧೩||

ರಾಗ ನೀಲಾಂಬರಿ ರೂಪಕತಾಳ

ಕರುಣಾಂಬುಧಿಯೆನ್ನೇಳ್ಗೆಯ | ಬರಿಗೈದೆಯ ಸೌಭಾಗ್ಯದಿ |
ಸುರರಧಿಪತಿ ತಾನೆನಿಸುತ | ಮೆರೆದಿರಲಿಂದಿನಲಿ ||
ತೆರಳುತ ನಾಕವನಾಳುವ | ತೆರವೆಂತುಟೊ ತ್ರೈಜಗದಲಿ |
ಜರೆದಪರೆನ್ನನು ಒದಗಿತೆ | ಪರಿಭವವೀ ತೆರದಿ || ||೨೧೪||

ಹರಿಹರರೆನ್ನೊಳು ಕರುಣದಿ | ಕರೆದಿತ್ತರು ತ್ರಿದಶಾಲಯ |
ಧರಿಸುತ ಸತ್ಕೀರ್ತಿಯ ಸುರ | ನರ ಉರಗಾದ್ಯರನು ||
ನಿರತ ವಿಚಾರಿಸಿ ಪಾಲಿಪ | ದೊರೆಯೆನಗೀ ಪರಿಯಾಗಲು |
ಪರಿಕಿಪರೆಂತಿದರನು ಪರಿ | ಹರಿಸುತ ಪೊರೆ ಎನ್ನ || ||೨೧೫||

ಪಂಥದಿ ಹಿಂದುಳಿವೆನು ಎಂ | ದಂತರ್ಯದಿ ಕುದಿಯುತ್ತಿರೆ |
ತಾಂ ತವಕದಿ ಶಿಖಿಮುಖ್ಯರು | ಸಂತೈಸುತಲೆನ್ನ ||
ಕಾಂತೆಯ ಒಡನಾಟಕೆ ಪಥ | ವಂ ತಿಳುಹಲು ಮರುಳಾಗುತ |
ಲಿಂತಾದುದು ನೀ ಮುನಿದರೆ | ನಾಂ ತೆರಳೆನು ದಿವಕೆ || ||೨೧೬||

ವಾರ್ಧಕ

ಕಾಣಿಸುವುದೆಂತು ವದನವನೀಕ್ಷಿಸಿದವರೆನ
ಗೇನ ಪೇಳ್ವರು ಜಗತಿಗೆಲ್ಲ ನಿಂದಕನಾದೆ
ಜ್ಞಾನನಿಧಿ ನೀನಿಂತು ಮುಳಿಯೆ ಬಾಳಿರೆ ಪ್ರಾಣ ತೊರೆವೆನೆಂದರೆ ಸುಧೆಯನು |
ಪಾನಗೈದಿರುವೆನದರಿಂದಲಸದಳ ಸುರರ
ಸ್ಥಾನಕ್ಕೆ ಪೋಗೆ ನಿನ್ನಂ ಸೇವಿಸುತಲಿರುವೆ
ನಾನಂದ ನಿನಗಾಗಲನ್ಯಮತವಿಲ್ಲೆಂದು ನಡನಡುಗಿ ಮಣಿದಿರ್ದನು || ||೨೧೭||

ರಾಗ ಕೇದಾರಗೌಳ ಝಂಪೆತಾಳ

ಸುರಪಾಲನಿಂತಳುತಲಿ | ದೃಢಮನದೊ | ಳಿರುತ ಮುನಿವರನಿದಿರಲಿ |
ಸುರಿಸೆ ಕಂಬನಿ ಕಾಣುತ | ಕರುಣದಿಂ | ಕರೆದೆಂದನೊಂದು ಮಾತ || ||೨೧೮||

ಮತಿಮರೆದರಿಂದ ನಿನಗೆ | ಇನಿತು ದು | ರ್ಗತಿಯಾಯ್ತು ನೋಳ್ಪರಿಂಗೆ |
ಸತತ ನಯನಗಳೆನಿಪುದು | ಪೋಗಿ ಸುರ | ತತಿಯ ನೀನಾಳಿರುವುದು || ||೨೧೯||

