ಶಾರ್ದೂಲವಿಕ್ರೀಡಿತ

ಶ್ರೀ ಮತ್ಸುಂದರವಿಗ್ರಹಂ ಮುರಹರಂ ಮಾಕಾಮಿನೀವಲ್ಲಭಂ
ಕಾಮಾರಾತಿಸಖಂ ಕರೀಂದ್ರವರದಂ ಪೀತಾಂಬರಾಲಂಕೃತಂ |
ಸೋಮಾರ್ಕಾಮಿತತೇಜಮಬ್ಜನಯನಂ ನಾರಾಯಣಂ ನಿರ್ಮಲಂ
ಕ್ಷೇಮಾನಂದಕರಂ ಮಹಾಮಧುಹರಂ ದೇವಾದಿದೇವಂ ಭಜೇ || ||೧||

ವಾರ್ಧಕ

ಗುರುಗಣಪ ಹರಬ್ರಹ್ಮ ಸಿರಿಗೌರಿ ವಾಣಿಯರ
ಚರಣಕಾನತನಾಗಿ ಹಿರಿಯರಂ ಧ್ಯಾನಿಸುತ
ಸುರಪ ಮುಖ್ಯಾಮರರ ಗುಹ ತರಣಿ ಶಶಿ ಸಕಲ ಮೌನಿಗಳ ಸಚ್ಚರಿತರ ||
ಸ್ಮರಿಸಿ ಕವಿಗಳ ನೆನೆಯುತಾಹಲ್ಯೆಶಕ್ರನಿಂ
ಪರಿಭವಕ್ಕೊಳಗಾದ ಚರಿತೆಯಂ ಧರೆಯ ಜನ
ರರಿವಂತೆ ಯಕ್ಷಗಾನದೊಳೊರೆವೆ ಪರಶಿವಂ ಕರುಣಿಸಿದ ಬುದ್ಧಿಯಿಂದ || ||೨||

ರಾಗ ಸೌರಾಷ್ಟ್ರ ತ್ರಿವುಡೆ

ಪೃಥ್ವಿಪತಿ ಜನಮೇಜಯಗೆ ಮುದ |
ವೆತ್ತು ವೈಶಂಪಾಯ ಮುನಿಪನು |
ವಿಸ್ತರಿಸೆ ಹರಿವಂಶ ಪುಣ್ಯ ಚ | ರಿತ್ರಗಳನು || ||೩||

ಒಂದು ದಿನ ಬೆಸಗೊಂಡ ನೃಪನರ |
ವಿಂದಭವನಾತ್ಮಜೆಯಹಲ್ಯೆಯ |
ನಿಂದ್ರ ಕಪಟದಿ ಬೆರೆದು ಶಾಪವ | ಹೊಂದಿದುದನು || ||೪||

ಪೇಳಬೇಕದನೆನುತಲೆರಗಿದ |
ಭೂಲಲಾಮನ ತಕ್ಕವಿಸುತಲಿ |
ಮೂಲಮಂ ವಿಸ್ತರಿಸಿದಂ ಮುನಿ | ಪಾಲನವಗೆ || ||೫||

ಭಾಮಿನಿ

ಧರಣಿಪಾಲಕ ಕೇಳು ಸುರಪಗೆ
ಹರಿಹರಾದ್ಯರು ತ್ರಿದಶರೊಡೆತನ
ಪರಿಪರಿಯ ಸದ್ವಸ್ತುಗಳು ಸಹಿತಮರಪುರವರವ |
ಕರುಣಿಸಲು ವೈಭವದೊಳೊಂದಿನ
ತೆರದೊಳೋಲಗವಿತ್ತು ಸಂತಸ
ಶರಧಿಯೊಳು ಮುಳುಗೇಳುತಿರ್ದಾನಂದಮಯವಾಗಿ || ||೬||

ರಾಗ ಭೈರವಿ ಝಂಪೆತಾಳ

ಇಂತೆಸೆವ ಸಭೆಗೆ ಮುದ | ವಾಂತು ದಿಕ್ಪಾಲಕರು |
ತಾಂ ತಳುವದೊದಗೆ ಸುರ | ಕಾಂತನುಪಚರಿಸಿ || ||೭||

ಸುರಗರುಡಗಂಧರ್ವ | ರುರಗಸಿದ್ಧರು ಮೌನಿ |
ವರರು ಬರಲವರ ಕು | ಳ್ಳಿರಿಸಲಿದಿರಿನಲಿ || ||೮||

ನರ್ತಿಸುತ ಸುರಸತಿಯ | ರರ್ತಿಗೊಳಿಸುತ್ತಿರಲು |
ಚಿತ್ತದಲಿ ಹಿಗ್ಗುತಲಿ | ಸುತ್ರಾಮನೆಂದ || ||೯||

ಕೇಳಿರೆಮ್ಮವರು ನ | ಮ್ಮೊಳ್ಳಿತಿಗೆ ಸರಿಯುಂಟೆ |
ಮೂಲೋಕದೊಳಗಿದುವೆ | ಮೇಲೆನಿಪ ಪದವಿ || ||೧೦||

ಉತ್ತಮದ ಸಕಲ ಸ | ದ್ವಸ್ತು ನಮ್ಮಲ್ಲಿಹುದು |
ಪೃಥ್ವಿಪರು ಯಾಗ ನಡೆ | ಸುತ್ತ ಪೂಜಿಪರು || ||೧೧||

ಕುಲಿಶದಿಂದಲಿ ವೈರಿ | ಕುಲವ ಸದೆ ಬಡಿದೆ ನಾ ||
ಬಲುಹಿನೊಳು ನಮಗಿದಿರು | ನಿಲುವರಾರಿನ್ನು || ||೧೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅನಲ ಸುರಪನೊಳೆಂದ ಹರಿಹರ |
ರನುಪಮದ ಸೌಭಾಗ್ಯವಿತ್ತುದ |
ನನುಭವಿಸಿ ಸುಖದಿಂದಲಿರಗೊಡ | ವನಜಭವನು || ||೧೩||

ದುಷ್ಟರಂ ನಿರ್ಮಿಸುತ ವರಮನ |
ದಿಷ್ಟವಂ ಕರುಣಿಸುವನದರಿಂ |
ಕಷ್ಟಪಡಿಸುವರೆಮ್ಮ ದಿತಿಜರು | ಜ್ಯೇಷ್ಠರೆಂದು || ||೧೪||

ಕೇಳಿ ಮಾರುತ ನುಡಿದ ಭೀತಿಯ |
ತಾಳದಿರು ವಿಧಿಖಳರಿಗೊಲಿದರು |
ಕಾಳಗದೊಳಾ ದಿತಿಜವರ್ಗವ | ಬಾಳಗೊಡೆವು || ||೧೫||

ರಾಗ ಭೈರವಿ ಅಷ್ಟತಾಳ

ಸುರಧೇನು ಕಲ್ಪತರು | ಮೇಲಾ ಮಹಾ | ಭರಿತ ಭಾಗ್ಯವ ಖಳರು ||
ಕರಗತ ಗೈಯುವಾ | ತುರದಿ ಮೊದಲಿಗರು | ಹರಣವ ನೀಗಿದರು || ||೧೬||

ಸುರರೊಳು ದ್ವೇಷದಲಿ | ಬಾಳ್ದವರಾರು | ದುರುಳರ ಪಕ್ಷದಲಿ ||
ಸರಸಿಜಭವನೆ ಮುಂ | ಬರಿದರು ಕದನದಿ | ದೊರಕದು ಜಯವೆಮ್ಮಲಿ || ||೧೭||

ಉಬ್ಬುತ ಸುರಪನೆಂದ | ಕುರಿಗಳತಿ | ಕೊಬ್ಬುತ ಗರ್ವದಿಂದ ||
ಹೆಬ್ಬುಲಿಗಿದಿರಾಗಿ | ಸೆಣಸಿದಡೆಯು ಜಯ | ಲಭ್ಯವೆಂತಪ್ಪುದೆಂದ || ||೧೮||