ಈ ರೀತಿಯಲಿ ನಿನ್ನನು | ನಡೆಸಲಿಕೆ | ಪ್ರೇರೇಪಿಸಿದರವರನು ||
ಸಾರಗೊಡೆ ಸುಖದೊಳದಕೆ | ಶಿಕ್ಷಿಪೆ ವಿ | ಚಾರಹೀನರನು ಕ್ಷಣಕೆ || ||೨೨೦||

ವಾರ್ಧಕ

ಎಲ್ಲಮಂ ಭಕ್ಷಿಸುತ್ತಿಹುದನಲ ಮರುತ ನಿಂ
ದಲ್ಲಿ ನಿಲ್ಲದೆ ಸಕಲ ಕಡೆಯ ಚರಿಸುತ್ತಿರಲಿ
ಉಲ್ಲಾಸವಡಗಿ ಕಂಪನದಿಂದ ವರುಣ ನಿಂದಿರಲೆಂದು ಶಪಿಸುತವರ |
ಫುಲ್ಲಲೋಚನ ಮನುಜನವತಾರದಿಂ ಬಂದು
ವಲ್ಲಭೆಯನುದ್ಧರಿಸಲವನ ದರ್ಶನದೊಳಘ
ವೆಲ್ಲ ನೀಗುವುದೆಂದು ದೃಢ ಮನದೊಳಾಶ್ರಮದಿ ರಾಮ ಧ್ಯಾನದೊಳಿರ್ದನು || ||೨೨೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪೊಡವಿಪಾಲಕ ಕೇಳು ಗೌತಮ |
ನಡಿಗೆರಗಿ ದೈನ್ಯದೊಳಗಾಜ್ಞೆಯ |
ಪಡೆದು ತನ್ನವರೊಡನೆ ನಾಕಕೆ | ನಡೆದನಾಗ || ||೨೨೨||

ಬಂದು ಕುಳಿತು ಸುಧರ್ಮ ಸಭೆಯೊಳು |
ಹೊಂದಿದ ಸಹಸ್ರಾಕ್ಷನೆನ್ನುವ |
ದೊಂದು ಪೊಸ ಪೆಸರಿಂದಲಾ ಸುರ | ವೃಂದದೊಡನೆ || ||೨೨೩||

ಮೆರೆಯೆ ಮಂಗಲವಾಯ್ತು ಜಗತಿಗೆ |
ಸುರಿಸಿ ಪೂಮಳೆ ಮೊಳಗೆ ದುಂದುಭಿ |
ಸುರಸತಿಯರಾರತಿಯನೆತ್ತುತ | ಹರಿಯ ಸ್ತುತಿಸೆ || ||೨೨೪||

ವಾರ್ಧಕ

ಪರಶಿವಂ ಪ್ರೇರೇಪಿಸಿದ ತೆರದೊಳೀ ಕೃತಿಯ
ವಿರಚಿಸಿದ ಕನ್ನಡದಿ ಯಕ್ಷಗಾನದಲಿ ಜನ
ರರಿವಂತೆ ಬಲಿಪ ನಾರಾಯಣಂ ಭಾಗವತ ಪೌರಾಣ ಪುಣ್ಯಕಥೆಯ |
ಅರಿತು ಸಂತೋಷದಿಂ ಪೇಳ್ವ ಕೇಳ್ವರ ಸಕಲ
ದುರಿತಗಳ ಪರಿಹರಿಸಿ ಕೈವಲ್ಯವನ್ನಿತ್ತು
ಕರುಣದೊಳ್ ಕಣ್ವಪುರ ಕೃಷ್ಣ ರಾಧಾರಮಣ ರಕ್ಷಿಸುವನನುಗಾಲವು || ||೨೨೫||

|| ಅಹಲ್ಯಾಶಾಪ ಪ್ರಸಂಗ ಮುಗಿದುದು ||