ಸುಧೆಯುಂಡಿರುವ ನಮ್ಮನ್ನು | ಗೆಲ್ಲುವರುಂಟೆ | ವಿಧಿಯಿಂದಲಪ್ಪುದೇನು ||
ಕದನವಿಕ್ರಮಿಗಳು | ನಾವೆಂದು ಗರ್ವದಿ | ಕುದಿಯುತಲೊಪ್ಪಿರ್ದನು || ||೧೯||

ಭಾಮಿನಿ

ಅನಿಮಿಷಾಧಿಪನೀ ತೆರದೊಳಿರೆ
ವನಜಭವನಾ ಸೃಷ್ಟಿಯೊಳು ನೂ
ತನದೊಳೆಸವಾಹಲ್ಯೆಯನು ಸೃಜಿಸುತಲೆ ಯೋಚಿಸುತ |
ಮನದೊಳಗೆ ದೃಢಗೈದನುತ್ತಮ
ಪಣವನವಳಂ ವರಿಸಲೈತಹ
ಘನ ಮಹಿಮನೊಂದೇ ಮುಹೂರ್ತದೊಳಿಳೆ ಚರಿಪುದೆಂದು || ||೨೦||

ಕಂದ

ಇಂತೆನುತವನಿರಲೊಂದಿನ
ದಂತಿಗಮನೆ ನಡೆತರುತ್ತ ಕಮಲಜನೆಡೆಗಂ ||
ತಾಂ ತವಕದೊಳಡಿಗೆರಗುತ
ನಿಂತಿರೆ ದೂರದೊಳೆ ಕಂಡು ಕರೆದಿಂತೆಂದಂ || ||೨೧||

ರಾಗ ಕಲ್ಯಾಣಿ ತ್ರಿವುಡೆತಾಳ

ನೂತನ ಗಮನವೇನೆ | ಕೋಕಿಲಗಾನೆ || ಪಲ್ಲವಿ ||

ಯಾತಕೀಪರಿ ಖಿನ್ನಳಾಗುತ |
ಕಾತರಿಸುತಿಹೆ ಮನದೊಳಗೆ ಸಂ |
ಪ್ರೀತಿಯಾಯ್ತಿನ್ನೇತರಲಿ ಮನ |
ದಾತುರವ ನಾ ತಿಳಿಯೆನಿಂದಿಗೆ || ನೂತನ || ||೨೨||

ಆರೇನ ಪೇಳಿದರು | ಸೇವೆಯೊಳಿಪ್ಪ |
ನಾರಿಯರೇನ್ ಗೈದರು ||
ಮೀರಿರುವ ಸೊಗಸಿಂಗೆ ಪೋಲುವ |
ನೀರನಾಪೇಕ್ಷಿಪೆಯೊ ಬಂದಿಹ |
ಕಾರಣವಿದೇನರುಹೆನಲ್ಕಾ |
ಸಾರಸಾಕ್ಷಿ ವಿಚಾರ ಪೇಳ್ದಳು || ||೨೩||

ರಾಗ ಹನುಮತೋಡಿ ಅಷ್ಟತಾಳ

ಬಿನ್ನವಿಸುವುದೇನು ತಾತ | ಗುಣ |
ಪೂರ್ಣನೆ ಭಕ್ತ ಸಂಪ್ರೀತ ||
ಪುಣ್ಯಶರಧಿ ವಿಶ್ವವನ್ನು ಸೃಜಿಪ ಕರ್ತ |
ಬಣ್ಣಿಸಲರಿಯೆ ಹಿರಣ್ಯಗರ್ಭನೆ ನಿನ್ನ || ||೨೪||

ಉತ್ತಮದುದ್ಯಾನದೊಳಗೆ | ಶೋಭಿ |
ಸುತ್ತಿಹ ಪ್ರೇಮದ ಲತೆಗೆ ||
ನಿತ್ಯವು ನೀರೆರೆಯುತ್ತ ಹಬ್ಬುವ ವೇಳೆ |
ಚಿತ್ತದಿ ಗಣಿಸದೆ ಸ್ವಸ್ಥದೊಳಿರ್ಪುದೆ || ||೨೫||

ನಾರಿ ಪಂಡಿತ ಲತೆಗಳಿಗೆ | ತಕ್ಕಾ |
ಧಾರಗಳಿಲ್ಲದೆ ಪೋಗೆ ||
ರಾರಾಜಿಸುವುದೆ ವಿಚಾರಿಸು ಲೋಕದ |
ಸಾರವ ತಿಳುಹಿದೆ ಸಾರಸ ಸಂಭವ || ||೨೬||

ಕಂದ

ಬಾಲಕಿ ನುಡಿದಾ ಮಾತ
ನ್ನಾಲಿಸಿ ಯೌವನ ಉಮಿರ್ದುದಿವಳಿಗೆನುತ್ತಂ |
ತೋಳಿಂ ತಳ್ಕಿಸುತಂ ತ
ನ್ನಾಲೋಚನೆಗಳನು ಪೇಳ್ದನವಳೊಡನಾಗಳ್ || ||೨೭||

ರಾಗ ಪೂರ್ವಿ ಅಷ್ಟತಾಳ

ಚಂದ್ರಾನನೆ ಬಳಲಿದೆಯೇನೆ | ಮನ |
ದಂದವ ತಿಳಿದೆ ನಾನೆಲೆ ಜಾಣೆ | ಮದಗಜಯಾನೆ || ಪಲ್ಲವಿ ||

ವರನ ನಿಶ್ಚಯಿಸಲು ಮರೆಯೆನು ನಿನ್ನನು |
ಧರಣಿಯನೊಂದೆ ಮುಹೂರ್ತದಲಿ | ಸಂ |
ಚರಿಸುತ ಬರುವಗೆ ತ್ವರಿಯದಲಿ | ನಿತ್ತು |
ಪರಿಣಯಗೈವ ನಿರ್ಧರವೆನ್ನಲಿ || ಚಂದ್ರಾನನೆ || ||೨೮||

ಒದಗುವುದದು ಕೆಲ ದಿನದಿ ಬೇರೆಣಿಸದೆ |
ಮುದದೊಳಗಿಪ್ಪುದು ನೀನೆಂದು | ನಿಜ |
ಸದನ ಕಟ್ಟುತ ಸುತೆಯಳನಂದು | ಇರ್ದ |
ಸದಮಲಚರಿತನೆಂದಿದ ಗೈವೆನೆಂದು || ಚಂದ್ರಾನನೆ || ||೨೯||

ವಾರ್ಧಕ

ಭೂರಮಣ ಕೇಳಿತ್ತ ನಾರದ ಮುನೀಂದ್ರನು ವಿ
ಚಾರಿಸಿದ ಮನದೊಳಗೆ ಸುರಪ ಮುಖ್ಯಾಮರರು
ಮೂರುಲೋಕದೊಳಧಿಕರೆಂದು ಗರ್ವದೊಳುಬ್ಬಿ ಮೆರೆವರದ ಪರಿಹರಿಸುವ |
ಕಾರ್ಯವೆಸಗುವೆನದಕೆ ನಾರಿಯಾಹಲ್ಯೆಯಳ
ಸಾರತರದಿಂ ಬಣ್ಣಿಸುತ ವಿಧಿಯ ಬಳಿಗಟ್ಟಿ
ತೀರಿಸುವೆ ತಾನೆಂದು ಹರಿ ಮುಕುಂದ ಮುರಾರಿ ಎನುತ ದಿವಕೈತಂದನು || ||೩೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಓಲಗದೊಳೊಪ್ಪಿರ್ದನಾ ಸುರ |
ಪಾಲ ವೈಭವದಿಂದಲಾ ದಿ |
ಕ್ಪಾಲಸುರ ಗಂಧರ್ವ ಕಿನ್ನರ | ಜಾಲದೊಡನೆ || ||೩೧||

ಘನ ತರದ ಸಂಗೀತ ಪಾಡುತ |
ಗಣಿಕೆಯರು ನರ್ತಿಸುತಲಿರಲಾ |
ಮುನಿಕುಲೇಶನ ಬರವ ಕಾಣು | ತ್ತನಿಮಿಷೇಂದ್ರ || ||೩೨||

ಕರಮುಗಿದು ಕರೆತಂದು ಪೀಠವ |
ನಿರಿಸಿ ಪರಿಪರಿ ಸತ್ಕರಿಸುತಾ |
ಭರಿತ ಭಾಗ್ಯದೊಳುಬ್ಬಿ ಮುನಿಪನೊ | ಳೊರೆದನಾಗ || ||೩೩||

ರಾಗ ಜಂಜೂಟಿ ಏಕತಾಳ

ಎತ್ತಣ ಗಮನವಿದಿತ್ತ ಬಂದುದೇನು |
ಅಪರೂಪ ಸ್ವಾರಿ |
ಬಿತ್ತರಿಸೈ ಮುನಿಪೋತ್ತಮನೆನಗದನು ||
ನಿತ್ಯವು ಮನದೊಳು ಪೊತ್ತು ವಿನೋದವ |
ಪೃಥ್ವಿ ಮೂರ ಚರಿಸುತ್ತಿಹ ಗುಣನಿಧಿ || ||೩೪||

ಘೋರತರದ ಸುಖವಾರಿಧಿಯೊಳಗಾನು |
ಪಾಲಿಪೆ ನಾಕವನು |
ಮೂರುಲೋಕದಧಿಕಾರ ನಡೆಸುತಿಹೆನು ||
ತೋರದು ಕೊರತೆಯು ಕಾರಣಿಕನೆ ವಿ |
ಚಾರವ ತಿಳುಹೈ ನಾರದ ಮುನಿವರ || ||೩೫||

ರಾಗ ಸಾರಂಗ ಅಷ್ಟತಾಳ

ಏನನೆಂಬೆ | ನಿನ್ನ ಸ್ಥಾನದ ವೈಭವ |
ವೇನನೆಂಬೆ || ಪಲ್ಲವಿ ||

ಕಾಣೆನಾ ನಿನಗೆ ಸಮಾನ ತ್ರೈಜಗದಿ |
ನಾನಾಸುವಸ್ತುಗಳಾಳ್ವೆ ಸಂತಸದಿ |
ಮಾನಪೂರಿತನು ಗೀರ್ವಾಣರಿಗೆರೆಯ |
ನಾನುಸುರುವೆನು ನಿದಾನಿಸು ಬಗೆಯ || ಏನನೆಂಬೆ || ||೩೬||

ಬಲು ಸೌಭಾಗ್ಯಕೆ ಕಲಶದಂದಲಿ |
ಚೆಲುವಿಕೆಯಾಂತಿಹ ಲಲನೆ ಇಂದಿನಲಿ |
ಬೆಳಗುತ್ತಲಿರುವಳು ಸುಲಭದಿ ನೀನು |
ಒಲಿಸಲು ಕೀರ್ತಿ ವೆಗ್ಗಳವಪ್ಪುದಿನ್ನು || ಏನನೆಂಬೆ || ||೩೭||

ಸರಸಿಜಭವನ ನೂತನ ನಿರ್ಮಾಣದಲಿ |
ತರುಣಿಯಹಲ್ಯೆ ಎಂಬವಳಿಹಳಲ್ಲಿ |
ಸುರನರೋರಗ ಸೀಮಂತಿನಿಯರಂತಿರಲಿ |
ಸ್ಮರನರಗಿಣಿಯ ನೂರ್ಮಡಿ ಸೊಬಗಿನಲಿ || ಏನನೆಂಬೆ || ||೩೮||

ಧರೆಯ ಮುಹೂರ್ತದಿ ಚರಿಪಗಾಕೆಯನು |
ಕರುಣಿಪ ಪಣವೊಂದನಿರಿಸಿಹನವನು |
ಸರಸಿಜಭವನಿಂದಲರಿತು ನೀನದನು |
ಕರಿಯನಡರಿ ಪೋಗಿ ವರಿಪುದಾಕೆಯನು || ಏನನೆಂಬೆ || ||೩೯||

ಭಾಮಿನಿ

ನಿರತ ನಿನ್ನನ್ನಧಿಕ ಕೃಪೆಯಿಂ
ಹರಿಹರಾದ್ಯರು ಪಾಲಿಸುವರಾ
ದುರುಳರಂ ಸೃಜಿಸುತ್ತ ವರಗಳನಿತ್ತು ಸುಮನಸರ |
ಸರಸದಿಂದಿರಗೊಡನಜನು ನೀ
ವಿರಚಿಸಲು ಬಂಧುತ್ವವದರಿಂ
ದುರಿತವಿಲ್ಲವು ನಡೆಸು ತ್ವರ್ಯದೊಳೆನುತ ಪೊರಮಟ್ಟ || ||೪೦||

ಕಂದ

ಇಂತುಸುರುತ ಮನಿ ಪೋಗಲ್
ಸಂತಸದಿಂದುಬ್ಬುತಾಗ ಸುರರೊಡನೊರೆದಂ |
ಕಾಂತೆಯ ವರಿಸಲಿಕೈದುವು
ದೆಂತೆನುತಲೆ ಕರೆಯುತೆಂದ ದಿಕ್ಪಾಲರೊಳುಂ || ||೪೧||

ರಾಗ ಕಾಂಭೋಜಿ ಝಂಪೆತಾಳ

ಲಾಲಿಸಿರಿ ಸಕಲ ದಿಕ್ಪಾಲರೆನ್ನೊಡನೆ ಮುನಿ |
ಪಾಲ ನಾರದನೊರೆದ ವಿಧಿಯ ||
ಬಾಲೆಯಾಹಲ್ಯೆಯಂ ವರಿಸೆ ಸೊಗಸಹುದು ನಿ |
ನ್ನಾಳ್ವಿಕೆಯು ಮೂಜಗದೊಳೆಂದು || ||೪೨||

ಬಂಧುತ್ವ ನಡೆಸಲರವಿಂದಭವ ದಿತಿಜರಿಂ |
ಗೆಂದಿಗಾದರು ಒಲಿಯನದಕೆ ||
ಒಂದೇ ಮುಹೂರ್ತದಿ ವಸುಂಧರೆಯ ಚರಿಪ ಪಣ |
ದಿಂದೊಲಿವಳದು ಘನತೆಯಲ್ಲ || ||೪೩||

ಅನಲಾದ್ಯರೆಂದರಾ ಮುನಿಪ ಪೇಳಿದ ಮಾತು |
ಮನಕೆ ಹಿತವಾಕೆಯನು ವರಿಸೆ ||
ವನಜಸಂಭವ ಮುಂದಕನಿಮಿಷರ ಪೀಡಿಸುವ |
ದನುಜರಿಂಗೊಲಿಯನಿದು ಸಿದ್ಧ || ||೪೪||

ಪೃಥ್ವಿಯನ್ನೊಂದೇ ಮುಹೂರ್ತದಲಿ ಚರಿಪ ಪಣ |
ಸುತ್ರಾಮ ನಿನಗೆ ಘನವಲ್ಲ ||
ಹೊತ್ತು ಕಳೆಯದೆ ತೆರಳಿ ಮತ್ತಕಾಶಿನಿಯ ವರಿ |
ಸುತ್ತ ನಡೆತಹುದಿಲ್ಲಿಗೆನಲು || ||೪೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಿಳಿದು ಸುರರಿಂಗಿತವ ಹಿಗ್ಗುತ |
ವಲವಿರೋಧಿಯು ತಿಳುಹಿ ಧೈರ್ಯವ |
ಲಲನೆಯನು ತಹೆನೆಂದು ಪೊರಟನು | ನಲವಿನಿಂದ || ||೪೬||

ಜಡಜಸಂಭವನಣುಗೆಯಳ ಕೈ |
ಪಿಡಿವ ಭಾಗ್ಯವು ಒದಗಿತೆನುತವ |
ನಡರಿ ದಂತಿಯ ಸತ್ಯಲೋಕಕೆ | ನಡೆದನಾಗ || ||೪೭||

ಬಂದು ಲೋಕೇಶನಿಗೆರಗಿ ಜಯ |
ವೆಂದು ದೈನ್ಯದಿ ನಿಂದಿರಲ್ಕೆ ಪು |
ರಂದರನ ಮನ್ನಿಸುತೊರೆದನರ | ವಿಂದ ಭವನು || ||೪೮||